23.5 C
Karnataka
April 4, 2025
ಧಾರಾವಾಹಿ

ವಿವಶ….

ವಿವಶ…. ಈ ಧಾರಾವಾಹಿಯ ಈ ಹಿಂದಿನ ಸಂಚಿಕೆಗಳ ಲಿಂಕ್ ಕೆಳಗೆ ಇದೆ…

💢 ಧಾರಾವಾಹಿ ಭಾಗ – 1

https://mumbainewskannada.blogspot.com/2023/10/aaaaar-aa-aavaau-aanvaua-eegaqaa.html

💢 ಧಾರಾವಾಹಿ ಭಾಗ – 2

https://mumbainewskannada.blogspot.com/2023/10/blog-post_181.html

💢 ಧಾರಾವಾಹಿ ಭಾಗ – 3

http://mumbainewskannada.blogspot.com/2023/10/blog-post_425.html

ಧಾರವಾಹಿ ಭಾಗ – 4

https://mumbainewskannada.blogspot.com/2023/10/blog-post_636.html

ಧಾರವಾಹಿ ಭಾಗ – 5

https://mumbainewskannada.blogspot.com/2023/11/blog-post.html https://mumbainewskannada.com/wp-admin/post.php?post=1460&action=edit

ಧಾರವಾಹಿ ಭಾಗ – 6

https://mumbainewskannada.com/2023/11/17/vivasha/

ರಾತ್ರಿಯ ರಂಗಪೂಜೆಯ ಸಿದ್ಧತೆ ವೈಭವದಿಂದ ಜರುಗಿತು. ದೇವಸ್ಥಾನದ ಹೊಸ ಅರ್ಚಕ ಸುಧಾಮ ಭಟ್ಟರು ಅಮ್ಮನವರ ಮೂರ್ತಿಯನ್ನು ತಲೆಯ ಮೇಲೆ ಹೊತ್ತುಕೊಂಡು ಕಲಾತ್ಮಕವಾಗಿ ಕುಣಿಯುತ್ತ ಗರ್ಭಗುಡಿಗೆ ಮೂರು ಪ್ರದಕ್ಷಿಣೆ ಬಂದ ನಂತರ ಮೂರ್ತಿಯನ್ನು ರಥದಲ್ಲಿ ಕುಳ್ಳಿರಿಸಿ ದೇವಸ್ಥಾನಕ್ಕೆ ಪ್ರದಕ್ಷಿಣೆ ಬರುವ ‘ಬಲಿ’ ಸೇವಾಕ್ರಮವೂ ಜರುಗಿತು. ನಡುರಾತ್ರಿ ಹನ್ನೆರಡರ ಸುಮಾರಿಗೆ ದೇವಿಯ ದರ್ಶನ ಸೇವೆಗೆ ನಿಲ್ಲುವ ಪಾತ್ರಿ ಪೂವಪ್ಪ ಪೂಜಾರಿ ಆಗಮಿಸಿದ. ಸರಾಸರಿ ಆರು ಅಡಿ ಎತ್ತರದ ಆಜಾನುಬಾಹುವಾದ ಅವನು ನೆರೆದ ಭಕ್ತಾದಿಗಳತ್ತ ಒಮ್ಮೆ ಗಂಭೀರ ದೃಷ್ಟಿ ಬೀರಿದ. ಊರ ಮುಖಂಡರಿಗೂ ಮತ್ತು ಗುರಿಕಾರನಿಗೂ ಶಿರಬಾಗಿ ವಂದಿಸಿದ. ನಂತರ ಹಿರಿಯರ ಸಮಕ್ಷಮದಲ್ಲಿ ಎಣ್ಣೆ ಸ್ವೀಕರಿಸುವ ಕ್ರಮವನ್ನು ನಡೆಸಿದ. ಗುಡಿಯ ಹೊರಗಿನ ವಿಶಾಲವಾದ ಬಾವಿಕಟ್ಟೆಯಲ್ಲಿ ನಾಲ್ಕೈದು ಕೊಡಪಾನ ನೀರು ಸೇದಿ ತಲೆಗೆ ಹೊಯ್ದುಕೊಂಡು ಮೈ ತಿಕ್ಕಿ ಸ್ನಾನ ಮಾಡಿದ. ತನ್ನ ಬೆಳ್ಳಿಯ ಬಣ್ಣದ ನೀಳ ಗುಂಗುರು ಕೂದಲನ್ನು ಒರೆಸಿ ಬೆನ್ನ ಮೇಲೆ ಹಗುರವಾಗಿ ಹರಡಿಕೊಂಡ. ತಲೆಗೆ ಕೆಂಪು ಮುಂಡಾಸನ್ನು ಏರಿಸಿದ. ದರ್ಶನದ ವೇಷಭೂಷಣಗಳನ್ನು ಒಂದೊoದಾಗಿ ತೊಟ್ಟು, ಕೈಗಳಿಗೆ ಬಂಗಾರದ ಕಡಗಗಳನ್ನು ಧರಿಸಿದ.

