ಧಾರವಾಹಿ 44

ಶೆಟ್ಟರ ತೋಟದ ಜಾಯಿಕಾಯಿ ಮಾರಿದ ಮೂರು ಸಾವಿರ ರೂಪಾಯಿಗಳು ಲಕ್ಷ್ಮಣನ ಕೈಸೇರುತ್ತಲೇ ಅವನ ಗತ್ತೇ ಬೇರಾಗಿಬಿಟ್ಟಿತು. ಹಿಂದೆ ಕೆಲವು ಬಾರಿ ಶಿವಕಂಡಿಕೆಗೆ ಬಂದಿದ್ದಾಗ ಅಲ್ಲಿನ ದೊಡ್ಡ ಮೀನು ಮಾರುಕಟ್ಟೆಯತ್ತ ಹೋಗುತ್ತಿದ್ದವನು ಅಲ್ಲಿ ವಿವಿಧ ಬಗೆಯ ಮೀನು ಮತ್ತು ಮಾಂಸ ಮಾರಾಟದ ಸಣ್ಣದೊಂದು ಜಾತ್ರೆಯೇ ನೆರೆದಿರುತ್ತಿದ್ದುದನ್ನೂ, ಮೀನು ಮಾರಾಟದಲ್ಲಿ ನಿರತರಾಗಿರುತ್ತಿದ್ದ ಸಾಲುಸಾಲು ಮೀನುಗಾರ ಹೆಂಗಸರನ್ನೂ ಮತ್ತು ಅವರೆದುರು ಕಿಕ್ಕಿರಿದು ನಿಂತು, ಕುಳಿತು, ಓಡಾಡುತ್ತ ಎಡೆಬಿಡದೆ ಚೌಕಾಶಿ ಮಾಡುತ್ತಿದ್ದ ಜನಸ್ತೋಮವನ್ನೂ ಕಾಣುತ್ತ ಅವರ ನಡುವೆ ನಿರಾಶೆಯಿಂದ ತಿರುಗಾಡುತ್ತಿದ್ದವನು ಎಂದಾದರೊoದು ದಿನ ತಾನೂ ಕೈತುಂಬ ದುಡ್ಡು ಹಿಡಿದುಕೊಂಡು ಬಂದು ಒಳ್ಳೆಯ, ದುಬಾರಿ ಬೆಲೆಯ ಮೀನುಗಳನ್ನು ಕೊಂಡುಕೊಳ್ಳಲೇಬೇಕು ಎಂದುಕೊoಡಿದ್ದವನ ಬಯಕೆಯು ಈಗ ರಪ್ಪನೆ ಗರಿಬಿಚ್ಚಿತು. ಕೂಡಲೇ ಅತ್ತ ನಡೆದ. ಆದರೆ ಮಾರುಕಟ್ಟೆ ಸಮೀಪಿಸುತ್ತಲೇ ಎದುರಿಗೆ, ‘ಅಮೃತ್ ಬಾರ್ ಆಂಡ್ ರೆಸ್ಟೋರೆಂಟ್’ ಎಂಬ ದೊಡ್ಡ ಬೋರ್ಡೊಂದು ಕಾಣಿಸಿತು. ಅವನಿಗದು ಸರಿಯಾಗಿ ಓದಲು ಬಾರದಿದ್ದರೂ ಬೋರ್ಡಿನ ಮೇಲಿದ್ದ ಬಣ್ಣದ ಬಾಟಲಿ ಮತ್ತು ಗ್ಲಾಸಿನ ಚಿತ್ರಗಳಿಂದ ಅದು ತನ್ನಂಥವರಿಗಾಗಿಯೇ ತೆರೆದಿರುವ, ‘ಮದಿರಾ ಮಂಟಪ’ ಎಂಬುದನ್ನು ಅರ್ಥೈಸಿಕೊಂಡ. ಹಿಂದೆ ಉಸ್ಮಾನ್ ಸಾಹೇಬರೊಂದಿಗೆ ಬಹಳಷ್ಟು ಬಾರಿ ವಿದೇಶಿ ಮದ್ಯ ಹೀರುತ್ತಿದ್ದವನ ಮನಸ್ಸು ಇಂದು ಬಿರುಗಾಳಿಗೆ ಸಿಲುಕಿದ ತರಗೆಲೆಯಂತೆ ಅತ್ತಲೇ ಹಾರತೊಡಗಿತು. ಆದರೂ ಕಷ್ಟಪಟ್ಟು ನಿಯಂತ್ರಿಸಿಕೊoಡು ಮೊದಲು ಮೀನು ಮಾರುಕಟ್ಟೆ ಹೊಕ್ಕವನು ಮೀನುಗಾರ ಮಹಿಳೆಯರೊಡನೆ ಸ್ವಲ್ಪವೂ ಚೌಕಾಶಿ ಮಾಡದೆ ಅವರು ಹೇಳಿದ ಬೆಲೆಯನ್ನು ಕೊಟ್ಟು ಒಂದಷ್ಟು ಸೋಂಟೆ ಬಂಗುಡೆ ಮತ್ತು ಕೊಡ್ಡಯ್ ಕಲ್ಲೂರ್ ಮೀನುಗಳನ್ನು ಕೊಂಡು ಅಲ್ಲಿಂದ ಸೀದಾ ಬಾರ್ ಹೊಕ್ಕು ಒಳಕೋಣೆಗೆ ಹೋಗಿ ಕುಳಿತ. ಅವನನ್ನು ಗಮನಿಸಿದ ವೇಟರ್ ಒಬ್ಬ ಸಾವಕಾಶವಾಗಿ ಬಂದವನು ಇವನ ಇಸ್ತಿçà ಕಾಣದೆ ನೆರಿಗೆ ಗಟ್ಟಿದ್ದ ಅಂಗಿಯನ್ನೂ, ಬಣ್ಣ ಮಾಸಿದ ಬೆಳ್ಳಗಿನ ಲುಂಗಿಯನ್ನೂ ಕಂಡು ಹುಬ್ಬುಗಂಟಿಕ್ಕಿವನು, ‘ಏನು ಬೇಕಿತ್ತು…?’ ಎಂದು ಅಸಡ್ಡೆಯಿಂದ ಪ್ರಶ್ನಿಸಿದ.
‘ಒಳ್ಳೆಯ ಮಾಲು ಯಾವುದುಂಟು ಮಾರಾಯಾ…?’ ಎಂದು ಲಕ್ಷ್ಮಣನೂ ರುಬಾಬಿನಿಂದ ಕೇಳಿದ. ವೇಟರ್ ಅವನನ್ನು ಆಪಾದಮಸ್ತಕ ದಿಟ್ಟಿಸಿದವನು, ‘ಒಳ್ಳೆಯ ಮಾಲು ತುಂಬಾ ಇದೆ. ಆದರೆ ಅದನ್ನು ಕುಡಿಯುವಷ್ಟು ದುಡ್ಡಿದೆಯಾ ನಿಮ್ಮ ಹತ್ರ…?’ ಎಂದ ಉದಾಸೀನದಿಂದ.
