
ಧಾರವಾಹಿ 27
ಆವತ್ತು ಶಿವಕಂಡಿಕೆಯ ಪೊಲೀಸರು ವಿವೇಕನಗರದ ವೃತ್ತದಲ್ಲಿ ರಾತ್ರಿ ಪಾಳಿಯ ವಾಹನ ತಪಾಸಣೆಯಲ್ಲಿ ತೊಡಗಿದ್ದರು. ಇತ್ತ ಗಂಧ ಕಳ್ಳರ ತಂಡದ ಪ್ರಮುಖನಾದ ಪ್ರದೀಪನು ಪೊಲೀಸರ ಜೀಪನ್ನು ದೂರದಿಂದಲೇ ಕಂಡವನಿಗೆ ದಿಕ್ಕು ತೋಚದಾಯಿತು. ‘ಇವರ ಕೈಗೆ ಸಿಕ್ಕಿಬಿದ್ದರೆ ನಮ್ಮ ಕಥೆ ಕೈಲಾಸವಾಗುವುದು ಗ್ಯಾರಂಟಿ!’ ಎಂದುಕೊoಡು ಹೆಡ್‌ಲೈಟ್ ಹಾಕದೆಯೇ ಜೀಪನ್ನು ರ‍್ರನೆ ಹಿಂದೆ ತಿರುಗಿಸಿದವನು ಸುಮಾರು ದೂರದಲ್ಲಿ ಕರ್ಕಶವಾಗಿ ಅರಚುತ್ತ ಬರುತ್ತಿದ್ದ ಉಮೇಶನ ಆಟೋದತ್ತ ಜೀಪನ್ನು ಓಡಿಸಿ ಅವನೆದುರು ನಿಲ್ಲಿಸಿದ. ಅಷ್ಟರಲ್ಲಿ ರe಼Áಕನು, ‘ಹೋಯ್ ಉಮೇಶಣ್ಣಾ ಅಲ್ಲಿ ಪೊಲೀಸರಿದ್ದಾರೆ. ಗಾಡಿ ತಿರುಗಿಸಿಕೊಂಡು ನಮ್ಮನ್ನು ಹಿಂಬಾಲಿಸಿ…!’ ಎಂದ ಮರುಕ್ಷಣ ಪ್ರದೀಪನ ಜೀಪು ಮರಳಿ ಕೊದನೆಕಲ್ಲಿನತ್ತ ಓಡಿತು. ಉಮೇಶ ಮೊದಲೇ ರe಼Áಕ್, ಇಸ್ಮಾಯಿಲರ ವಂಚನೆಯಿoದಲೂ ಪ್ರದೀಪನ ದಬ್ಬಾಳಿಕೆಯಿಂದಲೂ ಕೆಟ್ಟದಾಗಿ ಕೆರಳಿದ್ದ. ಆದರೆ ಬಡವನ ಕೋಪ ದವಡೆಗೆ ಮೂಲ ಎಂದುಕೊoಡು ಸಹನೆಯಿಂದಿದ್ದವನಿಗೆ ಪೊಲೀಸರನ್ನು ಕಂಡ ಕೂಡಲೇ ಆನೆಯಬಲ ಬಂದoತಾಯಿತು. ಅವನು ರಪ್ಪನೆ ಸೆಟೆದುಕೊಂಡವನು ತನ್ನನ್ನು ಒತ್ತಿ ಕುಳಿತಿದ್ದ ಲಕ್ಷ್ಮಣನನ್ನು ಬಿಗಿದ ಭುಜದಿಂದ ಕೊಡವಿ ತಳ್ಳುತ್ತ, ‘ಕಳ್ಳ ಬಡ್ಡಿಮಕ್ಕಳೇ, ನನ್ನನ್ನು ಮೋಸದಿಂದ ಕರೆದುಕೊಂಡು ಬಂದಿದ್ದೇ ಅಲ್ಲದೆ, ತಲವಾರ್ ಬೇರೆ ತೋರಿಸಿ ಹೆದರಿಸುತ್ತೀರಾ…? ರಿಕ್ಷಾದವರೆಂದರೆ ಅಷ್ಟೊಂದು ಸದರವಾಗಿಬಿಟ್ಟಿತಾ ನಿಮಗೆ? ಇವತ್ತು ನಿಮ್ಮ ಚರ್ಬಿಯನ್ನು ಇಳಿಸದಿದ್ದರೆ ನಾನು ಉಮೇಶನೇ ಅಲ್ಲಬಿಡಿ!’ ಎಂದು ಲಕ್ಷ್ಮಣನೊಡನೆ ಒರಟಾಗಿ ಅಂದವನು ಆಟೋವನ್ನು ವೇಗವಾಗಿ ಪೊಲೀಸರತ್ತಲೇ ಓಡಿಸತೊಡಗಿದ.
