
ನಮ್ಮ ಭಾರತವು ಹಬ್ಬಗಳಲ್ಲಿ ಅರಳುವ ದೇಶ. ಅದರಲ್ಲೂ ದೀಪಾವಳಿ ಎಂದರೆ ಎಲ್ಲೆಡೆ ಸಾಲು ಸಾಲು ದೀಪಗಳ ರಂಗು ರಂಗಿನ ಹಣತೆಗಳು ಉರಿದು ಬಣ್ಣದ ಬೆಳಕು ಹರಿಸಿ ಚೆಲುವ ಸೂಸುವ ಸೊಬಗು , ಜಗಮಗ ಪಟಾಕಿಗಳು ನಕ್ಷತ್ರಲೋಕ ಸೃಷ್ಟಿಸಿ ಬದುಕಿನಲ್ಲಿ ಬಣ್ಣದ ಬೆಳಕು ಹರಿಸುತ್ತದೆ. ಹೊಂಬಣ್ಣದ ಬೆಳಕು ಅಜ್ಞಾನದ ಅಂಧಕಾರವ ತೊಳೆದು ಸುಜ್ಞಾನದ ದೀವಿಗೆಯನ್ನು ಬೆಳಗುವ ಬೆಳಕಿನ ಹಬ್ಬ ದೀಪಾವಳಿ ಹಲವು ವೈವಿಧ್ಯತೆಗಳಿಂದ ಗಮನ ಸೆಳೆಯುತ್ತಾ ಬಂದಿದೆ. ಮನೆ ಮನಗಳ ಬೆಳಗಿಸುವ ಸಂಭ್ರಮದ ಹಬ್ಬವಿದು. ಧಾರ್ಮಿಕ ಹಾಗೂ ಸಾಂಸ್ಕೃತಿಕ ಸ್ವರೂಪದ ಬೆಳಕಿನ ಹಬ್ಬ ನಮ್ಮ ದೇಶ ಮಾತ್ರವಲ್ಲದೇ ವಿಶ್ವದ ಹಲವು ರಾಷ್ಟ್ರಗಳಲ್ಲಿ ದೀಪಾವಳಿ ಆಚರಿಸಲಾಗುತ್ತದೆ .
ಬೆಳಕಿನ ಹಬ್ಬ ದೀಪಾವಳಿ ಖುಷಿ ತರುವ ಹಬ್ಬ. ತಳಿರು ತೋರಣಗಳ ಮೆರಗು,ಸಿಹಿ ತಿಂಡಿ, ಪಟಾಕಿ ಹಾರಿಸುವ ಸಂಭ್ರಮ, ಬಣ್ಣಬಣ್ಣಗಳಿಂದ ಅಲಂಕೃತ ಗೊಂಡ ರಂಗೋಲಿಗೂ ದೀಪಾವಳಿಗೂ ಅವಿನಾಭಾವ ನಂಟು. ವಿವಿಧ ಬಗೆಯ ಬಣ್ಣಗಳನ್ನು ತುಂಬಿ ಅಲ್ಲಲ್ಲಿ ಹಣತೆಗಳನ್ನು ಹಚ್ಚಿ ಇಡುವ ರಂಗೋಲಿಗಳ ಚಿತ್ತಾರ, ಹಣತೆ ದೀಪದ ಜಗಮಗ ಹೊಂಬೆಳಕಿನಲ್ಲಿ ಅಮಾವಾಸ್ಯೆಯ ಕತ್ತಲು ಕಳೆದು ಜಗವ ಬೆಳಗುವ ಪ್ರಕಾಶದ ಆಗಮನ. ದೀಪ ಪವಿತ್ರ ಹಾಗೂ ಜ್ಞಾನ ಬೆಳಗುವ ಸಂಕೇತ. ದೀಪಾವಳಿಯ ಸೊಬಗು ಬಣ್ಣಿಸಿದಷ್ಟೂ ಸಾಲದು.ಈ ಆಚರಣೆಯ ಹಿಂದೆ ಸಡಗರ ಸಂಭ್ರಮದೊಂದಿಗೆ ಧಾರ್ಮಿಕ ನಂಬಿಕೆಯೂ ಇದೆ.