ಲಕ್ಷ್ಮಣನಿಗೆ ತೀರಾ ಅವಮಾನವೆನಿಸಿತು. ‘ಅಂದರೇನು ಮಾರಾಯಾ…? ದುಡ್ಡಿಲ್ಲದೆ ಬಾರಿಗೆ ಬರಲು ಹುಚ್ಚಾ ನಂಗೆ! ನೀನೆಂಥ ಸಸಾರ ಮಾತಾಡುವುದು…?’ ಎಂದ ಕೋಪದಿಂದ. ಅಷ್ಟು ಕೇಳಿದ ವೇಟರ್ ಸ್ವಲ್ಪ ತಣ್ಣಗಾದ. ಆದರೂ ದುಬಾರಿ ಮಾಲು ತಂದು ಕೊಡಲು ಹಿಂಜರಿಯುತ್ತ, ‘ಆಯ್ತು ಬಂದೇ…!’ ಎಂದು ಒಳಗೆ ಹೋಗಿ ಅಗ್ಗದ ಬೆಲೆಯ ಒಂದು ಕ್ವಾರ್ಟರ್ ಮೈಸೂರು ಲ್ಯಾನ್ಸರ್ ವಿಸ್ಕಿಯನ್ನು ತಂದು ಅವನ ಮುಂದಿಟ್ಟ. ಲಕ್ಷ್ಮಣ ಅವನತ್ತ ವ್ಯಂಗ್ಯ ನಗು ಬೀರಿದವನು ವಿಸ್ಕಿಯನ್ನು ಗ್ಲಾಸಿಗೆ ಸುರಿದು ಸ್ವಲ್ಪ ನೀರು ಬೆರೆಸಿ ಗಟಗಟನೆ ಕುಡಿದ. ಹೊಸ ರುಚಿ ಮನಸ್ಸಿಗೆ ಮುದ ನೀಡಿತು. ಇನ್ನೊಂದು ಕ್ವಾರ್ಟರ್ ತರಿಸಿಕೊಂಡು ಕುಡಿದ. ನಂತರ ಒಂದು ಫುಲ್ ಬಾಟಲ್ ಕಟ್ಟಿಸಿಕೊಂಡು ಬರಲು ವೇಟರ್‌ನಿಗೆ ಸೂಚಿಸಿದ. ಆಗ ವೇಟರ್ ನಿಜಕ್ಕೂ ಅಳುಕಿದವನು, ‘ಇಲ್ನೋಡಿ ಇವ್ರೇ, ಕಾಸು ಉಂಟಲ್ಲವಾ…? ಅದು ದುಬಾರಿ ಮಾಲು!’ ಎಂದ ಆತಂಕದಿoದ.
‘ಹೇ, ಹೋಗ್ ಹೋಗು ಮಾರಾಯಾ, ಹೇಳಿದಷ್ಟು ಮಾಡು. ಅದೆಷ್ಟು ದುಬಾರಿ ಅಂಥ ನಾನೂ ನೋಡಿಯೇ ಬಿಡ್ತೇನೆ. ಹಾಗೇ ಒಂದು ಪ್ಲೇಟ್ ಮಟನ್ ಸುಕ್ಕ ಮತ್ತು ಕುಚ್ಚಲಕ್ಕಿ ಊಟವನ್ನೂ ತಕೊಂಡು ಬಾ!’ ಎಂದ ಉಡಾಫೆಯಿಂದ. ವೇಟರ್ ತಲೆ ಕೆರೆದುಕೊಳ್ಳುತ್ತ ಹೊರಟವನು, ‘ಆಮೇಲೆ ಎಲ್ಲಾದರೂ ಬಿಲ್ಲು ನೋಡಿ ಅಯ್ಯೋ, ದೇವರೇ! ಇಷ್ಟಾಯಿತಾ? ನನ್ನ ಹತ್ರ ಅಷ್ಟಿಲ್ಲ, ಇಷ್ಟಿಲ್ಲ! ಅಂತ ರಾಗ ಎಳೆಯಬೇಕು ಮಗನೇ…! ಆವಾಗ ಇದೆ ನಿನಗೆ ಮಾರಿ ಹಬ್ಬ!’ ಎಂದು ಒಳಗೊಳಗೇ ಬೈಯ್ಯುತ್ತ ಹೋಗಿ ಸಾರಾಯಿ ಬಾಟಲಿಯೊಂದಿಗೆ ಊಟವನ್ನೂ, ಬಿಲ್ಲನ್ನೂ ಒಟ್ಟಿಗೆ ತಂದು ಅವನ ಮುಂದಿಟ್ಟ. ಅದನ್ನು ಕಂಡ ಲಕ್ಷö್ಮಣನಿಗೆ ರೇಗಿಬಿಟ್ಟಿತು. ‘ಅಲ್ಲ ಮಾರಾಯಾ ನೀನು ನನ್ನನ್ನು ಏನೂಂತ ಭಾವಿಸಿದ್ದೀ! ಕಾಸು ಕೊಡದೆ ಓಡಿ ಹೋಗುವ ಅಗ್ಗದ ಮನುಷ್ಯನೆಂದುಕೊoಡೆಯಾ…? ಗಿರಾಕಿಗಳ ಮೇಲೆ ಸ್ವಲ್ಪ ಮರ್ಯಾದೆಯಿರಲಿ ಗೊತ್ತಾಯ್ತಾ…!’ ಎಂದು ಅವನನ್ನು ಕೆಕ್ಕರಿಸಿದವನು, ‘ಹೋಗ್ ಹೋಗು ಇದನ್ನು ಆ ಮೇಲೆ ತಕೊಂಡು ಬಾ!’ ಎಂದು ಬಿಲ್ಲನ್ನೆತ್ತಿ ಪಕ್ಕದ ಟೇಬಲ್ಲಿಗೆ ಎಸೆದುಬಿಟ್ಟ. ಆಗ ವೇಟರ್ ಅವಕ್ಕಾದರೂ ತನ್ನ ಕೋಪವನ್ನು ನುಂಗಿಕೊoಡ.
ಲಕ್ಷ್ಮಣ ಬೇಕೆಂದೇ ನಿಧಾನವಾಗಿ ಊಟ ಮಾಡಿದವನು ಬಳಿಕ ಉದಾಸೀನದಿಂದ ಬಿಲ್ಲು ಕೈಗೆತ್ತಿಕೊಂಡ. ಮುನ್ನೂರು ರೂಪಾಯಿ ಆಗಿತ್ತು. ವೇಟರನನ್ನು ನೋಡುತ್ತ ವ್ಯಂಗ್ಯವಾಗಿ ನಕ್ಕ. ಅವನಿಗೆ ತಲೆಚಿಟ್ಟು ಹಿಡಿಯಿತು. ನಂತರ ಲಕ್ಷ್ಮಣ ತನ್ನ ದೊಗಳೆ ಚಡ್ಡಿಯ ಜೇಬಿಗೆ ಕೈ ತುರುಕಿಸಿ ಕ್ಷಣಹೊತ್ತು ತಡಕಾಡಿದ. ಮರುಕ್ಷಣ ಅವನ ಮುಖ ರಪ್ಪನೆ ಕಪ್ಪಿಟ್ಟಿತು. ‘ಅಯ್ಯಯ್ಯೋ, ದೇವರೇ…! ದುಡ್ಡು ಎಲ್ಲಿಗೆ ಹೋಯ್ತು ಮಾರಾಯಾ…?’ ಎಂದು ಆತಂಕದಿoದ ಗೊಣಗುತ್ತ ವೇಟರ್‌ನನ್ನು ದಿಟ್ಟಿಸಿದ. ಅವನು ಮತ್ತಷ್ಟು ಬಿಳಿಚಿಕೊಂಡ. ಲಕ್ಷ್ಮಣ, ‘ದುಡ್ಡೆಲ್ಲಿ ಬಿದ್ದಿರಬಹುದು…? ಎಂದು ಛಾವಣಿ ನಿಟ್ಟಿಸುತ್ತ ಯೋಚಿಸಿದ. ಅವನ ಭಂಗಿಯನ್ನು ಕಂಡ ವೇಟರ್ ಸಂಪೂರ್ಣ ಅಡಿಮೇಲಾಗಿಬಿಟ್ಟ. ‘ಏಯ್, ಏನಾಯ್ತು ಮಾರಾಯಾ…, ಕಾಸಿಲ್ಲವಾ…?’ ಎಂದು ಏಕವಚನದಲ್ಲೇ ಕೇಳಿದವನು, ‘ನೀನು ಒಳಗಡಿಯಿಟ್ಟಾಗಲೇ ಅಂದುಕೊoಡೆ, ನಿನ್ನ ಹತ್ರ ನಯಾಪೈಸೆ ಇರಲಿಕ್ಕಿಲ್ಲ ಅಂತ. ಆದರೂ ಗಿರಾಕಿಯಲ್ಲವಾ ದುಡುಕಬಾರದು ಅಂತ ನೀನು ಕೇಳಿದ್ದನ್ನೆಲ್ಲ ತಂದುಕೊಟ್ಟೆ. ಈಗ ನೋಡಿದರೆ ನಾಟಕವಾಡುತ್ತಿದ್ದೀಯಾ…! ಮರ್ಯಾದೆಯಿಂದ ಬಿಲ್ಲು ಕೊಟ್ಟರೆ ಸರಿ. ಇಲ್ಲದಿದ್ದರೆ ನಿನ್ನನ್ನು ಸುಮ್ಮನೆ ಬಿಡಲಿಕ್ಕಿಲ್ಲ! ಮೊದಲೇ ನನ್ನ ಧಣಿಗಳು ಮೂರು ತಿಂಗಳ ಸಂಬಳ ಬಾಕಿ ಇಟ್ಟುಕೊಂಡಿದ್ದಾರೆ. ಅದರ ನಡುವೆ ಇದನ್ನೂ ತಿಳಿದರೆಂದರೆ ಮತ್ತೆ ನನ್ನ ಅವಸ್ಥೆ ದೇವರೇ ಗತಿ!’ ಎಂದು ಕೋಪವನ್ನೂ, ತನ್ನ ದೈನೇಸಿತನವನ್ನೂ ಒಟ್ಟಿಗೆ ತೋರಿಸಿಕೊಂಡ. ಇತ್ತ ಸ್ವಲ್ಪಹೊತ್ತು ವೇಟರನ ಒದ್ದಾಟವನ್ನು ಗಮನಿಸುತ್ತ ಕುಳಿತ ಲಕ್ಷ್ಮಣ ಬಳಿಕ ಜೋರಾಗಿ ನಗುತ್ತ, ‘ಹಾಗೆ ಬಾ ದಾರಿಗೆ…! ನೀನು ನನ್ನನ್ನು ಭಿಕಾರಿ ಅಂತoದುಕೊoಡೆಯಲ್ಲ! ನಿಜವಾಗಿಯೂ ನಾನು ಯಾರೂಂತ ಗೊತ್ತುಂಟಾ? ಗಂಗರಬೀಡಿನ ಶ್ರೀಧರ ಶೆಟ್ಟರ ಬಗ್ಗೆ ಕೇಳಿರಬಹುದು ನೀನು. ಅವರ ಬಲಗೈ ಭಂಟನೇ ನಾನು! ಅಂಥವನ ಹತ್ರ ನಿನ್ನ ಮೂರುಕಾಸಿನ ಬಾರಿನಲ್ಲಿ ಕುಡಿಯುವಷ್ಟು ದುಡ್ಡಿರಲಿಕ್ಕಿಲ್ಲ ಅಂತ ನೀನ್ಹೇಗೆ ಭಾವಿಸಿದೆ ಹೇಳು?’ ಎಂದು ಅವನನ್ನು ಕೆಕ್ಕರಿಸಿ ನೋಡಿದ. ಅಷ್ಟಕ್ಕೆ ವೇಟರ್ ತಣ್ಣಗಾಗಿ ತಲೆತಗ್ಗಿಸಿದ. ‘ತಗೊ ನಿನ್ನ ಬಿಲ್ಲು!’ ಎಂದು ನಾಲ್ನೂರು ರೂಪಾಯಿಗಳನ್ನು ಒಣಗಿ ಚಿರುಟಿದ ಬಡೆಸೋಪಿನ ತಟ್ಟೆಗೆಸೆದವನು, ‘ತುಂಬಾ ಹೆದರಿದ್ದೀಯಂತ ಕಾಣುತ್ತದೆ. ನೂರು ರೂಪಾಯಿ ನೀನೇ ಇಟ್ಟುಕೋ. ಇನ್ನು ಮುಂದೆ ಯಾವತ್ತೂ ಯಾರ ಬಟ್ಟೆಬರೆಗಳನ್ನೂ ನೋಡಿ ಅವರ ಯೋಗ್ಯತೆಯನ್ನು ಅಳೆಯಲು ಹೋಗಬೇಡ ಆಯ್ತಾ…?’ ಎಂದ ಗಂಭೀರವಾಗಿ.
ಯಾವನೋ ಜುಜುಬಿ ಕುಡುಕನೊಬ್ಬ ತನ್ನನ್ನೇ ಏಮಾರಿಸಿದ್ದನ್ನು ಕಂಡ ವೇಟರನಿಗೆ ತೀರಾ ಕೋಪ ಬಂತು. ಆದರೆ ಅವನು ಗತ್ತಿನಿಂದೆಸೆದ ನೂರರ ನೋಟು ಮತ್ತು ಶ್ರೀಧರ ಶೆಟ್ಟರ ಹೆಸರೂ ಕೂಡಿ ಅವನ ಸಿಟ್ಟನ್ನು ರಪ್ಪನೆ ಇಳಿಸಿಬಿಟ್ಟವು. ಆದ್ದರಿಂದ ಅವನು ಪಶ್ಚಾತ್ತಾಪಪಟ್ಟಂತೆ ಪೆಚ್ಚು ನಗುತ್ತ, ‘ಏನೋ ತಪ್ಪು ತಿಳಿದುಕೊಂಡೆ ಮಾರಾಯ್ರೇ ಕ್ಷಮಿಸಿಬಿಡಿ. ನೀವು ಒಳ್ಳೆಯವರು, ಪರ‍್ವಾಗಿಲ್ಲ. ಆದರೆ ಇನ್ನು ಕೆಲವರು ಬರುತ್ತಾರೆ, ನಮ್ಮಂಥ ಬಡ ವೇಟರ್‌ಗಳ ಜೀವ ಹಿಂಡಿ ಹಿಪ್ಪೆ ಮಾಡಿ ಹೋಗುತ್ತಾರೆ. ಹಾಗಾಗಿ ನಿಮ್ಮನ್ನೂ…!’ ಎಂದು ರಾಗವೆಳೆದು ತನ್ನ ತಪ್ಪನ್ನು ಸಮರ್ಥಿಸಿಕೊಂಡ. ಲಕ್ಷ್ಮಣ ಡಿಂಗ್ ಆಗಿದ್ದವನು, ‘ಆಯ್ತು ಆಯ್ತು ರ‍್ಲಿ. ಆದ್ರೆ ಯಾವ ಪುಂಚದಲ್ಲಿ(ಹುತ್ತದಲ್ಲಿ) ಎಂಥ ಉಚ್ಚು(ಹಾವು) ಇರುತ್ತದೆ ಅಂತ ನೀನೂ ತಿಳ್ಕೊಂಡೇ ಕೈ ಹಾಕಬೇಕಲ್ಲವಾ ಮಾರಾಯಾ!’ ಎನ್ನುತ್ತ ಎದ್ದು ನಿಂತ. ‘ಅದೂ ಹೌದು!’ ಎಂದ ವೇಟರ್ ಅವನಿಗೆ ದೊಡ್ಡ ಸೆಲ್ಯೂಟೊಂದನ್ನು ಹೊಡೆದಾಗ ಲಕ್ಷ್ಮಣನಿಗೆ ಪಾಪವೆನಿಸಿತು. ಇನ್ನೊಂದು ಐವತ್ತರ ನೋಟು ತೆಗೆದು ಕೊಟ್ಟ. ವೇಟರ್ ರಪ್ಪನೆ ಅದನ್ನೂ ಜೇಬಿಗಿಳಿಸುತ್ತ ಬದಿಗೆ ಸರಿದು ಅವನಿಗೆ ದಾರಿ ಮಾಡಿಕೊಟ್ಟವನು ಲಕ್ಷ್ಮಣ ಹೊರಗೆ ಹೋಗುವವರೆಗೆ ಅನಾಥನಂತೆ ವರ್ತಿಸುತ್ತ ನಿಂತುಬಿಟ್ಟ. ಆದರೆ ಲಕ್ಷ್ಮಣ ಹೊರಗೆ ಅಡಿಯಿಟ್ಟಿದ್ದನೋ ಇಲ್ಲವೋ, ‘ಹೋಗ್, ಹೋಗನಾ ಕುಡ್ಚೆಲ…! (ಕುಡುಕ) ಯರ‍್ಯಾರದ್ದೋ ಕಾಸು ಹೊಡೆದೋ ಮನೆಯ ಪಾತ್ರೆಪರಡಿ ಮಾರಿಯೋ ಅಥವಾ ಹೆಂಡತಿ ಮಕ್ಕಳ ಬೆಳ್ಳಿ ಬಂಗಾರವನ್ನು ಅಡವಿಟ್ಟೋ ಇಂಥ ಹೊಟೇಲುಗಳಿಗೆ ಬಂದು ರುಬಾಬ್ ತೋರಿಸುವ ನಿನ್ನಂಥ ಲಫಂಗರನ್ನು ನನ್ನ ಸರ್ವೀಸಿನಲ್ಲಿ ಅದೆಷ್ಟೋ ಕಂಡಿದ್ದೇನೋ. ಥೂ! ನಿನ್ನ ಜನ್ಮಕ್ಕಿಷ್ಟು!’ ಎಂದು ಉಗಿದು ಕೌಂಟರಿನತ್ತ ಹೆಜ್ಜೆ ಹಾಕಿದ.
