April 1, 2025
ಧಾರಾವಾಹಿ

ವಿವಶ..

ಧಾರವಾಹಿ 28
ಉಸ್ಮಾನ್ ಸಾಹೇಬರು ಆವತ್ತು ಸಂಜೆ ಕೆಲಸಗಾರರಿಗೆ ತಮ್ಮ ಮನೆಯಲ್ಲೇ ಮಜೂರಿ ಬಟವಾಡೆ ಮಾಡಿ ಕಳುಹಿಸಿದವರು, ‘ಯಾ, ಅಲ್ಲಾಹ್…!’ ಎಂದು ದೀರ್ಘ ಉಸಿರು ದಬ್ಬಿ ಕಾಲು ಚಾಚಿ ಕುಳಿತು ಮೈಮುರಿದರು. ತಮ್ಮ ಅವ್ಯವಹಾರದ ಚಟುವಟಿಕೆಗಳೆಲ್ಲ ಈಗೀಗ ಯಾಕೋ ಅವರ ಮನಃಶಾಂತಿಯನ್ನು ಕದಡತೊಡಗಿದ್ದವು. ತನಗೆ ತನ್ನದೆಂಬ ಮಕ್ಕಳು ಮರಿಗಳು ಯಾರೂ ಇಲ್ಲ. ಅಣ್ಣ ತಮ್ಮಂದಿರು ಕೂಡಾ ಒಳ್ಳೆಯ ಸ್ಥಿತಿವಂತರಾಗಿದ್ದಾರೆ. ಹಾಗಾದರೆ ತಾನು ಯಾರಿಗಾಗಿ ಇಷ್ಟೊಂದು ನೆಮ್ಮದಿಗೆಟ್ಟು ಸಂಪಾದಿಸುತ್ತಿದ್ದೇನೆ! ಎಂದು ಒಮ್ಮೊಮ್ಮೆ ಅವರು ಚಿಂತಿಸುತ್ತ ಅಸಹನೆಗೊಳ್ಳುವ ಮಟ್ಟಕ್ಕೂ ತಲುಪಿದ್ದರು. ಅಷ್ಟಲ್ಲದೆ ತಾವು ಜೀವನದಲ್ಲಿ ಅಮೂಲ್ಯವಾದುದೇನನ್ನೋ ಕಳೆದುಕೊಂಡoಥ ಭಾವನೆಯೂ ಅವರನ್ನು ಆಗಾಗ ಕಾಡಲು ಶುರುವಾಗಿತ್ತು. ಆದರೆ ಅದೇನೆಂದು ಮಾತ್ರ ಎಷ್ಟು ಯೋಚಿಸಿದರೂ ಹೊಳೆಯುತ್ತಿರಲಿಲ್ಲ. ಆಗೆಲ್ಲ ಈ ಹಾಳಾದ ಅಕ್ರಮ ದಂಧೆಯ ರಗಳೆಗಳನ್ನೆಲ್ಲ ಆದಷ್ಟು ಬೇಗ ನಿವಾರಿಸಿಕೊಂಡು ಒಂದಿಷ್ಟು ಕಾಲ ನೆಮ್ಮದಿಯಿಂದ ಬದುಕಬೇಕು! ಎಂದೂ ಅಂದುಕೊಳ್ಳುತ್ತಿದ್ದರು. ಅಂಥ ಯೋಚನೆ, ನಿರ್ಧಾರ ಹುಟ್ಟಿದ ಕೂಡಲೇ ಅವರಿಗೆ ಬಹಳವೇ ನೆಮ್ಮದಿಯಾಗುತ್ತಿತ್ತು.
ಒಂದು ಕಾಲದಲ್ಲಿ ಹಳೆಯ ಸೈಕಲ್‌ನ ಎರಡೂ ಬಗಲಿಗೆ ಗೋಣಿಚೀಲಗಳನ್ನು ಕಟ್ಟಿಕೊಂಡು ಬೀದಿ ಬೀದಿ ಅಲೆಯುತ್ತ ‘ಗುಜರಿ ಉಂಟಾ ಗುಜರೀ…!’ ಎಂದರಚುತ್ತ ಹನ್ನೆರಡು ಮಕ್ಕಳ ಬಡ ಕುಟುಂಬವನ್ನು ನಿಭಾಯಿಸಲು ಹೆಣಗುತ್ತಿದ್ದ ಆಸ್ತಮ ಪೀಡಿತ ತಂದೆಯೊoದಿಗೆ ಏಗುತ್ತ ಮನೋರೋಗಿಯಂತಿದ್ದ ಅಮ್ಮನ ಪ್ರೀತಿ ಮತ್ತು ಬೆಚ್ಚಗಿನ ಆರೈಕೆ ಯಾವುದೂ ಸಿಗದೆ ತುತ್ತು ಅನ್ನಕ್ಕೂ ಪರದಾಡುತ್ತ ಅವಿದ್ಯಾವಂತನಾಗಿ ಬೆಳೆದವರು ಉಸ್ಮಾನ್ ಸಾಹೇಬರು. ಆದ್ದರಿಂದ ಈ ಸಮಾಜದಲ್ಲಿ ತಾನೂ ಒಬ್ಬ ಆಗರ್ಭ ಶ್ರೀಮಂತನಾಗಿ ಬಾಳಬೇಕು ಎಂಬ ಹಠವು ಅವರೊಳಗೆ ಬಾಲ್ಯದಲ್ಲೇ ಚಿಗುರಿ ಹೆಮ್ಮರವಾಗಿತ್ತು. ಅದೇ ಮನಸ್ಥಿತಿಯು ಅವರನ್ನು ಈಗಿನ ತಮ್ಮ ಅಡ್ಡ ವ್ಯವಹಾರಗಳಿಂದ ವಿಮುಖರಾಗಲು ಬಿಡುತ್ತಿರಲಿಲ್ಲ! ‘ನೀನೇ ನಿನ್ನ ಮಹತ್ವಾಕಾಂಕ್ಷೆಯಿoದ ಕಟ್ಟಿಕೊಂಡoಥ ಕನಸು, ಗುರಿಗಳೆಲ್ಲ ಏನಾದವು ಉಸ್ಮಾನ್? ನೀನಂದುಕೊoಡದ್ದು ಎಲ್ಲವೂ ಈಡೇರಬೇಕಾದರೆ ಈಗ ನೀನು ಗಳಿಸಿರುವುದು ಏನೇನೂ ಸಾಲದು. ಚೌಳುಕೇರಿಯೊಂದು ಯಕಃಶ್ಚಿತ್ ಗ್ರಾಮ. ಅದನ್ನು ಮೀರಿ ದೂರದ ಶಿವಕಂಡಿಕೆ ನಗರಕ್ಕೂ ನಿನ್ನ ಶ್ರೀಮಂತಿಕೆಯ ವರ್ಚಸ್ಸು ಹಬ್ಬಬೇಕಾದರೆ ನಿನ್ನ ಒಳ್ಳೆಯತನವನ್ನೆಲ್ಲ ಮೂಟೆ ಕಟ್ಟಿ ದೂರಕ್ಕೆಸೆದು ಮುತುವರ್ಜಿಯಿಂದ ಮುಂದುವರೆಯಬೇಕು ನೀನು!’ ಎಂದು ಅವರ ಅತೃಪ್ತ ಆಸೆಯು ನಿರಂತರ ಅವರನ್ನು ಪೀಡಿಸುತ್ತ ಅಂಕೆಯಲ್ಲಿಟ್ಟುಕೊoಡಿತ್ತು. ಇಂದೂ ಅದೇ ಮನೋವ್ಯಾಪಾರಗಳ ನಡುವೆ ಗುದ್ದಾಡಿಕೊಂಡು ಕುಳಿತಿದ್ದವರಿಗೆ ಮನೆಯಂಗಳದ ತುಸುದೂರದಲ್ಲಿ ನಿಂತುಕೊoಡು, ಮರುದಿನದ ಕೆಲಸಕಾರ್ಯಗಳ ಕುರಿತು ಕೆಲಸದಾಳುಗಳಿಗೆ ಸಲಹೆ, ಸೂಚನೆಗಳನ್ನು ನೀಡುತ್ತಿದ್ದ ಲಕ್ಷ್ಮಣನು ಕಾಣಿಸಿದ. ಅವನನ್ನು ಕಂಡವರಿಗೆ ಪಕ್ಕನೆ ಅಂದಿನ ವಿಶೇಷ ಕಾರ್ಯಕ್ರಮವೊಂದರ ನೆನಪಾಯಿತು.
‘ಲಕ್ಷ್ಮಣಾ ಇಲ್ಲಿ ಬಾರಾನಾ…!’ ಎಂದು ಮೆಲುವಾಗಿ ಕರೆದರು.
‘ಓ… ಬಂದೆ ಸಾಹೇಬರೇ…!’ ಎಂದ ಅವನು ಕೂಡಲೇ ಅವರತ್ತ ಬಂದ.
‘ನಿನಗೊಂದು ವಿಷಯ ಹೇಳಲು ಮರೆತಿತ್ತು ಮಾರಾಯಾ. ಇವತ್ತು ರಾತ್ರಿ ಮನೆಯಲ್ಲೊಂದು ಮುಖ್ಯ ಪಾರ್ಟಿಯಿದೆ. ಇಲ್ಲೇ ಇದ್ದುಬಿಡು. ನಮ್ಮ ವ್ಯವಹಾರಕ್ಕೆ ಸಂಬoಧಿಸಿದ ಕೆಲವು ದೊಡ್ಡ ಮನುಷ್ಯರು ಬರುವವರಿದ್ದಾರೆ. ಅವರನ್ನೆಲ್ಲ ನೀನೇ ಸಂಭಾಳಿಸಬೇಕು ನೋಡು. ಪಾರ್ಟಿ ಮುಗಿಯುವಾಗ ತಡರಾತ್ರಿಯಾಗಬಹುದು. ನಿನ್ನ ಹೆಂಡತಿಗೆ ತಿಳಿಸಿಯೇ ಬಂದುಬಿಡು!’ ಎಂದು ತಮ್ಮ ಚಹಾ ಪುಡಿ, ಸಕ್ಕರೆ ಬೆರೆತ ಬಣ್ಣದಲ್ಲಿದ್ದ ನೀಳ ದಾಡಿಯನ್ನು ನೀವುತ್ತ ಅಂದರು. ಪಾರ್ಟಿ ಎಂದ ಕೂಡಲೇ ಲಕ್ಷ್ಮಣ ನೆಟ್ಟಗಾದ.
