
ಧಾರವಾಹಿ 31
ಸರೋಜ, ಉಸ್ಮಾನ್ ಸಾಹೇಬರ ಮನೆಯಿಂದ ಹಿಂದಿರುಗುವ ಹೊತ್ತಿಗೆ ಸುಡುಬೇಸಗೆಯ ಸೂರ್ಯನ ಝಳ ಆಗಷ್ಟೆ ತೀಕ್ಷ್ಣಗೊಳ್ಳುತ್ತಿತ್ತು. ದುಃಖ, ಹತಾಶೆಯಿಂದ ಕುಂದಿದ್ದ ಅವಳು ಬಿಸಿಲಿನ ಪರಿವೆಯೇ ಇಲ್ಲದೆ ಮಣ್ಣಿನ ರಸ್ತೆಯಲ್ಲಿ ಹೆಜ್ಜೆ ಹಾಕುತ್ತಿದ್ದಳು. ತಲೆಯೊಳಗೆ ಹತ್ತಾರು ಯೋಚನೆಗಳು ಸುಳಿಯುತ್ತಿದ್ದವು. ಅಯ್ಯೋ ದೇವರೇ…! ತನ್ನ ಗಂಡ ಯಾಕಾದರೂ ಈ ಹಾಳು ಸಾಹೇಬನ ಸಂಗ ಮಾಡಿದರಾ…? ಹೊರಗೆಲ್ಲಾದರೂ ಕೂಲಿ ಕೆಲಸ ಮಾಡಿಕೊಂಡಿದ್ದರೂ ನಮಗೆ ಈ ಅವಸ್ಥೆ ಬರುತ್ತಿರಲಿಲ್ಲ! ಎಂದುಕೊoಡವಳು, ತಾನಾದರೂ ಮಾಡಿದ್ದೇನು? ಅವರು ತಂದು ಕೊಡುತ್ತಿದ್ದ ದುಡ್ಡು, ಬಂಗಾರವನ್ನು ಕಷ್ಟಪಟ್ಟು ಸಂಪಾದಿಸಿಯೇ ತರುತ್ತಿದ್ದರು ಎಂದುಕೊoಡೆನಲ್ಲ! ಆಗಲೇ ಸ್ವಲ್ಪ ಯೋಚಿಸುತ್ತಿದ್ದರೇ…? ಎಂದು ಮರುಗಿದಳು. ಮರುಕ್ಷಣ, ಹೌದು ಯೋಚಿಸಬಹುದಿತ್ತು. ಆದರೆ ಇವರು, ‘ನಾನೀಗ ಕೂಲಿ ಕೆಲಸದವನಲ್ಲ ಮಾರಾಯ್ತೀ, ಸಾಹೇಬರ ವ್ಯವಹಾರವನ್ನೆಲ್ಲ ನೋಡಿಕೊಳ್ಳುವವನು. ಅಂದರೆ ಅವರ ಮ್ಯಾನೇಜರ್!’ ಅಂತ ಗತ್ತಿನಿಂದ ಹೇಳುತ್ತಿದ್ದುದನ್ನು ನಾನೂ ನಂಬಿಬಿಟ್ಟೆ! ಎಂದುಕೊoಡವಳಿಗೆ ಗಂಡನ ಮೇಲೆ ಕೆಟ್ಟ ಅಸಹನೆ ಎದ್ದಿತು. ಥೂ! ಇವರ ಮ್ಯಾನೇಜರ್‌ಗಿರಿಗೆ ಬೆಂಕಿಬಿತ್ತು. ಯಾವುದಕ್ಕೂ ಒಮ್ಮೆ ಮನೆಗೆ ಬಂದುಕೊಳ್ಳಲಿ. ಹಿಡಿದ ಭೂತ ಬಿಡಿಸುತ್ತೇನೆ. ಹೀಗೆಯೇ ಬಿಟ್ಟರೆ ನನ್ನ ಸಂಸಾರ ಬೀದಿ ಪಾಲಾಗುವುದು ಖಂಡಿತಾ. ಆ ಸಾಹೇಬನ ಕೆಲಸ ಹಾಳಾಗಿ ಹೋಗಲಿ. ಅದಿಲ್ಲದಿದ್ದರೆ ಬೇರೆ ಕೆಲಸ ಸಿಗುವುದಿಲ್ಲವಾ? ಗಾರೆ ಕೆಲಸಕ್ಕೆ ಹೋಗಲಿ ಅಥವಾ ಮುಂಚಿನoತೆ ಮನೆಯಲ್ಲೇ ಕುಳಿತು ಬೀಡಿ ಕಟ್ಟಿಕೊಂಡಿರಲಿ ಅಥವಾ ನಾನೇ ದುಡಿದು ಸಾಕುತ್ತೇನೆ. ಆದರೆ ಇನ್ನು ಮುಂದೆ ಇಂಥ ದೊಡ್ಡ ಮನುಷ್ಯರ ಸಹವಾಸವೆಲ್ಲ ನಮಗೆ ಬೇಡವೇ ಬೇಡ ಅಂತ ಇವರಿಗೆ ಖಡಾಖಂಡಿತವಾಗಿ ಹೇಳಿಬಿಡಬೇಕು! ಎಂದು ನಿರ್ಧರಿಸಿದಳು. ಆಗ ಅವಳ ಮನಸ್ಸು ಸ್ವಲ್ಪ ಹಗುರವಾಯಿತು.

