ಧಾರವಾಹಿ 52
ಮಾಧವ ಸಾಮಗರ ಘಟನೆ ನಡೆದ ನಂತರ ಆಂಥೋನಿ ಸಹೋದರರು ಬ್ರಾಹ್ಮಣರ ಮೇಲೆ ತೀವ್ರ ಹಗೆ ಸಾಧಿಸಿತೊಡಗಿದ್ದರು. ಅಕ್ಕಪಕ್ಕದ ಬ್ರಾಹ್ಮಣರ ತೋಟ, ಗದ್ದೆಗಳಿಗೆ ಅಕ್ರಮವಾಗಿ ನುಗ್ಗುತ್ತ ಅವರ ಸಮೃದ್ಧ ಬೆಳೆಗಳನ್ನು ದೋಚುವುದು, ಹಾಳುಧೂಳು ಮಾಡುತ್ತ ಸೇಡು ತೀರಿಸಿಕೊಳ್ಳುತ್ತಿದ್ದರು. ಅವರ ದೌರ್ಜನ್ಯವನ್ನು ಪ್ರಶ್ನಿಸಲು ಬಂದವರನ್ನು ಹಿಡಿದು ಯದ್ವಾತದ್ವ ಥಳಿಸುತ್ತಿದ್ದರು. ಅಣ್ಣ ತಮ್ಮಂದಿರ ಇಂಥ ಕಿರುಕುಳದಿಂದ ರೋಸಿ, ಸಿಡಿದೇಳುತ್ತಿದ್ದ ಕೆಲವರು ಧೈರ್ಯದಿಂದ ಪೊಲೀಸರಿಗೆ ದೂರು ನೀಡುತ್ತಿದ್ದರು. ಆದರೆ ಈ ಕಿಡಿಗೇಡಿಗಳು ಪೊಲೀಸರ ಕೈಗೂ ಸಿಗದೆ ತಲೆಮರೆಸಿಕೊಳ್ಳುತ್ತಿದ್ದರು ಅಥವಾ ದಾಳಿಗೆ ಬರುತ್ತಿದ್ದ ಕೆಲವು ಲಂಪಟ ಪೊಲೀಸರಿಗೆ ಗ್ರೆಟ್ಟಾ ಸೆರಗು ಹಾಸುತ್ತಿದ್ದರೆ ಅದರೊಂದಿಗೆ ಆಂಥೋನಿಯು ಚೆಲ್ಲುತ್ತಿದ್ದ ಹಣವೂ ಸೇರಿ ಅವರ ಬಾಯಿ ಮುಚ್ಚಿಸುತ್ತಿದ್ದವು. ಆದ್ದರಿಂದ ರಾಬರ್ಟರ ಮಕ್ಕಳ ದುರ್ವತನೆ, ಹಿಂಸಾಚಾರಗಳನ್ನೆಲ್ಲ ಕಾಣುತ್ತ ಬರುತ್ತಿದ್ದ ಸಭ್ಯ ಕಿರಿಸ್ತಾನ ವರ್ಗವೂ ಅವರ ಮೇಲೆ ಮುನಿಸಿಕೊಂಡು ದೂರವಾಗತೊಡಗಿತು. ಆದರೂ ಅಣ್ಣತಮ್ಮಂದಿರು ಕೆಲವು ವರ್ಷಗಳ ಕಾಲ ಯಾರನ್ನೂ ಲೆಕ್ಕಿಸದೆ ಮದ ಮಾತ್ಸರ್ಯದಿಂದ ಮೆರೆದಾಡಿಬಿಟ್ಟರು.
ಹೀಗಿದ್ದ ತಾಮಸನಿಗೆ ಆವತ್ತೊಂದು ದಿನ ಸಂಜೆ ಸಣ್ಣದೊಂದು ಜ್ವರ ಕಾಣಿಸಿಕೊಂಡಿತು. ಕೆಲವು ದಿನಗಳ ಕಾಲ ಎಡೆಬಿಡದೆ ಅವನನ್ನು ಭಾದಿಸಿತು. ಬರಬರುತ್ತ ಆ ಸನ್ನಿಯು ಅವನನ್ನು ಹೇಗೆ ನುಲಿಯಿತೆಂದರೆ ಕೆಲವೇ ದಿನಗಳಲ್ಲಿ ಅವನು ಅದರಿಂದ ಬಸವಳಿದುಬಿಟ್ಟ! ಮನೆಮಂದಿಯೂ ಗಾಬರಿಯಾದರು. ಜೆಸಿಂತಾಬಾಯಿ ಕೂಡಲೇ ಮಗನಿಗೆ ನಾಟಿ ಔಷಧಿಯನ್ನೂ, ವಿಶೇಷ ಸಾರಾಯಿ ಮದ್ದನ್ನೂ ಕುಡಿಸುತ್ತ ಕಟ್ಟುನಿಟ್ಟಿನ ಆರೈಕೆ ಮಾಡಿದರು. ಹಾಗಾಗಿ ಸುಮಾರು ಹದಿನೈದು ದಿನಗಳಲ್ಲಿ ಅವನು ಎದ್ದು ಓಡಾಡುವಂತಾದ. ಆದರೆ ಜ್ವರದ ತೀವ್ರತೆಗೆ ಅವನ ಬಲಿಷ್ಠ ದೇಹವು ಅರ್ಧಕ್ಕರ್ಧ ಇಳಿದುಹೋಗಿತ್ತು. ತನ್ನ ಅಗಾಧ ಕಸುವಿನೊಂದಿಗೆ ಹುರುಪು ಹುಮ್ಮಸ್ಸೂ ಸೋರಿ ಹೋದುದನ್ನು ತಿಳಿಯಲು ತಾಮಸನಿಗೆ ಹೆಚ್ಚು ಸಮಯ ಹಿಡಿಯಲಿಲ್ಲ. ಆದರೂ ಅವನು ಎದೆಗುಂದಲಿಲ್ಲ. ಮರಳಿ ಮೊದಲಿನಂತಾಗಲು ಪ್ರಯತ್ನಿಸಿದವನು ಉತ್ತಮ ಆಹಾರ ಸೇವಿಸುತ್ತ ಆರು ತಿಂಗಳಲ್ಲಿ ಮತ್ತೆ ದೃಢಕಾಯನಾಗಿ ಹಿಂದಿನ ಜೀವನವನ್ನು ಮತ್ತೆ ಆರಂಭಿಸಿದ. ಆದರೆ ಜೆಸಿಂತಬಾಯಿಗೆ ಮಗನ ಬಗ್ಗೆ ವಿವರಿಸಲಾಗದ ವೇದನೆ ಮತ್ತು ಭಯಾಂತಕಗಳು ಕಾಡತೊಡಗಿದ್ದವು. ಇವನಿಂದಾಗಿ ನೊಂದ ಅದೆಷ್ಟೋ ಪಾಪದ ಜನರ ನಿಟ್ಟುಸಿರು ಮತ್ತು ಹಿಡಿ ಶಾಪಗಳು ಇವನಿಗೆ ತಟ್ಟದೆ ಇರುತ್ತಾವಾ…? ಎಂದು ಅವರು ಚಿಂತಿಸುತ್ತಿದ್ದರು. ಆಗೆಲ್ಲ ತಾಮಸನನ್ನು ಹತ್ತಿರ ಕರೆದು, ‘ಮಗಾ ಇನ್ನು ಮುಂದಾದರೂ ಊರಿನವರಿಗೆ ತೊಂದರೆ ಕೊಡದೆ ಒಳ್ಳೆಯವರಾಗಿ ಬಾಳಿರನಾ…! ಇಲ್ಲವಾದರೆ ಅವರ ಕಣ್ಣೀರು ನಮ್ಮನ್ನು ಸುಮ್ಮನೆ ಬಿಡುವುದಿಲ್ಲವನಾ…!’ ಎಂದು ದುಃಖದಿಂದ ಹೇಳುತ್ತಿದ್ದರು. ಅಷ್ಟಲ್ಲದೇ ಆವತ್ತಿನಿಂದ ಅಣ್ಣ ತಮ್ಮನ ಹೆಸರಿನಲ್ಲಿ ಚರ್ಚಿಗೆ ಹರಕೆ ಹೊತ್ತು ಪೂಜೆ ಪುನಸ್ಕಾರಗಳನ್ನು ಮಾಡಿಸುತ್ತ ಪ್ರಾರ್ಥಿಸುತ್ತಿದ್ದರು. ತಾಯಿಯ ಮಮತೆಯ ಮಾತುಗಳು ಥಾಮಸನನ್ನು ಆ ಕ್ಷಣದಲ್ಲಿ ಕರಗಿಸುತ್ತಿದ್ದವು. ಆದರೆ ಅಲ್ಲಿಂದ ಎದ್ದು ಹೊರಗೆ ಹೋಗುತ್ತ ಮತ್ತೆ ಅವನು ಮೊದಲಿನ ‘ತಾಮಸ’ನೇ ಆಗಿಬಿಡುತ್ತಿದ್ದ.
ಹೀಗೆಯೇ ಕಾಲ ಉರುಳುತ್ತಿತ್ತು. ಆದರೆ ತಾಮಸ ತನ್ನ ದುರಾಭ್ಯಾಸ ಮತ್ತು ಹಿಂಸಾಪ್ರವೃತ್ತಿಗಳನ್ನು ಎಂದೂ ಬಿಡದೆ ಊರಿಗೆ ಮಾರಿಯಾಗಿ ಹುಚ್ಚಾಟವಾಡುತ್ತಲೇ ಬದುಕಿದ. ಹಾಗಾಗಿಯೋ ಏನೋ ಅವನ ದುರಾದೃಷ್ಟವು ಮತ್ತದೇ ಜ್ವರದ ರೂಪದಲ್ಲಿ ಮರಳಿ ಅವನನ್ನು ಅಮರಿಕೊಂಡಿತು. ಹಗಲು ರಾತ್ರಿಯೆನ್ನದೆ ಅವನ ದೇಹದಲ್ಲಿ ಕುಣಿದು ಕುಪ್ಪಳಿಸುತ್ತ ಕೇಕೇ ಹಾಕಿತು. ಈ ಸಲ ಮನೆಮಂದಿ ಸಿಕ್ಕಾಪಟ್ಟೆ ಕಂಗಾಲಾಗಿಬಿಟ್ಟರು. ಮನೆ ಔಷಧಿಯೊಂದಿಗೆ ಅಂಬರಬೆಟ್ಟಿನ ಅಣ್ಣಯ ಪಂಡಿತರ ನಾಟಿಮದ್ದನ್ನೂ ತಂದು ತಾಮಸನಿಗೆ ಕುಡಿಸಿದರು. ಅವೆಲ್ಲವೂ ಅಷ್ಟೇ ಬೇಗ ವ್ಯರ್ಥವಾದವು. ತಾಮಸನ ಪರಿಸ್ಥಿತಿಯು ದಿನೇದಿನೇ ಉಲ್ಬಣಿಸುತ್ತ ಹೋಯಿತು. ಕೊನೆಗೆ ಆಂಥೋನಿ ಮತ್ತು ಗ್ರೇಟ್ಟಾ ಅವನನ್ನು ಹೊತ್ತೊಯ್ದು ಶಿವಕಂಡಿಕೆಯ ಸರಕಾರಿ ಆಸ್ಪತ್ರೆಗೆ ದಾಖಲಿಸಿದರು. ಅಲ್ಲಿ ತಾಮಸನ ಮೇಲೆ ಕೆಲವು ಪರೀಕ್ಷೆಗಳು ನಡೆದು ವರದಿ ಬಂದ ಕೂಡಲೇ ವೈದ್ಯರು ಚಿಕಿತ್ಸೆಯನ್ನಾರಂಭಿಸಿದರು. ಎರಡು ತಿಂಗಳ ಕಾಲ ಶುಶ್ರೂಷೆ ಮಾಡಿದರೂ ಅವನ ದೇಹ ಯಾವ ಔಷಧಿಗೂ ಸ್ಪಂದಿಸಲಿಲ್ಲ. ಆದ್ದರಿಂದ ಅವರೂ ಕೈಚೆಲ್ಲಿದವರು ಆಂಥೋನಿ ಮತ್ತು ಗ್ರೆಟ್ಟಾಳನ್ನು ಕರೆದು, ‘ನೋಡಿ, ಇದೊಂದು ಸೂಕ್ಷö್ಮವಾದ ವೈರಾಣು ಜ್ವರ. ಈ ವ್ಯಾಧಿಯ ಉಲ್ಬಣಾವಸ್ಥೆಯಲ್ಲಿ ರೋಗಿಯ ಮಲಮೂತ್ರ ಮತ್ತು ಎಂಜಲಿನ ಮೂಲಕವೂ ಇದು ಇತರರಿಗೆ ಹರಡುವ ಸಾಧ್ಯತೆಯಿರುತ್ತದೆ. ಆದ್ದರಿಂದ ಮನೆಮಂದಿಯೆಲ್ಲ ರಕ್ತ ಪರೀಕ್ಷೆಯನ್ನು ಮಾಡಿಸಿಕೊಳ್ಳಿ ಮತ್ತು ರೋಗಿಯನ್ನು ಮನೆಗೆ ಕೊಂಡೊಯ್ದು ನಾವು ಸೂಚಿಸುವ ಔಷಧಿ ನೀಡುತ್ತ ಆರೈಕೆ ಮಾಡಿ. ಹುಷಾರಾಗುತ್ತಾನೆ!’ ಎಂದು ಧೈರ್ಯ ತುಂಬಿದರು. ಅಷ್ಟು ಕೇಳಿದೊಡನೆ ಅಕ್ಕ ಮತ್ತು ತಮ್ಮ ಇಬ್ಬರೂ ತೀವ್ರ ಆಘಾತಕ್ಕೊಳಗಾಗಿ ನಿಸ್ತೇಜರಾಗಿ ಕುಳಿತುಬಿಟ್ಟರು. ಅದನ್ನು ಗಮನಿಸಿದ ವೈದ್ಯರುಗಳು ಆ ಜ್ವರ ಹರಡದಂತೆ ಕೆಲವು ಮುಂಜಾಗ್ರತಾಕ್ರಮಗಳನ್ನೂ ಅವರಿಗೆ ಮನಮುಟ್ಟುವಂತೆ ತಿಳಿಸಿದ ನಂತರ ಇಬ್ಬರೂ ಚೇತರಿಸಿಕೊಂಡವರು, ಎಲುಬಿನ ಚಕ್ಕಳವಾಗಿದ್ದ ತಾಮಸನ ದೇಹವನ್ನು ಹೊತ್ತುಕೊಂಡು ಮನೆಗೆ ಹಿಂದಿರುಗಿದರು. ತಾಮಸ ಕಾಯಿಲೆ ಬಿದ್ದ ವಿಷಯ ಅವನ ಜೀವದ ಗೆಳೆಯರಾದ ಸೂರ್ಯ, ವಾಲ್ಟರನಿಗೂ ತಿಳಿದಿತ್ತು. ಅವರು ಕೂಡಾ ಆಗಾಗ ಆಸ್ಪತ್ರೆಗೆ ಬಂದು ಒಂದಷ್ಟು ಹೊತ್ತು ಅವನೊಂದಿಗೆ ಕುಳಿತು ವಿನೋದವಾಗಿ ಹರಟುತ್ತ ಅವನಿಗೆ ಧೈರ್ಯ ತುಂಬಿ ಹೋಗುತ್ತಿದ್ದರು. ಆದರೆ ಯಾವಾಗ ಅವನಿಗೆ ಸೋಕಿರುವುದು ಅಂಟು ಜಾಡ್ಯವೆಂದು ತಿಳಿಯಿತೋ ಆವತ್ತಿನಿಂದ ಅವರು ಮತ್ತೆಂದೂ ಗೆಳೆಯನ ಹತ್ತಿರ ಸುಳಿಯುವ ಧೈರ್ಯವನ್ನು ಮಾಡಲಿಲ್ಲ!
ತಾಮಸನನ್ನು ಮನೆಗೆ ಕರೆದು ತಂದ ಗ್ರೆಟ್ಟಾ, ಆಂಥೋನಿ ಕೆಲವು ದಿನಗಳ ಕಾಲ ಧೈರ್ಯದಿಂದ ಅವನನ್ನು ಆರೈಕೆ ಮಾಡಿದರು. ಆದರೆ ಬರಬರುತ್ತ ತಮ್ಮನ ವ್ಯಾಧಿಯು ತಮಗೂ ಅಂಟಿಕೊoಡರೇ ಅಥವಾ ಈಗಾಗಲೇ ಸೋಕಿದ್ದರೇ…!? ಎಂಬ ಭೀತಿಗೆ ತುತ್ತಾಗಿ ಹೈರಾಣಾದವರು ಕ್ರಮೇಣ ತಮ್ಮನ ಕೋಣೆಯತ್ತ ಸುಳಿಯುವುದನ್ನೇ ನಿಲ್ಲಿಸಿಬಿಟ್ಟರು. ಅದೇ ಭಯದಿಂದ ಅವರ ದಿನಿತ್ಯದ ಚೈತನ್ಯ, ಚಟುವಟಿಕೆಗಳೂ ಕುಂಟುತ್ತ ಸಾಗಿದ್ದರೊಂದಿಗೆ ಅವರ ದರ್ಪ ದೌಲತ್ತುಗಳೂ ಮೂಲೆ ಸೇರಿದವು. ಇತ್ತ ಮಗನಿಗೆ ವಿಚಿತ್ರ ಕಾಯಿಲೆಯೊಂದು ಅಂಟಿದೆ ಎಂದು ತಿಳಿದ ಜೆಸಿಂತಾಬಾಯಿಯು ಇನ್ನಷ್ಟು ಹಣ್ಣಾದರಾದರೂ ತಾವೇ ಅವನನ್ನು ಜತನದಿಂದ ನೋಡಿಕೊಳ್ಳತೊಡಗಿದರು. ಹೀಗಿದ್ದಾಗಲೇ ಅವರಿಗೆಲ್ಲ ಅಚ್ಚರಿಯ ಸಂಗತಿಯೊoದು ಎದುರಾಯಿತು.
