
ವಿವಶ…. ಈ ಧಾರಾವಾಹಿಯ ಈ ಹಿಂದಿನ ಸಂಚಿಕೆಗಳ ಲಿಂಕ್ ಕೆಳಗೆ ಇದೆ…
💢 ಧಾರಾವಾಹಿ ಭಾಗ – 1
https://mumbainewskannada.blogspot.com/2023/10/aaaaar-aa-aavaau-aanvaua-eegaqaa.html
💢 ಧಾರಾವಾಹಿ ಭಾಗ – 2
https://mumbainewskannada.blogspot.com/2023/10/blog-post_181.html
💢 ಧಾರಾವಾಹಿ ಭಾಗ – 3
http://mumbainewskannada.blogspot.com/2023/10/blog-post_425.html
⭕ ಧಾರವಾಹಿ ಭಾಗ – 4
https://mumbainewskannada.blogspot.com/2023/10/blog-post_636.html
⭕ ಧಾರವಾಹಿ ಭಾಗ – 5
⭕ ಧಾರವಾಹಿ ಭಾಗ – 6
https://mumbainewskannada.com/2023/11/17/vivasha/
⭕ ಧಾರವಾಹಿ ಭಾಗ – 7
https://mumbainewskannada.com/wp-admin/post.php?post=1687&action=edit
⭕ ಧಾರವಾಹಿ ಭಾಗ – 8
https://mumbainewskannada.com/2023/11/25/vivasha8/
⭕ ಧಾರವಾಹಿ ಭಾಗ – 9
https://mumbainewskannada.com/2023/12/9/vivasha9/
ಧಾರವಾಹಿ 10
ಅಂದು ರಾತ್ರಿ ಮಾರಿಪೂಜೆಯ ಗೌಜಿಗದ್ದಲ ಮುಗಿದ ಬಳಿಕ ತೋಮ, ಶೀನುನಾಯ್ಕನೊಂದಿಗೆ ತನ್ನ ಹೋತದ ಮುಂಡವನ್ನು ಹೊತ್ತುಕೊಂಡು ಶೆಡ್ಡಿಗೆ ಮರಳಿದ. ಶೀನುನಾಯ್ಕನ ತಮ್ಮನ ಮಗ ನಾಗೇಶನ ಸಹಾಯದಿಂದ ಹೋತದ ಚರ್ಮವನ್ನು ಸುಲಿದು ಹದವಾಗಿ ಕೊಚ್ಚಿ ಮಾಂಸ ಮಾಡಿದ. ಸುಮಾರಾದ ಒಂದು ಪಾಲನ್ನು ತಾನಿಟ್ಟುಕೊಂಡು ಒಂದಿಷ್ಟನ್ನು ಶೀನುನಾಯ್ಕನಿಗೆ ಕೊಟ್ಟ. ಉಳಿದುದನ್ನು ಶೆಟ್ಟರ ಬಂಗಲೆಗೆ ಹೊತ್ತೊಯ್ದು ಕೊಡುವ ಹೊತ್ತಿಗೆ ಬೆಳಗ್ಗಿನ ಜಾವ ಮೂರು ಗಂಟೆ ಸಮೀಪಿಸಿತ್ತು. ತೋಮ ಭಾರಿಸಿದ ಕರೆಗಂಟೆಯ ಸದ್ದಿಗೆ ಶೆಟ್ಟರ ಮನೆಯಾಳು, ಘಟ್ಟದಾಚೆಯ ಕಮಲಿ ಎದ್ದು ಬಾಯಾಕಳಿಸುತ್ತ ಹೊರಗೆ ಬಂದಳು. ಆದರೆ ತೋಮನನ್ನು ಕಂಡವಳು ನಿದ್ದೆಗೆಡಿಸಿದ ಅಸಹನೆಯಿಂದ, ‘ಏನೂ…!’ ಎಂಬoತೆ ದುರುಗುಟ್ಟಿದಳು. ಆಗ ಅವಳಿಗೆ ಅಡ್ಡ ವಾಸನೆ ಬೀರುತ್ತಿದ್ದ ಮಾಂಸದ ಮೂಟೆಯೊಂದು ಎದುರಿಗೆ ಕಂಡಿತು. ‘ಬೆಳಗಾದ ನಂತರ ತಂದಿದ್ದರೆ ಏನಾಗುತ್ತಿತ್ತು ನಿನಗೆ?’ ಎಂದು ಸಿಡುಕಿದವಳು, ‘ಹ್ಞೂಂ ಒಳಗೆ ಒಯ್ದಿಟ್ಟು ಹೋಗು!’ ಎಂದು ಯಜಮಾನ್ತಿಯಂತೆ ಆಜ್ಞಾಪಿಸಿದಳು. ತೋಮನಿಗೆ ತಟ್ಟನೆ ರೇಗಿತು. ‘ಹೇ, ಹೋಗನಾ ಆಚೆಗೆ…! ನೀನಿಲ್ಲಿ ಯಾಕಿರುವುದು, ಮಣ್ಣು ತಿನ್ನಲಿಕ್ಕಾ…? ಬೇಕಿದ್ದರೆ ಇಡು. ಇಲ್ಲದಿದ್ದರೆ ಬಿಸಾಡು!’ ಎಂದು ಸಿಡುಕಿದವನು ರಪ್ಪನೆ ಹಿಂದಿರುಗಿ ನಡೆದ. ಕಮಲಿಗೆ ಕೋಪ ಒತ್ತರಿಸಿ ಬಂತು. ಮತ್ತೇನೋ ಸಿಡುಕಿದಳು. ಆದರೆ ತೋಮ ಅದನ್ನು ಲೆಕ್ಕಿಸದೆ ಮುಂದೆ ಸಾಗಿದ.
