
ಧಾರವಾಹಿ 35
ತಾನೊಬ್ಬ ಸಾಹೇಬರ ನಿಯತ್ತಿನ ಭಂಟ ಎಂದೆನ್ನಿಸಿಕೊಳ್ಳಲು ಹೋಗಿ ಮಾಡಬಾರದ್ದನ್ನು ಮಾಡಿ ಜೈಲು ಪಾಲಾದ ಲಕ್ಷ್ಮಣನಿಗೆ ಬಹಳ ದೊಡ್ಡ ಆಘಾತವಾಗಿತ್ತು. ಅದೂ ಶಿಕ್ಷೆಯ ಅವಧಿ ಹತ್ತು ವರ್ಷವೆಂದ ಕೂಡಲೇ ಹುಚ್ಚನಂತಾಗಿದ್ದ! ಉಸ್ಮಾನ್ ಸಾಹೇಬರು ತನ್ನ ಭಾಗದ ದೇವರು ಎಂದು ಭ್ರಮಿಸಿದ್ದವನಿಗೆ ಅವರು ನಡುನೀರಿನಲ್ಲಿ ಕೈಬಿಟ್ಟಿದ್ದು ಅವನ ವಿಶ್ವಾಸಕ್ಕೆ ಕೊಡಲಿಯೇಟು ಬಿದ್ದಂತಾಗಿ ದಿಗ್ಭçಮೆಗೊಂಡಿದ್ದ. ಹೆಂಡತಿ ಮಕ್ಕಳ ಚಿಂತೆ ಅವನನ್ನು ನಿರಂತರ ಕಾಡುತ್ತಿತ್ತು. ಆಗೆಲ್ಲಾ ಜೈಲು ಕೋಣೆಯ ಮೂಲೆ ಸೇರಿ ಕುಳಿತು ಮಂಡಿಗಳ ನಡುವೆ ಮುಖವನ್ನು ಹುದುಗಿಸಿ ಬಿಕ್ಕಿಬಿಕ್ಕಿ ಅಳುತ್ತಿದ್ದ. ಆಹೊತ್ತು ಸಾಹೇಬರ ಮೇಲೆ ಅವನಲ್ಲಿ ಅಸಾಧ್ಯ ದ್ವೇಷ ಕುದಿಯುತ್ತಿತ್ತು. ‘ಥೂ! ಇಂಥ ನಯವಂಚಕನನ್ನು ನಂಬಲೇಬಾರದಿತ್ತು. ಅವನಿಗಾಗಿ ತಾನು ಏನೇನೆಲ್ಲ ಮಾಡಿದೆ. ಎಂಥೆoಥ ಕಠಿಣ ಜವಾಬ್ದಾರಿಗಳನ್ನು ತಲೆಯ ಮೇಲೆ ಹೊತ್ತುಕೊಂಡು ನಿಭಾಯಿಸಿದೆ! ಆದರೆ ದಗಲ್ಬಾಜಿ ನನ್ಮಗ ನನಗೇ ದ್ರೋಹ ಮಾಡಿಬಿಟ್ಟನಲ್ಲ? ಯಾವುದಕ್ಕೂ ನಾನೊಮ್ಮೆ ಬಿಡುಗಡೆಯಾಗಿಕೊಳ್ಳುತ್ತೇನೆ. ನಂತರ ಅವನನ್ನು ಜೀವಸಹಿತ ಬಿಡಲಿಕ್ಕಿಲ್ಲ!’ ಎಂದು ಹಲ್ಲು ಕಡಿಯುತ್ತ ಕಾಲ ಕಳೆಯತೊಡಗಿದ. ಆದರೆ ಕಠಿಣವಾದ ಸೆರೆವಾಸವು ಅವನನ್ನು ಮೆಲ್ಲಮೆಲ್ಲನೇ ದುರ್ಬಲನನ್ನಾಗಿಸುತ್ತ ಸಾಗಿತು. ಜೊತೆಗೆ ಅವನ ಆವರೆಗಿನ ಜೀವನೋತ್ಸಾಹವೂ ಕುಂದುತ್ತ ಹೋಗಿ ಸದಾ ಜಡತ್ವ ಮತ್ತು ಪಶ್ಚಾತ್ತಾಪಗಳಂಥ ತುಮುಲಗಳು ಹಿಂಸಿಸತೊಡಗಿದವು. ಸೂಕ್ತ ಆಹಾರಾರೈಕೆಗಳೂ ಸಿಗದೆ ನರಪೇತಾಳನಾಗಿ ಶಿಕ್ಷೆಯ ಅವಧಿ ಮುಗಿಯುವ ಹೊತ್ತಿಗೆ ನಲವತ್ತರ ಹರೆಯದವನು ಅರವತ್ತರ ಮುದುಕನಂತೆ ಕಾಣುತ್ತಿದ್ದ. ಹೀಗಾಗಿ ಸಾಹೇಬರ ಮೇಲಿನ ದ್ವೇಷವೂ ತನ್ನ ತೀಕ್ಷ÷್ಣತೆಯನ್ನು ಕಳೆದುಕೊಂಡಿತು. ಬಿಸಿರಕ್ತದ ಸೊಕ್ಕಿನಿಂದಲೋ, ಸ್ವಾಮಿನಿಷ್ಠೆಯ ಭ್ರಮೆಯಿಂದಲೋ ಮೋಸಗಾರ ಸಾಹೇಬನ ಆಟಕ್ಕೆ ತಾನು ದಾಳವಾಗಿ ಜೀವನವನ್ನೇ ಹಾಳುಮಾಡಿಕೊಂಡೆ. ಇನ್ನು ಮರಳಿ ಹೋಗಿ ಆ ನೀಚನ ಮೇಲೆ ಸೇಡು ತೀರಿಸಿಕೊಂಡು ಮತ್ತೆ ಜೈಲು ಸೇರುವುದಕ್ಕಿಂತ ಉಳಿದ ಬದುಕನ್ನು ಹೆಂಡತಿ ಮಕ್ಕಳೊಂದಿಗೆ ಕಳೆಯುವುದೇ ಲೇಸು! ಎಂದು ಯೋಚಿಸುವ ಮಟ್ಟಕ್ಕೆ ಅವನು ಪರಿವರ್ತನೆಯಾಗಿದ್ದ. ಹೀಗೆಯೇ ಹತ್ತು ವರ್ಷಗಳು ಉರುಳಿದವು. ನಂತರ ಜೈಲಿನಿಂದ ಬಿಡುಗಡೆಯಾದ. ಶಿಕ್ಷೆಯ ರೂಪದಲ್ಲಿ ಅವನನ್ನು ಆವರೆಗೆ ದುಡಿಸಿಕೊಂಡ ಸರಕಾರವು ನೀಡಿದ ಒಂದಿಷ್ಟು ರೂಪಾಯಿಗಳನ್ನು ಹಿಡಿದುಕೊಂಡು ತನ್ನ ಕುಟುಂಬವನ್ನರಸುತ್ತ ಚೌಳುಕೇರಿಗೆ ಹೋದ.

ಅಷ್ಟರಲ್ಲಿ ಕಾಲ ಸಾಕಷ್ಟು ಬದಲಾಗಿತ್ತು. ಚೌಳುಕೇರಿಯ ಬಹುತೇಕ ಗುಡಿಸಲುಗಳು ಹಂಚಿನ ಮನೆಗಳಾಗಿದ್ದವು. ಅಲ್ಲಿನ ಮುಖ್ಯರಸ್ತೆಗಳಿಗೆ ಅಲ್ಲಲ್ಲಿ ವಿದ್ಯುತ್ ಕಂಬಗಳು ನೆಟ್ಟು ಬೆಳಗುತ್ತಿದ್ದವು. ಅಕ್ಕಯಕ್ಕನ ಗುಡಿಸಲು ಮಾತ್ರ ಮೊದಲಿಗಿಂತಲೂ ಅಧೋಗತಿಗಿಳಿದಿತ್ತು. ಅವಳೀಗ ಹಣ್ಣುಹಣ್ಣು ಮುದುಕಿಯಾಗಿದ್ದಳು. ಕಣ್ಣು ಸರಿಯಾಗಿ ಕಾಣಿಸುತ್ತಿರಲಿಲ್ಲ. ಕಿವಿಗಳು ಮಂದವಾಗಿದ್ದವು. ಅವಳ ದೂರದ ಸಂಬoಧಿ ಹುಡುಗನೊಬ್ಬ ಅವಳನ್ನು ನೋಡಿಕೊಳ್ಳುತ್ತಿದ್ದ. ಹಾಗಾಗಿ ತನ್ನ ಮನೆ ಬಾಗಿಲಿಗೆ ಎರಡನೆಯ ಬಾರಿ ಬಂದು ನಿಂತ ಲಕ್ಷ್ಮಣನ ಗುರುತು ಅವಳಿಗೆ ಬೇಗನೆ ಹತ್ತಲಿಲ್ಲ. ಆದ್ದರಿಂದ ಲಕ್ಷ್ಮಣನೇ ತನ್ನನ್ನು ಪರಿಚಯಿಸಿಕೊಂಡ. ಆದರೆ ಅಕ್ಕಯಕ್ಕ ಅಷ್ಟು ಕೇಳಿದವಳು ಕ್ಷಣಹೊತ್ತು ಅವನನ್ನೇ ದಿಟ್ಟಿಸಿ ನೋಡಿದಳು. ಬಳಿಕ ಅವಳ ಬೆಳ್ಳಗಿನ ಹುಬ್ಬುಗಳು ನಿಧಾನವಾಗಿ ಬಿಗಿದುಕೊಂಡವು. ಕಣ್ಣುಗಳು ಮೆಲ್ಲನೆ ಮಂಜಾದವು. ಮರುಕ್ಷಣ ಅವನ ಮುಖ ನೋಡಲೇ ಇಷ್ಟವಿಲ್ಲವೆಂಬoತೆ ಮುದುಕಿಯ ಮುಖವು ಕಳಾಹೀನವಾಯಿತು. ತಾನು ಅವನನ್ನು ಮಗನೆಂದುಕೊoಡಿದ್ದ ಮಮಕಾರವೂ, ಆನಂತರ ನಡೆದ ಘಟನೆಗಳೆಲ್ಲವೂ ಒಟ್ಟೊಟ್ಟಿಗೆ ಅವಳ ಮುನ್ನೆಲೆಗೆ ಬಂದು ಮನಸ್ಸನ್ನು ಹಿಂಡಿದ್ದರಿoದ ಬುರುಡೆಯ ಆಳಕ್ಕಿಳಿದು ಕುಳಿತಿದ್ದ ಕಣ್ಣುಗಳಲ್ಲಿ ಕೋಪದ ಕಿಡಿ ಕಾಣಿಸಿತು. ಮುಂದಿನಕ್ಷಣ ಅವಳಲ್ಲಿ ಹತಾಶಾಭಾವನೆ ಭುಗಿಲೆದ್ದು ಮನಸೋಇಚ್ಛೆ ಬೈಗುಳದ ರೂಪ ಪಡೆದು ಲಕ್ಷ್ಮಣನ ಮೇಲೆ ಹರಿಹಾಯ್ದವು. ಆದರೆ ಲಕ್ಷ್ಮಣ ಅವಳಿಗಿಂತಲೂ ಹೆಚ್ಚು ಜರ್ಝರಿತನಾಗಿದ್ದ. ಹಾಗಾಗಿ ಅವನಿಂದ ಯಾವೊಂದು ಪ್ರತಿಕ್ರಿಯೆಯೂ ಹೊಮ್ಮಲಿಲ್ಲ. ಅವನು ಹೊರಗಿನ ಜಗುಲಿಯ ಮೇಲೆ ತಲೆತಗ್ಗಿಸಿ ಕುಳಿತಿದ್ದವನು, ಸೆಗಣಿ ಸಾರಿಸಿದ ಅಂಗಳದಲ್ಲಿ ಒರಟು ಒರಟಾಗಿ ಎದ್ದು ಕಾಣುತ್ತಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ತನ್ನ ಬಲಗಾಲಿನ ಹೆಬ್ಬೆರೆಳಿನಿಂದ ಕೆದಕುತ್ತಿದ್ದ. ಕೆಲವು ಕ್ಷಣಗಳ ನಂತರ ಅಕ್ಕಯಕ್ಕ ತಣ್ಣಗಾದಳು. ಆಗ ಅವನ ಪರಿಸ್ಥಿತಿಯು ಅವಳಲ್ಲಿ ಕನಿಕರವನ್ನೂ ಮೂಡಿಸಿತು. ಹಾಗಾಗಿ, ‘ಹೋಗು, ಹೋಗು. ಇನ್ನಾದರೂ ಹೆಂಡತಿ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುವ ಬುದ್ಧಿಯನ್ನು ದೇವರು ನಿನಗೆ ಕೊಡಲಿ!’ ಎಂದು ಒರಟಾಗಿ ಹರಸಿ, ಸರೋಜಾಳ ವಿಳಾಸವನ್ನು ಕೊಟ್ಟು ಕಳುಹಿಸಿದಳು. ಲಕ್ಷ್ಮಣ ದುಃಖದಿಂದ ಎದ್ದವನು ಅಕ್ಕಯಕ್ಕನ ಪಾದಮುಟ್ಟಿ ನಮಸ್ಕರಿಸಿ ಅಲ್ಲಿಂದ ಹಿಂದಿರುಗಿದ.