ಸರಕಾರಿ ವೈದ್ಯರೆಲ್ಲ ಕೈ ಬಿಟ್ಟು ಆಸ್ಪತ್ರೆಯಿಂದ ಮನೆಯ ಪಾಳು ಕೋಣೆಗೆ ವರ್ಗವಾಗಿದ್ದ ತಾಮಸನು ಆವತ್ತೊಂದು ಮುಂಜಾನೆ ಮನೆಮಂದಿಯೆಲ್ಲ ವಿಸ್ಮಯಗೊಳ್ಳುವಂತೆ ಚೈತನ್ಯದಿಂದ ಎದ್ದು ಕುಳಿತ! ಒಣಗಿ ಬತ್ತಿ ಹೋಗಿದ್ದ ಅವನ ಮುಖದಲ್ಲಿ ನವೋಲ್ಲಾಸ ಪುಟಿಯುತ್ತಿತ್ತು. ಚರ್ಮದ ಗೂಡಾಗಿದ್ದ ಅವನ ದೇಹದೊಳಗಿನ ಚೇತನವು ಅನಾಮತ್ತಾಗಿ ಅವನನ್ನೆತ್ತಿ ಕೊಡವಿ ನಿಲ್ಲಿಸಿದಂತೆ ಕಾಣುತ್ತಿದ್ದ. ಎದ್ದವನು ನಿತ್ಯಕರ್ಮ ಮುಗಿಸಿ ಸ್ನಾನ ಮಾಡಿ ಬಂದ. ಬೆಳಗ್ಗಿನ ಉಪಹಾರವನ್ನೂ ಸೇವಿಸಿದ. ಅವನ ಚಟುವಟಿಕೆಯನ್ನು ಕಾಣುತ್ತಿದ್ದ ಹೆತ್ತವಳು ಮತ್ತು ಒಡಹುಟ್ಟಿದವರಲ್ಲಿ ಅಚ್ಚರಿ, ಗೊಂದಲ ಹಾಗು ನೆಮ್ಮದಿಯ ಭಾವಗಳ ನಡುವೆ ತೀವ್ರ ತಾಕಲಾಟ ನಡೆಯುತ್ತಿತ್ತು. ಅಷ್ಟರಲ್ಲಿ ಅವನು, ‘ಅಮ್ಮಾ…ನಾನು ಸ್ವಲ್ಪ ಪೇಟೆಯ ಕಡೆಗೆ ಹೋಗಿ ಬರುತ್ತೇನೆ!’ ಎಂದ. ಒಂದೂ ಅರ್ಥವಾಗದೆ ಗಲಿಬಿಲಿಯಾಗಿದ್ದ ತಾಯಿಗೆ ಮಗನ ನರಪೇತಾಳನಂಥ ದೇಹವನ್ನು ಕಂಡು ಆತಂಕವಾಯಿತು.
‘ಅಯ್ಯೋ ದೇವರೇ…! ಬೇಡ ಮಗಾ! ಈಗಷ್ಟೇ ಹುಷಾರಾಗಿದ್ದಿಯಾ. ಇನ್ನೆರಡು ದಿನ ಸುಧಾರಿಸಿಕೊಂಡು ಹೋಗಪ್ಪಾ!’ ಎಂದರು ಅವರು ಮಮತೆಯಿಂದ.
