April 2, 2025
ಧಾರಾವಾಹಿ

ವಿವಶ..

ಧಾರವಾಹಿ 25

ಲಕ್ಷ್ಮಣ ತನಗೆ ಉಸ್ಮಾನ್ ಸಾಹೇಬರಲ್ಲಿ ಕೆಲಸ ಸಿಕ್ಕಿದ ಸಂತೋಷದಿoದ ಮನೆಗೆ ಧಾವಿಸಿ ಬಂದ. ಸರೋಜ ಆಹೊತ್ತು ಒಲೆಗೆ ಮಡಲು ಮತ್ತು ಕಟ್ಟಿಗೆಯನ್ನು ತುರುಕಿಸಿ ಕಬ್ಬಿಣದ ಓಟೆಯಿಂದ ಊದುತ್ತ ಬೆಂಕಿಯನ್ನು ತೀಕ್ಷ್ಣಗೊಳಿಸುತ್ತಿದ್ದಳು. ಕೋಣೆಯಿಡೀ ದಟ್ಟ ಹೊಗೆ ತುಂಬಿತ್ತು. ಲಕ್ಷ್ಮಣ ಒಳಗೆ ಬಂದವನು ಹೊಗೆಯನ್ನು ತಾಳಲಾಗದೆ ಮರಳಿ ಹೊರಗಿನ ಜಗುಲಿಗೆ ಹೋಗಿ ಕುಳಿತು ಹೆಂಡತಿಯನ್ನು ಅಲ್ಲಿಗೆ ಕೂಗಿ ಕರೆದ. ಅಷ್ಟೊತ್ತಿಗೆ ಬೆಂಕಿಯೂ ತನ್ನ ಜ್ವಾಲೆಯನ್ನು ಹೆಚ್ಚಿಸಿಕೊಂಡು ಉರಿಯತೊಡಗಿದ್ದರಿಂದ ಹೊಗೆಯ ಛಾಯೆ ಮೆಲ್ಲನೆ ಕರಗಿತು. ಸರೋಜಾಳೂ ಗಂಡನ ಕೂಗಿಗೆ ಹೊರಗೆ ಬಂದು ಅವನ ಪಕ್ಕದಲ್ಲಿ ಕುಳಿತವಳು, ‘ಹೋದ ಕೆಲಸ ಏನಾಯ್ತು ಮಾರಾಯ್ರೇ? ಹಣ್ಣೋ, ಕಾಯೋ…?’ ಎಂದಳು ಆತುರದಿಂದ.
‘ಹಣ್ಣಾಯ್ತು ಮಾರಾಯ್ತಿ!’ ಎಂದ ಅವನು ಖುಷಿಯಿಂದ.
‘ಹೌದಾ…! ನನಗೆ ಗೊತ್ತಿತ್ತು ಮಾರಾಯ್ರೇ ದೇವರು ನಮ್ಮ ಕೈಬಿಡುವುದಿಲ್ಲ ಅಂತ!’ ಎಂದಳವಳು ಸಂತೋಷದಿoದ.
‘ಆದರೆ ಪೈಂಟಿoಗ್ ಕೆಲಸಕ್ಕೀಗ ಜನ ಇದ್ದಾರಂತೆ. ಹಾಗಾಗಿ ಮರ ಕಡಿಯುವ ಕೆಲಸಕ್ಕೆ ತೆಗೆದುಕೊಂಡರು. ನಂಗೆ ಆ ಕೆಲಸವೂ ಅಭ್ಯಾಸ ಉಂಟಲ್ಲವ. ಶಿವಕಂಡಿಕೆಯಾಚೆ ಎಲ್ಲೋ ಶಿವಪುರದಲ್ಲಿ ಕೆಲಸವಂತೆ. ನಾಳೆನೇ ಹೋಗಬೇಕು. ಹಿಂದಿರುಗುವಾಗ ನಾಲ್ಕೈದು ದಿನಗಳಾಗಬಹುದು ಅಂತನೂ ಹೇಳಿದರು!’ ಎಂದ ಹೆಮ್ಮೆಯಿಂದ. ಮರ ಕಡಿಯುವ ಕಾಯಕ ಎಂದ ಕೂಡಲೇ ಸರೋಜಾಳ ಉತ್ಸಾಹ ರ‍್ರನೆ ಇಳಿಯಿತು. ‘ಅಯ್ಯೋ ದೇವರೇ! ಅದು ತುಂಬಾ ಅಪಾಯದ ಕೆಲಸವಲ್ಲವಾ ಮಾರಾಯ್ರೇ! ಹಿಂದೆ ಊರಲ್ಲಿ ನೀವದನ್ನು ಮಾಡುತ್ತಿದ್ದುದನ್ನು ನೋಡಿದ್ದೆ. ಆದರೀಗ ಆ ಅಭ್ಯಾಸ ನಿಂತು ತುಂಬಾ ಕಾಲವಾಯಿತಲ್ಲ? ಅಲ್ಲದೆ ಶುರುವಿನಲ್ಲೇ ಅಷ್ಟು ದಿನ ಮನೆಗೂ ಬರುವುದಿಲ್ಲ ಅಂತೀರಿ. ನಾನೊಬ್ಬಳೇ ಮಕ್ಕಳೊಂದಿಗಿಲ್ಲಿ ಹೇಗಿರುವುದು ಹೇಳಿ?’ ಎಂದವಳಿಗೆ ದುಃಖ ಬಂತು. ಅದನ್ನು ಗಮನಿಸಿದ ಲಕ್ಷ್ಮಣ ಖಿನ್ನನಾದ. ‘ಅಯ್ಯೋ…! ನೀನು ಹೀಗೆಲ್ಲ ಬೇಸರ ಮಾಡಿಕೊಂಡರೆ ನಾನು ಹೋಗುವುದಿಲ್ಲ ಮಾರಾಯ್ತೀ. ನಾವೆಲ್ಲ ಚೆನ್ನಾಗಿರಬೇಕೆಂದಲ್ಲವಾ ನಾನೂ ಹೊರಗಡೆ ದುಡಿಯಲು ಮನಸ್ಸು ಮಾಡಿರುವುದು? ಅಕ್ಕಯಕ್ಕನಿರುವಾಗ ನಿಂಗೆoಥ ಭಯ?’ ಎಂದು ಮೃದುವಾಗಿ ಅಂದವನು, ಇಲ್ನೋಡಿ ಅಕ್ಕಯಕ್ಕಾ…ನಾನು ಶಿವಪುರಕ್ಕೆ ಹೋಗಿ ಬರುವವರೆಗೆ ನನ್ನ ಹೆಂಡತಿ ಮಕ್ಕಳನ್ನು ಜಾಗ್ರತೆಯಿಂದ ನೋಡಿಕೊಂಡಿರೋ ಬಚಾವಾದಿರಿ. ಇಲ್ಲದಿದ್ದರೆ ನಿಮ್ಮನ್ನು ಸುಮ್ಮನೆ ಬಿಡಲಿಕ್ಕಿಲ್ಲ! ಅಂತ ನಾನವರನ್ನು ಹೆದರಿಸಿಯೇ ಹೋಗಬೇಕಾ ಹೇಳು…?’ ಎಂದು ಸರೋಜಾಳತ್ತ ತುಂಟ ನಗು ಬೀರುತ್ತ ಕೇಳಿದ. ಅಷ್ಟು ಕೇಳಿದ ಸರೋಜಾಳ ಮುಖದ ಬಿಗು ಮಾಸಿತು. ‘ಅಯ್ಯೋ, ನೀವೊಮ್ಮೆ ಸುಮ್ಮನಿರಿ ಮಾರಾಯ್ರೇ! ಅದೆಲ್ಲ ಏನೂ ಬೇಡ. ಅಷ್ಟು ದಿನ ನಿಮ್ಮನ್ನು ಬಿಟ್ಟಿರುವುದು ಹೇಗೆ ಅಂತ ಚಿಂತೆಯಾಯ್ತಷ್ಟೆ. ಸರಿ. ನೆಮ್ಮದಿಯಿಂದ ಹೋಗಿ ಬನ್ನಿ!’ ಎಂದಳು ಪ್ರೀತಿಯಿಂದ.
ಮರುದಿನ ಮುಂಜಾನೆ ಲಕ್ಷ್ಮಣ ತನ್ನ ಹೆಂಡತಿ ಮಕ್ಕಳ ಜವಾಬ್ದಾರಿಯನ್ನು ಅಕ್ಕಯಕ್ಕನಿಗೊಪ್ಪಿಸಿ, ಅವರ ಪಾದ ಮುಟ್ಟಿ ನಮಸ್ಕರಿಸಿ ಸಾಹೇಬರ ಮನೆಗೆ ಹೊರಟು ಹೋದ. ಅಲ್ಲಿಂದ ಶಿವಪುರಕ್ಕೆ ಹೊರಟು ನಿಂತಿದ್ದ ಇತರ ಕೆಲಸಗಾರರೊಡನೆ ಸಾಹೇಬರ ಜೀಪು ಹತ್ತಿದ. ದೂರದ ಘಟ್ಟದ ಸೆರಗಿನಲ್ಲಿರುವ ಶಿವಪುರದ ಹೆಡಿಗೆಬೆಟ್ಟಿನ ಶಾಂತರಾಮ ಐತಾಳರ ಸಾಗವಾನಿ ಮರವೊಂದನ್ನು ಉಸ್ಮಾನ್ ಸಾಹೇಬರು ಖರೀದಿಸಿದ್ದರು. ಸುಮಾರು ನಲವತ್ತು ವರ್ಷಗಳಷ್ಟು ಹಳೆಯದಾದ ಆ ಮರವು ತೆಂಗು, ಕಂಗು ಮತ್ತು ಬಾಳೆ ತೋಟದ ನಟ್ಟನಡುವೆ ಸುಮಾರು ಎಪ್ಪತ್ತು ಅಡಿಗಳಷ್ಟು ಎತ್ತರ ಬೆಳೆದು ವಿಶಾಲವಾಗಿ ಹರಡಿ ನಿಂತಿತ್ತು. ಆದ್ದರಿಂದ ಅದರ ಸುತ್ತಮುತ್ತಲಿನ ಮರಮುಟ್ಟುಗಳಿಗೆ ಹಾನಿಯಾಗದಂತೆ ಅದನ್ನು ಕಡಿದುರುಳಿಸಬೇಕಿತ್ತು. ಅಂಥ ಕೆಲಸದಲ್ಲಿ ರೂಢಿಯಿದ್ದವರು ಕೂಡಾ ಆ ಮರವನ್ನು ಉರುಳಿಸುವುದು ಬಹಳ ಶ್ರಮದ ಮತ್ತು ಕೌಶಲ್ಯದ ಕಾರ್ಯವಾಗಿತ್ತು. ಹಾಗಾಗಿ ಕೆಲಸಗಾರರ ತಂಡವು ಐದು ದಿನಗಳ ಕಾಲ ಐತಾಳರ ಪಾಳು ಶೆಡ್ಡೊಂದರಲ್ಲಿ ಉಳಿದುಕೊಂಡು ಚಾಕಚಕ್ಯತೆಯಿಂದ ಮರವನ್ನು ಕಡಿದು, ಬೇಕಾದ ಅಳತೆಗೆ ತುಂಡು ಹಾಕಿ, ಲಾರಿಗೆ ಲೋಡು ಮಾಡಿ ಡಿಪೋಗೆ ಸಾಗಿಸುವಲ್ಲಿಯವರೆಗಿನ ಕೆಲಸವನ್ನು ಬಹಳ ಜತನದಿಂದ ನೆರವೇರಿಸಿತು.
ಮರದ ಕೆಲಸದಲ್ಲಿ ನಿಪುಣನಾಗಿದ್ದ ದೇವರಾಯ ಆಚಾರಿಯ ತಂಡದೊoದಿಗೆ ಲಕ್ಷ್ಮಣನೂ ತನ್ನ ಶಕ್ತಿ ಸಾಮರ್ಥ್ಯವನ್ನು ಪ್ರದರ್ಶಿಸುತ್ತ ದುಡಿದ. ಅದರಿಂದ ದೇವರಾಯನಿಗೂ, ಉಸ್ಮಾನ್ ಸಾಹೇಬರಿಗೂ ಅವನ ಕೆಲಸವು ಬಹಳವೇ ಮೆಚ್ಚುಗೆಯಾಯಿತು. ಅಂದಿನಿoದ ಸಾಹೇಬರು ತಾವು ವಹಿಸಿಕೊಳ್ಳುವ ಮರಗಳನ್ನೂ, ಕುರುಚಲು ಹಾಡಿಗಳನ್ನೂ ಕಡಿಯುವ ಉಸ್ತುವಾರಿಯನ್ನು ಒಂದೊoದಾಗಿ ಲಕ್ಷ್ಮಣನಿಗೆ ವಹಿಸತೊಡಗಿದರು. ಲಕ್ಷ್ಮಣನೂ ಹೆಚ್ಚಿನ ಫಲಾಪೇಕ್ಷೆಯಿಲ್ಲದೆ ನಿಷ್ಠೆಯಿಂದ ದುಡಿಯತೊಡಗಿದ. ಹೀಗಾಗಿ ಒಂದೆರಡು ವರ್ಷದಲ್ಲೇ ಅವನು ಸಾಹೇಬರ ಆಪ್ತರಲ್ಲೊಬ್ಬನಾಗಿಬಿಟ್ಟ. ಮುಂದೆ ಸಾಹೇಬರ ಸಮಸ್ತ ಕೂಲಿಯಾಳುಗಳ ಮೇಲ್ವಿಚಾರಕನಾಗಿಯೂ ಭಡ್ತಿ ಹೊಂದಿದ. ಸಾಹೇಬರ ಮೇಲೆ ಅವನಿಗಿದ್ದ ಕುರುಡು ಅಭಿಮಾನವು ಅವನನ್ನು ಎಂಥ ಸ್ವಾಮಿನಿಷ್ಠನನ್ನಾಗಿ ಮಾಡಿತೆಂದರೆ, ಸಾಹೇಬರು ಅದೆಂಥ ಕೆಲಸವನ್ನೇ ಸೂಚಿಸಲಿ ಹಿಂದುಮುoದು ಯೋಚಿಸದೆ ತಲೆಯಲ್ಲಿ ಹೊತ್ತು ಮಾಡಿಮುಗಿಸುವ ಮಟ್ಟಕ್ಕೆ ತಲುಪಿದ್ದ! ಹಾಗಾಗಿ ಸಾಹೇಬರು ನಡೆಸುತ್ತಿದ್ದ ಕಳ್ಳ ನಾಟ ದಂಧೆಯಲ್ಲೂ ಪ್ರಮುಖನಾಗತೊಡಗಿದ. ಇದರಿಂದ ಅವನ ಸಂಪಾದನೆಯೂ ವೃದ್ಧಿಸತೊಡಗಿತು.
ಹೀಗಿದ್ದಾಗಲೇ ಒಮ್ಮೆ ಒಂದು ವಿಲಕ್ಷಣ ಘಟನೆ ನಡೆಯಿತು. ಸಾಹೇಬರ ಬಂಟರಾದ ರe಼Áಕ್, ಇಸ್ಮಾಯಿಲರು ಯಜಮಾನರ ಅಪ್ಪಣೆಯಂತೆ ಹೊಸ ಮರದ ಬೇಟೆಯಲ್ಲಿ ತೊಡಗಿದ್ದವರು ಕೊದನೆಕಲ್ಲು ಎಂಬ ಗ್ರಾಮವನ್ನು ಹೊಕ್ಕರು. ಅಲ್ಲಿನ ಪ್ರದೀಪ ಎಂಬವನೂ ಸಾಹೇಬರ ವ್ಯವಹಾರದಲ್ಲಿ ಭಾಗಿಯಾಗಿದ್ದವನು, ‘ಮುಂಬೈಯ ಹೊಟೇಲ್ ಉದ್ಯಮಿ ಭಗವಾನ್ ದಾಸ್ ಎಂಬವರ ಪಾಳುಬಿದ್ದ ತೋಟವೊಂದರಲ್ಲಿ ಸುಮಾರು ಮೂರು ಕ್ವಿಂಟಲ್ ತೂಕದ ಗಂಧದ ಮರವೊಂದಿದೆ!’ ಎಂದು ಸಾಹೇಬರ ಭಂಟರಿಗೆ ತಿಳಿಸಿದ. ತಮಾಷೆಯೆಂದರೆ ಪ್ರದೀಪನು ಭಗವಾನ್ ದಾಸ್ ಅವರ ದೂರದ ಸಂಬoಧಿಯೇ ಆಗಿದ್ದ! ಆದರೂ ಅವರ ಕಣ್ಣಿಗೆ ಮಣ್ಣೆರಚಿ ಈ ವ್ಯವಹಾರವನ್ನು ಕುದುರಿಸಿದ್ದ. ಮರ ಕಡಿಯಲು ದಿನವೊಂದನ್ನು ಗೊತ್ತುಪಡಿಸಲಾಯಿತು. ಪ್ರದೀಪ ತನ್ನ ಕೆಲಸದಾಳುಗಳಿಂದ ರಾತೋರಾತ್ರಿ ಶ್ರೀಗಂಧವನ್ನು ಕಡಿಸಿ ತುಂಡು ಹಾಕಿಸಿದ. ಗಂಧದ ಪರಿಮಳವು ಹೊರಗೆ ಹರಡದಂತೆ ಮಾಡಲು ದಿಮ್ಮಿಗಳ ಮೂತಿಗೆ ಜೆರ್ಸಿ ದನದ ದುರ್ವಾಸನೆ ಬೀರುವ ಸೆಗಣಿಯನ್ನು ಲೇಪಿಸಿ, ಗೊಬ್ಬರದೆಲೆಗಳಿಂದ ಮರೆಮಾಚಿದ. ಮರುದಿನ ಅದನ್ನು ಗಂಗರಬೀಡಿನ ಲಾರೆನ್ಸ್ ಪರ್ಬುಗಳ ಪಾಳು ತೋಟಕ್ಕೆ ಸಾಗಿಸಬೇಕಿತ್ತು. ನಿವೃತ್ತ ಸೈನ್ಯಾಧಿಕಾರಿ ಲಾರೆನ್ಸರ ದೇಶ ಸೇವೆಗೆ ಕೊಡುಗೆಯಾಗಿ ಸರಕಾರವು ಆ ಕೃಷಿಭೂಮಿಯನ್ನು ಅವರಿಗೆ ನೀಡಿತ್ತು. ಆದರೆ ಅವರು ಮಕ್ಕಳೊಂದಿಗೆ ಹೊರದೇಶದಲ್ಲಿ ನೆಲೆಸಿದ್ದರಿಂದ ಆ ವಿಶಾಲ ತೋಟವು ಈಗ ಹಾಳು ಕಳ್ಳಕಾಕರ ಅಕ್ರಮ ಚಟುವಟಿಕೆಗಳ ಬೀಡಾಗಿತ್ತು.


ಆವತ್ತು ರಾತ್ರಿ ಸುಮಾರು ಏಳು ಗಂಟೆಯ ಹೊತ್ತಿರಬಹುದು. ಉಸ್ಮಾನ್ ಸಾಹೇಬರು ತಮ್ಮ ಮೂವರು ಆಪ್ತ ಭಂಟರನ್ನು ಜೀಪು ಹತ್ತಿಸಿಕೊಂಡು ಬಂದು ಶಿವಕಂಡಿಕೆಯ ದೊಡ್ಡ ಬಸ್ಸು ನಿಲ್ದಾಣದ ಹತ್ತಿರದ ರಿಕ್ಷಾ ಸ್ಟ್ಯಾಂಡಿನ ಸ್ವಲ್ಪದೂರದಲ್ಲಿ ಇಳಿಸಿ ಹೋದರು. ಮರದ ವ್ಯಾಪಾರ ಅಥವಾ ಇತರ ಯಾವುದೇ ಕೆಲಸಕಾರ್ಯಗಳ ಮೇಲೆ ರe಼Áಕ್, ಇಸ್ಮಾಯಿಲರು ಶಿವಕಂಡಿಕೆಗೆ ಬಂದರೆoದರೆ ಅವರು ಇದೇ ನಿಲ್ದಾಣದ ರಿಕ್ಷಾಗಳಲ್ಲಿ ಸಂಚರಿಸುವುದು ವಾಡಿಕೆ. ಆದರೆ ಅವರು ಯಾವ ಆಟೋ ಚಾಲಕನನ್ನೂ ನೋಯಿಸಲಿಚ್ಛಿಸದೆ, ಮೊದಲ ಸಾಲಿನಲ್ಲಿಯೇ ಪ್ರಯಾಣಿಸುತ್ತ ತಮಗೆ ಬೇಕಾದ ಕೆಲವು ಬಡ ರಿಕ್ಷಾ ಚಾಲಕರ ಆರ್ಥಿಕ ಸಮಸ್ಯೆಯನ್ನು ಅವರ ಮಾತುಕತೆಯಿಂದಲೇ ತಿಳಿದುಕೊಂಡು ದುಪ್ಪಟ್ಟು ಬಾಡಿಗೆ ನೀಡಿಯೋ ಅಥವಾ ಅವರಿಗೆ ಅಗತ್ಯವಿರುವಷ್ಟನ್ನು ಉದಾರವಾಗಿ ನೀಡಿಯೋ ಸಭ್ಯತೆ, ಒಳ್ಳೆಯತನವನ್ನು ಮೆರೆಯುತ್ತ ಚಾಲಕರೆಲ್ಲರ ಮನಗೆದ್ದಿದ್ದರು. ಹೀಗಿದ್ದವರು ಇಂದು ಲಕ್ಷ್ಮಣನೊಡನೆ ಅದೇ ಆಟೋ ನಿಲ್ದಾಣಕ್ಕೆ ಬಂದರು.
ಆ ಹೊತ್ತಿಗೆ ಹಗಲು ಪಾಳಿಯ ರಿಕ್ಷಾಗಳು ದುಡಿದು ಸುಸ್ತಾಗಿ ತಂತಮ್ಮ ಮನೆ, ನಿವಾಸಗಳನ್ನು ಸೇರಿದ್ದುವು. ರಾತ್ರಿ ಪಾಳಿಯವು ಆಗಷ್ಟೇ ಬಂದು ಸರದಿಯಲ್ಲಿ ನಿಂತು ಬಾಡಿಗೆಗಾಗಿ ಕಾಯುತ್ತಿದ್ದುವು. ಮುಂಬೈ, ಬೆಂಗಳೂರು ಮತ್ತು ಉತ್ತರ ಕರ್ನಾಟಕದ ಊರುಗಳಿಗೆ ಹೋಗಿ ಬರುವ ಬಸ್ಸುಗಳು ರಾತ್ರಿ ಒಂಬತು, ಹತ್ತು ಗಂಟೆಯ ನಂತರವೇ ನಿಲ್ದಾಣಕ್ಕೆ ಬರುತ್ತಿದ್ದುವು. ಅಲ್ಲಿಯವರೆಗೆ ಆಟೋ ಚಾಲಕರು ಸುತ್ತಮುತ್ತಲಿನ ಅಂಗಡಿ, ಹೊಟೇಲು ಮತ್ತು ಸ್ಥಳೀಯರ ಸಣ್ಣಪುಟ್ಟ ಬಾಡಿಗೆಗಳನ್ನು ಮಾಡುತ್ತ, ಅದಿಲ್ಲದಾಗ ಎಲ್ಲರೂ ಕೂಡಿ ಮೊದಲ ಸಾಲಿನ ಒಂದೆರಡು ಆಟೋಗಳಲ್ಲಿ ಕುಳಿತುಕೊಂಡು ಸಿನೇಮಾ, ರಾಜಕೀಯ ಅಥವಾ ಹಿಂದಿನ ದಿನದ ಬಾಡಿಗೆಯ ಕುರಿತು ಚರ್ಚಿಸುತ್ತ ಸಮಯ ಕಳೆಯುತ್ತಿದ್ದರು. ನಡುನಡುವೆ ಒಬ್ಬರು ಇನ್ನೊಬ್ಬರ ವೈಯಕ್ತಿಕ ವಿಷಯವಾಗಿಯೂ ಗೇಲಿ ಮಾಡಿ ನಗುತ್ತ ಕುಶಾಲಿನಿಂದ ಕಾಲಕಳೆಯುತ್ತಿದ್ದರು. ಇಂದೂ ಹಾಗೆಯೇ ಇದ್ದ ಅವರಲ್ಲಿ ಕೆಲವು ಸೂಕ್ಷö್ಮಗ್ರಾಹಿ ಚಾಲಕರಿಗೆ ಸಾಹೇಬರ ಭಂಟರ ಹಿಪ್ಪಿಕಟ್ಟಿನ ತಲೆಗಳು ದೂರದಿಂದಲೇ ಗೋಚರಿಸಿದವು. ಅವರು ಕೂಡಲೇ ದಡಬಡನೆದ್ದು ತಮ್ಮ ಅಕ್ಕಪಕ್ಕದವರನ್ನು ತಳ್ಳಿ ಹೊರಗೆ ಜಿಗಿದವರು ತಂತಮ್ಮ ಆಟೋಗಳತ್ತ ಧಾವಿಸಿ ಹೋಗಿ ಕೈಕಟ್ಟಿ ನಿಂತು ವಿನಯಪೂರ್ವಕ ನಗುವಿನಿಂದ ರe಼Áಕ್, ಇಸ್ಮಾಯಿಲರನ್ನು ಸೆಳೆಯಲು ದುಂಬಾಲುಬಿದ್ದರು.
ಆ ಹೊತ್ತು ಸರದಿಯ ಮುಂಭಾಗದಲ್ಲಿ ಉಮೇಶನ ರಿಕ್ಷಾ ನಿಂತಿತ್ತು. ರe಼Áಕ್ ಇಸ್ಮಾಯಿಲರು ತಮ್ಮನ್ನು ನಿರುಕಿಸುತ್ತ ಚಡಪಡಿಸುತ್ತಿದ್ದ ಇತರ ಚಾಲಕರತ್ತ ದೇಶಾವರಿ ನಗು ಬೀರುತ್ತ ಉಮೇಶನ ಆಟೋದತ್ತ ಸಾಗಿದರು. ಅದರಿಂದ ಇತರ ಚಾಲಕರು ನಿರಾಶೆಗೊಂಡರು. ಅಷ್ಟರಲ್ಲಿ, ‘ಓಹೋ…! ಇವತ್ತು ‘ಪಕ್ಕಾಸಿ’ಗೆ ದೊಡ್ಡ ಪೆರ್ಗವೇ ಹೊಡೆಯಿತನಾ…!’ ಎಂದು ಮರೆಯಲ್ಲಿ ನಿಂತಿದ್ದ ಚಾಲಕನೊಬ್ಬ ಇತರ ಚಾಲಕರೊಡನೆ ಉಮೇಶನಿಗೆ ಕೇಳಿಸಲೆಂದೇ ಕೂಗಿ ಹೇಳಿದ. ಆದರೆ ಉಮೇಶ ಅತ್ತ ಹೊರಳುವುದರೊಳಗೆ ಅವನು ತನ್ನ ರಿಕ್ಷಾದ ಹಿಂದೆ ಅವಿತುಕೊಂಡುಬಿಟ್ಟ. ‘ಲೇ… ಪಕ್ಕಾಸು, ಈ ಬಾಡಿಗೆ ಮುಗಿಸಿಕೊಂಡು ಮತ್ತೆ ಸ್ಟಾö್ಯಂಡಿಗೆ ಬರಬೇಡ ಮಾರಾಯಾ. ಸೀದಾ ಮನೆಗೆ ಹೋಗಿ ಅಪ್ಪಿಕೊಂಡು ಮಲಗಿಬಿಡು ಆಯ್ತಾ!’ ಎಂದು ಹಿಂದಿನ ಸಾಲಿನಲ್ಲಿ ಬೀಡಿ ಸೇದುತ್ತ ನಿಂತಿದ್ದ ಸಣಕಲ ಮಂಗೇಶ ಕಿಣಿಯೂ ಚುಡಾಯಿಸಿ ನಕ್ಕ. ಅದಕ್ಕೆ ಉಳಿದವರೂ ಧ್ವನಿಗೂಡಿಸುತ್ತ, ‘ಹೌದೌದು ಮಾರಾಯಾ, ಇನ್ನು ಸ್ಟಾö್ಯಂಡಿಗೆ ಬಂದರೆ ನಿನ್ನ ಸೊಂಟ ಮುರಿಯಲಿಕ್ಕುಂಟು!’ ಎಂದು ಅವನನ್ನು ಮತ್ತಷ್ಟು ರೇಗಿಸಿ ನಕ್ಕರು.
ಉಮೇಶನ ಬಾಲ್ಯದಲ್ಲೊಮ್ಮೆ ಜೋರಾದ ಗಾಳಿ ಮಳೆಗೆ ಅವನ ಮನೆಯ ಕುಂಬು ಪಕ್ಕಾಸೊಂದು (ತೊಲೆ) ಮುರಿದು ಹಣೆಗೆ ಬಿದ್ದು ಗಾಯವಾಗಿ ಅದರ ಕಲೆ ಹಾಗೆಯೇ ಉಳಿದಿತ್ತು. ಆ ಕತೆಯನ್ನವನು ತನ್ನ ಸಹಚರರೊಡನೆ ತಮಾಷೆಗೆಂದು ರಸವತ್ತಾಗಿ ವರ್ಣಿಸಿದ್ದೇ ಮುಳುವಾಗಿ ಇತರ ಚಾಲಕರಿಗೆ ಅದೊಂದು ತಮಾಷೆಯ ಸಂಗತಿಯಾಗಿತ್ತು. ಆವತ್ತಿನಿಂದ ಉಮೇಶ, ‘ಪಕ್ಕಾಸು ಉಮೇಶ’ ನೆಂದೇ ಖ್ಯಾತನಾಗಿದ್ದ. ಆದರೆ ಹೀಗೆ ಅಡ್ಡ ನಾಮಾಂಕಿತನಾಗಿರುವುದು ಉಮೇಶನೊಬ್ಬನೇ ಅಲ್ಲ. ಬಹುತೇಕ ರಿಕ್ಷಾ ಚಾಲಕರಿಗೂ ಅವರವರ ಗುಣನಡತೆ ಮತ್ತು ವ್ಯವಹಾರದಲ್ಲಿ ಅವರು ತೋರುತ್ತಿದ್ದ ಸ್ವಭಾವಕ್ಕನುಗುಣವಾಗಿ ಬಗೆಬಗೆಯ ವಕ್ರನಾಮಗಳು ಇದ್ದೇ ಇರುತ್ತಿದ್ದವು. ಮಂಗೇಶ ಕಿಣಿಯ ಮಾತಿನಿಂದ ಉಮೇಶನಿಗೆ ಕೆಟ್ಟ ಕೋಪ ಬಂತು. ‘ಹೇ, ನಾಯೀ..! ಯಾರನ್ನಾ ಅಪ್ಪಿ ಮಲಗುವುದು…?’ ಎಂದು ದುರುಗುಟ್ಟಿ ಪ್ರಶ್ನಿಸಿದ. ಅದಕ್ಕವನು, ‘ಅರೆರೇ, ಬಿಸಿಯಾಗ್ಬೇಡ ಮಾರಾಯಾ. ಮತ್ಯಾರನ್ನು? ನಿನ್ನ ಮಕ್ಕಳನ್ನು! ನಾನು ಮನೆಗೆ ಬರುವುದು ನಡುರಾತ್ರಿಯಾದರೂ ಮಕ್ಕಳು ನನ್ನನ್ನು ಕಾಯುತ್ತ ಕುಳಿತಿರುತ್ತಾರೆ. ಅವರನ್ನು ಮುದ್ದು ಮಾಡಿ ಜೊತೆಯಲ್ಲೇ ಮಲಗಿಸಿಕೊಳ್ಳಬೇಕು. ಅಂತ ನೀನೇ ಹೇಳುತ್ತಿಯಲ್ಲ ಅದಕ್ಕೇ ಹೇಳಿದೆ!’ ಎಂದು ಕಿಣಿ ಕಿಚಾಯಿಸಿ ನಕ್ಕ. ಅವನ ಮಾತಿಗೆ ಇತರರೂ ಅಬ್ಬರಿಸಿ ನಕ್ಕರು.
‘ಹಾಳು ಒಡು (ಉಡ) ಗಳು ಮಾರಾಯಾ ನೀವೆಲ್ಲ! ಎರಡು ಮೂರು ದಿನಗಳಿಂದ ಸರಿಯಾದ ಬಾಡಿಗೆ ಇಲ್ಲಾಂತ ನನಗಿಲ್ಲಿ ಮಂಡೆ ಹಾಳಾಗಿದ್ದರೆ ಒಂದೊಳ್ಳೆ ಬಾಡಿಗೆ ಬಂದರೂ ಹೊಟ್ಟೆಯುರಿಸಿಕೊಂಡು ಸಾಯುತ್ತೀರಿ ದರ್ವೇಶಿಗಳೇ ಥೂ!’ ಎಂದು ತನ್ನ ಬಾಡಿಗೆದಾರರಿಗೆ ಕೇಳಿಸದಂತೆ ಮೆಲುವಾಗಿ ಉಗಿದ.
ಉಮೇಶನ ಕೋಪ ಕಂಡ ಕಿಣಿಗೂ ಇತರರಿಗೂ ನಗು ತಡೆಯಲಾಗಲಿಲ್ಲ. ಎಲ್ಲರೂ ರಪ್ಪನೆ ತಂತಮ್ಮ ಆಟೊದೊಳಗೆ ತೂರಿ ಕುಳಿತುಕೊಂಡು ಉಸಿರು ಬಿಗಿಹಿಡಿದು ನಗತೊಡಗಿದರು. ಆಗ ಉಮೇಶ ತನ್ನ ಬಾಡಿಗೆಯತ್ತ ಗಮನ ಹರಿಸಿದವನು, ‘ಬನ್ನಿ ಬನ್ನಿ ಸಾಹೇಬರೇ…! ನಿಮ್ಮದೇ ಬೋಣಿ!’ ಎಂದ ಉಮೇದಿನಿಂದ. ರe಼Áಕ್, ಇಸ್ಮಾಯಿಲ್ ಮತ್ತು ಲಕ್ಷ್ಮಣ ನಗುತ್ತ ಆಟೋ ಹತ್ತಿದರು. ‘ಹ್ಞೂಂ, ಹೋಗುವ ಉಮೇಶಣ್ಣ…!’ ಎಂದು ರe಼Áಕ್ ಸೂಚಿಸಿದಾಗ ತಟ್ಟನೆ, ‘ಎಲ್ಲಿಗೆ…?’ ಎಂಬ ಮೂಲ ಪ್ರಶ್ನೆಯೊಂದು ಉಮೇಶನ ನಾಲಗೆಯ ತುದಿಗೆ ಬಂತಾದರೂ ತಾನು ಹೋಗುವ ದೂರ ಇತರ ಚಾಲಕರ ಕಿವಿಗೆ ಬಿದ್ದರೆ ಅದಕ್ಕೂ ಹೊಟ್ಟೆ ಉರಿಸಿಕೊಂಡಾರು ಎಂದೆನಿಸಿ ನಾಲಗೆ ಕಚ್ಚಿಕೊಂಡ. ಬಳಿಕ ಹಳೆಯ ಖಾಕಿ ಅಂಗಿಯನ್ನು ಕೊಡವಿ ತೊಟ್ಟುಕೊಂಡು ತನ್ನ ಲ್ಯಾಂಬ್ರೆಟ್ಟಾ ರಿಕ್ಷಾವನ್ನು ಒಂದೇ ಒದೆತಕ್ಕೆ ಸ್ಟಾರ್ಟ್ ಮಾಡಿ ಹೊರಟ.
