
ಧಾರವಾಹಿ 32
ಅಂದೊoದು ದಿನ, ಯಾವ ಕ್ಷಣದಲ್ಲಾದರೂ ಕುಸಿದು ಬೀಳಲಿದ್ದ ತನ್ನ ಅತಂತ್ರತೆಯ ಬದುಕಿಗೆ ಭದ್ರ ಆಸರೆಯಾಗಿ ಬಂದು ತನ್ನ ಕುಟುಂಬದ ಸಂಕಷ್ಟವನ್ನು ಪರಿಹರಿಸಿದಂಥ ಉಸ್ಮಾನ್ ಸಾಹೇಬರು ನಿಜಕ್ಕೂ ತನ್ನ ಪಾಲಿನ ದೇವರೇ ಸರಿ! ಅವರಿಗಾಗಿ ತಾನು ಜೀವ ಕೊಡಲೂ ಸಿದ್ಧ! ಎಂಬ ಕೃತಜ್ಞಾಭಾವಕ್ಕೆ ಬಿದ್ದಿದ್ದ ಲಕ್ಷ್ಮಣನು ಸಾಹೇಬರು ಉಂಗುಷ್ಟದಲ್ಲಿ ತೋರಿಸಿದ್ದನ್ನು ತಲೆಯ ಮೇಲೆ ಹೊತ್ತುಕೊಂಡು ನೆರವೇರಿಸುವಂಥ ಮಟ್ಟಕ್ಕೆ ಅವರ ದಾಸನಾಗಿದ್ದ.
ಹೀಗಿದ್ದ ಲಕ್ಷ್ಮಣನನ್ನು ಆವತ್ತು ಜೊತೆಗೂಡಿಸಿಕೊಂಡ ಸಾಹೇಬರ ತಂಡವು ಸಹ್ಯಾದ್ರಿ ತಪ್ಪಲಿನ ಹೆಬ್ಬೇರಿ ಗ್ರಾಮದ ಹತ್ತು ಲಕ್ಷಕ್ಕೂ ಮಿಕ್ಕಿ ಬೆಲೆಬಾಳುವ ದೈತ್ಯ ಶ್ರೀಗಂಧದ ಮರವೊಂದನ್ನು ಅಪಹರಿಸುವ ಸಂಚು ಹೂಡಿತು. ಆ ವೃಕ್ಷವಿದ್ದ ಇಡೀ ಹಾಡಿಯ ಮಾಲಿಕ ‘ತಾನೇ!’ ಎಂದು ಒಬ್ಬ ಖದೀಮನು ರಜ಼ಕ್, ಇಸ್ಮಾಯಿಲರನ್ನು ಬಲವಾಗಿ ನಂಬಿಸಿದ್ದನಲ್ಲದೇ ಒಂದು ಶುಭದಿನದಂದು ಸಾಹೇಬರನ್ನೂ ಭೇಟಿಯಾಗಿ ಅವರೊಡನೆ ಸಾಕಷ್ಟು ಚೌಕಾಶಿ ಮಾಡಿ ಉತ್ತಮ ಬೆಲೆಗೆ ವ್ಯಾಪಾರವನ್ನೂ ಕುದುರಿಸಿದ್ದ. ಸಾಹೇಬರು ಆವತ್ತು ರಾತ್ರಿ ತಮ್ಮ ಮನೆಯ ಗುಂಡು ಪಾರ್ಟಿ ಮುಗಿದ ಕೂಡಲೇ ಆ ಮರವನ್ನು ಕಡಿಯುವುದೆಂದು ನಿಶ್ಚಯಿಸಿದ್ದರು. ಏಕೆಂದರೆ ಅಂದು ಅಮಾವಾಸ್ಯೆಯಾದ್ದರಿಂದ ಸಾಹೇಬರ ಇಂಥ ಕೆಲಸಕಾರ್ಯಗಳಿಗೆ ಅದು ಬಹಳ ಪ್ರಶಸ್ತ ಕಾಲವಾಗಿತ್ತು. ಹಾಗಾಗಿ ಬೇಗಬೇಗನೇ ಕಾರ್ಯಕ್ರಮವನ್ನು ಮುಗಿಸಿ ಅತಿಥಿಗಳನ್ನು ಬೀಳ್ಗೊಟ್ಟ ಸಾಹೇಬರು ಕೂಡಲೇ ರಜ಼ಕ್, ಇಸ್ಮಾಯಿಲ್, ಲಕ್ಷ್ಮಣ ಹಾಗೂ ಈ ಕೆಲಸಕ್ಕೆಂದೇ ನಿಯೋಜಿಸಲ್ಪಟ್ಟಿದ್ದ ಇತರ ಆರು ಮಂದಿ ನಂಬಿಕಸ್ಥ ಆಳುಗಳನ್ನು ಒಗ್ಗೂಡಿಸಿ ಅವರಿಗೆಲ್ಲ ಹದವಾಗಿ ಕುಡಿಸಿ ಹೊಟ್ಟೆ ತುಂಬಾ ಉಣಿಸಿದವರು, ‘ತುಂಬಾ ಹಳೆಯ ಮರವದು! ದಪ್ಪ ತಿರುಳಿನ ಗಂಧವಿದೆ. ಘಾಟು ವಾಸನೆ ಚೂರು ಹೊರಗೆ ಬಾರದಂತೆ ಚೆನ್ನಾಗಿ ಸೆಗಣಿ ಬಳಿದು ತನ್ನಿ. ಅರಣ್ಯ ಇಲಾಖೆಯ ಭಯ ಬೇಡ. ನಾನೆಲ್ಲ ನೋಡಿಕೊಳ್ಳುತ್ತೇನೆ. ಆದರೂ ಒಂದುವೇಳೆ ಕೆಲಸ ಕೆಟ್ಟಿತೆಂದರೆ ನಿಮ್ಮೊಂದಿಗೆ ನಾನೂ ‘ಅಂದರ್!’ ಅನ್ನುವುದನ್ನು ನೆನಪಿಟ್ಟುಕೊಂಡು ಕೆಲಸ ಮುಗಿಸಿಬಿಡಿ!’ ಎಂದು ಮೂವರು ಭಂಟರನ್ನೂ ಬಹಳ ಆಪ್ತತೆಯಿಂದ ಎಚ್ಚರಿಸಿದರು.
ಸಾಹೇಬರ ಮಾತುಗಳನ್ನು ತುಂಬು ಗೌರವದಿಂದ ಆಲಿಸಿ ಒಪ್ಪಿದ ತಂಡವು ರಾತ್ರಿ ಸುಮಾರು ಹನ್ನೊಂದು ಗಂಟೆಯ ಹೊತ್ತಿಗೆ ಬಹಳ ಹುರುಪಿನಿಂದ ಜೀಪು ಹತ್ತಿಸಿ ಹೊರಟಿದ್ದು ಹೆಬ್ಬೇರಿಯ ಅಭಯಾರಣ್ಯಕ್ಕೆ ತಾಗಿಕೊಂಡೇ ಇದ್ದ ದಟ್ಟ ಕಾಡೊಂದನ್ನು ಸಂಪೂರ್ಣ ಹತ್ಯಾರುಗಳೊಂದಿಗೆ ಪ್ರವೇಶಿಸಿತು. ಗೊತ್ತುಪಡಿಸಲಾದ ಮರವನ್ನು ಕುಯ್ಯುವ ಕೆಲಸವೂ ಆರಂಭವಾಗಿ ನಡುರಾತ್ರಿಯವರೆಗೆ ಮುಕ್ಕಾಲು ಮರ ಕಡಿದು ಮುಗಿಯಿತು. ಆದರೆ ಅಷ್ಟರಲ್ಲಿ ಆ ಕಾಡು ತನ್ನೊಳಗೊಂದು ಭೀಕರ ಹತ್ಯಾಕಾಂಡವನ್ನೇ ಸೃಷ್ಟಿಸಲು ಉತ್ಸುಕವಾಗಿದೆಯೇನೋ ಎಂಬoತೆ ಸುಮಾರು ಹದಿನೈದು ಮಂದಿಯ ಸಮವಸ್ತçಧಾರಿ ತಂಡವೊoದು ಯಾವ ಮಾಯಕದಿಂದಲೋ ಬಂದು ಅವರನ್ನು ಮುತ್ತಿಕೊಂಡುಬಿಟ್ಟಿತು! ಅದೇ ಹೊತ್ತಿಗೆ ರe಼Áಕ್‌ನಿಗೇನೋ ಸಪ್ಪಳವಾಗಿ ರಪ್ಪನೆ ಟಾರ್ಚ್ ಬೆಳಗಿಸಿದ. ಆದರೆ ತಮ್ಮ ಸುತ್ತಮುತ್ತ ನೆರೆದಿದ್ದ ಸಮವಸ್ತçಧಾರಿಗಳನ್ನು ಕಂಡವನು ನಿಸ್ತೇಜನಾಗಿಬಿಟ್ಟ. ಕಾರಣ ಅವರೆಲ್ಲರೂ ಅರಣ್ಯ ಸಿಬ್ಬಂದಿಗಳು! ಅವರಲ್ಲಿ ಕೆಲವರ ಕೈಯಲ್ಲಿ ಟಾರ್ಚುಗಳಿದ್ದರೆ, ಒಂದಿಬ್ಬರ ಕೈಯಲ್ಲಿ ಜೋಡು ನಳಿಗೆಯ ಕೋವಿಗಳಿದ್ದು ಅವು ಇವರತ್ತಲೇ ಗುರಿಯಿಟ್ಟು ನಿಂತಿದ್ದವು. ಇತ್ತ, ಇಂಥ ಕಾಯಕದಲ್ಲಿ ಪರಂಪರಾಗತವಾಗಿ ನಿಷ್ಣಾತರಾಗಿದ್ದ ಸಾಹೇಬರ ಆರು ಜನ, ‘ನಂಬಿಕಸ್ಥ!’ ಆಳುಗಳು ಅರಣ್ಯ ಇಲಾಖೆಯವರನ್ನು ಕಂಡವರು ಕಣ್ಣರೆಪ್ಪೆ ಮುಚ್ಚಿ ತೆರೆಯುವಷ್ಟರಲ್ಲಿ ದಟ್ಟಾರಣ್ಯದೊಳಗೆ ಮಾಯವಾಗಿಬಿಟ್ಟಿದ್ದರು. ಉಳಿದ ಮೂವರು ಪ್ರಮುಖರು ಮಾತ್ರ ಏನೂ ತೋಚದೆ ತಟಸ್ಥರಾಗಿದ್ದುಬಿಟ್ಟರು.
ಈಚೆಗೆ ಎರಡು ವರ್ಷಗಳ ಹಿಂದಷ್ಟೇ ಆರ್. ಎಫ್. ಓ. ಮತ್ತು ಡಿ. ಆರ್. ಎಫ್. ಓ. ಹುದ್ದೆಗೆ ನೇಮಕಗೊಂಡಿದ್ದ ಮಂಜುನಾಥ್ ಮತ್ತು ವಸಂತಕುಮಾರ್ ಎಂಬಿಬ್ಬರು ಯುವಕರೊಂದಿಗಿನ ಇಲಾಖಾ ತಂಡವು ತಾವು ನೇಮಕಾತಿ ಹೊಂದಿದoದಿನಿoದಲೇ ಸಾಹೇಬರ, ‘ಹಸಿರು ವ್ಯಾಪಾರ’ದ ಮೇಲೆ ವಿಶೇಷವಾಗಿ ಕಣ್ಣಿಟ್ಟಿತ್ತು. ಆದ್ದರಿಂದ ಇಂದು ತಮ್ಮದೇ ಕೆಲವು ಮೂಲಗಳಿಂದ ಸಾಹೇಬರ ಕಾರ್ಯಚರಣೆಯನ್ನು ಖಚಿತಪಡಿಸಿಕೊಂಡಿದ್ದ ಅವರು ತಕ್ಷಣ ಕಾರ್ಯಪ್ರವೃತ್ತರಾಗಿದ್ದರು.
‘ಹುಷಾರ್! ಎಲ್ಲರೂ ನಿಂತಲ್ಲೇ ನಿಂತುಕೊಳ್ಳಿ. ಯಾವನಾದರೂ ಅಲ್ಲಾಡಿದನೆಂದರೆ ಅವನ ಉಸಿರು ಇದೇ ಕಾಡಿನಲ್ಲಿ ಹಾರಿ ಹೋಗುವುದು ಖಚಿತ!’ ಎಂದು ಮಂಜುನಾಥ್ ಗುಡುಗಿದವನು, ಮೂವರನ್ನೂ ಬಂಧಿಸುವoತೆ ವಸಂತಕುಮಾರ್ ಮತ್ತು ಸಿಬ್ಬಂದಿಗಳಿಗೆ ಆಜ್ಞಾಪಿಸಿದ. ಆದರೆ ಅಷ್ಟರಲ್ಲಿ ನಡೆಯಬಾರದ ಅಚಾತುರ್ಯವೊಂದು ನಡೆದುಬಿಟ್ಟಿತು. ಇನ್ನು ನಮ್ಮ ಕಥೆ ಮುಗಿದೇ ಹೋಯಿತು! ಯಾ, ಅಲ್ಲಾಹ್ ಕಾಪಾಡು…! ಎಂದು ರe಼Áಕ್, ಇಸ್ಮಾಯಿಲರು ಕೈಚೆಲ್ಲಿ ಪ್ರಾರ್ಥಿಸುತ್ತಿದ್ದರೆ ಇತ್ತ ಲಕ್ಷ್ಮಣನಿಗೆ ಇಂದು ಕೂಡಾ ತನಗೆ ಅನ್ನ ಕೊಟ್ಟ ಧಣಿಯ ಕರುಣಾಜನಕ ಮುಖವು ಕಣ್ಣೆದುರು ಬಂದುಬಿಟ್ಟಿತು. ಹಾಗಾಗಿ, ನಾವಿಲ್ಲಿ ಅರಣ್ಯ ಇಲಾಖೆಯ ಕೈಗೆ ಸಿಕ್ಕಿಬಿದ್ದರೆ ನಾಳೆ ಅಲ್ಲಿ ಯಜಮಾನರು ಜೈಲು ಸೇರುವುದು ಖಂಡಿತಾ! ಎಂದೂ ಅವನಿಗನ್ನಿಸಿದ್ದೇ ತಡ, ಕೈಯಲ್ಲಿದ್ದ ಹರಿತವಾದ ಕೊಡಲಿಯು ರಪ್ಪನೆ ಚಿಮ್ಮಿ, ಟಾರ್ಚ್ ಬೆಳಗುತ್ತಿದ್ದ ಇಲಾಖಾ ಸಿಬ್ಬಂದಿಯೊಬ್ಬನ ಹಣೆಗೇ ಅಪ್ಪಳಿಸಿಬಿಟ್ಟಿತು. ಅವನು, ‘ಅಯ್ಯಮ್ಮಾ…!’ ಎಂದರಚುತ್ತ ನೆಲಕ್ಕುರುಳಿದ. ಅದನ್ನು ಕಂಡ ರe಼Áಕ್, ಇಸ್ಮಾಯಿಲರೂ ತಟ್ಟನೆ ಚುರುಕಾದವರು ದಟ್ಟ ಕತ್ತಲಲ್ಲಿ ಕೈಗೆ ಸಿಕ್ಕಿದ ದೊಣ್ಣೆ, ಕಟ್ಟಿಗೆಯ ತುಂಡುಗಳಿoದ ಅಂದಾಜಿನ ಮೇರೆಗೆ ಅರಣ್ಯ ಸಿಬ್ಬಂದಿಯನ್ನು ಹಿಗ್ಗಾಮುಗ್ಗಾ ಥಳಿಸತೊಡಗಿದರು. ಈ ಹೋರಾಟದ ನಡುವೆ ಕೆಲವರ ಕೈಯಲ್ಲಿದ್ದ ಟಾರ್ಚುಲೈಟುಗಳು ಎತ್ತೆತ್ತಲೋ ಎಗರಿಬಿಟ್ಟವು.
ಕಾರ್ಗತ್ತಲ ಭೀಕರ ಕದನದ ನಡುವೆ ಸಠಸಠನೇ ಕೆಲವು ಗುಂಡುಗಳೂ ಸಿಡಿದವು. ಅದರ ಸದ್ದಿಗೆ ಕಾನನವಿಡೀ ಮರ್ಮರಿಸಿತು. ಗಾಢನಿದ್ದೆಯಲ್ಲಿದ್ದ ಹಗಲು ಪಕ್ಷಿಗಳೆಲ್ಲ ಬೆಚ್ಚಿಬಿದ್ದು ಕಿರುಚುತ್ತ ಕತ್ತಲಾಕಾಶದಲ್ಲಿ ದಿಕ್ಕು ತಪ್ಪಿ ಹಾರಾಡುತ್ತ ಗದ್ದಲವೆಬ್ಬಿಸಿದವು. ಅಲ್ಲೇ ಸಮೀಪದ ಹುಲ್ಲುಗಾವಲಿನಲ್ಲಿದ್ದ ಜಿಂಕೆ, ಕಾಡುಕುರಿ, ಬರಿಂಕ, ಹಂದಿ, ಚಿರತೆಗಳೆಲ್ಲ ಭಯಾತಂಕದಿoದ ಕರ್ಕಶವಾಗಿ ಅರಚಿ ಕೆನೆದು ಗುಟುರುಗುಟ್ಟುತ್ತ ದಟ್ಟ ಪೊದೆಗಳನ್ನು ಸೀಳಿ ನೆಗೆದು ಓಡುತ್ತಿದ್ದ ಸದ್ದು ಇಡೀ ಕಾಡನ್ನು ಎಚ್ಚರಿಸಿತು. ಅದೇ ಹೊತ್ತಲ್ಲಿ ವಸಂತಕುಮಾರ್‌ನೊoದಿಗೆ ಸೆಣಸಾಡುತ್ತಿದ್ದವರು ಯಾರೋ ಅವನನ್ನು ಮಿಸುಕಾಡದಂತೆ ಹಿಡಿದುಕೊಂಡರು ಮತ್ತು ಇನ್ನಾö್ಯರೋ ಅವನ ಬಲಗಾಲನ್ನು ಬಲವಾಗಿ ಕಡಿದುಬಿಟ್ಟರು! ಅವನ ಪ್ರಾಣಾಂತಿಕ ಬೊಬ್ಬೆಯೊಂದಿಗೆ ಮತ್ತಷ್ಟು ಜೋರಾದ ಹೊಡೆದಾಟಗಳು ನಡೆದವು. ಆದರೂ ಮಂಜುನಾಥ ಧೃತಿಗೆಡಲಿಲ್ಲ. ಅವನು ವೇಗವಾಗಿ ಅತ್ತಿತ್ತ ತಡಕಾಡಿದವನು ರಪ್ಪನೇ ಟಾರ್ಚುಲೈಟ್ ಹುಡುಕಿ ಬೆಳಕು ಚೆಲ್ಲಿದ. ಆಗ ವಸಂತ್ ಕುಮಾರ್ ಮತ್ತು ಇಬ್ಬರು ಸಿಬ್ಬಂದಿಗಳು ಘಾಸಿಗೊಂಡಿರುವುದು ಹಾಗೂ ಉಳಿದವರೊಂದಿಗೆ ಮೂವರು ಕಳ್ಳರು ಹೊಡೆದಾಡುವುದನ್ನೂ ಕಂಡವನಿಗೆ ರೋಷ ಉಕ್ಕಿ ಬಂತು. ‘ಸೂ…ಮಕ್ಕಳೇ! ನಿಮ್ಮನ್ನೆಲ್ಲ ಜೀವಂತ ಬಿಡಬಾರದೋ…!’ ಎಂದು ಗುಡುಗಿದವನು ರe಼Áಕ್, ಇಸ್ಮಾಯಿಲರ ಕಾಲಿಗೆ ಗುರಿಯಿಟ್ಟು ರಪರಪನೇ ಗುಂಡು ಹಾರಿಸಿಬಿಟ್ಟ.