ದೀಪಾವಳಿ ಸಮೀಪಿಸುತ್ತಿದಂತೆ ಎಲ್ಲಾ ನಗರ ಹಾಗೂ ಮಹಾನಗರದ ಮಾರುಕಟ್ಟೆಗಳಿಗೆ ರಂಗೇರುತ್ತದೆ. ವೈವಿಧ್ಯಮಯ ದೀಪಗಳು, ಝಗಮಗಿಸುವ ವಿದ್ಯುತ್ ದೀಪ ಅಲಂಕಾರ ಅಷ್ಟೇ ಅಲ್ಲದೆ ಆಕರ್ಷಕ ಗೂಡುದೀಪಗಳು (ಆಕಾಶ ಬುಟ್ಟಿ), ಮಣ್ಣಿನ ಹಣತೆ, ಸೆಗಣಿಹಣತೆಗಳು, ತೋರಣಗಳು, ಗೃಹಾಲಂಕಾರದ ವಸ್ತುಗಳ ಸಿರಿ ಸಿಂಗಾರ ಗ್ರಾಹಕರನ್ನು ಆಕರ್ಷಿಸುತ್ತದೆ. ನಲಿವಿನ ಸಂಕೇತದ ಕತ್ತಲೆಯಲ್ಲಿ ಬೆಳಕಿನ ಚಿತ್ತಾರವನ್ನು ಮೂಡಿಸುತ್ತಾ ಸಾಂಪ್ರದಾಯಿಕ ಉಡುಗೆಗಳ ಸಿಂಗಾರದಲ್ಲಿ ಮನೆ ಮನೆಗಳಲ್ಲಿ ನಲಿದಾಡುವ ಮಕ್ಕಳು, ಹಿರಿಯರು, ಕಿರಿಯರೆಲ್ಲಾ ಒಂದಾಗಿ ಆಚರಿಸುವ ಹಬ್ಬ. ದೀಪದಲ್ಲಿ ಬೆಂಕಿಯೂ ಇದೆ ,ಬೆಳಕೂ ಇದೆ. ಆಯ್ಕೆ ಮಾತ್ರ ನಮ್ಮದು. ಈಗಿನ ಆಧುನೀಕ ಕಾಲದಲ್ಲಿ ಮೈ ಮರೆಯದೆ ಹಬ್ಬದ ಆಚರಣೆಗೆ ಮಹತ್ವ ಕೊಟ್ಟು ಶ್ರದ್ಧಾ ಭಕ್ತಿಯಿಂದ ಸಡಗರದಿಂದ ಆಚರಿಸಬೇಕೇ ಹೊರತು ಅಬ್ಬರ ,ಆಡಂಭರದಿಂದ ಅಲ್ಲ.
ದೀಪಾವಳಿ ಹಬ್ಬದ ಬಲಿ ಪಾಡ್ಯ ದಿನದಂದು ಎಲ್ಲಾ ದೇವಸ್ಥಾನಗಳಲ್ಲಿ ಕಡ್ಡಾಯವಾಗಿ ಗೋಪೂಜೆ ನೆರವೇರಿಸುವಂತೆ ಕರ್ನಾಟಕ ಧಾರ್ಮಿಕ ದತ್ತಿ ಇಲಾಖೆಯು ಸುತ್ತೋಲೆ ಹೊರಡಿಸಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಆತ್ಮನಿರ್ಭರ ಭಾರತ ಪರಿಕಲ್ಪನೆಯಲ್ಲಿ ಘೋಷಿಸಿದಂತೆ ಸ್ವದೇಶಿ ಉತ್ಪನ್ನಗಳಿಗೆ ಮಾರುಕಟ್ಟೆ ಮೌಲ್ಯ ವೃದ್ಧಿಯಾಗಿದೆ. ದೇಶದಾದ್ಯಂತ ವಿತರಿಸಲು ರಾಷ್ಟ್ರೀಯ ಕಾಮಧೇನು ಆಯೋಗ ಸೆಗಣಿಯಿಂದ ತಯಾರಿಸಿದ ಗೋಮಯ ಹಣತೆಯನ್ನು ದೀಪಾವಳಿಯಲ್ಲಿ ಉರಿಸುವ ತಯಾರಿಯಲ್ಲಿದೆ . ಮೇಡಿನ್ ಚೀನಾ ವಸ್ತುಗಳನ್ನು ಉಪಯೋಗಿಸದೆ , ಪರಿಸರ ಸ್ನೇಹಿ ದೀಪಾವಳಿ ಆಚರಣೆ ಸಂಕಲ್ಪ ತೊಟ್ಟಿರುವ ಬ್ರಹತ್ ಆಂದೋಲನವು ಇದೆ. ಮಣ್ಣಿನ ಹಣತೆಗೆ ಉತ್ತಮ ಬೇಡಿಕೆ ಕುದುರಿದ್ದು ವ್ಯಾಪಾರಿಗಳು ಕೂಡಾ ಬಿರುಸಿನ ಚಟುವಟಿಕೆಗಳಲ್ಲಿ ತೊಡಗಿದ್ದಾರೆ.
