
ವಿವಶ…. ಈ ಧಾರಾವಾಹಿಯ ಈ ಹಿಂದಿನ ಸಂಚಿಕೆಗಳ ಲಿಂಕ್ ಕೆಳಗೆ ಇದೆ…
💢 ಧಾರಾವಾಹಿ ಭಾಗ – 1
https://mumbainewskannada.blogspot.com/2023/10/aaaaar-aa-aavaau-aanvaua-eegaqaa.html
💢 ಧಾರಾವಾಹಿ ಭಾಗ – 2
https://mumbainewskannada.blogspot.com/2023/10/blog-post_181.html
💢 ಧಾರಾವಾಹಿ ಭಾಗ – 3
http://mumbainewskannada.blogspot.com/2023/10/blog-post_425.html
⭕ ಧಾರವಾಹಿ ಭಾಗ – 4
https://mumbainewskannada.blogspot.com/2023/10/blog-post_636.html
⭕ ಧಾರವಾಹಿ ಭಾಗ – 5
⭕ ಧಾರವಾಹಿ ಭಾಗ – 6
https://mumbainewskannada.com/2023/11/17/vivasha/
⭕ ಧಾರವಾಹಿ ಭಾಗ – 7
https://mumbainewskannada.com/wp-admin/post.php?post=1687&action=edit
ಧಾರವಾಹಿ – 8
ಹಿತ್ತಲ ಹಲಸಿನ ಮರದ ಮೇಲೆ ಸರೋಜಾಳೊಂದಿಗೆ ಪ್ರೇಮ ಸಲ್ಲಾಪದಲ್ಲಿ ಮೈಮರೆತು, ಮಾವನ ಕೈಗೆ ಸಿಕ್ಕಿಬಿದ್ದು ಏಟು ತಿಂದ ಲಕ್ಷ್ಮಣ ಅವಮಾನದಿಂದ ಗುಡ್ಡದಾಚೆ ಹೊರಟು ಹೋದವನು ಸುಮಾರು ಹೊತ್ತು ಏನೂ ತೋಚದೆ ಹತಾಶೆಯಿಂದ ಗುಡ್ಡವಿಡೀ ಅಲೆದಾಡಿದ. ಆದರೆ ಹೊತ್ತು ಮುಳುಗುತ್ತಿದ್ದಂತೆಯೇ ಅವನ ಮನಸ್ಸು ಸ್ವಲ್ಪ ಸ್ಥಿಮಿತಕ್ಕೆ ಬಂತು. ಮನೆಯಲ್ಲೇನು ಕಥೆ ನಡೆಯಿತಾ…? ದೇವರೇ, ಸರೋಜಾಳ ಸ್ಥಿತಿ ಏನಾಗಿದೆಯಾ…? ಇನ್ನು ಅಪ್ಪ ಅಮ್ಮ ನನ್ನನ್ನು ಮನೆಗೆ ಸೇರಿಸಿಕೊಳ್ಳುತ್ತಾರಾ, ಇಲ್ಲವಾ? ಛೇ! ಛೇ! ಇನ್ನು ಮುಂದೆ ಹೇಗಪ್ಪಾ ಮನೆಯವರಿಗೆ ಮುಖ ತೋರಿಸುವುದು…? ಇಷ್ಟು ಬೇಗನೇ ನಾವು ದುಡುಕಬಾರದಿತ್ತೇನಾ? ಮುಂದೆ ಸ್ವಲ್ಪ ಕಾಲದೊಳಗೆ ಕಾಸರಪೇಟೆಯಲ್ಲಿ ಯಾವುದಾದರೊಂದು ಕೆಲಸ ಹಿಡಿದ ಕೂಡಲೇ ತನ್ನ ಮತ್ತು ಸರೋಜಾಳ ಮದುವೆಯ ವಿಷಯವನ್ನು ಮನೆಯವರೊಡನೆ ಮಾತಾಡುವುದು. ಅದಕ್ಕವರು ಒಪ್ಪಿದರೆ ಸಂತೋಷ. ಇಲ್ಲಿದ್ದರೆ ಎಲ್ಲಾದರೂ ದೂರ ಓಡಿ ಹೋಗಿ ಮದುವೆಯಾಗುವುದು! ಎಂದುಕೊoಡಿದ್ದ ತನ್ನ ಉಪಾಯವೆಲ್ಲ ನೀರಲ್ಲಿಟ್ಟ ಹೋಮವಾಯಿತಲ್ಲಾ. ಇನ್ನೇನು ಮಾಡುವುದಪ್ಪಾ…? ಎಂದು ಯೋಚಿಸಿ ತೀವ್ರ ಕಳವಳಗೊಂಡ. ಬಳಿಕ, ಅದೇನೇ ಆದರೂ ಸರೋಜಾಳನ್ನು ಬಿಟ್ಟು ಬದುಕುವ ಶಕ್ತಿ ತನ್ನಲ್ಲಿಲ್ಲ. ಮದುವೆ ಎಂದಾಗುವುದಾದರೆ ಅವಳನ್ನು ಮಾತ್ರ! ಅವಳೂ ನನ್ನನ್ನು ಅಷ್ಟೇ ಪ್ರೀತಿಸುತ್ತಿದ್ದಾಳೆ. ಹಾಗಾಗಿ ಈ ವಿಷಯದಲ್ಲಿ ನಾವು ಯಾರನ್ನೂ ಲೆಕ್ಕಿಸುವ ಅಗತ್ಯವಿಲ್ಲ. ನನ್ನ ಹಠ ಮತ್ತು ರೋಷದ ವಿಷಯಕ್ಕೆ ಬಂದರೆ ನಾನೆಂಥವನೆoಬುದು ಇಡೀ ಅಡ್ಡಪಡ್ಪುವಿಗೆ ಗೊತ್ತಿದೆ. ಆದ್ದರಿಂದ ಇವರಿಗೆಲ್ಲ ಪಾಠ ಕಲಿಸಿಯೇ ಸಿದ್ಧ! ಎಂದು ಸೆಟೆದು ನಿಂತವನು ಕೂಡಲೇ ಮನೆಯ ದಾರಿ ಹಿಡಿದ.
ನಿಧಾನವಾಗಿ ಮನೆಯಂಗಳಕ್ಕಡಿಯಿಟ್ಟ. ವರಾಂಡದ ಎತ್ತರದ ಮೇಜಿನ ಮೇಲಿದ್ದ ದೊಡ್ಡ ಹಾರ್ಮೋನಿಯಂ ಪೆಟ್ಟಿಗೆಯಂಥ ಮರ್ಫಿ ರೇಡಿಯೋದಲ್ಲಿ ಯಾವತ್ತೂ ಸಂಜೆಯ ಹೊತ್ತು ಆಕಾಶವಾಣಿ ಮಂಗಳೂರಿನ ತುಳು ಬಾನುಲಿ ಕಾರ್ಯಕ್ರಮವು ಪ್ರಸಾರವಾಗುತ್ತಿದ್ದುದು ಇಂದೇಕೋ ಸ್ತಬ್ಧವಾಗಿತ್ತು. ಮನೆಮಂದಿಯ ವಿಷಾದದ ಛಾಯೆಗಳು ಸಾಕುಪ್ರಾಣಿಗಳಿಗೂ ಸೋಕಿರುವಂತೆ ಅವು ಕೂಡಾ ತಂತಮ್ಮ ಗೂಡು, ಹಟ್ಟಿಯನ್ನು ಸೇರಿಕೊಂಡು ಮೌನವಾಗಿ ಮಲಗಿದ್ದುವು. ಅತ್ತ ಮನೆಯೊಳಗೆ ನೀರಸ ಮೌನ ಮಡುಗಟ್ಟಿತ್ತು. ಅಲ್ಲಿಯವರೆಗೆ ಮೊಂಡು ಧೈರ್ಯದಿಂದ ಏದುಸಿರು ದಬ್ಬುತ್ತ ಬಂದಿದ್ದ ಲಕ್ಷ್ಮಣನಿಗೆ ಈಗ ಒಮ್ಮೆಲೆ ಅಳುಕೆದ್ದುಬಿಟ್ಟಿತು. ಆದರೂ ಸೆಡವಿನಿಂದ ಒಳಗಡಿಯಿಟ್ಟ.

