
ಧಾರವಾಹಿ 34
ಪ್ರೇಮ ಈಗ ಎರಡನೆಯ ಬಸುರು ಹೊತ್ತಿದ್ದವಳಿಗೆ ಶೆಟ್ಟರ ತೋಟದ ಕೆಲಸ ವಿಪರೀತವಾಗುತ್ತಿತ್ತು. ಅದರೊಂದಿಗೆ ಹೆಲೆನಾಬಾಯಿಯ ಮನೆಯ ಚಾಕರಿಗೂ ಹೋಗಿ ಬರುವಷ್ಟು ಹೊತ್ತಿಗೆ ಆಯಾಸದಿಂದ ತಲೆ ಸುತ್ತು ಬಂದoತಾಗುತ್ತಿತ್ತು. ಹಾಗಾಗಿ ಅವಳು ಶೆಟ್ಟರ ತೋಟದ ಕೆಲಸವನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದಳು. ಶೆಟ್ಟರಿಗೂ ತೋಮ ದಂಪತಿ ವಾರಗಟ್ಟಲೆ ಕೆಲಸಕ್ಕೆ ಬಾರದಿದ್ದುದು ಗಮನಕ್ಕೆ ಬರುತ್ತಿತ್ತು. ಆದರೆ ಪ್ರೇಮಾಳ ಪರಿಸ್ಥಿತಿಯನ್ನು ಕಾಣುತ್ತಿದ್ದವರಿಗೆ ಅವಳ ಮೇಲೆ ಕನಿಕರ ಹುಟ್ಟುತ್ತಿದ್ದರೆ ತೋಮನ ಮೈಗಳ್ಳತನದ ಮೇಲೆ ಅಸಹನೆಯೂ ಮೂಡುತ್ತಿತ್ತು. ಹೀಗಾಗಿ ಅವರೊಮ್ಮೆ ಆಳೊಬ್ಬನನ್ನು ಕಳುಹಿಸಿ ಅವನನ್ನು ಬರಹೇಳಿದರು. ತುಸುಹೊತ್ತಿನಲ್ಲಿ ತೋಮನೂ ಬಂದು ವಿಧೇಯ ಬಾಲಕನಂತೆ ಅವರೆದುರು ನಿಂತುಕೊoಡ. ಶೆಟ್ಟರಿಗೆ ಅವನ ಮುಖ ಕಂಡ ಕೂಡಲೇ ಮೈಯೆಲ್ಲ ಉರಿಯಿತು. ‘ಏನಾ ಚಾಂಡಲಾ…! ತುಂಬು ಗರ್ಭಿಣಿಯನ್ನು ದುಡಿಸಿಕೊಂಡು ನೀನು ಮಾತ್ರ ತಿರುಗಿ ತಿನ್ನಲು ನಾಚಿಕೆ ಆಗುವುದಿಲ್ಲವನಾ ನಿಂಗೆ…? ನಿಮಗೆ ನಾನು ಮನೆ ಕೊಟ್ಟಿರುವುದು ತೋಟದ ಕೆಲಸ ಮಾಡಿಕೊಂಡಿರಲೆoದೇ ಹೊರತು ನಿಮಗೆ ಖುಷಿ ಬಂದ ಹಾಗೆ ಇರಲು ಇದೇನು ಧರ್ಮ ಛತ್ರಾಂತ ತಿಳಿದುಕೊಂಡೆಯಾ? ನಿನ್ನಂಥವರ ಮೇಲೆ ಪಾಪ ಪುಣ್ಯ ತೋರಿಸುವುದೂ ಒಂದೇ. ಬಂಡೆಕಲ್ಲಿನ ಮೇಲೆ ಬೀಜ ಬಿತ್ತುವುದೂ ಒಂದೇ! ನಿಮ್ಮನ್ನು ಹೀಗೆಯೇ ಬಿಟ್ಟರೆ ನಮ್ಮನ್ನೇ ಲಗಾಡಿ ತೆಗೆಯುತ್ತೀರಿ ನೀವು! ಮರ್ಯಾದೆಯಿಂದ ನಾಳೆಯಿಂದ ಕೆಲಸಕ್ಕೆ ಬಂದೆಯಾ ಬಚಾವ್! ಇಲ್ಲದಿದ್ದರೆ ನಾಳೆನೇ ಗಂಟುಮೂಟೆ ಕಟ್ಟಿಕೊಂಡು ತೊಲಗಬೇಕು ಇಲ್ಲಿಂದ!’ ಎಂದು ಗದರಿಸಿಬಿಟ್ಟರು.

ಶೆಟ್ಟರ ಕೆಂಡ ಕಾರುವ ಕಣ್ಣುಗಳನ್ನೂ, ಭರ್ತ್ಸನೆಯ ಮಾತುಗಳನ್ನೂ ಕೇಳಿದ ತೋಮ ಒಮ್ಮೆಲೇ ಅವಕ್ಕಾದ. ಹಾಗಾಗಿ ತಲೆ ತಗ್ಗಿಸಿ ನೆಲ ನೋಡುತ್ತ, ‘ಅಯ್ಯಯ್ಯೋ ಹಾಗೆಲ್ಲ ಮಾಡಬೇಡಿ ಧಣಿ! ಅದೂ…ಕೆಲವು ತಿಂಗಳಿನಿoದ ಅವಳಿಗೂ, ನನಗೂ ಇಬ್ಬರಿಗೂ ಮೈ ಹುಷಾರಿರುತ್ತಿರಲಿಲ್ಲ. ಅದರ ಮೇಲೆ ಅವಳು ಗರ್ಭಿಣಿ ಬೇರೆ. ಆದರೂ ನಾಳೆಯಿಂದ ಖಂಡಿತಾ ಯಾರಾದರೊಬ್ಬರು ಬರುತ್ತೇವೆ ಧಣಿ…!’ ಎಂದು ರಾಗವೆಳೆದ. ಆದರೆ ಅವನ ಮಾತು ಅಷ್ಟೂ ಸುಳ್ಳೆಂದು ಶೆಟ್ಟರಿಗೆ ಗೊತ್ತಿತ್ತು. ಆದ್ದರಿಂದ ಅವರು, ‘ನೀವೇನಾದರೂ ಮಾಡ್ಕೊಂಡು ಸಾಯಿರಿ ಅತ್ಲಾಗೆ. ಕೆಲಸಕ್ಕೆ ಬಾರದೆ ಸುಮ್ಮನೆ ಯಾರಿಗೂ ನಾನು ಮನೆ ಕೊಡುವುದಿಲ್ಲ ತಿಳ್ಕೋ!’ ಎಂದು ಕಡ್ಡಿ ಮುರಿದಂತೆ ಹೇಳಿದರು.
‘ಆಯ್ತು ಧಣಿ…!’ ಎಂದು ತೋಮ ನಮ್ರವಾಗಿ ತಲೆಯಾಡಿಸಿ ಹಿಂದಿರುಗಿದ. ಆದರೆ ಶೆಟ್ಟರ ಬೈಗುಳದಿಂದ ಅವನೊಳಗೆ ಹುಟ್ಟಿದ ಕೋಪವು ಅವನನ್ನು ಸುಮ್ಮನೆ ನಡೆಯಲು ಬಿಡಲಿಲ್ಲ. ಇವ ಮೂರುಕಾಸಿನವ, ಆ ಪೊಟ್ಟು ಶೆಡ್ಡನ್ನು ನನಗೆ ಧರ್ಮಕ್ಕೆ ಕೊಟ್ಟಿದ್ದಾನಾ…? ಹೊರಗಡೆ ಬೇರೆಯವರ ತೋಟದಲ್ಲಿ ದುಡಿದರೆ ದಿನಕ್ಕೆ ಇನ್ನೂರೈವತ್ತು ಕೊಡ್ತಾರೆ. ಇವ ಬರೇ ನೂರಿಪ್ಪತ್ತು ಬಿಸಾಡಿ ಕತ್ತೆಯ ಹಾಗೆ ದುಡಿಸುತ್ತಾನೆ. ಅದರ ಮೇಲೆ ಭಾರೀ ದೊಡ್ಡ ಉಪಕಾರ ಮಾಡಿದವನಂತೆ ಅಹಂಕಾರದ ಮಾತಾಡ್ತಾನೆ. ನಮ್ಮಂಥ ಗತಿಗೋತ್ರ ಇಲ್ಲದವರನ್ನು ಹಗಲು ರಾತ್ರಿ ದುಡಿಸಿಕೊಂಡೇ ಇಂಥವರಿಗೆ ದೊಡ್ಡಾಸ್ತಿಕೆ ಬಂದಿರುವುದು ಅಂತ ನನಗೂ ಗೊತ್ತಿಲ್ವಾ? ಕಣ್ಣಲ್ಲಿ ರಕ್ತ ಇಲ್ಲದವನು, ಥೂ!! ಯಾವುದಕ್ಕೂ ಬೇರೆಲ್ಲಾದರೊಂದು ನೆಲೆ ಅಂತ ಸಿಕ್ಕಿಕೊಳ್ಳಲಿ. ಆಮೇಲೆ ಇವನನ್ನು ಯಾರು ಗೆಣ್ಪುತ್ತಾರೆ? (ಲೆಕ್ಕಿಸುತ್ತಾರೆ?) ಎಂದು ಗೊಣಗುತ್ತ ಮನೆಯತ್ತ ನಡೆದ.