ಉಮೇಶ ತನ್ನ ಆಟೋದ ಯಂತ್ರವನ್ನು ಇತ್ತೀಚೆಗೆ ಹೊಸತಾಗಿ ‘ರೀಬೋರ್’ ಮಾಡಿಸಿದ್ದ. ಹಾಗಾಗಿ ಅದನ್ನು ಮುಂದಿನ ಒಂದೆರಡು ತಿಂಗಳು ಗರಿಷ್ಟ ಇಪ್ಪತ್ತು, ಮೂವತ್ತು ಕಿಲೋಮೀಟರ್ ವೇಗಕ್ಕಿಂತ ಹೆಚ್ಚು ಓಡಿಸುವಂತಿರಲಿಲ್ಲ. ಹಾಗೆ ಮಾಡಿದರೆ ಅತಿಯಾಗಿ ಬಿಸಿಯೇರುವ ರಿಕ್ಷಾ ಉಸಿರುಗಟ್ಟಿದಂತೆ ಅಲ್ಲಲ್ಲಿ ನಿಂತು ಸಾಗಬೇಕಾದ ಸಮಸ್ಯೆಯಾಗುತ್ತಿತ್ತು. ಆದ್ದರಿಂದ ಉಮೇಶ ಸಮತೋಲನದಿಂದ ಓಡಿಸುತ್ತಿದ್ದ. ಸ್ವಲ್ಪಹೊತ್ತಲ್ಲಿ ರe಼Áಕನು ಉಮೇಶನೊಡನೆ ಮಾತಿಗಿಳಿದವನು, ‘ಮತ್ತೇ… ಉಮೇಶಣ್ಣಾ ಹೇಗಿದ್ದೀರಿ? ಬಾಡಿಗೆ ಜೋರಾ…?’ ಎಂದೆನ್ನುತ್ತಲೇ ಬರ್ಕ್ಲಿ ಸಿಗರೇಟೊಂದನ್ನು ಹಚ್ಚಿಕೊಂಡು ಇನ್ನೊಂದನ್ನು ಅವನಿಗೆ ನೀಡಿದ. ಉಮೇಶನಿಗೆ ಖುಷಿಯಿಂದ ಮೈ ನವಿರೆದ್ದಿತು. ಸಿಗರೇಟನ್ನು ತೆಗೆದುಕೊಳ್ಳುತ್ತ, ‘ಎಂಥ ಜೋರು ಸಾಹೇಬರೇ, ಮೂರು ದಿನಗಳಿಂದ ಮಣ್ಣೂ ಇಲ್ಲ. ಇವತ್ತು ನೀವಲ್ಲದಿದ್ದರೆ ದೇವರೇ ಗತಿ!’ ಎಂದು ಹಲುಬಿದವನು, ‘ಅಂದಹಾಗೆ ಬಾಡಿಗೆ ಎಲ್ಲಿಗೆ ಸಾಹೇಬರೇ…?’ ಎಂದ ಕುತೂಹಲದಿಂದ.
‘ಹ್ಞಾಂ, ಹೇಳುವುದು ಮರೆತು ಹೋಯ್ತು ಉಮೇಶಣ್ಣ. ಪೆಟ್ರೋಲ್ ಟ್ಯಾಂಕ್ ಫುಲ್ ಮಾಡಿಕೊಳ್ಳಿ. ಕೊದನೆಕಲ್ಲಿಗೆ ಹೋಗಿ ಬರಲಿಕ್ಕಿದೆ. ಅಲ್ಲೊಂದು ಮರ ನೋಡಿಟ್ಟಿದ್ದೇವೆ. ಅದರ ಡೀಲ್ ಮಾಡಿ ಬರುವುದಷ್ಟೇ!’ ಎಂದ ಇಸ್ಮಾಯಿಲ್ ಮೃದುವಾಗಿ. ಅಷ್ಟು ಕೇಳಿದ ಉಮೇಶನಿಗೆ ಸ್ವರ್ಗಕ್ಕೆ ಮೂರೇ ಗೇಣು ಎಂಬoತಾಯಿತು. ಆದರೆ, ‘ಟ್ಯಾಂಕ್ ಫುಲ್ ಮಾಡಿಕೊಳ್ಳಿ!’ ಎಂದಾಕ್ಷಣ ಇದ್ದ ಉತ್ಸಾಹವೆಲ್ಲ ರ‍್ರೆಂದು ಇಳಿದುಬಿಟ್ಟಿತು. ರe಼Áಕ್ ಅದನ್ನು ಗಮನಿಸಿದವನು, ‘ತಕೊಳ್ಳಿ ಪೆಟ್ರೋಲ್ ಹಾಕಿಸಿ!’ ಎಂದು ನೂರರ ನೋಟನ್ನು ತೆಗೆದು ಅವನ ಮುಖದೆದರು ಹಿಡಿದ. ನಸು ಹಸುರಿನ ಖಡಕ್ಕಾದ ಆ ನೋಟು ಉಮೇಶನ ಮುಖವನ್ನು ಮೊರದಗಲಗೊಳಿಸಿತು. ಆದರೂ ಕೃತಕ ಸಂಕೋಚ ತೋರುತ್ತ, ‘ಈಗೇನು ಅರ್ಜಂಟು ಸಾಹೇಬರೇ…! ಮತ್ತೆ ಕೊಟ್ಟರಾಯಿತು. ಸದ್ಯಕ್ಕೆ ನನ್ನ ಹತ್ರ ಇದೆ…!’ ಎಂದು ಜಂಭ ತೋರಿಸಿದ. ‘ಇರಲಿ, ತಗೊಳ್ಳಿ ಉಮೇಶಣ್ಣ…!’ ಎಂದು ಅವನೂ ಒತ್ತಾಯಿಸಿದಾಗ ರಪ್ಪನೆ ತೆಗೆದುಕೊಂಡ.
ಶಿವಕಂಡಿಕೆ ಪೇಟೆಯ ಹೃದಯಭಾಗದಲ್ಲಿದ್ದ ಸೋಮಶೆಟ್ಟರ ಬಂಕಿನಲ್ಲಿ ಐದು ಲೀಟರ್ ಪೆಟ್ರೋಲ್ ತುಂಬಿಸಿಕೊAಡು ಉಳಿದ ಇಪ್ಪತ್ತೆöÊದು ರೂಪಾಯಿಗಳನ್ನು ತಣ್ಣಗೆ ತನ್ನ ಒಳ ಜೇಬಿಗಿಳಿಸಿದ ಉಮೇಶ ರಾತ್ರಿ ಎಂಟೂವರೆಯ ಸುಮಾರಿಗೆ ಕೊದನೆಕಲ್ಲಿಗೆ ತಲುಪಿದ. ಅಲ್ಲಿ ಸಾಹೇಬರ ಭಂಟರ ತಂಡವು ಮಿಲಿಟರಿ ಹೊಟೇಲೊಂದರಲ್ಲಿ ಗಡದ್ದಾಗಿ ಉಂಡು ಮತ್ತೆ ತಮ್ಮ ಗಮ್ಯದತ್ತ ಸಾಗಿತು.


ಅಂದು ಅಮಾವಾಸೆಯ ಮೂರನೆಯ ರಾತ್ರಿ. ಇಡೀ ಊರನ್ನು ದಟ್ಟ ಕಾರ್ಗತ್ತಲು ಆವರಿಸಿತ್ತು. ಅಂಥ ಹೊತ್ತಲ್ಲದ ಹೊತ್ತಲ್ಲಿ ಉಮೇಶನ ರಿಕ್ಷಾವು ಭಗವಾನ್ ದಾಸರ ಪಾಳು ತೋಟವನ್ನು ಪ್ರವೇಶಿಸಿತು. ಸುಮಾರು ಅರ್ಧ ಕಿಲೋಮೀಟರ್ ಸಾಗಿದ ನಂತರ ಅಲ್ಲಿದ್ದ ಜೀಪೊಂದರ ಹತ್ತಿರ ಹೋಗಿ ಆಟೋ ನಿಲ್ಲಿಸುವಂತೆ ಇಸ್ಮಾಯಿಲನು ಉಮೇಶನಿಗೆ ಸೂಚಿಸಿದ. ಆ ಜೀಪಿನಲ್ಲಿ ಪ್ರದೀಪ ಕುಳಿತು ಇವರನ್ನು ಕಾಯುತ್ತಿದ್ದ. ಅಲ್ಲಿಯವರಗೆ ಗೆಲುವಾಗಿದ್ದ ಉಮೇಶನಿಗೆ ಆ ಗಾಢಾಂಧಕಾರವನ್ನು ಕಂಡು ಭಯದಿಂದ ಎದೆಯೊಳಗೆ ಅವಲಕ್ಕಿ ಕುಟ್ಟಲು ಶುರುವಾಯಿತು. ಈ ಬಡ್ಡಿ ಮಕ್ಕಳದ್ದು ಎಂಥ ಸಾವಿನ ವ್ಯಾಪಾರವಾ…? ಒಂದೂ ತಿಳಿಯದೆ ಬಂದುಬಿಟ್ಟಿದ್ದೇನೆ. ಇಲ್ಲಿ ನೋಡಿದರೆ ಬೇರೇನೋ ‘ಡಬ್ಬಲ್ ಗೇಮ್’ ನಡೆಯುವ ಹಾಗಿದೆಯಲ್ಲ! ಎಂದುಕೊoಡು ಅಳುಕುತ್ತ ಆಟೋದಿಂದಿಳಿದ. ಬಳಿಕ ಬೀಡಿಯೊಂದನ್ನು ಬಾಯಿಗಿಟ್ಟು ಬೆಂಕಿಕಡ್ಡಿ ಗೀರಿದ. ಆದರೆ ಅದನ್ನು ಕಂಡ ಪ್ರದೀಪ ದಂಗಾಗಿಬಿಟ್ಟ! ದಟ್ಟ ಕತ್ತಲಿರುವಾಗಲೇ ತನ್ನ ಕೆಲಸವನ್ನು ಪೂರೈಸಬೇಕೆಂದಿದ್ದವನನ್ನು ರಿಕ್ಷಾ ಚಾಲಕನ ‘ಬೀಡಿ ಪ್ರಸಂಗ’ವು ಕೆಟ್ಟದಾಗಿ ಕೆರಳಿಸಿತು. ರಪ್ಪನೇ ಉಮೇಶನತ್ತ ನುಗ್ಗಿದವನು, ‘ಹೇ, ಯಾವನೋ ದರ್ವೇಶಿ ನೀನು! ಮಂಡೆ ಸಮ ಇಲ್ಲವಾ ನಿಂಗೆ…?’ ಎಂದು ಗದರಿಸಿದ. ಅವನ ಮಾತಿನಿಂದ ಬಡಪಾಯಿ ಉಮೇಶ ಅದುರಿಬಿದ್ದ. ಅಷ್ಟೊತ್ತಿಗೆ ತನ್ನ ಮೂತಿಯನ್ನಷ್ಟೇ ಹೊತ್ತಿಸಿಕೊಂಡಿದ್ದ ಬೀಡಿಯನ್ನು ತಟ್ಟನೆ ನೆಲಕ್ಕೆಸೆದು ಹೊಸಕಿದವನು ತಣ್ಣಗೆ ಆಟೋದೊಳಗೆ ತೂರಿ ಕುಳಿತ.
ಅಷ್ಟರಲ್ಲಿ ಪ್ರದೀಪನ ಜೀಪಿನಿಂದ ಮತ್ತಿಬ್ಬರು ಆಳುಗಳು ಇಳಿದವರು ಒಂದೆಡೆ ದೊಡ್ಡ ಗುಡ್ಡೆಯಂತೆ ಕಾಣುತ್ತಿದ್ದ ಗೊಬ್ಬರದ ಮರದ ರೆಂಬೆಕೊoಬೆಗಳ ರಾಶಿಯನ್ನು ಕೆದಕತೊಡಗಿದರು. ಆಗ ಎಂಥದ್ದೋ ಹೇಲು ಮಿಶ್ರಿತ ವಾಸನೆಯೊಂದು ಉಮೇಶನ ಮೂಗಿಗೆ ಬಡಿದಾಗ ಅಚ್ಚರಿಗೊಂಡ. ಆದರೆ ಸ್ವಲ್ಪ ಯೋಚಿಸಿದವನಿಗೆ ತಕ್ಷಣ ಕಳವಳವೆದ್ದಿತು. ಕತ್ತಲಿಗೆ ತನ್ನ ದೃಷ್ಟಿಯನ್ನು ಬಲವಾಗಿ ಹೊಂದಿಸಿಕೊoಡು ಅತ್ತಿತ್ತ ಚಲಿಸುತ್ತಿದ್ದ ಮಾನವಾಕೃತಿಗಳನ್ನು ಗಮನಿಸಿದವನ ಎದೆಯೊಮ್ಮೆ ಧಸಕ್ಕ್ ಎಂದು ತಾಳತಪ್ಪಿ ಬಡಿದುಕೊಳ್ಳತೊಡಗಿತು. ಇಬ್ಬರು ಆಳುಗಳು ಏನೋ ಭಾರವಾದ ವಸ್ತುವನ್ನು ಹೊತ್ತುಕೊಂಡು ಇವನ ಆಟೋದತ್ತಲೇ ಬರುತ್ತಿದ್ದರು. ಅಷ್ಟರಲ್ಲಿ, ‘ಉಮೇಶರೇ, ನಿಮ್ಮ ಆಟೋದಲ್ಲಿ ಎಷ್ಟು ಕ್ವಿಂಟಲ್ ಹಿಡಿಯಬಹುದು…?’ ಎಂದು ರe಼Áಕ್ ಪ್ರಶ್ನಿಸಿದ. ಉಮೇಶನಿಗೆ ವಿಷಯ ಸ್ಪಷ್ಟವಾಯಿತು. ಅವನು ಕೂಡಲೇ, ‘ಏನಿದು ಸಾಹೇಬರೇ, ಗಂಧದ ತುಂಡುಗಳಲ್ಲವಾ?’ ಎಂದ ಅಸಹನೆಯಿಂದ. ‘ಹೌದು ಉಮೇಶಣ್ಣ!’ ಎಂದ ಅವನೂ ಸೌಮ್ಯವಾಗಿ.
‘ಇಂಥ ಬಾಡಿಗೆ ನಾನು ಮಾಡುವುದಿಲ್ಲ ಸಾಹೇಬ್ರೇ! ನೀವು ಬಾಡಿಗೆ ಏನೆಂದು ತಿಳಿಸದೆ ಸುಳ್ಳು ಹೇಳಿ ಇಷ್ಟು ದೂರ ಕರ್ಕೊಂಡು ಬಂದು ಹೀಗೆ ಮಾಡುವುದು ಸರಿಯಾ ಹೇಳಿ?’ ಎಂದು ಸಿಡುಕಿದ.
