
ಧಾರವಾಹಿ 29
ಕೆಲವು ದಿನಗಳಿಂದ ಹಗಲು ರಾತ್ರಿ ಧಾರಾಕಾರವಾಗಿ ಸುರಿದ ಮುಂಗಾರು ಮಳೆಗೆ ಜೂನ್ ತಿಂಗಳ ಮೊದಲ ವಾರ ಗಂಗರಬೀಡಿನ ಭೂಮಿಯಲ್ಲಿ ನೀರು ನೆಲೆಯಾಯಿತು. ಕೃಷಿ ಚಟುವಟಿಕೆಗಳೆಲ್ಲ ಭರದಿಂದ ಆರಂಭವಾದುವು. ಪ್ರಾಣಿಪಕ್ಷಿ, ಹಾವು, ಹಲ್ಲಿ, ಅರಣೆಗಳಂತಹ ಜೀವರಾಶಿಗಳು ತಂತಮ್ಮ ಸಂತಾನೋತ್ಪತ್ತಿಯನ್ನು ಸೃಷ್ಟಿಸಿಕೊಂಡು ಪ್ರಕೃತಿಗೂ, ಮಾನವ ಬದುಕಿಗೂ ಹೊಸ ಚೈತನ್ಯವನ್ನು ತುಂಬಿದವು. ಆವರೆಗೆ ಬೆಂಬಿಡದೆ ಸುರಿಯುತ್ತಿದ್ದ ಮಳೆಯು ಅಂದು ಸ್ವಲ್ಪ ನಿಂತು ಬಿಸಿಲು ಕಾಯತೊಡಗಿತು ಎಂಬಷ್ಟರಲ್ಲಿ ಮರಳಿ ಆ ರಾತ್ರಿ ಕುಂಭಾದ್ರೋಣವಾಗುವ ಸೂಚನೆಯಾಗಿ ನಸುಗಪ್ಪಿನ ಬಾನು ದಟ್ಟ ಕಪ್ಪಾಯಿತು. ನಿಮಿಷಕ್ಕೊಮ್ಮೆ ಗುಡುಗಿನೊಂದಿಗೆ ಕಣ್ಣು ಕೊರೈಸುವ ಮಿಂಚು ಸುಳಿಯುತ್ತ ಗಂಗರಬೀಡಿನ ರುದ್ರರಮಣೀಯ ಸೌಂದರ್ಯವನ್ನು ಸ್ವಲ್ಪಸ್ವಲ್ಪವೇ ಜಗಮಗಿಸಿ ಮರೆಮಾಚತೊಡಗಿತು. ಸುತ್ತಲಿನ ಗುಡ್ಡೆಗಳ ಮೇಲೆ ಅಪ್ಪಳಿಸುವಂತೆ ತೋರುತ್ತಿದ್ದ ಸಿಡಿಲಿನ ಶಬ್ದವು ತೋಮನ ಅಂಗಳದಲ್ಲೂ ಪ್ರತಿಧ್ವನಿಸುತ್ತ ಮಿಂಚುತ್ತಿತ್ತು.
ಅದೇ ರಾತ್ರಿ ಪ್ರೇಮಾಳಿಗೆ ಹೆರಿಗೆ ನೋವು ಕಾಣಿಸಿಕೊಂಡಿತು. ತಾಯ್ತನದ ಹೊಸ್ತಿಲಲ್ಲಿದ್ದ ಅವಳ ಮನಸ್ಸು ಅಮ್ಮ, ಅಪ್ಪನನ್ನು ಕಾಣಲು ಹಂಬಲಿಸುತ್ತಿತ್ತು. ಆ ಚಿಂತೆ ಅವಳ ಹೆರಿಗೆ ನೋವನ್ನೂ ಇಮ್ಮಡಿಗೊಳಿಸುತ್ತಿತ್ತು. ಜೊತೆಗೆ ಏನೇನೋ ಯೋಚನೆಗಳು ಅವಳನ್ನು ಮುತ್ತಿದ್ದವು. ತಾನು ಮೈಮರೆವಿನಿಂದ ದುಡುಕಿದ್ದು ಹೌದಾದರೂ ಆ ದೇವರು ನನ್ನ ಕೈಬಿಟ್ಟಿಲ್ಲ ಎನ್ನುವುದಕ್ಕೆ ತನ್ನ ಗಂಡ ತನ್ನನ್ನು ಇಷ್ಟೊಂದು ಪ್ರೀತಿಯಿಂದ ನೋಡಿಕೊಳ್ಳುತ್ತಿರುವುದೇ ಸಾಕ್ಷಿ! ಎಂದು ತನ್ನ ಹೆತ್ತವರೊಡನೆ ಹೆಮ್ಮೆಯಿಂದ ಹೇಳಿಕೊಳ್ಳಬೇಕೆಂಬ ತವಕ ಅವಳನ್ನು ತಿವಿಯುತ್ತಿತ್ತು. ಹಾಗಾಗಿ ಒಮ್ಮೆ ಅವಳು ಹೆಲೆನಾಬಾಯಿಯವರ ಮೂಲಕ ದುರ್ಗಕ್ಕನಿಗೆ ಹೇಳಿ ಕಳುಹಿಸಿಯೂ ಇದ್ದಳು. ಅತ್ತ ತನ್ನ ಮಗಳು ತುಂಬು ಗರ್ಭಿಣಿ ಎಂದು ತಿಳಿದಾಕ್ಷಣ ದುರ್ಗಕ್ಕನ ಕರುಳು ಕೂಡಾ ಮಿಡಿಯಿತು. ಆದರೆ ತನ್ನ ಕುಟುಂಬಕ್ಕಾದ ನೋವು ಆಘಾತಗಳು ಅವಳ ಮುನ್ನೆಲೆಗೆ ಬಂದುದರಿoದ ಹೆಲನಾಬಾಯಿಯ ಮಾತಿಗೆ ಬರೇ ವಿಷಾದದ ನಿಟ್ಟುಸಿರು ಬಿಟ್ಟವಳು, ‘ಎಲ್ಲಾ ಮುಗಿದು ಹೋಯಿತಲ್ಲ ಬಾಯಮ್ಮ…! ಅವಳ ಜೀವನವನ್ನು ಅವಳಿಷ್ಟದಂತೆ ಆಯ್ಕೆ ಮಾಡಿಕೊಂಡಳು. ಹಾಗಾಗಿ ಒಟ್ಟಾರೆ ಎಲ್ಲಾದರೂ ಸುಖವಾಗಿರಲಿ ಅಂತ ಹಾರೈಸಬಹುದಷ್ಟೇ!’ ಎಂದು ದುಗುಡದಿಂದ ಹೇಳಿ ಹೊರಟು ಹೋಗಿದ್ದಳು. ಹೆಲನಾಬಾಯಿಯಿಂದ ಅಷ್ಟು ಕೇಳಿದ ಪ್ರೇಮಾಳ ಮನಸ್ಸೂ ಕಹಿಯಾಗಿತ್ತು. ಅಮ್ಮ, ಅಪ್ಪನಿಗೆ ನಮ್ಮ ಮೇಲೆ ಯಾಕಿಷ್ಟೊಂದು ಕಠೋರತೆ! ನಾವು ಮಾಡಿರುವಂಥ ತಪ್ಪಾದರೂ ಏನು…? ಎಂದು ಅವಳು ಅನೇಕ ಬಾರಿ ಪ್ರಶ್ನಿಸಿಕೊಳ್ಳುತ್ತ ಉತ್ತರ ತಿಳಿಯದೆ ಹತಾಶಳಾಗುತ್ತಿದ್ದಳು.
ಇತ್ತ ಹೆಂಡತಿಯ ಹೆರಿಗೆ ನೋವು ತೋಮನನ್ನು ಕಂಗೆಡಿಸಿತು. ಅವನು ಗೀರುಕಟ್ಟಿ ಸುರಿಯುತ್ತಿದ್ದ ಗಾಳಿ ಮಳೆಯನ್ನು ಲೆಕ್ಕಿಸದೆ ತೋಟದ ಹಿಂದಿನ ಶೆಡ್ಡಿನ ಶೀನುನಾಯ್ಕನಲ್ಲಿಗೆ ಧಾವಿಸಿ ವಿಷಯವನ್ನು ಅವನಿಗೆ ತಿಳಿಸಿದ. ಶೀನ ದಂಪತಿ ದಡಬಡನೆದ್ದು ಅವನೊಂದಿಗೆ ಹೊರಟು ಬಂದವರು ಪ್ರೇಮಾಳ ಹೆರಿಗೆಯ ಜವಾಬ್ದಾರಿಯನ್ನು ತಾವೇ ವಹಿಸಿಕೊಂಡರು. ನಡುರಾತ್ರಿಯ ಹೊತ್ತಿಗೆ ಪ್ರೇಮಾಳಿಗೆ ಹೆರಿಗೆಯಾಗುವ ಸೂಚನೆ ಕಂಡಿತು. ಶೀನುನಾಯ್ಕನ ಹೆಂಡತಿ ಚೀಂಕುವು ತೋಮನನ್ನು ಪ್ರೇಮಾಳ ಜೊತೆಯಲ್ಲಿ ಉಳಿಸಿಕೊಂಡು ತನ್ನ ಗಂಡನಿಗೆ ಸೂಲಗಿತ್ತಿಯನ್ನು ಕರೆತರಲು ಸೂಚಿಸಿದಳು. ಅಷ್ಟೊತ್ತಿಗೆ ಮಳೆಗಾಳಿಯೂ ತುಸು ಶಾಂತವಾಗಿತ್ತು. ತೋಮ ಕೂಡಲೇ ಶೀನುನಾಯ್ಕನಿಗೆ ಮಡಲಿನ ಸೂಟೆಯೊಂದನ್ನು ಕಟ್ಟಿ ಹೊತ್ತಿಸಿ ಕೊಟ್ಟ. ಅವನು ಅದನ್ನು ಹಿಡಿದುಕೊಂಡು ಎರಡು ಮೈಲು ದೂರದ ಹಿರಿಯೆ ಚಂದ್ರಿ ಪೂಜಾರ್ತಿಯ ಮನೆಗೆ ಧಾವಿಸಿ ಅವಳನ್ನು ಕರೆದುಕೊಂಡು ಬಂದ.