ತೋಮನೀಗ ನಿತ್ಯ ಕುಡುಕನಾಗಿ ಮಹಾ ಸೊಂಬೇರಿಯೂ ಆದುದು ಮತ್ತು ಅವನಿಂದಾಗಿ ಪ್ರೇಮ ಪಡುತ್ತಿರುವ ಪಾಡನ್ನೆಲ್ಲ ಕಾಣುತ್ತ ಬರುತ್ತಿದ್ದ ಹೆಲೆನಾಬಾಯಿಗೆ ಅವಳ ಮೇಲೆ ತೀವ್ರ ಅನುಕಂಪ ಹುಟ್ಟುತ್ತಿತ್ತು. ಅದಕ್ಕೆ ಸರಿಯಾಗಿ ಅವಳೊಮ್ಮೆ ಏದುರಿಸುಬಿಡುತ್ತ ತಮ್ಮ ಮನೆಯತ್ತ ಬರುತ್ತಿದ್ದುದನ್ನೂ ಕಂಡವರು, ‘ನೋಡು ಪ್ರೇಮಾ…ಹೀಗೆ ಹೇಳುತ್ತಿದ್ದೇನೆಂದು ಬೇಸರಿಸಿಕೊಳ್ಳಬೇಡ. ನಿನ್ನ ಹೆರಿಗೆಯಾಗುವತನಕ ಕೆಲಸಕ್ಕೆ ಬರುವುದು ಬೇಡಮ್ಮಾ. ಅಷ್ಟು ದೂರದಿಂದ ನಡೆದು ಬಂದು ಹೋಗಿ ಮಾಡುತ್ತಿದ್ದರೆ ನಿನ್ನ ಆರೋಗ್ಯ ಹಾಳಾಗಬಹುದು. ನಿನ್ನ ಮನೆ ಖರ್ಚಿಗೂ ಉಳಿದ ಅಗತ್ಯಕ್ಕೂ ಏನೇನು ಬೇಕೋ ಅದನ್ನೆಲ್ಲ ನಿನ್ನ ಮನೆಗೇ ಕಳುಹಿಸಿಕೊಡುತ್ತೇನೆ. ಸ್ವಲ್ಪ ದಿನ ಹಾಯಾಗಿರು!’ ಎಂದರು ಪ್ರೀತಿಯಿಂದ.
ಆದರೆ ಅಷ್ಟು ಕೇಳಿದ ಪ್ರೇಮಾಳಿಗೆ ನಿಜಕ್ಕೂ ಬೇಸರವಾಯಿತು. ‘ಅಯ್ಯೋ ಕಷ್ಟ ಎಂಥದ್ದು ಬಾಯಮ್ಮಾ…? ನಾನಿಲ್ಲಿಗೆ ಬಂದು ಕಡಿದು ಹಾಕುವುದಾದರೂ ಏನಿದೆ? ಮನೆಯಲ್ಲಿ ಕೂತು ಹೊತ್ತು ಹೋಗುವುದಿಲ್ಲ ಅಂತಲೇ ಬರುತ್ತೇನಷ್ಟೆ. ನಿಮ್ಮೊಂದಿಗಿದ್ದರೆ ಮನಸ್ಸಿಗೇನೋ ನೆಮ್ಮದಿ ಸಿಗುತ್ತದೆ. ಹಾಗಾಗಿ ಬೇಡವೆನ್ನಬೇಡಿ!’ ಎಂದಳು ನೋವಿನಿಂದ. ಅವಳು ನೊಂದುದನ್ನು ಕಂಡ ಬಾಯಮ್ಮ ಮತ್ತೇನೂ ಹೇಳದೆ, ‘ಆಯ್ತಮ್ಮಾ ನಿನ್ನಿಷ್ಟ. ಹೇಗೆ ಬೇಕೋ ಹಾಗಿರು. ನೀನೂ ನನ್ನ ಮಗಳಂತೆಯೇ ಅಲ್ಲವಾ?’ ಎನ್ನುತ್ತ ಅವಳ ತಲೆ ನೇವರಿಸಿದಾಗ ಪ್ರೇಮ ಗೆಲುವಾದಳು. ಆದರೂ ಅವಳು ಆ ಮನೆಯಲ್ಲೆಂದೂ ಸುಮ್ಮನೆ ಕುಳಿತವಳಲ್ಲ. ಬೆಳಿಗ್ಗೆ ಬೇಗನೇ ಬರುವವಳು ಸಂಜೆಯವರೆಗೆ ಎರಡು ಮೂರು ಹೊತ್ತಿನ ಅಡುಗೆ, ಚಹಾ ತಿಂಡಿಗಳ ತಯಾರಿಯೋ ಅಥವಾ ಹಟ್ಟಿಯ ದನಕರುಗಳ ಚಾಕರಿಯೋ ಇಲ್ಲ, ತೋಟದ ದುಡಿಮೆಯೋ ಏನಾದರೊಂದು ಕೆಲಸದಲ್ಲಿ ನಿರತಳಾಗಿರುತ್ತಿದ್ದಳು. ಹೀಗಾಗಿ ಹೆಲೆನಾಬಾಯಿಗೂ ಅವಳಿಂದ ಬಹಳ ಸಹಾಯವಾಗುತ್ತಿದ್ದುದರೊಂದಿಗೆ ಅವಳ ಮೇಲೆ ಅವರಿಗೆ ಹೆಚ್ಚು ಮುತುವರ್ಜಿಯೂ ಮೂಡುತ್ತಿತ್ತು. ಆದರಿತ್ತ ಪ್ರೇಮಾಳಲ್ಲಿ ಇನ್ನೊಂದು ಸ್ವಾರ್ಥವೂ ಇತ್ತು. ತಾನಿಲ್ಲಿ ದುಡಿಯುತ್ತಿದ್ದರೆ ಮಗಳು ಕೂಡಾ ತನ್ನೊಂದಿಗಿರುತ್ತ ಅವಳ ಹೊಟ್ಟೆಬಟ್ಟೆಗೂ ಕೊರತೆಯಾಗದಂತೆ ಮತ್ತು ಹೆಲೆನಾಬಾಯಿಯ ಪ್ರೀತಿಯ ಭದ್ರತೆಯೂ ಅವಳಿಗೆ ಸಿಗುತ್ತ ಅವಳೂ ಚೆನ್ನಾಗಿ ಬೆಳೆದಾಳು ಎಂದು ಯೋಚಿಸುತ್ತಿದ್ದಳು. ಹೀಗಿದ್ದವಳಿಗೆ ಆವತ್ತೊಂದು ನಡುರಾತ್ರಿ ಎರಡನೆಯ ಹೆರಿಗೆ ನೋವು ಕಾಣಿಸಿಕೊಂಡಿತು. ಆದರೆ ಆ ವೇಳೆಯಲ್ಲಿ ತೋಮ ಮನೆಯಲ್ಲಿರಲಿಲ್ಲ. ಅವನು ಅಂದು ಮುಂಜಾನೆದ್ದು ಮನೆ ಬಿಟ್ಟಿದ್ದವನು ಹಿಂದಿರುಗಲಿಲ್ಲ. ಅಷ್ಟಲ್ಲದೆ ಅವನು ಈಚೆಗೆ ಮನೆಗೆ ಬಂದರೆ ಬಂದ, ಇಲ್ಲದಿದ್ದರಿಲ್ಲ ಎಂಬoತಿದ್ದ. ಆದರೆ ಆ ಬಗ್ಗೆ ಹೆಂಡತಿಯೇನಾದರೂ ಆಕ್ಷೇಪವೆತ್ತಿದಳೆಂದರೆ ಅವಳ ಮುಖಮೂತಿ ನೋಡದೆ ಹೊಡೆಯುವುದನ್ನೂ ಶುರುವಿಟ್ಟುಕೊಂಡಿದ್ದ. ಹೀಗಾಗಿ ಪ್ರೇಮ ತನ್ನ ಹೊಟ್ಟೆಯಲ್ಲಿ ಬೆಳೆಯುತ್ತಿದ್ದ ಮಗುವನ್ನು ನೆನೆದು ಸುಮ್ಮನಾಗುತ್ತಿದ್ದಳು.
ಆವತ್ತು ರಾತ್ರಿ ತನ್ನಮ್ಮ ಹೆರಿಗೆ ನೋವಿನಿಂದ ನರಳುತ್ತಿದ್ದುದನ್ನು ಕಂಡ ಶ್ವೇತಾಳಿಗೆ ಭಯವಾಗಿ ಅಳುತ್ತ ಹೋಗಿ ಸರೋಜಾಳ ಬಾಗಿಲು ಬಡಿದಳು. ಸರೋಜ ಹಗಲಿಡೀ ಬಿಡುವಿಲ್ಲದೆ ದುಡಿದಿದ್ದವಳು ಗಾಢನಿದ್ರೆಯಲ್ಲಿದ್ದಳು. ಹಾಗಾಗಿ ಶ್ವೇತಾ ಎರಡು ಮೂರು ಬಾರಿ ಬಾಗಿಲು ಬಡಿಯುವವರೆಗೆ ಎಚ್ಚರವಾಗದೆ ನಂತರ ಶ್ವೇತಾಳ ಧ್ವನಿ ಜೋರಾಗಿ ಕೇಳಿದ್ದರಿಂದ ರಪ್ಪನೆದ್ದು ಹೊರಗೆ ಬಂದಳು. ‘ಅಮ್ಮನಿಗೆ ಹೊಟ್ಟೆ ನೋವಂತೆ ಪ್ರೇಮಕ್ಕಾ…!’ ಎಂದ ಶ್ವೇತಾ ಬಿಕ್ಕಳಿಸುತ್ತ ಅಂದಾಗ ಸರೋಜ ಕೂಡಲೇ ಪ್ರೇಮಾಳ ಶೆಡ್ಡಿಗೆ ಧಾವಿಸಿದಳು.
