November 26, 2026
Mumbai News Kannada
ಲೇಖನ

ಶತಮಾನಗಳ ಇತಿಹಾಸದ ಜೋಗೇಶ್ವರಿ ಪೂರ್ವದ ಶ್ರೀ ಜಗದಂಬಾ ಕಾಲಭೈರವ ಕ್ಷೇತ್ರದ ಜೀರ್ಣೋದ್ಧಾರಕ್ಕೆ ಭಕ್ತರ ಸಹಕಾರದ ವಿನಮ್ರ ಮನವಿ





















ಮುಂಬಯಿ ಮಹಾನಗರ ಮತ್ತು ಉಪನಗರಗಳಲ್ಲಿ ಅನೇಕ ಪುರಾತನ ಹಾಗೂ ಇತಿಹಾಸ ಪ್ರಸಿದ್ಧ ಪುಣ್ಯಕ್ಷೇತ್ರಗಳಿವೆ. ಅವುಗಳಲ್ಲಿ ಜೋಗೇಶ್ವರಿ ಗುಂಫಾದ ಸಮೀಪದಲ್ಲಿರುವ ಶ್ರೀ ಜಗದಂಬಾ ಕಾಲಭೈರವ ದೇವಸ್ಥಾನವೂ ಒಂದು. ಶತಮಾನಕ್ಕೂ ಹೆಚ್ಚು ಇತಿಹಾಸವಿರುವ ಈ ಮಂದಿರದಲ್ಲಿ ನಾರಾಯಣಗಿರಿ ಎಂಬ ಸಾಧು ಓರ್ವರು ವಾಸ್ತವ್ಯವಿದ್ದುದರಿಂದ ಅದಕ್ಕೆ “ನಾರಾಯಣಗಿರಿ ಆಶ್ರಮ” ಎಂದು ಕರೆಯುತ್ತಿದ್ದರು. ಶ್ರೀ ಜಗದಂಬಾ ದೇವಿ ಮತ್ತು ಶ್ರೀ ಕಾಲಭೈರವ ದೇವರ ಭಾವಚಿತ್ರಗಳನ್ನು ಇಟ್ಟು ಆರಾಧಿಸುತ್ತಿದ್ದರು. ಮುಂದೆ ಕಾರಣಾಂತರಗಳಿಂದ ಮಂದಿರವನ್ನು ಅದೇ ಪರಿಸರದಲ್ಲಿದ್ದ ಉದ್ಯಮಿಯೂ, ದೈವಭಕ್ತರೂ ಆಗಿದ್ದ ಚಂದಪ್ಪ ಪೂಜಾರಿಯವರಿಗೆ 1960ರಲ್ಲಿ ಮೇಲ್ವಿಚಾರಣೆಗೆ ನೀಡಿದರು.

ದೇವಸ್ಥಾನದ ಅಭಿವೃದ್ಧಿಗಾಗಿ ಹಿರಿಯ ಸಮಾಜಸೇವಕರಾಗಿದ್ದ ಶ್ರೀ ಆರ್. ವಿ. ಮೂಡುಬಿದ್ರಿಯವರ ಅಧ್ಯಕ್ಷತೆಯಲ್ಲಿ 1978ರಲ್ಲಿ ಸಮಿತಿಯ ರಚನೆಯಾಯಿತು. ಮುಂದೆ ಕಾಲಭೈರವ ದೇವರ ನರ್ತನ ಸೇವೆ ಪ್ರಾರಂಭವಾಗಿ ದಿನದಿಂದ ದಿನಕ್ಕೆ ಮಂದಿರವು ಅಭಿವೃದ್ಧಿಯನ್ನು ಪಡೆಯಿತು. ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಸಮೀಪದ ಹೆಸರಾಂತ ಧಾರ್ಮಿಕ ಕ್ಷೇತ್ರ ಕೊಡಂಜೆಕಲ್ಲು ಎಂಬಲ್ಲಿಯ ಸ್ವಾಮೀಜಿಯೊಬ್ಬರು ಮಂದಿರದಲ್ಲಿ ವಾಸ್ತವ್ಯ ಹೂಡಿದ್ದರು ಹಾಗೂ ಪೂಜೆಯ ಕೈಂಕರ್ಯವನ್ನೂ ಮಾಡುತ್ತಿದ್ದರು. ಅವರ ಪ್ರೇರಣೆಯಂತೆ ಮಂದಿರಕ್ಕೆ ಒಂದು ಹೊಸ ಆಯಾಮವನ್ನು ಕಲ್ಪಿಸಲು, ಸುಸಜ್ಜಿತ ದೇವಸ್ಥಾನವನ್ನು ನಿರ್ಮಿಸಲು ಸಮಿತಿಯು ಕಾರ್ಯಪ್ರವೃತ್ತವಾಯಿತು.

