
ಧಾರವಾಹಿ 30
ಸರೋಜ ತನ್ನ ಗಂಡನನ್ನು ಸಾಹೇಬರ ಮನೆಯ ಔತಣಕೂಟಕ್ಕೆ ಸಮಾಧಾನದಿಂದಲೇ ಕಳುಹಿಸಿಕೊಟ್ಟಿದ್ದಳು. ಆದರೆ ಅವನು ಹೊರಟು ಹೋದ ಮೇಲೆ ಅವಳ ಮನಸ್ಸು ಮತ್ತೆ ಆತಂಕದ ಗೂಡಾಗಿಬಿಟ್ಟಿತು. ಏನೇನೋ ಯೋಚನೆಗಳು ಮುತ್ತಿಕೊಂಡು ಅಶಾಂತಳಾದವಳು ಅದರಿಂದ ಹೊರಬರಲು ಅಕ್ಕಯಕ್ಕನೊಂದಿಗೆ ಮಾತಿಗಿಳಿತಳು. ಆದರೆ ಅಲ್ಲೂ ಅದೇ ಸಂಗತಿಗಳು ಅವಳನ್ನು ಕಾಡಿದಾಗ ಇನ್ನಷ್ಟು ವಿಚಲಿತಳಾದಳು. ಸರೋಜಾಳ ತೊಳಲಾಟವನ್ನು ಗಮನಿಸಿದ ಅಕ್ಕಯಕ್ಕ ಅವಳನ್ನು ಮೃದುವಾಗಿ ಸಾಂತ್ವನಿಸಿದಳು. ಅದರಿಂದ ಸ್ವಲ್ಪ ಗೆಲುವಾದವಳು ನೆರೆಕರೆಯ ಮಕ್ಕಳೊಂದಿಗೆ ಆಟವಾಡುತ್ತಿದ್ದ ತನ್ನ ಮಕ್ಕಳನ್ನು ಕರೆದು ಸ್ನಾನ ಮಾಡಿಸಿ ಊಟ ಬಡಿಸಿದಳು. ಬಳಿಕ ತಾನೂ ಉಂಡು ಅವರೊಂದಿಗೆ ಮಲಗಿಕೊಂಡಳು. ಆದರೆ ನಡುರಾತ್ರಿಯವರೆಗೆ ನಿದ್ದೆ ಹತ್ತದೆ ಹೊರಳಾಡಿದಳು. ಇಂದೇಕೋ ಅವಳನ್ನು ತನ್ನ ಹೆತ್ತವರ, ಒಡಹುಟ್ಟಿದವರ ಮತ್ತು ತನ್ನೂರಿನ ಮಧುರ ನೆನಪುಗಳೆಲ್ಲ ಆವರಿಸಿ ಕಾಡತೊಡಗಿದವು. ಅಮ್ಮ ಅಪ್ಪನ ವಾತ್ಸಲ್ಯಪೂರ್ಣ ನೆನಪು ದುಃಖವನ್ನು ಒತ್ತರಿಸಿತು. ಮೌನವಾಗಿ ಕಣ್ಣೀರಿಡುತ್ತ ನಿದ್ರೆಗೆ ಜಾರಿದವಳು ಬೆಳಗಿನ ಜಾವದ ಕೋಳಿ ಕೂಗಿದಾಗ ಎಚ್ಚರಗೊಂಡಳು. ‘ಪಾರ್ಟಿ ಮುಗಿದ ಕೂಡಲೇ ಬರುತ್ತೇನೆ. ಸ್ವಲ್ಪ ತಡವಾದರೆ ಹೆದರಬೇಡ!’ ಎಂದು ಹೋಗಿದ್ದ ಗಂಡ ಬೆಳಕು ಹರಿದರೂ ಬಾರದಿದ್ದುದು ಅವಳಲ್ಲಿ ಮತ್ತೆ ಚಿಂತೆಯನ್ನು ಮೂಡಿಸಿತು. ಆದರೆ, ಪಾರ್ಟಿಯ ಕೆಲಸಕಾರ್ಯಗಳೆಲ್ಲ ಮುಗಿವಾಗ ಎಷ್ಟು ಹೊತ್ತಾಗಿತ್ತಾ ಏನಾ? ಆಯಾಸವಾಗಿ ಅಲ್ಲೇ ಮಲಗಿರಬಹುದು. ಪಾಪ! ಅವರೂ ನಮಗಾಗಿಯೇ ದುಡಿಯುತ್ತಿರುವುದಲ್ಲವಾ ಇರಲಿ. ‘ಇನ್ನು ಮುಂದೆ ರಾತ್ರಿ ಹೊತ್ತು ಗಂಡನನ್ನು ಉಳಿಸಿಕೊಳ್ಳಬೇಡಿ!’ ಅಂತ ನಾನೇ ಸಾಹೇಬರಿಗೆ ಹೇಳಿಬಿಟ್ಟರಾಯ್ತು! ಎಂದುಕೊoಡವಳು ಎದ್ದು ಕಸಮುಸುರೆ ತಿಕ್ಕಿ ಮಕ್ಕಳನ್ನೆಬ್ಬಿಸಿ ಅವರಿಗೆ ಚಹಾ ತಿಂಡಿ ಮಾಡಿಕೊಟ್ಟು ಬಟ್ಟೆಬರೆ ಒಗೆಯಲು ಹೊರಡಬೇಕೆಂಬಷ್ಟರಲ್ಲಿ ಸಾಹೇಬರ ಆಳು ಅಕ್ಬರ್ ಬರುತ್ತಿರುವುದು ಕಾಣಿಸಿತು. ಅವನು ಬಂದವನು, ‘ಹೋಯ್ ಸರೋಜಕ್ಕಾ ಸಾಹೇಬರು ನಿಮ್ಮನ್ನು ಬರಹೇಳಿದ್ದಾರೆ. ಈಗಲೇ ಬರಬೇಕಂತೆ…!’ ಎಂದು ಅಂಗಳದಲ್ಲಿ ಆಟವಾಡುತ್ತಿದ್ದ ಅವಳ ಮಕ್ಕಳತ್ತ ಮುಗುಳುನಗೆ ಬೀರುತ್ತ ಅಂದಾಗ ಸರೋಜಾಳಿಗೆ ಮರಳಿ ಕಳವಳವೆದ್ದಿತು. ಆದರೆ ಅಕ್ಬರನ ನಿರಾತಂಕ ಮುಖವು, ಥೂ! ಅಂಥದ್ದೇನೂ ಆಗಲಿಕ್ಕಿಲ್ಲ. ನಾನೊಬ್ಬಳು ಸುಖಾಸುಮ್ಮನೆ ಭಯಪಡುತ್ತೇನೆ! ಎಂದು ಬೈದುಕೊಂಡವಳು, ‘ಯಾಕಂತೆ? ಇವರು ಎಲ್ಲಿದ್ದಾರೆ…?’ ಎಂದು ಪ್ರಶ್ನಿಸಿದಳು.
‘ಗೊತ್ತಿಲ್ಲಕ್ಕಾ…! ಲಕ್ಷ್ಮಣ್ ಭಾಯ್ ನಿನ್ನೆನೇ ಶಿವಕಂಡಿಕೆಗೆ ಹೋಗಿದ್ದಾರೆ!’ ಎಂದಷ್ಟೇ ಹೇಳಿದ ಅವನು ಮುಂದೆ ತನಗೇನೂ ತಿಳಿಯದೆಂಬoತೆ ನಗುತ್ತ ನಿಂತುಕೊoಡ. ‘ಓಹೋ ಹೌದಾ…ಸರಿ, ಬರುತ್ತೇನೆ!’ ಎಂದ ಸರೋಜ, ಅಕ್ಕಯಕ್ಕನಿಗೆ ವಿಷಯ ತಿಳಿಸಿ ಅವನೊಂದಿಗೆ ಹೊರಟಳು.
