23.5 C
Karnataka
April 4, 2025
ಧಾರಾವಾಹಿ

ವಿವಶ..



ಧಾರವಾಹಿ 39


ಪ್ರೇಮ ತನ್ನ ಜೀವನದ ಬಗ್ಗೆ ಕಟ್ಟಿಕೊಂಡoಥ ಸಾಮಾನ್ಯ ಕನಸುಗಳು ಕೂಡಾ ಭಗ್ನಗೊಂಡಿದ್ದವು. ತೋಮನೆಸಗಿದ ದ್ರೋಹವು ಅವಳನ್ನು ತೀವ್ರ ಅಧೀರಳನ್ನಾಗಿಸಿತ್ತು. ತನ್ನ ಹೆಣ್ತನಕ್ಕೊಂದು ಸುಂದರ ಅಸ್ತಿತ್ವವನ್ನು ನೀಡಿ, ಜೀವನಕ್ಕೊಂದು ಅರ್ಥ ತಂದುಕೊಟ್ಟವನು ತನ್ನ ತೋಮ. ಅವನೇ ತನ್ನ ಗಂಡ, ಯಜಮಾನ ಎಲ್ಲ. ಬದುಕಿದರೆ ಅವನೊಂದಿಗೇ ಬದುಕಬೇಕು. ಒಂದು ಹೆಣ್ಣನ್ನು ಅವನಷ್ಟು ಮೃದುವಾಗಿ ಬೇರೆ ಯಾವ ಗಂಡಸಿನಿಂದಲೂ ಪ್ರೀತಿಸಲು ಸಾಧ್ಯವಿಲ್ಲ. ಅವನೇ ನನ್ನ ಸರ್ವಸ್ವ! ಎಂದು ದೃಢವಾಗಿ ನಂಬಿದವಳ ಭ್ರಮೆಯು ತೋಮನ ವಂಚನೆಯಿoದಾಗಿ ಸೂರ್ಯ ಪ್ರಕಾಶಕ್ಕೆ ಮಂಜು ಕರಗಿದಷ್ಟೇ ವೇಗವಾಗಿ ಕಳಚಿಬಿದ್ದಿತ್ತು. ಅಗೋಚರ ಜೀವನದ ಕಠೋರ ವಾಸ್ತವವು ಅವಳ ಮುಂದೆ ಎಲ್ಲೆಡೆಯೂ ಹರಡಿಕೊಂಡು ಅವಳ ಹೃದಯವನ್ನು ಹಿಂಡುತ್ತಿತ್ತು. ಆದ್ದರಿಂದ ಬದುಕಿನ ಮೇಲೆ ತೀವ್ರ ಉದಾಸೀನ ತಳೆಯುತ್ತ ಸಾಗಿದ್ದಳು. ಹಾಗಾಗಿ ಹೆಲೆನಾಬಾಯಿಯ ಮನೆಗೂ, ಶೆಟ್ಟರ ತೋಟಕ್ಕೂ ಯಾವಾಗಲಾದರೊಮ್ಮೆ ಹೋಗಿ ತೋಚಿದಷ್ಟು ದುಡಿದು ತಂದು ಮಗಳನ್ನು ಸಾಕುತ್ತಿದ್ದಳು. ಆದರೆ ತನ್ನ ಜೀವನದ ಏಕೈಕ ಆಸರೆಯಾದ ಗಂಡನನ್ನು ಕಸಿದುಕೊಂಡ ಮೇರಿಯ ಮೇಲೆ ಅವಳಲ್ಲಿ ವಿಪರೀತ ಕ್ರೋಧ ಬೆಳೆದುಬಿಟ್ಟಿತ್ತು. ಮನಸ್ಸು ಕೆರಳಿದಾಗಲೆಲ್ಲ ಮೈಮೇಲೆ ದೆವ್ವ ಬಂದoತೆ ವರ್ತಿಸುತ್ತ ಮೇರಿಯ ಮನೆಗೆ ಧಾವಿಸಿ ಹೋಗುವವಳು ಅವಳನ್ನೂ, ತೋಮನನ್ನೂ ವಾಚಮಾಗೋಚರವಾಗಿ ಬೈಯ್ಯುತ್ತ ಜಗಳವಾಡುತ್ತಿದ್ದಳು. ಮೊದಮೊದಲು ಮೇರಿಯೂ ತೋಮನೂ ತಾವೂ ಅವಳೊಂದಿಗೆ ಜಗಳವಾಡುತ್ತ ತಮ್ಮ ಸಿಟ್ಟನ್ನು ತೀರಿಸಿಕೊಳ್ಳುತ್ತಿದ್ದರು. ಆದರೆ ಕ್ರಮೇಣ ಪ್ರೇಮಾಳ ಉಗ್ರಾವತಾರವು ಅವರಲ್ಲಿ ವಿಪರೀತ ಭೀತಿಯನ್ನು ಸೃಷ್ಟಿಸಿಬಿಟ್ಟಿತು. ಆನಂತರ ಅವಳು ಬಂದು ಜಗಳಕ್ಕೆ ನಿಲ್ಲುತ್ತಲೇ ಮೇರಿಯು ಮನೆಯೊಳಗೆ ಸೇರಿಕೊಂಡು ಬಾಗಿಲು ಭದ್ರಪಡಿಸಿದರೆ, ತೋಮ ಮೆಲ್ಲನೆದ್ದು ಹಿತ್ತಲ ಬಾಗಿಲಿನಿಂದ ಮಾಯವಾಗುತ್ತಿದ್ದ.
