
ಧಾರವಾಹಿ 42
ಶ್ರೀಧರ ಶೆಟ್ಟರು ತಾವು ಊರಲ್ಲಿರುವಾಗ ಮುಂಜಾನೆ ತೋಟದಾಳುಗಳು ಬಂದು ಕೆಲಸ ಆರಂಭಿಸುತ್ತಲೇ ಒಬ್ಬೊಬ್ಬರನ್ನಾಗಿ ಮಾತಾಡಿಸುತ್ತ ತೋಟಕ್ಕೊಂದು ದೀರ್ಘ ಸುತ್ತು ಹೊಡೆಯುವುದು ರೂಢಿ. ಅಂತೆಯೇ ಇವತ್ತು ಕೂಡಾ ಆಗಮಿಸಿದರು. ನಸುಹಸುರಿನ ದಟ್ಟ ಎಲೆಗಳಿಂದಾವೃತ್ತವಾಗಿ ಹಳದಿಬಣ್ಣದ ಹಣ್ಣುಗಳಿಂದ ತುಂಬಿ ತುಳುಕುತ್ತ ಶೋಭಿಸುತ್ತಿದ್ದ ಜಾಯಿಕಾಯಿ ಮರಗಳನ್ನು ಹೆಮ್ಮೆಯಿಂದ ದಿಟ್ಟಿಸುತ್ತ ನಡೆಯುತ್ತಿದ್ದರು. ಹಾಗೆಯೇ ಒಂದು ಮರದ ಬುಡಕ್ಕೆ ಬಂದವರು ಅವಕ್ಕಾಗಿ ನಿಂತುಬಿಟ್ಟರು. ಮರುಕ್ಷಣ ಅವರ ನೋಟ ಅದರ ಪಕ್ಕದ ಮರದ ಮೇಲೂ ಹರಿಯಿತು. ಉಳಿದೆಲ್ಲ ಮರಗಳಿಗಿಂತಲೂ ಅತ್ಯಧಿಕ ಫಸಲು ಬಿಟ್ಟಿದ ಆ ಮರಗಳಿಂದು ಬೋಳು ಬೋಳಾಗಿ ನಿಂತಿದ್ದುವು. ಅದನ್ನು ಕಂಡವರ ಹೊಟ್ಟೆಗೆ ಕೊಳ್ಳಿಯಿಟ್ಟಂತಾಯಿತು! ಅಲ್ಲೇ ಸಮೀಪದಲ್ಲಿ ಶೀನುನಾಯ್ಕ ಕರಿಮೆಣಸು ಕೊಯ್ಯುತ್ತಿದ್ದ. ‘ಹೇ, ಶೀನಾ…! ಇಲ್ಲಿ ಬಾರನಾ…!’ ಎಂದು ಗುಡುಗಿದರು.
ಧಣಿಯ ಕೂಗಿಗೆ ಬೆಚ್ಚಿಬಿದ್ದ ಶೀನನ ಕೈಯ್ಯಲ್ಲಿದ್ದ ಹೆಡಿಗೆಯು ಅದುರಿಬಿತ್ತು. ಇತರ ಆಳುಗಳೂ ಎಚ್ಚೆತ್ತವರು ತಂತಮ್ಮ ಕೆಲಸಕಾರ್ಯಗಳನ್ನು ಅಲ್ಲಲ್ಲೇ ನಿಲ್ಲಿಸಿ ಧಣಿ ಮತ್ತು ಶೀನುನಾಯ್ಕನ ಚಿಕ್ಕ ಮೇಳದಾಟವನ್ನು ನೋಡಲು ಕುತೂಹಲದಿಂದ ಎದ್ದು ನಿಂತರು. ಎಷ್ಟೋ ದಿನಗಳ ನಂತರ ತೋಮನೂ ಬಂದು ಶೆಟ್ಟರೊಡನೆ ಎಂದಿನoತೆ ಛೀಮಾರಿ ಹಾಕಿಸಿಕೊಂಡು ಕೆಲಸಕ್ಕೆ ತೊಡಗಿ ಸಣ್ಣ ಮರವೊಂದರಲ್ಲಿ ತೆಂಗಿನ ಕಾಯಿ ಕೀಳುತ್ತಿದ್ದವನೂ ಅಲ್ಲೇ ತಟಸ್ಥನಾದ. ಇವತ್ತೇನೋ ಗ್ರಹಚಾರ ಕಾದಿದೆ ತನಗೆ…! ಎಂದುಕೊoಡ ಶೀನನು ಹೆಡಿಗೆಯನ್ನು ಕೆಳಗಿಟ್ಟು ತಲೆ ಕರೆದುಕೊಳ್ಳುತ್ತ ಬಂದು ಶೆಟ್ಟರ ಮುಂದೆ ನಿಂತುಕೊoಡು ಅವರ ಕೆಂಗಣ್ಣು ದಿಟ್ಟಸಲಾಗದೆ ತಲೆ ತಗ್ಗಿಸಿ, ‘ಏನಾಯ್ತು ಧಣೀ…?’ ಎಂದ.
‘ಏನಾಯ್ತಾ…? ಏನಾ ಇದು…? ಈ ಮರಗಳ ಕಾಯಿಗಳೆಲ್ಲ ಎಲ್ಲಿ ಹೋದವನಾ…? ಯಾರ ಕಿತಾಪತಿಯಾ ಇದು! ಸತ್ಯ ಬೊಗಳಿರಾ…!’ಎಂದು ಶೆಟ್ಟರು ಅಬ್ಬರಿಸಿದರು.
‘ಬಾವಲಿಗಳ ಕಾಟ ಧಣಿಯವರೇ…, ಅವೇ ಕೊಂಡೊಯ್ದಿರಬೇಕು…!’ ಎಂದು ಶೀನ ಮರಗಳನ್ನು ನೋಡದೆಯೇ ಉತ್ತರಿಸಿಬಿಟ್ಟ.