ಶ್ರೀ ಚಂದಪ್ಪ ಪೂಜಾರಿ, ಶ್ರೀ ಆರ್. ವಿ. ಮೂಡುಬಿದ್ರಿ, ಶ್ರೀ ಗೋವಿಂದ ಎ. ಶೆಟ್ಟಿ ಮತ್ತು ಸಮಿತಿಯ ಸದಸ್ಯರು ಹಾಗೂ ಎಲ್ಲಾ ಭಕ್ತಾದಿಗಳ ಸಹಕಾರದಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರಾಗಿದ್ದ ವೇದಮೂರ್ತಿ ಗೋಪಾಲಕೃಷ್ಣ ಆಸ್ರಣ್ಣನವರ ದಿವ್ಯ ಹಸ್ತದಿಂದ ಶಂಕುಸ್ಥಾಪನೆ ಮಾಡಿ, 1985 ಫೆಬ್ರವರಿ 6ರಂದು ದೇವಸ್ಥಾನ ನಿರ್ಮಾಣವಾಗಿ ಶ್ರೀ ಜಗದಂಬಾ, ಶ್ರೀ ಕಾಲಭೈರವ ಮತ್ತು ಶ್ರೀ ಗಣಪತಿ ಹೀಗೆ ಮೂರು ಗರ್ಭಗುಡಿಗಳೊಂದಿಗೆ ದೇವರ ಪ್ರತಿಷ್ಠಾಪನೆ ಮಾಡಲಾಯಿತು. ಪ್ರಾಚೀನ ವಾಸ್ತುಶಿಲ್ಪಕಲೆ ಹಾಗೂ ಸಾಂಪ್ರದಾಯಿಕತೆಗೆ ಅನುಗುಣವಾಗಿ ಪೂಜೆ ಪುನಸ್ಕಾರಗಳು ನಿರಂತರವಾಗಿ ನಡೆಯುತ್ತಿವೆ.

ದೇವಸ್ಥಾನವನ್ನು ವ್ಯವಸ್ಥಿತವಾಗಿ ನಡೆಸಲು ಹಾಗೂ ಮುಂದಿನ ಅಭಿವೃದ್ಧಿಯನ್ನು ಮುಂದಿಟ್ಟುಕೊಂಡು ದೇವಸ್ಥಾನವನ್ನು ಶ್ರೀ ಶಂಕರ ಎ. ಪೂಜಾರಿಯವರ ಪ್ರಯತ್ನದಲ್ಲಿ ಶ್ರೀ ಗೋವಿಂದ ಎ. ಶೆಟ್ಟಿ, ಶ್ರೀ ಶಂಕರ ಎ. ಪೂಜಾರಿ, ಶ್ರೀ ಚಂದ್ರಹಾಸ ಆರ್. ಶೆಟ್ಟಿ, ಶ್ರೀ ಮುದ್ದು ಸಿ. ಸುವರ್ಣ, ಶ್ರೀ ಜಿ. ಟಿ. ಆಚಾರ್ಯ, ಶ್ರೀ ಪ್ರಭಾಕರ ಬೋಳಾರ್, ಶ್ರೀ ಸುಂದರ ಸಿ. ಪೂಜಾರಿ ಮತ್ತು ಶ್ರೀ ಸಂಜೀವ ಪಿ. ಪೂಜಾರಿ ಇವರನ್ನೊಳಗೊಂಡ ಎಂಟು ಮಂದಿ ಟ್ರಸ್ಟಿಗಳು ಸ್ಥಾಪಕ ಸದಸ್ಯರಾಗಿ “ಶ್ರೀ ಜಗದಂಬಾ ಕಾಲಭೈರವ ಟೆಂಪಲ್ ಟ್ರಸ್ಟ್” ಎಂಬ ಹೆಸರಿನಿಂದ 1996ರಲ್ಲಿ ನೋಂದಾಯಿಸಲಾಯಿತು.

