April 2, 2025
ಧಾರಾವಾಹಿ

ವಿವಶ ..

ಧಾರವಾಹಿ 38


ಪ್ರೇಮ, ಮೇರಿಯ ಮನೆಗೆ ನುಗ್ಗಿ ಅವಳನ್ನೂ ತನ್ನ ಗಂಡನನ್ನೂ ಹಣ್ಣುಗಾಯಿ ಮಾಡಿ ಬಂದ ಮರುದಿನ ಅವರಿಬ್ಬರಲ್ಲೂ ಚಾಪೆಯನ್ನು ಬಿಟ್ಟು ಏಳುವ ತ್ರಾಣವಿರಲಿಲ್ಲ. ಮೇರಿಗೆ ಮೈಕೈ ನೋವಿನಿಂದ ಜ್ವರವೇ ಬಂದುಬಿಟ್ಟಿತ್ತು. ತೋಮನ ಕೈ ಕಾಲು ಗಂಟುಗಳು ಊದಿಕೊಂಡು ಸೊಂಟವೇ ಬಿದ್ದು ಹೋದಂತಾಗಿದ್ದ. ‘ಊರಿಗೆ ಬೆಂಕಿ ಬಿದ್ದರೆ ಮನೆಯಲ್ಲಿ ಕೂರಬಹುದು. ಮನೆಗೇ ಬೆಂಕಿ ಬಿದ್ದರೆ…?’ ಎಂಬoತಾಗಿತ್ತು ಅವನ ಅವಸ್ಥೆ. ಮನೆಗೆ ಹೋಗಿ ಮಲಗಿಕೊಂಡರೆ ಹೇಗೆ? ಎಂದೊಮ್ಮೆ ಯೋಚಿಸಿದ. ಆದರೆ ಯಾವ ಮುಖವಿಟ್ಟುಕೊಂಡು ಅವಳೆದುರಿಗೆ ಹೋಗಿ ನಿಲ್ಲುವುದು? ಶೆಟ್ಟರು ಶೆಡ್ಡನ್ನೇನೋ ತನ್ನ ಹೆಸರಿಗೆ ಕೊಟ್ಟಿರಬಹುದು. ಆದರೆ ಅದೀಗ ಆ ರಾಕ್ಷಸಿಯ ಕೈಯಲ್ಲಿರುವಾಗ ಅವಳು ಮೆಟ್ಟಿಲು ಹತ್ತಲಿಕ್ಕೂ ಬಿಡಲಿಕ್ಕಿಲ್ಲ! ಎಂದುಕೊoಡವನು ಆ ಯೋಚನೆಯನ್ನು ಕೈಬಿಟ್ಟು ಮೇರಿಯ ಮನೆಯಲ್ಲೇ ಉಳಿದ. ಆದ್ದರಿಂದ ಡೆಲ್ಫಿನನೇ ಅಕ್ಕನನ್ನೂ, ತೋಮನನ್ನೂ ಆರೈಕೆ ಮಾಡತೊಡಗಿದ. ಇಬ್ಬರಿಗೂ ನೋವಿನೆಣ್ಣೆ ಸವರಿ ಮಸಾಜು ಮಾಡಿದ. ಗಂಜಿ ಬೇಯಿಸಿ ಉಪ್ಪಿನಕಾಯಿಯೊಂದಿಗೆ ಉಣ್ಣಲು ಬಡಿಸಿದ. ಆಗಾಗ ಬಿಸಿಬಿಸಿ ಚಹಾ ಮಾಡಿಕೊಟ್ಟ. ಮೈಕೈ ನೋವು ಬೇಗ ವಾಸಿಯಾಗಲೆಂದು ಇಬ್ಬರಿಗೂ ಫಾರಿನ್ ರಮ್ಮು ಕುಡಿಸುತ್ತ ಮುತುವರ್ಜಿಯಿಂದ ಶುಶ್ರೂಷೆ ಮಾಡಿದ. ಹಾಗಾಗಿ ಮೇರಿ ಎರಡು, ಮೂರು ದಿನದಲ್ಲಿ ಚೇತರಿಸಿಕೊಂಡಳು. ಆದರೆ ಪ್ರೇಮಾಳಿಂದ ಹೀನಾಯವಾಗಿ ಅವಮಾನಿತಳಾಗಿದ್ದ ಅವಳಲ್ಲಿ ಸೇಡಿನ ಜ್ವಾಲೆ ಉರಿಯುತ್ತಿತ್ತು.