‘ಥತ್ ತೇರಿಕೆ! ನಮಗೂ ಇಲ್ಲಿ ಮಾಲು ರೆಡಿಯಿದೆ ಅಂತ ಗೊತ್ತಿರಲಿಲ್ಲ ಉಮೇಶರೇ…! ಗೊತ್ತಿದ್ದರೆ ಜೀಪಿನಲ್ಲೇ ಬರುತ್ತಿದ್ದೆವು. ಆದರೂ ಬಂದಾಯ್ತಲ್ಲ. ಅದಕ್ಕೆ ಖಾಲಿ ಹೋಗುವುದಕ್ಕಿಂತ ಸಾಧ್ಯವಾದಷ್ಟನ್ನು ಕೊಂಡು ಹೋಗುವುದು ಒಳ್ಳೆಯದೆಂದು ಯೋಚಿಸಿದೆವು. ನೀವು ಯಾವುದಕ್ಕೂ ತಲೆಬಿಸಿ ಮಾಡಿಕೊಳ್ಳುವುದು ಬೇಡ. ಬಾಡಿಗೆ ಎಷ್ಟು ಬೇಕಾದರೂ ಕೊಡುವ!’ ಎಂದು ಇಸ್ಮಾಯಿಲ್ ಒರಟಾಗಿ ಹೇಳಿ ಅವನನ್ನು ಒಪ್ಪಿಸಲು ಪ್ರಯತ್ನಿಸಿದ. ಆದರೆ ಉಮೇಶ ಅದಾಗಲೇ ಕೆರಳಿದ್ದ.
‘ನಿಮ್ಮ ಬಾಡಿಗೇನೂ ಬೇಡ ಏನೂ ಬೇಡ ಮಾರಾಯ್ರೇ. ಯರ‍್ಯಾರದ್ದೋ ಕೈಕಾಲು ಹಿಡಿದು ಸಾಲಸೋಲ ಮಾಡಿ ನಾನು ಈ ರಿಕ್ಷಾ ಕೊಂಡು ಇಲ್ಲಿಯವರೆಗೆ ನಿಯತ್ತಿನಲ್ಲಿ ದುಡಿಯುತ್ತ ಬಂದವನು. ಇಂಥ ಲಫಡಾ ಬಾಜಿಯೆಲ್ಲ ಮಾಡಿ ಸಿಕ್ಕಿಬಿದ್ದರೆ ನನ್ನ ರಿಕ್ಷಾವೂ ಹೋಯ್ತು ಜೊತೆಗೆ ಜೈಲಿನಲ್ಲೂ ಕೊಳೆಯಬೇಕಾದೀತು. ಹಾಗಾಗಿ ನೀವು ಇಲ್ಲಿಗೆ ಬಂದ ಬಾಡಿಗೆಗೆ ಆಗ ಪೆಟ್ರೋಲಿಗೆ ಹಣ ಕೊಟ್ಟಿದ್ದೀರಲ್ಲ ಅದು ಸಮ ಆಯ್ತು. ನಾನಿನ್ನು ಹೊರಡುತ್ತೇನೆ!’ ಎಂದ ಉಮೇಶ ಆಟೋ ಹತ್ತಲು ಮುಂದಾದ. ಅವನ ಮಾತು ಕೇಳಿದ ಪ್ರದೀಪನಿಗೆ ಆಘಾತವೂ ಕೋಪವೂ ಒಟ್ಟೊಟ್ಟಿಗೆ ಒಕ್ಕರಿಸಿತು. ಅವನು ರಪ್ಪನೆ ಜೀಪಿನೊಳಗೆ ಕೈ ತೂರಿಸಿ ತಲವಾರೊಂದನ್ನು ಎತ್ತಿಕೊಂಡು ಉಮೇಶನತ್ತ ನುಗ್ಗಿದವನು, ‘ಏನಂದೆಯಾ ಬೇವರ್ಸಿ…! ಅಷ್ಟೊಂದು ಕೊಬ್ಬುಂಟಾ ನಿಂಗೆ! ನೀನೀಗ ನಿಂತಿರುವುದು ಯಾರೆದುರು ಅಂತ ಗೊತ್ತುಂಟಾ? ಅಷ್ಟು ದೂರದಿಂದ ನಿನ್ನನ್ನು ಕರೆದುಕೊಂಡು ಬಂದು, ಹೊಟ್ಟೆ ಬಿರಿಯುವಂತೆ ಊಟವನ್ನೂ ಮಾಡಿಸಿ ಈಗ ಸುಮ್ಮನೆ ಕೈ ಬೀಸುತ್ತ ಕಳುಹಿಸಿಕೊಡಲು ನಮ್ಮನ್ನೇನು ಮಲೆಮಂಗಗಳೆoದುಕೊoಡೆಯಾ…! ಇಲ್ಲೇ ಕಡಿದು ತೋರಣ ಕಟ್ಟಲಿಕ್ಕುಂಟು ಮಗನೇ!’ ಎಂದು ಬೆದರಿಸಿದ. ಪ್ರದೀಪನ ಕೈಯಲ್ಲಿದ್ದ ಖಡ್ಗವು ಆ ಕಾರ್ಗತ್ತಲಲ್ಲೂ ಫಳಫಳನೇ ಹೊಳೆದುದನ್ನು ಕಂಡ ಉಮೇಶನ ಹೃದಯವೊಮ್ಮೆ ಕಂಪಿಸಿಬಿಟ್ಟಿತು. ಆದ್ದರಿಂದ ಅವನು ತುಟಿಪಿಟಿಕ್ ಎನ್ನದೆ ನಿಂತುಬಿಟ್ಟ. ಅಷ್ಟರಲ್ಲಿ, ‘ಹೇ, ನೀವೆಂಥದಾ ಮರಗಟ್ಟಿ ನೋಡುತ್ತಿರುವುದು? ಬೇಗ ಬೇಗ ಲೋಡು ಮಾಡಿರಾ!’ ಎಂದು ಪ್ರದೀಪ ತನ್ನಾಳುಗಳನ್ನೂ ಗದರಿಸಿದ. ಆಗ ಉಮೇಶ ಸ್ವಲ್ಪ ದೂರ ಹೋಗಿ ನಿಂತವನು, ಛೇ! ಎಂಥ ವಂಚಕರ ಕೈಗೆ ಸಿಕ್ಕಿಬಿದ್ದೆನಲ್ಲ! ಈ ನಾಯಿಗಳು ಇಂಥ ಕಳ್ಳ ವ್ಯಾಪಾರಿಗಳು ಅಂತ ಗೊತ್ತಿದ್ದರೆ ಖಂಡಿತಾ ರಿಕ್ಷಾ ಹತ್ತಲಿಕ್ಕೇ ಬಿಡುತ್ತಿರಲಿಲ್ಲ ಎಂದುಕೊoಡು ಚಡಪಡಿಸಿದ. ಬಳಿಕ, ಅಂದರೆ ನನ್ನ ಸ್ಟ್ಯಾಂಡಿನ ಕೆಲವರು ಇವರು ಬಂದ ಕೂಡಲೇ ಜೀವಬಿಟ್ಟು ಹತ್ತಿಸಿಕೊಂಡು ಹೋಗುತ್ತಾರಲ್ಲ ಹಾಗಾದರೆ ಅವರು ಕೂಡಾ ಇವರ ವ್ಯವಹಾರದಲ್ಲಿ ಸೇರಿದ್ದಾರಾ…? ಎಂದು ಯೋಚಿಸಿ ವಿಸ್ಮಯಪಟ್ಟವನು, ಖಂಡಿತಾ ಹೌದು! ಆದರೆ ದರ್ವೇಶಿಗಳು ಒಬ್ಬರೂ ಈತನಕ ನನ್ನೆದುರು ಬಾಯಿಬಿಟ್ಟಿಲ್ಲವಲ್ಲ! ಎಂದು ಆಘಾತಗೊಂಡವನಿಗೆ ರe಼Áಕ್, ಇಸ್ಮಾಯಿಲರ ಮೇಲೆ ಕೋಪ ಒತ್ತರಿಸಿ ಬಂತು. ಇವತ್ತಿನ ಇದೇ ಘಟನೆ ಎಲ್ಲಾದರೂ ನನ್ನ ಊರಲ್ಲಿ ಅಥವಾ ಹಗಲಲ್ಲಿ ನಡೆಯಬೇಕಿತ್ತು. ಈ ರಂ…ಮಕ್ಕಳ ಜನ್ಮವನ್ನಲ್ಲೇ ಜಾಲಾಡಿಸಿಬಿಡುತ್ತಿದ್ದೆ!’ ಎಂದು ಕುದಿದ. ಆದರೆ ಈಗ ತಾನಿರುವ ಸನ್ನಿವೇಶದ ನೆನಪು ಮಾಡಿಕೊಂಡವನು ಪ್ರದೀಪನನ್ನೂ, ತನ್ನ ಬಾಡಿಗೆದಾರರನ್ನೂ ಒಳಗೊಳಗೆ ವಾಚಮಾಗೋಚರವಾಗಿ ಬೈಯ್ಯುತ್ತ ನಿಂತುಕೊoಡ.