ಮರುಕ್ಷಣ ಇಬ್ಬರೂ ತಮ್ಮ ಪ್ರಾಣಪಕ್ಷಿ ಹಾರಿ ಹೋದಂತೆ ಅರಚುತ್ತ ನೆಲಕ್ಕುರುಳಿದರು. ಅದನ್ನು ಕಂಡ ಲಕ್ಷ್ಮಣ ಬೆದರಿ ಕಂಗಾಲಾಗಿ ರಪ್ಪನೆ ಕುಸಿದು ಮುದುಡಿ ಕುಳಿತು ತರತರ ಕಂಪಿಸತೊಡಗಿದ. ಮರುಕ್ಷಣ ವಸಂತ ಕುಮಾರ್ ಅವನಿಗೂ ಗುಂಡು ಹಾರಿಸುವವನಿದ್ದ. ಅಷ್ಟರಲ್ಲಿ ಅವನ ಅದೃಷ್ಟವೋ ಏನೋ ಎಂಬoತೆ ಗಾರ್ಡ್ ಅನಂತಪ್ಪನು ತಕ್ಷಣ ಎಚ್ಚೆತ್ತವನು ಧಾವಿಸಿ ಬಂದು, ‘ಸಾ…ಸಾರ್ ಬೇಡ, ಸಾರ್ ಬೇಡಾ…! ಆ ಬೇವರ್ಸಿಗಳೆಲ್ಲಾದರೂ ಸತ್ತುಗಿತ್ತು ಹೋದವೆಂದರೆ ಆಮೇಲೆ ನಮಗೇ ಕಂಟಕ…!’ ಎಂದು ತಡವರಿಸುತ್ತ ಹೇಳಿದ. ಅದರಿಂದ ಮಂಜುನಾಥ್ ತುಸು ಸ್ಥಿಮಿತಕ್ಕೆ ಬಂದನಾದರೂ ಅವನ ಕೋಪವಿನ್ನೂ ತಣಿದಿರಲಿಲ್ಲ. ಹಾಗಾಗಿ ರಪ್ಪನೆ ಲಕ್ಷ್ಮಣನತ್ತ ನುಗ್ಗಿದವನು ಮನಬಂದoತೆ ಒದೆಯತೊಡಗಿದ. ಅದನ್ನು ಮೊದಲೇ ನಿರೀಕ್ಷಿಸಿದ್ದ ಲಕ್ಷ್ಮಣ, ಮಂಜುನಾಥ್ ಸಮೀಪಿಸುತ್ತಿದ್ದಂತೆಯೇ ಬಿಗಿದ ಮೂಟೆಯಂತೆ ಉಸಿರುಗಟ್ಟಿ ಬಿದ್ದುಕೊಂಡವನು ಅವನ ಬೂಟಿನೇಟುಗಳೊಂದೂ ತನಗೆ ನಾಟದಂಥ ಮಾದರಿಯಲ್ಲಿ ಪ್ರತಿಭಟಿಸಿದ. ಅಷ್ಟರಲ್ಲಿ ಉಳಿದ ಸಿಬ್ಬಂದಿಗಳೂ ಚೇತರಿಸಿಕೊಂಡು ಲಕ್ಷ್ಮಣನನ್ನು ಕೈಕಾಲು ಕಟ್ಟಿ ಹೊತ್ತೊಯ್ದು ಜೀಪಿಗೆಸೆದವರು, ಮಾರಣಾಂತಿಕವಾಗಿ ಗಾಯಗೊಂಡು ನರಳುತ್ತಿದ್ದ ತಮ್ಮವರನ್ನೂ ಹಾಗೂ ರe಼Áಕ್, ಇಸ್ಮಾಯಿಲರನ್ನೂ ಹೊತ್ತೊಯ್ದು ಶಿವಕಂಡಿಕೆಯ ಸರಕಾರಿ ಆಸ್ಪತ್ರೆಗೆ ದಾಖಲಿಸಿದರು.

ಹೆಬ್ಬೇರಿಯ ಅಭಯಾರಣ್ಯದೊಳಗೆ ಉಸ್ಮಾನ್ ಸಾಹೇಬರ ತಂಡಕ್ಕೂ ಅರಣ್ಯ ಸಿಬ್ಬಂದಿಗಳಿಗೂ ನಡುವೆ ಭೀಕರ ಹೋರಾಟ ನಡೆದು ಹಲವು ತಿಂಗಳುಗಳೇ ಕಳೆದಿದ್ದವು. ಅದರಿಂದ ಬಡಪಾಯಿ ಲಕ್ಷ್ಮಣನೂ ರe಼Áಕ್ ಮತ್ತು ಇಸ್ಮಾಯಿಲರೂ ಸಾಹೇಬರ ಮಹತ್ವಾಕಾಂಕ್ಷೆಯ ಹೊಡೆತಕ್ಕೆ ತಣ್ಣಗೆ ಬಲಿಯಾಗಿದ್ದರು. ಅರಣ್ಯ ಇಲಾಖೆಯು ಅವರ ಮೇಲೆ ಹೂಡಿದ ಮೊಕದ್ದಮೆಯು ಕೋರ್ಟು ಮೆಟ್ಟಲೇರಿ ಅವರ ಹುಟ್ಟಡಗಿಸಲೇ ಹವಣಿಸುತ್ತಿತ್ತು. ಆದರೆ ಅದರಿಂದ ಸರೋಜ ಕಂಗಾಲಾಗಿದ್ದಳು. ಪೊಲೀಸರು ತನ್ನ ಗಂಡನನ್ನು ಒಂದೆರಡು ತಿಂಗಳಿಗೊಮ್ಮೆ ಕೋರ್ಟಿಗೆ ಹಾಜರುಪಡಿಸುವ ದಿನದಂದು ಸಾಹೇಬರೊಂದಿಗೆ ಶಿವಕಂಡಿಕೆಯ ಕೋರ್ಟಿಗೆ ಧಾವಿಸುತ್ತಿದ್ದಳು. ಬಿಸಿಲು ಮಳೆಯೆನ್ನದೆ ತಿಂಗಳುಗಟ್ಟಲೆ ಕೋರ್ಟಿನ ಬಾಗಿಲಲ್ಲಿ ಕಾದು ನಿಂತು, ಸಾಹೇಬರು ಗೊತ್ತುಪಡಿಸಿದ್ದ ಪ್ರಭಾವಿ ವಕೀಲರುಗಳ ಕೈಕಾಲುಗಳಿಗೆ ಬಿದ್ದು ಅಂಗಲಾಚುತ್ತ ಗಂಡನ ಬಿಡುಗಡೆಗೆ ಪ್ರಯತ್ನಿಸುತ್ತಿದ್ದಳು. ಅತ್ತ ರe಼Áಕ್ ಮತ್ತು ಇಸ್ಮಾಯಿಲರ ಹೆತ್ತವರ ಒತ್ತಡದಿಂದಲೂ ಹಾಗೂ ಮುಖ್ಯವಾಗಿ ತಮ್ಮ ಪತ್ನಿ ಕೈರುನ್ನೀಸಾಳ ಬಿರುನುಡಿಗಳ ಹಿಂಸೆಯಿoದಲೂ ಸಾಹೇಬರು ಹೈರಾಣಾಗಿದ್ದವರು ಸಾಧ್ಯವಾದಷ್ಟು ಮರೆಯಲ್ಲಿದ್ದುಕೊಂಡೇ ತಮ್ಮ ಭಂಟರ ವಿಮೋಚನೆಗೆ ಹೋರಾಡುತ್ತಿದ್ದರು. ಆದರೆ ಬರಬರುತ್ತ ವ್ಯಾಜ್ಯದಲ್ಲಿ ಪ್ರಮುಖ ಆರೋಪವು ತಮ್ಮ ಮೇಲೆಯೇ ತಿರುಗಲಿದ್ದುದರ ಸೂಕ್ಷö್ಮವನ್ನು ತಮ್ಮ ಆಪ್ತ ವಕೀಲರ ಮೂಲಕ ತಿಳಿದವರು, ಇನ್ನು ಮುಂದೆ ತಮ್ಮ ಆಳುಗಳಿಗಾಗಿ ತಾವು ಕಾನೂನಿನ ಜೊತೆ ಸೆಣಸಾಡಿದೆವೆಂದರೆ ಅವರೊಂದಿಗೆ ತಾವೂ ಕಂಬಿ ಎಣಿಸಬೇಕಾಗುವುದು ಖಚಿತ! ಎಂದೂ ಅವರಿಗೆ ಮನದಟ್ಟಾಗಿಬಿಟ್ಟಿತು. ಅಷ್ಟು ತಿಳಿಯುತ್ತಲೇ ಅವರು ತಮ್ಮ ವಕೀಲರಿಗೂ, ಕೇಸಿಗೆ ಸಂಬoಧಿಸಿದ ಕೆಲವು ಪೊಲೀಸರಿಗೂ ದೊಡ್ಡಮಟ್ಟದ ‘ನಗದು ಸೇವೆ’ಯನ್ನು ಸಲ್ಲಿಸಿ ಮೊಕದ್ದಮೆಯಿಂದ ನಾಜೂಕಾಗಿ ಕಳಚಿಕೊಂಡುಬಿಟ್ಟರು ಹಾಗೂ ಈ ವಿಷಯವನ್ನು ತಮ್ಮ ಹೆಂಡತಿಗೂ ವಿವರಿಸಿ ಅವಳನ್ನೂ ಸಂತೈಲೆತ್ನಿಸಿದರು.
ಅದನ್ನು ತಿಳಿದ ಕೈರುನ್ನೀಸಾ ಮೊದಲಿಗೆ ಬಹಳವೇ ನೊಂದುಕೊoಡಳು. ಆದರೆ ತನ್ನ ಗಂಡನೂ ಆ ಆಪತ್ತಿಗೆ ತುತ್ತಾಗುತ್ತಾನೆಂದು ತಿಳಿದ ಮೇಲೆ ಅವಳು ಕೂಡಾ ಬದಲಾದವಳು, ‘ಆಯ್ತು ಬಿಡಿ. ಇನ್ನೇನು ಮಾಡುವುದು. ಎಲ್ಲವೂ ಅವರವರ ಹಣೆಬರಹ! ನಾವೇನು ಅವರನ್ನೆಲ್ಲ ಪುಕ್ಕಟೆಯಾಗಿ ದುಡಿಸಿಕೊಂಡಿಲ್ಲವಲ್ಲ! ಬಹಳ ಚೆನ್ನಾಗಿಯೇ ನೋಡಿಕೊಂಡಿದ್ದೇವೆ ಮತ್ತು ಅವರನ್ನು ಉಳಿಸಿಕೊಳ್ಳಲು ಇಲ್ಲಿಯತನಕವೂ ಶಕ್ತಿ ಮೀರಿ ಪ್ರಯತ್ನಿಸಿದ್ದೇವೆ. ಆದರೆ ಅವರ ಹಣೆಯಲ್ಲಿ ಏನು ಬರೆದಿದೆಯೋ ಯಾರಿಗೆ ಗೊತ್ತು? ಹಾಗಾಗಿ ಆ ಅಲ್ಲಾಹ್‌ನ ಇಚ್ಛೆ ಏನಿದೆಯೋ ಹಾಗೆಯೇ ಆಗಲಿ!’ ಎಂದು ತಾನೂ ಗಂಡನಿಗೆ ಸಾಂತ್ವನ ಹೇಳುತ್ತ ಸುಮ್ಮನಾದಳು. ಅದರಿಂದ ಸಾಹೇಬರು ತುಂಬಾ ನಿರಾಳರಾದರು. ಆನಂತರ ಅವರು ಸರೋಜಾಳ ಕುರಿತೂ ದಿವ್ಯ ನಿರ್ಲಕ್ಷö್ಯವನ್ನು ಮತ್ತು ಕೊನೆಕೊನೆಗೆ ಅಸಡ್ಡೆಯನ್ನೂ ತೋರಿಸುತ್ತ ಅವಳನ್ನು ಆದಷ್ಟು ದೂರವಿರಿಸಲು ಪ್ರಯತ್ನಿಸತೊಡಗಿದರು. ಹೀಗಾಗಿ ಅವಳಿಗೂ ಸಾಹೇಬರ ವಂಚನೆಯು ಅರ್ಥವಾದುದರಿಂದ ಕಂಗಾಲಾಗಿಬಿಟ್ಟಳು. ಆದರೆ ಕೊನೆಗೆ ತನ್ನ ಗಂಡನನ್ನು ಉಳಿಸಿಕೊಳ್ಳಲು ಒಬ್ಬಂಟಿಯಾಗಿ ಹೋರಾಡಲು ಮುಂದಾದಳು. ಆಗ ಅವಳನ್ನು ಹಣದ ಕೊರತೆಯು ಪೆಡಂಭೂತದoತೆ ಕಾಡತೊಡಗಿತು. ಆದರೂ ಧೃತಿಗೆಡದೆ ಗಂಡ ತನಗೆ ಪ್ರೀತಿಯಿಂದ ಮಾಡಿಸಿ ಹಾಕಿದ್ದ ಚಿನ್ನಾಭರಣಗಳನ್ನೆಲ್ಲ ಒಂದೊoದಾಗಿ ಮಾರುತ್ತ ವಕೀಲರ ಜೇಬು ತುಂಬಿಸತೊಡಗಿದಳು. ನಂತರ ಮಕ್ಕಳ ಕಿವಿ ಮತ್ತು ಕೊರಳುಗಳೂ ಬೋಳಾಗಿದ್ದರೊಂದಿಗೆ ಅವಳ ಕತ್ತಿನಲ್ಲಿದ್ದ ಕರಿಮಣಿ ಸರವೂ ಅವಳ ‘ಮಾಂಗಲ್ಯ ಭಾಗ್ಯ’ ವನ್ನುಳಿಸಿಕೊಡಲು ಮಾರಿ ಹೋಯಿತು. ಆವತ್ತಿನಿಂದ ಲಕ್ಷ್ಮಣನು ಚಿಕ್ಕಮ್ಮ ದೇವಿಯ ಗುಂಡದೆದುರು ಕಟ್ಟಿದ್ದ ಸಂತೆಯ ರೋಲ್ಡು ಗೋಲ್ಡು ತಾಳಿಯು ಮತ್ತೆ ಅವಳ ಕೊರಳಿಗೆ ಜೋತುಬಿತ್ತು.
