April 2, 2025
ಧಾರಾವಾಹಿ

ವಿವಶ..

ಧಾರವಾಹಿ 40
ಶೆಟ್ಟರ ತೋಟದ ಕೆಲಸಕ್ಕೆ ಸೇರಿದ ಲಕ್ಷ್ಮಣ ಹುರುಪಿನಿಂದ ದುಡಿಯತೊಡಗಿದ. ಸಂಜೆ ಕೆಲಸ ಮುಗಿಸಿ ಮನೆಗೆ ಬರುವವನು ಚಹಾ ಕುಡಿದು ಒಂದೆರಡು ಗಳಿಗೆ ವಿಶ್ರಾಂತಿ ಪಡೆಯುತ್ತಿದ್ದ. ಬಳಿಕ ಹೆಂಡತಿಯೊoದಿಗೆ ಕುಳಿತು ಬೀಡಿಗೆ ಎಲೆ ಕತ್ತರಿಸುವುದು, ಅವಳು ಕಟ್ಟಿದ ಬೀಡಿಗೆ ನೂಲು ಹಾಕುವುದು, ಬೀಡಿಯ ಮೂತಿಗೆ ನಕ್ಕಿ ಹಾಕುವುದು ಮತ್ತು ಕಟ್ಟಿದ ಬೀಡಿಗಳನ್ನು ಎಣಿಸಿ ಇಪ್ಪತ್ತೆöÊದರ ಕಟ್ಟು ಕಟ್ಟುವುದನ್ನೆಲ್ಲ ಮುತುವರ್ಜಿಯಿಂದ ಮಾಡುತ್ತ ಪುಟ್ಟ ಸಂಸಾರದೊoದಿಗೆ ಅನ್ಯೋನ್ಯವಾಗಿ ಬದುಕಲಾರಂಭಿಸಿದ. ಹೀಗಿದ್ದವನಿಗೆ ಶೆಟ್ಟರ ಹಿಂದಿನ ಶೆಡ್ಡಿನ ಶೀನುನಾಯ್ಕ ಬಹಳ ಬೇಗನೇ ಆತ್ಮೀಯನಾಗಿಬಿಟ್ಟ. ಮಕ್ಕಳು ಮರಿಗಳಿಲ್ಲದ ಶೀನನು ನಿತ್ಯ ಕುಡುಕ. ಅವನಿಗೆ ಒಂದಿಷ್ಟು ಹೊಟ್ಟೆಗಿಳಿಸದೆ ಒಂದು ಹುಲ್ಲುಕಡ್ಡಿಯನ್ನೂ ಅತ್ತಿಂದಿತ್ತ ಎತ್ತಿಡಲು ಸಾಧ್ಯವಿರಲಿಲ್ಲ. ಕುಡಿಯಲು ಕುಳಿತನೆಂದರೆ, ‘ಅಯ್ಯೋ…ಸಾಕು, ಸಾಕು ಮಾರಾಯಾ ಒಮ್ಮೆ ನಿಲ್ಲಿಸು! ಎಷ್ಟೂಂತ ಕುಡಿಯುತ್ತಿ…? ಸತ್ತುಗಿತ್ತು ಹೋದೀಯಾ…!’ ಎಂದು ಅಕ್ಕಪಕ್ಕದವರೋ ಅಥವಾ ಸಾರಾಯಿ ಮಾರುವವರೋ ಅವನನ್ನು ಎಚ್ಚರಿಸಬೇಕಿತ್ತು. ಆ ಮಟ್ಟಕ್ಕೆ ಅವನು ಅದರ ದಾಸನಾಗಿಬಿಟ್ಟಿದ್ದ. ವಿಚಿತ್ರವೆಂದರೆ ಅದೆಷ್ಟೇ ಕುಡಿದರೂ, ‘ತನಗಲ್ಲ!’ ಎಂಬoತಿದ್ದ ಅವನ ಕುಳ್ಳಗಿನ ಗುಂಡು ಗುಂಡಾದ ದೇಹಕ್ಕೆ ಅರವತ್ತು ಸಮೀಪಿಸಿದ್ದರೂ ಗಟ್ಟಿಮುಟ್ಟಾಗಿದ್ದ!
ಮಾಸಲು ಕಾವಿಬಣ್ಣದ ತುಂಡು ಲುಂಗಿಯೊoದು ಶೀನನ ಸೊಂಟವನ್ನು ಸದಾ ಬಿಗಿದಿರುತ್ತಿದ್ದು, ಕೆಲಸದ ವೇಳೆಯಲ್ಲೂ ಅದರೊಳಗೊಂದು ಸಾರಾಯಿ ಬಾಟಲಿಯು ಮುಕ್ಕಾಲು ತುಂಬಿಕೊoಡಿರುತ್ತಿತ್ತು. ಅವನು ಆಗಾಗ ಒಂದೆರಡು ಗುಟುಕು ಗಂಟಲಿಗಿಳಿಸಿ ಎಲೆಯಡಿಕೆ ಹಾಕಿಕೊಂಡು ಕೆಲಸಕ್ಕೆ ತೊಡಗುವುದನ್ನು ಗಮನಿಸುತ್ತಿದ್ದ ಲಕ್ಷ್ಮಣನಲ್ಲೂ ತನ್ನ ಹಳೆಯ ಆಸೆಯು ಹಸಿಯಾಗುತ್ತಿತ್ತು. ಹಿಂದೆ ಉಸ್ಮಾನ್ ಸಾಹೇಬರೊಡನೆ ಕುಳಿತು ಅದ್ಭುತ ನಶೆಯ ಫಾರಿನ್ ಮಾಲು ಹೀರುತ್ತಿದ್ದವನ ಅಭ್ಯಾಸವನ್ನು ಹತ್ತು ವರ್ಷಗಳ ಜೈಲು ವಾಸವು ಸಂಪೂರ್ಣವಾಗಿ ಚಿವುಟಿ ಹಾಕಿತ್ತು. ಆದರೆ ಇಲ್ಲಿ ಗಂಗರಬೀಡಿನ ಚಿತ್ರಣವೇ ಬೇರಿತ್ತು. ಬ್ರಾಹ್ಮಣರ ಮತ್ತಿತರ ಕೆಲವೇ ಕುಟುಂಬಗಳನ್ನು ಹೊರತು ಪಡಿಸಿದರೆ ಉಳಿದ ಬಹುತೇಕ ಮನೆಗಳಲ್ಲಿ ಹಗಲು ರಾತ್ರಿಯೆನ್ನದೆ ವಿವಿಧ ಬಗೆಯ ಕಂಟ್ರಿ ಸಾರಾಯಿ ಬೆಂದು ಕುದಿದು ಆವಿಯಾಗಿ ಮಡಕೆ ಮತ್ತು ಡ್ರಮ್ಮುಗಳಲ್ಲಿ ಶೇಖರಣೆಗೊಂಡು ಕೃಷ್ಣಾವತಾರದ ಕೊನೆಯ ದಿನಗಳಲ್ಲಿ ಯಾದವ ಕುಲದ ನಾಶಕ್ಕಾಗಿ ಶ್ರೀಕೃಷ್ಣನ ಆಜ್ಞೆಯಂತೆ ದುರ್ಗೆಯೇ ಮದಿರಾ ದೇವಿಯಾಗಿ ಇಡೀ ಊರನ್ನು ನಶೆಯ ಸಾಗರದಲ್ಲಿ ಮುಳುಗಿಸಿರುವಂತೆ ಇಲ್ಲೂ ಭಾಸವಾಗುತ್ತಿತ್ತು.
ಅಷ್ಟೇ ಯಾಕೆ ತನ್ನ ಈಗಿನ ಧಣಿ ಶೆಟ್ಟರು ಕೂಡಾ ಬಂಗಲೆಯ ಮೇಲು ಮಹಡಿಯ ಈಜುಕೊಳದ ಮುಂದೆ ಆರಾಮವಾಗಿ ಕುಳಿತುಕೊಂಡು ದುಬಾರಿ ಬೆಲೆಯ ರಮ್ಮು ವಿಸ್ಕಿ ಹೀರುತ್ತಿದ್ದುದನ್ನೂ ಕಾಣುತ್ತಿದ್ದ ಲಕ್ಷ್ಮಣನಲ್ಲಿ ಬರಬರುತ್ತ ಹಳೆಯ ಚಾಳಿಯು ಗರಿಗೆದರಿ ನರ್ತಿಸತೊಡಗಿತು. ಇವರೆಲ್ಲರ ನಡುವೆ ತಾನೊಬ್ಬನೇ ಶ್ರೀರಾಮಚಂದ್ರನoತಿರುವುದು ಯಾವ ಗಂಡಸುತನಕ್ಕೆ! ಎಂದು ಅವನು ಆಗಾಗ ವಿಚಲಿತನಾಗಿ ಯೋಚಿಸುತ್ತಿದ್ದ. ಅದಕ್ಕೆ ಸರಿಯಾಗಿ ಶೀನುನಾಯ್ಕನೂ ಮತ್ತಿತರ ಕೆಲಸದಾಳುಗಳೂ ಅವನನ್ನು ಆಗಾಗ ವ್ಯಂಗ್ಯವಾಗಿ ಗೇಲಿ ಮಾಡುತ್ತಿದ್ದುದೂ ಅವನ ತಲೆಚಿಟ್ಟು ಹಿಡಿಸಿತೋ ಅಥವಾ ಅವನೊಳಗಿನ ವಾಂಛೆಯೇ ತೀವ್ರವಾಗಿ ಬುಸುಗುಟ್ಟಿತೋ ಗೊತ್ತಿಲ್ಲ. ಆವತ್ತು ಬುಧವಾರ ಸಂಜೆ ತೋಟದಲ್ಲಿ ದುಡಿದ ಅರ್ಧ ವಾರದ ಮಜೂರಿಯು ಕೈ ಸೇರುತ್ತಲೇ ಆಂಥೋನಿ ಪರ್ಬುವಿನ ಮನೆಯತ್ತ ಹೊರಟಿದ್ದ ಶೀನುನಾಯ್ಕನನ್ನು ಗಟ್ಟಿ ಮನಸ್ಸು ಮಾಡಿ ಹಿಂಬಾಲಿಸಿದ. ಅದಕ್ಕೊಪ್ಪದ ಅವನು ಬೇಡಬೇಡವೆಂದರೂ ಕೇಳದೆ ಬೆನ್ನುಹತ್ತಿದ.


