29.1 C
Karnataka
March 31, 2025
ಧಾರಾವಾಹಿ

ವಿವಶ…

ಧಾರವಾಹಿ 50
ತಮ್ಮ ಮಗಳ ಮೇಲಿನ ಅಸಹನೆ ಮತ್ತು ರೋಷವು ಅಂಗರ ಹಾಗೂ ದುರ್ಗಕ್ಕನನ್ನು ಬಹಳ ಕಾಲ ಬೆಂಬಿಡದೆ ಕಾಡಿತು. ಅದರಲ್ಲೂ ಆರಂಭದ ಒಂದಷ್ಟು ಕಾಲವಂತೂ ಮನೆಯಲ್ಲಿ ಅವಳ ಹೆಸರೆತ್ತುವುದು ಹಾಗಿರಲಿ, ಅವಳನ್ನು ನೆನೆಯುವುದೇ ಮಹಾಪರಾಧ ಎಂಬಷ್ಟರ ಮಟ್ಟಿಗೆ ಮೂವರೂ ತಮ್ಮ ಮನಸ್ಸು ಮುರಿದುಕೊಂಡಿದ್ದರು. ಆದರೆ ಮನುಷ್ಯನೊಳಗಿನ ಎಂತಹ ಘೋರ ನೋವು, ಅಶಾಂತಿಯನ್ನಾದರೂ ನಿವಾರಿಸುವ ಶಕ್ತಿ ಕಾಲಕ್ಕಿದೆ! ಎಂಬoತೆ ದಿನಗಳುರುಳಿ, ತಿಂಗಳುಗಳು ಸಾಗಿ ವರುಷಗಳು ಕಳೆದಂತೆ ಆ ಮುದಿಜೀವಗಳಲ್ಲೂ ಮಗಳ ಮೇಲಿನ ಮನಸ್ತಾಪವು ತನ್ನ ಬಣ್ಣವನ್ನು ಕಳೆದುಕೊಳ್ಳುತ್ತ ಸಾಗಿತು. ಆದ್ದರಿಂದ ಗಂಡ, ಹೆಂಡತಿಗೆ ಈಗೀಗ ಮಗಳ ನೆನೆಪು ಸದಾ ಕಾಡತೊಡಗಿತ್ತು. ಹಬ್ಬ ಹರಿದಿನಗಳಲ್ಲಂತೂ ಹೆತ್ತ ಕರುಳು ಮೌನವಾಗಿ ಕಣ್ಣೀರಿಡುತ್ತ ಸಂಭ್ರಮದ ದಿನಗಳನ್ನು ನೀರಸವಾಗಿ ಕಳೆಯುವಂತೆ ಮಾಡುತ್ತಿತ್ತು. ಮಗಳಂತೂ ಇನ್ನು ಬರಲಾರಳು. ಆದರೆ ಅವಳ ಸ್ಥಾನವನ್ನು ತುಂಬಲು ಚೈತನ್ಯಪೂರ್ಣೆಯಾದ ಇನ್ನೊಂದು ಹೆಣ್ಣಾದರೂ ಬಂದು ತಮ್ಮ ಮನೆ ಮನಗಳನ್ನು ಬೆಳಗುವಂತಾದರೆ ಮಗಳ ನೆನಪು ತುಸುವಾದರೂ ಮಾಸಬಹುದೆಂದು ದುರ್ಗಕ್ಕನಿಗೆ ಅನ್ನಿಸತೊಡಗಿತು. ಹಾಗಾಗಿ ಒಮ್ಮೆ ಮಗನೊಡನೆ ಮದುವೆಯ ವಿಷಯವನ್ನು ಪ್ರಸ್ತಾಪಿಸಿದಳು. ಅದಕ್ಕವನೂ ಒಪ್ಪಿದ. ಆದ್ದರಿಂದ ಕೆಲವೇ ದಿನಗಳಲ್ಲಿ ಹೆಣ್ಣು ಹುಡುಕುವ ಕಾರ್ಯ, ನೋಡುವ ಕ್ರಮ ಮತ್ತು ಮದುವೆಯ ಶಾಸ್ತçಗಳೆಲ್ಲವೂ ಹೂವೆತ್ತಿಟ್ಟಂತೆ ಸುಸಾಂಗವಾಗಿ ನೆರವೇರಿದವು. ಶಂಕರಪುರದ ದುಗ್ಗಣ್ಣನ ಹಿರಿಯ ಮಗಳು ಸುಮತಿಯು ಅಶೋಕನಿಗೆ ಹೆಂಡತಿಯಾಗಿ ಬಂದಳು. ಅಂಗರ ಮತ್ತು ದುರ್ಗಕ್ಕನ ಅದೃಷ್ಟವೇ ಇರಬೇಕು ಎಂಬoತೆ ಸುಮತಿಯು ಹೆಸರಿಗೆ ತಕ್ಕಂತೆ ಸುಸಂಸ್ಕೃತೆಯಾದ ಸ್ಫುರದ್ರೂಪಿ ಹೆಣ್ಣಾಗಿದ್ದಳು. ಕಡು ಬಡತನದ ಕೂಡು ಕುಟುಂಬದಿoದ ಬಂದಿದ್ದ ಅವಳು ಗಂಡನ ಮನೆಯನ್ನು ತನ್ನ ಮನೆಯೆಂದೇ ಭಾವಿಸಿ ಮನೆಮಂದಿಯೆಲ್ಲರ ಮೇಲೆ ನಿಷ್ಕಲ್ಮಶ ಪ್ರೀತಿ, ಆತ್ಮೀಯತೆಯನ್ನು ತೋರುತ್ತಿದ್ದಳು.
