
ಧಾರವಾಹಿ 43
ತೋಮನಿಗೆ ಈಚೆಗೆ ಗಂಗರಬೀಡಿನ ಅಪ್ಪುನಾಯ್ಕ ಎಂಬವನ ಪರಿಚಯವಾಗಿತ್ತು. ಆದರೆ ಅದು ಕೇವಲ ಪರಿಚಯವಾಗಿ ಉಳಿಯದೆ ಕೆಲವೇ ಕಾಲದೊಳಗೆ ಗಾಢ ಆತ್ಮೀಯತೆಗೂ ತಿರುಗಿತ್ತು. ಹಾಗಾಗಿ ಅವನು ಈಗೀಗ ಸದಾ ಅಪ್ಪುನಾಯ್ಕನ ಮನೆಯಲ್ಲೇ ಕಾಲ ಕಳೆಯುತ್ತಿದ್ದ. ಎಪ್ಪತ್ತರ ಆಸುಪಾಸಿನ ಅಪ್ಪುನಾಯ್ಕ ಮತ್ತು ಅವನ ಹೆಂಡತಿ ಸಂಪಿ ನಾಯ್ಕಳಿಗೆ ಸಂತಾನವಿರಲಿಲ್ಲ. ಬಹುಶಃ ಹಾಗಾಗಿಯೋ ಏನೋ ಅವರು ಜೀವಮಾನವಿಡೀ ಒಬ್ಬರನ್ನೊಬ್ಬರು ನಿಷ್ಕಲ್ಮಶವಾಗಿ ಪ್ರೀತಿಸುತ್ತ ಅನ್ಯೋನ್ಯವಾಗಿ ಬಾಳುತ್ತ ಬಂದವರು. ಅವರ ಈ ಬಾಂಧವ್ಯವು ಈಗಲೂ ಯಾವ ಮಟ್ಟಕ್ಕಿದೆಯೆಂದರೆ ಅಪರೂಪಕ್ಕೊಮ್ಮೆ ಕುಟುಂಬಿಕರ ಮನೆಗಳಿಗೆ ಹೋದರೂ ಅವರು ಒಬ್ಬರನ್ನೊಬ್ಬರು ಅಗಲಿ ಒಂದು ರಾತ್ರಿಯೂ ಕಳೆದ ಪುರಾವೆಯಿಲ್ಲ. ಗಂಡನಿಗೆ ಹೆಂಡತಿ, ಹೆಂಡತಿಗೆ ಗಂಡನೇ ಸರ್ವಸ್ವ ಎಂಬoತಿತ್ತು ಅವರ ಸಂಬoಧ. ಈ ದಂಪತಿ ಹಿಂದಿನಿoದಲೂ ತಮ್ಮ ಒಂದಷ್ಟು ಕೃಷಿ ಭೂಮಿಯನ್ನು ತಾವೇ ದುಡಿದು ಹಸನುಗೊಳಿಸುತ್ತ ಬಂದವರಾದರೂ ಯೌವನದಲ್ಲಿ ದುಡಿದಷ್ಟು ಈಗ ಅವರಿಂದ ಕೂಡುತ್ತಿರಲಿಲ್ಲ. ಹಾಗಂತ ಇರುವ ಭೂಮಿಯನ್ನು ಹಡಿಲು ಬಿಡಲೂ ಅವರ ಮನಸ್ಸು ಒಪ್ಪುತ್ತಿರಲಿಲ್ಲ. ಆದ್ದರಿಂದ ತಮಗೊಬ್ಬ ನಂಬಿಕಸ್ಥನಾದ ಗಟ್ಟಿಯಾಳು ದೊರೆತರೆ ಚೆನ್ನಾಗಿತ್ತು! ಎಂದು ಇಬ್ಬರೂ ಆಗಾಗ ಅಂದುಕೊಳ್ಳುತ್ತಿದ್ದರು. ಅದೇ ಕಾಲಕ್ಕೆ ತೋಮ ಅವರ ನೆರವಿಗೆ ಬಂದಿದ್ದ. ಆದರೆ ಅವನೇನೂ ನಿಸ್ವಾರ್ಥ ಮನಸ್ಸಿನಿಂದ ಬಂದವನಲ್ಲ. ಅಪ್ಪುನಾಯ್ಕ ಸೊಗಸಾದ ಸಾರಾಯಿಯನ್ನು ಬೇಯಿಸುತ್ತಿದ್ದ. ಆ ಸೆಳೆತವೇ ಅವನನ್ನು ಅಪ್ಪು ನಾಯ್ಕನ ಸಮೀಪಕ್ಕೆ ಆಕರ್ಷಿಸಿತ್ತು. ಕುಡಿಯುವ ಆಸೆ ಗರಿಗೆದರಿ ದೊಂಡೆಯ ಪಸೆ ಆರಿದಂತೆನ್ನಿಸಿದಾಗಲೆಲ್ಲ ತೋಮ ಅಪ್ಪುನಾಯ್ಕನ ಮನೆಗೆ ಧಾವಿಸುತ್ತಿದ್ದ. ಆರಂಭದಲ್ಲಿ ಅವನ ತೋಟದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ಕೊಟ್ಟು ಮೆಚ್ಚುಗೆ ಪಡೆದು ಅವನೊಂದಿಗೇ ಕುಳಿತು ಕುಡಿಯುತ್ತಿದ್ದ. ಹೀಗಾಗಿ ತೋಮನಿಗೆ ಅಪ್ಪುನಾಯ್ಕನ ಮನೆಯೊಂದು ಹೊಸ ನೆಲೆಯಾಗಿ ದೊರಕಿತ್ತು.
