July 23, 2026
Mumbai News Kannada
ಕ್ರೀಡೆ

ರಾಷ್ಟ್ರೀಯ ಜೂನಿಯರ್ ಫುಟ್ಬಾಲ್ ಚಾಂಪಿಯನ್‌ಶಿಪ್: ಬೋರಿವಲಿಯ ಶಿವಿಕಾ ಶೆಟ್ಟಿಗೆ ‘ಗೋಲ್ಡನ್ ಗ್ಲೋವ್’ ಪ್ರಶಸ್ತಿ







ಮುಂಬಯಿ (ಜ. 1): ಇತ್ತೀಚೆಗೆ ನಾಗಾಲ್ಯಾಂಡ್‌ನಲ್ಲಿ ನಡೆದ ಜೂನಿಯರ್ ನ್ಯಾಷನಲ್ ಫುಟ್ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಮುಂಬಯಿಯ ಬೋರಿವಲಿಯ ಪ್ರತಿಭಾನ್ವಿತ ಆಟಗಾರ್ತಿ ಶಿವಿಕಾ ಶೆಟ್ಟಿ ಅವರು ಮಹೋನ್ನತ ಸಾಧನೆ ಮಾಡಿದ್ದಾರೆ. ನವೆಂಬರ್ 23ರಿಂದ ಡಿಸೆಂಬರ್ 11ರವರೆಗೆ ನಡೆದ ಈ ಟೂರ್ನಮೆಂಟ್‌ನಲ್ಲಿ ಮಹಾರಾಷ್ಟ್ರ ತಂಡವನ್ನು ಪ್ರತಿನಿಧಿಸಿದ್ದ ಶಿವಿಕಾ, ತಮ್ಮ ಅಮೋಘ ಗೋಲ್‌ಕೀಪಿಂಗ್ ಪ್ರದರ್ಶನದ ಮೂಲಕ ತಂಡವು ಚಾಂಪಿಯನ್ ಪಟ್ಟಕ್ಕೇರಲು ಪ್ರಮುಖ ಪಾತ್ರ ವಹಿಸಿದ್ದಾರೆ.

15 ವರ್ಷದ ಬಾಲಕಿಯರ ವಿಭಾಗದಲ್ಲಿ ಆಡಿದ ಶಿವಿಕಾ ಶೆಟ್ಟಿ, ಇಡೀ ಟೂರ್ನಮೆಂಟ್‌ನ ಅತ್ಯುತ್ತಮ ಗೋಲ್‌ಕೀಪರ್ ಆಗಿ ಹೊರಹೊಮ್ಮುವ ಮೂಲಕ ಪ್ರತಿಷ್ಠಿತ ‘ಗೋಲ್ಡನ್ ಗ್ಲೋವ್’ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ. ವಿಶೇಷವಾಗಿ ಸೆಮಿಫೈನಲ್ ಪಂದ್ಯದಲ್ಲಿ ಅದ್ಭುತ ಡೈವಿಂಗ್ ಮತ್ತು ಚಾಕಚಕ್ಯತೆಯ ಸೇವ್‌ಗಳ ಮೂಲಕ ಗಮನ ಸೆಳೆದ ಇವರು, ಆ ಪಂದ್ಯದ ‘ಪ್ಲೇಯರ್ ಆಫ್ ದಿ ಮ್ಯಾಚ್’ ಗೌರವಕ್ಕೂ ಪಾತ್ರರಾಗಿದ್ದಾರೆ

ಈ ಚಾಂಪಿಯನ್‌ಶಿಪ್‌ನ ಲೀಗ್ ಪಂದ್ಯಗಳಲ್ಲಿ ಮಹಾರಾಷ್ಟ್ರ ತಂಡವು ಮಿಜೋರಂ, ಹಿಮಾಚಲ ಪ್ರದೇಶ ಹಾಗೂ ಮಧ್ಯಪ್ರದೇಶ ತಂಡಗಳ ವಿರುದ್ಧ ಭರ್ಜರಿ ಜಯ ದಾಖಲಿಸಿತ್ತು. ಸೆಮಿಫೈನಲ್‌ನಲ್ಲಿ ಪಂಜಾಬ್ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿತು. ರೋಚಕವಾದ ಅಂತಿಮ ಹಣಾಹಣಿಯಲ್ಲಿ ಉತ್ತರ ಪ್ರದೇಶ ತಂಡವನ್ನು ಸೋಲಿಸುವ ಮೂಲಕ ಮಹಾರಾಷ್ಟ್ರ ತಂಡವು ಜೂನಿಯರ್ ಗರ್ಲ್ಸ್ ನ್ಯಾಷನಲ್ ಫುಟ್ಬಾಲ್ ಚಾಂಪಿಯನ್ ಆಗಿ ಹೊರಹೊಮ್ಮಿತು.

