
ಭಿಕ್ಷುಕ,ಬೀದಿ ಮಗು ಮತ್ತು ಬದುಕು
ಬರಹ : ಶಾರದಾ ಎ.ಅಂಚನ್ ಕೊಡವೂರು
ಬಡವರೆಂದರೆ ಕೆಲವರಿಗೆ ಕೋಪ,ತಿರಸ್ಕಾರವಾದರೆ,ಕೆಲವರು ಬಡವರನ್ನು ಕಂಡು ಮೂಗು ಮುರಿಯುತ್ತಾರೆ.ಅವರು ಕಳ್ಳರು,ಸುಳ್ಳರು,ದುಡ್ಡಿಗಾಗಿ ಏನು ಮಾಡುವಂತವರು ಎಂಬ ಮನೋಭಾವನೆ ಹೆಚ್ಚಿನವರಲ್ಲಿ ಇದೆ.ಬಡತನ ನಮ್ಮ ಪೂರ್ವಜನ್ಮಗಳ ಪಾಪ ಎಂದು ಬಹುತೇಕ ಜನರು ನಂಬುತ್ತಾರೆ.ಆದರೆ ಆರ್ಥಿಕವಾಗಿ ಬಡವನಾಗಿರುವವನಿಗೂ ಉತ್ತಮ ವಿದ್ಯಾ ಫಲ,ಅಥವಾ ಇನ್ಯಾವುದೋ ಕ್ಷೇತ್ರದಲ್ಲಿ ಚಾತುರ್ಯತೆ,ಸಮಾಜ ಗುರುತಿಸುವ ಕಾರ್ಯ ಮಾಡುವ ಕೌಶಲ್ಯತೆಯನ್ನು ದೇವರು ಕರುಣಿಸಿರುತ್ತಾನೆ ಎಂಬುದೂ ಸತ್ಯ.ಅದಕ್ಕಾಗಿಯೇ ನಮ್ಮೆದುರಿಗೆ ಇದ್ದ ಬಡವ ಒಂದು ದಿನ ನಮಗಿಂತ ಶ್ರೇಷ್ಠ ಸ್ಥಾನವನ್ನು ಸಮಾಜದಲ್ಲಿ ಗಳಿಸಿಕೊಳ್ಳಬಹುದು.ಹಾಗಾಗಿ ಬಡವರನ್ನು ತಿರಸ್ಕರಿಸುವುದು ಬಿಟ್ಟು ಅವರಿಗೆ ಸಹಾಯ ಮಾಡುವ ಮನೋಧರ್ಮವನ್ನು ನಾವು ಬೆಳೆಸಿಕೊಳ್ಳಬೇಕು.
ನನ್ನ ಪ್ರಕಾರ ಬಡತನ ಶಾಪವಲ್ಲ,ಪಾಪದ ಫಲವೂ ಅಲ್ಲ.ಕೆಲವೊಮ್ಮೆ ವ್ಯಕ್ತಿ ಆತ್ಮ ತತ್ವಕ್ಕೆ ಹತ್ತಿರವಾಗುತ್ತಾ ಹೋದಂತೆ ಅವನ ಬೌತಿಕ ಅವಶ್ಯಕತೆ,ಸಂಗ್ರಹ ಬುದ್ಧಿಗಳೂ ಕಡಿಮೆಯಾಗುವುದರಿಂದ ಆತ ಹೊರನೋಟಕ್ಕೆ ಬಡವನಂತೆ ತೋರಿದರೂ ಅವನ ಆತ್ಮ ಶ್ರೀಮಂತರಿಗಿಂತಲೂ ಮಿಗಿಲಾಗಿರುತ್ತದೆ. ಪ್ರಾಮಾಣಿಕತೆ,ಸತ್ಯಸಂಧತೆ,ಪರರ ಭಾವವನ್ನು ಅರ್ಥ ಮಾಡಿಕೊಳ್ಳುವ ಸ್ವಭಾವ,ಪ್ರೀತಿ,ವಿಶ್ವಾಸ,ಇತ್ಯಾದಿ ಸದ್ಗುಣಗಳು ಬಡವ,ಸಿರಿವಂತ ಎಂಬ ವಿಚಾರವನ್ನು ಅವಲಂಬಿತವಾಗಿಲ್ಲ ಎಂಬುದನ್ನು ನಾವು ತಿಳಿದು ಕೊಂಡಿರಬೇಕು.ಕೆಲ ಮಾನವೀಯ ಜನರು ಹಬ್ಬ ಹರಿದಿನ, ತಮ್ಮ ಮಕ್ಕಳ ಹುಟ್ಟುಹಬ್ಬದ ದಿನ,ಕೆಲವೊಂದು ವಿಶೇಷ ಸಂದರ್ಭಗಳಲ್ಲಿ ಬಡ ಜನರಿಗೆ,ಆಶ್ರಮಗಳಿಗೆ ಹೋಗಿ ದಾನ,ಸೇವೆ ಮಾಡುವುದನ್ನು ನಾವು ನೋಡಿದ್ದೇವೆ,ಈ ರೀತಿ ಸೇವೆ ಮಾಡುವ ಒಂದು ಸಮಾಜವಿದ್ದರೆ ಅದು ಹಿಂದೂ ಸಮಾಜ,ದೇಶವಿದ್ದರೆ ಅದು ಭಾರತ ದೇಶ ಎಂದರೂ ತಪ್ಪಲ್ಲ.ಅನಾಥರಿಗೆ,ನಿರ್ಗತಿಕರಿಗೆ ದಾನ, ಧರ್ಮ,ಸಹಾಯ ಮಾಡಿದಾಗ ಸಿಗುವ ಪುಣ್ಯ ಬೇರೆಲ್ಲಿಂದಲೂ ಬರಲಾರದು.ಈ ಪುಣ್ಯದ ಕಲ್ಪನೆ ಎಲ್ಲಿಯವರೆಗೆ ಇರುತ್ತದೆಯೋ ಅಲ್ಲಿಯವರೆಗೆ ಜನ ಭಿಕ್ಷುಕರನ್ನು ಚೆನ್ನಾಗಿ ನೋಡಿಕೊಳ್ಳಬಹುದು.ಈ ಭಾವ ಇಲ್ಲದಿದ್ದಲ್ಲಿ ವಿದೇಶಗಳಲ್ಲಿರುವಂತೆ ಭಿಕ್ಷುಕರ ಹೊಣೆಯನ್ನು ಸರ್ಕಾರವೇ ಹೊರಬೇಕಾಗುತ್ತದೆ.ಯಾರೂ ಸಹ ಭಿಕ್ಷಾಟನೆಗೆ ಇಳಿಯದಂತೆ ಅವರಿಗೆ,ಉದ್ಯೋಗ,ಸಾಮಾಜಿಕ ಭದ್ರತೆ ಇವುಗಳನ್ನು ಕಲ್ಪಿಸಿದಾಗ ಭಿಕ್ಷುಕರೇ ಇಲ್ಲದಂತಾಗುತ್ತದೆ.ಆದರೆ ಈ ಸ್ಥಿತಿ ಬರುವುದು ಅಪರೂಪ.ಆದರೆ ದುಡಿಯಲು ಸೋಮಾರಿಯಾಗಿ ಭಿಕ್ಷುಕರಂತೆ ವರ್ತಿಸುವವರನ್ನು ಸರಿ ದಾರಿಗೆ ತರಲು ಪ್ರಯತ್ನಿಸುವುದು ನಮ್ಮೆಲ್ಲರ ಕರ್ತವ್ಯ.