ಸಾಹೇಬರ ಶ್ರೀಮಂತಿಕೆಯ ಕುರಿತು ಗಂಡನಿoದ ಆಗಾಗ್ಗೆ ಕೇಳಿಸಿಕೊಳ್ಳುತ್ತಿದ್ದ ಸರೋಜ ಇಂದು ತಾನೂ ಅವರ ಮನೆಯ ಮುಂದೆ ಬಂದು ನಿಂತಿದ್ದಳು. ಆವರೆಗೆ ಅಂಥ ಬಂಗಲೆಯೊoದನ್ನು ಕಂಡಿರದ ಅವಳು ಅದರ ವೈಭವಕ್ಕೆ ವಿಸ್ಮಯಗೊಂಡಳು. ಆ ಮನೆಯ ದೊಡ್ಡ ಗೇಟನ್ನು ಕಂಡವಳು, ಅಬ್ಬಾ ದೇವರೇ! ಈ ಗೇಟಿಗೆ ತಗುಲುವ ಖರ್ಚಿನಿಂದಲೇ ನಮ್ಮಂಥ ಬಡಕುಟುಂಬಗಳಿಗೆ ಎರಡು ಮೂರು ಚಂದದ ಮನೆಗಳಾದಾವು! ಎಂದುಕೊoಡವಳಲ್ಲಿ ವಿಷಾದದ ನಗು ಮೂಡಿತು. ಅಷ್ಟರಲ್ಲಿ ಗೇಟಿನ ಕಿಂಡಿಯಿoದ ಸರೋಜಳನ್ನೂ, ಅಕ್ಬರನನ್ನೂ ಗಮನಿಸಿದ ಸೇವಕನೊಬ್ಬ ಗೇಟು ತೆರೆದು ಒಳಗೆ ಬಿಟ್ಟ. ಅದೇ ಹೊತ್ತಿಗೆ ಉಸ್ಮಾನ್ ಸಾಹೇಬರ ಪತ್ನಿ ಕೈರುನ್ನೀಸಾ ಬೇಗಮ್ ತನ್ನ ಗೋಧಿ ಬಣ್ಣದ ದಢೂತಿ ದೇಹವನ್ನು ಬಳುಕಿಸುತ್ತ ಹೊರಗೆ ಬಂದವಳು ಅಂಗಳದಲ್ಲಿ ನಿಂತಿದ್ದ ಸರೋಜಳನ್ನು ಅಚ್ಚರಿಯಿಂದ ದಿಟ್ಟಿಸಿದಳು. ಗುರುತು ಹತ್ತದಿದ್ದಾಗ ಹುಬ್ಬುಗಂಟಿಕ್ಕಿ ಅಕ್ಬರನತ್ತ ತಿರುಗಿ, ‘ರ‍್ಲಾ ಇದ್…? (ಯಾರೋ ಇದು…?)’ ಎಂದಳು.
‘ಲಕ್ಷ್ಮಣಡೆ ಪೆಞಯಿ ಬೀಬೀ…!’ ಎಂದು ಅವನು ಅದೇ ಮಂದಹಾಸದಿoದ ಉತ್ತರಿಸಿದ.