ಸೊಸೆಯ ಸದ್ಗುಣಗಳೊಂದಿಗೆ ಅವಳು ತಾನು ಅಡಿಯಿಟ್ಟ ಮನೆಯನ್ನು ಅಚ್ಚುಕಟ್ಟಿನಿಂದ ನಿಭಾಯಿಸಿಕೊಂಡು ಹೋಗುವ ರೀತಿಯನ್ನು ಕಂಡ ಅಂಗರ ದಂಪತಿಯು ಅವಳನ್ನು ಬಹಳವೇ ಮೆಚ್ಚಿಕೊಳ್ಳುತ್ತ ಅವಳಲ್ಲಿ ತಮ್ಮ ಮಗಳನ್ನು ಕಾಣುತ್ತ ನೆಮ್ಮದಿಯಿಂದ ಬದುಕತೊಡಗಿದರು. ಹೆಂಡತಿಯ ಗುಣವು ಅಶೋಕನಿಗೂ ಮೆಚ್ಚುಗೆಯಾಗಿತ್ತು. ಹಾಗಾಗಿ ಅವನೂ ತನ್ನ ಒರಟುತನವನ್ನು ಬಿಟ್ಟು ಅವಳೊಡನೆ ಅನ್ಯೋನ್ಯವಾಗಿ ಬಾಳತೊಡಗಿದ. ಹೀಗಾಗಿ ಹಿಂದೆ ಪ್ರೇಮಾಳಿದ್ದಾಗ ಅಂಗರನ ಮನೆ ಹೇಗಿತ್ತೋ ಹಾಗೆಯೇ ಮರಳಿ ಚೈತನ್ಯವನ್ನು ತುಂಬಿಕೊoಡಿತು. ಮದುವೆಯಾದ ಏಳು ವರ್ಷಗಳ ನಂತರ ಅಶೋಕನಿಗೆ ಒಂದು ಹೆಣ್ಣು ಒಂದು ಗಂಡು, ಅವಳಿ ಮಕ್ಕಳು ಹುಟ್ಟಿದವು. ಅಲ್ಲಿಗೆ ಮನೆಯು ನಂದಗೋಕುಲವಾಯಿತು. ಆದರೆ ಜಗತ್ತಿನ ಯಾವ ಸಂಸಾರದಲ್ಲೂ ಸುಖ ದುಃಖಗಳು ಶಾಶ್ವತವಲ್ಲ! ಎಂಬoತೆ ಅನಾರೋಗ್ಯ ಪೀಡಿತನಾಗಿದ್ದ ಅಂಗರನಿಗೆ ತನ್ನ ಕೊನೆಗಾಲ ಸಮೀಪಿಸಿದ್ದರ ಸುಳಿವು ಸಿಕ್ಕಿತೆಂದು ತೋರುತ್ತದೆ. ಹಾಗಾಗಿ ತಾನು ಹೆತ್ತು ಹೊತ್ತು ಮುದ್ದಿನಿಂದ ಸಾಕಿ ಬೆಳೆಸಿದ ಮಗಳ ಜೀವನಕ್ಕೊಂದು ಭದ್ರತೆ ಒದಗಿಸದೆ ಹೋದೆನಲ್ಲಾ! ಎಂಬ ಕೊರಗು, ಅಪರಾಧಿ ಭಾವಗಳು ಅವನನ್ನು ಸದಾ ಹಿಂಡಿ ಹಿಪ್ಪೆ ಮಾಡಲಾರಂಭಿಸಿದ್ದವು. ಸುಮಾರು ಕಾಲ ಅದೇ ಚಿಂತೆಯಲ್ಲಿದ್ದವನಿಗೆ ಒಮ್ಮೆ ಇದ್ದಕ್ಕಿದ್ದ ಹಾಗೆ ಪಾರ್ಶ್ವವಾಯು ಬಡಿಯಿತು. ಅಂದಿನಿoದ ಕಡಿದುರುಳಿದ ಮರದಂತೆ ಬಿದ್ದಲ್ಲಿಯೇ ಇದ್ದುಕೊಂಡು ಕೆಲವು ಕಾಲ ನರಳಿದ. ಅವನ ಪುಣ್ಯಕ್ಕೆ ಮಡದಿ, ಮಗ ಮತ್ತು ಸೊಸೆ ಪ್ರೀತಿಯಿಂದ ಆರೈಕೆ ಮಾಡತೊಡಗಿದರು. ಆದರೆ ಜೀವನದ ಅಂಚಿನಲ್ಲಿದ್ದ ಅವನಿಗೆ ಒಂದು ಮುಂಜಾನೆ ತಟ್ಟನೆ ಮಗಳನ್ನು ನೋಡಲೇಬೇಕೆಂಬ ಹಂಬಲವಾಯಿತು. ಕ್ಷೀಣ ಸ್ವರದಿಂದ ಮಗನನ್ನು ಎಬ್ಬಿಸಿದ. ಅಪ್ಪನ ಧ್ವನಿಗೆ ಅಶೋಕ ಕೂಡಲೇ ಎದ್ದು ಬಂದು ಅವನ ಸಮೀಪ ಕುಳಿತ. ‘ಮಗಾ, ಪ್ರೇಮ ಹೇಗಿದ್ದಾಳನಾ…? ಅವಳನ್ನು ನೋಡಿಕೊಂಡು ಬಂದಿದ್ದೀಯಾ…?’ ಎಂದು ಸೂರು ದಿಟ್ಟಿಸುತ್ತ ಕೇಳಿದ.
‘ಗೊತ್ತಿಲ್ಲಪ್ಪಾ. ನಾನು ಹೋಗಲಿಲ್ಲ…!’ ಎಂದು ಮಗ ಭಾವರಹಿತನಾಗಿ ಅಂದ.
‘ಅಯ್ಯೋ ಪಂರ್ಜುಲಿಯೇ…! ಅವಳ ಬದುಕು ಹಾಳಾಗಲು ನಾವೇ ಕಾರಣವಲ್ಲವಾ ಮಗಾ…? ಅವಳಾದರೂ ಏನು ಮಾಡಿಯಾಳು. ವಯಸ್ಸಿಗೆ ಬಂದ ಹೊತ್ತಲ್ಲಿ ತನಗೆ ಸರಿ ಕಂಡ ಹಾಗೇ ಅವಳು ನಡೆದುಕೊಂಡಳು. ಅಷ್ಟಾದ ಮೇಲಾದರೂ ನಾವು ಅವಳನ್ನು ಕ್ಷಮಿಸಿ ಮನೆಗೆ ಕರೆದುಕೊಂಡು ಬರಬೇಕಿತ್ತು. ಅಪ್ಪನಾಗಿ ನಾನೇ ತಪ್ಪು ಮಾಡಿಬಿಟ್ಟೆ ಮಗಾ!’ ಎಂದವನ ಕೆನ್ನೆಯ ಮೇಲೆ ದಪ್ಪ ಹನಿಗಳು ಉರುಳಿದವು. ಬಳಿಕ, ‘ನೋಡು ಮಗಾ ನನ್ನದೆಲ್ಲ ಮುಗಿಯುತ್ತ ಬಂತು. ಅವಳ ಜೀವನ ಹಾಳು ಮಾಡಿದವನೂ ಸತ್ತು ಹೋದ. ಇನ್ನು ಅವಳ ಮೇಲೆ ಹಠ ಕಟ್ಟಿಕೊಂಡು ಏನು ಪ್ರಯೋಜನ ಹೇಳು? ನಾನು ಮಾಡಿದ ತಪ್ಪು ನೀನೂ ಮಾಡಬೇಡ ಮಗಾ! ಎಷ್ಟಾದರೂ ನಿನ್ನ ಒಡಹುಟ್ಟಿದವಳಲ್ಲವಾ. ನಡೆದದ್ದನ್ನೆಲ್ಲ ಕೆಟ್ಟ ಕನಸೆಂದು ಮರೆತು ಅವಳನ್ನು ಮನೆಗೆ ಕರೆದುಕೊಂಡು ಬಂದು ಚೆನ್ನಾಗಿ ನೋಡಿಕೋ. ಯಾಕೋ ನನಗವಳನ್ನು ಈಗಲೇ ನೋಡಬೇಕೆನಿಸುತ್ತಿದೆ. ಕರೆದುಕೊಂಡು ಬರುತ್ತೀಯಾ ಮಗಾ…?’ ಎನ್ನುತ್ತ ಮೌನವಾಗಿ ಅತ್ತ. ಅಪ್ಪನ ಮಾತುಗಳನ್ನು ತಾಳ್ಮೆಯಿಂದ ಕೇಳುತ್ತಿದ್ದ ಅಶೋಕನ ಮನಸ್ಸು ಕೂಡಾ ಅಕ್ಕನಿಗಾಗಿ ಹಂಬಲಿಸಿ ಆರ್ದ್ರಗೊಂಡಿತು. ‘ಆಯ್ತಪ್ಪಾ ಬೆಳಗಾಗಲಿ. ಕರೆದುಕೊಂಡು ಬರುತ್ತೇನೆ. ಈಗ ನಿಶ್ಚಿಂತೆಯಿoದ ಮಲಗಿ!’ ಎಂದು ಸಾಂತ್ವನಿಸಿದ. ಮಗನಿಂದ ಅಷ್ಟು ಕೇಳಿದ ಅಂಗರನ ಒಣಗಿ ಸುಕ್ಕು ಗಟ್ಟಿದ ಕಾಂತಿಹೀನ ಮುಖದಲ್ಲಿ ನಿರಾಳತೆಯ ಹೊಳಪು ಮಿಂಚಿತು. ಆಗ ನೆಮ್ಮದಿಯಿಂದ ಕಣ್ಣುಮುಚ್ಚಿದವನು ಮತ್ತೆ ತೆರೆಯಲಿಲ್ಲ!


