
ಧಾರವಾಹಿ 23
ಹೆಗಲ ಮೇಲೆ ವಿಮಲಾಳನ್ನು ಹೊತ್ತಿದ್ದ ತಾಮಸನು ದಟ್ಟ ಕಾಡಿನೊಳಗಿನ ಗಿಡಗಂಟಿಗಳಿoದ ತುಂಬಿದ ಪೊದರುಗಳನ್ನೂ ಹೆಬ್ಬಾವುಗಳಂಥ ದೈತ್ಯ ಬಿಳಲುಗಳನ್ನೂ ಚಾಕಚಕ್ಯತೆಯಿಂದ ಸರಿಸಿ, ನುಸುಳಿ ದಾರಿ ಮಾಡಿಕೊಂಡು ಸಾಗಿದವನು ಸಣ್ಣ ಜಲಪಾತವೊಂದರ ಸಮೀಪಕ್ಕೆ ಬಂದು ಮೆತ್ತನೆಯ ಹಾಸಿಗೆಯಂತಹ ತರಗೆಲೆಗಳ ರಾಶಿಯ ಮೇಲೆ ಅವಳನ್ನು ಎತ್ತಿ ಉರುಳಿಸಿದ. ಆದರೆ ಅವಳು ತನ್ನ ಕಿಬ್ಬೊಟ್ಟೆಯ ನೋವಿನಿಂದಲೂ, ಭಯದಿಂದಲೂ ಕಂಗಾಲಾಗಿದ್ದವಳು ರಪ್ಪನೆದ್ದು ಜೋರಾಗಿ ಅಳತೊಡಗಿದಳು. ಅಷ್ಟೊತ್ತಿಗೆ ತನ್ನ ಸ್ನೇಹಿತರೂ ಸ್ವಲ್ಪ ದೂರದಲ್ಲಿ ಏದುಸಿರು ಬಿಡುತ್ತ ಬರುತ್ತಿದ್ದುದನ್ನು ಕಂಡ ತಾಮಸನು, ‘ಹೇ, ದವೇರ್ಸಿಗಳಾ ಸ್ವಲ್ಪ ಬೇಗ ಬನ್ನಿರಾ…? ಆವಾಗ ಟಾಕೀಸಿನಲ್ಲೇ ಎಲ್ಲ ಮುಗಿಸಿಬಿಡುವಷ್ಟು ಅವಸರದಲ್ಲಿದ್ದಿರಿ…? ಈಗೇನು ಇಬ್ಬರದ್ದೂ ಧಮ್ಮು ಖಾಲಿಯಾಯ್ತಾ…?’ ಎಂದು ನಗುತ್ತ ಚುಡಾಯಿಸಿದ. ವಾಲ್ಟರನೂ ತಾಮಸನಷ್ಟೇ ಬಲಶಾಲಿಯಾದರೂ ಅವನಷ್ಟು ಧೈರ್ಯವಂತನಲ್ಲ. ಆದರೆ ತಾಮಸನೊಂದಿಗೆ ಸ್ನೇಹ ಬೆಳೆಸಿದ ಮೇಲೆ ತಾನೂ ಅವನಂಥ ದುರುಳ, ವಿಕೃತ ವಿದ್ಯೆಗಳನ್ನೆಲ್ಲ ಸಲೀಸಾಗಿ ಪ್ರದರ್ಶಿಸಲು ಕಲಿತಿದ್ದ. ಆದ್ದರಿಂದ, ‘ಹೇ, ಧಮ್ಮೆಂಥದನಾ ಖಾಲಿಯಾಗುವುದು…? ಇನ್ನು ಸ್ವಲ್ಪ ಹೊತ್ತಲ್ಲಿ ನಾನೇನು ಅಂತ ತೋರಿಸುತ್ತೇನೆ ನೋಡುತ್ತಿರು!’ ಎಂದು ಅಹಂಕಾರದಿoದ ನಕ್ಕ. ಅವನ ಮಾತು ಕೇಳಿದ ಸೂರ್ಯನೂ ಬೆವರೊರೆಸಿಕೊಳ್ಳುತ್ತ ಮುಗುಳ್ನಕ್ಕ.
