April 1, 2025
ಧಾರಾವಾಹಿ

ವಿವಶ…

ಧಾರವಾಹಿ 51
ಪ್ರತಿನಿತ್ಯ ನಸುಕಿನಲ್ಲಿಯೇ ಏಳುವ ರೂಢಿಯಿದ್ದ ಸರೋಜ ಇಂದೇಕೋ ಸರಿಯಾಗಿ ಬೆಳಕು ಹರಿದ ಮೇಲೆಯೇ ಎಚ್ಚರವಾದಳು. ಅವಳನ್ನು ನವಿರಾದ ಮೈಕೈ ನೋವು ಕಾಡುತ್ತಿತ್ತು. ಎದ್ದು ಮುಖ ತೊಳೆದು ಬಂದು ಮತ್ತೆ ಮಲಗಿದಳು. ಪ್ರಮೀಳ ಬೇಗನೆದ್ದು ಪಾತ್ರೆಪರಡಿ ತೊಳೆದಿಟ್ಟು ಅಂಗಳ ಗುಡಿಸಿ ಚಹಾ ಮಾಡಿ ಕುಡಿದವಳು, ಅಪ್ಪ ಅಮ್ಮ ಏಳುವ ಹೊತ್ತಿಗೆ ಬಿಸಿ ಆರದಿರಲೆಂದು ಅದನ್ನು ಒಲೆಯ ಮೇಲಿಟ್ಟಳು. ಆವತ್ತು ಕಾಲೇಜಿಗೆ ರಜೆ ಇದ್ದುದರಿಂದ ಬೀಡಿ ಎಲೆ ಕತ್ತರಿಸುತ್ತ ಕುಳಿತವಳಿಗೆ ಅಮ್ಮ ಮತ್ತೆ ಮಲಗಿದ್ದನ್ನು ಕಂಡು ಆತಂಕವಾಯಿತು.
‘ಏನಾಯ್ತಮ್ಮಾ ಹುಷಾರಿಲ್ಲವಾ…?’ ಎಂದಳು.
‘ಹ್ಞೂಂ, ಮಾರಾಯ್ತಿ. ಯಾಕೋ ಮೈ ಕೈಯೆಲ್ಲ ನೋಯುತ್ತಿದೆ. ಸ್ವಲ್ಪ ಹೊತ್ತು ಒರಗಿಕೊಳ್ಳುತ್ತೇನೆ!’ ಎಂದು ಸರೋಜ ಉದಾಸೀನದಿಂದ ಅಂದಳು.
‘ಆಯ್ತಮ್ಮಾ…!’ ಎಂದಳು ಮಗಳು ಅಕ್ಕರೆಯಿಂದ. ಆದರೆ ಸರೋಜಾಳಿಗೆ ನಿದ್ದೆ ಬರಲಿಲ್ಲ. ಬದಲಿಗೆ ಹಿಂದಿನ ದಿನ ತಾಮಸ ನೀಡಿದ ಅಪೂರ್ವ ಸುಖದ ನೆನಪು ಅವಳನ್ನು ರೋಮಾಂಚನಗೊಳಿಸುತ್ತಿತ್ತು. ಆದ್ದರಿಂದ ಆಮೇಲೆ ಅವಳ ಮನಸ್ಸು ಸದಾ ಅವನತ್ತ ಸೆಳೆಯತೊಡಗಿತು. ಅತ್ತ ತಾರುಣ್ಯದ ಮದದಿಂದ ಹಾರಾಡುತ್ತಿದ್ದ ತಾಮಸನೂ ನಡುವಯಸ್ಸಿನ ಸರೋಜಾಳಲ್ಲಿ ಸಾಕ್ಷಾತ್ ರತಿದೇವಿಯನ್ನೇ ಕಂಡವನoತೆ ಅವಳನ್ನು ಕಂಡಕoಡಲ್ಲಿ ಭೋಗಿಸಲು ಹವಣಿಸುತ್ತಿದ್ದ. ಹೀಗೆ ಲಕ್ಷ್ಮಣನ ಕುಟುಂಬ ಯಾತ್ರೆಯು ತನ್ನ ಭವಿಷ್ಯದ ಬಗ್ಗೆ ಕಿಂಚಿತ್ತೂ ಚಿಂತೆ ಭಯವಿಲ್ಲದೆ, ಯಾವೊಂದೂ ಗೊತ್ತುಗುರಿಯಿಲ್ಲದೆ ಸ್ವೇಚ್ಛೆಯಾಗಿ ಸಾಗುತ್ತಿತ್ತು. ಆಗುವುದೇನಿದ್ದರೂ ಆಗಿಯೇ ತೀರುತ್ತದೆ. ಬಂದದ್ದನ್ನು ಸುಮ್ಮನೆ ಅನುಭವಿಸುತ್ತ ಹೋದರಾಯ್ತು. ಮತ್ತೆ ದೇವರಿದ್ದಾನೆ! ಎಂಬoಥ ಧೋರಣೆಯಿಂದ ಅವರ ಬದುಕು ಬಹಳ ಬೇಗನೇ ಚಂಪಣ ಚೂರಾಗುವ ಸೂಚನೆಗಳು ಗೋಚರಿಸಿದವು. ಅಪ್ಪ, ಅಮ್ಮನ ಹಾಳು ಬಾಳ್ವೆಯಲ್ಲಿ ಬಲಿಪಶುವಿನಂತೆ ಪಡಬಾರದ ಪಾಡುಪಡುತ್ತ ಬೆಳೆಯುತ್ತಿದ್ದ ಪ್ರಮೀಳ ಕಷ್ಟಪಟ್ಟು ಕಾಲೇಜು ವಿದ್ಯಾಭ್ಯಾಸ ಮುಗಿಸಿದಳು. ಲಕ್ಷ್ಮಣ ಕುಡಿಕುಡಿದೇ ಹೊಟ್ಟೆಯುಬ್ಬರಿಸಿಕೊಂಡು ಒಮ್ಮೆ ರಕ್ತ ವಾಂತಿಯನ್ನೂ ಮಾಡಿಕೊಂಡ. ಅಮ್ಮ ಮಗಳು ಕಂಗಾಲಾಗಿ ಲಿಲ್ಲಿಬಾಯಿಯ ಸಲಹೆಯಂತೆ ಅವನನ್ನು ಶಿವಕಂಡಿಕೆಯ ಸರಕಾರಿ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ವೈದ್ಯರು ಅವನನ್ನು ಪರೀಕ್ಷಿಸಿ, ‘ನೋಡು ಮಾರಾಯಾ ನಿನ್ನ ಕರುಳು ತೂತು ಬಿದ್ದು ಯಕೃತ್ತು ಹಾಳಾಗಿದೆ. ಇನ್ನು ಮುಂದೆ ಕುಡಿದರೆ ಸತ್ತು ಹೋಗುತ್ತಿ!’ ಎಂದೆಚ್ಚರಿಸಿ ಒಂದಷ್ಟು ಔಷಧಿ ಕೊಟ್ಟು ಕಳುಹಿಸಿದರು. ಆವತ್ತಿನಿಂದ ಹೆಂಡತಿ, ಮಗಳ ಭಯ ಮತ್ತು ಒತ್ತಾಯಕ್ಕೆ ಮಣಿದಂತೆ ಕೆಲವು ದಿನಗಳ ಕಾಲ ಕುಡಿತವನ್ನು ಬಿಟ್ಟುಬಿಟ್ಟ. ಆದರೆ ಮತ್ತೆ ಯಾವ ಮಾಯಕದಿಂದಲೋ ಅವರ ಕಣ್ಣು ತಪ್ಪಿಸಿ ಹೋಗಿ ಚೆನ್ನಾಗಿ ಕುಡಿದುಕೊಂಡು ಬಂದ. ಅದರಿಂದ ಸರೋಜಾಳಿಗೆ ಗಂಡನ ಮೇಲೆ ತೀವ್ರ ಜಿಗುಪ್ಸೆ ಹುಟ್ಟಿತು. ಅಂದಿನಿoದ ಅಮ್ಮ ಮಗಳಿಬ್ಬರೂ ಅವನ ಮೇಲೆ ಉದಾಸೀನ ತಳೆದುಬಿಟ್ಟರು.