ಚಂದ್ರಿ ಬಂದವಳು ತೋಮನ ಶೆಡ್ಡಿನ ಪಡಸಾಲೆಯ ಮೂಲೆಗೆ ಸೀರೆಯೊಂದನ್ನು ಅಡ್ಡ ಕಟ್ಟಿ ಬಸುರಿಯನ್ನು ಮರೆ ಮಾಡಿದಳು. ಮತ್ತೊಂದು ಹಳೆಯ ನೈಲಾನ್ ಸೀರೆಯನ್ನು ಹಗ್ಗದಂತೆ ಹೆಣೆದು ಅದರ ಒಂದು ಕುಚ್ಚಿಯನ್ನು ಮಾಡಿನ ಅಡ್ಡ ತೊಲೆಗೆ ಬಿಗಿದಳು. ಇಳಿಬಿಟ್ಟ ಇನ್ನೊಂದು ತುದಿಯನ್ನು ಗರ್ಭಿಣಿಯ ಕೈಗೆ ಕೊಟ್ಟು, ‘ಇದನ್ನು ಹಿಡಿದುಕೊಂಡು ನೋವು ಕೊಡುತ್ತಿರು ಮಗಾ…!’ ಎಂದು ಸೂಚಿಸಿ ತನ್ನ ಕಾರ್ಯದಲ್ಲಿ ಮಗ್ನಳಾದಳು. ಪ್ರೇಮ ಬೇನೆ ಕೊಡತೊಡಗಿದಳು. ಮುಂದಿನ ಒಂದೆರಡು ಗಳಿಗೆಯಲ್ಲಿ ಹೆರಿಗೆಯಾಗುವ ಸೂಚನೆ ಕಂಡಿತು. ಅಷ್ಟೊತ್ತಿಗೆ ಚಂದ್ರಿಯು ಜೀರಿಗೆ ಕಷಾಯವನ್ನೂ, ಬಸಳೆ ಸೊಪ್ಪು ಕಿವುಚಿದ ನೀರನ್ನೂ ಗರ್ಭಿಣಿಗೆ ಕುಡಿಸಿದಳು. ಇದಾದ ಸ್ವಲ್ಪಹೊತ್ತಿನ ನಂತರ ಪ್ರೇಮ ಕೊನೆಯದಾಗಿ ಉಸಿರುಗಟ್ಟಿ ನೀಡಿದ ನೋವು ಅವಳ ಗರ್ಭದಿಂದ ಪುಟ್ಟ ಹೆಣ್ಣು ಜೀವವೊಂದನ್ನು ಹೊರಗೆ ತಳ್ಳಿತು. ಚಂದ್ರಿಯು ಮಗುವಿನ ಹೊಕ್ಕುಳ ಬಳ್ಳಿಯನ್ನು ಕತ್ತರಿಸಿ, ಉಗುರು ಬೆಚ್ಚಗಿನ ನೀರಿನಲ್ಲಿ ಅದರ ಮೈಕೈ ತೊಳೆದು ಒರೆಸಿ ಹೆತ್ತವಳ ಮಡಿಲಿಗೆ ಹಾಕಿದಳು. ಅತಿಯಾದ ನಿತ್ರಾಣವಿದ್ದರೂ ಪ್ರೇಮ ತನ್ನ ಮಗುವನ್ನೊಮ್ಮೆ ಮಮತೆಯಿಂದ ದಿಟ್ಟಿಸಿದವಳು ಹಾಗೆಯೇ ಮಂಪರಿಗೆ ಜಾರಿದಳು. ಅತ್ತ ಅಂಗಳದಲ್ಲಿ ಕುಳಿತು ಚಡಪಡಿಸುತ್ತಿದ್ದ ತೋಮನಿಗೆ ಮಗುವಿನ ಅಳು ಕಿವಿಗೆ ಬಿದ್ದಾಕ್ಷಣ ಮೇರೆ ಮೀರಿದ ಆನಂದವಾಯಿತು. ರಪ್ಪನೆ ಒಳಗೆ ನುಗ್ಗಿದವನು ಮಗುವನ್ನು ಕಂಡು ರೋಮಾಂಚಿತನಾದ. ಆದರೆ ಹೆಣ್ಣೆಂದಾಕ್ಷಣ ಅವನ ಮನಸ್ಸೇಕೋ ತುಸು ಸಪ್ಪಗಾಯಿತು. ಆದರೂ ನಿರಾಶೆಯನ್ನು ಬದಿಗೊತ್ತಿ ಹೆಂಡತಿಯೊಡನೆ ಸಂಭ್ರಮಿಸಿದ. ಎಲ್ಲಾ ಮುಗಿದ ಬಳಿಕ ಸೂಲಗಿತ್ತಿಯನ್ನು ಮನೆಗೆ ತಲುಪಿಸಿ ಬಂದ. ನಾಯ್ಕ ದಂಪತಿಯೂ ತಮ್ಮ ಶೆಡ್ಡಿಗೆ ಹೊರಟು ಹೋದರು. ಅಷ್ಟೊತ್ತಿಗೆ ಗಾಳಿಮಳೆ ಮತ್ತೆ ಶುರುವಾಯಿತು. ಖುಷಿಯೋ, ಬೇಸರವೋ ತಿಳಿಯದ ಮಿಶ್ರಭಾವಕ್ಕೆ ತುತ್ತಾಗಿದ್ದ ತೋಮ ಮೆಲ್ಲನೆ ಚಾಪೆಗೊರಗಿದ.
