April 1, 2025
ಧಾರಾವಾಹಿ

ವಿವಶ…

ಧಾರವಾಹಿ 53
ಅದು ಬೇಸಿಗೆಯಾರಂಭದ ಕಾಲ. ಮುಂಜಾನೆಯ ಸೂರ್ಯನ ಕಿರಣಗಳು ಗಂಗರಬೀಡನ್ನು ನಿಧಾನವಾಗಿ ಕಾವೇರಿಸುತ್ತ ಆನಂದ ಎಸ್ಟೇಟಿನ ಸುತ್ತಮುತ್ತಲಿನ ಗುಡ್ಡೆ ಮತ್ತು ಮೈದಾನಗಳು ಬಿಸಿಲ ಝಳಕ್ಕೆ ಫಳಫಳನೇ ಹೊಳೆಯುತ್ತಿದ್ದವು. ಸರೋಜ ತನ್ನ ಶೆಡ್ಡಿನ ಇಳಿ ಮಾಡಿನಡಿಯಲ್ಲಿ ಕುಳಿತುಕೊಂಡು ಬೀಡಿ ಕಟ್ಟುತ್ತಿದ್ದಳು. ಪ್ರಮೀಳಾಳಿಗೆ ಕಾಲೇಜಿಗೆ ರಜೆಯಿದ್ದುದರಿಂದ ಅವಳು ತೋಟದ ಕೆಲಸಕ್ಕೆ ಹೋಗಿದ್ದಳು. ಅಷ್ಟೊತ್ತಿಗೆ ಅವಳ ಶೆಡ್ಡಿನೆದುರು ಆಟೋ ಒಂದು ಬಂದು ನಿಂತಿತು. ಅದರಿಂದ ಮೂವತ್ತರ ಆಸುಪಾಸಿನ, ಸೂಟು ಬೂಟು ಧರಿಸಿದ್ದ ಸ್ಫುರುದ್ರೂಪಿ ಯುವಕರಿಬ್ಬರು ಇಳಿದು ಸರೋಜಾಳ ಮನೆಯತ್ತಲೇ ಬಂದರು.
‘ಇಲ್ಲಿ ಲಕ್ಷ್ಮಣ್ ಅವರ ಮನೆ ಯಾವುದು ಆಂಟೀ…?’ ಎಂದ ಅವರಲ್ಲೊಬ್ಬ. ಸರೋಜಾಳಿಗೆ ಕುತೂಹಲ, ಭಯ ಒಟ್ಟೊಟ್ಟಿಗಾಯಿತು. ಬೀಡಿಯ ಮೊರವನ್ನೆತ್ತಿ ಬದಿಗಿಟ್ಟು ಎದ್ದು ನಿಂತವಳು, ‘ಇದು ಅವರದೇ ಮನೆ. ಏನಾಗಬೇಕಿತ್ತು ಮಗಾ… ನೀವು ಯಾರು…?’ ಎಂದು ಆತಂಕದಿoದ ಪ್ರಶ್ನಿಸಿ ಇಬ್ಬರನ್ನೂ ಮಿಕಮಿಕಾ ನೋಡಿದಳು. ಆಗ ಯುವಕರಿಬ್ಬರೂ ಅಚ್ಚರಿಯಿಂದ ಮುಖ ಮುಖ ನೋಡಿಕೊಂಡವರು ಬಳಿಕ ಇಬ್ಬರೂ ಮಂದಹಾಸ ಬೀರಿದರು.
‘ಹಾಗಾದರೆ ನೀವು ಸರೋಜ ಅಲ್ಲವಾ?’ ಎಂದ ಕಿರಿಯವನು. ಅವಳು ಇನ್ನೂ ಕಕ್ಕಾಬಿಕ್ಕಿಯಾಗಿ, ‘ಹೌದು. ಆದರೆ ನೀವು ಯಾರೂಂತ ಗೊತ್ತಾಗಲಿಲ್ಲವಲ್ಲಾ ಮಗಾ…?’ ಎಂದಳು ಸೌಜನ್ಯದಿಂದ.
