
ಧಾರವಾಹಿ 24
ಪ್ರೇಮ ಮತ್ತು ತೋಮನ ಸಮ್ಮಿಲನದ ಕಾರಣದಿಂದ ಅಂಗರನ ಮನೆಯಲ್ಲಿ ಬೀಸಿದ ಬಿರುಗಾಳಿಯು ಕೆಲವು ದಿನಗಳ ನಂತರ ತುಸು ಶಾಂತಸ್ಥಿತಿಗೆ ಮರಳಿತು. ಹಾಗಾಗಿ ಆವತ್ತು ದುರ್ಗಕ್ಕ ಮುಂಜಾನೆ ಎಂದಿನoತೆಯೇ ಬೇಗನೆದ್ದು ಮುಖ ತೊಳೆದು ಕೊಟ್ಟಿಗೆಗೆ ಹಾಲು ಕರೆಯಲು ಹೊರಟವಳು ಮಗಳ ಕೋಣೆಯತ್ತ ನಡೆದು, ‘ಪ್ರೇಮಾ, ಹೇ, ಪ್ರೇಮಾ ಏಳಮ್ಮಾ… ಎರಡು ದಿನದ ಪಾತ್ರೆಪರಡಿಗಳು ರಾಶಿ ಬಿದ್ದಿವೆ. ಬೇಗನೆದ್ದು ತೊಳೆದಿಡು…!’ ಎನ್ನುತ್ತ ಎಬ್ಬಿಸಹೋದಳು. ಆದರೆ ಅವಳ ಕೋಣೆಯ ಬಾಗಿಲು ಅರೆ ತೆರೆದಂತಿತ್ತು. ದುರ್ಗಕ್ಕ ಒಳಗೆ ಹೊಕ್ಕಳು. ಮಗಳು ಕಾಣಿಸಲಿಲ್ಲ. ಬಹುಶಃ ಆಗಲೇ ಎದ್ದು ಬಚ್ಚಲಿಗೆ ಹೋಗಿರಬೇಕೆಂದುಕೊoಡವಳು ಹಟ್ಟಿಗೆ ಹೋಗಿ ದನಕರುಗಳ ಸೆಗಣಿ ಗಂಜಳ ಸಾರಿಸಿ ಹಾಲು ಕರೆದು ಮರಳಿ ಬಂದು ಮಗಳನ್ನು ಕೂಗಿದಳು. ಆಗಲೂ ಪ್ರೇಮಾಳ ಉತ್ತರವಿಲ್ಲ. ಗಡಿಬಿಡಿಯಿಂದ ಹಾಲಿನ ಪಾತ್ರೆಯನ್ನು ಅಡುಗೆ ಕೋಣೆಯಲ್ಲಿಟ್ಟವಳು ಮಗಳನ್ನು ಮನೆಯೊಳಗೆಲ್ಲ ಹುಡುಕಿದಳು. ಎಲ್ಲೂ ಕಾಣದಿದ್ದಾಗ ಹಿತ್ತಲಿಗೆ ಧಾವಿಸಿದಳು. ಅಲ್ಲೂ ಸುಳಿವು ಸಿಗಲಿಲ್ಲ. ಗಾಬರಿಗೊಂಡು ಮಗನನ್ನೂ ಗಂಡನನ್ನೂ ಎಬ್ಬಿಸಿ ವಿಷಯ ತಿಳಿಸಿದಳು. ಅವರು ಗೊಣಗುತ್ತಾ ಎದ್ದವರು ದುರ್ಗಕ್ಕ ಹೋದ ಕಡೆಗಳಿಗೇ ಮರಳಿ ಹೋಗಿ ಮತ್ತೊಂದಷ್ಟು ಹೊತ್ತು ಹುಡುಕಾಡಿದರು. ಆದರೂ ಪ್ರೇಮಾಳ ಪತ್ತೆಯಾಗಲಿಲ್ಲ.
ಅಕ್ಕ ಕಾಣದಿದ್ದುದು ಅಶೋಕನಿಗೂ ದಿಗಿಲಾಯಿತು. ಅದರೊಂದಿಗೆ ತೀವ್ರ ಸಂಕಟವೂ ಕಾಡಿತು. ಛೇ! ಛೇ! ತಾನು ಮೊನ್ನೆ ಕೋಪದ ಬರದಲ್ಲಿ ಆ ಗರ್ಭಿಣಿಯನ್ನು ಹಾಗೆಲ್ಲ ಹೊಡೆದು ಬಡಿದು ಹಿಂಸಿಸಬಾರದಿತ್ತು ಎಂದು ಪಶ್ಚಾತ್ತಾಪಪಟ್ಟ. ಜೊತೆಗೆ ಮತ್ತೊಂದು ಭಯವೂ ಅವನನ್ನು ಆವರಿಸಿತು. ಬಹುಶಃ ಅದೇ ಅವಮಾನದಿಂದ ಅವಳೇನಾದರೂ ಹೆಚ್ಚುಕಮ್ಮಿ ಮಾಡಿಕೊಂಡಿದ್ದರೇ…? ಎಂದು ಯೋಚಿಸಿದವನು ಮೆಲ್ಲನೆ ಬೆವರಿದ. ಇತ್ತ ಅದೇ ಭೀತಿಯು ದುರ್ಗಕ್ಕ ಮತ್ತು ಅಂಗರನನ್ನೂ ಹಿಡಿದಿತ್ತು. ದುರ್ಗಕ್ಕನಿಗೂ ತನ್ನ ತಪ್ಪಿನರಿವಾಗಿ ಮಗಳ ಮೇಲೆ ಎಂದೂ ಇಲ್ಲದ ಮಮತೆಯುಕ್ಕಿತು. ಅಯ್ಯಯ್ಯೋ, ಮಗಾ…ಎಲ್ಲಿದ್ದಿಯೇ? ಏನು ಮಾಡ್ಕೊಂಡಿಯೇ…? ನಾವು ತಪ್ಪು ಮಾಡಿಬಿಟ್ಟೆವಮ್ಮಾ…! ವಯಸ್ಸಿಗೆ ಬಂದ ನಿನ್ನ ಆಸೆ ಆಕಾಂಕ್ಷೆಗಳನ್ನು ಚೂರೂ ಅರ್ಥ ಮಾಡಿಕೊಳ್ಳದೆ ನಮ್ಮ ಸ್ವಾರ್ಥದಲ್ಲೇ ಮುಳುಗಿ ನಿನ್ನನ್ನು ಕಡೆಗಣಿಸಿಬಿಟ್ಟೆವು ಮಗಳೇ…! ಎಂದು ತುಸುಹೊತ್ತು ಅಳುತ್ತ ಕುಳಿತಳು. ಬಳಿಕ ಮತ್ತೇನೋ ಹೊಳೆಯಿತು. ದಢಕ್ಕನೆದ್ದು ಅಶೋಕನನ್ನು ಕರೆದುಕೊಂಡು ಹೊರಗೆ ಹೊರಟಳು. ಮೊದಲಿಗೆ ತಮ್ಮ ತೋಟದತ್ತ ದಾಪುಗಾಲಿಕ್ಕಿ ನಡುಗುತ್ತ ಬಾವಿಯನ್ನು ಇಣಿಕಿದಳು. ಅಲ್ಲೇನೂ ಕಾಣದಿದ್ದಾಗ ನೆಮ್ಮದಿಯ ಉಸಿರುಬಿಟ್ಟು ಸಮೀಪದ ಶಂಕರ ಭಟ್ಟರ ತಾವರೆ ಕೆರೆಯತ್ತ ಓಡಿದಳು. ಅಲ್ಲಿಯೂ ನಿರಾಳಳಾಗಿ ಫರ್ಲಾಂಗು ದೂರದ ತುಂಬಿ ಹರಿಯುತ್ತಿದ್ದ ತೋಡು ತೊರೆಗಳನ್ನೆಲ್ಲ ಕಣ್ಣಿಗೆ ಕೈ ಅಡ್ಡ ಹಿಡಿದುಕೊಂಡು, ಮುದಿ ದೇಹದೊಳಗೆ ತಾಳತಪ್ಪಿ ಬಡಿದುಕೊಳ್ಳುತ್ತಿದ್ದ ಬಡಕಲು ಹೃದಯವನ್ನು ಹತೋಟಿಗೆ ತಂದುಕೊಳ್ಳುತ್ತ ಮಗಳ ಚಪ್ಪಲಿಯಾದರೂ ಕಾಣಿಸುತ್ತದಾ…? ಎಂದು ಹುಡುಕಿಯೇ ಹುಡುಕಿದಳು. ಆದರೂ ಅವಳ ಸುಳಿವು ಸಿಗಲಿಲ್ಲ. ಸೋತು ಹೈರಾಣಾಗಿ ಮನೆಗೆ ಮರಳಿದಳು.