ಸಮಾಜದ ಕೆಲವು ಶ್ರೀಮಂತ ಜನರು,ಯವ್ವನದ ಹುರುಪಿನಲ್ಲಿರುವ ಯುವ ವಿದ್ಯಾರ್ಥಿಗಳು ಭಿಕ್ಷುಕರನ್ನು ಅತ್ಯಂತ ಕೇವಲವಾಗಿ ಕಾಣುತ್ತಾರೆ,ಅವರ ಅಸಹಾಯಕತೆಯನ್ನು ಕಂಡೂ ಕಾಣದಂತೆ,ಇವು ನಮಗೆ ಸಂಬಂಧ ಪಟ್ಟದ್ದು ಅಲ್ಲ ಎನ್ನುವಂತೆ ವರ್ತಿಸಿ ಮುನ್ನಡೆಯುತ್ತಾರೆ,ಇದು ಮನುಷ್ಯತ್ವದ ಕರಿಛಾಯೆ ಎನ್ನಬಹುದು.ಯವ್ವನ ,ಸಿರಿವಂತಿಕೆ,ಸೌಂದರ್ಯ ಇವೆಲ್ಲ ಶಾಶ್ವತವಾಗಿ ಇರುವಂತದ್ದಲ್ಲ.ಅತ್ಯಂತ ಸಿರಿವಂತನಿಗೂ ಬೇಡುವ ಪರಿಸ್ಥಿತಿ ಬಂದುದನ್ನು ನಾವು ಈ ಸಮಾಜದಲ್ಲಿ ಕಂಡಿದ್ದೇವೆ.ಹಾಗಿರುವಾಗ ಯಾರೂ ಯಾರನ್ನೂ ತಿರಸ್ಕರಿವುದು ಮಾನವೀಯತೆಯ ಲಕ್ಷಣವಲ್ಲ.
ನಮ್ಮ ಸಮಾಜದಲ್ಲಿ ಭಿಕ್ಷೆ ಬೇಡುವ ಬೀದಿ ಮಕ್ಕಳೂ ಬಹಳಷ್ಟಿದ್ದಾರೆ.ಯಾವ ಮಕ್ಕಳಿಗೆ ಹೆತ್ತವರ ,ಬಂಧು-ಬಾಂಧವರ ರಕ್ಷಣೆ ಇಲ್ಲವೋ ಅವರೇ ಮುಂದೆ ಬೀದಿ ಮಕ್ಕಳಾಗಿ ನಮ್ಮ ಕಣ್ಣೆದುರಿಗೆ ಭಿಕ್ಷೆ ಬೇಡುತ್ತಾರೆ.ಈ ಮಕ್ಕಳ ಅಸಹಾಯಕತೆ ಬಹಳಷ್ಟು ನೋವು ತರುವಂತದ್ದು.ಈ ಮಕ್ಕಳು ಪ್ರಾಣಿಗಳಂತೆಯೇ ಬದುಕುತ್ತಾರೆ,ಚಿಂದಿ ,ಕಸ ಆಯುತ್ತಾರೆ,ಭಿಕ್ಷೆ ಬೇಡುತ್ತಾರೆ.ಸರಿ ದಾರಿ ತೋರಿಸುವವರಿಲ್ಲದ ಕಾರಣ ಮುಂದೆ ನಾನಾ ದುಶ್ಚಟಗಳಿಗೆ ಸಿಲುಕಿ ಬದುಕನ್ನೇ ನಾಶ ಮಾಡಿಕೊಳ್ಳುತ್ತಾರೆ.ಇಂತಹ ಮಕ್ಕಳ ಬಗ್ಗೆ ಅಸಡ್ಡೆ ತೋರಿಸದೆ ಅವರನ್ನು ಯಾವುದಾದರೂ ಆಶ್ರಮಗಳಿಗೆ ಸೇರಿಸಿ ಆ ಮಕ್ಕಳಿಗೆ ನೆಲೆ,ತಿನ್ನಲು ಊಟ,ಮುಂದೆ ವಿದ್ಯಾಭ್ಯಾಸ ಕೊಡಿಸಿದರೆ ಮುಂದೆ ಆ ಮಕ್ಕಳೂ ನಮ್ಮಂತೆಯೇ ಸಮಾಜದ ನಾಗರಿಕ ಪ್ರಜೆಯಾಗಬಹುದು.