‘ಮಾರಿ ಪೂಜೆಯ ದಿನವೊಂದು ಯಾವಾಗ ಬರುತ್ತದೋ…?’ ಎಂಬ ಆತುರದಿಂದ ದಿನಗಳನ್ನು ಎಣಿಸುತ್ತಿದ್ದ ತೋಮನನ್ನು ಪ್ರೇಮಾಳ ಮನೆಯು ತೀವ್ರವಾಗಿ ಸೆಳೆಯುತ್ತಿತ್ತು. ಆದ್ದರಿಂದ, ‘ಒಮ್ಮೆ ಹೋಗಿ ಅವಳನ್ನು ನೋಡಿ, ಮಾತಾಡಿಸಿಕೊಂಡು ಬಂದರೆ ಹೇಗೆ…?’ ಎಂದೂ ಕೆಲವು ಬಾರಿ ಯೋಚಿಸಿದ್ದ. ಆದರೆ, ‘ಯಾವುದಕ್ಕೂ ಗಡಿಬಿಡಿ ಮಾಡುವುದು ಬೇಡ. ಇವತ್ತಲ್ಲ ನಾಳೆ ಅವಳು ತನಗೆ ಸಿಕ್ಕಿಯೇ ಸಿಗುತ್ತಾಳೆ. ಸಮಯ ಕೂಡಿ ಬರುವ ತನಕ ಕಾಯುವುದು ಬುದ್ಧಿವಂತರ ಲಕ್ಷಣ!’ ಎಂದು ತನಗೆ ತಾನೇ ಬುದ್ಧಿ ಹೇಳಿಕೊಳ್ಳುತ್ತಿದ್ದ. ಹಾಗಾಗಿ ಇಂದಿನ ದಿನ ಅವಳೇ ಆಹ್ವಾನಿಸಿದ ಸುಸಂದರ್ಭ ಒದಗಿ ಬಂದಿತ್ತು. ಅವಳನ್ನು ನೋಡುವ ಆಸೆಯಿಂದಲೂ ಮತ್ತು ಅವಳಿಗೆಂದೇ ಪ್ರೀತಿಯಿಂದ ತೆಗೆದಿರಿಸಿದ ಹೋತದ ತೊಡೆಯ ಮೃದುವಾದ ಮಾಂಸವನ್ನು ಅವಳಿಗೆ ಕೊಟ್ಟು ಅವಳ ಮನಸ್ಸನ್ನು ಗೆಲ್ಲುವ ತುಡಿತದಲ್ಲಿದ್ದ. ಅದೇ ಯೋಚನೆಯಿಂದ ಮಾಂಸವನ್ನು ಬಾಳೆಯೆಲೆಯೊಂದರಲ್ಲಿ ಕಟ್ಟಿಕೊಂಡು ಸುಮಾರು ಮೂರು ಫರ್ಲಾಂಗು ದೂರದ ಅರಕಲಬೆಟ್ಟುವಿನ ಅವಳ ಮನೆಯ ದಾರಿ ಹಿಡಿದ. ಮಣ್ಣಿನ ರಸ್ತೆಯುದ್ದಕ್ಕೂ ಮಸುಕು ಮಸುಕಾದ ತಿಂಗಳ ಬೆಳಕು ಹರಡಿತ್ತು. ತೋಮ ಬೀಡಿಯೊಂದನ್ನು ಹೊತ್ತಿಸಿಕೊಂಡು ನಿಧಾನವಾಗಿ ಸೇದುತ್ತ ಹೆಜ್ಜೆ ಹಾಕಿದವನು ಸ್ವಲ್ಪ ಹೊತ್ತಿನಲ್ಲಿ ಅಂಗರನ ಮನೆಯ ವಠಾರದತ್ತ ಬಂದ. ಹಲವು ಬಗೆಯ ಸಮೃದ್ಧ ಫಸಲು ನೀಡುವ ಮರಗಳಿಂದ ತುಂಬಿದ್ದ ಅಂಗರನ ತೋಟವು ಪುಟ್ಟ ಕಾಡಿನಂತೆ ತೋರುತ್ತಿತ್ತು.

ತೋಮ, ಇನ್ನೇನು ತೋಟದ ತೊಡಮೆಯನ್ನು ದಾಟುವುದರಲ್ಲಿದ್ದ. ಅಷ್ಟರಲ್ಲಿ ಅಂಗರನ ಮೂರು ಕಾಟು ನಾಯಿಗಳು ತಮ್ಮ ವಲಯವನ್ನು ಅಕ್ರಮವಾಗಿ ಪ್ರವೇಶಿಸಿ, ಬೆಳಗ್ಗಿನ ಜಾವದ ತಮ್ಮ ನಿದ್ರೆಗೆ ಭಂಗ ತಂದoಥ ಮಾನವಜೀವಿಯನ್ನು ಕಚ್ಚಿ ಸಿಗಿದು ಹಾಕುವಷ್ಟು ಆವೇಶದಿಂದ ಕರ್ಕಶವಾಗಿ ಬೊಗಳುತ್ತ ತೋಮನ ಮೇಲೆ ನುಗ್ಗಿ ಬಂದುವು. ಅವುಗಳನ್ನು ಕಂಡ ತೋಮ ಒಂದು ಕ್ಷಣ ಭೀತಿಯಿಂದ ವಿಚಲಿತನಾದ. ಬಳಿಕ ತಟ್ಟನೆ ಚುರುಕಾದವನು ರಪ್ಪನೆ ಬಾಗಿ ಕತ್ತಲಲ್ಲಿ ಏನನ್ನೋ ತಡಕಾಡಿದ. ಕೈಗೆ ಸಿಕ್ಕಿದ್ದ ಕಲ್ಲು ಮಣ್ಣನ್ನು ಒಟ್ಟುಗೂಡಿಸಿ ನಾಯಿಗಳತ್ತ ಬೀಸಿ ಒಗೆಯುತ್ತ ಬೆದರಿಸಿದ. ಅಷ್ಟರಲ್ಲಿ ಅವನ ಕೈಗೊಂದು ಕೊತ್ತಳಿಗೆಯ ತುಂಡು ಸಿಕ್ಕಿತು. ವೀರಾವೇಶದಿಂದ ತನ್ನ ಮೇಲೇರಿ ಬರುತ್ತಿದ್ದ ಗಂಡು ನಾಯಿಯೊಂದರ ಮೇಲೆ ಬೀಸಿ ಹೊಡೆದ. ತೋಮನ ಏಟು ಬಹುಶಃ ಅದರ ಮೂತಿಗೇ ಬಡಿದಿರಬೇಕು. ಅದು ಒಮ್ಮೆಲೇ, ‘ಕೊಂಯಿಕ್, ಕೊಂಯಾವ್ಞಾo…!’ ಎಂದು ಭೂಮಿ, ಆಕಾಶ ಒಂದಾಗುವoತೆ ಅರಚುತ್ತ ಓಡಿ ಹೋಯಿತು. ಅದರ ಬೆನ್ನಿಗೆ ಉಳಿದವು ಕೂಡಾ ಓಟಕಿತ್ತುದು ದೂರದಿಂದ ಅವುಗಳ ಕ್ಷೀಣ ಬೊಗಳುವಿಕೆಯಿಂದಲೇ ಗ್ರಹಿಸಿದ ತೋಮ ಸ್ವಲ್ಪ ಸುಧಾರಿಸಿಕೊಂಡ.