ಅತ್ತ ಅಂಗರನೂ ಕಂಗಾಲಾಗಿದ್ದ. ಆದರೆ ತನ್ನ ಹೆಂಡತಿಯ ದುಃಖ ನೋಡಲಾಗದೆ, ‘ಅಲ್ಲ ಮಾರಾಯ್ತೀ, ನೀನೊಬ್ಬಳು ಯಾಕೆ ಬೇಡದಿದ್ದನ್ನೆಲ್ಲ ಯೋಚಿಸುತ್ತ ಮನಸ್ಸು ಹಾಳು ಮಾಡಿಕೊಳ್ಳುತ್ತೀ ಹೇಳು…? ಅವಳು ಇಲ್ಲೇ ಎಲ್ಲಾದರೂ ಹೊರಗೆ ಹೋಗಿರಬಹುದು ಅಥವಾ ಹೆಡ್ಡಿ ಪರ್ಬುಗಳ ಮನೆಗಾದರೂ ಹೋಗಿರಬಹುದಲ್ಲವಾ? ಒಮ್ಮೆ ಅಲ್ಲಿಗೂ ಹೋಗಿ ನೋಡಿಕೊಂಡು ಬನ್ನಿ. ಆಮೇಲೆ ಆಕಾಶ ಭೂಮಿ ಒಂದಾಗುವoತೆ ಬೊಬ್ಬೆ ಹಾಕುವಿಯಂತೆ!’ ಎಂದ ಮೃದುವಾಗಿ. ಗಂಡನ ಧ್ವನಿ ಕಿವಿಗೆ ಬಿದ್ದ ಕೂಡಲೇ ದುರ್ಗಕ್ಕನ ದುಃಖವು ರೌದ್ರಾವತಾರವನ್ನು ತಳೆಯಿತು. ‘ನೀವೊಬ್ಬರು ಬಾಯಿ ಮುಚ್ಚಿಕೊಂಡಿರುತ್ತೀರಾ…? ಇಷ್ಟಕ್ಕೆಲ್ಲ ನೀವೇ ಕಾರಣ! ಅವಳು ಹೆಂಗಸಾಗಿ ಎಷ್ಟು ವರ್ಷವಾಯಿತು? ಪ್ರಾಯಕ್ಕೆ ಬಂದ ಹೆಣ್ಣು ಮಗಳೊಬ್ಬಳು ಮದುವೆ ಮಸಿರಿ ಇಲ್ಲದೆ ಮನೆಯಲ್ಲೇ ಕುಳಿತಿದ್ದಾಳೆ. ಅವಳಿಗೂ ಒಂದು ಸಂಸಾರವಾಗಬೇಕು. ಅದಕ್ಕೂ ಭವಿಷ್ಯವಿದೆ ಅಂತ ನೀವು ಯಾವತ್ತಾದರೂ ಯೋಚಿಸಿದ್ದೀರಾ? ನಾನೊಬ್ಬಳು ಅದೆಷ್ಟು ಹೇಳಿದರೂ ನೀವಿಬ್ಬರು ಗಂಡಸರು ಆ ವಿಷಯವನ್ನು ಕಿವಿಗೆ ಹಾಕಿಕೊಂಡದ್ದುoಟಾ ಹೇಳಿ? ನಿಮಗೆ ನಿಮ್ಮ ಕುಡಿತವೂ ಇವನಿಗೆ ಕೋಳಿಕಟ್ಟವೂ ಹೆಚ್ಚಾಗಿಬಿಟ್ಟಿತಲ್ಲ! ಹಾಗಾಗಿ ಅವಳು ಜಾರಿ ಬಿದ್ದ ತಪ್ಪಿಗೂ ನಾವೇ ಹೊಣೆ ಗೊತ್ತಾಯ್ತಾ! ಆದರೂ ಅಪ್ಪ, ಮಗ ಸೇರಿಕೊಂಡು ಅವಳನ್ನೇ ಹೊಡೆದು ಬಡಿದು ಸಾಯಿಸಿಬಿಟ್ಟಿರಿ. ಥೂ, ನಿಮ್ಮ ಜನ್ಮಕ್ಕಿಷ್ಟು…!’ ಎಂದು ರೇಗಾಡಿ ಅತ್ತಳು. ಹೆಂಡತಿಯ ಕೋಪವನ್ನು ಕಂಡ ಅಂಗರ ತಟ್ಟನೆ ತಣ್ಣಗಾದವನು ಅವಳಾಡಿದ ಸತ್ಯವನ್ನು ಅರಗಿಸಿಕೊಳ್ಳಲಾಗದೆ ಶೂನ್ಯದೆಡೆಗೆ ದೃಷ್ಟಿ ನೆಟ್ಟು ಕುಳಿತುಬಿಟ್ಟ. ಆದರೆ ತನ್ನ ಬೈಗುಳದ ನಡುವೆಯೂ ಗಂಡನ ಬಾಯಿಯಿಂದ ಹೆಡ್ಡಿ ಪರ್ಬುಗಳ ಹೆಸರು ಹೊರಗೆ ಬಿದ್ದುದನ್ನು ನೆನೆದ ದುರ್ಗಕ್ಕ ಕೂಡಲೇ ಮಗನನ್ನು ಕರೆದುಕೊಂಡು ಅತ್ತ ಧಾವಿಸಿದಳು.
‘ಬಾಯಮ್ಮಾ, ಓ ಬಾಯಮ್ಮಾ…!’ ಎಂದು ದುರ್ಗಕ್ಕ ದುಃಖವನ್ನು ಹತ್ತಿಕ್ಕಿಕೊಂಡು ಹೆಲೆನಾಬಾಯಿಯ ಅಂಗಳದಲ್ಲಿ ನಿಂತು ಕೂಗಿದಳು. ಅವಳ ಧ್ವನಿ ಕೇಳಿದ ಬಾಯಮ್ಮಾ ಹೊರಗೆ ಬಂದವರು, ‘ಓಹೋ, ದುರ್ಗಕ್ಕನಾ…? ಒಳಗೆ ಬನ್ನಿ. ಅಶೋಕ ಬಾರನಾ ಕುಳಿತುಕೊಳ್ಳಿ. ಏನಾಯಿತು…?’ ಎಂದು ಆತಂಕದಿoದ ಪ್ರಶ್ನಿಸಿದರು. ಆದರೆ ವಿಷಯ ಅವರಿಗೂ ತಿಳಿದಿತ್ತು. ಹಿಂದಿನ ದಿನ ತೋಮ ಮತ್ತು ಪ್ರೇಮ ಇಬ್ಬರೂ ಅವರ ತೋಟದಲ್ಲಿ ಕುಳಿತು ಮಾತುಕತೆಯಾಡಿ ಗೆಲುವಿನಿಂದಲೇ ಹೊರಟು ಹೋಗಿದ್ದರು. ಆದರೆ ಅವರು ತಮ್ಮ ಮುಂದಿನ ನಿರ್ಧಾರವೇನು ಎಂಬುದನ್ನು ಮಾತ್ರ ಇವರಿಗೆ ತಿಳಿಸಿರಲಿಲ್ಲ. ಆದ್ದರಿಂದ ಅದನ್ನೂ ಮೀರಿ ಬೇರೇನಾದರೂ ಅನಾಹುತ ನಡೆದಿರಬಹುದೇ…? ಎಂದು ಯೋಚಿಸಿ ತುಸು ತಳಮಳಗೊಂಡರು. ಅದಕ್ಕೆ ಸರಿಯಾಗಿ ದುರ್ಗಕ್ಕನೂ, ‘ಅಯ್ಯೋ… ಬಾಯಮ್ಮಾ ಬೆಳಗ್ಗಿನಿಂದಲೂ ಊರಿಡೀ ಹುಡುಕಿಯಾಯಿತು. ಪ್ರೇಮ ಎಲ್ಲೂ ಕಾಣಿಸುತ್ತಿಲ್ಲ…! ಇಲ್ಲಿಗೇನಾದರೂ ಬಂದಿದ್ದಳೇ…?’ ಎಂದು ಕಣ್ಣೀರಿರೊರೆಸುತ್ತ ಕೇಳಿದ್ದು ಅವರನ್ನು ಇನ್ನೂ ದಿಗಿಲಾಗಿಸಿತು. ಆದ್ದರಿಂದ ನಿನ್ನೆ ತಾನು ತೋಮನ ಮಾತು ಕೇಳಿ ಪ್ರೇಮಾಳನ್ನು ಮನೆಗೆ ಕರೆಯಿಸಿದ್ದನ್ನೂ, ಅವರು ಏಕಾಂತದಲ್ಲಿ ಕುಳಿತು ಮಾತಾಡಿದ್ದನ್ನೂ ಇವರೊಂದಿಗೆ ಹೇಳಲಾ ಬೇಡವಾ…? ಎಂಬ ಗೊಂದಲಕ್ಕೆ ಬಿದ್ದರು. ಬಳಿಕ ಏನಾದರಾಗಲಿ ಇದ್ದ ವಿಷಯವನ್ನು ಹೇಳಿ ಬಿಡುವುದೇ ಒಳ್ಳೆಯದು. ಆದರೆ ಪೂರ್ಣಸತ್ಯವನ್ನು ಹೇಳದಿದ್ದರಾಯ್ತು! ಎಂದುಕೊoಡು, ‘ಇವತ್ತು ಬಂದಿಲ್ಲ ದುರ್ಗಕ್ಕಾ. ನಿನ್ನೆ ಹಾಲಿನ ಡೈರಿಯ ಲೆಕ್ಕಾಚಾರ ನೋಡಲಿಕ್ಕಿತ್ತು. ಅದಕ್ಕೆ ಬರಹೇಳಿದ್ದೆ. ಅದೇ ಹೊತ್ತಿಗೆ ತೋಮನೂ ಬಂದಿದ್ದ. ಇಬ್ಬರೂ ತೋಟದಲ್ಲಿ ಕುಳಿತು ಏನೋ ಮಾತಾಡುತ್ತಿದ್ದರು. ಆಗ ನಾನು ಒಳಗೆ ಹೋದವಳು ಕೆಲಸ ಮುಗಿಸಿ ಹೊರಗೆ ಬರುವಷ್ಟರಲ್ಲಿ ಇಬ್ಬರೂ ಹೊರಟು ಹೋಗಿದ್ದರು!’ ಎಂದವರು, ‘ಯಾವುದಕ್ಕೂ ನೀವೊಮ್ಮೆ ತೋಮನನ್ನು ವಿಚಾರಿಸಿ ನೋಡುವುದು ಒಳ್ಳೆಯದು!’ ಎಂಬ ಸಲಹೆಯನ್ನೂ ಕೊಟ್ಟರು. ನಂತರ ಅವರಿಗೆ ಮತ್ತೇನೋ ಹೇಳಬೇಕೆನಿಸಿತು. ಆದ್ದರಿಂದ ಧೈರ್ಯ ಮಾಡಿಕೊಂಡು, ‘ನೋಡಿ ದುರ್ಗಕ್ಕಾ, ಒಂದು ಮಾತು ಹೇಳುತ್ತೇನೆ. ತಪ್ಪು ತಿಳ್ಕೋಬಾರದು. ಪ್ರೇಮಾಳನ್ನು ನೀವು ತೋಮನಿಗೇ ಕೊಟ್ಟು ಯಾಕೆ ಮದುವೆ ಮಾಡಬಾರದು…? ಅವಳೂ ಅವನನ್ನು ತುಂಬಾ ಹಚ್ಚಿಕೊಂಡಿದಾಳೆ ಮತ್ತು ಅವನೂ ಅವಳನ್ನು ಅಷ್ಟೇ ಇಷ್ಟಪಡುತ್ತಾನೆ. ಇದನ್ನೆಲ್ಲ ನಾನೂ ಸಾಕಷ್ಟು ಬಾರಿ ಗಮನಿಸಿಯೇ ಈ ಮಾತು ಹೇಳುತ್ತಿದ್ದೇನೆ!’ ಎಂದರು ಆಪ್ತತೆಯಿಂದ. ಬಾಯಮ್ಮನ ಮಾತು ಕೇಳಿದ ಅಶೋಕ ಮಾತ್ರ ಕೆಂಡಾಮoಡಲನಾದ.