ಹೀಗೆಯೇ ಕೆಲವು ತಿಂಗಳುಗಳು ಉರುಳಿದವು. ಬರಬರುತ್ತ ಪ್ರೇಮಾಳಿಗೂ ಅವರ ಮೇಲೆ ಜಿಗುಪ್ಸೆ ಹುಟ್ಟತೊಡಗಿತು. ಹಾಗಾಗಿ ಅವಳು ಮೇರಿಯ ಮನೆಯತ್ತ ಸುಳಿಯುವುದನ್ನು ಬಿಟ್ಟುಬಿಟ್ಟಳು. ಇದರಿಂದ ತೋಮ ಮತ್ತು ಮೇರಿಗೆ ನಿರಾಳವಾಯಿತು. ಆಮೇಲೆ ಇಬ್ಬರೂ ಇನ್ನಷ್ಟು ದಿನ ನೆಮ್ಮದಿಯಿಂದ ಕಾಲ ಕಳೆದರು. ಆದರೆ ಕ್ರಮೇಣ ತೋಮನ ಮನಸ್ಸು ಮರಳಿ ಮೆಲ್ಲನೆ ಹೆಂಡತಿ ಮತ್ತು ಮಗಳತ್ತ ಹೊರಳತೊಡಗಿತು. ಅದಕ್ಕೆ ಕಾರಣಗಳೂ ಇದ್ದುವು. ಹಗಲಿರುಳೆನ್ನದೆ ದಿನನಿತ್ಯ ಮೇರಿಯ ದೇಹ ಸುಖವನ್ನು ವಾಕರಿಗೆ ಬರುವಷ್ಟರ ಮಟ್ಟಿಗೆ ಅನುಭವಿಸುತ್ತ ಅವಳೊಡನೆ ಕುಡಿದು ತಿಂದು ಸೋಮಾರಿಯಾಗಿ ಸುತ್ತಾಡುತ್ತಿದ್ದವನಿಗೆ ಅದೇ ಕಾರಣಕ್ಕೆ ಮೇರಿಯ ಮೇಲಿನ ಆಕರ್ಷಣೆಯೂ ಕುಂದುತ್ತ ಸಾಗಿತು. ಜೊತೆಗೆ ಹೆಂಡತಿಯ ಮೇಲಿನ ಹಳೆಯ ಪ್ರೇಮವೂ ಮರಳಿ ಚಿಗುರಲಾರಂಭಿಸಿತು. ಹೀಗಾಗಿ ಅವನು ಮೇರಿಯಿಂದ ತಣ್ಣಗೆ ದೂರವಾಗಲಾರಂಭಿಸಿದ. ಆದರೆ ಆ ಕಠೋರ ಸತ್ಯವು ಮೇರಿಯ ಗಮನಕ್ಕೂ ಬಂದು ಅವಳನ್ನು ತೀಕ್ಷ÷್ಣವಾಗಿ ನೋಯಿಸುತ್ತಿತ್ತು. ಅದರೊಂದಿಗೆ ತನ್ನ ಜಾತಿ ಬಾಂಧವರ ವ್ಯಂಗ್ಯ ತಾತ್ಸಾರದ ಮಾತು ಮತ್ತು ವರ್ತನೆಗಳೂ ಸೇರಿ ಅವಳ ಶಾಂತಿಯನ್ನು ಕೆಡಿಸತೊಡಗಿದ್ದವು. ಅಷ್ಟಲ್ಲದೇ ಅವಳು ತನ್ನ ಮನಸ್ಸು ಒಡೆಯುಂಥ ಬದಲಾವಣೆಯೊಂದನ್ನೂ ತೋಮನಲ್ಲಿ ಕಂಡಳು. ತೋಮ ಈಚೀಚೆಗೆ ಅವಳನ್ನು ಕೂಡುವಾಗಲೆಲ್ಲ ನಿರಾಸಕ್ತಿಯನ್ನು ತೋರುತ್ತಿದ್ದ. ಅದನ್ನು ಗ್ರಹಿಸುತ್ತಿದ್ದವಳಿಗೆ ಅವನು ತನ್ನನ್ನು ಅಗಿದು ಜಗಿದು ರಸ ಹೀರಿ ಉಗುಳುವ ಕಬ್ಬಿನ ಜಲ್ಲೆಯಂತೆಯೇ ಭಾವಿಸಿರುವುದು ಮನವರಿಕೆಯಾಗತೊಡಗಿತು. ಹಾಗಾಗಿ ಅವಳು ತಾನೂ ವಿಧಿಯಿಲ್ಲದೆ ಅವನ ಸಂಬoಧವನ್ನು ಕಡಿದುಕೊಳ್ಳಲು ನಿರ್ಧರಿಸಿದಳು.