ಸಾಹೇಬರ ಕೇಸನ್ನು ನಡೆಸುತ್ತಿದ್ದ ಕೆಲವು ನ್ಯಾಯವಾದಿಗಳು, ‘ಕಳ್ಳ ಖದೀಮರ ಕುಟುಂಬದ ಸಂಪತ್ತು ಯಾವತ್ತಿದ್ದರೂ ಅಕ್ರಮ ಸಂಪಾದನೆಯೇ!’ ಎಂದುಕೊoಡಿದ್ದವರು ಸರೋಜ, ರe಼Áಕ್ ಮತ್ತು ಇಸ್ಮಾಯಿಲರ ಕುಟುಂಬಗಳನ್ನು ನಾಜೂಕಾಗಿ ಸುಲಿಯುತ್ತ ಸಾಗಿದರು. ಆದರೂ ಆ ಮೂವರಲ್ಲಿ ಅವರು ಯಾರೊಬ್ಬರನ್ನೂ ಬಿಡುಗಡೆಗೊಳಿಸುವಲ್ಲಿ ಮಾತ್ರ ಪೂರ್ಣ ವಿಫಲರಾಗಿಬಿಟ್ಟರು. ಆದ್ದರಿಂದ ಅಂತಿಮವಾಗಿ ಸರಕಾರಿ ಅಧಿಕಾರಗಳ ಮೇಲೆ ಘೋರ ದೌರ್ಜನ್ಯವೆಸಗಿದ ಅಪರಾಧಿಗಳಾದ ರe಼Áಕ್, ಇಸ್ಮಾಯಿಲ್ ಮತ್ತು ಲಕ್ಷ್ಮಣರಿಗೆ ನ್ಯಾಯಾಲಯವು ಹತ್ತು ವರ್ಷಗಳ ಕಾಲ ಕಠಿಣ ಕಾರಾಗ್ರಹ ಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿತು. ಆ ನಿರ್ಣಾಯಾಕ ದಿನದಲ್ಲಿ ಅನ್ನ ನೀರು ತೊರೆದು ತೀವ್ರ ವಿಚಲಿತತೆಯಿಂದ ಕೋರ್ಟಿನ ಬಾಗಿಲ್ಲಿ ನಿಂತು ಕಾಯುತ್ತಿದ್ದ ಸರೋಜ ಕೋರ್ಟಿನ ತೀರ್ಪು ತನ್ನ ಕಿವಿಗೆ ಬೀಳುತ್ತಲೇ ಕುಸಿದುಬಿದ್ದಳು!
ತಮ್ಮ ನಂಬುಗೆಯ ಭಂಟರು ಜೈಲು ಪಾಲಾದ ನಂತರ ಉಸ್ಮಾನ್ ಸಾಹೇಬರ ಬದುಕಿನಲ್ಲೂ ಅನಿರೀಕ್ಷಿತ ಬದಲಾವಣೆಗಳು ನಡೆಯತೊಡಗಿದವು. ಲಕ್ಷ್ಮಣ ಜೈಲು ಸೇರಿದ ಬಿಸಿಬಿಸಿ ಸುದ್ದಿಯಷ್ಟೇ ವೇಗವಾಗಿ ಅದಕ್ಕೆ ಕಾರಣರಾದ ಸಾಹೇಬರ ಗೋಮುಖವ್ಯಾಘ್ರತನವೂ ಮತ್ತವರ ಅಕ್ರಮದಂಧೆಯ ಬಣ್ಣವೂ ಬಹಳಬೇಗನೇ ಚೌಳುಕೇರಿಯಾದ್ಯಂತ ಬಯಲಾಗುತ್ತ ಜನರಿಗೆ ಅವರ ಮೇಲಿನ ಗೌರವವೂ ಕುಸಿಯತೊಡಗಿತು. ಈ ಸಮಾಚಾರವು ಮಸೀದಿಗೆ ತಲುಪಲೂ ಹೆಚ್ಚು ಕಾಲ ಹಿಡಿಯಲಿಲ್ಲ. ಇದರಿಂದ ಮಸೀದಿಯ ಧರ್ಮಗುರುಗಳು ಹಾಗೂ ನ್ಯಾಯಮಾರ್ಗದಲ್ಲಿ ಬಾಳುತ್ತಿದ್ದಂಥ ಮುಸಲ್ಮಾನರೆಲ್ಲ ಸಾಹೇಬರ ಮೇಲೆ ತೀವ್ರವಾಗಿ ಮುನಿಸಿಕೊಂಡರು. ಹಾಗಾಗಿ ಅವರೆಲ್ಲರೂ ತುರ್ತಾಗಿ ಮಸೀದಿಯಲ್ಲಿ ಸಭೆ ಸೇರಿ ಸಾಹೇಬರನ್ನು ಕರೆಯಿಸಿಕೊಂಡರು. ಆದರೆ ವಿಷಯವನ್ನು ಸ್ಪಷ್ಟವಾಗಿ ತಿಳಿದಿದ್ದ ಸಾಹೇಬರು ಹೆದರುತ್ತಲೇ ಹೋಗಿ ಅವರೆದುರು ಆಸೀನರಾದರು. ತುಸುಹೊತ್ತಲ್ಲಿ ಎಲ್ಲರೂ ಸಾಹೇಬರಿಗೆ ಹೀನಾಯವಾಗಿ ಛೀಮಾರಿ ಹಾಕಿದರಲ್ಲದೇ ಇನ್ನು ಮುಂದೆ ನೀವು ಇಂಥ ಹಾಳು ಚಟುವಟಿಕೆಯನ್ನು ನಡೆಸುವುದು ತಿಳಿದು ಬಂತೆoದರೆ ಇಸ್ಲಾಂ ಸಮುದಾಯದಿಂದಲೇ ನಿಮ್ಮನ್ನು ಬಹಿಷ್ಕರಿಸಲಾಗುವುದು! ಎಂದು ಕಟುವಾದ ಎಚ್ಚರಿಕೆಯನ್ನೂ ನೀಡಿದರು.