ಆ ವರ್ಷದ ಮಳೆಗಾಲ ಮುಕ್ತಾಯದ ಹಂತದಲ್ಲಿತ್ತು. ಅಪ್ಪುನಾಯ್ಕನ ಕೃಷಿಕಾರ್ಯವೂ ಬಹುತೇಕ ಮುಗಿಯುತ್ತ ಬಂದಿತ್ತು. ಅವನು ಅದೇ ಹುರುಪಿನಿಂದ ಆವತ್ತು ಸಂಜೆ ವಿಶಿಷ್ಟ ಮದ್ಯವೊಂದನ್ನು ತಯಾರಿಸಿ ತೋಮನಿಗೂ ಕೊಟ್ಟ. ತೋಮ ಅದನ್ನು ಸ್ಟೀಲಿನ ಚೊಂಬಿನ ಕಂಠಮಟ್ಟ ತುಂಬಿಸಿಕೊoಡು ತನ್ನ ಶೆಡ್ಡಿಗೆ ಕೊಂಡೊಯ್ದ. ಕತ್ತಲಾಗುತ್ತಲೇ ಕುಡಿಯಲು ಕುಳಿತು ಪ್ರೇಮಾಳಿಗೂ ಒಂದಿಷ್ಟು ಕೊಟ್ಟ. ಅವಳು ಮಾಡಿಟ್ಟಿದ್ದ ಗಂಜಿ ಮತ್ತು ಒಣಮೀನಿನ ಬಜ್ಜಿಯನ್ನು ಭರ್ಜರಿಯಾಗಿ ಉಂಡ. ಕಡ್ಡಿಯ ಚಾಪೆಯ ಮೇಲೆ ಮೈಚೆಲ್ಲಿ ಮಲಗಿದ. ಇನ್ನೇನು ಹಿತವಾದ ನಿದ್ರೆ ಹತ್ತಿತು ಎಂಬಷ್ಟರಲ್ಲಿ ಗುಡುಗು ಮಿಂಚಿನೊoದಿಗೆ ಜೋರಾದ ಗಾಳಿ ಮಳೆ ಶುರುವಾಯಿತು. ಯಾಕೋ ತೋಮನ ನಿದ್ರೆಯೂ ಹಾರಿ ಹೋಯಿತು. ಮೆಲ್ಲನೆ ಎದ್ದು ಕುಳಿತ. ಸ್ವಲ್ಪದೂರದಲ್ಲಿ ಹೆಂಡತಿ ಮತ್ತೇರಿ ಮಲಗಿದ್ದಳು. ಅವಳನ್ನು ಕಂಡವನಿಗೆ ಆ ಚಳಿಯಲ್ಲೂ ಮೈಬಿಸಿಯೇರಿತು. ಎಷ್ಟೋ ಕಾಲದಿಂದ ಅವಳನ್ನು ಕೂಡದಿದ್ದ ಮನಸ್ಸು ಮೆಲ್ಲನೆ ಗರಿಗೆದರಿತು. ನಿಧಾನವಾಗಿ ಹತ್ತಿರ ಸರಿದ. ಗಾಢ ನಿದ್ರೆಯಲ್ಲಿದ್ದ ಪ್ರೇಮಾಳಿಗೆ ಮೈಮೇಲೆ ಭಾರವಾದ ಜೀವಿಯೊಂದು ಹರಿದಾಡಿದಂತೆನಿಸಿ ತಟ್ಟನೆ ಎಚ್ಚರವಾಯಿತು. ಗಂಡನೆoದು ತಿಳಿಯುತ್ತಲೇ ಕೊಸರಾಡಿದಳು. ಆದರೆ ತೋಮನ ಹಿಡಿತವು ಬಿಗಿಯಾಗಿತ್ತು. ಅವಳಿಗೂ ಏನೋ ಹಿತವೆನಿಸಿ ಮೌನವಾದಳು. ಸುಮಾರು ಹೊತ್ತಿನ ನಂತರ ಮಳೆಯಾರ್ಭಟ ನಿಲ್ಲುವ ಹೊತ್ತಿಗೆ ತೋಮನ ಚಾಪೆಯು ಹೆಂಡತಿಯ ಚಾಪೆಗೆ ಸಮೀಪವಾಗಿತ್ತು. ಬಹಳ ಕಾಲದ ನಂತರ ಗಂಡ ಹೆಂಡತಿ ಜೊತೆಯಲ್ಲಿ ಮಲಗಿ ಸುಖವಾದ ನಿದ್ರೆಗೆ ಜಾರಿದರು.