ಸುಮಾರು ಅರ್ಧಗಂಟೆಯಲ್ಲಿ ಗಂಧದ ತುಂಡುಗಳೆಲ್ಲ ಉಮೇಶನ ಆಟೋದೊಳಗೆ ಒಂದಕ್ಕೊoದು ಒತ್ತೊತ್ತಿ ಪವಡಿಸಿದವು. ‘ಹೇ, ಡ್ರೈವರ್ ಇಲ್ಲಿ ಬಾರನಾ…!’ ಎಂದು ಪ್ರದೀಪ ಹಿಂದಿನ ರುಬಾಬಿನಿಂದಲೇ ಕರೆದಾಗ ಉಮೇಶ ಸಿಡಿಮಿಡಿಗುಟ್ಟುತ್ತ ಬಂದು ಅವನೆದುರು ನಿಂತ. ‘ಹ್ಞೂಂ ಈಗ ಹೊರಡು. ಹೆದರಬೇಡ! ನಮ್ಮ ಜೀಪು ನಿನ್ನ ಮುಂದೆ ಹೋಗುತ್ತಿರುತ್ತದೆ. ನೀನು ಸುಮ್ಮನೆ ನಮ್ಮನ್ನು ಹಿಂಬಾಲಿಸಿದರಾಯ್ತು!’ ಎಂದು ಒರಟಾಗಿ ಅಂದ. ಆದರೂ ಅವನಿಗೆ ರಿಕ್ಷಾ ಚಾಲಕನ ಮೇಲೆ ಪೂರ್ತಿ ನಂಬಿಕೆ ಬರಲಿಲ್ಲ. ಹಾಗಾಗಿ ರe಼Áಕ್, ಇಸ್ಮಾಯಿಲರನ್ನು ತನ್ನ ಜೀಪಿಗೆ ಹತ್ತಿಸಿಕೊಂಡು ಲಕ್ಷ್ಮಣನನ್ನು ಅವನೊಂದಿಗೆ ಎದುರು ಸೀಟಿನಲ್ಲಿ ಕುಳ್ಳಿರಿಸಿ ಹೊರಟಾಗ ಉಮೇಶ ಮತ್ತಷ್ಟು ಅಶಾಂತನಾದ.
ಉಮೇಶನ ಆಟೋದ ಯಂತ್ರವು ಸುಃಸ್ಥಿತಿಯಲ್ಲಿದ್ದಾಗ ಸುಮಾರು ನಾಲ್ಕೈದು ಕ್ವಿಂಟಲ್ ಭಾರವನ್ನಾದರೂ ಸಲೀಸಾಗಿ ಹೊತ್ತೊಯ್ಯುತ್ತಿತ್ತು. ಆದರೀಗ ರೀಬೋರ್ ಆಗಿದ್ದುದರಿಂದಲೂ, ಅತಿಯಾದ ಭಾರವನ್ನು ತುಂಬಿಸಿದ್ದರಿoದಲೂ ಅದು ಏದುಸಿರು ಬಿಡುತ್ತ ಹೊರಟಿದ್ದು ಹೆಚ್ಚು ದೂರ ಓಡಲಾಗದೆ ಒಂದೆರಡು ಕಿಲೋಮೀಟರಿಗೊಂದು ಬಾರಿ ತೀವ್ರ ಬಿಸಿಯೇರಿ ಸೀದ ವಾಸನೆ ಬೀರುತ್ತ ಅಲ್ಲಲ್ಲಿ ನಿಂತು ಐದೈದು ನಿಮಿಷಗಳಷ್ಟು ಸಮಯ ಸುಧಾರಿಸಿಕೊಳ್ಳುತ್ತ ಸಾಗತೊಡಗಿತು. ತನ್ನ ರಿಕ್ಷಾದ ಅವಸ್ಥೆಯನ್ನು ಕಂಡ ಉಮೇಶನ ಹೊಟ್ಟೆ ಉರಿಯುತ್ತಿತ್ತು. ಅದರಿಂದ ಅವನೂ ಧುಮುಗುಟ್ಟುತ್ತ ಸಾಗುತ್ತಿದ್ದ. ಆದರೆ ಅದನ್ನು ಕಾಣುತ್ತ ಒಂದಷ್ಟು ದೂರ ಕ್ರಮಿಸಿದ ಪ್ರದೀಪನಿಗೆ ರೇಗಿಬಿಟ್ಟಿತು. ‘ಥೂ! ಇದೆಂಥದು ಸಾಹೇಬರೇ ನಿಮ್ಮ ಜಂಬರ? ಇಂಥ ಜಕ್ರೀಸ್ ರಿಕ್ಷಾವನ್ನೆಲ್ಲ ನಮ್ಮ ಕೆಲಸಕ್ಕೆ ತರುವುದಾ…! ಈಗೆಲ್ಲಾದರೂ ಪೊಲೀಸರು ಎದುರಾದರೆ ನಮ್ಮ ಕಥೆ ಕೈದಾಗಲಿಕ್ಕಿಲ್ಲವಾ ಮಾರಾಯ್ರೇ…?’ ಎಂದು ಸಿಡುಕಿದ. ಆಗ ಇಸ್ಮಾಯಿಲ್ ಜಿಗುಪ್ಸೆಯಿಂದ ತಲೆ ಕೊಡವಿಕೊಂಡವನು, ‘ಥತ್! ಏನು ಮಾಡುವುದು ಪ್ರದೀಪಣ್ಣಾ ರಿಕ್ಷಾ ರೀಬೋರ್ ಆಗಿದೆಯೆಂದು ಅವನೂ ಹೇಳಲಿಲ್ಲ, ನಮಗೂ ತಿಳಿಯಲಿಲ್ಲ. ಅಲ್ಲದೇ ಈ ವಿಷಯ ತಿಳಿಸಿದರೆ ಯಾರೂ ಕೂಡಾ ಬಾಡಿಗೆಗೆ ಬರಲಿಕ್ಕಿಲ್ಲ ಅಂತಲೂ ತೋರಿತು. ಹಾಗಾಗಿ ಸಿಕ್ಕಿದ್ದನ್ನು ಹತ್ತಿಕೊಂಡು ಬಂದುಬಿಟ್ಟೆವು. ಆದರೂ ಅಂಥದ್ದೇನೂ ಆಗಲಿಕ್ಕಿಲ್ಲ. ತಲೆಬಿಸಿ ಮಾಡ್ಕೋಬೇಡಿ. ಸಾಧ್ಯವಾದಷ್ಟು ಮುಂದೆ ಹೋಗುವ!’ ಎಂದು ಪ್ರದೀಪನನ್ನು ಸಂತೈಸಿದ. ಅದರಿಂದ ಪ್ರದೀಪನೂ ತಾಳ್ಮೆ ತಂದುಕೊoಡು ಸಾಗಿದ. ಆದರೆ ಅಲ್ಲೊಂದು ಕಡೆ ತಮ್ಮ ಎದುರಿನ ದೃಶ್ಯವನ್ನು ಕಂಡ ಖದೀಮರ ಗಟ್ಟಿ ಹೃದಯಗಳು ಜೋರಾಗಿ ಬಡಿದುಕೊಂಡವು! ಪ್ರದೀಪ ತಟ್ಟನೆ ಜೀಪು ನಿಲ್ಲಿಸಿ ಹೆಡ್‌ಲೈಟ್ ಆರಿಸಿಬಿಟ್ಟ!
(ಮುಂದುವರೆಯುವುದು)

Related posts

ವಿವಶ…!

Chandrahas

ವಿವಶ..

Mumbai News Desk

ವಿವಶ..

Mumbai News Desk

ವಿವಶ…

Mumbai News Desk

ವಿವಶ…

Mumbai News Desk

ವಿವಶ ..

Mumbai News Desk