‘ಆಯ್ತು ಸಾಹೇಬರೇ ಬರುತ್ತೇನೆ!’ ಎಂದವನು ಕೆಲಸಗಾರರನ್ನು ತರಾತುರಿಯಿಂದ ಕಳುಹಿಸಿಕೊಟ್ಟು ಮನೆಯತ್ತ ದಾಪುಗಾಲಿಕ್ಕುತ್ತ ಯೋಚಿಸತೊಡಗಿದ. ಸಾಹೇಬರ ಮನೆಯ ಆಪ್ತಕೂಟವೆಂದರೆ ಕೇಳಬೇಕಾ? ಅದರಲ್ಲಿ ಏನುಂಟು, ಏನಿಲ್ಲ! ಬಗೆಬಗೆಯ ಮಾಂಸದಡುಗೆಗಳದ್ದೇ ಕಾರೋಬಾರು. ತಿಂದುoಡು ತೇಗುವಷ್ಟು ಆಡು, ಕೋಳಿ, ಕುರಿ, ದನ ಅಂತ ಯಾರಿಗೇನು ಬೇಕೋ ಅದು ಸಾಹೇಬರ ಪಾರ್ಟಿಯಲ್ಲಿ ಸಿದ್ಧ ಎಂದು ಲಕ್ಷ್ಮಣ ಎಂಜಲು ನುಂಗುತ್ತ ನಡೆಯುತ್ತಿದ್ದ. ಅವನಿಗೆ ಯಜಮಾನರ ಮನೆಯ ಬಾಡೂಟದ ರುಚಿಯೆದುರು ತನ್ನ ಮನೆಯ ಪಂಚಭಕ್ಷ್ಯ ಪರಮಾನ್ನಗಳು ಯಾವತ್ತೋ ಸಪ್ಪೆ ಅನಿಸಲು ತೊಡಗಿದ್ದವು. ಸಾಹೇಬರ ಹೆಂಡತಿ ಕೈರುನ್ನೀಸಾ ಬೇಗಮ್ಮರು ತಯಾರಿಸುವ ಬಿರಿಯಾನಿ ಆಹಾ! ಅದೆಂಥ ರುಚಿ! ಅಂಥ ಅಡುಗೆಯನ್ನು ಬೇರೆ ಯಾರಿಂದಲೂ ಮಾಡಲು ಸಾಧ್ಯವಾ? ಬೇಗಮ್ಮರು ಬಡಿಸುವಾಗಲೂ ಎಷ್ಟೊಂದು ಅಕ್ಕರೆ, ಪ್ರೀತಿ ಅವರಲ್ಲಿ. ಅವರ ಬಿರಿಯಾನಿಗೆ ಅಂಥ ರುಚಿ ಬರಲು ಕಾರಣ ಬಹುಶಃ ಅವರು ನಗುನಗುತ್ತ ಬಡಿಸುವ ಕ್ರಮವೇ ಇರಬೇಕು. ಸಾಹೇಬರ ಮನೆಯನ್ನು ಸೇರಿದ ಮೇಲೆ ತಾನು ಅದೆಂತೆoಥ ಹೆಸರಿನ ಬಿರಿಯಾನಿಗಳನ್ನು ತಿಂದಿಲ್ಲ! ಅವರ ಔತಣಕೂಟದಲ್ಲಿ ವಿದೇಶಿ ಸಾರಾಯಿಗಳದ್ದೂ ಇನ್ನೊಂದು ಜಾತ್ರೆಯೇ! ಎಂದು ಪುಳಕಗೊಂಡ. ಮರುಕ್ಷಣ ಅವನಿಗೆ ತನ್ನ ಹೆಂಡತಿಯ ಅಡುಗೆಯ ನೆನಪಾಯಿತು. ಥೂ! ಇವಳೂ ಇದ್ದಾಳೆ ನರಕದವಳು. ಯಾವಾಗಲೂ ಮೀನು ಸಾರು, ಒಣಮೀನಿನ ಬಜ್ಜಿ, ಕೋಳಿ ಸುಕ್ಕ ಅಥವಾ ಹರಿವೆ, ಬಸಳೆ ಸೊಪ್ಪು ಅದಲ್ಲದಿದ್ದರೆ ಆ ಬೊಜ್ಜಕ್ಕೆ ಬಳಸುವ ಕುಂಬುಡ (ಕುಂಬಳ), ಸೌತೆಕಾಯಿಗಳ ಸಪ್ಪೆ ಪದಾರ್ಥಗಳನ್ನೇ ಮಾಡಿ ಬಡಿಸುತ್ತಾಳೆ. ಅದು ಬಿಟ್ಟರೆ ಮತ್ತೇನೂ ಬರುತ್ತದೆ ಇವಳಿಗೆ? ಎಂದು ಮೂತಿ ಹಿಂಜಿಕೊoಡವನಿಗೆ ಆವತ್ತು ಸಾಹೇಬರ ಮನೆಯಲ್ಲಿ ನಡೆದ ಘಟನೆಯೊಂದು ತಟ್ಟನೆ ನೆನಪಾಯಿತು.
ಹಿಂದೆಲ್ಲ ಸಾಹೇಬರು, ತಮ್ಮ ಆಪ್ತೇಷ್ಟರು ಮನೆಗೆ ಬಂದರೆ ತಂಪಾದ ತೋಟದೊಳಗೋ, ತೋಟದ ಮನೆಯೊಳಗೋ ಪಾರ್ಟಿಯನ್ನಿಟ್ಟುಕೊಂಡು ಯಾರ ಭಯವೂ ಇಲ್ಲದೆ ಮಜವಾಗಿ ಕುಡಿಯುತ್ತಿದ್ದರು. ಆದರೆ ಆವತ್ತೊಮ್ಮೆ ಮಸೀದಿಯ ಗುರುಗಳು ಬಂದು ಹೋಗಿದ್ದೆ ಸೈ, ಅವರ ಆ ಸುಖಕ್ಕೂ ಕಲ್ಲು ಬಿತ್ತು. ಆ ಗುರುಗಳು ಸಾಹೇಬರೊಂದಿಗೆ ಆಡಿದ ಮಾತುಗಳನ್ನು ಅವರ ಪಕ್ಕದ ಸುಣ್ಣಬಣ್ಣಗಳನ್ನಿಡುವ ಕೋಣೆಯಲ್ಲಿದ್ದ ತಾನೂ ಕೇಳಿಸಿಕೊಂಡಿದ್ದೆ. ‘ನೋಡಿ ಉಸ್ಮಾನ್ ಭಾಯ್, ನಾವು ನಿಮ್ಮೊಂದಿಗೆ ಇವತ್ತು ಮುಖ್ಯ ವಿಷಯವೊಂದನ್ನು ಮಾತಾಡಲು ಬಂದಿದ್ದೇವೆ. ನೀವು ಅಪಾರ್ಥ ಮಾಡಿಕೊಳ್ಳಬಾರದು!’ ಎಂದು ಗಂಭೀರವಾಗಿ ಅಂದರು.
‘ಆಯ್ತು ಉಸ್ತಾದ್. ನೀವೇನು ಹೇಳುತ್ತೀರೋ ಅದು ನನ್ನ ಒಳ್ಳೆಯದಕ್ಕೆಂದು ಭಾವಿಸುವವನು ನಾನು. ಹೇಳಿ ರ‍್ವಾಗಿಲ್ಲ…!’ ಎಂದರು ಸಾಹೇಬರು.
‘ನೀವು ನಿಮ್ಮ ವ್ಯಾಪಾರ ವಹಿವಾಟಗಳನ್ನು ನಿಯತ್ತಿನಿಂದ ನಡೆಸಿಕೊಂಡು ಬಂದವರೆoಬುದು ನಮಗೆಲ್ಲ ಗೊತ್ತಿದೆ. ಅದರ ಒಂದoಶವನ್ನು ಬಡಬಗ್ಗರಿಗೂ ದಾನ ಧರ್ಮ ಮಾಡುತ್ತ ಊರಿನ ಹೊಸ ದರ್ಗಾ ನಿರ್ಮಿಸಿದ ಸಂದರ್ಭದಲ್ಲೂ ಸಾಕಷ್ಟು ಸೇವೆ ಮಾಡುತ್ತ ಒಳ್ಳೆಯ ಹೆಸರು ಗಳಿಸಿದವರು ನೀವು. ನಿಮ್ಮಂಥವರ ಸಲುವಾಗಿ ನಮ್ಮ ಪವಿತ್ರ ಕುರಾನ್‌ನಲ್ಲಿ ಅಪಾರ ಪ್ರಶಂಸೆ ಮತ್ತು ಅಲ್ಲಾಹ್‌ನ ಆಶೀರ್ವಾದವಿದೆ. ಆದರೂ ಇನ್ನೊಂದು ಮುಖ್ಯ ವಿಷಯವೇನೆಂದರೆ ಹೆಣ್ಣು, ಹೆಂಡ ಮತ್ತು ಅನಾಚಾರ ಮಾಡುವವರನ್ನು ನಮ್ಮ ಧರ್ಮಗ್ರಂಥವು ಎಂದೂ ಒಪ್ಪುವುದಿಲ್ಲ ಮತ್ತು ಅಂಥವರನ್ನು ಇಸ್ಲಾಂ ಸಮುದಾಯವೂ ಸ್ವೀಕರಿಸುವುದಿಲ್ಲ. ಆದರೆ ನಿಮ್ಮ ಮನೆಯಲ್ಲಿ ನಿರಂತರ ಸಾರಾಯಿ ಕೂಟಗಳು ನಡೆಯುತ್ತವೆ ಎಂದು ಸುಮಾರು ಸಲ ಮಸೀದಿಗೆ ದೂರು ಬಂದಿದೆ. ನಮ್ಮ ಧರ್ಮದ ಪ್ರಕಾರ ಮನೆಯಲ್ಲಿ ಸಾರಾಯಿ ಇಟ್ಟುಕೊಳ್ಳುವುದೇ ಮಹಾಪಾಪ! ಅಂಥದ್ದರಲ್ಲಿ ಇತರ ಜಾತಿಯವರನ್ನೂ ಕೂರಿಸಿಕೊಂಡು ನೀವೂ ಕುಡಿಯುವುದೆಂದರೆ ಅರ್ಥವೇನು…?’ ಎಂದು ಗುರುಗಳು ವಿಷಾದದಿಂದ ಹೇಳಿದರು. ಸಾಹೇಬರು ಅವರ ಮಾತಗಳನ್ನು ನಿಸ್ತೇಜರಾಗಿ ಕೇಳುತ್ತಿದ್ದರು.
ಗುರುಗಳು ಮತ್ತೆ ಮಾತು ಮುಂದುವರೆಸಿ, ‘ಉಸ್ಮಾನ್ ಭಾಯ್, ಧರ್ಮ ನಿಯಮದ ಪ್ರಕಾರ ನಿಮಗೆ ಉತ್ತಮ ಸಲಹೆ ನೀಡುವುದು ನಮ್ಮ ಕರ್ತವ್ಯ. ಅಂಥ ದುಶ್ಚಟ ಮತ್ತು ದುರ್ಮಾಗಗಳು ನಮ್ಮ ಜಾತಿ, ಸಮುದಾಯಕ್ಕೆ ತಕ್ಕುದಲ್ಲ. ನೀವು ಇಂದಿನಿoದಲೇ ಆ ಹಾಳು ಅಭ್ಯಾಸಗಳಿಂದ ದೂರವಾಗಿ ಅಲ್ಲಾಹ್ ಮೆಚ್ಚುವ ಸತ್ಕಾರ್ಯಗಳನ್ನು ಮಾಡುತ್ತ ಹೋದಿರೆಂದರೆ ಇನ್ನೂ ಹೆಚ್ಚಿನ ಯಶಸ್ಸು ನಿಮ್ಮದಾಗುತ್ತದೆ!’ ಎಂದು ಅವರು ಮೃದುವಾಗಿ ಹೇಳಿ ಹೊರಟು ಹೋದ ಸಂಗತಿಯನ್ನು ಮೆಲುಕು ಹಾಕುತ್ತ ನಡೆಯುತ್ತಿದ್ದ ಲಕ್ಷ್ಮಣನು ಕೊನೆಯಲ್ಲಿ, ಥೂ! ನನ್ನಂಥವನ ಸಣ್ಣಪುಟ್ಟ ಖುಷಿಗೂ ಕಲ್ಲು ಹಾಕಲೆಂದೇ ಆ ಗುರುಗಳು ಬಂದಿರಬೇಕು. ಸಾರಾಯಿ ಕುಡಿಯುವುದು ಅವರ ಧರ್ಮಕ್ಕೆ ವಿರುದ್ಧವಂತೆ. ಆದರೆ ನಮ್ಮ ಅಡ್ಡಪಡ್ಪುವಿನ ಎಷ್ಟೋ ಸಾಯಿಬರು ಸಂಜೆಯ ಹೊತ್ತು ಗಡಂಗಿಗೆ ಹೋಗಿ ತಣ್ಣಗೆ ಹೊಟ್ಟೆಗಿಳಿಸಿಕೊಂಡು ಬರುತ್ತಿದ್ದುದನ್ನು ನಾನೆಷ್ಟೋ ಬಾರಿ ನೋಡಿದ್ದೆ! ಎಂದುಕೊoಡವನು ಮತ್ತೆ ಯೋಚಿಸಿದ. ಆದರೂ ನನ್ನ ಪುಣ್ಯಕ್ಕೆ ಸಾಹೇಬರು ಅವರ ಗುರುಗಳ ಮಾತನ್ನು ಕಟ್ಟಿಕೊಂಡು ಕುಡಿಯುವುದನ್ನು ಬಿಡಲಿಲ್ಲ. ಒಂದು ವೇಳೆ ಹಾಗಾಗುತ್ತಿದ್ದರೆ ನನಗೆ ಆಮೇಲೆ ಅದೇ ಹಳೆಯ ಪರಂಚಟ್ ರ‍್ಕಾರಿ ಗಂಗಸರವೇ ಗತಿಯಾಗುತ್ತಿತ್ತು! ಆದರೂ ಸಾಹೇಬರು ಗುರುಗಳ ಮಾತಿಗೆ ಬೆಲೆ ಕೊಟ್ಟಿದ್ದಾರೆ. ಹಾಗಾಗಿ ಅವರು ತಮ್ಮ ಮನೆಯ ಪಾರ್ಟಿಗಳಲ್ಲಿ ಅಥವಾ ಎಲ್ಲರೆದುರು ಕುಡಿಯುವುದನ್ನು ಬಿಟ್ಟು ಈಗ ಪ್ರತ್ಯೇಕ ಕೋಣೆಯಲ್ಲಿ ಕುಳಿತು ಕುಡಿಯುತ್ತಾರೆ. ತಾವು ಸಾರಾಯಿ ಕುಡಿಯುವ ಸುದ್ದಿಯು ಮಸೀದಿಗೆ ತಲುಪಲು ಕಾರಣ ಯಾರೆಂಬುದೂ ಅವರಿಗೆ ಗೊತ್ತಾಗಿದೆ. ಅವರೊಡನೆ ಕುಳಿತು ಹಾಡಿ ಹೊಗಳುತ್ತ ಕುಡಿಯುತ್ತಿದ್ದವರಲ್ಲಿಯೇ ಒಬ್ಬ ಹಡಬೆಯಂತೆ! ಅವರನ್ನೆಲ್ಲ ಈಗ ದೂರವಿಟ್ಟಿದ್ದಾರೆ. ಜೊತೆಗೆ ನನ್ನಂಥ ಆಪ್ತರನ್ನೂ ಅವರು ಮರೆಯಲಿಲ್ಲ. ಅದೇ ತಮ್ಮ ಕೆಲಸಗಾರರ ಮೇಲೆ ಅವರಿಗಿರುವ ಅಭಿಮಾನಕ್ಕೆ ಸಾಕ್ಷಿ! ಎಂದೆಲ್ಲ ಯೋಚಿಸಿದ ಲಕ್ಷ್ಮಣ ಸಾಹೇಬರನ್ನು ಹೆಮ್ಮೆಯಿಂದ ನೆನೆಯುತ್ತ ಮನೆಗೆ ತಲುಪಿದ.
ಸರೋಜ ಕಾಯಿಸಿಟ್ಟಿದ್ದ ನೀರಿನಿಂದ ನಿರುಮ್ಮಳವಾಗಿ ಸ್ನಾನ ಮಾಡಿದ. ಸ್ವಲ್ಪಹೊತ್ತು ಮಕ್ಕಳು ಶಾರದಾ ಮತ್ತು ಪ್ರಮೀಳಾರೊಂದಿಗೆ ಸಂತೋಷದಿಓದ ಹರಟುತ್ತ ಆಟವಾಡಿ ಮುದ್ದುಗರೆದ. ಅಷ್ಟರಲ್ಲಿ ಸರೋಜ ಊಟಕ್ಕೆ ಕರೆದಳು. ಆದರೆ ಅವನು, ‘ಸರೂ, ಇವತ್ತು ಸಾಹೇಬರ ಮನೆಯಲ್ಲಿ ಪಾರ್ಟಿಯಿದೆ ಮಾರಾಯ್ತಿ. ನಾನೀಗಲೇ ಹೊರಡಬೇಕು. ರಾತ್ರಿ ಬರುವಾಗಲೂ ಸ್ವಲ್ಪ ತಡವಾಗಬಹುದು!’ ಎಂದ ಮೃದುವಾಗಿ. ಅಪ್ಪ, ಪಾರ್ಟಿಯ ಹೆಸರೆತ್ತುತ್ತಲೇ ಮಕ್ಕಳಿಬ್ಬರಿಗೂ ಅವನೊಡನೆ ಹೊರಡಲಣಿಯಾಗಿ, ‘ಅಪ್ಪಾ ಅಪ್ಪಾ… ನಾವೂ ಬರುತ್ತೇವೆಪ್ಪಾ! ಅಮ್ಮನನ್ನೂ ರ‍್ಕೊಂಡು ಹೋಗುವನಾ…?’ ಎಂದು ರಚ್ಚೆ ಹಿಡಿದರು.
‘ಅಯ್ಯಯ್ಯೋ ಮಕ್ಕಳೇ… ಹೆಂಗಸರು, ಮಕ್ಕಳೆಲ್ಲ ಹೋಗುವ ಪಾರ್ಟಿ ಅಲ್ಲವನಾ ಅದು! ನಿಮ್ಮನ್ನು ಇನ್ನೊಂದು ದಿನ ಹಗಲಲ್ಲಿ ನಡೆಯುವ ಪಾರ್ಟಿಗೆ ರ‍್ಕೊಂಡು ಹೋಗುತ್ತೇನೆ ಆಯ್ತಾ…!’ ಎಂದು ರಮಿಸಿದ. ಆದರೆ, ‘ಥೂ! ಹೋಗಪ್ಪಾ…! ಯಾವಾಗಲೂ ನೀನು ಮಾತ್ರ ಹೋಗುತ್ತಿ. ನಮ್ಮನ್ನು ಒಂದು ಸಲವೂ ರ‍್ಕೊಂಡು ಹೋಗಿಯೇ ಇಲ್ಲ ನೀನು!’ ಎಂದು ಶಾರದ ಮುಖ ಊದಿಸಿಕೊಂಡಳು. ಅಷ್ಟಕ್ಕೆ ಸಣ್ಣವಳೂ ಅಳಲು ಶುರುವಿಟ್ಟುಕೊಂಡಳು. ಅತ್ತ ಸರೋಜಾಳೂ ಖಿನ್ನಳಾಗಿದ್ದಳು. ಈಗೀಗ ತನ್ನ ಗಂಡ ಪಾರ್ಟಿ ಗೀರ್ಟಿ ಅಂತ ರಾತ್ರಿ ಸಾಹೇಬರ ಮನೆಯಲ್ಲೇ ಉಳಿದುಕೊಳ್ಳುತ್ತಿದ್ದುದರ ಕುರಿತು ಅವಳಲ್ಲಿ ತೀವ್ರ ಅಸಮಾಧಾನವಿತ್ತು. ಆ ವಿಷಯವಾಗಿ ಎಂಥದ್ದೋ ಚಿಂತೆಯೂ ಅವಳನ್ನು ಕಾಡುತ್ತಿತ್ತು. ಸಾಹೇಬರ ಮೇಲೆ ಅವಳಿಗೂ ಗೌರವವಿತ್ತು. ಆದರೆ ಈಚೀಚೆಗೆ ಊರವರು ಮತ್ತು ಅಕ್ಕಯಕ್ಕನೂ ಅವರ ಕುರಿತು ಕೆಟ್ಟದಾಗಿ ಮಾತಾಡಿಕೊಳ್ಳುತ್ತ, ‘ನೋಡಮ್ಮಾ ಸರೋಜಾ ಸಾಹೇಬರು ಅಷ್ಟೊಂದು ಒಳ್ಳೆಯವರಲ್ಲವಂತೆ. ಲಕ್ಷ್ಮಣನ ಬಗ್ಗೆ ಸ್ವಲ್ಪ ಜಾಗ್ರತೆಯಿಂದಿಮ್ಮಾ…!’ಎoದು ಹೇಳುತ್ತಿದ್ದುದು ಅವಳನ್ನು ಆತಂಕಕ್ಕೀಡು ಮಾಡುತ್ತಿತ್ತು. ಇವೆಲ್ಲದರ ನಡುವೆ ಆವತ್ತೊಂದು ದಿನ ನಡೆದ ಘಟನೆಯೊಂದೂ ಈಗ ಅವಳ ಮುನ್ನೆಲೆಗೆ ಬಂತು.
ಸರೋಜ, ಲಕ್ಷ್ಮಣರು ಅಕ್ಕಯಕ್ಕನ ಮನೆಗೆ ಬಂದ ಆರಂಭದಲ್ಲಿ ನಡೆದ ಸಂಗತಿಯಿದು. ಅಕ್ಕಯಕ್ಕನ ದೂರದ ಸಂಬoಧಿ ತರುಣನೊಬ್ಬ ಆಗಾಗ ಕುಡಿದು ಬಂದು ಅವಳನ್ನು ದುಡ್ಡಿಗಾಗಿ ಪೀಡಿಸುತ್ತಿದ್ದ. ಅವಳೂ ಸಾಕಷ್ಟು ಬಾರಿ ಅಷ್ಟಿಷ್ಟು ಕೊಡುತ್ತ ಪೀಡೆ ತೊಲಗಿಸಿಕೊಳ್ಳುತ್ತಿದ್ದಳು. ಆವತ್ತೊಂದು ಬೆಳ್ಳಂಬೆಳಗ್ಗೆ ಮನೆಬಾಗಿಲಿಗೆ ಬಂದ ಅವನು ಹಣಕ್ಕಾಗಿ ರಂಪ ಮಾಡತೊಡಗಿದ. ಅದನ್ನು ಕಂಡ ಅಕ್ಕಯಕ್ಕನಿಗೆ ತೀರಾ ಬೇಸರ ಬಂದು ಅವನಿಗೆ ಹಣ ಕೊಡಲು ನಿರಾಕರಿಸಿದಳು. ಪ್ರಾಣಿಪಕ್ಷಿಗಳಿಗೆ ದಿನನಿತ್ಯ ಕರುಣೆಯಿಂದ ಒಂದಿಷ್ಟು ನೀಡುತ್ತ ಬಂದು ಒಂದೊಮ್ಮೆ ಕೊಡದಿದ್ದರೂ ಅವು ತಮ್ಮ ಅನ್ನದಾತರಿಗೆ ಕೇಡು ಬಯಸದೆ ನಮ್ರವಾಗಿ ಹೊರಟು ಹೋಗುತ್ತವೆ. ಆದರೆ ಮನುಷ್ಯ ಪ್ರಾಣಿಯು ಅಷ್ಟೊಂದು ಕೃತಜ್ಞನಾಗಿರಲಾರ! ಎಂಬ ಮಾತಿಗೆ ತಕ್ಕಂತೆ ಈ ಯುವಕನೂ ಕೆಂಡಾಮoಡಲನಾಗಿ ಅಕ್ಕಯಕ್ಕನನ್ನು ಹೊರಗೆಳೆದು ನೆಲಕ್ಕೆ ಕೆಡವಿ ಹೊಡೆದೇಬಿಟ್ಟ! ಆದರೆ ಅವನ ದುರಾದೃಷ್ಟಕ್ಕೆ ಅಂದು ಲಕ್ಷ್ಮಣ ಮನೆಯಲ್ಲಿದ್ದ. ಅವನು ಆ ಯುವಕನ ಅಹಂಕಾರವನ್ನು ಕಂಡು ಕುಪಿತನಾದವನು ರಪ್ಪನೇ ಅವನ ಮೇಲೆರಗಿ, ‘ಬೋ…ಮಗನೇ ನೀನು ಅಕ್ಕಯಕ್ಕನಿಗೆ ಅದ್ಯಾರೇ ಆಗಿರು. ಆದರೆ ನನ್ನ ಕುಟುಂಬಕ್ಕೆ ಅನ್ನ, ಆಶ್ರಯ ನೀಡಿದವಳ ಮೇಲೆಯೇ ನೀನು ನನ್ನ ಕಣ್ಣಮುಂದೆಯೇ ಕೈಮಾಡಿದ್ದನ್ನು ನೋಡಿಕೊಂಡು ಸುಮ್ಮನಿದ್ದರೆ ಆಮೇಲೆ ನಾನು ಬದುಕಿದ್ದೇನು ಪ್ರಯೋಜನವಾ…?’ ಎಂದಬ್ಬರಿಸಿದವನು ಅವನಿಗೆ ಹಿಗ್ಗಾಮುಗ್ಗಾ ಥಳಿಸತೊಡಗಿದ. ಆಹೊತ್ತು ಒಂದುವೇಳೆ ಸರೋಜಾಳೇನಾದರೂ ತಡೆಯದಿರುತ್ತಿದ್ದರೆ ಲಕ್ಷ್ಮಣ ಅವನನ್ನು ಕೊಂದೇ ಹಾಕುತ್ತಿದ್ದನೇನೋ!
ಲಕ್ಷ್ಮಣನ ಆಗಿನ ರೌದ್ರತೆಯನ್ನು ಕಂಡ ಸರೋಜಾ ದಂಗಾಗಿಬಿಟ್ಟಿದ್ದಳು. ತನ್ನ ಗಂಡ ಅಪಾರ ಧೈರ್ಯಶಾಲಿ ಮಾತ್ರವಲ್ಲದೇ ನಂಬಿದವರಿಗಾಗಿ ಯಾವ ಅಪಾಯಕ್ಕೂ ಧುಮುಕುವ ಪೆದ್ದು ಸ್ವಭಾವದವನು. ಅದಕ್ಕೆ ತಕ್ಕಹಾಗೆ ಕೆಟ್ಟ ಮುಂಗೋಪಿಯೂ ಬೇರೆ! ಇಂಥ ಮುಗ್ಧನ ಬಲಹೀನತೆಯನ್ನು ಯಾರಾದರೂ ದುರುಪಯೋಗ ಪಡಿಸಿಕೊಂಡರೇನು ಗತಿ…? ಎಂಬ ಅಳುಕು ಅವಳನ್ನು ಆವತ್ತಿನಿಂದಲೇ ಕಾಡತೊಡಗಿತ್ತು. ಇವತ್ತು ಅದನ್ನೆಲ್ಲ ನೆನೆದವಳು ತಟ್ಟನೆ ಗಡುಸಾದಳು. ಯಾವಾಗಲೂ ರಾತ್ರಿ ಪಾರ್ಟಿ ಗೀರ್ಟಿ ಅಂತ ಎಂಥದು ಇವರದ್ದು? ಹೀಗೆಯೇ ಬಿಟ್ಟರೆ ಕೆಲಸ ಕೆಟ್ಟೀತು ಎಂದುಕೊoಡವಳು, ‘ನೋಡಿ ಮಾರಾಯ್ರೇ… ಇವತ್ತು ನೀವು ಯಾವ ಪಾರ್ಟಿಗೂ ಹೋಗುವುದು ಬೇಡ. ನಾವು ಹೆಣ್ಣು ಹೆಂಗಸರೇ ಇಲ್ಲಿ ಮಕ್ಕಳೊಂದಿಗೆ ರಾತ್ರಿ ಕಳೆಯಲು ಭಯವಾಗುತ್ತದೆ ನಮಗೆ. ಸುಮ್ಮನೆ ಮನೆಯಲ್ಲಿರಿ ಅಷ್ಟೇ!’ ಎಂದು ಗಂಡನಿಗೆ ಆಜ್ಞಾಪಿಸಿದಳು.