ಅದು ಗಂಗರಬೀಡಿನಾದ್ಯoತ ಬಣ್ಣಬಣ್ಣದ ಗೇರುಹಣ್ಣುಗಳು ಹಣ್ಣಾಗುವ ಪರ್ವಕಾಲ. ಆ ಒಂದೆರಡು ತಿಂಗಳು ಆಂಥೋನಿ ಮತ್ತು ತಾಮಸರು ತಮ್ಮ ತೋಟದ ಹಾಗೂ ಆಸುಪಾಸಿನ ಕೆಲವು ತೋಟಗಳ ಗೋವೆಹಣ್ಣುಗಳನ್ನು ವಹಿಸಿಕೊಂಡು ಸೊಗಸಾದ ಕಂಟ್ರಿ ಸಾರಾಯಿ ತಯಾರಿಸುತ್ತಿದ್ದರು. ಪ್ರತೀ ವರ್ಷ ಗೇರುಗಣ್ಣಿನ ಸಮಯದಲ್ಲಿ ಆಂಥೋನಿ, ತಾಮಸರು ತಯಾರಿಸುವ ಸಾರಾಯಿಗೆ ವಿಶೇಷ ರುಚಿ ಮತ್ತು ಭವ್ಯ ನಶೆಯಿರುತ್ತದೆ ಹಾಗೂ ಆ ಸಾರಾಯಿ ಆರೋಗ್ಯಕ್ಕೂ ತುಂಬಾ ಒಳ್ಳೆಯದು ಮಾತ್ರವಲ್ಲದೇ ದಿನವಿಡೀ ದುಡಿದು ಹೈರಾಣಾಗುವ ದೇಹಗಳ ನೋವು ಮತ್ತು ಬಳಲಿಕೆಯನ್ನು ಅದು ತಟ್ಟನೆ ಹಗುರವಾಗಿಸುತ್ತ ಸುಖನಿದ್ರೆಯನ್ನೂ ಕರುಣಿಸುತ್ತದೆ. ಅದಕ್ಕಾಗಿಯೇ ಆ ವಿಶೇಷ ಪೇಯವನ್ನು ಎಲ್ಲರೂ ಕುಡಿಯಲೇಬೇಕು! ಎಂಬ ಜಾಹಿರಾತನ್ನು ಗಂಗರಬೀಡಿನ ಅನುಭಾವಿ ಕುಡುಕರು ಮತ್ತು ಯುವ ಕುಡುಕರೆಲ್ಲರೂ ಬಲವಾಗಿ ನಂಬಿದ್ದರಲ್ಲದೇ ಅದನ್ನೇ ಊರಿನಾದ್ಯಂತ ಪ್ರಚಾರ ಪಡಿಸುತ್ತಲೂ ಬರುತ್ತಿದ್ದರು. ಆದರೆ ಆಂಥೋನಿ, ತಾಮಸರ ಸಾರಾಯಿಯಲ್ಲಿ ಅಂಥ ವಿಚಿತ್ರ ರುಚಿ ಹಾಗೂ ವಿಪರೀತ ಅಮಲು ಹುಟ್ಟಲು ಮುಖ್ಯ ಕಾರಣ, ಅವರು ಗೋವೆ ಹಣ್ಣುಗಳೊಂದಿಗೆ ಬಳಸುತ್ತಿದ್ದ ಅಮೋನಿಯಮ್ ಸಲ್ಫೇಟ್, ಬ್ಯಾಟರಿ ಶೆಲ್ಲಿನ ಕಪ್ಪು ಪುಡಿ ಮತ್ತು ಕೋಳಿಯ ಹೇಲು ಎಂಬುದು ಯಾರಿಗೂ ಗೊತ್ತಿರಲಿಲ್ಲ. ಹಾಗಾಗಿ ಅವರ ಸಾರಾಯಿಗೆ ಇನ್ನಿಲ್ಲದ ಬೇಡಿಕೆ ಇರುತ್ತಿತ್ತು.
ಆವತ್ತು ಆಂಥೋನಿ ಸಂಜೆಯ ಮಬ್ಬು ಬೆಳಕಿನಲ್ಲಿ, ಕಪ್ಪು ಬಿಳುಪಿನ ಚಚ್ಚೌಕಳಿಯ ದೊಗಳೆ ಚಡ್ಡಿಯನ್ನು ತೊಟ್ಟು, ಆಕಾಶ ನೀಲಿ ಬಣ್ಣದ ಹಳೆಯಂಗಿ ಧರಿಸಿ, ಹೆಗಲ ಮೇಲೊಂದು ಬಣ್ಣ ಮಾಸಿದ ಬೈರಾಸನ್ನು ನೇತುಹಾಕಿಕೊಂಡು ಮನೆಯ ಹಿಂದಿನ ಜಗುಲಿಯಲ್ಲಿ ಕುಳಿತು ಗಿರಾಕಿಗಳಿಗೆ ಬೆಳ್ಳಗಿನ ಪ್ಲಾಸ್ಟಿಕ್ ಡ್ರಮ್ಮಿನಿಂದ ಸಾರಾಯಿ ಬಸಿಬಸಿದು ಕೊಡುತ್ತ ವ್ಯಾಪಾರದಲ್ಲಿ ಮಗ್ನನಾಗಿದ್ದ. ಆಗ ಅವನ ದೃಷ್ಟಿಯು ಪಕ್ಕನೆ ಶೀನು ನಾಯ್ಕನೊಂದಿಗೆ ಬಂದ ಹೊಸ ಗಿರಾಕಿ ಲಕ್ಷ್ಮಣನ ಮೇಲೆ ಬಿತ್ತು. ಲಕ್ಷ್ಮಣನನ್ನು ಅವನು ಈ ಮೊದಲು ಒಂದೆರಡು ಬಾರಿ ದೂರದಿಂದ ಕಂಡಿದ್ದನಾದರೂ ಮಾತಾಡಿ ಪರಿಚಯವಿರಲಿಲ್ಲ. ಅವನು ಜೈಲಿಗೆ ಹೋಗಿ ಬಂದವನೆoಬುದೂ ಗೊತ್ತಿದ್ದುದರಿಂದ ಸಣ್ಣದೊಂದು ಅಧೀರತೆಯೂ, ಗಂಡು ಸಹಜವಾದೊಂದು ಅಸೂಯೆಯೂ ಅವನಲ್ಲಿ ಹುಟ್ಟಿತ್ತು.
‘ಓಹೋ, ಲಕ್ಷ್ಮಣನಾ ಮಾರಾಯಾ…? ಬಾ, ಬಾ….! ನಿನ್ನ ಬಗ್ಗೆ ಕಂಡಾಬಟ್ಟೆ ಕೇಳಿದ್ದೇನೆ ಮಾರಾಯಾ! ಆದರೆ ಈತನಕ ಮಾತಾಡುವ ಅವಕಾಶ ಸಿಗಲಿಲ್ಲ ನೋಡು… ಮತ್ತೆ ಹೇಗಿದ್ದೀ…?’ ಎಂದು ಆತ್ಮೀಯತೆಯೊಂದಿಗೆ ವ್ಯಂಗ್ಯವನ್ನು ಬೆರೆಸಿಯೇ ವಿಚಾರಿಸಿದ. ಅದನ್ನು ಗ್ರಹಿಸಿದ ಲಕ್ಷ್ಮಣ ತುಸು ವಿಚಲಿತನಾದ. ‘ಹೌದಾ, ಪರ್ಬುಗಳೇ…! ಆದರೆ ನಾನು ನಿಮ್ಮೂರಿಗೆ ಇತ್ತೀಚೆಗಷ್ಟೇ ಬಂದವನು. ಹೀಗಿರುವಾಗ ನನ್ನ ಬಗ್ಗೆ ನೀವು ಏನು ಕೇಳಿದ್ದೀರೋ…?’ ಎಂದ ನಗುತ್ತ.