ಶ್ರೀ ಚಂದ್ರಹಾಸ ಆರ್. ಶೆಟ್ಟಿ, ಶ್ರೀ ಗೋವಿಂದ ಎ. ಶೆಟ್ಟಿ, ಶ್ರೀ ಶಂಕರ ಎ. ಪೂಜಾರಿ, ಶ್ರೀ ಪ್ರಭಾಕರ ಬೋಳಾರ್ ಅವರ ನಿಧನದ ನಂತರ ಶ್ರೀ ಎಚ್. ಬಾಬು ಪೂಜಾರಿ, ಶ್ರೀ ಡಿ. ಟಿ. ಕುಂದರ್, ಶ್ರೀ ಶೇಖರ ಕರ್ಕೇರ, ಶ್ರೀ ಮುಂಡ್ಕೂರು ಸುರೇಂದ್ರ ಸಾಲ್ಯಾನ್, ಶ್ರೀ ಸಂತೋಷ್ ಜಿ. ಶೆಟ್ಟಿ, ಶ್ರೀ ಲಕ್ಷ್ಮಣ್ ಸಿ. ಪೂಜಾರಿ ಮತ್ತು ಶ್ರೀ ದೇವದಾಸ್ ಎಸ್. ಸುವರ್ಣ ಅವರನ್ನು ದೇವಸ್ಥಾನದ ಟ್ರಸ್ಟಿಗಳನ್ನಾಗಿ ನೇಮಿಸಲಾಯಿತು. ಶ್ರೀ ಕ್ಷೇತ್ರದಲ್ಲಿ ಮಹಿಳಾ ಮಂಡಳಿ, ಭಜನಾ ಮಂಡಳಿ ಮತ್ತು ಸೇವಾ ಸಮಿತಿ ಅತ್ಯಂತ ಕ್ರಿಯಾಶೀಲವಾಗಿದ್ದು, ದೇವಸ್ಥಾನದ ಎಲ್ಲಾ ಕಾರ್ಯಚಟುವಟಿಕೆಗಳಲ್ಲಿ ಸಹಭಾಗಿಗಳಾಗಿ ಅದರ ಯಶಸ್ಸಿಗೆ ಶ್ರಮಿಸುತ್ತಿವೆ.