ಅಪ್ಪ, ಅಮ್ಮ ಮತ್ತು ಸಹೋದರಿಯ ಭವಿಷ್ಯದ ಕುರಿತು ವಿಶೇಷವಾಗಿ ಚಿಂತಿಸಿ, ಆಶ್ವಾಸನೆಯನ್ನೂ ಕೊಟ್ಟು ಮುಂಬೈಗೆ ಹಾರಿ ಹೋಗಿದ್ದ ಶಾರದಾ ಆಮೇಲೆ ಹಿಂದಿರುಗಿ ಬರಲೇ ಇಲ್ಲ. ಸರೋಜ ಮಾತ್ರ ಆಗಾಗ ಲಿಲ್ಲಿಬಾಯಿಯವರ ಮನೆಗೆ ಹೋಗುತ್ತ, ‘ಮಗಳನ್ನು ನೋಡಬೇಕು ಬಾಯಮ್ಮಾ…! ಒಮ್ಮೆ ಬರಲು ಹೇಳಿ!’ ಎಂದು ಅಂಗಲಾಚಿ ಬರುತ್ತಿದ್ದಳು. ಹಾಗಾಗಿ ಅವರು ಕೂಡಾ ಸಾಕಷ್ಟು ಬಾರಿ ಮಗಳಿಗೆ ಪತ್ರ ಬರೆದರು. ಆದ್ದರಿಂದ ಮಾರ್ಗರೆಟಾಳ ಗಂಡ ಆವತ್ತು ಮತ್ತೊಮ್ಮೆ ನಾಚಿಕೆ ಬಿಟ್ಟು ಕಾಮಟಿಪುರಕ್ಕೆ ಹೋಗಿ ಶಾರದಾಳ ಬಗ್ಗೆ ವಿಚಾರಿಸಿದ. ಆದರೆ ಅವಳು ಯಾವುದೋ ಶ್ರೀಮಂತ ಗಲ್ಲಿಗೆ ವರ್ಗವಾಗಿದ್ದಾಳೆ ಎಂದು ಅಲ್ಲಿನ ಪಿಂಪ್ ಒಬ್ಬ ತಿಳಿಸಿದಾಗ ಅವನಿಗೂ ರೋಸಿತು. ಹಾಗಾಗಿ ಅವನು, ‘ನೋಡಿ ಅತ್ತೇ, ಮರ್ಯಾದಸ್ಥರು ಯಾರೂ ಹೋಗುವ ಜಾಗ ಅಲ್ಲ ಅದು. ಆದರೂ ನಾವು ಅವಳನ್ನು ಕರೆದುಕೊಂಡು ಬಂದ ತಪ್ಪಿಗೆ ಸಾಕಷ್ಟು ಅನುಭವಿಸಿಯಾಯಿತು. ಇನ್ನು ಅವಳ ಬಗ್ಗೆ ನೀವೂ ತಲೆಕೆಡಿಸಿಕೊಳ್ಳಬಾರದು ಮತ್ತು ನಮ್ಮ ನೆಮ್ಮದಿಯನ್ನೂ ಹಾಳು ಮಾಡಬಾರದು. ಇದೇ ಮಾತನ್ನು ಅವಳ ಮನೆಯವರಿಗೂ ತಿಳಿಸಿಬಿಡಿ!’ ಎಂದು ಖಾರವಾಗಿ ಪತ್ರ ಬರೆದು ಕೈತೊಳೆದುಕೊಂಡ. ಅದರಿಂದ ಲಿಲ್ಲಿಬಾಯಿಗೂ ತೀರ ದುಃಖವಾಯಿತು. ಜೊತೆಗೆ ಅಳಿಯನ ಮಾತು ಸರಿ ಎಂದೂ ಅನ್ನಿಸಿತು. ಹಾಗಾಗಿ ಒಮ್ಮೆ ಗಟ್ಟಿ ಮನಸ್ಸು ಮಾಡಿ ಸರೋಜಾಳಿಗೂ ಹಾಗೇ ಹೇಳಿ ಸುಮ್ಮನಾಗಿಬಿಟ್ಟರು.