ತೋಮ ಅಂದು ಬೆಳಗಿನ ಜಾವ ಹೊಸ ಉಲ್ಲಾಸದಿಂದ ಎದ್ದ. ಮುಖ ತೊಳೆದು ಬರುವಷ್ಟರಲ್ಲಿ ಪ್ರೇಮ ಚಹಾ ಮಾಡಿ ತಂದಿಟ್ಟಳು. ಆವತ್ತು ಮೊದಲ ಬಾರಿಗೆಂಬoತೆ ಹೆಂಡತಿಗೆ ಮುಖ ಕೊಟ್ಟು ಪ್ರೀತಿಯಿಂದ ದಿಟ್ಟಿಸುತ್ತ ಸ್ವಲ್ಪ ಹೊತ್ತು ಅದೂ ಇದೂ ಮಾತಾಡಿದ. ಅವಳಲ್ಲೂ ಗಂಡನ ಮೇಲಿನ ಜಿಗುಪ್ಸೆ ಸ್ವಲ್ಪಮಟ್ಟಿಗೆ ಮಾಸಿದಂತೆ ಕಂಡಿತು. ಚಹಾ ಕುಡಿದ ನಂತರ, ‘ಹೇ ಪ್ರೇಮಾ…, ಸ್ವಲ್ಪ ಅಪ್ಪುನಾಯ್ಕರ ಮನೆಯಾಚೆ ಹೋಗಿ ಬರುತ್ತೇನೆ ಮಾರಾಯ್ತೀ. ಬರುವಾಗ ಕೋಳಿ ತರುತ್ತೇನೆ. ಮಸಾಲೆ ಕಡೆದಿಡು ಆಯ್ತಾ!’ ಎಂದು ಒಳಗಿದ್ದ ಹೆಂಡತಿಗೆ ಮೃದುವಾಗಿ ಹೇಳಿ ಹೊರಟು ಹೋದ. ಅದಕ್ಕವಳು ‘ಹ್ಞೂಂ ಆಯ್ತು…!’ ಎಂದು ಭಾವರಹಿತಳಾಗಿ ಅಂದಳು. ಆದರೆ ಅವಳು, ನಿನ್ನೆಯಿಂದ ಗಂಡ ತನ್ನ ಮೇಲೆ ತೋರುತ್ತಿರುವ ಒಲವನ್ನೂ ಮೃದುತ್ವವನ್ನೂ ಕಾಣದೆ ಬಹಳ ವರ್ಷವೇ ಕಳೆದಿತ್ತು. ಅಲ್ಲದೇ ಅವನು ಮೇರಿಯ ಸಂಗವನ್ನು ಕೂಡಾ ಬಿಟ್ಟಿರುವುದನ್ನು ತಿಳಿದಿದ್ದವಳು ಇಷ್ಟು ಕಾಲದ ಮೇಲಾದರೂ ತನ್ನ ಗಂಡ ದಾರಿಗೆ ಬಂದನಲ್ಲ…! ಎಂದುಕೊoಡು ನೆಮ್ಮದಿಪಟ್ಟಳು. ಮರುಕ್ಷಣ, ಅವನಿನ್ನು ತನ್ನವನೇ! ಎಂಬ ಭಾವವೂ ಮರಳಿ ಅವಳಲ್ಲಿ ಅರಳಲಾರಂಭಿಸಿತು.
ಇವತ್ತು ತೋಮ ಉತ್ಸಾಹದಿಂದ ಅಪ್ಪುನಾಯ್ಕನ ಮನೆಗೆ ಹೋದ. ಆ ಹೊತ್ತು ನಾಯ್ಕ ದಂಪತಿ ರಾತ್ರಿಯ ಗಾಳಿ ಮಳೆಗೆ ತೋಟದಲ್ಲಿ ಮುರಿದು ಬಿದ್ದಿದ್ದ ಬಾಳೆಗಿಡಗಳನ್ನು ಎತ್ತಿ ನಿಲ್ಲಿಸಿ ಆಸರೆ ಕೊಡುತ್ತ, ಮಡಲು ತೆಂಗಿನಕಾಯಿ ಮತ್ತು ತೆಪ್ಪರಿಗೆಗಳನ್ನು ಒಟ್ಟು ಗೂಡಿಸುತ್ತಿದ್ದರು. ತೋಮನೂ ಅತ್ತ ಹೋದ. ಹಿಂದಿನ ರಾತ್ರಿ ಕುಡಿದ ಸಾರಾಯಿಗೆ ಮರುದಿನ ಬೆಳಿಗ್ಗೆ ಒಂದಿಷ್ಟು ಎದುರು ಹಾಕದಿದ್ದರೆ ತೋಮನ ಕೈಕಾಲುಗಳು ಗಡಗಡ ನಡುಗುತ್ತ ಮುಷ್ಕರ ಹೂಡುತ್ತಿದ್ದವು. ಇವತ್ತೂ ಹಾಗೇ ಆಯಿತು. ಆದರೆ ಅಪ್ಪುನಾಯ್ಕ ಕೆಲಸದಲ್ಲಿ ಮಗ್ನನಾಗಿದ್ದಾನೆ. ಹೇಗೆ ಕೇಳುವುದು? ಎಂದು ಚಡಪಡಿಸುತ್ತ ಅವರನ್ನು ಸಮೀಪಿಸಿದ.