ಅಷ್ಟರವರೆಗೆ ಪ್ರೇಮಾಳನ್ನು ಬಿಟ್ಟು ಬಿಟ್ಟು ಕಾಡುತ್ತಿದ್ದ ನೋವೀಗ ತೀವ್ರವಾಗಿ, ಇನ್ನು ಕೆಲವೇ ಗಳಿಗೆಯಲ್ಲಿ ಹೆರಿಗೆಯಾಗುವ ಸೂಚನೆ ಕಂಡಿದ್ದರಿoದ ಸರೋಜಾಳಿಗೆ ಏನೂ ತೋಚದಾಯಿತು. ಆದರೆ ಪಕ್ಕನೇ ಶೀನುನಾಯ್ಕ ದಂಪತಿಯ ನೆನೆಪಾಗಿ ಅವರ ಶೆಡ್ಡಿನತ್ತ ಓಡಿದಳು. ವಿಷಯ ತಿಳಿದ ಶೀನುನಾಯ್ಕನ ಹೆಂಡತಿ ಚೀಂಕುವಿಗೂ ಗಾಬರಿಯಾಯಿತು. ಆದರೆ ಶೀನುನಾಯ್ಕ ಕುಡಿದು ಮತ್ತನಾಗಿ ಬೋಧವೇ ಇಲ್ಲದಂತೆ ಗೊರಕೆ ಹೊಡೆಯುತ್ತಿದ್ದ. ಅವಳು ನಾಲ್ಕೈದು ಬಾರಿ ಅವನನ್ನು ಹಿಡಿದು ಕುಲುಕಿ ಎಬ್ಬಿಸಿದವಳು ಅವನೊಂದಿಗೆ ಪ್ರೇಮಾಳ ಮನೆಗೆ ಬಂದಳು. ಅಲ್ಲಿ ಅವಳ ಪರಿಸ್ಥಿತಿಯನ್ನು ಕಂಡವಳು, ತನ್ನ ಗಂಡನೊಡನೆ ಕೂಡಲೇ ಹೋಗಿ ಚಂದ್ರಿಯನ್ನು ಕರೆತರಲು ಸೂಚಿಸಿದಳು. ಶೀನುನಾಯ್ಕ ಅಸಹನೆಯಿಂದ ಗೊಣಗುತ್ತ ಟಾರ್ಚ್ಲೈಟ್ ಹಿಡಿದುಕೊಂಡು ಹೊರಟು ಹೋದ. ಸರೋಜ, ಪ್ರೇಮಾಳನ್ನು ಸಾಂತ್ವನಿಸುತ್ತ ಸೂಲಗಿತ್ತಿಯ ದಾರಿ ಕಾಯತೊಡಗಿದಳು.
ತುಸುಹೊತ್ತಲ್ಲಿ ಶೀನುನಾಯ್ಕ ತೂರಾಡುತ್ತ ಹಿಂದಿರುಗಿದವನು, ‘ಚಂದ್ರಿಗೆ ಮೈ ಹುಷಾರಿಲ್ಲದೆ ಮಲಗಿದ್ದಾಳೆ. ಇವಳನ್ನು ಈಗಲೇ ಶಿವಕಂಡಿಕೆಯ ಆಸ್ಪತ್ರೆಗೆ ಸೇರಿಸಬೇಕಂತೆ!’ ಎಂದವನು ಮತ್ತೆ, ‘ಆದರೆ ಯಾರು ಸೇರಿಸುತ್ತಾರೆ…? ಅವಳ ಗಂಡ ಬಂದ ಮೇಲೆ ಹೊತ್ತುಕೊಂಡು ಹೋಗಲಿ!’ ಎಂದು ಜಿಗುಪ್ಸೆಯಿಂದ ಅಂದವನು ತನ್ನ ಶೆಡ್ಡಿನತ್ತ ಹೊರಡಲನುವಾದ. ಅಷ್ಟು ಕೇಳಿದ ಸರೋಜ ದಂಗಾಗಿ ಹೊರಗೆ ಧಾವಿಸಿ ಬಂದು, ‘ಅಯ್ಯಯ್ಯೋ ದೇವರೇ…! ಹಾಗೆಂದರೆ ಹೇಗೆ ಶೀನಣ್ಣಾ…? ಈ ರಾತ್ರಿಯಲ್ಲಿ ತೋಮಣ್ಣನನ್ನು ಎಲ್ಲೀಂತ ಹುಡುಕುವುದು? ಅಷ್ಟರಲ್ಲಿ ಪ್ರೇಮಕ್ಕನ ಜೀವಕ್ಕೇನಾದರೂ ಹೆಚ್ಚುಕಮ್ಮಿಯಾದರೇ?’ ಎಂದು ತನ್ನ ಹಿಂದೆಯೇ ಎದ್ದು ಬಂದ ಚೀಂಕುವನ್ನು ದೈನ್ಯದಿಂದ ನೋಡುತ್ತ ಹೇಳಿದವಳು, ‘ಹೇಗಾದರೂ ಮಾಡಿ ನಾವೇ ಆಸ್ಪತ್ರೆಗೆ ಸೇರಿಸಬೇಕು. ಇಲ್ಲವಾದರೆ ತಾಯಿ, ಮಗುವನ್ನು ನಾವೇ ಕೊಂದ ಪಾಪ ತಟ್ಟುತ್ತದೆ!’ ಎಂದು ಗದ್ಗದಿತಳಾದಳು. ‘ನಾವೇ ಕೊಂದ ಪಾಪ!’ ಎಂಬ ಮಾತು ಶೀನುದಂಪತಿಯನ್ನು ತುಸು ಯೋಚಿಸುವಂತೆ ಮಾಡಿತು. ಜೊತೆಗೆ ಪ್ರೇಮಾಳೂ ಆಗಾಗ ಅದೂ ಇದೂ ಅಂತ ಮಾಡುತ್ತಿದ್ದ ಸಹಾಯವೂ ಅವರನ್ನು ಎಚ್ಚರಿಸಿದವು. ಆದ್ದರಿಂದ, ‘ಆಯ್ತಾಯ್ತು, ಮತ್ತೇನು ಮಾಡುವುದು? ಅವಳನ್ನು ಹೊರಡಿಸಿ. ನಾನೀಗ ಬಂದೆ!’ ಎಂದ ಶೀನನು ಹಿಂದಿರುಗಿ ಫರ್ಲಾಂಗು ದೂರದ ಚರ್ಚಿನ ಹತ್ತಿರದ ರಿಕ್ಷಾ ಚಾಲಕ ಆನಂದನ ಮನೆಗೆ ಓಡಿದ. ಆನಂದ ದಿನನಿತ್ಯ ಮಧ್ಯಾಹ್ನದಿಂದ ನಡುರಾತ್ರಿಯವರೆಗೆ ಶಿವಕಂಡಿಕೆಯ ಪೇಟೆಯಲ್ಲಿ ದುಡಿಯುವ ರೂಢಿಯಿದ್ದವನು ಇವತ್ತು ಆಗಷ್ಟೇ ಬಂದು ಮಲಗಿ ನಿದ್ರೆಯಲ್ಲಿದ್ದ. ಶೀನುನಾಯ್ಕ ಬಾಗಿಲು ಬಡಿಯುತ್ತಲೇ ಎಚ್ಚೆತ್ತು ಹೊರಗೆ ಬಂದ. ಶೀನನ ಗುರುತು ಹತ್ತಿತು. ಅವನಿಂದ ವಿಷಯ ತಿಳಿದವನಿಗೆ ನಿದ್ದೆ ಹಾರಿ ಹೋಯಿತು. ಬಚ್ಚಲಿಗೆ ಹೋಗಿ ಮುಖಕ್ಕೆ ತಣ್ಣೀರು ಚುಮುಕಿಸಿಕೊಂಡು ಉಟ್ಟ ಲುಂಗಿಯ ಮೇಲೊಂದು ಅಂಗಿಯನ್ನು ತೊಟ್ಟುಕೊಂಡು ರಿಕ್ಷಾ ಸ್ಟಾರ್ಟ್ ಮಾಡಿ ಶೀನನನ್ನು ಕೂರಿಸಿಕೊಂಡು ಪ್ರೇಮಾಳ ಶೆಡ್ಡಿನತ್ತ ಬಂದ.