ಇತ್ತ ಲಕ್ಷ್ಮಣ ತೂರಾಡುತ್ತ ಶಿವಕಂಡಿಕೆಯ ಬಸ್ಸು ನಿಲ್ದಾಣದತ್ತ ಹೊರಟ. ಅವನ ಎಡಗೈಯಲ್ಲಿ ಸಾರಾಯಿ ಬಾಟಲಿಯ ತೊಟ್ಟೆಯೂ, ಬಲಗೈಯಲ್ಲಿ ಮೀನಿನ ಚೀಲವೂ ಹಾಗೂ ಅದರ ಸುತ್ತಲೂ ಅಸಂಖ್ಯಾತ ನೊಣಗಳ ಹಿಂಡೊoದೂ ಗಂಗರಬೀಡಿನ ಬಸ್ಸು ಹತ್ತಿ ಸಂಜೆ ಸುಮಾರು ನಾಲ್ಕರ ಹೊತ್ತಿಗೆ ಅವನ ಮನೆಯಂಗಳವನ್ನು ತಲುಪಿದವು. ‘ಸರೂ…ಹೇ ಸರೂ, ನೀನೊಬ್ಬಳು ಎಲ್ಲಿ ಸತ್ತಿದ್ದಿ ಮಾರಾಯ್ತಿ… ಹೊರಗೆ ಬಾರನಾ…!’ ಎಂದು ಲಕ್ಷ್ಮಣ ಓಲಾಡುತ್ತ ಅರಚಿದ. ಆದರೆ ಸರೋಜ ಶೆಟ್ಟರ ಬಾಯಿಯಿಂದ ಅದಾಗಲೇ ಗಂಡನ ಘನಕಾರ್ಯವನ್ನು ಕೇಳಿದ್ದವಳು ಗಂಡನ ಸ್ವರ ಕೇಳಿದ ಕೂಡಲೇ ಭಯದಿಂದ ನಡುಗಿಬಿಟ್ಟಳು. ಹೊರಗೆ ಧಾವಿಸಿ ಬಂದು ಅವನ ರಟ್ಟೆಯನ್ನು ಹಿಡಿದು ಒಳಗೆಳೆದೊಯ್ದವಳು, ‘ಅಯ್ಯಯ್ಯೋ ಮಾರಾಯ್ರೇ…! ದಮ್ಮಯ್ಯ ನಿಮ್ಮ ದೊಂಡೆಯನ್ನು ಜೋರಾಗಿ ಬಿಚ್ಚಬೇಡಿ. ನಿಮ್ಮ ಅನ್ಯಾಯ ಆಗಲೇ ಧಣಿಗಳಿಗೆ ಗೊತ್ತಾಗಿಬಿಟ್ಟಿದೆ. ಅವರು ಪೊಲೀಸ್ ಕಂಪ್ಲೆoಟು ಕೂಡಾ ಕೊಟ್ಟಿದ್ದಾರೆ. ಹಾಗಾಗಿ ಜಾಯಿಕಾಯಿ ಮಾರಿದ ದುಡ್ಡನ್ನು ಈಗಲೇ ಹೋಗಿ ಅವರಿಗೆ ವಾಪಾಸು ಕೊಟ್ಟು ಅವರ ಕಾಲಿಗೆ ಬಿದ್ದು ಕ್ಷಮೆ ಕೇಳಿಕೊಳ್ಳಿ. ಬಿಟ್ಟುಬಿಡುತ್ತಾರೆ. ನಿಮ್ಮ ದಮ್ಮಯ್ಯ ಒಮ್ಮೆ ಹೋಗಿ ಮಾರಾಯ್ರೇ…!’ ಎಂದು ಕಣ್ಣೀರಿಡುತ್ತ ಗೋಗರೆದಳು. ಅಷ್ಟು ಕೇಳಿದ ಲಕ್ಷ್ಮಣನಿಗೆ ತಾನು ಕುಡಿದ ‘ಕಂಪನಿ’ ಮಾಲು ರ‍್ರನೆ ಇಳಿಯುವ ಬದಲು ರ‍್ರಾಬರ‍್ರಿ ಏರಿಬಿಟ್ಟಿತು.
‘ಹೇ, ಹೋಗನಾ ರಂಡೇ…! ಯಾರನಾ ಅವರ ಜಾಯಿಕಾಯಿ ಕದ್ದದ್ದು? ನಾನಾ? ಯಾರು ನೋಡಿದ್ದಾರೆ ಅದನ್ನು! ಆ ಶೆಟ್ಟಿಯ ಕಾಲಿಗೆ ನಾನು ಬೀಳಬೇಕಾ…? ದಿನವಿಡೀ ಕತ್ತೆಯಂತೆ ದುಡಿಸಿಕೊಂಡು ಸರಿಯಾಗಿ ಅರ್ಧ ಸಂಬಳವನ್ನೂ ಕೊಡದೆ ಮಂಗ ಮಾಡುತ್ತಾನಲ್ಲ ಅಂಥವನ ಕಾಲಿಗೆ ನಾನು ಬೀಳುವುದಾ! ನಿನಗೆಂಥ ಮರ್ಲಾ…? ಬೇಕಾದರೆ ಓ, ಅಲ್ಲಿ ಮಲಗಿದೆಯಲ್ಲ ಆ ಬೊಗ್ಗಿ ನಾಯಿ, ಅದರ ಕಾಲಿಗೆ ಬೀಳಲು ಹೇಳು. ಈಗಲೇ ಬೀಳುತ್ತೇನೆ. ಅದನ್ನು ಬಿಟ್ಟು ಇನ್ನೊಮ್ಮೆ ಅವನ ಸುದ್ದಿ ಎತ್ತಿದೆಯೆಂದರೆ ನಿನ್ನ ಮುಸುಂಟಿಗೆ ಬಡಿಯಲಿಕ್ಕುಂಟು ನಾಯಿ! ಹೋಗ್ ಅತ್ಲಾಗೆ…!’ ಎಂದು ಹೆಂಡತಿಯನ್ನು ಎಳೆದು ಪಕ್ಕಕ್ಕೆ ತಳ್ಳಿ ಗೊಣಗುತ್ತ ಒಳಗೆ ಹೋಗಿ ಬಿದ್ದುಕೊಂಡ.
