
ಧಾರವಾಹಿ 36
ಮರುದಿನ ಪೂರ್ವದಲ್ಲಿ ಸೂರ್ಯ ಉದಯಿಸಿ ಆಕಾಶವಿಡೀ ಓಕುಳಿ ಎರಚಿದಂಥ ಬಣ್ಣಕ್ಕೆ ತಿರುಗುವ ಹೊತ್ತಿಗೆ ಸರಿಯಾಗಿ ಲಕ್ಷ್ಮಣ ದಂಪತಿಯ ಮತ್ತೊಂದು ಮಜಲಿನ ಹೊಸ ಜೀವನವು ಮರಳಿ ಆರಂಭವಾಯಿತು. ಅಂದು ಲಕ್ಷ್ಮಣ ಬೆಳಗಿನ ಮೊದಲ ಜಾವದಲ್ಲೇ ಎಚ್ಚರವಾದವನು ಸಿಮೆಂಟು ಸೂರು ದಿಟ್ಟಿಸುತ್ತ ಯೋಚಿಸತೊಡಗಿದ. ಮಕ್ಕಳನ್ನು ಸಾಕಿ ಬೆಳೆಸಲು ಸರೋಜ ಎಷ್ಟು ಕಷ್ಟಪಟ್ಟಿದ್ದಾಳೋ ಏನೋ? ಆದಷ್ಟು ಬೇಗ ತಾನು ಈ ಊರಲ್ಲೊಂದು ದುಡಿಮೆಯನ್ನು ಹಿಡಿದು ಅವಳ ಕಷ್ಟಗಳನ್ನೆಲ್ಲ ನಿವಾರಿಸಿ ಇನ್ನು ಮೇಲಾದರೂ ಅವಳನ್ನು ಒಂದಿಷ್ಟು ನೆಮ್ಮದಿಯಿಂದ ನೋಡಿಕೊಳ್ಳಬೇಕು- ಎಂದುಕೊoಡ. ಅದರಿಂದ ಅವನ ಮನಸ್ಸು ಸ್ವಲ್ಪ ಹಗುರವಾಯಿತು. ಅಷ್ಟರಲ್ಲಿ, ‘ಹೋಯ್, ಏಳಿ ಮಾರಾಯ್ರೇ ಮುಖ ತೊಳೆದುಕೊಳ್ಳಿ. ಚಹಾ ಮಾಡುತ್ತೇನೆ!’ ಎಂದು ಅಂಗಳ ಗುಡಿಸಿ ಒಳಗೆ ಬಂದ ಸರೋಜ ಗಂಡನತ್ತ ಕಿರುನಗುತ್ತ ಹೇಳಿ ಒಳಗೆ ಹೋದಳು. ಮಕ್ಕಳು ಅದಾಗಲೇ ಎದ್ದಿದ್ದು, ಶಾರದಾ ಲಿಲ್ಲಿಬಾಯಿಯ ಮನೆಗೆ ಹೋಗಿದ್ದಳು. ಪ್ರಮೀಳಾ ಬರೆಯುತ್ತ ಕುಳಿತಿದ್ದಳು. ಲಕ್ಷ್ಮಣ ಮುಖ ತೊಳೆದು ನಿತ್ಯಕರ್ಮ ಮುಗಿಸಿ ಬಂದು ಚಾವಡಿಯಲ್ಲಿ ಕುಳಿತ. ಸರೋಜ ಹಿಂದಿನ ದಿನದ ನೀರು ದೋಸೆ ಮತ್ತು ಕೋಳಿ ಸುಕ್ಕವನ್ನು ಬಿಸಿ ಮಾಡಿ ತಂದು ಗಂಡನಿಗೆ ನೀಡಿದಳು. ಅವನು ಅದನ್ನು ತಿಂದವನು ಮತ್ತೂ ಸ್ವಲ್ಪಹೊತ್ತು ಕುಳಿತ ನಂತರ ಊರು ಸುತ್ತಾಡಿ ಬರಲು ಮನಸ್ಸಾಯಿತು. ‘ಸರೂ, ಸ್ವಲ್ಪ ಹೊರಗಡೆ ಹೋಗಿ ಬರುತ್ತೇನೆ ಮಾರಾಯ್ತೀ…’ ಎಂದ.