ಮಗು, ಪ್ರೇಮಾಳಂತೆ ಸುಂದರವಾಗಿ ತೋಮನಂತೆ ಗುಂಡುಗುoಡಗೆ ಮುದ್ದಾಗಿತ್ತು. ಹುಟ್ಟಿದ ಹದಿನಾರನೆಯ ದಿನಕ್ಕೆ ನಾಮಕರಣಶಾಸ್ತç ಮಾಡಲಾಯಿತು. ಪ್ರೇಮಾಳೇ ಮಗುವಿಗೆ ಶ್ವೇತಾ ಎಂದು ಹೆಸರಿಟ್ಟಳು. ಹೆಲೆನಾಬಾಯಿ, ಸೂಲಗಿತ್ತಿ ಚಂದ್ರಿ ಮತ್ತು ಶೀನುನಾಯ್ಕ ದಂಪತಿ ಹಾಗೂ ಶೆಟ್ಟರ ತೋಟದ ನಾಲ್ಕಾರು ಆಳುಗಳು ಬಂದು ಮಗುವಿನ ನಾಮಕರಣದಲ್ಲಿ ಪಾಲ್ಗೊಂಡರು. ಬಂದ ಅತಿಥಿಗಳು ಮಗುವಿಗೆ ಬಟ್ಟೆಬರೆ, ಪೌಡರ್ ಮತ್ತು ಅದರ ಎಳೆಯ ಕೈಗಳಿಗೆ ಹತ್ತಿಪ್ಪತ್ತು ರೂಪಾಯಿಗಳನ್ನು ತುರುಕಿಸಿ ಕೋಳಿ ರೊಟ್ಟಿಯ ಔತಣವನ್ನು ಗಡದ್ದಾಗಿ ಸವಿದು ತೃಪ್ತಿಯಿಂದ ಹೊರಟು ಹೋಗುವ ತನಕದ ಎಲ್ಲ ಕೆಲಸಕಾರ್ಯಗಳೂ ಸಾಂಗವಾಗಿ ನೆರವೇರಿದವು.
ಮಗುವಿಗೆ ಆರು ತಿಂಗಳಾಗುತ್ತಲೇ ಪ್ರೇಮ ಅದನ್ನು ಕಂಕುಳಕ್ಕೇರಿಸಿಕೊoಡು ಹೆಲೆನಾಬಾಯಿಯ ಮನೆ ಚಾಕರಿಗೆ ಹೊರಟು ನಿಂತಳು. ಆದರೆ ತೋಮ ಹೆಂಡತಿಯನ್ನು ತಡೆಯಲಿಲ್ಲ. ಬದಲಿಗೆ, ‘ಈಗ ಸಂಸಾರ ದೊಡ್ಡದಾಯ್ತಲ್ಲವಾ ಮಾರಾಯ್ತಿ. ಇಬ್ಬರೂ ದುಡಿದರೆ ಒಳ್ಳೆಯದಲ್ಲವಾ!’ ಎಂದು ವಿಷಾದ ವ್ಯಕ್ತಪಡಿಸಿದ. ಪ್ರೇಮಾಳಿಗೂ ಗಂಡನ ಮಾತು ನಿಜವೆನಿಸಿತು. ‘ಹೌದು ಮಾರಾಯ್ರೇ. ಅದಕ್ಕೆ ನಾನೂ ಮನಸ್ಸು ಮಾಡಿರುವುದು!’ ಎಂದಳು ಮುಗ್ಧವಾಗಿ. ಅವಳ ಮಾತಿಗೆ ತಲೆಯಾಡಿಸಿದ ತೋಮ ಎದ್ದು ಶೆಟ್ಟರ ತೋಟದ ಕೆಲಸಕ್ಕೆ ಹೊರಟು ಹೋದ. ಪ್ರೇಮ ತನ್ನ ಮಗುವಿನೊಂದಿಗೆ ಶೆಡ್ಡಿನಿಂದ ಸುಮಾರು ದೂರದ ಗುಡ್ಡೆಯೊಂದನ್ನು ಹತ್ತಿಳಿದು ವಿಶಾಲ ತೋಟವನ್ನು ದಾಟಿ ಹೆಲೆನಾಬಾಯಿಯ ಮನೆಗೆ ತಲುಪುವ ಹೊತ್ತಿಗೆ ಅವಳಿಗೆ ಸಾಕು ಸಾಕಾಗಿತ್ತು. ಆದರೂ ಅವಳು ಎದೆಗುಂದಲಿಲ್ಲ. ಆದರೆ ಆರು ತಿಂಗಳ ಬಾಣಂತಿಯು ಎದ್ದು ಕೆಲಸಕ್ಕೆ ಬಂದುದನ್ನು ಕಂಡ ಹೆಲೆನಾಬಾಯಿಗೆ ಮರುಕವಾಯಿತು. ಆದರೂ ಪ್ರೇಮ ಅವರಿಗೆ ಅಚ್ಚುಮೆಚ್ಚಿನವಳು. ಆದ್ದರಿಂದ ಇರಲಿ. ಅವಳು ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದರೆ ತಮಗೂ ಜೊತೆಯಾದ ಹಾಗಾಯ್ತು! ಎಂದುಕೊoಡು ಅವಳನ್ನು ಆದರದಿಂದ ಬರಮಾಡಿಕೊಂಡರು. ಮಗುವನ್ನು ಮಲಗಿಸಲು ಹಳೆಯ ತೊಟ್ಟಿಲೊಂದನ್ನು ಕೊಟ್ಟರು. ಹೀಗೆ ಸಣ್ಣದೊಂದು ಕಾಡು ತೊರೆಯ ಮೂಲಕ ಸಾಗಿದ ಪ್ರೇಮ, ತೋಮರ ಬಾಳ ನೌಕೆಯು ಚಿಕ್ಕಪುಟ್ಟ ಅಡೆತಡೆಗಳನ್ನೆಲ್ಲ ಮೀರಿ ಸುಗಮವಾಗಿ ಸಾಗತೊಡಗಿತು.