‘ಹೇಳುತ್ತೇವೆ ಆಂಟೀ, ಆದರೆ ನಮ್ಮನ್ನು ಒಳಗೆ ಕರೆಯುವುದಿಲ್ಲವಾ…?’ ಎಂದ ಹಿರಿಯವವನು ನಗುತ್ತ. ಸರೋಜಾಳಿಗೆ ಮುಜುಗರವಾಗಿ, ಛೇ! ಛೇ! ಯಾರಾದರೇನು? ಹೊರಗೆ ನಿಲ್ಲಿಸಿಕೊಂಡು ಮಾತಾಡುವುದಾ, ನನ್ನ ಬುದ್ಧಿಗಿಷ್ಟು! ಎಂದು ಗೊಣಗುತ್ತ, ‘ಬನ್ನಿ ಬನ್ನಿ ಮಗಾ…!’ ಎನ್ನುತ್ತ ಒಳಗೆ ಕರೆದೊಯ್ದು ಚಾಪೆ ಹಾಸಿ ಅವರನ್ನು ಕುಳ್ಳಿರಿಸಿದಳು. ಕುಡಿಯಲು ನೀರು ತಂದು ಕೊಟ್ಟು ತಾನೂ ತುಸುದೂರದಲ್ಲಿ ಗೋಡೆಗೊರಗಿ ಕುಳಿತಳು.
ದೊಡ್ಡವನು ಮಾತಿಗಾರಂಭಿಸಿ, ‘ನೀವು ಊರು ಬಿಟ್ಟು ಬರುವಾಗ ನಾವಿನ್ನೂ ನಾಲ್ಕೆöÊದು ವರ್ಷದ ಹುಡುಗರಂತೆ. ಅಪ್ಪ, ಅಮ್ಮ ಹೇಳುತ್ತಿದ್ದರು. ಹಾಗಾಗಿ ನಮಗೆ ನಿಮ್ಮ ಗುರುತು ಹತ್ತಲಿಲ್ಲ. ಆದರೆ ನಿಮಗೂ ನಮ್ಮ ಪರಿಚಯವಾಗಲಿಲ್ಲವಾ? ಅಷ್ಟು ಬೇಗ ನಮ್ಮನ್ನೆಲ್ಲ ಮರೆತುಬಿಟ್ಟಿರಾ…!’ ಎಂದು ಯುವಕ ತುಂಟನಗೆ ಬೀರುತ್ತ ಪ್ರಶ್ನಿಸಿದ. ಆಗ ಸರೋಜ ಇಬ್ಬರನ್ನೂ ಆಪಾದಮಸ್ತಕ ದಿಟ್ಟಿಸಿದವಳಿಗೆ ಈ ಹುಡುಗರು ತನ್ನ ಗಂಡ ಮತ್ತು ಅಪ್ಪನನ್ನು ಹೋಲುವಂತೆ ಕಂಡರು. ಮರುಕ್ಷಣ, ‘ಓಹೋ ಇವರು ನನ್ನ ಅಡ್ಡಪಡ್ಪುವಿನ ಕುಟುಂಬದವರು!’ ಎಂದು ಅವಳ ಮನಸ್ಸು ಚೀರಿ ಹೇಳಿತು.
‘ಅಯ್ಯೋ ದೇವರೇ…! ನೀವು ಅಡ್ಡಪಡ್ಪುವಿನಿಂದ ಬಂದವರಲ್ಲವಾ ಮಗಾ…?’ ಎಂದಳು ವಿಸ್ಮಯದಿಂದ.
ಅವರು ಕೂಡಲೇ ‘ಹೌದು!’ ಎಂದು ನಗುತ್ತ ತಲೆಯಾಡಿಸಿದರು.