ಇದಕ್ಕೆ ಬೇಕಾಗಿರುವುದು ಕರುಣೆಯ ಕಣ್ಣುಗಳು ಮಾತ್ರ. ಬಿತ್ತಿದಂತೆ ಬೆಳೆ,ನಡೆದಂತೆ ಮರ ಎಂಬಂತೆ ಈ ಮಕ್ಕಳಿಗೆ ಸೂಕ್ತ ಉಪಚಾರ ಕೊಟ್ಟಾಗ ಇವರ ಭವಿಷ್ಯ ಸುಧಾರಬಹುದು.ಮಾನವ ಪ್ರೀತಿಯನ್ನು ಕಾಣದ ಈ ಮಕ್ಕಳನ್ನು ಸರಿ ದಾರಿಗೆ ತರುವುದು ಕಷ್ಟ ಎಂದೆನಿಸಿದರೂ ಸಮಾಜ ಈ ಕೆಲಸ ಮಾಡಲು ಸಾಧ್ಯ.ಬೀದಿ ಮಗುವೊಂದು ಕಂಡಾಗ ಅದನ್ನು ಸರಿಸಿ ಮುಂದೆ ಹೋಗುವುದರ ಬದಲು ಸೂಕ್ತ ಶಿಶು ನಿವಾಸಕ್ಕೆ,ಅಥವಾ ಅನಾಥಾಶ್ರಮಕ್ಕೆ ಸೇರಿಸಬೇಕು.ಸೇರಿಸಿ ಬಿಟ್ಟು ಬಿಟ್ಟರೆ ಸಾಲದು ಆ ಮಕ್ಕಳ ಊಟ,ಬಟ್ಟೆ ,ವಿದ್ಯಾಭ್ಯಾಸದ ಸ್ವಲ್ಪ ಖರ್ಚನ್ನಾದರೂ ಕೊಟ್ಟು ನಮ್ಮ ಮಾನವೀಯತೆ ಮೆರೆಯಬೇಕು.ಅನಾಥಾಶ್ರಮ ಸೇರಿ ಮುಂದೆ ಸಮಾಜದಲ್ಲಿ ಗಟ್ಟಿ ನೆಲೆ ಕಂಡುಕೊಂಡ ಮಕ್ಕಳ ಸಾಕಷ್ಟು ಉದಾಹರಣೆಗಳೂ ನಮ್ಮಲ್ಲಿ ಇವೆ.ಈ ನಿಟ್ಟಿನಲ್ಲಿ ನಮ್ಮ ಭಾರತದಲ್ಲಿ ಹತ್ತು ಹಲವು ಸಾಮಾಜಿಕ ಸಂಸ್ಥೆಗಳು ಕಾರ್ಯ ನಿರತವಾಗಿವೆ ಎಂಬುದು ಬಹಳ ಸಂತೋಷದ ವಿಚಾರ.
ಭಿಕ್ಷುಕರಾಗಲಿ,ಬೀದಿ ಮಕ್ಕಳಾಗಲಿ ನಮ್ಮ ಕಣ್ಣಿಗೆ ಕಂಡಾಗ ನಮಗೂ ಇವರಿಗೂ ಏನೂ ಸಂಬಂಧವಿಲ್ಲ ಎಂಬಂತೆ ಮುಂದೆ ಸರಿಯುವ ಬದಲು,ಅವರನ್ನು ನಮ್ಮಂತೆಯೇ ಸಮಾಜದ ಪ್ರಜೆಗಳನ್ನಾಗಿ ಮಾಡುವ ಕಿಂಚಿತ್ ಜವಾಬ್ದಾರಿಯನ್ನು ದೇಶದ ಪ್ರತಿಯೊಬ್ಬ ನಾಗರೀಕನೂ ತೆಗೆದುಕೊಂಡರೆ ದೇಶದಲ್ಲಿ ಮುಂದೊಂದು ದಿನ ಭಿಕ್ಷುಕರಾಗಲಿ,ಬೀದಿ ಮಕ್ಕಳಾಗಲಿ ಕಂಡು ಬರಲಾರರು ಎಂಬುದು ನನ್ನ ನಿಲುವು.
