ಧಾರವಾಹಿ 54
ಅಶೋಕ ಬಂದು ಹೋದ ನಂತರ ಪ್ರೇಮ ತಾನು ಮರಳಿ ತನ್ನ ತವರಿಗೆ ಹೋಗುವುದೋ ಬೇಡವೋ ಎಂಬ ಗೊಂದಲಕ್ಕೆ ಬಿದ್ದಳು. ಆದರೆ ಮತ್ತೆ ಯೋಚಿಸತೊಡಗಿದಳು. ತಮ್ಮನೀಗ ಬದಲಾಗಿದ್ದಾನೆ. ಅಪ್ಪನೂ ನನ್ನನ್ನು ಹಂಬಲಿಸುತ್ತಲೇ ತೀರಿಕೊಂಡರoತೆ. ಆವತ್ತು ಹೆತ್ತವರನ್ನು ನೋಯಿಸಿ, ಧಿಕ್ಕರಿಸಿ ಬಂದುದರಿoದಲೇ ನಾನು ಇಂಥ ಹೀನಾಯ ಪರಿಸ್ಥಿತಿಯನ್ನು ಎದುರಿಸಬೇಕಾಯಿತೋ ಅಥವಾ ನನ್ನ ಹಣೆಬರಹವೇ ಹೀಗಿತ್ತೋ ಯಾರಿಗೆ ಗೊತ್ತಿತ್ತು? ನನಗೂ ವಯಸ್ಸಾಗುತ್ತ ಬಂತು. ಇನ್ನು ತನ್ನವರನ್ನೆಲ್ಲ ಬಿಟ್ಟು ಪರದೇಸಿಯಂತೆ ಬದುಕುವುದರಲ್ಲೂ ಅರ್ಥವಿಲ್ಲ. ಅದೂ ಅಲ್ಲದೇ ನನಗೆ ರಕ್ತ ಸಂಬoಧಿಗಳು ಬೇಡವಾದರೂ ಹೆತ್ತು ಹೊತ್ತವಳ ನೆಮ್ಮದಿಗಾದರೂ ತಾನು ಹೋಗಲೇಬೇಕು. ಅದರಿಂದ ತನ್ನ ಮಗಳ ಜೀವನಕ್ಕೂ ನೆಲೆಯೊಂದು ಸಿಕ್ಕ ಹಾಗೂ ಆಗುತ್ತದೆ ಎಂದುಕೊoಡವಳು ನಿರಾಳಳಾದಳು. ಇಷ್ಟಾದ ಕೆಲವು ದಿನಗಳ ನಂತರ ಒಂದು ಬೆಳಿಗ್ಗೆ ಅಶೋಕ ದಿಢರ‍್ರನೇ ರಿಕ್ಷಾದಲ್ಲಿ ಅಕ್ಕನ ಶೆಡ್ಡಿನತ್ತ ಬಂದವನು, ‘ಏನಕ್ಕಾ ಇನ್ನೂ ಎಷ್ಟು ಕಾಲಾಂತ ಈ ನರಕದಲ್ಲಿ ಒಬ್ಬಳೇ ಬಿದ್ದು ನರಳುತ್ತ ಆರೋಗ್ಯವನ್ನೂ ಕೆಡಿಸಿಕೊಳ್ಳುತ್ತೀ…? ಇನ್ನು ಸಾಕು ಮಾಡಕ್ಕಾ ನಿನ್ನ ದಮ್ಮಯ್ಯ! ಇನ್ನು ಮುಂದಾದರೂ ನಾವೆಲ್ಲ ಹೊಸ ಜೀವನವನ್ನು ಆರಂಭಿಸುವ. ನಾನೀವತ್ತು ನಿನ್ನನ್ನು ಕರೆದುಕೊಂಡು ಹೋಗಲೆಂದೇ ರಿಕ್ಷಾ ಹಿಡಿದು ಬಂದಿರುವುದು. ನೀನು ಬೇರೇನೂ ಮಾತಾಡದೆ ನಿನಗೆ ಬೇಕಾದ ಮನೆಯ ವಸ್ತುಗಳನ್ನೆಲ್ಲ ಚೀಲಕ್ಕೆ ತುಂಬಿಸುತ್ತಿರು. ಅಷ್ಟರಲ್ಲಿ ನಾನು ಶೆಟ್ಟರಿಗೆ ತಿಳಿಸಿ ಬರುತ್ತೇನೆ!’ ಎಂದು ಕಾಳಜಿಯಿಂದ ಹೇಳಿದಾಗ ಪ್ರೇಮ ಮೌನವಾಗಿ ತಲೆಯಲ್ಲಾಡಿಸುತ್ತ ಒಳಗೆ ಹೋದಳು. ತನ್ನ ಮತ್ತು ಮಗಳ ಒಂದಿಷ್ಟು ಬಟ್ಟೆಬರೆ ಹಾಗೂ ಪಾತ್ರೆಪರಡಿಗಳನ್ನು ಗಂಟುಕಟ್ಟತೊಡಗಿದಳು. ಅತ್ತ ಅಶೋಕ ಶ್ರೀಧರ ಶೆಟ್ಟರ ಬಂಗಲೆಗೆ ಹೋಗಿ ಅವರಿಗೆ ವಿಷಯವನ್ನು ತಿಳಿಸಿದ.