‘ಅರೆರೇ, ಅದನ್ನೆಲ್ಲ ತಿಳಿದುಕೊಳ್ಳಲು ಎಷ್ಟು ಸಮಯ ಬೇಕು ಮಾರಾಯಾ…? ನೀನು ಬಂದ ಮೂರೇ ದಿನದಲ್ಲಿ ನಿನ್ನ ಜಾತಕವು ಇಡೀ ಊರಿಗೆ ಗೊತ್ತಾಗಿಬಿಟ್ಟಿದೆ ಬಿಡು!’ ಎಂದು ಮತ್ತೆ ಅಸಡ್ಡೆಯಿಂದ ಹೇಳಿದ. ಆಗ ಲಕ್ಷ್ಮಣ ಹುಬ್ಬುಗಂಟಿಕ್ಕುತ್ತ ಶೀನುನಾಯ್ಕನನ್ನು ದಿಟ್ಟಿಸಿದ. ಅವನು ಕಕ್ಕಾಬಿಕ್ಕಿಯಾಗಿ, ‘ಹೇ…! ನೀನೆಂತದು ಮಾರಾಯಾ ನನ್ನನ್ನು ಕೆಕ್ಕರಿಸುವುದು? ನಾನೇನೂ ಹೇಳಲಿಲ್ಲ ಆಯ್ತಾ…!’ ಎನ್ನುತ್ತ ನಕ್ಕ.
‘ಅಲ್ಲ ಮಾರಾಯಾ, ಹೋಗಿ ಹೋಗಿ ಆ ಉಸ್ಮಾನ್ ಸಾಹೇಬನ ಸಹವಾಸ ಮಾಡುವುದಾ ನೀನು…? ಅವ ನಿನ್ನಂಥ ಎಷ್ಟು ಜನರನ್ನು ಲಗಾಡಿ ತೆಗೆದಿದ್ದಾನೆಂದು ನಮಗೆ ಗೊತ್ತುಂಟು. ಒಮ್ಮೆ ಅವ ನನ್ನ ಹತ್ರನೂ ಮರದ ವ್ಯಾಪಾರಕ್ಕೆ ಬಂದಿದ್ದ. ಆದರೆ ಮಾತುಕತೆಯ ಮಧ್ಯೆ ಏನೋ ಒಡಪೆ (ಉಡಾಫೆ) ಮಾತಾಡಿದ. ನಾನೂ, ತಮ್ಮನೂ ಸೇರಿ ಅವನ ಇಬ್ಬರು ಭಂಟರನ್ನು ಹಿಡ್ಕೊಂಡು ಕೊಟ್ಟದ್ದುಂಟಲ್ಲವಾ, ಆವತ್ತು ಓಡಿ ಹೋದವನು ಆಮೇಲೆ ಇತ್ತ ತಲೆ ಹಾಕಿ ಮಲಗಿರಲಿಕ್ಕಿಲ್ಲ ನೋಡು!’ ಎಂದ ಆಥೋನಿಯು, ‘ಹೇ, ನಿನ್ನ ಮಾಜಿ ಧಣಿಗೇ ಇಕ್ಕಿದವರು ನಾವು. ಇನ್ನು ನೀನ್ಯಾವ ಲೆಕ್ಕನೋ ನಮಗೆ…?’ ಎಂಬoಥ ಭಾವದಿಂದ ಹೇಳಿದವನು ತಕ್ಷಣ, ‘ಅದೆಲ್ಲ ಹಳೆಯ ಕಥೆ ಮಾರಾಯ. ಈಗ ನೀನು ನಮ್ಮೂರಿಗೆ ಬಂದಾಯ್ತತಲ್ಲವಾ ಇನ್ನು ನಿಶ್ಚಿಂತೆಯಿoದಿರು. ನಮಗೂ ಕೆಲವೊಮ್ಮೆ ನಿನ್ನಂಥವನ ಅಗತ್ಯ ಬೀಳುವುದುಂಟು. ಯಾಕೆಂದರೆ, ಒಂದಷ್ಟು ಸರಕಾರಿ ಮೃಗಗಳು ಕೆಲವೊಮ್ಮೆ ಮಂಡೆ ಹಾಳಾಗಿ ನಮ್ಮಲ್ಲಿಗೆ ರೈಡಿಗೆ ಬರುವಾಗ ಅವರ ಸೊಂಟ ಮುರಿಯಲು ನಿನ್ನ ಹಾಗೆ ಗಟ್ಟಿಗನೇ ಬೇಕಾಗುತ್ತದೆ. ಹ್ಞಾಂ! ಆದರೆ ನಾವು ಉಸ್ಮಾನ್ ಸಾಹೇಬನಂಥವರಲ್ಲ ಮಾರಾಯಾ. ನಮ್ಮನ್ನು ನಂಬಿದವರನ್ನು ಕೈಬಿಡುವ ಗುಣ ನಮ್ಮ ರಕ್ತದಲ್ಲೇ ಇಲ್ಲ ನೋಡು. ನೀನು ನಮಗಾದರೆ ನಾವು ನಿನಗೆ ಎಂಬoಥವರು ನಾವು!’ ಎಂದ ಗತ್ತಿನಿಂದ. ಇತ್ತ ಗೋವೆಹಣ್ಣಿನ ಸಾರಾಯಿಯನ್ನು ಗುಟುಕು ಗುಟುಕಾಗಿ ಹೀರಿ ಅಮಲೇರಿಸಿಕೊಳ್ಳುತ್ತಿದ್ದ ಲಕ್ಷ್ಮಣನಿಗೆ ಆಂಥೋನಿಯ ಮಾತುಗಳಲ್ಲಿ ಆತ್ಮೀಯತೆ ಮಾತ್ರ ಎದ್ದು ಕಾಣಿಸುತ್ತಿತ್ತು.
ಅಷ್ಟರಲ್ಲಿ, ‘ಹೇ, ಲಚ್ಚಾ… ಸಾಕು ಎದ್ದೇಳು ಮಾರಾಯಾ, ನಿನ್ನ ಹೆಂಡತಿ ಪಾಪ ಕಾಯುತ್ತಿರಬಹುದು. ಹ್ಞೂಂ ಹೊರಡುವ…!’ ಎಂದ ಶೀನುನಾಯ್ಕ ತೂರಾಡುತ್ತ ಎದ್ದವನು, ‘ಇನ್ನು ನನ್ನೊಟ್ಟಿಗೆ ಹೋಗಿ ಕುಡಿದು ಬಂದೆ ಅಂತ ಮಾತ್ರ ಸರೋಜಾಳೊಡನೆ ಹೇಳಬೇಡ ಮಾರಾಯಾ…!’ ಎನ್ನುತ್ತ ತನ್ನ ಕುಂಡೆಗೆ ಅಂಟಿಕೊoಡಿದ್ದ ಒಣಮಡಲಿನ ಚೂರುಗಳನ್ನು ತಟಪಟನೆ ಕೊಡವಿಕೊಂಡು ಮುನ್ನಡೆದ. ಲಕ್ಷ್ಮಣನೂ ಒಲ್ಲದ ಮನಸ್ಸಿನಿಂದ ಏಳುತ್ತ, ‘ನೀವೊಬ್ಬರು ಸುಮ್ಮನಿರಿ ಶೀನಣ್ಣಾ…ನನಗೇನು ಅಷ್ಟೂ ಬುದ್ಧಿಯಿಲ್ಲವಾ…?’ ಎಂದವನು ಆಂಥೋನಿಗೆ ಹಣಕೊಟ್ಟು ತಾಳ ತಪ್ಪುತ್ತಿದ್ದ ತನ್ನ ಹೆಜ್ಜೆಗಳನ್ನು ಸ್ಥಿಮಿತಕ್ಕೆ ತಂದುಕೊಳ್ಳುತ್ತ ಸಾಗಿದ. ಶೀನನಾಯ್ಕ ಅವನ ರಟ್ಟೆಯನ್ನು ಹಿಡಿದುಕೊಂಡು ಓಲಾಡುತ್ತ ಹೊರಟ. ಒಂದು ಗಳಿಗೆಯಲ್ಲಿ ಲಕ್ಷ್ಮಣನ ಶೆಡ್ಡಿನ ಸ್ವಲ್ಪದೂರದ ಗುಡ್ಡೆಗೆ ಬಂದು ನಿಂತ ಶೀನುನಾಯ್ಕನು ರಪ್ಪನೆ ಲಕ್ಷ್ಮಣನ ರಟ್ಟೆಯನ್ನು ಬಿಟ್ಟು ತನ್ನ ಶೆಡ್ಡಿನತ್ತ ಮುಖ ಮಾಡಿದವನು, ‘ನೀರ ಬಿಟ್ಟು ನೆಲದ ಮೇಲೆ ದೋಣಿ ಓಗದು…ನೆಲವ ಬಿಟ್ಟು ನೀರ ಮೇಲೆ ಬಂಡಿ ಓಗದು……!’ ಎಂದು ತನ್ನ ಗೊಗ್ಗರು ಕಂಠದಿoದ, ರಸವತ್ತಾದ ಹಾಡನ್ನು ಹರಿದು ಚಿಂದಿ ಮಾಡಿ ಹಾಡುತ್ತ ಕಣ್ಮರೆಯಾದ.
ಲಕ್ಷ್ಮಣ ಆ ದಟ್ಟ ಕತ್ತಲಲ್ಲಿ ತನ್ನ ಮನೆಯ ದಾರಿಯನ್ನು ಕಷ್ಟಪಟ್ಟು ಪತ್ತೆ ಹಚ್ಚುತ್ತ ನಡೆದ. ಸರೋಜ ಅಂಗಳದಲ್ಲಿ ಚಿಮಿಣಿ ದೀಪವಿಟ್ಟು ಮಗಳೊಂದಿಗೆ ಕುಳಿತು ಗಂಡನನ್ನು ಕಾಯುತ್ತಿದ್ದಳು. ಅವಳ ಮನಸ್ಸು ತೀವ್ರ ಆತಂಕಗೊoಡಿತ್ತು. ದೀಪದ ಮಿಣಮಿಣ ಬೆಳಕು ಲಕ್ಷ್ಮಣನಿಗೆ ತನ್ನ ಶೆಡ್ಡಿನ ದಿಕ್ಕನ್ನು ತೋರಿಸಿತು. ತೂರಾಡುತ್ತ ಅಂಗಳಕ್ಕೆ ಬಂದವನು ದೊಪ್ಪನೆ ಕುಸಿದುಬಿದ್ದ. ಸರೋಜ ಭಯದಿಂದ ಕಂಪಿಸಿಬಿಟ್ಟಳು. ಆದರೂ ಸಂಭಾಳಿಸಿಕೊoಡು ಅಮ್ಮ ಮಗಳಿಬ್ಬರೂ ಧಾವಿಸಿ ಹೋಗಿ ಅವನನ್ನು ಎಬ್ಬಿಸಲೆತ್ನಿಸಿದರು. ಆದರೆ ಹೆಣಭಾರದಂತಿದ್ದ ಅವನನ್ನೆತ್ತಲು ಸಾಧ್ಯವಾಗದೆ, ‘ಅಯ್ಯಯ್ಯೋ…! ತೋಮಣ್ಣ, ಪ್ರೇಮಕ್ಕಾ ಸ್ವಲ್ಪ ಹೊರಗೆ ಬನ್ನಿ ಮಾರಾಯ್ರೇ…!’ ಎಂದು ಸರೋಜ ಬೊಬ್ಬಿಟ್ಟಳು. ಮರುಕ್ಷಣ ಗಂಡನ ಬಾಯಿಯಿಂದ ಕಂಟ್ರಿಯ ದುರ್ವಾಸನೆ ಅವಳ ಮೂಗಿಗೆ ಘಮ್ಮನೆ ಬಡಿಯಿತು. ಅಷ್ಟರವರೆಗೆ ಅವನನ್ನು ಆನಿಸಿ ಹಿಡಿದ್ದವಳು ಹತಾಶೆಯಿಂದ ರಪ್ಪನೆ ಅವನೊಂದಿಗೇ ಕುಸಿದು ಕುಳಿತಳು. ಪ್ರಮೀಳಾಳ ಅಳು ತಾರಕಕ್ಕೇರಿತು. ಅತ್ತ ಹದವಾಗಿ ಅಮಲೇರಿದ್ದ ಪ್ರೇಮಾಳಿಗೆ ಸರೋಜಾಳ ಕೂಗು ನಿಧಾನವಾಗಿ ಕೇಳಿಸಿತು. ಅವಳು ಗಡದ್ದಾಗಿ ಕುಡಿದು ಮೈಚೆಲ್ಲಿ ಮಲಗಿ ಗೊಣಗುಟ್ಟುತ್ತಿದ್ದ ತೋಮನನ್ನು ತಿವಿದೆಬ್ಬಿಸಿದಳು. ಅವನು ತೂರಾಡುತ್ತ ಎದ್ದವನು ಪ್ರೇಮಾಳೊಂದಿಗೆ ಹೊರಗೆ ಬಂದ. ಮೂವರೂ ಸೇರಿ ಲಕ್ಷ್ಮಣನನ್ನು ಹೊತ್ತೊಯ್ದು ಶೆಡ್ಡಿನೊಳಗೆ ಮಲಗಿಸಿದರು.
‘ಅಯ್ಯೋ, ದೇವರೇ…! ಈ ವಠಾರದಲ್ಲಿ ಇವನೊಬ್ಬ ಸರಿಯಿದ್ದ. ಇವನೂ ಹಾಳಾಗಿ ಹೋದನಾ…? ಆಯ್ತು, ಇವತ್ತಿಗೆ ಎಲ್ಲಾ ಮುಗಿದು ಹೋಯಿತು. ಆ ಬೇವರ್ಸಿ ಪರ್ಬುವಿನ ಸಂತಾನ ನಿಸ್ಸಂತಾನವಾಗಿ ಹೋಗಲಿ ಆಚೇಗೆ…!’ ಎಂದು ಪ್ರೇಮ ಆಕ್ರೋಶದಿಂದ ಶಪಿಸುತ್ತ ತನ್ನ ಶೆಡ್ಡಿನತ್ತ ನಡೆದಳು. ಅಷ್ಟರಲ್ಲಿ ರಪ್ಪನೆ ಅವಳ ಕೆನ್ನೆಗೊಂದೇಟು ಅಪ್ಪಳಿಸಿಬಿಟ್ಟಿತು. ‘ನೀನು ಆ ಪಾಪದ ಪರ್ಬುಗಳನ್ನು ಯಾಕೆ ಬಯ್ಯುತ್ತಿಯನಾ ರಂಡೆ…? ಅವರೇನು ಇವನ ಮನೆಗೆ ಬಂದು ಎಳೆದುಕೊಂಡು ಹೋಗಿ ಕುಡಿಸಿದರಾ…? ಇವನಿಗೆ ಕುಡಿಯಲಿಕ್ಕಿತ್ತು ಹೋಗಿ ಕುಡಿದ. ಅದರಲ್ಲಿ ಅವರದೇನು ತಪ್ಪುಂಟು? ನೀನೀಗ ಮರ್ಯಾದೆಯಿಂದ ಹೋಗಿ ಬಿದ್ದುಕೋ ನಾಯಿ…!’ ಎಂದು ಒರಟಾಗಿ ಬೈದ ತೋಮ ಮತ್ತೆ ಹೊಡೆಯಲು ಮುಂದಾದ.