‘ಬೋ…ಮಗನೇ, ಬಾವಲಿಗಳು ಬರುವಾಗ ಗೋಣಿ ಚೀಲವನ್ನು ಹೊತ್ತುಕೊಂಡು ಬರುತ್ತವೆಯೇನೋ…? ನಿನ್ನ ಪಿಂಡ! ಯಾರೋ ಬಡ್ಡಿಮಕ್ಕಳು ಎಲ್ಲಾ ಕಾಯಿಗಳನ್ನೂ ಲಪಟಾಯಿಸಿದ್ದಾರೆ. ಸತ್ಯ ಬೊಗಳು. ದಿನನಿತ್ಯ ಮೂಗಿನ ಮಟ್ಟ ಕುಡಿದು ಕೆಲಸಕ್ಕೆ ಬರುತ್ತಿಯಲ್ಲ, ದುಡ್ಡೆಲ್ಲಿಂದ ಬರುತ್ತದಾ ನಿಂಗೆ? ಬಾಯಿ ಬಿಡುತ್ತೀಯಾ ಇಲ್ಲಾ ಒದ್ದು ಬಿಡಿಸಲಾ…?’ ಎಂದು ಶೆಟ್ಟರು ಮತ್ತಷ್ಟು ಬೆದರಿಸಿದರು.
ಶೀನನಾಯ್ಕನ ಹೆಂಡತಿ ಚೀಂಕು ಸ್ವಲ್ಪ ದೂರದಲ್ಲಿ ತೆಂಗಿನ ಬುಡದ ಹುಲ್ಲು ಕೀಳುತ್ತಿದ್ದವಳು ಶೆಟ್ಟರ ಮಾತು ಕೇಳಿ ರಪ್ಪನೆದ್ದು ಬಂದು, ‘ಧಣಿಗಳೇ..! ಅವರು ಅಂಥ ಬುದ್ಧಿಯವರಲ್ಲ! ಇಲ್ಲಿಯವರೆಗೆ ನಾವು ಈ ತೋಟದ ಅಕ್‌ರ್ದ (ಸಣ್ಣ ಕಡ್ಡಿ) ಕಡ್ಡಿಯನ್ನೂ ಮುಟ್ಟಿದವರಲ್ಲ!’ ಎಂದು ಅಳುಕಿನಿಂದಲಾದರೂ ಸ್ವಲ್ಪ ಒರಟಾಗಿಯೇ ಅಂದಳು. ಆಗ ಶೀನನಿಗೆ ಧೈರ್ಯ ಬಂತು. ‘ಹೌದು ಧಣಿ, ನಾವು ನಿಮ್ಮ ಉಪ್ಪು ತಿಂದವರು. ನಮ್ಮ ಜೀವನಕ್ಕೆ ನೀವೇ ದಿಕ್ಕು. ಹೀಗಿರುವಾಗ ನಾನು ಅಂಥ ಹೇಲು ತಿನ್ನುವ ಕೆಲಸ ಮಾಡುತ್ತೇನಾ ಹೇಳಿ…?’ ಎಂದವನು ಮರಗಳತ್ತ ದಿಟ್ಟಿಸಿದ. ಅದನ್ನು ಕಂಡ ಅವನಿಗೂ ಆಘಾತವಾಯಿತು. ‘ಅಯ್ಯಯ್ಯೋ ಕಲ್ಕುಡಾ! ಹೌದಲ್ಲವಾ…? ಎರಡೂ ಮರಗಳು ಖಾಲಿ ಖಾಲಿ! ಈ ಸಲ ಈ ಮರಗಳೇ ಹೆಚ್ಚು ಕಾಯಿ ಬಿಟ್ಟಿದ್ದವಲ್ಲವಾ ಧಣೀ…? ಇದು ಯಾರೋ ಗೊತ್ತಿದ್ದವರದ್ದೇ ಕೆಲಸ ಧಣಿ. ಯಾವನಾದರಾಗಿರಲಿ. ಅವನನ್ನು ಮಾತ್ರ ಸುಮ್ಮನೆ ಬಿಡಬಾರದು. ಈ ಮರಗಳಿಗೆ ನಾನೆಷ್ಟೊಂದು ಆಸೆಯಿಂದ ಚಾಕರಿ ಮಾಡಿದೆನಲ್ಲ, ಥೂ!’ ಎನ್ನುತ್ತ ತಾನೂ ಹೊಟ್ಟೆ ಉರಿಸಿಕೊಂಡ.
ಶೀನುನಾಯ್ಕನ ಹಾವಭಾವಗಳನ್ನು ಸೂಕ್ಷö್ಮವಾಗಿ ಗಮನಿಸುತ್ತಿದ್ದ ಶೆಟ್ಟರಿಗೆ ಅವನು ಕಳ್ಳತನ ಮಾಡಿಲ್ಲವೆಂದು ಖಚಿತವಾಯಿತು. ಹಾಗಾದರೆ ಇನ್ಯಾರು ಅಡಬೆಗೆ ಹುಟ್ಟಿದವರು…? ಎಂದು ಯೋಚಿಸಿದವರಿಗೆ ತಟ್ಟನೆ ತೋಮ ಮತ್ತು ಲಕ್ಷ್ಮಣರು ನೆನಪಾದರು.
‘ಅವನೆಲ್ಲಿ ಹೋದ ತೋಮ…? ಅವನನ್ನು ಕರೆ!’ ಎಂದರು ಅದೇ ಸಿಟ್ಟಿನಿಂದ. ಅದು ತೋಮನಿಗೂ ಕೇಳಿಸಿತು. ಅವನು ಸರಸರನೆ ಮರವಿಳಿದು ಬಂದು ಪೆಚ್ಚುನಗೆ ಹರಿಸುತ್ತ ಶೆಟ್ಟರೆದುರು ನಿಂತುಕೊoಡ.
‘ಏನಾ ತೋಮ ಇದೆಲ್ಲ? ಅನ್ನ ತಿಂದ ಮನೆಗೆ ಕನ್ನ ಹಾಕುವುದನ್ನು ಯಾವತ್ತಿನಿಂದ ಕಲಿತಿದ್ದೀರಾ ನಾಯಿಗಳೇ ನೀವೆಲ್ಲ…?’ ಎಂದರು ಶೆಟ್ಟರು ವಿಷಾದದಿಂದ.