ಆದರೆ ಪ್ರೇಮಾಳ ಪಾಲಿಗೆ ಸರ್ವಸ್ವವೆನಿಸಿದ್ದ ತೋಮನು ಬಹಳ ಕಾಲ ಅದೇ ತೋಮನಾಗಿ ಉಳಿಯಲಿಲ್ಲ. ಹೆಂಡತಿಯ ಮೇಲೆ ಅವನಿಗೆ ಆರಂಭದಲ್ಲಿ ಇದ್ದ ಪ್ರೀತಿ, ಅಭಿಮಾನಗಳು ಈಗೀಗ ಉರಿಬೇಸಿಗೆಯಲ್ಲಿ ಇಂಗುವ ತೋಡು, ತೊರೆಗಳಂತೆ ನಿಧಾನವಾಗಿ ಬತ್ತತೊಡಗಿದ್ದವು. ಜೊತೆಗೆ ದುಡಿಮೆ ಮತ್ತು ಸಂಸಾರ ಪೋಷಣೆಯಲ್ಲೂ ಅವನ ಹುಮ್ಮಸು ಕರಗುತ್ತಿತ್ತು. ಹಾಗಾಗಿ ಈಚೀಚೆಗೆ ಅವನು ಕೆಲಸಕ್ಕೆ ಹೋದರೆ ಹೋದ. ಇಲ್ಲದಿದ್ದರಿಲ್ಲ. ಅಥವಾ ತನ್ನ ಕುಡಿತಕ್ಕೆ ಬೇಕಾಗುವಷ್ಟನ್ನು ಮಾತ್ರವೇ ದುಡಿಯುತ್ತಿದ್ದ. ಅದಿಲ್ಲದಿದ್ದರೆ ಹೆಲೆನಾಬಾಯಿಯ ಕಣ್ಣು ತಪ್ಪಿಸಿ ತೆಂಗಿನಕಾಯಿ, ಸೀಯಾಳಗಳನ್ನು ಕದ್ದು ಮಾರಿ ಕುಡಿತಕ್ಕೆ ಹಣ ಹೊಂದಿಸುವ ಮಟ್ಟಕ್ಕೆ ತಲುಪಿದ್ದ. ಕೆಲವೊಮ್ಮೆ ದಿನವಿಡೀ ಕುಡಿದು ಸಂಜೆ ಖಾಲಿ ಕೈಯಲ್ಲಿ ಮನೆಗೆ ಮರಳುತ್ತಿದ್ದ. ಗಂಡನ ಸೋಮಾರಿತನ ಮತ್ತು ಅವನ ಕುಡಿತದ ಚಟವು ವಿಪರೀತಕ್ಕೆ ತಿರುಗಿದ್ದುದನ್ನು ಕಾಣುತ್ತ ಬಂದ ಪ್ರೇಮಾಳಿಗೆ ಭಯವಾಗತೊಡಗಿತು. ಹಾಗಾಗಿ ಅವಳು ಕೆಲವು ಬಾರಿ ತಾಳ್ಮೆ ಕಳೆದುಕೊಂಡು ಅವನೊಂದಿಗೆ ಜಗಳಕ್ಕೂ ನಿಲ್ಲುತ್ತಿದ್ದಳು. ಆದರೆ ತೋಮ ಮೊದಲೇ ಒರಟ. ಹೆಣ್ಣಿಗಿಂತ ಗಂಡೇ ಮೇಲು ಎಂಬ ಬುದ್ಧಿಯೂ ಅವನಲ್ಲಿತ್ತು. ಹಾಗಾಗಿ ಪ್ರೇಮಾಳ ಕೋಪವನ್ನು ಸಹಿಸದೆ ತಾನೂ ಸಿಕ್ಕಾಪಟ್ಟೆ ಜಗಳವಾಡುತ್ತಿದ್ದ. ಅದು ಕೆಲವೊಮ್ಮೆ ತಾರಕ್ಕೇರಿ ಹೆಂಡತಿಯ ಜುಟ್ಟು ಹಿಡಿದು ಹಿಗ್ಗಾಮುಗ್ಗಾ ಥಳಿಸುತ್ತ ಅವಳ ಸದ್ದಡಗಿಸುವಲ್ಲಿಗೆ ಕದನ ವಿರಾಮಗೊಳ್ಳುತ್ತಿತ್ತು. ಆದರೂ ಪ್ರೇಮ ಗಂಡನ ಅಸಡ್ಡೆ, ಹಿಂಸಾಚಾರಗಳನ್ನೆಲ್ಲ ಸಹಿಸುತ್ತ ಅವನು ಕುಡಿಯದೆ ಮನೆಯಲ್ಲಿರುತ್ತಿದ್ದ ಸಮಯವನ್ನು ಕಾದು ಮಮತೆಯಿಂದ ಮಾತಾಡಿಸಿ ಬುದ್ಧಿವಾದ ಹೇಳುತ್ತ ಸಂಸಾರದ ಮೇಲೆ ಅವನಲ್ಲಿ ಹೊಸ ಆಸೆ, ಭರವಸೆಯನ್ನು ಚಿಗುರಿಸಲೆತ್ನಿಸಿದಳು. ಆಗೆಲ್ಲ, ಹೆಂಡತಿಯ ತಾಳ್ಮೆ ಮತ್ತು ಪ್ರೀತಿಯ ಮಾತುಗಳು ತೋಮನಲ್ಲೂ ಹಿಂದಿನ ತಮ್ಮ ಪ್ರೇಮ ಸಂಬoಧದ ಮಧುರ ನೆನಪುಗಳು ಮರುಕಳಿಸಲು ಕಾರಣವಾಗುತ್ತಿದ್ದುವು. ತಾವು