
ಧಾರವಾಹಿ 46
ಶಾರದಾ ಮುಂಬೈಗೆ ಹೋಗಿ ಐದು ವರ್ಷಗಳಾಗುತ್ತ ಬಂದುವು. ಈ ನಡುವೆ ಅವಳು ಎರಡು ಬಾರಿ ಬಂದು ಅಮ್ಮ, ಅಪ್ಪನನ್ನು ಕಂಡು ಅವರ ಕೈಯಲ್ಲಿ ಒಂದಿಷ್ಟು ದುಡ್ಡು ತುರುಕಿಸಿ, ತಂಗಿಗೆ ಹೊಸ ಬಟ್ಟೆಬರೆಗಳನ್ನು ಕೊಟ್ಟು ಹೋದವಳು ಆನಂತರ ಮಾರ್ಗರೆಟ್ ಬರುತ್ತಿದ್ದರೂ ತಾನು ಬರಲಿಲ್ಲ. ಹೀಗಾಗಿ ಸುದೀರ್ಘ ಕಾಲದಿಂದ ಮಗಳನ್ನು ಕಾಣದ ಸರೋಜ ದುಃಖಿಸುತ್ತ ಅವಳಿಗಾಗಿ ಹಂಬಲಿಸುತ್ತಿದ್ದಳು. ಆದರೆ ಆ ವರ್ಷ ಮಾರ್ಗರೆಟ್ ಎಂದಿಗಿoತಲೂ ಸ್ವಲ್ಪ ಬೇಗನೇ ಊರಿಗೆ ಬಂದವಳು ಸರೋಜಾಳನ್ನು ತನ್ನ ಮನೆಗೆ ಬರಹೇಳಿದಳು. ಸರೋಜ ತನ್ನ ಮನೆಗೆಲಸವನ್ನು ಗಡಿಬಿಡಿಯಿಂದಲೇ ಮುಗಿಸಿ ಉಟ್ಟಬಟ್ಟೆಯಲ್ಲೇ ಲಿಲ್ಲಿಬಾಯಿಯ ಮನೆಗೆ ಓಡಿದಳು. ಸರೋಜಾಳನ್ನು ಕಂಡ ಲಿಲ್ಲಿಬಾಯಿಯು, ‘ಬಾ ಸರೋಜ ಕುಳಿತು ಕೋ. ಮಾರ್ಗರೆಟ್ ಒಳಗಿದ್ದಾಳೆ…!’ ಎಂದು ನಗುತ್ತ ಸ್ವಾಗತಿಸಿದವರು ಮಗಳನ್ನು ಕೂಗಿ ಕರೆದರು. ಸರೋಜ ಹೊರಗಿನ ಜಗುಲಿಯಲ್ಲೇ ಕುಳಿತುಕೊಂಡಳು. ಸ್ವಲ್ಪಹೊತ್ತಿನಲ್ಲಿ ಮಾರ್ಗರೆಟ್ ಬಂದವಳು ಸರೋಜಾಳ ಪಕ್ಕದಲ್ಲಿ ಕುಳಿತಳು. ಒಂದಷ್ಟು ಹೊತ್ತು ಸರೋಜಾಳ ಸುಖ ಕಷ್ಟಗಳನ್ನು ವಿಚಾರಿಸಿದ ನಂತರ ಅಳುಕುತ್ತ ಶಾರದಾಳ ವಿಷಯವನ್ನು ಪ್ರಾಸ್ತಾಪಿಸಿದಳು. ‘ನೋಡಿ ಸರೋಜಾಕ್ಕ ನಿಮ್ಮ ಹತ್ತಿರ ಒಂದು ಮುಖ್ಯ ವಿಷಯ ಹೇಳಲಿಕ್ಕಿದೆ. ಅದಕ್ಕೆ ನೀವು ಗಟ್ಟಿ ಮನಸ್ಸು ಮಾಡ್ಕೋಬೇಕು!’ ಎಂದಳು ನಯವಾಗಿ. ಅಷ್ಟಕ್ಕೆ ಸರೋಜಾಳ ನೆಮ್ಮದಿ ಕದಡಿಬಿಟ್ಟಿತು. ‘ಅಯ್ಯೋ, ಅಂಥದ್ದೇನಾಯ್ತು ಮಾರ್ಗಿ…, ಶಾರದಾಳಿಗೇನಾದರೂ…?’ ಎಂದು ದುಃಖದಿಂದ ಪ್ರಶ್ನಿಸಿದಳು. ಆಗ ಮಾರ್ಗರೆಟ್ ಗಲಿಬಿಲಿಗೊಂಡು, ‘ಅಯ್ಯೋ…ಸರೋಜಕ್ಕಾ ಅಂಥದ್ದೇನೂ ಆಗಿಲ್ಲ ಮಾರಾಯ್ರೇ…! ನೀವಿಷ್ಟು ಬೇಗ ತಾಳ್ಮೆ ಕಳೆದುಕೊಂಡರೆ ಹೇಗೆ ಹೇಳಿ?’ ಎಂದಳು ತುಸು ಒರಟಾಗಿ. ಆಗ ಸರೋಜ ಸ್ವಲ್ಪ ಹತೋಟಿಗೆ ಬಂದಳು. ಮಾರ್ಗರೆಟ್ ಮಾತು ಮುಂದುವರೆಸಿದವಳು, ‘ಶಾರದಾ ಮುಂಬೈಗೆ ಬಂದ ಆರಂಭದಲ್ಲಿ ಮನೆಗೆಲಸವನ್ನೆಲ್ಲ ಚೆನ್ನಾಗಿ ಮಾಡಿಕೊಂಡು ನಮ್ಮೊಂದಿಗೆ ಅನ್ಯೋನ್ಯವಾಗಿದ್ದಳು ಸರೋಜಕ್ಕಾ. ಬಹಳ ಬೇಗ ಮುಂಬೈ ವಾತಾವರಣಕ್ಕೂ ಒಗ್ಗಿಕೊಂಡು ಅಕ್ಕಪಕ್ಕದ ಗಲ್ಲಿಗಳನ್ನು ಒಬ್ಬಳೇ ಸುತ್ತಾಡಿಕೊಂಡು ಬರುವಷ್ಟು ಹುಷಾರಾದಳು. ಅವಳಿಗೂ ಸ್ವತಂತ್ರವಾಗಿ, ಧೈರ್ಯವಾಗಿ ಬದುಕಲು ಅಭ್ಯಾಸವಾಗಲಿ ಅಂತ ನಾವೂ ಪ್ರೋತ್ಸಾಹಿಸುತ್ತಿದ್ದೆವು. ಆದರೆ ಬರಬರುತ್ತ ಒಂಥರಾ ಬದಲಾಗತೊಡಗಿದಳು. ಹೊರಗಡೆ ಹೋಗುವಾಗೆಲ್ಲ ವಿಪರೀತ ಸಿಂಗರಿಸಿಕೊoಡು ಹೋಗುತ್ತ, ಸದಾ ಯಾವುದೋ ಗುಂಗಿನಲ್ಲಿದ್ದoತಿರುತ್ತಿದ್ದಳು. ಹಾಗಾಗಿ ನನಗೂ ಇವರಿಗೂ ಸಂಶಯ ಬರತೊಡಗಿತು. ಒಮ್ಮೆ ಅವಳನ್ನು ಕುಳ್ಳಿರಿಸಿಕೊಂಡು ಪ್ರೀತಿಯಿಂದ ವಿಚಾರಿಸಿದೆವು. ಅದಕ್ಕವಳು, ನಾನೊಬ್ಬ ಹುಡುಗನನ್ನು ಪ್ರೀತಿಸುತ್ತಿದ್ದೇನೆ ಮಾರ್ಗಿಯಕ್ಕಾ! ಅಂತ ನಾಚುತ್ತ ಅಂದಳು. ನಮಗೆ ನಿಜಕ್ಕೂ ಆತಂಕವಾಯಿತು. ‘ನೋಡು ಶಾರದಾ, ಇದು ನಮ್ಮೂರಲ್ಲ. ಇಲ್ಲಿ ಯಾರನ್ನೂ ಅಷ್ಟು ಬೇಗ ನಂಬಲಿಕ್ಕಾಗುವುದಿಲ್ಲ. ಪ್ರೀತಿ, ಪ್ರೇಮ ಅಂತ ಯರ‍್ಯಾರದೋ ಬಲೆಗೆ ಬಿದ್ದು ಮುತ್ತಿನಂಥ ಜೀವನವನ್ನು ಹಾಳು ಮಾಡಿಕೊಳ್ಳಬೇಡ! ಅಂತ ಇಬ್ಬರೂ ಬುದ್ಧಿ ಹೇಳಿ ಅವಳನ್ನು ಓಲೈಸಿದೆವು. ಹಾಗಾಗಿ ಕೆಲವು ಕಾಲ ಆ ವಿಷಯವನ್ನು ಮರೆತವಳಂತೆ ಒಳ್ಳೆಯ ರೀತಿಯಿಂದ ಇರತೊಡಗಿದಳು. ಆದರೆ ಅವಳು ನಮ್ಮ ಮಾತಿಗೆ ಚೂರೂ ಬೆಲೆ ಕೊಡಲೇ ಇಲ್ಲ ಅನ್ನುವುದು ಆ ತಿಂಗಳು ನಮಗೆ ಬಂದ ಫೋನಿನ ಬಿಲ್ಲೇ ಸೂಚಿಸಿತು. ಅವಳು ಒಬ್ಬ ಹುಡುಗನಿಗೆ ಮರುಳಾಗಿಬಿಟ್ಟಿದ್ದಳು. ಅದನ್ನು ತಿಳಿದ ಇವರು ಅವಳನ್ನು ಗದರಿಸಿಯೂ ಬುದ್ಧಿ ಹೇಳಿದರು. ಆದರೆ ಅವಳು ಆನಂತರ ಎರಡು ದಿನ ಅನ್ನ ನೀರು ಬಿಟ್ಟು ಕೋಣೆ ಸೇರಿ ಕುಳಿತುಬಿಟ್ಟಳು. ಕೊನೆಗೆ ನಾವೇ ಸೋತು ಅವಳನ್ನು ಸಂತೈಸಿದೆವು. ಇವರು ಆ ಯುವಕನ ಪೂರ್ವಾಪರ ವಿಚಾರಿಸಲು ಅವನ ಹಿಂದೆ ಬಿದ್ದರು. ಅದರಿಂದ ಅವನು ಮರಾಠಿಯವನು ಅಂತ ತಿಳಿಯಿತು. ಅದಾದರೂ ಚಿಂತೆಯಿರಲ್ಲಿಲ್ಲ. ಆದರೆ ಅವನಿಗೆ ಇಲ್ಲಸಲ್ಲದ ದುಶ್ಚಟಗಳೆಲ್ಲ ಇದ್ದವು. ಅಷ್ಟಲ್ಲದೆ ಅವನು ವೇಶ್ಯಾವಾಟಿಕೆಯ ಗಲ್ಲಿಯಲ್ಲಿ ಕೆಲಸ ಮಾಡುವವನು. ಇವಳಿಗೆ ಅದನ್ನೆಲ್ಲ ವಿವರಿಸಿ ಹೇಳಿ ಎಚ್ಚರಿಸಿದೆವು. ನಾವೇ ನಿನಗೆ ಒಳ್ಳೆಯ ಗಂಡು ನೋಡಿ ಮದುವೆ ಮಾಡುತ್ತೇವೆ ಅಂತಾನೂ ಹೇಳಿದೆವು. ಆದರೂ ಪ್ರಯೋಜನವಾಗಲಿಲ್ಲ. ಅವಳು ನಮ್ಮ ಮಾತು ಕೇಳುವ ಸ್ಥಿತಿಯಲ್ಲೇ ಇರಲಿಲ್ಲ. ಕೊನೆಗೆ ಬೇರೆ ವಿಧಿಯಿಲ್ಲದೆ ಅವಳನ್ನು ಊರಿಗೆ ಕಳುಹಿಸುವುದೆಂದು ನಿರ್ಧರಿಸಿ ಅವಳಿಗೂ ಹೇಳಿದೆವು. ಆದರೂ ಅವಳು ಜಗ್ಗಲಿಲ್ಲ. ಇಷ್ಟಾದ ಮೇಲೆ ಆವತ್ತೊಂದಿನ ಒಂದು ಕೆಟ್ಟ ವಿಷಯ ನಡೆಯಿತು. ಅದನ್ನು ನಿಮಗೆ ಹೇಳಲು ಹೇಸಿಗೆಯಾಗುತ್ತದೆ. ಆದರೂ ಹೇಳಲೇಬೇಕು. ನಾವು ಡ್ಯೂಟಿ ಮುಗಿಸಿ ಮನೆಗೆ ಮರಳುವ ಹೊತ್ತಿಗೆ ಅವನೂ ಇವಳೂ ನಮ್ಮ ಮಂಚದ ಮೇಲೆ ಒಬ್ಬರನ್ನೊಬ್ಬರು ಅಪ್ಪಿಕೊಂಡು ಮಲಗಿದ್ದರು! ಆವತ್ತು ನಿಜಕ್ಕೂ ನನಗೆ ಅವಳ ಮೇಲೆ ಬೇಸರಹುಟ್ಟಿಬಿಟ್ಟಿತು. ಜೊತೆಗೆ ಇವರಿಗೂ ವಿಪರೀತ ಸಿಟ್ಟು ಬಂದು ಅವನನ್ನು ಹಿಡಿದು ಕೆನ್ನೆಗೆರಡೇಟು ಬಿಗಿದು ಹೊರಗೆ ತಳ್ಳಿದರು. ಬಳಿಕ ಮರುದಿನವೇ ಇವಳನ್ನು ಊರಿಗೆ ಕಳುಹಿಸಲು ಮುಂದಾದೆವು. ಆದರೆ ಅಷ್ಟರಲ್ಲಿ ಇವಳು ಮನೆಯಿಂದ ಓಡಿ ಹೋಗಿದ್ದಳು. ಪೊಲೀಸ್ ಕಂಪ್ಲೆoಟ್ ಕೊಡುವುದೆಂದು ಯೋಚಿಸಿದೆವು. ಆದರೆ ದುಡುಕಿ ಇನ್ನಷ್ಟು ತೊಂದರೆಗೆ ಸಿಲುಕುವುದು ಬೇಡವೆಂದುಕೊoಡು, ಅವಳು ಹೋಗುತ್ತಿದ್ದ ನಮ್ಮ ಸಂಬoಧಿಕರ ಮನೆಗಳಿಗೆಲ್ಲ ಹುಡುಕುತ್ತ ಹೋದೆವು. ಅಲ್ಲೆಲ್ಲೂ ಅವಳ ಪತ್ತೆಯಾಗಲಿಲ್ಲ. ನಂತರ ಆ ಹುಡುಗನ ಬೆನ್ನು ಹತ್ತಿದೆವು. ಎರಡು ದಿನಗಳ ನಂತರ ಇವಳು ಆ ಅಸಭ್ಯನೊಂದಿಗೆ ಕಾಮಟಿಪುರದ ಗಲ್ಲಿಯಲ್ಲಿದ್ದುದು ಇವರಿಗೆ ತಿಳಿಯಿತು. ನಮ್ಮ ಮಾನ ಮರ್ಯಾದೆಯನ್ನು ಬದಿಗಿಟ್ಟು ಇಬ್ಬರೂ ಆ ನರಕಕ್ಕೆ ಹೋಗಿ ಇವಳನ್ನು ಮನೆಗೆ ಬರುವಂತೆ ಒತ್ತಾಯಿಸಿದೆವು. ಆದರೂ ಅವಳು ಬರಲೊಪ್ಪಲಿಲ್ಲ. ತಾನು ಅದೆಂಥ ಕೆಟ್ಟ ಜಾಗದಲ್ಲಿರುವೆನೆಂಬುದನ್ನು ತಿಳಿಯದಷ್ಟೂ ಅವಳು ಅವನ ಮೋಡಿಗೆ ಬಿದ್ದುಬಿಟ್ಟಿದ್ದಳು. ನಮ್ಮನ್ನು ಕಂಡ ಅವನು ಇವರ ಮೇಲೆಯೇ ಏರಿ ಬಂದವನು, ‘ನಿಮ್ಮದೇನ್ರೀ ದಬ್ಬಾಳಿಕೆ…? ಈ ಬಡ ಹುಡುಗಿಯನ್ನು ಕರೆದು ತಂದು ಇಷ್ಟು ವರ್ಷ ಗುಲಾಮಳಂತೆ ದುಡಿಸಿಕೊಂಡದ್ದು ಸಾಕಾಗಲಿಲ್ಲವಾ ನಿಮಗೆ? ಇನ್ನು ಮುಂದೆ ಅದೆಲ್ಲ ನಡಿಯೋದಿಲ್ಲ. ನಾವು ನಿನ್ನೆನೇ ರಿಜಿಸ್ಟರ್ಡ್ ಮ್ಯಾರೇಜ್ ಆಗಿದ್ದೇವೆ. ಅವಳೀಗ ನನ್ನ ಹೆಂಡತಿ. ಇವತ್ತೇ ಕೊನೆ, ಇನ್ನು ಮುಂದೆ ನಮಗೆ ತೊಂದರೆ ಕೊಡಲು ಬಂದಿರೋ ನಿಮ್ಮ ಸ್ಥಿತಿ ನೆಟ್ಟಗಿರೋಲ್ಲ ಹುಷಾರ್!’ ಎಂದು ಕೆಲವು ರೌಡಿಗಳೊಂದಿಗೆ ಕೂಡಿ ಧಮಕಿ ಹಾಕಿದ. ಅವನು ನಮಗೆ ಆ ರೀತಿ ಅವಮಾನ ಮಾಡುತ್ತಿದ್ದರೂ ಶಾರದಾ ಮಾತ್ರ ತುಟಿಪಿಟಿಕ್ ಎನ್ನದೆ ನಿಂತಿದ್ದಳು. ಹಾಗಾಗಿ ನಾವು ನೊಂದುಕೊoಡು ಹಿಂದಿರುಗಿದೆವು. ನಿಮಗೆ ಇದನ್ನೆಲ್ಲ ತಿಳಿಸಬೇಕೆಂದೇ ನಾನು ಈ ಸಲ ಬೇಗನೇ ಊರಿಗೆ ಬಂದಿದ್ದು. ನೀವು ನಮ್ಮನ್ನು ನಂಬಿ ಅವಳನ್ನು ಕಳುಹಿಸಿದ್ದೀರಿ. ಅವಳಿಗೊಂದು ಒಳ್ಳೆಯ ಜೀವನವನ್ನು ಕೊಡಬೇಕೆಂದು ನಮಗೂ ಇತ್ತು. ಆದರೂ ಸೋತೆವು!’ ಎಂದು ಮಾರ್ಗರೆಟ್ ಗದ್ಗದಿತಳಾಗಿ ಹೇಳಿದಳು. ಮಾರ್ಗರೆಟಾಳಿಂದ ಮಗಳ ಕಥೆಯನ್ನು ಕೇಳಿದ ಸರೋಜಾಳ ದುಃಖದ ಕಟ್ಟೆಯೊಡೆಯಿತು. ಅವಳ ಮನಸಿನ ನೋವು, ನಿರಾಶೆಗಳು ಉಪಶಮನವಾಗುವಷ್ಟು ಹೊತ್ತು ತಣ್ಣಗೆ ಅತ್ತಳು. ಲಿಲ್ಲಿಬಾಯಿಯ ಕಣ್ಣುಗಳೂ ತೇವಗೊಂಡವು. ಸ್ವಲ್ಪಹೊತ್ತಿನ ನಂತರ ಸ್ಥಿಮಿತಕ್ಕೆ ಬಂದವಳು ಜೀವನದ ಕಟುವಾಸ್ತವವನ್ನು ವಿರೋಧವಿಲ್ಲದೆ ಒಪ್ಪಿಕೊಂಡoಥ ಭಾವದಿಂದ ಮಾತಾಡಿದವಳು, ‘ಇರಲಿ ಬಿಡು ಮಾರ್ಗರೆಟ್. ಎಲ್ಲ ನನ್ನ ಹಣೆಬರಹವಷ್ಟೇ. ಆವತ್ತು ವಯಸ್ಸಿನ ಮರೆವಿಗೆ ಬಿದ್ದು ಪ್ರೀತಿ, ಪ್ರೇಮ ಅಂತ ಭ್ರಮಿಸಿ ನಾನೂ ನನ್ನವರೆಲ್ಲರನ್ನೂ ಬಿಟ್ಟು ಬಂದು ತಪ್ಪು ಮಾಡಿದ್ದೆ. ಅದರ ಪ್ರತಿಫಲವನ್ನು ಇವತ್ತು ನನ್ನ ಮಗಳು ಅನುಭವಿಸುವಂತಾಯಿತು. ಒಟ್ಟಾರೆ ಇಂಥದ್ದೆಲ್ಲ ನನ್ನ ಹಣೆಯಲ್ಲೇ ಬರೆದಿರಬೇಕಾದರೆ ಯಾರೇನು ಮಾಡಲು ಸಾಧ್ಯ ಹೇಳು. ನನಗಾದರೂ ಯಾರಿದ್ದಾರೆ? ಇರುವ ಗಂಡನೊಬ್ಬ ಇದ್ದೂ ಇಲ್ಲದಂತಿದ್ದಾನೆ. ಇನ್ನು ಕೊನೆಯ ಮಗಳ ಜೀವನದಲ್ಲಿ ಅದೇನಿದೆಯೋ ದೇವರಿಗೇ ಗೊತ್ತು! ನಿಮ್ಮದೇನು ತಪ್ಪಿಲ್ಲ ಬಿಡಿ. ನೀವೆಲ್ಲ ನಮಗೆ ಒಳ್ಳೆಯದನ್ನೇ ಮಾಡುತ್ತ ಬಂದವರು. ಅವಳಾಗಿ ಅವಳೇ ಸೊಕ್ಕಿನಿಂದ ಹಾಳಾಗಿದ್ದಕ್ಕೆ ಯಾರೂ ಹೊಣೆಯಲ್ಲ! ಇನ್ನು ಮುಂದೆ ಆ ಬಗ್ಗೆ ನೊಂದುಕೊಳ್ಳಬೇಡಿ. ಇವತ್ತಿಗೆ ಎಲ್ಲವನ್ನೂ ಮರೆತು ಬಿಡಿ!’ ಎಂದು ಜಿಗುಪ್ಸೆಯಿಂದ ಅಂದವಳಿಗೆ ಮತ್ತೇನೋ ನೆನಪಾಯಿತು. ‘ಮಾರ್ಗಿ, ನೀನಿನ್ನು ಬೊಂಬಾಯಿಗೆ ಹೋಗುವುದು ಯಾವಾಗ…?’ ಎಂದಳು ಗಂಭೀರವಾಗಿ. ‘ಬರುವ ವಾರ ಹೊರಡುತ್ತಿದ್ದೇನೆ ಸರೋಜಾಕ್ಕ, ಯಾಕೆ…?’ ಎಂದಳವಳು ಕುತೂಹಲದಿಂದ.‘ಹೌದಾ, ಈ ಸಲ ಹೋದವಳು ನನಗಾಗಿ ಇನ್ನೊಮ್ಮೆ ಆ ಹಾಳು ಕೊಂಪೆಗೆ ಹೋಗಿ ಆ ಬಿಕನಾಸಿಗೆ ಒಂದು ಮಾತು ಹೇಳುತ್ತೀಯಾ…?’‘ಆಯ್ತು. ಏನು ಹೇಳಬೇಕು ಹೇಳಿ?’‘ನೀನು ಹೇಗಿದ್ದರೂ ಯಾವ ಸ್ಥಿತಿಯಲ್ಲಿದ್ದರೂ ನಿನ್ನ ಅಪ್ಪ, ಅಮ್ಮನಿಗೆ ನೀನು ಬೇಕು. ಗಂಡನನ್ನು ಕರೆದುಕೊಂಡು ಒಮ್ಮೆ ಊರಿಗೆ ಬಂದು ಹೋಗು ಅಂತ ಅಮ್ಮ ಹೇಳಿದ್ದಾಳೆಂದು ತಿಳಿಸುತ್ತೀಯಾ ಮಾರ್ಗಿ…?’ ಎಂದ ಸರೋಜಾಳಿಗೆ ಮತ್ತೆ ಅಳು ಉಕ್ಕಿತು. ಮಾರ್ಗರೆಟಾಳ ಕಣ್ಣುಗಳೂ ತೇವಗೊಂಡವು. ‘ಆಯ್ತು ಸರೋಜಾಕ್ಕ, ಈ ಸಲ ಹೇಗಾದರೂ ಮಾಡಿ ಅವಳನ್ನು ಊರಿಗೆ ಬರುವ ಹಾಗೆ ಮಾಡುವ ಜವಾಬ್ದಾರಿ ನಮ್ಮದು. ಹಾಗಾಗಿ ನೀವಿನ್ನು ಚಿಂತಿಸಬಾರದು!’ ಎಂದು ಮಾರ್ಗರೆಟ್ ಕಣ್ಣೀರೊರೆಸಿಕೊಳ್ಳುತ್ತ ಅಂದಳು. ಸರೋಜ ಸಮಾಧಾನದಿಂದ ಎದ್ದು ಹಿಂದಿರುಗಿದಳು. ಆದರೆ ಮಗಳ ಜೀವನ ಬೀದಿಪಾಲಾದುದನ್ನು ಅಷ್ಟು ಬೇಗನೇ ಅವಳಿಂದ ಅರಗಿಸಿಕೊಳ್ಳಲಾಗಲಿಲ್ಲ. ಆ ನೋವನ್ನು ಹತ್ತಿಕ್ಕಲಾರದೆ ಮಟಮಟ ಮಧ್ಯಾಹ್ನದ ಸುಡುಬಿಸಿಲಿಗೆ ನೇರವಾಗಿ ಜೆಸಿಂತಬಾಯಿಯ ಮನೆಗೆ ಸಾರಾಯಿ ಕುಡಿಯಲು ಧಾವಿಸಿದಳು.(ಮುಂದುವರೆಯುವುದು)