‘ಅಯ್ಯೋ.., ನಾನೂ ನಿಮ್ಮ ಅನ್ನ ತಿಂದವನೇ ಧಣೀ! ಮನೆಯ ಒಲೆ ಉರಿಸಲು ಒಂದಿಷ್ಟು ಮಡಲು ತಪ್ಪರಿಗೆ ಅಥವಾ ಪದಾರ್ಥಕ್ಕೆಂದು ನಾನೋ, ಇವಳೋ ಒಂದೆರಡು ಉದುರಿದ ಗೋಟು ತೆಂಗಿನಕಾಯಿಗಳನ್ನು ಹೆಕ್ಕಿಕೊಂಡು ಹೋಗಿರಬಹುದು. ಅದನ್ನು ಬಿಟ್ಟು ಕದಿಯುವಂಥ ಕೆಲಸವನ್ನು ಹಿಂದೆಯೂ ಮಾಡಿಲ್ಲ, ಮುಂದೆಯೂ ಮಾಡುವುದಿಲ್ಲ ಧಣಿ!’ ಎಂದು ಅವನು ಖಡಕ್ಕಾಗಿ ಅಂದ. ಶೆಟ್ಟರಿಗೆ ತೋಮನ ಮೇಲೂ ವಿಶ್ವಾಸ ಬಂತು. ಆದರೂ ತೋರಿಸಿಕೊಳ್ಳದೆ, ‘ಹಾಗಾದರೆ ಮತ್ತಾö್ಯರು ಈ ಹಲ್ಕಾ ಕೆಲಸವನ್ನು ಮಾಡಿದ್ದು ಮಾರಾಯಾ? ಆ ಲಚ್ಚನೆಲ್ಲಿ ಹೋದ? ಅವನು ಇವತ್ತು ಕೆಲಸಕ್ಕೆ ಬರಲಿಲ್ಲವಾ…?’ ಎಂದು ಶೀನನತ್ತ ನೋಡುತ್ತ ಕೇಳಿದರು.
‘ಇಲ್ಲ ಧಣೀ…!’ ಎಂದ ಶೀನನಲ್ಲೂ ತಟ್ಟನೆ ಸಂಶಯ ಸುಳಿಯಿತು.
ಅಷ್ಟರಲ್ಲಿ ಶೆಟ್ಟರು, ‘ಹೋಗಿ ಅವನನ್ನು ಹುಡುಕಿ ಕರೆದುಕೊಂಡು ಬಾರನಾ…!’ ಎಂದು ಅವನನ್ನಟ್ಟಿದರು. ಶೀನ ಕೂಡಲೇ ಲಕ್ಷ್ಮಣನ ಶೆಡ್ಡಿನತ್ತ ಧಾವಿಸಿ ಹೋಗಿ ಸರೋಜಾಳನ್ನು ಕೂಗಿದ. ಅವಳು ದಡಬಡಿಸಿ ಹೊರಗೆ ಬಂದಳು.
‘ಲಕ್ಷ್ಮಣ ಎಲ್ಲಿದ್ದಾನೆ ಮಾರಾಯ್ತಿ…? ಶೆಟ್ಟರು ಅವನನ್ನು ಕರೆಯುತ್ತಿದ್ದಾರೆ!’ ಎಂದ ಶೀನ ಧುಮುಗುಟ್ಟುತ್ತ. ಸರೋಜಾಳಿಗೆ ಆತಂಕವೆದ್ದಿತು. ಈ ಹಾಳಾದವನು ಏನೋ ಕಿತಾಪತಿ ಮಾಡಿದ್ದಾನೆ ಎಂದುಕೊoಡವಳು, ಏನಾದರೂ ಮಾಡಿಕೊಂಡು ಸಾಯಲಿ ಅತ್ಲಾಗೇ. ಇನ್ನು ಇವನನ್ನು ಸಂಭಾಳಿಸಲು ನನ್ನಿಂದ ಸಾಧ್ಯವೇ ಇಲ್ಲ! ಎಂದು ಯೋಚಿಸಿ, ‘ಅವ್ರು ಬೆಳಿಗ್ಗೆನೇ ಎಲ್ಲಿಗೋ ಹೋಗಿರಬೇಕು ಶೀನಣ್ಣ. ನಾನು ಬೀಡಿ ಕೊಟ್ಟು ಬರುವಷ್ಟರಲ್ಲಿ ಮನೆಯಲ್ಲಿರಲಿಲ್ಲ!’ ಎಂದು ಹೇಳಿ ಒಳಗೆ ನಡೆದಳು.
ಶೀನುನಾಯ್ಕನು ಹಾಗೆಯೇ ಬಂದು ಶೆಟ್ಟರಿಗೆ ಸುದ್ದಿ ಮುಟ್ಟಿಸಿದ. ಹಾಗಾದರೆ ತಮ್ಮ ಅನುಮಾನ ನಿಜವಾಯಿತು! ಎಂದುಕೊoಡ ಶೆಟ್ಟರು ಗಡಿಬಿಡಿಯಿಂದ ಮನೆಗೆ ಧಾವಿಸಿ, ಶಿವಕಂಡಿಕೆಯಲ್ಲಿದ್ದ ತನ್ನ ಮಗ ಜಯಂತನಿಗೆ ಕರೆ ಮಾಡಿ, ‘ಮಗಾ, ಅಣ್ಣಪ್ಪ ಕಾಮತರ ಮದ್ದಿನಂಗಡಿಗೆ ತಕ್ಷಣ ಹೋಗಿ, ಯಾವನಾದರೂ ಜಾಯಿಕಾಯಿ ತಂದನೇ…? ಎಂದು ವಿಚಾರಿಸಿ ನೋಡು. ಇಲ್ಲದಿದ್ದರೆ ಅಂಥವನ್ಯಾರಾದರೂ ಬಂದರೆ ಸ್ವಲ್ಪಹೊತ್ತು ನಿಲ್ಲಿಸಿಕೊಂಡು ನಮಗೆ ಕರೆ ಮಾಡಲು ತಿಳಿಸು!’ ಎಂದು ಕೇಳಿ ಅವನಿಗೂ ವಿಷಯ ವಿವರಿಸಿದರು. ಅಷ್ಟು ಕೇಳಿದ ಜಯಂತ ಅವಕ್ಕಾದ. ಸುತ್ತಮುತ್ತಲಿನ ಜನರು ತಮ್ಮ ತೋಟವನ್ನು ತಲೆ ಎತ್ತಿ ನೋಡಲೂ ಹೆದರುವಾಗ ಅದರಲ್ಲಿಯೇ ಕಳ್ಳತನ ಮಾಡುವ ಅಹಂಕಾರವು ಯಾವನಿಗಿದೆ…? ಅಂಥ ಖದೀಮನನ್ನು ಖಂಡಿತಾ ಸುಮ್ಮನೆ ಬಿಡಲಿಕ್ಕಿಲ್ಲ. ಬಿಟ್ಟರೆ ತಮ್ಮ ಮನೆತನದ ಘನತೆ, ಗೌರವಗಳೆಲ್ಲ ಬೀದಿಪಾಲಾದಾವು! ಇವತ್ತು ಹೊತ್ತು ಕಂತುವುದರೊಳಗೆ ಅವನನ್ನು ಹಿಡಿದು ಹೆಡೆಮುರಿ ಕಟ್ಟಿಯೇ ಸಿದ್ಧ!’ ಎಂದು ಹಲ್ಲು ಕಡಿಯುತ್ತ ಅಂದುಕೊoಡ ಜಯಂತನು ಕೂಡಲೇ ತನ್ನ ಹೊಸ ಅಂಬಾಸಿಡಾರ್ ಕಾರು ಹತ್ತಿ ಕಾಮತರ ಅಂಗಡಿಯತ್ತ ಧಾವಿಸಿದ.
ಅಣ್ಣಪ್ಪ ಕಾಮತರು ಶಿವಕಂಡಿಕೆ ಹಾಗೂ ಸುತ್ತಮುತ್ತಲಿನ ಹತ್ತೂರುಗಳಲ್ಲಿ ಆಯುರ್ವೇದ ಔಷಧಿ ವ್ಯಾಪಾರದಲ್ಲಿ ಬಹಳ ಪ್ರಸಿದ್ಧರಾದವರು. ಜಯಂತ ಅಂಗಡಿಯತ್ತ ಬರುವಾಗ ಅವರು ತಮ್ಮ ಗಿರಾಕಿಗಳಿಗೆ ಗಿಡಮೂಲಿಕೆ, ಕಷಾಯ, ಔಷಧಿಗಳನ್ನು ಕಟ್ಟಿ ಕೊಡುತ್ತ ವ್ಯಾಪಾರದಲ್ಲಿ ತೊಡಗಿದ್ದರು. ಅಷ್ಟರಲ್ಲಿ ವೇಗವಾಗಿ ಬಂದ ಕಾರೊಂದು ತಮ್ಮ ಗಿರಾಕಿಗಳ ವಾಹನಗಳಿಗೆ ಡಿಕ್ಕಿ ಹೊಡೆದೇಬಿಟ್ಟಿತು ಎಂಬoತೆ ಕರ‍್ರನೇ ಬ್ರೇಕ್ ಹೊಡೆದು ಧೂಳೆಬ್ಬಿಸುತ್ತ ನಿಂತುದನ್ನು ಕಂಡು ಬೆಚ್ಚಿಬಿದ್ದರು. ಮರುಕ್ಷಣ ಅವರು ಕೋಪದಿಂದ, ‘ಯಾವನಾ ಅವನು ದರವೇರ್ಶಿ…?’ ಎಂದು ಗಟ್ಟಿಯಾಗಿ ಬೈಯ್ಯಲಿದ್ದವರು, ಜಯಂತ ಕಾರಿಂದಿಳಿಯುತ್ತಲೇ ತಮ್ಮ ಬೈಗುಳವನ್ನು ತಟ್ಟನೆ ನುಂಗಿಕೊoಡು, ಓಹೋ…ಇವನಾ ದುರಹಂಕಾರಿ…? ಓ ಮಗನೇ ನಿನ್ನ ಕೊಬ್ಬೇ…! ಬಂಟರ ಜಾತಿಯ ಮರ್ಯಾದೆ ತೆಗೆಯಲೆಂದೇ ಹುಟ್ಟಿದವನೋ ನೀನು! ಎಂದು ಒಳಗೊಳಗೇ ಸಿಡುಕಿದರಾದರೂ ಹೊರಗಡೆ ಬಲವಂತದ ನಗೆ ತಂದು ಕೊಂಡು, ‘ಓಹೋ ಜಯಂತ ಶೆಟ್ರಾ ಮಾರಾಯ್ರೇ ಬನ್ನಿ ಬನ್ನಿ. ನಿಮ್ಮ ಕಾರು ಬಂದು ನಿಂತ ರಭಸಕ್ಕೆ ನಮ್ಮ ಹಾರ್ಟ್ ಒಮ್ಮೆ ಅದುರಿ ಬಿತ್ತು ನೋಡಿ! ಏನು ಬೇಕಿತ್ತು…?’ ಎನ್ನುತ್ತ ದೇಶಾವರಿ ನಗೆ ನಕ್ಕರು.