ಮನೆಗೆ ಬಂದವಳು ಅಕ್ಕಯಕ್ಕನೆದುರು ಕುಳಿತು ಕಣ್ಣೀರಿಡುತ್ತ ವಿಷಯ ತಿಳಿಸಿದಳು. ಹಿರಿಯ ಮಗಳು ಶಾರದಾಳಿಗೆ ಸುಮಾರಾಗಿ ಬುದ್ಧಿ ತಿಳಿಯುತ್ತಿತ್ತು. ಅವಳೂ ಅಳತೊಡಗಿದಳು. ನಾಲ್ಕರ ಬಾಲಕಿ ಪ್ರಮೀಳಾಳಿಗೆ ಏನೂ ಅರ್ಥವಾಗದೆ ದುಗುಡದಿಂದ ಅಮ್ಮನ ಮಡಿಲಿಗೊರಗಿದಳು. ಅಷ್ಟು ಕೇಳಿದ ಅಕ್ಕಯಕ್ಕನೂ ಅತ್ತಳು. ಬಳಿಕ ಸಾವರಿಸಿಕೊಂಡು, ‘ಇನ್ನೇನು ಮಾಡುವುದಕ್ಕಾಗುತ್ತದೆ ಮಗಾ…? ಆಗಿದ್ದಾಗಿ ಹೋಯಿತು. ಯಾವುದಕ್ಕೂ ಸೋಮವಾರ ಬರುತ್ತಾನಲ್ಲ. ಆಮೇಲೆ ಹೇಗಾದರೂ ಮಾಡಿ ಆ ಸಾಹೇಬನ ಸಂಗದಿoದ ನೀನವನನ್ನು ಬಿಡಿಸಬೇಕು. ಅಷ್ಟು ಮಾಡಿದರೆ ನಿನ್ನ ಸಂಸಾರ ಉಳಿದಂತೆಯೇ. ಈಗ ಅಳು ನಿಲ್ಲಿಸಿ ಆ ಮಕ್ಕಳಿಗೊಂದಿಷ್ಟು ಅನ್ನ ಬೇಯಿಸಿ ಹಾಕು. ಪದಾರ್ಥಕ್ಕೆ ಬೇಕಿದ್ದರೆ ಒಣ ಮೀನಿದೆ. ತೆಗೆದುಕೊಂಡು ಹೋಗು!’ ಎಂದು ಅಕ್ಕರೆಯಿಂದ ಹೇಳಿದಳು. ಅದರಿಂದ ತುಸು ಸಮಾಧಾನಗೊಂಡ ಸರೋಜ ಎದ್ದು ಹೋಗಿ ಮಕ್ಕಳಿಗೆ ಗಂಜಿ ಮಾಡಿ ಬಡಿಸಿ, ಒಣ ಮೀನು ಹುರಿದು ಮಕ್ಕಳೊಂದಿಗೆ ತಾನೂ ಎರಡು ತುತ್ತು ಉಂಡೆದ್ದು ನಿತ್ಯದ ಕೆಲಸಕಾರ್ಯದಲ್ಲಿ ತೊಡಗಿ ಗಂಡನ ಕುರಿತೇ ಚಿಂತಿಸುತ್ತ ಸಮಯ ಕಳೆದಳು. ಕತ್ತಲಾಗುತ್ತ ಚಾಪೆಗೊರಗಿದಳು. ಆದರೆ ಹಿಂದಿನ ರಾತ್ರಿಯಂತೆ ಇಂದು ಕೂಡಾ ನಿದ್ದೆ ಹತ್ತಿರ ಅವಳ ಹತ್ತಿರ ಸುಳಿಯಲಿಲ್ಲ. ಈ ಬೆಳಕೊಂದು ಯಾವಾಗ ಹರಿಯುತ್ತದಪ್ಪಾ…? ಎಂದುಕೊoಡು ಹೊರಳಾಡಿದಳು. ಆದರೂ ಬೆಳಗಿನ ಮೊದಲ ಜಾವಕ್ಕೆ ಕೊಂಚ ಮಂಪರು