ಮಗಳನ್ನು ಮನೆಗೆ ಕರೆದು ತರುವ ಆಸೆಯು ದುರ್ಗಕ್ಕನಲ್ಲೂ ಅತಿಯಾಗಿ ತುಡಿಯುತ್ತಿತ್ತು. ಹಿಂದೆಲ್ಲ ಎಷ್ಟೋ ಬಾರಿ ಮಗಳನ್ನೊಮ್ಮೆ ನೋಡಿಯಾದರೂ ಬರಬೇಕೆಂದುಕೊoಡು ಎದ್ದು ಹೊರಟು ನಿಲ್ಲುತ್ತಿದ್ದಳು. ಆದರೆ, ‘ನೋಡಮ್ಮಾ…, ನೀನು ಒಂದು ವೇಳೆ ಅವಳ ಹತ್ತಿರ ಹೋದೆಯೆಂದರೆ ಆವತ್ತಿಗೆ ನಿನ್ನ ಮಗನೂ ನಿನ್ನ ಪಾಲಿಗೆ ಸತ್ತು ಹೋದನೆಂದು ತಿಳಿ! ಅವಳು ಈ ಮನೆಗೆ ಕಾಲಿಟ್ಟ ಮರುಗಳಿಗೆ ನನ್ನ ಸಂಸಾರವನ್ನು ಕಟ್ಟಿಕೊಂಡು ನಾನೂ ಶಾಶ್ವತವಾಗಿ ಹೊರಟು ಹೋಗುತ್ತೇನೆ ಜಾಗ್ರತೆ!’ ಎಂದು ಅಶೋಕ ಅವಳನ್ನು ಹೆದರಿಸಿ ಬಾಯಿ ಮುಚ್ಚಿಸುತ್ತಿದ್ದ. ಹಾಗಾಗಿ ಅವಳು ಮಗಳ ಜೀವನ ತನ್ನ ಕಣ್ಣೆದುರೇ ಬೀದಿಪಾಲಾಗುತ್ತಿದ್ದುದನ್ನು ಕಂಡೂ ಅಸಹಾಯಕಳಾಗಿ ಕಾಲ ಕಳೆಯುತ್ತ ಅದೇ ಕೊರಗಿನಲ್ಲಿ ಆಗಾಗ ಹಾಸಿಗೆ ಹಿಡಿಯುತ್ತಿದ್ದಳು. ಆದರೆ ಇತ್ತ ಗಂಡ ಮತ್ತು ಅತ್ತೆ, ಮಾವನಿಗೆ ಅತ್ತಿಗೆಯ ಮೇಲಿದ್ದ ಕೋಪ, ಹಠವು ಸುಮತಿಯನ್ನೂ ನೋಯಿಸುತ್ತಿತ್ತು. ಮಮತೆಯ ಮೂರ್ತಿಯಂತಿದ್ದ ಅವಳು ಪ್ರೇಮಾಳನ್ನು ಮನೆಗೆ ಕರೆತರುವ ಮೂಲಕ ಕಡಿದ ಸಂಬoಧವನ್ನು ಮರಳಿ ಪೋಣಿಸಲು ಹಂಬಲಿಸುತ್ತಿದ್ದಳು. ಆದ್ದರಿಂದ ಸೂಕ್ತ ಸಮಯ, ಸಂದರ್ಭವನ್ನು ನೋಡಿಕೊಂಡು ಗಂಡನಿಗೆ ತಿಳುವಳಿಕೆ ಹೇಳುತ್ತಲೂ ಬಂದಿದ್ದಳು. ಹೀಗಾಗಿ ಅತ್ತ ಗತಿಸಿದ ತಂದೆಯ ಆಸೆಯೂ ಮತ್ತೀಗ ದುಃಖದ ಮಡುವಿನಲ್ಲಿ ಕಾಲಕಳೆಯುತ್ತಿದ್ದ ಅಮ್ಮನ ಹಂಬಲಿಕೆಯೂ ಹಾಗೂ ಹೆಂಡತಿಯ ಬುದ್ಧಿಮಾತುಗಳೆಲ್ಲ ಸೇರಿ ಅಶೋಕನ ಮನಸ್ಸನ್ನು ಮೆಲ್ಲನೆ ಪರಿವರ್ತಿಸತೊಡಗಿವು. ಅಲ್ಲದೇ ಅವನು ಕೂಡಾ ತನ್ನಕ್ಕನ ಜೀವನವು ದಿನೇದಿನೇ ಅಧೋಗತಿಗಿಳಿಯುತ್ತಿದ್ದುದನ್ನು ಗಮನಿಸುತ್ತಿದ್ದ. ಆದರೆ ಮೊದಮೊದಲು ಅವನಿಗೆ ಅವಳ ಮೇಲಿದ್ದ ಆಕ್ರೋಶಕ್ಕೆ ಅದು ಉಪಶಮನವೆನಿಸುತ್ತಿತ್ತು. ನೀನು ನಮಗೆಲ್ಲ ಮಾಡಿದ ಅನ್ಯಾಯಕ್ಕೆ ದೇವರೇ ನಿನಗೆ ಸರಿಯಾದ ಶಿಕ್ಷೆ ಕೊಡುತ್ತಿದ್ದಾನೆ. ಇನ್ನಷ್ಟು ಅನುಭವಿಸಬೇಕು ನೀನು! ಎಂದು ಕ್ರೋಧದಿಂದ ಶಪಿಸುತ್ತಿದ್ದ. ತನ್ನ ಭಾವ ಎನ್ನುವವನನ್ನೂ ಕಣ್ಣೆತ್ತಿಯೂ ನೋಡದಷ್ಟು ಅವನಲ್ಲಿ ಜಿಗುಪ್ಸೆ ಬೆಳೆದಿತ್ತು. ಹೀಗೆ ಬಹಳಕಾಲ ಅವನೊಳಗೆ ಹೊತ್ತಿ ಉರಿಯುತ್ತಿದ್ದ ದ್ವೇಷಾಗ್ನಿಯು ಕಾಲ ಸರಿದಂತೆ ತನ್ನ ತೀಕ್ಷ÷್ಣತೆಯನ್ನು ಕಳೆದುಕೊಳ್ಳುತ್ತ ಸಾಗಿತು. ಕ್ರಮೇಣ ತಾನಾವತ್ತು ಅಕ್ಕನನ್ನು ರಾಕ್ಷಸನಂತೆ ಹೊಡೆದು ಬಡಿದು