ಸರೋಜ ಗಂಗರಬೀಡಿಗೆ ಬಂದು ನೆಲೆಸಿ ಹತ್ತು ವರ್ಷಗಳು ಕಳೆದಿದ್ದುವು. ಹಿರಿಯ ಮಗಳು ಶಾರದಾಳಿಗೆ ಈಗ ಹದಿನಾರು ತುಂಬಿತ್ತು. ಅವಳು ಅಮ್ಮನಂಥ ಚೆಲುವೆಯಾಗದೆ, ಅಪ್ಪನಂತೆ ಎಣ್ಣೆಗೆಂಪಿನ ಸಾಧಾರಣ ಸುಂದರಿಯಾಗಿ ಅರಳುತ್ತಿದ್ದಳು. ಐದನೇ ತರಗತಿಯ ನಂತರ ದೂರದ ಅಂಬರಬೆಟ್ಟಿನ ಶಾಲೆಗೆ ಹೋಗಲು ಅವಳಿಗೆ ಇಷ್ಟವಿರಲಿಲ್ಲ. ಹಾಗಾಗಿ ಅಮ್ಮನ ಒತ್ತಾಯವನ್ನೂ ಮಣಿಯದೆ ವಿದ್ಯೆಗೆ ತಿಲಾಂಜಲಿ ಇಟ್ಟಿದ್ದಳು. ಅದೇ ಸಮಯಕ್ಕೆ ಸರಿಯಾಗಿ ಫರ್ಲಾಂಗು ದೂರದ ಲಿಲ್ಲಿಬಾಯಿಯ ಆತ್ಮೀಯತೆಯೂ ಅವಳನ್ನು ಕೈಬೀಸಿ ಕರೆದಿತ್ತು. ಅವರೊಡನೆ ಸ್ನೇಹ ಬೆಳೆಸಿದವಳು ಕ್ರಮೇಣ ಅವರ ಮನೆಗೆಲಸಕ್ಕೆ ಸಹಾಯಕಳಾಗಿ ಹೋಗಿ ದುಡಿಯಲಾರಂಭಿಸಿದಳು. ಮಗಳು ಇಷ್ಟು ಬೇಗ ತನ್ನ ಕಾಲ ಮೇಲೆ ನಿಂತು ಮನೆಯ ಜವಾಬ್ದಾರಿಯನ್ನು ನಿಭಾಯಿಸತೊಡಗಿದ್ದುದನ್ನು ಕಾಣುತ್ತಿದ್ದ ಸರೋಜಾಳಿಗೆ ಒಂದು ಕಡೆ ಹೆಮ್ಮೆಯೆನಿಸುತ್ತಿದ್ದರೆ, ಇನ್ನೊಂದೆಡೆ ಅಪ್ಪ ಅನ್ನುವವನು ಸರಿಯಾಗಿರುತ್ತಿದ್ದರೆ ಮಗಳು ಇಷ್ಟು ಸಣ್ಣ ವಯಸ್ಸಿನಲ್ಲಿ ಕಷ್ಟಪಡಬೇಕಿತ್ತಾ? ಎಂಬ ಕೊರಗೂ ಕಾಡುತ್ತಿತ್ತು. ಆಗೆಲ್ಲ ಅವಳಿಗೆ ಗಂಡನ ಮೇಲೆ ಜಿಗುಪ್ಸೆಯೂ ಹುಟ್ಟುತ್ತಿತ್ತು. ಆದರೆ ಮನಸ್ಸಿನ ಮೂಲೆಯಲ್ಲೆಲ್ಲೋ ಅವನ ಮೇಲೆ ಅರ್ಥವಾಗದ ಪ್ರೀತಿಯೋ, ಮಮಕಾರವೋ ಮಿಡಿಯುತ್ತಿದ್ದುದು ಕೂಡಾ ಅವಳಿಗೆ ಅಚ್ಚರಿಯೆನಿಸುತ್ತಿತ್ತು.
ಆವತ್ತು ಗುರುವಾರ. ತೋಟದ ಕೆಲಸವಿರಲಿಲ್ಲ. ಹಾಗಾಗಿ ಸರೋಜ, ಅಂಗಳದ ಮೂಲೆಯಲ್ಲಿದ್ದ ಶಿಲೆಕಲ್ಲೊಂದರ ಮೇಲೆ ಕುಳಿತುಕೊಂಡು ಬೀಡಿ ಕಟ್ಟುತ್ತಿದ್ದಳು. ಅಷ್ಟೊತ್ತಿಗೆ ಶೆಟ್ಟರ ಮನೆಯ ಗೇಟಿನೆದುರು ಆಟೋ ಒಂದು ಬಂದು ನಿಂತಿತು. ಅವಳು ಕುತೂಹಲದಿಂದ ಅತ್ತ ಕತ್ತೆತ್ತಿ ನೋಡಿದಳು. ಶೆಟ್ಟರ ಬಂಗಲೆಗೆ ಆಗಾಗ್ಗೆ ನೆಂಟರಿಷ್ಟರು ಬಂದು ಹೋಗುವುದು ಮಾಮೂಲಿ. ಇಂದೂ ಹಾಗೆಯೇ ಯಾರಾದರೂ ಬಂದಿರಬಹುದೆoದು ಭಾವಿಸಿದವಳು ತನ್ನ ಕೆಲಸದಲ್ಲಿ ಮಗ್ನಳಾದಳು. ಆದರೆ ತನ್ನ ಗಂಡನೂ ಸದ್ಯದಲ್ಲೇ ಬಿಡುಗಡೆಯಾಗಲಿದ್ದಾನೆಂದು ಅವಳ ಒಳ ಮನಸ್ಸು ಹೇಳುತ್ತಿತ್ತು. ಆದರೆ ಆ ತಾರೀಕು ಮತ್ತು ದಿನದ ನೆನಪು ಮಾತ್ರ ಅವಳಿಗಿರಲಿಲ್ಲ. ಆದ್ದರಿಂದ ಅವನ ನಿರೀಕ್ಷೆಯಲ್ಲೇ ಇದ್ದವಳಿಗೆ ಪಕ್ಕನೇ ಅವರೇ ಯಾಕೆ ಬಂದಿರಬಾರದು…? ಎಂದೂ ಅನ್ನಿಸಿಬಿಟ್ಟಿತು. ಮತ್ತೊಮ್ಮೆ ಅತ್ತ ನಿರುಕಿಸಿದಳು. ಆಗ ಆಟೋದಿಂದ ಇಳಿದ ವ್ಯಕ್ತಿಯು ಬೀಣೆಯ ಚೀಲವೊಂದನ್ನು ಕೈಯಲ್ಲಿ ಹಿಡಿದ್ದವನು ಶೆಟ್ಟರ ಮನೆಯತ್ತ ಹೋಗದೆ ಸೀದಾ ಇವಳ ಶೆಡ್ಡಿನತ್ತಲೇ ಬರುತ್ತಿದ್ದ. ಅದನ್ನು ಕಂಡ ಇವಳು ಅವಕ್ಕಾಗಿ ಎದ್ದು ನಿಂತಳು. ಏನೋ ನೆನೆದು ಮೈಯಿಡೀ ಕಂಪಿಸಿತು. ಅವನು ಸಮೀಪಿಸುತ್ತಲೇ, ‘ಅಯ್ಯೋ ದೇವರೇ, ಹೌದು ಅವರೇ…! ಬಂದುಬಿಟ್ಟರಾ…!?’ ಎಂದುದ್ಘರಿಸಿ ತಟಸ್ಥಳಾಗಿದಳು. ಅವನು ತನ್ನ ಹತ್ತಿರ ಬರುವವರೆಗೆ ಅವುಡುಗಚ್ಚಿದ್ದವಳ ಅಳು ರಪ್ಪನೆ ಕಟ್ಟೆಯೊಡೆಯಿತು.