ಉಮೇಶನ ವರ್ತನೆಯನ್ನು ಕಂಡ ಲಕ್ಷ್ಮಣ ದಂಗಾಗಿಬಿಟ್ಟ! ‘ಅಯ್ಯಯ್ಯೋ ಡ್ರೆöÊರ‍್ರೇ…! ನೀವೆಂಥ ಮಾಡುತ್ತಿದ್ದೀರಿ ಮಾರಾಯ್ರೇ…? ಅವರ ಮಾತನ್ನೆಲ್ಲ ಮನಸ್ಸಿಗೆ ಹಚ್ಚಿಕೊಳ್ಳಬೇಡಿ! ದಯವಿಟ್ಟು ರಿಕ್ಷಾ ಹಿಂದೆ ತಿರುಗಿಸಿ. ಬೇಗ, ಬೇಗಾ!’ ಎಂದ ಭೀತಿಯಿಂದ. ಆದರೆ ಅವನ ಮಾತನ್ನು ಲೆಕ್ಕಿಸದ ಉಮೇಶ ಇನ್ನಷ್ಟು ಕುಪಿತನಾಗಿ ಅವುಡುಗಚ್ಚಿದವನು, ರಿಕ್ಷಾದ ವೇಗವನ್ನು ಮತ್ತಷ್ಟು ಹೆಚ್ಚಿಸಿದ. ಅದರಿಂದ ಹೆದರಿ ಕಂಗಾಲಾದ ಲಕ್ಷ್ಮಣನಿಗೆ ತಾನೀಗ ರಿಕ್ಷಾದಿಂದ ಜಿಗಿದು ಓಡಿ ಹೋಗುವುದೇ ವಾಸಿ! ಎಂದೆನಿಸಿತು. ಆದರೆ ತನ್ನ ಧಣಿ ಉಸ್ಮಾನ್ ಸಾಹೇಬರ ಆಘಾತ ತುಂಬಿದ ದೀನ ಮುಖವು ಅವನ ಕಣ್ಣಮುಂದೆ ಬಂದು ಹತಾಶೆಯಿಂದ ದಿಟ್ಟಿಸಿದಂತಾಯಿತು. ರಪ್ಪನೇ ತಲೆಕೊಡವಿಕೊಂಡವನು, ಇಲ್ಲ, ಇಲ್ಲ! ನನ್ನ ಉಸಿರಿರುವತನಕ ಧಣಿಯವರಿಗೆ ಅನ್ಯಾಯವಾಗಲು ಬಿಡುವುದಿಲ್ಲ! ಎಂದು ಅವನ ಸ್ವಾಮಿನಿಷ್ಠ ಮನಸ್ಸು ಚೀರಿ ಹೇಳಿತು. ಮುಂದಿನ ಕ್ಷಣ ಅವನ ಸೊಂಟಕ್ಕೆ ಸಿಲುಕಿಸಿದ್ದ ಬಟನ್ ಚಾಕುವೊಂದು ರ‍್ರನೆ ಕೈಗೆ ಬಂತು. ತನ್ನ ಒಂದಡಿ ಉದ್ದದ, ಹರಿತವಾದ ಉಕ್ಕಿನ ನಾಲಗೆಯಿಂದ ಅದು ಉಮೇಶನ ಬಲ ಕೊರಳನ್ನು ಮೃದುವಾಗಿ ಚುಚ್ಚಿಕೊಂಡಿತು. ‘ಹ್ಞೂಂ! ಹೆಚ್ಚು ಮಾತಾಡದೆ ರಿಕ್ಷಾ ತಿರುಗಿಸು. ಇಲ್ಲವಾದರೆ ನಿನ್ನನ್ನಿಲ್ಲೇ ಮುಗಿಸಿ ಬಿಡುತ್ತೇನೆ!’ ಎಂದಬ್ಬರಿಸಿದ. ಉಮೇಶನ ಕತ್ತಿನಲ್ಲಿ ಕಸಕ್ಕನೆ ವಿದ್ಯುತ್ ಸಂಚಾರವಾದoತಾದ ಬೆನ್ನಿಗೆ ಅವನ ರೋಷವೂ ಇಳಿದುಬಿಟ್ಟಿತು. ಹಾಗಾಗಿ ರಿಕ್ಷಾ ಮರಳಿ ತಾನು ಬಂದ ವೇಗದಲ್ಲೇ ಕೊದನೆಕಲ್ಲಿನ ದಾರಿ ಹಿಡಿಯಿತು.