ವಿಷಯ ತಿಳಿದ ಶೆಟ್ಟರಿಗೂ ನೆಮ್ಮದಿಯಾಯಿತು. ಅದಕ್ಕಿಂತಲೂ ಮುಖ್ಯವಾಗಿ ಅವರಿಗೆ ಈ ಕುಡುಕರೆಲ್ಲ ಒಮ್ಮೆ ತನ್ನ ವಠಾರದಿಂದ ತೊಲಗಿದರೆ ಸಾಕಪ್ಪಾ! ಎಂಬoತಾಗಿತ್ತು. ಕಾರಣ ಅವರು ತೋಮ ಮತ್ತು ಲಕ್ಷ್ಮಣರ ಕುಟುಂಬಗಳಿಗೆ ಯಾವ ನಿರೀಕ್ಷೆಯಿಂದ ಮನೆಗಳನ್ನು ಕೊಟ್ಟಿದ್ದರೋ ಅದಕ್ಕೆ ವ್ಯತಿರಿಕ್ತವಾಗಿ ಅವರೆಲ್ಲ ನಡೆದುಕೊಂಡಿದ್ದರು. ಆದರೂ ಅವರನ್ನು ಏಕಾಏಕಿ ಹೊರಗೆ ದಬ್ಬಲು ಶೆಟ್ಟರ ಮನಸ್ಸು ಕೇಳುತ್ತಿರಲಿಲ್ಲ. ಹಾಗಾಗಿ ಅವರು ತಾವಾಗಿ ಯಾವಾಗ ಎದ್ದು ಹೋಗುತ್ತಾರೋ? ಎಂದುಕೊoಡು ಹಲುಬುತ್ತಿದ್ದರು. ಅಲ್ಲದೆ ಆ ಶೆಡ್ಡುಗಳಿಗೆ ಈಗಾಗಲೇ ಘಟ್ಟದ ಮೇಲಿನ ಎರಡು ಬಡ ಕುಟುಂಬಗಳನ್ನು ಕರೆದು ತಂದು ಕುಳ್ಳಿರಿಸುವ ಪ್ರಯತ್ನದಲ್ಲೂ ಇದ್ದರು. ಹಾಗಾಗಿ ಅಶೋಕನ ನಿರ್ಧಾರಕ್ಕೆ ಅವರು ಕೂಡಲೇ ಒಪ್ಪಿ ಅವನನ್ನು ಪ್ರಶಂಸಿಸಿದರು. ಪ್ರೇಮಾಳನ್ನು ಕರೆದು ಅವಳಿಗೂ ಒಂದು ಸಾವಿರ ರೂಪಾಯಿಗಳನ್ನು ಕೊಟ್ಟು ಖುಷಿಯಿಂದ ಕಳುಹಿಸಿದರು.
ಶೆಟ್ಟರ ಶೆಡ್ಡನ್ನು ಬಿಟ್ಟು ಹೊರಡುವಾಗ ಪ್ರೇಮಾಳಿಗೆ ಕಣ್ಣೀರು ಬಂತು. ಅಲ್ಲಿ ಕಳೆದ ಸಿಹಿ ಕಹಿ ನೆನಪುಗಳೆಲ್ಲ ಅವಳನ್ನು ಮುತ್ತಿಕೊಂಡು ಹೃದಯವನ್ನು ಹಿಂಡಿತು. ಎದುರಿನ ಗುಡ್ಡೆಯತ್ತ ದೃಷ್ಟಿ ಹರಿಸಿದವಳಿಗೆ ತೋಮನನ್ನು ದಹನ ಮಾಡಿದ ನೆನಪು ಕೂಡಾ ಕಾಡಿದಾಗ ಮತ್ತಲ್ಲಿ ನಿಲ್ಲಲಾಗದೆ ಧಾವಿಸಿ ಹೋಗಿ ರಿಕ್ಷಾ ಹತ್ತಿದಳು. ರಿಕ್ಷಾ ಹೆಲೆನಾಬಾಯಿಯ ಮನೆಗೆ ತಲುಪಿತು. ಅಶೋಕ ಅಕ್ಕನ ಮನೆಗೆ ಹೋಗುವ ಮೊದಲೇ ಶ್ವೇತಾಳಿಗೆ ತಿಳಿಸಿ ಹೋಗಿದ್ದ. ಆದ್ದರಿಂದ ಅವಳು, ತನ್ನಮ್ಮ ಮತ್ತು ಮಾವ ತನ್ನನ್ನು ಕರೆದೊಯ್ಯಲು ಯಾವಾಗ ಬರುತ್ತಾರೋ..? ಎಂದು ಚಾತಕ ಪಕ್ಷಿಯಂತೆ ಕಾಯುತ್ತಿದ್ದಳು. ಇಂದು ತಾನು ಮೊದಲ ಬಾರಿಗೆ ತನ್ನ ಹೆತ್ತವರ ಮನೆಯನ್ನು ಸೇರಲಿದ್ದೇನೆ. ಇನ್ನು ಮಂದೆ ನನಗೂ ಬಂಧು ಬಳಗದ ಸಾಂಗತ್ಯವು ದೊರೆಯಲಿದೆ ಹಾಗೂ ಇಂದು ತನ್ನ ಮನದಾಸೆಯು ಕೈಗೂಡುವ ದಿನವೆಂಬ ಸಂಭ್ರಮವು ಅವಳ ಮನಸ್ಸನ್ನು ಅರಳಿಸಿತ್ತು. ಅಷ್ಟರಲ್ಲಿ ಆಟೋ ಬಂದು ನಿಂತಿದ್ದನ್ನು ಕಂಡವಳು ರಪ್ಪನೆ ಎದ್ದು ನಿಂತಳು. ಶ್ವೇತಾಳ ಹರುಷವನ್ನು ಕಂಡ ಹೆಲನಾಬಾಯಿ ಮತ್ತವರ ಮೊಮ್ಮಕ್ಕಳ ಕಣ್ಣುಗಳು ತೇವಗೊಂಡವು. ಆದರೆ ಅದನ್ನು ಗಮನಿಸುವ ಸ್ಥಿತಿಯಲ್ಲಿರದ ಶ್ವೇತಾ ಕೂಡಲೇ ಹೋಗಿ ಆಟೋ ಹತ್ತಿ ಬಾಯಮ್ಮನಿಗೂ, ಮಕ್ಕಳಿಗೂ ಸಂತೋಷದಿoದ ಕೈಬೀಸುತ್ತ ಹೊರಟಳು. ಆದರೆ ಸ್ವಲ್ಪ ದೂರ ಬಂದ ನಂತರ ಹೆಲನಾಬಾಯಿಯನ್ನು ನೆನೆದವಳ ಕಣ್ಣುಗಳು ಮಂಜಾದವು. ಮಾವ ಮತ್ತು ಅಮ್ಮನಿಗೆ ತಿಳಿಯದಂತೆ ಕಣ್ಣೀರು ಒರೆಸಿಕೊಂಡಳು. ಸ್ವಲ್ಪಹೊತ್ತಿನಲ್ಲಿ ರಿಕ್ಷಾ ಅಂಗರನ ಮನೆಯೆದುರು ಬಂದು ನಿಂತಿತು. ಅವನ ಹಿಂದಿನ ಎರಡು ನಾಯಿಗಳು ಮುದಿಯಾಗಿ ಸತ್ತಿದ್ದವು. ಅವುಗಳ ಸ್ಥಾನವನ್ನು ಇನ್ನೆರಡು ಮರಿಗಳು ಬಂದು ಅವು ಕೂಡಾ ಬೆಳೆದು ನಿಂತಿದ್ದವು. ರಿಕ್ಷಾದ ಶಬ್ದವು ಅವುಗಳ ಕಿವಿಗೆ ಬೀಳುತ್ತ ಅವು ಎದ್ದು ಬಿದ್ದು ಧಾವಿಸಿ ಬಂದು ಪ್ರೇಮ ಮತ್ತು ಶ್ವೇತಾಳ ಗುರುತು ಹತ್ತದೆ ಜೋರಾಗಿ ಬೊಗಳತೊಡಗಿದವು. ಆದರೆ ಅಶೋಕನ ಗದರಿಸುವಿಕೆಗೆ ತಣ್ಣಗಾದವು.