ಪ್ರೇಮಾಳನ್ನು ಆಸ್ಪತ್ರೆಗೆ ಸಾಗಿಸುವಾಗ ಶ್ವೇತಾಳೂ ಅಳುತ್ತ ಹೊರಟು ನಿಂತಳು. ಸರೋಜಾಳಿಗೆ ತೊಡಕಾಯಿತು. ಅವಳು ತನ್ನ ಮಕ್ಕಳು ಶಾರದ ಮತ್ತು ಪ್ರಮೀಳಾಳನ್ನು ಎಬ್ಬಿಸಿ ಅವರೊಡನೆ ಅವಳನ್ನು ಕೂರಿಸಿದಳು. ಚಿಮಣಿ ದೀಪದ ಬತ್ತಿಯನ್ನೆಳೆದು ದೊಡ್ಡದು ಮಾಡಿ ಬೆಳಗಿಸಿಟ್ಟಳು. ಒಂದಿಷ್ಟು ಚಕ್ಕುಲಿ ಮತ್ತು ಖಾರದಕಡ್ಡಿಯನ್ನು ತಟ್ಟೆಗೆ ಸುರಿದು ತಂದು ಅವರ ಮುಂದಿಟ್ಟಳು. ಗೋಡೆಗೆ ಹೊಡೆದಿದ್ದ ಚಿಕ್ಕಮ್ಮ ದೇವಿಯ ಪಟವನ್ನು ತೆಗೆದು ಮಕ್ಕಳ ಮುಂದೆ ಗೋಡೆಗೊರಗಿಸಿಟ್ಟು, ‘ಮಕ್ಕಳನ್ನು ಕಾಪಾಡು ತಾಯೀ…!’ ಎಂದು ಭಕ್ತಿಯಿಂದ ಕೈಮುಗಿದಳು. ಆ ಮಕ್ಕಳು ನಿದ್ದೆಗಣ್ಣಿನಲ್ಲಿದ್ದರೂ ಅಮ್ಮನ ಚಟುವಟಿಕೆಯನ್ನು ಗಮನಿಸುತ್ತಿದ್ದರು. ‘ನೋಡಮ್ಮಾ ಶಾರದಾ, ನಿದ್ರೆ ಬಂದರೆ ಮಕ್ಕಳನ್ನು ಮಲಗಿಸಿ ನೀನೂ ಮಲಗಿಕೋ. ಆದರೆ ಚಿಮಿಣಿ ಆರಿಸಬೇಡ. ನಾವಿನ್ನು ಸ್ವಲ್ಪ ಹೊತ್ತಿನಲ್ಲಿ ಬಂದು ಬಿಡುತ್ತೇವೆ!’ ಎಂದು ಮೂವರನ್ನೂ ಸಂತೈಸಿ ಬಾಗಿಲು ಭದ್ರಪಡಿಸಿಕೊಳ್ಳಲು ಸೂಚಿಸಿ ಹೋಗಿ ರಿಕ್ಷಾ ಹತ್ತಿದಳು.
ಅಷ್ಟರವರೆಗೆ ಧೈರ್ಯವಾಗಿ ಮತ್ತು ಮೌನವಾಗಿದ್ದ ಮಕ್ಕಳಿಗೆ ಹೆತ್ತವರು ಹೊರಟು ಹೋಗುತ್ತಿದ್ದುದನ್ನು ಕಂಡು ದುಃಖ ಒತ್ತರಿಸಿ ಬಂತು. ಮೂವರೂ ಹೊಸ್ತಿಲಿಗೆ ಬಂದು ನಿಂತು ಅವರ ರಿಕ್ಷಾ ದೂರವಾಗುವುದನ್ನೂ ಅದರ ಸದ್ದು ಕ್ಷೀಣವಾಗಿದ್ದನ್ನೂ ಕಂಡವರು, ಸುಡುಗಾಡಿನಂಥ ಗುಡ್ಡೆಯ ನಡುವಿನ ಒಂಟಿ ತೋಟದ ಸೆರಗಿನ ಹರಕು ಮುರುಕು ಶೆಡ್ಡೊಂದರಲ್ಲಿ, ದಟ್ಟ ನಡುರಾತ್ರಿಯಲ್ಲಿ ತಾವು ಮೂವರೇ ಇರುವುದು ಎಂದನ್ನಿಸುತ್ತಲೇ ಮೌನವಾಗಿ ಅಳತೊಡಗಿದರು. ಆದರೆ ಶಾರದಾ ವಯಸ್ಸಿಗೆ ಮೀರಿದ ಗಟ್ಟಿಗಿತ್ತಿ! ಅವಳಿಗೆ ಸನ್ನಿವೇಶದ ಅರಿವಾಗಿದ್ದುದರಿಂದ ಶ್ವೇತಾ, ಪ್ರಮೀಳಾಳನ್ನು ಒಳಗೆ ಕರೆದೊಯ್ದು ತಬ್ಬಿಕೊಂಡು ಸಂತೈಸಿದಳು. ಮೂಲೆಯಲ್ಲಿದ್ದ ಚೆನ್ನೆಮಣೆಯನ್ನು ತಂದು ಅವರೆದುರಿಟ್ಟಳು. ತೊಟ್ಟೆಯಲ್ಲಿದ್ದ ಹೊಂಗಾರಕ ಮರದ ಬೀಜಗಳನ್ನು ಮಣೆಯ ಗುಳಿಗಳಿಗೆ ತುಂಬಿಸಿ, ಮೂವರೂ ಆಟಕ್ಕೆ ಕುಳಿತವರು ಕೆಲವೇ ಸಮಯದೊಳಗೆ ಆಟದಲ್ಲಿ ಮೈಮರೆತರು.
ಇತ್ತ ರಿಕ್ಷಾಚಾಲಕ ಆನಂದನು ಎಲ್ಲರನ್ನೂ ಕೊಂಡೊಯ್ದು ಶಿವಕಂಡಿಕೆಯ ಸರಕಾರಿ ಹೆರಿಗೆ ಆಸ್ಪತ್ರೆಯ ಆವರಣದಲ್ಲಿ ಇಳಿಸಿದ. ಆದರೆ ಶೀನುನಾಯ್ಕ ಅವನನ್ನೂ ಸ್ವಲ್ಪಹೊತ್ತು ತಮ್ಮೊಂದಿಗಿರುವoತೆ ಒತ್ತಾಯಿಸಿದ. ಅದಕ್ಕವನು, ‘ಹೇ, ಇಲ್ಲ ಮಾರಾಯಾ. ಬೆಳಿಗ್ಗೆ ಏಳು ಗಂಟೆಗೆ ಸಿಸ್ಟರ್ ರೋಜಿ ಬಾಯಿಯನ್ನು ದೊಡ್ಡಾಸ್ಪತ್ರೆಗೆ ಬಿಡಲಿಕ್ಕುಂಟು. ನಾನೀಗ ಹೋಗಲೇಬೇಕು. ಈಗಿನ ಬಾಡಿಗೆಯನ್ನು ಬೇಕಿದ್ದರೆ ಸಂಜೆಗೆ ಕೊಟ್ಟರಾಯ್ತು!’ ಎಂದವನು ಶೀನನ ಉತ್ತರಕ್ಕೂ ಕಾಯದೆ ಹೊರಟು ಹೋದ.
ಬ್ರಿಟೀಷರ ಕಾಲದ ಆ ಹೆರಿಗೆ ಆಸ್ಪತ್ರೆಯಲ್ಲಿ ಆ ಸಮಯದಲ್ಲಿ ನಡು ವಯಸ್ಸಿನ ನರ್ಸು ಜಾನಕಿ ಕೆಲವು ದಿನಗಳಿಂದ ರಾತ್ರಿ ಪಾಳಿಯಲ್ಲಿದ್ದಳು. ಅವಳು ಯಾವಾಗಲೂ ಒಂದೊoದು ಗಂಟೆ ಆಚೀಚೆ ಮಾಡಿಕೊಂಡೇ ಡ್ಯೂಟಿಗೆ ಬರುವವಳು, ತಾನು ಸಮಯಕ್ಕೆ ಸರಿಯಾಗಿಯೇ ಬಂದಿದ್ದೇನೆ ಎಂದುಕೊಳ್ಳುತ್ತ ಗಬ್ಬುನಾತ ಬೀರುವ ಹೆರಿಗೆ ವಾರ್ಡ್ಗಳಿಗೆ ಉದಾಸೀನದಿಂದ ಉಸಿರು ಬಿಗಿದುಕೊಂಡು ಪ್ರವೇಶಿಸುತ್ತಾಳೆ. ವರ್ಷವಿಡೀ ಆಸ್ಪತ್ರೆಯಲ್ಲಿ ತುಂಬಿರುತ್ತಿದ್ದ ಏಳೆಂಟು ಕಡು ಬಡತನದ, ಕೆಳಜಾತಿಯ ಸಣಕಲು ಬಸುರಿಯರ ಬಿ.ಪಿ. ಮತ್ತು ಅವರು ಸಂಕೋಚಿಸುತ್ತ ನೀಡುವ ಕಫ, ಮಲಮೂತ್ರಗಳಂಥ ವಿಸರ್ಜನೆಗಳನ್ನು ತೆಗೆದುಕೊಂಡು ಹೋಗಿ ಲ್ಯಾಬ್ ಟೆಸ್ಟಿಗೆ ಕಳುಹಿಸುತ್ತ ಅಗತ್ಯ ಬಿದ್ದರೆ ವೈದ್ಯರು ಸೂಚಿಸುವ ಇನ್ನು ಕೆಲವು ಪರೀಕ್ಷೆಗಳನ್ನೂ ಮಾಡಿಸುವ ಶಾಸ್ತç ಮಾಡುತ್ತಾಳೆ.