ದೇವಸ್ಥಾನದ ಪ್ರಮುಖರಾದ ಅನಂತ್ರಾಯ ಭಟ್ಟರು ನೀಡಿದ ದೇವಿಯ ಸರಗಳನ್ನು ಕೊರಳಲ್ಲಿ ಧರಿಸಿಕೊಂಡ. ಕಡ್ಸಲೆ ಹಿಡಿದು ಝಳಪಿಸುತ್ತ ದೇವಸ್ಥಾನದ ಹೊರಾಂಗಣದಲ್ಲಿ ಅಮ್ಮನವರಿಗೆ ಎದುರಾಗಿ ಕಾಲಿಗೆ ಕಾಲು ಜೋಡಿಸಿ ನಿಂತುಕೊoಡು ಆವೇಶಭರಿತನಾಗಿ ದೊಡ್ಡ ಕಣ್ಣುಗಳಿಂದ ದೇವಿಯನ್ನು ದಿಟ್ಟಿಸುತ್ತ ಕ್ಷಣಹೊತ್ತು ಧ್ಯಾನಸ್ಥನಾದ. ಪಾತ್ರಿಯು ಆವೇಶಭರಿತನಾಗುವ ಸೂಚನೆಯಾಗಿ ಅವನು ನೀಡಿ ನಿಂತ ಕೈಗಳಿಗೆ ಮೊಕ್ತೇಸರರು ಹಿಂಗಾರ ಮತ್ತು ನೀರನ್ನು ಭಕ್ತಿಯಿಂದ ಸುರಿದರು. ಮರುಕ್ಷಣ ಕೊರಗ ತನಿಯನ ತಂಡದ ಡೋಲು, ಕೊಳಲು ಮತ್ತು ಶಿವಾನಂದನ ತಂಡದ ವಾದ್ಯ, ಕೊಂಬು ಕಹಳೆಗಳೊಂದಿಗೆ ಬೆರೆತ ವಾದ್ಯಘೋಷಗಳು ಏಕಕಾಲದಲ್ಲಿ ಅಬ್ಬರದಿಂದ ಮೊಳಗಿದವು. ದೇವಿಯು ತನ್ನೊಳಗೆ ಆವಾಹಿಸಿದ ಸೂಚನೆಯಾಗಿ ಪಾತ್ರಿಯು, ‘ಓಹೋ…ಹ್ಞೂಂ…!’ಎoದು ಹ್ಞೂಂಕರಿಸಿ, ಜಿಗಿಜಿಗಿದು ನಡುಗತೊಡಗಿದ. ಸುತ್ತಲೂ ನೆರೆದು ನಿಂತಿದ್ದ ಜನಸಮೂಹವು ಭಯಭಕ್ತಿಯಿಂದ ರೋಮಾಂಚನಗೊoಡಿತು.
ಅಂದು ಗಂಗರಬೀಡಿನ ಮನೆಮನೆಗಳಲ್ಲೂ ನಡುರಾತ್ರಿಯವರೆಗೆ ಕೋಳಿಗಳೆಲ್ಲ ನಿದ್ದೆಗೆಟ್ಟ ಅಸಹನೆಯಿಂದಲೋ ಅಥವಾ ಅರ್ಥವಾಗದ ಭಯದಿಂದಲೋ ಕ್ವಾಕ್ ಕ್ವಾಕ್, ಕ್ಞಾಂರಾoವ್…ಎoದು ಎಡೆಬಿಡದೆ ಅರಚುತ್ತಲೇ ಇದ್ದವು. ವಿವಿಧ ಬಣ್ಣದ ನೂರಾರು ಹುಂಜಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಿಯಮ್ಮನಿಗೆ ಬಲಿಯಾಗಲು ಆಯ್ಕೆಗೊಂಡಿದ್ದವು. ಆದರೆ ತಮ್ಮ ಭೂಮಿಯ ಋಣ ಇಂದಿಗೆ ತೀರಲಿದೆ ಎಂದು ತಿಳಿಯದ ಆ ಅಮಾಯಕ ಕುಕ್ಕುಟಗಳು ತಮ್ಮನ್ನು ಗೂಟಕ್ಕೆ ಕಟ್ಟಿದಲ್ಲಿಂದಲೇ ಸುತ್ತಲಿನ ನೆಲವನ್ನು ಕೆದಕೆದಕಿ, ‘ಕೊಕ್ಕೊ ಕೋ…ಕೋ…!’ ಎಂದು ಕೊರಳೆತ್ತರಿಸಿ, ಗಂಟಲುಬ್ಬಿಸಿ ಇತರ ಹುಂಜಗಳ ಅಹಂ ಅನ್ನು ಕೆಣಕುವಂತೆ ಕೂಗುತ್ತಿದ್ದುವು. ಇನ್ನು ಕೆಲವು ಕೊಬ್ಬಿದ ಹುಂಜಗಳು, ಇತರ ಹುಂಜಗಳ ಕೂಗುವಿಕೆಗೆ ಕೆರಳಿ ತಾವೂ ಅದೇ ಅಬ್ಬರದಿಂದ ಅರಚಿ ತಮ್ಮ ಗಂಡಸುತನವನ್ನೂ ಪ್ರದರ್ಶಿಸುತ್ತ ಕಾಲು ಕೆರೆದು ಕೊರಳಿನ ಗರಿಗಳನ್ನು ಸೇವಂತಿಗೆ ಎಸಳಿನಂತೆ ದುಂಡಗೆ ಅರಳಿಸಿಕೊಂಡು ಕದನಕ್ಕೆ ಕರೆಯುತ್ತಿದ್ದ ದೃಶ್ಯವನ್ನು ನೋಡುತ್ತಿದ್ದರೆ ಪಕ್ಕನೆ ಹೊತ್ತು ಮೂಡಿತೇನೋ ಎಂದೆನಿಸುವoತಿತ್ತು. ಅತ್ತ ಅಲ್ಲಲ್ಲಿ ಆಡು, ಹೋತ ಮತ್ತು ಕುರಿಗಳ, ‘ಮ್ಞೇಃ…ಮ್ಞೇಃ…ಮ್ಞೇಃ….!’ ಎಂಬ ಕೆನೆತ, ಚೀತ್ಕಾರಗಳು ಕೇಳಿಸುತ್ತಿದ್ದುವು. ಅವುಗಳ ಅರಚುವಿಕೆಯಲ್ಲಿ ಹೊಮ್ಮುತ್ತಿದ್ದ ಭೀತಿಯನ್ನು ಗಮನಿಸಿದರೆ ರಕ್ತದಾಹಗೊಂಡ ಮಹಾಮಾರಿಯು ಇಡೀ ಊರನ್ನೇ ಆಪೋಷನಗೈಯ್ಯುವ ಆತುರದಲ್ಲಿದ್ದಂತೆ ಭಾಸವಾಗುತ್ತಿತ್ತು.