‘ಥೂ…! ನೀವೆಂಥದು ಬಾಯಮ್ಮಾ ಹೀಗೆಲ್ಲ ಮಾತಾಡುವುದು…! ನನ್ನ ಅಕ್ಕನನ್ನು ಆ ಮೂರುಕಾಸಿನವನಿಗೆ ಕೊಡುವುದಾ? ಅದೊಂದು ಸಂಗತಿ ನಾನು ಜೀವಂತ ಇರುವತನಕ ಸಾಧ್ಯವಿಲ್ಲ ಬಿಡಿ! ಅವನೆಂಥ ದ್ರೋಹ ಮಾಡಿದ್ದಾನೆ ಅಂತ ಗೊತ್ತುಂಟಾ ನಿಮಗೆ? ಅದನ್ನು ನೆನೆದರೆ ಅವನನ್ನು ಹಿಡಿದು ಕೊಚ್ಚಿ ಹಾಕುವ ಅಂತನ್ನಿಸುತ್ತದೆ. ಯಾವುದಕ್ಕೂ ಇವಳೊಮ್ಮೆ ನಮ್ಮ ಕೈಗೆ ಸಿಗಲಿ. ಆ ಮೇಲೆ ಇದೆ ಅವನಿಗೆ!’ ಎನ್ನುತ್ತ ಕಿಡಿಕಾರಿದ. ಅಷ್ಟು ಕೇಳಿದ ಬಾಯಮ್ಮನಿಗೆ ಆಘಾತವೂ, ವಿಷಾದವೂ ಒಟ್ಟೊಟ್ಟಿಗಾಯಿತು. ಆದ್ದರಿಂದ ಅವರು, ‘ಏನೋ ಅಶೋಕ ನನಗೆ ಆ ವಿಷಯವೆಲ್ಲ ಗೊತ್ತಿಲ್ಲ. ನನಗನಿಸಿದ್ದನ್ನು ಹೇಳಿಬಿಟ್ಟೆನಷ್ಟೇ. ಇನ್ನು ಅವಳು ನಿಮ್ಮ ಮನೆ ಮಗಳು. ನಿರ್ಧಾರವೂ ನಿಮ್ಮದೇ! ಹ್ಞೂಂ ಆಯ್ತು, ದುರ್ಗಕ್ಕಾ ಹೋಗಿ ತೋಮನನ್ನು ವಿಚಾರಿಸಿ ನೋಡಿ!’ ಎಂದು ನೀರಸವಾಗಿ ನುಡಿದು ಸುಮ್ಮನಾದರು.
ಇತ್ತ ತನ್ನ ಮಗಳು ಕಾಣೆಯಾದ ಮತ್ತು ಅವಳ ಸಾವು, ಬದುಕಿನ ಕುರಿತೇ ಚಿಂತಿಸುತ್ತಿದ್ದ ದುರ್ಗಕ್ಕನಿಗೆ ತೋಮನಿಂದ ಕೆಟ್ಟ ಅವಳನ್ನು ಅವನಿಗೇ ಕೊಟ್ಟು ಮದುವೆ ಮಾಡಬೇಕೆಂಬ ಯೋಚನೆಯು ಆವರೆಗೂ ಸುಳಿದಿರಲೇ ಇಲ್ಲ. ಈಗ ಬಾಯಮ್ಮನ ಮಾತು ಕೇಳಿದವಳಿಗೆ ‘ಅರೇ, ಹೌದಲ್ಲವಾ…!’ ಎಂದನ್ನಿಸಿತು. ಆದ್ದರಿಂದ ಆ ಕುರಿತೂ ತುಸು ಯೋಚಿಸತೊಡಗಿದಳು. ಆದರೆ ಕೊನೆಯಲ್ಲಿ ತಮ್ಮ ಹಿರಿಯರ ಕಾಲದಿಂದಲೂ ತನ್ನ ಅಥವಾ ಗಂಡನ ಕುಟುಂಬದಲ್ಲಿ ಈವರೆಗೆ ಯಾರೂ ಸೊಕ್ಕಿನಿಂದ ಓಡಿ ಹೋದುದಾಗಲೀ, ಬೇರೆ ಜಾತಿಯವರನ್ನು ಕಟ್ಟಿಕೊಂಡದ್ದಾಗಲೀ ನಡೆದೇ ಇಲ್ಲವಲ್ಲ! ಎಲ್ಲರೂ ಜಾತಿಯ ಗೌರವದಿಂದಲೇ ಬಾಳುತ್ತ ಬಂದವರು. ಹೀಗಿರುವಾಗ ಆ ತೋಮ ಎಲ್ಲಿಂದ ಬಂದವನು, ಅವನ ಜಾತಿ ಯಾವುದು? ಎಂಥ ಮನೆತನದವನು ಎಂಬ ಯಾವ ವಿಚಾರವನ್ನೂ ತಿಳಿಯದೆ ಏಕಾಏಕಿ ಪರದೇಸಿಯೊಬ್ಬನಿಗೆ ಮಗಳನ್ನು ಕೊಟ್ಟು ಬಿಡಲು ಅವಳೊಳಗಿನ ಮಾತೃ ಪ್ರೇಮವೂ, ಜಾತಿಯ ಮೋಹವೂ ಸುತಾರಾಂ ಒಪ್ಪಲಿಲ್ಲ. ಹಾಗಾಗಿ ಆ ಯೋಚನೆಯನ್ನು ಕಿತ್ತೊಗೆದವಳು, ‘ಆಯ್ತು ಬಾಯಮ್ಮಾ ಯಾವುದಕ್ಕೂ ಅವಳೊಮ್ಮೆ ನಮಗೆ ಸಿಗಲಿ. ಆಮೇಲೆ ಮುಂದಿನದನ್ನು ಯೋಚಿಸುತ್ತೇವೆ!’ ಎಂದು ತುಸು ಒರಟಾಗಿಯೇ ಹೇಳಿ ಮಗನೊಂದಿಗೆ ತೋಮನ ಶೆಡ್ಡಿನತ್ತ ಧಾವಿಸಿದಳು.
ಇತ್ತ ಅಶೋಕನ ಯೋಚನೆ ಬೇರೆಯೇ ದಾರಿಯಲ್ಲಿ ಸಾಗುತ್ತಿತ್ತು. ಅಕ್ಕ ಕಾಣೆಯಾದ ಆರಂಭದಲ್ಲಿ ಅವನಲ್ಲೂ ಪಶ್ಚಾತ್ತಾಪ, ಅನುಕಂಪಗಳೆದ್ದು ಕಾಡಿದ್ದು ಹೌದಾದರೂ ಈಗ ಅವಳೆಲ್ಲಾದರೂ ತೋಮನೊಂದಿಗಿರಬಹುದೇನೋ…? ಎಂದು ಯೋಚಿಸಿದವನಿಗೆ ಅಕ್ಕನ ಮೇಲಿನ ಅಕ್ಕರೆ, ಕಾಳಜಿ ತಟ್ಟನೆ ಉರಿದು ಬೂದಿಯಾಗಿ ಅವಮಾನ, ಆಕ್ರೋಶವು ತಾಂಡವವಾಡತೊಡಗಿತು. ಬಾಯಮ್ಮ ಹೇಳಿದಂತೆ ಈ ಹಾಳಾದವಳೆಲ್ಲಾದರೂ ಆ ನಾಯಿಯೊಂದಿಗಿರಬೇಕು…! ಆಕ್ಷಣವೇ ನನ್ನ ಮನೆಯ ಮಾನಮರ್ಯಾದೆಯೆಲ್ಲ ಮೂರುಕಾಸಿಗೆ ಹರಾಜಾದಂತೆಯೇ ಸರಿ! ಓ ದೇವರೇ…! ಹಾಗೊಂದು ಆಗದಂತೆ ಕಾಪಾಡಪ್ಪಾ…!’ ಎಂದುಕೊoಡು ಹಲುಬಿದ. ಬಳಿಕ, ಹಾಗೇನಾದರೂ ಆದರೆ ಅವರಿಬ್ಬರನ್ನೂ ಅಲ್ಲೇ ಕೊಚ್ಚಿ ಹಾಕುವುದು ಖಂಡಿತಾ!’ ಎಂದುಕೊoಡು ಆವೇಶದಿಂದ ತಾಯಿಯೊಡನೆ ಹೆಜ್ಜೆ ಹಾಕಿದ.
