
ಭಜನೆ ಸನಾತನ ಧರ್ಮದ ಜೀವಾಳ – ಡಾ ಎಂ.ಜೆ.ಪ್ರವೀಣ್ ಭಟ್
ಮುಂಬಯಿ ಅ.23.ನಮ್ಮ ನೂತನ ಕರ್ನಾಟಕ ಸಂಘದ ಪ್ರಥಮ ಕಾರ್ಯಕ್ರಮವಾಗಿ ದಸರಾ ಹಬ್ಬದ ಈ ಶುಭ ಸಂದರ್ಭದಲ್ಲಿ ಭಜನೆ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಸೂಕ್ತವಾಗಿದೆ. ಈ ಸಂದರ್ಭದಲ್ಲಿ ನಾವೆಲ್ಲರೂ ದೇವರ ಕೃಪೆಗೆ ಪಾತ್ರರಾಗೋಣ. ಭಜನೆ ಎಂಬುದು ಮುಕ್ತಿಗೆ ಹೆದ್ದಾರಿ. ಅದು ಸನಾತನ ಧರ್ಮದ ಜೀವಾಳ. ಭಗವಂತನಿಗೆ ಅರ್ಪಿಸುವ ನೈವೇದ್ಯವದು. ಭಜನೆಯು ಆತ್ಮದ ಆಂತರಿಕ ಶಬ್ದಗಳ ಮೇಲೆ ಧ್ಯಾನವನ್ನು ಕೇಂದ್ರೀಕರಿಸುತ್ತದೆ ಆದುದರಿಂದ ಭಜನಾ ಕಾರ್ಯಕ್ರಮದಲ್ಲಿ ಮನಸ್ಸಿಗೆ ಶಾಂತಿ ನೆಮ್ಮದಿ ದೊರಕುತ್ತದೆ ಎಂದು ಸಂಘದ ಅಧ್ಯಕ್ಷರಾದ ಡಾ. ಎಂ ಜೆ ಪ್ರವೀಣ್ ಭಟ್ ಅವರು ನುಡಿದರು.
ಅವರು ತಾ. 22/ 10/ 2023 ರಂದು ಸಂಜೆ 5 ರಿಂದ ಸಯನ್ ನಿತ್ಯಾನಂದ ಸಭಾಗೃಹದಲ್ಲಿ ಏರ್ಪಡಿಸಲಾದ ಭಜನಾ ಕಾರ್ಯಕ್ರಮದ ಬಳಿಕ ಮಂಗಳಾರತಿ ನೆರವೇರಿಸಿ ,ಭಜನಾ ತಂಡಗಳನ್ನು ಗೌರವಿಸಿ ಮಾತನಾಡಿದರು.

‘ಚಂದ್ರಹಾಸ ರೈ ಪುತ್ತೂರು ಭಜನಾ ಬಳಗ’, ಡೊಂಬಿವಿಲಿ ಮತ್ತು ಶ್ರೀ ಶನೀಶ್ವರ ಚಾಮುಂಡೇಶ್ವರಿ ಅಯ್ಯಪ್ಪ ಭಜನಾ ಮಂಡಳಿ, ಕೋಳಿವಾಡ, ಸಯನ್ ಇವರುಗಳು ಆಗಮಿಸಿ, ಭಜನಾ ಕಾರ್ಯಕ್ರಮವನ್ನು ಸುಸೂತ್ರವಾಗಿ ನಡೆಸಿಕೊಟ್ಟರು.
ಸಂಘದ ಉಪಾಧ್ಯಕ್ಷರುಗಳಾದ ಶ್ರೀ ಸತೀಶ್ ಆರ್. ಶೆಟ್ಟಿ , ಶ್ರೀ ಸದಾನಂದ ಶೆಟ್ಟಿ, ಸದಾಶಿವ ಬಿ ಎನ್ ಶೆಟ್ಟಿ, ಸಲಹೆಗಾರ ಸುಂದರ ಮೂಲ್ಯ, ಸಂಸ್ಥಾಪಕ ಸದಸ್ಯರಲ್ಲಿ ಓರ್ವರಾದ ಹ್ಯಾರಿ ಸಿಕ್ವೇರಾ, ಗೌ.ಕಾರ್ಯದರ್ಶಿ ಡಾ.ಜಿ.ಪಿ.ಕುಸುಮಾ, ಜೊತೆ ಕಾರ್ಯದರ್ಶಿಗಳಾದ ಶ್ರೀ ಪ್ರವೀಣ್ ಶೆಟ್ಟಿ, ಜಯಶೀಲ ಬಿ ಮೂಲ್ಯ, ಶ್ರೀ ಉಮೇಶ್ ಶೆಟ್ಟಿ ಕುಕ್ಕುಂದೂರು, ಶ್ರೀ ದಯಾ ಮೂಲ್ಯ, ಜೊತೆ ಕೋಶಾಧಿಕಾರಿ ಶ್ರೀಮತಿ ಚಂದ್ರಿಕಾ ಶೆಟ್ಟಿ, ಸಾಂಸ್ಕೃತಿಕ ವಿಭಾಗದ ಶ್ರೀಮತಿ ಪ್ರಭಾ ಸುವರ್ಣ, ಮೊದಲಾದವರು ಉಪಸ್ಥಿತರಿದ್ದರು.

ಮಂಗಳಾರತಿಯಾದ ಬಳಿಕ ನೆರೆದ ಭಕ್ತಾಭಿಮಾನಿಗಳಿಗೆ ಪ್ರಸಾದ
ವಿತರಣೆಗೈಯಲಾಯಿತು. ಕೊನೆಗೆ ಲಘುಪಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು.
ಕರ್ನಾಟಕ ಸಂಘ ಸಯನ್ ಇದೇ ತಿಂಗಳ 15ರಂದು ನವರಾತ್ರಿಯ ಪರ್ವದಿನದಂದು ಉದ್ಘಾಟನೆಗೊಂಡಿತ್ತು, ಸಂಘವು ಹಮ್ಮಿಕೊಂಡಿದ್ದ ಭಜನಾ ಕಾರ್ಯಕ್ರಮದಲ್ಲಿ ಸಂಘದ ಸದಸ್ಯರು ,ತುಳು-ಕನ್ನಡಿಗರು ಭಾಗವಹಿಸಿದ್ದರು.