ದೇವಸ್ಥಾನದೆದುರು ಅಮ್ಮನವರ ದರುಶನ ಸೇವೆಯು ಸುಮಾರು ಹೊತ್ತು ಜರುಗಿತು. ಊರ ಮುಖಂಡರು ತಮ್ಮೂರ ಸಮಸ್ಯೆ ಮತ್ತು ಏಳಿಗೆಯ ಕುರಿತು ದೇವಿಯೊಡನೆ ‘ಪ್ರಶ್ನೆ ಇಡುವ’ ಸಂಪ್ರದಾಯ ಆರಂಭವಾಯಿತು. ‘ಈಗೀಗ ಊರು ತುಂಬಾ ರೋಗರುಜಿನಗಳೂ ಅನ್ಯಾಯ, ಅಕ್ರಮಗಳೂ ಹೆಚ್ಚುತ್ತಿವೆಯಮ್ಮಾ. ಬಹಳಷ್ಟು ಬಡ ಜನರು ಕುಡಿತ ಮತ್ತು ದುಶ್ಚಟಗಳಿಗೆ ದಾಸರಾಗಿ ದಾರಿ ತಪ್ಪುತ್ತಿದ್ದಾರೆ. ಇದನ್ನೆಲ್ಲ ನೋಡುತ್ತಿರುವ ನಮಗೆ ಈ ನಾಡಿನ ನಾಳೆಯ ಭವಿಷ್ಯ ಬಗ್ಗೆ ಬಹಳ ಚಿಂತೆಯಾಗಿಬಿಟ್ಟಿದೆ. ನಮ್ಮೂರನ್ನು ಆವರಿಸಿಕೊಂಡಿರುವ ದೋಷ ಮತ್ತು ಪಿಡುಗುಗಳನ್ನು ನೀನೇ ನಿವಾರಿಸಿ ನಿನ್ನ ಮಕ್ಕಳನ್ನು ರಕ್ಷಿಸಬೇಕು ತಾಯೇ…!’ ಎಂದು ಅನಂತ್ರಾಯ ಭಟ್ಟರು ದುಗುಡದಿಂದ ಬೇಡಿಕೊಂಡರು. ಅವರ ಮಾತುಗಳನ್ನು ಆಸ್ಥೆಯಿಂದ ಆಲಿಸಿದ ಮಾರಿಕಾಂಬೆಯು ಒಮ್ಮೆಲೆ ಉಸಿರು ಬಿಗಿಹಿಡಿದು ಜೋರಾಗಿ ಹ್ಞೂಂಕರಿಸಿದವಳು, ‘ಹೌದು, ಹೌದು. ಕಾಣುತ್ತಿದ್ದೇನೆ. ನನ್ನ ಗ್ರಾಮವಿದು. ಎಲ್ಲವೂ ತಿಳಿದಿದೆ ನನಗೆ! ಆದರೆ ಇತ್ತೀಚೆಗೆ ನನ್ನನ್ನೇ ಮೀರಿದ ದುಷ್ಟ ಶಕ್ತಿಯೊಂದು ಊರನ್ನು ಪ್ರವೇಶಿಸಿದೆ!’ ಎಂದು ಹೇಳಿ ರಪ್ಪನೆ ದಿಗಂತದೆಡೆಗೆ ದೃಷ್ಟಿ ನೆಟ್ಟವಳು, ‘ಹ್ಞೂಂ…! ಆದರೆ ಯಾರೂ ಹೆದರುವ ಅಗತ್ಯವಿಲ್ಲ. ಅದನ್ನು ಶೀಘ್ರವೇ ಸಡೆಬಡಿದು ನಿಮ್ಮನ್ನು ಕಾಪಾಡುತ್ತೇನೆ….!’ ಎಂದು ಅಭಯ ನೀಡಿದಳು. ಬಳಿಕ ಒಂದು ಮುಷ್ಟಿ ಹಿಂಗಾರವನ್ನು ಮುರಿದು ಅನಂತ್ರಾಯ ಭಟ್ಟರ ಅಂಗೈಗೆಸೆದಳು. ಭಟ್ಟರು ಸಾವಕಾಶವಾಗಿ ಪ್ರಸಾದವನ್ನೆಣಿಸಿದರು. ಅದು ಬೆಸ ಸಂಖ್ಯೆಯಲ್ಲಿತ್ತು. ಆದ್ದರಿಂದ ಭಕ್ತಾದಿಗಳನ್ನುದ್ದೇಶಿಸಿ, ‘ಪ್ರಸಾದ ಮುಗುಳಿ(ಬೆಸ ಸಂಖ್ಯೆ) ಬಂದಿದೆ!’ ಎಂದು ಗಟ್ಟಿಯಾಗಿ ಅಂದರು. ಮರುಕ್ಷಣ ಎಲ್ಲರೂ ಸಮಾಧಾನಗೊಂಡರು.