ಲಕ್ಷ್ಮಣನಿಗೆ ಹೋದ ಜೀವ ಬಂದoತಾಯಿತು. ಆದರೆ ಉಮೇಶ ಭಯ, ಕೋಪದಿಂದ ಸಿಡಿಮಿಡಿಗುಟ್ಟುತ್ತ ಸಾಗುತ್ತಿದ್ದ. ಲಕ್ಷ್ಮಣನಿಗೆ ಅವನ ಸ್ಥಿತಿಯನ್ನು ಕಂಡು ಕನಿಕರವೆದ್ದಿತು. ಪಾಪ! ನನ್ನಂತೆಯೇ ರಾತ್ರಿ ಹಗಲು ನಿದ್ದೆಗೆಟ್ಟು ನಾಲ್ಕು ಕಾಸಿಗೆ ದುಡಿಯುವ ಜನ ಇವರು. ಇಂಥವರಿಗೆ ತೊಂದರೆ ಕೊಟ್ಟರೆ ದೇವರು ಮೆಚ್ಚಲಿಕ್ಕಿಲ್ಲ! ಎಂದುಕೊoಡವನು, ‘ಬೇಜಾರು ಮಾಡ್ಕೋಬೇಡಿ ಡ್ರೆöÊರ‍್ರೇ. ನಾನೊಂದು ವೇಳೆ ನಿಮ್ಮನ್ನು ಹಾಗೆ ಹೆದರಿಸದಿದ್ದರೆ ನೀವು ನಮ್ಮ ಕೆಲಸವನ್ನೆಲ್ಲ ಕೆಡಿಸಿಬಿಡುತ್ತಿದ್ದಿರಿ. ನಿಮ್ಮಂತೆ ನಾನೂ ಸಂಸಾರ ಇರುವವನು ಮಾರಾಯ್ರೇ. ನಿಮ್ಮ ಕೋಪದ ಬರದಲ್ಲಿ ಎಲ್ಲರೂ ಧರ್ಮಕ್ಕೆ ಜೈಲು ಸೇರಬೇಕಾಗುತ್ತಿತ್ತು. ನಮ್ಮ ಸಾಹೇಬರ ವಿಷಯ ನಿಮಗಿನ್ನೂ ಗೊತ್ತಿಲ್ಲ ಅಂತ ಕಾಣುತ್ತದೆ. ಅವರು ಒಳ್ಳೆಯವರಿಗೆ ಒಳ್ಳೆಯವರು, ಕೆಟ್ಟವರಿಗೆ ಮಹಾ ಕೆಡುಕರು. ಅಂಥವರ ಅನ್ನ ತಿಂದವನು ನಾನು. ಅವರನ್ನು ಆಪತ್ತಿನಲ್ಲಿ ಸಿಲುಕಲು ಬಿಡಬಹುದಾ ಹೇಳಿ?’ ಎಂದವನು, ‘ಹೋಗಲಿ ಬಿಡಿ. ಈ ವಿಚಾರವನ್ನು ಇಲ್ಲಿಗೆ ಬಿಟ್ಟುಬಿಡುವ. ನಾನಿದನ್ನು ರe಼Áಕ್, ಇಸ್ಮಾಯಿಲರಿಗೆ ಹೇಳುವುದಿಲ್ಲ!’ ಎಂದೂ ಸಂತೈಸಿದ. ಅದರಿಂದ ಉಮೇಶ ಸ್ವಲ್ಪ ತಣ್ಣಗಾದಂತೆ ಕಂಡರೂ ಮೂಕನಂತೆ ಆಟೋ ಓಡಿಸುತ್ತಿದ್ದ.
