23.5 C
Karnataka
April 4, 2025
ಧಾರಾವಾಹಿ

ವಿವಶ…



ಧಾರವಾಹಿ 33
ಸರೋಜಾಳ ಮನಸ್ಸೀಗ ಎಷ್ಟು ಬೇಗ ಸಾಧ್ಯವೋ ಅಷ್ಟು ತುರ್ತಾಗಿ ಚೌಳುಕೇರಿಯನ್ನು ತೊರೆಯಲು ಹಪಹಪಿಸುತ್ತಿತ್ತು. ಹಾಗಾಗಿ ವಾರದಲ್ಲಿ ಎರಡು ಮೂರು ಬಾರಿ ಬೀಡಿ ಬ್ರಾಂಚಿಗೆ ಹೋದಾಗೆಲ್ಲ ಅಲ್ಲಿನ ಪರಿಚಯದವರೊಂದಿಗೂ, ಬೀಡಿ ಚಕ್ಕರ್ ರತ್ನಾಕರನೊಂದಿಗೂ ತನಗೆ ಎಲ್ಲಾದರೊಂದು ಬಾಡಿಗೆ ಸೂರು ದೊರಕಿಸಿಕೊಡುವಂತೆ ಕೇಳುತ್ತ ಆ ವಿಷಯವನ್ನು ಆಗಾಗ ಎಲ್ಲರಿಗೂ ನೆನಪಿಸುತ್ತ ಬರುತ್ತಿದ್ದಳು. ಹೀಗೆ ಆವತ್ತೊಂದು ಶನಿವಾರ ಸಂಜೆ ಬೀಡಿಯ ಮಜೂರಿ ಪಡೆಯಲು ಹೋದವಳನ್ನು ಕಂಡ ರತ್ನಾಕರನಿಗೆ ಅವಳು ಬಾಡಿಗೆ ಮನೆ ಕೇಳಿದ್ದು ನೆನಪಾಯಿತು. “ಹ್ಞಾಂ, ಸರೋಜಾ, ನೀನು ಬಾಡಿಗೆ ಮನೆ ಬೇಕೆಂದು ಹೇಳಿದ್ದಿಯಲ್ಲ. ಮೊನ್ನೆ ನಾನು ಗಂಗರಬೀಡಿನ ಬ್ರಾಂಚಿನಲ್ಲಿ ಬೀಡಿ ತೆಗೆಯುತ್ತಿದ್ದಾಗ ಅಣ್ಣಪ್ಪ ಎಂಬವನು ಬಂದಿದ್ದ. ಅವನು, ‘ಗಂಗರಬೀಡಿನ ಶ್ರೀಧರ ಶೆಟ್ಟರ ತೋಟ ನೋಡಿಕೊಳ್ಳಲು ಒಂದು ಕುಟುಂಬ ಬೇಕಿದೆ. ವಾರದಲ್ಲಿ ಮೂರು ನಾಲ್ಕು ದಿನವಷ್ಟೇ ತೋಟದ ಕೆಲಸ ಮಾಡಿದರಾಯ್ತು. ಇರಲು ಮನೆಯನ್ನೂ, ಕೆಲಸಕ್ಕೆ ಸಂಬಳವನ್ನೂ ಕೊಡುತ್ತಾರಂತೆ. ಯಾರಾದರೂ ಇದ್ದರೆ ತಿಳಿಸಿಬಿಡಿ!’ ಅಂತ ಹೇಳಿದ. ಆಗ ನನಗೆ ನಿನ್ನ ನೆನಪಾಯಿತು ನೋಡು. ನೀನು ಹೋಗುವುದಾದರೆ ಶೆಟ್ಟರ ವಿಳಾಸವನ್ನು ಕೊಡುತ್ತೇನೆ!” ಎಂದು ಅವಳ ಬೀಡಿ ತೆಗೆಯುತ್ತ ಹೇಳಿದ. ಅಷ್ಟು ಕೇಳಿದ ಸರೋಜ ನೆಮ್ಮದಿಯಿಂದ, ‘ಆಯ್ತು ರತ್ನಾಕರಣ್ಣಾ ವಿಳಾಸ ಕೊಡಿ. ನಾಳೆನೇ ಹೋಗಿ ವಿಚಾರಿಸುತ್ತೇನೆ. ನಿಮ್ಮ ಉಪಕಾರವನ್ನೆಂದೂ ಮರೆಯೋದಿಲ್ಲ!’ ಎಂದು ಅವನಿಗೆ ಕೃತಜ್ಞತೆ ಸಲ್ಲಿಸಿ ವಿಳಾಸ ಪಡೆದು ಮನೆಗೆ ಹಿಂದಿರುಗಿದಳು. ಮರುದಿನ ಬೆಳಿಗ್ಗೆ ಅಕ್ಕಯಕ್ಕನಿಗೆ ವಿಷಯ ತಿಳಿಸದೆ ಮಕ್ಕಳನ್ನು ಅವಳೊಡನೆ ಬಿಟ್ಟು ಗಂಗರಬೀಡಿನ ಬಸ್ಸು ಹತ್ತಿದಳು.