‘ಏನಿಲ್ಲ ಕಾಮತರೇ, ನಿನ್ನೆ ರಾತ್ರಿ ನಮ್ಮ ತೋಟದಲ್ಲಿ ಕಳವಾಗಿದೆ. ಯಾವನೋ ಒಬ್ಬ ಬೋಳಿಮಗ ನಮ್ಮ ಜಾಯಿಕಾಯಿಯ ಎರಡು ಮರಗಳನ್ನೂ ನುಣ್ಣಗೆ ಬೋಳಿಸಿದ್ದಾನೆ. ಅವನು ಅದನ್ನು ನಿಮ್ಮಲ್ಲಿಗೆ ತರಬಹುದು. ಬಂದರೆ ಸ್ವಲ್ಪ ಹೊತ್ತು ಅವನನ್ನು ನಿಲ್ಲಿಸಿಕೊಂಡು ನಮಗೆ ಕರೆ ಮಾಡಬೇಕು ಗೊತ್ತಾಯ್ತಾ? ಇವತ್ತು ಆ ಮಗನನ್ನು ಮುಗಿಸಿಯೇ ಬಿಡುತ್ತೇವೆ!’ ಎಂದ ಜಯಂತ ದರ್ಪದಿಂದ. ಅವನ ಮಾತು ಕೇಳಿದ ಕಾಮತರು ಮೆಲ್ಲನೆ ಬೆವರಿದರು. ಏಕೆಂದರೆ ಸ್ವಲ್ಪಹೊತ್ತಿನ ಮುಂಚೆಯಷ್ಟೇ ಅವರು ಲಕ್ಷ್ಮಣನಿಂದ ಜಾಯಿಕಾಯಿಯನ್ನು ಬಹಳ ಅಗ್ಗದ ಬೆಲೆಗೆ ಖರೀದಿಸಿಯಾಗಿತ್ತು. ಆದರೆ ಅವನು ಮಾಲು ಈ ಹಡಬೆಯ ತೋಟದ್ದೆಂದು ಹೇಳಲೇ ಇಲ್ಲವಲ್ಲ! ಎಂದುಕೊoಡು ತಮ್ಮ ತಪ್ಪನ್ನು ಒಪ್ಪಿಕೊಳ್ಳದೆ ಚಡಪಡಿಸಿದರು. ಜೊತೆಗೆ ವಿಷಯ ಹೇಳಲಾ ಬೇಡವಾ…? ಎಂಬ ಗೊಂದಲಕ್ಕೂ ಬಿದ್ದವರು, ಸತ್ಯವನ್ನು ಹೇಳಿಬಿಟ್ಟರೆ ಈ ಶೆಟ್ಟಿಯು ತನ್ನ ಮಾಲನ್ನು ದರ್ಪದಿಂದೆತ್ತಿ ಕೊಂಡೊಯ್ದರೂ ಒಯ್ಯುವವನೇ. ಆಗ ನನ್ನ ದುಡ್ಡೆಲ್ಲ ಪಡ್ಚವಾದೀತು. ಆದರೆ ಹೇಳದಿದ್ದರೂ ಬೇರೆ ವಿಧಿಯುಂಟಾ? ಆ ಕಳ್ಳ ಬಡ್ಡಿಮಗ ನಾಳೆ ಇವರ ಕೈಗೆ ಸಿಕ್ಕಿಬಿದ್ದು ಪೆಟ್ಟು ತಿನ್ನುವ ಭರದಲ್ಲಿ ಬಾಯಿ ಬಿಟ್ಟರೆ…? ಎಂದೂ ಯೋಚಿಸಿದರು. ಕೊನೆಗೆ, ಆಗುವುದಾಗಲಿ. ಹೇಳಿಯೇ ಬಿಡುವ. ನಂತರ ಇವನೇನು ಕಿತ್ತುಕೊಳ್ಳುತ್ತಾನೋ ಅದನ್ನೂ ನೋಡಿಯೇ ಬಿಡುವ ಎಂದುಕೊoಡು, ‘ಅರೆರೇ, ಹೌದಾ ಶೆಟ್ರೆ, ಈಗಷ್ಟೇ ಒಬ್ಬ ಮೂವತ್ತು ಕಿಲೋ ಹಣ್ಣು ಹಣ್ಣು ಕಾಯಿಗಳನ್ನು ತಂದುಕೊಟ್ಟು ಹೋದ. ನಾನು ಯಾರದ್ದೆಂದು ಕೂಡಾ ವಿಚಾರಿಸಿದೆ. ಅದಕ್ಕವನು, ‘ನನ್ನದೇ ತೋಟದ್ದು ಕಾಮತರೇ. ಹೆಂಡತಿಗೆ ಹುಷಾರಿಲ್ಲ. ಅರ್ಜೆಂಟಾಗಿ ದುಡ್ಡು ಬೇಕಿತ್ತು. ಅದಕ್ಕೆ ಸ್ವಲ್ಪ ಮಾರಬೇಕಾಯಿತು!’ ಎಂದ. ನಾನವನನ್ನು ನಂಬಿ ಕಿಲೋಗೆ ನೂರು ರೂಪಾಯಿಯಂತೆ ಕೊಟ್ಟುಬಿಟ್ಟೆನಲ್ಲ ವೆಂಕಟ್ರಮಣಾ…!’ ಎನ್ನುತ್ತ ಹೊಟ್ಟೆ ಉರಿಯ ರಾಗವೆಳೆದರು. ಅಷ್ಟು ಕೇಳಿದ ಜಯಂತನಿಗೆ ತಟ್ಟನೆ ರೇಗಿತು. ‘ಏನ್ರೀ ನೀವು…? ಯಾರೇನು ತಂದುಕೊಟ್ಟರೂ ಹಿಂದುಮುoದು ಯೋಚಿಸದೆ ತೆಗೆದುಕೊಂಡು ಹಣ ಮಾಡುವುದೊಂದೇ ಜಂಬರವಾ ನಿಮ್ಮದು! ತಂದವನು ಎಂಥವನು? ಅದನ್ನು ಬೆಳೆಯುವ ಯೋಗ್ಯತೆ ಅವನಿಗುಂಟಾ ಇಲ್ಲವಾ ಅನ್ನುವುದೊಂದನ್ನು ವಿಚಾರಿಸದೆ ಮನಸ್ಸಿಗೆ ಬಂದoತೆ ವ್ಯಾಪಾರ ಮಾಡುತ್ತೀರಲ್ಲ ಮಂಡೆ ಸಮ ಉಂಟಾ ನಿಮಗೆ? ನಮ್ಮ ತೋಟದ ಮಾಲದು. ಈಗಲೇ ಹಿಂದಿರುಗಿಸಿದರೋ ಬಚಾವ್! ಇಲ್ಲದಿದ್ದರೆ ನಾವು ಎಂಥವರೆoದು ನಿಮಗೂ ಗೊತ್ತುಂಟಲ್ಲವಾ…?’ ಎಂದು ಬೆದರಿಸಿದ.