‘ಇಲ್ಲಮ್ಮಾ, ಇಷ್ಟು ಕಾಲ ಚಾಪೆ ಹಿಡಿದು ಮಲಗಿ ಸಾಕಾಗಿಬಿಟ್ಟಿದೆ. ಇಲ್ನೋಡು, ಎಷ್ಟೊಂದು ಹುಷಾರಾಗಿದ್ದೇನೆ!’ ಎಂದು ನಗುತ್ತ ಅಂದ ತಾಮಸನು, ‘ಶಿವಕಂಡಿಕೆಯ ಪೇಟೆಗೊಂದು ಸುತ್ತು ಹೊಡೆದು ಬರಬೇಕೆಂದು ಆಸೆಯಾಗಿದೆಯಮ್ಮಾ!’ ಎಂದು ಯಾವತ್ತೂ ಇಲ್ಲದ ಉತ್ಸಾಹದಿಂದ ಹೇಳಿದ. ಮಗನ ದಿಢೀರ್ ಚೇತರಿಸುವಿಕೆ ಜೆಸಿಂತಾಬಾಯಿಯನ್ನು ಆನಂದದಲ್ಲಿ ತೇಲಿಸಿತು. ‘ಆಯ್ತು ಮಗಾ ಹೋಗಿ ಬಾ. ಆದರೆ ಜಾಗ್ರತೆ ಮಾಡು…!’ ಎಂದು ಕಣ್ತುಂಬಿಕೊoಡು ಸಮ್ಮತಿಸಿದರು. ‘ಹ್ಞೂಂ ಆಯ್ತಮ್ಮಾ…!’ ಎಂದ ಮಗ ಬಟ್ಟೆ ಧರಿಸಲು ಮುಂದಾದ. ಹಿಂದೆ ಒಂದು ಕ್ವಿಂಟಲ್ ತೂಕವಿದ್ದ ಅವನ ಬಲಿಷ್ಠ ದೇಹವು ಈಗ ಕೇವಲ ನಲವತ್ತು ಕಿಲೋಗೆ ಬಂದಿಳಿದಿತ್ತು. ಹಾಗಾಗಿ ಹಿಂದಿನ ಬಟ್ಟೆಬರೆಗಳೆಲ್ಲ ದೊಗಳೆಯಾಗುತ್ತಿದ್ದವು. ಸೊಂಟದಲ್ಲಿ ನಿಲ್ಲದ ಪ್ಯಾಂಟೊoದನ್ನು ತೊಟ್ಟುಕೊಂಡು ದೊಗಳೆ ಅಂಗಿಯೊiದನ್ನು ಅದರೊಳಗೆ ತುರುಕಿಸಿ ಬೆಲ್ಟಿನಿಂದ ಬಿಗಿದು ಕಟ್ಟಿಕೊಂಡ. ತಮ್ಮನನ್ನು ಕಂಡು ಮರಗಟ್ಟಿ ನೋಡುತ್ತಿದ್ದ ಆಂಥೋನಿಯು ಎಚ್ಚೆತ್ತು ಅವನ ದಾರಿ ಖರ್ಚಿಗೆ ಹಣವನ್ನೂ ಕೊಟ್ಟ. ತಾಮಸ ಕೂಡಲೇ ಆಟೋ ಹತ್ತಿ ಅಮಿತಾಂಜಲಿ ಟಾಕೀಸಿಗೆ ಹೋದ. ಅಲ್ಲಿ ‘ದೇವರ ದುಡ್ಡು’ ಸಿನೇಮಾ ಓಡುತ್ತಿತ್ತು. ಬಾಲ್ಕನಿಯ ಟಿಕೇಟು ತೆಗೆದುಕೊಂಡು ಖುಷಿಯಿಂದ ಕುಳಿತು ಸಿನೇಮಾ ನೋಡಿದ. ಚಿತ್ರದ ಅಂತ್ಯವು ಕಠೋರ ಮನಸ್ಸಿನ ತಾಮಸನಲ್ಲೂ ಸಾತ್ವಿಕತೆಯ ಕಣ್ಣೀರನ್ನು ಹರಿಸಿತು. ತಾನೇಕೆ ಅಳುತ್ತಿದ್ದೇನೆಂದು ಅವನಿಗೇ ಅರ್ಥವಾಗದಿದ್ದರೂ ಬಿಕ್ಕಿಬಿಕ್ಕಿ ಅತ್ತ. ಸಿನೇಮಾ ಬಿಡುವ ಹೊತ್ತಿಗೆ ಹೊಟ್ಟೆ ಇನ್ನಿಲ್ಲದಂತೆ ಹಸಿಯುತ್ತಿತ್ತು. ವಸಂತ ಶೆಟ್ಟರ ಮಿಲಿಟರಿ ಹೊಟೇಲಿಗೆ ಹೋಗಿ ಚಿಕನ್ ಸುಕ್ಕ ಮತ್ತು ಬಂಗುಡೆ ಫ್ರೆöÊಯೊಂದಿಗೆ ಗಡದ್ದಾಗಿ ಉಂಡ. ಸುಸ್ತಾಗುತ್ತಿದ್ದರೂ ಲೆಕ್ಕಿಸದೆ ಸಂಜೆಯವರೆಗೆ ಪೇಟೆಯಲ್ಲಿ ಸುತ್ತಾಡಿದ. ಮೊದಲ ಬಾರಿಗೆ ಅವನಿಗೆ ಚರ್ಚಿಗೆ ಹೋಗುವ ಆಸೆಯಾಯಿತು. ಬಾಲ್ಯದಲ್ಲಿ ಅಪ್ಪ, ಅಮ್ಮ ಮತ್ತು ಅಕ್ಕನ ಜೊತೆ ಪ್ರತಿ ಆದಿತ್ಯವಾರ ಊರಿನ ಚರ್ಚಿಗೆ ಹೋಗಿ ಬರುತ್ತಿದ್ದ ನೆನಪೀಗ ಅವನ ಕಣ್ಣೆದುರು ಕುಣಿಯಿತು. ಆದರೆ ಆ ವಯಸ್ಸು, ದೇವರು ದಿಂಡರು ಎಂಬುದರ ಮೇಲೆ ಭಯಭಕ್ತಿ ಹುಟ್ಟಿಸುವ ಕಾಲವಾಗಿರಲಿಲ್ಲ. ಮನೆಮಂದಿಯೆಲ್ಲ ಏಸುವಿನ ಪೂಜೆ, ಧ್ಯಾನದಲ್ಲಿ ಮಗ್ನರಾಗುತ್ತಿದ್ದರೆ ತಾನು ತನ್ನ ವಯಸ್ಸಿನವರೊಡನೆ ಇಗರ್ಜಿನ ಮೂಲೆ ಮೂಲೆಗಳಲ್ಲಿ ಕದ್ದುಮುಚ್ಚಿ ಚಿನ್ನಾಟವಾಡುತ್ತ ಆನಂದಿಸುತ್ತಿದ್ದುದು ನೆನಪಾಗಿ ಆರ್ದ್ರಗೊಂಡ. ಮರುಕ್ಷಣ ತಾನೇನೋ ಅಮೂಲ್ಯವಾದುದನ್ನು ಕಳೆದುಕೊಂಡoಥ ನೋವಿನ ಭಾವವು ಅವನೊಳಗೆ ಒತ್ತರಿಸಿತು.