‘ಆಯ್ತು, ಹೋಗಿ ಬೇಗ ಬನ್ನಿ…!’ ಎಂದ ಅವಳಿಗೆ ಮತ್ತೇನೋ ಹೊಳೆಯಿತು. ‘ಹೋಯ್ ಸ್ವಲ್ಪ ನಿಲ್ಲಿ. ಬಂದೆ…!’ ಎಂದವಳು ಹತ್ತು ರೂಪಾಯಿಯ ನೋಟೊಂದನ್ನು ತಂದು ಅವನಿಗೆ ನೀಡಿದಳು. ಆಗ ಲಕ್ಷ್ಮಣನಿಗೆ ತಾನು ಜೈಲಿನಲ್ಲಿ ಸಂಪಾದಿಸಿದ್ದ ದುಡ್ಡಿನ ನೆನಪಾಯಿತು. ಅವನು ಒಳಗೆ ಹೋಗಿ ತನ್ನ ಚೀಲವನ್ನು ತಡಕಾಡಿ ಒಂದು ಸಾವಿರ ರೂಪಾಯಿಗಳನ್ನು ತಂದು ಹೆಂಡತಿಯ ಕೈಯಲ್ಲಿಟ್ಟ. ಅದನ್ನು ಕಂಡ ಸರೋಜಾಳಿಗೆ ಅಚ್ಚರಿಯೂ ಭಯವೂ ಒಟ್ಟೊಟ್ಟಿಗಾಗಿ ಅರೆ ಚಾಚಿದ ಕೈ ರಪ್ಪನೆ ಮುದುಡಿ ಹಿಂದೆ ಸರಿಯಿತು. ಜೈಲಿನಲ್ಲಿದ್ದ ಇವರಲ್ಲಿ ಇಷ್ಟೊಂದು ಹಣ ಎಲ್ಲಿಂದ ಬಂತು? ಎಂಬ ಅನುಮಾನ ಅವಳದ್ದು. ಅದು ಲಕ್ಷ್ಮಣನಿಗೆ ಅರ್ಥವಾಯಿತು. ‘ಛೇ! ತಗೋ ಮಾರಾಯ್ತೀ! ಹತ್ತು ವರ್ಷ ಜೈಲಿನಲ್ಲಿ ದುಡಿದದ್ದಕ್ಕೆ ಸರ್ಕಾರ ಕೊಟ್ಟ ಸಂಬಳವಿದು!’ ಎಂದ ನಗುತ್ತ.
‘ಓಹೋ, ಹೌದಾ…? ಛೇ! ನಾನೊಬ್ಬಳು, ಜೈಲು ಶಿಕ್ಷೆ ಎಂದರೆ ಕತ್ತಲೆ ಕೋಣೆಯಲ್ಲಿ ಕೂಡಿ ಹಾಕುತ್ತಾರೆ ಎಂದುಕೊoಡಿದ್ದೆನಲ್ಲ ಮಾರಾಯ್ರೇ!’ ಎಂದಳು ನಾಚುತ್ತ.
‘ಕತ್ತಲೆ ಕೋಣೆಯೇನೂ ಇರಲಿಲ್ಲ. ಆದರೆ ಜೀವನಪೂರ್ತಿ ನಾಯಿಯಂತೆ ದುಡಿಸಿಕೊಳ್ಳುತ್ತಾರೆ. ಕೊಡುವುದು ಮಾತ್ರ ಮೂರು ಕಾಸು. ಅದಕ್ಕೆ ಹೋಲಿಸಿದರೆ ಕತ್ತಲಕೋಣೆಯೇ ವಾಸಿ ಅಂತನ್ನಿಸುತ್ತದೆ!’ ಎಂದು ವ್ಯಂಗ್ಯ ನಗುವಿನೊಂದಿಗೆ ಹೇಳಿದ ಲಕ್ಷ್ಮಣ ಹೊರಟು ಹೋದ. ಮಧ್ಯಾಹ್ನದವರೆಗೆ ಗಂಗರಬೀಡಿನ ಪೇಟೆಯಿಡೀ ಸುತ್ತಾಡಿದವನು ಹೊಟ್ಟೆ ಹಸಿಯುತ್ತ ಮನೆಗೆ ಹಿಂದಿರುಗಿದ.

‘ಎಲ್ಲೆಲ್ಲ ತಿರುಗಾಡಿ ಬಂದಿರಿ…?’ ಸರೋಜ ಹುರುಪಿನಿಂದ ಕೇಳಿದಳು.
‘ಪೇಟೆ ನೋಡಿಕೊಂಡು ಬಂದೆ ಮಾರಾಯ್ತೀ. ಈ ಊರು, ನಮ್ಮ ಚೌಳುಕೇರಿಗಿಂತಲೂ ದೊಡ್ಡ ಪೇಟೆ ಅಲ್ಲವಾ. ಆದರೆ ಇಲ್ಲಿ ಕಿರಿಸ್ತಾನರೇ ಹೆಚ್ಚಾಗಿದ್ದಾರೆ!’ ಎಂದ ಅನ್ಯ ಭಾವದಿಂದ.