ಹೆಲೆನಾಬಾಯಿಯ ತೋಟ ದಾಟಿ ಒಂದು ಫರ್ಲಾಂಗು ದೂರದ ಗುಡ್ಡೆಯ ದಾರಿಯಲ್ಲಿ ಸಾಗಿದರೆ ಶ್ರೀಧರ ಶೆಟ್ಟರ ಎಸ್ಟೇಟು ಕಾಣಿಸುತ್ತದೆ. ದುರ್ಗಕ್ಕನೂ, ಅಶೋಕನೂ ಎಸ್ಟೇಟನ್ನು ಸಮೀಪಿಸುತ್ತಿದ್ದರು. ಅದೇ ಹೊತ್ತಿಗೆ ಎಸ್ಟೇಟಿನ ಮುಖ್ಯದ್ವಾರದ ಪಕ್ಕದ ತೋಮನ ಶೆಡ್ಡಿನ ಅಂಗಳವನ್ನು ಯಾರೋ ಹೆಣ್ಣೊಬ್ಬಳು ಗುಡಿಸುತ್ತಿರುವುದು ಕಾಣಿಸಿತು. ಅವನ ಅಂಗಳಕ್ಕೆ ಇಡುಸೂಡಿ ಸೋಕಿಸದೆ ಅದ್ಯಾವ ಕಾಲವಾಗಿತ್ತೋ? ಆ ಹೆಣ್ಣು ಮಗಳು ಪದೇಪದೇ ನೀರು ಸಿಂಪಡಿಸುತ್ತ ಗುಡಿಸುತ್ತಿದ್ದಳು. ಹಾಗಾಗಿ ಸುತ್ತಲೂ ಕೆಂಧೂಳು ಆವರಿಸಿತ್ತು. ಅದರಿಂದಾಗಿ ಅಮ್ಮ, ಮಗನಿಗೆ ತಾವಲ್ಲಿಗೆ ತಲುಪುವವರೆಗೆ ಬರೇ ಹೆಣ್ಣಿನಾಕೃತಿಯೊಂದು ಮಸುಕಾಗಿ ಕಾಣಿಸುತ್ತಿದ್ದುದು, ಆ ಮನೆ ಹತ್ತಿರವಾಗುತ್ತಿದ್ದಂತೆ ಅಲ್ಲಿ ಗುಡಿಸುತ್ತಿರುವವಳು ತನ್ನಕ್ಕನೇ ಎಂಬುದು ಅಶೋಕನಿಗೆ ಸ್ಪಷ್ಟವಾಗಿ ಸಿಡಿಲೆರಗಿದಂತಾಯಿತು! ದುರ್ಗಕ್ಕನೂ ಅವಕ್ಕಾಗಿ, ‘ಅಯ್ಯಯ್ಯೋ, ಮಗಾ…! ಏನಮ್ಮಾ ಇದೆಲ್ಲಾ..? ಎಂಥ ಕೆಲಸ ಮಾಡಿಬಿಟ್ಟಿ ಮಾರಾಯ್ತೀ…? ಥೂ! ಥೂ…! ಮದುವೆ ಮಸಿರಿ ಒಂದೂ ಇಲ್ಲದೆ ಯಾವನೊಂದಿಗೋ ಓಡಿ ಬಂದಿದ್ದೀಯಲ್ಲ ನಾಚಿಕೆಯಾಗಲಿಲ್ಲವಾ ನಿಂಗೆ…?’ ಎನ್ನುತ್ತ ಬಾಯಿಗೆ ಸೆರಗು ಅಡ್ಡ ಹಿಡಿದುಕೊಂಡು ಗಳಗಳನೇ ಅಳತೊಡಗಿದಳು. ಮರುಕ್ಷಣ ಏನನಿಸಿತೋ, ತಟ್ಟನೆ ಅಳು ನಿಲ್ಲಿಸಿ ಅತ್ತಿತ್ತ ಸೂಕ್ಷö್ಮವಾಗೊಮ್ಮೆ ಅವಲೋಕಿಸಿದವಳು, ‘ಹ್ಞೂಂ! ಬಾ, ಬಾ. ಮನೆಗೆ ಹೋಗುವ. ಯಾರಾದರೂ ನೋಡಿಯಾರು. ಆದದ್ದು ಆಗಿ ಹೋಯಿತು. ಎಲ್ಲದಕ್ಕೂ ಪರಿಹಾರವಿದೆ. ಮನೆಗೆ ಹೋಗಿ ಯೋಚಿಸುವ. ಹ್ಞೂಂ! ಹೊರಡು ಮಾರಾಯ್ತೀ!’ ಎಂದು ಕಣ್ಣೊರೆಸಿಕೊಳ್ಳುತ್ತ ಮಗಳ ರಟ್ಟೆ ಹಿಡಿದು ಎಳೆದೊಯ್ಯಲು ಹವಣಿಸಿದಳು.
ಆದರೆ ಅಶೋಕನ ಕೋಪವು ಅದಾಗಲೇ ನೆತ್ತಿಗೇರಿಬಿಟ್ಟಿತ್ತು. ಅವನು, ‘ಇಲ್ಲಮ್ಮಾ… ಇವಳು ಖಂಡಿತಾ ಜೀವ ತೆಗೆದುಕೊಳ್ಳುವ ಜಾತಿಯವಳಲ್ಲ. ಬದಲಿಗೆ ನಮ್ಮನ್ನೆಲ್ಲ ಕೊಂದಾದರೂ ಇನ್ನೊಬ್ಬನೊಡನೆ ಸುಖಪಡಲು ಹೊರಟಿರುವವಳಿವಳು. ತಾನೊಬ್ಬಳು ಮರ್ಯಾದಸ್ಥ ಮನೆತನದ ಹೆಣ್ಣೆಂಬುದನ್ನೂ ಮರೆತು ಕೊಬ್ಬನಿಂದ ಬಸುರಾಗಿದೇ ಅಲ್ಲದೆ ನಗೆ ನಾಚಿಕೆ ಒಂದೂ ಇಲ್ಲದೆ ಅವನ ಹಿಂದೆ ಓಡಿ ಬಂದು ನಮ್ಮ ಮುಂದೆಯೇ ಸಂಸಾರ ಮಾಡಲು ಮುಂದಾಗಿದ್ದಾಳೆoದರೆ ಇವಳು ಸಾಮಾನ್ಯದವಳಲ್ಲಮ್ಮಾ… ಥೂ! ಇವತ್ತಿನಿಂದ ಇವಳು ನನ್ನ ಒಡಹುಟ್ಟಿದವಳೂ ಅಲ್ಲ, ನಿನ್ನ ಮಗಳೂ ಅಲ್ಲ! ಇಂಥವಳನ್ನು ಕೊಂದು ಹಾಕಿದರೂ ಪಾಪ ಬರುವುದಿಲ್ಲ!’ ಎಂದು ಅವುಡುಗಚ್ಚಿದವನು ರಪ್ಪನೆ ಪ್ರೇಮಾಳ ಮೇಲೆರಗಿದ.
‘ಏನಾ ಬಿಕನಾಸಿ…! ಇಲ್ಲಿಯವರೆಗೆ ಒಂದೇ ಒಂದು ಕಪ್ಪು ಚುಕ್ಕೆಯೂ ಬೀಳದಂತೆ ಬಾಳಿಕೊಂಡು ಬಂದoಥ ನಮ್ಮ ಮನೆತನದ ಮರ್ಯಾದೆಯನ್ನೆಲ್ಲ ಮಣ್ಣುಪಾಲು ಮಾಡಿಬಿಟ್ಟೆಯಲ್ಲ ಮಾರಾಯ್ತೀ…! ನಿನಗೆ ಹೆತ್ತವರಿಗಿಂತಲೂ ಆ ಕರಿ ಮುಸುಡಿನ ನಾಯಿಯೇ ಹೆಚ್ಚಾಗಿಬಿಟ್ಟನಾ…? ಇನ್ನು ಈ ಊರಿನಲ್ಲಿ ನಾವೆಲ್ಲ ಹೇಗೆ ಮಾರಾಯ್ತೀ ತಲೆ ಎತ್ತಿ ತಿರುಗುವುದು? ನಿನ್ನಂಥವಳು ಇನ್ನೂ ಬದುಕಿರಬೇಕಾ…?’ ಎಂದವನು ಅವಳ ಜುಟ್ಟು ಹಿಡಿದು ದಬದಬನೆ ಥಳಿಸತೊಡಗಿದ. ಅದನ್ನು ಕಂಡ ದುರ್ಗಕ್ಕ ಮತ್ತಷ್ಟು ಕಂಗೆಟ್ಟು, ‘ಅಯ್ಯಯ್ಯೋ ಮಗಾ…! ನೀನೆಂಥ ಕೆಲಸ ಮಾಡುತ್ತಿದ್ದಿಯೋ…? ಬಿಡಾ ಅವಳನ್ನು. ಓ, ಪಂಜುರ್ಲಿಯೇ!’ ಎಂದು ಕಿರುಚುತ್ತ ಬಿಡಿಸಲು ಮುಂದಾದಳು. ಆದರೆ ಅಶೋಕ ಅಮ್ಮನನ್ನು ರಪ್ಪನೆ ದೂರ ತಳ್ಳಿ ಪ್ರೇಮಾಳಿಗೆ ಬೀಸಿ ಬೀಸಿ ಬಡಿಯುತ್ತಲೇ ಇದ್ದ. ಪ್ರೇಮ, ಅವನ ನಾಲ್ಕೈದು ಏಟುಗಳನ್ನು ಹೇಗೋ ಹಠದಿಂದ ಸಹಿಸಿಕೊಂಡಳಾದರೂ ಹೆಚ್ಚು ಹೊತ್ತು ಅವಳಿಂದ ಸಾಧ್ಯವಾಗಲಿಲ್ಲ. ಅಷ್ಟರಲ್ಲಿ ತನ್ನ ನಡುಬೆನ್ನಿಗೆ ಬಲವಾಗಿ ಅಪ್ಪಳಿಸಿದ ಒಂದೇಟಿಗೆ ಉಸಿರುಗಟ್ಟಿದಂತಾಗಿ ಜೋರಾಗಿ ಅರಚಿಕೊಂಡಳು.