ಆದರೆ ಮೂವತ್ತೆöÊದರ ಆಸುಪಾಸಿನ ಆಜಾನುಬಾಹು ಅಣ್ಣಪ್ಪ ಕಾಮತರು ಕೂಡಾ ಕೈಯಲ್ಲಾಗದೆ ವ್ಯಾಪಾರಕ್ಕೆ ಕುಳಿತವರಲ್ಲ. ಅವರ ವಂಶ ಚರಿತ್ರೆಯ ಹಿಂದೆ ಒಂದು ದೊಡ್ಡ ರೋಚಕ ಕಥೆಯೇ ಇದೆ. ಕಾಮತರ ಪೂರ್ವಜರು ಗೋವಾದಿಂದ ಬಂದವರು. ಪೂರ್ವಕಾಲದಲ್ಲಿ ಪೋರ್ಚುಗೀಸರು ಗೋವಾಕ್ಕೆ ಬಂದೆರಗಿ ಅಲ್ಲಿನ ಹಿಂದೂ ಸಂಸ್ಕೃತಿಯ ಮೇಲೆ ನಾನಾ ರೀತಿಯಿಂದ ದೌರ್ಜನ್ಯವೆಸಗುತ್ತ ಮುಗ್ಧ ಜನರನ್ನು ಮತಾಂತರಕ್ಕೆ ಬಲತ್ಕರಿಸುತ್ತಿದ್ದರು. ಅವರ ದಬ್ಬಾಳಿಕೆ, ಹಿಂಸಾಚಾರಗಳಿಗೆ ಸೋತು ಮಣಿದ ಗೋವಾದ ಸಾವಿರಾರು ಹಿಂದೂ ಕುಟುಂಬಗಳು ಮತಾಂತರಗೊoಡು ತಂತಮ್ಮ ಮಾನ ಪ್ರಾಣಗಳನ್ನು ಕಾಪಾಡಿಕೊಳ್ಳುತ್ತಿದ್ದವಾದರೂ ಕಾಮತರ ವಂಶಜರು ಮಾತ್ರ ಅಷ್ಟು ಬೇಗನೇ ಯಾವುದಕ್ಕೂ ಜಗ್ಗುವ ಜನರಾಗಿರಲಿಲ್ಲ. ಜೊತೆಗೆ ಶತ್ರುಗಳನ್ನು ಎದುರಿಸಿ ನಿಲ್ಲುವಷ್ಟೂ ಶಕ್ತರಾಗಿರಲಿಲ್ಲ. ಆದ ಕಾರಣ ತಮ್ಮ ಧರ್ಮ, ದೇವರು ಮತ್ತು ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಅವರಿಗೆ ಆ ವಿಷಮ ಪರಿಸ್ಥಿತಿಯಲ್ಲಿ ತೋಚಿದ್ದು ಒಂದೇ ದಾರಿ, ಪಲಾಯನ! ಆದರೆ ತಮ್ಮ ಬದುಕನ್ನೂ, ಶ್ರೀಮಂತ ಸಂಸ್ಕೃತಿಯನ್ನೂ ಮೂರಾಬಟ್ಟೆ ಮಾಡಿದ ಪರದೇಸಿ ನೀಚರ ಮೇಲೆ ಪ್ರತೀಕಾರವನ್ನು ತೀರಿಸಿಕೊಳ್ಳದೆ ಹೊರಟು ಹೋದರೆ ತಮ್ಮ ಸ್ವಾಭಿಮಾನ ಮತ್ತು ಶೌರ್ಯಕ್ಕೆ ಬೆಲೆಯೆಲ್ಲಿ…? ಎಂದು ಯೋಚಿಸಿದವರ ಧಮನಿ, ಧಮನಿಯಲ್ಲೂ ರಕ್ತ ಕುದಿಯಿತು. ಆವತ್ತೊಂದು ದಿನ ತಮ್ಮ ಹುಟ್ಟೂರಿಗೆ ವಿದಾಯ ಹೇಳುವ ಸಮಯ ಹತ್ತಿರವಾಗುತ್ತಲೇ, ಹಿಂದೊಮ್ಮೆ ತಮ್ಮ ಮನೆತನದ ಹೆಣ್ಣು ಮಗಳ ಮೇಲೆ ಕೆಟ್ಟದೃಷ್ಟಿ ಬೀರಿದ್ದ ಲಂಪಟ ಪೋರ್ಚುಗೀಸನ್ನೊಬ್ಬನನ್ನು ರಾತೋರಾತ್ರಿ ಹೊಡೆದು ಕೊಂದು ಅವನ ಹೆಣಕ್ಕೆ ಕಲ್ಲುಕಟ್ಟಿ ತಮ್ಮದೇ ತೋಟದ ಬಾವಿಗೆಸೆದು ಊರು ಬಿಟ್ಟವರು ಇದೇ ಕಾಮತರ ಕುಟುಂಬಸ್ಥರು! ಅಂಥವರು ಶಿವಖಂಡಿಕೆಗೆ ಬಂದು ನೆಲೆಸಿ ತಮ್ಮ ಕುಲವನ್ನು ಹಿಂಬಾಲಿಸಿ ಬಂದ ವಿವಿಧ ವ್ಯಾಪಾರ ವಹಿವಾಟುಗಳ ಮೂಲಕ ಮತ್ತೆ ಭದ್ರ ಬದುಕನ್ನು ಕಟ್ಟಿಕೊಂಡವರು. ಕಾಮತರ ಪಿತಾಮಹ ವೆಂಕಟಪ್ಪ ಕಾಮತರಿಗೆ ಇದ್ದ ಅಗಾಧವಾದ ಆಯುರ್ವೇದ ಜ್ಞಾನದಿಂದ ಆರಂಭವಾದ ಪುರಾತನ ಅಂಗಡಿಯನ್ನು ತಂದೆಯ ನಂತರ ಅಣ್ಣಪ್ಪ ಕಾಮತರು ಇನ್ನಷ್ಟು ಆಸ್ಥೆಯಿಂದ ವೃದ್ಧಿಸುತ್ತ ಬಂದು ಉತ್ತಮ ಹೆಸರು ಗಳಿಸಿದವರು. ಅಷ್ಟಲ್ಲದೇ ಕಾಮತರ ಆಸ್ತಿಪಾಸ್ತಿಯ ಲೆಕ್ಕಾಚಾರವನ್ನು ಅಧಿಕೃತವಾಗಿ ಅಳೆದು ನೋಡಿದರೂ ಶ್ರೀಧರ ಶೆಟ್ಟರಿಗಿಂತ ಒಂದು ಕೈ ಹೆಚ್ಚೇ ಅವರು ಶ್ರೀಮಂತರಿದ್ದರು.