ಶ್ರೀ ಕ್ಷೇತ್ರದಲ್ಲಿ ಪ್ರತೀ ಶುಕ್ರವಾರ ಸಾಯಂಕಾಲ ಭಜನಾ ಸೇವೆಯು ನಡೆಯುತ್ತಿದ್ದು, ಪ್ರತೀ ವರ್ಷ ಡಿಸೆಂಬರ್ ತಿಂಗಳ ಮೂರನೇ ಶನಿವಾರ ಪ್ರಾತಃಕಾಲದಿಂದ ಮಾರನೆಯ ದಿನ ಆದಿತ್ಯವಾರ ಪ್ರಾತಃಕಾಲದವರೆಗೆ 24 ಗಂಟೆಗಳ ಕಾಲ ಏಕಾಹ ಭಜನೆಯು ಕಳೆದ 55 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದೆ. ಸುವರ್ಣ ಸಂಭ್ರಮವನ್ನು ಅತ್ಯಂತ ವಿಜೃಂಭಣೆಯಿಂದ ಒಂದು ವಾರಗಳ ಪರ್ಯಂತ ಆಚರಿಸಿ, ಮುಂಬಯಿಯ ಸುಮಾರು 55 ಭಜನಾ ಮಂಡಳಿಗಳು ಭಾಗವಹಿಸಿ ಆ ಮಂಡಳಿಗಳನ್ನು ಸನ್ಮಾನಿಸಿರುವುದು ಒಂದು ದಾಖಲೆಯಾಗಿದೆ. ಏಕಾಹ ಭಜನೆ ಪ್ರಾರಂಭಿಸಲು ಕಾರಣಕರ್ತರಾದ ದಿ. ಸೇಸಪ್ಪ ಕೋಟ್ಯಾನ್ ಮತ್ತು ಇತರರನ್ನು ಈ ಸಂದರ್ಭದಲ್ಲಿ ನೆನೆಯುತ್ತೇವೆ.

ಶ್ರೀ ಕ್ಷೇತ್ರದ ಸಾಂಸ್ಕೃತಿಕ ಅಂಗವಾಗಿ 1960ರಲ್ಲಿ ಶ್ರೀ ಜಗದಂಬಾ ಯಕ್ಷಗಾನ ಕಲಾ ಮಂಡಳಿಯ ಸ್ಥಾಪನೆಯಾಗಿ ಸುಮಾರು 55 ವರ್ಷಗಳ ಕಾಲ ನಿರಂತರ ತಾಳಮದ್ದಳೆ ಹಾಗೂ ವಾರ್ಷಿಕೋತ್ಸವವನ್ನು ಜರುಗಿಸುತ್ತಾ ಬಂದಿರುತ್ತದೆ. ದೇವಾಲಯದಲ್ಲಿ ಕಳೆದ ಹಲವಾರು ವರ್ಷಗಳಿಂದ ಪ್ರತೀ ವರ್ಷ ಶ್ರೀ ಅಯ್ಯಪ್ಪ ಪೂಜೆ ಜರುಗುತ್ತಿದ್ದು, ನೂರಾರು ಮಂದಿ ಮಾಲಾಧಾರಿಗಳು ಶಬರಿಮಲೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ.

ಶ್ರೀ ಕ್ಷೇತ್ರದಲ್ಲಿ ನಾಗರ ಪಂಚಮಿ, ಕಾಲಭೈರವ ಜಯಂತಿ, ಸುಬ್ರಹ್ಮಣ್ಯ ಷಷ್ಠಿ, ಮಹಾಶಿವರಾತ್ರಿ, ಬ್ರಹ್ಮಕಲಶೋತ್ಸವದ ದಿನದಂದು ವಾರ್ಷಿಕ ಮಹೋತ್ಸವ, ಅನ್ನಸಂತರ್ಪಣೆ, ಏಕಾಹ ಭಜನಾ ಮಹೋತ್ಸವ, ಅಲ್ಲದೆ ನವರಾತ್ರಿ ಸಂದರ್ಭದಲ್ಲಿ ಹತ್ತು ದಿವಸಗಳ ಕಾಲ ಪ್ರತೀ ದಿನ ಪೂಜೆ, ಚಂಡಿಕಾ ಯಾಗ, ಭಜನೆ, ಅನ್ನಸಂತರ್ಪಣೆ ನಡೆಯುತ್ತಿವೆ.

ಹಬ್ಬ ಹರಿದಿನಗಳಲ್ಲಿ ವಿಶೇಷ ಪೂಜೆಗಳಲ್ಲದೆ ಪ್ರತೀ ದಿನ ಬೆಳಗ್ಗೆ ಗಂಟೆ 8.00ಕ್ಕೆ ಮತ್ತು ರಾತ್ರಿ 7.30ಕ್ಕೆ ಪೂಜೆ, ಪ್ರತೀ ತಿಂಗಳ ಹುಣ್ಣಿಮೆಯಂದು ಸಾರ್ವಜನಿಕ ಶ್ರೀ ಸತ್ಯನಾರಾಯಣ ಮಹಾಪೂಜೆ, ಪ್ರತೀ ತಿಂಗಳ ಸಂಕಷ್ಟಿಯಂದು ಸಾರ್ವಜನಿಕ ಗಣಹೋಮ ನಡೆಯುತ್ತದೆ.