ಅಪ್ಪ ವಾಸುವು ಜಗುಲಿಯ ಮೇಲೆ ಕುಳಿತು ಎಲೆಯಡಿಕೆ ಮೆಲ್ಲುತ್ತಿದ್ದ. ಅಷ್ಟೊತ್ತಿಗೆ ಬಾಗಿಲು ದೂಡಿಕೊಂಡು ಒಳಗೆ ಬಂದ ಮಗನನ್ನೊಮ್ಮೆ ಆಪಾದಮಸ್ತಕ ಕೆಂಗಣ್ಣಿನಿoದ ದಿಟ್ಟಸಿದ. ಬಹುಶಃ ತನ್ನ ಮಗನನ್ನು ಅವನು ಅದೇ ಮೊದಲ ಬಾರಿಗೆ ಅಷ್ಟೊಂದು ಸೂಕ್ಷ್ಮವಾಗಿ ದಿಟ್ಟಿಸಿದ್ದಿರಬೇಕು. ತನ್ನಷ್ಟೇ ಉದ್ದ ತೋರ ಬೆಳೆದಿದ್ದ ಚಿಗುರು ಮೀಸೆಯ ಸುಂದರಾoಗ ಪುತ್ರ ತನ್ನೆದುರು ತಲೆತಗ್ಗಿಸಿ ನಿಂತಿದ್ದನ್ನು ಕಂಡ ಅಪ್ಪನಿಗೆ ಒಂದು ಕ್ಷಣ ಹೆಮ್ಮೆ ಅನ್ನಿಸಿತು. ಜೊತೆಗೆ ಎಂಥದ್ದೋ ಅಳುಕೂ ಕಾಡಿ ತುಸು ವಿಚಲಿತನಾದ. ಆದರೆ ಅವನ ಮನಸ್ಸು ತಾನು ಆಡಬೇಕಾದ ವಿಚಾರವನ್ನು ಮುನ್ನೆಲೆಗೆ ತಳ್ಳಿಬಿಟ್ಟಿತು. ಆಗ ಮೊದಲ ಭಾವವನ್ನು ರಪ್ಪನೇ ಹತ್ತಿಕ್ಕಿ ಮತ್ತೊಮ್ಮೆ ಮಗನನ್ನು ದುರುಗುಟ್ಟಿ ನೋಡಿದ. ಅಪ್ಪನ ಸುಡುವ ಮುಖವು ಲಕ್ಷ್ಮಣನಲ್ಲಿ ಭಯದೊಂದಿಗೆ ರೋಷವನ್ನೂ ಕೆರಳಿಸಿತು. ಆದರೂ ಅದುಮಿಟ್ಟುಕೊಂಡು ಒಳಗೆ ನಡೆಯುವುದರಲ್ಲಿದ್ದ. ಅಷ್ಟರಲ್ಲಿ, ‘ಹೇ, ನಿಲ್ಲನಾ ಅಲ್ಲಿ…! ಎಂಥ ಕೆಲಸ ಮಾಡಿದ್ದಿ ಮಾರಾಯಾ ನೀನು? ನಾಚಿಕೆಯಾಗಲಿಲ್ಲವನಾ ನಿಂಗೆ ಥೂ!’ ಎಂದು ಅಪ್ಪ ಗದರಿಸಿದ.
ಆಗ ಲಕ್ಷ್ಮಣನೂ ಕೆರಳಿದ. ಇವತ್ತು ಅದೇನಾಗುವುದೋ ನೋಡಿಯೇ ಬಿಡುವ ಎಂದುಕೊoಡವನು, ‘ಅಂಥದ್ದೇನು ಮಾಡಿದೆ ನಾನು? ಸರೋಜ ನಂಗೆ ಮೊದಲಿನಿಂದಲೂ ಇಷ್ಟವಾಗಿದ್ದಳು. ಅವಳಿಗೂ ನಾನೆಂದರೆ ಅಷ್ಟೇ ಇಷ್ಟ. ಬೇಕಾದರೆ ಅವಳನ್ನೇ ಕೇಳಿ ನೋಡಿ!’ ಎಂದು ತಾನೂ ಅಪ್ಪನನ್ನು ದುರುಗುಟ್ಟುತ್ತ ಅಂದ. ಅಷ್ಟು ಕೇಳಿದ್ದೇ ವಾಸುವು ರಪ್ಪನೆದ್ದವನು, ‘ಏನಂದೆಯಾ ಬೇವರ್ಸಿ… ಅವಳು ನಿನಗೆ ಇಷ್ಟವಾದಳಾ…! ನಿನ್ನ ತಂಗಿಯ ಸಮಾನಳಾದವಳು ಅದು ಹೇಗೆ ಇಷ್ಟವಾಗುತ್ತಾಳೋ…?’ ಎನ್ನುತ್ತಾ ಮಗನನ್ನು ಹಿಡಿದು ಯದ್ವಾತದ್ವ ಥಳಿಸತೊಡಗಿದ. ಆಗ ಲಕ್ಷ್ಮಣ, ಅಪ್ಪನ ನಾಲ್ಕೈದು ಏಟುಗಳನ್ನು ಹೇಗೋ ಸಹಿಸಿಕೊಂಡ. ಆದರೆ ನಂತರ ಅವನಿಗೂ ರೇಗಿತು. ಹಿಂದುಮುoದು ಯೋಚಿಸದೆ ತಿರುಗಿ ಒಂದೇಟು ಅಪ್ಪನಿಗೆ ಬಿಗಿದೇಬಿಟ್ಟ! ಅದನ್ನು ಕಂಡ ವಿಶ್ವನಾಥ ಮತ್ತು ಲಕ್ಷ್ಮಣನ ಅಣ್ಣ ಹಾಗೂ ಚಿಕ್ಕಪ್ಪಂದಿರೆಲ್ಲ ಕೆಂಡಾಮoಡಲರಾಗಿ ಒಮ್ಮೆಲೇ ಅಪ್ಪ, ಮಗನ ನಡುವೆ ನುಗ್ಗಿ ಕಾದಾಟವನ್ನು ಬಿಡಿಸಿದವರು, ಲಕ್ಷ್ಮಣನನ್ನು ಹಿಡಿದುಕೊಂಡು ಮನಬಂದoತೆ ಹೊಡೆಯತೊಡಗಿದರು. ಅದನ್ನು ಕಂಡ ರತ್ನಕ್ಕ ಗೋಳೋ ಎಂದಳುತ್ತ ಅವರ ಮಧ್ಯೆ ನುಗ್ಗಿ ಮಗನನ್ನು ಬಿಡಿಸಿಕೊಳ್ಳಲು ಹೆಣಗಾಡಿದಳು. ಹಾಗಾಗಿ ಅವರೆಲ್ಲ ತುಸು ತಣ್ಣಗಾಗಿ ಲಕ್ಷ್ಮಣನನ್ನು ಎತ್ತಿ ಹೊತ್ತೊಯ್ದು ಮೂಲೆಯೊಂದರಲ್ಲಿ ಕುಳ್ಳಿರಿಸಿಬಿಟ್ಟರು.

ತನ್ನ ಮಗನಿಂದ ಏಟು ತಿಂದ ವಾಸುವು ದಿಗ್ಭ್ರಾಂತನಾದ! ಒಂದು ಕಡೆ ಮಗನು ಮಾಡಿರುವ ಅನಾಚಾರದ ನೋವು ಅವನನ್ನು ಬಾಧಿಸಿದರೆ ಅದಕ್ಕಿಂತಲೂ ಹೆಚ್ಚಿನ ಆಘಾತವು ಅವನು ತನ್ನ ಮೇಲೆ ಕೈಮಾಡಿದುದಾಗಿತ್ತು. ತಾನು ಇಷ್ಟು ವರ್ಷಗಳ ಕಾಲ ಹಗಲುರಾತ್ರಿಯೆನ್ನದೆ ತನ್ನ ಮಕ್ಕಳು, ತನ್ನ ಕುಟುಂಬವೆoದುಕೊoಡು ಪಟ್ಟ ಪರಿಶ್ರಮವೆಲ್ಲ ಮಗನ ಒಂದೇ ಏಟಿಗೆ ಸಂಪೂರ್ಣ ನಿರರ್ಥಕವಾದಂಥ ಭಾವವು ಅವನಲ್ಲಿ ಹುಟ್ಟಿದ್ದರೊಂದಿಗೆ ತನ್ನ ಬದುಕೇ ವ್ಯರ್ಥ! ಎಂಬ ಹತಾಶೆಯೂ ಆವರಿಸಿಬಿಟ್ಟಿತು. ಆ ನೋವನ್ನು ಸಹಿಸಲಾಗದೆ ತಟ್ಟನೇ ಕುಸಿದು ಕುಳಿತವನ ಕಣ್ಣುಗಳಲ್ಲಿ ತೀವ್ರ ಅವಮಾನದ ನೀರು ತೊಟ್ಟಿಕ್ಕಿತು. ಗಂಡನ ಸ್ಥಿತಿಯನ್ನು ಕಂಡ ರತ್ನಕ್ಕನ ಕರುಳು ಕತ್ತರಿಸಿದಂತಾಯಿತು. ಅವಳು ಮೆಲ್ಲನೆ ಬಂದು ಗಂಡನ ಪಕ್ಕ ಕುಳಿತುಕೊಂಡು ಸಾಂತ್ವನಿಸಲು ಮುಂದಾದಳು. ಆದರೆ ಅಷ್ಟರಲ್ಲಿ ವಾಸುವು ರಪ್ಪನೆದ್ದವನು, ‘ಹೇ ಬಿಕನಾಸಿ, ಇವತ್ತಿನಿಂದ ನಿನಗೆ ಈ ಮನೆಯಲ್ಲಿ ಜಾಗವಿಲ್ಲವನಾ! ಇನ್ನೊಂದು ಕ್ಷಣ ನನ್ನ ಕಣ್ಣ ಮುಂದೆ ನಿಂತೆ ಎಂದರೆ ನಾನೇನು ಮಾಡುತ್ತೇನೋ ನನಗೇ ಗೊತ್ತಾಗಲಿಕ್ಕಿಲ್ಲ. ಅಷ್ಟರೊಳಗೆ ತೊಲಗು ಇಲ್ಲಿಂದ…!’ ಎಂದು ಗುಡುಗಿದ. ಅತ್ತ ಭಾವನ ಅಂಥ ಮಾತು ವಿಶ್ವನಾಥನಿಗೆ ತುಸು ಸಮಾಧಾನ ನೀಡಿತು. ಆದ್ದರಿಂದ ಅವನೂ, ‘ಹುಟ್ಟಿದ ಮನೆಯ ಹೆಣ್ಣಿನ ಮೇಲೆಯೇ ಕಣ್ಣು ಹಾಕಿದಂಥ ಈ ನೀಚ ಇನ್ನು ಮುಂದೆ ಈ ಮನೆಯಲ್ಲಿರಲೇಕೂಡದು ಭಾವ!’ ಎಂದು ಕಿರುಚಾಡಿದ. ಅಷ್ಟು ಕೇಳಿದ ರತ್ನಕ್ಕನಿಗೆ ಕಣ್ಣು ಕತ್ತಲಿಟ್ಟಂತಾಯಿತು. ‘ಅಯ್ಯಯ್ಯೋ ದೇವರೇ…! ಹಾಗೆಲ್ಲ ಯೋಚಿಸಬೇಡಿ ಮಾರಾಯ್ರೇ…! ಪ್ರಾಯಕ್ಕೆ ಬಂದ ಮಕ್ಕಳಲ್ಲವಾ. ಏನೋ ತಿಳಿಯದೆ ತಪ್ಪು ಮಾಡಿರಬೇಕು. ನೀವೆಲ್ಲ ಅವನಿಗೆ ತಾಳ್ಮೆಯಿಂದ ಬುದ್ಧಿ ಹೇಳಿ ಸರಿ ದಾರಿಗೆ ತರುವುದನ್ನು ನೋಡಿ!’ ಎಂದು ಅಂಗಲಾಚುತ್ತ ಒಂದೇ ಸಮನೆ ಅಳತೊಡಗಿದಳು. ಮಕ್ಕಳು ಮರಿಗಳೆಲ್ಲ ಭೀತಿಯಿಂದ ಅಳುತ್ತ ಉಸಿರುಗಟ್ಟಿದಂತೆ ಕುಳಿತಿದ್ದವು. ಆದರೆ ಆ ಕ್ಷಣ ಲಕ್ಷ್ಮಣನಿಗೇನನಿಸಿತೋ. ಅವನು ದಢಕ್ಕನೆದ್ದು, ‘ಆಯ್ತು. ಆಯ್ತು. ಇಷ್ಟೆಲ್ಲ ನಡೆದ ಮೇಲೆ ಇನ್ನು ನಾನೂ ಇಲ್ಲಿರಲು ಇಷ್ಟಪಡುವುದಿಲ್ಲ!’ ಎಂದು ವಿಶ್ವನಾಥನನ್ನು ಕೆಕ್ಕರಿಸಿದವನು ಅಪ್ಪನತ್ತ ತಿರುಗಿ, ‘ಅಪ್ಪಾ, ನೀವು ಯಾವತ್ತಾದರೂ ನಮ್ಮನ್ನು ಸ್ವಂತ ಮಕ್ಕಳಂತೆ ನೋಡಿದ್ದುಂಟಾ? ಎಲ್ಲವನ್ನೂ ತಂದು ತುರುಕಿಸುತ್ತಿದ್ದುದು ಮತ್ತು ಆಸೆ ತೋರಿಸುತ್ತಿದ್ದುದೇನಿದ್ದರೂ ನಿಮ್ಮ ಅಣ್ಣ, ತಂಗಿಯರ ಮಕ್ಕಳಿಗೇ ಅಲ್ಲವಾ? ಅದು ಬಿಡಿ, ಅಮ್ಮನನ್ನಾದರೂ ಒಂದು ದಿನ ಚೆನ್ನಾಗಿ ನೋಡಿಕೊಂಡಿದ್ದೀರಾ ಹೇಳಿ…? ಅವಳನ್ನೂ ಹೊಡೆದು ಬಡಿದು ಹಿಂಸಿಸುವ ನಿಮಗೆ ನಮ್ಮಿಬ್ಬರ ಪ್ರೀತಿ, ಸಂಬoಧಗಳ ಬಗ್ಗೆ ಹೇಗೆ ಅರ್ಥವಾಗಬೇಕು? ನಿಮ್ಮಂಥ ಕಟುಕರ ಜೊತೆ ನಾನೂ ಇರಲು ಇಷ್ಟಪಡುವುದಿಲ್ಲ!’ ಎಂದು ಕೋಪದಿಂದ ಕಂಪಿಸುತ್ತ ಅಂದವನು ಸರಕ್ಕನೆ ಒಳಗೆ ಹೋದ.