ಇತ್ತ ಇದೇ ಸಮಯಕ್ಕೆ ಸರಿಯಾಗಿ, ‘ಮೇರಿ ದುಬೈಯಿಂದ ಬಂದವಳಲ್ಲ. ಮುಂಬೈಯಲ್ಲಿ ವೇಶ್ಯಾವಾಟಿಕೆ ಮಾಡುತ್ತಿದ್ದವಳು. ತಾನು ಕೂಡಾ ಅವಳೊಂದಿಗೆ ಇದ್ದು ಬಂದಿದ್ದೇನೆ ಎಂದು ಅಂಬರಬೆಟ್ಟಿನ ಬಲರಾಮ ಶೆಟ್ಟಿಯು ಮೊನ್ನೆ ಕ್ಷೌರಕ್ಕೆ ಬಂದವನು ನನ್ನೊಡನೆ ಹೇಳಿ ಹೋದ!’ ಎಂಬ ಆಘಾತಕಾರಿ ಸುದ್ದಿಯು ಪದ್ದುನ ಮೂಲಕ ತೋಮನ ಕಿವಿಗೂ ಬಿದ್ದುದ್ದರಿಂದ ಅವನು ಭಾರೀ ಕ್ಷೆÆÃಭೆಗೊಳಗಾದ. ‘ಇಲ್ನೋಡು ತೋಮ, ನಾನು ವಿಧವೆಯಾದರೂ ಶೀಲಗೆಟ್ಟವಳಲ್ಲ ಮಾತ್ರವಲ್ಲದೇ ನಿನ್ನಷ್ಟು ನಾನು ನನ್ನ ಗಂಡನನ್ನೂ ಪ್ರೀತಿಸಿದವಳಲ್ಲ!’ ಎಂದು ಮೇರಿ ಆಗಾಗ ತನ್ನ ಮುಂದೆ ಹೇಳುತ್ತಿದ್ದುದೆಲ್ಲ ಸುಳ್ಳಾ ಹಾಗಾದರೆ…? ಥೂ! ಇವಳಿಂದ ಇಷ್ಟು ದೊಡ್ಡ ಮೋಸವಾ ನನಗೆ…?’ ಎಂದುಕೊoಡ ತೋಮ ಬಹಳವೇ ನೊಂದ. ಮರುಕ್ಷಣ ಅವಳ ಮೇಲೆ ಜಿಗುಪ್ಸೆ ಹುಟ್ಟಿತು. ಅದನ್ನೇ ಅವಳಿಂದ ಬಿಡುಗಡೆ ಪಡೆಯಲೂ ಬಳಸಿಕೊಂಡವನು ಆವತ್ತಿನಿಂದ ಅವಳ ಮನೆಯ ಕಡೆ ಸುಳಿಯುವುದನ್ನೂ ನಿಲ್ಲಿಸಿಬಿಟ್ಟ. ಆದರೆ ಅಷ್ಟರಲ್ಲಾಗಲೇ ತೋಮನ ಮನಸ್ಥಿತಿಯನ್ನು ಅರ್ಥೈಸಿಕೊಂಡಿದ್ದ ಮೇರಿಯು ಕೂಡಾ ಅವನ ಮೇಲೆ ಉದಾಸೀನ ತಳೆದವಳು ಇನ್ನು ಮುಂದಿನ ತನ್ನ ಬದುಕನ್ನು ತಾನು ಏಕಾಂಗಿಯಾಗಿಯೇ ಬಾಳಬೇಕು! ಎಂದು ತೀರ್ಮಾನಿಸಿದಳು.
ತೋಮ ತಾನು ಯಾವತ್ತು ಹೆಂಡತಿಯಿoದ ಬಡಿಗೆಯೇಟು ತಿಂದನೋ ಆವತ್ತಿನಿಂದಲೇ ಅವಳಿಗೆ ಅವನು ಒಳಗೊಳಗೇ ಹೆದರಲು ಶುರು ಮಾಡಿದ್ದ. ಅವಳ ಧೈರ್ಯ ಹಾಗೂ ಗಟ್ಟಿತನವನ್ನೂ ಮನಸಾರೆ ಮೆಚ್ಚಿದ್ದ. ಆದ್ದರಿಂದ ಮೇರಿಯಿಂದ ದೂರವಾಗುತ್ತಲೇ ಹೆಂಡತಿಯೊಡನೆ ರಾಜಿಯಾಗಲು ಹವಣಿಸಿದವನು, ಏನಾದರಾಗಲಿ ತಾನು ಮಾಡಿದ ತಪ್ಪಿಗೆ ಅವಳು ಇನ್ನೂ ಎರಡೇಟು ಹೊಡೆದರೂ ತಿನ್ನುವುದೇ ಸರಿ! ಎಷ್ಟಾದರೂ ತಾನು ಪ್ರೀತಿಸಿದ ಹೆಣ್ಣಲ್ಲವಾ ಅವಳು? ಎಂದುಕೊoಡವನು ಅಂದು ಭಾನುವಾರ ಮೆಲ್ಲನೆ ಮನೆಯ ದಾರಿ ಹಿಡಿದ. ಆಹೊತ್ತು ಶ್ವೇತಾ ಸರೋಜಾಳ ಮಗಳು ಪ್ರಮೀಳಾಳೊಂದಿಗೆ ಅಂಗಳದಲ್ಲಿ ಕುಳಿತು ಹರಟುತ್ತಿದ್ದವಳಿಗೆ ಅಪ್ಪನನ್ನು ಕಂಡು ಬಹಳ ಖುಷಿಯಾಯಿತು. ಆದರೆ ಅದರ ಬೆನ್ನಿಗೆ, ಅಯ್ಯೋ ದೇವರೇ…! ಈಗ ಅಪ್ಪ, ಅಮ್ಮನ ನಡುವೆ ಮತ್ತೆ ಗಲಾಟೆಗೆ ಶುರುವಾದರೆ ಏನು ಮಾಡುವುದಪ್ಪಾ…? ಎಂಬ ಭಯವೂ ಕಾಡಿತು. ಆದರೂ, ‘ಅಮ್ಮಾ… ಅಮ್ಮಾ, ಪಪ್ಪ ಬಂದರಮ್ಮಾ…!’ ಎನ್ನುತ್ತ ಓಡಿ ಹೋಗಿ ಅಪ್ಪನಿಗೆ ತೆಕ್ಕೆ ಬಿದ್ದಳು.