ಗ್ರಾಮೀಣ ಭಾಗದಲ್ಲಿ ದೀಪಾವಳಿ ಸೊಬಗೇ ಬೇರೆ. ಹಳ್ಳಿಗಳಲ್ಲಿ ಮಳೆ ಬೆಳೆ ಚೆನ್ನಾಗಿ ಆಗಲು ಬಲೀಂದ್ರನನ್ನು ಪೂಜಿಸ ಬೇಕೆಂಬ ನಂಬಿಕೆ ಇದೆ.ಕೃಷಿ ಪ್ರಧಾನವಾದ ನಾಡಿನಲ್ಲಿ ಬಲೀಂದ್ರನನ್ನು ಭೂಮಿಯ ಒಡೆಯ ಎನ್ನುವ ನಂಬಿಕೆಯೊಂದಿಗೆ ಪೂಜಿಸುತ್ತಾರೆ. ರಾಜ ಬಲೀಂದ್ರ ತನ್ನ ಸಮೃದ್ಧ ಸಾಮ್ರಾಜ್ಯದ ಸಿರಿ ಸೊಬಗನ್ನು ನೋಡಲು ಬಂದಾಗ . " ಹೊಲಿ ಕೊಟ್ರೊ ಬಲಿ ತಗೋಂಡ್ರೊ ಬಲೀಂದ್ರ ದೇವರು ತಮ್ಮ ರಾಜ್ಯಕ್ಕೆ ತಾವೇ ಬಂದ್ರು ಹೊಲಿಯೆ ಬಾ ಕೂ...ಕೂ...ಕೂ. ಎಂದು ಬಲೀಂದ್ರನನ್ನು ಬಣ್ಣಿಸುತ್ತಾ..ದೀಪಾವಳಿಯ ಮುಖ್ಯ ಆಚರಣೆ ಬಲೀಂದ್ರ ಪೂಜೆ. ಅಂದು ಹಳ್ಳಿಗಳಲ್ಲಿ ಕಾಡು ಹೂ, ಕೈತೋಟಗಳಲ್ಲಿ ಸಿಗುವ ಕೆಲ ಬಗೆಯ ಹೂ ನಿರ್ದಿಷ್ಟವಾದ ಸೊಪ್ಪು ಸಂಗ್ರಹಿಸಿ ತುಂಡರಿಸಿ , ಮನೆಯಲ್ಲಿ ಕುಟ್ಟಿದ ಅವಲಕ್ಕಿ, ಉದ್ದಿನ ಹಿಟ್ಟು ಹಾಗೂ ಅರಶಿನ ಎಲೆಯ ಹಿಟ್ಟುನ್ನು ಬೇಸಾಯ ಮಾಡುವ ಗದ್ದೆಗಳಿಗೆ ಹಾಕಿ ತೆಂಗಿನ ಓಲೆ ಸೂಡಿ ಹಚ್ಚಿ ನೇಣೆ ಕೋಲು ದೀಪಹಚ್ಚಿದ ದೀಪಾಲಂಕಾರದಲ್ಲಿ ಭೂಮಿಗೆ ಇಳಿದು ಬರುತ್ತಾನೆ ಬಲೀಂದ್ರ ಎಂಬ ನಂಬಿಕೆ ಇದೆ. ಮಣ್ಣಿನ ಹಣತೆಯಲ್ಲಿ ಎಣ್ಣೆ ಬತ್ತಿ ಹಾಕಿ ದೇದೀಪ್ಯಮಾನವಾಗಿ ಬೆಳಗಿ ಆಂಧಕಾರವನ್ನು ತೊಲಗಿಸುವ ದೀಪ ಬೆಳಗಿಸಿ ಹಳ್ಳಿಗಳಲ್ಲಿ ಇಂದಿಗೂ ಗೆರಸಿಯಲ್ಲಿ ಧಾನ್ಯವಿರಿಸಿ ಮಣ್ಣು ಹಣತೆ ಹಚ್ಚಿ ದನ ಕರುಗಳಿಗೆ ತೋರಿಸುತ್ತಾರೆ. ಕೃಷಿ ಉಪಕರಣ, ಹೊಲಿರಾಶಿಗೆ ದೀಪತೋರಿಸುವ ಕ್ರಮವಿದ್ದು ಬಲಿ ಚಕ್ರವರ್ತಿಯ ದಾನ, ವೀರಗುಣವನ್ನು ನೆನೆಸುವ ಆಚರಣೆಯ ದಿನವಿದು. ಬೇಸಾಯ ಮಾಡುವ ಗದ್ದೆಗಳಿಗೆ ತೆಂಗಿನ ಓಲೆ ಸೂಡಿ ಹಚ್ಚಿಕೊಂಡು ಹೋಗಿ, ನೆಣೆಕೊಲು ದೀಪಹಚ್ಚಿ,ಕಾಡು ಹೂ, ಅವಲಕ್ಕಿ ,ಉದ್ದಿನ ಹಾಗೂ ಅರಿಶಿಣದ ಎಲೆ ಹಿಟ್ಟುಗಳನ್ನು ಗದ್ದೆಗೆ ಹಾಕಿ ಭೂರಮೆಯ ಪೂಜಿಪ ದಿನವೇ ದೀಪಾವಳಿ.
ದೀಪಾವಳಿ ಆಚರಣೆಯ ಹಿನ್ನೆಲೆ ದೇವೇಂದ್ರನು ನೂರು ಯಾಗ ಮಾಡಿ ಸ್ವರ್ಗ ಲೋಕವನ್ನು ಪಡೆದನು, ನಾನು ನೂರ ಒಂದು ಯಾಗ ಮಾಡಿ ಸ್ವರ್ಗವನ್ನು ವಶ ಪಡಿಸುತ್ತೇನೆ ಎಂದು ಬಲಿ ಚಕ್ರವರ್ತಿಯು ನೂರು ಯಾಗ ಮಾಡಿ ಮುಗಿಸಿ ನೂರ ಒಂದನೇ ಯಾಗ ಮಾಡುವಾಗ ಸ್ವರ್ಗ ತನ್ನ ಕೈ ತಪ್ಪಿ ಬಲಿಯ ವಶವಾಗುತ್ತದೆ ಎಂದು ಭಯ ಪಟ್ಟ ದೇವೇಂದ್ರನು ದೇವತೆಗಳೊಂದಿಗೆ ವೈಕುಂಠಕ್ಕೆ ಹೋಗಿ ವಿಷ್ಣುವಿನಲ್ಲಿ ದೂರು ಕೊಡುತ್ತಾನೆ. ದೇವೇಂದ್ರನ ಮೊರೆ ಆಲಿಸಿದ ವಿಷ್ಣುವು ಬ್ರಾಹ್ಮಣ ಪಟುವಾಗಿ ವಾಮನ ರೂಪದಲ್ಲಿ ಬಲಿಯು ಯಾಗ ಮಾಡುವಲ್ಲಿಗೆ ಬಂದು ಮೂರು ಹೆಜ್ಜೆ ಜಾಗವನ್ನು ಬಲಿಯಲ್ಲಿ ದಾನವಾಗಿ ಕೇಳುತ್ತಾನೆ. “ದಾನ ಕೊಡುತ್ತೇನೆ ಎಂದು ವಾಗ್ದಾನ ನೀಡಿದ ಬಲಿಯು ಮೂರು ಹೆಜ್ಜೆಅಳತೆ ಹೇಳಿದಾಗ, ವಾಮನ ರೂಪದ ವಿಷ್ಣುವು ವಿರಾಟ ರೂಪ ತಳೆದು, ಒಂದು ಹೆಜ್ಜೆ ಆಕಾಶಕ್ಕೆ ಮತ್ತೊಂದು ಹೆಜ್ಜೆ ಭೂಮಿಗೆ ಇಟ್ಟು ಇನ್ನೊಂದು ಹೆಜ್ಜೆ ಎಲ್ಲಿಗೆ ಇಡಲಿ ?