ಗಂಡನ ಉದ್ಧಟತನವನ್ನು ಕಂಡ ಸರೋಜ ಕಂಗೆಟ್ಟುಬಿಟ್ಟಳು. ಆದ್ದರಿಂದ ವಿಧಿಯಿಲ್ಲದೆ ಶೆಟ್ಟರ ಮನೆಯತ್ತ ಧಾವಿಸಿದಳು. ಆಹೊತ್ತು ಶೆಟ್ಟರು ವರಾಂಡದ ಆರಾಮ ಕುರ್ಚಿಯಲ್ಲಿ ಕಾಲು ಚಾಚಿ ಕುಳಿತುಕೊಂಡು ಲಕ್ಷ್ಮಣನಿಂದ ತಮಗಾದ ಮೋಸದ ಕುರಿತೇ ಚಿಂತಿಸುತ್ತಿದ್ದವರು ಸರೋಜ ದಾಪುಗಾಲಿಕ್ಕುತ್ತ ಬರುತ್ತಿದ್ದುದನ್ನು ಗಮನಿಸಿ ಗಂಭೀರವಾದರು. ಸರೋಜ ಅಳುಕುತ್ತ ಬಂದವಳು, ‘ಅವರು ಬಂದಿದ್ದಾರೆ ಧಣೀ. ಕುಡಿದು ಬೋಧವಿಲ್ಲದೆ ಮಲಗಿದ್ದಾರೆ. ಕಿಸೆಯಲ್ಲಿ ಇಷ್ಟು ಹಣ ಸಿಕ್ಕಿತು ನೋಡಿ!’ ಎನ್ನುತ್ತ ಒಂದಿಷ್ಟು ನೋಟುಗಳನ್ನು ಟೀಪಾಯ್ ಮೇಲಿಟ್ಟು, ‘ನಿಮ್ಮ ದಮ್ಮಯ್ಯ ಧಣಿ ಅವರಿಗೇನೂ ಮಾಡಬೇಡಿ. ಈ ಸಲ ಒಂದು ಮಾಫ್ ಮಾಡಿಬಿಡಿ. ಮುಂದೆ ಅವರು ಇಂಥ ತಪ್ಪು ಮಾಡದಂತೆ ನೋಡಿಕೊಳ್ಳುವ ಜವಾಬ್ದಾರಿ ನನ್ನದು!’ ಎಂದು ಕೈಮುಗಿದು ಬೇಡಿಕೊಂಡಳು. ಶೆಟ್ಟರು ಅವಳ ಮಾತುಗಳನ್ನು ಶಾಂತವಾಗಿ ಕೇಳುತ್ತ ಅತ್ತ ಹಣವನ್ನೂ ಎಣಿಸಿ ನೋಡಿದರು. ಎರಡು ಸಾವಿರದಷ್ಟಿತ್ತು. ಸ್ವಲ್ಪ ಸಮಾಧಾನವಾಯಿತು. ‘ಸರಿ. ನೀನು ಹೋಗು. ಕಂಪ್ಲೇಟ್ ಬರೆಯಿಸಿ ಆಗಿದೆ. ಇನ್ಸ್ಪೆಕ್ಟರ್ ನಮ್ಮವರೇ. ಸ್ಟೇಷನಿಗೆ ರ‍್ಕೊಂಡು ಹೋಗಿ ವಿಚಾರಿಸಿ ಕಳುಹಿಸಿಕೊಡುತ್ತಾರೆ. ನೀನೇನೂ ಹೆದರಬೇಡ!’ ಎಂದು ಅವಳಿಗೆ ಧೈರ್ಯ ಕೇಳಿ ಕಳುಹಿಸಿದರು. ಆದರೆ ಲಕ್ಷ್ಮಣನನ್ನು ಒಂದು ವರ್ಷಕಾಲ ಜೈಲಿಗಟ್ಟುವಂಥ ರೋಷವು ಅವರಲ್ಲಿ ಹೊಗೆಯಾಡುತ್ತಿತ್ತು. ಆದರೂ ಸರೋಜ ದುಡ್ಡು ತಂದು ಕೊಟ್ಟಿದ್ದು ಮತ್ತು ಅವಳು ಕೈಮುಗಿದು ಅಂಗಲಾಚಿದ್ದು ಅವರನ್ನು ಸ್ವಲ್ಪ ಮೆತ್ತಗಾಗಿಸಿತು. ಹಾಗಾಗಿ ಸಂಕಪ್ಪ ಸಾಹೇಬರಿಗೆ ಕರೆ ಮಾಡಿ ವಿಷಯವನ್ನು ತಿಳಿಸಿದರು. ಸಾಹೇಬರು ಕೂಡಲೇ ಇಬ್ಬರು ಪೇದೆಗಳೊಂದಿಗೆ ಬಂದುಬಿಟ್ಟರು. ‘ಸಾಯಲಿ ಬಿಡು ಸಂಕಪ್ಪಾ… ಅವನ ಹೆಂಗಸು ಪಾಪದವಳು. ಕೇಸುಗೀಸು ಅಂತೆಲ್ಲ ಹಾಕುವುದು ಬೇಡ. ಸ್ವಲ್ಪ ಬಿಸಿ ಮುಟ್ಟಿಸಿ ಕಳುಹಿಸಿಬಿಡು. ಅದಕ್ಕೂ ಮೀರಿ ಮುಂದೆನಾದರೂ ಕಿತಾಪತಿ ಮಾಡಿದನೆಂದರೆ ಆಮೇಲೆ ನೋಡಿಕೊಳ್ಳುವ. ಅಷ್ಟಲ್ಲದೇ ಆ ದರ್ವೇಶಿಯನ್ನು ನಂಬಲಿಕ್ಕಾಗುವುದಿಲ್ಲ. ನಾಳೆ ಶಿಕ್ಷೆ ಅನುಭವಿಸಿದ ಕೋಪದಲ್ಲಿ ನಮ್ಮ ಮೇಲೂ ಅಹಂಕಾರ ತೋರಿಸಲು ಹಿಂಜರಿಯುವವನಲ್ಲ ಅವನು!’ ಎಂದು ಶೆಟ್ಟರು ತಮ್ಮ ಅಳುಕಿಗೆ ನಗುವಿನ ಲೇಪವನ್ನು ಹಚ್ಚಿಯೇ ಅಂದರು.
‘ಆಯ್ತು ಶ್ರೀಧರಣ್ಣಾ ಆ ಚಿಂತೆಯನ್ನು ನೀವು ನನಗೆ ಬಿಟ್ಟು ಬಿಡಿ! ಅವನು ನಿಮ್ಮ ಮೇಲೆ ಎಂಥ ಸೇಡು ತೀರಿಸಿಕೊಳ್ಳುವುದು? ನಮ್ಮ ಕೈಗೊಮ್ಮೆ ಸಿಕ್ಕಿಕೊಳ್ಳಲಿ. ಆಮೇಲೆ ಅವನನ್ನು ಹಿಡಿದ ಭೂತವನ್ನು ಬಿಡಿಸದಿದ್ದರೆ ಅಲ್ಲವಾ ಆ ಮಾತು…?’ ಎಂದು ಸಾಹೇಬರು ನಗುತ್ತ ಅಂದರು. ಆದರೆ ಅವರು ಅದಾಗಲೇ ಲಕ್ಷ್ಮಣನ ಹಿಂದಿನ ಅಪರಾಧದ ಕಡತವನ್ನು ಚೆನ್ನಾಗಿ ಪರಿಶೀಲಿಸಿಯೇ ಬಂದಿದ್ದರು. ಲಕ್ಷ್ಮಣನ ತಂಡವು ಸರಕಾರಿ ಅಧಿಕಾರಿಗಳ ಮೇಲೆ ನಡೆಸಿದ ಮಾರಣಾಂತಿಕ ಹಲ್ಲೆಯನ್ನೂ, ಅವರಲ್ಲಿ ಮೂವರಿಗೆ ಶಿಕ್ಷೆಯಾದುದನ್ನೂ ತಿಳಿದವರಿಗೆ ಆ ಇಡೀ ತಂಡದ ಮೇಲೆಯೇ ಆಕ್ರೋಶ ಭುಗಿಲೆದ್ದಿತ್ತು. ಆದ್ದರಿಂದಲೇ ಇವತ್ತು ತಟ್ಟನೆದ್ದು ಬಂದಿದ್ದರು. ಆದರೆ ಅದನ್ನವರು ಶೆಟ್ಟರಿಗೆ ತಿಳಿಸಲಿಲ್ಲ.
‘ಆಯ್ತು ಸಂಕಪ್ಪಾ ನಿನಗೆ ತೋಚಿದಂತೆ ಮಾಡು!’ ಎಂದರು ಶೆಟ್ಟರು.
‘ಈಗೆಲ್ಲಿದ್ದಾನೆ ಆ ಭಡವ ರ‍್ಯಾಸ್ಕಲ್…?’ ಎಂದು ಸಾಹೇಬರು ಒರಟಾಗಿ ಕೇಳಿದರು.
‘ಶೆಡ್ಡಿನಲ್ಲಿ ಮಲಗಿದ್ದಾನಂತೆ…!’ ಎಂದರು ಶೆಟ್ಟರು.
ಸಾಹೇಬರು ಪೇದೆಗಳತ್ತ ತಿರುಗಿ, ‘ಹೇ, ಹೋಗಿ ಅವನನ್ನು ಎಳೆದುಕೊಂಡು ಬಂದು ಜೀಪಿಗೆ ಹಾಕಿರನಾ!’ ಎಂದು ಆಜ್ಞಾಪಿಸಿದರು. ಅವರು ಕೂಡಲೇ ಲಕ್ಷ್ಮಣನ ಶೆಡ್ಡಿನತ್ತ ಧಾವಿಸಿದರು.
ಆಹೊತ್ತು ಲಕ್ಷ್ಮಣ ತನ್ನ ಹರಿದ ಒಳ ಚಡ್ಡಿಯೆಡೆಯಲ್ಲಿ ಅರೆಬರೆ ಇಣುಕುತ್ತಿದ್ದ ಅಂಡುಗಳನ್ನು ಪ್ರದರ್ಶಿಸುತ್ತ ಹೆಣದಂತೆ ಬೋರಲು ಮಲಗಿದ್ದ. ಪೇದೆಗಳು ಒಳಹೊಕ್ಕವರು ಒಂದೆರಡು ಬಾರಿ ಅವನನ್ನು ಕುಲುಕಿ ಎಬ್ಬಿಸಲು ಪ್ರಯತ್ನಿಸಿದರು. ಅವನು ಎಚ್ಚರಗೊಳ್ಳಲಿಲ್ಲ. ಅವರು ಅವನ ತಲೆಗೆ ಒಂದು ಕೊಡಪಾನ ನೀರು ಸುರಿದಾಗ ಅವನು ದಡಬಡನೆದ್ದು ಕುಳಿತು ಸುತ್ತಮುತ್ತ ಮಿಕಮಿಕಾ ನೋಡತೊಡಗಿದ. ಆಗ ತನ್ನೆದುರಿಗೆ ಖಾಕಿ ಸೂಟು ಬೂಟುಧಾರಿಗಳು ಯಮಧೂತರಂತೆ ನಿಂತಿದ್ದನ್ನು ಅವನ ಕೆಂಪಡರಿದ ಕಣ್ಣುಗಳು ಮಸುಕಾಗಿ ಗ್ರಹಿಸಿದವು. ಮರುಕ್ಷಣ ಅವನಿಗೆ ಏನೂ ತೋಚಲಿಲ್ಲ. ಪೇದೆಗಳನ್ನೂ, ಮೂಲೆಯಲ್ಲಿ ನಿಂತುಕೊoಡು ಅಳುತ್ತಿದ್ದ ಹೆಂಡತಿ, ಮಗಳನ್ನೂ ದೈನ್ಯದಿಂದ ನೋಡಿದ. ‘ಹ್ಞೂಂ, ಏಳೋ…ನಡೆ ನಡೆ, ಸಾಹೇಬರು ಕರೀತಿದ್ದಾರೆ!’ ಎಂದು ಪೇದೆಯೊಬ್ಬ ಗದರಿಸಿದ. ಪೊಲೀಸನ ಗಡಸು ಧ್ವನಿಯು ಲಕ್ಷ್ಮಣನಿಗೆ ಸನ್ನಿವೇಶದ ಅರಿವನ್ನು ತಟ್ಟನೆ ಮಾಡಿಕೊಟ್ಟಿತು. ಅದನ್ನು ನೆನೆದು ಮೆಲ್ಲನೆ ಬೆವರಿದ. ‘ಏನಾ ಸರೋಜ ಇದೆಲ್ಲಾ…?’ ಎಂದು ತೊದಲುತ್ತ ಅಂದವನು, ‘ನಿನ್ನ ದಮ್ಮಯ್ಯ ಮಾರಾಯ್ತಿ…! ಒಮ್ಮೆ ನನ್ನನ್ನು ಬಚಾವ್ ಮಾಡು…!’ ಎಂಬoತೆ ಅವಳನ್ನು ದೀನನಾಗಿ ದಿಟ್ಟಿಸಿದ.
ಗಂಡನ ನೋವಿನ ಮುಖವನ್ನು ಕಂಡ ಸರೋಜಾಳಿಗೆ ಕರುಳು ಕಿತ್ತು ಬಂದoತಾಯಿತು. ‘ಏನೂ ಹೆದರಬೇಡಿ ಮಾರಾಯ್ರೇ. ನಾನಾಗಲೇ ಧಣಿಯವರೊಡನೆ ಮಾತಾಡಿ ಬಂದಿದ್ದೇನೆ. ಸ್ಟೇಷನ್ನಿಗೆ ಹೋಗಿ ತಪ್ಪೊಪ್ಪಿಕೊಳ್ಳಿ. ದಸ್ಕತ್ ಹಾಕಿಸಿಕೊಂಡು ಬಿಟ್ಟುಬಿಡುತ್ತಾರಂತೆ!’ ಎಂದು ದುಃಖ ನುಂಗಿಕೊಳ್ಳುತ್ತ ಸಾಂತ್ವನಿಸಿದಳು. ಆದರೂ ಲಕ್ಷ್ಮಣನಿಗೆ ತನ್ನ ಗ್ರಹಚಾರ ಕೆಟ್ಟಿರುವುದು ಖಾತರಿಯಾಯಿತು. ಅತ್ತ ಹೊಸ ಮಾಲು ಕುಡಿದು ಅಭ್ಯಾಸವಿಲ್ಲದೆ ಸಿಕ್ಕಾಪಟ್ಟೆ ಸಿಡಿಯುತ್ತಿದ್ದ ತಲೆಯನ್ನು ಕೊಡವಿಕೊಂಡು ತೂರಾಡುತ್ತ ಎದ್ದು ಹೋಗಿ ಜೀಪು ಹತ್ತಿದ. ಸರೋಜ ಅವನ ಹಿಂದೆಯೇ ಹೋದವಳು ದುಃಖದಿಂದ ಸಂಕಪ್ಪನವರಿಗೆ ಕೈಮುಗಿದಳು. ಅದಕ್ಕವರು ಸೌಮ್ಯರಾದಂತೆ ನಟಿಸುತ್ತ, ‘ಆಯ್ತಮ್ಮಾ ಅವನಿಗೇನೂ ಮಾಡುವುದಿಲ್ಲ. ಇವತ್ತೇ ಕಳುಹಿಸಿಕೊಡುತ್ತೇವೆ. ಧೈರ್ಯವಾಗಿರು!’ ಎಂದವರು ಶೆಟ್ಟರಿಂದ ಬೀಳ್ಗೊಂಡು ಜೀಪು ಹತ್ತಿದರು. ಆದರೆ ಜೀಪು ಒಂದಷ್ಟು ದೂರ ಹೋಗಿತ್ತೋ ಇಲ್ಲವೋ ಅಷ್ಟರಲ್ಲಿ ಅವರು ರಪ್ಪನೆ ಲಕ್ಷ್ಮಣನತ್ತ ತಿರುಗಿ, ‘ಏನಾ ಬಿಕನಾಸಿ…! ಭಾರೀ ದೊಡ್ಡ ರೌಡಿಯನಾ ನೀನು…? ಕಳ್ಳತನ ಮಾಡುವುದೇ ಅಲ್ಲದೇ ಸರಕಾರಿ ಅಧಿಕಾರಿಗಳ ಮೇಲೆಯೇ ಕೈ ಮಾಡುವಷ್ಟು ಅಹಂಕಾರವನಾ ನಿಮಗೆಲ್ಲ…? ಇವತ್ತು ನಿನ್ನ ಆ ಚರ್ಬಿಯನ್ನೆಲ್ಲ ಸಂಪೂರ್ಣ ಇಳಿಸಲಿಕ್ಕುಂಟು ಗೊತ್ತಾಯ್ತಾ…!’ ಎನ್ನುತ್ತ ಕೆಕ್ಕರಿಸಿದರು.