ಇಲ್ಲಿಯ ತನಕ ಯಾವ ಸತ್ಯವು ಯಾರಿಗೆ ತಿಳಿಯಬಾರದು ಎಂದುಕೊoಡಿದ್ದೆನೋ ಅದು ಅವಳಿಗೇ ತಿಳಿದ ಮೇಲೆ ಇನ್ನೆಂಥ ಭಯ ನಾಚಿಕೆ ತನಗೆ? ಶೀಲ, ಮರ್ಯಾದೆಯನ್ನೆಲ್ಲ ಆವತ್ತು ಮುಂಬೈಯಲ್ಲಿ ಗುಜರಾತಿ ಶೇಟ್‌ನೊಂದಿಗೆ ಮೂರುಕಾಸಿಗೆ ಮಲಗುವಾಗಲೇ ಕಿತ್ತೆಸೆದಾಗಿದೆ. ಅಷ್ಟಕ್ಕೂ ಅವಳೇನು ಸಂಭಾವಿತಳಾ? ಗಂಡನನ್ನುö ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರೆ ಅವನೇಕೆ ನನ್ನ ಹತ್ತಿರ ಬರುತ್ತಿದ್ದ! ಇನ್ನು ಏನಾದರಾಗಲಿ. ನನಗೆ ಬೇಡವಾದರೂ ಇವನನ್ನು ಅವಳಿಗೆ ಮಾತ್ರ ಬಿಟ್ಟುಕೊಡಲಾರೆ. ಅವಳು ಮೊನ್ನೆ ಬಂದು ಅಷ್ಟೊಂದು ದೊಡ್ಡ ರಂಪಾಟ ಮಾಡುವ ಬದಲು, ಮೇರಿಯಕ್ಕಾ ನಿಮಗೆ ಕೈಮುಗಿಯುತ್ತೇನೆ. ನನ್ನ ಗಂಡನನ್ನು ಬಿಟ್ಟುಕೊಡಿ!’ ಎಂದು ಒಂದು ಮಾತು ಅಂದಿದ್ದರೆ ಆ ಕ್ಷಣವೇ ಕಳುಹಿಸುತ್ತಿದ್ದೆನೇನೋ. ಆದರೆ ಅವಳು ಅಷ್ಟೊಂದು ಹಿಂಸೆ, ಅವಮಾನ ಮಾಡಿದ ಮೇಲೂ ಸುಮ್ಮನಿದ್ದರೆ ತನಗೇನು ಬೆಲೆ? ಎಂದು ರೋಷದಿಂದ ಯೋಚಿಸಿ ತೋಮನನ್ನು ಇನ್ನಷ್ಟು ಮೋಹದಿಂದ ವಶದಲ್ಲಿಟ್ಟುಕೊಳ್ಳಲು ಮನಸ್ಸು ಮಾಡಿದಳು.
ಮುಂದಿನ ದಿನಗಳಲ್ಲಿ ತೋಮನೂ ಚೇತರಿಸಿಕೊಂಡ. ಆದರೆ ಎದ್ದು ನಡೆದಾಡಲು ಸಾಧ್ಯವಾಗಲಿಲ್ಲ. ಆದ್ದರಿಂದ ಹೆಂಡತಿಯ ಮೇಲೆ ಆಕ್ರೋಶ ಭುಗಿಲೇಳುತ್ತಿತ್ತು. ಜೊತೆಗೆ ಒಂದು ಸಂಗತಿಯ ಬಗ್ಗೆಯೂ ಅವನಿಗೆ ವಿಸ್ಮಯ ಮೂಡುತ್ತಿತ್ತು. ಅಲ್ಲಾ, ನಾನು ಇಷ್ಟಪಟ್ಟು ಪ್ರೀತಿಸಿ ಕಟ್ಟಿಕೊಂಡ ಹೆಣ್ಣಾ ಇವಳು…? ಖಂಡಿತಾ ಅಲ್ಲ. ಆಗಿದ್ದರೆ ಆವತ್ತು ಕಣ್ಣಲ್ಲಿ ರಕ್ತವಿಲ್ಲದವಳಂತೆ ಆ ಬಗೆಯಲ್ಲಿ ಬಡಿಯುತ್ತಿದ್ದಳಾ! ತನ್ನಿಂದೇನೋ ಸಣ್ಣ ತಪ್ಪೊಂದು ನಡೆದಿರಬಹುದು. ತಾನೂ ಅದನ್ನು ಇಲ್ಲವೆನ್ನುವುದಿಲ್ಲ. ಆದರೆ ಅದಕ್ಕೆ ಕಾರಣ ಅವಳೇ ಅಲ್ಲವಾ! ಜೊತೆಯಾದ ಆರಂಭದಲ್ಲಿ ಎಷ್ಟೊಂದು ಆಸೆಯಿಂದ ನೋಡಿಕೊಂಡಳು. ಬರಬರುತ್ತ ಗಂಡನೆoದರೆ ಮರ್ಯಾದೆ ಇಲ್ಲದೆ, ನಾಯಿಗಿಂತ ಕಡೆಯಾಗಿ ನಡೆಸಿಕೊಂಡಳಲ್ಲಾ ಹೆಮ್ಮಾರಿ! ಹೊಸದರಲ್ಲಿ ತಾನು ಕೇಳದಿದ್ದರೂ ಹಂದಿ, ಕೋಳಿಮಾಂಸದ ಎಂಥೆoಥ ರುಚಿಕಟ್ಟಾದ ಅಡುಗೆಯನ್ನು ಮಾಡಿ ಬಡಿಸುತ್ತಿದ್ದಳು. ಒಂದು ಮಗುವಾದ ಮೇಲೆ ಎಲ್ಲವನ್ನೂ ಮರೆತು ನಾನ್ಯಾರೋ ಅವಳ್ಯಾರೋ ಅನ್ನುವಂತೆ ವರ್ತಿಸುತ್ತಿದ್ದುದು ನನಗೆಷ್ಟು ನೋವು ಕೊಡುತ್ತಿತ್ತು! ದುಡಿದು ಸುಸ್ತಾಗಿ ಹಸಿವಿನಿಂದ ಕಂಗೆಟ್ಟು ಮನೆಗೆ ಹೋಗಿ ಏನಾದರೂ ಬಿಸಿಬಿಸಿ ಉಣ್ಣಬೇಕು ಎಂದುಕೊoಡು ಧಾವಿಸಿ ಬರುತ್ತಿದ್ದ ತನಗೆ ಹೆಚ್ಚಿನ ದಿನಗಳಲ್ಲಿ ಬೆಳಗ್ಗಿನ ಸಪ್ಪೆ ಗಂಜಿಯೋ, ಹಿಂದಿನ ದಿನದ ತಂಗಳನ್ನವೋ ಒಣ ಮೀನಿನ ಪದಾರ್ಥದೊಂದಿಗೆ ಗತಿಯಾಗುತ್ತಿತ್ತು. ಅದು ಸಾಯಲಿ ಅತ್ಲಾಗೆ. ಈಚೀಚೆಗೆ ಅವಳೊಟ್ಟಿಗೆ ತಾನು ಮಲಗುವಾಗಲಾದರೂ ಸರಿಯಾಗಿ ಸಹಕರಿಸುತ್ತಿದ್ದಳಾ? ಅಲ್ಲೂ ಕೋಪ, ಸಿಡುಕು ತೋರಿಸಿ ಕೆದರಿದ ಆಸೆಗೆ ತಣ್ಣೀರೆರಚುತ್ತಿದ್ದಳು. ಹಿಂದೆಲ್ಲ ಹೊರಗಡೆ ಕುಡಿದು ಬರುತ್ತಿದ್ದವನು ಹೆಂಡತಿಯ ಮಾನ ಕಳೆಯಬಾರದೆಂದು ಮನೆಗೆ ತಂದು ಕುಡಿಯುತ್ತಿದ್ದೆನಲ್ಲ ಅದಾದರೂ ಅರ್ಥವಾಯಿತಾ ಆ ನಾಯಿಗೆ! ಇಂಥವಳಿoದ ತನಗೇನು ಸುಖ ಸಿಕ್ಕೀತು? ಮಣ್ಣೂ ಇಲ್ಲ! ಇಂಥ ಕಷ್ಟದ ಹೊತ್ತಲ್ಲೇ ಅಲ್ಲವಾ ಈ ಮೇರಿಯಂಥ ಚೆಂದುಳ್ಳಿ ಚೆಲುವೆಯು ನನಗೆ ಸಿಕ್ಕಿದ್ದು. ಹೆಂಡತಿ ಅನ್ನುವವಳು ತಾತ್ಸಾರದಿಂದ ನಡೆಸಿಕೊಂಡಿದ್ದರಿoದಲೇ ತನಗೂ ಮೇರಿಯೊಡನೆ ಬದುಕಲು ಮನಸ್ಸಾಗಿದ್ದು!
ಅಯ್ಯೋ ಜುಮಾದಿಯೇ…! ಆ ಬಿಕನಾಸಿ ತನ್ನ ಗಂಡ ಅಂತನೂ ನೋಡದೆ ನಾಯಿಗೆ ಹೊಡೆದಂತೆ ಹೊಡೆದು ಮೂಲೆಗೆ ಹಾಕಿಬಿಟ್ಟಳಲ್ಲ…! ಅವಳ ಅದೇ ಪೆಟ್ಟುಗಳೆಲ್ಲಾದರೂ ನೆತ್ತಿಗೋ ಇನ್ನೆಲ್ಲಿಗೋ ಬೀಳುತ್ತಿದ್ದರೆ ನನ್ನ ಗತಿಯೇನಾಗುತ್ತಿತ್ತು? ಥೂ! ದರಿದ್ರದವಳು! ಎಂದು ರೋಷದಿಂದ ಉಗಿದ. ಬಳಿಕ ಮತ್ತೆ ಯೋಚಿಸಿದ. ಅಲ್ಲಾ… ತಾನೊಂದು ಕಾಲದಲ್ಲಿ ಎಂಥೆoಥ ಅಹಂಕಾರದ ಗಂಡಸರನ್ನು ಸದೆ ಬಡಿದಿಲ್ಲ. ಅಂಥವನಿಗೆ ಒಂದು ಹೆಣ್ಣು ಹೆಂಗಸಿನಿoದ ಪೆಟ್ಟು ತಿನ್ನುವ ಅವಸ್ಥೆ ಬಂತೆoದರೆ? ಅದೂ ಇಷ್ಟಪಟ್ಟು ಕಟ್ಟಿಕೊಂಡವಳಿoದಲೇ…! ಎಂದುಕೊoಡದವನಿಗೆ ಸಿಟ್ಟು ಕೊತಕೊತನೇ ಕುದಿಯಿತು. ಹೇ…ರಂಡೇ, ನಿನ್ನನ್ನು ಸುಮ್ಮನೆ ಬಿಡಲಿಕ್ಕಿಲ್ಲವನಾ! ನಿನ್ನ ಕೈಕಾಲು ಕಡಿದು ಗಂಗರಬೀಡಿನ ಪೇಟೆಯಲ್ಲಿ ಭಿಕ್ಷೆಗೆ ಕೂರಿಸದಿದ್ದರೆ ನನ್ನ ಹೆಸರು ತೋಮನೇ ಅಲ್ಲ ಬಿಡು! ಏಳು ಕೆರೆಯ ನೀರು ಕುಡಿದು ಬಂದoಥ ಭೂಪ ನಾನು. ನನಗೇ ಸೊಂಟವೇಳದ ಹಾಗೆ ಬಡಿದೆಯಲ್ಲ ಅದು ನಿನ್ನ ಒಳ್ಳೆಯದಕ್ಕೆಂದುಕೊಳ್ಳಬೇಡ. ಒಮ್ಮೆ ಎದ್ದು ನಿಂತು ಓಡಾಡಿಕೊಳ್ಳುತ್ತೇನೆ. ಆಮೇಲೆ ಈ ಸಲದ ಸುಗ್ಗಿಯ ಮಾರಿಯನ್ನು ನಿನ್ನ ಹೆಸರಿನಲ್ಲೇ ಓಡಿಸದಿದ್ದರೆ ಮತ್ತೆ ಕೇÃಳು! ಎಂದೆಲ್ಲ ಹೆಂಡತಿಯನ್ನು ಬೈಯ್ಯುತ್ತ ಕಾಲ ಕಳೆಯುತ್ತಿದ್ದ. ಆದರೆ ಹೀಗಿದ್ದವನಲ್ಲಿ ಒಮ್ಮೆ ಇದ್ದಕ್ಕಿದ್ದ ಹಾಗೆ ಹೆಂಡತಿಯ ಮೇಲಿನ ಧೋರಣೆಯು ನಿಧಾನವಾಗಿ ಬದಲಾಗತೊಡಗಿತು. ಅವಳ ಮೇಲಿದ್ದ ಕ್ರೋಧವೂ ಅವ್ಯಕ್ತ ಭಯವಾಗಿ ಮಾರ್ಪಟ್ಟಿತು. ಹೀಗಿರುತ್ತಲೇ ಮೇರಿಯ ಆರೈಕೆಯಿಂದ ಎದ್ದು ಓಡಾಡಲಾರಂಭಿಸಿದ. ಅಂದೊoದು ಬೆಳಿಗ್ಗೆ ಮೇರಿಯ ಮನೆಯ ಹೊರ ಜಗುಲಿಯಲ್ಲಿ ಕುಳಿತು ಏನನ್ನೋ ಗಂಭೀರವಾಗಿ ಯೋಚಿಸುತ್ತಿದ್ದ. ಅದನ್ನು ಕಂಡ ಮೇರಿ ಬಂದು ಅವನ ಪಕ್ಕದಲ್ಲಿ ಕುಳಿತಳು. ಪ್ರೇಮಾಳ ಮೇಲೆ ಅವಳಲ್ಲೂ ಸೇಡು ಕುದಿಯುತ್ತಿತ್ತು. ಅದನ್ನು ತೀರಿಸಿಕೊಳ್ಳಲು ಇದೇ ಸುಸಂದರ್ಭವೆoದುಕೊoಡವಳು ಮೆಲ್ಲನೆ ಆ ವಿಷಯವೆತ್ತಿದಳು.
‘ಹೇ ತೋಮ, ಏನು ಯೋಚಿಸ್ತಿದ್ದೀಯಾ?’ ಎಂದಳು ಮೃದುವಾಗಿ.
‘ಯೋಚನೆ ಎಂಥದ್ದು ಮಾರಾಯ್ತೀ…ಎಲ್ಲ ಆ ಬಿಕನಾಸಿಯದ್ದೇ…!’ ಎಂದ ಅವನು ಅಸಹನೆಯಿಂದ.
ಮೇರಿಗೂ ಅಷ್ಟೇ ಬೇಕಿತ್ತು. ‘ಇಲ್ನೋಡು ತೋಮಾ, ಇವತ್ತಿನವರೆಗೆ ನನಗ್ಯಾರೂ ಹೊಡೆದು ಅವಮಾನಿಸಿದ್ದಿಲ್ಲ. ಅಂಥದ್ದರಲ್ಲಿ ಆ ಮೂರುಕಾಸಿನವಳು ನಿನ್ನ ಕಣ್ಣ ಮುಂದೆಯೇ ನನಗೆ ಚಪ್ಪಲಿಯಲ್ಲಿ ಹೊಡೆದಿದ್ದಾಳೆಂದರೆ ಅದನ್ನು ಸಹಿಸಿಕೊಳ್ಳಲು ನನ್ನಿಂದ ಸಾಧ್ಯವೇ ಇಲ್ಲ. ಈ ಮೇರಿ ನಿನಗೆ ಕೊನೆಯವರೆಗೆ ಬೇಕು ಎಂಬ ಆಸೆ ನಿನಗಿದ್ದರೆ ಇವತ್ತೇ ಹೋಗಿ ಅವಳ ಸೊಕ್ಕು ಮುರಿದು ಬಾ. ಇಲ್ಲದಿದ್ದರೆ ಇನ್ನು ಮುಂದೆ ಈ ಮನೆಯ ಹೊಸ್ತಿಲು ತುಳಿಯಬೇಡ! ಜೀವನದಲ್ಲಿ ಸಾಕಷ್ಟು ನೋವು ತಿಂದವಳು ನಾನು! ಇನ್ನೂ ಇನ್ನೂ ಅದು ನನ್ನಿಂದ ಸಾಧ್ಯವಿಲ್ಲ ತೋಮ!’ ಎಂದು ಅವನ ಉರಿವಾಗ್ನಿಗೆ ತುಪ್ಪ ಸುರಿವಂತೆ ಮಾತಾಡಿ ಅಳುತ್ತ ಒಳಗೆ ನಡೆದುಬಿಟ್ಟಳು.