ಅತ್ತ ರಾತ್ರಿಯಿಡೀ ಶೃಂಗಾರಲೀಲೆಯಲ್ಲಿ ಕಳೆದು ಸುಖನಿದ್ರೆಗೆ ಜಾರಿದ್ದ ತೋಮನಿಗೆ ತನ್ನ ಪ್ರಿಯತಮೆಯ ಬೊಬ್ಬೆಯು ಕನಸಿನಲ್ಲೆಂಬoತೆ ಅಪ್ಪಳಿಸಿತು. ಆದರೂ ಬೆಚ್ಚಿಬಿದ್ದು ಎದ್ದವನು ದಡಬಡನೆ ಹೊರಗೆ ಧಾವಿಸಿ ಬಂದು ನೋಡುತ್ತಾನೆ, ಅಶೋಕ ಅವಳನ್ನು ನೆಲಕ್ಕೆ ಕೆಡವಿಕೊಂಡು ಹೊರಳಿಸಿ ಹೊರಳಿಸಿ ಒದೆಯುತ್ತಿದ್ದಾನೆ! ತೋಮನ ರೋಷಾಗ್ನಿಯು ಭಗ್ಗನೆ ಭುಗಿಲೆದ್ದಿತು. ಕೆರಳಿದ ಸರ್ಪದಂತೆ ಉಸಿರು ದಬ್ಬುತ್ತ ಅತ್ತಿತ್ತ ಕಣ್ಣಾಡಿಸಿದ. ಅಂಗಳದ ಮೂಲೆಯೊಂದರಲ್ಲಿ ದಪ್ಪ ಮಂಡೆಯ ಕೊತ್ತಳಿಗೆಯೊಂದು ಕಾಣಿಸಿತು. ರಪ್ಪನೆ ಅದನ್ನು ಎಳೆದುಕೊಂಡು ಅಶೋಕನತ್ತ ನುಗ್ಗಿದ.
‘ರಂ…ಮಗನೇ…! ನನ್ನ ಮನೆಗೆ ಬಂದು ನನ್ನವಳನ್ನೇ ಹೊಡೆಯುವಷ್ಟು ಸೊಕ್ಕಾ ನಿಂಗೆ! ಸರಿಯಾದ ಸಮಯಕ್ಕೆ, ಸರಿಯಾದ ಜಾಗದಲ್ಲೇ ಸಿಕ್ಕಿದ್ದೀಯ ಮಗನೇ! ಇವತ್ತು ನಿನ್ನನ್ನು ಮುಗಿಸದೆ ಬಿಡಲಿಕ್ಕಿಲ್ಲವಾ…!’ ಎಂದರಚುತ್ತ ಅಶೋಕನಿಗೆ ಬೀಸಿಬೀಸಿ ಬಡಿಯತೊಡಗಿದ. ಅಶೋಕ, ತೋಮನ ನಾಲ್ಕೈದು ಏಟಿಗೇ ತತ್ತರಿಸಿದವನು ಪ್ರೇಮಾಳನ್ನು ಬಿಟ್ಟು ಅವನ ಮೇಲೆರಗಿದ. ಆದರೆ ಗಾರೆ ಕೆಲಸದಲ್ಲಿ ಸಿಮೆಂಟಿನ ಗಾಳಿ ಕುಡಿಕುಡಿದು ಕುಂಬುಗಟ್ಟಿದ್ದ ಅಶೋಕನ ಸಾಮರ್ಥ್ಯವು, ಕಾಡು ಕಸುಬಿನಿಂದ ಒರಟಾಗಿ ಹುರಿಗೊಂಡಿದ್ದ ತೋಮನ ದೈತ್ಯಶಕ್ತಿಯ ಮುಂದೆ ತುಸುಹೊತ್ತೂ ನಿಲ್ಲಲಿಲ್ಲ. ತೋಮನೊಂದಿಗೆ ಸೆಣಸಲಾರದೆ ಸೋತು ನೆಲಕ್ಕುರುಳಿದ. ಆದರೂ ತೋಮನ ಕೋಪ ತಣ್ಣಗಾಗಲಿಲ್ಲ. ಅಶೋಕ ತನ್ನವಳಿಗೆ ಒದ್ದಂತೆಯೇ ಅವನೂ ಅಶೋಕನಿಗೆ ಒದೆಯತೊಡಗಿದ. ತೋಮನ ರೌದ್ರಾವತಾರವನ್ನು ಕಂಡ ಅಮ್ಮ ಮಗಳಿಬ್ಬರೂ ದಂಗಾಗಿಬಿಟ್ಟರು. ಇನ್ನೂ ಸುಮ್ಮನಿದ್ದರೆ ಇವನು ಅಶೋಕನನ್ನು ಕೊಂದೇ ಹಾಕುತ್ತಾನೆ ಎಂದೆನ್ನಿಸಿದೇ ಇಬ್ಬರೂ ತೋಮನೊಡನೆ ಉರುಡಾಡಿ ಅಶೋಕನನ್ನು ಬಿಡಿಸಿ ದೂರಕ್ಕೆಳೆದೊಯ್ದರು. ಅವನು ನೋವಿನಿಂದ ನರಳುತ್ತ, ಒಡೆದು ರಕ್ತ ಒಸರುತ್ತಿದ್ದ ತನ್ನ ಮೂತಿಯನ್ನೊರೆಸಿಕೊಳ್ಳುತ್ತ ಹೋದವನಿಗೆ ಸುಧಾರಿಸಿಕೊಳ್ಳಲು ಸುಮಾರು ಹೊತ್ತು ಹಿಡಿಯಿತು. ಆದರೂ ಅವನ ಕ್ರೋಧ ತಣ್ಣಗಾಗಲಿಲ್ಲ. ಆದ್ದರಿಂದ, ‘ಹೇ ಬೇವರ್ಸಿ…! ಎಲ್ಲಿಂದಲೋ ಬಂದ ಪರದೇಶಿ ನಾಯಿ ನೀನು. ನನ್ನ ಮನೆಗೆ ಬಂದು ನನ್ನ ಒಡಹುಟ್ಟಿದವಳನ್ನು ಹಾಳು ಮಾಡಿದ್ದೇ ಅಲ್ಲದೆ ನನ್ನ ಮೇಲೂ ಕೈ ಮಾಡಿಬಿಟ್ಟೆಯಲ್ಲ? ಇದೇ ಗಂಗರಬೀಡಿನ ಮೂರು ರಸ್ತೆಯ ನಟ್ಟನಡುವೆ ನಿನ್ನನ್ನು ಕಡಿದು ತೋರಣ ಕಟ್ಟದಿದ್ದರೆ ನಾನು ಅಂಗರನಿಗೆ ಹುಟ್ಟಿದ ಮಗನೇ ಅಲ್ಲ ತಿಳ್ಕೊ!’ ಎಂದು ಅರಚುತ್ತ ಅಂದವನು ದುರದುರನೇ ಅಲ್ಲಿಂದ ಹೊರಟು ಹೋದ.
‘ಹೇ ಹೋಗ್ ಹೋಗನಾ ನಾಯಿ…! ನಾನೂ ನಿನ್ನಷ್ಟೇ ಉಪ್ಪು, ಹುಳಿ, ಖಾರ ತಿಂದು ಬೆಳೆದವನು. ನೀನು ಅದೇನ್ ಶ್ಯಾ… ಹರಿತೀಯಾ ಅಂತ ನಾನೂ ನೋಡಿಯೇ ಬಿಡುತ್ತೇನೆ!’ ಎಂದು ತಾನೂ ಸಡ್ಡು ಹೊಡೆದು ಅಬ್ಬರಿದ.