ಮುಂದಿನ ಗಳಿಗೆಯಲ್ಲಿ ಮಾರಿಯಮ್ಮ ಆವೇಶಭರಿತಳಾಗಿ ಕುಣಿಯುತ್ತ ಊರ ಗಡಿಯತ್ತ ದಾಪುಗಾಲಿಕ್ಕಿದಳು. ನೂರಾರು ಮಂದಿ ಹಿರಿಯರು, ಮಧ್ಯವಯಸ್ಕರು, ತರುಣರು ಮತ್ತು ಹುಡುಗರು ಗೋಣಿ ಹಗ್ಗ, ಬಾಳೆ ಹಗ್ಗಗಳಿಂದ ಕಾಲು ಕಟ್ಟಿದ ತಂತಮ್ಮ ಕೋಳಿಗಳನ್ನು ಕಂಕುಳಗಳಲ್ಲಿ ಒತ್ತಿ ಹಿಡಿದುಕೊಂಡಿದ್ದರೆ, ಇನ್ನು ಹಲವರು ಅವನ್ನು ತಲೆ ಕೆಳಗಾಗಿ ನೇತಾಡಿಸಿಕೊಂಡು ಮಾರಿಯಮ್ಮನನ್ನು ಹಿಂಬಾಲಿಸುತ್ತ, ‘ಹ್ಹೋ… ಹ್ಹೋ… ಹ್ಹೋ… ಕ್ಞೋಂ… ಕ್ಞೋಂ… ಕ್ಞೋಂ…!’ ಎಂದು ಉನ್ಮಾದದಿಂದ ಹೂಳಿಡುತ್ತ ಸಾಗಿದರು. ಪ್ರಾಣಿಬಲಿಯ ಹರಕೆ ಹೊತ್ತವರು ತಂತಮ್ಮ ಆಡು, ಹೋತಗಳ ಕೊರಳಿಗೆ ಕೆಂಪು ಹಳದಿ ಬಣ್ಣದ ಹೂವಿನ ಹಾರವನ್ನು ತೊಡಿಸಿ ಹಣೆಗೆ ಕುಂಕುಮವಿಟ್ಟು ಸಿಂಗರಿಸಿದ್ದರು. ಆದರೆ ವಿಪರೀತ ಕಳವಳಗೊಂಡು ಮುಂದಡಿಯಿಡಲು ಕೇಳದಿದ್ದ ಅವುಗಳನ್ನು ಧರಧರನೇ ಎಳೆದೊಯ್ಯುತ್ತಿದ್ದರು. ಆ ಮೂಕ ಪ್ರಾಣಿಗಳು ತೀವ್ರ ಭಯದಿಂದಲೋ ಅಥವಾ ಇನ್ನೇನು ಸ್ವಲ್ಪ ಹೊತ್ತಿನಲ್ಲೇ ತಮ್ಮ ಪ್ರಾಣಪಕ್ಷಿ ಹಾರಿ ಹೋಗಲಿದೆ ಎಂಬ ಸೂಕ್ಷ್ಮ ಅರಿವಿನಿಂದಲೋ, ‘ಮ್ಹೇ…ಮ್ಹೇ…ಮ್ಹೇ…!’ ಎಂದು ದೈನ್ಯದಿಂದ ಅರಚುತ್ತ, ಉನ್ಮತ್ತ ಜನರ ಮೇರೆ ಮೀರಿದ ಕೂಗು, ಗದ್ದಲಗಳ ನಡುವೆ ಕಂಪಿಸುತ್ತ ಸಾಗುತ್ತಿದ್ದ ದೃಶ್ಯವು ಆ ರಾತ್ರಿ ನಡೆಯಲಿದ್ದ ಭೀಕರತೆಯನ್ನು ಬಿಂಬಿಸುತ್ತಿತ್ತು. ಜನವಸತಿಗಳಲ್ಲಿದ್ದ ಮಾರ್ಗದುದ್ದಕ್ಕೂ ಭಕ್ತಾದಿಗಳು ತಂತಮ್ಮ ಮನೆಯಂಗಳದಲ್ಲಿ ದೀಪಗಳನ್ನು ಹಚ್ಚಿಟ್ಟು ವಿಧ್ಯುಕ್ತವಾಗಿ ದೇವಿಯನ್ನು ಪೂಜಿಸಲು ಕಾದು ನಿಂತಿದ್ದರು. ಮಾರಿಯ ಸವಾರಿಯು ತಮ್ಮತ್ತ ಬರುತ್ತಲೇ ಎಲ್ಲರೂ ತಟಪಟನೇ ಚುರುಕಾಗಿ ಸೀಯಾಳವನ್ನು ಕೆತ್ತಿ ನಮ್ರವಾಗಿ ನೀಡುತ್ತ ಅವಳ ಬಾಯಾರಿಕೆಯನ್ನು ತಣಿಸಿ, ಹಣ್ಣು ಕಾಯಿ ಸಮರ್ಪಿಸಿ ಕೈಮುಗಿದು ಭಕ್ತಿಯನ್ನು ತೋರುತ್ತಿದ್ದರು.
ಇತ್ತ ಶ್ರೀಧರಶೆಟ್ಟರು ತಮ್ಮ ಶ್ರೀಮಂತಿಕೆಯ ವೃದ್ಧಿಗೂ ಮತ್ತು ಕುಟುಂಬದ ಆಯುರಾರೋಗ್ಯ ಸಂಪನ್ನತೆಗೂ ಈ ವರ್ಷದ ಮಾರಿಪೂಜೆಗೆ ಆಡು ಬಲಿ ನೀಡುವ ಗುರುತರದ ಹರಕೆಯನ್ನು ಹೊತ್ತಿದ್ದರು. ಆದ್ದರಿಂದ ಅವರ ಕಂದುಬಣ್ಣದ ಬಲಿಷ್ಠ ಹೋತವನ್ನು ತೋಮನು ಹಿಡಿದುಕೊಂಡು ನಡೆಯುತ್ತಿದ್ದ. ಶೆಟ್ಟರ ತೋಟದ ಹಿಂದಿನ ಪಾರ್ಶ್ವದ ಶೆಡ್ಡು ನಿವಾಸಿ ನಲವತ್ತೈದರ ಹರೆಯದ ಕುಳ್ಳಗಿನ ಸುಬ್ರಾಯನಾಯ್ಕನು ಕುಡಿದು ಡಿಂಗಾಗಿ ತೋಮನೊಟ್ಟಿಗೆ ನಡೆಯುತ್ತ ಹೋತವನ್ನು ತಿವಿತಿವಿದು ಮುಂದೆ ತಳ್ಳುತ್ತ ಸಾಗುತ್ತಿದ್ದ. ಆದರೂ ಆ ಪ್ರಾಣಿಯು ತೋಮನ ಗಾಂಭೀರ್ಯವು ತನಗೂ ಸೋಕಿರುವಂತೆ ಶಾಂತವಾಗಿ ನಡೆಯುತ್ತಿತ್ತು. ಆ ಹೋತವನ್ನು ಕೊಂಡು ತಂದ ದಿನದಿಂದ ಇಂದಿನವರೆಗೂ ತೋಮನೇ ಆಸ್ಥೆಯಿಂದ ಸಾಕುತ್ತ ಮತ್ತಷ್ಟು ಕೊಬ್ಬಿಸಿದ್ದ. ಆದ್ದರಿಂದ ಅದು ಒಡೆಯನ ಮೇಲಿನ ಪ್ರೀತಿ ಮತ್ತು ಭದ್ರವಿಶ್ವಾಸದಿಂದ ಹೆಜ್ಜೆ ಹಾಕುತ್ತಿತ್ತು. ಅಂದು ಒಟ್ಟು ಆರು ಪ್ರಾಣಿಗಳು ದೇವಿಗೆ ಆಹುತಿಯಾಗಲು ಗುಂಪಿನೊಡನೆ ಎಳೆದೊಯ್ಯಲ್ಪಡುತ್ತಿದ್ದುವು. ಅವುಗಳಲ್ಲಿ ಸುಮಾರಾದ ಎರಡು ಆಡುಗಳು ಸೂಜಿಬೆಟ್ಟಿನ ಅನೀಫ್ ಸಾಹೇಬರಿಂದ ಖರೀದಿಸಿವು. ಮತ್ತೆರಡು ಸಣಕಲು ಕುರಿಗಳು ಶಿವಕಂಡಿಕೆಯ ಕೋಳಿ ಸಾಹೇಬರಿಂದ ಹಿಂದಿನ ದಿನವೇ ಕೊಂಡಿದ್ದವು. ಹಾಗಾಗಿ ಅವು ಮುನ್ನಡೆಯಲು ಹಿಂದೇಟು ಹಾಕುತ್ತ, ವಿಕಾರವಾಗಿ ಅರಚುತ್ತ ದರದರನೇ ಎಳೆಯಲ್ಪಡುತ್ತಿದ್ದುವು.
ದೇವಸ್ಥಾನದಿಂದ ಸುಮಾರು ನಾಲ್ಕು ಮೈಲು ದೂರದ ಮಣ್ಣಿನ ರಸ್ತೆಯಿಂದ ಸಾಗಿದ ಮಾರಿಯ ಮೆರವಣಿಗೆಯು, ಕಾವೇರ್‌ಕಾಡಿನತ್ತ ಸಾಗಿ ಗ್ರಾಮಾಂತ್ಯದ ಮೂರು ದಾರಿಗಳು ಕೂಡುವ ಒಂದೆಡೆ ದೈತ್ಯ ಗೋಳಿಮರವೊಂದರ ಬುಡದಲ್ಲಿ ನಿರ್ಮಿಸಲಾಗಿದ್ದ ಮಾರಿ ‘ಗಡು’ವಿನ ಮುಂದೆ ಬಂದು ಸೇರಿತು. ದೈವದ ಚಾಕರಿಯವರು ತಮ್ಮ ಕಾಯಕವನ್ನು ಆರಂಭಿಸುವ ಮುನ್ನ ಭಕ್ತಿಯಿಂದ ದೇವಿಗೆ ಕೈಮುಗಿದು ಪ್ರಾರ್ಥನೆ ಸಲ್ಲಿಸಿದರು. ಶುದ್ಧದ ಸೂಚಕವಾಗಿ ನೆಲಕ್ಕೆ ನೀರು ಚಿಮುಕಿಸಿ, ನೇಯ್ದ ಎರಡು ಹಸಿ ಮಡಲನ್ನು ಹಾಸಿದರು. ಅವುಗಳ ಮೇಲೆ ಇಡಿ ಬಾಳೆ ಎಲೆಗಳನ್ನು ನೀಳವಾಗಿ ಇರಿಸಿದರು. ಹಬೆಯಾಡುತ್ತಿದ್ದ ಒಂದು ಬುಟ್ಟಿ ಕುಚ್ಚಲಕ್ಕಿ ಅನ್ನವನ್ನು ಎಲೆಗಳ ಮೇಲೆ ಸುರಿದು ‘ಚೆರು’ ಬಡಿಸಿದರು. ಕೋಲು ನಿಣೆಯನ್ನು (ತೆಂಗಿನ ಕೊತ್ತಳಿಗೆ ಅಥವಾ ಅದರ ಹೂವಿನ ಕವಚವನ್ನು ಸಪೂರ ಸೀಳಿ, ಒಂದು ತುದಿಗೆ ಹತ್ತಿಯ ಬಟ್ಟೆಯನ್ನು ಸುತ್ತಿ, ಅದನ್ನು ಎಣ್ಣೆಯಲ್ಲದ್ದಿ ಹೊತ್ತಿಸಿ ದೀಪದಂತೆ ಬೆಳಗಿಸುವುದು) ಹೊತ್ತಿಸಿಟ್ಟರು. ದುಂಡಗೆ, ಬಟ್ಟಲಿನಂತೆ ಹೆಣೆದಿದ್ದ ಕಂಗಿನ ಹಾಳೆಯಲ್ಲಿ ಅರಸಿನ ಮತ್ತು ಕುಂಕುಮ ಬೆರೆಸಿದ ಓಕುಳಿ ನೀರನ್ನಿಟ್ಟರು. ಸೀಯಾಳವನ್ನು ಕುಕ್ಕಿ ಚೆರುವಿನ ಸುತ್ತಲೂ ಸಿಂಪಡಿಸಿ, ಶುದ್ಧ ಕ್ರಮ ಮಾಡಿ ಮತ್ತೆ ಪ್ರಾರ್ಥಿಸಿಕೊಂಡರು. ಅಷ್ಟರಲ್ಲಿ ಮಾರಿಯಮ್ಮ ಮತ್ತೊಮ್ಮೆ ಆವೇಶಭರಿತಳಾದಳು. ಅದನ್ನು ಅರ್ಥೈಸಿಕೊಂಡ ಊರ ಗುರಿಕಾರನು ದೇವಿಗೆ ಕೈಮುಗಿದು, ದೇವಸ್ಥಾನದ ತೀರ್ಥವನ್ನು ಪಾತ್ರಿಯ ಮೇಲೆ ಸಿಂಪಡಿಸಿದ. ತೀರ್ಥವು ತನ್ನ ಮೇಲೆ ಬಿದ್ದ ಕೂಡಲೇ ಮಾರಿಯಮ್ಮ ಶಾಂತಳಾಗಿ ಭಕ್ತರ ಪೂಜಾವಿಧಿಗಳನ್ನು ಸ್ವೀಕರಿಸತೊಡಗಿದಳು. ಬಳಿಕ ಮಾರಿಯ ಗಣಗಳಿಗೆ ರಕ್ತಹಾರ ಕೊಡುವ ಕ್ರಮವು ಆರಂಭವಾಯಿತು. ಬಲಿ ಪ್ರಾಣಿಗಳನ್ನು ಕಂಡ ಮಾರಿಯು ಮತ್ತೊಮ್ಮೆ ಹ್ಞೂಂಕರಿಸಿ ಸಂತೋಷದಿoದ ಕುಣಿಯುತ್ತ ಹಿಂಗಾರ ಮತ್ತು ತೀರ್ಥವನ್ನು ಅವುಗಳ ಮೇಲೆಸೆದಳು.