ಆವತ್ತು ಪ್ರೇಮ ಕೂಡಾ ತೋಮನ ನಿರೀಕ್ಷೆಯಲ್ಲಿಯೇ ಇದ್ದಳು. ಹಾಗಾಗಿ ತೋಟದ ಕೊನೆಯಲ್ಲಿ ನಾಯಿಗಳ ರಂಪಾಟ ಕಿವಿಗೆ ಬಿದ್ದ ಕೂಡಲೇ ಹೊರಗ್ಹೋಡಿ ಬಂದಳು. ತೋಮನನ್ನು ಕಂಡವಳ ಮನಸ್ಸು ಮುಂಜಾನೆಯ ಸೂರ್ಯರಶ್ಮಿಗೆ ಅರಳಿದ ಕೆಂದಾವರೆಯoತಾಯಿತು. ಅದರೊಂದಿಗೆ ನಾಯಿಗಳ ಮೇಲೂ ಅಸಹನೆ ಮೂಡಿ, ‘ಥೂ…! ಹಚಾ, ಹಚಾ…! ಇವೊಂದು ಭಾಷೆಯಿಲ್ಲದ ನಾಯಿಗಳು. ಈ ಅಪ್ಪನಿಗೆ ಬೇರೆ ಕೆಲಸವಿಲ್ಲ. ದಾರಿಯಲ್ಲಿ ಸಿಕ್ಕಿದ ಮರಿಗಳನ್ನೆಲ್ಲ ತಂದು ಸಾಕ್ತಾರೆ!’ ಎಂದು ಮುನಿಸಿಕೊಂಡು ನಾಯಿಗಳನ್ನು ಮತ್ತಷ್ಟು ದೂರಕ್ಕಟ್ಟುತ್ತ, ‘ಓಹೋ, ನೀವಾ…ಬನ್ನಿ ಬನ್ನಿ…!’ ಎಂದು ತೋಮನನ್ನು ಅಂಗಳದ ಮೂಲೆಯಲ್ಲಿದ್ದ ತೆಂಗಿನಕಟ್ಟೆಗೆ ಕರೆದೊಯ್ದು ಕೈಕಾಲು ತೊಳೆಯಲು ನೀರು ಕೊಟ್ಟಳು. ಅವಳ ಆದರದ ಸ್ವಾಗತವೂ ಅವಳ ಸಾಮಿಪ್ಯವೂ ತೋಮನಿಗೆ ತಂಗಾಳಿ ಬೀಸಿದಷ್ಟು ಹಿತವೆನಿಸಿತು. ಅವಳನ್ನು ಕಂಡು ಮೆಲುವಾಗಿ ನಕ್ಕ. ಅವಳೂ ಮೋಹಕವಾಗಿ ನಕ್ಕು ನಾಚುತ್ತ ನಿಂತಳು. ತೋಮ ಒಂದೆರಡು ಚೆಂಬು ನೀರನ್ನು ಕೈಕಾಲುಗಳಿಗೆ ಹುಯ್ದುಕೊಳ್ಳುವ ಶಾಸ್ತ್ರ ಮಾಡಿದ. ಅಷ್ಟೊತ್ತಿಗೆ ಪ್ರೇಮ ವಯ್ಯಾರದಿಂದ ಬಳುಕುತ್ತ ಒಳಗೆ ಹೋಗಿ ಒಂದೇ ನಿಮಿಷದಲ್ಲಿ ಹಿಂದಿರುಗಿ ಬಂದು ಅವನಿಗೆ ಬೈರಾಸು ನೀಡಿದಳು. ತೋಮ ಅವಳ ಲಜ್ಜೆ ತುಂಬಿದ ಸೌಂದರ್ಯದ ಹಿಂದಿನ ಇಂಗಿತವನ್ನರಿತು ರೋಮಾಂಚಿತನಾದವನು, ಕೈ ಕಾಲು ಒರೆಸಿಕೊಂಡು ಬೈರಾಸನ್ನು ಅವಳ ಕೈಗೆ ಕೊಟ್ಟು ಅವಳ ಹಿಂದೆಯೇ ಮನೆಯೊಳಗಡಿಯಿಟ್ಟ. ಹೊಸ್ತಿಲು ದಾಟುತ್ತಿದ್ದಂತೆಯೇ ಅಡುಗೆ ಕೋಣೆಯಲ್ಲಿ ಊರ ಕೋಳಿಯ ಮಾಂಸವು ಬೇಯುತ್ತಿದ್ದ ಹದವಾದ ಕಂಪು ಅವನ ಒರಟು ಮೂಗಿಗೆ ಬಡಿಯಿತು. ತೊಡುವೋ (ಬಾಯಿ ಚಪಲ) ಅಥವಾ ಹಸಿವೋ ತಿಳಿಯದ ಅವನ ಮನಸ್ಸು ಆಸೆಯಿಂದ ಹಸಿಹಸಿಯಾಯಿತು.