ಜೊತೆಯಾಗಿ ಬಾಳಲಾರಂಭಿಸಿದ ಮೇಲೆ ಕಟ್ಟಿಕೊಂಡ ಕನಸುಗಳ ದರ್ಶನವೂ ಆಗುತ್ತ ದಾರಿತಪ್ಪಿದ ಅವನ ಮನಸ್ಸನ್ನು ವಾಸ್ತವಕ್ಕೆ ಮರಳಿಸುತ್ತಿತ್ತು. ಆದರೆ ಹೊರಗೆ ಹೋದ ಬಳಿಕ ಮುಂಜಾನೆ ಅರಳಿ ನಳನಳಿಸಿ, ಸಂಜೆಯಾಗುತ್ತಲೇ ಬಾಡಿ ಮುದುಡುವ ಸೂರ್ಯಕಾಂತಿಯoತೆಯೇ ಅವನ ಸ್ಥಿತಿಯಾಗುತ್ತಿತ್ತು.
ಹೀಗಾಗಿ ಹಗಲಲ್ಲಿ ತಾನು ಹೇಳಿದಂತೆ ಕೇಳುತ್ತ ಮಗುವಿನಂತಿರುವ ಗಂಡ ಮನೆಯಿಂದ ಹೊರಟು ಮರಳಿ ಬರುವ ಹೊತ್ತಿಗೆ ನಾಯಿಯ ಬಾಲ ಅಂಡೆಗೆ ಹಾಕಿದ ಹಾಗೆ! ಎಂಬ ಗಾದೆಯಂತೆಯೇ ವರ್ತಿಸತೊಡಗುವುದನ್ನು ಕಾಣುತ್ತ ಬಂದ ಪ್ರೇಮಾಳಿಗೆ, ‘ಇನ್ನು ಇವನು ಒಳ್ಳೆಯವನಾಗಲಾರ!’ ಎಂದೆನಿಸಿಬಿಟ್ಟಿತು. ಹಾಗಾಗಿ ಅವಳಲ್ಲೂ ತನ್ನ ಸಂಸಾರದ ಮೇಲಿನ ಉತ್ಸಾಹ ಕುಂದುತ್ತಾ ಏನೂ ಬೇಡವಾಗಿ ಕೆಲವು ಕಾಲ ಹತಾಶೆಯಿಂದ ಕುಳಿತಳು. ಆದರೆ ತನ್ನ ಪುಟ್ಟ ಮಗುವೊಂದು ಕಣ್ಣ ಮುಂದೆಯೇ ನಲಿದಾಡುತ್ತ ತನ್ನ ಸರ್ವತ್ವವೇ ಆಗಿರುವುದು ಕೂಡಾ ಅವಳನ್ನು ಎಚ್ಚರಿಸುತ್ತಿದ್ದುದರಿಂದ ಒಮ್ಮೆ ತನ್ನ ಗ್ರಹಣ ಬಡಿದಂಥ ಮನಸ್ಥಿತಿಯಿಂದ ಹೊರಗೆ ಬಂದು ಸಂಸಾರದ ಹೊಣೆಯನ್ನು ಒಬ್ಬಳೇ ಹೊರಲು ನಿರ್ಧರಿಸಿದಳು. ಆವತ್ತಿನಿಂದ ಬದುಕಲೊಂದು ಬಾಡಿಗೆ ಸೂರು ಕೊಟ್ಟ ಶೆಟ್ಟರ ತೋಟಕ್ಕೂ, ಬಾಯಮ್ಮನ ಮನೆಗೂ ಎಳೆಗೂಸನ್ನು ಕಟ್ಟಿಕೊಂಡು ಹೋಗುತ್ತ ಬಿಡುವಿಲ್ಲದೆ ದುಡಿಯಲಾರಂಭಿಸಿದಳು. ಆದರೆ ಹೆಂಡತಿಯ ಆ ನಿರ್ಧಾರವು ತೋಮನ ಪಾಲಿಗೆ, ಸದಾ ಕಟ್ಟಿ ಹಾಕುತ್ತಿದ್ದ ಕೋಣವನ್ನು ಒಮ್ಮೆಲೇ ಮೇಯಲು ಅಟ್ಟಿದಂತಾಯಿತು! ಹೆಂಡತಿ ಎರಡೂ ಕಡೆ ಒಬ್ಬಳೇ ದುಡಿಯಲಾರಂಭಿಸಿದ ಮೇಲೆ ಅವನೂ ತನ್ನ ಸಂಸಾರದ ಹೊಣೆಯಿಂದ ಜಾರಿಕೊಂಡವನು ದಿನವಿಡೀ ಎಲ್ಲೆಲ್ಲೋ ಅಂಡಲೆಯತೊಡಗಿದ ಅಥವಾ ನೆರೆಕರೆಯ ಕಿರಿಸ್ತಾನರ ಮನೆಗಳಲ್ಲಿ ಸಣ್ಣಪುಟ್ಟ ಕೆಲಸಕಾರ್ಯಗಳನ್ನು ಮಾಡಿಕೊಟ್ಟು ಅವರು ಕೊಡುತ್ತಿದ್ದ ಚಹಾತಿಂಡಿಯನ್ನೂ, ಎರಡ್ಹೊತ್ತು ಊಟವನ್ನೂ ಗಡದ್ದಾಗಿ ಉಣ್ಣುತ್ತ ರಾತ್ರಿಯಾದ ಮೇಲೆ ಮನೆಗೆ ಬಂದರೆ ಬಂದ, ಇಲ್ಲದಿದ್ದರಿಲ್ಲ ಎಂಬoತೆ ಸ್ವೇಚ್ಛೆಯಾಗಿ ಬದುಕತೊಡಗಿದ.
