
ಧಾರವಾಹಿ 45
ಪೊಲೀಸ್ ಜೀಪು ಬಂದು ತನ್ನ ಶೆಡ್ಡಿನೆದುರು ನಿಂತ ಸದ್ದು ಕೇಳಿದ ಸರೋಜ ಹೊರಗೆ ಧಾವಿಸಿ ಬಂದಳು. ಪೇದೆಗಳು ಗಂಡನಿಗೆ ಹೆಗಲು ಕೊಟ್ಟು ನಡೆಸುತ್ತ ಬರುತ್ತಿದ್ದುದನ್ನು ಕಂಡವಳಿಗೆ ತಲೆ ಸುತ್ತು ಬಂದoತಾಗಿ ದಾರಂದಕ್ಕೊರಗಿ ನಿಂತಳು. ಅವಳನ್ನು ಕಂಡ ಪೇದೆಗಳಿಗೆ ಅಪರಾಧಿ ಭಾವವೆದ್ದು ಕಾಡಿತು. ಅವರು ತಲೆ ತಗ್ಗಿಸುತ್ತ ಬಂದವರು ಲಕ್ಷ್ಮಣನನ್ನು ಅವಳ ಸಮೀಪ ನಿಲ್ಲಿಸಿ, ‘ನಿನ್ನ ಗಂಡನಿಗೆ ಇನ್ನಾದರೂ ಸ್ವಲ್ಪ ಒಳ್ಳೆಯ ರೀತಿಯಿಂದ ಬದುಕಲು ಹೇಳಿಕೊಡಮ್ಮಾ…!’ ಎಂದವರು ಬಹಳ ಗಡಿಬಿಡಿಯಲ್ಲಿದ್ದವರಂತೆ ಹೊರಟು ಹೋದರು. ಗಂಡನ ಸ್ಥಿತಿಯನ್ನು ಕಂಡ ಸರೋಜಾಳಿಗೆ ಕಣ್ಣೀರುಕ್ಕಿ ಬಂತು. ಅವನನ್ನು ಒಳಗೆ ಕರೆದೊಯ್ದು ಮಲಗಿಸಿ ಶೆಟ್ಟರಿಗೂ, ಪೊಲೀಸರಿಗೂ ಹಿಡಿಶಾಪ ಹಾಕುತ್ತ ಗಂಡನ ಆರೈಕೆಯಲ್ಲಿ ತೊಡಗಿದಳು. ಲಕ್ಷ್ಮಣನಿಗೆ ಸಂಕಪ್ಪನವರ ಅಂದರ್ ಬಾಹರ್ ಟ್ರೀಟ್‌ಮೆಂಟ್‌ನಿoದ ಚೇತರಿಸಿಕೊಳ್ಳಲು ತಿಂಗಳೇ ಬೇಕಾಯಿತು. ಆದರೆ ಆ ಅವಧಿಯಲ್ಲಿ ಅವನು ಮಾನಸಿಕವಾಗಿಯೂ ಕುಗ್ಗಿದವನು ಎದ್ದು ನಡೆದಾಡುವಂತಾದ ಕೂಡಲೇ ಶೆಟ್ಟರ ಹತ್ತಿರ ಹೋಗಿ ಅವರ ಕಾಲಿಗೆ ಬಿದ್ದು ಕ್ಷಮಾರ್ಪಣೆ ಕೇಳಿದ. ಲಕ್ಷ್ಮಣನ ದೈಹಿಕ ಸ್ಥಿತಿಯನ್ನು ಕಂಡ ಶೆಟ್ಟರಿಗೂ ಕನಿಕರವಾಯಿತು. ಆದರೂ ಅವನನ್ನು ಕೆಲಸಕ್ಕಿಟ್ಟುಕೊಳ್ಳಲು ನಿರಾಕರಿಸಿದರು. ‘ಆಯ್ತು ಹೋಗು, ಹೋಗು. ನೀನು ಮಾಡಿದ ತಪ್ಪೇನು ಎಂದು ನಿನಗೇ ಅರ್ಥವಾದರೆ ಮುಗಿಯಿತು. ಇನ್ನು ಮೇಲೆ ಕೆಲಸಕ್ಕೆ ಅಗತ್ಯ ಬಿದ್ದರೆ ಕರೆಯುತ್ತೇನೆ. ಅಲ್ಲಿಯವರೆಗೆ ಸರೋಜಾಳೊಬ್ಬಳು ಮಾತ್ರ ಬಂದರೆ ಸಾಕು. ಮಗಳಿಗೆ ರಜೆ ಇರುವಾಗ ಅವಳನ್ನು ಕಾಯಿ, ಅಡಿಕೆ ಹೆಕ್ಕಲು ಮತ್ತು ಮನೆಯ ಕೆಲಸಕ್ಕೆ ಕಳುಹಿಸುತ್ತಿರು!’ ಎಂದು ಹೇಳಿ ಕಳುಹಿಸಿದರು.