ಹತ್ತಿತು. ಬಳಿಕ ಕೋಳಿ ಕೂಗುವ ಹೊತ್ತಿಗೆ ಎಚ್ಚರವಾದವಳಿಗೆ ಮತ್ತೆ ನಿದ್ರೆ ಬರಲಿಲ್ಲ. ಎದ್ದು ಮನೆಗೆಲಸದಲ್ಲಿ ತೊಡಗಿದಳು. ನಂತರ ಶಾರದಾಳನ್ನು ಶಾಲೆಗೆ ರಜೆ ಹಾಕಿಸಿ ತಂಗಿಯೊAದಿಗಿರಲು ಸೂಚಿಸಿ ಆತುರದಿಂದ ಸಾಹೇಬರ ಮನೆಗೆ ಓಡಿದಳು.
ಬೆಳ್ಳಂಬೆಳಗ್ಗೆಯೇ ಬಂದು ಮನೆಯೆದುರಿನ ತೆಂಗಿನಕಟ್ಟೆಯಲ್ಲಿ ಕುಳಿತ ಸರೋಜಾಳನ್ನು ಕಂಡ ಕೈರುನ್ನೀಸಾಳಿಗೆ ಇರಿಸುಮುರುಸಾಯಿತು. ಆದರೆ ಅವಳ ಸ್ಥಿತಿಯನ್ನು ಯೋಚಿಸಿದವಳಿಗೆ ಪಾಪವೆನಿಸಿತು. ‘ಬಾ, ಸರೋಜ ಮೇಲೆ ಕುಳಿತುಕೋ. ಅವರಿನ್ನೂ ಎದ್ದಿಲ್ಲ. ಪೊಲೀಸ್ ಸ್ಟೇಷನ್ ತೆರೆಯುವುದು ಒಂಬತ್ತು ಗಂಟೆಯ ನಂತರ ಅಲ್ಲವಾ. ಚಹಾ ಕುಡಿದು ಅವರೊಡನೆ ಮಾತಾಡಿ ಹೋಗು. ಅಗತ್ಯ ಬಿದ್ದರೆ ಹೇಳಿ ಕಳುಹಿಸುತ್ತೇನೆ ಬಂದುಬಿಡು!’ ಎಂದು ಸೌಜನ್ಯದಿಂದ ಮಾತಾಡಿದಳು. ಅಷ್ಟು ಕೇಳಿದ್ದೇ ಸರೋಜಾಳ ದುಃಖ ಕಟ್ಟೆಯೊಡೆಯಿತು. ‘ಅಯ್ಯೋ…! ಆ ಜೈಲಿನಲ್ಲಿ ಅವರ ಅವಸ್ಥೆ ಏನಾಗಿದೆಯಾ ದೇವರೇ…? ಇಲ್ಲ ಕೈರಕ್ಕಾ, ನಾನೀವತ್ತು ಅವರನ್ನು ನೋಡಲೇಬೇಕು. ಎಷ್ಟು ಹೊತ್ತಾದರೂ ಕಾಯುತ್ತೇನೆ!’ ಎಂದವಳು ಕಣ್ಣೀರೊರೆಸುತ್ತ ಪಡಸಾಲೆಗೆ ಬಂದು ಕುಳಿತಳು. ಕೈರುನ್ನಿಸಾಳಿಗೆ ಏನೂ ತೋಚದಾಯಿತು. ‘ಆಯ್ತು. ಆಯ್ತು. ಅವರನ್ನು ಎಬ್ಬಿಸುತ್ತೇನೆ. ಅಳಬೇಡ. ಎಲ್ಲ ಸರಿ ಹೋಗುತ್ತದೆ…!’ ಎಂದು ಸಂತೈಸಿ ಒಳಗೆ ಹೋಗಿ ಕೆಲಸದ ಹುಡುಗಿಯಿಂದ ಚಹಾ ಕಳುಹಿಸಿಕೊಟ್ಟವಳು ಗಂಡನನ್ನು ಎಚ್ಚರಿಸಲು ಹೋದಳು.