ಎಂದು ಬಲಿಯಲ್ಲಿ ಕೇಳಿದಾಗ, ನನ್ನ ತಲೆಯ ಮೇಲೆ ಇಡು ಎನ್ನುತ್ತಾನೆ ಬಲಿ. ವಿಷ್ಣುವು ಬಲಿಯ ತಲೆಯ ಮೇಲೆ ಕಾಲಿಟ್ಟು ಆತನನ್ನು ಪಾತಾಳಕ್ಕೆ ತಳ್ಳುತ್ತಿದ್ದಾಗ, ನನ್ನ ರಾಜ್ಯ ಮತ್ತು ಪ್ರಜಾವರ್ಗವನ್ನು ತೊರೆದು ಪಾತಾಳಕ್ಕೆ ಹೇಗೆ ಹೋಗಲಿ? ಎಂದು ಬಲಿಯು ರೋಧಿಸ ತೊಡಗಿದಾಗ, ವಿಷ್ಣುವು” ನೀನು ಇಂದ್ರ ಲೋಕವನ್ನು ಪಡೆಯುವ ಆಕಾಂಕ್ಷಿಯಾಗಿ ಇದ್ದಿದ್ದಿ. ಇಂದಿನಿಂದ ನೀನು “ಬಲೀಂದ್ರ” ಎಂದು ಕರೆಯಲ್ಪಟ್ಟು ವರ್ಷಕ್ಕೊಮ್ಮೆ ಪಾತಾಳದಿಂದ ಭೂಲೋಕಕ್ಕೆ ಬಂದು ಮೂರು ದಿನವಿದ್ದು ಮರಳಿ ಪಾತಾಳಕ್ಕೆ ಹೋಗು “ಎಂದು ವರ ನೀಡುತ್ತಾನೆ . ಬಲಿಯು ನೀಡಿದ ದಾನದ ಫಲವಾಗಿ ಮತ್ತು ವಿಷ್ಣು ಆತನಿಗೆ ನೀಡಿದ ವಚನದ ಪ್ರತೀಕವಾಗಿ ಭೂಲೋಕದಲ್ಲಿ ಬಲೀಂದ್ರನಿಗೆ ಮೂರು ದಿನ ಪೂಜೆ ಸಲ್ಲುವುದು ಎನ್ನುತ್ತಾರೆ.
ಶ್ರೀ ರಾಮಚಂದ್ರನು ರಾವಣನನ್ನು ಸೋಲಿಸಿ, ಸೀತಾ ಲಕ್ಷ್ಮಣರೊಂದಿಗೆ ಹದಿನಾಲ್ಕು ವರ್ಷಗಳ ವನವಾಸ ಮುಗಿಸಿ ಅಯೋಧ್ಯೆಗೆ ಮರಳಿದ ವಿಜಯೋತ್ಸವದ ಪ್ರತೀಕವಾಗಿ ಪ್ರಜೆಗಳು ಬಂಗಾರದ ಕಲಶವನ್ನು ಮುತ್ತು ರತ್ನಗಳಿಂದ ಅಲಂಕರಿಸಿ ಮನೆ ಬದಿಗಳಲ್ಲಿ ದೀಪವಿಟ್ಟು ದೀಪೋತ್ಸವ ಆಚರಿಸುವರು ಎನ್ನುವ ವಿಚಾರವೂ ಇದೆ .
ನರಕ ಚತುದರ್ಶಿಯ ಹಿಂದಿನ ದಿನ ರಾತ್ರೆ ಹರಿ ಹಂಡೆ ಶುದ್ದಮಾಡಿ ತೊಳೆದು ಹಂಡೆಯ ಮೇಲೆ ಚಿತ್ತಾರ ಬಿಡಿಸಿ ಹೂವಿನ ಹಾಗೂ ಸೋರೆ ಅಥವಾ ಕುಂಬಳ ಬಳಿ ಕಟ್ಟಿ ಸಿಂಗರಿಸಿ ಶ್ರೀ ಕೃಷ್ಣನು ನರಕಾಸುರನನ್ನು ಸಂಹರಿಸಿದ ದಿನ ಎಂದು ಮೈಗೆ ಎಣ್ಣೆ ಹಚ್ಚಿ ಕೊಂಡು ಸ್ನಾನ ಮಾಡಿ ಪುನೀತರಾಗುವುದು ನರಕ ಚತುರ್ದಶಿಯಂದು ಉತ್ಸಾಹದಾಯಕ ಆಚರಣೆ.