ಅತೀ ಬಡವ ಭಿಕ್ಷಾಟನೆ ಮಾಡುತ್ತಾನೆ ,ಭಿಕ್ಷಾಟನೆ ಪಾಪ ಎಂಬುದು ಪಾಶ್ಚಾತ್ಯರ ಅಭಿಪ್ರಾಯ. ಅನೇಕರು ದೈನ್ಯರಾಗಿ ಬೇಡುವುದನ್ನು ನಾವು ಕಾಣುತ್ತೇವೆ. ಅವರ ಆ ಸ್ಥಿತಿಯನ್ನು ನೋಡಿದಾಗ ಅದು ಪಾಪವೆಂದು ನಮಗೂ ಅನ್ನಿಸುತ್ತದೆ.
ಆದರೆ ದೇವರೂ ಭಿಕ್ಷಾಟನೆ ಮಾಡಿದ ಎಂಬ ಕಲ್ಪನೆಯಿದೆ. ಶಿವನಿಗೆ ಭಿಕ್ಷಾಟನ ಮೂರ್ತಿ ಎಂಬ ಹೆಸರೂ ಇದೆಯಂತೆ. ವಿದ್ಯಾರ್ಥಿಗಳು ಎಲ್ಲಿದ್ದರೂ ಭಿಕ್ಷುಕರೇ ಆಗಿದ್ದ ದೇಶವಿದು.ಆದ್ದರಿಂದ ಭಿಕ್ಷಾಟನೆ ಪಾಪವಲ್ಲ,ಹೀಗಿದ್ದರೂ ಭಿಕ್ಷುಕರೇ ಇಲ್ಲದ ಸಮಾಜವಿಲ್ಲ. “ಬೇಕು ಎನ್ನುವವ ಭಿಕ್ಷುಕ,ಸಾಕು ಎನ್ನುವವ ಶ್ರೀಮಂತ “ಎನ್ನುವ ಋಷಿವಾಕ್ಯವನ್ನು ನಾವಿಲ್ಲಿ ಗಮನಿಸಬೇಕು.
ಭಾರತದಲ್ಲಿ 4 ಲಕ್ಷಕ್ಕೂ ಹೆಚ್ಚು ಭಿಕ್ಷುಕರು ಇದ್ದಾರೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಸಚಿವ ಥಾವರ್ ಚಂದ್ ಗೆಹ್ಲೋಟ್ ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ.11-ಮಾರ್ಚ್-2021ರ ಹೊತ್ತಿಗೆ 18 ಮಿಲಿಯನ್ ಮಕ್ಕಳು ಭಾರತದ ಬೀದಿಗಳಲ್ಲಿ ಕೆಲಸ ಮಾಡುತ್ತಿದ್ದರೆ,ಅವರಲ್ಲಿ ಕೇವಲ 5-20 ಪ್ರತಿಶತದಷ್ಟು ಜನರು ನಿಜವಾಗಿಯೂ ನಿರಾಶ್ರಿತರಾಗಿದ್ದಾರೆ ಮತ್ತು ಅವರ ಕುಟುಂಬಗಳಿಂದ ಸಂಪರ್ಕ ಕಡಿತಗೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ.
ಬೀದಿಗಳಲ್ಲಿ ಅಪರಿಚಿತರಿಂದ ಸಹಾಯಕ್ಕಾಗಿ ಬೇಡಿಕೊಳ್ಳುವ ಅನಾಥ ಅಥವಾ ನಿರ್ಗತಿಕ ಮಗುವನ್ನು ನೀವು ಭೇಟಿಯಾದಾಗ ನಿಮಗೆ ಏನನಿಸುತ್ತದೆ? ದಯೆ ಮತ್ತು ಸಹಾನುಭೂತಿ ನಿಮ್ಮ ಹೃದಯವನ್ನು ತುಂಬುತ್ತದೆ ಎಂದು ನಾನು ಊಹಿಸಬಲ್ಲೆ.
