ಧಾರವಾಹಿ 55
ಅಣ್ಣ ತಾಮಸನು ವಿಷಮ ಜ್ವರದಿಂದ ಸತ್ತ ಸುದ್ದಿಯನ್ನು ಕೇಳಿದ ಹಿಲಾರಿಯು ದುಃಖದಿಂದ ಕುಗ್ಗಿ ಹೋದ. ಆದ್ದರಿಂದ ತನ್ನ ಮನಸ್ತಾಪವನ್ನು ಮರೆತು ಮನೆಗೆ ಧಾವಿಸಿದ. ಆಂಥೋನಿ ಮತ್ತು ಗ್ರೆಟ್ಟಾ ತೀರಾ ಕಂಗೆಟ್ಟಿದ್ದವರಿಗೆ ತಮ್ಮನನ್ನು ಕಂಡು ಮರುಜೀವ ಬಂದoತಾಯಿತು. ಆದರೂ ಅವನೆದುರು ತೋರಿಸಿಕೊಳ್ಳದೆ ಸತ್ತ ತಮ್ಮನ ಶುದ್ಧಕಾರ್ಯದಲ್ಲಿ ನಿರತರಾದರು. ಸಾವಿನ ವಿಧಿಯಾಚರಣೆಗಳೆಲ್ಲ ಮುಗಿದ ಬಳಿಕ ಹಿಲಾರಿಯು ಅಪ್ಪ, ಅಮ್ಮನ್ನು ತನ್ನ ಮನೆಗೆ ಕರೆದೊಯ್ದ. ಇದಾದ ತಿಂಗಳ ನಂತರ ಗಂಗರಬೀಡಿಗೆ ಎಡೆಬಿಡದೆ ನಾಲ್ಕಾರು ಬಾರಿ ಅಬಕಾರಿ ದಾಳಿಯಾಯಿತು. ಕೊನೆಯ ದಾಳಿಯಲ್ಲಿ ಆಂಥೋನಿ ಮತ್ತು ಗ್ರೆಟ್ಟಾ ಮಾಲು ಸಮೇತ ಸಿಕ್ಕಿ ಬಿದ್ದು ಹದಿನೈದು ದಿನಗಳ ಕಾಲ ಜೈಲುವಾಸ ಅನುಭವಿಸಿದರು. ಆ ಹೊಡೆತದಿಂದ ಅವರಿಬ್ಬರೂ ಮತ್ತಷ್ಟು ಜರ್ಝರಿತರಾಗಿಬಿಟ್ಟರು. ಒಂದೆಡೆ ಎಂಥ ಸಮಸ್ಯೆಯಿದ್ದರೂ ಎದುರಿಸಿ ನಿಲ್ಲುವಂಥ ಗಟ್ಟಿಗುಂಡಿಗೆಯ ತಮ್ಮನ ಸಾವು. ಇನ್ನೊಂದೆಡೆ ಅವನನ್ನು ಹಿಂಡಿಹಿಪ್ಪೆ ಮಾಡಿ ಬಲಿ ತೆಗೆದುಕೊಂಡoಥ ಕಾಯಿಲೆಯ ಭೀತಿ, ಮತ್ತೊಂದೆಡೆ ಹೆತ್ತವರೂ ತಮ್ಮನ್ನು ತೊರೆದು ತಮ್ಮನೊಂದಿಗೆ ಹೊರಟು ಹೋದುದೆಲ್ಲವೂ ಅವರನ್ನು ತೀವ್ರ ಅಧೀರತೆಗೆ ತಳ್ಳಿಬಿಟ್ಟಿತು. ಹೀಗಾಗಿ ಒಂದು ಕಾಲದಲ್ಲಿ ಸದಾ ನೆಂಟರಿಷ್ಟರಿoದ ತುಂಬಿ ತುಳುಕುತ್ತ ಸಂತೋಷದ ಹೊನಲು ಹರಿಸುತ್ತಿದ್ದ ರಾಬರ್ಟರ ದೊಡ್ಡ ಮನೆಯಿಂದು ಭಾಗಶಃ ಪಾಳುಬಿದ್ದಿತು. ಈಗ ಅದರೊಳಗೆ ಕಳ್ಳಭಟ್ಟಿ ಸಾರಾಯಿ ವಾಸನೆಯೊಂದನ್ನು ಬಿಟ್ಟರೆ ಪೂಜಾಕೋಣೆಯಲ್ಲಿ ದೀಪ ಹಚ್ಚುವುದೂ ನಿಂತು ಹೋಗಿ ಜೇಡರ ಬಲೆಗಳು ಹೆಣೆಯಲಾರಂಭಿಸಿದ್ದವು. ಹಿಂದೆಲ್ಲ ಅಣ್ಣ ತಮ್ಮಂದಿರ ದರ್ಪ ದಬ್ಬಾಳಿಕೆಗಳಿಗೆ ಹೆದರಿ ಮಣಿದು ಅಷ್ಟಿಷ್ಟು ಬೇಸಾಯ ಮಾಡಿ ತಂದು ಅಂಗಳಕ್ಕೆ ಸುರಿಯುತ್ತಿದ್ದ ನೆರೆಕರೆಯ ಕೂಲಿಯಾಳುಗಳು ಮತ್ತಿತರ ಕೆಲಸದವರೂ ರಾರ್ಬಟರ ಮಕ್ಕಳ ಮೇಲೆ ರೋಸಿ ತಿರುಗಿಬಿದ್ದರು. ಅದರಿಂದಾಗಿ ಕೃಷಿಕಾರ್ಯಗಳೆಲ್ಲ ನಿಂತು ಹೊಲಗದ್ದೆಗಳು ಹಡಿಲು ಬಿದ್ದವು. ಇದೇ ಕಾಲಘಟ್ಟದಲ್ಲಿ ರಾರ್ಬಟರೂ ತೀರಿಕೊಂಡರು. ಇವೆಲ್ಲದರೊಂದಿಗೆ ಆಂಥೋನಿ ಮತ್ತು ಗ್ರೆಟ್ಟಾಳ ಕೊಬ್ಬು, ಅಹಂಕಾರದ ಹುತ್ತಗಳು ಒಡೆದು ಪೂರ್ಣವಾಗಿ ನೆಲಕಚ್ಚಿದವು.