ಅಷ್ಟು ಕೇಳಿದ ಸಾಹೇಬರು ನಿಜಕ್ಕೂ ಪಶ್ಚಾತ್ತಾಪಪಟ್ಟರೋ ಅಥವಾ ತಮ್ಮ ಜಾತಿಬಾಂಧವರು ಮತ್ತು ಕುಟುಂಬಿಕರ ಮುಂದೆ ತಮ್ಮ ಅಳಿದುಳಿದಿರುವ ಗೌರವವನ್ನು ಉಳಿಸಿಕೊಳ್ಳುವುದಕ್ಕೆಂದೇ ತಾವು ಬದಲಾದವರಂತೆ ನಟಿಸಿದರೋ ಗೊತ್ತಿಲ್ಲ. ಒಟ್ಟಾರೆ, ‘ಹೌದು. ಹೌದು. ನನ್ನಿಂದ ಬಹಳ ದೊಡ್ಡದೊಂದು ಅಪಚಾರ ನಡೆದಿರುವುದನ್ನು ಮನಸಾರೆ ಒಪ್ಪಿಕೊಳ್ಳುತ್ತೇನೆ. ಅದಕ್ಕೆ ಪ್ರಾಯಃಶ್ಚಿತ್ತವಾಗಿ ತಾವುಗಳೆಲ್ಲ ಯಾವ ಶಿಕ್ಷೆಯನ್ನು ನೀಡುವುದಿದ್ದರೂ ಸ್ವೀಕರಿಸಲು ಸಿದ್ಧನಿದ್ದೇನೆ ಮತ್ತು ಇನ್ನು ಯಾವತ್ತೂ ನನ್ನಿಂದ ಇಂಥ ತಪ್ಪುಗಳು ನಡೆಯುವುದಿಲ್ಲ! ಇನ್ನು ಮುಂದೆ ನಮ್ಮ ಪವಿತ್ರ ಗ್ರಂಥ ಕುರಾನ್ ತೋರಿಸುವ ಸನ್ಮಾರ್ಗದಲ್ಲಿಯೇ ನಡೆಯಲು ಬಯಸುತ್ತೇನೆ ಎಂದು ಇವತ್ತು ತಮ್ಮೆಲ್ಲರ ಮುಂದೆ ಪ್ರಮಾಣ ಮಾಡಿ ಹೇಳುತ್ತೇನೆ!’ ಎಂದು ಬಹಳ ವಿನಯ ಮತ್ತು ವಿಷಾದದಿಂದ ಹೇಳಿದರು. ಹಾಗಾಗಿ ಅವರ ಎಣಿಕೆಯಂತೆಯೇ ಗುರುಗಳ ಸಮೇತ ಬಹುತೇಕರು ಸಮಾಧಾನಗೊಂಡರು ಮತ್ತು ಈ ಹಿಂದೆ ಅವರಿಂದ ಅನೇಕ ರೀತಿಯ ಸಹಾಯಗಳನ್ನು ಪಡೆದಂಥ ಒಂದಷ್ಟು ಮಂದಿಯೂ ಆಹೊತ್ತಲ್ಲಿ ಮುಂದೆ ಬಂದವರು ಸಾಹೇಬರಿಗೆ ಮತ್ತಷ್ಟು ಮುತುವರ್ಜಿಯಿಂದ ಬುದ್ಧಿವಾದವನ್ನೂ, ಕ್ಷಮೆಯನ್ನೂ ಒಟ್ಟಿಗೆ ನೀಡಿ ಕಳುಹಿಸಿಕೊಟ್ಟರು.
ಸಾಹೇಬರು ನಿಶ್ಚಿಂತರಾಗಿ ಮನೆಗೆ ಮರಳಿದವರು ಮಸೀದಿಯಲ್ಲಿ ನಡೆದ ಮಾತುಕತೆಯನ್ನು ಮತ್ತು ತಾವು ಅವರೆಲ್ಲರ ಸಮ್ಮುಖದಲ್ಲಿ ಮಾಡಿದ ಪ್ರಮಾಣವನ್ನೂ ಹೆಂಡತಿಗೆ ಹೃದರ್ಯಸ್ಪರ್ಶಿಯಾಗಿ ವಿವರಿಸಿದರು. ಅದನ್ನು ಕೇಳಿದ ಕೈರುನ್ನೀಸಾಳಿಗೂ ನೆಮ್ಮದಿಯಾಯಿತು. ಹಾಗಾಗಿ ಅವಳು, ‘ನೋಡಿ ಮಾರಾಯ್ರೇ, ನೀವು ಈಗಾಗಲೇ ನಮ್ಮ ಮುಂದಿನ ಎರಡು ಮೂರು ತಲೆಮಾರು ಕುಳಿತುಂಡರೂ ಕರಗದಷ್ಟು ದೊಡ್ಡ ಆಸ್ತಿಯನ್ನು ಮಾಡಿಟ್ಟಿದ್ದೀರಿ. ಇನ್ನುಮುಂದೆ ಅದನ್ನೆಲ್ಲ ನಾವು ಚೆನ್ನಾಗಿ ಅನುಭವಿಸುತ್ತ, ಒಂದಷ್ಟನ್ನು ಬಡಬಗ್ಗರಿಗೆ ದಾನಧರ್ಮಗಳನ್ನೂ ಮಾಡುತ್ತ ಚಿನ್ನದಂಥ ಬಾಳು ಬದುಕಬೇಕು. ಅದನ್ನು ಬಿಟ್ಟು ಇನ್ನೂ ಇನ್ನೂ ದುರಾಸೆ ಪಡುತ್ತ ಹೋದರೆ ಅಲ್ಲಾಹ್ ನಮ್ಮನ್ನು ಖಂಡಿತಾ ಕ್ಷಮಿಸಲಾರ! ಆದ್ದರಿಂದ ಈಗಿನಿಂದಲೇ ನೀವು ಆ ಹಾಳು ಮರದ ವ್ಯಾಪಾರವನ್ನೆಲ್ಲ ಬಿಟ್ಟು ಆರಾಮವಾಗಿ ಓಡಾಡಿಕೊಂಡಿರಿ. ಹಾಗೂ ಒಂದುವೇಳೆ ಸಮಯ ಕಳೆಯಲು ಬೇಜಾರಾಯಿತೆಂದರೆ ಪೈಂಟಿoಗ್ ಕಾಂಟ್ರೆಕ್ಟ್ ಇದೆಯಲ್ಲ ಅದನ್ನೇ ಮುಂದುವರೆಸಿ!’ ಎಂದು ಮೃದುವಾಗಿ ಆಜ್ಞಾಪಿಸಿದಳು. ಅಷ್ಟು ಕೇಳಿದ ಸಾಹೇಬರೂ ಹೆಂಡತಿಯ ಮಾತಿಗೆ ಪೂರ್ಣ ಶರಣಾಗಿಬಿಟ್ಟರು.