ಅಷ್ಟರವರೆಗೆ ಅರೆಬರೆ ಅಮಲಿನಲ್ಲಿದ್ದ ಲಕ್ಷ್ಮಣನಿಗೆ ಸಾಹೇಬರ ಮಾತುಗಳು ಸಿಡಿಲೆರಗಿದಂತಾಗಿ ಅವನ ರಕ್ತದೊತ್ತಡವು ರ‍್ರನೆ ಇಳಿದು ರಪ್ಪನೆ ತಲೆ ತಗ್ಗಿಸಿ ಕುಳಿತುಬಿಟ್ಟ. ಸ್ವಲ್ಪಹೊತ್ತಿನಲ್ಲಿ ಜೀಪು ಠಾಣೆಯೆದುರು ಬಂದು ನಿಂತಿತು. ಲಕ್ಷ್ಮಣ ಇಳಿದು ಠಾಣೆಯ ಮೆಟ್ಟಲೇರುತ್ತಲೇ ಸಾಹೇಬರಿಂದ ಅವನ ಸೊಂಟಕ್ಕೆ ಬಲವಾದ ಒದೆತವೊಂದು ಬಂದಪ್ಪಳಿಸಿತು. ಅವನು, ‘ಅಯ್ಯಮ್ಮಾ…!’ ಎಂದರಚುತ್ತ ಠಾಣೆಯೊಳಗೆ ಹೋಗಿ ಬಿದ್ದ. ಅಷ್ಟರಲ್ಲಿ ಇಬ್ಬರು ಪೇದೆಗಳು ಅವನನ್ನೆಳೆದೊಯ್ದು ಕೋಣೆಯೊಂದಕ್ಕೆ ದಬ್ಬಿದರು. ಬಳಿಕ ಸಂಕಪ್ಪ ಸಾಹೇಬರು ತಮ್ಮ ಶರ್ಟು ಬಿಚ್ಚಿಟ್ಟು ಕಣ್ಣು ಕೆಂಪಗೆ ಮಾಡಿಕೊಂಡು ಲಕ್ಷ್ಮಣನ ಕೋಣೆಗೆ ಹೊಕ್ಕರು. ಅದನ್ನು ಗಮನಿಸಿದ ಪೇದೆಯೊಬ್ಬ ಒಂದು ಪೊಟ್ಟಣ ಮೆಣಸಿನ ಹುಡಿ ಮತ್ತು ಒಂದು ಬಟ್ಟಲು ತೆಂಗಿನೆಣ್ಣೆ ಹಾಗೂ ಸಪೂರದ ಲಾಠಿಯೊಂದನ್ನು ತಂದು ಸಾಹೇಬರ ಎದುರಿನ ಮೇಜಿನ ಮೇಲಿಟ್ಟು, ‘ಟ್ರೀಟ್‌ಮೆಂಟ್ ಐಟಮ್ ರೆಡಿ ಸಾರ್!’ ಎಂದು ಹೇಳಿ ಹಿಂದೆ ಸರಿದು ನಿಂತ. ‘ಹ್ಞೂಂ! ಓಕೆ…!’ ಎಂದ ಸಾಹೇಬರು ಸಿಗರೇಟೊಂದನ್ನು ಹಚ್ಚಿಕೊಂಡು ಸಾವಕಾಶವಾಗಿ ಸೇದಿದರು. ನಂತರ ಲಾಟಿಯನ್ನೆತ್ತಿಕೊಂಡು ಲಕ್ಷ್ಮಣನತ್ತ ತಿರುಗಿದವರು, ‘ಅಲ್ಲವನಾ ರಂ…ಮಗನೇ…! ಜೀವಮಾನವಿಡೀ ವಂಚನೆ, ಕಳ್ಳತನ, ದರೋಡೆ ಮಾಡುತ್ತ ಬದುಕುವುದೇ ಅಲ್ಲದೆ ನಮ್ಮಂಥ ಕಾನೂನು ರಕ್ಷಕರನ್ನೇ ಕಡಿದು ಬಡಿದು ಹಿಂಸೆ ಮಾಡುವುದೂ ನಿನ್ನಂಥವನಿಗೊoದು ಬಾರಿ ಕುಶಾಲಿನ ಸಂಗತಿಯಲ್ಲವನಾ?’ ಎನ್ನುತ್ತ ಕಟಕಟನೇ ಹಲ್ಲು ಕಡಿದವರು ಲಕ್ಷ್ಮಣನಿಗೆ ಬೀಸಿ ಬೀಸಿ ಹೊಡೆಯತೊಡಗಿದರು. ಅವನು ನೋವನ್ನು ತಾಳಲಾಗದೆ, ‘ನಿಮ್ಮ ದಮ್ಮಯ್ಯ ಸಾರ್…ತಪ್ಪಾಯ್ತೂ…!’ ಎಂದರಚುತ್ತ ಸಾಹೇಬರ ಕಾಲಿಗೇ ಬಿದ್ದುಬಿಟ್ಟ. ಆದರೆ ಅವರು ಅವನನ್ನು ಒದ್ದು ದೂರಕ್ಕೆ ತಳ್ಳಿದವರು ಪೇದೆಗಳಿಗೆ ಇನ್ನೇನೋ ಸನ್ನೆ ಮಾಡಿದರು. ಅವರು ಕೂಡಲೇ ಅವನನ್ನು ಹೊತ್ತೊಯ್ದು ಮೇಜಿನ ಮೇಲೆ ಬೋರಲು ಮಲಗಿಸಿ ಮಿಸುಕಾಡದಂತೆ ಹಿಡಿದುಕೊಂಡರು.
ಅಷ್ಟೊತ್ತಿಗೆ ಲಕ್ಷ್ಮಣನ ಸಾರಾಯಿ ಅಮಲು ಪೂರ್ತಿಯಾಗಿ ಇಳಿದುಬಿಟ್ಟಿತ್ತು. ಅವನು, ಅಯ್ಯೋ ದೇವರೇ…! ಈ ನರ ರಾಕ್ಷಸರು ನನ್ನನ್ನೇನು ಮಾಡುತ್ತಾರೋ…?’ ಎಂದುಕೊoಡು ಭಯದಿಂದ ನಡುಗುತ್ತಿದ್ದವನಿಗೆ ದುಃಖ ಒತ್ತರಿಸಿ ಬಂತು. ಇತ್ತ ಅವನನ್ನು ಮಲಗಿಸಿದ್ದ ಮೇಜಿನ ಸುತ್ತ ಹಸಿದ ಹೆಬ್ಬುಲಿಯಂತೆ ಸುತ್ತುತ್ತಿದ್ದ ಸಾಹೇಬರಿಗೆ ಹತ್ತು ವರ್ಷಗಳ ಹಿಂದೆ ನಡೆದ ಆ ಒಂದು ಕ್ರೂರ ಘಟನೆಯು ರಪ್ಪನೆ ಮುನ್ನೆಲೆಗೆ ಬಂದುಬಿಟ್ಟಿತು. ಅಂದು ತಮ್ಮಂತೆಯೇ ಸರಕಾರಿ ಅಧಿಕಾರಿಯಾಗಿದ್ದ ನವತರುಣನೊಬ್ಬ ಈಗ ಊನಗೊಂಡ ತನ್ನ ಕಾಲನ್ನೆಳೆದುಕೊಂಡು ಮಾನಸಿಕ ರೋಗಿಯಂತೆ ಎತ್ತೆತ್ತಲೋ ಓಡಾಡುತ್ತಿರುವ ದೃಶ್ಯವೊಂದು ಅವರ ಕಣ್ಣೆದುರು ಸುಳಿಯುತ್ತಲೇ, ‘ಸೂ…ಮಗನೇ, ಆವತ್ತು ನಿಮ್ಮ ಅಹಂಕಾರದ ಭರದಲ್ಲಿ ನನ್ನ ಜೀವದ ಗೆಳೆಯನ ಒಬ್ಬನೇ ಒಬ್ಬ ಮಗನ ಕಾಲು ಕಡಿದು ಅವನ ಬಂಗಾರದoಥ ಜೀವನವನ್ನೇ ಹಾಳುಧೂಳು ಮಾಡಿಬಿಟ್ಟಿರಲ್ಲೋ ನಾಯಿಗಳಾ…!’ ಎಂದಬ್ಬರಿಸಿ ಲಕ್ಷ್ಮಣನ ಅಂಡಿಗೆ ರಪರಪನೇ ಬಾರಿಸತೊಡಗಿದರು. ಆದರೂ ಅವರ ಕೋಪ ತಣ್ಣಗಾಗಲಿಲ್ಲ. ಆದ್ದರಿಂದ ಅವರ ಕೈಯಲ್ಲಿದ್ದ ದೊಣ್ಣೆಯು ಕೆಲವು ಕ್ಷಣ ಅತ್ತಿಂದಿತ್ತ ಇತ್ತಿಂದತ್ತ ಬೀಸಾಡುತ್ತ ಕುಣಿಯಿತು. ಬಳಿಕ ತನ್ನ ದುಂಡಗಿನ ಸಪೂರ ಮೂತಿಗೆ ಹದವಾಗಿ ಎಣ್ಣೆಯನ್ನು ಲೇಪಿಸಿಕೊಂಡಿತು. ನಂತರ ಕೆಂಪಗಿನ ಮೆಣಸಿನ ಹುಡಿಯ ಮೇಲೆ ಮೃದುವಾಗಿ ಹೊರಳಾಡಿತು. ಮುಂದಿನ ಕ್ಷಣ ಲಕ್ಷ್ಮಣನ ಹಿಂದಿನಿoದ ರ‍್ರನೆ ಒಳಗೆ ತೂರಿದ್ದು ಅವನ ಕಿಬ್ಬೊಟ್ಟೆಯ ತನಕ ವೇಗವಾಗಿ ನುಗ್ಗಿ ಮೂರು ನಾಲ್ಕು ಬಾರಿ ರಭಸದಿಂದ ತಿವಿದು ರಪ್ಪನೆ ಹೊರಗೆ ಬಂದು ಗಹಗಹಿಸಿ ನಗತೊಡಗಿತು. ಆ ಪ್ರಹಾರದ ತೀವ್ರತೆಗೆ ಲಕ್ಷ್ಮಣನಿಂದ ಹೊಮ್ಮಿದ ಆರ್ಭಟವು ಓಬಿರಾಯನ ಕಾಲದ ಆ ಠಾಣೆಯ ದಪ್ಪ ಗೋಡೆಗಳನ್ನೂ ನಡುಗಿಸಿಬಿಟ್ಟಿತು. ಮರುಕ್ಷಣ ಆ ಬಡಪಾಯಿಯ ಕಣ್ಣೆದುರು ದಟ್ಟ ಓಕುಳಿ ಹರಡಿದಂತಾಗಿ ಚಿತ್ರವಿಚಿತ್ರ ರಾಕ್ಷಸಾಕೃತಿಗಳು ಒಂದೇ ಸಮನೆ ಕುಣಿಯುವಂತೆ ಭಾಸವಾಗುತ್ತ ಅವನು ತಟ್ಟನೆ ಮೂರ್ಛೆ ಹೋಗಿಬಿಟ್ಟ!
ಮರುದಿನ ಬೆಳಿಗ್ಗೆ ಲಕ್ಷ್ಮಣನಿಗೆ ಎದ್ದು ಕೂರಲೂ ತ್ರಾಣವಿರಲಿಲ್ಲ. ಹಾಗಾಗಿ ಪೇದೆಗಳಿಬ್ಬರು ಅವನನ್ನೆಬ್ಬಿಸಿ ಕರೆದು ತಂದು ಸಾಹೇಬರ ಮುಂದೆ ನಿಲ್ಲಿಸಿದರು. ಅವರ ಕೋಪತಾಪಗಳೆಲ್ಲ ನಿನ್ನೆಯ ಟ್ರೀಟ್‌ಮೆಂಟಿನ ನಂತರ ಉಪಶಮನವಾದಂತಿತ್ತು. ಆದ್ದರಿಂದ ಅವರು ಲಕ್ಷ್ಮಣನನ್ನೊಮ್ಮೆ ಆಪಾದಮಸಕ್ತ ದಿಟ್ಟಿಸಿದವರು, ‘ಹೇಗಿತ್ತು ಲಕ್ಷö್ಮಣಾ ನಮ್ಮ ಉಪಚಾರ…?’ ಎಂದು ಹುಬ್ಬು ಹಾರಿಸಿ ಕೇಳಿದರು. ಲಕ್ಷ್ಮಣ ಕತ್ತು ಹಿಸುಕಿದ ಕೋಳಿಯಂತೆ ನಿಸ್ತೇಜನಾಗಿದ್ದವನು ಅವರಿಂದ ದೃಷ್ಟಿ ತಪ್ಪಿಸಿ ನೆಲವನ್ನು ನೋಡುತ್ತ ನಿಂತ.
‘ಇನ್ನು ಮುಂದೆ ಜೀವಮಾನದಲ್ಲಿ ನೀನು ಯಾರಿಗಾದರೂ ಮೋಸ, ವಂಚನೆ ಅಥವಾ ಉಂಡ ಮನೆಗೆ ಎರಡು ಬಗೆಯುವಂಥ ದುಷ್ಟ ಬುದ್ಧಿಯನ್ನು ತೋರಿಸಲು ಹೊರಡುವಾಗಲೆಲ್ಲ ನಮ್ಮ ನಿನ್ನೆಯ ವಿಶೇಷ ಉಪಚಾರವು ನಿನ್ನನ್ನು ಎಚ್ಚರಿಸಬೇಕೆಂದೇ ಅಂಥ ಸ್ಪೆಷಲ್ ಟ್ರೀಟ್‌ಮೆಂಟನ್ನು ನಿನಗೆ ಕೊಟ್ಟಿದ್ದು! ಇನ್ನಾದರೂ ನಿಯತ್ತಿನಿಂದ ಬದುಕಿಕೋ ಹೋಗ್!’ ಎಂದು ಗದರಿಸಿದ ಸಾಹೇಬರು, ‘ಹ್ಞೂಂ, ಇಲ್ಲೊಂದು ಸೈನ್ ಮಾಡಿ ಮನೆಗೆ ಹೋಗು!’ ಎಂದು ಕಡತವೊಂದನ್ನು ಅವನೆದುರು ತಳ್ಳಿದರು.
ಲಕ್ಷ್ಮಣ, ಅವರು ತೋರಿಸಿದ ಜಾಗಕ್ಕೆ ನಡುಗುವ ಕೈಯಿಂದ ಸಹಿ ಮಾಡಿ ನಮ್ರವಾಗಿ ಕೈಮುಗಿದ. ಅವನ ಸ್ಥಿತಿಯನ್ನು ಕಂಡ ಪೇದೆಯೊಬ್ಬನಿಗೆ ಕನಿಕರವಾಯಿತು. ಅವನು ಲಕ್ಷ್ಮಣನನ್ನು ಹೊರಗೆ ಕರೆದೊಯ್ದು ಕುಳಿತುಕೊಳ್ಳಲು ಸೂಚಿಸಿ ಮರಳಿ ಸಾಹೇಬರ ಕೋಣೆಗೆ ಹೋದ. ಆದರೆ ಲಕ್ಷ್ಮಣ ಕೂರಲಾರದೆ ನೋವಿನಿಂದ ನರಳುತ್ತ ನಿಂತುಕೊoಡ. ಪೇದೆ ಸಾಹೇಬರತ್ತ ಬಂದವನು, ‘ಸಾರ್, ಪಾಪ ಅವನಿಗೆ ನಡೆಯಲಾಗುತ್ತಿಲ್ಲ. ಮನೆಯ ತನಕ ಬಿಟ್ಟು ಬರಲಾ…?’ ಎಂದ ಅಳುಕುತ್ತ. ಸಾಹೇಬರಿಗೂ ಅನುಕಂಪ ಮೂಡಿತು. ‘ಸರಿ. ಹೋಗು!’ ಎಂದವರು, ‘ತಗೋ ಅವನಿಗೆ ಕೊಡು…!’ ಎಂದು ನೂರರ ಎರಡು ನೋಟುಗಳನ್ನು ಪೇದೆಗೆ ಕೊಟ್ಟರು. ಅವನು ಅದನ್ನು ತಂದು ಲಕ್ಷ್ಮಣನ ಕೈಗೆ ತುರುಕಿಸುತ್ತ, ‘ಸಾಹೇಬರು ಕೊಟ್ಟದ್ದು, ಇಟ್ಟುಕೋ…!’ ಎಂದ ಅನುಕಂಪದಿoದ. ನೋವಿನಿಂದ ಒದ್ದಾಡುತ್ತಿದ್ದ ಲಕ್ಷ್ಮಣ, ಪೇದೆಯ ಮುಖವನ್ನೊಮ್ಮೆ ಪಿಳಿಪಿಳಿ ದಿಟ್ಟಿಸಿದವನು ರೂಪಾಯಿಯನ್ನು ತೆಗೆದುಕೊಂಡು ಜೇಬಿಗಿಳಿಸಿದ.
(ಮುಂದುವರೆಯುವುದು)