ಮಗಳನ್ನು ಕಂಡ ತೋಮನಿಗೆ ಮಮತೆಯುಕ್ಕಿ ಬಂತು. ತಾನು ತಂದಿದ್ದ ತಿಂಡಿಯ ಪೊಟ್ಟಣವನ್ನು ಅವಳಿಗೆ ಕೊಟ್ಟು, ಅಕ್ಕರೆಯಿಂದ ಅವಳ ಮೈದಡವುತ್ತ ಶೆಡ್ಡಿನೊಳಗೆ ಹೊಕ್ಕ. ಮಗಳ ಮಾತು ಕಿವಿಗೆ ಬಿದ್ದ ತಕ್ಷಣ ಪ್ರೇಮಾಳಲ್ಲೂ ಭಾವೋದ್ವೇಗವೆದ್ದಿತು. ಆದರೆ ಅಷ್ಟೇ ಬೇಗ ಜಿಗುಪ್ಸೆಯೂ ಮೂಡಿತು. ತನ್ನ ಪಾಡಿಗೆ ತಾನು ಬೀಡಿ ಚುರುಟುವುದರಲ್ಲಿ ಮಗ್ನಳಾಗಿಬಿಟ್ಟಳು. ತೋಮ ಮೆಲ್ಲನೆ ಒಳಗೆ ಬಂದವನು, ‘ಹೇಗಿದ್ದಿ ಪ್ರೇಮಾ…?’ ಎಂದ ಅಳುಕುತ್ತ.
‘ಹೇಗಿರುವುದು…? ಇರುವ ಹಾಗೇ ಇದ್ದೇನೆ. ಏನು ಬಂದಿದ್ದು?’ ಎಂದು ಒರಟಾಗಿ ಪ್ರಶ್ನಿಸಿದಳು. ತೋಮನಿಗೆ ನಿಂತ ನೆಲವೇ ಅದುರಿದಂತೆ ಭಾಸವಾಯಿತು. ಆದರೂ ಸಂಭಾಳಿಸಿಕೊoಡು, ‘ತಪ್ಪಾಯಿತು ಮಾರಾಯ್ತಿ. ಒಮ್ಮೆ ಮಾಫ್ ಮಾಡಿಬಿಡು!’ ಎನ್ನುತ್ತ ಮೂಲೆಯಲ್ಲಿ ಕುಳಿತ. ಪ್ರೇಮಾಳಿಗೆ ಕೋಪ ಉಕ್ಕಿ ಬಂತು. ‘ಥೂ! ಮಾಫ್ ಮಾಡುವುದಾ…! ನಿನ್ನನ್ನಾ…? ಈ ಜನ್ಮದಲ್ಲಿ ಅದು ಸಾಧ್ಯವಿಲ್ಲ ತಿಳ್ಕೋ! ಮತ್ತೆ ಯಾವ ಮುಖವಿಟ್ಟುಕೊಂಡು ಬಂದೆ ಇಲ್ಲಿಗೆ? ನಾಚಿಕೆಯಾಗುವುದಿಲ್ಲವಾ ನಿಂಗೆ. ತೊಲಗು ಇಲ್ಲಿಂದ!’ ಎಂದು ಗುಡುಗಿದಳು. ಆದರೆ ತೋಮ ಕಳ್ಳ ಬೆಕ್ಕಿನಂತೆ ಸುಮ್ಮನೆ ಕುಳಿತುಬಿಟ್ಟ. ಮಗಳು ಅಮ್ಮನನ್ನು ದುಃಖದಿಂದ ದಿಟ್ಟಿಸಿದಳು. ಆಗ ಪ್ರೇಮ ಕಷ್ಟಪಟ್ಟು ತನ್ನ ಮುಂದಿನ ಬೈಗುಳವನ್ನು ನುಂಗಿಕೊoಡವಳು ನೀರಸವಾಗೆದ್ದು ಹೊರಗೆ ನಡೆದಳು. ಆವತ್ತಿನಿಂದ ತೋಮ ಮರಳಿ ಮನೆಯಲ್ಲೇ ವಾಸಿಸತೊಡಗಿದ. ಹೀಗೆ ಕೆಲವು ಕಾಲ ಉರುಳಿತು. ಒಂದು ದಿನ ತೋಟದ ಕೆಲಸಕ್ಕೂ ಹಾಜರಾದ. ಆದ್ದರಿಂದ ಶೆಟ್ಟರಿಗೂ ಸಮಾಧಾನವಾಯಿತು. ಆದರೆ ಪ್ರೇಮ ಮಾತ್ರ ಅವನ ಪಾಲಿಗೆ ಬದಲಾಗುವ ಸೂಚನೆ ಕಾಣಿಸಲಿಲ್ಲ. ಗಂಡನ ಮುಖ ಕಂಡರೆ ಅವಳಲ್ಲಿ ಅಸಹನೆ ಉಕ್ಕುತ್ತಿತ್ತು. ಆಗೆಲ್ಲ ಅಸಹ್ಯ ಬೈಗುಳಗಳಿಂದ ನಿಂದಿಸುತ್ತ ತಣ್ಣಗಾಗುತ್ತಿದ್ದಳು. ಆದರೂ ತೋಮ ತುಟಿಪಿಟಿಕ್ ಎನ್ನದೆ ಅವಳ ಸಮೀಪವಾಗಲು ಬಯಸುತ್ತಿದ್ದ. ಆದರೆ ಅವನ ಯಾವ ನಯವಿನಯದ ವರ್ತನೆಗೂ ಅವಳ ಮನಸ್ಸು ಕರಗಲಿಲ್ಲ. ತಾನು ಮನಸಾರೆ ಪ್ರೀತಿಸಿದವನು. ತನ್ನ ಸರ್ವಸ್ವವೇ ಆಗಿದ್ದವನು ಎಂದು ತಾನು ನಂಬಿದoಥ ಮನುಷ್ಯ ಯಾವತ್ತು ಇನ್ನೊಬ್ಬಳು ಹೆಣ್ಣಿನ ಸೆರಗಿನ ಹಿಂದೆ ಅವಿತಿದ್ದನ್ನು ಕಂಡಳೋ ಆವತ್ತೇ ಅವಳ ದೃಷ್ಟಿಯಲ್ಲಿ ಅವನು ಬಿದ್ದು ಹೋಗಿದ್ದ.
ಹೀಗಿದ್ದ ಪ್ರೇಮಾಳಿಗೆ ಒಮ್ಮೆ ಸಾರಾಯಿ ಕುಡಿಯುವ ಚಟವೂ ಅಂಟಿಕೊoಡುಬಿಟ್ಟಿತು. ಹೆಲೆನಾಬಾಯಿ ತಮ್ಮ ಮನೆಮಂದಿಗಾಗಿ ತಯಾರಿಸುತ್ತಿದ್ದ ಮೃದು ಮಧುರವಾದ ಗಂಗಸರವು ಅವಳಿಗೂ ಆಪ್ತವಾಗತೊಡಗಿತು. ಆದರೆ ಆರಂಭದಲ್ಲಿ ಹೆಲೆನಾಬಾಯಿಯು ಅವಳಿಗೆ ಸಾರಾಯಿ ಕೊಡಲು ನಿರಾಕರಿಸುತ್ತಿದ್ದರು. ಮಾತ್ರವಲ್ಲದೇ ಮದ್ಯದ ಗೀಳಿಗೆ ಬಿದ್ದು ದಾರಿ ತಪ್ಪಿದ ತಮ್ಮದೇ ಜಾತಿಯ ಹಲವು ಹೆಂಗಸರ ವಿಷಯಗಳನ್ನೂ ನಿದರ್ಶನ ನೀಡುತ್ತ ಬುದ್ಧಿ ಹೇಳಿದರು. ಆದರೆ ಪ್ರೇಮಾಳ ವಿಷಯದಲ್ಲಿ ಅವರ ಮಾತುಗಳು ಯಾವುವೂ ಪ್ರಯೋಜನಕ್ಕೆ ಬರಲಿಲ್ಲ. ಹಾಗಾಗಿ ಅವಳ ಮಾನಸಿಕ ತೊಳಲಾಟವನ್ನೂ ಮತ್ತವಳು ದಿನೇದಿನೇ ತನ್ನ ಜೀವನೋತ್ಸಾಹವನ್ನು ಕಳೆದುಕೊಂಡು ಖಿನ್ನಳಾಗುತ್ತಿದ್ದುದನ್ನೂ ಕಾಣುತ್ತ ಬಂದವರ ಮನಸ್ಸು ಕರಗಿತು. ‘ನೋಡು ಪ್ರೇಮ ಅತಿಯಾದರೆ ಅಮೃತವೂ ವಿಷವಂತೆ. ಹಾಗಾಗಿ ನೀನು ನನ್ನ ಮನೆಯ ಸಾರಾಯಿಯನ್ನು ಬಿಟ್ಟು ಬೇರೆ ಯಾರ ಸಾರಾಯಿಯನ್ನೂ ಕುಡಿಯಬಾರದು. ಕುಡಿದರೆ ಏಸುವಿನ ಮೇಲೆ ಆಣೆ ಉಂಟು ನಿನಗೆ!’ ಎಂದು ಪ್ರಮಾಣ ಮಾಡಿಸಿದರು. ಪ್ರೇಮಾಳೂ ನಮ್ರವಾಗಿ ಹ್ಞೂಂಗುಟ್ಟಿ ಅವರು ತೋರಿಸಿದ ಶಿಲುಬೆಯನ್ನು ಮುಟ್ಟಿ ಭಯಭಕ್ತಿಯಿಂದ ಪ್ರಮಾಣವನ್ನೂ ಮಾಡಿದಳು. ಅಂದಿನಿoದ ಹೆಲೆನಾಬಾಯಿಯು ತಾನು ಶುದ್ಧ ಹಣ್ಣುಹಂಪಲಿನಿoದ ತಯಾರಿಸುತ್ತಿದ್ದ ಮದಿರೆಯನ್ನು ಅವಳಿಗೆ ದಿನಾಲು ಸ್ವಲ್ಪ ಸ್ವಲ್ಪ ಕೊಡತೊಡಗಿದರು. ಆ ಶರಾಬು ನೊಂದ ಹೆಣ್ಣಿನ ದುಃಖ ದುಮ್ಮಾನಗಳನ್ನು ಮೆಲ್ಲನೆ ಸಾಂತ್ವನಿಸಲು ಮುಂದಾಯಿತು.