ಇತ್ತ ಸೋತು ಹೈರಾಣಾಗಿ ಕುಳಿತಿದ್ದ ಪ್ರೇಮಾಳಿಗೆ ಅಮ್ಮ ಮತ್ತು ತಮ್ಮನ ಮೇಲೆ ಕೆಟ್ಟ ಜಿಗುಪ್ಸೆ ಹುಟ್ಟಿತು. ಅವಳು ರಪ್ಪನೆದ್ದು, ‘ಅಮ್ಮಾ ನಿನಗೆ ಕೈಮುಗಿಯುತ್ತೇನೆ! ದಯವಿಟ್ಟು ಇಲ್ಲಿಂದ ಹೊರಟು ಹೋಗು. ತಿಳಿದೋ ತಿಳಿಯದೆಯೋ ನನ್ನಿಂದ ತಪ್ಪೊಂದು ನಡೆದಾಗಿಬಿಟ್ಟಿದೆ. ಹಾಗಂತ ಅದನ್ನಿನ್ನು ತಪ್ಪಾ, ಸರಿಯಾ…? ಅಂತ ಯೋಚಿಸಿಯೂ ಪ್ರಯೋಜನವಿಲ್ಲ. ನನ್ನ ಬದುಕನ್ನು ನಾನು ಆರಿಸಿಕೊಂಡಾಯಿತು. ಇನ್ನೆಂದಿಗೂ ನಿಮಗೆ ನಮ್ಮಿಂದ ಯಾವ ತೊಂದರೆಯೂ ಆಗುವುದಿಲ್ಲ ಮತ್ತು ನಿಮ್ಮಿಂದಲೂ ನಮಗೆ ಹಿಂಸೆಯಾಗದoತೆ ನೀವೆಲ್ಲರೂ ಕರುಣೆ ತೋರಿಸಬೇಕು. ಈ ಊರಿನವರೂ, ನೀವೂ ನಾನು ಕೆಟ್ಟೆನೆಂದು ಭಾವಿಸಿರಬಹುದು. ಆದರೆ ನಾನು ಕೆಟ್ಟಿಲ್ಲ. ಬದಲಿಗೆ ಇಷ್ಟಪಟ್ಟವನೊಂದಿಗೇ ಬಾಳಲು ಹೊರಟಿದ್ದೇನಷ್ಟೆ. ಇನ್ನು ಮುಂದೆ ಇವರೇ ನನ್ನ ಗಂಡ, ನನ್ನ ಬದುಕು ಎಲ್ಲ! ಅಪ್ಪನೂ ತಮ್ಮನೂ ನನ್ನ ಮದುವೆಯ ಬಗ್ಗೆಯೂ ಅದರ ಖರ್ಚುವೆಚ್ಚದ ಬಗ್ಗೆಯೂ ಆಗಾಗ ಬಹಳಷ್ಟು ಲೆಕ್ಕಾಚಾರ ಹಾಕುತ್ತ ತುಂಬಾ ತಲೆಬಿಸಿ ಮಾಡಿಕೊಳ್ಳುತ್ತಿದ್ದರಲ್ಲ! ಆ ಚಿಂತೆಯು ಇವತ್ತಿಗೆ ಅವರನ್ನು ಬಿಟ್ಟು ಹೋಯ್ತೆಂದು ಹೋಗಿ ಹೇಳು!’ ಎಂದು ಒರಟಾಗಿ ಅಂದವಳು ಮತ್ತೆ ಮುಂದುವರೆದು, ‘ಅಮ್ಮಾ ನಿನ್ನ ಕಾಲು ಹಿಡಿತೀನಮ್ಮಾ, ಇನ್ನು ಯಾವತ್ತೂ ನೀವು ನನ್ನ ಸಂಸಾರದ ಗೋಜಿಗೆ ಬರಬೇಡಿ. ಅಶೋಕ ಕೋಪದ ಭರದಲ್ಲಿ ಅದೇನೋ ಶಪಥ ಮಾಡಿ ಹೋದನಲ್ಲ. ಅವನಿಗೂ ಸ್ವಲ್ಪ ಬುದ್ಧಿ ಹೇಳು. ಹ್ಞೂಂ, ಹೋಗಮ್ಮಾ ಹೊರಟು ಹೋಗು ಇಲ್ಲಿಂದ!’ ಎಂದು ಹತಾಶೆಯಿಂದ ದುರ್ಗಕ್ಕನ ಕಾಲ ಬುಡದಲ್ಲಿ ಕುಸಿದು ಕುಳಿತು ದುಃಖಿಸತೊಡಗಿದಳು.
ಪ್ರೇಮಾಳ ಅಳುವನ್ನು ಕಂಡ ತೋಮ ತನ್ನ ಚಿಂದಿಯಾಗಿದ್ದ ಅಂಗಿಯನ್ನು ಕಿತ್ತು ಒಳಗೆಸೆದು ರಪ್ಪನೆ ಅವಳತ್ತ ಬಂದವನು, ‘ಹೇ ನೀನೊಮ್ಮೆ ಸುಮ್ಮನಿರು ಮಾರಾಯ್ತಿ! ಅವನಿಂದ ನನ್ನದೊಂದು ಕೂದಲು ಕಿತ್ತುಕೊಳ್ಳಲೂ ಆಗುವುದಿಲ್ಲ ಬಿಡು!’ ಎಂದವನು, ‘ಹ್ಞೂಂ, ಸಾಕು ಏಳೇಳು! ಇನ್ನು ನಿನಗೆ ನಾನು, ನನಗೆ ನೀನು ಅಷ್ಟೇ ನಮ್ಮ ಜೀವನ. ಉಳಿದವರೆಲ್ಲರೂ ನಮ್ಮ ಪಾಲಿಗೆ ಇವತ್ತೇ ಸತ್ತು ಹೋದರೆಂದು ಭಾವಿಸುವ. ಈಗ ಬಾಯಿಮುಚ್ಚಿಕೊಂಡು ಒಳಗೆ ನಡಿ!’ ಎಂದು ದುಗುಡದಿಂದ ಹೇಳಿ ದುರ್ಗಕ್ಕನತ್ತ ತಿರುಗಿ, ‘ಅತ್ತೇ, ನಮ್ಮಿಂದೇನಾದರೂ ತಪ್ಪಾಗಿದ್ದರೆ ಕ್ಷಮಿಸಿಬಿಡಿ. ನಾನು ಮೊನ್ನೆ ನಿಮ್ಮೊಡನೆ ಇದೇ ವಿಷಯ ಮಾತಾಡಲು ಮನೆಗೆ ಬಂದಿದ್ದು. ಆದರೆ ನಿಮ್ಮ ಮಗ ಆವಾಗಲೂ ಹಿಂದುಮುoದು ನೋಡದೆ ನನ್ನ ಮೇಲೆ ಕೈ ಮಾಡಿದ. ಇವತ್ತು ಇವಳನ್ನು ನನ್ನ ಕಣ್ಣಮುಂದೆಯೇ…!’ ಎಂದವನು ಮಂದೇನೋ ಹೇಳಲಿದ್ದ. ಅಷ್ಟರಲ್ಲಿ, ‘ಥೂ! ಮೂರುಕಾಸಿನವನೇ… ಮಾತಾಡಬೇಡ! ಉಂಡ ಮನೆಗೆ ಎರಡು ಬಗೆಯುವ ನೀನೂ ಒಬ್ಬ ನರಮಾನಿಯಾ…? ನಿನ್ನನ್ನು ಬಾರೀ ಒಳ್ಳೆಯವನು ಎಂದುಕೊoಡೆನಲ್ಲ ಮಾರಾಯಾ!’ ಎಂದು ಕಿರುಚಿದ ದುರ್ಗಕ್ಕ ಪ್ರೇಮಾಳತ್ತ ತಿರುಗಿ, ‘ಇದೇ, ಇದೇ ಹೊಟ್ಟೆಯಲ್ಲಿ ಒಂಬತ್ತು ತಿಂಗಳು ಹೊತ್ತು ಹೆತ್ತು ಬೆಳೆಸಿದ ನನ್ನನ್ನೂ, ನನ್ನ ಮನೆಯ ಮಾನಮರ್ಯಾದೆಯನ್ನೂ ಲೆಕ್ಕಿಸದೆ ನಿನ್ನಂಥ ನೀಚನ ಹಿಂದೆ ಓಡಿ ಬಂದಳಲ್ಲ ಈ ಮುಂಡೆ! ನಿಮ್ಮಿಬ್ಬರನ್ನೂ ನಾನು ಈ ಜನ್ಮದಲ್ಲಿ ಕ್ಷಮಿಸಲಿಕ್ಕುಂಟನಾ…? ಇವತ್ತೊಂದು ಸತ್ಯ ಹೇಳುತ್ತೇನೆ ಇಬ್ಬರೂ ಸರಿಯಾಗಿ ಕೇಳಿಸಿಕೊಳ್ಳಿ. ತಾಯಿ, ಮಗಳೆಂಬ ಋಣಾನುಬಂಧ ಇವತ್ತಿಗೇ ಕಡಿದು ಹೋಯಿತು. ನಾನು ಪ್ರತಿನಿತ್ಯ ಹೂ ನೀರಿಟ್ಟು ಪೂಜಿಸುವಂಥ ನನ್ನ ಪಂಜುರ್ಲಿಯು ಇರುವುದೇ ಸತ್ಯವಾದರೆ, ನನ್ನ ಮನೆಯ ಮರ್ಯಾದೆಯನ್ನು ಬೀದಿಗೆಳೆದ ನಿಮ್ಮ ಅಹಂಕಾರವನ್ನು ಅವನೇ ಮುರಿಯಲಿ!’ ಎಂದು ದುರ್ಗಕ್ಕ ಹತಾಶೆಯಿಂದ ರಪ್ಪನೆ ನೆಲಕ್ಕೆ ಕೈ ಅಪ್ಪಳಿಸಿ ಶಪಿಸಿಬಿಟ್ಟಳು. ಅದನ್ನು ಕಂಡ ತೋಮ ದಿಗ್ಭಾçಂತನಾದ! ದುರ್ಗಕ್ಕನ ಶಾಪವು ಅವನ ಮನಸ್ಸನ್ನು ಒಂದುಕ್ಷಣ ಒಳಗೊಳಗೇ ಹಿಂಡಿ ವಿಲಕ್ಷಣ ಭೀತಿಯನ್ನೆಬ್ಬಿಸಿ ಮರೆಯಾಯಿತು.
ಅಮ್ಮನ ಆ ಬಗೆಯ ವರ್ತನೆಯನ್ನು ಕಂಡ ಪ್ರೇಮಾಳೂ ದಂಗಾಗಿಬಿಟ್ಟಳು. ಆದರೂ, ತಾವು ಮಾಡಿರುವ ಅಷ್ಟು ದೊಡ್ಡ ಅಪರಾಧವಾದರೂ ಏನು? ದೇಹದ ಸೆಳೆತಕ್ಕೆ ಬಲಿಯಾಗಿ ಊರವರ ದೃಷ್ಟಿಯಲ್ಲಿ ತಾನು, ‘ದಾರಿ ತಪ್ಪಿದವಳು!’ ಎಂದೆನಿಸಿಕೊoಡಿರಬಹುದು. ಆದರೆ ಅದಕ್ಕೆ ಕಾರಣನಾದವನೊಡನೆಯೇ ಬಾಳಲು ಹೊರಟಿದ್ದೆನಲ್ಲ. ಹೀಗಿರುವಾಗ ತಪ್ಪೆಂಥದ್ದು? ಹಾಗೂ ಒಂದುವೇಳೆ ಅದು ಅಪರಾಧವೇ ಆದಲ್ಲಿ ಅದೇನಾಗುವುದೋ ಆಗಿಬಿಡಲಿ. ಬ್ರಹ್ಮ ಹಣೆಯಲ್ಲಿ ಬರೆದದ್ದನ್ನು ನಾವು ಎಲೆಯಲ್ಲಿ ಒರೆಸಲಿಕ್ಕೆ ಆಗುವುದಿಲ್ಲವಂತೆ. ಆದ್ದರಿಂದ ಇವರ ಶಾಪ, ಶಕುನಗಳಿಗೆಲ್ಲ ಹೆದರುವುದಿಲ್ಲ. ಏನೇ ಬಂದರೂ ಅನುಭವಿಸಲು ಸಿದ್ಧಳಿದ್ದೇನೆ! ಎಂದು ಮನಸ್ಸು ಗಟ್ಟಿ ಮಾಡಿಕೊಂಡವಳು ತಟ್ಟನೆದ್ದು ದುರ್ಗಕ್ಕನಿಗೆ ಬೆನ್ನು ಹಾಕಿ ಒಳಗೆ ನಡೆದುಬಿಟ್ಟಳು. ತೋಮನೂ ಅವಳನ್ನು ಹಿಂಬಾಲಿಸಿ ಬಾಗಿಲು ಮುಚ್ಚಿದ. ದುರ್ಗಕ್ಕ ಕೆಲವು ಕ್ಷಣ ಮುಚ್ಚಿದ ಬಾಗಿಲನ್ನೇ ಅಸಹಾಯಕತೆಯಿಂದ ದಿಟ್ಟಿಸಿದವಳು ಬಿಕ್ಕಿಬಿಕ್ಕಿ ಅಳುತ್ತ ಹಿಂದಿರುಗಿದಳು.