‘ಅಯ್ಯಯ್ಯೋ…! ಎಂಥದು ಮಾರಾಯ್ರೇ ಇದು, ಹೇಗಾಗಿ ಬಿಟ್ಟಿದ್ದೀರಿ…? ಯಾವಾಗ ಬಿಡುಗಡೆಯಾಯ್ತು…?’ ಎನ್ನುತ್ತ ಗಂಡನನ್ನು ಬಾಚಿ ತಬ್ಬಿಕೊಂಡಳು. ಲಕ್ಷ್ಮಣನಿಗೂ ಅಳು ಉಕ್ಕಿತು. ಹೆಂಡತಿಯ ತಲೆ ಸವರುತ್ತ ಮೌನವಾಗಿ ಕಣ್ಣೀರಿಟ್ಟ. ಸ್ವಲ್ಪಹೊತ್ತಲ್ಲಿ ಇಬ್ಬರೂ ಚೇತರಿಸಿಕೊಂಡು ಒಳಗೆ ನಡೆದರು. ‘ನಮ್ಮ ಹಣೆಯಲ್ಲಿ ಇಂಥದ್ದೆಲ್ಲ ಅನುಭವಿಸಲೇಬೇಕೆಂದು ಬರೆದಿರುವಾಗ ಯಾರೇನು ಮಾಡಲು ಸಾಧ್ಯ ಹೇಳಿ! ಆಗಿದ್ದು ಆಗಿ ಹೋಯಿತು. ಇನ್ನಾದರೂ ಚೆನ್ನಾಗಿ ಬದುಕುವ!’ ಎಂದ ಸರೋಜ ಗಂಡನಿoದ ಚೀಲವನ್ನು ತೆಗೆದುಕೊಂಡು, ಒಲಿಯ ಚಾಪೆಯನ್ನು ಹಾಸಿ ಕುಳ್ಳಿರಿಸಿದವಳು ಸೆರಗಿನಿಂದ ಅವನ ಕಣ್ಣೀರೊರೆಸುತ್ತ ಸಂತೈಸಿದಳು. ಮುಂದಿನಕ್ಷಣ ಇಬ್ಬರಿಗೂ, ಯಾವತ್ತೋ ಕಳೆದು ಹೋಗಿದ್ದ ಸುಂದರ ಬದುಕು ಮತ್ತೆ ದುಪ್ಪಟ್ಟು ಸೌಂದರ್ಯದಿoದ ಕಣ್ಣೆದುರು ಬಂದು ನಿಂತoತೆನಿಸಿತು. ಖುಷಿಯಿಂದ ಎದ್ದ ಸರೋಜ, ‘ಸ್ವಲ್ಪ ಕುಳಿತುಕೊಳ್ಳಿ. ಸ್ನಾನಕ್ಕೆ ನೀರಿಡುತ್ತೇನೆ…!’ ಎನ್ನುತ್ತ ಒಳಗೆ ಹೋದಳು. ಬಳಿಕ ಲಕ್ಷ್ಮಣ ಬಚ್ಚಲಿಗೆ ಹೋದ. ಜೈಲಿನ ಮಲಗುವ ಕೋಣೆಯಲ್ಲಿಯೇ ಸಂಡಾಸು ಮತ್ತು ಸ್ನಾನದ ಕೋಣೆ ಎರಡೂ ಒಂದೇ ಆಗಿದ್ದುದು ಈಗ ಅವನಿಗೆ ನೆನಪಾಗಿ, ಈ ಶೆಡ್ಡು ಕೂಡಾ ಹಾಗೆಯೇ ಇದೆ ಎಂದುಕೊoಡ. ಆದರೆ ಸರೋಜಾಳ ಸ್ವಚ್ಛತೆಯಿಂದಾಗಿ ಜೈಲಿನಷ್ಟು ಹೊಲಸಾಗಿಲ್ಲ ಎಂದೂ ಅನ್ನಿಸಿತು. ನಿಧಾನವಾಗಿ ಸ್ನಾನ ಮಾಡಿ ಬಂದ. ಅಷ್ಟೊತ್ತಿಗೆ ಸರೋಜ ಮುಂಜಾನೆಯ ಉಪ್ಪಿಟ್ಟನ್ನು ಹದವಾಗಿ ಬಿಸಿ ಮಾಡಿ, ಚಹಾದೊಂದಿಗೆ ತಂದು ಗಂಡನೆದುರಿಟ್ಟವಳು ಅವನನ್ನು ಪ್ರೀತಿಯಿಂದ ದಿಟ್ಟಿಸುತ್ತ ಕುಳಿತಳು.
ಲಕ್ಷ್ಮಣ ನಿಧಾನವಾಗಿ ತಿಂಡಿ ತಿನ್ನುತ್ತಿದ್ದವನಿಗೆ ಮಕ್ಕಳ ನೆನಪಾಗಿ, ‘ಮಕ್ಕಳೆಲ್ಲಿ…?’ ಎಂದ ಮಮತೆಯಿಂದ. ಸರೋಜಾಳಿಗೂ ಆಗಲೇ ಅವರ ನೆನಪಾಗಿದ್ದು! ‘ಹ್ಞಾಂ…! ಅವರೂ…’ ಎಂದವಳು ‘ಶಾರದ, ಬಾಯಮ್ಮನ ಮನೆಯಲ್ಲಿದ್ದಾಳೆ. ಪ್ರಮೀಳಾ ಶಾಲೆಗೆ ಹೋಗಿದ್ದಾಳೆ. ಇನ್ನೇನು ಬಂದು ಬಿಡುತ್ತಾರೆ. ನೀವು ಆರಾಮವಾಗಿ ಕುಳಿತು ಚಹಾ ಕುಡಿಯುತ್ತಿರಿ. ಅಷ್ಟರಲ್ಲಿ ಸ್ವಲ್ಪ ಹೊರಗೆ ಹೋಗಿ ಬಂದುಬಿಟ್ಟೆ…!’ ಎಂದವಳು ಗಡಿಬಿಡಿಯಿಂದೆದ್ದು ಒಳಗೆ ಹೋಗಿ ಹಳೆಯ ಕಬ್ಬಿಣದ ಟ್ರಂಕನ್ನು ತಡಕಾಡಿದಳು. ಅದರಲ್ಲಿ ಒಂದೆರಡು ರೂಪಾಯಿಯ ಕೆಲವು ನೋಟುಗಳು ಸಿಕ್ಕಿದವು. ಕೂಡಲೇ ಹೊರಟು ಇಗರ್ಜಿಯ ಸಮೀಪದ ಸುಂದರ ಶೆಟ್ಟರ ಕೋಳಿ ಫಾರಮ್ ಅನ್ನು ಹೊಕ್ಕಳು. ಕೋಳಿಯ ಮಾಂಸ ಕೊಳ್ಳಲು ಅವಳ ಮನಸ್ಸು ತುಡಿಯಿತು. ಆದರೆ ಅಷ್ಟು ಹಣವಿರಲಿಲ್ಲ. ಆದ್ದರಿಂದ, ‘ಶೆಟ್ರೇ, ಒಂದು ಕಿಲೋ ತಂಕಪಲ್ಲೆ (ಕೋಳಿಯ ಅನ್ನಕೋಶ ಮತ್ತು ಯಕೃತ್ತು) ಕೊಡುತ್ತೀರಾ?’ ಎಂದು ಹತ್ತು ರೂಪಾಯಿಯನ್ನು ಟೇಬಲ್ಲಿನ ಮೇಲಿಟ್ಟಳು.
ಸುಂದರ ಶೆಟ್ಟರಿಗೆ ಬಡಬಗ್ಗರ ಮೇಲೆ ಅನುಕಂಪ ಹೆಚ್ಚು. ಹಾಗಾಗಿ ಅವರು ತೂಗದೆಯೇ ಒಂದೂವರೆ ಕಿಲೋದಷ್ಟು ಕೋಳಿ ಲಿವರ್ ಮತ್ತು ಅನ್ನಕೋಶವನ್ನು ತೊಟ್ಟೆಗೆ ತುಂಬಿಸಿ ಕೊಟ್ಟರು. ಅವಳು ಅದನ್ನು ಹೊತ್ತುಕೊಂಡು ಬೇಗಬೇಗನೇ ಮನೆಗೆ ಬಂದವಳು, ನೀರು ದೋಸೆಗೆ ಅಕ್ಕಿ ಕಡೆದು ದೋಸೆ ಹುಯ್ಯುತ್ತ ಅತ್ತ ಕೋಳಿ ಸುಕ್ಕವನ್ನೂ ತಯಾರಿಸಿ ಗಂಡನಿಗೆ ಹೊಟ್ಟೆ ತುಂಬಾ ಬಡಿಸಿದಳು. ಲಕ್ಷ್ಮಣ ಬಹಳ ವರ್ಷಗಳ ನಂತರ ಹೆಂಡತಿಯ ಕೈಯಡುಗೆ ಉಣ್ಣತೊಡಗಿದ. ಆಹೊತ್ತು ಅವನಿಗೊಂದು ಸಂಗತಿ ನೆನಪಾಯಿತು. ತಾನಾವತ್ತು ಉಸ್ಮಾನ್ ಸಾಹೇಬನ ಹೆಂಡತಿಯ ಅಡುಗೆಯ ರುಚಿ ಕಂಡ ಮೇಲೆ ತನ್ನ ಹೆಂಡತಿಯ ಕೈರುಚಿಯನ್ನು ತುಚ್ಛೀಕರಿಸುತ್ತಿದ್ದುದು ಅವನ ಮನಸ್ಸನ್ನು ಹಿಂಡಿತು. ಮರುಕ್ಷಣ ಅವನ ಊಟದ ವೇಗ ಅರ್ಧಕ್ಕರ್ಧ ತಗ್ಗಿತು. ಇತ್ತ ಗಂಡನೆದುರು ಕುಳಿತು ಅವನು ಉಣ್ಣುವುದನ್ನು ನೋಡುತ್ತ ತನ್ನೊಳಗಿನ ಬಗೆಬಗೆಯ ತಾಕಲಾಟಗಳಿಗೂ ತುತ್ತಾಗಿದ್ದ ಸರೋಜ ಅವನ ಊಟದ ಗತಿ ನಿಧಾನವಾದುದನ್ನು ಗಮನಿಸಿದಳು.