‘ಓ, ಮಾರಾಯ್ರೇ… ಸರೋಜಾ ಬಂದಿದ್ದಾಳೆ ಏಳ್ರೀ…!’ ಎಂದು ಒರಟಾಗಿ ಅಂದ ಹೆಂಡತಿಯ ಕೂಗಿಗೆ ಸಾಹೇಬರಿಗೆ ತಟ್ಟನೆ ನಿದ್ರಾಭಂಗವಾಗಿ ಅಸಹನೆಯಿಂದ ಎದ್ದು ಕುಳಿತರು. ಆದರೆ ಒಂದು ಗಂಟೆಯವರೆಗಿನ ನಿತ್ಯಕರ್ಮವನ್ನು ಮುಗಿಸಿಕೊಂಡೇ ಪಡಸಾಲೆಗೆ ಬಂದರು. ಸರೋಜಾಳನ್ನು ಕಂಡ ಅವರಿಗೂ ಕಿರಿಕಿರಿಯಾಯಿತು. ಆದರೂ ತೋರಿಸಿಕೊಳ್ಳದೆ, ‘ನೋಡು ಸರೋಜಾ, ಇನ್ನು ಸ್ವಲ್ಪ ಹೊತ್ತಲ್ಲಿ ಸ್ಟೇಷನ್ನಿಗೆ ಹೋಗಿ ಅವನನ್ನು ಬಿಡಿಸಿಕೊಂಡು ಬರುತ್ತೇನೆ. ಅಲ್ಲಿಯತನಕ ನೀನು ಮನೆಗೆ ಹೋಗಿ ನಿಶ್ಚಿಂತೆಯಿoದ ಇರು!’ ಎಂದು ಸಮಾಧಾನಿಸಿದರು. ಆದರೆ ಸರೋಜ ಕಿವುಡಿಯಂತೆ ಕುಳಿತಾಗ ಸಾಹೇಬರು ಅಸಹಾಯಕರಾದರು. ‘ಸರಿ ಹಾಗಾದರೆ ಸ್ಟೇಷನ್ನಿಗೆ ಬರುವುದಾದರೆ ಬಾ. ಅಲ್ಲಿ ಅತ್ತು ಕರೆದು ರಂಪ ಮಾಡಬಾರದು ನೋಡು. ಅದರಿಂದ ಅವನಿಗೂ ನಮಗೂ ಒಟ್ಟಿಗೆ ತೊಂದರೆಯಾಗಲಿಕ್ಕುoಟು!’ ಎಂದು ಎಚ್ಚರಿದರು. ಆಗ ಸರೋಜ ತನ್ನ ದುಃಖವನ್ನು ನುಂಗಿಕೊoಡು, ‘ಆಯ್ತು ಸಾಹೇಬರೇ!’ ಎಂದವಳು ಅವರೊಂದಿಗೆ ಶಿವಕಂಡಿಕೆಯ ಠಾಣೆಗೆ ಹೋದಳು.
ಈ ದಿನದ ಮೊತ್ತ ಮೊದಲ ಗಿರಾಕಿಯಾಗಿ ತಮ್ಮ ಪರಿಚಯದವರೇ ಆದ ಉಸ್ಮಾನ್ ಸಾಹೇಬರು ಠಾಣೆಯನ್ನು ಪ್ರವೇಶಿಸಿದ್ದನ್ನು ಕಂಡ ರೈಟರ್ ರಾಜಾರಾಮ ಒಳಗೊಳಗೆ ಖುಷಿಪಟ್ಟ. ಆದ್ದರಿಂದ ತನ್ನ ಮೇಲಾಧಿಕಾರಿಗಳಿಗೆ ಹೊಡೆಯುವಂಥದ್ದಲ್ಲದಿದ್ದರೂ ಅದೇ ಮಾದರಿಯ ಸೆಲ್ಯೂಟೊಂದನ್ನು ಸಾಹೇಬರಿಗೂ ಹೊಡೆದ. ಅವರು ಮಂದಹಾಸ ಬೀರುತ್ತ ಅವನನ್ನು ಹರಸುವ ರೀತಿಯಲ್ಲಿ ಕೈಯೆತ್ತಿಕೊಂಡು ಒಳಗೆ ಬಂದರು. ಅದನ್ನು ಕಂಡ ಸರೋಜಾಳಿಗೆ, ಸಾಹೇಬರ ಪ್ರಭಾವದ ಅರಿವಾಗಿ ಸ್ವಲ್ಪ ಗೆಲುವಾದಳು. ಹಾಗೆ ಒಳಗಡಿಯಿಟ್ಟವಳ ಗಮನ ತಟ್ಟನೆ ಎಡಭಾಗದ ಕೈದಿಗಳ ಕೋಣೆಯತ್ತ ಹೊರಳಿತು. ಅಲ್ಲಿ ಐದಾರು ಮಂದಿಯಿದ್ದರು. ಅವರಲ್ಲಿ ಕೆಲವರು ಕುಳಿತುಕೊಂಡು ಮತ್ತು ಕೆಲವರು ಮಲಗಿಕೊಂಡಿದ್ದರು. ಆದರೆ ಅವರೆಲ್ಲರ ನಡುವೆ ತನ್ನ ಗಂಡ ಬರೇ ಕಾಚಾದಲ್ಲಿ, ಕುಕ್ಕರಗಾಲಿನಲ್ಲಿ ಕುಳಿತಿದ್ದನ್ನು ಕಂಡವಳು ದಂಗಾಗಿ ಅತ್ತ ಓಡಿದಳು. ಹೆಂಡತಿಯನ್ನು ಕಂಡ ಲಕ್ಷö್ಮಣ ಅವಕ್ಕಾಗಿ ಮುಂದೆ ಬಂದ. ಆದರೆ ಅವಳ ಮುಖ ನೋಡಲಾಗದೆ ಕಂಬಿ ಹಿಡಿದುಕೊಂಡು ತಲೆತಗ್ಗಿಸಿ ನಿಂತ. ‘ಅಯ್ಯಯ್ಯೋ…! ಎಂಥದು ಮಾರಾಯ್ರೇ ಇದೆಲ್ಲ…?’ ಎನ್ನುತ್ತ ನಿಶಬ್ದವಾಗಿ ಅಳತೊಡಗಿದಳು. ಅಷ್ಟೊತ್ತಿಗೆ ಸಾಹೇಬರು ಹತ್ತಿರ ಬಂದವರು, ‘ಹೇಗಿದ್ದಿ ಲಕ್ಷ್ಮಣ…?’ ಎಂದು ವಿಚಾರಿಸಿದರು. ಅವರ ಮಾತಿಗೆ ಅವನು ಖಿನ್ನನಾದ. ಅದನ್ನು ಕಂಡವರು, ‘ನೀನೇನೂ ಚಿಂತಿಸಬೇಡ ಮಾರಾಯಾ. ನಾನಿದ್ದೇನೆ!’ ಎಂದು ಅವನಲ್ಲಿ ಧೈರ್ಯ ತುಂಬಿದರು. ಅಷ್ಟರಲ್ಲಿ ರಾಜಾರಾಮ ಸಮೀಪ ಬಂದುದರಿAದ ಸಾಹೇಬರು ಅವನೊಂದಿಗೆ ಚರ್ಚಿಸುತ್ತ ಸಬ್ ಇನ್ಸ್ಪೆಕ್ಟರ್ ಅವರ ಕೋಣೆಗೆ ನಡೆದರು.