ಇತ್ತ ಭಯಂಕರ ಮಲೆಯನ್ನೂ ಕಿರಾತಕ ಯುವಕರ ಅಟ್ಟಹಾಸವನ್ನೂ ಕಂಡ ನಾಗರತ್ನಾಳ ಜಂಘಾಬಲವೇ ಉಡುಗಿಹೋಗಿತ್ತು. ಅವಳು ನಿಸ್ತೇಜಳಾಗಿದ್ದಳಾದರೂ ದೇವರನ್ನು ಮೊರೆಯಿಡುವುದನ್ನು ನಿಲ್ಲಿಸಲಿಲ್ಲ. ‘ಓ ದೇವರೇ…! ಈ ರಾಕ್ಷಸರ ಕೈಯಿಂದ ನಮ್ಮಿಬ್ಬರೂ ಜೀವಂತವಾಗಿ ಪಾರು ಮಾಡಪ್ಪಾ! ಇನ್ನು ಮುಂದೆ ಅಪ್ಪಿ ತಪ್ಪಿಯೂ ಯಾವ ಗಂಡು ನಾಯಿಯ ಮೂತಿಯನ್ನೂ ಕಣ್ಣೆತ್ತಿಯೂ ನೋಡಲಾರೆ. ಈ ಸಲ ಒಂದು ನಮ್ಮನ್ನು ಕಾಪಾಡು ಪರಮಾತ್ಮಾ…!’ ಎಂದು ಯಾಚಿಸುತ್ತ ಅಳುತ್ತಿದ್ದಳು. ಅದನ್ನು ಕಂಡ ತಾಮಸನು, ‘ಅರೆರೇ…! ನೀನೀಗ ಅಳುವುದು ಯಾಕೆ ಮಾರಾಯ್ತೀ…? ನಾವೇನು ರಾಕ್ಕಸರಾ…? ಸ್ವಲ್ಪಹೊತ್ತು ನಾವು ಹೇಳಿದಂತೆ ಕೇಳಿಕೊಂಡು ಸುಮ್ಮನಿದ್ದರೆ ನಿಮಗೇನೂ ತೊಂದರೆ ಮಾಡದೆ ಬಿಟ್ಟು ಬಿಡುತ್ತೇವೆ. ಅದನ್ನು ಬಿಟ್ಟು ಪಿಸಂಟು ಗಿಸಂಟು ತೋರಿಸಿದಿರೋ ಇಬ್ಬರ ಕತ್ತನ್ನೂ ಇಲ್ಲೇ ಹಿಸುಕಿ, ಓ ಅಲ್ಲಿ ಕಾಣುತ್ತಿದೆಯಲ್ಲ ಆ ಪಾತಾಳ…! ಅದಕ್ಕೆ ಎಸೆದು ಹೋಗಲಿಕ್ಕುಂಟು!’ ಎಂದು ವ್ಯಂಗ್ಯವಾಗಿ ನಗುತ್ತ ಅಂದ. ಅಷ್ಟು ಕೇಳಿದ ನಾಗರತ್ನಾ ಮತ್ತಷ್ಟು ಬೆದರುತ್ತ, ‘ಅಯ್ಯಯ್ಯೋ…! ನಿಮ್ಮ ದಮ್ಮಯ್ಯಾ ಮಾರಾಯ್ರೇ…! ನಮ್ಮನ್ನೇನೂ ಮಾಡ್ಬೇಡಿ. ನೀವು ಒಳ್ಳೆಯವರು ಅಂತಲೇ ನಾವೂ ನಿಮ್ಮೊಂದಿಗೆ ಬಂದಿದ್ದಲ್ಲವಾ? ಈಗ ಇಲ್ಲಿಗೆ ಎಳೆದುಕೊಂಡು ತಂದ ಮೇಲೆ ಹೀಗೆಲ್ಲ ವರ್ತಿಸುವುದು ಸರಿಯಾ ಹೇಳಿ…?’ ಎಂದು ನಾಗರತ್ನ ಬಿಕ್ಕಳಿಸುತ್ತ ಹೇಳಿದಳು. ಅವಳ ಮಾತು ಕೇಳಿದ ಮೂವರೂ ಗಹಗಹಿಸಿ ನಕ್ಕರು. ‘ಅಲ್ಲ ಮಾರಾಯ್ತಿ, ಇನ್ನೂ ನಾವೇನೂ ಮಾಡಿಯೇ ಇಲ್ಲ! ಅಷ್ಟರಲ್ಲೇ ಭಯಪಟ್ಟರೆ ಹೇಗೆ ನೀವು? ನಿನ್ನ ಈ ದೋಸ್ತಿ ಇದ್ದಾಳಲ್ಲ, ಇವಳು ನಮ್ಮೊಡನೆ ನಕ್ರಾ ಮಾಡಿದ್ದರಿಂದಲೇ ಅಲ್ಲವಾ ನಿಮ್ಮನ್ನು ಹೊತ್ತುಕೊಂಡು ಬರುವ ಪರಿಸ್ಥಿತಿ ನಮಗೆ ಬಂದಿದ್ದು…?’ ಎಂದ ತಾಮಸ ವಿಮಲಾಳತ್ತ ತಿರುಗಿದವನು, ‘ಏನಾ ರಂಡೇ…! ನಿನ್ನ ಕೊಬ್ಬು ಇಳಿಯಿತಾ ಅಥವಾ ಇನ್ನೂ ಇದೆಯಾ…?’ ಎಂದು ಅವಳನ್ನು ದುರುಗುಟ್ಟಿ ಕೇಳಿದ. ತಾಮಸನ ಕೆಂಗಣ್ಣು ಕಂಡ ವಿಮಲ ಭಯದಿಂದ ತಲೆ ತಗ್ಗಿಸಿ ಕುಳಿತಳು. ಆಗ ತಾಮಸ ಅವಳನ್ನೇ ಮೊದಲು ಅನುಭವಿಸಲು ಮುಂದಾದ.
ಅದನ್ನು ಗ್ರಹಿಸಿದ ವಿಮಲ ಮತ್ತೆ ಜಾಗ್ರತಳಾದವಳು, ‘ನೋಡು…ನೀನೆಲ್ಲಾದರೂ ನನ್ನ ಮೈ ಮುಟ್ಟಿದೆಯೆಂದರೆ ಖಂಡಿತಾ ಹುಳು ಬಿದ್ದು ಸಾಯುತ್ತೀಯಾ! ನನ್ನ ಕೊನೆಯುಸಿರು ಇರುವ ತನಕ ಮೈ ಮುಟ್ಟಲು ಬಿಡುವುದಿಲ್ಲವಾ ಬೇವರ್ಸಿ…!’ ಎಂದು ಕಿರುಚಿ ‘ಥೂ!’ ಎಂದು ಕ್ಯಾಕರಿಸಿ ಅವನ ಮೇಲೆ ಉಗಿದುಬಿಟ್ಟಳು.
ತಾಮಸ ಒಮ್ಮೆಲೆ ಅವಕ್ಕಾದ. ಮರುಕ್ಷಣ ಅವನೊಳಗಿನ ರಾಕ್ಷಸನೂ ಎಚ್ಚೆತ್ತ. ರಪ್ಪನೆ ಅವಳತ್ತ ನುಗ್ಗಿದವನು ಅವಳ ಕಿಬ್ಬೊಟ್ಟೆಗೆ ಜಾಡಿಸಿ ಒದ್ದ. ಅವಳು, ‘ಅಯ್ಯಮ್ಮಾ…!’ ಎಂದರಚುತ್ತ ಅಷ್ಟು ದೂರ ಹೋಗಿ ಬಿದ್ದಳು.
‘ಹೇ, ಇವಳಿಗೆ ಬಹಳ ಸೊಕ್ಕಿದೆ ಮಾರಾಯಾ…! ಮೊದಲು ಇವಳನ್ನೇ ಪುಡಿಮಾಡಬೇಕು. ಬಹುಶಃ ಅದಕ್ಕಾಗಿಯೇ ನಮ್ಮನ್ನು ಕೆರಳಿಸುತ್ತಿದ್ದಾಳಂತ ಕಾಣುತ್ತದೆ!’ ಎಂದು ಗೆಳೆಯರತ್ತ ತಿರುಗಿ ಅಂದ ತಾಮಸ ರಪ್ಪನೆ ಅವಳ ಮೇಲೆರಗಿದ. ಆ ದೃಶ್ಯವನ್ನು ಕಂಡ ಗೆಳೆಯರ ಮುಖಗಳು ಉನ್ಮಾದದಿಂದ ಅರಳಿದವು. ಇತ್ತ ಗೆಳತಿಯ ಅವಸ್ಥೆಯನ್ನು ಕಂಡ ನಾಗರತ್ನ, ‘ಅಯ್ಯಯ್ಯೋ, ದೇವರೇ…! ಇದಕ್ಕೆಲ್ಲ ನಾನೇ ಕಾರಣ ಮಾರಾಯ್ತೀ…! ದಯವಿಟ್ಟು ನನ್ನನ್ನು ಕ್ಷಮಿಸನಾ…!’ ಎನ್ನುತ್ತ ವಿಮಲಾಳಿಗೆ ಕೈಮುಗಿದವಳು, ತಾಮಸನ ಪೈಶಾಚಿಕ ಕೃತ್ಯ ನೋಡಲಾಗದೆ ತಿರುಗಿ ನಿಂತು ಬಿಕ್ಕಿಬಿಕ್ಕಿ ಅಳತೊಡಗಿಳು.
ತಾಮಸನ ದುರುಳಾವತಾರವನ್ನು ಕಂಡ ಶೇಣವನ ಚಪಲವೂ ಮಂಗಮಾಯವಾಗಿತ್ತು. ‘ಓ ದೇವರೇ…! ಇವರು ಖಂಡಿತಾ ಮನುಷ್ಯರಲ್ಲ, ನರರೂಪದ ರಾಕ್ಷಸರು! ಓ ದೇವಾ ವೆಂಕಟ್ರಮಣಾ… ನನ್ನನ್ನಾದರೂ ಜೀವಸಹಿತ ಹಿಂದಿರುಗುವoತೆ ಮಾಡಪ್ಪಾ…!’ ಎಂದು ಮತ್ತೊಮ್ಮೆ ಹಲುಬಿದವನಿಗೆ ಆವರೆಗೆ ಎಂದೂ ಬಾರದ ದುಃಖವು ಒತ್ತರಿಸಿ ಬಂತು. ಯಾರಿಗೂ ಕಾಣದಂತೆ ಲುಂಗಿಯ ಕೊನೆಯನ್ನೆತ್ತಿ ಕಣ್ಣೊರೆಸಿಕೊಂಡವನು, ‘ಪರ್ಬುಗಳೇ… ನಿಮ್ಮ ದಮ್ಮಯ್ಯ ಮಾರಾಯ್ರೇ! ಪಾಪದ ಹೆಣ್ಣು ಮಕ್ಕಳವು. ಒಳ್ಳೆಯ ಮಾತಿನಲ್ಲಿ ಹೇಳಿದರೆ ಕೇಳಬಹುದು. ದಯವಿಟ್ಟು ಹಾಗೆಲ್ಲ ಹಿಂಸಿಸಬೇಡಿ…!’ ಎಂದು ತಾಮಸನಿಗೆ ಕೈಮುಗಿದು ಕೇಳಿಕೊಂಡ. ಅಷ್ಟು ಕೇಳಿದ ತಾಮಸ, ‘ಹೇ, ಕೊಂಕಣ! ಸುಮ್ಮನೆ ಮುಕುಳಿ ಮುಚ್ಕೊಂಡು ನಿಂತರೆ ಬದುಕಿದೆ. ಇಲ್ಲದಿದ್ದರೆ ನಿನ್ನ ಸೊಂಟ ಮುರಿಯಲಿಕ್ಕುಂಟು ಮಗ್ಗಾ…!’ ಎಂದು ಬಿಸಿಯುಸಿರು ದಬ್ಬುತ್ತ ಅಬ್ಬರಿಸಿದ. ಅಷ್ಟಕ್ಕೆ ತೆಪ್ಪಗಾದ ಅವನು ಅಲ್ಲೇ ಹತ್ತಿರದ ಹಾಲೆಮರವೊಂದರ ಬುಡಕ್ಕೆ ಹೋಗಿ ಮುಖ ತಿರುವಿ ನಿಂತುಕೊoಡು, ‘ಏನಾದರೂ ಮಾಡಿಕೊಂಡು ಸಾಯಿರಿ ನಾಯಿಯ ಮಕ್ಕಳೇ! ಆದರೆ ಆ ಹೆಣ್ಣು ಮಕ್ಕಳಿಗೇನಾದರೂ ಹೆಚ್ಚುಕಮ್ಮಿಯಾಗಬೇಕು. ಆಮೇಲಿದೆ ನಿಮಗೆಲ್ಲ! ಪೊಲೀಸ್ ಕಂಪ್ಲೆoಟ್ ಕೊಟ್ಟು ಮೂವರನ್ನೂ ಸರಿಯಾಗಿ ಬೆಂಡೆತ್ತಿಸಿ ಕಂಬಿ ಎಣಿಸುವಂತೆ ಮಾಡದಿದ್ದರೆ ನನ್ನ ಹೆಸರು ವಿಠ್ಠಲ ಶೇಣವನೇ ಅಲ್ಲ ತಿಳ್ಕೊಳ್ಳಿ!’ ಎಂದು ಮನಸ್ಸಿನಲ್ಲೇ ಬೈಯ್ದು ಹಲ್ಲು ಕಡಿದವನು, ಮರದ ಬುಡಕ್ಕೊರಗಿ ಕುಳಿತು ಎತ್ತಲೋ ದಿಟ್ಟಿಸುತ್ತ ಬೀಡಿ ಸೇದತೊಡಗಿದ.
‘ಮಾಂಸ’ ಎನ್ನುವ ಸರ್ವ ಜೀವಿಗಳನ್ನೂ ಹಸಿಹಸಿ ತಿಂದು ಕೊಬ್ಬಿ ಕಾಡುಮೃಗದಂತಿದ್ದ ತಾಮಸನೆದುರು, ತೆಳ್ಳನೆಯ ದುರ್ಬಲ ಬಳ್ಳಿಯಂಥ ವಿಮಲಾಳ ಸಣ್ಣ ಪ್ರತಿರೋಧವೂ ನಡೆಯಲಿಲ್ಲ. ಇತ್ತ ಗೆಳೆಯನ ಆಟವನ್ನು ಹಸಿದ ಹುಲಿಯಂತೆ ವೀಕ್ಷಿಸುತ್ತಿದ್ದ ವಾಲ್ಟರನೂ ಉದ್ರಿಕ್ತನಾಗಿ ನಾಗರತ್ನಾಳನ್ನು ಬರಸೆಳೆದುಕೊಂಡ. ಅವಳು ಮೊದಲೇ ಅರೆಜೀವವಾಗಿದ್ದವಳು ಅವನ ಮುಂದೆ ಶವದಂತೆ ಬಿದ್ದುಕೊಂಡಳು. ಮರುಗಳಿಗೆಯಲ್ಲಿ ಮೂವರೂ ಆ ಅಬಲೆಯರನ್ನು ಎಡೆಬಿಡದೆ ಭೋಗಿಸಿದರು. ಕೊನೆಯಲ್ಲಿ ಬಳಲಿ ಬೆಂಡಾದ ವಿಮಲಾಳ ದೀನ ಸ್ಥಿತಿಯನ್ನು ಕಂಡ ತಾಮಸ ಗಹಗಹಿಸಿ ನಗತೊಡಗಿದ. ಆಗ ಅವಳು, ‘ನಿಮ್ಮಿಂದ ಇನ್ನೇನು ಮಾಡಲು ಸಾಧ್ಯವೋ ರಾಕ್ಷಸರಾ…!’ ಎಂಬoಥ ವ್ಯಂಗ್ಯ, ಹತಾಶೆಯ ದೃಷ್ಟಿಯಿಂದ ಅವನನ್ನು ದಿಟ್ಟಿಸಿದವಳು ಶೂನ್ಯದತ್ತ ದೃಷ್ಟಿ ನೆಟ್ಟಳು. ಅಷ್ಟೊತ್ತಿಗೆ ನಾಗರತ್ನಾಳೂ ತುಸು ಚೇತರಿಸಿಕೊಂಡವಳು, ‘ನಿಮ್ಮ ದಮ್ಮಯ್ಯ ತಾಮಸರೇ…! ಇನ್ನಾದರೂ ನಮ್ಮನ್ನು ಬಿಟ್ಟುಬಿಡಿ. ನಾವು ಮನೆಗೆ ಹೋಗಬೇಕು!’ ಎಂದು ಅಳುತ್ತ ಬೇಡಿಕೊಂಡಳು. ಆದರೆ ಅಷ್ಟರಲ್ಲಾಗಲೇ ತಾಮಸನ ಮದವೂ ಇಳಿದಿತ್ತು. ಅವನು ಅವಳನ್ನು ಸಮೀಪ ಕರೆದು ಕುಳ್ಳಿರಿಸಿಕೊಂಡವನು ಮೈದಡವುತ್ತ, ‘ಆಯ್ತು, ಆಯ್ತು ಹೋಗಿ. ಬಿಟ್ಟು ಬಿಡುತ್ತೇನೆ. ಆದರೆ ಒಂದು ವಿಷಯ ಮಾತ್ರ ನೆನಪಿಟ್ಟುಕೊಳ್ಳಿ. ನಾಳೆಯೇನಾದರೂ ಕಂಪ್ಲೇoಟು ಗಿಂಪ್ಲೇoಟು ಅಂತ ಕೊಡಲು ಹೋದಿರೋ, ಅದರ ಮರುದಿನ ಇಬ್ಬರೂ ಇದೇ ಕಾಡಿನಲ್ಲಿ ಮಣ್ಣಾಗಿ ಹೋಗುತ್ತೀರಿ ಜಾಗ್ರತೆ!’ ಎನ್ನುತ್ತ ಕೆಂಗಣ್ಣು ಬೀರಿದ. ‘ಅಯ್ಯಯ್ಯೋ…! ಇಲ್ಲ, ಇಲ್ಲಪ್ಪಾ ದೇವರಾಣೆ! ನಮ್ಮಿಂದ ಇನ್ನು ಮುಂದೆ ನಿಮಗೆ ಯಾವ ತೊಂದರೆಯೂ ಆಗುವುದಿಲ್ಲ!’ ಎಂದು ನಾಗರತ್ನ ಉಕ್ಕಿ ಬಂದ ದುಃಖವನ್ನು ಹತ್ತಿಕ್ಕುತ್ತ ಅಂದಳು.