ಮೇರಿಯ ಮಾತು ಕೇಳಿದ ತೋಮನ ನರನಾಡಿಗಳೆಲ್ಲ ರೋಷದಿಂದ ಬಿಗಿದುಕೊಂಡವು. ಹೌದು, ತಾನಿನ್ನು ಸುಮ್ಮನಿದ್ದರೆ ತನ್ನ ಗಂಡಸ್ತನಕ್ಕೇ ಅವಮಾನ! ಎಂದುಕೊoಡವನು, ಮಗಳು ಶಾಲೆಗೆ ಹೋಗುವವರೆಗೆ ಮೇರಿಯ ಮನೆಯಲ್ಲಿಯೇ ಚಡಪಡಿಸುತ್ತ ಸಮಯ ಕಳೆದವನು ಬಳಿಕ ಶೆಡ್ಡಿನತ್ತ ದಾಪುಗಾಲಿಕ್ಕಿದ. ಪ್ರೇಮ ಅನ್ನಕ್ಕೆ ನೀರಿಟ್ಟು ಅಕ್ಕಿ ಸುರಿಯುತ್ತಿದ್ದವಳು, ರುಮ್ಮನೇ ನುಗ್ಗಿದ ಗಂಡನನ್ನು ಕಂಡು ಬೆಚ್ಚಿಬಿದ್ದಳು. ಅಷ್ಟರಲ್ಲಿ ತೋಮ ರಪ್ಪನೆ ಅವಳ ರಟ್ಟೆಯನ್ನು ಹಿಡಿದವನು, ‘ಏನಾ ರಂಡೇ, ಎಷ್ಟನಾ ಅಹಂಕಾರ ನಿಂಗೆ…?’ ಎನ್ನುತ್ತ ಧರಧರನೆ ಅವಳನ್ನು ಹೊರಗೆಳೆದು ತಂದು ಅಂಗಳದಲ್ಲಿ ಕೆಡವಿ ಒದೆಯಲೇ ಮುಂದಾದ. ಆದರೆ ಅಷ್ಟರಲ್ಲಿ ಪ್ರೇಮಾಳೂ ಕೆರಳಿದ್ದಳು. ಅಲ್ಲದೇ ಈಗ ಅವಳಲ್ಲಿ ಗಂಡ ಎನ್ನುವ ಮಮಕಾರವಾಗಲಿ, ಗೌರವವಾಗಲೀ ಒಂದೂ ಉಳಿದಿರಲಿಲ್ಲ. ಆವತ್ತು ತೋಮನ ಗಂಟು ಜಾರಿಸಿದ ಅದೇ ಕರಿಮಾರು ಸೋಂಟೆಯು ಈಗಲೂ ಹೊಸ್ತಿಲ ಬಳಿಯ ಗೋಡೆಗೊರಗಿಕೊಂಡು ನಿಂತಿತ್ತು. ಪ್ರೇಮ ರುದ್ರಕಾಳಿಯಂತೆದ್ದು ರಪ್ಪನೆ ದೊಣ್ಣೆಯನ್ನು ಕೈಗೆತ್ತಿಕೊಂಡವಳು, ‘ನನಗೇ ತುಳಿಯುತ್ತಿಯೇನೋ…? ನಿನಗೆ ನಾನಷ್ಟೊಂದು ಸದರವಾಗಿಬಿಟ್ಟೆನಾ…?’ ಎಂದಬ್ಬರಿಸುತ್ತ ಸೆರಗನ್ನು ಸೊಂಟಕ್ಕೆ ಬಿಗಿದವಳು ಕದನಕ್ಕೆ ಸಿದ್ಧಳಾಗಿ ನಿಂತಳು. ಆದರೆ ಹೆಂಡತಿಯ ಉರಿವ ಕಣ್ಣುಗಳಲ್ಲಿ ತೋಮ ಆ ಕ್ಷಣ ಸಾವನ್ನೇ ಕಂಡoತೆ ಬೆಚ್ಚಿದವನು ಊಸರವಳ್ಳಿಯಂತೆ ತಟ್ಟನೆ ಬಣ್ಣ ಬದಲಿಸಿಬಿಟ್ಟ. ‘ಹೇ, ಹೋಗಾ ನಾಯೀ…! ಇನ್ನು ಮುಂದೆ ನಿನ್ನಲ್ಲೆಂಥದಾ ಮಾತು…?’ ಎಂದವನು ದಡಬಡನೆ ಒಳಗೆ ಹೊಕ್ಕು ಪ್ರೇಮಾಳ ಬಟ್ಟೆಬರೆಗಳನ್ನೆಲ್ಲ ಬಾಚಿ ತಂದು ಅಂಗಳವಿಡೀ ಚೆಲ್ಲಾಡುತ್ತ, ‘ಹ್ಞೂಂ, ತೊಲಗು ರಂಡೆ, ಈಗಲೇ ನಿನ್ನಪ್ಪನ ಮನೆಗೆ! ಇನ್ನು ನಿನಗಿಲ್ಲಿ ಒಂದು ಕ್ಷಣವೂ ಜಾಗವಿಲ್ಲ!’ ಎನ್ನುತ್ತ ಅವಳಿಂದ ಎರಡು ಮಾರು ದೂರ ನಿಂತುಕೊoಡು ಕೆಟ್ಟದಾಗಿ ಬೈಯ್ಯತೊಡಗಿದ.
‘ನಿನ್ನಂಥ ಮಾನಗೆಟ್ಟವನನ್ನು ನಂಬಿ ಬಂದ ಮೇಲೆ ನನಗೆ ಇನ್ನೆಲ್ಲಿಯ ಮನೆ ಮಠವಾ ದರ್ವೇಶೀ! ಇನ್ನೇನಿದ್ದರೂ ಇದೇ ನನ್ನ ಮನೆ. ಇಲ್ಲೇ ಸಾವು ಬದುಕು ಎಲ್ಲ. ನೀನೇ ಇಲ್ಲಿಂದ ತೊಲಗಬೇಕು. ಇನ್ನು ಮುಂದೆ ಯಾವತ್ತಾದರೂ ನನ್ನ ಕಣ್ಣಮುಂದೆ ಕಾಣಿಸಿದೆಯೆಂದರೆ ಬಡಿದು ಸಾಯಿಸಿಯೇಬಿಡುತ್ತೇನೆ ನಿನ್ನನ್ನು! ಆ ನಿನ್ನ ಸೂಳೆ ಇದ್ದಾಳಲ್ಲಾ ಅವಳ ಮನೆಯಲ್ಲೇ ಬಿದ್ದು ಸಾಯಿ ನಾಯಿ. ಥೂ, ನಿನ್ನ ಜನ್ಮಕ್ಕಿಷ್ಟು!’ ಎಂದು ಪ್ರೇಮ ಕೋಪದಿಂದ ತರಗುಟ್ಟುತ್ತ ಅರಚಿದಳು. ‘ಓಹೋ, ಹೌದನಾ…? ಹೀಗಾ ನಿನ್ನ ಕಥೆ! ಅಂದರೆ ನೀನೀಗ ಇಷ್ಟೊಂದು ಮಿತಿ ಮೀರಿ ಬಿಟ್ಟಿದ್ದೀಯಾ…? ಸರಿ ಹಾಗಾದರೆ ಇವತ್ತಿನಿಂದ ನೀನಾ ನಾನಾ ಅಂತ ನೋಡಿಯೇ ಬಿಡುವ. ನಿನ್ನನ್ನು ಹಿಡಿದ ಭೂತವನ್ನು ಬಿಡಿಸದಿದ್ದರೆ ನನ್ನ ಹೆಸರು ತೋಮನೇ ಅಲ್ಲ ಬಿಡು!’ ಎಂದು ಗರ್ಜಿಸಿದವನು ದುರದುರನೆ ಹೊರಟು ಹೋದ.
‘ಹೇ, ಹೋಗ್ ಹೋಗನಾ ಮೂರುಕಾಸಿನವನೇ…! ಎಷ್ಟು ದಿನಾಂತ ಬೀದಿ ನಾಯಿಗಳೆಲ್ಲ ನೆಕ್ಕಿದ ಆ ಎಂಜಲು ಚರ್ಮದವಳ ಮನೆ ಬಾಗಿಲಲ್ಲಿ ಬಿದ್ದು ಸಾಯುತ್ತಿ ಅಂತ ನಾನೂ ನೋಡುತ್ತೇನೋ…? ಇವತ್ತಲ್ಲಾ ನಾಳೆ ನಿನಗೆ ಇದೇ ಶೆಡ್ಡು ಗತಿಯಾಗುತ್ತಾ ಇಲ್ವಾ ನೋಡುತ್ತಿರು!’ ಎಂದು ಪ್ರೇಮಾಳೂ ಅವನು ಮರೆಯಾಗುವವರೆಗೆ ಅರಚುತ್ತ ಬೈಯ್ದಳು. ಆಹೊತ್ತು ಲಕ್ಷö್ಮಣ ತೋಟದ ಕೆಲಸಕ್ಕೆ ಹೋಗಿದ್ದ. ಸರೋಜ ಗಂಡ ಹೆಂಡಿರ ಕಾಳಗವನ್ನು ತನ್ನ ಶೆಡ್ಡಿನ ದಾರಂದಕ್ಕೊರಗಿ ಗರಬಡಿದವಳಂತೆ ನೋಡುತ್ತಿದ್ದಳು. ತಿಂಗಳ ಹಿಂದಷ್ಟೇ ಚೆನ್ನಾಗಿ ಸೆಗಣಿ ಸಾರಿಸಿ ಸಮತಟ್ಟುಗೊಳಿಸಿದ್ದ ಅಂಗಳವಿಡೀ ಹುಡಿಯೆದ್ದು ಧೂಳಿನ ಮಬ್ಬು ಮಾಸಿದ ಮೇಲೆ ಎಚ್ಚೆತ್ತ ಅವಳು ಪ್ರೇಮಾಳ ಬಟ್ಟೆಬರೆಗಳನ್ನು ಹೆಕ್ಕಿ ಒಳಗಿಡುತ್ತ, ‘ಪ್ರೇಮಕ್ಕಾ ನಿಮ್ಮ ಧೈರ್ಯ ಆಗಬಹುದು ಮಾರಾಯ್ರೇ! ಕಾಡುಕೋಣದಂತಿದ್ದ ತೋಮಣ್ಣನನ್ನು ಒಂದೇ ಉಸಿರಿಗೆ ಹೆದರಿಸಿ ಓಡಿಸಿ ಬಿಟ್ಟಿರಲ್ಲ. ಹೆಣ್ಣು ಅಂದರೆ ನಿಮ್ಮ ಹಾಗಿರಬೇಕು ನೋಡಿ. ಇನ್ನು ಯಾವತ್ತೂ ಅವರು ನಿಮ್ಮ ತಂಟೆಗೆ ಬರುವುದಿಲ್ಲ ಬಿಡಿ!’ ಎಂದು ಪ್ರಶಂಸಿಸಿದಳು.
‘ಮತ್ತೇನು ಮಾಡುವುದು ಹೇಳಿ ಸರೋಜಕ್ಕಾ…? ಇಷ್ಟರವರೆಗೆ ನನಗೂ ಸಹಿಸಿ ಸಹಿಸಿ ಸಾಕಾಗಿ ಹೋಯಿತು. ನನ್ನ ಬದುಕನ್ನೇ ಹಾಳು ಮಾಡಿಬಿಟ್ಟ ನೀಚ!’ ಎಂದು ಹತಾಶೆಯಿಂದ ಅಂದಳು. ಅದಕ್ಕೇನು ಉತ್ತರಿಸಬೇಕೆಂದು ತಿಳಿಯದ ಸರೋಜ ಸುಮ್ಮನಾದಳು. ಪ್ರೇಮ ಶೆಡ್ಡು ಹೊಕ್ಕು ಕದವಿಕ್ಕಿದವಳು ಬೋರಲು ಬಿದ್ದು ಒಂದೇ ಸಮನೆ ಅಳತೊಡಗಿಳು. ಅತ್ತ ಕೊತಕೊತನೆ ಕುದಿಯುತ್ತಿದ್ದ ಗಂಜಿಯು ಒಲೆ ಆರಿಸುವವರಿಲ್ಲದೆ ತನ್ನ ಬೇಗೆಯನ್ನು ತಾನೇ ಉಪಶಮನಿಸಿಕೊಳ್ಳಲು ಒಲೆಯ ತುಂಬ ಉಕ್ಕಿ ಹರಿಯಿತು.