ಇಂಥ ಸಂದರ್ಭವನ್ನೇ ಕಾಯುತ್ತಿದ್ದ ಹಿಲಾರಿಯು ಅಂದು ಮತ್ತೊಮ್ಮೆ ಮನೆಗೆ ಆಗಮಿಸಿದ. ತಮ್ಮನ್ನು ನಿಷ್ಠುರವಾಗಿ ತೊರೆದು ಹೋಗಿದ್ದ ಸಹೋದರನು ಇವತ್ತು ಏಕಾಏಕಿ ಮನೆಗೆ ಬಂದುದನ್ನು ಕಂಡ ಆಂಥೋನಿ ಮತ್ತು ಗ್ರೆಟ್ಟಾ ಅಚ್ಚರಿಗೊಂಡರು. ಆದರೆ ಎಂದೂ ಇಲ್ಲದ ಅಕ್ಕರೆಯಿಂದ ಅವನನ್ನು ಮಾತಾಡಿಸಿದರು. ಏಕೆಂದರೆ ಹಿಲಾರಿ ಆಯ್ದುಕೊಂಡ ಜೀವನವನ್ನು ಅವರು ಒಳಗೊಳಗೇ ಮೆಚ್ಚಿದ್ದರು, ಗೌರವಿಸುತ್ತಿದ್ದರು. ಆದರೆ ಅದನ್ನು ಪ್ರತ್ಯಕ್ಷವಾಗಿ ಒಪ್ಪಿಕೊಳ್ಳಲು ಅವರೊಳಗಿನ ಅಹಂಕಾರ, ಬಿಗುಮಾನಗಳು ಅಲ್ಲಿಯವರೆಗೆ ಬಿಟ್ಟಿರಲಿಲ್ಲ. ಆದರೂ ಈಗೀಗ, ‘ಅವನೇ ಸರಿ!’ ಎಂಬ ನಿರ್ಧಾರಕ್ಕೂ ಪಕ್ಕಾಗುತ್ತ ಬಂದಿದ್ದರು. ಹಿಲಾರಿ ಇಂದು ಅಣ್ಣ, ಅಕ್ಕನೊಂದಿಗೆ ಆತ್ಮೀಯವಾಗಿ ಮಾತನಾಡಿದ. ಅವರ ದುಃಸ್ಥಿತಿಗೆ ಮನಸಾರೆ ಮರುಗಿದ. ಕೊನೆಯಲ್ಲಿ ತಾನು ಬಂದ ವಿಷಯಕ್ಕೆ ಪೀಠಿಕೆ ಹಾಕಿದ.
‘ಅಣ್ಣಾ ಒಂದು ಮಾತು ಕೇಳುತ್ತೇನೆ. ಇಲ್ಲ ಅನ್ನಬಾರದು ನೀನು!’ ಎಂದು ಆಂಥೋನಿಯ ಮುಖ ನೋಡಿದ.
‘ಆಯ್ತು. ಹೇಳು…’ ಎಂದ ಅಣ್ಣ ಗಂಭೀರವಾಗಿ.