‘ಅರೇ, ಏನಾಯಿತು…? ಪದಾರ್ಥ ಚೆನ್ನಾಗಿಲ್ಲವಾ. ಊಟ ಯಾಕೆ ನಿಲ್ಲಿಸಿದಿರಿ…?’ ಆತಂಕದಿoದ ಪ್ರಶ್ನಿಸಿದಳು.
ಆಗ ಅವನೂ ಎಚ್ಚೆತ್ತು, ‘ಏನಿಲ್ಲ ಸರೂ…ಹಿಂದಿನದೇನೋ ನೆನಪಾಯಿತಷ್ಟೆ!’ ಎಂದ ಬೇಸರದಿಂದ.
‘ಹೌದಾ… ಹ್ಞೂಂ! ಆದರೆ ಹಿಂದಿನದ್ದೆಲ್ಲ ಇನ್ನು ನೆನಯುವುದರಿಂದ ಪ್ರಯೋಜನವೇನು ಹೇಳಿ? ಎಲ್ಲ ಕೆಟ್ಟ ಕನಸೆಂದು ಮರೆತು ಬಿಡುವ. ಈಗ ಹೊಟ್ಟೆ ತುಂಬಾ ಊಟ ಮಾಡಿ!’ ಎಂದು ಸಂತೈಸಿದಳು. ಆದ್ದರಿಂದ ಲಕ್ಷ್ಮಣ ಗಡದ್ದಾಗಿ ಉಂಡು ತೇಗಿದ. ಸ್ವಲ್ಪಹೊತ್ತಲ್ಲಿ ಅವನಿಗೆ ನಿದ್ದೆಯಿಂದ ಕಣ್ಣು ಎಳೆಯಲಾರಂಭಿಸಿತು. ಅದನ್ನು ಗಮನಿಸಿದ ಸರೋಜ ಚಾಪೆ ಹಾಸಿಕೊಟ್ಟಳು. ತಕ್ಷಣ ಮಲಗಿದವನು ಕೆಲವೇ ನಿಮಿಷದಲ್ಲಿ ಗೊರಕೆ ಹೊಡೆಯತೊಡಗಿದ.
ಪ್ರೇಮ ಅಂದು ಬೆಳಿಗ್ಗೆ ಪೇಟೆಗೆ ಹೋಗಿದ್ದಳು. ಮರಳಿ ಬರುವ ಹೊತ್ತಿಗೆ ಸರೋಜಾಳ ಗಂಡ ಬಂದಿರುವ ವಿಷಯ ತಿಳಿದು ಸಂತೋಷಪಟ್ಟಳು. ಸರೋಜಾಳ ಒತ್ತಾಯಕ್ಕೆ ಹೋಗಿ ಮಲಗಿದ್ದ ಲಕ್ಷ್ಮಣನನ್ನು ಸಂಕೋಚದಿoದ ದಿಟ್ಟಿಸಿ ನೋಡಿ ಹೊರಗೆ ಬಂದವಳು ಸರೋಜಾಳ ಕೈಹಿಡಿದು, ‘ಸರೋಜಕ್ಕಾ ಇನ್ನು ಮುಂದಾದರೂ ನೀವು ಯಾವ ಚಿಂತೆಯನ್ನೂ ಮಾಡದೆ ನೆಮ್ಮದಿಯಿಂದಿರಬೇಕು!’ ಎಂದು ಮನ ತುಂಬಿ ಹೇಳಿ ಅವಳ ಖುಷಿಯಲ್ಲಿ ತಾನೂ ಭಾಗಿಯಾದಳು. ಅಪರಾಹ್ನದ ಹೊತ್ತಿಗೆ ಲಿಲ್ಲಿಬಾಯಿಯ ಮನೆಗೆ ಹೋಗಿ ಶಾರದಾಳಿಗೂ ವಿಷಯ ತಿಳಿಸಿದಳು. ಶಾರದ ಆನಂದೋದ್ವೇಗದಿoದ ಪ್ರೇಮಾಳೊಂದಿಗೆ ಮನೆಗೆ ಧಾವಿಸಿದಳು. ಆದರೆ ಮೈಚೆಲ್ಲಿ ಮಲಗಿದ್ದ ಅಪ್ಪನನ್ನು ಕಂಡವಳು ಯಾಕೋ ಹೊಸ ಗಂಡಸೊಬ್ಬನನ್ನು ಕಂಡoತೆ ಗಲಿಬಿಲಿಗೊಂಡಳು. ಅಷ್ಟೊತ್ತಿಗೆ ಸರೋಜ ಅಡುಗೆ ಕೋಣೆಯಿಂದ ಹೊರಗೆ ಬಂದವಳು, ‘ನಿನ್ನ ಅಪ್ಪ ಮಾರಾಯ್ತೀ…!’ ಎಂದು ಮೆಲುಧ್ವನಿಯಲ್ಲಿ ನಗುತ್ತ ಅಂದಳು. ಆಗ ಇಷ್ಟು ಕಾಲ ಅಮ್ಮನ ಕಣ್ಣುಗಳಲ್ಲಿ ಕಾಣಿಸದಿದ್ದ ಆನಂದದ ಸೆಲೆಯೊಂದು ಆ ಕ್ಷಣ ಮಿಂಚಿದ್ದನ್ನು ಶಾರದ ಗ್ರಹಿಸಿದಳು. ಜೊತೆಗೆ ತನ್ನ ಹುಟ್ಟಿಗೆ ಕಾರಣನಾದ ಪುರುಷನೊಬ್ಬನನ್ನು ಇದೇ ಮೊದಲ ಬಾರಿ ಕಾಣುವಂತೆ ದಿಟ್ಟಿಸಿದವಳ ಮನಸ್ಸು ನಿಧಾನವಾಗಿ ಹಿಂದಿನ ನೆನಪುಗಳನ್ನು ಕೆದಕುತ್ತ ಸಾಗಿತು.