‘ಓಹೋ, ಒಕ್ಕಾ…?’ ಎಂದವಳ ವಿಶಾಲ ಮುಖ ಕ್ಷಣಹೊತ್ತು ಕಪ್ಪಿಟ್ಟಿತು. ಅದನ್ನು ಮರೆಮಾಚಲೆತ್ನಿಸುತ್ತ, ‘ಬಾ ಸರೋಜ ಕುಳಿತುಕೋ. ಸಾಹೇಬರು ಒಳಗಿದ್ದಾರೆ. ಕರೆಯುತ್ತೇನೆ….!’ ಎಂದು ಒಳಗೆ ನಡೆದಳು. ತನ್ನ ಗಂಡನ ಹೆಸರೆತ್ತುತ್ತಲೇ ಸಾಹೇಬರ ಹೆಂಡತಿಯ ಮುಖ ಯಾಕೆ ಕಳೆಗುಂದಿತು? ಎಂದು ಯೋಚಿಸಿದ ಸರೋಜ ಗಾಬರಿಯಿಂದ ಹೋಗಿ ವರಾಂಡದ ಬೆತ್ತದ ಕುರ್ಚಿಯಲ್ಲಿ ಕುಳಿತಳು. ಸ್ವಲ್ಪಹೊತ್ತಿನಲ್ಲಿ ಸಾಹೇಬರು ಹೊರಗೆ ಬಂದರು. ಸರೋಜ ಎದ್ದು ನಿಂತು ಅವರಿಗೆ ನಮಸ್ಕರಿಸಿದಳು. ಸಾಹೇಬರು ಕಸಿವಿಸಿಯಿಂದಲೇ ಅವಳನ್ನು ದಿಟ್ಟಿಸಿದವರು ದೇಶಾವರಿ ನಗೆ ಬೀರುತ್ತ, ‘ಓಹೋ ಸರೋಜನಾ ಮಾರಾಯ್ತೀ… ಕುಳಿತುಕೋ ಕುಳಿತುಕೋ…!’ ಎಂದು ತಾವೂ ಅವಳೆದುರು ಕುಳಿತರು. ಬಳಿಕ ಹೆಂಡತಿಯನ್ನು ಕರೆದು ತಂಪು ಪಾನೀಯ ತರಲು ಆಜ್ಞಾಪಿಸಿದರು. ತುಸುಹೊತ್ತಿನಲ್ಲಿ ಬಡಕಲು ಹುಡುಗಿಯೊಬ್ಬಳು ಬಂದು ಒಂದು ಲೋಟ ಶರಬತ್ತನ್ನು ಸರೋಜಾಳಿಗೆ ನೀಡಿ ಒಳಗೆ ಹೋದಳು. ಸರೋಜ ಸಂಕೋಚದಿoದ ಕುಡಿದಳು.
‘ಮಕ್ಕಳು ಹೇಗಿದ್ದಾರೆ ಸರೋಜಾ, ಶಾಲೆಗೆ ಹೋಗ್ತಾರಾ ಎಷ್ಟನೇ ಕ್ಲಾಸು…?’ ಸಾಹೇಬರು ಮಾತನಾಡಲು ವಿಷಯ ಸಿಗದೆ ಕೇಳಿದರು.
‘ಚೆನ್ನಾಗಿದ್ದಾರೆ ಸಾಹೇಬರೇ. ದೊಡ್ಡವಳು ಒಂದನೇ ತರಗತಿ. ಸಣ್ಣವಳನ್ನು ಬರುವ ವರ್ಷ ಸೇರಿಸಬೇಕಷ್ಟೇ!’ ಎಂದು ಸರೋಜ ಗಂಡನ ಯೋಚನೆಯಲ್ಲೇ ಅಂದಳು.
‘ಲಕ್ಷ್ಮಣ, ನಿಮ್ಮನ್ನೆಲ್ಲ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾನಾ ಇಲ್ಲವಾ…?’ ಸಾಹೇಬರು ಮತ್ತೆ ಒತ್ತಿ ಕೇಳಿದರು.
‘ಹೋ, ಚೆನ್ನಾಗಿ ನೋಡಿಕೊಳ್ಳುತ್ತಾರೆ!’ ಎಂದಳವಳೂ ಕಾಳಜಿಯಿಂದ.