ಹೀಗಾಗಿ ಆವತ್ತಿನಿಂದ ಲಕ್ಷ್ಮಣನನ್ನು ವಿಚಿತ್ರ ಹಿಂಜರಿಕೆ ಮತ್ತು ಅವಮಾನದ ಭಾವಗಳು ಮುತ್ತಿಕೊಂಡವು. ಆದ್ದರಿಂದ ಅವನು ಹೊರಗೆಲ್ಲೂ ಹೋಗದೆ ಬೀಡಿ ಕಟ್ಟುತ್ತ ಮನೆಯಲ್ಲೇ ಉಳಿದುಬಿಟ್ಟ. ಹಿಂದೆಲ್ಲ ಸರೋಜ ಒಂದೂವರೆ ಸಾವಿರದಷ್ಟು ಬೀಡಿ ಕಟ್ಟುತ್ತಿದ್ದರೆ ಈಗ ಇಬ್ಬರದ್ದೂ ಸೇರಿ ಎರಡೂವರೆ ಸಾವಿರ ದಾಟುತ್ತಿತ್ತು. ಕೂಲಿ ಕೆಲಸದಿಂದ ಸಂಪಾದಿಸುವಷ್ಟಾಗದಿದ್ದರೂ ಜೀವನವು ಮರಳಿ ನೆಮ್ಮದಿಯಿಂದ ಸಾಗಲು ಅಡ್ಡಿಯಾಗಲಿಲ್ಲ. ಹೀಗೆ ಮೂರು ತಿಂಗಳು ಉರುಳಿತು. ಲಕ್ಷ್ಮಣನೂ ವಿಧೇಯನಾಗಿ ದುಡಿಯುತ್ತಿದ್ದ. ಆದರೆ ಕುಡಿತದ ಚಟವಿನ್ನೂ ಅವನಿಂದ ದೂರವಾಗಿರಲಿಲ್ಲ. ಈಗೀಗ ಅದರಾಸೆ ಅವನನ್ನು ತೀವ್ರವಾಗಿ ಭಾದಿಸತೊಡಗಿತ್ತು. ಅದರಿಂದ ಹೈರಾಣಾಗುತ್ತಿದ್ದವನು ಆವತ್ತೊಂದು ದಿನ ಸರೋಜ ಖುಷಿಯಿಂದ ಇರುವುದನ್ನು ಗಮನಿಸಿ ಆ ಕುರಿತು ಮೆಲ್ಲನೆ ಪೀಠಿಕೆ ಹಾಕಿದ. ‘ಹೇ ಸರೂ ಒಂದು ಮಾತು ಹೇಳುತ್ತೇನೆ. ಆದರೆ ನೀನು ಬೇಜಾರ್ ಮಾಡ್ಕೊಳ್ಳಬಾರದು ಮಾರಾಯ್ತಿ…!’ ಎಂದು ಮಾತು ನಿಲ್ಲಿಸಿದ. ಸರೋಜ ರಪ್ಪನೆ ಅವನ ಮುಖವನ್ನು ದಿಟ್ಟಿಸಿದವಳು, ‘ಆಯ್ತು ಹೇಳಿ?’ ಎಂದಳು ಕುತೂಹಲದಿಂದ.
‘ಏನಿಲ್ಲ ಮಾರಾಯ್ತೀ, ನಂಗೆ ಸ್ವಲ್ಪ ಸಾರಾಯಿ ಕುಡಿಯಬೇಕು ಅಂತ ಮನಸಾಗ್ತಾ ಇದೆ…!’ ಎಂದು ರಾಗವೆಳೆದ. ಅಷ್ಟು ಕೇಳಿದ ಸರೋಜಾಳ ಮುಖ ಕಪ್ಪಿಟ್ಟಿತು. ಅದನ್ನು ಗಮನಿಸಿದವನು, ‘ಇಲ್ನೋಡು, ನಿನ್ನ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ. ಇನ್ನು ಮುಂದೆ ಯಾವತ್ತೂ ಹೊರಗಡೆ ಹೋಗಿ ಕುಡಿಯುವುದಿಲ್ಲ ಮಾರಾಯ್ತಿ. ಅದೆಲ್ಲ ನನಗೂ ಸಾಕಾಗಿ ಹೋಯಿತು!’ ಎಂದ ಬಹಳ ರೋಸಿದವನಂತೆ. ಆಗಲೂ ಸರೋಜ ಮಾತಾಡಲಿಲ್ಲ. ಮತ್ತೆ ಅವನೇ ಮಾತ್ತೆತ್ತಿದವನು, ‘ನೀನೇ ದಿನಾ ರಾತ್ರಿ ಸ್ವಲ್ಪ ಸ್ವಲ್ಪ ತಂದು ಕೊಟ್ಟೆಯಾದರೆ ಕುಡಿದು ಉಸುಕು ಧಮ್ ಎತ್ತದೆ ಮಲಗಿ ಬಿಡುತ್ತೇನೆ ಮಾರಾಯ್ತೀ…?’ ಎಂದು ಅವಳನ್ನು ಪುಸಲಾಯಿಸಿದ. ಆಗ ಸರೋಜ ಗಂಡನನ್ನು ಕೋಪದಿಂದ ದುರುಗುಟ್ಟಿದವಳು ತುಟಿ ಬಿಗಿದು ಕುಳಿತಳು. ಆದ್ದರಿಂದ ಆವತ್ತು ನಿರಾಶನಾದ ಲಕ್ಷ್ಮಣನು ನಂತರ ಹೆಂಡತಿಯನ್ನು ನಿರಂತರ ಪೀಡಿಸತೊಡಗಿದ. ಆದರೂ ಅವಳು ಮೊದಮೊದಲು ಗಂಡನ ಅಂಗಲಾಚುವಿಕೆ ಮತ್ತು ಓಲೈಸುವಿಕೆಗೆ ಸೊಪ್ಪು ಹಾಕದೆ ಸಿಡುಕುತ್ತ, ಬೈಯ್ಯುತ್ತ ಕಾಲಕಳೆದಳು. ಆದರೆ ಬರಬರುತ್ತ ಅವಳಿಗೂ ಪಾಪವೆನಿಸತೊಡಗಿತು. ಈಗ ತಾನೇನು ಮಾಡಬಹುದು? ಎಂದೊಮ್ಮೆ ಯೋಚಿಸುತ್ತ ಕುಳಿತಳು. ನಾನು ಸಾರಾಯಿ ತಂದು ಕೊಡದಿದ್ದರೆ ಇವರು ಮರಳಿ ಎಂದಾದರೂ ತಮ್ಮ ಹಳೆಯ ಚಾಳಿಗೆ ಅಂಟಿಕೊoಡರೆ ತನಗೇ ಕಷ್ಟ! ಹಾಗಾಗಿ ನಾನೇ ಹೋಗಿ ತಂದುಕೊಡುವುದೇ ವಾಸಿ. ಆದರೆ ಅದು ಮಿತಿಮೀರದಂತೆ ನೋಡಿಕೊಳ್ಳುವುದೂ ತನ್ನದೇ ಜವಾಬ್ದಾರಿ ಎಂದುಕೊoಡಳು. ಆಗ ಅವಳಿಗೆ ತಟ್ಟನೆ ನೆನಪಾದುದು ತನ್ನ ಗಂಡನೂ, ಅಕ್ಕಪಕ್ಕದ ಕುಡುಕರೆಲ್ಲರೂ ಒಕ್ಕೊರಲಿನಿಂದ ಅನುಮೋದಿಸುತ್ತಿದ್ದಂಥ ಆಂಥೋನಿ ಪರ್ಬುವಿನ ಔಷಧೀಯ ಗುಣವಿರುವ ಗೋಂಕಿನ ಗಂಗಸರ! ಆದ್ದರಿಂದ ಅವಳು ಅಂದು ಮಸ್ಸಂಜೆಯ ಹೊತ್ತಿಗೆ ಸರಿಯಾಗಿ ಸ್ಟೀಲಿನ ಚೆಂಬೊoದನ್ನು ಸೆರಗಿನೆಡೆಯಲ್ಲಿ ಮರೆಮಾಚಿಕೊಂಡು ಆಂಥೋನಿಯ ಮನೆಯ ದಾರಿ ಹಿಡಿದಳು. ಆಂಥೋನಿಯ ತಾಯಿ ಜೆಸಿಂತಾ ಬಾಯಿಯ ಮೇಲೆ ಅವಳಿಗೆ ಬಹಳ ಆದರವಿತ್ತು. ಆದರೂ ಇವತ್ತು ಅಳುಕುತ್ತಲೇ ಅವರ ಮನೆಗೆ ಹೋದಳು. ಹಿಂಬದಿಯ ಹೊಸ್ತಿಲಲ್ಲಿ ನಿಂತುಕೊoಡು ಮೆಲುದನಿಯಿಂದ ಅವರನ್ನು ಕರೆದಳು. ಅವರು ಅಡುಗೆ ಕೋಣೆಯಿಂದಲೇ ಓಗೊಟ್ಟು ಲಘುಬಗೆಯಿಂದ ಹೊರಗೆ ಬಂದವರು ಸರೋಜಾಳನ್ನು ಪ್ರೀತಿಯಿಂದ ಮಾತಾಡಿಸುತ್ತ ಅಡುಗೆ ಕೋಣೆಗೆ ಕರೆದೊಯ್ದು ಕುಳ್ಳಿರಿಸಿದರು.