ಗಂಡನ ಪರಿಸ್ಥಿತಿಯನ್ನು ಕಂಡ ಸರೋಜ ಕಂಗಾಲಾಗಿದ್ದಳು. ಹಾಗಾಗಿ ಮರಳಿ, ‘ಏನಾಯ್ತು ಮಾರಾಯ್ರೇ…? ನೀವು ಅಂಥದ್ದೇನು ಮಾಡಿದ್ದೀರಿ ಅಂತ ಇಲ್ಲಿ ಕೂಡಿ ಹಾಕಿದ್ದಾರೆ…?’ ಎಂದಳು ದುಃಖದಿಂದ. ಅವಳ ಮಾತು ಕೇಳಿದ ಲಕ್ಷö್ಮಣನಿಗೆ ತಟ್ಟನೆ ಅಳು ಬಂದುಬಿಟ್ಟಿತು. ಆದರೂ ಸತ್ಯ ಹೇಳಲು ಹಿಂಜರಿದ. ‘ಏನಿಲ್ಲ ಮಾರಾಯ್ತಿ, ಮೊನ್ನೆ ರಾತ್ರಿ ಪಾರ್ಟಿ ಮುಗಿದ ಬಳಿಕ ಅರ್ಜೆಂಟಾಗಿ ಒಂದು ಮರ ಕಡಿಯಲಿಕ್ಕಿತ್ತು. ಹಾಗೆ ಹೋದಲ್ಲಿ ಒಂದು ಚಿಕ್ಕ ಗಲಾಟೆ ನಡೆಯಿತು. ಆ ಬಡ್ಡೀಮಕ್ಕಳು ನನಗೆ ಅನ್ನ ಹಾಕಿದ ಧಣಿಯನ್ನೇ ಮಣ್ಣು ಮುಕ್ಕಿಸಲು ನೋಡಿದರು. ನಾನು ಸುಮ್ಮನೆ ಬಿಡುತ್ತೇನಾ? ಕೆಲವರನ್ನು ಹಿಡಿದುಕೊಂಡು ನಾಲ್ಕು ಬಡಿದುಬಿಟ್ಟೆ ಅಷ್ಟೇ. ಅದೆಲ್ಲ ಸರಿಯಾಗುತ್ತದೆ ಬಿಡು. ಸಾಹೇಬರು ನಮ್ಮ ಕೈಬಿಡುವುದಿಲ್ಲ. ನಾಳೆನೇ ಹೊರಗೆ ಬರುತ್ತೇನೆ ನೋಡುತ್ತಿರು!’ ಎಂದು ಕಣ್ಣೀರೊರೆಸಿಕೊಳ್ಳುತ್ತ ಅಂದ. ಆದರೆ ‘ಮುಂದೇನಾಗುವುದೋ…?’ ಎಂಬ ಭಯ, ಅಳುಕು ಅವನನ್ನೂ ಕಾಡುತ್ತಿದ್ದುದು ಅವನ ಮುಖಚರ್ಯೆಯಿಂದಲೇ ತಿಳಿಯುತ್ತಿತ್ತು. ಗಂಡನ ಮಾತು ಕೇಳಿದ ಸರೋಜ ದುಗುಡದಿಂದ ನಿಟ್ಟುರಿಸಿರುಬಿಟ್ಟಳು. ಅಷ್ಟರಲ್ಲಿ ರಾಜಾರಾಮ ಬಂದು ಅವಳನ್ನು ಇನ್ಸ್ಪೆಕ್ಟರ್ ಸಾಹೇಬರ ಕೋಣೆಗೆ ಕರೆದೊಯ್ದು ಕುಳ್ಳಿರಿಸಿದ. ಸ್ವಲ್ಪಹೊತ್ತಲ್ಲಿ ಇನ್ಸ್ಪೆಕ್ಟರ್ ಮುನಿಸ್ವಾಮಿಯವರು ಆಗಮಿಸಿದರು. ಉಸ್ಮಾನ್ ಸಾಹೇಬರನ್ನು ಕಂಡವರು ಕಿರುನಗು ಬೀರುತ್ತ ಹಸ್ತಲಾಘವ ಮಾಡಿದರು. ಸಾಹೇಬರು ಮತ್ತು ತಾವು ಬಹಳ ಕಾಲದಿಂದ ಆತ್ಮೀಯರು ಎಂಬoತೆ ತುಸುಹೊತ್ತು ಲೋಕಾಭಿರಾಮವಾಗಿ ಹರಟಿದರು. ಸಾಹೇಬರು ಮಾತಿನ ಕೊನೆಯಲ್ಲಿ ಲಕ್ಷ್ಮಣನ ವಿಷಯವನ್ನೆತ್ತಿದರು. ಆಗ ಇನ್ಸ್ಪೆಕ್ಟರ್ ಸಾಹೇಬರ ಮುಖವು ಮೆಲ್ಲನೆ ವಿವರ್ಣವಾಯಿತು. ಅದನ್ನು ಗಮನಿಸಿದ ರಾಜಾರಾಮನು ಸರೋಜಾಳನ್ನೆಬ್ಬಿಸಿ ಹೊರಗೆ ಕರೆದೊಯ್ದ.