ಈಗೀಗ ವರ್ಷದ ಬಹುಪಾಲು ಘಟ್ಟದ ಮೇಲಿನ ಎಸ್ಟೇಟುಗಳ ಸಂಚಾರದಲ್ಲಿಯೇ ಕಾಲ ಕಳೆಯುತ್ತಿದ್ದ ಶ್ರೀಧರ ಶೆಟ್ಟರು ಆವತ್ತು ಸರೋಜಾಳ ಪುಣ್ಯಕ್ಕೇನೋ ಎಂಬoತೆ ಗಂಗರಬೀಡಿನಲ್ಲೇ ಉಳಿದಿದ್ದರು. ಸರೋಜ ಶೆಟ್ಟರ ಬಂಗಲೆಯನ್ನು ಪ್ರವೇಶಿಸಿ ಆಳುಗಳ ಮೂಲಕ ಅವರನ್ನು ಕಂಡವಳು ಭಯ, ಸಂಕೋಚದಿoದಲೇ ತನ್ನ ಪರಿಸ್ಥಿತಿಯನ್ನು ವಿವರಿಸಿದಳು. ಕೊನೆಯಲ್ಲಿ ತನ್ನ ಗಂಡನ ವಿಷಯ ಹೇಳಲೋ ಬೇಡವೋ ಎಂಬ ಗೊಂದಲಕ್ಕೂ ಬಿದ್ದಳು. ಆದರೆ ಆಹೊತ್ತು ಶೆಟ್ಟರು ಅವಳ ಪಾಲಿಗೆ ಯಾಕೋ ಆಪತ್ಬಾಂಧವರoತೆ ಕಾಣಿಸಿದರು. ಹಾಗಾಗಿ ಅವಳಿಗೆ ಇರುವ ಸತ್ಯವನ್ನು ತಾನು ಹೇಳಿ ಬಿಡುವುದೇ ಸರಿ ಎಂದೆನ್ನಿಸಿತು. ಎಲ್ಲವನ್ನೂ ಅವರಲ್ಲಿ ದೈನ್ಯದಿಂದ ತೋಡಿಕೊಂಡಳು. ಆದರೆ ಶೆಟ್ಟರಿಗೆ ಹಿಂದಿನಿoದಲೂ ಉಸ್ಮಾನ್ ಸಾಹೇಬರ ವ್ಯವಹಾರದ ಕುರಿತು ಮತ್ತು ಅವರ ‘ಗಂಧ ಪ್ರಕರಣ’ ದಲ್ಲಿ ಕೆಲವು ಆಳುಗಳು ಜೈಲು ಪಾಲಾದುದರ ಕುರಿತೂ ತಿಳಿದಿತ್ತು. ಹಾಗಾಗಿ ಸರೋಜಾಳ ಮೇಲೆ ಅವರಿಗೆ ಅನುಕಂಪ ಹುಟ್ಟಿತು ಎನ್ನುವುದಕ್ಕಿಂತಲೂ ತಮ್ಮ ತೋಟದ ಕೆಲಸಕ್ಕೆ ಆಳುಗಳ ಜರೂರತ್ತು ಅವರಿಗೆ ಬಹಳವಿತ್ತು. ಆದ್ದರಿಂದ, ಇವಳ ಗಂಡ ಬರುವುದೇನಿದ್ದರೂ ಇನ್ನು ಹತ್ತು ವರ್ಷಗಳ ನಂತರವೇ. ಹಾಗಾಗಿ ಅದರ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದುಕೊoಡವರು ಅವಳಿಗೆ ಕೆಲಸಕ್ಕೆ ಬರಲು ಸೂಚಿಸಿ, ತಮ್ಮ ಮನೆಯ ಹೆಣ್ಣಾಳಿನಿಂದ ಶೆಡ್ಡಿನ ಕೀಲಿಕೈಯನ್ನೂ ಕೊಡಿಸಿದರು. ಮರುಕ್ಷಣ ಸರೋಜಾಳಿಗೆ ದೇವರೇ ಶೆಟ್ಟರ ರೂಪದಲ್ಲಿ ಕಾಣಿಸಿದಷ್ಟು ಸಂತೋಷ, ದುಃಖ ಒಟ್ಟೊಟ್ಟಿಗಾಯಿತು. ಶೆಟ್ಟರಿಗೆ ನಮ್ರವಾಗಿ ಕೈಮುಗಿದು ಬಾಡಿಗೆ ನಿವಾಸವನ್ನು ನೋಡಲು ಹೊರಗೆ ಬಂದಳು.
ಪ್ರೇಮ, ತೋಮರ ಪಕ್ಕದ ಶೆಡ್ಡನ್ನು ಶೆಟ್ಟರು ಸರೋಜಾಳಿಗೆ ನೀಡಿದ್ದರು. ಸರೋಜ ಶೆಡ್ಡಿನತ್ತ ಬರುವಾಗ ಪ್ರೇಮ ತನ್ನ ಶೆಡ್ಡಿನ ತಗ್ಗಾದ ಒಂಟಿ ಮೆಟ್ಟಿಲಲ್ಲಿ ಕುಳಿತುಕೊಂಡು ಬೀಡಿಯೆಲೆ ಕತ್ತರಿಸುತ್ತಿದ್ದಳು. ತೋಮ ತೋಟದ ಕೆಲಸಕ್ಕೆ ಹೋಗಿದ್ದ. ಪ್ರೇಮಾಳನ್ನು ಕಂಡ ಸರೋಜ ಮುಗುಳ್ನಗುತ್ತ ತನ್ನ ಶೆಡ್ಡು ಹೊಕ್ಕಳು. ಮನೆಯೊಳಗನ್ನು ದೀರ್ಘವಾಗಿ ಅವಲೋಕಿಸಿದಳು. ಹಲವು ತಿಂಗಳಿoದ ಮನುಷ್ಯರ ವಾಸವಿರದಿದ್ದುದರಿಂದ ಕೋಣೆಯಿಡೀ ಧೂಳು ಮತ್ತು ಜೇಡರ ಬಲೆಗಳು ತುಂಬಿದ್ದವು. ಆದರೂ ಸರೋಜಾಳಿಗೆ ಮನೆ ಹಿಡಿಸಿತು. ಹಿಡಿಸದಿದ್ದರೂ ವಿಧಿಯಿಲ್ಲ ಎಂದುಕೊoಡಳು. ನಾಳೆ ಬಂದು ಸ್ವಚ್ಛಗೊಳಿಸುವುದೆಂದು ಯೋಚಿಸಿ ಹೊರಗೆ ಬಂದು ಬೀಗ ಹಾಕಿದಳು. ಸರೋಜ ಹೊರಗೆ ಬರುವುದನ್ನೇ ಕಾಯುತ್ತಿದ್ದ ಪ್ರೇಮ, ‘ಎಲ್ಲಿಂದ ಬಂದಿರಿ…, ತೋಟದ ಕೆಲಸಕ್ಕೆ ಬರುತ್ತೀರಾ…?’ ಎಂದು ಕುತೂಹಲದಿಂದ ಕೇಳಿದಳು. ‘ಹೌದುರೀ, ನಾಳೆಯಿಂದ ಬರಬೇಕೆಂದಿದ್ದೇನೆ!’ ಎಂದು ಸರೋಜ ಉತ್ತರಿಸಿದಳು. ಬಳಿಕ ಪ್ರೇಮ ಸ್ತಿçà ಸಹಜ ಕುತೂಹಲದಿಂದ ಅವಳ ಕುರಿತು ಇನ್ನೊಂದಷ್ಟು ವಿಚಾರಿಸಿದಳು. ಅದಕ್ಕೆ ಸರೋಜಾಳೂ ಸ್ನೇಹದಿಂದಲೇ ಉತ್ತರಿಸಿದಳು. ಹಾಗಾಗಿ ಅಷ್ಟು ಸಣ್ಣ ಮಾತುಕತೆಯೂ ಅವರ ನಡುವೆ ಹೊಸ ಆತ್ಮೀಯತೆಯೊಂದನ್ನು ಹುಟ್ಟುಹಾಕಿತು. ಸರೋಜಾಳಿಗೆ ಪ್ರೇಮ ಇಷ್ಟವಾದಳು. ಆದ್ದರಿಂದ, ‘ಆಯ್ತುರೀ ನಾಳೆ ಬರುತ್ತೇನೆ. ಮಾತಾಡುವ. ಮನೆಯಲ್ಲಿ ಮಕ್ಕಳಿಬ್ಬರನ್ನೇ ಬಿಟ್ಟು ಬಂದಿದ್ದೇನೆ. ಇನ್ನೂ ಅಡುಗೆಯಾಗಿಲ್ಲ!’ ಎನ್ನುತ್ತ ಅವಳಿಂದ ಬೀಳ್ಗೊಂಡು ಹಿಂದಿರುಗಿದಳು. ಪ್ರೇಮಾಳಿಗೂ ಯಾರೂ ನೆರೆಕರೆಯವರಿಲ್ಲದೆ ಬೇಜಾರು ಬಂದಿತ್ತು. ಈಗ ಸರೋಜ ಬಂದು ಹೋದ ಮೇಲೆ ಅವಳೂ ಗೆಲುವಾದಳು.
ಚೌಳುಕೇರಿಗೆ ಹಿಂದಿರುಗಿದ ಸರೋಜ ತಾನು ಗಂಗರಬೀಡಿಗೆ ಹೋಗಿ ಬಂದ ಸುದ್ದಿಯನ್ನು ಮತ್ತು ಇನ್ನು ಮುಂದೆ ತಾನು ಅಲ್ಲಿಯೇ ವಾಸಿಸಲಿರುವುದನ್ನೂ ಅಕ್ಕಯಕ್ಕನಿಗೆ ಮೃದುವಾಗಿ ವಿವರಿಸಿದಳು. ಅಲ್ಲಿಯವರೆಗೆ ಲಕ್ಷ್ಮಣನ ಕುಟುಂಬದ ಮೇಲೆ ಉದಾಸೀನಳಾಗಿದ್ದ ಅಕ್ಕಯಕ್ಕನ ಮನಸ್ಸು ಈಗವರು ಹೊರಟು ಹೋಗುತ್ತಾರೆಂದ ಕೂಡಲೇ ನೋವಿನಿಂದ ಮುದುಡಿತು. ಅವಳ ಸುಕ್ಕುಗಟ್ಟಿದ್ದ ಕೆನ್ನೆಗಳು ಮೆಲ್ಲನೆ ಅದುರಿದವು. ನಿಸ್ತೇಜ ಕಣ್ಣುಗಳು ನಿಧಾನಕ್ಕೆ ತೇವಗೊಂಡು ದೃಷ್ಟಿ ಮಂಕಾಯಿತು. ತನ್ನ ಸ್ವಂತ ಸೊಸೆ ಮತ್ತು ಮೊಮ್ಮಕ್ಕಳನ್ನೇ ಅಗಲುವಂಥ ದುಃಖವು ಆ ಮುದಿ ಜೀವವನ್ನು ಹಿಂಡಿ ಹಿಪ್ಪೆ ಮಾಡಿದ್ದರೊಂದಿಗೆ ತೀವ್ರ ಒಂಟಿತನದ ಭಾವವೂ ಅವಳನ್ನು ನೋಯಿಸಿತು. ಆದರೆ ತನ್ನ ಸಂಬoಧಿಕರ, ಜಾತಿ ಬಾಂಧವರ ಮತ್ತು ನೆರಕರೆಯವರ ತಾತ್ಸಾರದ ನಡೆನುಡಿಗಳು ಅವಳನ್ನು ಮೊದಲೇ ಘಾಸಿಗೊಳಿಸಿದ್ದುದರಿಂದ ಈಗ ಸರೋಜಾಳ ಮಾತಿಗೆ ಏನೂ ಉತ್ತರಿಸಿದೆ ಮೌನವಾಗಿ ಕಣ್ಣೀರಿಟ್ಟಳು. ಅದನ್ನು ಕಂಡ ಸರೋಜಾಳ ಕಣ್ಣುಗಳೂ ತುಂಬಿದವು.
ಮರುದಿನ ಸರೋಜ ತನ್ನ ಒಂದಿಷ್ಟು ಪಾತ್ರಪರಡಿ ಮತ್ತು ಬಟ್ಟೆಬರೆಗಳನ್ನು ಗಂಟುಕಟ್ಟಿಕೊoಡು ಮಕ್ಕಳೊಂದಿಗೆ ಹೊರಟು ನಿಂತವಳಿಗೆ ಅಕ್ಕಯಕ್ಕ ಒಂದು ವಾರಕ್ಕಾಗುವಷ್ಟು ದಿನಸಿ ಸಾಮಾನು ಮತ್ತು ಒಂದಷ್ಟು ಒಣಮೀನುಗಳನ್ನು ಪ್ರೀತಿಯಿಂದ ಕಟ್ಟಿಕೊಟ್ಟಳು. ಅಮ್ಮ ಹೊರಟು ನಿಂತಾಗ ಮಕ್ಕಳು ಅಕ್ಕಯಕ್ಕನನ್ನು ತಬ್ಬಿಕೊಂಡು, ‘ಅಜ್ಜಿ…ಅಜ್ಜೀ…! ನಾವು ಎಲ್ಲಿಗೂ ಹೋಗುವುದಿಲ್ಲಜ್ಜೀ…! ಇನ್ನೊಂದಿಗೇ ಇರುತ್ತೇವೆ… ಅಮ್ಮನಿಗೆ ಹೇಳಜ್ಜೀ…!’ ಎಂದು ಅಂಗಲಾಚಿ ಅತ್ತಾಗ ಅಕ್ಕಯಕ್ಕ ಧೊಪ್ಪನೆ ಕುಸಿದು ಕುಳಿತು ಬಿಕ್ಕಿಬಿಕ್ಕಿ ಅತ್ತಳು. ಆಗ ಸರೋಜಾಳಿಗೂ ದುಃಖ ಒತ್ತರಿಸಿ ಬಂತು. ಆದರೂ ಸಂಭಾಳಿಸಿಕೊoಡವಳು, ‘ಅಳಬೇಡಿ ಅಕ್ಕಯಕ್ಕ. ನೀವು ಅಳುತ್ತ ಕೂತರೆ ನಾವು ಹೋಗುವುದಾದರೂ ಹೇಗೆ ಹೇಳಿ…?’ ಎಂದು ತಾನೂ ಬಿಕ್ಕುತ್ತ, ‘ಮಕ್ಕಳೊಂದಿಗೆ ಆಗಾಗ ಬಂದು ಹೋಗುತ್ತೇನೆ ಚಿಂತಿಸಬೇಡಿ!’ ಎಂದು ಅವಳನ್ನು ಸಾಂತ್ವನಿಸಿ ಮಕ್ಕಳನ್ನು ಬಲವಂತದಿoದ ಎಳೆದುಕೊಂಡು ಹೊರಟು ಹೋದಳು.