ಸರೋಜ ತನ್ನ ಗಂಡನ ಆವರೆಗಿನ ಗೋಳನ್ನು ಅವರೊಡನೆ ತೋಡಿಕೊಂಡು ನಿಟ್ಟುಸಿರುಬಿಟ್ಟ ನಂತರ ತಾನು ಬಂದ ವಿಷಯವನ್ನು ತಿಳಿಸಿದಳು. ಜೆಸಿಂತಾಬಾಯಿಯ ಮನಸ್ಸು ಕರಗಿತು. ‘ನೋಡು ಸರೋಜಾ ನಿನ್ನ ಕಷ್ಟ ನನಗೆ ಅರ್ಥವಾಗುತ್ತದೆ ಮಾರಾಯ್ತೀ. ಆದರೆ ಒಳ್ಳೆಯ ಹೆಣ್ಣು ಹೆಂಗಸರಿಗೆ ಇದು ಕಾಲವಲ್ಲ ಬಿಡು. ನೀನು ಗಟ್ಟಿ ಮನಸ್ಸು ಮಾಡಿಕೊಂಡು ಸಂಸಾರವನ್ನು ತೂಗಿಸಿಕೊಂಡು ಹೋಗಬೇಕಷ್ಟೇ!’ ಎಂದು ಸಾಂತ್ವನಿಸಿದರು. ಬಳಿಕ ರಪ್ಪನೇ ಏನೋ ಯೋಚನೆ ಬಂದು, ‘ಅಂದಹಾಗೆ ಸರೋಜಾ ನೀನು ನನ್ನ ಮಗನ ಸಾರಾಯಿಯನ್ನು ಕೊಂಡು ಹೋಗಬೇಡ. ಅದು ಆರೋಗ್ಯಕ್ಕೆ ಅಷ್ಟೊಂದು ಒಳ್ಳೆಯದಲ್ಲ. ನಾನು ಔಷಧಿಗೆಂದು ತಯಾರಿಸಿರುವುದು ಒಂದಿಷ್ಟಿದೆ. ಇವತ್ತು ಅದನ್ನೇ ಕೊಡುತ್ತೇನೆ. ನಾಳೆಯಿಂದ ಬೇರೆ ತಯಾರಿಸುತ್ತೇನೆ. ರಾತ್ರಿ ಹೊತ್ತು ಒಂದಿಷ್ಟು ಲೆಕ್ಕದ್ದು ಕುಡಿದು ಮಲಗಿದರೆ ಆರೋಗ್ಯಕ್ಕೂ ಒಳ್ಳೆಯದು ಚೆನ್ನಾಗಿ ನಿದ್ದೆಯೂ ಬರುತ್ತದೆ. ನಾನೂ ಅದನ್ನೇ ಸ್ವಲ್ಪ ಸ್ವಲ್ಪ ಕುಡಿದು ಮಲಗುವುದು!’ ಎಂದು ಹುರುಪಿನಿಂದ ಅಂದವರು ಕತ್ತಲೆ ಕೋಣೆಯೊಂದನ್ನು ಹೊಕ್ಕು ಒಂದು ಚೊಂಬು ಕಂಟ್ರಿಯನ್ನು ಬಗ್ಗಿಸಿ ತಂದು ಕೊಟ್ಟು ಅವಳಿಂದ ಐದು ರೂಪಾಯಿಯನ್ನೂ ಪಡೆದಾಗ ಸರೋಜಾಳ ಮನಸ್ಸು ಹಿಂಡಿದoತಾಯಿತು. ಆದರೂ ತೋರಿಸಿಕೊಳ್ಳದೆ ಮನೆಗೆ ಹಿಂದಿರುಗಿದಳು.