ಇತ್ತ ಮಡಿವಾಳ ಯುವಕರಿಬ್ಬರು ಕೋಳಿ ಕುಯ್ಯುವ ಸೂಚನೆಯಾಗಿ ಮಸೆದಿಟ್ಟ ತಂತಮ್ಮ ಕತ್ತಿಗಳನ್ನು ಹಿಡಿದುಕೊಂಡು ಅಣಿಯಾದರು. ಅವರು ಪ್ರತೀ ವರ್ಷವೂ ಅಭ್ಯಾಸಬಲದಂತೆ ಕೋಳಿಗಳ ಇಡೀ ಕೊರಳನ್ನು ಆದಷ್ಟು ಎಳೆದೆಳೆದು ಕತ್ತರಿಸಿ ತಮ್ಮ ಚೀಲಗಳನ್ನು ತುಂಬಿಸಿಕೊಳ್ಳುತ್ತಿದ್ದವರು ಇಂದು ಕೂಡಾ ಒಂದಿಷ್ಟು ಕೋಳಿಗಳ ಭುಜದವರೆಗಿನ ಮಾಂಸವನ್ನು ಎಳೆದು ಕೊಯ್ದು ತಮ್ಮದಾಗಿಸಿಕೊಳ್ಳಬೇಕೆಂಬ ಯೋಚನೆಯಲ್ಲಿದ್ದರು. ಆದರೆ ಅವರ ಚಾಲಾಕಿತನವನ್ನು ಕೆಲವು ವರ್ಷಗಳಿಂದಲೂ ಕಾಣುತ್ತ ಬಂದಿದ್ದ ಊರ ಕೆಲವು ಚಾಣಾಕ್ಷ ಯುವಕರು ಈ ವರ್ಷವೂ ಅವರ ಕೈಗಳಿಗೆ ತಮ್ಮ ಕೋಳಿಗಳ ತಲೆಗಳನ್ನೇನೋ ಕೊಟ್ಟರು. ಆದರೆ ಅವರ ಕತ್ತಿಯು ಕೋಳಿಯ ಕೊರಳನ್ನು ಸೋಕಿದ ತಕ್ಷಣ ಸರಕ್ಕನೆ ತಮ್ಮತ್ತ ಎಳೆದು ಹಿಡಿದುಕೊಂಡವರು, ಅವರು ಕುಯ್ಯಬೇಕೆಂಬವಷ್ಟರಲ್ಲಿ ಮತ್ತೆ ಸಡಿಲ ಬಿಟ್ಟು ಅವರ ಬಿಗಿತದ ಲೆಕ್ಕಾಚಾರವನ್ನು ತಲೆಕೆಳಗಾಗಿಸಿ, ತಮ್ಮ ಕೋಳಿಯ ಬುರುಡೆಯ ಭಾಗವನ್ನಷ್ಟೇ ಅವರಿಗೆ ದಕ್ಕುವಂತೆ ಮಾಡಿ, ‘ಹೇಗೇ…? ನಾವೂ ನಿಮ್ಮಷ್ಟೇ ಬಿರ್ಸರು ಗೊತ್ತಾಯಿತಲ್ಲವಾ…!’ ಎಂದು ವ್ಯಂಗ್ಯ ನಗು ಬೀರುತ್ತ ತಮ್ಮ ಕೋಳಿಯ ಮುಂಡವನ್ನು ದೂರಕ್ಕೆ ಹೊತ್ತೊಯ್ದರು.