ಈ ಆಸ್ಪತ್ರೆಯ ಕೆಲವು ವೈದ್ಯರುಗಳೂ ಹಾಗೆಯೇ. ತಾವು ಅಲ್ಲಲ್ಲಿ ಖಾಸಗಿ ಕ್ಲಿನಿಕ್‌ಗಳನ್ನು ತೆರೆದುಕೊಂಡು ದಿನದ ಹೆಚ್ಚಿನ ಸಮಯವನ್ನು ಅಲ್ಲಿಯೇ ಕುಳಿತು ನಗದು ರೋಗಿಗಳ ಸೇವೆಯನ್ನು ಮುತುವರ್ಜಿಯಿಂದ ಮಾಡುತ್ತಾ ಸಂಪಾದಿಸುತ್ತಿದ್ದರು. ಇತ್ತ ಕಡೆಗಾಲದ ಭದ್ರತೆಯ ದೃಷ್ಟಿಯಿಂದಲೋ ಎಂಬoತೆ, ‘ನಾಮ್ಕೆವಾಸ್ತೆ’ ಸರಕಾರಿ ಹುದ್ದೆಯನ್ನೂ ಅಲಂಕರಿಸಿದ್ದರು. ಹೀಗಾಗಿ ಅವರೆಲ್ಲ ದಿನದಲ್ಲಿ ಒಂದೆರಡು ಬಾರಿಯೋ ಅಥವಾ ದಿನ ಬಿಟ್ಟು ದಿನಕ್ಕೊಂದು ಬಾರಿಯೋ ಆಸ್ಪತ್ರೆಗೆ ಭೇಟಿ ಕೊಟ್ಟು ರೋಗಿಗಳನ್ನು ಪರೀಕ್ಷಿಸಿ ಚಿಕಿತ್ಸೆ ಮತ್ತು ಅಲ್ಲಿ ಲಭ್ಯವಿದ್ದ ಔಷಧಿಗಳನ್ನು ನೀಡಿ ಹೋಗುವವರಿಗೆ ನರ್ಸು ಜಾನಕಿ ನಮ್ರವಾಗಿ ಸಹಕರಿಸುತ್ತಾಳೆ ಅಥವಾ ಅವರು ತಾವು ದೂರವಾಣಿಯಲ್ಲೇ ಸೂಚಿಸುವ ಔಷಧಿ, ಮಾತ್ರೆಗಳನ್ನು ರೋಗಿಗಳಿಗೆ ನುಂಗಲು, ಕುಡಿಯಲು ಕೊಡುತ್ತಾಳೆ. ಕೆಲವು ಅಸಂಸ್ಕೃತ ರೋಗಿಗಳಿಗೆ ತಮ್ಮ ಮತ್ತು ಆಸ್ಪತ್ರೆಯ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ಕುರಿತು ಮೃದುವಾದ ಮಾತುಗಳಿಂದ ತಿಳುವಳಿಕೆ ನೀಡುವ ಬದಲು ಉರಿಗಣ್ಣು ಬಿಟ್ಟುಕೊಂಡು ಕರ್ಣಕಠೋರವಾದ ಬೈಗುಳ ಮೂಲಕವೇ ಮನವರಿಕೆ ಮಾಡಿಸುತ್ತ ಅವರೆಲ್ಲರ ಕಿವಿ ಕಿವುಡಾಗಿಸುತ್ತಾಳೆ. ಅದೆಲ್ಲ ಮುಗಿದ ನಂತರ ತನ್ನ ಪರೀಕ್ಷೆಯ ವಿವರಗಳನ್ನು ಬೇಗಬೇಗನೇ ಆಯಾಯ ಫೈಲ್‌ಗಳಲ್ಲಿ ದಾಖಲಿಸುತ್ತಾಳೆ. ಬಳಿಕ ಬಣ್ಣ ಮಾಸಿದ ಹಳೆಯ ಮುರಕಲು ರಿಸೆಪ್ಶನ್ ಕೌಂಟರ್‌ನತ್ತ ಹೋಗಿ ‘ಉಸ್ಸಪ್ಪಾ!’ ಎಂದು ನಿಟ್ಟುಸಿರು ಬಿಡುತ್ತ ಕುಳಿತುಕೊಂಡು, ಅದಾಗಲೇ ಅಲ್ಲಿರುತ್ತಿದ್ದ ಆಯಾ ಸುಮತಿಯೊಡನೆಯೋ ಅಥವಾ ಇತರ ಕೆಲಸಗಾರರೊಡನೆಯೋ ಸ್ವಲ್ಪಹೊತ್ತು ಹರಟುತ್ತ ತೂಕಡಿಸುವವಳು ಕೊನೆಯ ಹಂತದ ಲಹರಿಗೆ ಜಾರುವುದು ಜಾನಕಿಯ ದಿನಚರಿಯಾಗಿತ್ತು.
ಸುಮತಿಯದ್ದೂ ಇತ್ತೀಚೆಗೆ ರಾತ್ರಿಪಾಳಿ ಆರಂಭವಾಗಿತ್ತು. ಅನಂತೂರಿನ ಕಡೆಯವಳಾದ ಅವಳು ಕೆಲವು ವರ್ಷಗಳ ಹಿಂದೆ ಗಂಡ ಕರಿಯಪ್ಪನೊಂದಿಗೆ ಶಿವಕಂಡಿಕೆಗೆ ಕೂಲಿಗೆಂದು ಬಂದವಳು. ಬಂದ ಹೊಸದರಲ್ಲಿ ಕುಡುಕ ಗಂಡನೊoದಿಗೆ ಏಗುತ್ತ ಅಲ್ಲಿ ಇಲ್ಲಿ ಕೂಲಿನಾಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದಳು. ಆದರೆ ಗಂಡನ ಕುಡುಕತನ ಅತಿಯಾಗಿ, ಅವನು ಕಂಡ ಕಂಡಲ್ಲಿ ಬಿದ್ದು ಹೊರಳಾಡತೊಡಗಿದ ಮೇಲೆ ಅವಳ ಸ್ಥಿತಿ ಅಧೋಗತಿಗಿಳಿಯಿತು. ಆದರೆ ಅದೊಮ್ಮೆ ಶಿವಕಂಡಿಕೆಯ ಖ್ಯಾತ ಸಮಾಜ ಸೇವಕ ಭುಜಂಗ ಶೆಟ್ಟಿಯವರ ಗಮನಕ್ಕೂ ಬಂತು. ಶೆಟ್ಟರು ಅವಳ ಅವಸ್ಥೆಗೆ ಮರುಗಿದವರು ಅವಳ ಜೀವನಕ್ಕೊಂದು ದಾರಿ ಕಾಣಿಸಲು ಇಚ್ಛಿಸಿದರು. ಅದೇ ಸಂದರ್ಭದಲ್ಲಿ ಹೆರಿಗೆ ಆಸ್ಪತ್ರೆಯಲ್ಲಿ ಸ್ವಚ್ಛತಾ ಸಿಬ್ಬಂದಿಗಳ ಕೊರತೆಯಿದ್ದುದನ್ನೂ ತಿಳಿದವರು ಅವಳನ್ನು ಮಾತಾಡಿಸಿ, ಸರಕಾರಿ ಕೆಲಸದ ಮಹತ್ವವವನ್ನವಳಿಗೆ ಮನವರಿಕೆ ಮಾಡಿಸಿ ಕರೆದೊಯ್ದು ಕೆಲಸವನ್ನೂ ಕೊಡಿಸಿದ್ದರು. ಅದರಿಂದ ಆಕೆಯ ಬದುಕು ಸುಧಾರಿಸಿತು. ತಿಂಗಳಲ್ಲಿ ಹದಿನೈದು ಹಗಲು ಮತ್ತು ಹದಿನೈದು ರಾತ್ರಿ ಪಾಳಿಯಲ್ಲಿ ದುಡಿಯುತ್ತಿದ್ದ ಸುಮತಿ, ತನ್ನ ಪಾಲಿಗೆ ಬಂದ ಕೋಣೆಗಳನ್ನು ಎರಡು ಮೂರು ಗಂಟೆಗಳೊಳಗೆ ಗುಡಿಸಿ, ಮೇಲು ಮೇಲೆ ಒರಸುವ ಶಾಸ್ತçವನ್ನು ಮಾಡಿ, ರೋಗಿಗಳ ಒಂದಷ್ಟು ತ್ಯಾಜ್ಯವನ್ನು ಹೊತ್ತೊಯ್ದು ಆಸ್ಪತ್ರೆಯ ತ್ಯಾಜ್ಯ ಭಂಡಾರಕ್ಕೆ ಸುರಿಯುವುದರ ಮೂಲಕ ಅಂದಿನ ಕೆಲಸಕ್ಕೆ ಇತೀಶ್ರೀ ಹಾಡುತ್ತಿದ್ದಳು. ಮತ್ತುಳಿದ ಸಮಯದಲ್ಲಿ ಆ ವಾರ್ಡಿನಿಂದ ಈ ವಾರ್ಡಿಗೆ, ಈ ವಾರ್ಡಿನಿಂದ ಆ ವಾರ್ಡಿಗೆ ಓಡಾಡುತ್ತ ಬಡರೋಗಿಗಳೊಂದಿಗೆ ಕುಳಿತು ಒಂದಿಷ್ಟು ಸುಖ ಕಷ್ಟ ಮಾತಾಡುತ್ತ, ತನ್ನ ಗಂಡನ ಮೇಲೆ ಅಥವಾ ಇನ್ನಾö್ಯರ ಮೇಲಾದರೂ ಕೋಪವೆದ್ದರೆ ಅಲ್ಲಿನ ರೋಗಿಗಳಿಗೇ ಬೈಯ್ದು ತೀರಿಸಿಕೊಳ್ಳುತ್ತ, ರೋಗಿಗಳೋ ಅಥವಾ ಅವರ ಕಡೆಯವರೋ ಇವಳನ್ನು ಒಲಿಸಿಕೊಳ್ಳಲು ನೀಡುತ್ತಿದ್ದ ಐದೋ ಹತ್ತೋ ರೂಪಾಯಿಗಳನ್ನು ಸಂಕೋಚದಿoದ ಸ್ವೀಕರಿಸುತ್ತ, ರೋಗಿಗಳಿಗೆ ನೀಡುವ ಪುಕ್ಕಟೆ ಊಟವನ್ನೇ ತಾನೂ ಉಣ್ಣುತ್ತ ನೆಮ್ಮದಿಯಿಂದ ಬದುಕುತ್ತಿದ್ದಳು.
ಹೀಗಿದ್ದ ಸುಮತಿ ಆವತ್ತು ಹಗಲಲ್ಲಿ ತನ್ನ ಗುಡಿಸಲಲ್ಲಿ ಸ್ವಲ್ಪ ನಿದ್ರೆ ಮಾಡಿ ಡ್ಯೂಟಿಗೆ ಹೋಗುವ ಎಂದುಕೊoಡು ಮಲಗಿದ್ದಳು. ಅಷ್ಟರಲ್ಲಿ ಕುಡಿದು ಬಂದ ಗಂಡ ಅವಳನ್ನು ಹಣಕ್ಕಾಗಿ ಪೀಡಿಸಿದ. ಇವಳು ಕೊಡಲಿಲ್ಲ. ಅವನೂ ಬಿಡಲಿಲ್ಲ. ಕುಪಿತನಾಗಿ ಇವಳನ್ನು ಹಿಡಿದು ಸಮಾ ತುಳಿದು ರವಕೆ ಹರಿದು, ಅದರೊಳಗಿದ್ದ ಸಣ್ಣ ಪರ್ಸನ್ನು ಕಿತ್ತು ಹಣವನ್ನೆಲ್ಲ ದೋಚಿಕೊಂಡು ಹೊರಟು ಹೋದ. ಅವನ ಒದೆತದಲ್ಲಿ ಒಂದೇಟು ಅವಳ ಎಡಗಣ್ಣಿಗೂ ಬಿದ್ದುದರಿಂದ ಕಪ್ಪಾಗಿ ರೆಪ್ಪೆ ತೆರೆಯದಂತೆ ಊದಿಕೊಂಡಿತು. ಆದ್ದರಿಂದ ಗಂಡ ಹೊರಟು ಹೋದ ನಂತರ ಅವನಿಗೆ ಮನಬಂದoತೆ ಶಾಪಹಾಕುತ್ತ ಅಳುತ್ತ ಕುಳಿತವಳಿಗೆ ಮತ್ತೆ ನಿದ್ರೆ ಹತ್ತಲಿಲ್ಲ. ಹತಾಶೆಯಿಂದ ಎದ್ದು ಆಸ್ಪತ್ರೆಗೆ ಬಂದಿದ್ದಳು. ಎಡಗಣ್ಣಿನ ನೋವು ಸಹಿಸಿಕೊಂಡು ಕೆಲವು ಕೋಣೆಗಳನ್ನು ಗುಡಿಸಿ ಒರೆಸುವ ಹೊತ್ತಿಗೆ ರಾತ್ರಿ ದಾಟಿತು. ಅಷ್ಟರಲ್ಲಿ ಅವಳಿಗೆ ಮೈಕೈ ನೋವು ಕಾಣಿಸಿಕೊಂಡು ಇನ್ನೇನು ಒಂದು ಮೂಲೆಯಲ್ಲಿ ಬಿದ್ದುಕೊಳ್ಳಬೇಕು ಎಂಬಷ್ಟರಲ್ಲಿ ಆಸ್ಪತ್ರೆಯ ಅಂಗಳದಲ್ಲಿ ರಿಕ್ಷಾವೊಂದು ಬಂದು ನಿಂತಿದ್ದು ಕೇಳಿಸಿ ಕೆಟ್ಟ ಅಸಹನೆಯೆದ್ದಿತು. ಹಾಳಾದವೆಲ್ಲಾದರೂ! ಈ ಅಪರಾತ್ರಿಯಲ್ಲೂ ಬಂದು ಸಾಯುತ್ತವೆ! ಎಂದು ಸಿಡುಕುತ್ತ ಎದ್ದು ಹೋಗಿ ಹೊರಗೆ ಇಣುಕಿದಳು. ಆಗ ಅವಳನ್ನು ಕಂಡ ಶೀನುನಾಯ್ಕನು ನಮ್ರವಾಗಿ ವಿಷಯ ತಿಳಿಸಿದ. ಅವಳು ಅಷ್ಟು ಕೇಳಿದವಳು, ‘ಇಲ್ಲೇ ಇರಿ. ನರ್ಸ್ಗೆ ತಿಳಿಸಿ ಬರುತ್ತೇನೆ!’ ಎಂದು ಬುಸುಗುಟ್ಟುತ್ತ ಒಳಗೆ ಬಂದವಳು ನರ್ಸ್ ಜಾನಕಿಯ ಕಿವಿಯ ಹತ್ತಿರ ತನ್ನ ಗೊಗ್ಗರು ಧ್ವನಿಯಿಂದ, ‘ಸಿಸ್ಟರ್… ಓ, ಸಿಸ್ಟರ್…! ಒಂದು ಕೇಸು ಬಂದಿದೆ ಮಾರಾಯ್ರೇ…!’ ಎಂದು ಎಚ್ಚರಿಸಿದಳು. ಸುಮತಿಯ ಧ್ವನಿಗೆ ಜಾನಕಿ ಬೆಚ್ಚಿ ಎಚ್ಚರಗೊಂಡವಳು, ‘ಯಾರು ಮಾರಾಯ್ತಿ ಇಷ್ಟೊತ್ತಿನಲ್ಲಿ…? ಗತಿಗೋತ್ರ ಇಲ್ಲದವುಗಳು…!’ ಎಂದು ಸಿಟ್ಟಿನಿಂದ ಒದರಿದಳು.
‘ಯಾರೋ ಗಂಗರಬೀಡಿನವುಗಳoತೆ. ಕೇಸು ನೋಡಿದರೆ ಈಗಲೋ ಆಗಲೋ ಕಂಜಿ (ಹೆರುವುದು) ಹಾಕುವಂತಿದೆ!’ ಎಂದು ಸುಮತಿ ತನಗೂ ನಿದ್ರಾಭಂಗವಾದ ಕೋಪದಿಂದ ಅಂದಳು. ಜಾನಕಿ ಆಮೆಗತಿಯಿಂದೆದ್ದು ಹೊರಗೆ ಬಂದಳು. ಪ್ರೇಮ ವರಾಂಡದ ಜಗುಲಿಯ ಮೇಲೆ ಕುಳಿತು ತುಂಬಿದ ಹೊಟ್ಟೆಯನ್ನು ಹಿಡಿದುಕೊಂಡು ನರಳುತ್ತಿದ್ದಳು.
‘ಎಷ್ಟು ತಿಂಗಳಾಯ್ತು?’ ಜಾನಕಿ ಒರಟಾಗಿ ಪ್ರಶ್ನಿಸಿದಳು.
‘ಒಂಬತ್ತು ತುಂಬಿತು!’ ಎಂದು ಸರೋಜ ಉತ್ತರಿಸಿದಳು.
‘ಬಸುರಿ ನೀನಾ ಅವಳಾ…?’ ಜಾನಕಿ ಸಿಡುಕಿದಳು.
‘ಹೌದು. ಹೌದು, ಒಂಬತ್ತಾಯಿತು!’ ಎಂದು ಪ್ರೇಮ ನೋವು ನುಂಗುತ್ತ ಸರೋಜಳ ಮಾತನ್ನು ಸಮರ್ಥಿಸಿದಳು.
‘ಓಹೋ ಹೌದಾ, ಬರುವುದು ಬಂದಿರಿ ಬೆಳಿಗ್ಗೆನೇ ಬರಲೇನು ದಾಡಿಯಾಗಿತ್ತು ನಿಮಗೆ…? ಈ ಅಪರಾತ್ರಿಯಲ್ಲಿ ಈಗ ಡಾಕ್ಟçನ್ನು ಎಲ್ಲಿ ಹುಡುಕುವುದು? ಇನ್ನು ಅವರನ್ನು ಮನೆಯಿಂದಲೇ ಕರೆಯಿಸಬೇಕಷ್ಟೇ!’ ಎಂದವಳು, ಸರೋಜ ಮತ್ತು ಶೀನುನಾಯ್ಕ ದಂಪತಿಯತ್ತ ತಿರುಗಿ, ‘ಹ್ಞೂಂ! ನೀವೇನು ಮುಖ ನೋಡುವುದು…? ಎಬ್ಬಿಸಿ ಒಳಗೆ ಕರೆದುಕೊಂಡು ಬನ್ನಿ…!’ ಎಂದು ರೇಗಿ ಮುನ್ನಡೆದಳು. ಅಷ್ಟು ಕೇಳಿದ ಶೀನುನಾಯ್ಕನ ಮೂಗಿನ ಹೊಳ್ಳೆಗಳು ರಪ್ಪನೆ ಬಿರಿದವು. ಅವನು ತಾನು ಚೆನ್ನಾಗಿ ಕುಡಿದು ಗಡದ್ದಾಗಿ ನಿದ್ದೆಗೆ ಜಾರಿದ್ದವನನ್ನು ಬಲತ್ಕಾರವಾಗಿ ಎಬ್ಬಿಸಿಕೊಂಡು ಬಂದು ಆಸ್ಪತ್ರೆಯ ಬಾಗಿಲು ತೋರಿಸಿದ್ದುದರ ಕೋಪವೇ ಯಾರ ಮೇಲೋ ಕುದಿಯುತ್ತಿತ್ತು. ಅದಕ್ಕೆ ಸರಿಯಾಗಿ ಈಗ ದಾದಿಯ ಸಿಡುಕೂ ಕೆರಳಿಸಿಬಿಟ್ಟಿತು. ತಟ್ಟನೆ ಎದುರುತ್ತರಿಸಲು ಮಂದಾದ. ಆದರೆ ಅದನ್ನು ಗ್ರಹಿಸಿದ ಚೀಂಕುವು ಅವನನ್ನು ಮೆಲ್ಲನೆ ಚಿವುಟಿ ಕೆಕ್ಕರಿಸಿ ಸುಮ್ಮನಾಗಿಸಿದಳು. ಹಾಗಾಗಿ ಹೆಂಗಸರಿಬ್ಬರು ಪ್ರೇಮಾಳನ್ನೆಬ್ಬಿಸಿ ಅಳುಕುತ್ತ ನಡೆಸಿಕೊಂಡು ಒಳಗೆ ಕರೆದೊಯ್ಯತೊಡಗಿದರು.