ಹಾಗೆ ಸಾಗಿದ ರಿಕ್ಷಾವು ಉಮೇಶನಿಗೆ ಗೊತ್ತಿದ್ದ ಬೇರಾವುದೋ ಒಳದಾರಿಯನ್ನು ಹಿಡಿದು ಮತ್ತೊಂದು ನಾಲ್ಕು ಕಡೆ ರಣ ಬಿಸಿಯೇರಿ ನಿಂತು ಸುಧಾರಿಸಿಕೊಳ್ಳುತ್ತ ಕೊನೆಗೂ ಗಂಗರಬೀಡಿನ ಲಾರೆನ್ಸ್ ಪರ್ಬುಗಳ ಕುರುಚಲು ಹಾಡಿಗೆ ಬಂದು ತಲುಪಿತು. ಅಲ್ಲಿ ಗಂಧದ ದಿಮ್ಮಿಗಳನ್ನು ಇಳಿಸುವ ಹೊತ್ತಿಗೆ ನಡುರಾತ್ರಿ ದಾಟಿತು. ಲಕ್ಷ ಬೆಲೆ ಬಾಳುವ ಮಾಲನ್ನು ಭದ್ರವಾಗಿ ತಂದು ಮುಟ್ಟಿಸಿದ ಉಮೇಶನ ಮೇಲೆ ಪ್ರದೀಪನಿಗೂ, ಸಾಹೇಬರ ಭಂಟರಿಗೂ ಅಭಿಮಾನ ಉಕ್ಕಿ ಬಂತು. ಆದರೆ ಅದಕ್ಕೆ ಮುಖ್ಯ ಕಾರಣ ಲಕ್ಷ್ಮಣನೆಂದು ತಿಳಿಯದ ಅವರು ಉಮೇಶನಿಗೆ, ಅವನು ಕೇಳಿದ ಇನ್ನೂರು ರೂಪಾಯಿ ಬಾಡಿಗೆಯೊಂದಿಗೆ ನೂರು ರೂಪಾಯಿ ಭಕ್ಷೀಷನ್ನೂ ಕೊಟ್ಟು ಖುಷಿಪಡಿಸಿದವರು, ‘ಡ್ರೆöÊರ‍್ರೇ, ನಿಮ್ಮ ಇವತ್ತಿನ ಕೆಲಸ ನಮಗೆಲ್ಲ ತುಂಬಾ ಇಷ್ಟವಾಯ್ತು ನೋಡಿ! ಆದರೆ ಇನ್ನೊಂದು ವಿಷಯವನ್ನೂ ನೀವು ನೆನಪಿಟ್ಟುಕೊಳ್ಳಬೇಕು. ಏನೆಂದರೆ, ಇಲ್ಲಿ ನಡೆದ ಸಂಗತಿಯನ್ನು ಇಲ್ಲೇ ಬಿಟ್ಟು ಹೋಗಬೇಕು ಗೊತ್ತಾಯ್ತಾ…?’ ಎಂದು ಪ್ರದೀಪ ಮೆಚ್ಚುಗೆಯನ್ನೂ ಜೊತೆಗೆ ಕಟು ಎಚ್ಚರಿಕೆಯನ್ನೂ ಒಟ್ಟಿಗೆ ನೀಡಿದ. ಆದರೆ ಅಲ್ಲಿಯವರೆಗೆ ಪೆಟ್ಟು ತಿಂದ ಸರ್ಪದಂತೆ ಬುಸುಗುಟ್ಟುತ್ತಿದ್ದ ಉಮೇಶ ತನ್ನ ಕೈಗೆ ಮುನ್ನೂರು ರೂಪಾಯಿಗಳು ಬಂದು ಸೇರುತ್ತಲೇ, ಅಬ್ಬಾ, ದೇವರೇ! ಇನ್ನೊಂದು ವಾರದ ಮನೆ ಖರ್ಚಿಗೆ ಯಾವ ಮಂಡೆಬಿಸಿಯೂ ಇಲ್ಲ! ಎಂದು ಗೆಲುವಾದವನು, ‘ಅಯ್ಯೋ… ನನಗ್ಯಾಕೆ ಬೇಕು ಮಾರಾಯ್ರೇ ಇಲ್ಲದ ಉಸಾಬರಿ…!’ಎಂದು ಪ್ರದೀಪನಿಗುತ್ತರಿಸಿದವನು ಕೂಡಲೇ ಅಲ್ಲಿಂದ ಹಿಂದಿರುಗಿದ. ಅವನ ಮಾತು ಕೇಳಿದ ಪ್ರದೀಪ ತಟ್ಟನೆ ಉಳಿದವರತ್ತ ತಿರುಗಿ ತಮಾಷೆಯಾಗಿ ನಕ್ಕ. ಆಗ ಅವರೂ ದನಿಗೂಡಿಸಿದರು.