ಆಗ ಇನ್ಸ್ಪೆಕ್ಟರ್ ಸಾಹೇಬರು ಆವತ್ತು ಉಸ್ಮಾನ್ ಸಾಹೇಬರ ತಂಡದವರಿAದ ನಡೆದ ವಿಲಕ್ಷಣ ಘಟನೆಯ ತೀವ್ರತೆಯನ್ನು ಅವರಿಗೆ ವಿವರಿಸಿದ್ದರು. ಅದನ್ನು ಕೇಳಿದ ಸಾಹೇಬರು ಏನೂ ತೋಚದೆ ಕುಳಿತುಬಿಟ್ಟರು. ಇನ್ಸ್ಪೆಕ್ಟರ್ ಸಾಹೇಬರು ಅವರನ್ನು ಕೆಲವುಕ್ಷಣ ಅಚ್ಚರಿಯಿಂದ ದಿಟ್ಟಿಸಿದವರು, ‘ಅಲ್ಲಿçà ಸಾಹೇಬರೇ ನೀವು ಇಲ್ಲಿಯವರೆಗೆ ನಿಮ್ಮ ವ್ಯಾಪಾರ ವಹಿವಾಟುಗಳನ್ನೆಲ್ಲ ಬಹಳ ಜೋಪಾನವಾಗಿ ನಡೆಸಿಕೊಂಡು ಬಂದವರಲ್ರೀ…! ಆದರೂ ಇಂಥ ಅಚಾತುರ್ಯ ಹೇಗೆ ನಡೆಯಿತ್ರೀ…? ಹೋಗಿ, ಹೋಗಿ ಆ ಅಭಯಾರಣ್ಯದ ಮರಗಳಿಗಾ ಕೈ ಹಾಕೋದು ನೀವು? ಬೇರೆಲ್ಲೂ ಮರಗಳೇ ಸಿಗಲಿಲ್ವೇನ್ರೀ ನಿಮ್ಗೆ…? ನಿಮ್ಮ ಆಳುಗಳಿಂದ ಏಟು ತಿಂದ ಅರಣ್ಯಾಧಿಕಾರಿಯೊಬ್ಬ ಬಲಗಾಲು ಕಳೆದುಕೊಂಡು ಈಗಲೋ ಆಗಲೋ ಸಾಯುವ ಸ್ಥಿತಿಯಲ್ಲಿದ್ದಾನಲ್ರೀ…! ಅವನೆಲ್ಲಾದರೂ ನೆಗೆದು ಬಿದ್ದನೆಂದರೆ ನಿಮ್ಮ ಇಡೀ ತಂಡಕ್ಕೆ ಜೀವಾವಧಿಯೋ, ಮರಣದಂಡನೆಯೋ ಗ್ಯಾರಂಟಿ ಬಿಡ್ರೀ!’ ಎಂದು ಈ ಕೇಸು ತನ್ನಿಂದ ಇತ್ಯಾರ್ಥವಾಗುವಂಥದ್ದಲ್ಲ! ಎಂಬ ರೀತಿಯಲ್ಲೇ ಹೇಳಿದರು. ಅಷ್ಟು ಕೇಳಿದ ಸಾಹೇಬರು, ‘ಯಾ ಅಲ್ಲಾಹ್…! ಏನ್ಸಾರ್ ನೀವು ಹೇಳುತ್ತಿರುವುದು? ಅಭಯಾರಣ್ಯದ ಮರಗಳಾ…!’ ಎಂದು ದಿಗ್ಬ್ರಾಂತಿಯಿoದ ಪ್ರಶ್ನಿಸಿದರು.
‘ಹೌದೂರೀ. ನಿಮಗೆ ಗೊತ್ತಿಲ್ಲವೇ…?’
‘ಅಲ್ಲಾಹ್‌ನ ಆಣೆಗೂ ಗೊತ್ತಿಲ್ಲ ಸಾರ್…!’
‘ಹಾಗಾದರೆ ನಿಮಗ್ಯಾವನೋ ಸರಿಯಾಗಿ ಟೋಪಿ ಹಾಕಿದ್ದಾನೆ ಬಿಡ್ರೀ!’ ಎಂದು ಇನ್ಸ್ಪೆಕ್ಟರ್ ಸಾಹೇಬರು ವ್ಯಂಗ್ಯವಾಗಿ ನಕ್ಕರು.