ಅಷ್ಟೊತ್ತಿಗೆ ಪ್ರೇಮಾಳಿಗೆ ರಕ್ತ ಸ್ರಾವವಾಗಿ ಉಟ್ಟ ಸೀರೆ ತೊಯ್ದಿತ್ತು. ಅದು ಅವಳ ದುರಾದೃಷ್ಟಕ್ಕೆ ಸುಮತಿಯ ಎಡಗಣ್ಣಿಗೆ ಕಾಣದಿದ್ದರೂ ಬಲ ಕಣ್ಣಿಗೆ ಸ್ವಷ್ಟವಾಗಿ ಕಂಡಿತು. ಅವಳು ಒಮ್ಮೆಲೇ ಸಿಡಿಮಿಡಿಗೊಂಡವಳು, ‘ಛೀ ಛೀ! ಏನಿದು ಗಲೀಜು! ಡೆಲಿವರಿಗೆ ಬರುವಾಗ ಒಂದು ತುಂಡು ಒಳ ಬಟ್ಟೆಯನ್ನಾದರೂ ಉಟ್ಟುಕೊಂಡು ಬರಬೇಕೆಂಬ ಜ್ಞಾನ ಬೇಡವಾ ನಿಮಗೆ…? ಥೂ! ನೋಡಲ್ಲಿ ನೀನು ಕೂತ ಜಗುಲಿ, ನೆಲವೆಲ್ಲ ರಕ್ತಮಯವಾಗಿದೆಯಲ್ಲ! ಅದನ್ನೆಲ್ಲ ಯಾರು ಕ್ಲೀನ್ ಮಾಡುತ್ತಾರೆ?’ ಎಂದು ಪ್ರೇಮಾಳನ್ನು ಒರಟಾಗಿ ಗದರಿಸಿದವಳು, ‘ಇಲ್ನೋಡಿ ಸಿಸ್ಟರ್…! ನನಗಾಗಲೇ ಸಾಕಾಗಿಬಿಟ್ಟಿದೆ. ಅದನ್ನು ಅವರಿಂದಲೇ ಕ್ಲೀನ್ ಮಾಡಿಸಿ. ಯಾರಿಗೆ ಬೇಕು ಈ ದರಿದ್ರದ ಕೆಲಸ?’ ಎಂದು ಒದರುತ್ತ ಧುರಧುರನೇ ಮುಂದೆ ಹೋದಳು. ಸುಮತಿಯ ಮಾತು ಕೇಳಿದ ಜಾನಕಿ ರಪ್ಪನೆ ಹಿಂದಿರುಗಿ ಬಂದು ಪ್ರೇಮಾಳ ಹೊಟ್ಟೆಯನ್ನು ಹಿಡಿದು ಅಲ್ಲಿ ಇಲ್ಲಿ ಗಟ್ಟಿಯಾಗಿ ಒತ್ತಿ ನೇವರಿಸಿ ನೋಡಿದವಳು, ‘ಅಯ್ಯೋ ದೇವರೇ! ಮಗುವಿನ ತಲೆ ನೀರು ಒಡೆದಿದೆಯಲ್ಲಾ ಮಾರಾಯ್ತೀ…! ಇಷ್ಟರತನಕ ಮನೆಯಲ್ಲಿ ಕುಳಿತೇನು ಬೆರಣಿ ತಟ್ಟುತ್ತಿದ್ದಿಯಾ…?’ ಎಂದು ದುರುಗುಟ್ಟಿ ಅಂದಳು. ಅದಕ್ಕೆ ಪ್ರೇಮ, ‘ಒಳಬಟ್ಟೆ ತೊಟ್ಟುಕೊಂಡೇ ಬಂದಿದ್ದೇನೆ ಸಿಸ್ಟರ್. ಆದರೂ ಹೇಗಾಯಿತೆಂದು ಗೊತ್ತಾಗಲಿಲ್ಲ…!’ ಎಂದು ಸಂಕೋಚದಿoದ ಉತ್ತರಿಸಿದಳು. ಆದರೆ ಅಷ್ಟು ಕೇಳಿದ ಜಾನಕಿ, ‘ಏನು ಗೊತ್ತಾಗಲಿಲ್ಲ…? ಗಂಡನೊoದಿಗೆ ಮಲಗುವಾಗ ಮಜವಾಗಿತ್ತಾ…?’ ಎಂದು ವ್ಯಂಗ್ಯವಾಡಿ ಅವಳನ್ನಲ್ಲೇ ಬಿಟ್ಟು ಮುನ್ನಡೆದಳು. ಸರಕಾರಿ ಸೇವಕರ ತುಚ್ಛ ಮಾತುಗಳನ್ನು ಕೇಳಿದ ಪ್ರೇಮಾಳಿಗೆ ಅವಮಾನ, ಭಯದಿಂದ ಏನೂ ತೋಚದಾಯಿತು. ಇತ್ತ ಮೊದಲೇ ಅಸಹನೆಗೊಂಡಿದ್ದ ಶೀನು ನಾಯ್ಕನಿಗೆ ಸುಮತಿ ಮತ್ತು ಜಾನಕಿಯರ ಉಡಾಫೆಯ ಮಾತುಗಳು ಸುಡುವ ಬೆಂಕಿಗೆ ಒಣ ಮೆಣಸು ಸುರಿದಂತಾಯಿತು.
‘ಓ, ಸಿಸ್ಟರ್! ನೀವೆಂಥದು ಬಾಯಿಗೆ ಬಂದoತೆ ಮಾತಾಡುವುದು…? ಅವಳೇನು ಹತ್ತು ಹೆತ್ತವಳಾ ಅಥವಾ ನಿಮ್ಮಂತೆ ನಾವೂ ಹೆರಿಗೆ ಆಸ್ಪತ್ರೆಯಲ್ಲಿ ಕೆಲಸಕ್ಕಿದ್ದವರಾ…? ಅಷ್ಟೆಲ್ಲ ಗೊತ್ತಿದ್ದರೆ ನಿಮ್ಮಲ್ಲಿಗೆ ಯಾಕೆ ಬರುತ್ತಿದ್ದೆವು…? ನಮ್ಮಂಥ ಬಡಬಗ್ಗರಿಗೇ ಕಟ್ಟಿಸಿದಂಥ ಆಸ್ಪತ್ರೆಯಲ್ಲವಾ ಇದು? ನೀವು ಅಷ್ಟೊಂದು ಸಿಡುಕುವುದು ಯಾಕೆ!’ ಎಂದು ಕೂಗಾಡಿಬಿಟ್ಟ. ಚೀಂಕುವು ಗಂಡನ ಪೌರುಷಕ್ಕೆ ಅವಕ್ಕಾದಳು. ಆದ್ದರಿಂದ ಇವನನ್ನು ಹೀಗೆಯೇ ಬಿಟ್ಟರೆ ಇವನು ಖಂಡಿತಾ ಕೆಲಸ ಕೆಡಿಸುತ್ತಾನೆ ಎಂದುಕೊoಡು, ‘ಅಯ್ಯಯ್ಯೋ ದೇವರೇ…! ನೀವೊಮ್ಮೆ ಸುಮ್ಮನಿರಿ ಮಾರಾಯ್ರೇ. ಹೋದಲ್ಲೆಲ್ಲ ಎಂತದು ನಿಮ್ಮದು…?’ ಎಂದು ಗದರಿಸಿದಳು. ಆದರೆ ಶೀನನ ಕೋಪ ತಣ್ಣಗಾಗಲಿಲ್ಲ. ‘ನೀನೊಮ್ಮೆ ಸುಮ್ಮನಿರನಾ…! ಮತ್ತೆ ಇವರೆಂತ ಸಸಾರ ಮಾಡುವುದು?’ ಎಂದು ತಾನೂ ಅವಳನ್ನು ಗದರಿಸಿದವನು ಮರಳಿ ಸುಮತಿಯತ್ತ ತಿರುಗಿ, ‘ನೋಡೀ, ಬಸುರಿ ಹೆಂಗಸಿಗೆ ನಾಳೆ ಏನಾದರೂ ಹೆಚ್ಚುಕಮ್ಮಿಯಾಗಬೇಕು! ನಿಮ್ಮನ್ನೆಲ್ಲ ಸುಮ್ಮನೆ ಬಿಡಲಿಕ್ಕಿಲ್ಲ. ಸೀದಾ ಹೋಗಿ, ‘ಎಮ್ಮೆಲ್ಲೆ’ಯವರಿಗೆ ಕಂಪ್ಲೇoಟು ಕೊಟ್ಟು ಇಬ್ಬರನ್ನೂ ಒಳಗೆ ಹಾಕಿಸಲಿಕ್ಕುಂಟು!’ ಎಂದು ಗುಡುಗಿ ಸರಸರನೆ ಹೊರಗೆ ನಡೆದುಬಿಟ್ಟ.