‘ಹೌದು ಹೌದು. ಅವನು ಬಹಳ ಒಳ್ಳೆಯ ಮನುಷ್ಯ. ಇಲ್ಲೂ ನನ್ನ ಬಲಗೈ ಭಂಟನoತೆಯೇ ಇದ್ದಾನೆ ಅವನು!’ ಎಂದು ಸಾಹೇಬರು ನಗುತ್ತ ಪ್ರಶಂಶಿಸಿದವರು ಮುಂದೇನೋ ಹೇಳಲು ತಡವರಿಸಿದರು. ಅದನ್ನು ಗಮನಿಸಿದ ಸರೋಜಾಳಿಗೆ ಭಯವಾಯಿತು. ‘ಏನಾಯ್ತು ಸಾಹೇಬರೇ, ನನ್ನ ಗಂಡ ಎಲ್ಲಿದ್ದಾರೆ…?’ ಎಂದು ದುಗುಡದಿಂದ ಕೇಳಿದಳು.
‘ಅರೇ! ಏನಿದು ಸರೋಜಾ? ನೀನು ಗಾಬರಿಯಾಗುವಂಥದ್ದೇನೂ ಆಗಿಲ್ಲ ಮಾರಾಯ್ತೀ. ಒಂದು ಸಣ್ಣ ವಿಷಯ ಹೇಳಬೇಕಿತ್ತಷ್ಟೇ…!’ ಎಂದ ಸಾಹೇಬರು ಮಾತು ನಿಲ್ಲಿಸಿ ಅವಳನ್ನು ದಿಟ್ಟಿಸಿದರು.
ಆಗ ಸರೋಜ ಇನ್ನೂ ವಿಚಲಿತಳಾದವಳು, ‘ಅಯ್ಯೋ ಅವರಿಗೇನಾಯ್ತು ಸಾಹೇಬರೇ…? ನಿನ್ನೆ ರಾತ್ರಿ ತಡವಾದರೂ ಬರುತ್ತೇನೆ ಅಂದಿದ್ದವರು ಬರಲೇ ಇಲ್ಲ ಯಾಕೆ? ಏನಾದರೂ ಅನಾಹುತವಾಯ್ತಾ… ಹೇಳಿ ಸಾಹೇಬರೇ…?’ ಎಂದು ಆರ್ದ್ರವಾಗಿ ಯಾಚಿಸಿದವಳಿಗೆ ಕಣೀರುಕ್ಕಿ ಬಂತು.
‘ನೋಡು ಸರೋಜಾ, ನೀನು ಇಷ್ಟೊಂದು ಹೆದರಿದರೆ ಇರುವ ವಿಷಯವನ್ನು ನಾನು ಹೇಳುವುದಾದರೂ ಹೇಗೆ…?’ ಎಂದು ಸಾಹೇಬರು ಬೇಸರದಿಂದ ಅಂದರು. ಸರೋಜ ರಪರಪನೇ ಕಣ್ಣೀರೊರೆಸಿಕೊಂಡು ಗಂಭೀರಳಾಗಿ ಕುಳಿತಳು. ಸಾಹೇಬರು ಮಾತು ಮುಂದುವರೆಸಿದರು. ‘ಲಕ್ಷ್ಮಣ ನಿನ್ನೆ ರಾತ್ರಿಯೆಲ್ಲ ಪಾರ್ಟಿಗೆ ಬಂದವರನ್ನು ಸಂಭಾಳಿಸಿಕೊoಡು ಇಲ್ಲೇ ಇದ್ದ ಪಾಪ! ಪಾರ್ಟಿ ಮುಗಿಯುವುದು ಸ್ವಲ್ಪ ತಡವಾಯಿತು. ಬಳಿಕ ಮನೆಗೆ ಹೊರಟಿದ್ದ. ಅದೇ ಹೊತ್ತಿಗೆ ನಮ್ಮ ಮರದ ವ್ಯವಹಾರದಲ್ಲೊಂದು ಸಣ್ಣ ತೊಂದರೆಯಾಯಿತು. ಅದನ್ನು ನಿಭಾಯಿಸಲು ಹೋಗಿ ಈಗ ಪೋಲಿಸ್ ಸ್ಟೇಷನ್ನಿನಲ್ಲಿದ್ದಾನೆ. ಹ್ಞಾಂ! ನೀನು ಹೆದರುವಂಥದ್ದೇನೂ ಆಗಿಲ್ಲ. ಅವನು ನನ್ನ ಪರವಾಗಿ ಅಲ್ಲಿದ್ದಾನಷ್ಟೆ. ಎರಡು ಮೂರು ದಿವಸದೊಳಗೆ ಅವನನ್ನು ಬಿಡಿಸಿಕೊಂಡು ಬಂದು ನಿನಗೊಪ್ಪಿಸುವ ಜವಾಬ್ದಾರಿ ನನ್ನದು. ಆದ್ದರಿಂದ ನೀನು ಯಾವುದನ್ನೂ ಚಿಂತಿಸದೆ ಧೈರ್ಯವಾಗಿ ಮನೆಗೆ ಹೋಗು!’ ಎಂದು ಸಾಹೇಬರು ತಮ್ಮ ಪಾಲಿಗೆ ಅದೆಲ್ಲ ಯಕಃಶ್ಚಿತ್ ಸಂಗತಿಯೆoಬoತೆ ಹೇಳಿದರು.
