
ಕಾಪು : ಎರಡು ವರ್ಷಕ್ಕೊಮ್ಮೆ ಮಹತ್ವಪೂರ್ಣವಾಗಿ ನಡೆಯುವ ಕಾಪುವಿನ ಪಿಲಿಕೋಲಕ್ಕೆ ಇಂದು ಮೇ 4. ಕಾಪುವಿನ ಹಳೆ ಮಾರಿಯಮ್ಮ ದೇವಸ್ಥಾನದ ಸಮೀಪದ ಬ್ರಹ್ಮ ಮುಗ್ಗೇರ್ಕಳ ಹುಲಿಚಂಡಿ ದೈವಸ್ಥಾನದಲ್ಲಿ ಚಾಲನೆ ನೀಡಲಾಯಿತು.
ಹತ್ತಿರದ ಕೆರೆಯಲ್ಲಿ ಪಿಲಿದೈವ ನರ್ತಕ ಸ್ನಾನಾದಿ ಕಾರ್ಯ ಮುಗಿಸಿ ಬಳಿಕ ದೈವಸ್ಥಾನದ ಮುಂಭಾಗದಲ್ಲಿ ತೆಂಗಿನ ಗರಿಗಳಿಂದ ತಯಾರಿಸಲಾದ ಸಿರಿಯಿಂದ ಮಾಡಿದ ಗುಂಡದೊಳಗೆ ಹುಲಿವೇಷದ ಬಣ್ಣಗಾರಿಕೆ ನಡೆಯುತು,

ಈ ವೇಳೆ ಗುಂಡದೊಳಗೆ ಹಾಗೂ ಸುತ್ತಮುತ್ತ ಯಾರೂ ಪ್ರವೇಶ ಮಾಡುವಂತಿಲ್ಲ. ಹುಲಿವೇಷದ ಬಣ್ಣಗಾರಿಕೆಯೊಂದಿಗೆ ವಿಚಿತ್ರವಾಗಿ ಹುಲಿಯಂತೆ ಆರ್ಭಟಿಸುತ್ತ ಒಲಿಗುಂಡದಿಂದ ವೇಷಧಾರಿ ವೈಭವದಿಂದ ಹೊರಬರುವ ಮೂಲಕ ಪಿಲಿಕೋಲಕ್ಕೆ ಚಾಲನೆ ದೊರೆಯುತ್ತದೆ. ಹುಲಿ ಬೇಟೆಯ ಜೊತೆಗೆ ಗ್ರಾಮ ಸಂಚಾರಕ್ಕೆ ಹೊರಟು ಹಳೆ ಮಾರಿಗುಡಿ ಮುಂಭಾಗದ ಬಾಳೆಯ ಗರುಡ- ಗಂಬವನ್ನು ಮುರಿಯುವ ಹುಲಿ ವೇಷಧಾರಿ, ಜೀವಂತ ಕೋಳಿಯ ರಕ್ತ ಹೀರುವ ಸನ್ನಿವೇಶ ಮೈ ಜುಮ್ಮೆನಿಸುತ್ತದೆ. ಈ ಸಮಯದಲ್ಲಿ ಹುಲಿಯ ಅರ್ಭಟ, ಹಾರಾಟ ಮೈನವಿರೇಳಿಸುತ್ತದೆ.

ಕಾರಣಿಕ ಹಾಗೂ ದೈವಿಕ ಹಿನ್ನೆಲೆ ಹೊಂದಿರುವ ಪಿಲಿಭೂತ ಕೋಲದಲ್ಲಿ ಹುಲಿ ಮುಟ್ಟಿದರೆ ಮರಣ ಭೀತಿಯ ನಂಬಿಕೆ ಇರುವುದರಿಂದ ಪಿಲಿಕೋಲವನ್ನು ಸಾಕಷ್ಟು ದೂರದಲ್ಲಿ ನಿಂತು ಜನರು ವೀಕ್ಷಿಸುತ್ತಾರೆ. ಕಾಪು ಬ್ರಹ್ಮ ಮುಗ್ಗೇರ್ಕಳ ಹುಲಿಚಂಡಿ ದೈವಸ್ಥಾನದಲ್ಲಿ ಈ ಅವಧಿಯಲ್ಲಿ ಪಿಲಿಕೋಲ ಮಾತ್ರವಲ್ಲದೆ ಮುಗ್ಗೇರ್ಕಳ, ತನ್ನಿಮಾನಿಗ, ಬಬ್ಬರ್ಯ, ಗುಳಿಗ ಹಾಗೂ ಪರಿವಾರ ದೈವಗಳ ನೇಮೋತ್ಸವವೂ ನಡೆಯುತ್ತದೆ. ಆದರೆ, ಕೊನೆಯಲ್ಲಿ ನಡೆಯುವ ಪಿಲಿಕೋಲವನ್ನು ನೋಡಲು ಜನಸಾಗರವೇ ಹರಿದು ಬಂದಿದೆ.