‘ನಾನಾ ನೀನಾ ನೋಡಿಯೇ ಬಿಡುವ!’ ಎಂದು ಪ್ರತಿಜ್ಞೆ ಮಾಡಿ ಹೋದ ತೋಮ ಆಮೇಲೆ ಹದಿನೈದು ದಿನಗಳಾದರೂ ಶೆಡ್ಡಿನತ್ತಲೂ ತಲೆ ಹಾಕಲಿಲ್ಲ, ಮೇರಿಯ ಮನೆಗೂ ಹೋಗಲಿಲ್ಲ. ಮುಂಚಿನoತೆ ಎಲ್ಲೆಲ್ಲೋ ದುಡಿದು ಯಾವ್ಯಾವುದೋ ದೇವಸ್ಥಾನ, ದೈವದ ಗುಡಿ ಮತ್ತು ಇಗರ್ಜಿಯ ಜಗುಲಿಯ ಮೇಲೆ ಮಲಗಿ ರಾತ್ರಿ ಕಳೆಯುತ್ತಿದ್ದ. ಪ್ರೇಮ ಕೂಡಾ ಹುಡುಕಲು, ವಿಚಾರಿಸಲು ಹೋಗಲಿಲ್ಲ. ಅವಳಿಗೆ ಅವನ ಮೇಲೆ ಮನಸ್ಸು ಮುರಿದಿತ್ತು. ಆದರೆ ಮೇರಿ ಮಾತ್ರ ಅವನಿಗಾಗಿ ತುಂಬಾ ತುಡಿಯುತ್ತಿದ್ದಳು. ಅವಳ ಜೀವನಕ್ಕೆ ಆವರೆಗೆ ತೋಮನಂಥ ಆತ್ಮೀಯ ಗಂಡಸೊಬ್ಬನ ಆಸರೆ ದೊರಕಿರಲಿಲ್ಲ. ಅವಳು ಮುಂಬೈಯಲ್ಲಿದ್ದ ಕಾಲದಲ್ಲಿ ಅವಳ ಹತ್ತಿರ ಬರುತ್ತಿದ್ದ ವಿವಿಧ ಶಿಸ್ತುಗಸ್ತಿನ, ರೂಪ ಲಾವಣ್ಯದ ಗಂಡಸರೆಲ್ಲಾ ಕಾಮ ಪಿಪಾಸುಗಳಾಗಿದ್ದವರು. ಬಹುತೇಕರು ತಮ್ಮ ಹಣ, ಅಂತಸ್ತು ಮತ್ತು ಅಧಿಕಾರ ದಾಹದಿಂದ ಹುಟ್ಟುತ್ತಿದ್ದ ಸೊಕ್ಕನ್ನೂ, ಮಾನಸಿಕ ತೊಳಲಾಟಗಳನ್ನೂ ಕಾಮದ ಮೂಲಕ ತಣಿಸಿಕೊಳ್ಳಲು ಬಂದು ಸುಂದರವಾದ ಕೋಮಲ ಹೆಣ್ಣುಗಳನ್ನು ಭೋಗದ ವಸ್ತುಗಳೆಂದೇ ಭಾವಿಸುತ್ತ ತಮ್ಮ ಪೌರುಷವನ್ನು ಪ್ರದರ್ಶಿಸಿ ಸುಸ್ತಾಗಿ ಹೊರಟು ಹೋಗುತ್ತಿದ್ದರು. ಇನ್ನು ಕೆಲವರು ಹೆಣ್ಣಿನ ಪ್ರೀತಿಯನ್ನೇ ಕಾಣದವರು ಅಥವಾ ಅದರಿಂದ ವಂಚಿತರಾದವರು ಹೆಣ್ಣೆಂಬ ಗೌರವದಿಂದ ಕ್ಷಣಿಕವಾದರೂ ತೊಂದರೆಯಿಲ್ಲ ಸಂಗಾತಿ ಬೇಕೆಂಬ ಬಯಕೆಯಿಂದ ಬರುವವರಾದರೂ ಅವರು ಕೂಡಾ ತಮ್ಮ ತೆವಲು ಇಂಗಿದ ಬಳಿಕ ಜಿಗುಪ್ಸೆ, ನಿರಾಶೆಯಿಂದ ನರಳುತ್ತ ಆ ಹೆಣ್ಣು ಕೇಳಿದಷ್ಟು ಹಣವನ್ನೆಸೆದು, ‘ನೀನ್ಯಾರೋ ನಾನ್ಯಾರೋ?’ ಎಂಬoತೆ ಹೊರಟು ಹೋಗುತ್ತಿದ್ದರು.
ಮೇರಿ ತನ್ನ ದಂಧೆಯುದ್ದಕ್ಕೂ ಇಂಥವರನ್ನೇ ಕಾಣುತ್ತ ಬಂದವಳು ಪುರುಷನೊಬ್ಬನ ನಿಶ್ಕಲ್ಮಶ ಪ್ರೀತಿ, ಸ್ನೇಹ ಮತ್ತು ಸುಂದರ ಭದ್ರತೆಗೆ ಹಂಬಲಿಸುತ್ತಿದ್ದಳು. ಆದರೆ ಅಂಥ ಸಂಬAಧವು ಅಲ್ಲಿ ಮರೀಚಿಕೆಯಾಗಿತ್ತು. ಹಾಗಾಗಿ ಅವಳು ಆ ವೃತ್ತಿಯ ಮೇಲೆಯೇ ಒಮ್ಮೆ ಜಿಗುಪ್ಸೆಗೊಂಡು ವಿದಾಯ ಹೇಳಿ ಊರಿಗೆ ಬಂದವಳು. ಹೀಗಿದ್ದವಳಿಗೆ ತಾನು ಬಯಸಿದ ಪ್ರೀತಿಯ ರೂಪದಲ್ಲಿ, ಮುಗ್ಧ ಪ್ರಾಮಾಣಿಕ ಪುರುಷನಾಗಿ, ಭದ್ರತೆಯ ಸರದಾರನಾಗಿ ತೋಮ ಗೋಚರಿಸಿದ್ದ. ಆದ್ದರಿಂದಲೇ ಅವನನ್ನು ಕಳೆದುಕೊಳ್ಳಲು ಅವಳು ಸುತಾರಾಂ ಇಷ್ಟಪಡಲಿಲ್ಲ. ಹಾಗಾಗಿ ತಾನಾವತ್ತು ಕೋಪದ ಭರದಲ್ಲಿ ಅವನನ್ನು ನಿಷ್ಠೂರವಾಗಿ ಹಂಗಿಸಿ ಕೆರಳಿಸಿ ಕಳುಹಿಸಬಾರದಿತ್ತೇನೋ? ಅದರಿಂದ ಅವನು ಅದೆಷ್ಟು ನೊಂದುಕೊoಡನೋ ಏನೋ ಪಾಪ! ಈ ಹದಿನೈದು ದಿನಗಳಲ್ಲಿ ಅವನು ಪ್ರೇಮಾಳ ಹತ್ತಿರವೂ ಹೋಗಲಿಲ್ಲವಂತೆ. ಹಾಗಾದರೆ ಮತ್ತೆಲ್ಲಿಗೆ ಹೋದ? ಎಲ್ಲಾದರೂ ಊರು ಬಿಟ್ಟೇ ಹೊರಟು ಹೋದನೋ…? ಅಯ್ಯೋ ಜೀಸೆಸ್! ನಾನೆಂಥ ತಪ್ಪು ಮಾಡಿಬಿಟ್ಟೆ? ಇಷ್ಟುಕಾಲದ ಮೇಲಾದರೂ ತನ್ನದೆಂಬ ಜೀವವೊಂದು ದೊರಕಿತಲ್ಲ ಎಂದು ನೆಮ್ಮದಿಪಡಬೇಕಾದ ಸಮಯದಲ್ಲೇ ಹೀಗೇಕಾಗಿಬಿಟ್ಟಿತು ತಂದೇ…?’ ಎಂದು ದುಃಖಿಸಿದಳು. ಬಳಿಕ ತೋಮ ಹೆಚ್ಚಾಗಿ ಹೋಗುತ್ತಿದ್ದ ಮತ್ತು ಇರುತ್ತಿದ್ದ ಸ್ಥಳಗಳಿಗೆಲ್ಲ ತಮ್ಮನನ್ನು ಕಳುಹಿಸುತ್ತ ವಿಚಾರಿಸಿದಳು. ಆದರೂ ಅವನ ಪತ್ತೆಯಾಗಲಿಲ್ಲ. ಆದ್ದರಿಂದ ಅವಳಿಗೆ ಬದುಕೇ ಶೂನ್ಯವೆನಿಸತೊಡಗಿತು. ಸದಾ ಅವನಿಗಾಗಿ ದುಃಖಿಸುತ್ತ ಕುಡಿತದ ನಶೆಯಲ್ಲಿ ಕಾಲ ಕಳೆಯತೊಡಗಿದಳು.