ಓಹೋ, ಹೀಗಾ ಕಥೆ…! ಅಂದರೆ ಆ ನಾಯಿಂಡ್ರೆ ಮೋನು (ನಾಯಿಯ ಮಗ) ಮರ ತನ್ನದೇ ಎಂದು ಸುಳ್ಳು ಹೇಳಿ ನಮ್ಮನ್ನು ವಂಚಿಸಿದ್ದಾನೆ! ಎಂದುಕೊoಡವರು ಆಕ್ರೋಶದಿಂದ ಕುದಿಯುತ್ತ, ಆ ಮೂರುಕಾಸಿನವನನ್ನು ಸುಮ್ಮನೆ ಬಿಡಲಿಕ್ಕಿಲ್ಲ. ಒಂದು ಗತಿ ಕಾಣಿಸಿಯೇ ತೀರಬೇಕು! ಎಂದು ಮನದಲ್ಲೇ ಹಲ್ಲು ಕಡಿದವರಿಗೆ ತಟ್ಟನೆ ಘಟನೆಯ ಕರಾಳತೆಯ ಅರಿವಾಯಿತು. ಹಾಗಾಗಿ, ‘ಹೌದು ಹೌದು ಸಾರ್, ತಾವು ಹೇಳಿದ್ದು ಸರಿ. ಅವನೊಬ್ಬ ಸೂವರ್ ನನ್ಮಗ ನಮಗೇ ಹಲಾಲ್ ಟೋಪಿ ಹಾಕಿಬಿಟ್ಟ. ಅದು ಹಾಗಿರಲಿ, ಸದ್ಯ ಈ ಕೇಸು ಕೈಗೆತ್ತಿಕೊಂಡಿರುವವರು ತಾವೇ ಅಲ್ಲವಾ…?’ ಎಂದು ನಮ್ರವಾಗಿ ಪ್ರಶ್ನಿಸಿದರು. ‘ಹ್ಞೂಂ, ಅದೇನೋ ಹೌದುರೀ…!’ ಎಂದರು ಪೊಲೀಸ್ ಸಾಹೇಬರು ನಿರಾಸಕ್ತಿಯಿಂದ.
‘ಹಾಗಾದರೆ ನಮ್ಮ ಆಳುಗಳ ಒಂದು ಕೂದಲು ಕೊಂಕದAತೆ ಹೊರಗಡೆ ತರುವ ಜವಾಬ್ದಾರಿಯೂ ತಮ್ಮದೇ ಸಾರ್! ಅದೆಷ್ಟು ಖರ್ಚಾದರೂ ಚಿಂತೆಯಿಲ್ಲ. ಆ ಸಂಬoಧವಾಗಿ ಯಾವ ಮೇಲಾಧಿಕಾರಿಗಳನ್ನೋ, ಮಂತ್ರಿಗಳನ್ನೋ ಭೇಟಿಯಾಗಲೂ ನಾವು ಸಿದ್ಧ!’ ಎಂದು ಸಾಹೇಬರು ದೃಢವಾಗಿ ಅಂದರು. ಆದರೆ ಇನ್ಸ್ಪೆಕ್ಟರ್ ಸಾಹೇಬರು, ಉಸ್ಮಾನ್ ಸಾಹೇಬರ ಮಾತನ್ನು ಕೇಳಿಸಿಕೊಳ್ಳುತ್ತಲೇ ಬೇರೇನನ್ನೋ ಯೋಚಿಸುತ್ತಿದ್ದರು. ಅದನ್ನು ಗಮನಿಸಿದ ಸಾಹೇಬರು ಪಿಸುಮಾತಿನಲ್ಲಿ, ‘ಆದರೆ ಸಾರ್, ಈ ಘಟನೆಯಲ್ಲಿ ನನ್ನ ಹೆಸರೆಲ್ಲೂ ಕೇಳಿ ಬರದಂತೆ ಎಚ್ಚರವಹಿಸಬೇಕು. ತಾವು ಹಾಗೆ ಮಾಡಿದಿರಾದರೆ ತಮ್ಮ ವಿಶ್ವಾಸವನ್ನು ಇನ್ನಷ್ಟು ಗಟ್ಟಿಯಾಗಿ ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮದು!’ ಎಂದರು ವಿನಯದಿಂದ. ಅದಕ್ಕೆ ಮುನಿಸ್ವಾಮಿಯವರೂ, ‘ಆಯ್ತು, ಆಯ್ತು ಸಾಹೇಬರೇ ನೋಡೋಣ. ನಿಮ್ಮನ್ನು ಬಿಡೊಕ್ಕಾಗುತ್ತೇನ್ರೀ…? ನನ್ ಕೈಯಲ್ಲಾದ ಪ್ರಯತ್ನಾನ ನಾನೂ ಮಾಡೇ ಮಾಡ್ತೇನ್ರೀ!’ ಎಂದು ಗಂಭೀರವಾಗಿ ಅಂದಾಗ ಉಸ್ಮಾನ್ ಸಾಹೇಬರು ಹಗುರವಾದರು.
(ಮುಂದುವರೆಯುವುದು)