ಇಂಥ ತೋಮ ತನ್ನ ಪುಟ್ಟ ಸಂಸಾರವನ್ನು ಗಟ್ಟಿತನದಿಂದ ನಡೆಸಬಲ್ಲ ಗಂಡಸಾಗದಿದ್ದರೂ ಕೈಹಿಡಿದವಳಿಗೆ ಭರಪೂರ ದೇಹಸುಖ ನೀಡುವಲ್ಲಿ ಎಂದೂ ಸೋತವನಲ್ಲ. ತನ್ನ ಗಂಡನಲ್ಲಿದ್ದ ಈ ಒಂದೇ ಶಕ್ತಿಯು ಹೆಂಡತಿಯನ್ನು ಅವನೆಲ್ಲ ಬಲಹೀನತೆಗಳನ್ನೂ ಸಹಿಸುವಂತೆ ಮಾಡುತ್ತಿತ್ತು. ಹಾಗಾಗಿ ಹಗಲಿಡೀ ಮಾತುಕತೆಯಿಲ್ಲದೆ ಮುನಿಸಿಕೊಂಡೋ, ಹಾವು ಮುಂಗುಸಿಗಳoತೆ ಕಚ್ಚಾಡಿಕೊಂಡೋ ಇರುತ್ತಿದ್ದ ಅವರು ಇರುಳು ಕವಿದು ಚಾಪೆಗೊರಗಿದ ಮರುಗಳಿಗೆಯಲ್ಲಿ ಮೃದುವಾಗಿ ಬೆಸೆದುಕೊಂಡು ತಮ್ಮ ದುಃಖ ದುಮ್ಮಾನಗಳನ್ನೆಲ್ಲ ಮರೆಯುತ್ತಿದ್ದರು. ಹೀಗಾಗಿ ಶ್ವೇತಾಳಿಗೆ ಮೂರು ವರ್ಷ ತುಂಬುವಷ್ಟರಲ್ಲಿ ಪ್ರೇಮ ಮತ್ತೆ ಬಸುರಾದಳು. ಆದರೆ ಎರಡನೆಯ ಹೆರಿಗೆಯ ದಿನ ಸಮೀಪಿಸುತ್ತಲೇ ಅವಳಲ್ಲಿ ಆತಂಕವೂ ಮಡುಗಟ್ಟುತ್ತಿತ್ತು. ಎಷ್ಟು ಕಾಲಾಂತ ಇಂಥ ಬೇಜವಾಬ್ದಾರಿ ಗಂಡಸಿನೊಡನೆ ಹಾಳು ಬಾಳು ಬದುಕುವುದು? ಇವನಿಂದ ಮುಂದೇನು ಸುಖ ಕಾದಿದೆ ಅಂತ ಎಲ್ಲವನ್ನೂ ಸಹಿಸಿಕೊಳ್ಳುವುದು? ಎಲ್ಲರಂತೆ ತಾನೂ ನಾಲ್ಕು ಜನರ ಸಮ್ಮುಖದಲ್ಲಿ ಮದುವೆ ಮಸಿರಿಯಾಗದೆ ದೇಹದ ತೊಡುವಿಗೆ (ಹಸಿವೆಗೆ) ಬಿದ್ದು ದಾರಿ ತಪ್ಪಿ ತನ್ನವರೊಡನೆಯೂ ನಿಷ್ಠೂರ ಕಟ್ಟಿಕೊಂಡಾಯ್ತು. ಹೆಣ್ಣಾದವಳಿಗೆ ಗಂಡನೇ ಸರ್ವಸ್ವ ಎಂದು ನಂಬಿ ಬಂದು ಏನು ಸುಖಪಟ್ಟೆ? ಮೊದಮೊದಲು ಮೂರು ಹೊತ್ತೂ, ‘ಪ್ರೇಮಾ…ಪ್ರೇಮಾ…! ನನ್ನ ಬಂಗಾರೀ…! ನನ್ನ ಜೀವ ನೀನು…!’ ಅಂತೆಲ್ಲ ಸೆರಗು ಹಿಡಿದು ಸುತ್ತಾಡುತ್ತ ಪ್ರೀತಿಯ ಮಹಾಪೂರ ಹರಿಸುತ್ತಿದ್ದವನು ಈಗೀಗ ಯಾಕಿಷ್ಟೊಂದು ಬದಲಾಗಿ ಬಿಟ್ಟ? ಒಂದು ಹೆಣ್ಣಿನೊಡನೆ ತಮ್ಮ ದೇಹದ ಕಾವು ಆರಿದ ನಂತರ ಗಂಡಸರ ಅವಸ್ಥೆಯೂ ಹೀಗೇನಾ? ಇಂಥವರ ದೃಷ್ಟಿಯಲ್ಲಿ ಹೆಣ್ಣೆಂದರೆ ಕೇವಲ ಒಂದು ಭೋಗದ ವಸ್ತು ಮಾತ್ರವಾ…? ಇಲ್ಲ, ಇಲ್ಲ! ನನ್ನ ಅಪ್ಪ ಎಷ್ಟೇ ಕುಡುಕ ಮತ್ತು ಒರಟನಾಗಿದ್ದರೂ ಅಮ್ಮನನ್ನು ಎಷ್ಟೊಂದು ಚೆನ್ನಾಗಿ ನೋಡಿಕೊಳ್ಳುತ್ತಾನೆ. ತೋಮನ ವಿಷಯದಲ್ಲಿ ಬಹುಶಃ ನಾನೇ ದುಡುಕಿದೆನೆಂದು ಕಾಣುತ್ತದೆ. ಅಮ್ಮ, ಅಪ್ಪ ಹೇಳುವಂತೆ ಇವನ ಗುಣನಡತೆ ಮತ್ತು ದುಶ್ಚಟಗಳ ಬಗ್ಗೆ ತಾನೇಕೆ ಮೊದಲೇ ಗಮನಹರಿಸಲಿಲ್ಲ? ಅವನ ಬಗ್ಗೆ ಏನೊಂದೂ ತಿಳಿದುಕೊಳ್ಳದೆ ಬದುಕನ್ನೇ ಹಾಳು ಮಾಡಿಕೊಂಡೆನಲ್ಲ! ‘ಹೆಣ್ಣುಮಕ್ಕಳು ದಾರಿ ತಪ್ಪುವುದು ಹದಿನಾರರಿಂದ ಮೂವತ್ತರ ಆಸುಪಾಸಿನಲ್ಲೇ ಮಗಾ…!’ ಎಂದು ಅಮ್ಮ ಬೇಕೆಂದೇ ಆಗಾಗ ನನ್ನ ಮುಂದೆ ಹೇಳುತ್ತಿದ್ದಳಾ? ಇರಬಹುದು. ಅವಳ ಆ ಮಾತಿನರ್ಥ ಈಗ ತನಗೆ ಸ್ಪಷ್ಟವಾಗುತ್ತಿದೆ. ಆದರೆ ಇನ್ನು ತಿಳಿದೇನು ಪ್ರಯೋಜನ? ಕಾಲ ಮಿಂಚಿ ಹೋಯಿತಲ್ಲ. ಇನ್ನು ನನ್ನ ಬದುಕನ್ನು ಯಾರಿಂದಲೂ ಸರಿಪಡಿಸಲು ಸಾಧ್ಯವಿಲ್ಲ. ಒಂದೋ ಇದೇ ನರಕದಲ್ಲಿ ಒದ್ದಾಡುತ್ತ ಸಾಯಬೇಕು ಅಥವಾ ಮಗಳನ್ನೆತ್ತಿಕೊಂಡು ಮನೆಗೆ ಹಿಂದಿರುಗಬೇಕು! ಎಂದುಕೊಳ್ಳುವವಳಲ್ಲಿ ತುಸು ಸಮಾಧಾನ ಮೂಡುತ್ತಿತ್ತು. ಆದರೆ ಮರುಕ್ಷಣ ಮನೆಗೆ ಹೋದರೆ ಅಮ್ಮ ಅಪ್ಪ ಸೇರಿಸಿಕೊಂಡಾರು. ಅಶೋಕ…? ಖಂಡಿತಾ ಒಪ್ಪಲಾರ. ಯಾಕೆಂದರೆ ನನ್ನಿಂದಾಗಿ ಅವರೆಲ್ಲ ಅಷ್ಟೊಂದು ಅನುಭವಿಸಿದ್ದಾರೆ. ಅದೂ ಅಲ್ಲದೇ ಅಶೋಕನಿಗೂ ಮದುವೆಯಾಗಿದೆಯಂತೆ. ಈಗ ಹೋದರೆ ನಾದಿನಿಯ ಮುಂದೆ ತಾನು ನಿಕೃಷ್ಟಳಾಗಿಬಿಡುತ್ತೇನೆ. ಹಾಗಾಗಿ ಮತ್ತೊಮ್ಮೆ ಅವರ ನೆಮ್ಮದಿ ಕೆಡಿಸುವುದು ಬೇಡ. ಇನ್ನೇನಿದ್ದರೂ ಇದೇ ನನ್ನ ಮನೆ. ಇಲ್ಲೇ ಬದುಕು. ಅದೇನಾಗುವುದೋ ಆಗಿಬಿಡಲಿ ಎಂದುಕೊoಡು ಬದುಕುವುದು- ಎಂದು ಯೋಚಿಸುತ್ತ ಧೈರ್ಯ ತಂದುಕೊಳ್ಳುವಳು.
(ಮುoದುವರೆಯುವುದು)