ಇಂಥ ವಂಶದಿoದ ಬಂದoಥ ಅಣ್ಣಪ್ಪ ಕಾಮತರು ಜಯಂತನ ಧಮಕಿಗೆ ಸುಮ್ಮನಿರುತ್ತಾರೆಯೇ? ಅವರಿಗೂ ಕಿಚ್ಚೆದ್ದಿತು. ‘ನೋಡಿ ಶೆಟ್ರೇ, ಬಾಯಿಗೆ ಬಂದoತೆ ಮಾತಾಡಬೇಡಿ. ದಿನಕ್ಕೆ ಹತ್ತಾರು ಜನ ನಮ್ಮ ಅಂಗಡಿಗೆ ಏನೇನೋ ಮಾಲುಗಳನ್ನು ಹೊತ್ತು ತರುತ್ತಾರೆ. ನಾನು ಅವರನ್ನೆಲ್ಲ ನಿಲ್ಲಿಸಿಕೊಂಡು, ‘ಈ ಮಾಲು ಯಾರದ್ದು? ಆ ಸರಕು ಯಾವ ತೋಟದ್ದು? ನೀನು ಕದ್ದದ್ದಾ ಅಥವಾ ಬೆಳೆಸಿದ್ದಾ? ಅಂತ ವಿಚಾರಿಸುತ್ತ ಕೂರಲು ಸಾಧ್ಯವಾ…? ನನಗೆ ಮಾಲು ಬೇಕು. ಮತ್ತದು ಒಂದಷ್ಟು ರೋಗಿಗಳ ಕಾಯಿಲೆ ಕಸಾಲೆ ಗುಣಪಡಿಸುವಂತಿರಬೇಕು. ಆ ನಂತರವೇ ಸಂಪಾದನೆಯ ಬಗ್ಗೆ ಯೋಚಿಸುವವರು ನಾವು. ನಿಮ್ಮ ಮಾಲು ಬೇಕಿದ್ದರೆ ಮೂರು ಸಾವಿರ ಕೊಡಿ, ಕೊಂಡು ಹೋಗಿ ಅಷ್ಟೇ!’ ಎಂದು ಖಡಕ್ಕಾಗಿ ಉತ್ತರಿಸಿದರು.
‘ಓಹೋ, ಹೀಗಾ ವಿಷಯ…? ಸರಿ ಕಾಮತರೇ ಆಯ್ತು! ಆ ಮೂರುಕಾಸಿನವನನ್ನೇ ಹಿಡಿದು ತಂದು ನಿಮ್ಮಿಂದ ಮಾಲು ವಸೂಲಿ ಮಾಡಿದ ಬಳಿಕ ನಿಮ್ಮನ್ನೂ ನೋಡಿಕೊಳ್ಳುತ್ತೇವೆ!’ ಎಂದು ಜಯಂತ ಮತ್ತೆ ಬೆದರಿಸಿದ. ಆಗ ಕಾಮತರಿಗೆ ಇನ್ನಷ್ಟು ರೇಗಿತು. ‘ಓಹೋ ಹೌದಾ, ಹಾಗೆನ್ನುತ್ತೀರಾ…? ಹಾಗಾದರೆ ಹಾಗೆ! ಆದರೆ ಒಂದು ಮಾತು ನೋಡಿ, ಮಾಲು ಕೊಂಡು ಹೋಗಲು ಬರುವಾಗ ನಿಮ್ಮಪ್ಪ ಶ್ರೀಧರ ಶೆಟ್ಟರನ್ನೂ ಕರೆದುಕೊಂಡೇ ಬನ್ನಿ. ಇಲ್ಲದಿದ್ದರೆ ನೀವು ದುಡ್ಡು ಕೊಟ್ಟರೂ ಮಾಲು ಕೊಡುವುದಿಲ್ಲ. ಆಮೇಲೆ ಅದೇನು ಕಿತ್ತುಕೊಳ್ಳುತ್ತೀರೋ ನಾವೂ ನೋಡಿಯೇ ಬಿಡುತ್ತೇವೆ!’ ಎಂದು ತಾವೂ ಕಣ್ಣು ಕೆಂಪಗೆ ಮಾಡಿ ಅಂದವರು ತಮ್ಮ ಗಿರಾಕಿಗಳತ್ತ ಗಮನ ಹರಿಸಿದರು. ಜಯಂತನಿಗೆ ಮೈಯೆಲ್ಲ ಉರಿದುಬಿಟ್ಟಿತು. ‘ಹೌದಾ, ಹಾಗಾದರೆ ಅದನ್ನೂ ಒಂದು ಕೈ ನೋಡಿ ಬಿಡುವ!’ ಎಂದು ಕಾಮತರನ್ನು ಕೆಕ್ಕರಿಸುತ್ತ ಹೇಳಿ ರಪ್ಪನೆ ತನ್ನ ಅಂಗಡಿಗೆ ಹಿಂದಿರುಗಿ ಅಪ್ಪನಿಗೆ ಕರೆ ಮಾಡಿದವನು, ‘ಅಪ್ಪಾ, ಯಾವನೋ ಒಬ್ಬ ಆಗಲೇ ಬಂದು ಜಾಯಿಕಾಯಿ ಮಾರಿ ಹೋದನಂತೆ. ಆ ಕಾಮತನ ಹತ್ರ ಮಾಲು ಕೇಳಿದ್ದಕ್ಕೆ ಅವನು ಬಾಯಿಗೆ ಬಂದoತೆ ಮಾತಾಡಿಬಿಟ್ಟ. ಇಬ್ಬರ ಮೇಲೂ ಪೊಲೀಸ್ ಕಂಪ್ಲೆoಟ್ ಕೊಡುವ!’ ಎಂದ ಆಕ್ರೋಶದಿಂದ.
‘ಹೌದಾ..! ಸರಿ ಬಿಡು. ನೀನದರ ಬಗ್ಗೆ ತಲೆಕೆಡಿಸಿಕೊಳ್ಳಬೇಡ. ಮೊದಲು ಲಕ್ಷ್ಮಣನನ್ನು ಹುಡುಕಬೇಕು. ಆ ಕೆಲಸ ನಾನೇ ಮಾಡುತ್ತೇನೆ. ನೀನಲ್ಲಿ ವ್ಯಾಪಾರ ನೋಡಿಕೊಂಡಿರು!’ ಎಂದು ಶೆಟ್ಟರು ಮಗನಿಗೆ ಗಂಭೀರವಾಗಿ ಆಜ್ಞಾಪಿಸಿ ಫೋನಿಟ್ಟಾಗ ಜಯಂತ ಅಸಹನೆಯಿಂದ ಕೈಕೈ ಹಿಸುಕಿಕೊಂಡ.