ಆಸ್ಪತ್ರೆಗೆ ಬರುತ್ತಿದ್ದ ಬಡರೋಗಿಗಳು ಮತ್ತವರ ಕಡೆಯವರು ತಾವು ಅಂದಿದ್ದನ್ನೆಲ್ಲ ತಲೆ ತಗ್ಗಿಸಿಕೊಂಡು ಕೇಳುತ್ತ, ಅಸಹಾಯಕತೆಯಿಂದ ಹಲ್ಲು ಗಿಂಜುತ್ತ ಅಥವಾ ದೈನ್ಯದಿಂದ ಅಂಗಲಾಚುತ್ತ ಇರುತ್ತಿದ್ದವರನ್ನು ತಮ್ಮ ಸರ್ವಾಧಿಕಾರ ಧೋರಣೆಯಿಂದ ವಿಧವಿಧವಾಗಿ ಶೋಷಿಸುತ್ತ ಬರುತ್ತಿದ್ದ ಜಾನಕಿ ಮತ್ತು ಸುಮತಿಯರು ಅಂಥವರ ನಡುವೆ ತಮ್ಮ ಸರ್ವಿಸಿನಲ್ಲೇ ಶೀನನಂಥ ಗಂಡಸನ್ನು ಕಂಡಿರಲಿಕ್ಕಿಲ್ಲ! ಹಾಗಾಗಿ ಅವನ ಕೆಂಗಣ್ಣಿನ ಬೆದರಿಕೆಯಿಂದ ಇಬ್ಬರೂ ದಂಗಾಗಿಬಿಟ್ಟರು. ‘ಅಯ್ಯೋ ದೇವರೇ! ಈ ಗಲಾಟೆ ಎಲ್ಲಾದರೂ ದೊಡ್ಡದಾಗಿ ಮೇಲಾಧಿಕಾರಿಗಳಿಗೆ ಕಂಪ್ಲೇoಟು ಹೋದರೆ ತಮ್ಮ ಕೆಲಸಕ್ಕೇ ಕುತ್ತು ಬಂದೀತು. ಇಂಥ ರಾಜಮರ್ಜಿಯ ಗರ‍್ನಮೆಂಟ್ ಜಾಬ್ ಇನ್ನು ಮುಂದೆ ಸಿಗಲಿಕ್ಕುಂಟಾ?’ ಎಂದು ಜಾನಕಿಯ ವಿವೇಕವು ಅವಳನ್ನು ತಟ್ಟನೆ ಎಚ್ಚರಿಸಿತು. ಮರುಕ್ಷಣ ಆಶ್ಚರ್ಯವೆಂಬoತೆ ಅವಳು ತಣ್ಣಗಾದವಳು ಶೀನನ ಮಾತಿಗೆ ಏನೂ ಪ್ರತಿಯಾಡದೆ, ‘ಹ್ಞೂಂ, ಬನ್ನಿ ಬನ್ನಿ. ಮಾತಾಡುತ್ತ ನಿಂತರೆ ಸಮಯ ಮೀರುತ್ತದೆ!’ ಎನ್ನುತ್ತ ಪ್ರೇಮಾಳನ್ನು ಹೆರಿಗೆಯ ಕೋಣೆಗೆ ಕರೆದೊಯ್ದಳು ಮತ್ತು ವೈದ್ಯರಿಗೆ ಕರೆ ಮಾಡಿ ಪರಿಸ್ಥಿತಿಯ ಗಂಭೀರತೆಯನ್ನು ಅವರಿಗೆ ತಿಳಿಸಿ ತಕ್ಷಣ ಬರುವಂತೆ ಸೂಚಿಸಿದಳು. ಆದರೆ ವೈದ್ಯರು ಬಂದುದು ಮಾತ್ರ ಬೆಳಕಾದ ನಂತರವೇ!
ಅಂದು ಬೆಳಿಗ್ಗೆ ಏಳು ಗಂಟೆಯ ಸುಮಾರಿಗೆ ಪ್ರೇಮಾಳಿಗೆ ಹೆರಿಗೆಯಾಗಿ ಹೆಣ್ಣು ಮಗು ಜನಿಸಿತು. ಆದರೆ ಹುಟ್ಟುತ್ತಲೇ ಅದು ಶ್ವಾಸಕೋಶದ ತೊಂದರೆಯಿoದ ಬಳಲುತ್ತಿದ್ದುದು ಸಂಜೆಯ ಹೊತ್ತಿಗೆ ಭೂಮಿಯ ಋಣದಿಂದ ಮುಕ್ತವಾಯಿತು. ಪ್ರೇಮ ಮೌನವಾಗಿ ಅತ್ತಳು. ಆದರೆ ತನ್ನದೇ ಅಂತ್ಯವಿಲ್ಲದ ಬವಣೆಗಳ ನಡುವೆ ಇನ್ನೊಂದು ಜೀವವೂ ಬಂದು ಅದೂ ನನ್ನೊಂದಿಗೆ ನರಳುವುದರಿಂದ ಪ್ರಯೋಜನವೇನು? ಎಂದು ಯೋಚಿಸಿ ಮನಸ್ಸನ್ನು ಕಲ್ಲು ಮಾಡಿಕೊಂಡಳು. ಆಹೊತ್ತು ಸರೋಜಾಳೂ ಜೊತೆಗಿದ್ದು ಅವಳಿಗೆ ಸಾಂತ್ವನ ನೀಡುತ್ತಿದ್ದರಿಂದ ತುಸು ಸಮಾಧಾನವಾದಳು.
ತೋಮ, ಮರುದಿನ ಮಧ್ಯಾಹ್ನದ ಹೊತ್ತಿಗೆ ಮಗಳು ಶ್ವೇತಾಳಿಗೆ ಇಷ್ಟವಾದ ಎರಡು ಕಟ್ಟು ಬೋಟಿ (ಕುರುಕಲು ತಿಂಡಿ) ಯನ್ನು ಹಿಡಿದುಕೊಂಡು ಮನೆಗೆ ಬಂದ. ಅಪ್ಪನನ್ನು ಕಂಡ ಶ್ವೇತಾ ಅಳುತ್ತ ಅಮ್ಮ ಆಸ್ಪತ್ರೆಗೆ ದಾಖಲಾದ ವಿಷಯವನ್ನು ತಿಳಿಸಿದಳು. ಅವನು ಅಷ್ಟು ಕೇಳಿದವನು, ‘ಛೇ! ಈ ಮನೆಗೇ ಬರಬಾರದಿತ್ತು. ಹಾಳಾದ ಈ ಸಂಸಾರ ತಾಪತ್ರಯವೆಲ್ಲ ಯಾರಿಗೆ ಬೇಕಾಗಿದೆ!’ ಎಂದು ಗೊಣಗುತ್ತ ಒಲ್ಲದ ಮನಸ್ಸಿನಿಂದ ಎದ್ದು ಆಸ್ಪತ್ರೆಗೆ ಹೊರಟ. ಗಂಡ ತನ್ನೆದುರು ಬಂದು ನಿಸ್ಸಾರವಾಗಿ ನಿಂತುದನ್ನು ಕಂಡ ಪ್ರೇಮ ಅಸಹನೆ, ದುಃಖದಿಂದ ಮುಖ ತಿರುವಿ ಮಲಗಿಬಿಟ್ಟಳು. ಆದರೆ ಅವಳ ಆ ವರ್ತನೆಯು ತೋಮನಲ್ಲಿ ಯಾವ ಭಾವವನ್ನೂ ಮೂಡಿಸಲಿಲ್ಲ. ಮಗು ಸತ್ತ ಸುದ್ದಿಯನ್ನು ಸರೋಜಾಳಿಂದ ತಿಳಿದವನಿಗೆ ಎಲ್ಲೋ ಒಂಚೂರು ನೋವಾಯಿತೇನೋ ಎಂಬoತೆ ಅವನ ಮುಖ ಕುಂದಿತು. ಹೆಣ್ಣೆಂದಾಕ್ಷಣ ಅದೂ ಮಾಯವಾಯಿತು. ಒಂದು ಗಳಿಗೆಯಷ್ಟು ಹೊತ್ತು ಹೆಂಡತಿಯ ಪಕ್ಕದಲ್ಲಿ ಮೂಗನಂತೆ ಕುಳಿತ. ಬರಬರುತ್ತ ಕುಂಡೆಗೆ ಗೆದ್ದಲು ಹಿಡಿದಂತೆ ಚಡಪಡಿಸಿದವನು ಏನೋ ಯೋಚಿಸಿ ರಪ್ಪನೆದ್ದು, ‘ಈಗ ಹುಷಾರಿದ್ದಿ ಅಲ್ಲವಾ…?’ ಎಂದು ಹೆಂಡತಿಯನ್ನು ಪ್ರಶ್ನಿಸಿದ. ಅವಳು ಉಸಿರೆತ್ತಲಿಲ್ಲ. ‘ಆಮೇಲೆ ಬರುತೇನೆ…’ ಎಂದು ಹೇಳಿ ಹೋದವನು, ‘ಆಮೇಲೆ’ ಬರಲೇಇಲ್ಲ. ಪ್ರೇಮ ಹದಿನೈದು ದಿನಗಳ ಕಾಲ ಧರ್ಮದಾಸ್ಪತ್ರೆಯಲ್ಲಿ ಅನಾಥಳಂತೆ ಮಲಗಿ ದಾದಿ ಮತ್ತು ಆಯಾಳಿಂದ ಛೀಮಾರಿ ಹಾಕಿಸಿಕೊಳ್ಳುತ್ತ ಅಂತೂ ಚೇತರಿಸಿಕೊಂಡಳು. ಸರೋಜ ಅಷ್ಟೂ ದಿನಗಳ ಕಾಲ ಅವಳಿಗೆ ಎಲ್ಲವೂ ಆಗಿ ನೋಡಿಕೊಂಡಳು. ಹಾಗಾಗಿ ಅವಳ ಸಲಹೆಯಂತೆ ಪ್ರೇಮ ಗರ್ಭ ನಿರೋಧಕ ಶಸ್ತçಚಿಕಿತ್ಸೆಯನ್ನು ಮಾಡಿಸಿಕೊಂಡೇ ಮನೆಗೆ ಹಿಂದಿರುಗಿದಳು.
(ಮುoದುವರೆಯುವುದು)