‘ಅಂದರೆ ನನ್ನ ಮನೆಯಿಂದ ಬಂದವರು! ಓ ದೇವರೇ…! ಈಗ ತಿಳಿಯಿತು. ಹೌದಪ್ಪಾ ಎಲ್ಲಾ ಮರೆತು ಹೋಗಿತ್ತು. ನೀವು ನನ್ನ ಅಣ್ಣನ ಮಕ್ಕಳು ವಸಂತ ಮತ್ತು ಮಹೇಶರಲ್ಲವಾ…?’ ಎಂದವಳಿಗೆ ತಟ್ಟನೆ ಕಣ್ಣೀರು ಬಂದುಬಿಟ್ಟಿತು. ಆಗ ಸೋಜಿಗಗೊಳ್ಳುವ ಸರದಿ ಯುವಕರದ್ದಾಯಿತು. ‘ಅರೆರೇ, ನೀವು ಆಗಬಹುದು ಅತ್ತೇ…! ನಮ್ಮನ್ನು ಮರೆತಿದ್ದರೂ ನಮ್ಮ ಹೆಸರನ್ನಿನ್ನೂ ನೆನಪಿಟ್ಟುಕೊಂಡಿದ್ದೀರಿ!’ ಎಂದು ಖುಷಿಯಿಂದ ನಕ್ಕರು.
‘ಹೌದಪ್ಪಾ ನಾನು ಇವರೊಡನೆ ಹೊರಟು ಬರುವಾಗ ನೀವಿನ್ನೂ ಸಣ್ಣ ಮಕ್ಕಳು. ನಿಮ್ಮನ್ನೆಲ್ಲ ನಾನು ಎತ್ತಿಯಾಡಿಸಿದವಳು ಮಗಾ. ಆ ನೆನಪುಗಳಿನ್ನೂ ಹಾಗೆಯೇ ಉಳಿದಿವೆ. ಹೌದೂ, ಮನೆಯಲ್ಲೆಲ್ಲ ಹೇಗಿದ್ದಾರೆ? ನನ್ನ ಮನೆಯನ್ನು ಹೇಗೆ ಹುಡುಕಿದಿರಿ…?’ ಎಂದವಳಿಗೆ ತನ್ನವರನ್ನು ನೆನೆದು ಕಣ್ಣಾಲಿಗಳು ಮತ್ತೊಮ್ಮೆ ತುಂಬಿದವು. ಸಣ್ಣವನು ಮಹೇಶ ಅತ್ತೆಯ ಸಮೀಪ ಬಂದು ಕುಳಿತು ಅವಳ ಹೆಗಲು ತಬ್ಬಿಕೊಂಡು ಸಂತೈನಿಸಿದ.
‘ನಿಮ್ಮನ್ನು ಹುಡುಕಿದ್ದೊಂದು ದೊಡ್ಡ ಕಥೆ ಅತ್ತೆ! ಕೊನೆಗೆ ಇಲ್ಲಿನ ರಾಬರ್ಟ್ ಪರ್ಬುಗಳ ಮಗ ಹಿಲಾರಿಯಿಂದಾಗಿ ನಿಮ್ಮ ವಿಳಾಸ ಸಿಕ್ಕಿತು. ಅವನು ನಮ್ಮ ಅನಂತೂರಿನ ಕಛೇರಿಯಲ್ಲಿ ಕೆಲಸಕ್ಕಿದ್ದಾನೆ!’ ಎಂದು ವಸಂತ ವಿವರಿಸಿದ.
‘ಮಾವ ಎಲ್ಲಿದ್ದಾರೆ ಅತ್ತೆ?’ ಎಂದ ಮಹೇಶ ಕುತೂಹಲದಿಂದ. ಆಗ ಸರೋಜಾಳ ಮುಖ ಬಾಡಿತು. ಆದರೂ ಸಂಭಾಳಿಸಿಕೊoಡು, ತಾವು ಆವರೆಗೆ ಪಟ್ಟ ಪಡಿಪಾಟಲು ಮತ್ತು ಲಕ್ಷ್ಮಣ ತೀರಿ ಕೊಂಡದ್ದೆಲ್ಲವನ್ನೂ ಮೇಲು ಮೇಲೆ ಅವರಿಗೆ ವಿವರಿಸಿದಳು. ಮಾವನ ಮರಣದ ಸುದ್ದಿಯನ್ನು ಕೇಳಿದ ಯುವಕರಿಬ್ಬರೂ ತುಸುಹೊತ್ತು ಖಿನ್ನರಾಗಿ ಕುಳಿತುಬಿಟ್ಟರು. ಆದರೆ ತಮಗಿಬ್ಬರು ಹೆಣ್ಣು ಮಕ್ಕಳು ಇದ್ದಾರೆಂದು ಸರೋಜ ತಿಳಿಸಿದಾಕ್ಷಣ ಇಬ್ಬರೂ ಮತ್ತೆ ಗೆಲುವಾದರು.
‘ಅತ್ತೇ, ಇಷ್ಟು ವರ್ಷ ನೀವು ನಮ್ಮನ್ನೆಲ್ಲ ಬಿಟ್ಟು ಇಷ್ಟು ದೂರ ಬಂದು ಜೀವನ ನಡೆಸಿದ್ದು ಸಾಕು. ಊರಲ್ಲಿ ಅಜ್ಜ ಅಜ್ಜಿ, ಅಪ್ಪ, ಅಮ್ಮ ಎಲ್ಲರೂ ನಿಮ್ಮನ್ನು ನೆನೆಸಿಕೊಳ್ಳುತ್ತಿದ್ದಾರೆ. ನಿಮ್ಮ ಮೇಲಿನ ಪ್ರೀತಿಯಿನ್ನೂ ಅವರಲ್ಲಿ ಹಾಗೆಯೇ ಇದೆ. ಅವರೆಲ್ಲರ ಒತ್ತಾಯದಿಂದಲೇ ನಾವು ನಿಮ್ಮನ್ನು ಹುಡುಕಿಕೊಂಡು ಬಂದಿರುವುದು! ಅದರೊಂದಿಗೆ ಇನ್ನೊಂದು ಮುಖ್ಯ ವಿಚಾರವೂ ಇದೆ. ನಮ್ಮ ಕುಟುಂಬದ ಜಮೀನು ಪಾಲಾಗುವ ಹಂತಕ್ಕೆ ಬಂದಿದೆ. ದೊಡ್ಡ ಮಾವಂದಿರ ಮಕ್ಕಳೆಲ್ಲ ಓದಿ ಹೊರ ದೇಶಗಳಲ್ಲಿದ್ದಾರೆ. ಆದ್ದರಿಂದ, ‘ತಮಗಿನ್ನು ಬೇಸಾಯ ಮಾಡಿಕೊಂಡಿರಲು ಕೂಡುವುದಿಲ್ಲ. ತಂತಮ್ಮ ಪಾಲಿಗೆ ಬಂದುದನ್ನು ಮಾರಿ ಹೋಗಿ ಮಕ್ಕಳೊಂದಿಗೇ ಇದ್ದು ಬಿಡುತ್ತೇವೆ!’ ಎಂದು ಮಾವಂದಿರು ಒತ್ತಾಯಿಸುತ್ತಿದ್ದಾರೆ. ನಿಮ್ಮ ಪಾಲೂ ಇದೆ. ಪಾಲುಪಟ್ಟಿ ಆಗುವಾಗ ನೀವೂ ಅಲ್ಲಿರಬೇಕಾಗುತ್ತದೆ! ಎಂದು ವಕೀಲರು ತಿಳಿಸಿದ್ದಾರೆ. ಈ ಎಲ್ಲ ವಿಷಯಗಳಿಂದಾಗಿ ನಿಮ್ಮನ್ನು ಹುಡುಕಲು ಕಾರಣ ಸಿಕ್ಕಿತು!’ ಎಂದು ಯುವಕರಿಬ್ಬರೂ ಹುರುಪಿನಿಂದ ಅಂದರು. ಮಧ್ಯಾಹ್ನವಾಗುತ್ತ ಪ್ರಮೀಳಾಳೂ ಬಂದಳು. ತಮ್ಮನ್ನು ಹುಡುಕಿಕೊಂಡು ಸಂಬoಧಿಕರು ಬಂದಿರುವುದು ಮತ್ತವರು ತನ್ನ ತಾಯಿಯ ಅಣ್ಣನ ಮಕ್ಕಳೆಂದಾಗ ಅವಳಿಗಾದ ಸಂತೋಷಕ್ಕೆ ಪಾರವೇ ಇರಲಿಲ್ಲ. ಅವರೊಂದಿಗೆ ಸಂಭ್ರಮದಿoದ ಮಾತಾಡುತ್ತ ಹೀರೆಕಾಯಿ ಪದಾರ್ಥ ಮತ್ತು ಮೊಟ್ಟೆ ದೋಸೆಗಳನ್ನು ತಯಾರಿಸಿ ಇಬ್ಬರಿಗೂ ಪ್ರೀತಿಯಿಂದ ಬಡಿಸಿದಳು. ಊಟವಾದ ಬಳಿಕ ಮಹೇಶ ಮತ್ತು ವಸಂತರು, ‘ಅತ್ತೆ, ಇನ್ನೊಂದು ವಾರದಲ್ಲಿ ಮರಳಿ ಬರುತ್ತೇವೆ. ಅಷ್ಟರಲ್ಲಿ ನಮ್ಮೊಂದಿಗೆ ಬರುವ ತಯಾರಿಯನ್ನು ಮಾಡಿಕೊಳ್ಳಿ!’ ಎಂದು ಹೇಳಿ ಗೆಲುವಿನಿಂದ ಹೊರಟು ಹೋದರು.
ಮಹೇಶ, ವಸಂತರು ಬಂದು ಹೋದ ಮೇಲೆ ಪ್ರಮೀಳಾಳಿಗೆ ತಾನು ಕಂಡ ಕನಸುಗಳೆಲ್ಲ ಬಹಳ ಬೇಗನೇ ನನಸಾಗುವ ಸೂಚನೆ ಕಂಡಿತು. ಅದೇ ಗುಂಗಿನಲ್ಲಿ ಸುಮಾರು ಹೊತ್ತು ಭಾವುಕಳಾಗಿ ಕುಳಿತುಬಿಟ್ಟಳು. ಸರೋಜಾಳಿಗೂ ಹುಟ್ಟೂರಿಗೆ ಮರಳಬೇಕೆಂಬ ಆಸೆಯು ಮರಳಿ ಚಿಗುರಿತು. ಅವಳು ಆ ದಿನ ಬರುವುದರೊಳಗಾಗಿ ತನ್ನ ಆತ್ಮೀಯರಾದ ಲಿಲ್ಲಿಬಾಯಿ, ಜೆಸಿಂತಾಬಾಯಿ, ಆಂಥೋನಿ, ಗ್ರೆಟಾ ಮತ್ತು ಉಳಿದ ನೆರೆಕರೆಯವರಿಗೆಲ್ಲ ಆ ಸಿಹಿಸುದ್ದಿಯನ್ನು ಉತ್ಸಾಹದಿಂದ ತಿಳಿಸುತ್ತ ಎಲ್ಲರಿಗೂ ವಿದಾಯ ಹೇಳುತ್ತ ಬಂದಳು. ವಿಷಯ ತಿಳಿದ ಲಿಲ್ಲಿಬಾಯಿಯೂ ನೆಮ್ಮದಿಪಟ್ಟರು. ಸರೋಜ ಅವರೊಡನೆ, ‘ಮಾರ್ಗರೆಟಾಳಿಗೆ ಪತ್ರ ಬರೆದು, ಶಾರದಾಳಿಗೆ ಅಡ್ಡಪಡ್ಪುವಿನ ವಿಳಾಸ ಕೊಟ್ಟುಬಿಡಿ!’ ಎಂದು ವಿನಂತಿಸಿದಳು. ಬಳಿಕ ಶೆಟ್ಟರ ಬಂಗಲೆಗೆ ಹೋಗಿ ಅವರ ಕಾಲು ಮುಟ್ಟಿ ನಮಸ್ಕರಿಸಿ ಹೊರಡುವುದಾಗಿ ಹೇಳಿ ಗಳಗಳನೇ ಅತ್ತಳು. ಅಷ್ಟು ಕೇಳಿದ ಶೆಟ್ಟರ ಮನಸ್ಸೂ ಕರಗಿತು. ಅವರು ಒಳಗೆ ಹೋಗಿ ಒಂದು ಸಾವಿರ ರೂಪಾಯಿಯನ್ನು ತಂದು ಅವಳು ಬೇಡವೆಂದರೂ ಕೈಗಳಿಗೆ ತುರುಕಿಸಿ ಕಳುಹಿಸಿಕೊಟ್ಟರು.