‘ನೋಡಣ್ಣಾ ಈವರೆಗೆ ನಮ್ಮ ಜೀವನದಲ್ಲಿ ಏನೇನು ನಡೆಯಬೇಕೆಂದು ವಿಧಿ ನಿಯಮವಿತ್ತೋ ಅದೆಲ್ಲವೂ ಬಹುತೇಕ ನಡೆದು ಹೋಯ್ತು. ಹಾಗಾಗಿ ಆ ಬಗ್ಗೆ ಇನ್ನು ಚಿಂತಿಸಿ ಫಲವಿಲ್ಲ. ಇನ್ನು ಮುಂದೆ ನಡೆಯಬೇಕಾದುದರ ಕುರಿತು ನಾವು ಯೋಚಿಸಬೇಕು. ಅಕ್ಕ ಹೇಗೂ ಮದುವೆ ಬೇಡ ಅಂತ ಕುಳಿತಿದ್ದಾಳೆ. ನೀನಾದರೂ ಆಗಬೇಕು. ನಿಮ್ಮಿಬ್ಬರ ಹೊಸ ಜೀವನವನ್ನು ನೋಡಬೇಕೆಂದು ನನಗೆ ತುಂಬಾ ಆಸೆಯಿದೆ!’ ಎಂದ ಮೃದುವಾಗಿ. ತಮ್ಮನ ಮಾತು ಕೇಳಿದ ಆಂಥೋನಿ ಬೆಚ್ಚಿಬಿದ್ದ! ಏಕೆಂದರೆ ತಾಮಸನ ವಿಷಮ ವೈರಾಣುವಿನ ಸೋಂಕು, ‘ಇತರರಿಗೂ ಹರಡುವ ಸಾಧ್ಯತೆಯಿದೆ. ಜಾಗ್ರತೆಯಾಗಿರಿ!’ ಎಂದು ವೈದ್ಯರು ಹೇಳಿದ್ದ ಸುರಕ್ಷತೆಯ ಮಾಹಿತಿಯು ಅವನೊಳಗೆ ವ್ಯತಿರಿಕ್ತ ಪರಿಣಾಮವನ್ನು ಬೀರಿ ಅಸಹಜ ಭಯ ರೂಪದಲ್ಲಿ ಗಟ್ಟಿಯಾಗಿ ಕುಳಿತಿತ್ತು. ಹಾಗಾಗಿ ತಮ್ಮ ಸಾಯುವವರೆಗೆ ತಾನು ಅವನ ಹತ್ತಿರವೇ ಇದ್ದುದರಿಂದ ಆ ರೋಗವು ತನಗೂ ಸೋಕಿರಬಹುದು ಮತ್ತು ಇಂದಲ್ಲ ನಾಳೆ ಅದು ನಮ್ಮಿಬ್ಬರನ್ನೂ ಬಲಿ ತೆಗೆದುಕೊಳ್ಳಬಹುದು! ಎಂಬ ಬಲವಾದ ಭ್ರಮೆಗೆ ಬಿದ್ದು ತೊಳಲಾಡುತ್ತಿದ್ದ ಅವನು ಅಂದಿನಿoದ ಇದ್ದಬದ್ದ ಜೀವನೋತ್ಸಾಹವನ್ನೂ ಕಳೆದುಕೊಂಡಿದ್ದ. ಹಾಗಾಗಿಯೇ ಈಗ ತಮ್ಮನಾಡಿದ ಮಾತುಗಳು ಅವನಿಗೆ ಸಿಡಿಲೆರಗಿದಂತಾಯಿತು. ಅಲ್ಲದೇ ಈಗ ಸುಮಾರು ನಲವತ್ತರ ಹರೆಯದಲ್ಲಿರುವ ಅವನು ಈವರೆಗೆ ಹೆಣ್ಣಿನ ಸಂಗ ಬೇಕೆನಿಸಿದಾಗೆಲ್ಲ ಸಿಂಗಾರಕೇರಿಯ ಜಾನಕಿಯ ಮನೆಗೋ, ಕೆಲವು ಊಳಿಗದ ಹೆಂಗಸರ ಬಳಿಗೋ ಹೋಗುತ್ತಿದ್ದವನಿಗೆ ಎಲ್ಲರಂತೆ ತಾನೂ ಸಂಸಾರಸ್ಥನಾಗಬೇಕೆoದು ಎಂದೂ ಅನ್ನಿಸಿರಲಿಲ್ಲ. ಹೀಗಿದ್ದವನಿಗೆ ಒಮ್ಮಿಂದೊಮ್ಮೆಲೇ ಸಹೋದರ, ‘ಮದುವೆಯಾಗಣ್ಣಾ!’ ಎನ್ನುತ್ತಿದ್ದಾನೆ! ಎಂದು ಯೋಚಿಸಿದವನು ಏನು ತೋಚದೆ ಮೌನವಾಗಿದ್ದುಬಿಟ್ಟ. ಹಿಲಾರಿ ಮತ್ತೊಮ್ಮೆ ಪ್ರಶ್ನಿಸಿದ. ಆಗ ಅವನಿಗೆ ತನ್ನ ಮೌನ ಮುರಿಯುವುದು ಅನಿವಾರ್ಯವಾಯಿತು.
‘ಆಗಬಹುದು ಮಾರಾಯಾ…! ಆದರೆ ಥಾಮಸ ಹೋದದ್ದು ಎಂಥ ರೋಗದಿಂದ ಅಂತ ನಿನಗೂ ಗೊತ್ತುಂಟಲ್ಲವಾ? ಅದು ಈಗಾಗಲೇ ನಮಗೂ ಸೋಕಿದ್ದರೆ…? ಬಂದವಳ ಬದುಕು ಹಾಳಾಗುವುದೆಲ್ಲ ಬೇಕಾ…?’ ಎಂದ ಅಳುಕಿನಿಂದ. ಅಣ್ಣನ ಮಾತು ಮತ್ತು ಮುಖದಲ್ಲಿ ಕುಣಿಯುತ್ತಿದ್ದ ವಿಚಿತ್ರ ಭಯವನ್ನು ಹಿಲಾರಿಯೂ ಗಮನಿಸಿದ. ಆದರೆ ಅವನು ಇದೆಲ್ಲದರ ಬಗ್ಗೆ ಯೋಚಿಸಿಯೇ ಬಂದಿದ್ದ. ಹಾಗಾಗಿ, ‘ನೋಡಣ್ಣಾ ಆ ರೋಗದ ಬಗ್ಗೆ ನನಗೂ ಸರಿಯಾದ ಮಾಹಿತಿಯಿದೆ. ಅದು ನಿಮಗೆ ಸೋಕಿಲ್ಲ ಅನ್ನುವುದನ್ನು ಧೈರ್ಯವಾಗಿ ಹೇಳಬಲ್ಲೆ. ಆದರೂ ನಾಳೆ ಬೆಳಿಗ್ಗೆ ಇಬ್ಬರೂ ನನ್ನ ಜೊತೆ ಶಿವಕಂಡಿಕೆಗೆ ಬರಬೇಕು. ಮಿಕ್ಕಿದ್ದನ್ನು ನಾನು ನೋಡಿಕೊಳ್ಳುತ್ತೇನೆ!’ ಎಂದು ಹಿಲಾರಿ ಭರವಸೆಯಿಂದ ಹೇಳಿದ. ಆಂಥೋನಿಗೆ ಅವನ ಮಾತು ಅರ್ಥವಾಗಲಿಲ್ಲ. ಆದರೆ ತಮ್ಮ ನಮಗೇನೋ ಒಳಿತು ಮಾಡಲಿದ್ದಾನೆ ಎಂಬುದನ್ನು ಮಾತ್ರ ಅರ್ಥೈಸಿಕೊಂಡ. ಗ್ರೆಟ್ಟಾಳೂ, ‘ಆಯ್ತು ಮಾರಾಯಾ…!’ ಎಂದು ಕಣ್ತುಂಬಿ ಅಂದಳು. ಮರುದಿನ ಇಬ್ಬರೂ ಹಿಲಾರಿಯ ಮನೆಗೆ ಹೋದರು. ಅವನು, ಅವರನ್ನು ಶಿವಕಂಡಿಕೆಯ ಸರಕಾರಿ ಆಸ್ಪತ್ರೆಗೆ ಕರೆದೊಯ್ದ. ಆಂಥೋನಿಗೆ ಮರಳಿ ಭಯ ಶುರುವಾಯಿತು. ‘ಇಲ್ಲಿಗ್ಯಾಕೆ ಬಂದಿದ್ದು ಮಾರಾಯಾ…?’ ಎಂದ ಅಳುಕುತ್ತ. ಗ್ರೆಟ್ಟಾಳೂ ವಿಚಲಿತಳಾದಳು. ಆದರೆ ಅವಳು ಅದಾಗಲೇ ತನ್ನ ಭಾರವನ್ನು ಏಸುವಿನ ಮೇಲೆ ಹೊರಿಸುವುದನ್ನು ಅಭ್ಯಾಸಿಸಿಕೊಂಡಿದ್ದಳು. ಹಾಗಾಗಿ ತಾಳ್ಮೆಯಿಂದಿದ್ದಳು. ಅಣ್ಣನ ಆತಂಕವನ್ನು ಕಂಡ ಹಿಲಾರಿ ಅವನಿಗೆ ಕಣ್ಣಲ್ಲೇ ಸುಮ್ಮನಿರುವಂತೆ ಸೂಚಿಸಿ ವೈದ್ಯರ ಕೋಣೆಗೆ ಕರೆದೊಯ್ದ. ಆಂಥೋನಿ ವೈದ್ಯರನ್ನು ಕಂಡು ಕಕ್ಕಾಬಿಕ್ಕಿಯಾದ. ಇವನು ನಮ್ಮೂರಿನವನು! ಎಂದುಕೊoಡವನಿಗೆ ಏನೋ ನೆನೆದು ಮತ್ತಷ್ಟು ಚಡಪಡಿಕೆಯಾಯಿತು. ಅಣ್ಣನ ವಿಚಲಿತತೆಯನ್ನು ಹಿಲಾರಿಯೂ ಗ್ರಹಿಸಿದ. ‘ಅಣ್ಣ, ಇವರು ಡಾ. ಪ್ರಶಾಂತ್ ಸಾಮಗ ಅಂತ. ನಮ್ಮ ಮಾಧವ ಸಾಮಗರ ಹಿರಿಯ ಮಗ. ನನ್ನ ಕಾಲೇಜ್‌ಮೇಟ್. ಅದಕ್ಕಿಂತಲೂ ಮೇಲಾಗಿ ನನ್ನ ಆತ್ಮೀಯ ಸ್ನೇಹಿತ!’ ಎಂದು ನಗುತ್ತ ಪರಿಚಯಿಸಿದ.