ಕೈಗೆ ಸಿಕ್ಕಿದ ಒಂದೆರಡು ಲುಂಗಿ ಮತ್ತು ಅಂಗಿಯನ್ನು ಬೀಣೆಯ ಚೀಲವೊಂದಕ್ಕೆ ತುರುಕಿಸಿದವನು ಕಳ್ಳಹೆಜ್ಜೆಗಳನ್ನಿಡುತ್ತ ಅಪ್ಪನ ಕೋಣೆಯನ್ನು ಹೊಕ್ಕ. ಅಲ್ಲಿ ಆತುರಾತುರವಾಗಿ ಏನನ್ನೋ ತೆಗೆದು ಜೇಬಿಗೆ ತುರುಕಿಸಿಕೊಂಡು ಹೊರಗೆ ಬಂದ. ‘ಮಗಾ…! ಎಲ್ಲಿಗನಾ…? ಹೋಗಬೇಡವನಾ…!’ ಎಂದು ರತ್ನಕ್ಕ ಅಳುತ್ತ ಅಂಗಲಾಚಿದಳು. ಆದರೆ ಲಕ್ಷ್ಮಣ ಅದ್ಯಾವುದನ್ನೂ ಲೆಕ್ಕಿಸುವ ಸ್ಥಿತಿಯಲ್ಲಿರಲಿಲ್ಲ. ಕೂಡಲೇ ಹೊರಟು ಹೋದ. ಕ್ಷಣಾರ್ಧದಲ್ಲಿ ನಡೆದ ಘಟನೆಯಿಂದ ಮನೆಮಂದಿಯೆಲ್ಲರೂ ಸ್ತಂಭೀಭೂತರಾಗಿದ್ದರು. ಆ ಕಲಹಕ್ಕೆ ಮೂಕಸಾಕ್ಷಿಗಳಾಗಿ ಕುಳಿತಿದ್ದ ಲಕ್ಷ್ಮಣನ ಅಜ್ಜ, ಅಜ್ಜಿಯರಿಬ್ಬರು ಮಾತ್ರ, ‘ಹೇ ವಾಸೂ, ವಿಶ್ವನಾಥ ಆ ಮಗುವನ್ನು ತಡೆಯಿರನಾ! ಏನೋ ಹುಡುಗು ಬುದ್ಧಿಯವು ತಪ್ಪು ಮಾಡಿದವು. ಅದನ್ನೆಲ್ಲಾ ದೊಡ್ಡದು ಮಾಡಬೇಡಿರನಾ…!’ ಎಂದು ಕೂಗಿ ಹೇಳುತ್ತಿದ್ದರು. ಆದರೂ ಯಾರೂ ಚಕಾರವೆತ್ತಲಿಲ್ಲ. ಇತ್ತ ಕೋಣೆಯೊಳಗೆ ಕೂಡಿ ಹಾಕಿದ್ದ ಸರೋಜ ಹೊರಗೆ ನಡೆಯುತ್ತಿದ್ದ ರಾದ್ಧಾಂತವನ್ನು ಭೀತಿಯಿಂದ ಕೇಳಿಸಿಕೊಳ್ಳುತ್ತಿದ್ದಳು. ಆದರೆ ಲಕ್ಷ್ಮಣ ಮನೆಬಿಟ್ಟು ಹೋದುದು ತಿಳಿಯುತ್ತಲೇ ಜೋರಾಗಿ ಅಳುತ್ತ ಬಾಗಿಲು ಬಡಿಯತೊಡಗಿದಳು. ಆಗ ವಿಶ್ವನಾಥನಿಗೆ ಮತ್ತಷ್ಟು ರೇಗಿತು. ಅವನು ಒಮ್ಮೆಲೇ ಮಗಳ ಕೋಣೆಗೆ ನುಗ್ಗಿದವನು ಅವಳಿಗೆ ಇನ್ನಷ್ಟು ಬಡಿದು ಉಸಿರೆತ್ತದಂತೆ ಮಾಡಿ ಹೊರಗೆ ಬಂದ.