ಹೀಗೆ ವಿಧಿಯು ಮರಳಿ ಒಂದೇ ಸೂರಿನಡಿಗೆ ಎಸೆದ ಪ್ರೇಮ, ತೋಮನ ದಾಂಪತ್ಯವು ಸತ್ವಹೀನವಾಗಿ ಸಾಗತೊಡಗಿತು. ಇತ್ತ ಶ್ವೇತಾ ತನ್ನ ಅಪ್ಪ ಅಮ್ಮನ ದಿನನಿತ್ಯದ ಮನಸ್ತಾಪ ಗಲಾಟೆ ಹೊಡೆತ ಬಡಿತಗಳ ಉಸಿರುಗಟ್ಟುವಂಥ ಕೆಟ್ಟ ವಾತಾವರಣದಲ್ಲಿಯೇ ಬೆಳೆಯುತ್ತಿದ್ದಳು. ಆಗಾಗ ವಿನಾಕಾರಣ ಅವರಿಂದ ತನಗೆ ಒದಗುತ್ತಿದ್ದ ನೋವು ಹಿಂಸೆಗಳಿoದಲೂ ನಲುಗುತ್ತ ಪ್ರಾಯಕ್ಕೆ ಬಂದವಳಿಗೆ ಈಗ ಹದಿನಾರು ತುಂಬಿತ್ತು. ಅಮ್ಮನಂತೆ ಅವಳೂ ಚೆಂದದ ಹೆಣ್ಣಾಗಿ ಅರಳುತ್ತಿದ್ದಳು. ಪ್ರಾಥಮಿಕ ಶಿಕ್ಷಣ ಮುಗಿದ ಮೇಲೆ ಹೆಚ್ಚು ಓದಬೇಕೆಂದು ಅವಳಿಗೆ ಆಸೆಯಿತ್ತು. ಆದರೆ ವಿಚಿತ್ರ ಬಗೆಯ ಅಂತರ್ಮುಖಿ ಸ್ವಭಾವಕ್ಕೆ ತುತ್ತಾಗಿ ಜೀವಚ್ಛವಗಳಂತೆ ಬದುಕುತ್ತಿದ್ದ ಹೆತ್ತವರ ಸಹಾಯ ದೊರಕುವ ಭರವಸೆ ಅವಳಿಗಿರಲಿಲ್ಲ. ಹಾಗಾಗಿ ತಾನಿನ್ನು ಯಾರದಾದರೂ ಮನೆ ಚಾಕರಿಗೋ, ಹೊಲಗದ್ದೆ ಅಥವಾ ತೋಟದ ಕೂಲಿನಾಲಿಗೋ ಹೊರಡಲು ಮಾನಸಿಕವಾಗಿ ತಯಾರಾಗುತ್ತಿದ್ದಳು. ಆದರೆ ಅವಳ ಅದೃಷ್ಟಕ್ಕೆ ಹೆಲೆನಾಬಾಯಿಗೆ ಪ್ರೇಮಾಳ ಮೇಲೆ ಇದ್ದಂತದ್ದೇ ಅಕ್ಕರೆ, ಮಮಕಾರಗಳು ಶ್ವೇತಾಳ ಮೇಲೂ ಬೆಳೆದಿತ್ತು. ಆದ್ದರಿಂದ ಅವರ ಒತ್ತಾಯದಿಂದ ಅವಳು ಹೈಸ್ಕೂಲ್ ವಿದ್ಯಾಭ್ಯಾಸಕ್ಕೆ ಸೇರಿದಳು.
ಶ್ವೇತಾಳ ಓದಿನ ಪೂರ್ಣ ಖರ್ಚುವೆಚ್ಚವನ್ನು ಹೆಲೆನಾಬಾಯಿಯೇ ಭರಿಸತೊಡಗಿದರು. ಆದರೆ ಅದಕ್ಕೊಂದು ಕಾರಣವೂ ಇತ್ತು. ಪ್ರೇಮಾಳ ಬದುಕು ಹಾಳಾಗಲು ಎಲ್ಲೋ ಒಂದು ರೀತಿಯಲ್ಲಿ ತಾನೂ ಕಾರಣಳೇ! ಎಂಬ ನೋವು ಅವರನ್ನು ಕಾಡುತ್ತಿತ್ತು. ತಾನಾವತ್ತು ಪ್ರೇಮ ಮತ್ತು ತೋಮನನ್ನು ಒಂದುಗೂಡಿಸುವ ವಿಚಾರದಲ್ಲಿ ಸ್ವಲ್ಪ ಯೋಚಿಸಿಯೇ ಮುಂದುವರೆಯಬೇಕಿತ್ತು. ತೋಮ ಎಲ್ಲಿಂದ ಬಂದವನು? ಎಂಥ ಮನುಷ್ಯ? ಎಂಬ ಯಾವ ಸಂಗತಿಯನ್ನೂ ತಿಳಿಯದೆ, ಕೇವಲ ಅವನು ತನಗೆ ತೋರಿಸುತ್ತಿದ್ದ ಗೌರವ ಮತ್ತು ಅವನ ದುಡಿತದ ಗಟ್ಟಿತನವನ್ನು ಮಾತ್ರ ತಾನು ನೋಡಿ ಭಾವುಕಳಾಗಿ ಎಲ್ಲರೊಡನೆ ಅವನನ್ನು ಹಾಡಿ ಹೊಗಳಿದ್ದು ದೊಡ್ಡ ತಪ್ಪಾಯಿತು. ಅಂದು