ತಾರುಣ್ಯಕ್ಕೆ ತಲುಪಿದ ಮೇಲೆ ಅವನೊಳಗೆ ಬೆಳೆಯತೊಡಗಿದ ರಾಕ್ಷಸ ಗುಣವು ಅವನನ್ನು ಮತ್ತೆಂದೂ ಚರ್ಚಿನ ಮೆಟ್ಟಿಲೇರಲು ಬಿಡಲಿಲ್ಲ. ಅಮ್ಮ, ಅಪ್ಪ ಬೈದು ಒತ್ತಾಯಿಸಿದರೆ ಪ್ರತಿರೋಧಿಸಿ ಎತ್ತೆತ್ತಲ್ಲೋ ಓಡಿ ಹೋಗಿ ಸಮಯ ಕಳೆಯುತ್ತಿದ್ದ. ಅವನು ಬೆಳೆದಂತೆಲ್ಲ ಆಡುತ್ತಿದ್ದ ಅನಾಚಾರಗಳಿಂದಲೂ ಹಾದಿ ತಪ್ಪಿದ ಅವನ ಮನೋವ್ಯಾಪಾರಗಳಿಂದಲೂ ಅವನ ಅಂತರಾತ್ಮವು ತೀವ್ರ ಘಾಸಿಗೊಂಡು ಗೊಂದಲ, ಭೀತಿಯ ಗೂಡಾಗುತ್ತ ಕೆಲವೊಮ್ಮೆ ಅವನನ್ನು ಮಾನಸಿಕ ಕ್ಷೆÆÃಭೆಗೂ ತಳ್ಳುತ್ತಿತ್ತು. ಆದರೆ ತನಗೇಕೆ ಹಾಗಾಗುತ್ತದೆ…? ಎಂದು ಪ್ರಶ್ನಿಸಿಕೊಳ್ಳುವ ಗೋಜಿಗೆ ಮಾತ್ರ ಅವನು ಎಂದೂ ಹೋಗಲಿಲ್ಲ. ಆಕಸ್ಮತ್ತಾಗಿ ಹೋದರೂ ಅವನಿಗದು ಅರ್ಥವಾಗುತ್ತಿರಲಿಲ್ಲ. ಆಗೆಲ್ಲ ಅವನ ಅಂತರಾತ್ಮವು ಕಾಣದ ಶಕ್ತಿಯ ಸ್ಮರಣೆಗೆ ತುಡಿಯುತ್ತಿತ್ತು. ಆದರೆ ಅವನನ್ನು ಬಂಧಿಸಿದ್ದ ಕೆಡುಕುತನವು ಧರ್ಮ, ದೇವರು, ಪಾಪ, ಪುಣ್ಯ, ಪ್ರೀತಿ, ಮಾನವೀಯತೆಗಳೆಂಬ ಅಮೂಲ್ಯ ಮೌಲ್ಯಗಳಿಂದ ಅವನನ್ನು ಬಹಳವೇ ದೂರವಿಟ್ಟಿತ್ತು. ಹಾಗಾಗಿ ಸುತ್ತಮುತ್ತಲಿನ ಸಭ್ಯ ಸಮಾಜದೊಳಗೆ ಅವನ ಹುಟ್ಟೇ ‘ನೀನು ಖಳನಾಯಕ!’ ಎಂಬoತೆ ಬಿಂಬಿತವಾಗಿತ್ತು. ಇಂದು ಅವನನ್ನು ಕಾಡಿದ ಅನಾಮಧೇಯ ಕಾಯಿಲೆಯೊಂದು ಕೊನೆಗೂ ಅವನೊಳಗಿನ ರಾಕ್ಷಸ ಹುಳುವನ್ನು ಧಮನಿಸತೊಡಗಿತ್ತು. ಆದರೆ ಅದೇ ಹೊತ್ತಿಗೆ ಕಾಲವೂ ಮಿಂಚಿ ಹೋಗಿತ್ತು. ಪರಿಶುದ್ಧ ಚೇತನವು ಅವನ ದೇಹದೊಳಗೆ ಉಳಿಯಲಾರದಷ್ಟು ತಾಮಸನು ಜರ್ಝರಿತನಾಗಿದ್ದ.
ಶಿವಕಂಡಿಕೆ ಪೇಟೆಯ ಹೃದಯ ಭಾಗದಲ್ಲೊಂದು ಏಸುವಿನ ಭವ್ಯ ಮಂದಿರವಿದೆ. ಅದು ಬ್ರಿಟೀಷರ ಕಾಲದಲ್ಲಿ ನಿರ್ಮಿಸಿದ್ದು. ತಾಮಸ ಹಿಂದೆಲ್ಲ ಶಿವಕಂಡಿಕೆಗೆ ನೂರಾರು ಬಾರಿ ಬಂದು ಮನಸೋಇಚ್ಛೆ ಸುತ್ತಾಡುತ್ತಿದ್ದ. ಆದರೆ ನಿರ್ಮಲ ಸುಖ ಶಾಂತಿಯನ್ನು ಕರುಣಿಸುವ ಈ ದಿವ್ಯ ದೇಗುಲವನ್ನು ಪ್ರವೇಶಿಸಿ ಸರ್ವಶಕ್ತನಿಗೆ ಶರಣಾಗುವ ಮನಸ್ಸೆಂದೂ ಅವನಿಗೆ ಬಂದಿರಲಿಲ್ಲ. ಆದರೆ ಇಂದೇಕೋ ಅವನಿಗೆ ಅಲ್ಲಿಗೆ ಹೋಗುವ ಮನಸ್ಸಾಯಿತು. ಅದರ ಜೊತೆಗೆ ಅತಿಯಾದ ಆಯಾಸವೂ ಕಾಡಿತು. ಆದರೂ ಲೆಕ್ಕಿಸದೆ ಚರ್ಚಿನತ್ತ ನಡೆದ. ಮಂದಿರದ ಆವರಣದೊಳಗೆ ಅಡಿಯಿಡುತ್ತ ನಿತ್ರಾಣದಿಂದಲೋ, ಭಯದಿಂದಲೋ ಅವನ ಕೈಕಾಲುಗಳು ತರತರ ಕಂಪಿಸತೊಡಗಿದವು. ಕಷ್ಟಪಟ್ಟು ಸಂಭಾಳಿಸಿಕೊoಡು ಒಳಗೆ ಹೊಕ್ಕ. ಅದು ಮಧ್ಯಾಹ್ನದ ಹೊತ್ತಾಗಿದ್ದುದರಿಂದ ಚರ್ಚು ನಿರ್ಜನ ಮತ್ತು ನಿಶ್ಶಬ್ದವಾಗಿತ್ತು. ವಿಶಾಲ ಪಡಸಾಲೆಯ ಕೊನೆಯಲ್ಲಿ ತಾಮಸನಿಗೆ ಎದುರಾಗಿ ಪವಾಡ ಪುರುಷನ ಹಾಲು ಬಿಳುಪಿನ ಸುಂದರ ಮೂರ್ತಿಯು ಶಿಲುಬೆಯೇರಿದ ಸ್ಥಿತಿಯಲ್ಲಿತ್ತು. ನಿರ್ಮೋಹ, ನಿರ್ವಿಕಾರವಾದ ಆ ಸರ್ವಜ್ಞನ ಮುಖ ದಿವ್ಯ ಪ್ರಶಾಂತತೆಯಿoದ ಬೆಳಗುತ್ತಿತ್ತು. ತಾಮಸನು ಮೊದಲ ಬಾರಿಗೆ ದೃಷ್ಟಿಯನ್ನು ಶಿಲುಬೆಯ ಮೇಲೆ ನೆಟ್ಟು ದೀರ್ಘವಾಗಿ ದಿಟ್ಟಿಸಿದ. ಇದ್ದಕ್ಕಿದ್ದಂತೆ ಅವನೊಳಗೆ ವಿಪರೀತ ತಳಮಳ, ಅನಾಥಭಾವ ಮತ್ತು ಅಪರಾಧಿಪ್ರಜ್ಞೆಗಳೆದ್ದು ದೇಹವಿಡೀ ಅದುರಿಬಿಟ್ಟಿತು. ರಪ್ಪನೆ ಕುಸಿದು ಕುಳಿತ. ಕಣ್ತುಂಬಿಕೊoಡು ಏಸು ಮತ್ತು ಮೇರಿಮಾತೆಯ ವಿಗ್ರಹಗಳನ್ನು ದೈನ್ಯದಿಂದ ತದೇಕಚಿತ್ತನಾಗಿ ನೋಡುತ್ತ ಕುಳಿತ. ಅರಿವಿಲ್ಲದೆಯೇ ಅವನ ಒಣ ಹಸ್ತಗಳಿಗೆ ಚಾಲನೆ ಬಂತು. ದಟ್ಟ ದರಿದ್ರನ ದೀನತೆಯಿಂದ ಜೋಡಿಸಲ್ಪಟ್ಟ ಅವು ಏಸುವಿನೆದುರು ಆರ್ದ್ರವಾಗಿ ಚಾಚಿಕೊಂಡವು.
‘ಹೇ…ಜೀಸೆಸ್…! ಏನು ತಂದೆ ಇದೆಲ್ಲ…? ಇಷ್ಟರವರೆಗೆ ತಾನೇನು ಮಾಡಿದೆ…? ಅಯ್ಯೋ ದೇವಾ…! ನನಗೊಂದೂ ಅರ್ಥವಾಗುತ್ತಿಲ್ಲವಲ್ಲ…!?’ ಎಂದು ಕಣ್ತುಂಬಿ ಪ್ರಶ್ನಿಸಿಕೊಂಡ. ಬಳಿಕ, ‘ಇನ್ನಾದರೂ ಹೊಸ ಬದುಕು ಕರುಣಿಸು ತಂದೆ…!’ ಎಂದು ಮುಗ್ಧವಾಗಿ ಬೇಡಿಕೊಂಡ. ಮರುಕ್ಷಣ ಯಾವುದರಿಂದಲೋ ಬಿಡುಗಡೆಯಾಗಲೊಪ್ಪದ ಆದರೂ ಆ ವಿಮೋಚನೆಗೆ ಹಪಹಪಿಸುತ್ತಿದ್ದಂಥ ಅವನೊಳಗಿನ ಎರಡು ದ್ವಂದ್ವ ಭಾವಗಳ ತಿಕ್ಕಾಟವನ್ನು ಸಹಿಸಲಾಗದೆ ಅವನಿಗೆ ಅಳುವೇ ಬಂದುಬಿಟ್ಟಿತು. ಬಿಕ್ಕಿಬಿಕ್ಕಿ ಅತ್ತು ಸಮಾಧಾನಗೊಂಡವನ ಮನಸ್ಸು ದಟ್ಟಾರಣ್ಯದೊಳಗಿನ ಶುಭ್ರ ಕೊಳದಷ್ಟು ಶುದ್ಧ, ನಿರ್ಮಲವಾದಂತೆನಿಸಿತು. ಉಲ್ಲಾಸದಿಂದೆದ್ದು ಏಸುವಿಗೂ, ಮೇರಿಯಮ್ಮನಿಗೂ ಮತ್ತೊಮ್ಮೆ ಭಕ್ತಿಯಿಂದ ನಮಸ್ಕರಿಸಿ ಹೊರಗೆ ಬಂದವನು ಆಟೋ ಹತ್ತಿ ಮನೆಯತ್ತ ಹೊರಟ. ಮನೆಗೆ ಬಂದವನು ತಾನು ಜೀವಮಾನದಲ್ಲೇ ಅಷ್ಟೊಂದು ಚೈತನ್ಯವಂತನಾಗಿ ಓಡಾಡಲಿಲ್ಲವೇನೋ ಎಂಬoತೆ ಮನೆ ಮತ್ತು ಹಿತ್ತಲ ತುಂಬೆಲ್ಲ ಉತ್ಸಾಹದಿಂದ ನಡೆದಾಡುತ್ತ ಎಲ್ಲರೊಂದಿಗೂ ಪ್ರೀತಿಯಿಂದ ಬೆರೆತು ಮಾತಾಡಿದ. ಹಿಂದೆ ತಾನು ಸಾರಾಯಿ ಬೇಯಿಸುತ್ತಿದ್ದ ಕೋಣೆಗೂ ಹೋದ. ಆದರೆ ಅದನ್ನು ಕಂಡವನಿಗೆ ಯಾಕೋ ತೀವ್ರ ಅಸಹ್ಯ ಕಾಡಿತು. ತಟ್ಟನೆ ಹೊರಗೆ ಬಂದುಬಿಟ್ಟ.