ಹಿಂಸಿಸಿದ ಘಟನೆಗಳೆಲ್ಲ ಒಂದೊoದಾಗಿ ಅವನ ಕಣ್ಣಮುಂದೆ ಬಂದು ಮನಸ್ಸನ್ನು ಹಿಂಡುತ್ತ ಅಪ್ಪನಂತೆ ಅವನಿಗೂ ತನ್ನ ತಪ್ಪಿನರಿವಾಗಿ ಪಾಪಪ್ರಜ್ಞೆ ಬಾಧಿಸತೊಡಗಿತು. ಅದರಿಂದ ಒಮ್ಮೆ, ಏನಾದರಾಗಲಿ. ಹಿಂದೆ ನಡೆದುದನ್ನೆಲ್ಲ ಮರೆತುಬಿಡಬೇಕು. ನನ್ನನ್ನು ಹೆತ್ತವಳನಂತೆ ಸಾಕಿ ಬೆಳೆಸಿದ ಜೀವ ಅವಳು. ಅಂಥವಳ ಬದುಕು ಇನ್ನು ಮುಂದೆ ಬೀದಿ ಪಾಲಾಗಲು ಬಿಡಬಾರದು. ನಾಳೆನೇ ಹೋಗಿ ಅವಳನ್ನು ಮನೆಗೆ ಕರೆದುಕೊಂಡು ಬರಬೇಕು. ಶ್ವೇತಾಳೂ ಯಾರದೋ ಮನೆಯಲ್ಲಿ ಅನಾಥೆಯಂತೆ ಬೆಳೆಯುತ್ತಿದ್ದಾಳೆ. ಆ ಹುಡುಗಿಯ ಜೀವನ ನಾಶವಾಗಲು ಅವಕಾಶಕೊಡಬಾರದು. ಮಗಳನ್ನು ನೋಡಬೇಕೆಂಬ ಅಪ್ಪನ ಕೊನೆಯಾಸೆಯನ್ನಂತೂ ನನ್ನಿಂದ ನೆರವೇರಿಸಲಾಗಲಿಲ್ಲ. ಅಮ್ಮನ ಕೊರಗನ್ನಾದರೂ ನಿವಾರಿಸಬೇಕು. ಅದರಿಂದ ಅಪ್ಪನಾತ್ಮಕ್ಕೂ ಶಾಂತಿ ಸಿಗಬಹುದು! ಎಂದುಕೊoಡವನು ಕೂಡಲೇ ಗೆಲುವಾದ.
ಆವತ್ತು ಶುಕ್ರವಾರ ಸಂಜೆ ಅಶೋಕ ದಂಪತಿಯು ಪ್ರೇಮಾಳ ಮನೆಗೆ ಹೊರಟರು. ಅವಳು ಅಂದು ಮಧ್ಯಾಹ್ನವೇ ಹದವಾಗಿ ಕುಡಿದು ಮಲಗಿದ್ದಳು. ಅಶೋಕ ದಂಪತಿ ಬರುವಾಗ ಸರೋಜ ತನ್ನ ಶೆಡ್ಡಿನ ಹೊಸ್ತಿಲಲ್ಲಿ ಕುಳಿತು ಬೀಡಿ ಚುರುಟುತ್ತಿದ್ದವಳು ದೂರದಿಂದಲೇ ಅವರ ಪರಿಚಯವಾಗಿ ಅಚ್ಚರಿಗೊಂಡಳು. ಮೊರವನ್ನು ರಪ್ಪನೆ ಬದಿಗಿಟ್ಟು ಪ್ರೇಮಾಳ ಶೆಡ್ಡಿಗೆ ಧಾವಿಸಿ, ‘ಪ್ರೇಮಕ್ಕಾ, ಓ ಪ್ರೇಮಕ್ಕಾ…! ನಿಮ್ಮ ತಮ್ಮ ಬಂದಿದ್ದಾನೆ ಮಾರಾಯ್ರೇ. ಏಳೀ, ಏಳಿ, ಬೇಗ ಎದ್ದೇಳಿ…!’ ಎಂದು ಅವಳ ಮೈ ಕುಲುಕಿ ಎಚ್ಚರಿಸಿದವಳು ಅದೇ ವೇಗದಲ್ಲಿ ಹೊರಗೆ ಬಂದಳು. ಅಷ್ಟೊತ್ತಿಗೆ ಅಶೋಕ ಮತ್ತು ಸುಮತಿ ಹೊಸ್ತಿಲಲ್ಲಿ ನಿಂತಿದ್ದರು. ‘ಬನ್ನಿ ಬನ್ನೀ…ಪ್ರೇಮಾಕ್ಕ ಮಲಗಿದ್ದರು. ಎಬ್ಬಿಸಿದೆ. ಒಳಗೆ ಬನ್ನಿ ಕುಳಿತುಕೊಳ್ಳಿ!’ ಎಂದಳು ಸಂಭ್ರಮದಿoದ. ಅವರು ಅವಳಿಗೆ ಕೃತಜ್ಞತೆಯನ್ನು ಸಲ್ಲಿಸಿ ಪ್ರೇಮಾಳ ಶೆಡ್ಡಿನೊಳಗೆ ಹೋದ ನಂತರ ಅವಳು ಮರಳಿ ಹೋಗಿ ಕುಳಿತು ಮೊರವನ್ನು ಮಡಿಲಿಗೇರಿಸಿದಳು.
ಅಶೋಕ ದಂಪತಿ ಕೋಣೆಯೊಳಗೆ ಅಡಿಯಿಟ್ಟವರನ್ನು ಮಬ್ಬುಗತ್ತಲು ಆಹ್ವಾನಿಸಿದ್ದರೊಂದಿಗೆ ಸಾರಾಯಿ ವಾಸನೆಯೂ ಮೂಗಿಗೆ ಬಡಿದು ಅವರ ಉಸಿರುಗಟ್ಟಿದಂತಾಯಿತು. ಅಷ್ಟರಲ್ಲಿ ಪ್ರೇಮ ಎದ್ದು ಕುಳಿತು ಅರೆಬರೆ ನಶೆಯಲ್ಲಿದ್ದವಳಿಗೆ ತಮ್ಮನ ಗುರುತು ತಕ್ಷಣ ಹತ್ತಲಿಲ್ಲ. ಸುಮಾರು ಹೊತ್ತು ಅವನನ್ನೇ ದಿಟ್ಟಿಸಿದವಳು, ‘ಓಹೋ, ಅಶೋಕನಾ ಮಾರಾಯಾ…! ಬಾರನಾ ಕುಳಿತುಕೋ. ಅದು ಯಾರು ನಿನ್ನ ಹೆಂಡತಿಯಾ…? ಅಯ್ಯೋ ದೇವರೇ…! ನನ್ನ ಅವಸ್ಥೆಯನ್ನು ನೋಡಿದಿರಾ…!’ ಎಂದು ಮುಜುಗರದಿಂದೆದ್ದು ಚಾಪೆ ಮಡಚಿಟ್ಟವಳು ಇನ್ನೊಂದು ಹರಕಲು ಚಾಪೆಯನ್ನು ಅವರೆದುರು ಹಾಸಲು ಮುಂದಾದಳು. ಅಷ್ಟರಲ್ಲಿ ಅಶೋಕನೇ ಅವಳಿಂದ ಚಾಪೆಯೆನ್ನು ತೆಗೆದುಕೊಂಡು ಹಾಸಿ ಕುಳಿತ. ಸುಮತಿ ಗಂಡನ ಪಕ್ಕ ಕುಳಿತವಳು ಅತ್ತಿಗೆಯ ಮನೆಯನ್ನು ಸೂಕ್ಷö್ಮವಾಗಿ ವೀಕ್ಷಿಸುತ್ತ ಅವಳನ್ನು ಅನುಕಂಪದಿoದ ದಿಟ್ಟಿಸಿದಳು. ಪ್ರೇಮಾಳಿಗೆ ಇನ್ನಷ್ಟು ಮುಜುಗರವಾಯಿತು. ಆದರೂ ಸಂಭಾಳಿಸಿಕೊoಡು ಮಾತಿಗಾರಂಭಿಸಿದಳು.
‘ಹೇಗಿದ್ದಿಯಾ ಅಶೋಕ…?’ ಎಂದು ಭಾವರಹಿತಳಾಗಿ ವಿಚಾರಿಸಿದಳು.
‘ರ‍್ವಾಗಿಲ್ಲಕ್ಕಾ ಚೆನ್ನಾಗಿದ್ದೇನೆ. ನಿನ್ನ ಅವಸ್ಥೆ ಏನಕ್ಕಾ ಇದು…?’
‘ಅರೇ, ನನಗೇನಾಗಿದೆ ಮಾರಾಯಾ ಚೆನ್ನಾಗಿದ್ದೇನಲ್ಲಾ…?’ ಎಂದು ಅವಳು ಪೆಚ್ಚು ನಗೆಯೊಂದಿಗೆ ಅನ್ನುತ್ತ ‘ಮನೆಯಲ್ಲೆಲ್ಲ ಹೇಗಿದ್ದಾರೆ ಮಾರಾಯಾ…?’ ಎಂದು ಮಾತು ತಿರುಗಿಸಿದಳು.
‘ಎಲ್ಲರೂ ಚೆನ್ನಾಗಿದ್ದಾರಕ್ಕಾ…!’
‘ಅಷ್ಟಾದರೆ ಸಾಕು ಬಿಡು. ಅಪ್ಪ ತೀರಿ ಕೊಂಡರೆoದು ತಿಳಿಯಿತು. ಅವರನ್ನು ಚೆನ್ನಾಗಿ ನೋಡಿಕೊಂಡೆಯಾ ಇಲ್ಲವಾ?’
‘ನಮ್ಮ ಕೈಯಲ್ಲಾದಷ್ಟು ನೋಡಿಕೊಂಡೆವಕ್ಕಾ. ಅವರು ಸಾಯುವಾಗ ನಿನ್ನನ್ನು ನೋಡಬೇಕೆಂದು ಬಹಳ ಹಂಬಲಿಸುತ್ತಿದ್ದರು!’
‘ಅಯ್ಯೋ ದೇವರೇ…! ಮತ್ತಾö್ಯಕೋ ನನಗೊಂದು ಮಾತೂ ತಿಳಿಸಲಿಲ್ಲ…?’
‘ಹೊತ್ತು ಮೂಡಿದ ಕೂಡಲೇ ನಿನ್ನನ್ನು ಕರೆದುಕೊಂಡು ಬರುತ್ತೇನೆಂದು ಅವರನ್ನು ಸಮಾಧಾನಿಸಿದ್ದೆ. ಆದರೆ ಅಷ್ಟೊತ್ತಿಗಾಗಲೇ ಕಣ್ಣುಮುಚ್ಚಿದ್ದರು! ಹಾಗಾಗಿ ಇಷ್ಟು ವರ್ಷಗಳ ಕಾಲ ದೂರವಿದ್ದ ನಿನ್ನನ್ನು ಮರಳಿ ಆ ಗೋಳು ನೋಡಲೆಂದೇ ಕರೆದು ನೋಯಿಸುವುದು ಬೇಡ ಅಂತನಿಸಿತು!’ ಎಂದವನು ತನ್ನ ತಪ್ಪಿನರಿವಾಗಿ ತಲೆತಗ್ಗಿಸಿದ.
‘ಓಹೋ, ಹಾಗಾ…? ಅದೇ ಕಾರಣಕ್ಕಾ ಅಥವಾ ತನ್ನ ಪಾಲಿಗೆ ಅಕ್ಕ ಯಾವತ್ತೋ ಸತ್ತು ಹೋಗಿದ್ದಾಳೆ ಎಂಬ ಸಿಟ್ಟಿನಿಂದಲೇ ಕರೆಯಲಿಲ್ಲವಾ…?’ ಎಂದು ಪ್ರೇಮ ಕುಳಿತ ಭಂಗಿಯನ್ನೊಮ್ಮೆ ಸೂಕ್ಷö್ಮವಾಗಿ ಬದಲಿಸುತ್ತ ಪ್ರಶ್ನಿಸಿದಳು.