ಇತ್ತ ಕೋಪದ ಭರದಲ್ಲಿ ಮನೆ ಬಿಟ್ಟು ಹೊರಟ ಲಕ್ಷ್ಮಣನು ಬಹಳ ದೂರವೇನೂ ಹೋಗಿರಲಿಲ್ಲ. ತನ್ನ ಪ್ರೇಮಕ್ಕೆ ಭಂಗ ಬಂದುದುದಕ್ಕಿoತಲೂ ಮುಖ್ಯವಾಗಿ ಏನೊಂದೂ ವಿಚಾರಿಸದೆ ಏಕಾಏಕಿ ಹೊಡೆದು ಬಡಿದು ಅವಮಾನಿಸಿದ ಹಿರಿಯರ ಮೇಲೆಯೇ ಅವನೊಳಗೆ ದ್ವೇಷ, ಸೇಡುಗಳೆದ್ದು ತಾಂಡವವಾಡುತ್ತಿದ್ದುವು. ಆ ಕುರಿತೇ ಯೋಚಿಸುತ್ತ ನಡೆಯುತ್ತಿದ್ದವನು ತೀವ್ರ ವಿಚಲಿತನಾಗಿ ಅಲ್ಲೇ ಒಂದು ಕಡೆ ಕಾಲುದಾರಿಯ ಪಕ್ಕದ ಮುರಕಲ್ಲಿನ ಮೇಲೆ ಕುಳಿತ. ಆಹೊತ್ತು ನಡುರಾತ್ರಿ ಸಮೀಪಿಸುತ್ತಿತ್ತು. ಹುಣ್ಣಿಮೆಯ ಚಂದ್ರನ ಮಬ್ಬು ಬೆಳಕು ಸಮತಟ್ಟಾದ ಗುಡ್ಡೆಯ ತುಂಬೆಲ್ಲ ಹರಡಿತ್ತು. ಆ ಬೆಳಕಿಗೆ ಅಲ್ಲಲ್ಲಿ ಎದ್ದು ಕಾಣುತ್ತಿದ್ದ ಮುರಕಲ್ಲುಗಳ ತುದಿಗಳು ತಾಮ್ರವರ್ಣದಿಂದ ಹೊಳೆಯುತ್ತಿದ್ದವು. ಆ ದೃಶ್ಯವೂ, ವಾತಾವರಣವೂ ಅವನೊಳಗಿನ ನೋವನ್ನು ತುಸು ಉಪಶಮನಗೊಳಿಸಿ ತನ್ನ ಪ್ರಿಯತಮೆಯನ್ನು ನೆನಪಿಗೆ ತರಿಸಿತು. ಆಗ ಅವನಿಗೆ ತಾನು ಕೋಪದ ಭರದಲ್ಲಿ ಅವಳನ್ನು ಬಿಟ್ಟು ಬಂದುದರ ಕುರಿತು ಪಶ್ಚಾತ್ತಾಪವಾಯಿತು. ಕೂಡಲೇ ಎದ್ದು ಮನೆಗೆ ಹಿಂದಿರುಗಿದ. ಹಿತ್ತಲಿನಿಂದಾಗಿ ಮನೆಯತ್ತ ಬಂದವನು, ಬೆಕ್ಕಿನ ಹೆಜ್ಜೆಗಳನ್ನಿಡುತ್ತ ಸರೋಜಾಳ ಕೋಣೆಯತ್ತ ನಡೆದು ಕಿಟಕಿಯಲ್ಲಿ ಇಣುಕಿದ.