‘ಸರಿ ಹಾಗಾದರೆ, ಹೊರಡಿ! ಹೇ ಕೊಂಕಣಾ ಇಲ್ಲಿ ಬಾರನಾ…! ನಿನಗೂ ಅಷ್ಟೇ, ಆಮೇಲೆ ಸ್ಟಾö್ಯಂಡಿಗೆ ಹೋಗಿ ಯೂನಿಯನ್ ಗೀನಿಯನ್ ಅಂತೆಲ್ಲ ಬಾಲ ಬಿಚ್ಚಿದೆಯಾ ನಿನ್ನ ಗತಿಯೂ ಅಷ್ಟೇ ಮತ್ತೆ…!’ ಎಂದು ತಾಮಸ ಕೆಕ್ಕರಿಸಿದ. ‘ಅಯ್ಯೋ, ನನಗ್ಯಾಕೆ ಬೇಕು ಮಾರಾಯ್ರೆ ನಿಮ್ಮ ಸಹವಾಸ? ಇಷ್ಟಾದದ್ದೇ ಬಂಜರವಾಯ್ತು!’ ಎಂದು ಶೇಣವನು ಕೈಮುಗಿಯುತ್ತ ಹೊರಡಲನುವಾದ. ‘ಸರಿ, ಸರಿ. ಇವರನ್ನು ಮನೆಯವರೆಗೆ ಬಿಟ್ಟು ಹೋಗಬೇಕು ಗೊತ್ತಾಯ್ತಾ…?’ ಎಂದ ತಾಮಸ ನೂರರ ನೋಟೊಂದನ್ನು ತೆಗೆದು ವಿಠ್ಠಲನೆದುರು ಎಸೆದ. ಶೇಣವನ ಪಾಲಿಗೆ ಅದು ದೊಡ್ಡ ನೋಟು. ಆದರೆ ಆಹೊತ್ತು ಅದನ್ನು ಮುಟ್ಟಲು ಭಯವಾಯಿತೋ, ಹೇಸಿಗೆಯೆನಿಸಿತೋ ಅವನಿಗೇ ತಿಳಿಯಲಿಲ್ಲ. ‘ಛೇ! ಬಾಡಿಗೆ ಗೀಡಿಗೆ ಏನೂ ಬೇಡ ಮಾರಾಯ್ರೇ…!’ ಎಂದು ತಿರುಗಿಯೂ ನೋಡದೆ ಬಿರಬಿರನೇ ನಡೆದ. ಅದನ್ನು ಕಂಡ ತಾಮಸ, ‘ಹೇ, ಕೊಂಕಣ… ದುಡ್ಡು ತೆಗೆದುಕೊಂಡು ಹೋಗನಾ…! ಆ ಮೇಲೆ ರಿಕ್ಷಾಕ್ಕೇನು ಮೂತ್ರ ಹುಯ್ಯುತ್ತೀಯಾ ಮಗನೇ…?’ ಎಂದು ಗೆಳೆಯರತ್ತ ನೋಡುತ್ತ ಜೋರಾಗಿ ನಕ್ಕಾಗ ಅವರೂ ಧನಿಗೂಡಿಸಿದರು. ಶೇಣವನಿಗೆ ಏನನಿಸಿತೋ? ರಪ್ಪನೆ ಹಿಂದಿರುಗಿ ಬಂದು ಹಣವನ್ನು ಹೆಕ್ಕಿ ಒಂದೇ ಉಸಿರಿಗೆ ರಿಕ್ಷಾದತ್ತ ದಾಪುಗಾಲಿಕ್ಕಿದ. ಆದರೆ ವಿಮಲ ನಡೆಯಲಾರದಷ್ಟು ನಿತ್ರಾಣವಾಗಿದ್ದಳು. ನಾಗರತ್ನಾ ಅವಳನ್ನೆಬ್ಬಿಸಿ ಆಸರೆಯಾಗಿ ಕರೆದೊಯ್ಯುತ್ತಿದ್ದುದನ್ನು ಕಂಡ ಗೆಳೆಯರು ಗೆಲುವಿನ ನಗು ಹಾರಿಸುತ್ತ ದಟ್ಟ ತರಗೆಲೆಗಳ ಮೇಲೆ ಮೈಚೆಲ್ಲಿ ಮಲಗಿಕೊಂಡರು.
(ಮುoದುವರೆಯುವುದು)