ನಿಶೆಯ ಬಾನಿನಲ್ಲಿ ಆಗಷ್ಟೇ ಮುಕ್ಕಾಲು ಚಂದಿರನು ಇಣುಕತೊಡಗಿದವನು ಸರೋಜ ನಡೆದು ಬರುವ ಗುಡ್ಡೆಯ ಹಾದಿಯ ತುಂಬೆಲ್ಲ ತಣ್ಣಗಿನ ಬೆಳದಿಂಗಳನ್ನು ಚೆಲ್ಲಿದ್ದ. ಅವಳು ಸಾರಾಯಿ ತುಳುಕದಂತೆ ಮೃದುವಾಗಿ ಹಿಡಿದುಕೊಂಡು ನಡೆಯುತ್ತಿದ್ದಳು. ಆ ಮದ್ಯವು ವಿಚಿತ್ರ ವಾಸನೆಯನ್ನು ಬೀರುತ್ತಿತ್ತು. ಹಾಗಂತ ಅಂಥ ವಾಸನೆಯನ್ನು ಅವಳು ಕಂಡಿಲ್ಲವೆoದಲ್ಲ. ಅದೆಷ್ಟೋ ಬಾರಿ ತನ್ನ ಗಂಡ ಕುಡಿದು ಬಂದಾಗ ಬೇಡ ಬೇಡವೆಂದರೂ ಆ ವಾಸನೆಯು ಅವಳ ಮೂಗಿಗೆ ಬಡಿಯುತ್ತ ಅವನ ಬೆವರು ವಾಸನೆಯೂ ಅದಕ್ಕೆ ಬೆರೆತು ಕಮಟು ವಾಸನೆಯಾಗಿ ಮಾರ್ಪಟ್ಟು ಅಸಹ್ಯವೆನಿಸುತ್ತಿತ್ತು. ಆದರೆ ಇವತ್ತು ತನ್ನ ಕೈಲ್ಲಿದ್ದ ಸಾರಾಯಿಯು ಬೇರೆಯೇ ಪರಿಮಳವನ್ನು ಸೂಸುವಂತೆ ಅವಳಿಗನ್ನಿಸಿತು. ಹಾಗಾಗಿ ಅದನ್ನು ಮೌನವಾಗಿ ಆಘ್ರಾಣಿಸುತ್ತ ನಡೆಯುತ್ತಿದ್ದವಳಿಗೆ ತಟ್ಟನೆ, ‘ರಾತ್ರಿ ಹೊತ್ತು ಒಂದಿಷ್ಟು ಲೆಕ್ಕದ್ದು ಕುಡಿದು ಮಲಗಿದರೆ ಆರೋಗ್ಯಕ್ಕೂ ಒಳ್ಳೆಯದು ಚೆನ್ನಾಗಿ ನಿದ್ದೆಯೂ ಬರುತ್ತದೆ. ನಾನೂ ಅದನ್ನೇ ಕುಡಿದು ಮಲಗುವುದು!’ ಎಂಬ ಜೆಸಿಂತಬಾಯಿಯ ಆರೋಗ್ಯ ಪ್ರವಚನವೂ ನೆನಪಾಗಿ ಕುತೂಹಲ ಕೆರಳಿತು. ಹಾಗಾದರೆ ತಾನೂ ಯಾಕೆ ಸ್ವಲ್ಪ ಕುಡಿದು ನೋಡಬಾರದು? ತನಗೂ ನಿದ್ದೆ ಸರಿಯಾಗಿ ಬಾರದೆ ತುಂಬಾ ದಿನಗಳಾದುವಲ್ಲ! ಎಂಬ ಯೋಚನೆಯು ಅವಳ ಮನಸ್ಸನ್ನು ಚಂಚಲಿಸಿತು. ಅದರ ಬೆನ್ನಿಗೆ ಭೀತಿಯೂ ಸುಳಿದಾಡಿತು. ಅಯ್ಯೋ ದೇವರೇ ಬೇಡಪ್ಪಾ! ಈ ದರಿದ್ರ ಚಟಕ್ಕೆ ಬಿದ್ದು ತನ್ನ ಗಂಡನೊಬ್ಬ ಹಾಳಾಗಿ ಹೋಗಿದ್ದು ಸಾಲದಾ…? ಇನ್ನಿದು ತನಗೂ ಅಂಟಿಕೊoಡಿತೆoದರೆ ಮಗಳ ಗತಿಯೇನಾದೀತು? ಎಂದು ಅವಳ ವಿವೇಕವು ಎಚ್ಚರಿಸಿತು. ಆದ್ದರಿಂದ ಆ ಆಮಿಷವನ್ನು ಬದಿಗೊತ್ತಿದವಳು ಮತ್ತೆ ಮಂದಗತಿಯಲ್ಲಿ ಮುಂದೆ ಸಾಗಿದಳು.
ಆದರೆ ಸ್ವಲ್ಪ ದೂರ ಬಂದವಳ ಮನಸ್ಸು ಮತ್ತೆ ಮದಿರೆಯ ವಾಸನೆಗೆ ಮರುಳಾಯಿತು. ಒಂದು ಚೂರು ಕುಡಿದು ನೋಡಿದರೆ ಏನಾಗಿ ಬಿಡುತ್ತದೆ…? ನಾನೇನು ಅದರ ಗುಲಾಮಳಾಗಿ ಬಿಡುತ್ತೇನಾ! ಇದರ ಸಹವಾಸದಿಂದ ನರಳುತ್ತಿರುವ ತನ್ನ ಗಂಡನನ್ನೂ, ಊರವರನ್ನೂ ಕಣ್ಣಾರೆ ಕಾಣುತ್ತಿಲ್ಲವಾ? ಎಂದುಕೊಳ್ಳುತ್ತ ತನ್ನಾಸೆಗೆ ಪುಷ್ಟಿ ನೀಡಿದಳು. ಮರುಕ್ಷಣ ಸ್ವಲ್ಪ ಧೈರ್ಯ ಬಂತು. ಮಣ್ಣಿನ ದಾರಿಯ ಮಗ್ಗುಲಲ್ಲಿ ಒಂದು ಕಡೆ ಒರಟೊರಟಾಗಿ ಬೆಳೆದು ನಿಂತಿದ್ದ ಗೊಬ್ಬರದ ಮರಗಳಡಿಗೆ ಹೋಗಿ ನಿಂತವಳು ಸುತ್ತಲೊಮ್ಮೆ ದೀರ್ಘವಾಗಿ ಅವಲೋಕಿಸಿದಳು. ಸುಮಾರು ದೂರದವರೆಗೆ ಯಾರೂ ಕಾಣಲಿಲ್ಲ. ಗುಡ್ಡೆಯಿಡೀ ನಿಶ್ಯಬ್ದವಾಗಿತ್ತು. ಮೆಲ್ಲನೆ ಚೊಂಬನೆತ್ತಿ ಬಾಯಿಗಿಡಲಿದ್ದಳು. ಅಷ್ಟರಲ್ಲಿ ಅವಳ ಸಮೀಪದ ಗುಡ್ಡೆಯಲ್ಲಿದ್ದ ಟಿಟ್ಟಿಭ ಹಕ್ಕಿಗಳೆರಡು ರಪ್ಪನೆ ಎಚ್ಚೆತ್ತು, ‘ಟಿಟರ‍್ರ್ ಟಿಟರ‍್ರ್ ಟಿಟರ‍್ರ್…!’ಎಂದರಚುತ್ತ, ಗದ್ದಲವೆಬ್ಬಿಸುತ್ತ ಹಾರಾಡಿದವು. ಅವಳು ಭಯದಿಂದ ನಡುಗಿಬಿಟ್ಟಳು. ಅದರ ರಭಸಕ್ಕೆ ಚೊಂಬು ತುಳುಕಿ ಕೊಂಚ ಸಾರಾಯಿಯೂ ಚೆಲ್ಲಿಬಿಟ್ಟಿತು. ಮರುಕ್ಷಣ ತಟ್ಟನೆ ಅಪಶಕುನದ ಭಾವವೊಂದು ಅವಳಲ್ಲಿ ಮಿಂಚಿ ಮರೆಯಾಯಿತು. ಆದರೆ ಚೆಲ್ಲಿದ ಸಾರಾಯಿ ಪರಿಮಳವು ಇನ್ನಷ್ಟು ಗಾಢವಾಗಿ ಅವಳ ಮೂಗಿಗೆ ಬಡಿಯಿತು. ಕೆಲವು ಕ್ಷಣ ತಟಸ್ಥಳಾಗಿ ಸಾವರಿಸಿಕೊಂಡವಳು ಮೂಗು ಮುಚ್ಚಿಕೊಂಡು ಒಂದು ಗುಟುಕನ್ನು ಗಂಟಲಿಗೇರಿಸಿಯೇ ಬಿಟ್ಟಳು. ಮರುಕ್ಷಣ ದೊಂಡೆ ಕತ್ತರಿಸಿದಂತಾಗಿ ಕಣ್ಣು ಕತ್ತಲಿಟ್ಟಿತು. ವಿಚಿತ್ರ ಉರಿ ಮತ್ತು ಅಸಹ್ಯದಿಂದ ಅಯ್ಯಯ್ಯಪ್ಪಾ…! ಥೂ! ಇದರ ಸಹವಾಸವೇ ಬೇಡಪ್ಪಾ! ಎನ್ನುತ್ತ ಸಂಭಾಳಿಸಿಕೊಳ್ಳಲು ಹೆಣಗುತ್ತ ಮುಂದೆ ಹೆಜ್ಜೆ ಹಾಕಿದಳು. ಆದರೆ ಅವಳ ಕೋಮಲ ದೇಹವನ್ನು ಹೊಕ್ಕ ‘ಮದಿರಾದೇವಿ’ಯು ಮೆಲ್ಲನೆ ತನ್ನ ಪ್ರಭಾವವನ್ನು ಬೀರತೊಡಗಿದಳು. ಹಾಗಾಗಿ ಆವರೆಗೆ ಜಡ ಭಾರದಂತೆ ಅನ್ನಿಸುತ್ತಿದ್ದ ಅವಳ ದೇಹ, ಮನಸ್ಸುಗಳೆರಡೂ ಹೂವಿನಷ್ಟು ಹಗುರವಾಗಿ ಆಕಾಶದಲ್ಲಿ ತೇಲಾಡುವಂತೆಯೂ, ಒಳಗಿನ ಭಾವನೆಗಳು ತುಂಬಿ ಬಂದoತೆಯೂ, ನೋವು, ಗೊಂದಲ, ಹತಾಶೆಗಳೆಲ್ಲ ಕಟ್ಟೆಯೊಡೆದು ಧುಮ್ಮಿಕ್ಕಲು ಹವಣಿಸುವಂತೆಯೂ, ನಗೆ ನಾಚಿಕೆ ಒಂದಕ್ಕೂ ಅರ್ಥವೇ ಇಲ್ಲವೆಂಬoತೆಯೂ ಹಾಗೂ ಅಲ್ಲಿಯತನಕ ಮರೆಮಾಚಿದ್ದೆಲ್ಲ ಈಗ ಬಟ್ಟಾಬಯಲಾಗುತ್ತಿರುವಂತೆಯೂ ಅವಳಿಗೆ ಭಾಸವಾಗತೊಡಗಿತು. ಮರುಕ್ಷಣ ಮತ್ತೊಮ್ಮೆ ಗಟ್ಟಿ ಮನಸ್ಸು ಮಾಡಿದವಳು ಇನ್ನೊಂದು ದೊಡ್ಡ ಗುಟುಕನ್ನೇ ಏರಿಸಿಬಿಟ್ಟಳು. ಸ್ವಲ್ಪಹೊತ್ತಿನಲ್ಲಿ ಅದೂ ಸಾಲದೆಂದಿತು ಮನಸ್ಸು. ಮತ್ತೆ ಮೂರನೆಯ ಗುಟುಕು ಸೆಳೆಯಿತು. ಅದನ್ನೂ ಮುಗಿಸಿದಳು. ಬಳಿಕ ನಾಲ್ಕನೆಯ ಗುಟುಕು ಹೊಟ್ಟೆಗಿಳಿವ ಹೊತ್ತಿಗೆ ಯಾಕೋ ತೀವ್ರ ಭಯ ಕಾಡಿತು. ಬೇಗಬೇಗನೆ ಮನೆಯತ್ತ ನಡೆದಳು.
ಸರೋಜ ಮನೆಗೆ ತಲುಪುವಾಗ ಅವಳು ಅವಳಾಗಿರಲಿಲ್ಲ. ಅವಳ ಹೆಜ್ಜೆಗಳು ತಾಳ ತಪ್ಪಿ ನಡೆಯುತ್ತಿದ್ದವು. ಆದರೂ ಸಂಭಾಳಿಸಿಕೊಳ್ಳುತ್ತ ಒಳಗಡಿಯಿಟ್ಟಳು. ಗಂಡನ ಮುಖವನ್ನು ಕಂಡವಳಿಗೆ ತನಗೇ ಅರ್ಥವಾಗದ ಅಸಹನೆಯೊಂದು ಹುಟ್ಟಿತು. ಸಾರಾಯಿ ಚೆಂಬನ್ನು ಅವನೆದುರು ಕುಕ್ಕಿ ಮಗಳತ್ತ ನೋಡಿದಳು. ಅವಳು ಊಟ ಮಾಡುತ್ತಿದ್ದಳು. ನೆಮ್ಮದಿಯಾಯಿತು. ಒಳಗೆ ಹೋಗಿ ಚಾಪೆ ತಂದು ಅರೆಬರೆ ಹಾಸಿ ಮಲಗಿಬಿಟ್ಟಳು. ಲಕ್ಷ್ಮಣನಿಗೆ ಅವಳ ವರ್ತನೆಯಿಂದ ಅಚ್ಚರಿಯಾಯಿತು. ಆದ್ದರಿಂದ, ‘ಏನಾಯ್ತು ಮಾರಾಯ್ತಿ, ಹುಷಾರಿಲ್ಲವಾ…?’ ಎಂದು ಅವಳ ಮೈ ಕುಲುಕುತ್ತ ಕೇಳಿದ. ‘ಏನೂ ಆಗಿಲ್ಲ ಮಾರಾಯ್ರೇ. ಸ್ವಲ್ಪ ತಲೆ ಸುತ್ತುತ್ತಿದೆ ಅಷ್ಟೆ. ನಿದ್ದೆ ಮಾಡಿದರೆ ಸರಿ ಹೋಗುತ್ತದೆ. ನೀವು ಊಟ ಮಾಡಿ ಮಲಗಿಕೊಳ್ಳಿ!’ ಎಂದು ಭಾವರಹಿತಳಾಗಿ ಅಂದು ಮುಖಕ್ಕೆ ಸೆರಗೆಳೆದು ಕಣ್ಣುಮುಚ್ಚಿದಳು. ಅಷ್ಟಕ್ಕೆ ಲಕ್ಷ್ಮಣನೂ ಸುಮ್ಮನಾಗಿ ಮಗಳಿಂದ ಉಪ್ಪಿನಕಾಯಿಯನ್ನು ತರಿಸಿಕೊಂಡು ಮುಕ್ಕಾಲು ಚೆಂಬು ಸಾರಾಯಿಯನ್ನು ಅರ್ಧ ಗಂಟೆಯೊಳಗೆ ಮುಗಿಸಿದ. ನಂತರ ಸರೋಜಾಳನ್ನು ಊಟಕ್ಕೆ ಎಬ್ಬಿಸಹೋದ. ಆಗಲೇ ಅವನಿಗೆ ಅವಳೂ ಕುಡಿದಿದ್ದಾಳೆ ಎಂದು ತಿಳಿದಿದ್ದು! ಅವನಿಗೆ ರಪ್ಪನೆ ಕೋಪ ಬಂತು. ಆದರೆ ಮರುಕ್ಷಣ ಪಾಪ! ಅವಳೂ ಎಷ್ಟೂಂತ ದುಡಿದು ಸಾಯುವುದು. ಹೀಗಾದರೂ ಸ್ವಲ್ಪ ನೆಮ್ಮದಿ ಕಾಣಲಿ ಎಂದುಕೊoಡು ಅನುಕಂಪ ತೋರುವ ನೆಪದಲ್ಲಿ ತನ್ನ ದಾರಿಯೂ ಸುಗಮವಾದುದನ್ನು ನೆನೆದು ಖುಷಿಪಟ್ಟ. ಅಮ್ಮ ಊಟ ಮಾಡದೆ ಮಲಗಿದ್ದು ಪ್ರಮೀಳಾಳಿಗೂ ಆತಂಕವಾಗಿ ತಾನೂ ಅವಳನ್ನು ಎಬ್ಬಿಸಹೋದಳು. ಆದರೆ ಅಷ್ಟೊತ್ತಿಗೆ ಸರೋಜಾಳಿಗೆ ರ‍್ರಾಬರ‍್ರಿ ನಶೆ ಏರಿತ್ತು. ಹಾಗಾಗಿ ಅವಳು, ‘ನೀವೊಮ್ಮೆ ಊಟ ಮಾಡಿ ಮಲಗಿಕೊಳ್ಳಿ ಮಾರಾಯ್ತಿ. ನನಗೆ ಹಸಿವಿಲ್ಲ…!’ ಎಂದು ತೊದಲುತ್ತ ನಿದ್ದೆಗೆ ಜಾರಿದಳು. ಅಮ್ಮನ ಸ್ಥಿತಿಯನ್ನು ಕಂಡ ಮಗಳಲ್ಲಿ ಅವ್ಯಕ್ತ ಭಯವೊಂದು ಸುಳಿದಾಡಿತು. ಅವಳು ದುಃಖಿಸುತ್ತ ಮಲಗಿಕೊಂಡಳು. ಇತ್ತ ಭೋದವಿಲ್ಲದೆ ಮಲಗಿದ ಸರೋಜಾಳಿಗೆ ಬೆಳಗ್ಗಿನ ಜಾವ ಕೋಳಿ ಕೂಗುವ ಹೊತ್ತಿಗೆ ಎಚ್ಚರವಾಯಿತು. ಜೆಸಿಂತಾಬಾಯಿ ಅಂದ ಹಾಗೆಯೇ ಅವರ ಕಂಟ್ರಿ ಸಾರಾಯಿಯು ಅವಳಿಗೆ ಸುಖವಾದ ನಿದ್ದೆಯನ್ನು ಕರುಣಿಸಿತ್ತು. ಹಾಗಾಗಿ ಇಂದಿನ ಬೆಳಗು ಬಹಳವೇ ಚೈತನ್ಯಪೂರ್ಣವಾಗಿದೆ! ಎಂದುಕೊoಡವಳಿಗೆ ಜೆಸಿಂತಾಬಾಯಿಯ ಪ್ರವಚನದಲ್ಲಿ ಹುರುಳಿದೆ ಅಂತಲೂ ಅನ್ನಿಸಿತು.
(ಮುಂದುವರೆಯುವುದು)