ಅಷ್ಟರಲ್ಲಿ ಪ್ರೇಮಾಳೂ ಕೆರಳಿದವಳು ರಪ್ಪನೆ ಅತ್ತಿತ್ತ ಏನನ್ನೋ ಹುಡುಕಿದಳು. ದಪ್ಪನೆಯ ಹಸಿ ಕೊತ್ತಳಿಗೆಯ ತುಂಡೊoದು ಅವಳಿಗೆ ಕಂಡಿತು. ಅದನ್ನೆತ್ತಿಕೊಂಡವಳು, ‘ಥೂ! ನಾಯಿಯ ಮಗನೇ…! ನಿನಗೆ ದಿನಕ್ಕೆ ಮೂರು ಹೊತ್ತು ಕುಡಿಯಲು ನಾನೇ ತಂದುಕೊಡಬೇಕು. ಅದರ ಮೇಲೆ ನಿನ್ನಿಂದ ಏಟು ಬೇರೆ ತಿನ್ನಬೇಕಾ…!?’ ಎಂದಬ್ಬರಿಸಿದವಳು ರಪರಪನೆ ಅವನಿಗೆ ನಾಲ್ಕೇಟು ತದುಕಿಯೇಬಿಟ್ಟಳು. ಅದರಿಂದ ಅವನು ಮತ್ತಷ್ಟು ಕೆರಳಿ ಇವಳನ್ನು ಹಿಡಿದು ನೆಲಕ್ಕೆ ಕೆಡವಿದ. ಅಪ್ಪ ಅಮ್ಮನ ಕದನವನ್ನು ಕಂಡ ಶ್ವೇತಾ ಜೋರಾಗಿ ಬೊಬ್ಬಿಟ್ಟಳು. ಮನೆಯೊಳಗೆ ಗಂಡನ ಸಮೀಪ ತಲೆಗೆ ಕೈ ಹೊತ್ತು ಕುಳಿತು ದುಃಖಿಸುತ್ತಿದ್ದ ಸರೋಜಾಳಿಗೆ ಶ್ವೇತಾಳ ಅಳು ಕೇಳಿಸಿ ದಡಬಡನೆದ್ದು ಹೊರಗೆ ಧಾವಿಸಿದಳು. ಅಲ್ಲಿ ಅಂಗಳದಲ್ಲಿ ಕಾಡುಪ್ರಾಣಿಗಳಂತೆ ಧೂಳೆಬ್ಬಿಸುತ್ತ ಹೊರಳಾಡುತ್ತಿದ್ದ ಪ್ರೇಮ, ತೋಮನನ್ನು ಕಂಡವಳಿಗೆ ಸಹನೆ ತಪ್ಪಿಬಿಟ್ಟಿತು. ರುಮ್ಮನೆ ಹೋಗಿ ಇಬ್ಬರನ್ನೂ ಬಲವಾಗಿ ಕುಲುಕಿ ಬಿಡಿಸಿ ಪ್ರೇಮಾಳನ್ನು ಎಳೆದೊಯ್ದು ಮನೆಯೊಳಗೆ ತಳ್ಳಿ ಬಾಗಿಲು ಹಾಕಿದಳು. ಬಳಿಕ ತೋಮನತ್ತ ಬಂದು ದುರುಗುಟ್ಟುತ್ತ, ‘ನಿಮ್ಮ ದಮ್ಮಯ್ಯ ತೋಮಣ್ಣಾ…ಒಮ್ಮೆ ಸುಮ್ಮನಿರಿ ಮಾರಾಯ್ರೇ…! ನಿಮ್ಮ ಉಪಕಾರವೆಲ್ಲ ಬಂಜರವಾಯ್ತು!’ ಎಂದು ದೊಡ್ಡ ಸಪ್ಪಳದ ನಮಸ್ಕಾರವನ್ನು ಹೊಡೆದು ಮುಖ ಬಿಗಿದು ನಿಂತಳು. ತೋಮನಿಗೆ ಏನನಿಸಿತೋ? ಅವಳ ಕಣ್ಣು ತಪ್ಪಿಸಿ ಮೆಲ್ಲನೆ ತನ್ನ ಶೆಡ್ಡಿನತ್ತ ದೃಷ್ಟಿ ಹರಿಸುತ್ತ ನಡೆದವನು, ‘ಹೇ, ರಂಡೆ…! ನನಗೇ ಹೊಡೆದೆಯಲ್ಲಾ…! ನಿನಗಿದೆ ಇವತ್ತು…!’ ಎಂದು ಹೆಂಡತಿಯನ್ನು ಬೈಯ್ಯುತ್ತ ಶೆಡ್ಡಿನೊಳಗೆ ತೂರಿಕೊಂಡ.
ಲಕ್ಷ್ಮಣ ಮರಳಿ ಕುಡಿಯಲು ಆರಂಭಿಸಿದ್ದು ಸರೋಜಾಳಿಗೆ ದೊಡ್ಡ ಆಘಾತವಾಗಿತ್ತು. ಅವನು ಜೈಲಿನಿಂದ ಬಂದ ಮೇಲಾದರೂ ತಾವು ನೆಮ್ಮದಿಯಿಂದ ಬಾಳಬಹುದು! ಎಂದುಕೊoಡಿದ್ದವಳ ಸುಂದರ ಕಲ್ಪನೆ, ಕನಸುಗಳೆಲ್ಲ ನುಚ್ಚುನೂರಾಗಿದ್ದವು. ಆವತ್ತು ರಾತ್ರಿಯಿಡೀ ನಿದ್ದೆಯಿಲ್ಲದೆ ಅಳುತ್ತ ಹೊರಳಾಡಿದಳು. ಮುಂಜಾನೆ ಏಳುವ ಹೊತ್ತಿಗೆ ಅವಳ ಕಣ್ಣು ಕೆಂಪಾಗಿ ಬುರುಡೆ ಸಿಡಿಯುವಂಥ ತಲೆನೋವು ಕಾಡುತ್ತಿತ್ತು. ಆದರೂ ಎದ್ದು ಮನೆಗೆಲಸದಲ್ಲಿ ತೊಡಗಿದಳು. ಅಷ್ಟರಲ್ಲಿ ಲಕ್ಷ್ಮಣನೂ ಎದ್ದ. ಅಳುಕುತ್ತ ಹೋಗಿ ನಿತ್ಯಕರ್ಮ ಮುಗಿಸಿ ಬಂದವನು ಚಹಾ ಕುಡಿಯಲು ಕುಳಿತ. ಸರೋಜ ದುಗುಡದಿಂದಲೇ ಉಪಾಹಾರವನ್ನು ತಂದು ಅವನ ಮುಂದಿಟ್ಟವಳು, ‘ಯಾಕೆ ಮಾರಾಯ್ರೆ ಮತ್ತೆ ಆ ಹಾಳು ಚಟಕ್ಕೆ ಬಿದ್ದುಬಿಟ್ಟಿರೀ…? ನಿಮ್ಮ ಆ ದುರಾಭ್ಯಾಸದಿಂದ ಈಗಾಗಲೇ ನಾವೆಲ್ಲರೂ ಅನುಭವಿಸಿದ್ದು ಸಾಕಾಗಲಿಲ್ಲವಾ? ನಿಮ್ಮ ದಮ್ಮಯ್ಯ! ಇನ್ನು ಮುಂದೆ ಕುಡಿಯಬೇಡಿ ಮಾರಾಯ್ರೇ! ಜೀವನದಲ್ಲಿ ಸೋತು ಸುಣ್ಣವಾದವರು ನಾವು. ಆದರೂ ಆ ದೇವರು ಈಗಷ್ಟೆ ಮತ್ತೊಂದು ಅವಕಾಶವನ್ನು ಕೊಟ್ಟಿದ್ದಾನೆ. ಅದನ್ನು ನಮ್ಮ ಕೈಯಾರೆ ಹಾಳು ಮಾಡಿಕೊಳ್ಳುವುದು ಬೇಡ ಮಾರಾಯ್ರೇ. ನಿಮ್ಮ ಕಾಲು ಹಿಡಿದು ಕೇಳಿಕೊಳ್ಳುತ್ತೇನೆ. ಆ ಹೆಣ್ಣುಮಕ್ಕಳ ಮುಖವನ್ನಾದರೂ ನೋಡಿಕೊಂಡು ಆ ದರಿದ್ರದ ಚಟವನ್ನು ಬಿಟ್ಟುಬಿಡಿ!’ ಎಂದು ಗೋಗರೆಯುತ್ತ ಜೋರಾಗಿ ಅತ್ತಳು. ಆ ಕ್ಷಣಕ್ಕೆ ಲಕ್ಷ್ಮಣನಿಗೂ ತನ್ನ ತಪ್ಪಿನರಿವಾಗಿ ಕರುಳು ಚುರುಕ್ ಎಂದಿತು. ‘ತಪ್ಪಾಯ್ತು ಮಾರಾಯ್ತಿ! ಏನೋ ಮನಸ್ಸು ಕೇಳದೆ ಕುಡಿದುಬಿಟ್ಟೆ. ಇನ್ನು ಮುಂದೆ ಕುಡಿಯುವುದಿಲ್ಲ!’ ಎಂದು ದೇವರ ಮೇಲೆ ಆಣೆ ಮಾಡಿ ಅವಳನ್ನು ಸಂತೈಸಿದ. ಅದರಿಂದ ಸರೋಜಾಳಿಗೂ ನೆಮ್ಮದಿಯಾಯಿತು, ಗಂಡನ ಮೇಲೆ ನಂಬಿಕೆಯೂ ಬಂತು. ಆದರೆ ಮತ್ತೆ ಮೂರೇ ದಿನದಲ್ಲಿ ಲಕ್ಷ್ಮಣನನ್ನು ಆಂಥೋನಿ ಪರ್ಬುವಿನ ಮೈಕೈ ನೋವು ನಿವಾರಕ ಸಾರಾಯಿಯು ಕೈಬೀಸಿ ಕರೆಯಿತು. ಶನಿವಾರ ಸಂಜೆ ಗುಡ್ಡೆಯ ಹಾದಿಯಿಂದ ಮೆತ್ತಗೆ ಅತ್ತ ಹೋದವನು ಚೆನ್ನಾಗಿ ಕುಡಿದು ಮನೆಗೆ ಹಿಂದಿರುಗಿದ.
ಅದನ್ನು ಕಂಡ ಸರೋಜ ಮರಳಿ ನಿರಾಶಳಾದಳು. ಹಿಂದಿನoತೆಯೇ ಮರುದಿನವೂ ಗಂಡನನ್ನು ಕುಳ್ಳಿರಿಸಿಕೊಂಡು ಅಕ್ಕರೆಯಿಂದ ಬುದ್ಧಿ ಹೇಳಿ ಅಂಗಲಾಚಿ ಅತ್ತಳು. ಆಗಲೂ ಲಕ್ಷ್ಮಣನಿಗೆ ಪಶ್ಚಾತ್ತಾಪವಾಯಿತು. ‘ಇಲ್ಲ ಮಾರಾಯ್ತೀ, ಇನ್ನು ಮುಂದೆ ಜೀವ ಹೋದರೂ ಕುಡಿಯುವುದಿಲ್ಲ. ನನ್ನನ್ನು ನಂಬು!’ ಎಂದು ಮಗಳ ನೆತ್ತಿಯ ಮೇಲೆ ಕೈಯಿಟ್ಟು ಪ್ರಮಾಣ ಮಾಡಿದ. ಆಗಲೂ ಪಾಪದ ಹೆಣ್ಣು ಅವನನ್ನು ನಂಬಿಬಿಟ್ಟಳು. ಆದರೆ ಆ ಆಣೆಯೂ ಬಹಳ ದಿನ ಉಳಿಯಲಿಲ್ಲ. ಮಗದೊಂದು ದಿನವೂ ಲಕ್ಷ್ಮಣ ತೂರಾಡುತ್ತ ಬಂದ. ಆವತ್ತು ಸರೋಜ ಅವನ ಕಾಲು ಹಿಡಿದು ಬೇಡಿಕೊಂಡಳು. ಆದರೆ ಅದಕ್ಕೆ ಅವನ ಗೊಣಗಾಟ ಮತ್ತು ಕೊನೆಯಲ್ಲಿ ಮೌನವೇ ಉತ್ತರವಾಯಿತು. ಸರೋಜಾಳ ಅಳು, ಬುದ್ಧಿವಾದಗಳನ್ನೆಲ್ಲ ಆಂಥೋನಿಯ ಗೋವೆ ಸಾರಾಯಿಯು ಕ್ಷಣದಲ್ಲಿ ಅಳಿಸಿ ಬಿಡುವಂಥ ತೀಕ್ಷ÷್ಣ ರುಚಿಯನ್ನೂ, ವಿಶೇಷ ನಶೆಯನ್ನೂ ಹೊಂದಿತ್ತು. ಹಾಗಾಗಿ ಇನ್ನು ಮುಂದೆ ಇವನು ಯಾವತ್ತಿಗೂ ಒಬ್ಬ ಮನುಷ್ಯನಾಗಿ ಬಾಳಲಾರ! ಎಂದನ್ನಿಸಿದ ಅವಳಿಗೆ ಅವನ ಮೇಲೆ ರೋಸಿಬಿಟ್ಟಿತು. ಅಂದಿನಿoದ ಅವನೊಂದಿಗೆ ಇದ್ದೂ ಇಲ್ಲದಂತೆ ಬಾಳತೊಡಗಿದಳು.