‘ಓಹೋ, ತೋಮನಾ ಬಾ ಮಾರಾಯಾ. ಹೇಗಿತ್ತು ನಿನ್ನೆಯ ಮಳೆಗಾಳಿ…?’ ಎಂದ ಅಪ್ಪುನಾಯ್ಕ.
‘ಹೌದು ಹೌದು ಎಂಥ ಮಳೆ…! ಸಿಕ್ಕಾಪಟ್ಟೆ ಬಡಿದಿತ್ತು ನಾಯ್ಕರೇ…! ಆದರೆ ನನಗೆ ನಡುರಾತ್ರಿಗೆ ಎಚ್ಚರವಾಗುವಾಗ ಸ್ವಲ್ಪ ಕಡಿಮೆಯಾಗಿತ್ತು. ನಮ್ಮದು ಸಿಮೆಂಟು ಶೀಟಿನ ಮಾಡಲ್ಲವಾ ಮಾರಾಯ್ರೇ. ಮಳೆಯಬ್ಬರ ಒಳಗಡೆ ಅಷ್ಟೊಂದು ಗೊತ್ತಾಗುವುದಿಲ್ಲ!’ ಎಂದ ತೋಮ ನಗುತ್ತ.
‘ಸಿಕ್ಕಾಪಟ್ಟೆ ಎಂಥದು ಸಾವು, ನಮ್ಮ ಹಟ್ಟಿಯ ಅರ್ಧ ಮಾಡೇ ಹಾರಿ ಹೋಗಿದೆ ಮಾರಾಯಾ…!’ ಎಂದ ಅಪ್ಪುನಾಯ್ಕ ಬೇಸರದಿಂದ.
‘ಹೌದಾ…ದನಗಳಿಗೇನೂ ತೊಂದರೆಯಾಗಿಲ್ಲ ಅಲ್ಲವಾ…?’
‘ದೇವರ ದಯೆಯಿಂದ ಹಾಗೇನೂ ಆಗಿಲ್ಲ. ಆದರೆ ಮಾಡು ಸರಿ ಮಾಡುವ ಕರ್ಮವೊಂದಿದೆಯಲ್ಲ ಮಾರಾಯಾ!’
‘ಅಯ್ಯೋ ನಾಯ್ಕರೇ ಅದರ ಚಿಂತೆ ಬಿಡಿ ನೀವು. ಅದಕ್ಕೆ ನಾನಿದ್ದೇನಲ್ಲ!’ ಎಂದ ತೋಮ ತಾನೂ ಮಡಲು ಮತ್ತು ಕಸಕಡ್ಡಿಗಳನ್ನು ಹೆಕ್ಕುವ ನಾಟಕವಾಡಿದ. ಅವನ ಮಾತು ಕೇಳಿದ ಅಪ್ಪುನಾಯ್ಕನಿಗೆ ಸ್ವಲ್ಪ ಹಗುರವಾಯಿತು. ಹಾಗಾಗಿ ಅವನು ತಲೆಯೆತ್ತಿ ತನ್ನ ಬಲ ಹಸ್ತವನ್ನು ಹಣೆಯ ಮೇಲಿಟ್ಟು ಎದುರಿನ ಸುಮಾರು ಅರವತ್ತು ಅಡಿ ಎತ್ತರದ ತೆಂಗಿನ ಮರವೊಂದನ್ನು ದೀರ್ಘವಾಗಿ ದಿಟ್ಟಿಸಿದವನು, ‘ಹೇ, ತೋಮಾ… ಇಲ್ಲಿ ಬಾರನಾ. ಈ ಮರದ ಬೊಂಡ ಕೊಯ್ಯಬೇಕಲ್ಲವಾ. ಸಂಪಿ, ಅಮ್ಮನವರ ದೇವಸ್ಥಾನಕ್ಕೆ ಸೀಯಾಳದ ಹರಕೆ ಕೊಡುತ್ತೇನೆ ಎಂದಿದ್ದಾಳೆ. ಒಂದಷ್ಟು ತೆಗೆದು ಕೊಡುತ್ತೀಯಾ?’ ಎಂದ.