ಶೆಟ್ಟರು ಸ್ವಲ್ಪ ಯೋಚಿಸಿದರು. ಲಕ್ಷ್ಮಣ ಎಲ್ಲಿದ್ದರೂ ಹುಡುಕಾಡಿ ಅವನ ಕೈಕಾಲು ಮುರಿದು ಹಾಕುವುದು ದೊಡ್ಡ ವಿಷಯವಲ್ಲ. ಆದರೆ ಅದರಿಂದ ನಮ್ಮ ಹೆಸರಿಗೂ ಕಳಂಕ ತಟ್ಟಬಹುದು. ಅಲ್ಲದೆ ಸರೋಜ ಪಾಪದ ಹೆಣ್ಣು. ಅವಳಿಗೂ ನಮ್ಮಿಂದ ಅನ್ಯಾಯವಾಗಬಾರದು. ಹಾಗಂತ ಆ ವಂಚಕನನ್ನು ಸುಮ್ಮನೆ ಬಿಡಲೂಬಾರದು. ಈ ಕಾರ್ಯವನ್ನು ಉಪಾಯದಿಂದ ಸಾಧಿಸಬೇಕು. ತನಗೆ ಘಟ್ಟದ ಮೇಲೆ ಅದೆಷ್ಟೇ ತೋಟ ಮತ್ತು ಎಸ್ಟೇಟುಗಳು ಇರುವುದಾದರೂ ತನ್ನ ಜೀವವಿರುವುದು ಮಾತ್ರ ಇಲ್ಲೇ, ಈ ನನ್ನ ತೋಟದಲ್ಲೇ! ಇದನ್ನು ಕೊಂಡುಕೊಳ್ಳಲು ಮತ್ತು ಅಭಿವೃದ್ಧಿಪಡಿಸಲು ನಾನೆಷ್ಟೊಂದು ಕಷ್ಟಪಟ್ಟಿದ್ದೇನೆಂದು ನನಗೆ ಮಾತ್ರ ಗೊತ್ತು. ಇಂಥ ನಂದನವನವನ್ನು ಯಾವನೋ ಒಬ್ಬ ಕೂಲಿಯವನು ದೋಚುವುದೆಂದರೆ ಅರ್ಥವೇನು! ಅವನನ್ನು ಸುಮ್ಮನೆ ಬಿಟ್ಟರೆ ನಾಳೆ ಇನ್ನೊಬ್ಬ ಬರಬಹುದು. ನಾಡಿದ್ದು ಮತ್ತೊಬ್ಬ! ಇಲ್ಲ ಹಾಗಾಗಲು ಬಿಡಬಾರದು. ಅವನಿಗೆ ಸರಿಯಾಗಿ ಬುದ್ಧಿ ಕಲಿಸಿಯೇ ತೀರಬೇಕು. ಮಗ ಹೇಳಿದ್ದೇ ಸರಿ. ಸಂಕಪ್ಪನಿಗೆ ತಿಳಿಸುತ್ತೇನೆ! ಎಂದು ನಿರ್ಧರಿಸಿದವರು ಕೂಡಲೇ ತಮ್ಮ ಕಾರು ಹತ್ತಿದರು.
ಸಬ್ ಇನ್ಸ್ಪೆಕ್ಟರ್ ಸಂಕಪ್ಪ ಶೆಟ್ಟರು ಶ್ರೀಧರ ಶೆಟ್ಟರ ದೂರ ಸಂಬoಧಿ. ಆದ್ದರಿಂದ ಅವರು ತಂತಮ್ಮ ಮನೆ ಅಥವಾ ಹೊರಗಡೆ ನಡೆಯುವ ಕೌಟುಂಬಿಕ ಕಾರ್ಯಕ್ರಮಗಳಲ್ಲೂ ಮತ್ತಿತರ ಖಾಸಗಿ ಗುಂಡು ಪಾರ್ಟಿಗಳಲ್ಲೂ ಜೊತೆಯಲ್ಲಿ ಕುಳಿತು ವಿಸ್ಕಿ, ಬ್ರಾಂಡಿ ಹೀರುವಷ್ಟರ ಮಟ್ಟಿಗೆ ಆಪ್ತರಾಗಿರುವವರು. ಹಾಗಾಗಿ ಶೆಟ್ಟರು ಇವತ್ತು ರಾಜಾರೋಷವಾಗಿ ಪೊಲೀಸ್ ಸ್ಟೇಷನ್ ಹೊಕ್ಕರು. ಅವರನ್ನು ಕಂಡ ಪೇದೆಗಳು ಗೌರವದಿಂದ ಬರ ಮಾಡಿಕೊಂಡು ಕೂಡಲೇ ಸಾಹೇಬರಿಗೆ ಸುದ್ದಿ ಮುಟ್ಟಿಸಿದರು. ಸಂಕಪ್ಪ ಸಾಹೇಬರೂ ಹತ್ತು ನಿಮಿಷದಲ್ಲಿ ಹಾಜರಾದರು. ಸ್ವಲ್ಪಹೊತ್ತಿನ ಕುಶಲೋಪರಿಯ ನಂತರ ಶೆಟ್ಟರು ತಮ್ಮ ತೋಟದ ಕಳವಿನ ವಿಷಯವನ್ನು ತಿಳಿಸಿದವರು, ‘ನೋಡು ಸಂಕಪ್ಪಾ ಆ ಬಡ್ಡೀಮಗನನ್ನು ಸುಮ್ಮನೆ ಬಿಡಬಾರದು. ಸಮಾ ನಾಲ್ಕು ತದುಕಿ ಸ್ವಲ್ಪ ದಿನ ಅವನನ್ನು ಜೈಲಿನಲ್ಲೇ ಕೊಳೆಯಿಸಬೇಕು. ಇನ್ನು ಮುಂದೆ ಅವನು ಯಾವತ್ತೂ ಯಾರ ಪರಿಶ್ರಮಕ್ಕೂ ಕನ್ನ ಹಾಕದ ಹಾಗೆ ಮಾಡಬೇಕು!’ ಎಂದು ಆಜ್ಞಾಪಿಸಿದರು. ಅದಕ್ಕೆ ಸಂಕಪ್ಪನವರು, ‘ಅಷ್ಟೇ ಅಲ್ಲವಾ ರಾಜೀವಣ್ಣ, ಆ ವಿಷಯವನ್ನು ನನಗೆ ಬಿಟ್ಟು ನೀವು ನಿಶ್ಚಿಂತೆಯಿoದ ಹೊರಡಿ!’ ಎಂದು ಶೆಟ್ಟರನ್ನು ಸಮಾಧಾನಿಸಿ ಕಳುಹಿಸಿಕೊಟ್ಟರು.
(ಮುಂದುವರೆಯುವುದು)