‘ಹ್ಞೂಂ, ಹೌದು. ಇಲ್ಲಿ ಅವರೇ ಜಾಸ್ತಿ ಇರುವುದು. ಆದರೆ ಅವರೆಲ್ಲ ತುಂಬಾ ಒಳ್ಳೆಯವರು ಮಾರಾಯ್ರೇ. ಬೇರೆ ಜಾತಿಯವರ ಮೇಲೆ ತುಂಬಾ ಗೌರವವಿದೆ ಅವರಿಗೆ. ಅದರಲ್ಲೂ ಬಡವರ ಮೇಲಂತೂ ಬಹಳ ಕನಿಕರ ತೋರಿಸುವ ಜನರವರು. ಯಾರ ಮೇಲೂ ಭೇದಭಾವ ಎಣಿಸದೆ ಮರ್ಯಾದೆಯಿಂದ ನಡೆಸಿಕೊಳ್ಳುವ ಉದಾರ ಗುಣದವರು. ತಮ್ಮ ಯಾವುದೇ ಹಬ್ಬ ಹರಿದಿನಗಳಿರಲಿ, ಇತರ ಜಾತಿಯವರನ್ನು ಕರೆದು ಊಟೋಪಚಾರ ನೀಡಿ ಬಟ್ಟೆಬರೆ, ಸಿಹಿತಿಂಡಿಗಳನ್ನು ಹಂಚುತ್ತ ಸತ್ಕರಿಸುತ್ತಾರೆ. ಬಡವರ ಮತ್ತು ಕಷ್ಟದಲ್ಲಿರುವವರ ಮನೆಗಳಿಗೆ ತಾವೇ ಹೋಗಿ ತಿಂಡಿತಿನಸುಗಳನ್ನು ಕೊಡುತ್ತ ಖುಷಿಪಡುವ ಮನಸ್ಸು ಅವರದ್ದು!’ ಎಂದು ಸರೋಜ ಕಿರಿಸ್ತಾನರನ್ನು ಮನಸಾರೆ ಹೊಗಳಿದಳು. ಅಷ್ಟರಲ್ಲಿ ಅವಳಿಗೇನೋ ನೆನಪಾಯಿತು. ‘ಹ್ಞಾಂ, ಅಂದಹಾಗೆ ಧಣಿಯವರು ನಿಮ್ಮನ್ನು ನೋಡಬೇಕೆಂದಿದ್ದರು. ಹೋಗಿ ಬರುವನಾ…?’ ಎಂದಳು ಗಡಿಬಿಡಿಯಿಂದ. ಅವಳಿಗೆ, ಗಂಡ ನಾಳೆಯಿಂದಲೇ ತೋಟದ ಕೆಲಸಕ್ಕೆ ಸೇರಿಕೊಂಡರೆ ಒಳ್ಳೆಯದು. ಇಲ್ಲದಿದ್ದರೆ ಮನೆಯಲ್ಲಿ ಕುಳಿತು ಸೋಮಾರಿಯಾಗಿ ಇಲ್ಲಸಲ್ಲದ ದುಶ್ಚಟಗಳು ಮರಳಿ ಅಂಟಿಕೊoಡರೆ ಕಷ್ಟ! ಎಂದೆನ್ನಿಸಲು ಶುರುವಾಗಿತ್ತು. ಅದಕ್ಕೆ ಅವನೂ, ‘ಹ್ಞೂಂ ನಡೆ ನಡೆ. ಹೋಗುವ…’ ಎಂದ ಹುರುಪಿನಿಂದ. ಇಬ್ಬರೂ ಶೆಟ್ಟರ ಬಂಗಲೆಯತ್ತ ನಡೆದರು.
ಶ್ರೀಧರ ಶೆಟ್ಟರ ಅರಮನೆಯಂಥ ಬಂಗಲೆಯನ್ನು ಕಂಡು ಲಕ್ಷ್ಮಣ ನಿಬ್ಬೆರಗಾದ. ಓ ದೇವರೇ! ಈ ಸೌದದೆದುರು ಉಸ್ಮಾನ್ ಸಾಯಿಬನ ಬಂಗಲೆ ಏನೂ ಇಲ್ಲ! ಶೆಟ್ರು ಭಾರೀ ದೊಡ್ಡ ಕುಳವೇ ಇರಬೇಕು ಎಂದುಕೊಳ್ಳುತ್ತ ಹೆಂಡತಿಯೊoದಿಗೆ ಪಡಸಾಲೆಯನ್ನು ಹೊಕ್ಕ. ಶೆಟ್ಟರ ಮನೆಯಾಳು ಕಮಲಿ ನೆಲ ಒರೆಸುತ್ತಿದ್ದವಳು ಇವರನ್ನು ಕಂಡು ಒಳಗೆ ಹೋಗಿ ಶೆಟ್ಟರಿಗೆ ಸುದ್ದಿ ಮುಟ್ಟಿಸಿ ಬಂದವಳು, ‘ಧಣಿಯವರು ರ‍್ತಾರೆ. ಕುಳಿತುಕೊಳ್ಳಿ’ ಎನ್ನುತ್ತ ಮರಳಿ ಅಮೃತಶಿಲೆಯ ನೆಲವನ್ನು ತಿಕ್ಕಿ ತಿಕ್ಕಿ ಒರೆಸತೊಡಗಿದಳು. ಕಾಲು ಗಂಟೆಯಲ್ಲಿ ಶೆಟ್ಟರ ಆಗಮನವಾಯಿತು. ಇಬ್ಬರೂ ಎದ್ದು ನಿಂತು ಅವರಿಗೆ ಕೈಮುಗಿದರು.