‘ಹಾಗೇನಿಲ್ಲಕ್ಕಾ. ಇಷ್ಟರವರೆಗೆ ನಡೆಯಬಾರದ್ದೆಲ್ಲ ನಡೆದು ಹೋಯಿತು. ಆದರೂ ಅದೆಲ್ಲ ಇನ್ನು ಮುಂದೆ ಮುಗಿದ ಕಥೆ ಅಂತನೂ ಅರ್ಥವಾಗಿದೆ. ನನ್ನ ಮೊದಲಿನ ಸಿಟ್ಟು ದ್ವೇಷವನ್ನೆಲ್ಲ ಬಿಟ್ಟ ಮೇಲೆಯೇ ಇಲ್ಲಿಗೆ ಬಂದಿರುವುದಕ್ಕಾ. ಹಾಗಾಗಿ ನೀನು ಇನ್ನೇನೂ ಮಾತಾಡಬೇಡ. ಎಲ್ಲವನ್ನು ಮರೆತು ನಮ್ಮೊಂದಿಗೆ ಮನೆಗೆ ಬಂದುಬಿಡು. ಇಷ್ಟು ಕಾಲ ಈ ನರಕದಲ್ಲಿ ಬಿದ್ದು ಒದ್ದಾಡಿದ್ದು ಸಾಕು!’ ಎಂದು ತಮ್ಮ ಅಕ್ಕನ ಒಣಗಿ ಸೊರಗಿದ ಮುಖವನ್ನೇ ದಿಟ್ಟಿಸುತ್ತ ಕನಿಕರದಿಂದ ಹೇಳಿದ.
‘ಅಯ್ಯೋ ದೇವರೇ! ನಾನು ಬರುವುದಾ…,ಎಲ್ಲಿಗೆ ಮಾರಾಯಾ…? ಎಲ್ಲ ಮುಗಿದ ಮೇಲೆ ಯಾವ ಮುಖವಿಟ್ಟುಕೊಂಡು ನಿನ್ನ ಮನೆಗೆ ಬರಲಿ ಹೇಳು? ಯಾವಾಗ ನಿಮ್ಮ ಸಹಾಯ ಮತ್ತು ಆಸರೆ ನನಗೆ ಬೇಕಿತ್ತಾ ಆವಾಗ ಎಲ್ಲರೂ ತುಳಿದು ದೂರ ತಳ್ಳಿದಿರಿ. ಇನ್ನೀಗ ಸ್ವಲ್ಪ ದಿನದಲ್ಲಿ ಹೋಗುವವಳು ನಾನು! ಇನ್ನು ಮುಂದೆ ಬಂದರೆಷ್ಟು ಬಿಟ್ಟರೆಷ್ಟು ಹೇಳು? ನನ್ನ ಬಗ್ಗೆ ನೀನೇನೂ ಚಿಂತಿಸಬೇಡ. ಹೋಗು ಅಮ್ಮನನ್ನು ಚೆನ್ನಾಗಿ ನೋಡಿಕೋ!’ ಎಂದು ಶೂನ್ಯದತ್ತ ದಿಟ್ಟಿಸುತ್ತ ಅಂದ ಪ್ರೇಮಾಳಿಗೆ ಅಮ್ಮನ ನೆನಪು ಒತ್ತರಿಸಿತು.
ಅಕ್ಕನ ಜಿಗುಪ್ಸೆಯ ಮಾತು ಕೇಳಿದ ತಮ್ಮನಿಗೆ ನಿರಾಶೆಯಾಯಿತು. ಅಷ್ಟರಲ್ಲಿ, ‘ಹೌದೂ… ಅಮ್ಮ ಹೇಗಿದ್ದಾಳೆ?’ ಎಂದು ಪ್ರೇಮ ಆಸೆಯಿಂದ ಕೇಳಿದಳು. ಆಗ ಸ್ವಲ್ಪ ಗೆಲುವಾದ ಅಶೋಕ, ‘ಈಗೀಗ ಯಾವಾಗಲೂ ಅವಳಿಗೆ ಹುಷಾರಿರುವುದಿಲ್ಲ ಮಾರಾಯ್ತೀ. ತುಂಬಾ ಸೊರಗಿದ್ದಾಳೆ. ನಿನ್ನದೇ ಚಿಂತೆ! ಹೋಗಿ ಅವಳನ್ನು ಕರೆದುಕೊಂಡು ಬಾರನಾ… ಅಂತ ಒಂದೇ ಸಮನೆ ಹಲುಬುತ್ತಿರುತ್ತಾಳೆ!’ ಎಂದು ಒತ್ತಿ ಹೇಳಿದ.
‘ಹೌದು ಅತ್ತಿಗೆ. ಅತ್ತೆ ಯಾವಾಗಲೂ ನಿಮ್ಮನ್ನು ನೆನಪಿಸಿಕೊಂಡು ಅಳುತ್ತಾರೆ. ಅದು ನಿಮ್ಮದೇ ಮನೆಯಲ್ಲವಾ…? ನೀವು ಬರುವುದರಿಂದ ಅತ್ತೆಯ ಕೊನೆಗಾಲದಲ್ಲಾದರೂ ಅವರಿಗೆ ಒಂದಿಷ್ಟು ನೆಮ್ಮದಿ ಸಿಕ್ಕೀತು. ಅದಕ್ಕಾದರೂ ನೀವು ಬರಲೇಬೇಕು ಅತ್ತಿಗೆ!’ ಎಂದು ಸುಮತಿಯೂ ಪ್ರೀತಿಯಿಂದ ವಿನಂತಿಸಿದಳು. ನಾದಿನಿಯ ಮಾತುಗಳಿಂದ ಪ್ರೇಮಾಳ ಮುಖದಲ್ಲಿ ನಸುನಗೆ ಮೂಡಿತು. ನನ್ನ ಕುಟುಂಬಕ್ಕೆ ಒಳ್ಳೆಯ ಹುಡುಗಿಯೇ ಬಂದಿದ್ದಾಳೆ! ಎಂದುಕೊoಡು ಸಂತಸಪಟ್ಟಳು.
‘ಅಕ್ಕಾ ನೀನಿನ್ನೂ ನನ್ನನ್ನು ಕ್ಷಮಿಸಲಿಲ್ಲವಾ…?’ ಎಂದ ಅಶೋಕ ಗದ್ಗದಿತನಾದ. ಪ್ರೇಮ ಭಾವರಹಿತಳಾಗಿ ಕುಳಿತಿದ್ದವಳು ಎದ್ದು ಹೋಗಿ ತಮ್ಮನ ತಲೆಯನ್ನು ನೇವರಿಸುತ್ತ, ‘ನಿಮ್ಮ ಯಾರ ಮೇಲೂ ನನ್ನಲ್ಲೀಗ ಯಾವ ಬೇಸರವೂ ಉಳಿದಿಲ್ಲ ಮಾರಾಯ. ನನ್ನ ಹಣೆಬರಹ ಕೆಟ್ಟದ್ದಕ್ಕೆ ನೀವೆಲ್ಲ ಹೇಗೆ ಹೊಣೆಯಾಗುತ್ತೀರಿ ಹೇಳಿ? ಸುಮ್ಮನೆ ಏನೇನೋ ಯೋಚಿಸಿ ಕೊರಗಬೇಡ. ಆಗಿದ್ದಾಗಿ ಹೋಯಿತು. ಸಾಧ್ಯವಾದರೆ ಶ್ವೇತಾಳ ಬದುಕಿಗೊಂದು ದಾರಿ ತೋರಿಸು. ನಾನು ಯಾವತ್ತಾದರೊಂದು ದಿನ ಮನಸ್ಸು ಬದಲಾದರೆ ಬರುತ್ತೇನೆ. ಬೇಸರಿಬೇಡಿ!’ ಎಂದು ಹೇಳಿ ಹೋಗಿ ಗೋಡೆಗೊರಗಿ ಕುಳಿತವಳು ಮತ್ತೆ ಮಾತಾಡಲಿಲ್ಲ. ಅಶೋಕ ದಂಪತಿ ಸುಮಾರು ಹೊತ್ತು ಕುಳಿತರು. ಕೊನೆಗೆ ಅಶೋಕನೇ ಅವಳನ್ನು ಮಾತಿಗೆಳೆಯಲು ಪ್ರಯತ್ನಿಸಿ, ‘ಅಕ್ಕಾ, ಅಮ್ಮ ಇನ್ನು ಹೆಚ್ಚು ಕಾಲ ಬದುಕುವುದಿಲ್ಲಾಂತ ಕಾಣುತ್ತದೆ. ಅವಳಿಗಾಗಿಯಾದರೂ ಒಂದಷ್ಟು ದಿನ ಬಂದಿರು!’ ಎಂದು ಅಂಗಲಾಚಿದ. ಅಷ್ಟು ಕೇಳಿದ ಪ್ರೇಮಾಳ ಮನಸ್ಸು ಮೃದುವಾಯಿತು. ‘ಆಯ್ತು ಮಾರಾಯ ಬರುತ್ತೇನೆ. ಆದರೆ ಒಂದು ಮಾತು, ನನಗಿನ್ನು ಜೀವನದಲ್ಲಿ ಯಾವ ಬದಲಾವಣೆಯೂ ಬೇಕಿಲ್ಲ. ಈಗ ನಾನು ಹೇಗಿದ್ದೇನಾ ಹಾಗೆಯೇ ಇರಲು ಬಿಡುತ್ತೀರಾದರೆ ಬರುತ್ತೇನೆ. ಒಪ್ಪುತ್ತಿಯಾ…?’ ಎಂದಳು ಗಂಭೀರವಾಗಿ. ಅಶೋಕನಿಗೂ ಅಂಥ ನೀರೀಕ್ಷೆಯಿರಲಿಲ್ಲ. ‘ಆಯ್ತಕ್ಕಾ ನಿನ್ನ ಮನೆಯಲ್ಲವಾ, ನಿನಗೆ ಹೇಗೆ ಬೇಕೋ ಹಾಗಿರು!’ ಎಂದು ಉತ್ಸಾಹದಿಂದ ಅಂದ. ‘ಸರಿ ಹಾಗಾದರೆ ಇನ್ನು ಸ್ವಲ್ಪ ದಿನ ಬಿಟ್ಟು ಬರುತ್ತೇನೆ!’ ಎಂದಳು ಅವಳೂ ಸಮಾಧಾನದಿಂದ.
‘ಸರಿಯಕ್ಕಾ ನೀನು ಹೇಳುವ ದಿನದಂದು ನಾನೂ ಬಂದು ಶೆಟ್ಟರ ಹತ್ತಿರ ಮಾತಾಡಿ ನಿನ್ನನ್ನೂ ಶ್ವೇತಾಳನ್ನೂ ಒಟ್ಟಿಗೆ ಕರೆದುಕೊಂಡು ಹೋಗುತ್ತೇನೆ ತಯಾರಾಗಿರು!’ ಎಂದು ಅಶೋಕ ಹೇಳಿದಾಗ ಪ್ರೇಮ ತಲೆದೂಗಿದಳು. ಆದ್ದರಿಂದ ಗಂಡ ಹೆಂಡತಿ ಸಂತೋಷದಿoದ ಹಿಂದಿರುಗಿದವರು ಹೆಲೆನಾಬಾಯಿಯ ಮನೆಗೆ ಹೋಗಿ ಅವರಿಗೂ ವಿಷಯ ತಿಳಿಸಿದರು. ಹೆಲೆನಾಬಾಯಿಗೆ ಅಶೋಕನ ಬದಲಾವಣೆ ಕಂಡು ಬಹಳ ಸಂತೋಷವಾಯಿತು. ಪಾಪದ ಹೆಣ್ಣು ಮಗಳು ಪ್ರೇಮ ಮರಳಿ ಮನೆ ಸೇರುತ್ತಿದ್ದಾಳೆ ಎಂಬ ಆನಂದದಿoದ ಅವರ ಕಣ್ಣುಗಳು ಮಂಜಾಗಿದ್ದರೊoದಿಗೆ ಅವರನ್ನು ಸದಾ ಕಾಡುತ್ತಿದ್ದ ಪಾಪಪ್ರಜ್ಞೆಯೂ ತುಸು ಉಪಶಮನವಾದಂತೆನಿಸಿತು. ಆದರೆ ಶ್ವೇತಾಳನ್ನೂ ಕರೆದೊಯ್ಯುತ್ತೇವೆ! ಎಂದು ಅಶೋಕನೆಂದಾಗ ಅವರ ಹೃದಯ ಹಿಂಡಿತು. ಆದರೂ ತಮ್ಮ ಸ್ವಾರ್ಥವನ್ನು ಬದಿಗೊತ್ತಿ ಖುಷಿಯಿಂದ ಒಪ್ಪಿದರು.
(ಮುಂದುವರೆಯುವುದು)

Related posts

ವಿವಶ..

Mumbai News Desk

ವಿವಶ..

Mumbai News Desk

ವಿವಶ..

Mumbai News Desk

ವಿವಶ…

Chandrahas

ವಿವಶ…..

Mumbai News Desk

ವಿವಶ…..

Chandrahas