ಆದರೆ ಅಷ್ಟು ಕೇಳಿದ ತೋಮನಿಗೆ ತೀವ್ರ ಚಡಪಡಿಕೆಯೆದ್ದಿತು. ಆದರೂ ಸಂಭಾಳಿಸಿಕೊಳ್ಳುತ್ತ, ‘ಅದಕ್ಕೇನಂತೆ ನಾಯ್ಕರೇ, ಕೊಯ್ದು ಕೊಡುವ. ಆದರೆ ಅದಕ್ಕಿಂತ ಮೊದಲು ಯಾವುದಕ್ಕೂ ಎರಡು ಗುಟುಕು ಗಂಗಸರ ಕುಡಿಯದೆ ನನ್ನಿಂದ ಒಂದು ಹುಲ್ಲುಕಡ್ಡಿಯನ್ನೂ ಅತ್ತಿಂದಿತ್ತ ಎತ್ತಿಡಲಿಕ್ಕಾಗುವುದಿಲ್ಲ ಅಂತ ನಿಮಗೂ ಗೊತ್ತುಂಟಲ್ಲವಾ! ನನ್ನ ಕೆಲಸವೇನಿದ್ದರೂ ಪರಮಾತ್ಮ ಹೊಟ್ಟೆಗಿಳಿದ ನಂತರವೇ. ನಡೀರಿ ಮನೆಗೆ ಹೋಗುವ. ಸ್ವಲ್ಪ ಕೊಡಿ. ಆಮೇಲೆ ಬೊಂಡವೇನು ಅದರಪ್ಪನನ್ನು ಬೇಕಾದರೂ ಕಿತ್ತು ಹಾಕುವ!’ ಎಂದು ಕಂಪಿಸುತ್ತ ಅಂದ.
‘ಓಹೋ…ಅದೂ ಹೌದಲ್ಲವಾ ಮಾರಾಯಾ, ನೀನು ಸಾರಾಯಿ ಕುಡಿಯದೆ ಯಾವತ್ತಾದರೂ ಕೆಲಸ ಮಾಡಿದ್ದುಂಟಾ. ಬಾ ಬಾ…!’ ಎಂದ ಅಪ್ಪುನಾಯ್ಕ ಅವನನ್ನು ಮನೆಗೆ ಕರೆದೊಯ್ದ. ಆಗ ಸಂಪಿಗೆ ಯಾಕೋ ಭಯವಾಯಿತು.
‘ನೋಡಿ ಮಾರಾಯ್ರೆ, ಅವನು ಮರ ಹತ್ತುವವನು. ಹೆಚ್ಚಿಗೆ ಕೊಡ್ಬೇಡಿ. ಕೆಲಸವಾದ ಮೇಲೆ ಎಷ್ಟು ಬೇಕಾದರೂ ಕುಡಿಯಲಿ!’ ಎಂದಳು ಆತಂಕದಿoದ.
‘ಆಯ್ತು ಮಾರಾಯ್ತಿ, ತೋಮನಿಗೆ ಅದೆಲ್ಲ ಅಭ್ಯಾಸವಿದೆ ಬಿಡು!’ ಎಂದು ಅಪ್ಪುನಾಯ್ಕ ಮನೆಯತ್ತ ನಡೆದಾಗ ತೋಮನೂ ಆತುರದಿಂದ ಹಿಂಬಾಲಿಸಿದ.
ಅಪ್ಪುನಾಯ್ಕ ಖಡಕ್ ಸಾರಾಯಿಯನ್ನು ಚೊಂಬಿಗೆ ಸುರಿದು ನೆಂಜಿಕೊಳ್ಳಲು ಅಪ್ಪೆಮಿಡಿ ಉಪ್ಪಿನಕಾಯಿಯನ್ನು ತಂದು ತೋಮನೆದುರಿಗಿಟ್ಟು ತಾನೂ ಕುಡಿಯಲು ಕುಳಿತ. ತೋಮ ಬೇಗಬೇಗನೇ ಅರ್ಧ ಚೆಂಬನ್ನು ಖಾಲಿ ಮಾಡಿದವನು ಉಪ್ಪಿನಕಾಯಿಯ ಹೋಳನ್ನು ಬಾಯಿಗೆಸೆದು ಫಟ್ಟೆಂದು ಸದ್ದು ಮಾಡಿ ಉಂಮ್ಞಾ…! ಎಂದು ಬಾಯಿ ಚಪ್ಪರಿಸಿ ನಕ್ಕ. ಬಳಿಕ ಇನ್ನಷ್ಟು ಹೊತ್ತು ಕುಳಿತು ಉಳಿದದ್ದನ್ನೂ ಕುಡಿದವನಿಗೆ ಆನೆಬಲಯ ಬಂದoತಾಯಿತು. ‘ಹ್ಞೂಂ ಈಗ ಹೊರಡುವ ನಾಯ್ಕರೇ. ಯಾವ ಮರ ಹತ್ತಬೇಕು ಹೇಳಿ…!’ ಎಂದವನು ಮರ ಹತ್ತುವ ಸಲಕರಣೆಗಳನ್ನು ಹೆಗಲಿಗೇರಿಸಿಕೊಂಡು ಹೊರಟ. ಅಪ್ಪುನಾಯ್ಕನೂ ಮೆಲುವಾಗಿ ನಗುತ್ತ ಅವನ ಹಿಂದೆ ಹೆಜ್ಜೆ ಹಾಕಿದ. ಅಪ್ಪುನಾಯ್ಕ ತೋರಿಸಿದ ತೆಂಗಿನಮರದ ಬುಡಕ್ಕೆ ಬಂದು ನಿಂತ ತೋಮ ಬೊಂಡವಿಳಿಸುವ ಹಗ್ಗದ ಸುರುಳಿಯನ್ನು ಹೆಗಲಿಗೇರಿಸಿದ. ತನ್ನ ಕಾಲುಗಳಿಗೆ ದುಂಡಗಿನ ಹಗ್ಗವನ್ನು ಸಿಲುಕಿಸಿ ಇನ್ನೊಂದು ಹಗ್ಗದಿಂದ ಮರವನ್ನು ಬಳಸಿ ಹಿಡಿದುಕೊಂಡು ಗೊಂಕರು ಕಪ್ಪೆಯಂತೆ ಎತ್ತರೆತ್ತರಕ್ಕೆ ನೆಗೆಯುತ್ತ ಹೋಗಿ ಕೆಲವೇ ನಿಮಿಷದಲ್ಲಿ ಮರದ ತುತ್ತತುದಿಗೆ ತಲುಪಿ ಮಡಲ ಹೆಡೆಯೊಂದರ ಮೇಲೆ ಕುಳಿತು ಸುಧಾರಿಸಿಕೊಂಡ. ಬಳಿಕ ಬಲಿತ ಬೊಂಡದ ಗೊನೆಯೊಂದನ್ನು ಕಡಿದು ಹಗ್ಗ ಕಟ್ಟಿ ಇಳಿಸಿದ. ಮಡಲುಗಳೆಡೆಯ ತಪ್ಪರಿಗೆ ಮತ್ತು ಕಸಕಡ್ಡಿಗಳನ್ನು ಕಿತ್ತು ಹೆಡೆಗಳನ್ನು ತುಳಿದು ಶುದ್ಧಗೊಳಿಸಲಾರಂಭಿಸಿದ. ಅಷ್ಟೊತ್ತಿಗೆ ಹೊಟ್ಟೆಯನ್ನು ಸೇರಿದ್ದ ಕಳ್ಳಭಟ್ಟಿಯು ತನ್ನ ಪ್ರತಾಪಕ್ಕೆ ಶುರುವಿಟ್ಟುಕೊಂಡಿತು. ಅದರಿಂದ ತೋಮನ ಕೆಲಸದ ಹುರುಪೂ ಹೆಚ್ಚಿತು. ಒಣಗಿದ ಒಂದಷ್ಟು ಕಾಯಿಗಳನ್ನು ತಪತಪನೆ ಉದುರಿಸಿದ. ಒಣಗಿ ಕಳಚಿ ಬೀಳಲ್ಲಿದ್ದ ಮಡಲೊಂದನ್ನು ತುಳಿದು ಕೆಡವಿದವನಿಗೆ ಒಮ್ಮೆಲೇ ಕಣ್ಣುಕತ್ತಲಿಟ್ಟಂತಾಯಿತು! ಓಹೋ, ಅಪ್ಪುನಾಯ್ಕನ ಈ ಸಲದ ಕಂಟ್ರಿ ಸಿಕ್ಕಾಪಟ್ಟೆ ಖಡಕ್ ಇದೆ! ಎಂದುಕೊoಡು ಆನಂದಿಸಿದ. ಆದರೆ ಕೆಲವುಕ್ಷಣದಲ್ಲಿ ಅವನಿಗೆ ಮತ್ತೊಮ್ಮೆ ತಲೆಸುತ್ತಿದಂತಾದಾಗ ಮನಸ್ಸಿನಾಳದಲ್ಲಿ ಭಯದ ಎಳೆಯೊಂದು ಮಿಂಚಿ ಮರೆಯಾಯಿತು. ಛೇ! ಛೇ! ನನಗೆಂಥ ಸಾವಿನ ಭಯವಾ…? ಎಂದುಕೊoಡು ಕಿಸಕ್ಕನೆ ನಕ್ಕು ಹಸಿ ಮಡಲಿನ ಎಡೆಯಲ್ಲಿ ಕಣ್ಣುಮುಚ್ಚಿ ಕುಳಿತು ಸುಧಾರಿಸಿಕೊಂಡ. ‘ನಾಯ್ಕರೇ, ಇದೆಂಥ ಮಾರಾಯ್ರೇ…! ನಿಮ್ಮ ಗಂಗಸರ ಇವತ್ತು ಒಟ್ಟಾರೆ ಮಂಡೆಗೇರುತ್ತಿದೆಯಲ್ಲಾ…!’ ಎಂದು ಅಬ್ಬರಿಸಿ ನಕ್ಕ.
ತೋಮನ ಕಾರ್ಯಾಚರಣೆಯನ್ನು ತಲೆಯೆತ್ತಿ ಕೊರಳು ಕೊಂಕಿಸಿ ನೋಡುತ್ತಿದ್ದ ಅಪ್ಪುನಾಯ್ಕನು, ‘ಹೌದು ಮಾರಾಯಾ. ಅದು ನಿನ್ನೆಯಷ್ಟೇ ಭಟ್ಟಿ ಇಳಿಸಿದ್ದು. ಸ್ವಲ್ಪ ಘರಂ ಇದೆ. ನಾಳೆ ನಾಡಿದ್ದರಲ್ಲಿ ಸರಿ ಹೋಗುತ್ತದೆ. ಅದಕ್ಕೆ ನಿನಗೆ ಸ್ವಲ್ಪವೇ ಕೊಟ್ಟಿದ್ದು. ಯಾವುದಕ್ಕೂ ಜಾಗ್ರತೆ ಮಾಡು ಮಾರಾಯಾ. ಆಗದಿದ್ರೆ ಬೇಗ ಇಳಿದುಬಿಡು. ಉಳಿದದ್ದನ್ನು ನಾಳೆ ನೋಡಿಕೊಳ್ಳುವಾ…!’ ಎಂದ ಆತಂಕದಿoದ. ಅಷ್ಟೊತ್ತಿಗೆ ತೋಮನೂ ಚೇತರಿಸಿಕೊಂಡ.