‘ಧಣಿಯವರೇ ಇವರು ನನ್ನ ಗಂಡ. ನಿನ್ನೆ ಬಂದರು…!’ ಎಂದು ಸರೋಜ ಸಂಕೋಚದಿoದ ಪರಿಚಯಿಸುವಾಗ ಅವಳಿಂದ ಕೀಳರಿಮೆಯ ಎಳೆಯೊಂದು ಮಿಂಚಿ ಮರೆಯಾಯಿತು. ಆದರೆ ಶೆಟ್ಟರು ಲಕ್ಷ್ಮಣನ ಸ್ವಾಮಿನಿಷ್ಠೆಯನ್ನೂ, ಅದಕ್ಕೆ ಸಂಬoಧಿಸಿದ ಅವನ ಘನಕಾರ್ಯಗಳೆಲ್ಲವನ್ನೂ ಬಲ್ಲಮೂಲಗಳಿಂದ ತಿಳಿದುಕೊಂಡಾಗಿತ್ತು. ಆದ್ದರಿಂದ, ‘ಹೌದೌದು. ನಿನ್ನ ಗಂಡನ ಕಾರೋಬಾರಿನ ಬಗ್ಗೆ ನಮಗೂ ಸ್ವಲ್ಪ ಸ್ವಲ್ಪ ತಿಳಿದಿದೆ ಬಿಡು. ಆ ಉಸ್ಮಾನ್ ಸಾಹೇಬನಿಗಾಗಿ ಜೈಲಿಗೆ ಹೋಗಿ ಬಂದವನಲ್ಲವಾ ಇವನು…?’ ಎಂದು ತಮ್ಮ ಗಾಂಭೀರ್ಯಕ್ಕೆ ತುಸು ವ್ಯಂಗ್ಯ ಬೆರೆಸಿಯೇ ಅಂದರು. ಆ ಮಾತಿನಿಂದ ಲಕ್ಷ್ಮಣನಿಗೆ ಚುಚ್ಚಿತು. ಅವನು ತಟ್ಟನೆ, ‘ಹೌದು ಧಣಿ ನಾನೊಬ್ಬ ಮುಠ್ಠಾಳ! ಅಂಥ ಮನುಷ್ಯನಿಗಾಗಿ ಪ್ರಾಣ ಬೇಕಾದರೂ ಕೊಡುತ್ತೇನೆಂಬ ಹುಚ್ಚಿಗೆ ಬಿದ್ದು ಹತ್ತು ವರ್ಷ ಜೈಲಿನಲ್ಲಿ ಕೊಳೆತುಬಿಟ್ಟೆ. ಅವನನ್ನು ನಂಬಿದ್ದಕ್ಕೆ ತಕ್ಕ ಪ್ರತಿಫಲವೇ ಸಿಕ್ಕಿತು. ಇನ್ನು ಯಾವತ್ತೂ ಯಾರ ವಿಷಯದಲ್ಲೇ ಆಗಲಿ, ಯಾವ ಪೆಟ್ಟುಪುಡೆಗಳ ಸಹವಾಸಕ್ಕೂ ನಾನು ಹೋಗುವುದಿಲ್ಲ. ನೀವೇನಾದರೂ ಕೆಲಸಕೊಟ್ಟರೆ ಇಲ್ಲೇ ನಿರುಮ್ಮಳವಾಗಿ ದುಡಿದುಕೊಂಡು ಇದ್ದು ಬಿಡುತ್ತೇನೆ ಧಣೀ!’ ಎಂದು ನಮ್ರವಾಗಿ ನುಡಿದ.