ಆದರೆ ಅತ್ತ ಪಾರ್ಟಿಯ ಗುಂಗಿನಲ್ಲೇ ಮುಳುಗಿದ್ದ ಲಕ್ಷ್ಮಣ ಹೆಂಡತಿಯ ಮಾತು ಕೇಳಿ ಕಕ್ಕಾಬಿಕ್ಕಿಯಾದ. ಅವಳ ಮೇಲೆ ಸಿಟ್ಟೂ ಬಂತು. ‘ಎಂಥ ಸಾವಿನ ಭಯವನಾ ನಿಂಗೆ ಹ್ಞಾಂ…! ಇಲ್ಲಿನ ನೆರೆಕರೆಯವರೆಲ್ಲ ಭೂತಗಳಾ ಹಾಗಾದರೆ…? ಸಾಹೇಬರು ನಂಗೆ ಅದೆಂಥ ಸ್ಥಾನಮಾನವನ್ನು ಕೊಟ್ಟಿದ್ದಾರೆ ಅಂತ ನಿನಗೂ ಗೊತ್ತುಂಟಲ್ಲವಾ. ಅವರ ವ್ಯವಹಾರವನ್ನೆಲ್ಲ ನೋಡಿಕೊಳ್ಳುವ ದೊಡ್ಡ ಜವಾಬ್ದಾರಿಯೂ ನನ್ನ ಮೇಲಿದೆ. ಇವತ್ತಿನ ಪಾರ್ಟಿಗೆ ದೊಡ್ಡ ಮನುಷ್ಯರೆಲ್ಲ ರ‍್ತಾರೆ. ಅವರನ್ನು ಸಂಭಾಳಿಸುವುದಕ್ಕೆoದೇ ಸಾಹೇಬರು ನನ್ನನ್ನು ಕರೆದಿರುವುದು!’ ಎಂದು ಕಣ್ಣು ಕೆಂಪಗೆ ಮಾಡಿ ಗುಡುಗಿದ. ಗಂಡನ ಕೂಗಾಟಕ್ಕೆ ಸರೋಜ ಬೆಚ್ಚಿಬಿದ್ದು ಅಳತೊಡಗಿದಳು. ಆಗ ಲಕ್ಷ್ಮಣನಿಗೆ ತನ್ನ ತಪ್ಪಿನರಿವಾಗಿದ್ದರೊಂದಿಗೆ ದುಃಖದಿಂದ ಅದುರುತ್ತಿದ್ದ ಹೆಂಡತಿಯ ಮುಖವನ್ನು ಕಂಡು ಹೊಟ್ಟೆ ಚುರುಕ್ ಎಂದಿತು. ‘ಆಯ್ತು, ಆಯ್ತು ಮಾರಾಯ್ತಿ… ಅಳಬೇಡ. ಪಾರ್ಟಿ ಮುಗಿದ ತಕ್ಷಣ ಮನೆಗೆ ಬಂದು ಬಿಡುತ್ತೇನೆ. ಈಗಲಾದರೂ ಖುಷಿಯಿಂದ ಕಳುಹಿಸಿಕೊಡು. ನಿನ್ನ ದಮ್ಮಯ್ಯ…!’ ಎಂದು ಅಂಗಲಾಚುತ್ತ ಅವಳನ್ನು ತಬ್ಬಿ ಸಂತೈಸಿದ. ಅಮ್ಮನನ್ನು ಒತ್ತಿ ಕುಳಿತು ಅಳುಮೋರೆ ಹಾಕಿಕೊಂಡಿದ್ದ ಮಕ್ಕಳನ್ನೂ ಮುದ್ದಿಸಿದ. ಗಂಡನ ಪ್ರೀತಿಯ ಅಪ್ಪುಗೆ, ಸ್ನೇಹದ ಮಾತಿನಿಂದ ಸರೋಜ ಶಾಂತಳಾದಳು. ಅವಳಿಗೆ ತಾನು ಗಂಡನ ಮೇಲಿರಿಸಿರುವ ಭರವಸೆಯು ಆಹೊತ್ತು ಇನ್ನಷ್ಟು ಗಟ್ಟಿಯಾದಂತೆನಿಸಿ, ಕಣ್ಣೀರೊರೆಸಿಕೊಂಡು ಅವನನ್ನು ಕಳುಹಿಸಿಕೊಟ್ಟಳು.
(ಮುಂದುವರೆಯುವುದು)

Related posts

ವಿವಶ..

Mumbai News Desk

ವಿವಶ…

Mumbai News Desk

ವಿವಶ ..

Mumbai News Desk

ವಿವಶ

Chandrahas

ವಿವಶ..

Mumbai News Desk

ವಿವಶ..

Mumbai News Desk