ಇತ್ತ ಮೇರಿಯ ವಿರಹವೇದನೆಯ ಪರಿಣಾಮವೋ ಅಥವಾ ತೋಮನಿಗೇ ಅವಳ ಮೇಲಿದ್ದ ಮೋಹವೋ ಒಟ್ಟಾರೆ ಒಂದು ಮಧ್ಯಾಹ್ನ ಅವನು ಮೇರಿಯ ಮನೆಗೆ ಮರಳಿ ಬಂದುಬಿಟ್ಟ. ತನ್ನ ಪ್ರಿಯಕರನನ್ನು ಕಂಡ ಅವಳು ಅವನನ್ನು ಬಾಚಿ ತಬ್ಬಿಕೊಂಡು ಗಳಗಳನೆ ಅತ್ತಳು. ಅವನ ನಡುವನ್ನು ಬಳಸಿಕೊಂಡು ಕೋಣೆಗೆ ಕರೆದೊಯ್ದು ಕುಳ್ಳಿರಿಸುತ್ತ, ‘ಇಷ್ಟು ದಿನ ನನ್ನೊಬ್ಬಳನ್ನೇ ಬಿಟ್ಟು ಎಲ್ಲಿ ಸತ್ತು ಹೋಗಿದ್ದಿಯೋ ಹಾಳಾದವನೇ…!’ ಎಂದು ಕಣ್ಣು ತುಂಬಿಕೊoಡು ಮುನಿಸು ತೋರಿಸಿದಳು. ಬಳಿಕ, ‘ತಪ್ಪಾಯ್ತು ತೋಮ, ಇನ್ನೆಂದಿಗೂ ನಿನಗೊಂದು ಮಾತೂ ಕೆಟ್ಟದಾಗಿ ಅನ್ನಲಾರೆ. ನಿನಗೆ ಹೇಗೆ ಬೇಕೋ ಹಾಗಿರು. ಅದೇ ನನ್ನಿಷ್ಟ. ಜೀವಮಾನದಲ್ಲಿ ನಾನು ಪ್ರೀತಿಸಿದ ಮೊದಲ ಗಂಡಸು ನೀನೇ ಅಲ್ಲವೇನೋ! ಈ ಹಾಳು ಬದುಕಿನಲ್ಲಿ ತುಂಬಾ ನೊಂದಿದ್ದೇನೆ ಮಾರಾಯಾ ನಾನು. ಹಾಗಾಗಿ ನೀನೇ ನನ್ನ ಪ್ರಪಂಚ! ಇನ್ನು ಮುಂದೆ ನನ್ನನ್ನು ಬಿಟ್ಟು ಎಲ್ಲೂ ಹೋಗಬೇಡವೋ. ಬೇಕಿದ್ದರೆ ನಿನ್ನ ಹೆಂಡತಿಯ ಹತ್ತಿರನೂ ಹೋಗಿ ಬಂದು ಮಾಡುತ್ತಿರು. ನನ್ನದೇನೂ ಅಭ್ಯಂತರವಿಲ್ಲ. ಆದರೆ ನನ್ನ ಕೈ ಮಾತ್ರ ಬಿಡಬೇಡ ತೋಮ ನಿನ್ನ ದಮ್ಮಯ್ಯ!’ ಎಂದು ಪ್ರೀತಿಯಿಂದ ಅಂಗಲಾಚಿ ಓಲೈಸಿದಳು. ಅಷ್ಟು ಕೇಳಿದ ತೋಮನ ಕಣ್ಣುಗಳೂ ತುಂಬಿದವು. ಅವಳ ಮಾತಿಗೆ ಮೌನವಾಗಿ ತಲೆಯಲ್ಲಾಡಿಸುತ್ತ ಕುಳಿತ. ಹೊರಗೆ ಪಡಸಾಲೆಯಲ್ಲಿ ಡೆಲ್ಫಿನ್ ಗೊರಕೆ ಹೊಡೆಯುತ್ತಿದ್ದ. ಮೇರಿ ಕೂಡಲೇ ಅವನನ್ನೆಬ್ಬಿಸಿ ಹಂದಿಯ ಮಾಂಸ ತರಲು ಗ್ರೆಟ್ಟಾಳ ಮನೆಗಟ್ಟಿದಳು. ಬಳಿಕ ಚಿಕ್ಕದೊಂದು ಮುಳ್ಳು ಸೌತೆಯನ್ನು ತೆಳುವಾಗಿ ಹೆಚ್ಚಿ, ಒಂದು ಬಾಟಲಿ ಫಾರಿನ್ ವಿಸ್ಕಿಯೊಡನೆ ತಂದು ತೋಮನೆದುರಿಟ್ಟವಳು, ‘ಇನ್ನು ಸ್ವಲ್ಪ ಹೊತ್ತಲ್ಲಿ ಅಡುಗೆ ಆಗುತ್ತದೆ. ಅಲ್ಲಿಯತನಕ ನಿಧಾನಕ್ಕೆ ಕುಡಿಯುತ್ತಿರು ಆಯ್ತಾ…!’ ಎಂದು ಪ್ರೀತಿಯಿಂದ ಹೇಳಿ ಮನೆಯ ಹಿಂಬದಿಯ ತೋಟಕ್ಕೆ ಧಾವಿಸಿದಳು. ಗೋಳಿಮರದ ಒಂದಷ್ಟು ಎಲೆಗಳನ್ನು ಕಿತ್ತುಕೊಂಡು ಆತುರದಿಂದ ಅಡುಗೆಕೋಣೆ ಹೊಕ್ಕು ತನ್ನ ಪ್ರಿಯಕರನಿಗೆ ಇಷ್ಟವಾದ ಗೋಳಿಗಟ್ಟಿ(ಕಡುಬು)ಯನ್ನು ತಯಾರಿಸಿದಳು. ಅಷ್ಟೊತ್ತಿಗೆ ಹಂದಿಯ ಮಾಂಸ ಬಂತು. ಕೂಡಲೇ ಸೊಗಸಾದ ಪದಾರ್ಥ ತಯಾರಿಸಿ ತಂದು ತೋಮನೆದುರು ಕುಳಿತು ಅಕ್ಕರೆಯಿಂದ ಬಡಿಸಿದಳು. ಅದನ್ನು ಕಂಡ ತೋಮನ ಹೃದಯದಲ್ಲಿ ಅವಳ ಮೇಲೆ ಅತೀವ ಪ್ರೀತಿ ಉಕ್ಕಿತು. ಆ ತಾಟಕಿಯಂಥ ಹೆಂಡತಿಗಿoತ ಇಷ್ಟೊಂದು ಆಸ್ಥೆಯಿಂದ ಉಪಚರಿಸುವಂಥ ಈ ಹೆಣ್ಣೇ ಎಷ್ಟೋ ಮೇಲು. ನಿಜಕ್ಕೂ ಇವಳು ಬಹಳ ಒಳ್ಳೆಯವಳು ಎಂದುಕೊoಡವನು ರಪ್ಪನೆ ಅವಳನ್ನು ಬರಸೆಳೆದುಕೊಂಡು ಎಂಜಲು ಬಾಯಲ್ಲೇ ಲೊಚಲೊಚನೆ ಮುದ್ದಿಸಿದ. ತೋಮನ ಪ್ರೀತಿಯನ್ನನುಭವಿಸಿದ ಮೇರಿಗೆ ಆಕ್ಷಣ ಸ್ವರ್ಗವೇ ತೆರೆದುಕೊಂಡoತಾಯಿತು.
(ಮುoದುವರೆಯುವುದು)

Related posts

ವಿವಶ…

Mumbai News Desk

ವಿವಶ…

Mumbai News Desk

ವಿವಶ…

Mumbai News Desk

ವಿವಶ…

Chandrahas

ವಿವಶ..

Mumbai News Desk

ವಿವಶ…

Mumbai News Desk