ಹಾಗಾದರೆ ಇಂತಹ ಮಕ್ಕಳಿಗೆ ನಾವು ಯಾವ ರೀತಿಯ ಸಹಾಯ ಮಾಡಬಹುದು ?
ಇಂತವರನ್ನು ತಲುಪಲು ನಾವು ನಾವು ಸ್ವಯಂಸೇವಕ ಗುಂಪಿಗೆ ಸೇರಬೇಕಾದ ಅಗತ್ಯವಿಲ್ಲ.ಅನಾಥರಾಗಿರುವ ಬೀದಿ ಮಕ್ಕಳನ್ನು,ಭಿಕ್ಷುಕರನ್ನು ಸ್ಥಳೀಯ ಅನಾಥಾಶ್ರಮಗಳಿಗೆ ಸೇರಿಸಿ,ಮುಂದೆ ಅವರ ಜೀವನಾಂಶಕ್ಕಾಗಿ,ವಿದ್ಯಾಭ್ಯಾಸಕ್ಕಾಗಿ ಕಿಂಚಿತ್ ಸಹಾಯ ಮಾಡುವ ಮೂಲಕ ನಾವು ನಮ್ಮ ಕರುಣೆಯ ದೃಷ್ಟಿಯನ್ನು ಅವರ ಮೇಲೆ ಹರಿಸಬಹುದು. ಹಾಗೆಯೇ ಅನಾಥಾಶ್ರಮಗಳಿಗೆ ಭೇಟಿಯಾಗಿ ಅವರೊಂದಿಗೆ ಸಣ್ಣಪುಟ್ಟ ಕಾರ್ಯಕ್ರಮಗಳನ್ನು ಆಯೋಜಿಸಿ,ತಾವು ಕೂಡಾ ಈ ಸಮಾಜದ ಅಂಗವಾಗಿ ಇದ್ದೇವೆ ಎಂಬ ಭಾವನೆಯನ್ನು ಅವರಲ್ಲಿ ತರಿಸಿ,ಅವರಲ್ಲಿದ್ದ ಪ್ರತಿಭೆಯನ್ನು ಹೊರ ತೆಗೆದು ಈ ಸಮಾಜಕ್ಕೆ ಪರಿಚಯಿಸುವ ಮಹತ್ತರ ಕಾರ್ಯವನ್ನು ಕೂಡ ಕೈಗೊಳ್ಳಬಹುದು.
ಅನಾಥಾಶ್ರಮ ಸೇರಿದ ಮಕ್ಕಳಿಗೆ ಊಟ ತಿಂಡಿಯ ಜೊತೆಗೆ ಉಡಲು ಬಟ್ಟೆ ,ಓದಲು ಪುಸ್ತಕ ಇತ್ಯಾದಿಗಳ ಅವಶ್ಯಕತೆಯಿರುತ್ತದೆ.ನಮಗೆ ಹೊಸ ಬಟ್ಟೆಗಳನ್ನು ತೆಗೆಸಿಕೊಡುವ ಸಾಮರ್ಥ್ಯವಿಲ್ಲದಿದ್ದರೆ,ನಮ್ಮ ಮನೆ ಮಂದಿಯ ಮಕ್ಕಳ,ಹೆಂಗಸರ,ಗಂಡಸರ ಉಡುಪುಗಳನ್ನು ಶುಭ್ರವಾಗಿ ತೊಳೆದು ಅನಾಥಾಶ್ರಮದ ಮಕ್ಕಳಿಗೆ,ಇತರ ಸದಸ್ಯರಿಗೆ ದಾನವಾಗಿ ಕೊಡುವುದೂ ಒಂದು ಒಳ್ಳೆಯ ವಿಚಾರವೇ ಆಗಿದೆ. ಆ ಹಳೆಯ ಬಟ್ಟೆ ತೊಟ್ಟುಕೊಂಡೇ ವಿದ್ಯಾಭ್ಯಾಸ ಮಾಡಿದ ಮಗು ಮುಂದೆ ಒಂದು ಬಟ್ಟೆಯ ಕಾರ್ಖಾನೆ ಮಾಡುವಷ್ಟೇ ಸಶಕ್ತನಾಗಿ ಮುಂದುವರೆದರೂ ಮುಂದುವರೆಯಬಹುದು.