November 23, 2026
Mumbai News Kannada
ಕರಾವಳಿ

ಕಾಪು ಬೀಚ್‌ನಲ್ಲಿ ಸಮುದ್ರದ ಅಲೆಗೆ ಸಿಲುಕಿ ಇಬ್ಬರು ವಿದ್ಯಾರ್ಥಿಗಳು ನಾಪತ್ತೆ; ಮೂವರ ರಕ್ಷಣೆ





















ಉಡುಪಿ: ಪ್ರವಾಸಕ್ಕೆಂದು ಕುಟುಂಬಸ್ಥರೊಂದಿಗೆ ಆಗಮಿಸಿದ್ದ ವಿದ್ಯಾರ್ಥಿಗಳ ಪೈಕಿ ಇಬ್ಬರು ಸಮುದ್ರದ ಅಲೆಗಳ ಸೆಳೆತಕ್ಕೆ ಸಿಲುಕಿ ನಾಪತ್ತೆಯಾಗಿದ್ದು, ಮೂವರನ್ನು ಸ್ಥಳೀಯರು ಹಾಗೂ ರಕ್ಷಣಾ ಸಿಬ್ಬಂದಿ ರಕ್ಷಿಸಿರುವ ಘಟನೆ ಭಾನುವಾರ ಸಂಜೆ ಕಾಪು ಲೈಟ್‌ಹೌಸ್ ಬಳಿಯ ಬೀಚ್‌ನಲ್ಲಿ ಸಂಭವಿಸಿದೆ.

ನಾಪತ್ತೆಯಾದವರನ್ನು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮಾವಿನಕೊಪ್ಪ ನಿವಾಸಿ ಅಲ್ತಾಫ್ ಅವರ ಪುತ್ರ ಸಮೀರ್ (20) ಹಾಗೂ ದಾವಣಗೆರೆ ಜಿಲ್ಲೆಯ ಅಹಮದ್ ನಗರ ನಿವಾಸಿ ಜಿಯಾವುಲ್ಲಾ ಅವರ ಪುತ್ರ ಮಲ್ಲಿಕ್ ರಿಹಾನ್ (15) ಎಂದು ಗುರುತಿಸಲಾಗಿದೆ. ದಾವಣಗೆರೆ ಮೂಲದ ಜಿಯಾವುಲ್ಲಾ ಅವರ ನೇತೃತ್ವದಲ್ಲಿ ಕುಟುಂಬದ 10 ರಿಂದ 12 ಸದಸ್ಯರು ಭಾನುವಾರ ಪ್ರವಾಸಕ್ಕೆಂದು ಕಾಪು ಬೀಚ್‌ಗೆ ಭೇಟಿ ನೀಡಿದ್ದರು. ಉಡುಪಿ ಜಿಲ್ಲೆಯ ವಿವಿಧ ಶಾಲೆ-ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹೊರ ಜಿಲ್ಲೆಗಳ ವಿದ್ಯಾರ್ಥಿಗಳು ತಮ್ಮ ಪೋಷಕರೊಂದಿಗೆ ಬೀಚ್‌ಗೆ ಆಗಮಿಸಿದ್ದ ವೇಳೆ ಈ ದುರ್ಘಟನೆ ನಡೆದಿದೆ.

ಭಾನುವಾರ ಸಂಜೆ ಬೀಚ್‌ನಲ್ಲಿ ವಿಹರಿಸುತ್ತಿದ್ದ ತಂಡದ ಐವರು ವಿದ್ಯಾರ್ಥಿಗಳು ಈಜಲು ಸಮುದ್ರಕ್ಕೆ ಇಳಿದಿದ್ದರು. ಈ ವೇಳೆ ಸಮುದ್ರದ ರಭಸವಾದ ಅಲೆಗಳ ಸೆಳೆತಕ್ಕೆ ಸಿಲುಕಿ ಮುಳುಗಲಾರಂಭಿಸಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು, ಮೀನುಗಾರರು, ಲೈಫ್‌ಗಾರ್ಡ್ ಹಾಗೂ ಕರಾವಳಿ ಕಾವಲು ಪಡೆಯ ಸಿಬ್ಬಂದಿ ತಕ್ಷಣವೇ ಕಾರ್ಯಾಚರಣೆ ನಡೆಸಿ ಮೂವರನ್ನು ಸುರಕ್ಷಿತವಾಗಿ ದಡಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ರಕ್ಷಿಸಲ್ಪಟ್ಟವರಲ್ಲಿ ಓರ್ವನನ್ನು ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಶಿವಮೊಗ್ಗ ಮೂಲದ ಸಮೀರ್ ಹಾಗೂ ದಾವಣಗೆರೆ ಮೂಲದ ಮಲ್ಲಿಕ್ ರಿಹಾನ್ ಅಲೆಗಳ ಅಬ್ಬರಕ್ಕೆ ಸಿಲುಕಿ ಸಮುದ್ರ ಪಾಲಾಗಿದ್ದಾರೆ.