‘ಬನ್ನಿ, ಕುಳಿತುಕೊಳ್ಳಿ. ಯಾಕೆ ಇಷ್ಟು ತಡವಾಯ್ತು…? ಎಲ್ಲರೂ ಮಾರಿ ಓಡಿಸಲು ಹೋಗಿ, ಬಂದು ಆಗಲೇ ಸುಮಾರು ಹೊತ್ತಾಯಿತು. ಅಶೋಕನೂ ಕೋಳಿ ಕುಯ್ದು ತಂದುಕೊಟ್ಟು ಮಲಗಿದ್ದಾನೆ!’ ಎಂದು ಪ್ರೇಮ ತಾನು ಅವನಿಗಾಗಿ ಕಾದ ಬೇಸರ ಮತ್ತು ಖುಷಿಯನ್ನು ಒಟ್ಟೊಟ್ಟಿಗೆ ಪ್ರಕಟಿಸಿದಳು.
‘ಧನಿಗಳ ಹರಕೆಯ ಆಡಿತ್ತು. ಕಡಿದು ಮಾಂಸ ಮಾಡಿ ಕೊಟ್ಟು ಬರುವಾಗ ಇಷ್ಟು ಹೊತ್ತಾಯಿತು ನೋಡು!’ ಎಂದು ತೋಮ ನಗುತ್ತ ಅಂದಾಗ, ‘ಓಹೋ, ಹೌದಾ…!’ ಎಂದ ಪ್ರೇಮಾ, ‘ಅಪ್ಪಾ, ಅಪ್ಪಾ…! ಯಾರು ಬಂದಿದ್ದಾರೆ ನೋಡಿ…?’ ಎನ್ನುತ್ತ ಬಾಗಿಲು ಮುಚ್ಚಿದ ಕೋಣೆಯೊಂದರತ್ತ ಹೋಗಿ ಕೂಗಿದಳು. ಆಗ ಒಳಗಿನಿಂದ ಅಂಗರನ ಗೊಗ್ಗರು ಕೆಮ್ಮು ಅವಳಿಗೆ ಮರುತ್ತರ ನೀಡಿತು. ಅಷ್ಟೊತ್ತಿಗೆ ಪ್ರೇಮಾಳ ತಾಯಿ ದುರ್ಗಕ್ಕ ಕಂಚಿನ ಬಿಂದಿಗೆಯಲ್ಲಿ ನೀರು ಮತ್ತು ಬೆಲ್ಲವನ್ನು ತಂದು ತೋಮನೆದುರಿಟ್ಟು, ‘ಹೇಗಿದ್ದಿ ಮಗಾ…? ಬಾಯಮ್ಮನೂ, ಇವಳೂ ನಿನ್ನ ಬಗ್ಗೆ ಆಗಾಗ ಹೇಳುತ್ತಿರುತ್ತಾರೆ!’ ಎಂದು ಮುಗುಳ್ನಗುತ್ತ ಅಂದವಳು ಅಲ್ಲೇ ಕುಳಿತಳು. ‘ಹೌದಾ ಹ್ಹೆಹ್ಹೆಹ್ಹೆ…!’ ಎಂದು ತೋಮ ಸಂಕೋಚದಿoದ ನಕ್ಕವನು, ತನ್ನ ಬಗ್ಗೆ ಬಾಯಮ್ಮ ಇವರೊಡನೆ ಏನು ಹೇಳಿರಬಹುದು? ಎಂದು ಯೋಚಿಸಿದ. ಆಗ ಅವನಿಗೆ ತನ್ನ ಹಿಂದಿನ ಕಿತಾಪತಿಗಳೆಲ್ಲ ಒಂದೊoದಾಗಿ ಮುನ್ನೆಲೆಗೆ ಬಂದುವು. ತಕ್ಷಣ ಮುಜುಗರದಿಂದ ಪೆಚ್ಚು ನಗುತ್ತ ಗಮನವನ್ನು ಪ್ರೇಮಾಳತ್ತ ಹೊರಳಿಸಿದ. ಆದರೆ ಅವನ ಆ ನಗುವಿನಲ್ಲಿ ಪ್ರೇಮ ಇನ್ನೇನೋ ಗ್ರಹಿಸಿದಳು. ಮರುಕ್ಷಣ ಅವಳ ಕೆನ್ನೆಗಳು ಕೆಂಪಾದವು.
‘ನೀನು ಬಂದದ್ದು ಖುಷಿಯಾಯ್ತು ಮಗಾ. ಇಬ್ಬರೂ ಮಾತಾಡುತ್ತಿರಿ. ಒಳಗೆ ಕೋಳಿ ಬೇಯುತ್ತಿದೆ. ಇನ್ನೊಂದು ಗಳಿಗೆಯಲ್ಲಿ ಪದಾರ್ಥ ಆಗುತ್ತದೆ. ಊಟ ಮಾಡಿಕೊಂಡೇ ಹೋಗಬೇಕು ಆಯ್ತಾ…?’ ಎಂದು ಅಕ್ಕರೆಯಿಂದ ಹೇಳಿದ ದುರ್ಗಕ್ಕ ಎದ್ದು ಒಳಗೆ ಹೋದಳು. ಅವಳ ಬೆನ್ನಿಗೆ ಅಂಗರನ ಕೋಣೆಯ ಬಾಗಿಲು ತೆರೆದುಕೊಂಡಿತು. ಅವನು ಲಂಗೋಟಿಧಾರಿಯಾಗಿ ತನ್ನ ಕೆಂಪಗಿನ ಜೋಲು ಮಾಂಸಖoಡಗಳ ದೇಹವನ್ನು ಮೆಲುವಾಗಿ ಕುಲುಕಿಸುತ್ತ ಹೊರಗೆ ಬಂದ. ಅವನು ಕುಡಿದಿದ್ದ ಕಂಟ್ರಿ ಸಾರಾಯಿಯ ದುರ್ವಾಸನೆಯು ಅವನಿಗಿಂತಲೂ ಹತ್ತು ಹೆಜ್ಜೆ ಮುಂದೆ ಹೊರಟು ಕೋಣೆಯಿಡೀ ಹರಡಿಕೊಂಡಿತು. ಅಪ್ಪನ ಅವಸ್ಥೆಯನ್ನು ಕಂಡು ಪ್ರೇಮ ಮುಜುಗರದಿಂದ ಹಿಡಿಯಾದಳು. ಹಾಗಾಗಿ ತೋಮನೆದುರು ಕುಳಿತಿರಲಾಗದೆ, ತಟ್ಟನೆ ಏನೋ ನೆನಪಾದವಳಂತೆ, ‘ನೀವು ಮಾತಾಡುತ್ತಿರಿ. ಈಗ ಬಂದೇ…!’ ಎನ್ನುತ್ತ ಎದ್ದು ಒಳಗೆ ನಡೆದಳು.