‘ನಾಳೆ ಮತ್ತೊಮ್ಮೆ ಎಂತದು ನೋಡುವುದು ಮಾರಾಯ್ರೇ…? ಕೆಲಸ ಮುಗಿಯಿತು. ಹೆಡೆ ತುಳಿದು ಇಳಿಯುತ್ತೇನೆ!’ ಎಂದವನು ಹೂ ಬಿಡುವುದರಲ್ಲಿದ್ದ ಮಡಲಿನ ಹೆಡೆಗಳ ಬುಡವನ್ನು ತುಳಿಯುತ್ತ ಅಗಲಗೊಳಿಸತೊಡಗಿದ. ಅಷ್ಟರಲ್ಲಿ ಮಗದೊಮ್ಮೆ ಕಣ್ಣು ಕತ್ತಲಿಟ್ಟು ದೇಹವಿಡೀ ಕಂಪಿಸಿತು. ಧೊಪ್ಪನೆ ಕುಸಿದು ಕುಳಿತ. ಹಿಂದಿನ ಭೀತಿಯು ಮರಳಿ ಅವನಲ್ಲಿ ಇಮ್ಮಡಿಯಾಗಿ ಎಲ್ಲವೂ ಈ ಕ್ಷಣವೇ ಮುಗಿದುಬಿಡುತ್ತದೇನೋ…? ಎಂಬ ಅನಿಷ್ಟ ಭಾವಯೊಂದು ವಿಕಾರವಾಗಿ ಕುಣಿಯುತ್ತ ಮೈ ಝಿಲ್ಲನೆ ಬೆವರಿತು. ಮರುಕ್ಷಣ ಅವನಿಗೆ ಪ್ರೇಮಾಳ ನೆನಪು ಒತ್ತರಿಸಿ ಬಂತು. ತನ್ನ ಹೆಂಡತಿಯ ಮೇಲೆ ಮೊದಲ ಬಾರಿಗೆ ಅತಿಯಾದ ಕಕ್ಕುಲತೆಯೂ ಅನುಕಂಪವೂ ಮೂಡಿ ಮಮ್ಮಲ ಮರುಗಿದ. ‘ಪಾಪದ ಹುಡುಗಿ ಅವಳು. ನಿನಗಾಗಿ ಏನೆಲ್ಲ ಪಾಡುಪಟ್ಟಳು. ಆದರೂ ಆ ಮುಗ್ಧೆಗೆ ಮೋಸ ಮಾಡಿಬಿಟ್ಟೆಯಲ್ಲ…! ಥೂ! ನೀಚ ನೀನು!’ ಎಂದಿತು ಅವನ ಒಳಮನಸ್ಸು. ಹೌದು! ತಪ್ಪು ಮಾಡಿಬಿಟ್ಟೆ ನಾನು. ಆದರೆ ಇನ್ನು ಮುಂದೆ ಅವಳಿಗೆ ಖಂಡಿತಾ ಕಷ್ಟ ಕೊಡುವುದಿಲ್ಲ. ಇಂದಿನಿAದ ಅವಳನ್ನೂ ತನ್ನ ಮಗಳನ್ನೂ ಸುಖವಾಗಿ ನೋಡಿಕೊಳ್ಳುವ ಜವಾಬ್ದಾರಿ ನನ್ನದು! ಎಂದು ಪಶ್ಚಾತ್ತಾಪವನ್ನೂ ಪಟ್ಟುಕೊಂಡ. ಆದರೂ ಅವನ ಮನಸ್ಸು ಸ್ಥಿಮಿತಕ್ಕೆ ಬರಲಿಲ್ಲ. ಮತ್ತೆ ಹಳೆಯ ಕೆಟ್ಟ ನೆನಪೊಂದು ಮುನ್ನೆಲೆಗೆ ನುಗ್ಗಿತು. ‘ನನ್ನ ಸಂಸಾರದ ಮಾನ ಮರ್ಯಾದೆಯನ್ನು ಮಣ್ಣುಪಾಲು ಮಾಡಿದಂಥ ನೀನು ಸರ್ವನಾಶವಾಗಿ ಹೋಗ್ತೀಯಾ…! ನಾನು ನಂಬಿದ ಪಂಜುರ್ಲಿ ದೈವದ ಸತ್ಯವು ನನ್ನ ಮೇಲೆ ಇರುವುದೇ ಆದರೆ ಅವನೇ ನೋಡಿಕೊಳ್ಳಲಿ…!’ ಎಂದು ಅತ್ತೆ ದುರ್ಗಕ್ಕನ ಹತಾಶೆ ಮತ್ತು ಆಕ್ರಂದನದ ಮಾತುಗಳು ಏಕಾಏಕಿ ಅವನೊಳಗೆ ಮಾರ್ದನಿಸಿದಂತೆ ಅನ್ನಿಸಿಬಿಟ್ಟಿತು. ಮರುಕ್ಷಣ ಅವನ ಭ್ರಮೆಯೋ ಅಥವಾ ನಿಚ್ಚಳವೋ ದಟ್ಟ ಕೂದಲಿನ ನೀಳ ಉಗುರುಗಳಿಂದ ಕೂಡಿದ ಕಪ್ಪಗಿನ ವಿಕಾರ ಹಸ್ತಗಳೆರಡು ಅವನ ಕಣ್ಣೆದುರು ಕೇಕೇ ಹಾಕಿ ಸುಳಿಯುತ್ತ ಅವನ ಕೊರಳನ್ನು ಸೀಳುವಂಥ ಭಯವನ್ನು ಹುಟ್ಟಿಸಿದವು. ಅಷ್ಟಕ್ಕೆ ಅವನು ಬೆಚ್ಚಿಬಿದ್ದು ಎದ್ದು ನಿಲ್ಲುವುದಕ್ಕೂ ಅವನು ಕುಳಿತಿದ್ದ ಗಟ್ಟಿಮುಟ್ಟಾದ ಹಸಿ ಮಡಲೊಂದು ಸರಕ್ಕನೆ ಮುರಿಯುವುದಕ್ಕೂ ಸರಿಹೋಗಿತ್ತು! ಮುಂದಿನಕ್ಷಣ ತೋಮ ಅರವತ್ತು ಅಡಿ ಎತ್ತರದಿಂದ ತಲೆ ಕೆಳಗಾಗಿ ಉರುಳಿ ಧೊಪ್ಪನೆ ನೆಲಕ್ಕಪ್ಪಳಿಸಿಬಿಟ್ಟ!
ನೋಡನೋಡುತ್ತಿದ್ದಂತೆಯೇ ತೋಮನ ದೇಹವು ಬಂದು ತಮ್ಮ ಮುಂದೆಯೇ ಬಿದ್ದುದನ್ನು ಕಂಡ ಅಪ್ಪುನಾಯ್ಕ ಮತ್ತು ಸಂಪಿ ಇಬ್ಬರೂ ದಿಗ್ಭಾçಂತರಾದರು. ಸಂಪಿ ಧೊಪ್ಪನೆ ಕುಸಿದವಳು, ‘ಅಯ್ಯಯ್ಯೋ, ದೇವರೇ…! ಎಂಥ ಅನಾಹುತವಾಗಿಬಿಟ್ಟಿತಪ್ಪಾ..!’ ಎಂದು ಉದ್ಘರಿಸಿದವಳು, ‘ಆ ಹುಚ್ಚನಿಗೆ ಅಷ್ಟೊಂದು ಕುಡಿಯಲು ಕೊಡಬೇಡಿ ಅಂತ ನಾನಾಗಲೇ ಬಡಕೊಂಡೆ. ನಿಮಗದು ಅರ್ಥವೇ ಆಗಲಿಲ್ಲವಲ್ಲ ಮಾರಾಯ್ರೇ…? ಇನ್ನೇನು ಮಾಡುವುದು ಭಗವಂತಾ…?’ ಎಂದು ದಿಕ್ಕು ತೋಚದೆ ಅತ್ತಳು. ಬಳಿಕ, ‘ಹ್ಞೂಂ, ಬೇಗ ಬೇಗ ಹೋಗಿ ನೆರೆಕರೆಯವರನ್ನು ಕರೆದುಕೊಂಡು ಬನ್ನಿ. ಇವನನ್ನು ಆಸ್ಪತ್ರೆ ಸೇರಿಸುವ!’ ಎಂದು ಗಂಡನಿಗೆ ಆಜ್ಞಾಪಿಸಿದಳು. ಅವನು ಗರಬಡಿದಂತಾಗಿದ್ದವನು, ‘ಓ ಪರಮಾತ್ಮಾ…! ನನಗೇನು ಗೊತ್ತಿತ್ತು ಮಾರಾಯ್ತಿ ಹೀಗಾಗುತ್ತದೆ ಅಂತ…! ಇವನು ಹಿಂದೆಯೂ ಎಷ್ಟೋ ಸಲ ಹೀಗೆಯೇ ಕುಡಿದು ಮರ ಹತ್ತಿದವನಲ್ಲವಾ? ಇವತ್ತು ಅವನ ಗ್ರಾಚಾರ ಕೆಟ್ಟಿತ್ತಾ ಅಥವಾ ನಮ್ಮ ಹಣೆಬರಹವೇ ಹಾಳಾಯಿತಾ ಆ ದೇವರಿಗೆ ಗೊತ್ತು…?’ ಎಂದವನು ಆಸುಪಾಸಿನವರನ್ನು ಕರೆತರಲು ಧಾವಿಸಿದ.
(ಮುಂದುವರೆಯುವುದು)