ತಾಮಸನ ವಿಷಯದಲ್ಲಿ ಮನೆಮಂದಿಗೆ ಪವಾಡವೇ ನಡೆದಷ್ಟು ಸಂತಸವಾಗಿತ್ತು. ಜೆಸಿಂತಾಬಾಯಿ ತಾನು ಹೊತ್ತ ಹರಕೆಗಳೆಲ್ಲ ಫಲಕೊಟ್ಟವು! ಎಂದು ನೆಮ್ಮದಿಯ ಕಣ್ಣೀರಿಟ್ಟರು. ಮಗನಿಗೆ ಇಷ್ಟವೆಂದು ಎಲ್ಲೆಲ್ಲಿಂದಲೋ ಹುಡುಕಾಡಿ ಕಾಡು ಹಂದಿಯ ಮಾಂಸವನ್ನು ತರಿಸಿ ರುಚಿಕಟ್ಟಾದ ಅಡುಗೆಯನ್ನೂ ಮಾಡಿಟ್ಟರು. ಆದರೆ ತಾಮಸನಿಗೆ ಇಂದೇಕೋ ಮಾಂಸ ತಿನ್ನಲು ಮನಸ್ಸಾಗಲಿಲ್ಲ. ಮಧ್ಯಾಹ್ನದ ಬಸಳೆಸೊಪ್ಪಿನ ಪದಾರ್ಥದಲ್ಲೇ ತೃಪ್ತಿಯಿಂದ ಉಂಡು ಮತ್ತಷ್ಟು ಹೊತ್ತು ಮನೆಯವರೊಂದಿಗೆ ಹರಟುತ್ತ ಮಲಗಿಕೊಂಡ. ರಾತ್ರಿ ಗಾಢ ನಿದ್ರೆ ಅವನನ್ನು ಆವರಿಸಿತು. ಆದರೆ ಮರುದಿನದ ಕಥೆಯೇ ಬೇರಾಗಿತ್ತು. ಮುಂಜಾನೆ ಮನೆಮಂದಿಗೆ ಎಚ್ಚರಾಗುವ ಹೊತ್ತಿಗೆ ತಾಮಸ ವಿಪರೀತ ಚಳಿಯಿಂದ ನಡುಗುತ್ತಿದ್ದ. ಜೆಸಿಂತಾಬಾಯಿ ಮಗನತ್ತ ಧಾವಿಸಿ ಅವನ ಮೈಮುಟ್ಟಿ ನೋಡಿದರು. ತಾಮಸ ಮರಳಿ ಅದೇ ವಿಷಮ ಜ್ವರಕ್ಕೆ ತುತ್ತಾಗಿದ್ದ! ಅಷ್ಟು ತಿಳಿದ ಆಂಥೋನಿ ಮತ್ತು ಗ್ರೆಟ್ಟಾಳ ರೋಗ ಭೀತಿಯು ಮತ್ತೆ ಅವರನ್ನು ಆವರಿಸಿಕೊಂಡಿತು. ಪರಿಣಾಮ, ತಾಮಸ ಮತ್ತದೇ ಪಾಳು ಕೋಣೆಗೆ ತಳ್ಳಲ್ಪಟ್ಟ. ಆವತ್ತಿನಿಂದ ಆಂಥೋನಿ ಮತ್ತು ಗ್ರೆಟ್ಟಾ ತಾವು ಮಾತ್ರವಲ್ಲದೇ ತಾಯಿಯೂ ಅವನನ್ನು ಮುಟ್ಟದಂತೆ ತಾಕೀತು ಮಾಡಿದವರು ಹಿಂದಿನoತೆಯೇ ಅವನ ಕೈಗೆಟಕುವಷ್ಟು ದೂರದಲ್ಲಿ ಅನ್ನ, ನೀರಿಟ್ಟು ಬರತೊಡಗಿದರು. ಹೆತ್ತವಳ ಮತ್ತು ಒಡಹುಟ್ಟಿದವರ ತಿರಸ್ಕಾರದಿಂದ ತಾಮಸನು ಸಂಪೂರ್ಣ ಕುಗ್ಗಿ ಹೋದ. ಅವನಿಗೆ ತನ್ನ ಬದುಕಿನ ಮೇಲೆ ತೀವ್ರ ನಿರಾಸಕ್ತಿ ಹುಟ್ಟಿದ್ದರೊಂದಿಗೆ ತನ್ನ ಕೊನೆಗಾಲವೂ ಸಮೀಪಿಸಿದ್ದರ ಸುಳಿವೂ ದೊರಕಿರಬೇಕು. ಅಂದಿನಿoದ ಅನ್ನಾಹಾರವನ್ನು ತೊರೆದು ಹದಿನೈದು ದಿನಗಳ ಕಾಲ ತೀವ್ರವಾಗಿ ನರಳಿದವನು ಒಂದು ಮುಂಜಾನೆ ತನ್ನ ಇಹದ ಕುರುಡುಯಾತ್ರೆಯನ್ನು ಮುಗಿಸಿಬಿಟ್ಟ!
(ಮುಂದುವರೆಯುವುದು