ವಸಂತ, ಮಹೇಶರು ಒಂದು ವಾರ ಕಳೆದು ಬಂದರು. ಸರೋಜ, ಪ್ರಮೀಳಾಳಿಗೆ ಕೊನೆಯದಾಗಿ ಪ್ರೇಮಾಳಿಂದ ಬೀಳ್ಗೊಳ್ಳುವ ಸಮಯ ಬಂದುಬಿಟ್ಟಿತು. ಸರೋಜಾಳ ಅಗಲುವಿಕೆಯು ಪ್ರೇಮಾಳಲ್ಲಿ ಅತೀವ ನೋವು ತರಿಸಿತ್ತು. ಅವರು ಹೊರಟು ನಿಂತಿದ್ದನ್ನು ಕಂಡವಳು ಮೌನವಾಗಿ ಕಣ್ಣೀರಿಟ್ಟಳು. ಆದರೆ ಕೊನೆಗಾದರೂ ಅವರಿಗೊಂದು ನೆಮ್ಮದಿಯ ಬದುಕು ಸಿಕ್ಕಿತಲ್ಲ! ಎಂದು ಯೋಚಿಸಿ ನೆಮ್ಮದಿಪಟ್ಟಳು. ಆದರೂ ಬಹಳ ಕಾಲ ಆತ್ಮೀಯರಾಗಿ ಜೊತೆಗಿದ್ದ ಜೀವಗಳು ತಟ್ಟನೆ ಹೊರಟು ಹೋಗುತ್ತಿವೆಯಲ್ಲ…? ಎಂದೆನಿಸಿ ತುಸುಹೊತ್ತು ಜಡವಾಗಿ ನಿಂತಳು. ಸರೋಜಾಳೂ ಪ್ರೇಮಾಳ ನೋವನ್ನು ಅರ್ಥೈಸಿಕೊಂಡವಳು ಅವಳನ್ನು ಬಾಚಿ ತಬ್ಬಿಕೊಂಡು ಸಂತೈಸುತ್ತ ತಾನೂ ಅತ್ತಳು. ಕೊನೆಗೆ ಪ್ರೇಮಾಳೇ ಅವಳನ್ನು ಸಮಾಧಾನಿಸಬೇಕಾಯಿತು. ಪ್ರಮೀಳಾ, ಪ್ರೇಮಾಳ ಪಾದಮುಟ್ಟಿ ನಮಸ್ಕರಿಸಿದಳು. ಅಷ್ಟೊತ್ತಿಗೆ, ‘ಅತ್ತೆ ಹೊರಡೋಣವಾ…? ಸ್ವಲ್ಪ ಸಮಯದ ನಂತರ ಮತ್ತೆ ಬಂದು ನಿಮ್ಮವರನ್ನೆಲ್ಲ ಮಾತಾಡಿಸಿಕೊಂಡು ಹೋಗಬಹುದು!’ ಎಂದು ವಸಂತ ನಗುತ್ತ ಅಂದಾಗ ವಾತಾವರಣವು ತಿಳಿಯಾಯಿತು. ಎರಡು ಹೆಣ್ಣು ಜೀವಗಳು ತಮ್ಮ ದುಃಖ ಮತ್ತು ಸಂತೋಷಗಳ ಸಂಮಿಶ್ರಭಾವಗಳನ್ನು ಹೊತ್ತು ಮರಳಿ ತಮ್ಮ ವಂಶವೃಕ್ಷವನ್ನು ಸೇರಿಕೊಳ್ಳಲು ಹೊರಟರು.


ಅಡ್ಡಪಡ್ಪುವಿನಲ್ಲೂ ಸಾಕಷ್ಟು ಬದಲಾವಣೆಗಳು ಘಟಿಸಿದಿದ್ದವು. ಸರೋಜಾಳ ಅಪ್ಪ ವಿಶ್ವನಾಥ ಮತ್ತು ಲಕ್ಷ್ಮಣನ ತಾಯಿ ರತ್ನಕ್ಕ ಇಬ್ಬರೂ ತೀರಿದ್ದರು. ಸರೋಜಾಳ ತಾಯಿ ಚಿನ್ನಕ್ಕ ಮತ್ತು ಲಕ್ಷ್ಮಣನ ಅಪ್ಪ ವಾಸು ಹಾಗೂ ಉಳಿದ ಹಿರಿಯೆಲ್ಲ ಹಣ್ಣುಹಣ್ಣು ಮುದುಕರಾಗಿದ್ದರು. ಅವರು ಹಿಂದಿನದ್ದನ್ನೆಲ್ಲ ಮರೆತಿದ್ದವರಿಗೆ ಸರೋಜ, ಪ್ರಮೀಳಾಳನ್ನು ಕಂಡು ಅತೀವ ಆನಂದವಾಯಿತು. ಅಜ್ಜ ಅಜ್ಜಿಯರನ್ನು ಕಂಡ ಪ್ರಮೀಳಾಳಿಗೆ ಅಪೂರ್ವ ಸಂಪತ್ತು ದೊರಕಿದಷ್ಟು ಖುಷಿಯಾಯಿತು. ಅವಳು ಆ ಹಿರಿಯ ಜೀವಗಳಿಗೆ ಪ್ರೀತಿಯ ಆಸರೆಯಾಗುತ್ತ ಬಾಳಲು ಇಷ್ಟಪಟ್ಟಳು. ಕೊನೆಗೂ ವಿಧಿಯು ಅವಳು ಬಯಸಿದ ಬಾಳನ್ನು ಅವಳಿಗೆ ಕರುಣಿಸಿತು. ಮುಂದಿನ ಆರು ತಿಂಗಳಲ್ಲಿ ಜಮೀನು ಪಾಲಾಯಿತು. ಅದಾದ ಎರಡು ವರ್ಷಗಳ ನಂತರ ಸರೋಜ ಗರ್ಭಕೋಶದ ಕ್ಯಾನ್ಸರ್‌ನಿಂದ ತೀರಿಕೊಂಡಳು. ತಾಯಿಯನ್ನೂ ಕಳೆದುಕೊಂಡ ಪ್ರಮೀಳ ಅಪ್ಪ, ಅಮ್ಮನ ಪಾಲಿಗೆ ಬಂದಿದ್ದ ಕೃಷಿಭೂಮಿಯನ್ನು ಅವರ ನೆನಪಿಗಾಗಿಯೇ ಶ್ರಮಪಟ್ಟು ದುಡಿದು ನಂದನವನವನ್ನಾಗಿಸುವತ್ತ ಕಾರ್ಯಪ್ರವೃತ್ತಳಾದಳು. ಕೂಡು ಕುಟುಂಬದಲ್ಲಿ ಒಂದಾಗಿ ಅಜ್ಜ, ಅಜ್ಜಿ, ಅಣ್ಣತಮ್ಮಂದಿರು ಹಾಗೂ ಪುಟ್ಟ ಮಕ್ಕಳ ಪ್ರೀತಿ, ಸ್ನೇಹವನ್ನು ಪಡೆದ ಅವಳ ಜೀವನದಲ್ಲೊಂದು ಹೊಸ ಅಧ್ಯಾಯವು ಆರಂಭವಾಯಿತು.
(ಮುಂದುವರೆಯುವುದು)

Related posts

ವಿವಶ..

Mumbai News Desk

ವಿವಶ..

Mumbai News Desk

ವಿವಶ….

Mumbai News Desk

ವಿವಶ

Chandrahas

ವಿವಶ ..

Mumbai News Desk

ವಿವಶ…

Mumbai News Desk