ಮಾಧವ ಸಾಮಗರ ಹೆಸರೆತ್ತುತ್ತಲೇ ಆಂಥೋನಿ ತೀರಾ ಅಶಾಂತನಾದ. ತಾವು ಆವತ್ತು ದಾಂಧಲೆಯೆಬ್ಬಿಸಿದ ಮನೆಯವನೇ ಇವನು! ಛೇ! ಎಂದುಕೊoಡವನು ಮೆತ್ತಗೆ ‘ನಮಸ್ಕಾರ!’ ಎಂದ. ಆದರೆ ಪ್ರಶಾಂತ್‌ನಲ್ಲಿ, ಈ ಅಣ್ಣ ತಮ್ಮಂದಿರು ಆವತ್ತು ತನ್ನ ಮನೆಗೆ ನುಗ್ಗಿ ದೌರ್ಜನ್ಯ ನಡೆಸಿದ ನೋವಾಗಲೀ, ದ್ವೇಷದ ಸಣ್ಣದೊಂದು ಎಳೆಯಾಗಲೀ ಕಾಣಿಸಲಿಲ್ಲ. ಅವನೂ ಪ್ರತಿಯಾಗಿ ನಮಸ್ಕರಿಸಿದವನು, ‘ನೋಡಿ ಆಂಥೋನಿಯವರೇ, ಹಿಲಾರಿ ನನಗೆಲ್ಲ ತಿಳಿಸಿದ್ದಾನೆ. ಆ ಜ್ವರದ ಸೋಂಕು ನಿಮಗಿರಲಿಕ್ಕಿಲ್ಲ. ಇದ್ದಿದ್ದರೆ ಇಷ್ಟರಲ್ಲಿ ಕಾಣಿಸಿಕೊಳ್ಳಬೇಕಿತ್ತು. ಆದರೂ ಸುರಕ್ಷತೆಯ ದೃಷ್ಟಿಯಿಂದ ನೀವಿಬ್ಬರೂ ಕೆಲವು ಟೆಸ್ಟುಗಳನ್ನು ಮಾಡಿಸಿಕೊಳ್ಳುವುದು ಒಳ್ಳೆಯದು!’ ಎಂದ ಗಂಭೀರನಾಗಿ. ಆಗ ಆಂಥೋನಿ ಸ್ವಲ್ಪ ನಿರಾಳನಾದವನು, ‘ಆಯ್ತು ಡಾಕ್ಟೆçÃ!’ ಎಂದ. ಡಾ. ಪ್ರಶಾಂತ್ ಕೂಡಲೇ ನರ್ಸ್ ಒಬ್ಬಳನ್ನು ಕರೆದ. ಅವಳು ಬಂದು ಇಬ್ಬರನ್ನೂ ಪರೀಕ್ಷೆಗೆ ಕರೆದೊಯ್ದಳು. ಸ್ವಲ್ಪಹೊತ್ತಿನಲ್ಲಿ ಪರೀಕ್ಷೆಗಳು ಮುಗಿಯುತ್ತ ಆಂಥೋನಿಗೆ ಮತ್ತೆ ಭಯ ಶುರುವಾಯಿತು. ಅಣ್ಣನ ಚಡಪಡಿಕೆಯನ್ನು ಗಮನಿಸಿದ ಹಿಲಾರಿಯು, ‘ಹೆದರಬೇಡಣ್ಣಾ…! ನಿಮಗೆ ಯಾವ ಕಾಯಿಲೆಯೂ ಇಲ್ಲ. ಕೇವಲ ನಿಮ್ಮ ಸಂಶಯ, ಭಯವನ್ನು ನಿವಾರಿಸಲು ನಾನು ಈ ಪರೀಕ್ಷೆಗಳನ್ನು ಮಾಡಿಸಿರುವುದು. ಇನ್ನು ಹದಿನೈದು ದಿನಗಳಲ್ಲಿ ರಿಪೋರ್ಟು ಬರುತ್ತದೆ. ಅಲ್ಲಿಯವರೆಗೆ ಭಕ್ತಿಯಿಂದ ಏಸುದೇವನನ್ನು ಪ್ರಾರ್ಥಿಸುತ್ತ ಇದ್ದುಬಿಡಿ. ಎಲ್ಲವೂ ಸರಿ ಹೋಗುತ್ತದೆ!’ ಎಂದು ಅಣ್ಣ ಮತ್ತು ಅಕ್ಕನನ್ನು ಪ್ರೀತಿಯಿಂದ ಸಾಂತ್ವನಿಸಿ ಮನೆಗೆ ಕರೆದೊಯ್ದ.
ಆದರೆ ಆಂಥೋನಿ ಮತ್ತು ಗ್ರೆಟ್ಟಾಳ ಆ ಹದಿನೈದು ಹಗಲು, ರಾತ್ರಿಗಳು ಎಂಥ ಯಾತನೆಯಿಂದ ಕಳೆದವು ಎಂಬುದನ್ನು ಅವರೇ ಬಲ್ಲರು! ಅನ್ನಾಹಾರ ಮತ್ತು ನಿದ್ರೆಯನ್ನೂ ಸರಿಯಾಗಿ ಮಾಡದೆ ತಳಮಳಿಸುತ್ತಲೇ ಕಾಲ ಕಳೆದರು. ಕಾರಣ, ತಾಮಸನಿಗೆ ಆ ವ್ಯಾಧಿ ಸೋಕಿದ ಮೇಲೆ ಅವನ ದೇಹದಲ್ಲುಂಟಾದ ಭಯಂಕರ ಬದಲಾವಣೆಗಳು ಮತ್ತು ಕೆಲವು ತಿಂಗಳು ಅವನು ನಾಯಿ, ನರಿಯಂತೆ ನರಳಾಡುತ್ತ ಸತ್ತುಹೋದುದೆಲ್ಲವೂ ಆಂಥೋನಿಯ ಕಣ್ಣಿಗೆ ಕಟ್ಟಿದಂತೆ ಮುನ್ನೆಲೆಗೆ ಬಂದು ಅವನನ್ನು ಪೀಡಿಸುತ್ತಿತ್ತು. ಅದೇ ಕೊರಗಿನಲ್ಲಿ ಅವನು ಅರ್ಧಕ್ಕರ್ಧ ಇಳಿದು ಹೋಗಿದ್ದ. ಇವೆಲ್ಲದರ ನಡುವೆ ಘಟಿಸಿದ ಇನ್ನೊಂದು ವಿಚಿತ್ರವೆಂದರೆ ಈ ಹದಿನೈದು ದಿನಗಳಲ್ಲಿ ಅಕ್ಕ, ತಮ್ಮ ಇಬ್ಬರೂ ಪ್ರತಿನಿತ್ಯ ಬೆಳಗ್ಗೆ ಬೇಗನೆದ್ದು ಶುದ್ಧಾಚಾರ ಮತ್ತು ಭಯಭಕ್ತಿಯಿಂದ ಚರ್ಚಿಗೆ ಹೋಗುತ್ತಿದ್ದುದು! ಚರ್ಚಿನಲ್ಲಿ ಗಂಟೆಗಟ್ಟಲೆ ಏಸುಕ್ರಿಸ್ತನ ಪ್ರತಿಮೆಯೆದುರು ಕುಳಿತು ಕಣ್ಣೀರಿಡುತ್ತ, ‘ಪ್ರಭು…! ತಮ್ಮಿಂದ ತಿಳಿದೋ ತಿಳಿಯದೆಯೋ ಬಹಳಷ್ಟು ಅನಾಚಾರಗಳು ನಡೆದಿವೆ. ದಯವಿಟ್ಟು ಅದನ್ನೆಲ್ಲ ಮನ್ನಿಸಿ ಇಬ್ಬರಿಗೂ ಆರೋಗ್ಯ, ಮನಃಶಾಂತಿಯನ್ನು ಕರುಣಿಸು ದೇವಾ…!’ ಎಂದು ಆ ದಿವ್ಯಶಕ್ತಿಯೊಡನೆ ಆರ್ದ್ರವಾಗಿ ಬೇಡಿಕೊಳ್ಳುತ್ತಿದ್ದರು. ಅಂತೂ ಇಂತೂ ಹದಿನಾಲ್ಕು ದಿನಗಳುರುಳಿ ಕೊನೆಗೂ ಆ ದಿನ ಬಂದುಬಿಟ್ಟಿತು. ಅಂದು ಮುಂಜಾನೆಯೂ ಇಬ್ಬರು ಇಗರ್ಜಿಗೆ ಹೋಗಿ ಪೂಜೆ ಸಲ್ಲಿಸಿ ಬಂದರು. ಇವತ್ತು ತಮ್ಮ ರಿಪೋರ್ಟು ಬರುತ್ತದೆ ಎಂದು ಗೊತ್ತಿತ್ತು. ಆದರೆ ಆ ಕುರಿತು ಅವರ ಭಯದ ಯೋಚನೆಗಳು ಬೇರೆಯೇ ದಾರಿಯಲ್ಲಿ ಸಾಗಿದ್ದವು. ‘ಹೇ, ಜೀಸೆಸ್…! ಕರುಣೆ ತೋರಿಸು ತಂದೇ…! ದಯವಿಟ್ಟು ಇಂದು ಹಿಲಾರಿಯನ್ನು ಇಲ್ಲಿಗೆ ಕಳುಹಿಸಬೇಡ ದೇವಾ…!’ ಎಂದು ಇಬ್ಬರೂ ಬೇಡಿಕೊಳ್ಳುತ್ತಿದ್ದರು. ಆದರೂ ಹಿಲಾರಿ ಬಂದೇಬಿಟ್ಟ. ಜೊತೆಗೆ ಅವನ ಕೈಯಲ್ಲೊಂದು ಹಸುರು ಕಡತ ಮತ್ತು ಸಣ್ಣ ಪೊಟ್ಟಣವೊಂದಿತ್ತು. ಆದರೆ ಆಂಥೋನಿ ತಮ್ಮನನ್ನು ಕಂಡವನು ರಪ್ಪನೆದ್ದು ಒಳಗೆ ನಡೆದುಬಿಟ್ಟ. ಗ್ರೆಟ್ಟಾ ಕುಳಿತಲ್ಲೇ ಮರಗಟ್ಟಿದ್ದಳು. ಒಂದುಕಾಲದಲ್ಲಿ ಹಸಿದ ಹುಲಿಗಳಂತೆ ಆರ್ಭಟಿಸುತ್ತ ಕಂಡ ಕಂಡವರನ್ನೆಲ್ಲ ಹೆದರಿ ಬೆದರಿ ಮನಬಂದoತೆ ಹಿಂಸಿಸುತ್ತ ಬದುಕುತ್ತಿದ್ದ ತನ್ನ ಒಡಹುಟ್ಟಿದವರ ಇಂದಿನ ಅವಸ್ಥೆಯನ್ನು ಕಂಡ ಹಿಲಾರಿಗೆ ಒಂದು ಕಡೆ ವ್ಯಂಗ್ಯದ ನಗುವೊಂದು ಹೊಮ್ಮಿದರೆ ಇನ್ನೊಂದೆಡೆ ನೋವಿನಿಂದ ಮನಸ್ಸು ಹಿಂಡಿತು. ಅವನು ಕೂಡಲೇ ಅಣ್ಣನ ಹಿಂದೆ ಧಾವಿಸಿದ. ಗ್ರೆಟ್ಟಾಳೂ ಬಲವಂತದಿoದ ಎದ್ದು ಅವನನ್ನು ಹಿಂಬಾಲಿಸಿದಳು.