ಅಂಗರನೂ ತನ್ನ ಯೌವನದ ಕಾಲದಲ್ಲಿ ಬಾರೀ ರುಬಾಬಿನ ಮತ್ತು ನಿಷ್ಠೂರದ ಗಟ್ಟಿ ಮನುಷ್ಯ. ಆದ್ದರಿಂದ ತನ್ನಂಥದ್ದೇ ಒಂದಷ್ಟು ಗೆಳೆಯರ ದಂಡು ಕಟ್ಟಿಕೊಂಡು ಗಂಗರಬೀಡಿನ ಕೆಲವು ಪರ್ಬುಗಳೊಡನೆಯೂ, ಬಂಟರ ಹುಡುಗರೊಡನೆಯೂ ಹೊಡೆದಾಟ, ಬಡಿದಾಟದಲ್ಲಿ ತೊಡಗಿಕೊಂಡು ರೌಡಿಯಂತೆ ಬದುಕುತ್ತಿದ್ದವನು. ಆದರೆ ಮಗನ ಪುಂಡಾಟಿಕೆಯನ್ನು ಕಂಡು ರೋಸಿ ಹೋಗುತ್ತಿದ್ದ ಹೆತ್ತವರು, ಈ ಫಟಿಂಗನನ್ನು ಹೀಗೆಯೇ ಬಿಟ್ಟರೆ ಒಂದಲ್ಲಾ ಒಂದು ದಿನ ಇವನ ಬದುಕು ಜೈಲು ಅಥವಾ ಬೀದಿಪಾಲಾಗುವುದು ಖಂಡಿತಾ! ಎಂದು ಯೋಚಿಸಿ ಶಂಕರಪುರದ ಸೋಂಪ ಪೂಜಾರಿಯ ಹಿರಿಯ ಮಗಳು ದುರ್ಗಿಯನ್ನು ತಂದು ಅವನ ಕೊರಳಿಗೆ ಕಟ್ಟಿದರು. ದುರ್ಗಿ ಬಂದವಳು ಮೊದಲ ದಿನವೇ ಅತ್ತೆ ಮಾವಂದಿರಿoದ ಗಂಡನ ಘನಕಾರ್ಯಗಳ ಬಗ್ಗೆ ಮೇಲು ಮೇಲೆ ಸಾಕಷ್ಟು ತಿಳಿದುಕೊಂಡವಳು ಎರಡನೆಯ ರಾತ್ರಿ ಕಳೆದು ಬೆಳಕು ಮೂಡುವಷ್ಟರಲ್ಲಿ ಗಂಡನ ಮೂಗಿನ ದಾರವನ್ನು ತನ್ನ ಸೊಂಟಕ್ಕೆ ಭದ್ರವಾಗಿ ಸಿಲುಕಿಸಿಕೊಂಡುಬಿಟ್ಟಳು. ಇತ್ತ, ಗುಂಡು ಗುಂಡಗಿನ ಚೆಂದುಳ್ಳಿ ಚೆಲುವೆಯಂಥ ದುರ್ಗಿಯ ತುಂಬಿದ ಪ್ರೀತಿಯೂ ಅದಕ್ಕೆ ತಕ್ಕನಾದ ಮೋಹವೂ ಅವೆರಡಕ್ಕೆ ಸರಿಹೊಂದುವoಥ ಅವಳ ಸ್ನೇಹ ಹಾಗೂ ಸ್ತ್ರಿ ಸಹಜವಾದ ಅವಳ ಗಟ್ಟಿತನವೆಲ್ಲವೂ ಅಂಗರನನ್ನು ಮೆಲ್ಲಮೆಲ್ಲನೆ ಸಂಸಾರವೆoಬ ಸಾಗರಕ್ಕೆ ತಳ್ಳಿ ಒಂದೊoದೇ ಜವಾಬ್ದಾರಿಯನ್ನು ಹೊರುವಂತೆ ಮಾಡಿದುವು. ಆದ್ದರಿಂದ ಸಮಾಜವು ಹೇಳುವಂತೆ, ಅಂಗರನೂ ‘ಒಂದು ದಾರಿ’ಗೆ ಬಂದುಬಿಟ್ಟ. ದುರ್ಗಿಯು ತನ್ನ ಗಂಡನಿಗೆ ಪಿತ್ರಾರ್ಜಿತವಾಗಿ ಬಂದ ನಾಲ್ಕಾರು ಎಕರೆ ಹಡಿಲು ಭೂಮಿಯನ್ನು ಹಸುರು ಮಾಡುವಲ್ಲಿಯೂ ಮತ್ತು ಅದರೊಳಗೊಂದು ಸ್ವಂತ ಕುಟೀರ ಕಟ್ಟಿಕೊಳ್ಳುವಲ್ಲಿಯೂ ಗಂಡನಿಗೆ ಬೆನ್ನೆಲುಬಾಗಿ ನಿಂತು, ಎಲ್ಲರಂತೆ ತಮ್ಮ ಜೀವನವೂ ಉತ್ತಮ ಮಟ್ಟಕ್ಕೆ ಏರಬೇಕು! ಎಂಬ ಹಂಬಲದಿoದ ಹಗಲುರಾತ್ರಿ ಶ್ರಮಿಸುತ್ತ ಬಂದು ಗೆದ್ದವಳು. ಹಾಗಾಗಿ ಅಂಗರನಿಗೆ ಹೆಂಡತಿಯೆoದರೆ ಬಲು ಅಚ್ಚುಮೆಚ್ಚು ಮತ್ತು ಅಷ್ಟೇ ಗೌರವ ಮಾತ್ರವಲ್ಲದೇ ಇಂದಿಗೂ ಅವನಿಗೆ ಅವಳದ್ದೇ ವೇದವಾಕ್ಯ!