‘ನಿನಗೆ ಆರು ವರ್ಷ ತುಂಬುವ ತನಕ ನಿನ್ನಪ್ಪ ನಮ್ಮೊಂದಿಗೇ ಇದ್ದರು ಮಗಾ. ಒಂದಿನವೂ ನೋವು, ದುಃಖ ಕೊಡದೆ, ನಮ್ಮನ್ನೆಲ್ಲ ಬಹಳ ಆಸೆಯಿಂದ ನೋಡಿಕೊಳ್ಳುತ್ತಿದ್ದರು. ಆದರೇನು ಮಾಡುವುದು ಹೇಳು, ನಮ್ಮ ಹಣೆಬರಹ ಕೆಟ್ಟಿತೆಂದು ಕಾಣುತ್ತದೆ. ದೇವರು ನಮ್ಮಿಂದ ಅವರನ್ನು ಸ್ವಲ್ಪ ಕಾಲ ಕಿತ್ತುಕೊಂಡಿದ್ದಾನೆ!’ ಎಂದು ಅಮ್ಮ ಆಗಾಗ ದುಃಖಿಸುತ್ತ ಹೇಳುತ್ತಿದ್ದುದು ಶಾರದಳಿಗೆ ನೆನಪಾಯಿತು. ಅಪ್ಪನ ಬಗ್ಗೆ ತನ್ನಲ್ಲೂ ಸವಿನೆನಪಿನ ಭಾವಗಳೇ ಇವೆ. ಆದರೆ ಅಪ್ಪ ಜೈಲು ಸೇರಿದಂದಿನಿoದ ಹಿಡಿದು ಮೊನ್ನೆ ಮೊನ್ನೆಯವರೆಗಿನ ಹತ್ತು ವರ್ಷಗಳ ಕಾಲ ಅಮ್ಮ ಮತ್ತು ನಾವು ಅನುಭವಿಸಿದ ಕಷ್ಟಕೋಟಲೆಗಳು ಒಂದೇ ಎರಡೇ…? ಆಗೆಲ್ಲ ಅಮ್ಮ ಸಹಿಸಲಸಾಧ್ಯವಾದ ನೋವಿನಿಂದ, ‘ನಿನ್ನಪ್ಪನಿಗೆ ಕೂಲಿನಾಲಿಯಾದರೂ ಮಾಡಿಕೊಂಡು ಮರ್ಯಾದೆಯಿಂದ ಬದುಕಬಹುದಿತ್ತು ಮಗಾ. ನಾನೆಂದೂ ಅವರಲ್ಲಿ ಶ್ರೀಮಂತಿಕೆಯ ಜೀವನವನ್ನು ಬಯಸಿದವಳಲ್ಲ. ಒಮ್ಮೆಯೂ ಹೊಸ ಸೀರೆ ಅಥವಾ ಚಿನ್ನಾಭರಣಗಳನ್ನು ಬೇಡಿದವಳಲ್ಲ. ಆದರೂ ಅವರು ಯಾಕೋ ಹಾಳು ದಾರಿ ಹಿಡಿದುಬಿಟ್ಟರು. ಜೊತೆಗೆ ನಮ್ಮನ್ನೂ ನರಕಕ್ಕೆ ತಳ್ಳಿ ಹೋದರು!’ ಎಂದು ಹತಾಶೆಯಿಂದ ಆಕ್ಷೇಪಿಸುತ್ತಿದ್ದಾಗಲೆಲ್ಲ ಅವಳ ಮಾತು ಮತ್ತು ಧೋರಣೆಗಳು ತನಗೂ ಹೌದೆನಿಸುತ್ತಿದ್ದವು.
ಒಂದು ವೇಳೆ ಅಪ್ಪ ನಮ್ಮೊಂದಿಗಿರುತ್ತಿದ್ದರೆ ನಾವು ಈವರೆಗೆ ಅನುಭವಿಸಿದ ನೋವು, ಯಾತನೆಗಳು ನಮಗೆ ಬರುತ್ತಲೇ ಇರಲಿಲ್ಲವೇನೋ! ಶಾಲೆಗೆ ಸೇರಿದ ಮೇಲನಂತೂ ಅಪ್ಪನ ಬಗ್ಗೆ ತನ್ನಲ್ಲಿ ಮತ್ತಷ್ಟು ಜಿಗುಪ್ಸೆ ಬೆಳೆಯಿತು. ಸಹಪಾಠಿಗಳೊಂದಿಗೆ ಯಾವ್ಯಾವುದೋ ಕಾರಣಕ್ಕೆ ಜಗಳವಾಗುತ್ತಿದ್ದಾಗಲೆಲ್ಲಾ, ‘ಹೇ, ಹೋಗನಾ…,ನಿನ್ನಪ್ಪ ಬಳ್ಳಾರಿ ಜೈಲಿನಲ್ಲಿ ಚೆಪ್ಪು (ತೆಂಗಿನ ನಾರು) ಗುದ್ದುತ್ತಿದ್ದಾನಲ್ಲ!’ ಎಂದು ಕೆಲವು ಗೆಳತಿಯರ ಅಪಹಾಸ್ಯದ ಚುಚ್ಚು ಮಾತುಗಳು ಎಂಥ ಹಿಂಸೆ ನೀಡುತ್ತಿದ್ದವು ಎಂಬುದು ಅವರಿಗೇನು ಗೊತ್ತು! ಹಾಗಂತ ನನ್ನಪ್ಪ ಒಬ್ಬನೇ ಜೈಲಿನಲ್ಲಿದ್ದುದಾ? ನನ್ನ ಗೆಳತಿ ಕ್ಯೂರಿಯ ಅಪ್ಪನೂ ಅವರ ಮನೆಯವರೊಡನೆ, ನೆರೆಕರೆಯವರೊಡನೆ ಜಗಳವಾಡಿ, ಹೊಡೆದಾಡಿ ಆರು ತಿಂಗಳಿಗೊಮ್ಮೆಯಾದರೂ ಜೈಲಿಗೆ ಹೋಗಿ ಬರುತ್ತಿದ್ದನಲ್ಲವಾ? ಇನ್ನೊಬ್ಬಳು ಗೆಳತಿ ವನಜಾಳ ಅಪ್ಪ ಮತ್ತು ಅಣ್ಣಂದಿರ ಕಥೆಯೂ ಹಾಗೆಯೇ ಇತ್ತಲ್ಲವಾ? ಆದರೂ ನನ್ನಪ್ಪ ಮಾತ್ರ ತುಂಬಾ ವರ್ಷಗಳಿಂದ ಜೈಲಿನಲ್ಲೇ ಇದ್ದುದರಿಂದಲೋ ಏನೋ ಅವರಿಗೆಲ್ಲ ಆಡಿಕೊಳ್ಳಲು ತಮಾಷೆಯ ವಿಷಯವಾಗುತ್ತಿತ್ತು.