ಇಷ್ಟೆಲ್ಲ ನಡೆದ ಮರುವರ್ಷ ಲಕ್ಷ್ಮಣ ವಿಪರೀತ ಕಾಯಿಲೆಗೆ ಬಿದ್ದ. ಜೀವನಪೂರ್ತಿ ಅವನೊಡನೆ ಏಗುತ್ತ ಸೋತು ಸುಣ್ಣವಾಗಿದ್ದ ಸರೋಜಾಳಲ್ಲಿ ಮತ್ತೆ ಮತ್ತೆ ಅವನನ್ನು ಆರೈಕೆ ಮಾಡುವ ಉತ್ಸಾಹವಾಗಲಿ, ಶಕ್ತಿಯಾಗಲಿ ಎರಡೂ ಇರಲಿಲ್ಲ. ಆದ್ದರಿಂದ ಅವಳು ಅವನನ್ನು ಆಸ್ಪತ್ರೆಗೆ ದಾಖಲಿಸಲಿಲ್ಲ. ಬದಲಿಗೆ ದಿನಾಲೂ ಒಂದಿಷ್ಟು ಕಂಟ್ರಿ ಸಾರಾಯಿ ಮತ್ತು ಕಟ್ಟು ಕಟ್ಟು ಬೀಡಿಯನ್ನು ಕೊಡುತ್ತ ಅವನು ಕೊನೆಯುಸಿರು ಎಳೆಯುವವರೆಗೆ ಸೇವೆ ಮಾಡಿದಳು. ಹಾಗಾಗಿ ಲಕ್ಷ್ಮಣ ಕೆಲವು ಕಾಲ ಚಾಪೆ ಹಿಡಿದು ನರಳಿದವನು ಆವತ್ತೊಂದು ಬೆಳಿಗ್ಗೆ ಸುಮಾರು ಹತ್ತು ಗಂಟೆಯ ಹೊತ್ತಿಗೆ ಸರೋಜಾಳನ್ನು ಕ್ಷೀಣವಾಗಿ ಕರೆದ. ಅವಳು ಎಂದಿನoತೆ ಹತ್ತಿರ ಬಂದು, ‘ಏನು…?’ ಎಂದು ಸಿಡುಕಿದಳು. ಲಕ್ಷ್ಮಣ ಬುರುಡೆಯಂತಾಗಿದ್ದ ತನ್ನ ಒಣಮುಖಕ್ಕೆ ತೆಳು ನಗು ತಂದುಕೊoಡು ಬಲ ಹಸ್ತವನ್ನು ಪ್ರಯಾಸದಿಂದೆತ್ತಿ ಅವಳಿಗೇನೋ ಹೇಳಲು ಬಾಯ್ತೆರೆದ. ಅವಳಿಗೆ ರೇಗಿತು. ‘ನಿಮ್ಮದೊಂದು ರಾಮಾಯಣ ದಿನಾಲು ಇದ್ದದ್ದೇ! ಸುಮ್ಮನೆ ಬಿದ್ದುಕೊಳ್ಳಿ. ನನಗೆ ಕೆಲಸವಿದೆ!’ ಎಂದು ಬೈದು ಹೊರಟು ಹೋದಳು. ಅವಳು ಮತ್ತೆ ಹಿಂದಿರುಗುವ ಹೊತ್ತಿಗೆ ಲಕ್ಷ್ಮಣನ ಎತ್ತಿದ ಕೈ ಮತ್ತು ಮುಖದ ನಗೆ ಹಾಗೆಯೇ ಇತ್ತು. ಆದರೆ ಅವನ ಪ್ರಾಣಪಕ್ಷಿ ಹಾರಿ ಹೋಗಿತ್ತು!