ಆದರೆ ಲಕ್ಷ್ಮಣನಂಥ ಪುಂಡುಪೋಕರಿಗಳನ್ನು ಶೆಟ್ಟರು ಅದೆಷ್ಟು ಕಂಡಿದ್ದರೋ? ಹಾಗಾಗಿ ಅವನ ಅವಿವೇಕದ ಸಾಹಸಗಾಥೆಯು ಅವರಿಗೆ ದೊಡ್ಡ ಸಂಗತಿಯಾಗಿ ಕಾಣಿಸಲಿಲ್ಲ. ಇವನು ಹೇಗಿದ್ದರೂ ತಮಗೇನಾಗಬೇಕಿದೆ? ತೋಟದ ಕೆಲಸಕ್ಕೆ ಮೈಮುರಿದು ದುಡಿಯುವ ಆಳೊಂದು ಸಿಕ್ಕಿದರೆ ಸಾಕು. ಚೆನ್ನಾಗಿ ಕೆಲಸ ಮಾಡಿಕೊಂಡಿದ್ದರೆ ಇರಲಿ. ಅದರೊಂದಿಗೆ ಜೈಲಿಗೆ ಹೋಗಿ ಬಂದವನೊಬ್ಬ ತಮ್ಮ ತೋಟದಲ್ಲಿ ಕೂಲಿಗಿದ್ದಾನೆಂದರೆ ಆಸುಪಾಸಿನ ಸೊಕ್ಕಿನ ಪರ್ಬು ಮಕ್ಕಳು ತೋಟ ಲೂಟಿ ಮಾಡುವ ಕಾಟ ಸ್ವಲ್ಪವಾದರೂ ತಪ್ಪುತ್ತದೇನೋ ನೋಡುವ! ಎಂಬ ಹಂಚಿಕೆಯನ್ನೂ ಹಾಕುತ್ತ ತಮ್ಮ ಬೆಳ್ಳಗಿನ ಉರಿ ಮೀಸೆಯಡಿಯಲ್ಲಿ ಗುಪ್ತವಾಗಿ ನಕ್ಕವರು, ‘ಆಯ್ತು ಮಾರಾಯ ಕೆಲಸ ಕೊಡುವ. ಆದರೆ ಮೈಗಳ್ಳತನ ಮಾಡದೆ ನಿಯತ್ತಿನಿಂದ ದುಡಿಯುತ್ತಿಯಾದರೆ ನಿನಗಿಲ್ಲಿ ಸಾಯುವತನಕವೂ ಕೆಲಸವುಂಟು ನೋಡು. ಜೊತೆಗೆ ಯಾವುದೇ ದುಶ್ಚಟಕ್ಕೂ ಅಂಟಿಕೊಳ್ಳಬೇಡ. ಯಾಕೆಂದರೆ ಇಲ್ಲಿ ಸುತ್ತಮುತ್ತ ಮೂರು ಹೊತ್ತು ಕುಡಿದು ಲೇ…ಲೇ…! ಹಾಕುವಂಥವುಗಳೇ ಇರುವುದು. ಅವುಗಳ ಸಂಗ ಮಾಡದೆ ನಿನ್ನ ಪಾಡಿಗೆ ನೀನಿದ್ದೆಯೆಂದರೆ ಎಲ್ಲರಿಗೂ ಒಳ್ಳೆಯದು. ನಿನಗೂ ಎರಡು ಹೆಣ್ಣು ಮಕ್ಕಳಿದ್ದಾವೆಯಲ್ಲ ಮಾರಾಯಾ, ಅವರ ಭವಿಷ್ಯದ ಬಗ್ಗೆಯೂ ಸ್ವಲ್ಪ ಯೋಚಿಸಬೇಕು ನೀನು!’ ಎಂದು ನಗುತ್ತ ಹೇಳಿ ಬಡದಂಪತಿಯ ದೃಷ್ಟಿಯಲ್ಲಿ ಇನ್ನಷ್ಟು ಒಳ್ಳೆಯವರೆನಿಸಿಕೊಂಡರು. ತಾನು ಕೇಳಿದಾಕ್ಷಣ ಶೆಟ್ಟರು ನಗುನಗುತ್ತ ಕೆಲಸ ಕೊಟ್ಟಿದ್ದನ್ನು ಕಂಡ ಲಕ್ಷ್ಮಣನಿಗೆ ನೆಮ್ಮದಿವಾಯಿತು. ‘ಆಯ್ತು ಧಣಿ, ನೀವು ಹೇಳಿದಂತೆಯೇ ಇರುತ್ತೇನೆ. ನಾಳೆಯಿಂದ ಕೆಲಸಕ್ಕೆ ಬರುತ್ತೇನೆ!’ ಎಂದು ಕೈಮುಗಿದು ಹೆಂಡತಿಯೊoದಿಗೆ ಗೆಲುವಿನಿಂದ ಹಿಂದಿರುಗಿದ.
‘ನಮ್ಮ ಧಣಿಯವರು ತುಂಬಾ ಒಳ್ಳೆಯವರು ಮಾರಾಯ್ರೇ. ಆ ಉಸ್ಮಾನ್ ಸಾಹೇಬನಂತೆ ಇವರಿಗೆ ಯಾವ ಕಳ್ಳ ವ್ಯಾಪಾರವೂ ಇಲ್ಲ. ನಿಯತ್ತಿನಲ್ಲಿರುವವರಿಗೆ ಇವರು ಎಂಥ ಕಷ್ಟಕಾಲದಲ್ಲೂ ಸಹಾಯ ಮಾಡ್ತಾರೆ. ಮುಂದೆ ನಮ್ಮ ಮಕ್ಕಳ ಮದುವೆ ಮಸಿರಿಗೂ ‘ಆಗುತ್ತೇನೆ!’ ಎಂದು ಮನಸಾರೆ ಹೇಳಿದ್ದಾರೆ. ಆದ್ದರಿಂದ ಅವರೊಡನೆ ಸ್ವಲ್ಪ ಚೆನ್ನಾಗಿ ನಡೆದುಕೊಳ್ಳಿ ಮಾರಾಯ್ರೇ!’ ಎಂದು ಸರೋಜ ಶೆಟ್ಟರ ಮೇಲಿನ ಅಭಿಮಾನದಿಂದ ಅಂದಳು. ‘ಆಯ್ತು ಆಯ್ತು ಮಾರಾಯ್ತೀ, ನಿನ್ನಿಷ್ಟದಂತೆಯೇ ನಡೆದುಕೊಳ್ಳುತ್ತೇನೆ!’ ಎಂದವನಿಗೆ ಮತ್ತೇನೋ ನೆನಪಾಗಿ, ‘ಅಲ್ಲಾ ಸರೂ, ಶಾರದಾಳನ್ನು ಶಾಲೆ ಯಾಕೆ ಬಿಡಿಸಿದ್ದು ನೀನು…?’ ಎಂದ ಬೇಸರದಿಂದ.