ಸರೋಜಾಳ ಕೋಣೆಯ ನಟ್ಟನಡುವೆ ಚಿಮಿಣಿ ದೀಪವೊಂದು ಮಂದವಾಗಿ ಉರಿಯುತ್ತಿತ್ತು. ಆಕೆ ಖಾಲಿ ನೆಲದ ಮೇಲೆ ಮುದುಡಿ ಮಲಗಿದ್ದಳು. ಅವಳ ಸ್ಥಿತಿಯನ್ನು ಕಂಡ ಲಕ್ಷ್ಮಣನ ಮನಸ್ಸು ಹಿಂಡಿತು. ಆ ಕತ್ತಲಲ್ಲಿ ತನ್ನ ಸುತ್ತಮುತ್ತಲೂ ಏನನ್ನೋ ತಡಕಾಡಿದ. ಯಾವುದೋ ಗಿಡವೊಂದು ಕೈಗೆ ಸೋಕಿತು. ಉದ್ದನೆಯ ಕೋಲೊಂದನ್ನು ಮುರಿದು ಮೆಲ್ಲನೇ ಕಿಟಕಿಯ ಮೂಲಕ ತೂರಿಸಿ ಸರೋಜಾಳನ್ನು ಮೃದುವಾಗಿ ತಿವಿದ. ಅವಳೂ ಲಕ್ಷ್ಮಣನ ಗುಂಗಿನಲ್ಲೇ ಇದ್ದವಳಿಗೆ ನಿದ್ದೆ ಹತ್ತಿರಲಿಲ್ಲ. ನನ್ನ ಲಕ್ಷ್ಮಣ ಎಂದಿಗೂ ನನ್ನನ್ನು ಬಿಟ್ಟು ಹೋಗಲಾರ. ಹಿಂದಿರುಗಿ ಬಂದೇ ಬರುತ್ತಾನೆ! ಎಂಬ ವಿಶ್ವಾಸದಿಂದಿದ್ದವಳು, ಕೋಲೊಂದು ಬಂದು ಸೋಕುತ್ತಲೇ ಬೆಚ್ಚಿಬಿದ್ದು ಎದ್ದು ಕುಳಿತಳು. ಲಕ್ಷ್ಮಣನ ಗುಂಗುರು ಕೂದಲಿನ, ದುಂಡಗಿನ ತಲೆಯಾಕೃತಿಯು ಚಂದ್ರನ ಬೆಳಕಿನಲ್ಲಿ ಅವಳಿಗೆ ನಿಚ್ಚಳವಾಗಿ ಕಾಣಿಸಿತು. ಎದ್ದು ಕಿಟಿಕಿಯ ಸಮೀಪ ಬಂದವಳು, ‘ಎಲ್ಲಿಗೆ ಹೋಗಿದ್ದಿ ಲಕ್ಷ್ಮಣಾ ಇಷ್ಟು ಹೊತ್ತು…? ಒಳಗೆ ಬಾರನಾ…!’ ಎಂದು ದುಃಖದಿಂದ ಅಂದಳು. ಅದಕ್ಕವನು, ‘ಹುಶ್ಶ್…!’ ಎಂದು ಸುಮ್ಮನಿರಲು ಸೂಚಿಸಿದವನು, ‘ಇಲ್ಲ ಸರೂ. ಇನ್ನು ನಾನು ಈ ಮನೆಯೊಳಗೆ ಕಾಲಿಡುವುದಿಲ್ಲ. ಈ ಮನೆ ಮತ್ತು ಇಲ್ಲಿನ ಸಂಬoಧಗಳ ಋಣವು ನನ್ನ ಪಾಲಿಗೆ ಇವತ್ತಿಗೆ ತೀರಿ ಹೋಯಿತು. ನಿನಗೆ ನಾನು ಬೇಕೆಂದಿದ್ದರೆ ಈಕ್ಷಣವೇ ಹೊರಟು ಬಾ. ಎಲ್ಲಾದರೂ ದೂರ ಹೋಗಿ ಬದುಕುವ. ಹೂಂ…ಹೆಚ್ಚು ಸಮಯವಿಲ್ಲ ಹೊರಡು!’ ಎಂದು ಮೆಲುವಾಗಿ ಅವಸರಿಸಿದ. ಅಷ್ಟು ಕೇಳಿದ ಸರೋಜಾಳಿಗೆ ಒಮ್ಮೆಲೆ ನಡುಕ ಶುರುವಾಯಿತು. ಆದರೂ ಸಂಭಾಳಿಸಿಕೊoಡು, ‘ಆಯ್ತು ಲಕ್ಷ್ಮಣ ಬರುತ್ತೇನೆ. ನೀನಿಲ್ಲದೆ ನಾನೂ ಬದುಕುವುದಿಲ್ಲ!’ ಎಂದವಳು ಕೈಗೆ ಸಿಕ್ಕಿದ ಲಂಗ ದಾವಣಿ ಮತ್ತು ಒಂದೆರಡು ಸೀರೆ, ರವಿಕೆಗಳನ್ನು ಮೇಲು ಹೊದಿಕೆಯೊಂದರಲ್ಲಿ ಗಂಟುಕಟ್ಟಿದಳು. ಬಳಿಕ ಹಿಂದುಗಡೆಯ ಬಾಗಿಲಿನಿಂದ ನಿಶ್ಶಬ್ದವಾಗಿ ಹೊರಗೆ ಬಂದವಳು ಲಕ್ಷ್ಮಣನ ಕೈಯನ್ನು ಬಿಗಿಯಾಗಿ ಹಿಡಿದುಕೊಂಡಳು.
(ಮುoದುವರೆಯುವುದು)