ಅದರಿಂದ ಕೋಳಿ ಕುಯ್ಯುವ ಯುವಕರಿಗೆ ಪಿಚ್ಚೆನಿಸಿತು. ಆದರೆ ಅದನ್ನೆಲ್ಲ ಯೋಚಿಸುವ ಸಮಯ ಇದಲ್ಲವೆಂದುಕೊoಡವರು ಮರಳಿ ತಮ್ಮ ಕಾರ್ಯದಲ್ಲಿ ಮಗ್ನರಾದರು. ಕೋಳಿ ಕುಯ್ಯಿಸಿಕೊಂಡವರು ವಿಲವಿಲ ಒದ್ದಾಡುತ್ತ ರಕ್ತ ಚಿಮ್ಮುತ್ತಿದ್ದ ಅವುಗಳ ಕಾಲು ಮತ್ತು ರೆಕ್ಕೆಗಳನ್ನು ಬಿಗಿಯಾಗಿ ಅದುಮಿ ಹಿಡಿದುಕೊಂಡು ದೂರದ ಮೈದಾನಕ್ಕೆ ಓಡುತ್ತಿದ್ದರು. ಹಲವರು ತಮ್ಮ ಕುಕ್ಕುಟಗಳ ಹೃದಯ, ಧಮನಿಗಳಿಂದ ಕಾರಂಜಿಯoತೆ ಚಿಮ್ಮುತ್ತಿದ್ದ ನೆತ್ತರನ್ನು ನೆಲಕ್ಕೂ ಮತ್ತಿನ್ನು ಕೆಲವರು ಆಕಾಶಕ್ಕೂ ಹಾರಿಸುತ್ತ ಒಂದಷ್ಟು ದೂರಕ್ಕೆ ಧಾವಿಸುತ್ತಿದ್ದರು. ಆದರೆ ಇನ್ನು ಕೆಲವು ಕಿಡಿಗೇಡಿಗಳು ತಮ್ಮ ಕೋಳಿಗಳ ರಕ್ತವನ್ನು ತಮಗಾಗದವರ ಮೇಲೂ ಚಿಮ್ಮಿಸುತ್ತ ಕೊಂಡೊಯ್ದು, ಮೈದಾನದಲ್ಲಿ ಎಸೆದು ಅವು ಪ್ರಾಣ ಬಿಡುವುದನ್ನೇ ಆಸಕ್ತಿಯಿಂದ ನೋಡುತ್ತ ಅಥವಾ ಆ ಮೂಕಪಕ್ಷಿಗಳ ಜೀವ ಹಾರಿ ಹೋಗುವ ತನಕ ಅವುಗಳ ಮುಂಡಗಳನ್ನು ಕಾಲಿನಿಂದ ತುಳಿದು ಮಿಸುಕಾಡದಂತೆ ಹಿಡಿದುಕೊಂಡು ಅಲ್ಲೂ ತಮ್ಮ ಕ್ರೂರ ಸಾಹಸವನ್ನು ಪ್ರರ್ದಶಿಸುತ್ತಿದ್ದರು. ಅವು ತುಸು ತಟಸ್ಥವಾದ ಕೂಡಲೇ ರಪರಪನೇ ಅವುಗಳ ರೆಕ್ಕೆಪುಕ್ಕಗಳನ್ನು ಕಿತ್ತೆಸೆಯತೊಡಗಿದರು. ಆದ್ದರಿಂದ ಮಾರಿಯ ಸೇವೆಯು ಮುಗಿದು ಮನೆಗೆ ತಲುಪುವಷ್ಟರಲ್ಲಿ ಬಹುತೇಕರ ಕೋಳಿಗಳ ಮುಂಡಗಳೆಲ್ಲ ಬೆತ್ತಲಾಗಿರುತ್ತಿದ್ದುವು!