ಇತ್ತ ಸರೋಜಾಳ ಬದುಕು ಮಾತ್ರ ಪೂರ್ಣ ಹದಗೆಟ್ಟಿತ್ತು. ಲಕ್ಷ್ಮಣನ ವಿಚಾರಣೆ ನಡೆಯುವವರೆಗೆ ಯಾವುದನ್ನೂ ಚಿಂತಿಸದೆ ಅವನ ಬಿಡುಗಡೆಗಾಗಿಯೇ ಹೋರಾಡಿದವಳು ಅವನು ಶಿಕ್ಷೆಗೆ ಗುರಿಯಾಗುತ್ತಲೇ ತನ್ನ ಬದುಕಿನ ಎಲ್ಲ ಭರವಸೆಗಳನ್ನೂ ಕಳೆದುಕೊಂಡುಬಿಟ್ಟಳು. ಹಾಗಾಗಿ ಕೆಲವು ಕಾಲ ತೀವ್ರ ಹತಾಶೆಯು ಅವಳನ್ನು ಆವರಿಸಿಕೊಂಡು ಧೃತಿಗೆಟ್ಟು ಕುಳಿತಳು. ಆದರೆ ತನ್ನದೆಂಬ ಎರಡು ಕರುಳಿನ ಕುಡಿಗಳಿವೆಯಲ್ಲ? ಅವುಗಳನ್ನೇನು ಮಾಡುವುದು? ಅವರಿಗಾಗಿಯಾದರೂ ತಾನು ಚೈತನ್ಯದಿಂದ ಬಾಳಬೇಕಿದೆ ಎಂದುಕೊoಡವಳಿಗೆ ಮಕ್ಕಳ ಭವಿಷ್ಯದ ಚಿಂತೆಯೂ ಕಾಡಲಾರಂಭಿಸಿತು. ಆದ್ದರಿಂದ ನಿಧಾನವಾಗಿ ಎಲ್ಲ ನೋವುಗಳನ್ನೂ ಸಂಭಾಳಿಸಿಕೊoಡು ಹಗಲಿರುಳು ಬೀಡಿ ತಿರುವುತ್ತ ದುಡಿಮೆಗೆ ತೊಡಗಿಕೊಂಡಳು.
ಲಕ್ಷ್ಮಣ ಜೈಲು ಸೇರಿದ ನಂತರ ಚೌಳುಕೇರಿಯಲ್ಲೂ ಸರೋಜಾಳ ಬದುಕು ದುಸ್ತರವಾಗತೊಡಗಿತು. ಸರೋಜಳ ಮೇಲೂ ಮತ್ತವಳಿಗೆ ಆಸರೆ ನೀಡಿದ್ದ ಅಕ್ಕಯಕ್ಕನ ಮೇಲೂ ನೆರೆಕರೆಯವರೆಲ್ಲ ಅಸಡ್ಡೆ, ತಿರಸ್ಕಾರವನ್ನು ತೋರತೊಡಗಿದರು. ‘ನಾವೆಲ್ಲರೂ ಬಡವರು ಹೌದು. ಆದರೆ ಇಲ್ಲಿಯತನಕ ಯಾವೊಂದೂ ಕಪ್ಪು ಚುಕ್ಕೆಯೂ ತಗುಲದಂತೆ ಮರ್ಯಾದೆಯಿಂದ ಬದುಕುತ್ತ ಬಂದವರು! ಆದರೀಗ ಎಲ್ಲೆಲ್ಲಿಂದಲೋ ಬಂದ ಕಳ್ಳಕಾಕರ ಕುಟುಂಬಕ್ಕೆ ಅಕ್ಕಯಕ್ಕ ಆಶ್ರಯ ನೀಡಿದ್ದರ ಮೂಲಕ ಊರ ಮಾನಮರ್ಯಾದೆಯನ್ನೇ ಹಾಳು ಮಾಡಿಬಿಟ್ಟಳು!’ ಎಂದು ಊರವರೆಲ್ಲ ಚುಚ್ಚಿ ಮಾತಾಡತೊಡಗಿದರು. ಅಷ್ಟಲ್ಲದೇ ಅಕ್ಕಯಕ್ಕನ ಆಪ್ತೇಷ್ಟರನೇಕರು ಕೂಡಾ ಅವಳ ಗುಡಿಸಲಿಗೆ ಬರುವುದನ್ನು ನಿಲ್ಲಿಸಿಬಿಟ್ಟರು. ಇವೆಲ್ಲವೂ ಅಕ್ಕಯಕ್ಕನ ನೆಮ್ಮದಿಯನ್ನೂ ಕೆಡಿಸಲಾರಂಭಿಸಿತು. ತನ್ನ ಮಗ ಗತಿಸಿದ ಸಂದರ್ಭದಲ್ಲೇ ಅವನ ಮರುಜನ್ಮವೆಂಬoತೆ ಬಂದು ನಿಂತ ಲಕ್ಷ್ಮಣನಿಗೆ ವಾತ್ಸಲ್ಯದಿಂದ ಆಸರೆ ನೀಡಿದ ಆ ಮುದಿಜೀವಕ್ಕೆ ಅವನು ದುಡಿಯುವ ಧಾವಂತದಲ್ಲಿ ಮಾಡಿದ ದುರಾಚಾರವೂ ಮತ್ತದರ ಪ್ರತಿಫಲವಾಗಿ ಜೈಲು ಸೇರಿದ್ದೆಲ್ಲವೂ ಅವಳಿಗೆ ಬಹಳ ದೊಡ್ಡ ಆಘಾತವಾಗಿ ಪರಿಣಮಿಸಿತ್ತು. ಅವಳ ಆ ನಿರಾಶೆಯು ಲಕ್ಷ್ಮಣನ ಕುಟುಂಬದ ಮೇಲೆ ನಿರಾಸಕ್ತಿ ತಳೆಯುವಂತೆಯೂ ಮಾಡಿಬಿಟ್ಟಿತು. ಆದ್ದರಿಂದ ಅದು ಕ್ರಮೇಣ ಸರೋಜ ಮತ್ತವಳ ಮಕ್ಕಳ ಮೇಲೆ ವ್ಯಂಗ್ಯ, ತಾತ್ಸಾರದ ಕೊಂಕು ಮಾತು, ವರ್ತನೆಗಳ ಮೂಲಕ ಹರಿಯತೊಡಗಿತು. ಅಕ್ಕಯಕ್ಕನ ಇಂಥ ನಡವಳಿಕೆಯಿಂದ ಸರೋಜ ಮತ್ತಷ್ಟು ಕುಗ್ಗಿ ಹೋದಳು. ಒಂದೆಡೆ ತನ್ನ ಜೀವಕ್ಕೆ ಜೀವವಾದ ಗಂಡನನ್ನು ಕಳೆದುಕೊಂಡ ದುಃಖವು ಅವಳನ್ನು ಇನ್ನಿಲ್ಲದಂತೆ ಭಾದಿಸುತ್ತಿದ್ದರೆ ಇನ್ನೊಂದೆಡೆ ಹೆತ್ತವಳಂತೆಯೇ ಆದರಿಸುತ್ತಿದ್ದ ಅಕ್ಕಯಕ್ಕಳೂ ತಿರಸ್ಕಾರದಿಂದ ನೋಡತೊಡಗಿದ್ದು ಮತ್ತು ಊರವರ ತಾತ್ಸಾರದ ನೋಟವೂ ಅವಳನ್ನು ತೀವ್ರವಾಗಿ ಘಾಸಿಗೊಳಿಸುತ್ತ ಸಾಗಿತು. ಪರಿಣಾಮವಾಗಿ ಅವಳಿಗೆ ಚೌಳುಕೇರಿಯ ವಾತಾವರಣವೇ ಉಸಿರುಗಟ್ಟಿಸತೊಡಗಿತು.
(ಮುಂದುವರೆಯುವುದು)