ತನ್ನ ಮಗಳು ತೋಮನ ಮನೆಯಲ್ಲಿದ್ದುದು ಮತ್ತು ತೋಮನಿಗೂ ಮಗನಿಗೂ ನಡೆದ ಉಗ್ರ ಹೊಡೆದಾಟದ ಕಥೆಯನ್ನೆಲ್ಲ ಹೆಂಡತಿ, ಮಗನಿಂದ ಕೂಲಂಕಷವಾಗಿ ತಿಳಿದ ಅಂಗರನ ರಕ್ತವೂ ಕೊತಕೊತನೆ ಕುದಿಯಿತು. ಆ ಕೂಡಲೇ ಮಗನೊಂದಿಗೆ ದಂಡೆತ್ತಿ ಹೋಗಿ ವಂಚಕ ತೋಮನನ್ನು ಸದೆ ಬಡಿದು ಸೊಕ್ಕಿದ ಮಗಳನ್ನು ಒದ್ದು ಹೆಡೆಮುರಿ ಕಟ್ಟಿ ಮನೆಗೆ ತರುವ ಮನಸ್ಸಾಯಿತು. ಆದರೆ ತನ್ನ ಮಗನೇ ಹಣ್ಣುಗಾಯಿಯಾಗಿ ಬಂದಿರುವುದರಿoದ ಆ ಯೋಚನೆಯನ್ನು ಕೈಬಿಟ್ಟ. ಆದರೆ ಅವನ ಸೋಲು, ಹತಾಶೆಯಿಂದ ಹುಟ್ಟಿದ ರೋಷವು ಕಣ್ಣೀರಿನ ರೂಪದಲ್ಲಿ ಹರಿಯತೊಡಗಿತು. ಅದೇ ಮನಸ್ಥಿತಿಯಲ್ಲಿ ಏನೋ ನಿರ್ಧರಿಸಿದ. ಮರುಕ್ಷಣ ವಿಚಿತ್ರ ಬದಲಾವಣೆಯೊಂದು ಅವನಲ್ಲಿ ಕಾಣಿಸಿಕೊಂಡಿತು. ವಯಸ್ಸಾಗಿ ಅರೆಬರೆ ಚಾಲ್ತಿಯಲ್ಲಿದ್ದ ಅವನ ನರನಾಡಿಗಳೂ, ಒಣಗಿ ಸುಕ್ಕುಗಟ್ಟಿದ ಮೈಯ ಚರ್ಮವೂ ಹಂತಹoತವಾಗಿ ಬಿಗಿದುಕೊಂಡವು. ಬೊಚ್ಚು ಬಾಯಲ್ಲಿ ಎಂಟೋ ಹತ್ತೋ ಉಳಿದಿದ್ದ ಅಂಕುಡೊoಕು ಹಲ್ಲುಗಳು ಒಂದಕ್ಕೊoದು ಬಿಗಿಯಾಗಿ ಕಚ್ಚಿಕೊಂಡವು. ‘ಅಶೋಕಾ…!’ ಎಂದು ಕೂಗಿದ. ಅವನು ಮೊದಲೇ ಹೈರಾಣಾಗಿದ್ದವನು ಅಪ್ಪನತ್ತ ತಿರುಗಿ, ‘ಏನು…?’ ಎಂಬoತೆ ದಿಟ್ಟಿಸಿದ. ‘ಈಗಲೇ ಹೋಗಿ ಕ್ಷೌರದ ಪದ್ದುವನ್ನು ಕರೆದುಕೊಂಡು ಬರಬೇಕು ನೀನು. ಹ್ಞೂಂ, ಹೊರಡು!’ ಎಂದ ಕಂಪಿಸುತ್ತ. ಅಶೋಕನಿಗೆ ವಿಷಯ ಸ್ವಲ್ಪ ಅರ್ಥವಾಯಿತು. ಆದ್ದರಿಂದ, ‘ಹೌದು ಹೌದು! ಆ ಮಾನಗೆಟ್ಟವಳ ಸೊಕ್ಕಿಗೆ ಅದೇ ಸರಿಯಾದ ಶಿಕ್ಷೆ!’ ಎಂದುಕೊoಡು ದಡಕ್ಕೆದ್ದು ಹೊರಟ.
ಆಹೊತ್ತು ಪದ್ದುವೂ ಗಿರಾಕಿಯಿಲ್ಲದೆ ರೇಡಿಯೋ ಕೇಳುತ್ತ ಕುಳಿತಿದ್ದ. ತನ್ನ ಗೆಳೆಯ ಧುಮುಗುಟ್ಟುತ್ತ ನುಗ್ಗಿದ್ದನ್ನು ಕಂಡವನಿಗೆ ಅಚ್ಚರಿಯಾಯಿತು. ನಡೆಯಬಾರದ್ದೇನೋ ನಡೆದಿದೆ ಎಂದುಕೊoಡವನು ಗೆಳೆಯನನ್ನು ಪ್ರಶ್ನಾರ್ಥಕವಾಗಿ ದಿಟ್ಟಿಸಿದ. ಅವನು, ‘ಹೇ ಪದ್ದು ಏನು, ಎಲ್ಲಿಗೇಂತ ಕೇಳಬೇಡ. ಕ್ಷೌರದ ಹತ್ಯಾರು ಹಿಡಿದುಕೊಂಡು ಈಕ್ಷಣವೇ ನನ್ನೊಂದಿಗೆ ಹೊರಟು ಬಾ ಹ್ಞೂಂ!’ ಎಂದು ಆಜ್ಞಾಪಿಸಿದ. ‘ಹತ್ಯಾರು..?’ ಎಂಬ ಪದ ಕಿವಿಗೆ ಬೀಳುತ್ತಲೇ ಪದ್ದುವು ಯಬ್ಬಾ ದೇವರೇ! ಹಾಗಾದರೆ ಗಾಬರಿಯಿಲ್ಲ ಎಂದುಕೊoಡವನು, ‘ಆಯ್ತು ಮಾರಾಯಾ ಇಗೋ ಹೊರಟೆ!’ ಎನ್ನುತ್ತ ತನ್ನ ಬಟ್ಟೆಯ ಚೀಲದೊಂದಿಗೆ ಅಶೋಕನನ್ನು ಹಿಂಬಾಲಿಸಿದ.
ಪದ್ದು ಮತ್ತು ಅಶೋಕರು ಅಂಗಳಕ್ಕೆ ಕಾಲಿಡುವ ಹೊತ್ತಿಗೆ ಅಂಗರ ಕೌಪೀನಧಾರಿಯಾಗಿ ಬಾವಿಕಟ್ಟೆಯ ಹತ್ತಿರ ಮರದ ಕುರ್ಚಿಯ ಮೇಲೆ ಕಾಲಿನ ಮೇಲೆ ಕಾಲು ಹಾಕಿ ಕುಳಿತು ಭಾವರಹಿತನಾಗಿ ದಿಗಂತದೆಡೆಗೆ ದಿಟ್ಟಿಸುತ್ತಿದ್ದ. ಪದ್ದುವಿಗೂ ವಿಷಯ ಅರ್ಥವಾಯಿತು. ಆದರೂ ಚಕಾರವೆತ್ತಬಾರದೆಂದುಕೊoಡವನು ಅಳುಕುತ್ತ ಅಂಗರನ ಸಮೀಪ ಹೋದ. ‘ನಮಸ್ಕಾರ ಅಂಗರಣ್ಣ. ಕ್ಷೌರ ಮಾಡಬೇಕಿತ್ತಾ…?’ ಎಂದು ನಮ್ರವಾಗಿ ಕೇಳಿದ. ಅವನ ಮಾತು ಕಿವಿಗೆ ಬೀಳುತ್ತಲೇ ‘ಹ್ಞಾಂ! ಪದ್ದುವನಾ…? ಬಾ ಮಾರಾಯಾ… ನಿನ್ನ ತಂದೆಯ ಕಾಲದಿಂದಲೂ ನಿಮ್ಮ ಅಂಗಡಿಗೇ ಬಂದು ಕ್ಷೌರ ಮಾಡಿಸಿಕೊಳ್ಳುತ್ತಿದ್ದವನು ನಾನು. ಆದರೆ ಇವತ್ತು ನೀನೇ ಬರುವ ಹಾಗಾಯ್ತು ನೋಡು. ಬರೇ ಕ್ಷೌರವಲ್ಲ, ಸಾವಿನ ಕ್ಷೌರವಾಗಬೇಕು ಮಾರಾಯಾ. ವಿಷಯ ನಿನಗೂ ಗೊತ್ತುಂಟಲ್ಲವಾ!’ ಎಂದು ವ್ಯಂಗ್ಯವಾಗಿ ಹೇಳಿದ. ಪದ್ದುವು ತಲೆತಗ್ಗಿಸಿಕೊಂಡು ತನ್ನ ಕೆಲಸದ ತಯಾರಿಯಲ್ಲಿದ್ದ.