ಮಾರಿಯಮ್ಮನಿಗೆ ‘ದೊಡ್ಡ ಬಲಿ’ ನೀಡುವ ಕ್ರಮ ಆರಂಭವಾಯಿತು. ಮಡಿಯುಟ್ಟು ಶುದ್ಧಾಚಾರದಿಂದಿದ್ದ ಮಾಚ ಮತ್ತು ಮಂಜ ಎಂಬಿಬ್ಬರು ಮಡಿವಾಳ ತರುಣರು ಮುಂದೆ ಬಂದರು. ಹಿಂದಿನ ದಿನ ಕುಂಭಬೆಟ್ಟಿನ ವಾಸಾಚಾರಿಯ ಕೊಟ್ಯಾದಲ್ಲಿ ಹದವಾಗಿ ಹರಿತಗೊಳಿಸಿ ತಂದಿದ್ದ ಮಿಲಾವಿನ ಕಡ್ಸಲೆಯೊಂದು ಮಾಚನ ಕೈಯಲ್ಲಿ ಫಳಫಳಿಸುತ್ತ ಹಸಿಹಸಿ ಮೂಕಜೀವಗಳ ಪ್ರಾಣಾಹರಣಗೈಯ್ಯಲು ಹವಣಿಸುವಂತೆ ತೋರುತ್ತಿತ್ತು. ಮಾರಿಯಮ್ಮ ಮತ್ತೊಮ್ಮೆ ಗೆಲುವಿನಿಂದ ಕಸಾಯಿಕಾರರ ಮೇಲೆ ತೀರ್ಥವನ್ನು ಸಿಂಪಡಿಸಿದಳು. ಮರುಕ್ಷಣ ಆ ತರುಣರಲ್ಲೂ ಸಣ್ಣಗೆ ಆವೇಶ ಕಾಣಿಸಿ, ಸ್ವಲ್ಪಹೊತ್ತು ಇಬ್ಬರೂ ಸೆಟೆದುಕೊಂಡು ಕಂಪಿಸಿದರು. ಆಗ ಪ್ರಾಣಿಬಲಿಗೆ ಗುರಿಕಾರನ ಅಪ್ಪಣೆಯಾಯಿತು. ತೋಮನು ಶೆಟ್ಟರ ಹೋತವನ್ನು ಪ್ರಯಾಸವಿಲ್ಲದೆ ಎಳೆದು ತಂದು ಮಾಚನೆದುರು ನಿಲ್ಲಿಸಿ ಮಾರಿಯಮ್ಮನಿಗೆ ತಲೆಬಾಗಿ ಕೈಮುಗಿದ. ಅತ್ತ ಹೋತವು ಅಲ್ಲೂ ತನ್ನ ಪಾಲಕನ ಮೇಲಿನ ವಿಶ್ವಾಸವನ್ನು ಬಿಟ್ಟುಕೊಡದೆ ಕತ್ತೊಡ್ಡಿ ನಿಂತಿತು. ಮಂಜನು ಅದು ಮಿಸುಕಾಡದಂತೆ ಹಾಗೂ ವಧೆಯ ಅರಿವು ಅದಕ್ಕಾಗದಂತೆ ಕೊರಳ ಹಗ್ಗವನ್ನು ಹಿಡಿದುಕೊಂಡ. ಪ್ರಾಣಿ ಬಲಿಯ ನಿಯಮದಂತೆ ವಧಾದಾರಿ ಬೀಸುವ ಒಂದೇ ಏಟಿಗೆ ಬಲಿಯ ಕತ್ತು ಕತ್ತರಿಸಲ್ಪಡಬೇಕಿತ್ತು. ಎರಡನೆಯ ಏಟಿಗೆ ಆಸ್ಪದವಿರಲಿಲ್ಲ. ಒಂದುವೇಳೆ ಹಾಗೆ ನಡೆಯಿತೆಂದರೆ ಮಾರಿಯಮ್ಮ ಅತೃಪ್ತಳಾಗುತ್ತಾಳೆ ಎಂಬ ಬಲವಾದ ನಂಬಿಕೆಯು ಈ ಆಚರಣೆಯಲ್ಲಿತ್ತು. ಆದ್ದರಿಂದ ಮಾಚ ತಾನು ಹೋತವನ್ನು ಕಡಿಯುವ ಮುನ್ನ ಅದರ ಕತ್ತಿನ ಮೇಲೊಮ್ಮೆ ಮೃದುವಾಗಿ ಕಡ್ಸಲೆಯನ್ನಿಟ್ಟು ಕಣ್ಣುಮುಚ್ಚಿ ತನ್ನ ಗುರಿಯನ್ನು ಸ್ಪಷ್ಟಪಡಿಸಿಕೊಂಡ. ಬಳಿಕ ಒಮ್ಮೆ ದೀರ್ಘವಾಗಿ ಉಸಿರೆಳೆದುಕೊಂಡವನ ಕುಸ್ತಿಪಟುವಿನಂತಿದ್ದ ಇಪ್ಪತ್ತೈದರ ಹರೆಯದ ದೇಹವು ನೂರೆಂಬತ್ತು ಡಿಗ್ರಿ ಕೋನದಲ್ಲಿ ರ‍್ರನೇ ಹಿಂಬಾಗಿ, ಮಿಂಚಿನವೇಗದಲ್ಲಿ ಮುಂಬಾಗುತ್ತ ಅವನ ಕೈಯ ಕಡ್ಸಲೆಯು ಹೋತದ ಕೊರಳನ್ನಪ್ಪಳಿಸಿತು.