ತೋಮ, ಅಂಗರರಿಬ್ಬರೂ ಕುಳಿತು ಮಾತಿಗಿಳಿದವರು ಒಂದಷ್ಟು ಹೊತ್ತು ಕೋಳಿ ಅಂಕದ ವಿಷಯಗಳನ್ನು ಹುರುಪಿನಿಂದ ಚರ್ಚಿಸಿದ ನಂತರ ಊರಿನ ಅವರಿವರ ಕುರಿತ ಮಾತುಕಥೆಯಲ್ಲಿ ಮಗ್ನರಾಗಿದ್ದರು. ಅಷ್ಟರಲ್ಲಿ ಪ್ರೇಮ, ಪೂರ್ತಿ ಮಸಾಲೆ ಬೆರೆಸದ ಕೋಳಿ ಮಾಂಸದ ಹತ್ತಾರು ತುಂಡುಗಳನ್ನು ಮತ್ತು ಅದು ಬೆಂದು ಚರ್ಬಿ ಮಿಶ್ರಿತವಾದ ರಸವನ್ನೂ ತಂದು ತೋಮನೆದುರಿಟ್ಟು, ‘ತಕ್ಕೊಳ್ಳಿ. ನಿಮಗೆಷ್ಟು ಹಸಿವಾಗಿದೆಯಾ ಏನಾ…? ಇದನ್ನು ತಿನ್ನುತ್ತಿರಿ. ಅಷ್ಟರಲ್ಲಿ ಊಟಕ್ಕೆ ತಯಾರಾಗುತ್ತದೆ!’ ಎಂದು ಪ್ರೀತಿಯಿಂದ ಅಂದಳು.
ಅರೆ ಬೆಂದ ಕೋಳಿ ಮಾಂಸದ ರುಚಿ ಹೇಗಿರುತ್ತದೆನ್ನುವುದನ್ನು ಕಂಡಿದ್ದ ತೋಮನಿಗೆ ಬಾಯಲ್ಲಿ ನೀರೂರಿದಷ್ಟೇ ವೇಗದಲ್ಲಿ ಪ್ರೇಮಾಳ ಮೇಲೆ ಆತ್ಮೀಯತೆಯೂ ಉಕ್ಕಿತು. ಆದರೂ, ‘ಅಯ್ಯಾ, ಇದೆಲ್ಲ ಯಾಕೆ ಸುಮ್ಮನೆ…? ಒಟ್ಟಿಗೆ ಊಟ ಮಾಡಬಹುದಲ್ಲವಾ…!’ ಎಂದು ಉಗುಳು ನುಂಗುತ್ತ ಸಂಕೋಚ ತೋರಿಸಿದ.
‘ಒಟ್ಟಿಗೆ ಆಮೇಲೆ ಊಟ ಮಾಡುವ. ಈಗ ಇದೊಂದು ನಾಲ್ಕು ಚೂರನ್ನು ತಿಂದು ನೋಡಿ!’ ಎಂದು ನಗುತ್ತ ಅಂದ ಪ್ರೇಮ ಒಳಗೆ ಹೋಗಿ ನೀರು ತಂದಿಡುವಷ್ಟರಲ್ಲಿ ತೋಮ ಎರಡು ತುಂಡುಗಳನ್ನು ಕಬಳಿಸಿ, ಕೋಳಿಯ ಕೊಕ್ಕೆಯಂತಹ ಕಾಲೊಂದನ್ನು ಕಟಕಟ ಕಡಿಯುವುದರಲ್ಲಿ ನಿರತನಾಗಿದ್ದ.
ಅಂಗರನ ಮನೆಯಲ್ಲಿ ಮಾರಿಯೂಟಕ್ಕೆ ತಯಾರಾಗುವ ಹೊತ್ತಿಗೆ ಬೆಳಗ್ಗಿನ ಜಾವ ನಾಲ್ಕು ಗಂಟೆ ದಾಟಿತ್ತು. ಅಷ್ಟರಲ್ಲಿ ಅಡುಗೆ ಕೋಣೆಯಿಂದ ಹೊರಗೆ ಬಂದ ಪ್ರೇಮ ತೋಮನನ್ನು ಊಟಕ್ಕೆಬ್ಬಿಸಿದಳು. ಜೊತೆಗೆ ತಮ್ಮ ಅಶೋಕನನ್ನೂ ಎಚ್ಚರಿಸಿ ಬಂದವಳು ಎಲ್ಲರಿಗೂ ಸಾಲಾಗಿ ಕುಡಿ ಬಾಳೆ ಎಲೆಯನ್ನು ಹಾಕಿದಳು. ಅಶೋಕ ಕಣ್ಣೊರೆಸಿಕೊಳ್ಳುತ್ತ ಬಚ್ಚಲಿಗೆ ಹೋದವನು ಮುಖ ತೊಳೆದುಕೊಂಡು ಬಂದು ಎಲೆಯ ಮುಂದೆ ಕುಳಿತ ನಂತರ ತೋಮನನ್ನು ಕಂಡವನು ಕ್ಷಣಕಾಲ ತಬ್ಬಿಬ್ಬಾದ. ಬಳಿಕ ಸಾವರಿಸಿಕೊಂಡು, ‘ಓಹೋ, ತೋಮಣ್ಣನಾ ಮಾರಾಯ್ರೇ…! ಯಾವಾಗ ಬಂದಿದ್ದು…? ನನಗೆ ಗೊತ್ತೇ ಆಗಲಿಲ್ಲ ನೋಡಿ ಛೇ!’ ಎಂದು ಅಚ್ಚರಿಯಿಂದ ಅಕ್ಕನತ್ತ ತಿರುಗಿ, ‘ನೀನೆಂಥದು ಮಾರಾಯ್ತಿ, ತೋಮಣ್ಣ ಬಂದಿದ್ದನ್ನು ಹೇಳುವುದಲ್ಲವಾ…?’ ಎಂದ ಮುನಿಸಿನಿಂದ.