ಆದರೆ ಸರೋಜಾಳಿಗೆ ದುಃಖ ಉಮ್ಮಳಿಸಿ ಬಂತು. ‘ಅಯ್ಯಯ್ಯೋ ದೇವರೇ…! ಅವರು ಅಂಥ ತಪ್ಪನೇನು ಮಾಡಿದರು ಸಾಹೇಬರೇ? ಮೊದಲೇ ಮೂಗಿನ ಮೇಲೆ ಕೋಪವಿರುವ ಮನುಷ್ಯ. ಏನು ಗಲಾಟೆ ಮಾಡಿದರೋ…! ಪರಮಾತ್ಮಾ ಇನ್ನು ನನ್ನ ಸಂಸಾರದ ಗತಿಯೇನಪ್ಪಾ…!’ ಎನ್ನುತ ಅಳತೊಡಗಿದಳು. ಅವಳ ಅಳು ಕೇಳಿದ ಕೈರುನ್ನೀಸಾ ಹೊರಗ್ಹೋಡಿ ಬಂದವಳು, ‘ಛೇ, ಛೇ! ಏನಿದು ಸರೋಜಾ…! ಅಂಥದ್ದೇನೂ ಆಗಿಲ್ಲವನಾ. ಧೈರ್ಯ ತಂದುಕೋ. ನಿನ್ನೆ ಶನಿವಾರ ಅವನು ಸ್ಟೇಷನ್ನಿಗೆ ಹೋಗಿದ್ದ. ಆದರೆ ಇವತ್ತು ಕೋರ್ಟಿಗೆ ರಜೆ. ನಾಳೆ ಬೆಳಿಗ್ಗೆನೇ ಇವರು ಅವನನ್ನು ಜಾಮೀನಿನ ಮೇಲೆ ಬಿಡಿಸಿಕೊಂಡು ಬರುತ್ತಾರೆ. ಅರ್ಥವಾಯ್ತಾ…? ನೀನೀಗ ತಲೆಕೆಡಿಸಿಕೊಳ್ಳದೆ ಮನೆಗೆ ಹೋಗಿ ಆರಾಮವಾಗಿರು ಹ್ಞೂಂ!’ ಎಂದು ಸಮಾಧಾನಿಸಿದಳು.
‘ಹೌದು ಮಾರಾಯ್ತಿ, ನಮ್ಮ ವ್ಯವಹಾರದಲ್ಲೆಲ್ಲ ಇದು ಮಾಮೂಲಿ ಸಂಗತಿ. ಅಲ್ನೋಡು ಓ, ಅಲ್ಲೊಬ್ಬ ನಿಂತಿದ್ದಾನಲ್ಲ ನಮ್ಮ ಕೆಲಸದವನು ದ್ಯಾವಪ್ಪ ಅಂತ. ಅವನೂ ನಮಗಾಗಿ ಕೆಲವು ಸಲ ಜೈಲಿಗೆ ಹೋಗಿ ಬಂದವನು!’ ಎಂದು ಸಾಹೇಬರು ಸರೋಜಾಳಿಗೆ ಧೈರ್ಯ ತುಂಬಲು ಆ ಬಡ ಕಾರ್ಮಿಕನತ್ತ ಬೊಟ್ಟು ಮಾಡಿದರು. ಆ ಆಸಾಮಿ ಪಾಪ ಸಾಹೇಬರ ಹಾಳು ದಂಧೆಯ ದುಷ್ಪರಿಣಾಮ ಭೋಗಿಸಲೆಂದೇ ಹುಟ್ಟಿದಂತಿದ್ದವನು ಸಾಹೇಬರು ತನ್ನ ಹೆಸರೆತ್ತುತ್ತಲೇ ರಪ್ಪನೆ ಸರೋಜಾಳತ್ತ ತಿರುಗಿ ಎದೆ ಸೆಟೆಸಿ ನಿಂತು ತಾನೇನೋ ಘನಕಾರ್ಯ ಸಾಧಿಸಿದವನಂತೆ ವ್ಯಂಗ್ಯವಾಗಿ ನಕ್ಕ. ಆದರೂ ಸರೋಜಾಳ ಆತಂಕ ಕಡಿಮೆಯಾಗಲಿಲ್ಲ. ‘ಎಂತದಾ ಸಾಹೇಬರೇ…, ನನಗೊಂದೂ ಅರ್ಥವಾಗುವುದಿಲ್ಲ. ಆದರೆ ನನಗೂ, ನನ್ನೆರಡು ಹೆಣ್ಣು ಮಕ್ಕಳಿಗೂ ನನ್ನ ಗಂಡನೇ ದಿಕ್ಕು! ಹುಟ್ಟಿದ ಊರನ್ನೂ, ಹೆತ್ತವರನ್ನೂ ಬಿಟ್ಟು ಬಂದಿರುವ ಪರದೇಸಿಗಳು ನಾವು. ಅವರಿಲ್ಲದ ಬದುಕನ್ನು ನಮ್ಮಿಂದ ನೆನೆಸಿಕೊಳ್ಳಲೂ ಸಾಧ್ಯವಿಲ್ಲ. ನಿಮ್ಮ ದಮ್ಮಯ್ಯ! ಅವರನ್ನು ಕೂಡಲೇ ಬಿಡಿಸಿಕೊಂಡು ಬನ್ನಿ…!’ ಎಂದೆನ್ನುತ್ತ ಅವರ ಕಾಲಿಗೇ ಬಿದ್ದುಬಿಟ್ಟಳು. ಅದನ್ನು ಕಂಡ ಕೈರುನ್ನೀಸಾಳಿಗೆ ಕರುಣೆಯಿಂದಲೋ, ಪಾಪಭೀತಿಯಿಂದಲೋ ಹೊಟ್ಟೆ ಹಿಂಡಿದoತಾಯಿತು. ಅವಳು ರಪ್ಪನೆ ಸರೋಜಾಳನ್ನೆಬ್ಬಿಸಿ ತಬ್ಬಿಕೊಂಡು, ‘ಹೆದರಬೇಡ ಸರೋಜ. ನಾಳೆ ಇಷ್ಟೊತ್ತಿಗೆ ನಿನ್ನ ಗಂಡ ನಿನ್ನ ಮನೆಯಲ್ಲಿರುತ್ತಾನೆ. ನಮ್ಮನ್ನು ನಂಬು!’ ಎಂದು ವಿಶ್ವಾಸದಿಂದ ಹೇಳಿ ಅವಳನ್ನು ಸಮಾಧಾನಿಸಿದಳು. ಅದರಿಂದ ಸರೋಜಾ ಸ್ವಲ್ಪ ಸ್ಥಿಮಿತಕ್ಕೆ ಬಂದವಳು ಮನೆಗೆ ಹಿಂದಿರುಗಿದಳು.