ಮರುಕ್ಷಣ ಹೋತದ ಕತ್ತು ರಪ್ಪನೆ ಕಡಿಯಲ್ಪಟ್ಟು ಅದು, ‘ಬ್ಞಾಂ…!’ ಎಂದಷ್ಟೇ ಅರಚಿದ್ದರೊಂದಿಗೆ ಅದರ ರುಂಡವು ತಟಕ್ಕನೆ ಎಗರಿ ತನ್ನ ನೀಳ ನಾಲಿಗೆಯನ್ನು ಹೊರಚಾಚಿ, ಕಣ್ಣಗುಡ್ಡೆಗಳು ಸಿಡಿದಂಥ ಸ್ಥಿತಿಯಲ್ಲಿ ಚೆರುವಿನ ಮೇಲುರುಳಿತು. ಮಡಿವಾಳ ಯುವಕರ ಈ ಇಡೀ ಕ್ರಿಯೆಯನ್ನು ಮಾರಿಯಮ್ಮ ಹಸಿದ ಕಣ್ಣುಗಳಿಂದ ವೀಕ್ಷಿಸುತ್ತಿದ್ದಳು. ಹೋತದ ಮುಂಡದಿoದ ಚಿಮ್ಮುತ್ತಿದ್ದ ಬಿಸಿ ರಕ್ತವು ಆಕೆಯ ಮೊಗವನ್ನು ಆನಂದದಿoದ ಅರಳಿಸಿತು. ಆದರೂ ಅವಳ ಆ ಹೊತ್ತಿನ ಭಯಂಕರ ಮುಖದಲ್ಲಿ ಇನ್ನೂ ಆರದ ಅತೃಪ್ತಿಯು ತುಸುವೇ ಆರಿದಂತೆ ತೋರಿತು. ಹಾಗಾಗಿ ಅವಳು ಕ್ಷೀಣಸ್ವರದಲ್ಲಿ ಪಕಪಕನೆ ನಕ್ಕು ಶಾಂತಳಾದಳು. ಆ ಬಳಿಕ ಮಾಚ, ಮಂಜರು ಎಡೆಬಿಡದೆ ನಾಲ್ಕು ಆಡು ಮತ್ತೊಂದು ಕುರಿಯ ರುಂಡವನ್ನು ವೀರಾವೇಶದಿಂದ ಚೆಂಡಾಡುವ ಮೂಲಕ ದೇವಿಯನ್ನು ಸಂತೃಪ್ತಿಪಡಿಸಿದರು.
(ಮುoದುವರೆಯುವುದು)

Related posts

ವಿವಶ…

Mumbai News Desk

ವಿವಶ..

Mumbai News Desk

ವಿವಶ…

Mumbai News Desk

ವಿವಶ…

Mumbai News Desk

ವಿವಶ…

Mumbai News Desk

ವಿವಶ..

Mumbai News Desk