‘ದನ ಸೊಕ್ಕಿದರೆ ಕೊಟ್ಟಿಗೆಯಲ್ಲಿ ಉಳಿಯುವುದಿಲ್ಲ, ಹೆಣ್ಣು ಸೊಕ್ಕಿದರೆ ಮನೆಯಲ್ಲಿ ನಿಲ್ಲುವುದಿಲ್ಲ!’ ಅಂತ ನನ್ನಜ್ಜ ಆಗಾಗ ಗಾದೆ ಹೇಳುತ್ತಿದ್ದ ಮಾರಾಯ. ಆ ಮಾತು ಇವತ್ತು ನನ್ನ ಜೀವನದಲ್ಲೇ ಸತ್ಯವಾಯಿತು ನೋಡು. ನನಗಿದ್ದ ಒಬ್ಬಳೇ ಮಗಳು ನಿನ್ನೆ ಯಾವನೊಂದಿಗೋ ಓಡಿ ಹೋದಳು. ಹಾಗಾಗಿ ಇನ್ನು ಅಂಥವಳು ಇದ್ದರೆಷ್ಟು ಸತ್ತರೆಷ್ಟು ಅಲ್ಲವಾ…? ಅಪ್ಪ, ಅಮ್ಮ ಸತ್ತು ಹೋದರೆ ಮಕ್ಕಳು ಮಂಡೆ ಬೋಳಿಸಿಕೊಳ್ಳುವುದು ಸಾಮಾನ್ಯ ವಾಡಿಕೆ. ಆದರೆ ಮಗಳು ಸತ್ತಳೆಂಬ ದುಃಖಕ್ಕೆ ಅಪ್ಪನಾದವನು ಬೋಳಿಸಿಕೊಳ್ಳುತ್ತಿರುವುದು ಬಹುಶಃ ನಮ್ಮ ಜಾತಿಯಲ್ಲಿ ನಾನೇ ಮೊದಲಿಗನಿರಬೇಕು ಅಲ್ಲವಾ?’ ಎಂದು ವಿಷಾದದಿಂದ ಹೇಳಿದ ಅಂಗರ, ‘ಹ್ಞೂಂ, ಬೇಗ ಬೇಗ ಬೋಳಿಸಿಬಿಡು. ಇನ್ನು ಅವಳ ಸಾವಿಗೆ ಕ್ರಿಯೆ ಹಿಡಿಯಬೇಕು, ಬೊಜ್ಜ ಮಾಡಬೇಕು. ಸುಮಾರು ಕೆಲಸವಿದೆ!’ ಎಂದು ಉದ್ವಿಗ್ನನಾಗಿ ನುಡಿದ. ಪದ್ದುವಿಗೆ ಏನುತ್ತರಿಸಬೇಕೆಂದು ತೋಚದೆ ಅಶೋಕನ ಮುಖವನ್ನು ಮಿಕಮಿಕ ನೋಡಿದ. ಅವನು ಕೂಡಲೇ ಇವನಿಗೆ ಕೆಲಸ ಮುಗಿಸುವಂತೆ ಸಂಜ್ಞೆ ಮಾಡಿದ.
ಆದರೂ ಪದ್ದುವು, ‘ಏನೋ ಮಕ್ಕಳು ತಪ್ಪು ಮಾಡಿದರು ಅಂಗರಣ್ಣ. ನೀವು ಹಿರಿಯರು ಅದನ್ನೆಲ್ಲ ತಲೆಗೆ ಹಚ್ಚಿಕೊಳ್ಳುವುದು ಸರಿಯಾ…?’ ಎಂದ ಅಳುಕುತ್ತ.
‘ಹೌದೌದು ಮಾರಾಯಾ. ಅಪ್ಪನಾದವನು ಮಕ್ಕಳ ತಪ್ಪನ್ನು ತಿದ್ದಬೇಕು, ಕ್ಷಮಿಸಬೇಕು. ನಿನ್ನ ಮಾತು ಸರಿ. ಹಾಗೆಯೇ ಮಾಡುವ. ಆದರೆ ಎಂಥ ತಪ್ಪನ್ನು…? ನಾನಿನ್ನು ಸಾಯುವತನಕ ಊರಲ್ಲಿ ತಲೆಯೆತ್ತಿ ಬದುಕದಂತೆ ಮಾಡಿದ ಮಕ್ಕಳನ್ನು ಕ್ಷಮಿಸುವುದರಲ್ಲಿ ಅರ್ಥ ಉಂಟಾ ಹೇಳು?’ ಎಂದ ಅಂಗರ ಕಡ್ಡಿ ಮುರಿದಂತೆ ಹೇಳಿದಾಗ ಪದ್ದು ನಿರುತ್ತರನಾದ. ಮರುಕ್ಷಣ ಅಂಗರ ತನ್ನ ಹಿರಿಯರ ರೂಢಿಯಂತೆ ಪ್ರಬುದ್ಧತೆ ಮತ್ತು ಹಿರಿಮೆಯ ಸಂಕೇತವಾಗಿ ಅನೇಕ ವರ್ಷಗಳಿಂದ ಕಾಪಾಡಿಕೊಂಡು ಬಂದoಥ ಬೆಳ್ಳಗಿನ ಕೂದಲ ಉದ್ದನೆಯ ಸೂಡಿಯನ್ನು ರಪ್ಪನೆ ಬಿಚ್ಚಿ ಬೆನ್ನ ಮೇಲೆ ಹರಡಿಕೊಂಡ.
ಆದರೆ ಪದ್ದುವು ಅಂಗರನ ಕೂದಲಿಗೆ ಕತ್ತರಿ ಹಾಕಲು ಮತ್ತೂ ಹಿಂಜರಿಯುತ್ತ ದುರ್ಗಕ್ಕ ಹಾಗೂ ಅಶೋಕನನ್ನು ಪ್ರಶ್ನಾರ್ಥಕವಾಗಿ ದಿಟ್ಟಿಸಿದ. ಅದಕ್ಕೆ ಪ್ರತಿಯಾಗಿ ದುರ್ಗಕ್ಕನದ್ದು ಅಳುವೇ ಉತ್ತರವಾದರೆ ಅಶೋಕ, ‘ಹ್ಞೂಂ, ಕತ್ತರಿಸು!’ ಎಂದು ಕೋಪದಿಂದ ಆಜ್ಞಾಪಿಸಿದ. ಮರುಕ್ಷಣ ಪದ್ದುವಿನ ಕತ್ತರಿಯು ಸರಸರನೇ ಅಂಗರನ ನರೆಗೂದಲ ಮೇಲೆಲ್ಲ ಹರಿದಾಡತೊಡಗಿತು. ಬೆಳ್ಳಿಯ ಬಣ್ಣದ ಕೂದಲುಗಳು ಗುಚ್ಛಗುಚ್ಛವಾಗಿ ಉದುರುತ್ತ ತನ್ನ ಮಡಿಲಲ್ಲಿ ಬಂದು ಬೀಳುವುದನ್ನು ಕಾಣುತ್ತಿದ್ದ ಅಂಗರನಲ್ಲಿ ತೀಕ್ಷ÷್ಣ ಬೇಗುದಿಯೆದ್ದು ಕಣ್ಣಾಲಿಗಳು ತುಂಬಿಕೊoಡವು. ಅವನು ಶೂನ್ಯದತ್ತ ದೃಷ್ಟಿ ನೆಟ್ಟು ಕುಳಿತುಬಿಟ್ಟ. ಸುಕ್ಕುಗಟ್ಟಿದ ಅವನ ಕೆಂಪಗಿನ ತಲೆಯು ಸ್ವಲ್ಪಹೊತ್ತಲ್ಲಿ ಪೂರ್ತಿ ಬೋಳಾಗಿ ಎಳೆ ಬಿಸಿಲಿಗೆ ಫಳಫಳ ಹೊಳೆಯುತ್ತಿತ್ತು. ನಿಧಾನವಾಗಿ ಎದ್ದವನು ಬಾವಿಕಟ್ಟೆಗೆ ಹೋಗಿ ನಾಲ್ಕೈದು ಕೊಡಪಾನ ನೀರು ಸೇದಿ ನೆತ್ತಿಗೆ ಹುಯ್ದುಕೊಂಡ. ಅಪ್ಪನ ಘನಕಾರ್ಯದಿಂದ ಅಶೋಕನ ಕ್ರೋಧವೂ ತುಸು ಉಪಶಮನವಾದಂತಾಗಿ ಅವನು ವಿಲಕ್ಷಣ ನೆಮ್ಮದಿಯಿಂದ ನಕ್ಕ. ಜಗುಲಿಯಲ್ಲಿ ಕುಳಿತಿದ್ದ ದುರ್ಗಕ್ಕ ಬಾಯಿಗೆ ಸೆರಗು ಅಡ್ಡ ಹಿಡಿದುಕೊಂಡು ಜೋರಾಗಿ ಅಳುತ್ತಿದ್ದಳು. ಅದನ್ನು ಗಮನಿಸಿದ ಅಶೋಕ ಅವಳನ್ನೆಬ್ಬಿಸಿ ಸಮಾಧಾನಿಸುತ್ತ ಒಳಗೆ ಕರೆದೊಯ್ದ. ಆವತ್ತಿನಿಂದ ಅಂಗರನ ಕುಟುಂಬವು ಪ್ರೇಮಾಳ ಸಂಬoಧವನ್ನು ಸಂಪೂರ್ಣವಾಗಿ ಕಡಿದುಕೊಂಡಿತು.
(ಮುoದುವರೆಯುವುದು)