ತನ್ನ ಸಹಪಾಠಿಗಳ ಹೆಚ್ಚಿನ ಹೆತ್ತವರು ಆಗಾಗ ಶಾಲೆಗೆ ಬಂದು ತಮ್ಮ ಮಕ್ಕಳ ಚಟುವಟಿಕೆಗಳ ಬಗ್ಗೆ ವಿಚಾರಿಸಿಕೊಂಡು ಹೋದವರಲ್ಲ. ಆದರೆ ಶಾಲಾ ವಾರ್ಷಿಕೋತ್ಸವದ ಒಂದು ದಿನ ಅಥವಾ ಇತರ ಮುಖ್ಯ ಕಾರ್ಯಕ್ರಮಗಳಿಗೆ ಮಾತ್ರ ತಪ್ಪದೇ ಬಂದು ಕುಳಿತು ಮಕ್ಕಳ ಮನಸ್ಸಿಗೆ ಖುಷಿಕೊಟ್ಟು ಹೋಗುತ್ತಿದ್ದರು. ಆದರೆ ನನ್ನಪ್ಪನ ಕಥೆ ಹಾಗಿರಲಿ, ಅಮ್ಮನಾದರೂ ಒಂದು ದಿನ ಬಂದು ಕುಳಿತು ನಮ್ಮ ಆಟೋಟ, ಕೂಡು ಕುಣಿತವನ್ನು ನೋಡಿ ಆನಂದಿಸಿದ್ದುoಟಾ? ಅಂಥ ಸಂದರ್ಭ ಬಂದಾಗಲೆಲ್ಲ ತಾನೆಷ್ಟೋ ಬಾರಿ ಮೂತ್ರದ ನೆಪದಲ್ಲಿ ಗೆಳತಿಯರ ನಡುವಿನಿಂದ ಎದ್ದು ಹೋಗಿ ಮನಸೋಇಚ್ಛೆ ಅತ್ತು ಸಮಾಧಾನಗೊಳ್ಳುತ್ತಿದ್ದೆನಲ್ಲ! ಹಾಗಾಗಿಯೇ ಇರಬೇಕು ಶಾಲೆಗೆ ಹೋಗುವ ವಿಷಯದಲ್ಲಿ ನನ್ನ ಮನಸ್ಸು ಮುರಿದಿದ್ದು?
‘ನಿನ್ನ ಅಪ್ಪ ಯಾರನ್ನೋ ಅತಿಯಾಗಿ ನಂಬಿ ಅಡ್ಡ ದಾರಿ ಹಿಡಿದರು ಮಗಾ. ಇಲ್ಲದಿದ್ದರೆ ಅವರು ತುಂಬಾ ಒಳ್ಳೆಯವರು!’ ಎಂದು ಅಮ್ಮ, ಅಪ್ಪನ ನೆನಪು ಬಂದಾಗಲೆಲ್ಲ ಹೇಳಿ ಅಳುತ್ತಿದ್ದಳು. ಆಗ ಅಪ್ಪನ ಬಗ್ಗೆ ತನ್ನಲ್ಲೂ ಅನುಕಂಪ, ಸಮಾಧಾನ ಮೂಡುತ್ತಿತ್ತು. ಅಂಥ ಅಪ್ಪನೇ ಇಂದು ದಿಢೀರ್ ಅಂತ ತನ್ನ ಕಣ್ಣ ಮುಂದೆ ಇದ್ದಾನೆ! ಆದರೆ ಹಕ್ಕಿಯ ಮರಿಗಳಿಗೆ ರೆಕ್ಕೆ ಪುಕ್ಕ ಬಲಿತು ಹಾರಲು ಕಲಿಯುವವರೆಗೂ ಜೋಪಾನವಾಗಿ ಕಾಪಾಡಬೇಕಿದ್ದ ತಂದೆ ಹಕ್ಕಿಯೇ ಆಕಸ್ಮತ್ತಾಗಿ ಎತ್ತಲೋ ಮರೆಯಾಗಿ, ಮರಿಹಕ್ಕಿಗಳು ಬೆಳೆದು ಹಾರಲು ಕಲಿತ ಮೇಲೆ ಮರಳಿ ಬಂದರೆ ಆ ಮರಿಗಳಿಗೆ ಸಂತೋಷವಾಗಬಹುದಾ? ಅದೇನೋ ಗೊತ್ತಿಲ್ಲ. ಆದರೆ ತಾನು ಸಂತೋಷಪಡಬೇಕು. ಯಾಕೆಂದರೆ ಅಪ್ಪನ ಮೇಲೆ ತನಗಿನ್ನೂ ಪ್ರೀತಿಯಿದೆ. ಜೊತೆಗೆ ಸಣ್ಣದೊಂದು ತಿರಸ್ಕಾರವೂ ಇದೆಯೇನೋ? ಎಂಬoತಹ ಯೋಚನೆಯಲ್ಲಿದ್ದ ಶಾರದಾ, ಲಕ್ಷ್ಮಣನ ಮಗ್ಗುಲು ಬದಲಿಸುವಿಕೆಗೆ ರಪ್ಪನೇ ಎಚ್ಚೆತ್ತು ಅವನನ್ನು ದೀರ್ಘವಾಗಿ ದಿಟ್ಟಿಸಿದಳು. ತಾನು ಹತ್ತು ವರ್ಷಗಳ ಹಿಂದೆ ಕಂಡಿದ್ದ ಆ ಬಲಿಷ್ಠ ದೇಹದ, ಮಾತು ಮಾತಿಗೂ ಬಿಗಿದಪ್ಪಿ ಮೆತ್ತಗೆ ಚಿವುಟಿ, ಮೃದುವಾಗಿ ಉರುಡಾಡಿ, ಮೆಲ್ಲನೆ ಹೊಡೆದು ಮುದ್ದುಗರೆದು ಅಕ್ಕರೆಯ ಹೊನಲು ಹರಿಸುತ್ತಿದ್ದಂಥ ಆ ಸುಂದರ ಅಪ್ಪನೆಲ್ಲಿ? ಇಲ್ಲಿ ಈಗ ಒಣಗಿದ ಮರದ ಕೊರಡಿನಂತೆ ಮುದುಡಿ ಮಲಗಿರುವ ಈ ವ್ಯಕ್ತಿ ಎಲ್ಲಿ! ಎಂದುಕೊoಡವಳಿಗೆ ಮೆಲ್ಲನೆ ಕಣ್ಣು ಮಂಜಾಯಿತು. ಅಪ್ಪನಿಗೆ ಯಾವಾಗ ಎಚ್ಚರವಾಗುತ್ತದೋ…? ಎಂಬ ತವಕದಿಂದ ಕಾಯತೊಡಗಿದಳು.
ಅಷ್ಟೊತ್ತಿಗೆ ಶಾಲೆಯಿಂದ ಬಂದ ಪ್ರಮೀಳಾಳಿಗೂ ಅಪ್ಪನನ್ನು ಕಂಡು ಖುಷಿಯೋ ಖುಷಿ! ತನಗೂ ಅಪ್ಪನಿದ್ದಾನೆ. ಆದರೆ ಜೈಲಿನಲ್ಲಿದ್ದಾನೆ ಎಂದು ಅವಳಿಗೂ ಗೊತ್ತಿತ್ತು. ಆ ಬಗ್ಗೆ ಎಲ್ಲೂ ಯಾರೊಂದಿಗೂ ಮಾತಾಡಕೂಡದು ಎಂದು ಅಮ್ಮ ತಾಕೀತು ಮಾಡಿದ್ದಳು. ಆದ್ದರಿಂದ ಅಪ್ಪನ ಸುದ್ದಿಯನ್ನು ಗೆಳತಿಯರೊಂದಿಗೆ ಎಂದೂ ಮಾತಾಡಿಯೇ ಇಲ್ಲವೆಂಬಷ್ಟು ಗೌಪ್ಯವಾಗಿಟ್ಟಿದ್ದಳು ಆ ಪುಟ್ಟ ಹುಡುಗಿ. ಆದರೆ ಗೆಳೆಯ, ಗೆಳತಿಯರ ನಡುವೆ ತಮ್ಮ ಅಪ್ಪ ಅಮ್ಮಂದಿರ ಮಾತುಕಥೆ ಬಂದಾಗಲೆಲ್ಲಾ ‘ನನ್ನಪ್ಪ ಪರವೂರಲ್ಲಿದ್ದಾರೆ. ಆದಷ್ಟು ಬೇಗ ಬರುತ್ತಾರಂತೆ!’ ಎಂದು ಅಮ್ಮ ಹೇಳಿ ಕೊಟ್ಟಂತೆಯೇ ಹೇಳುತ್ತಿದ್ದುದು ಇಂದು ಅವಳಿಗೂ ನೆನಪಾಯಿತು. ಅಬ್ಬಾ! ಇನ್ನು ಚಿಂತೆಯಿಲ್ಲ. ಅಪ್ಪ ಬಂದುಬಿಟ್ಟರು. ಆದಷ್ಟು ಬೇಗ ಅವರನ್ನು ಶಾಲೆಗೆ ಕರೆದುಕೊಂಡು ಹೋಗಿ ಗೆಳತಿಯರಿಗೆಲ್ಲ ತೋರಿಸಬೇಕು!’ ಎಂದುಕೊoಡು ಆನಂದಪಟ್ಟಳು. ಬೇಗಬೇಗನೇ ಬಚ್ಚಲಿಗೆ ಹೋಗಿ ಕೈಕಾಲು ಮುಖ ತೊಳೆದು ಬಂದು ಅಪ್ಪನ ಚಾಪೆಯ ಹತ್ತಿರ ಕುಳಿತು ಅವನ ಮುಖವನ್ನು ದಿಟ್ಟಿಸುತ್ತ ಅಮ್ಮ ತಂದಿಟ್ಟ ತಿಂಡಿಯನ್ನು ಮೆಲ್ಲತೊಡಗಿದಳು.