‘ಹೌದು ಮಾರಾಯ್ರೆ ಅವಳಿಗೂ ಕಲಿಸಬೇಕಿತ್ತು. ಆದರೆ ಐದನೇ ತರಗತಿಯ ನಂತರ ಎಷ್ಟು ಹೇಳಿದರೂ ಅವಳು ಶಾಲೆಗೆ ಹೋಗಲು ಕೇಳಲೇ ಇಲ್ಲ. ಅದೇ ಸಮಯಕ್ಕೆ ನಾನೂ ಕಾಯಿಲೆ ಬಿದ್ದೆ. ಹಾಗೆ ಹದಿನೈದು ದಿನ ರಜೆ ಹಾಕಿ ನನ್ನನ್ನೂ, ಪಮ್ಮಿಯನ್ನೂ ನೋಡಿಕೊಂಡವಳು ಆಮೇಲೆ ಶಾಲೆಯಾಚೆ ಮುಖ ಮಾಡಲಿಲ್ಲ ನೋಡಿ. ಅದರ ನಡುವೆ ಇಲ್ಲೇ ಸಮೀಪದ ಲಿಲ್ಲಿಬಾಯಿಯ ಮನೆಗೂ ಹೋಗಿ ಬರುತ್ತಿದ್ದಳು. ಅವರಿಗೂ ಇವಳೆಂದರೆ ಬಹಳ ಇಷ್ಟ. ಅಲ್ಲೇ ಕೆಲಸಕ್ಕೂ ಸೇರಿದಳು. ಹಾಗಾಗಿ ನಾನೂ ಹೆಚ್ಚು ಒತ್ತಾಯ ಮಾಡಲು ಹೋಗಲಿಲ್ಲ. ಲಿಲ್ಲಿಬಾಯಿಯ ಮಗಳು ಮಾರ್ಗರೆಟ್ ಮದುವೆಯಾಗಿ ಗಂಡನೊoದಿಗೆ ಬೊಂಬೈಯಲ್ಲಿದ್ದಾಳೆ. ಅವಳಿಗೂ ಶಾರದಾ ಎಂದರೆ ಜೀವ ಮಾರಾಯ್ರೇ! ವರ್ಷಕ್ಕೆರಡು ಸಲ ಊರಿಗೆ ಬರುವವಳು ಆಗಾಗ ನನ್ನ ಹತ್ತಿರ ಬಂದು, ಇವಳನ್ನು ಬೊಂಬೈಗೆ ಕರೆದುಕೊಂಡು ಹೋಗುತ್ತೇನೆ ಅಂತ ಒಂದೇ ಸಮನೆ ಗೋಗರೆಯುತ್ತಾಳೆ. ಅಷ್ಟಲ್ಲದೆ ಇವಳಿಗೂ ಮೂಗಿನ ಮಟ್ಟ ಆಸೆಯಿದೆ. ಆದರೂ ನೀವು ಬರುವವರೆಗೆ ನಾನೇ ನಿಲ್ಲಿಸಿಕೊಂಡಿದ್ದೇನೆ. ಅವರು ಮರ್ಯಾದಸ್ಥ ಜನ ಮಾರಾಯ್ರೇ. ಅವರೊಂದಿಗೆ ಕಳುಹಿಸಿಕೊಟ್ಟರೆ ಇವಳ ಮದುವೆಯನ್ನೂ ಅವರೇ ಮಾಡಿಸುತ್ತಾರಂತೆ. ನಮ್ಮ ಮಗಳಿಗೆ ಬೊಂಬೈಯಲ್ಲೇ ಒಂದೊಳ್ಳೆಯ ಜೀವನ ಸಿಕ್ಕಿದರೆ ನಮಗೂ ಸಂತೋಷವಲ್ಲವಾ, ಏನಂತೀರಿ…?’ ಎಂದು ಸರೋಜ ಉತ್ಸಾಹದಿಂದ ಹೇಳಿದಳು. ಹೆಂಡತಿಯ ನಿರ್ಧಾರ ಲಕ್ಷ್ಮಣನಿಗೂ ಸರಿಯೆನಿಸಿತು. ‘ಆಗಲಿ ಸರೂ, ನಿನಗೆ ಹೇಗೆ ಅನಿಸುತ್ತದೋ ಹಾಗೆ ಮಾಡು. ಒಟ್ಟಾರೆ ನಾವು ಕಂಡ ಹಾಳು ಬದುಕು ನಮ್ಮ ಮಕ್ಕಳಿಗೆ ಸಿಗುವುದು ಬೇಡ!’ ಎಂದಾತ ನೋವಿನಿಂದ ಅಂದಾಗ ಸರೋಜಳಿಗೆ ನೆಮ್ಮದಿಯಾಯಿತು.
ಮರುದಿನದಿಂದ ಲಕ್ಷ್ಮಣನ ಕಾಯಕ ಆರಂಭವಾಯಿತು. ಸರೋಜ ಇಷ್ಟು ಕಾಲ ತಾನು ಪರದಾಡಿಕೊಂಡು ಬಂದ ಬದುಕಿಗೆ ಮರಳಿ ನೆಲೆಯೊಂದು ದೊರಕಿದ ಹಾಗಾಯಿತು. ಹಾಗಾಗಿ ಅವಳು ಇನ್ನಾದರೂ ತನ್ನ ಗಂಡ, ಮಕ್ಕಳೊಂದಿಗೆ ತಾನು ಸಂತೋಷದಿoದ ಬಾಳಬೇಕೆಂದುಕೊoಡಳು. ಅತ್ತ ಅಪ್ಪ, ಅಮ್ಮ ತನ್ನನ್ನು ಮಾರ್ಗರೆಟ್ಟಳೊಂದಿಗೆ ಬೊಂಬಾಯಿಗೆ ಕಳುಹಿಸಲು ಒಪ್ಪಿದ್ದು ಶಾರದಳಿಗೂ ಮೇರೆ ಮೀರಿದ ಖುಷಿಯಾಗಿತ್ತು. ಅವಳು ಕೂಡಲೇ ಹೋಗಿ ಲಿಲ್ಲಿಬಾಯಿಗೆ ಅದನ್ನು ತಿಳಿಸಿದಳು. ಅವರೂ ಸಂತಸಪಟ್ಟವರು ಮಾರ್ಗರೆಟಾಳಿಗೆ ಪತ್ರ ಬರೆದರು. ಅವಳಿಂದ, ತಾನು ಮುಂದಿನ ವಾರವೇ ಊರಿಗೆ ಬರುತ್ತಿದ್ದೇನೆಂದು ಪ್ರತ್ತುö್ಯತ್ತರ ಬಂದ ನಂತರ ಶಾರದಾ ಕೆಲವು ರಾತ್ರಿ ಸರಿಯಾಗಿ ನಿದ್ದೆಯನ್ನೂ ಮಾಡದೆ ಅವಳ ದಾರಿ ಕಾಯತೊಡಗಿದಳು. ಮಾರ್ಗರೆಟ್ ಮತ್ತು ಲಿಲ್ಲಿಬಾಯಿಯವರು ರಂಗುರoಗಾಗಿ ವರ್ಣಿಸುವ ಬೊಂಬೈ ಎಂಬ ಮಾಯಾನಗರಿಯನ್ನು ತಾನೂ ಯಾವಾಗೊಮ್ಮೆ ನೋಡುತ್ತೇನೋ? ಎಂದು ತವಕಿಸುತ್ತಿದ್ದವಳು, ಅಲ್ಲಿ ದುಡಿಯಲಾರಂಭಿಸಿದ ಕೂಡಲೇ ಅಪ್ಪ, ಅಮ್ಮನನ್ನೂ ಪುಟ್ಟ ತಂಗಿಯನ್ನೂ ಚೆನ್ನಾಗಿ ನೋಡಿಕೊಳ್ಳಬೇಕು! ಎಂದೂ ಭಾವೋದ್ವೇಗದಿಂದ ಯೋಚಿಸುತ್ತ ಕಾಲ ಕಳೆಯುತ್ತಿದ್ದಳು. ಕೊನೆಗೂ ಅವಳ ಆ ಬಹು ನಿರೀಕ್ಷಿತ ದಿನವೊಂದು ಬಂದೇಬಿಟ್ಟಿತು.