ಆಂಥೋನಿ ತನ್ನ ತಂದೆ ರಾರ್ಬಟರು ಕುಳಿತುಕೊಳ್ಳುತ್ತಿದ್ದ ಆರಾಮ ಕುರ್ಚಿಯ ಮೇಲೆ ಕುಳಿತು ಭಯ, ಜಿಗುಪ್ಸೆಯಿಂದ ಸೂರು ದಿಟ್ಟಿಸುತ್ತಿದ್ದ. ಹಿಲಾರಿಯು ಕಡತವನ್ನು ಅವನೆದುರಿನ ಮೇಜಿನ ಮೇಲಿಟ್ಟ. ಬಳಿಕ ಪೊಟ್ಟಣವನ್ನು ಬಿಚ್ಚಿ ಲಡ್ಡೊಂದನ್ನು ತೆಗೆದು ನಗುತ್ತ ಅಣ್ಣನ ಬಾಯಿಗೆ ತುರುಕಿಸಿದ. ಆಗ ಆಂಥೋನಿಗೆ ವಿಷಯ ಅರ್ಥವಾಯಿತು. ‘ಹೇ… ಜೀಸೆಸ್! ಕೊನೆಗೂ ನನ್ನನ್ನು ಕಾಪಾಡಿದೆಯಪ್ಪಾ…! ನನಗೆ ಆ ರೋಗವಿಲ್ಲ…!’ ಎಂದು ಭಕ್ತಿಯಿಂದ ಅಂದುಕೊoಡವನು ರಪ್ಪನೆದ್ದು ತಮ್ಮನನ್ನು ಬಾಚಿ ತಬ್ಬಿಕೊಂಡು, ‘ಇಂದು ನಿನ್ನಿಂದಾಗಿಯೇ ನಾನೊಂದು ಹೊಸ ಜೀವನ ಪಡೆದೆ ತಮ್ಮಾ…!’ ಎಂದು ಹೇಳಿ ಗಳಗಳನೇ ಅತ್ತುಬಿಟ್ಟ. ಹಿಲಾರಿಯ ಕಣ್ಣಲ್ಲೂ ನೀರಾಡಿತು. ಅವನು ಸೋತೋಷದಿಂದ ಕಣ್ಣೊರೆಸಿಕೊಳ್ಳುತ್ತ ಅಕ್ಕನಿಗೂ ಸಿಹಿ ತಿನ್ನಿಸಿದ.
ಪರಿಸಮಾಪ್ತಿ
ಬೆನ್ನುಡಿ
ಶ್ರೀ ಗುರುರಾಜ್ ಸನಿಲ್ ಅವರೊಬ್ಬ ಖ್ಯಾತ ಉರಗತಜ್ಞ ಮತ್ತು ಸಾಹಿತಿಯಾಗಿ ನಾಡಿನಾದ್ಯಂತ ಪ್ರಸಿದ್ಧರು. ಇವರು ತಮ್ಮ ವಿಶೇಷ ಜೀವನಾನುಭವಗಳಿಂದ ಈವರೆಗೆ ಹತ್ತು ವಿಭಿನ್ನ ಕೃತಿಗಳನ್ನು ಬರೆದು ಕನ್ನಡ ಸಾಹಿತ್ಯಲೋಕಕ್ಕೆ ಮಹತ್ವದ ಕೊಡುಗೆ ನೀಡಿದವರು. ‘ಹಾವು ನಾವು (ಪರಿಷ್ಕೃತ ಮೂರು ಆವೃತ್ತಿಗಳು)’ ‘ದೇವರಹಾವು ನಂಬಿಕೆ, ವಾಸ್ತವ’ ‘ನಾಗಬೀದಿಯೊಳಗಿಂದ’ ‘ಹುತ್ತದ ಸುತ್ತಮುತ್ತ’ ‘ವಿಷಯಾಂತರ’ ‘ಕಮರಿದ ಸತ್ಯಗಳು ಚಿಗುರಿದ ಸುದ್ದಿಗಳು’ ‘ನಾಗಬನವೆಂಬ ಸ್ವರ್ಗೀಯ ತಾಣ’ ಎಂಬ ಕೃತಿಗಳೊಂದಿಗೆ ಕಥೆಗಾರರೂ ಆಗಿ ‘ಗುಡಿ ಮತ್ತು ಬಂಡೆ’ ಕಥಾಸಂಕಲನ ಹಾಗೂ ‘ವಿವಶ’ ಮತ್ತು ‘ಆವರ್ತನ’ ಕಾದಂಬರಿಗಳನ್ನು ಬರೆದು ಕಾದಂಬರಿಕಾರಾಗಿಯೂ ಗುರುತಿಸಿಕೊಂಡಿದ್ದಾರೆ. ‘ಹಾವು ನಾವು’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ 2010ನೇ ಸಾಲಿನ, ‘ಮಧುರಚೆನ್ನ ದತ್ತಿನಿಧಿ ಪುಸ್ತಕ ಪ್ರಶಸ್ತಿ ಲಭಿಸಿದೆ. “ನಾಗಬೀದಿಯೊಳಗಿಂದ” ಕೃತಿಯ ‘ನಮ್ಮ ನಂಬಿಕೆ ನಾಗನಿಗೆ ವರವೇ, ಶಾಪವೇ?’ ಎಂಬ ಮುಖ್ಯ ಲೇಖನವು ಮಂಗಳೂರು ವಿಶ್ವವಿದ್ಯಾನಿಲಯದ 2017ರ ಪ್ರಥಮ ಬಿ. ಕಾಂ. ವಿದ್ಯಾರ್ಥಿಗಳಿಗೆ ಹತ್ತನೆಯ ಪಠ್ಯವಾಗಿದೆ. ಶ್ರೀಯುತರ ಅಧ್ಯಯನ, ಚಿಂತನೆಗಳು ಡಾಕ್ಟರೇಟ್ ಪದವಿಗೆ ಅರ್ಹವಾಗಿರುವಷ್ಟು ಉನ್ನತವಾಗಿರುವುದರಿಂದಲೇ, ‘ಕರುಣಾ ಎನಿಮಲ್ ವೆಲ್ ಫೇರ್ ಅವಾರ್ಡ್(2004)’ ಅರಣ್ಯ ಇಲಾಖೆಯ ‘ಅರಣ್ಯ ಮಿತ್ರ(2013)’ ಕರ್ನಾಟಕ ಕಾರ್ಮಿಕ ವೇದಿಕೆಯ, ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ(2016)’ ಸರಕಾರ ಕೊಡಮಾಡುವ, ‘ಉಡುಪಿಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ(2016), ಸೌತ್ ಕೆನರಾ ಫೋಟೋಗ್ರಾರ‍್ಸ್ ಅಸೋಸೀಯೆಷನ್ ಸಂಸ್ಥೆಯ ‘ಉರಗ ಮಿತ್ರ (2017), ಹೊನ್ನಾವರದ ಕೃಷ್ಣಾನಂದ ಕಾಮತ ಪ್ರತಿಷ್ಠಾನವು ‘ಕೃಷ್ಣಾನಂದ ಕಾಮತ್ ಸಾಹಿತ್ಯ ಪ್ರಶಸ್ತಿ(2018)’ ಹಾಗೂ ಉಡುಪಿಜಿಲ್ಲಾ ವರ್ತಕರ ಹಿತರಕ್ಷಣಾ ವೇದಿಕೆಯು, ‘ಸೇವಾರತ್ನ(2018) ಎಂಬ ಪ್ರಶಸ್ತಿ, ಪುರಸ್ಕಾರಗಳನ್ನು ನೀಡಿ ಗೌರವಿಸಿದೆ.
ಸನಿಲ್ ಅವರ ನಾಲ್ಕು ಕೃತಿಗಳಿಂದ ಆಯ್ದ 18 ಲೇಖನಗಳು ಗೋವಾದ ಲೇಖಕಿ ಡಾ. ಸುಷಮಾ ಆರೂರು ಅವರಿಂದ ಕೊಂಕಣಿ ಭಾಷೆ(ದೇವನಾಗರಿ ಲಿಪಿ)ಗೆ ಅನುವಾದಗೊಂಡು, ‘ಗಜಾಲಿ ಪೊಟಸರ್ಯಾಂಚ್ಯೊ: ಸರ್ಪ ಮೊಗಿಚೆ ಅಣಭವ!’ ಎಂಬ ಕೃತಿಯ ರೂಪದಲ್ಲಿ 2020ರಲ್ಲಿ ಬೆಳಕು ಕಂಡಿದೆ.
ಹಸಿರು ಪರಿಸರದ ಕುರಿತು ಅಪಾರ ಕಾಳಜಿಯಿಂದ ಹುಟ್ಟಿಕೊಂಡ ‘ನಮ್ಮ ಮನೆ ನಮ್ಮ ಮರ’ ಎಂಬ ಅಭಿಯಾನ ತಂಡದ ಮುಖ್ಯ ಸದಸ್ಯರಾಗಿರುವ ಶ್ರೀಯುತರು ಈವರೆಗೆ 15000ಕ್ಕೂ ಮಿಕ್ಕ ಗಿಡಗಳನ್ನು ನೆಟ್ಟು ಬೆಳೆಸಿದ್ದಾರೆ. ಕಳೆದ 38 ವರ್ಷಗಳಿಂದ 26 ಸಾವಿರಕ್ಕೂ ಮಿಕ್ಕ ಹಾವುಗಳನ್ನು ಸಂರಕ್ಷಿಸುತ್ತ ಬಂದ ಸಂದರ್ಭಗಳಲ್ಲಿ ಹದಿಮೂರು ಬಾರಿ ವಿಷದ ಹಾವುಗಳ ಕಡಿತಕ್ಕೂ ಒಳಗಾಗಿ ಒಮ್ಮೆ ಕೆಲವು ದಿನಗಳ ಕಾಲ ‘ಕೋಮಾ’ ಸ್ಥಿತಿಯಲ್ಲಿದ್ದು ಬಂದಿದ್ದರೂ ಧೃತಿಗೆಡದೆ ಪರಿಸರ ಮತ್ತು ಉರಗ ಜೀವಿಗಳ ಕುರಿತು ಜನಜಾಗ್ರತಿ ಮೂಡಿಸುತ್ತ ಪ್ರಸ್ತುತ ಉಡುಪಿಯ ಪುತ್ತೂರಿನಲ್ಲಿ ವಾಸವಿದ್ದಾರೆ.
ಗುರುರಾಜ್ ಸನಿಲ್
‘ಅಕ್ಷಯ ಮನೆ’
ಕೊಲಂಬೆ, ಪುತ್ತೂರು
ಸಂತೇಕಟ್ಟೆ ಅಂಚೆ
ಉಡುಪಿಜಿಲ್ಲೆ-576105. ದೂರವಾಣಿ: 9845083869.