ಉಸ್ಮಾನ್ ಸಾಹೇಬರು ಆವತ್ತು ಸಂಜೆ ತಮ್ಮ ಭಂಟರನ್ನು ದೊಡ್ಡ ಬಸ್ಸು ನಿಲ್ದಾಣದಲ್ಲಿ ಇಳಿಸಿ ಹೋದವರು ಮರಳಿ ಚೌಳುಕೇರಿಗೆ ಬಂದು ಮನೆಯಲ್ಲಿ ರಾತ್ರಿಯೂಟ ಮುಗಿಸಿ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದರು. ಬಳಿಕ ಹನ್ನೆರಡರ ಹೊತ್ತಿಗೆ ಶಿವಕಂಡಿಕೆಯ ಸಣ್ಣ ಬಸ್ಸು ನಿಲ್ದಾಣದ ಸಮೀಪ ಬಂದವರು, ತಮ್ಮ ಹುಡುಗರು ಇಷ್ಟೊತ್ತಿಗಾಗಲೇ ಕೆಲಸ ಮುಗಿಸಿ ಹಿಂದಿರುಗಬೇಕಿತ್ತು. ಯಾಕಿಷ್ಟು ತಡವಾಯ್ತು…? ಎಂದು ಯೋಚಿಸಿದವರಿಗೆ ಮೆಲ್ಲನೆ ಆತಂಕವೆದ್ದಿತು. ಜೊತೆಗೆ, ಕೆಲಸದಲ್ಲಿ ಏನಾದರೂ ತೊಂದರೆಯಾಗಿರಬಹುದಾ…? ಎಂದೂ ಚಿಂತಿಸಿದರು. ಆನಂತರ ಚಡಪಡಿಸತೊಡಗಿದ ತಮ್ಮ ಮನಸ್ಸನ್ನು ಹತೋಟಿಗೆ ತರಲಾಗದೆ ರಪ್ಪನೇ ಜೀಪಿನಿಂದಿಳಿದು ಅಲ್ಲೇ ಹತ್ತಿರದ, ‘ತಿರುಪತಿ ವೈನ್ಸ್’ ನತ್ತ ಹೆಜ್ಜೆ ಹಾಕಿದರು. ಅದರ ಹಿಂದಿನ ಬಾಗಿಲಿನಿಂದ ನುಸುಳಿ ಹುಡುಗನೊಬ್ಬನಿಗೆ ಒಂದು ಕ್ವಾರ್ಟರ್ ಆಫೀರ‍್ಸ್ ಚಾಯ್ಸ್ ವಿಸ್ಕಿಯನ್ನು ಜೀಪಿನತ್ತ ತರಲು ಸೂಚಿಸಿ ಬಂದು ಕುಳಿತರು. ಹುಡುಗ ನಿಮಿಷದಲ್ಲಿ ವಿಸ್ಕಿ, ಸೋಡಾ, ಗ್ಲಾಸು ಮತ್ತು ಕುರುಕಲು ತಿಂಡಿಯನ್ನೂ ತಂದು ಸಾಹೇಬರಿಗೆ ಕೊಟ್ಟು ಬಿಲ್ಲು ಹಾಗೂ ಭಕ್ಷೀಷಿನೊಂದಿಗೆ ಹೊರಟು ಹೋದ. ಸಾಹೇಬರು ವಿಸ್ಕಿ ಹೀರುತ್ತ ತುಸು ಸ್ಥಿಮಿತಕ್ಕೆ ಬಂದವರು ರಾತ್ರಿ ಸುಮಾರು ಎರಡು ಗಂಟೆಯವರೆಗೆ ತಮ್ಮ ಭಂಟರನ್ನು ಕಾಯುತ್ತ ಕುಳಿತರು. ಕೊನೆಗೂ ಪ್ರದೀಪನ ಜೀಪು ಬಂದು ಅವರ ಪಕ್ಕದಲ್ಲಿ ನಿಂತಿತು. ಅವನು ಮೂವರನ್ನೂ ಇಳಿಸಿದವನು ಒಳಗಿನಿಂದಲೇ ಸಾಹೇಬರಿಗೊಂದು ಆತ್ಮೀಯ ನಮಸ್ಕಾರ ಹೊಡೆದು ಶರವೇಗದಲ್ಲಿ ಹೊರಟು ಹೋದ.