ಶ್ರೀ ಗೋವಿಂದ ಎ. ಶೆಟ್ಟಿ, ಶ್ರೀ ಶಂಕರ ಎ. ಪೂಜಾರಿ, ಶ್ರೀ ಚಂದ್ರಹಾಸ ಆರ್. ಶೆಟ್ಟಿ, ಶ್ರೀ ಎಂ. ಸಿ. ಸುವರ್ಣ, ಶ್ರೀ ಜಿ. ಟಿ. ಆಚಾರ್ಯ, ಶ್ರೀ ಸಂಜೀವ ಪೂಜಾರಿ ಆಡಳಿತ ಮೊಕ್ತೇಸರರಾಗಿ ಸೇವೆ ಮಾಡುತ್ತಾ ಬಂದಿರುವುದಲ್ಲದೆ, ಪ್ರಸ್ತುತ ಶ್ರೀ ಮುಂಡ್ಕೂರು ಸುರೇಂದ್ರ ಸಾಲ್ಯಾನ್ ಅವರು ಆಡಳಿತ ಮೊಕ್ತೇಸರರಾಗಿ ಸೇವೆ ಮಾಡುತ್ತಿದ್ದಾರೆ. ಪಾದೂರು ಶ್ರೀ ನರಹರಿ ತಂತ್ರಿಯವರು ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಸದ್ಭಕ್ತ ಬಾಂಧವರೇ,

ಸುಮಾರು ಐದು ದಶಕಗಳ ಹಿಂದೆ ನಿರ್ಮಾಣಗೊಂಡ ದೇವಸ್ಥಾನವು ಇದೀಗ ಜೀರ್ಣಾವಸ್ಥೆಯಲ್ಲಿದೆ. ದಿನಂಪ್ರತಿ ನೂರಾರು ಜನರು ಶ್ರೀ ಕ್ಷೇತ್ರಕ್ಕೆ ಬಂದು ದೇವರ ದರ್ಶನವನ್ನು ಪಡೆಯುತ್ತಿದ್ದಾರೆ. ಇದೀಗ ದೇವಸ್ಥಾನವು ಶಿಥಿಲಗೊಂಡು ಅಪಾಯದ ಅಂಚಿನಲ್ಲಿದೆ. ಕಳೆದ ಮೂರು-ನಾಲ್ಕು ವರ್ಷಗಳಿಂದ ಸಂಬಂಧಪಟ್ಟ ಇಲಾಖೆಯಿಂದ ಜೀರ್ಣೋದ್ಧಾರಕ್ಕೆ ಅನುಮತಿಗಾಗಿ ಪ್ರಯತ್ನಿಸುತ್ತಿದ್ದರೂ, ಇದೀಗ ನಮ್ಮ ಪ್ರಯತ್ನಕ್ಕೆ ತಕ್ಕ ಫಲ ಸಿಕ್ಕಿರುತ್ತದೆ ಎಂದು ತಿಳಿಸಲು ಸಂತೋಷಪಡುತ್ತೇವೆ.