ಪ್ರಮೀಳ ದಟ್ಟ ದಾರಿದ್ರö್ಯದಲ್ಲಿ ಹುಟ್ಟಿ ಬೆಳೆದು ಹೆತ್ತವರಿದ್ದೂ ನಿರ್ಮಲ ಪ್ರೀತಿ, ಮಮತೆಯಿಂದ ವಂಚಿತಳಾಗಿ ಅನಾಥಳಂತೆ ಬದುಕುತ್ತಿದ್ದರೂ ಮೈಕೈ ತುಂಬಿಕೊoಡು ಕಡೆದ ವಿಗ್ರಹದಂಥ ಚೆಲುವೆಯಾಗಿದ್ದಳು. ನಿತ್ಯ ಕುಡಿದು ಬಂದು ಹೊಡೆದು ಬಡಿದು ಹಿಂಸಿಸುತ್ತಿದ್ದ ಅಪ್ಪ ಮತ್ತು ಜೀವಚ್ಛವದಂತೆ ಬಾಳುತ್ತಿದ್ದ ಅಮ್ಮನಿಂದಾಗಿ ಅವಳಲ್ಲಿ ಅದು ಹೇಗೋ ವಯಸ್ಸಿಗೆ ಮೀರಿದ ಪ್ರಬುದ್ಧತೆ ಹಾಗು ಅತೀವ ಸಹನಾಶಕ್ತಿಯು ಮೈಗೂಡಿಕೊಂಡಿತ್ತು. ಅದರಿಂದ ಅವಳು ತಮ್ಮ ಕುಟುಂಬದ ಸ್ಥಿತಿಯನ್ನೂ, ನೆರೆಹೊರೆಯವರ ಸುಸಂಸ್ಕೃತ ಜೀವನವನ್ನೂ ಸಮೀಪದಿಂದ ಕಾಣುತ್ತ ತುಲನೆ ಮಾಡುತ್ತ ಬೆಳೆದವಳಿಗೆ ತನ್ನ ಹೆತ್ತವರು ತಮ್ಮ ಕೈಯಾರೆ ಜೀವನವನ್ನು ಹಾಳು ಮಾಡಿಕೊಂಡರು! ಎಂಬುದು ಸ್ಪಷ್ಟವಾಗಿತ್ತು. ಹಾಗಾಗಿ ಅಂಥ ಬಾಳ್ವೆಯಿಂದ ರೋಸಿ ಹೋಗಿದ್ದ ಅವಳು ಹೊಸ ಉತ್ಸಾಹಪೂರ್ಣವಾದ ಜೀವನನ್ನು ಹಂಬಲಿಸುತ್ತಿದ್ದಳು. ಒಂದಷ್ಟು ಹುಡುಗಿಯರಂತೆ ನಾನೂ ಚೆಲುವೆಯೇ. ನನ್ನಿಷ್ಟದ ಸಂಗಾತಿಯನ್ನು ಆಯ್ದುಕೊಂಡು ಒಂದೊಳ್ಳೆಯ ಬದುಕನ್ನು ಕಟ್ಟಿಕೊಳ್ಳಲೂ ಸಮರ್ಥಳೇ! ಎಂದು ಅವಳು ಬಲ್ಲಳು. ಇದೇ ವಿಷಯವಾಗಿ ಅವಳ ಮನಸ್ಸು ಕೆಲವೊಮ್ಮೆ ಚಂಚಲವಾಗುತ್ತಿತ್ತು. ಆದರೆ ಅಪ್ಪ ಅಮ್ಮನ ಪ್ರೇಮ ಸಂಬoಧದ ಸುಖ, ದುಃಖಗಳು ಕಣ್ಣ ಮುಂದೆ ಸುಳಿದಾಕ್ಷಣ ತೀರಾ ಅಸಹ್ಯವೆನಿಸಿಬಿಡುತ್ತಿತ್ತು. ಇಲ್ಲ! ನಾನು ಅಂಥ ಯಾವ ಭ್ರಮೆಗೂ ಬಿದ್ದು ಜೀವನವನ್ನು ಹಾಳುಮಾಡಿಕೊಳ್ಳಬಾರದು. ವಿದ್ಯಾಭ್ಯಾಸ ಮುಗಿದ ಕೂಡಲೇ ಸ್ವತಂತ್ರವಾಗಿ ಬಾಳಬೇಕು ಎಂದೆಲ್ಲ ಯೋಚಿಸುತ್ತಿದ್ದಳು. ಶೆಟ್ಟರ ತೋಟದಲ್ಲಿ ಅಪ್ಪ ಅಮ್ಮನೊಂದಿಗೆ ದುಡಿಯುತ್ತಿದ್ದಾಗೆಲ್ಲ, ‘ಬೇಸಾಯದ ಕೆಲಸ ನಮ್ಮ ಮಗಳ ರಕ್ತದಲ್ಲೇ ಬಂದುಬಿಟ್ಟಿದೆ ಮಾರಾಯ್ರೇ. ಅವಳು ಕೂಡಾ ಅಂಥ ಕುಟುಂಬದಿoದಲೇ ಬಂದವಳಲ್ಲವಾ…!’ ಎಂದು ಅಪ್ಪ, ಅಮ್ಮ ಇತರ ಆಳುಗಳೊಡನೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾಗ ಎಲ್ಲರಂತೆ ನಾನೂ ದುಡಿಯಬಲ್ಲೆ, ಕೃಷಿ ಮಾಡಬಲ್ಲೆ ಮಾತ್ರವಲ್ಲ ಶೆಟ್ಟರಂಥ ದೊಡ್ಡ ತೋಟವನ್ನೂ ನಿಭಾಯಿಸಬಲ್ಲೆ! ಎಂಬoಥ ಆತ್ಮಸ್ಥೆöÊರ್ಯವು ಅವಳಲ್ಲಿ ತುಂಬಿ ತುಳುಕುತ್ತಿತ್ತು. ಹಾಗಾಗಿಯೇ ಇರಬೇಕು, ತನ್ನ ಅಜ್ಜ ಅಜ್ಜಿಯರನ್ನೂ ಮತ್ತಿತರ ಬಂಧುಬಳಗವನ್ನೂ ನೋಡಬೇಕು. ಅವರೊಂದಿಗೇ ಬಾಳಬೇಕು ಎಂಬ ಆಕಾಂಕ್ಷೆಯು ಅವಳನ್ನು ಪ್ರಬಲವಾಗಿ ಕಾಡಲಾರಂಭಿಸಿತ್ತು. ನನಗೂ ಬಹಳಷ್ಟು ಮಂದಿ ಸಂಬoಧಿಕರಿದ್ದಾರೆ. ಆದರೆ ನನ್ನ ದುರಾದೃಷ್ಟಕ್ಕೆ ಅಪ್ಪ ಅಮ್ಮ ಮತ್ತು ಅಕ್ಕನನ್ನು ಬಿಟ್ಟು ಉಳಿದ ಬಂಧುಗಳನ್ನು ನಾನೀವರೆಗೆ ನೋಡೇ ಇಲ್ಲವಲ್ಲ? ಎಂದುಕೊoಡು ಕೊರಗುತ್ತಿದ್ದಳು.
ಕೆಲವೊಮ್ಮೆ ಸರೋಜ ಮಗಳೊಂದಿಗೆ ಕುಳಿತು ಮಾತಾಡುತ್ತ, ‘ನಾವೊಂದು ದೊಡ್ಡ ಕೂಡು ಕುಟುಂಬದಿoದ ಬಂದವರು ಮಗಾ!’ ಎಂದು ಹೇಳುವಾಗ ಪ್ರಮೀಳಾಳಿಗೆ ರೋಮಾಂಚನವಾಗುತ್ತಿತ್ತು. ಅವಳು ಅಪ್ಪ ಅಮ್ಮನೊಡನೆ ಒತ್ತಾಯದಿಂದ ಅಂಥ ವಿಷಯಗಳನ್ನು ಕೆದಕುತ್ತಿದ್ದಾಗ ಅವರು ಹೇಳುತ್ತಿದ್ದ ಕಥೆಗಳನ್ನು ಕೇಳುತ್ತ, ‘ಒಮ್ಮೆ ನಾವೆಲ್ಲರೂ ಅಜ್ಜ, ಅಜ್ಜಿಯರನ್ನು ನೋಡಿಕೊಂಡು ಬರೋಣವಾ ಅಮ್ಮಾ…?’ ಎಂದು ಗೋಗರೆಯುತ್ತಿದ್ದಳು. ಅದಕ್ಕೆ ಅವರು ಒಪ್ಪದಿದ್ದಾಗ ಕಣ್ಣೀರಿಟ್ಟು ಸುಮ್ಮನಾಗುತ್ತಿದ್ದಳು. ಅಂಥ ಸಂದರ್ಭದಲ್ಲಿ ಲಕ್ಷ್ಮಣನು, ‘ನಾನಿನ್ನು ನನ್ನೂರು ಮತ್ತು ನಮ್ಮವರನ್ನೆಲ್ಲ ನೋಡುವುದು ಸತ್ತು ಪ್ರೇತವಾದ ಮೇಲೆಯೇ ಮಗಾ. ಜೀವವಿರುವಾಗ ಅವರಿಗೆಲ್ಲ ಮುಖ ತೋರಿಸುವ ಶಕ್ತಿ ನನಗಿಲ್ಲ. ಬೇಕಿದ್ದರೆ ನೀನೂ ಅಮ್ಮನೂ ಹೋಗಿ ಬನ್ನಿ!’ ಎನ್ನುತ್ತಿದ್ದವನ ಮಾತುಗಳಲ್ಲಿ ದುಃಖವೋ, ನಿರಾಶೆಯೋ ಅರಿವಾಗದ ಭಾವಗಳು ಮೂಡುತ್ತಿದ್ದುದನ್ನು ಪ್ರಮೀಳ ಗ್ರಹಿಸುತ್ತಿದ್ದಳು. ಸರೋಜಾಳಲ್ಲೂ ಹೆಚ್ಚುಕಮ್ಮಿ ಅಂಥ ಮಾತುಗಳೇ ಹೊರಡುತ್ತಿದ್ದವು. ‘ಇನ್ನು ನಾವು ಯಾವ ಮುಖವಿಟ್ಟುಕೊಂಡು ಹೋಗುವುದು ಹೇಳು? ನಾವು ತಪ್ಪು ಮಾಡಿದ್ದೇನೋ ನಿಜ. ಆದರೆ ಅವರು ಹಿರಿಯರು. ಕ್ಷಮಿಸಬಹುದಿತ್ತಲ್ಲವಾ! ಯಾವತ್ತಾದರೊಂದು ದಿನ ಯಾರಾದರೊಬ್ಬರು ನಮ್ಮನ್ನು ಹುಡುಕಿಕೊಂಡು ಬಂದೇ ಬರುತ್ತಾರೆ ಮತ್ತು ಮನೆಗೂ ಕರೆದೊಯ್ಯುತ್ತಾರೆ ಎಂಬ ಆಸೆಯನ್ನು ನಾನೂ ಇಟ್ಟುಕೊಂಡಿದ್ದೆ ಮಾರಾಯ್ತೀ. ಹಾಗೆ ಒಂದು ವೇಳೆ ಅವರು ಬಂದು ಕರೆದಿದ್ದರೆ ನಾನಂತೂ ಖಂಡಿತ ಹೋಗಿ ನನ್ನ ಹೆತ್ತವರ ಮಡಿಲಿಗೆ ಬಿದ್ದು ಬಿಡುತ್ತಿದ್ದೆ. ಆದರೆ ನಮ್ಮ ದುರಾದೃಷ್ಟಕ್ಕೆ ಈ ಇಪ್ಪತ್ತೆöÊದು ವರ್ಷಗಳಲ್ಲಿ ಅವರು ತಮ್ಮ ಮಕ್ಕಳು ಬದುಕಿದ್ದಾರಾ, ಸತ್ತಿದ್ದಾರಾ ಅಂತ ಒಮ್ಮೆಯಾದರೂ ತಿಳಿಯಲು ಪ್ರಯತ್ನಿಸಿದ್ದಾರೋ ಇಲ್ಲವೋ? ಹಾಗಾಗಿ ನಿನ್ನ ಅಪ್ಪ ಹೇಳುವಂತೆ ಕೆಟ್ಟು ಮೂರಾಬಟ್ಟೆಯಾದ ಮೇಲೆ ಅಲ್ಲಿಗೆ ಹೋಗುವುದರಿಂದ ಏನೂ ಪ್ರಯೋಜನವಲ್ಲ ಬಿಡು. ಹ್ಞಾಂ! ಇನ್ನೊಂದು ಮಾತು. ನೀನು ನಮ್ಮಂತೆ ನತದೃಷ್ಟಳಲ್ಲ ಮಗಾ! ನನ್ನದು ಮತ್ತು ನಿನ್ನ ಅಪ್ಪನದ್ದೂ ಸೇರಿ ನಿನಗೆ ಬೇಕಾದಷ್ಟು ಆಸ್ತಿಯಿದೆ. ಆದರೆ ಅದನ್ನು ಅನುಭವಿಸುವ ಯೋಗವನ್ನು ಮಾತ್ರ ನಾವೇ ಕಿತ್ತುಕೊಂಡೆವೇನೋ ಅಂತನ್ನಿಸುತ್ತದೆ. ಬಹುಶಃ ನನ್ನ ಜೀವನವೂ ಇಲ್ಲಿಯೇ ಮುಗಿಯಬಹುದೇನೋ!’ ಎನ್ನುತ್ತಿದ್ದ ಸರೋಜ ಕಣ್ಣೀರಿಡುತ್ತಿದ್ದಳು. ಆದರೆ ಪ್ರಮೀಳಾಳಿಗೆ ತಾನು ಎಂದಾದರೊoದು ದಿನ ತನ್ನವರನ್ನೆಲ್ಲ ಖಂಡಿತಾ ಸೇರಿಕೊಳ್ಳುತ್ತೇನೆ ಎಂಬ ಆಸೆ ಮತ್ತು ದೃಢ ವಿಶ್ವಾಸವಿತ್ತು.
(ಮುಂದುವರೆಯುವುದು)

Related posts

ವಿವಶ….

Chandrahas

ವಿವಶ

Chandrahas

ವಿವಶ..

Mumbai News Desk

ವಿವಶ…!

Chandrahas

ವಿವಶ…

Mumbai News Desk

ವಿವಶ…

Mumbai News Desk