ತಾನು ಸ್ವಲ್ಪ ವಿವೇಚಿಸುತ್ತಿದ್ದರೆ ಇಂದು ಪ್ರೇಮಾಳಿಗೆ ಇಂಥ ದುರ್ಗತಿ ಬರುತ್ತಿರಲಿಲ್ಲವೇನೋ? ಎಂಬ ಪಶ್ಚಾತ್ತಾಪ ಅವರನ್ನು ಸುಡುತ್ತಿತ್ತು. ಆದರೆ ಅದನ್ನು ಪೂರ್ಣವಾಗಿ ಒಪ್ಪಿಕೊಳ್ಳಲೂ ಅವರು ತಯಾರಿರಲಿಲ್ಲ. ತಾನು ಬೇಕೆಂದೇ ಹಾಗೆ ಮಾಡಿದೆನಾ? ಪ್ರೇಮಾಳ ಬದುಕು ಚೆನ್ನಾಗಿರಲಿ ಎಂದು ತಾನು ಬಯಸಿದ್ದು ತಪ್ಪಾ! ಅಷ್ಟಲ್ಲದೇ ತನಗೆ ವಿಷಯ ತಿಳಿಯುವ ಮೊದಲೇ ಅವರು ಒಬ್ಬರನ್ನೊಬ್ಬರು ಇಷ್ಟಪಡುತ್ತಿದ್ದರಲ್ಲವಾ! ಎಂದು ಸಮಾಧಾನ ತಂದುಕೊಳ್ಳುತ್ತಿದ್ದರು. ಬಳಿಕ, ಆಗಿದ್ದು ಆಗಿ ಹೋಯಿತು. ಇನ್ನು ಚಿಂತಿಸಿ ಫಲವಿಲ್ಲ. ಬದಲಿಗೆ ಶ್ವೇತಾಳ ಬದುಕಿಗಾದರೂ ತನ್ನಿಂದ ಒಂದಿಷ್ಟು ಸಹಾಯವಾದರೆ ಅದೇ ದೊಡ್ಡ ನೆಮ್ಮದಿ. ಓ ನನ್ನ ತಂದೆ ಏಸುವೇ…! ತಾನು ತಿಳಿಯದೆ ಮಾಡಿದ ತಪ್ಪನ್ನು ಮನ್ನಿಸು ಪ್ರಭು. ಈ ಕಾರ್ಯಕ್ಕಾದರೂ ತನ್ನ ಮೇಲೆ ಕರುಣೆ ತೋರಿಸು ದೇವಾ! ಎಂದು ಬೇಡಿಕೊಳ್ಳುತ್ತಿದ್ದರು. ಅಂಥ ಯೋಚನೆಗಳು ಸುಳಿದಾಗಲೆಲ್ಲ ಅವರ ಗಮನವು ಶ್ವೇತಾಳತ್ತ ಹರಿಯುತ್ತಿತ್ತು. ಅವಳನ್ನು ತನ್ನ ಮಗಳಂತೆಯೇ ಪೋಷಿಸತೊಡಗಿದರು. ಹೆಲೆನಾಬಾಯಿಯ ಪ್ರೀತಿ, ಅಭಿಮಾನ ಶ್ವೇತಾಳಿಗೂ ಹೆತ್ತವರ ಕೊರತೆಯನ್ನು ನೀಗಿಸುತ್ತಿತ್ತು. ಅವಳು ಕೂಡಾ ಅವರನ್ನು ಬಹಳವಾಗಿ ಹಚ್ಚಿಕೊಂಡಿದ್ದಳು. ಹೀಗಾಗಿ ಹೆಲನಾಬಾಯಿಯ ಮಗ ಪೆಲಿಕ್ಸನ ಮಕ್ಕಳೊಂದಿಗೆ ಅನ್ಯೋನ್ಯವಾಗಿ ಬೆರೆತು ಅವರ ಮನೆಯಲ್ಲೇ ಹೆಚ್ಚಾಗಿ ಇರುತ್ತಿದ್ದಳು. ಆ ಮಕ್ಕಳೂ ಇವಳನ್ನು ಹಿರಿಯಕ್ಕನಂತೆ ಆದರಿಸುತ್ತ ಸದಾ ಇವಳಿಗೆ ಅಂಟಿಕೊoಡೇ ಇರುತ್ತಿದ್ದರು.
ತೋಮ ಈಗೀಗ ಹೆಲೆನಾಬಾಯಿಯವರ ಮನೆಗೂ, ಶೆಟ್ಟರ ತೋಟಕ್ಕೂ ಅಪರೂಪಕ್ಕೊಮ್ಮೆ ದುಡಿಯಲು ಹೋಗುತ್ತಿದ್ದ. ಹೀಗಾಗಿ ಅವರಲ್ಲೂ ಅವನ ಮೇಲೆ ಆದರಾಸಕ್ತಿ ಸಂಪೂರ್ಣ ಕುಂದಿತ್ತು. ಅದರೊಂದಿಗೆ ಹೆಂಡತಿಯ ನಿರಂತರ ಅಸಡ್ಡೆ ಮತ್ತು ತಿರಸ್ಕಾರವೂ ಸೇರಿ ಅವನು ಮೂರು ಹೊತ್ತೂ ಕುಡಿಯುತ್ತ ಅದರ ದಾಸನಾಬಿಟ್ಟಿದ್ದ. ಜೊತೆಗೆ ಅವನು ತನಗೊಬ್ಬಳು ಪ್ರಾಯಕ್ಕೆ ಬಂದ ಮಗಳಿದ್ದಾಳೆ ಎಂಬುದನ್ನೂ ಮರೆತು ದುಡಿದ ದುಡ್ಡಿನಲ್ಲಿ ಚೆನ್ನಾಗಿ ಕುಡಿದು ಬಂದು ಪ್ರೇಮಾಳೊಡನೆ ಹಿಂದಿನoತೆಯೇ ಜಗಳ ಕಾಯುವುದೋ ಅಥವಾ ಬೋಧ ತಪ್ಪಿ ಎಲ್ಲಾದರೂ ಬಿದ್ದುಕೊಳ್ಳುವುದೋ ಅವನ ದಿನಚರಿಯಾಗಿತ್ತು. ಇತ್ತ ಪ್ರೇಮಾಳ ಕುಡಿತವೂ ಮಿತಿಮೀರಿತ್ತು. ಆದರೆ ಅವಳಲ್ಲಿ ತನ್ನ ಮಗಳ ಕುರಿತು ಆಗಾಗ ಅನುಕಂಪ, ಕೊರಗು ಮೂಡುತ್ತಿತ್ತು. ತನ್ನ ಬದುಕಿನಂತೆ ಅವಳ ಬಾಳು ಹಾಳಾಗಬಾರದು ಎಂದುಕೊಳ್ಳುತ್ತಿದ್ದಳು. ಆಗೆಲ್ಲ ಹೆಲೆನಾಬಾಯಿ ಅವಳನ್ನು ಬಹಳ ಜೋಪಾನ ಮಾಡುತ್ತಿದ್ದುದನ್ನು ಕಾಣುತ್ತಿದ್ದವಳಿಗೆ ಅವರ ಮೇಲೆ ಅಪಾರ ಕೃತಜ್ಞತೆ ಪುಟಿಯುತ್ತಿತ್ತು. ಜೊತೆಗೆ ತನ್ನ ರಕ್ತ ಸಂಬoಧಿಕರೆಲ್ಲರೂ ಹತ್ತಿರದಲ್ಲೇ ಇದ್ದಾರೆ. ಹಾಗಾಗಿ ತಾನು ಇವತ್ತಲ್ಲ ನಾಳೆ ಮಗಳನ್ನು ಅವರಿಗೊಪ್ಪಿಸಬೇಕು ಎಂದೂ ಯೋಚಿಸುತ್ತಿದ್ದಳು. ಆದರೆ ಅವರಲ್ಲಿ ಯಾರೊಬ್ಬರೂ ತನ್ನ ಮಗಳನ್ನು ಅವರ ವಂಶದ ಕುಡಿ ಎಂಬ ಆಸ್ಥೆಯಿಂದ ಒಮ್ಮೆಯೂ ಕಣ್ಣೆತ್ತಿ ನೋಡದಿದ್ದುದು ಅವಳಲ್ಲಿ ತೀವ್ರ ನಿರಾಶೆಯನ್ನೂ ಮೂಡಿಸುತ್ತಿತ್ತು. ಆದರೆ ‘ಅದಕ್ಕೆಲ್ಲ ಕಾರಣ ನೀನೇ ಅಲ್ಲವಾ…?’ ಎಂದು ಅವಳ ಅಂತರoಗವು ಚುಚ್ಚಿ ಹೇಳುತ್ತಿತ್ತು. ಅಂಥ ಹೊತ್ತಿನಲ್ಲಿ ಹೆಲೆನಾಬಾಯಿಯ ಶುದ್ಧ ಹಣ್ಣು ಹಂಪಲಿನ ಮತ್ತು ದುರ್ಬಲ ನಶೆಯನ್ನು ಬೀರುವಂಥ ಸಾರಾಯಿಯು ಅವಳ ದುಃಖವನ್ನು ನಿವಾರಿಸುವಲ್ಲಿ ನಿಷ್ಫಲವಾಗುತ್ತಿತ್ತು. ಹಾಗಾಗಿಯೇ ಅವಳೊಮ್ಮೆ ಆಂಥೋನಿ ಮತ್ತು ತಾಮಸರ ಮನೆಯತ್ತ ಮುಖ ಮಾಡಿದಳು. ಅವರು ತಯಾರಿಸುವ, ಮೂತಿ ಹಿಂಡಿಸಿ, ಹೊಟ್ಟೆ ಕತ್ತರಿಸುವಂಥ ಖಡಕ್ ಕಂಟ್ರಿಯನ್ನು ಕುಡಿಯುವ ಆಸೆಯಿಂದ ಹೋದವಳು ನಂತರ ಹೆಲೆನಬಾಯಿಯ ಸಾರಾಯಿಯತ್ತ ಕಣ್ಣೆತ್ತಿಯೂ ನೋಡಲಿಲ್ಲ.
(ಮುಂದುವರೆಯುವುದು)

Related posts

ವಿವಶ

Chandrahas

ವಿವಶ…

Mumbai News Desk

ವಿವಶ….

Chandrahas

ವಿವಶ..

Mumbai News Desk

ವಿವಶ…

Mumbai News Desk

ವಿವಶ…

Chandrahas