ಶ್ರೀ ಕ್ಷೇತ್ರದ ಮತ್ತು ಗರ್ಭಗುಡಿಗಳ ಜೀರ್ಣೋದ್ಧಾರಕ್ಕೆ ಸುಮಾರು ಐದು ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ತಮ್ಮಂತಹ ಉದಾರ ದಾನಿಗಳ ಸಹಕಾರದಿಂದ ಮಾತ್ರ ಇದು ಸಾಧ್ಯ. ಪುರಾತನ ಕ್ಷೇತ್ರವನ್ನು ಉಳಿಸಿ ಮುಂದಿನ ಪೀಳಿಗೆಗೆ ಅದನ್ನು ಪರಿಚಯಿಸಿ ಹಸ್ತಾಂತರಿಸುವುದು ನಮ್ಮ ಕರ್ತವ್ಯ. ಆ ನೆಲೆಯಲ್ಲಿ ತಾವೆಲ್ಲರೂ ತಮ್ಮಿಂದಾದ ಹೆಚ್ಚಿನ ಸಹಾಯವನ್ನು ನೀಡಿ, ಜೀರ್ಣೋದ್ಧಾರದ ಮುಖಾಂತರ ಶ್ರೀ ಕ್ಷೇತ್ರದ ಅಧಿದೇವತೆ ಶ್ರೀ ಜಗದಂಬೆ ಹಾಗೂ ಪರಿವಾರ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ವಿನಂತಿಸುತ್ತೇವೆ.

ನಿಯೋಜಿತ ನೂತನ ಗರ್ಭಗುಡಿಗಳ ನಿರ್ಮಾಣದ ಕಾರ್ಯಕ್ಕೆ ನಿಮ್ಮೆಲ್ಲರ ಸಹಕಾರ ಅತ್ಯಗತ್ಯ. ಈ ಪುಣ್ಯ ಕಾರ್ಯದಲ್ಲಿ ಭಕ್ತಾಭಿಮಾನಿಗಳು ಕೈಜೋಡಿಸಿ, ಶ್ರೀ ಕ್ಷೇತ್ರದ ಅಭಿವೃದ್ಧಿಗೆ ತಮ್ಮ ಅಮೂಲ್ಯ ಕೊಡುಗೆಯನ್ನು ನೀಡಬೇಕಾಗಿ ವಿನಮ್ರವಾಗಿ ಕೋರುತ್ತೇವೆ.

ದೇಣಿಗೆ ನೀಡಲು ಬ್ಯಾಂಕ್ ವಿವರಗಳು:

  • ಬ್ಯಾಂಕ್: Bharat Co-op. Bank Ltd.
  • ಖಾತೆ ಸಂಖ್ಯೆ (A/c. No.): 003910100138129
  • ಶಾಖೆ (Branch): Jogeshwari East Branch
  • IFSC ಕೋಡ್: BCBM0000040
  • ಖಾತೆಯ ಹೆಸರು: Shree Jagadamba Kalabhairava Temple Repairs & Renovation Fund

ಮೇಲಿನ ಮಹತ್ಕಾರ್ಯಕ್ಕೆ ದೇಣಿಗೆ ನೀಡಲಿಚ್ಛಿಸುವ ಭಕ್ತಾಭಿಮಾನಿಗಳು ಈ ಖಾತೆಗೆ ಮೊತ್ತವನ್ನು ವರ್ಗಾಯಿಸಬಹುದು.

ಶ್ರೀ ಜಗದಂಬಾ ಕಾಲಭೈರವ ದೇವಸ್ಥಾನ ಟ್ರಸ್ಟ್ (ರಿ.) ಪರವಾಗಿ:

  • ಮುಂಡ್ಕೂರು ಸುರೇಂದ್ರ ಸಾಲ್ಯಾನ್ – ಅಧ್ಯಕ್ಷರು / ಆಡಳಿತ ಮೊಕ್ತೇಸರರು (ಮೊಬೈಲ್: 9821123767)
  • ಪಾದೂರು ನರಹರಿ ತಂತ್ರಿ – ಪ್ರಧಾನ ಅರ್ಚಕರು
  • ಎಚ್. ಬಾಬು ಪೂಜಾರಿ – ಟ್ರಸ್ಟಿ / ಉಪಾಧ್ಯಕ್ಷರು (ಮೊಬೈಲ್: 9820124536)
  • ದೇವದಾಸ್ ಎಸ್. ಸುವರ್ಣ – ಟ್ರಸ್ಟಿ / ಗೌರವ ಕಾರ್ಯದರ್ಶಿ (ಮೊಬೈಲ್: 9967800203)
  • ದಾಮೋದರ ಟಿ. ಕುಂದರ್ – ಟ್ರಸ್ಟಿ / ಗೌರವ ಕೋಶಾಧಿಕಾರಿ (ಮೊಬೈಲ್: 9869724144)