ಸರೋಜ, ಚೌಳುಕೇರಿಗೆ ವಿದಾಯ ಹೇಳಿ ಗಂಗರಬೀಡಿಗೆ ಬಂದವಳು ತನ್ನ ಶೆಡ್ಡನ್ನು ಸ್ವಚ್ಛಗೊಳಿಸತೊಡಗಿದಳು. ಇತ್ತ ಹೊಸ ಊರು, ಹೊಸ ಮನೆಗೆ ಬಂದಿದ್ದ ಮಕ್ಕಳೂ ಗೆಲುವಾದವರು ಲವಲವಿಕೆಯಿಂದ ಅಮ್ಮನಿಗೆ ನೆರವಾದರು. ಸರೋಜ ಮನೆ ಸಾಮಾನುಗಳನ್ನು ಜೋಡಿಸುತ್ತಿದ್ದಾಗ ಪ್ರೇಮ ಒಂದೆರಡು ಬಾರಿ ಬಂದು ಸರೋಜಾಳನ್ನೂ ಮಕ್ಕಳನ್ನೂ ಮಾತಾಡಿಸುತ್ತ ತಾನೂ ಸಹಾಯ ಮಾಡಲು ಮುಂದಾದಳು. ಆದರೆ ಸರೋಜ ಸಂಕೋಚದಿoದಲೇ ನಿರಾಕರಿಸಿದ್ದರಿಂದ ಅವಳು ಸ್ವಲ್ಪಹೊತ್ತಿದ್ದು ಹೊರಟು ಹೋದಳು. ಎಲ್ಲ ಕೆಲಸ ಮುಗಿಸಿದ ಬಳಿಕ ಮೂವರೂ ಸ್ನಾನ ಮಾಡಿದರು. ನಂತರ ಸರೋಜ, ಗೋಡೆಗೆ ಮೊಳೆ ಹೊಡೆದು ತಾನು ತಂದಿದ್ದ ಚಿಕ್ಕಮ್ಮದೇವಿ ಮತ್ತು ಮಾರಣಕಟ್ಟೆ ದೇವರ ಭಾವಚಿತ್ರಗಳನ್ನು ತೂಗು ಹಾಕಿ ದೀಪ ಹಚ್ಚಿದವಳು ಹಾಲುಕ್ಕಿಸುವ ಸಂಪ್ರದಾಯವನ್ನು ಮಾಡಿ ಮಕ್ಕಳಿಗೆ ನೀಡಿ ಬಾಡಿಗೆ ಮನೆಯಲ್ಲಿ ಹೊಸ ಜೀವನವನ್ನಾರಂಭಿಸಿದಳು. ಹಾಗಾಗಿ ಅಂದಿನ ಹಗಲು ಬಹಳ ಬೇಗನೆ ಸರಿದು ರಾತ್ರಿಯಾಯಿತು. ಅಕ್ಕಯಕ್ಕನ ಮನೆಯಲ್ಲೇ ಹುಟ್ಟಿ ಬೆಳೆದು ಹೆಚ್ಚಿನ ರಾತ್ರಿಗಳಲ್ಲಿ ಆ ಗುಡಿಸಲಿನ ಮುಳಿ ಹುಲ್ಲಿನ ಮಾಡನ್ನು ದಿಟ್ಟಿಸುತ್ತ, ಅಕ್ಕಯಕ್ಕನ ರೋಚಕ ಕಥೆ ಮತ್ತು ಇಂಪಾದ ಪಾಡ್ದಾನಗಳನ್ನು ಕೇಳುತ್ತ ನಡುನಡುವೆ ಏನೇನೋ ವಿನೋದ ಕೀಟಲೆಗಳನ್ನೂ ಮಾಡಿಕೊಂಡು ನಗುತ್ತ ನಿದ್ದೆಗೆ ಜಾರುತ್ತಿದ್ದ ಮಕ್ಕಳಿಗೆ ಇಂದು ಅಕ್ಕಯಕ್ಕನ ನೆನಪು ಬಹಳವೇ ಕಾಡಿತು. ಅದರಿಂದ ತುಸುಹೊತ್ತು ಖಿನ್ನರಾದರು. ಆದರೆ ಅವಳ ಮುಳಿ ಹುಲ್ಲಿನ ಮಾಡಿಗಿಂತ ಇಲ್ಲಿನ ಸಿಮೆಂಟು ಶೀಟಿನ ಛಾವಣಿ ಅವರಿಗೆ ಶುಭ್ರವಾಗಿ, ಆಕರ್ಷಕವಾಗಿ ಕಾಣಿಸಿತು. ಅದನ್ನು ದಿಟ್ಟಿಸುತ್ತ ತಂತಮ್ಮೊಳಗೆ ಹರಟುತ್ತ ನಿದ್ದೆಗೆ ಜಾರಿದರು. ಸರೋಜಳೂ ಚಾಪೆಗೊರಗಿದ್ದಳು. ಅವಳ ಮನಸ್ಸು ಕೂಡಾ ಅಕ್ಕಯಕ್ಕನನ್ನು ನೆನೆಯುತ್ತಿತ್ತು. ತನಗೂ ತನ್ನ ಕುಟುಂಬಕ್ಕೂ ಅವಳು ನೀಡುತ್ತಿದ್ದ ಪ್ರೀತಿ, ವಾತ್ಸಲ್ಯ ಮತ್ತು ಅವಳ ಉದಾರ ಗುಣವನ್ನು ನೆನೆದವಳಿಗೆ ತಟ್ಟನೆ ಅನಾಥಭಾವ ಕಾಡಿದ್ದರೊಂದಿಗೆ ಗಂಡನ ನೆನಪೂ ಒತ್ತರಿಸಿ ಬಂದಾಗ ದುಃಖವು ಕಟ್ಟೆಯೊಡೆಯಿತು. ಮಕ್ಕಳಿಗೆ ಬೆನ್ನು ಹಾಕಿ ಮಲಗಿ ಬಿಕ್ಕಿಬಿಕ್ಕಿ ಅತ್ತಳು. ಸ್ವಲ್ಪ ಸಮಾಧಾನವೆನಿಸಿದ ಬಳಿಕ ಸೋತು ಬಳಲಿದ್ದ ಅವಳ ದೇಹವು ಮೆಲ್ಲನೆ ನಿದ್ರೆಗೆ ಒಡ್ಡಿಕೊಂಡಿತು.
ಮರುದಿನ ಮುಂಜಾನೆ ಸರೋಜ ಬೇಗನೆದ್ದು ಮನೆಗೆಲಸ ಮುಗಿಸಿದಳು. ಬಳಿಕ ಪ್ರೇಮಾಳ ಮನೆಯತ್ತ ಹೋಗಿ, ‘ಪ್ರೇಮಕ್ಕಾ, ಓ ಪ್ರೇಮಕ್ಕಾ…!’ ಎಂದು ಕರೆದಳು. ಸರೋಜಾಳ ಧ್ವನಿ ಕೇಳಿ ಪ್ರೇಮ ಹೊರಗೆ ಬಂದಳು.
‘ಪ್ರೇಮಕ್ಕಾ ನಾನು ತೋಟದ ಕೆಲಸಕ್ಕೆ ಹೋಗುತ್ತಿದ್ದೇನೆ. ಸ್ವಲ್ಪ ಮಕ್ಕಳನ್ನು ನೋಡಿಕೊಳ್ಳಬಹುದಾ…?’ ಎಂದು ವಿನಂತಿಸಿದಳು.
‘ಆಯ್ತು ಸರೋಜಕ್ಕಾ. ನಾನೂ ಕೆಲಸಕ್ಕೆ ಬರುವವಳೇ. ಆದರೆ ನನ್ನ ಮಗಳು ಶ್ವೇತಾ ಮನೆಯಲ್ಲಿದ್ದಾಳೆ. ಮಕ್ಕಳು ಅವಳೊಂದಿಗಿರಲಿ!’ ಎಂದವಳು ಮಗಳನ್ನು ಕರೆದು ತಿಳಿಸಿದಳು. ಶ್ವೇತಾ, ಸರೋಜಾಳ ಹಿರಿಯ ಮಗಳು ಶಾರದಾಳ ವಯಸ್ಸಿನವಳು. ಹಾಗಾಗಿ ಅಂದಿನಿoದ ಆ ಮಕ್ಕಳು ಕೂಡಾ ಸ್ನೇಹಿತರಾದುದರಿಂದ ಸರೋಜ, ಪ್ರೇಮಾಳೊಂದಿಗೆ ನೆಮ್ಮದಿಯಿಂದ ತೋಟದ ಕೆಲಸಕ್ಕೆ ಹೋಗತೊಡಗಿದಳು. ಆದರೆ ಅಗೆದು, ಬಗೆದು, ಕಡಿದು, ಕತ್ತರಿಸುವಂಥ ಕಷ್ಟದ ಕೆಲಸಗಳ ಅಭ್ಯಾಸವಿಲ್ಲದ ಅವಳು ಒಂದು ತಿಂಗಳ ಎಡೆಬಿಡದ ದುಡಿಮೆಯಿಂದ ಸೋತು ಹೈರಾಣಾಗಿ ಒಮ್ಮೆ ಜ್ವರ ಹಿಡಿದು ಒಂದು ವಾರ ಮಲಗಿಬಿಟ್ಟಳು. ಆದರೆ ಮೂವರ ಹೊಟ್ಟೆಪಾಡಿನ ಚಿಂತೆಯು ಅವಳಲ್ಲಿ ಎಲ್ಲವನ್ನೂ ಗೆಲ್ಲುವ ಛಲವನ್ನು ತುಂಬಿತು. ಆದ್ದರಿಂದ ತೋಟದ ಬೇಲಿಯಲ್ಲಿ ಹುಲುಸಾಗಿ ಬೆಳೆದಿದ್ದ ಆಡುಸೋಗೆಯ ಎಲೆ ಮತ್ತು ಚಿಗುರುಗಳನ್ನು ಮಕ್ಕಳಿಂದ ತರಿಸಿಕೊಂಡು ಕಷಾಯ ಮಾಡಿಸಿ ಕುಡಿಯುತ್ತ ವಾರದೊಳಗೆ ಚೇತರಿಸಿಕೊಂಡು ಮರಳಿ ದುಡಿಯಲಾರಂಭಿದಳು. ಹೀಗಾಗಿ ಕ್ರಮೇಣ ಕೆಲಸವೂ ಅಭ್ಯಾಸವಾದುದರೊಂದಿಗೆ ಬೀಡಿಕಟ್ಟುವುದನ್ನೂ ಮುಂದುವರೆಸಿದಳು.
ಇತ್ತ ಪ್ರೇಮಾಳೊಂದಿಗೆ ಸರೋಜಾಳಿಗಿದ್ದ ಆತ್ಮೀಯತೆಯೂ, ಪ್ರೇಮಾಳ ಪರೋಪಕಾರಿ ಗುಣವೂ ಸೇರಿ ಇಬ್ಬರ ನಡುವಿನ ಬಾಂಧವ್ಯವು ಒಡಹುಟ್ಟಿದ ಅಕ್ಕತಂಗಿಯರೆoಬಷ್ಟು ಗಾಢವಾಯಿತು. ಅದರಿಂದ ಕೊಡುಕೊಳ್ಳುವ ಸಂಪ್ರದಾಯವೂ ಆರಂಭವಾಗಿ ಯಾರ ಮನೆಯಲ್ಲಿ ಯಾವ ಅಡುಗೆ ತಯಾರಾದರೂ ಅದು ಕೂಡಲೇ ಪರಸ್ಪರ ವಿನಿಮಯವಾಗುತ್ತಿತ್ತು. ತಿನ್ನುವ ಪದಾರ್ಥದಿಂದ ಹಿಡಿದು ತೊಡುವ ಬಟ್ಟೆಬರೆಗಳವರೆಗೆ ಯಾವುದೇ ಬೇಧಭಾವವಿಲ್ಲದೆ ಹಂಚಿಕೊಳ್ಳುತ್ತಿದ್ದ ಎರಡು ಕುಟುಂಬಗಳ ಸಾಮರಸ್ಯವು ಹಾಲು ಜೇನಿನಂತೆ ಬೆರೆತುಬಿಟ್ಟಿತು.
ಆ ವರ್ಷ ಜೂನ್ ತಿಂಗಳ ಆರಂಭದಲ್ಲಿ ಸರೋಜ ಶೆಟ್ಟರಿಂದ ಶಿಫಾರಸ್ಸು ಪತ್ರವನ್ನು ಪಡೆದುಕೊಂಡು ಪ್ರೇಮಾಳೊಂದಿಗೆ ಮಕ್ಕಳನ್ನು ಕರೆದೊಯ್ದು ಗಂಗರಬೀಡಿನ ಇಗರ್ಜಿಯ ಸಮೀಪದ ಶಾಲೆಗೆ ಸೇರಿಸಿ ಬರುವ ಮೂಲಕ ಒಂದು ಹಂತದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿಬಿಟ್ಟಳು. ಆದರೆ ರಾತ್ರಿಹಗಲೆನ್ನದೆ ಕಾಡುತ್ತಿದ್ದ ಗಂಡನ ನೆನಪಿನಿಂದ ಮಾತ್ರ ಕಣ್ಣೀರಿಡುತ್ತ ಕೂರುತ್ತಿದ್ದವಳು ಕೊನೆಯಲ್ಲಿ, ಇನ್ನು ಕೆಲವೇ ವರ್ಷದೊಳಗೆ ಅವರು ಬಂದೇ ಬರುತ್ತಾರೆ! ಎಂದು ಸಮಾಧಾನಿಸಿಕೊಳ್ಳುತ್ತ ಜೀವನ ಸಾಗಿಸತೊಡಗಿದಳು.
(ಮುಂದುವರೆಯುವುದು)

Related posts

ವಿವಶ…

Mumbai News Desk

ವಿವಶ..

Mumbai News Desk

ವಿವಶ..

Mumbai News Desk

ವಿವಶ…

Chandrahas

ವಿವಶ

Chandrahas

ವಿವಶ…..

Mumbai News Desk