ಲಕ್ಷ್ಮಣನಿಗೆ ದೀರ್ಘ ಕಾಲದ ನಂತರ ದೊರೆತ ಸ್ವಾತಂತ್ರö್ಯವೂ, ತನ್ನವರನ್ನು ಕೂಡಿಕೊಂಡ ಖುಷಿಯೂ ಸೇರಿ, ಕಳೆದ ಹತ್ತು ವರ್ಷಗಳಲ್ಲೆಂದೂ ಇಂಥ ಆತಂಕರಹಿತ ನಿದ್ರೆಯನ್ನು ಮಾಡಿರಲಿಲ್ಲವೇನೋ ಎಂಬoತೆ ಮಲಗಿದವನು ಸಂಜೆಯ ಹೊತ್ತಿಗೆ ಎಚ್ಚರವಾದ. ಮೆಲ್ಲನೆ ಕಣ್ಣು ಬಿಟ್ಟವನಿಗೆ ತನ್ನೆದುರು ಪುಟ್ಟ ಹೆಣ್ಣು ಗೊಂಬೆಯೊoದು ಕುಳಿತು ತನ್ನನ್ನು ಪಿಳಿಪಿಳಿ ದಿಟ್ಟಿಸುತ್ತಿದ್ದುದು ಕಾಣಿಸಿತು. ಹಸುರು ಬಣ್ಣದ ಅರ್ಧ ಲಂಗದ ಮೇಲೆ ಬಿಳಿಯಂಗಿ ತೊಟ್ಟು, ಒಪ್ಪವಾಗಿ ಬಾಚಿ ಹೆಣೆದಿದ್ದ ಎರಡು ಜಡೆಗಳಿಗೆ ಗುಲಾಬಿ ಹೂವಿನ ಮಾದರಿಯಲ್ಲಿ ಕೆಂಪು ರಿಬ್ಬನ್ ಪೋಣಿಸಿ ಬಿಗಿದಿದ್ದ ಮತ್ತು ಥೇಟ್ ಅವಳಮ್ಮನಂತೆಯೇ ಗುಂಡು ಗುಂಡಗಿನ ಸುಂದರಿಯಾಗಿ, ಕಾಲು ಚಾಚಿ ಕುಳಿತು ಬಾಯಲ್ಲಾಡಿಸುತ್ತ ತನ್ನನ್ನೇ ನೋಡುತ್ತಿದ್ದ ಹನ್ನೆರಡರ ಆ ಪೋರಿಯನ್ನು ಕಂಡ ಲಕ್ಷ್ಮಣನ ಹೃದಯ ವೇಗವಾಗಿ ಬಡಿದುಕೊಳ್ಳುತ್ತ ವಾತ್ಸಲ್ಯ ತುಂಬಿ ಬಂತು. ಮಗಳನ್ನು ಅಕ್ಕರೆಯಿಂದ ನೋಡಿ ನಕ್ಕ. ಅವಳ ಕೋಮಲ ಪಾದಗಳನ್ನು ಹಿಡಿದು ರ‍್ರನೆ ತನ್ನತ್ತ ಎಳೆದೆತ್ತಿ ಮಡಿಲಲ್ಲಿ ಕುಳ್ಳಿರಿಸಿಕೊಂಡು ಮುದ್ದುಗರೆಯತೊಡಗಿದ. ಆಗ ಅವಳಿಗಾದ ನಾಚಿಕೆ, ಆನಂದದಿoದ ಹೊರಟ ಮೃದುವಾದ ಚೀತ್ಕಾರವು ಒಳಗಿದ್ದ ಶಾರದಾ, ಸರೋಜಾಳಿಗೂ ಕೇಳಿಸಿ ಅವರು ಕೂಡಲೇ ಹೊರಗೆ ಬಂದು ಅಪ್ಪ ಮಗಳ ಅಕ್ಕಪಕ್ಕ ಕುಳಿತು ಅವರ ಖುಷಿಯಲ್ಲಿ ಭಾಗಿಯಾದರು. ಕೆಲವು ಹೊತ್ತು ಅಪ್ಪ ಮಕ್ಕಳ ನಡುವೆ ಮುದ್ದು ಮಾತು, ಲಲ್ಲೆಸಲ್ಲೆಗಳು ನಡೆದ ಬಳಿಕ ಲಕ್ಷ್ಮಣ ಇಬ್ಬರನ್ನೂ ಕರೆದುಕೊಂಡು ಗಂಗರಬೀಡಿನ ಪೇಟೆಯತ್ತ ಹೊರಟ. ಸರೋಜಾಳಿಗೆ ಇಂದು ಬಹಳವೇ ನೆಮ್ಮದಿಯಾಗಿತ್ತು. ಬಹಳ ಕಾಲದಿಂದ ಎಡೆಬಿಡದೆ ಕಾಡುತ್ತಿದ್ದ ಹತಾಶೆ, ಒಂಟಿತನದ ಭಾವಗಳೆಲ್ಲ ಗಂಡ ಒಳಗಡಿಯಿಡುತ್ತಲೇ ಮಾಯವಾಗಿದ್ದವು. ಅವಳಲ್ಲಿ ಹಿಂದಿನ ಲವಲವಿಕೆಯು ಮರಳಿ ಚಿಗುರೊಡೆದಿತ್ತು. ಹಾಗಾಗಿ ಮಕ್ಕಳ ಮದುವೆಯ ಬಗ್ಗೆಯೂ, ಸ್ವಂತ ಸೂರು ಹೊಂದುವುದರ ಕುರಿತೂ ಎಂದೋ ಕಮರಿ ಹೋಗಿದ್ದ ಆಸೆಗಳೂ ಮತ್ತೆ ಜೀವತಳೆದಿದ್ದವು. ಅದೇ ಗುಂಗಿನಲ್ಲಿದ್ದವಳಿಗೆ ಹೊರಗಡೆ ಅಪ್ಪ ಮಕ್ಕಳ ಕಿಲಕಿಲ ನಗು ಮತ್ತು ಮಾತುಕತೆಗಳು ಕೇಳಿಸಿದವು. ಮಕ್ಕಳಿಬ್ಬರೂ ಅಪ್ಪನಿಗಂಟಿಕೊoಡೇ ಒಳಗಡಿಯಿಟ್ಟರು.
(ಮುಂದುವರೆಯುವುದು)