———-
ಎರಡು ವರ್ಷಗಳಿಗೊಮ್ಮೆ ವಿಜೃಂಭಣೆಯಿಂದ ಕಾಪು ಪಿಲಿಕೋಲ ನಡೆಯುತ್ತಿದ್ದು ಈ ವಿಶಿಷ್ಟ ಆಚರಣೆ ವೀಕ್ಷಣೆಗೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಮಾತ್ರವಲ್ಲದೆ ದೇಶ ವಿದೇಶಗಳಲ್ಲಿ ನೆಲೆಸಿರುವ ಸಾವಿರಾರು ತುಳುವರು ಬರುತ್ತಾರೆ. ಅಪಾರ ಜನಾಕರ್ಷಣೆಗೆ ಒಳಗಾಗಿರುವ ವೈವಿಧ್ಯಮಯ ಪಿಲಿಕೋಲ ಈ ಭಾಗದಲ್ಲಿ ಅತ್ಯಂತ ಪ್ರಸಿದ್ಧ.
ಪರಶುರಾಮ ಸೃಷ್ಟಿಯ ತುಳುನಾಡು ದೈವಾರಾಧನೆಯ ನೆಲವಾಗಿದ್ದು ಇಲ್ಲಿ ದೇವರಿಗಿಂತ ದೈವಗಳ ಆರಾಧನೆಗೆ ಹೆಚ್ಚು ಮಹತ್ವ ನೀಡಲಾಗುತ್ತದೆ. ಪ್ರಕೃತಿ ಆರಾಧಕರಾಗಿರುವ ತುಳುವರು ಪ್ರಕೃತಿಯ ಶಕ್ತಿಗಳನ್ನೇ ದೈವಗಳಾಗಿ ನಂಬಿ ಆರಾಧಿಸುತ್ತಾ ಬಂದಿದ್ದು ಅಂತಹ ಆರಾಧನೆಗಳಲ್ಲಿ ಪಿಲಿಕೋಲವೂ ಒಂದಾಗಿದೆ.
ಕಾರಣಿಕ ಹಾಗೂ ದೈವಿಕ ಹಿನ್ನೆಲೆ ಹೊಂದಿರುವ ಪಿಲಿಭೂತ ಕೋಲದಲ್ಲಿ ಹುಲಿ ಮುಟ್ಟಿದರೆ ಮರಣ ಭೀತಿಯ ನಂಬಿಕೆ ಇರುವುದರಿಂದ ಪಿಲಿಕೋಲವನ್ನು ಸಾಕಷ್ಟು ದೂರದಲ್ಲಿ ನಿಂತು ಜನರು ವೀಕ್ಷಿಸುತ್ತಾರೆ. ಇತರ ದೈವಗಳ ಕೋಲಗಳಂತೆ ಹತ್ತಿರದಿಂದ
ಹುಲಿಕೋಲವನ್ನು ವೀಕ್ಷಿಸಲಾಗುವುದಿಲ್ಲ. ಪಿಲಿಕೋಲದ
ದೈವಾರ್ಷಿಕ ನಡಾವಳಿಯು ಒಂದು ರೀತಿಯಲ್ಲಿ ಯುವಜನಾಂಗಕ್ಕೆ
ಪುಳಕ ಹುಟ್ಟಿಸುವುದು ಮಾತ್ರವಲ್ಲದೆ, ಅಚ್ಚುಮೆಚ್ಚಿನ
ನೇಮೋತ್ಸವವೂ ಆಗಿದೆ.