ಆಗ ಆ ಮಗುವು ಮಾಡುವ ಕೃತಜ್ಞತೆಯ ಪ್ರಾರ್ಥನೆಯ ಫಲ, ಬಟ್ಟೆ ದಾನ ಮಡಿದ ನಮಗೂ ಸಿಗಬಹುದು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.ದೇವರು ಸರ್ವಾoತರ್ಯಾಮಿ.ನಾವು ಕೊಟ್ಟ ಕಿಂಚಿತ್ ದಾನವೂ ಆತನ ಕಣ್ಣಿಗೆ ಬ್ರಹದಾಕರವಾಗಿ ಕಂಡು ನಮ್ಮನ್ನು ಚತುರ್ಬಾಹುಗಳಿಂದ ಆಶೀರ್ವದಿಸುತ್ತಾನೆ.ಹಾಗಾಗಿ ಬಡವ-ಶ್ರೀಮಂತ ಎನ್ನುವ ಅಹಂಕಾರ,ಮದವನ್ನು ಬಿಟ್ಟು ಭೂಮಿಗೆ ತಲೆಬಾಗಿ ನಡೆಯಬೇಕು.ಆಗ ಯಾವ ವಿಚಾರದಲ್ಲೂ ಎಡವುವ ಪ್ರಮೇಯ ಬರುವುದಿಲ್ಲ.ಇಂದು ನಾವು ಶ್ರೀಮಂತರಾದರೆ ಮುಂದಿನ ಜನುಮದಲ್ಲಿ ಭಿಕ್ಷುಕನಾಗಿಯೂ ಹುಟ್ಟಿ ಬರಬಹುದು.ಹಾಗಾಗಿ ಕಣ್ಣೆದುರಿಗೆ ಬಂದ ಭಿಕ್ಷುಕನನ್ನು ಒದ್ದು ಓಡಿಸದೆ ಅವನ ಭಿಕ್ಷಾ ಪಾತ್ರೆಗೊಂದಿಷ್ಟು ಅನ್ನ ಹಾಕಿ ಆತನ ಹಸಿವನ್ನು ನೀಗುವುದೇ ನಾವು ಪರಮಾತ್ಮನನ್ನು ಒಲಿಸಿಕೊಳ್ಳುವ ಸುಲಭ ಮಾರ್ಗ.
ಯಾವುದೇ ಒಂದು ಬೀದಿಯ ಮಗು ನಮ್ಮ ಕಣ್ಣೆದುರಿಗೆ ಬಂದಾಗ ಅದನ್ನು ಹೀನಾಯವಾಗಿ ನೋಡುವ ಬದಲು ನಮ್ಮ ಮಗುವನ್ನು ಆ ಮಗುವಿನ ಜಾಗದಲ್ಲಿಟ್ಟಾಗ ಆಗುವ ನೋವು,ಹತಾಶೆಯನ್ನು ಕಲ್ಪಿಸಿಕೊಂಡು ,ಹಾಗೆ ಆಗದಿದ್ದುದಕೆ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಾ,ನಮ್ಮ ಮಗುವಿನ ಪ್ರತಿರೂಪವನ್ನು ಆ ಪುಟ್ಟ ಮಕ್ಕಳಲ್ಲಿ ಕಾಣುತ್ತಾ,ಅವುಗಳ ಭವಿಷ್ಯ ರೂಪಿಸುವ ಕಿಂಚಿತ್ ಜವಾಬ್ದಾರಿಯನ್ನು ಹೊರುವ ಮೂಲಕ ನಾವು ಈ ಸಮಾಜದ ಸ್ವಯಂ ಸೇವಕರಾಗಬಹುದು,ಆ ಮಕ್ಕಳೊಂದಿಗೆ ಮಾತನಾಡಿ ಅವರಿಗೆ ಯಾವ ವಿಷಯಗಳಲ್ಲಿ,ಚಟುವಟಿಕೆಗಳಲ್ಲಿ ಆಸಕ್ತಿಯಿದೆ ಎಂಬುದನ್ನು ಅರಿತುಕೊಂಡು ಆ ಕ್ಷೇತ್ರದಲ್ಲಿ ಮುಂದುವರೆಯಲು ಸಹಾಯ ಮಾಡುವ ಮನಸ್ಥಿತಿ ನಮ್ಮಲ್ಲಿದ್ದರೆ ನಾವು ಈ ಜಗತ್ತಿನ ಶ್ರೇಷ್ಠ ವ್ಯಕ್ತಿಗಳು ಎಂಬುವುದರಲ್ಲಿ ಸಂಶಯವಿಲ್ಲ.ಕಳೆದು ಹೋದ ಕೊರೋನಾ ದಿನಗಳಲ್ಲಿ ತಮ್ಮವರನ್ನು ಸೇರಲಾರದೆ ಪರಿತಪಿಸುತ್ತಿದ್ದ ದಯನೀಯ ಸಂದರ್ಭಗಳಲ್ಲಿ ಹಿಂದಿ ಚಲನಚಿತ್ರ ನಟ ಸೋನು ಸೂದ್ ಅವರು ಮಾಡಿದ ಸಾಮಾಜಿಕ ಸೇವೆ ಇಡೀ ವಿಶ್ವಕ್ಕೇ ಮಾದರಿಯಾಗುವಂತವು.ಭಾರತದ ಪ್ರತೀ ಗಲ್ಲಿ ಗಲ್ಲಿಗಳಲ್ಲಿ ಇಂತಹ ಒಬ್ಬ ಸೋನು ಸೂದ್ ನಂತವರು ಇದ್ದಿದ್ದರೆ ಇಂದು ಒಂದೇ ಒಂದು ಬೀದಿ ಮಗುವಾಗಲಿ,ಭಿಕ್ಷುಕನಾಗಲಿ ನಮ್ಮ ದೇಶದಲ್ಲಿ ಇದ್ದಿರಲಾರರು ಎಂಬುದಂತೂ ಅಕ್ಷರಃ ಸತ್ಯ.
ನಮ್ಮ ದೇಶದಲ್ಲಿ,ಸಮಾಜದಲ್ಲಿ ಇತರೆ ದೇಶಗಳಿಗಿಂತ ಹೆಚ್ಚಾದ ಸಮಾಜಪರ ಕಾರ್ಯಕ್ರಮಗಳು ನಡೆಯುತ್ತಿವೆ ನಿಜ. ಆದರೆ ಸಮಾಜದ ಒಂದು ವರ್ಗ ದೇಶದ ಪ್ರಗತಿಯನ್ನು ಬಯಸಿದರೆ ,ಇನ್ನೊಂದು ವರ್ಗ ದೇಶದ ಉನ್ನತಿಯಲ್ಲಿ ಅಸಂತುಷ್ಟವಾಗಿರುವುದೇ ನಮ್ಮ ಈ ದೇಶದ ಸಾಮಾಜಿಕ ,ಆರ್ಥಿಕ ಅಸಮತೋಲನಕ್ಕೆ ಕಾರಣವಾಗಿದೆ. ಅದೇನೇ ಇದ್ದರೂ ದೇಶದ ಪ್ರಗತಿಯನ್ನು ಬಯಸುವ ಪ್ರತೀ ನಾಗರೀಕನೂ ಮಾನವೀಯ ನೆಲೆಯಲ್ಲಿ ಬಡಜನರ .ಅಸಹಾಯಕರ,ಅನಾಥರ ಏಳಿಗೆಗಾಗಿ ಹೆಗಲು ಕೊಡುವ ಮೂಲಕ ಮುಂದೊಂದು ದಿನ ನಮ್ಮ ದೇಶ ಭಿಕ್ಷುಕರಹಿತ ದೇಶವಾಗಲು ಸಹಾಯಕವಾಗಬಹುದು .