ಆವತ್ತು ಶನಿವಾರ. ಬೆಳಿಗ್ಗೆ ಮಾರ್ಗರೆಟ್ ಊರಿಗೆ ಬಂದಳು. ಮರುದಿನ ತನ್ನ ಪುಟ್ಟ ಮಗುವಿನೊಂದಿಗೆ ಸರೋಜಾಳ ಮನೆಗೂ ಆಗಮಿಸಿದಳು. ತಾನು ತಂದಿದ್ದ ತಿಂಡಿಯ ಪೊಟ್ಟಣವನ್ನೂ, ವಿಶೇಷ ಸುವಾಸನೆಯ ಕೆಲವು ಸಾಬೂನುಗಳನ್ನೂ ಅವರಿಗೆ ಕೊಟ್ಟು ಸ್ವಲ್ಪಹೊತ್ತು ಮಾತುಕತೆಯಾಡಿದ ನಂತರ ಶಾರದಾಳನ್ನು ಕರೆದುಕೊಂಡು ಹೋಗಲು ಅವರಿಂದ ಒಪ್ಪಿಗೆಯನ್ನು ಪಡೆದಳು. ಮುನ್ನೂರು ರೂಪಾಯಿಯನ್ನು ಮುಂಗಡ ಸಂಬಳವೆoದು ಸರೋಜಾಳ ಕೈಗೆ ಒತ್ತಾಯದಿಂದ ತುರುಕಿಸಿದಳು. ಆದರೆ ಆಕ್ಷಣ ಸರೋಜಾಳಿಗೆ ತನ್ನ ಮಗಳನ್ನು ಯಾರಿಗೋ ಮಾರಿಬಿಟ್ಟಂತೆನಿಸಿ ಕರುಳು ಹಿಂಡಿತು. ಸ್ವಲ್ಪಹೊತ್ತು ಮೌನವಾಗಿದ್ದವಳು ಬಳಿಕ ದಢಕ್ಕನ್ನೆದ್ದು ಒಳಗೆ ಹೋಗಿ ಗಳಗಳನೇ ಅತ್ತಳು. ಪ್ರಮೀಳಾಳಿಗೂ ಅಕ್ಕನ ಅಗಲುವಿಕೆ ದುಃಖವನ್ನು ನೀಡಿತು. ಅತ್ತ ಲಕ್ಷ್ಮಣನೂ ಒಳಗೊಳಗೆ ನರಳುತ್ತಿದ್ದ. ಆದರೆ ಅದನ್ನು ತೋರಿಸಿಕೊಳ್ಳದೆ ತಾಯಿ ಮತ್ತು ಮಕ್ಕಳನ್ನು ಸಂತೈಸುವುದರಲ್ಲಿತೊಡಗಿದ. ಹೊರಡುವ ಹೊತ್ತಲ್ಲಿ ಶಾರದಾಳ ಕಣ್ಣಾಲಿಗಳು ತುಂಬಿ ಬಂದವು. ಆದರೆ ತಾನು ಹೊರಟಿರುವುದು ತನ್ನ ಕುಟುಂಬದ ಒಳ್ಳೆಯದಕ್ಕೇ ಅಲ್ಲವಾ…? ಎಂದು ಯೋಚಿಸಿ ಸಮಾಧಾನಗೊಂಡಳು. ಆದರೆ ಅಮ್ಮನ ಅಳುವನ್ನು ಕಂಡು ಮತ್ತೆ ಅಧೀರಳಾಗಿ, ‘ಅಯ್ಯೋ…ಯಾಕಮ್ಮಾ ಅಳುತ್ತಿ…? ಮಾರ್ಗಿಯಕ್ಕನೊಂದಿಗೆ ನಾನೂ ಆರು ತಿಂಗಳಿಗೊಮ್ಮೆ ಊರಿಗೆ ಬರುತ್ತೇನಲ್ಲಾ…!’ ಎಂದು ಸಂತೈಸಿದಳು. ಆಗ ಸರೋಜ ಸ್ವಲ್ಪ ಸ್ಥಿಮಿತಕ್ಕೆ ಬಂದಳು. ಬಳಿಕ ಶಾರದಾ ಅಪ್ಪ ಅಮ್ಮನ ಪಾದ ಮುಟ್ಟಿ ನಮಸ್ಕರಿಸಿ ಹೊರಟಳು. ಮಗಳು ತಮ್ಮತ್ತ ಕೈಬೀಸುತ್ತ ಹೋಗುತ್ತಿರುವುದನ್ನು ಕಣ್ತುಂಬಿಕೊoಡು ನೋಡುತ್ತಿದ್ದ ಲಕ್ಷ್ಮಣನು ಅವಳು ಕಣ್ಮರೆಯಾಗುತ್ತಲೇ ಉದಾಸೀನಗೊಂಡ! ಮುಂದೇನೂ ತೋಚದೆ ಒಳಗೆ ನಡೆದು ಚಾಪೆ ಹಾಸಿ ಮದುಡಿ ಮಲಗಿಬಿಟ್ಟ. ಸರೋಜ ಮತ್ತು ಪ್ರಮೀಳಾಳೂ ಒಂದಷ್ಟು ಹೊತ್ತು ಕಣ್ಣೀರಿಡುತ್ತ ಕುಳಿತರು.
(ಮುಂದುವರೆಯುವುದು)