ನಾಪತ್ತೆಯಾಗಿರುವ ಸಮೀರ್ ಕುಂದಾಪುರದ ಮೂಡ್ಲಕಟ್ಟೆ ಕಾಲೇಜಿನಲ್ಲಿ ದ್ವಿತೀಯ ವರ್ಷದ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ (AI & ML) ವಿದ್ಯಾರ್ಥಿಯಾಗಿದ್ದರೆ, ಮಲ್ಲಿಕ್ ರಿಹಾನ್ ದಾವಣಗೆರೆಯ ಗುರುಕುಲ ರೆಸಿಡೆನ್ಸಿ ಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದನು. ಘಟನೆಯಿಂದ ಪ್ರವಾಸಕ್ಕೆ ಬಂದಿದ್ದ ಕುಟುಂಬಸ್ಥರಲ್ಲಿ ತೀವ್ರ ಆತಂಕ ಹಾಗೂ ಆಕ್ರಂದನ ಮನೆಮಾಡಿದೆ.

ಸ್ಥಳಕ್ಕೆ ಕಾಪು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕರಾವಳಿ ಕಾವಲು ಪಡೆ, ಲೈಫ್‌ಗಾರ್ಡ್ ಸಿಬ್ಬಂದಿ ಹಾಗೂ ಸ್ಥಳೀಯ ಮೀನುಗಾರರ ನೆರವಿನೊಂದಿಗೆ ಸಮುದ್ರದಲ್ಲಿ ನಾಪತ್ತೆಯಾಗಿರುವ ಇಬ್ಬರು ವಿದ್ಯಾರ್ಥಿಗಳಿಗಾಗಿ ತೀವ್ರ ಶೋಧ ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ.



Related posts

ಮೂಲ್ಕಿ ರಾಷ್ಟ್ರೀಯ  ಹೆದ್ದಾರಿ    ಡೇಂಜರ್  ಜೋನ್ ಗಳ ಸಮಸ್ಯೆ ವಿವರಣೆಗೆ ಮನವಿ

Mumbai News Desk

ಬಿಜೂರಿನಲ್ಲಿ ರೈಲು ನಿಲುಗಡೆಗೆ ಆಗ್ರಹಿಸಿ ಧರಣಿ

Mumbai News Desk

ಡಿ.25ಕ್ಕೆ ಆಶಾ ಪ್ರಕಾಶ್ ಶೆಟ್ಟಿ “ನೆರವು” ಪ್ರದಾನ ಕಾರ್ಯಕ್ರಮ 

Mumbai News Desk

ಮೂಲ್ಕಿ ಬಂಟರ ಸಂಘ (ರಿ) ಅಧ್ಯಕ್ಷರಾಗಿ ಅಶೋಕ್ ಕುಮಾರ್ ಶೆಟ್ಟಿ,  ಗೌರಾವಾಧ್ಯಕ್ಷರಾಗಿ ಐಕಳ ಹರೀಶ್ ಶೆಟ್ಟಿ ಆಯ್ಕೆ.

Mumbai News Desk

ಇತಿಹಾಸ ಪ್ರಸಿದ್ಧ ಕಾಪು ಪಿಲಿಕೋಲ

Mumbai News Desk

ಕರಾವಳಿ ಪ್ರವಾಸೋದ್ಯಮಕ್ಕೆ ಹೊಸ ಕಾಯಕಲ್ಪ: ಶೀಘ್ರದಲ್ಲೇ ಕರಾವಳಿ ಭಾಗದಲ್ಲಿ ಸಚಿವ ಸಂಪುಟ ಸಭೆ – ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್

Mumbai News Desk