ಶಿವಿಕಾ ಶೆಟ್ಟಿ ಅವರು ಬೋರಿವಲಿಯ ಉತ್ಪಲ್ ಸಾಂಗ್ವಿ ಗ್ಲೋಬಲ್ ಸ್ಕೂಲ್‌ನ 10ನೇ ತರಗತಿ ವಿದ್ಯಾರ್ಥಿನಿಯಾಗಿದ್ದಾರೆ. ಇವರು ಮೂಡುಬೆಳ್ಳೆ ಪಡುಮನೆಯ ಜಯಶೀಲ ಶೆಟ್ಟಿ ಮತ್ತು ತೋನ್ಸೆ ಕುರಾಡಿ ಮನೆಯ ಮಿಥುಮಾ ಜಯಶೀಲ ಶೆಟ್ಟಿ ದಂಪತಿಯ ಸುಪುತ್ರಿ.

​ಶಿವಿಕಾ ಅವರ ಈ ಕ್ರೀಡಾ ಸಾಧನೆಯು ಅವರ ಕುಟುಂಬಕ್ಕೆ ಮಾತ್ರವಲ್ಲದೆ, ಇಡೀ ಬಂಟ್ ಸಮುದಾಯಕ್ಕೆ ಅಪಾರ ಹೆಮ್ಮೆ ತಂದಿದೆ ಎಂದು ಅವರ ಪೋಷಕರು ಹರ್ಷ ವ್ಯಕ್ತಪಡಿಸಿದ್ದಾರೆ.



Related posts

ಬಂಟರ ಕ್ರೀಡಾಕೂಟದ ಸಮಾರೋಪ ಸಮಾರಂಭ

Mumbai News Desk

ಯುವಶಕ್ತಿ ಸಂಘಟನೆಯಿಂದ ಸಮಾಜದ ಏಳಿಗೆ ಸಾಧ್ಯ: ಡೊಂಬಿವಲಿಯಲ್ಲಿ ‘KYD’ (ಕರುನಾಡ ಯೂತ್–ಡೊಂಬಿವಲಿ) ಕ್ರೀಡಾಕೂಟ ಯಶಸ್ವಿ

Mumbai News Desk

ಉದಯ ಶೆಟ್ಟಿ ನೇತೃತ್ವದಲ್ಲಿ ಹರಿಯಾಣದಲ್ಲಿ 5ನೇ ಮಾಸ್ಟರ್ಸ್ ರಾಷ್ಟ್ರೀಯ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್

Mumbai News Desk

ಕರ್ನಾಟಕ ಸಂಘ ಡೊಂಬಿವಲಿ ದಂಗಲ್ ಕ್ರೀಡಾ ಕೂಟ, : ಕ್ರೀಡೆಯಲ್ಲಿ ಸೋಲು, ಗೆಲುವು ಮುಖ್ಯವಲ್ಲ ಪಾಲ್ಗೊಳ್ಳುವುದು ಮುಖ್ಯ- ಡ. ದಿವಾಕರ ಶೆಟ್ಟಿ ಇಂದ್ರಾಳಿ

Mumbai News Desk

ಕರುನಾಡ ಸಿರಿ ಸಂಸ್ಥೆ : ಯಶಸ್ವಿಯಾಗಿ ಸಂಪನ್ನಗೊಂಡ ಕ್ರಿಕೆಟ್ ಮಹೋತ್ಸವ

Mumbai News Desk

ವಿಶ್ವ ಬ್ಯಾಡ್ಮಿಂಟನ್ ದಿನಾಚರಣೆ: ಕರ್ನಾಟಕ ವಿಶ್ವಕರ್ಮ ಅಸೋಸಿಯೇಷನ್ ಪ್ರಥಮ ಬ್ಯಾಡ್ಮಿಂಟನ್ ಪಂದ್ಯಾಟ ಯಶಸ್ವಿ

Mumbai News Desk