ದೀಪಾವಳಿಯ ಅಮಾವಾಸ್ಯೆಯಂದು ಲಕ್ಷ್ಮಿ ಪೂಜೆಗಾಗಿ ಮನೆಯನ್ನು ಒಪ್ಪ ಓರಣವಾಗಿ ಸಿಂಗರಿಸಲಾಗುತ್ತದೆ. ವ್ಯಾಪಾರಸ್ಥರಿಗೆ ಅಂಗಡಿಗಳಲ್ಲಿ ಸಂಭ್ರಮದ ಲಕ್ಷ್ಮಿ ಪೂಜೆ. ಬಲಿಯ ತ್ಯಾಗವನ್ನು ನೆನೆಯುವುದೇ ಈ ದಿನದ ವಿಶೇಷತೆ.
ಮರುದಿನ ಗೋವುಗಳಿಗೆ ಅಗ್ರಪೂಜೆ.ತುಳಸಿ ಪೂಜೆಗೂ ಮಹತ್ವವಿದ್ದು ಒಟ್ಟಾರೆ ಧನತ್ರಯೋದಶಿ, ನರಕ ಚತುರ್ದಶಿ, ಲಕ್ಷ್ಮಿ ಪೂಜೆ, ಗೋಪೂಜೆ, ಬಾವುಬೀಜ್ ಹೀಗೆ ಬಗೆ ಬಗೆಯಲ್ಲಿ ಎಲ್ಲೆಡೆ ಸಂಭ್ರಮದಿಂದ ಹಬ್ಬ ಆಚರಿಸಲಾಗುತ್ತದೆ.
ದೀಪಾವಳಿ ಎಂದರೆ ಪಟಾಕಿ ಇದ್ದೇ ಇರುತ್ತದೆ. ಸರ್ವೋಚ್ಚ ನ್ಯಾಯಾಲಯ ನೀಡಿರುವ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ. ಸುಪ್ರೀಂ ಕೋರ್ಟ್ ಅನುಮತಿಸಿದ ಹಸಿರು ಪಟಾಕಿಗಹನ್ನು ಬಿಟ್ಟುಉಳಿದ ಯಾವುದೇ ಪಟಾಕಿಗಳನ್ನು ಮಾರಾಟ ಮಡುವುದು ಹಾಗೂ ಹಚ್ಚುವುದು ನಿಷೇಧಿಸಲಾಗಿದೆ. ವಾಯು ಮಾಲಿನ್ಯ ಮತ್ತು ಶಬ್ಧ ಮಾಲಿನ್ಯದ ಕಡಿಮೆಗೊಳಿಸಲು ಪಟಾಕಿ ರಹಿತ ದೀಪಾವಳಿ ಆಚರಣೆಗೆ ಜನರನ್ನು ವಿನಂತಿಸಲಾಗಿದೆ. ಪಟಾಕಿಯಿಂದ ಹೊರ ಹೊಮ್ಮುವ ಹೊಗೆಯು ಜನರ ಶ್ವಾಸಕೋಶದ ಮೇಲೆ ಮಾರಕ ಪರಿಣಾಮ ಬೀರುವ ಹಿನ್ನೆಲೆಯಲ್ಲಿ ಹೆಚ್ಚಿನ ರಾಜ್ಯದಲ್ಲಿ ದೀಪಾವಳಿ ಹಬ್ಬಕ್ಕೆ ಪಟಾಕಿ ಮಾರಾಟ ಮತ್ತು ಸಿಡಿಸುವುದನ್ನು ನಿಷೇಧಿಸಲಾಗಿದೆ.
ದೊಡ್ಡ ಹಬ್ಬವೆಂದೇ ಕರೆಯುವ ದೀಪಾವಳಿ ಪರಿಸರ ಸ್ನೇಹಿ ಹಬ್ಬವಾಗಿ ನಮ್ಮ ಸಂಪ್ರದಾಯದ ಸಂಸ್ಕೃತಿಯ ಪ್ರತೀಕವಾಗಿ ದೀಪದ ಪವಿತ್ರ ಶಕ್ತಿ ಎಲ್ಲಡೆ ಪಸರಿಸಲಿ .
ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು.
ಲತಾ ಸಂತೋಷ್ ಶೆಟ್ಟಿ ಮುದ್ದುಮನೆ