‘ನಿನಗೆ ತಿಳಿಸಲು ನೀನೆಲ್ಲಿದ್ದಿ ಮಾರಾಯಾ? ಕೋಳಿ ಕುಯ್ದು ಬಂದು ಕೋಣೆ ಸೇರಿ ಗೊರಕೆ ಹೊಡೆಯತೊಡಗಿದವನು ಈಗಲೇ ಎದ್ದು ಬಂದುದಾದರೆ ತಿಳಿಸುವುದು ಯಾರಿಗೇ!’ ಎಂದು ಪ್ರೇಮಾಳೂ ಮುಗುಳ್ನಗುತ್ತ ಅಂದಳು. ಅದಕ್ಕೆ ಅವನೂ, ‘ಅದೂ ಹೌದನ್ನು!’ ಎನ್ನುತ್ತ ನಕ್ಕ. ಬಳಿಕ ಊಟ ಮಾಡುತ್ತ ತೋಮನೊಂದಿಗೆ ಮಾತಿಗಿಳಿದ. ಇತ್ತ ಪ್ರೇಮ ಮತ್ತು ದುರ್ಗಕ್ಕನ ಒತ್ತಾಯಕ್ಕೆಂಬoತೆ ತೋಮ, ಕೋಳಿ ಸುಕ್ಕ ಹಾಗು ಬಂಗುಡೆ ಮೀನಿನ ಸಾರಿನೊಂದಿಗೆ ನಾಲ್ಕು ಇಡ್ಲಿ ತಿಂದವನು ಅದರ ಬೆನ್ನಿಗೆ ನಾಲ್ಕು ಸೌಟು ಕುಚ್ಚಲಕ್ಕಿ ಅನ್ನವನ್ನೂ ಹೊಟ್ಟೆ ಬಿರಿಯುವಂತೆ ಉಂಡು ರ‍್ರ್…! ಎಂದು ತೇಗಿದ. ಕೈತೊಳೆಯಲು ಹೊರಗೆ ಬಂದವನಿಗೆ ಹೊಟ್ಟೆ ಭಾರವಾಗಿ ನಿದ್ದೆ ಎಳೆಯತೊಡಗಿತು. ಅದನ್ನು ಗಮನಿಸುತ್ತಿದ್ದ ಪ್ರೇಮ ಕೂಡಲೇ ಒಳಗೆ ಹೋಗಿ ಒಲಿಯ ಚಾಪೆಯನ್ನು ತಂದು ಚಾವಡಿಯಲ್ಲಿ ಹಾಸಿದವಳು, ‘ಬೆಳಗಾಗಲು ಇನ್ನೂ ಒಂದೆರಡು ಗಂಟೆಯಿದೆ. ಅಲ್ಲಿಯತನಕ ಹಾಯಾಗಿ ನಿದ್ದೆಮಾಡಿ. ಬೆಳಿಗ್ಗೆ ಚಹಾ ಕುಡಿದುಕೊಂಡೇ ಹೋಗಬೇಕು!’ ಎಂದು ತಾಕೀತು ಮಾಡಿದಳು. ಅಷ್ಟೊತ್ತಿಗೆ, ‘ಹೌದು ಹೌದು. ಇನ್ನೂ ಸರಿಯಾಗಿ ಬೆಳಕಾಗಿಲ್ಲ ತೋಮ. ಈಗ ಹೋಗುವುದು ಬೇಡ. ಬೆಳಗ್ಗೆದ್ದು ಹೋದರಾಯ್ತು!’ ಎಂದು ಅಂಗರನೂ ಅಧಿಕಾರದಿಂದ ಸೂಚಿಸಿದ. ಆದ್ದರಿಂದ ನಿದ್ದೆಯ ಮಂಪರಿನಲ್ಲಿದ್ದ ತೋಮ ತನ್ನ ಪ್ರೇಯಸಿಯನ್ನು ಪ್ರೀತಿಯಿಂದ ದಿಟ್ಟಿಸುತ್ತ ಮರು ಮಾತಾಡದೆ ಚಾಪೆಗೊರಗಿ ಗಾಢ ನಿದ್ದೆಗೆ ಜಾರಿದ.