ಅತ್ತ ಸರೋಜಾ ಮನೆಯ ಗೇಟು ದಾಟುತ್ತಲೇ ಕೈರುನ್ನೀಸಾ ತಟ್ಟನೆ ತನ್ನ ಗಂಡನತ್ತ ತಿರುಗಿ ತೀಕ್ಷ÷್ಣ ದೃಷ್ಟಿ ಬೀರಿದವಳು, ‘ಎಂಥದ್ರೀ ಇದೆಲ್ಲ…? ಇಷ್ಟೊಂದು ನೀತಿಗೆಟ್ಟ ಮಾರ್ಗದಿಂದಲೂ ನಾವಿನ್ನೂ ಇನ್ನೂ ಸಂಪಾದಿಸಬೇಕಾ…? ಇಷ್ಟು ವರ್ಷ ದುಡಿದು ಕೂಡಿಟ್ಟಿದ್ದು ಸಾಲುವುದಿಲ್ಲವಾ ನಮಗೆ…? ಇಂಥ ಪಾಪದ ಜನರ ಬಾಳು ಹಾಳು ಮಾಡಿದರೆ ಅದರ ಶಾಪ ನಮಗೆ ತಟ್ಟಿದಿರುತ್ತದಾ ಹೇಳಿ…? ಆದಷ್ಟು ಬೇಗ ಅವಳ ಗಂಡನನ್ನು ಬಿಡಿಸಿಕೊಂಡು ಬಂದು ಅವಳಿಗೊಪ್ಪಿಸಿ ಬಿಡಿ!’ ಎಂದು ಒರಟಾಗಿ ನುಡಿದು ಧುರಧುರನೇ ಒಳಗೆ ನಡೆದುಬಿಟ್ಟಳು. ಹೆಂಡತಿಯ ಮಾತು ಮತ್ತು ಅವಳ ಅಸಹನೆಯನ್ನು ಕಂಡ ಸಾಹೇಬರು, ಯಾ ಅಲ್ಲಹ್! ಇವಳೇನಾ ಹೀಗೆ ಮಾತಾಡಿದ್ದು…!? ಎಂದು ಆಘಾತಗೊಂಡರು. ಬಳಿಕ ಅಲ್ಲಾ, ದಿನನಿತ್ಯ ಕಟ್ಟು ಕಟ್ಟು ನೋಟುಗಳನ್ನು ತಂದು ಇವಳ ಮಡಿಲಿಗೆ ಸುರಿಯುತ್ತಿದ್ದಾಗ ಎಂಥ ಮೆಚ್ಚುಗೆ…! ಅದೆಂಥ ಪ್ರೀತಿ ತೋರಿಸುತ್ತಿದ್ದಳು! ಈಗ ನೋಡಿದರೆ ಪ್ಲೇಟನ್ನೇ ತಿರುಗಿಸಿಬಿಟ್ಟಿದ್ದಾಳಲ್ಲ…! ಥತ್, ತೇರಿಕೆ…! ಎಂಥ ಹೆಂಗಸರಪ್ಪ ಇವರೆಲ್ಲ? ಎಂದು ಅಸಹನೆಯಿಂದ ಕುಳಿತುಬಿಟ್ಟರು. ಆದರೂ ಹೆಂಡತಿಯ ಮಾತು ಅವರನ್ನು ಸರಿಯಾಗಿ ಚುಚ್ಚಿತು. ಹಾಗಾಗಿ ಅದೇನೇ ಆದರೂ ಲಕ್ಷ್ಮಣನನ್ನು ತಾನು ಜೈಲು ಸೇರಲು ಬಿಡಬಾರದು! ಎಂದು ನಿರ್ಧರಿಸಿದರು.
(ಮುಂದುವರೆಯುವುದು)