ತಮ್ಮ ಹುಡುಗರನ್ನು ಕಂಡ ಸಾಹೇಬರು ನೆಮ್ಮದಿಯ ಉಸಿರುಬಿಟ್ಟು ಅವರನ್ನು ಜೀಪು ಹತ್ತಿಸಿಕೊಂಡು ಮನೆಯತ್ತ ಹೊರಟರು. ರe಼Áಕ್, ಇಸ್ಮಾಯಿಲರು ತಮ್ಮ ಕಾರ್ಯಚರಣೆಯನ್ನು ಯಜಮಾನರಿಗೆ ರಸವತ್ತಾಗಿ ವರ್ಣಿಸಿ ಶಹಬ್ಭಾಶ್‌ಗಿರಿ ಗಿಟ್ಟಿಸಿಕೊಳ್ಳುತ್ತ ಸಾಗಿದರು. ಬಳಿಕ ಲಕ್ಷ್ಮಣನ ಸಾಹಸವನ್ನು ಅವನ ಬಾಯಿಯಿಂದಲೇ ಕೇಳಿದ ಸಾಹೇಬರಿಗೆ ವಿಸ್ಮಯವಾಯಿತು. ಅವನು ವಿಶೇಷ ಸಮಯಪ್ರಜ್ಞೆಯಿಂದ ತಮ್ಮನ್ನೂ, ಲಕ್ಷ ರೂಪಾಯಿ ಬೆಲೆಬಾಳುವ ಮಾಲನ್ನೂ ರಕ್ಷಿಸಿದ ರೀತಿಯನ್ನು ತಿಳಿದವರಿಗೆ ಅವನ ಮೇಲೆ ಇನ್ನಷ್ಟು ಅಕ್ಕರಾಭಿಮಾನ ಮೂಡಿತು. ‘ಶಹಭಾಶ್ ಲಕ್ಷ್ಮಣ, ಗಂಡಸೆoದರೆ ನಿನ್ನಂತಿರಬೇಕು ನೋಡು! ಇವತ್ತಿನಿಂದ ನೀನೂ ನಮ್ಮ ರe಼Áಕ್, ಇಸ್ಮಾಯಿಲರಂತೆ ನಮ್ಮ ಆಪ್ತನಾಗಿಬಿಟ್ಟೆ!’ ಎಂದು ಬೆನ್ನು ತಟ್ಟಿ ಹೊಗಳಿದರು. ಅಷ್ಟು ಕೇಳಿದ ರe಼Áಕ್, ಇಸ್ಮಾಯಿಲರಿಗೆ ಉಮೇಶನ ಮೇಲೆ ತಟ್ಟನೆ ಅಸಹನೆಯೆದ್ದಿತು. ‘ಛೇ! ಛೇ! ಎಂಥ ಮಾರಾಯಾ ನೀನು…? ಈ ವಿಷಯವನ್ನು ನಮಗಲ್ಲಿಯೇ ತಿಳಿಸುವುದಲ್ಲವಾ…? ಆ ಸೂವರ್ ನನ್ಮಗ ರಿಕ್ಷಾದವನಿಗೆ ನಯಾಪೈಸೆ ಕೊಡದೆ, ನಾಲ್ಕು ಬಡಿದು ಕಳುಹಿಸಬಹುದಿತ್ತು!’ ಎನ್ನುತ್ತ ಕೋಪದಿಂದ ಕೈಕೈ ಹಿಸುಕಿಕೊಂಡರು.
‘ಛೇ! ಛೇ! ಎಂಥದು ಸಾಹೇಬರೇ ನೀವು ಮಾತಾಡುವುದು? ಅವನಿಗೆ ವಿಷಯವನ್ನು ಮೊದಲೇ ತಿಳಿಸದೆ ಕರೆದುಕೊಂಡು ಹೋಗಿದ್ದು ನಮ್ಮದೇ ತಪ್ಪು. ಅದರ ಮೇಲೆ ಪ್ರದೀಪರೂ ಅವನನ್ನು ಹೆದರಿಸಿಬಿಟ್ಟರು. ಅವನೂ ಮನುಷ್ಯನಲ್ಲವಾ? ಕೋಪದಿಂದ ಹಾಗೆಲ್ಲ ವರ್ತಿಸಿದ. ಕಷ್ಟಪಟ್ಟು ದುಡಿದು ತಿನ್ನುವ ಜನರಿಗೆ ನಾವು ಯಾವತ್ತೂ ತೊಂದರೆ ಮಾಡಬಾರದು!’ ಎಂದು ಲಕ್ಷ್ಮಣ ದಿಟ್ಟವಾಗಿ ಹೇಳಿದ. ಆಗ ರe಼Áಕ್, ಇಸ್ಮಾಯಿಲರಿಗೆ ಪಿಚ್ಚೆನಿಸಿದರೂ ಸಾಹೇಬರು ಹೆಮ್ಮೆಯಿಂದ ತಲೆದೂಗಿದರು.