ಬೆಳಗ್ಗೆ ಎಂಟು ಗಂಟೆಯ ಹೊತ್ತಿಗೆ ತೋಮನಿಗೆ ಎಚ್ಚರವಾಯಿತು. ಅವನು ಏಳುವುದನ್ನೇ ಕಾಯುತ್ತಿದ್ದ ಪ್ರೇಮ ಮಂದಹಾಸ ಬೀರುತ್ತ ಬಂದು, ‘ನಿದ್ರೆ ಚೆನ್ನಾಗಿ ಆಯ್ತಾ…?’ ಎಂದು ವಿಚಾರಿಸುತ್ತ, ‘ಏಳಿ. ಹಂಡೆಯಲ್ಲಿ ಬಿಸಿ ನೀರಿದೆ. ಸ್ನಾನ ಮಾಡಿಕೊಂಡು ಬನ್ನಿ. ಅಷ್ಟರಲ್ಲಿ ಚಹಾ ಕೊಡುತ್ತೇನೆ!’ ಎಂದು ತನ್ನ ಹೆಗಲ ಮೇಲಿದ್ದ ಬೈರಾಸನ್ನು ಅವನತ್ತ ನೀಡಿ ಬಳುಕುತ್ತ ಒಳಗೆ ನಡೆದಳು. ಮುಂಜಾವಿನಲ್ಲಿ ಊರ ಕೋಳಿ ಮಾಂಸವನ್ನು ಪಟ್ಟಾಗಿ ಹೊಡೆದಿದ್ದರಿಂದಲೂ ಪ್ರೇಮಾಳ ಮಾದಕ ಚೆಲುವು ಮತ್ತವಳ ಬಳುಕುವ ನಡೆಯನ್ನು ಹತ್ತಿರದಿಂದ ಕಂಡಿದ್ದರಿoದಲೂ ತೋಮನ ದೇಹವು ಬೆಳ್ಳಂಬೆಳಗ್ಗೆ ಮೆಲ್ಲನೆ ಬಿಸಿಯೇರಿತು. ಆದ್ದರಿಂದ ಒಮ್ಮೆ ಜೋರಾಗಿ ತಲೆಕೊಡವಿಕೊಂಡವನು ಎದ್ದು ಬಚ್ಚಲಿಗೆ ನಡೆದ. ಮಡಲಿನ ತಟ್ಟಿಯ ಬಾಗಿಲನ್ನು ಸರಿಸಿ ಮಬ್ಬುಗತ್ತಿಲಿನ ಕೋಣೆಗೆ ನುಸುಳಿದ. ಮಣ್ಣಿನ ಹಂಡೆಯಲ್ಲಿ ಹಬೆಯಾಡುತ್ತಿದ್ದ ಬಿಸಿ ನೀರಿನಿಂದ ಹದವಾಗಿ ಸ್ನಾನ ಮಾಡಿ ಚಾವಡಿಗೆ ಬಂದ. ಅಷ್ಟರಲ್ಲಿ ಪ್ರೇಮ ಅವನೆದುರು ಮಣೆ ಹಾಕಿ ನಸುನಗುತ್ತ, ‘ಕುಳಿತುಕೊಳ್ಳಿ’ ಎಂದಳು. ತೋಮ ಚಕ್ಕಳ ಬಕ್ಕಳ ಹಾಕಿ ಕುಳಿತ. ಪ್ರೇಮ ನಾಲ್ಕು ನೀರು ದೋಸೆಗಳನ್ನು ಬಾಳೆಯೆಲೆಯಲ್ಲಿ ಬಡಿಸಿ ಅದರ ಪಕ್ಕ ತೋಮ ತಂದಿದ್ದ ಆಡಿನ ಮಾಂಸದ ಗಶಿಯನ್ನು ಬಡಿಸಿದಳು. ಆಗ ತೋಮನ ಮನಸ್ಸು ಅವಳ ಉಪಚಾರಕ್ಕೆ ಮತ್ತೊಮ್ಮೆ ನೀರಾಯಿತು. ಮರಳಿ ಎರಡು ದೋಸೆಗಳನ್ನು ಹಾಕಿಸಿಕೊಂಡು ತಿಂದು ಚಹಾ ಕುಡಿಯುವ ಹೊತ್ತಿಗೆ ಅಂಗರ ಎಲೆಯಡಿಕೆಯ ಹರಿವಾಣವನ್ನು ತಂದು ಅವನ ಮುಂದಿಟ್ಟು ಮಾತಿಗೆ ಕುಳಿತ. ಪ್ರೇಮ ಮೆಲ್ಲನೆ ಅಪ್ಪನಿಗೇನೋ ಸನ್ನೆ ಮಾಡಿ ಒಳಗೆ ಹೋದಳು. ಅದನ್ನು ಗ್ರಹಿಸಿದ ಅಂಗರ, ‘ತೋಮಾ, ಮಧ್ಯಾಹ್ನದ ಊಟಕ್ಕೆ ಇಲ್ಲಿಗೇ ಬಂದುಬಿಡು ಮಾರಾಯಾ. ಕೋಳಿ ಮತ್ತು ಆಡಿನ ಪದಾರ್ಥಗಳು ಇನ್ನೆರಡು ದಿನಕ್ಕಾಗುವಷ್ಟು ಮಿಕ್ಕಿವೆ. ಊಟ ಮಾಡಿಕೊಂಡು ಹೋಗು!’ ಎಂದು ಸ್ನೇಹದಿಂದ ಆಜ್ಞಾಪಿಸಿದ.
‘ಅಯ್ಯೋ ಅಂಗರಣ್ಣ ಇದೇನು, ವರ್ಷವಿಡೀ ನನ್ನನ್ನು ಇಲ್ಲೇ ಉಳಿಸಿಕೊಂಡು ಹೊಟ್ಟೆ ತುಂಬಿಸುವ ಉಪಾಯವಾ ನಿಮ್ಮದು? ಮೊನ್ನೆ ಹೆಡ್ಡಿ ಪರ್ಬುಗಳ ಮನೆಯಲ್ಲಿ ಕೊಯ್ದು ಹಾಕಿದ್ದ ಕಾಯಿಗಳನ್ನಿನ್ನೂ ಸುಲಿದುಕೊಟ್ಟಿಲ್ಲ. ಆ ಕೆಲಸ ಬೇಗ ಮುಗಿದರೆ ಬರುತೇನೆ. ಯಾವುದಕ್ಕೂ ಕಾಯಬೇಡಿ!’ ಎಂದು ಇಲ್ಲದ ಸ್ವಾಭಿಮಾನ ತೋರಿಸುತ್ತ ಹೇಳಿ ಹೊರಡಲನುವಾದ. ಆಗ ಪ್ರೇಮ, ಅಡುಗೆ ಕೋಣೆಯಲ್ಲಿದ್ದವಳು ತೋಮ ಹೊರಟು ನಿಂತುದನ್ನು ಕಂಡು ರುಮ್ಮನೇ ಹೊಸ್ತಿಲಿಗೆ ಬಂದು ನಗುತ್ತ ಅವನನ್ನು ಬೀಳ್ಕೊಟ್ಟಳು.
(ಮುಂದುವರೆಯುವುದು)