ತನ್ನ ಮಗಳು ಮತ್ತು ಮೊಮ್ಮಗಳು ಬಂದುದನ್ನು ಜಗುಲಿಯಲ್ಲಿ ಕುಳಿತು ನೋಡುತ್ತಿದ್ದ ದುರ್ಗಕ್ಕನ ಗುಳಿ ಬಿದ್ದ ಕಣ್ಣುಗಳಲ್ಲಿ ಆನಂದಬಾಷ್ಪ ಹರಿಯಿತು. ಪ್ರೇಮ ಅಮ್ಮನನ್ನು ಸಮೀಪಿಸಿದಳು. ಕೆಲವು ಕ್ಷಣ ಇಬ್ಬರ ದೃಷ್ಟಿಗಳೂ ಪ್ರೀತಿಯಿಂದ ಸಂಧಿಸಿದವು. ಆಹೊತ್ತು ಇಬ್ಬರಿಗೂ ಮಾತು ಬೇಡವೆನಿಸಿತು. ಪ್ರೇಮಾಳ ಮುಖದಲ್ಲಿ ನಸುನಗೆ ಮಿಂಚಿತು. ತಾಯಿಯನ್ನು ಬಾಚಿ ತಬ್ಬಿಕೊಂಡಳು. ದುರ್ಗಕ್ಕನೂ ಮಗಳನ್ನಪ್ಪಿ ಅವಳ ತಲೆ, ಬೆನ್ನನ್ನು ಪ್ರೀತಿಯಿಂದ ಸವರಿ ಅಳುತ್ತ, ‘ಕೊನೆಗೂ ನನ್ನ ಉಸಿರು ನಿಲ್ಲುವುದರೊಳಗೆ ಬಂದುಬಿಟ್ಟೆಯಲ್ಲ ಮಗಾ! ಈ ಜೀವಕ್ಕಷ್ಟೇ ಸಾಕು. ಇನ್ನು ನಾನು ಸಾಯುವವರೆಗೆ ನೀನು ಈ ಮನೆ ಬಿಟ್ಟು ಎಲ್ಲೂ ಹೋಗಕೂಡದು!’ ಎಂದು ಆರ್ದ್ರವಾಗಿ ನುಡಿದಳು. ‘ಇಲ್ಲಮ್ಮಾ ಇನ್ನು ಮುಂದೆ ನಿನ್ನನ್ನು ಬಿಟ್ಟು ಎಲ್ಲಿಗೂ ಹೋಗುವುದಿಲ್ಲ!’ ಎಂದಳು ಮಗಳೂ ಆಸ್ಥೆಯಿಂದ. ದುರ್ಗಕ್ಕ ಮೊಮ್ಮಗಳನ್ನು ಹತ್ತಿರ ಕರೆದು ಮುದ್ದಿಸಿದಳು. ಹೊಸ ಅತ್ತೆ ಮತ್ತು ಚೆಂದದ ನಾದಿನಿಯನ್ನು ಕಂಡ ಅಶೋಕನ ಮಕ್ಕಳ ಸಂಭ್ರಮ ಮೇರೆ ಮೀರಿತ್ತು. ಆಗಾಗ ಕಾಯಿಲೆ ಬಿದ್ದು ಮಲಗುತ್ತಿದ್ದ ದುರ್ಗಕ್ಕ ಮಗಳು ಮತ್ತು ಮುದ್ದಿನ ಮೊಮ್ಮಗಳು ಬಂದ ಎರಡೇ ದಿನದಲ್ಲಿ ಚೇತರಿಸಿಕೊಳ್ಳಲಾರಂಭಿಸಿದಳು.
ಅದೊಂದು ಸಹಜ ಸಂಗತಿಯೋ ಅಥವಾ ಕಾಕತಾಳಿಯವೋ ಆವತ್ತು ಪ್ರೇಮ ಮನೆಗೆ ಹಿಂದಿರುಗಿದ ಮೂರನೆಯ ದಿನ ಸುಗ್ಗಿಯ ತಿಂಗಳಲ್ಲಿ ವರ್ಷಾವಧಿ ಜರುಗುವ ಮಾರಿಪೂಜೆಗೆ ಗಂಗರಬೀಡುವು ಸಜ್ಜುಗೊಳ್ಳುತ್ತಿತ್ತು! ಪ್ರೇಮಾಳನ್ನು ಮನೆಗೆ ಕರೆದು ತರುವ ಗಡಿಬಿಡಿಯಲ್ಲಿ ಮುಳುಗಿದ್ದ ಮನೆಮಂದಿಯು ಆ ವಿಷಯವನ್ನು ಮರೆತಿದ್ದರು. ಆದರೀಗ ದುರ್ಗಕ್ಕನಿಗೆ ತಟ್ಟನೆ ನೆನಪಾಗಿ ಮಗನಿಗೆ ತಿಳಿಸಿದಳು. ‘ಓಹೋ ಹೌದಲ್ಲವಾ ಅಮ್ಮಾ…! ಅಕ್ಕನೂ ಬಂದಿದ್ದಾಳೆ. ಈ ಸಲದ ಮಾರಿಪೂಜೆಯನ್ನು ಗಡದ್ದಾಗಿ ಆಚರಿಸುವ!’ ಎಂದ ಅವನು ಹೆಂಡತಿಗೂ ತಿಳಿಸಿ ಮಾರಿಹಬ್ಬದ ತಯಾರಿಯಲ್ಲಿ ತೊಡಗಿದ. ಮಾರಿಪೂಜೆಯ ದಿನವೂ ಬಂತು. ದುರ್ಗಕ್ಕ ಅಂದು ಸಂಜೆ ಸೊಸೆಯೊಂದಿಗೆ ಕೂಡಿ, ನಾಟಿ ಕೋಳಿ ಸಾರಿಗೆ ಕಳೆಕಟ್ಟುವ ಗರಿಮುರಿಯಾದ ಅಕ್ಕಿ ರೊಟ್ಟಿಗಳನ್ನು ತಯಾರಿಸಿದಳು. ಮೀನು ಸಾರು, ಕುಚ್ಚಲಕ್ಕಿ ಅನ್ನ ಮತ್ತು ಕೆಲವು ಬಗೆಯ ತರಕಾರಿ ಪಲ್ಯಗಳು ಹಿಂದಿನoತೆ ಮನೆಯೊಳಗೆಲ್ಲ ಘಮಘಮಿಸಿದವು. ಎರಡು ತಿಂಗಳ ಹಿಂದೆ ಮಾರಿಗೆ ಹರಕೆ ಬಿಟ್ಟಿದ್ದ ದೊಡ್ಡ ಹುಂಜವೊoದನ್ನು ಅಶೋಕ ಬಗಲಿಗೇರಿಸಿದವನು ಹತ್ತರ ವಯಸ್ಸಿನ ತನ್ನ ಮಗ ರಾಕೇಶನನ್ನು ಮೊದಲ ಬಾರಿಗೆ ಮಾರಿಪೂಜೆಗೆ ಕರೆದೊಯ್ದ. ಅಂದು ಪ್ರೇಮ ಹಗಲಲ್ಲಿ ಸ್ವಲ್ಪ ಹೊತ್ತು ಮನೆಗೆಲಸದಲ್ಲಿ ನೆರವಾದ ಬಳಿಕ ಕತ್ತಲಾಗುವವರೆಗೆ ಮಲಗಿ ವಿಶ್ರಾಂತಿ ಪಡೆದಳು. ನಂತರ ಎದ್ದು ಹೊರಗಿನ ಜಗುಲಿಗೆ ಬಂದು ತೋಟವನ್ನು ವೀಕ್ಷಿಸುತ್ತ ಕುಳಿತಳು. ಆಗ ಅವಳ ಸಾರಾಯಿ ಕುಡಿಯುವ ಗೀಳಿಗೆ ಮೆಲ್ಲನೆ ಜೀವ ಬಂತು. ಆ ತುಡಿತವನ್ನು ಕಷ್ಟಪಟ್ಟು ಹತ್ತಿಕ್ಕಿಕೊಂಡವಳಿಗೆ ಸುಮಾರು ವರ್ಷಗಳ ಹಿಂದೆ ತನ್ನ ಬಾಳನ್ನು ಅಲ್ಲೋಲಕಲ್ಲೋಲಗೊಳಿಸಿದ ಅಂದಿನ ಮಾರಿಪೂಜೆಯ ನೆನಪು ಮೆಲ್ಲನೆ ಬಿಚ್ಚಿಕೊಂಡಿತು.
ಹಿಂದೊಮ್ಮೆ ಇದೇ ಸಮಯದಲ್ಲಿಯೇ ಅಲ್ಲವಾ ತೋಮನೆಂಬ ಗಂಡಸಿಗೆ ನನ್ನನ್ನು ನಾನು ಅರ್ಪಿಸಿಕೊಂಡಿದ್ದು. ಆವತ್ತು ಆ ಮನುಷ್ಯ ನನ್ನ ಮೇಲೆ ಅದೆಂಥ ಪ್ರೀತಿ, ಮೋಹವನ್ನು ತೋರಿಸುತ್ತಿದ್ದ. ಅದೆಲ್ಲ ಈಗಲೂ ಒಳಗೆ ಬೆಚ್ಚಗೆ ಕುಳಿತಿದೆಯಲ್ಲ! ಆದರೆ ಅನಂತರ ಏನೆಲ್ಲ ನಡೆದುಹೋಯಿತು. ಇಲ್ಲಿಂದ, ಇದೇ ಮನೆಯಿಂದ ಹೊರಟ ನನ್ನ ಜೀವನ ಪ್ರಯಾಣವು ಎಲ್ಲೆಲ್ಲಿಗೋ ಸಾಗಿ ಮತ್ತೆಲ್ಲಿಗೋ ತಲುಪಿ ಮರಳಿ ಹೇಗೋ ಮುಂದುವರೆದು ಕೊನೆಗೆ ಇಲ್ಲಿಗೇ ಬಂದು ಮುಟ್ಟಿತಲ್ಲ! ಆದರೆ ಹೇಗೆ? ಎಂಥ ಅವಸ್ಥೆಯಲ್ಲಿ…? ಸರ್ವತ್ವವನ್ನೂ ಕಳೆದುಕೊಂಡ ನಿರ್ಗತಿಕಳಾಗಿ ಬಂದು ಕುಳಿತಿದ್ದೇನೆ. ಗಂಡ ಜೀವಂತವಿದ್ದಾಗ ಅವನ ಬಗ್ಗೆ ಜಡವಾಗಿದ್ದ ಮನಸ್ಸು ಇಂದು ಇಲ್ಲಿ ಕುಳಿತು ಯೋಚಿಸುವಾಗ ಅವನ ನೆನಪಿನಲ್ಲಿ ಮೃದುವಾಗಿ ಅರಳುತ್ತಿದೆ ಯಾಕೆ? ಬಹುಶಃ ನಾನವನ ಜೊತೆಯಲ್ಲಿ ಇನ್ನಷ್ಟು ವರ್ಷ ಚೆನ್ನಾಗಿ ಬದುಕಬಹುದಿತ್ತೇನೋ. ಆದರೆ ಯಾಕೆ ಸಾಧ್ಯವಾಗಲಿಲ್ಲ? ಅವನೇ ನನ್ನನ್ನು ಉದಾಸೀನ ಮಾಡಿದನೋ ಅಥವಾ ನಾನೂ ಅದಕ್ಕೆ ಕಾರಣಳಾದೆನೇ…? ಬಹುಶಃ ಇಬ್ಬರದ್ದೂ ತಪ್ಪಿರಬಹುದು. ಒಳ್ಳೆಯದೋ ಕೆಟ್ಟದೋ ದೇವರು ಕೊಟ್ಟ ಜೀವನವನ್ನು ಇಬ್ಬರೂ ಉಮೇದು ಕಳೆದುಕೊಳ್ಳದೆ ಬದುಕುತ್ತಿದ್ದರೆ ಇಂದು ನನಗೆ ಇಂಥ ಪರಿಸ್ಥಿತಿ ಬರುತ್ತಿರಲಿಲ್ಲವೇನೋ. ಗಂಡಸರಿಗೆ ಸಂಸಾರದ ಮೇಲೆ ಹುಟ್ಟುವ ಬೇಜವಾಬ್ದಾರಿತನ ಮತ್ತು ಅಹಂಕಾರ ಬಹುಶಃ ನನ್ನಲ್ಲೂ ಮೂಡಿಬಿಟ್ಟಿತ್ತಾ? ಇದ್ದರೂ ಇರಬಹುದು. ಅದೇ ದುರ್ಗುಣವು ನನ್ನ ಬದುಕನ್ನೂ ಕೆಡಿಸಿರಬೇಕು! ಎಂದುಕೊAಡವಳು ಪಶ್ಚಾತ್ತಾಪದಿಂದ ಮುದುಡಿ ತೋಮನನ್ನು ಹಂಬಲಿಸುತ್ತ ಕಣ್ಣೀರಿಟ್ಟಳು.
ಅವಳು ಹೀಗೆಲ್ಲ ಯೋಚಿಸುತ್ತ ಕುಳಿತು ಸುಮಾರು ಹೊತ್ತಾಗಿರಬಹುದು. ನಾಯಿಗಳೆರಡು ಜೋರಾಗಿ ಬೊಗಳುತ್ತ ಗೇಟಿನತ್ತ ಧಾವಿಸಿದವು. ‘ಹಛಾ! ಹಛಾ…! ಇವುಗಳಿಗೊಂದು ಮನೆಯವರ ಗುರುತೂ ಹತ್ತುವುದಿಲ್ಲವಲ್ಲಪ್ಪಾ ಥೂ!’ ಎಂದು ಅಶೋಕ ಬಯ್ಯುತ್ತ ಬಂದ. ಗಂಡನ ಧ್ವನಿ ಕೇಳಿದ ಸುಮತಿ ಹೊರಗೆ ಬಂದು ಅವನಿಂದ ರುಂಡವಿಲ್ಲದ ಕೋಳಿ ಮತ್ತು ಮಾರಿಯ ಪ್ರಸಾದವನ್ನು ತೆಗೆದುಕೊಂಡವಳ ದೃಷ್ಟಿ ಮಗನ ಮೇಲೆ ಹರಿಯಿತು. ಕೋಳಿ ಕುಯ್ಯುವಾಗ ಮೈಯಿಡೀ ಚಿಮ್ಮಿ ರಕ್ತಮಯವಾಗಿದ್ದ ಅವನನ್ನು ಕಂಡವಳು, ‘ಅಯ್ಯೋ ದೇವರೇ…! ಏನಿದು ಮಾರಾಯ ನಿನ್ನ ಸ್ವರೂಪ…!’ ಎಂದು ಪ್ರೀತಿಯಿಂದ ಆಕ್ಷೇಪಿಸುತ್ತ ಒಳಗೆ ನಡೆದಳು. ರಾಕೇಶ ತುಂಟತನದಿoದ ಕುಣಿಯುತ್ತ ಅಮ್ಮನ ಹಿಂದೆ ಓಡಿದ. ಅಶೋಕನೂ ಕೈಕಾಲು ತೊಳೆದು ಬಂದವನು ಜಗುಲಿಯಲ್ಲಿ ಕುಳಿತಿದ್ದ ಅಕ್ಕನತ್ತ ಮಂದಹಾಸ ಬೀರಿ ಒಳಗೆ ಹೋದ. ಆದರೆ ಮತ್ತೆ ಸ್ವಲ್ಪಹೊತ್ತಿನಲ್ಲಿ ನಾಯಿಗಳು ಮರಳಿ ಬೊಬ್ಬಿಡುತ್ತ ತೋಟದತ್ತ ಧಾವಿಸಿದವು. ಆ ಗಾಢಾಂಧಾಕಾರದಲ್ಲಿ ಅವುಗಳ ಮಂದದೃಷ್ಟಿಗೆ ಅದೇನೋ ಕಾಣಿಸಿರಬೇಕು. ಅದನ್ನು ಕಂಡ ಅವು ಬೆಚ್ಚಿಬಿದ್ದು ಕ್ಞೂಂಯ್‌ಗುಟ್ಟಿ ಬಾಲವಲ್ಲಾಡಿಸುತ್ತ ಕೆಲವು ಹೆಜ್ಜೆಗಳಷ್ಟು ಹಿಮ್ಮುಖವಾಗಿ ಸರಿದು ಒಂದೇ ಉಸಿರಿಗೆ ದೂರಕ್ಕೆ ಓಡಿಹೋಗಿ ಆಕಾಶಕ್ಕೆ ಮುಖ ಮಾಡಿ ವಿಕಾರವಾಗಿ ಊಳಿಡತೊಡಗಿದವು. ನಾಯಿಗಳ ವರ್ತನೆಯನ್ನು ಕಂಡ ಪ್ರೇಮ ಅಚ್ಚರಿಗೊಂಡಳು. ಬಳಿಕ ಏನೋ ನೆನೆದವಳಿಗೆ ಮೆಲ್ಲನೆ ಭಯ ಹುಟ್ಟಿತು. ಅಳುಕುತ್ತ ಎದುರಿನ ದಟ್ಟ ಕತ್ತಲಿಗೆ ದೃಷ್ಟಿಯನ್ನು ನೆಟ್ಟಳು. ಆಗ ನಾಯಿಗಳಿಗೆ ಕಾಣಿಸಿದ ‘ಅದು!’ ಅವಳಿಗೂ ಮಸುಕು ಮಸುಕಾಗಿ ಗೋಚರಿಸಿತು! ಬೆಳ್ಮುಗಿಲ ಬಣ್ಣದ ತೆಳುವಾದ ಮಾನವಾಕೃತಿಯಂತೆ ಕಾಣುತ್ತಿದ್ದ ಆ ಆಕೃತಿಯು ನವಿರಾಗಿ ತೊನೆಯುತ್ತ ಅವಳತ್ತಲೇ ತೇಲಿ ಬರುತ್ತಿತ್ತು. ಆದರೆ ಅದರ ಚಲನೆಯಲ್ಲಿ ಸೌಮ್ಯತೆಯೂ ಆರ್ದ್ರತೆಯೂ ತುಂಬಿತ್ತು. ಪ್ರೇಮ ಒಮ್ಮೆಲೆ ಭಯದಿಂದ ಮರಗಟ್ಟಿದಳಾದರೂ ಅವಳ ಒಳಮನಸ್ಸು ತಟ್ಟನೆ ಅದೇನೆಂದು ಗ್ರಹಿಸಿಬಿಟ್ಟಿತು.
ಆ ಆಕೃತಿಯು ಮೆಲುವಾಗಿ ಪ್ರೇಮಾಳ ಹತ್ತಿರ ಬಂದುದು ಕೆಲವು ಕ್ಷಣ ಅವಳ ಸುತ್ತ ಹೂವಿನಂತೆ ಸುಳಿದಾಡಿತು. ಅವಳು ತನಗರಿವಿಲ್ಲದೆಯೇ ರೋಮಾಂಚನಗೊoಡವಳ ಕಣ್ಣಲ್ಲಿ ನೀರಾಡಿತು. ಅದು ಬಳಿಕ ಅವಳ ಬಗಲಿಗೇ ಒತ್ತಿ ಕುಳಿತಂತೆ ಭಾಸವಾಗಿ ಅವಳ ಮೈಯಿಡೀ ಕಂಪಿಸುತ್ತ ವಿವರಿಸಲಾಗದ ನೋವಿನ ಮಹಾಪೂರವನ್ನು ಹರಿಸಿತು. ‘ಅಯ್ಯೋ ದೇವರೇ…! ನೀವಾ…? ಸತ್ತರೂ ನನ್ನನ್ನು ಬಿಟ್ಟಿಲ್ಲವಾ ನೀವು…!’ ಎಂದು ಕಣ್ಣೀರಿಡುತ್ತ ಗೊಣಗಿದಳು. ಆಗ ಆ ತಣ್ಣಗಿನ ಹೂಗಾಳಿಯು ಅವಳ ದೇಹವನ್ನು ಕೋಮಲವಾಗಿ ಸ್ಪರ್ಶಿಸುತ್ತ ಪ್ರೀತಿಯಿಂದ ಸಂತೈಸುವoಥ ಸಂವೇದನೆಯು ಅವಳಿಗಾಯಿತು. ಅಷ್ಟರಲ್ಲಿ ನಾಯಿಗಳ ಬೊಗಳಾಟವನ್ನು ಕೇಳಿದ ಅಶೋಕ ಹೊರಗೆ ಧಾವಿಸಿದ. ಮರುಕ್ಷಣ ಆ ಹೂಗಾಳಿಯು ಮೆಲ್ಲನೆ ಶೂನ್ಯವಾಯಿತು. ಅಶೋಕನಿಗೆ ತೋಟದ ಹಲಸು ಮತ್ತು ತೆಂಗಿನಕಾಯಿಗಳನ್ನು ಕದಿಯುವ ಕಳ್ಳರ ಕುರಿತು ಅನುಮಾನ. ಹಾಗಾಗಿ ತೋಟವಿಡೀ ಟಾರ್ಚ್ ಬೆಳಕು ಚೆಲ್ಲುತ್ತ ಹುಡುಕಿದ. ಯಾರೂ ಕಾಣಲಿಲ್ಲ. ‘ಹಾಳಾದ ಈ ನಾಯಿಗಳಿಗೆ ಇವತ್ತು ಏನಾಗಿದೆಯಪ್ಪಾ…!’ ಎಂದು ಗೊಣಗುತ್ತ ಅಕ್ಕನ ಸಮೀಪ ಹೋದ. ಅವಳು ಮೌನವಾಗಿ ಅಳುತ್ತಿದ್ದಳು. ಅದನ್ನು ಕಂಡವನ ಮನಸ್ಸು ಮುದುಡಿತು. ಅವಳನ್ನು ಮೆತ್ತಗೆ ಎಬ್ಬಿಸಿಕೊಂಡು ಒಳಗೆ ಕರೆದೊಯ್ದ.
‘ಮಗಾ, ಹಿರಿಯರಿಗೆ ‘ಮಿಸ್ಸೆಲ್’ (ಎಡೆ) ಬಡಿಸಲು ಅಡುಗೆ ತಯಾರಾಯ್ತನಾ…! ಒಂದೈದು ಕುಡಿಯೆಲೆ ಕತ್ತರಿಸಿಕೊಂಡು ಬಾ…!’ ಎಂದು ದುರ್ಗಕ್ಕ ಒಳಗಿನಿಂದ ಅಶೋಕನಿಗೆ ಕೂಗಿ ಹೇಳಿದಳು. ‘ಆಯ್ತಮ್ಮಾ…!’ ಎಂದ ಅವನು ಚಾಕು ಹಿಡಿದು ಅಂಗಳಕ್ಕಿಳಿದ.
‘ಅಮ್ಮಾ ಇವತ್ತಿನಿಂದ ಒಂದೆಲೆ ಹೆಚ್ಚಿಗೆ ಬಡಿಸಿಡು…ಅವರು ಬಂದಿದ್ದಾರೆ!’ ಎಂದು ಯಾವುದೋ ಗುಂಗಿನಲ್ಲಿದ್ದ ಪ್ರೇಮ ತಟ್ಟನೆ ಅಂದಳು. ಅಷ್ಟು ಕೇಳಿದ ದುರ್ಗಕ್ಕಾ ಅವಕ್ಕಾದಳು. ಆದರೆ ಮಗಳ ಮಾತನ್ನು ಬೇರೊಂದು ರೀತಿಯಲ್ಲಿ ಅರ್ಥೈಸಿಕೊಂಡವಳಿಗೆ ತನ್ನ ಗಂಡನ ನೆನಪೂ ಒತ್ತರಿಸಿ ಬಂತು. ಹಾಗಾಗಿ, ‘ಆಯ್ತಮ್ಮಾ…!’ ಎಂದಳು ಗದ್ಗದಿತಳಾಗಿ. ಇತ್ತ ಕತ್ತಲಲ್ಲಿ ಬಾಳೆಯೆಲೆ ಕುಯ್ಯುತ್ತಿದ್ದ ಅಶೋಕ ಅಕ್ಕನ ಮಾತನ್ನು ಕೇಳಿ ತಟಸ್ಥನಾದ. ಆದರೆ ಇನ್ನೇನೋ ಯೋಚಿಸಿದವನು ಸಾವರಿಸಿಕೊಂಡು ಮತ್ತೊಂದು ಕುಡಿಯೆಲೆಯನ್ನೂ ಕತ್ತರಿಸಿ ಒಳಗೆ ತಂದ. ಅದನ್ನು ಕಂಡ ಪ್ರೇಮಾಳ ಮುಖದಲ್ಲಿ ನೆಮ್ಮದಿಯ ಛಾಯೆ ಮಿನುಗಿತು.
(ಮುಂದುವರೆಯುವುದು)