ಹೆಂಡತಿ ತನ್ನೊಂದಿಗೆ ಮಾತು ಬಿಟ್ಟಿದ್ದು ಮತ್ತು ತನ್ನನ್ನು ಕಂಡಾಗಲೆಲ್ಲ ನಿರುತ್ಸಾಹ ತೋರತೊಡಗಿದ್ದೆಲ್ಲವೂ ಲಕ್ಷ್ಮಣನ ಗಮನಕ್ಕೂ ಬರುತ್ತಿತ್ತು. ಹಿಂದೆಲ್ಲ ಎಂಥ ಕೆಲಸವಿದ್ದರೂ ತನ್ನ ಊಟೋಪಚಾರದ ಹೊತ್ತಿಗೆ ಎಲ್ಲವನ್ನೂ ಬದಿಗಿಟ್ಟು ಪ್ರೀತಿಯಿಂದ ಬಡಿಸಿ ಎದುರು ಕುಳಿತು ಒಲವು ತೋರುತ್ತಿದ್ದವಳು ಈಗೀಗ ತಾನು ಊಟಕ್ಕೆ ಕುಳಿತಾಗ ಅನ್ನ ಮತ್ತು ಪದಾರ್ಥವನ್ನು ಬಡಿಸಿ ತಂದು ನನ್ನ ಮುಂದಿಟ್ಟು ಕಣ್ಣೆತ್ತಿಯೂ ನೋಡದೆ ಒಳಗೆ ನಡೆಯುತ್ತಿದ್ದುದು ಅವನನ್ನು ನೋಯಿಸುತ್ತಿತ್ತು. ಜೊತೆಗೆ ಇವತ್ತೂ ಅದೇ ರೀತಿ ನಡೆದಾಗ ಅವನು ಕೆಟ್ಟದಾಗಿ ಕೆರಳಿ, ‘ಏನಾ ರಂಡೆ…! ಕೊಬ್ಬಾ ನಿಂಗೆ…!’ ಎಂದು ಕೆಕ್ಕರಿಸುತ್ತ ಅಂದವನು, ‘ಹೆಂಗಸರನ್ನು ಎಲ್ಲಿಡಬೇಕೋ ಅಲ್ಲೇ ಇಡಬೇಕಿತ್ತು. ನಿನ್ನನ್ನು ತಲೆಯ ಮೇಲೆ ಹೊತ್ತುಕೊಂಡು ದೊಡ್ಡ ತಪ್ಪು ಮಾಡಿದೆ. ನಾನು ಗಂಡಸು ಮಾರಾಯ್ತೀ! ನಿನಗಿಂತ ಎರಡು ಪಟ್ಟು ಹೆಚ್ಚು ದುಡಿಯುವವನು. ನಿನ್ನ ಅಹಂಕಾರವನ್ನು ಕೆಲವು ದಿನದಿಂದಲೂ ನೋಡುತ್ತಿದ್ದೇನೆ. ನನ್ನ ಮೇಲೆ ಚೂರೂ ಮರ್ಯಾದೆನೇ ಇಲ್ಲದವಳಂತೆ ವರ್ತಿಸುತ್ತಿದ್ದಿ ನೀನು. ಅಲ್ಲ, ನೀನು ಹೇಳಿದಂತೆ ಕೇಳಿಕೊಂಡು ಬಿದ್ದಿರಲು ನನ್ನನ್ನೇನು ನಿನ್ನ ಗುಲಾಮನೆಂದುಕೊoಡೆಯಾ? ಗಂಡನ ಸೇವೆ ಮಾಡುವುದು ಹೆಂಡತಿಯ ಕರ್ತವ್ಯ ಅನ್ನುವುದನ್ನು ಮೊದಲು ತಿಳಿದುಕೋ ನೀನು. ಇವತ್ತಿನಿಂದ ದಿನಾ ಕುಡಿದು ಬರುತ್ತೇನೆ. ಸುಮ್ಮನಿದ್ದರೆ ಬದುಕುತ್ತಿ. ಇಲ್ಲದಿದ್ದರೆ ತುಳಿದು ಸಾಯಿಸಲಿಕ್ಕುಂಟು ನಾಯೀ…!’ ಎಂದಬ್ಬರಿಸಿ ಅನ್ನದ ಬಟ್ಟಲನ್ನು ರಪ್ಪನೇ ಒದ್ದು ಹೊರಗೆ ನಡೆದ. ಸರೋಜಾಳಿಗೆ ದುಃಖ ಒತ್ತರಿಸಿ ಬಂತು. ತುಟಿ ಕಚ್ಚಿಕೊಂಡು ಅತ್ತಳು. ಊಟಕ್ಕೆ ಕುಳಿತ ಅಪ್ಪ ಒಮ್ಮೆಲೇ ರಾಕ್ಷಸನಂತಾದುದನ್ನು ಕಂಡ ಪ್ರಮೀಳ ಹೆದರಿ ಮೂಲೆ ಸೇರಿ ಕುಳಿತು ಅತ್ತಳು. ಆವತ್ತಿನಿಂದ ಲಕ್ಷ್ಮಣ ತಾನು ಅಂದoತೆಯೇ ದಿನಾ ರಾತ್ರಿ ಮತ್ತನಾಗಿ ಮನೆಗೆ ಬರತೊಡಗಿದ. ಬರಬರುತ್ತ ಸಾರಾಯಿಯು ಅವನನ್ನು ಸಂಪೂರ್ಣವಾಗಿ ಸೂರೆಗೊಂಡುಬಿಟ್ಟಿತು. ಹಾಗಾಗಿ ಹಿಂದೆಲ್ಲ ವಾರವಿಡೀ ತೋಟದಲ್ಲಿ ದುಡಿಯುತ್ತಿದ್ದವನು ಈಗೀಗ ಕೆಲಸವನ್ನು ತಪ್ಪಿಸತೊಡಗಿದ. ಅತ್ತ ಕೆಲಸಗಾರರ ಅಗತ್ಯವಿರುವಾಗಲೇ ಲಕ್ಷ್ಮಣನು ಕೈಕೊಡುತ್ತಿದ್ದುದು ಶೆಟ್ಟರಿಗೂ ಬೇಸರ, ಕೋಪವನ್ನು ತರಿಸುತ್ತಿತ್ತು. ಆದ್ದರಿಂದ ಒಂದೆರಡು ಬಾರಿ ಅವನಿಗೆ ಮೃದುವಾಗಿ ಬುದ್ಧಿವಾದ ಹೇಳಿ ನೋಡಿದರು. ಪ್ರಯೋಜನವಾಗಲಿಲ್ಲ. ಒಮ್ಮೆ ಘರಂ ಆಗಿ ಗದರಿಸಿದರು. ಆ ತಿಂಗಳಿಡೀ ಸುಮಾರಾಗಿ ದುಡಿಯಲು ಹೋದ. ಆದರೆ ಮತ್ತೆ ನಾಯಿಬಾಲ ಡೊಂಕಾಯಿತು.
(ಮುಂದುವರೆಯುವುದು)

Related posts

ವಿವಶ…

Mumbai News Desk

ವಿವಶ….

Chandrahas

ವಿವಶ…

Chandrahas

ವಿವಶ..

Mumbai News Desk

ವಿವಶ….

Chandrahas

ವಿವಶ..

Mumbai News Desk