ಅಂದಿನಿoದ ಸಾಹೇಬರಿಗೆ ಲಕ್ಷ್ಮಣನ ಮೇಲೆ ಪೂರ್ಣ ವಿಶ್ವಾಸ ಬೆಳೆದುಬಿಟ್ಟಿತು. ಅವನನ್ನು ಇನ್ನಷ್ಟು ಆಸ್ಥೆಯಿಂದ ನೋಡಿಕೊಳ್ಳತೊಡಗಿದರು. ಸಾಹೇಬರ ಕೃಪಾಕಟಾಕ್ಷದಿಂದ ಲಕ್ಷ್ಮಣನ ಆರ್ಥಿಕ ಸಮಸ್ಯೆಗಳೂ ನಿವಾರಣೆಯಾಗತೊಡಗಿದವು. ಸರೋಜಾಳ ಮೂರು ರೂಪಾಯಿಯ ರೋಲ್ಡ್ಗೋಲ್ಡ್ ಕರಿಮಣಿಯು ಮೆಲ್ಲನೆ ತನ್ನ ಮಹತ್ವವನ್ನು ಕಳೆದುಕೊಂಡು ಹಳೆಯ ಟ್ರಂಕು ಸೇರಿತು. ಎರಡೆಳೆಯ ಚಿನ್ನದ ತಾಳಿ ಅವಳ ಕೊರಳನ್ನಲಂಕರಿಸಿ ಮುಗುಳ್ನಕ್ಕಿತು. ಮುಂದಿನ ದಿನಗಳಲ್ಲಿ ಲಂಟಾನಾ ಹೂವಿನ ಮಾದರಿಯ ಚೆಂದದ ಹರಳಿನ ಬೆಂಡೋಲೆಗಳು ಅವಳ ಕಿವಿಯ ಅಂದವನ್ನು ಹೆಚ್ಚಿಸಿದವು. ಒಮ್ಮೆ ದಿಢರ‍್ರನೇ ಒಂದು ಜೊತೆ ಚಿನ್ನದ ಬಳೆಯೂ ಬಂದು ಅವಳ ಕೈಗಳ ಸೌಂದರ್ಯವನ್ನು ಇಮ್ಮಡಿಸಿತು. ಅದರ ಬೆನ್ನಿಗೆ ಮಕ್ಕಳಿಗೂ ಚಿನ್ನಾಭರಣಗಳು ಮತ್ತು ಬಟ್ಟೆಬರೆಗಳು ಬರುತ್ತಿದ್ದುದರೊಂದಿಗೆ ಅವರು ದಷ್ಟಪುಷ್ಟವಾಗಿ ಬೆಳೆಯುತ್ತ ಲಕ್ಷ್ಮಣನ ಕುಟುಂಬವು ನೆಮ್ಮದಿಯಿಂದ ಬಾಳತೊಡಗಿತು. ಅಕ್ಕಯಕ್ಕನ ಕೆಲವು ವರ್ಷಗಳ ವಿವಿಧ ಬಗೆಯ ಸಾಲವೂ ತೀರಿತು.
ಲಕ್ಷ್ಮಣ ಈಗೀಗ ಹೆಂಡತಿಯ ಮೇಲಿನ ಪ್ರೀತಿಯಿಂದ ಅವಳು ಬೀಡಿ ಕಟ್ಟುವುದನ್ನು ಆಕ್ಷೇಪಿಸುತ್ತಿದ್ದ. ಆದರೆ ತಮ್ಮ ದಾಂಪತ್ಯ ಜೀವನದ ಆರಂಭದಲ್ಲಿ ಎರಡು ಹೊತ್ತು ಅನ್ನ ನೀಡಿದ ಆ ಕಾಯಕವನ್ನು ಬಿಟ್ಟು ಬಿಡಲು ಸರೋಜ ಒಪ್ಪಲಿಲ್ಲ. ಮನೆಗೆಲಸವೆಲ್ಲ ಮುಗಿದ ಬಳಿಕ ವಾರಕ್ಕೊಂದೋ ಎರಡೋ ಸಾವಿರದಷ್ಟು ಬೀಡಿ ಚಿರುಟುತ್ತ ಸಮಯ ಕಳೆಯುತ್ತಿದ್ದಳು. ಹೀಗೆಲ್ಲ ಬದಲಾದ ಲಕ್ಷ್ಮಣನು ಚೌಳುಕೇರಿಯಲ್ಲಿ ಕ್ರಯಕ್ಕೊಂದು ಜಾಗದ ತಲಾಷಿಯಲ್ಲೂ ತೊಡಗಿದ್ದ. ಸಾಹೇಬರ ಆಸರೆ ದೊರೆತ ಮೇಲೆ ಅವನ ತೊಟ್ಟೆ ಸಾರಾಯಿಯ ಕುಡಿತವೂ ನಿಂತು ಅವರೇ ಕೊಡುತ್ತಿದ್ದ ದುಬಾರಿ ಬ್ರಾಂಡ್‌ನ ವಿಸ್ಕಿ, ಬ್ರಾಂಡಿ ಮತ್ತು ರಮ್ಮುಗಳು ಅವನ ತನುಮನಗಳನ್ನು ಮುದಗೊಳಿಸುತ್ತ ಅವನು ಹಾದಿಬೀದಿಯಲ್ಲಿ ಬೀಳದಂತೆ ಜೋಪಾನವಾಗಿ ಮನೆಗೆ ತಲುಪಿಸತೊಡಗಿದವು. ಇಷ್ಟಾಗುವ ಹೊತ್ತಿಗೆ ಸಾಹೇಬರು ತಮ್ಮ ಪೈಂಟಿoಗ್ ಗುತ್ತಿಗೆದಾರಿಕೆಯ ಹೆಚ್ಚುವರಿ ಕೆಲಸದ ಉಸ್ತುವಾರಿಯನ್ನೂ ಲಕ್ಷ್ಮಣನಿಗೆ ವಹಿಸಿಬಿಟ್ಟರು. ಹಾಗಾಗಿ ಅವನು ಬಿಡುವಿಲ್ಲದ ಕೆಲಸ ಕಾರ್ಯಗಳಲ್ಲಿ ಮುಳುಗುತ್ತಿದ್ದವನು ರಾತ್ರಿ ತಡವಾದರೆ ಮನೆಗೆ ಹೋಗದೆ ಸಾಹೇಬರ ಔಟ್‌ಹೌಸ್‌ನಲ್ಲೇ ಸಾರಾಯಿ ಹೀರುತ್ತ, ಬಿರಿಯಾನಿ ಉಂಡು ಸುಖವಾಗಿ ಮಲಗಿಬಿಡುತ್ತಿದ್ದ.
ಇತ್ತ ತನ್ನ ಗಂಡನ ಬಾಯಿ ಹಿಂದಿನoತೆ ತೊಟ್ಟೆ ಸಾರಾಯಿಯ ವಾಸನೆ ಬೀರದೆ ವಿದೇಶಿ ಪರಿಮಳ ಬರುತ್ತಿದ್ದುದು ಮತ್ತು ಅವನ ದೇಹ ಅತ್ತರಿನ ಸುವಾಸನೆ ಹರಿಸುತ್ತಿದ್ದುದು ಸರೋಜಾಳಿಗೆ ಒಂದು ಬಗೆಯ ನೆಮ್ಮದಿಯನ್ನು ತರುತ್ತಿತ್ತು. ದೇವರ ದಯೆಯಿಂದ ಇವರು ಆ ದರಿದ್ರ ಸಾರಾಯಿ ಕುಡಿದು ಕರುಳು ತೂತು ಬೀಳುವುದು ತಪ್ಪಿತಲ್ಲ ಅಷ್ಟೇ ಸಾಕು! ಎಂದು ಸಮಾಧಾನ ಪಡುತ್ತಿದ್ದಳು. ಜೊತೆಗೆ ತಮ್ಮ ಸಂಸಾರದ ಸಂಕಷ್ಟಗಳನ್ನೆಲ್ಲ ದೂರ ಮಾಡಿದ ಸಾಹೇಬರ ಮೇಲೂ ಅವಳಿಗೆ ವಿಶೇಷ ಗೌರವಾದರಗಳು ಮೂಡುತ್ತಿದ್ದವು. ಆಗೆಲ್ಲ ಅವರಿಗೆ ಮನಸ್ಸಿನಲ್ಲೇ ಗೌರವದಿಂದ ವಂದಿಸಿ, ಹರಸುತ್ತಿದ್ದಳು. ಹೀಗೆ ಲಕ್ಷ್ಮಣ, ಸರೋಜಾಳ ಕುಟುಂಬಕ್ಕೆ ಒಂದು ಹಂತದ ಸುಖಶಾಂತಿಯ ಜೀವನವು ದೊರಕಿಬಿಟ್ಟಿತು.
(ಮುಂದುವರೆಯುವುದು)