ಪಾರುಪತ್ಯಗಾರರು: ಶ್ರೀ ಎಂ. ಸಿ. ಸುವರ್ಣ, ಶ್ರೀ ಜಿ. ಟಿ. ಆಚಾರ್ಯ, ಶ್ರೀ ಸಂಜೀವ ಪಿ. ಪೂಜಾರಿ, ಶ್ರೀ ಸುಂದರ ಸಿ. ಪೂಜಾರಿ, ಶ್ರೀ ಶೇಖರ ಕರ್ಕೇರ, ಶ್ರೀ ಸಂತೋಷ್ ಜಿ. ಶೆಟ್ಟಿ, ಶ್ರೀ ಲಕ್ಷ್ಮಣ್ ಸಿ. ಪೂಜಾರಿ.

  • ಸಂಜೀವ ಪಿ. ಪೂಜಾರಿ – ಕಾರ್ಯಾಧ್ಯಕ್ಷರು, ಜೀರ್ಣೋದ್ಧಾರ ಸಮಿತಿ
  • ವನಿತಾ ಜಯಕರ ಶೆಟ್ಟಿ – ಮಹಿಳಾ ವಿಭಾಗ
  • ಲವಕುಶ ಗುಪ್ತಾ – ಭಜನಾ ಭುವಾಜಿ
  • ಮಹಿಳಾ ವಿಭಾಗ, ಭಜನಾ ಮಂಡಳಿ, ಸೇವಾ ಸಮಿತಿ ಹಾಗೂ ಸರ್ವ ಸದಸ್ಯರು.

ಶ್ರೀ ಜಗದಂಬೆ ಹಾಗೂ ಪರಿವಾರ ದೇವರ ಅನುಗ್ರಹ ಸದಾ ನಿಮ್ಮೆಲ್ಲರ ಮೇಲಿರಲಿ.



Related posts

ಶಿಕ್ಷಣದ ಜೊತೆಗೆ ಸಂಸ್ಕೃತಿಯ ಆರಾಧನೆ: ಪಂಬದ ಸಮುದಾಯದ ಹೆಮ್ಮೆಯ ಕುಲಕಸುಬನ್ನು ಮೈಗೂಡಿಸಿಕೊಂಡ ಮಹೇಶ್ ಗುಜರನ್

Mumbai News Desk

ಯಕ್ಷಗಾನದ ಪಾವಿತ್ರ್ಯತೆ ಮತ್ತು ಪ್ರೇಕ್ಷಕರ ಅಶಿಸ್ತು: ಉಜಿರೆ ಅಶೋಕ್ ಭಟ್ ಅವರ ‘ರಂಗಸ್ಥಳದ ಶಿಸ್ತಿನ ಪಾಠ’ – ಒಂದು ವಿಶೇಷ ವರದಿ

Mumbai News Desk

ಭಿಕ್ಷುಕ,ಬೀದಿ ಮಗು ಮತ್ತು ಬದುಕು

Mumbai News Desk

ಕುಲಾಲ ಸಂಘ, ಮುಂಬಯಿ.  ನ 23: ಮಂಗಳೂರಿನ ಮಂಗಳ ದೇವಿ ಬಳಿ ಕುಲಾಲ ಭವನ ಲೋಕಾರ್ಪಣೆ

Mumbai News Desk

ಹನಿ ಕತೆ: ಪರಿಹಾರ

Vani Prasad

ಮೊಗವೀರ ವ್ಯವಸ್ಥಾಪಕ ಮಂಡಳಿ 123ನೇ ವರ್ಷಕ್ಕೆ ಪಾದಾರ್ಪಣೆ

Mumbai News Desk