ಗ್ರಾಹಕರ , ಷೇರುದಾರರು, ಸಮಾಜ ಬಾಂಧವರ ಸಹಕಾರದಿಂದ ಆರನೇ ಬಾರಿ ಪ್ರಶಸ್ತಿ ಲಭಿಸಿದೆ: ಉಳ್ತೂರು ಮೋಹನದಾಸ್ ಶೆಟ್ಟಿ
ಮುಂಬಯಿ ಪೆ 10. ಪ್ರತಿ ವರ್ಷ ಅತಿ ಹೆಚ್ಚು ಠೇವಣಿ ಸಂಗ್ರಹಿಸಿದ ಕ್ರೆಡಿಟ್ ಸೊಸೈಟಿಗಳಿಗೆ ನೀಡುವ ಪ್ರತಿಷ್ಠಿತ ಪ್ರಶಸ್ತಿಯಾದ ‘ಬ್ಯಾಂಕೋ ಬ್ಲೂ ರಿಬ್ಬನ್’ ಪ್ರಶಸ್ತಿಯು ಮುಂಬೈ ಮಾತೃಭೂಮಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್‌ನ್ನು ಗುರುತಿಸಿ 2023 – 2024 ರ ಸಾಲಿನ ಠೇವಣಿ ವರ್ಗದ ಅಡಿಯಲ್ಲಿ ಈ ಪ್ರಶಸ್ತಿ ಲಭಿಸಿರುತ್ತದೆ.
ಬ್ಯಾಂಕೋ 1990 ರಲ್ಲಿ ಸ್ಥಾಪಿಸಲಾದ ಏವಿಸ್ ಪಬ್ಲಿಕೇಶನ್‌ನ ಅತ್ಯಂತ ಪ್ರಸಿದ್ಧ ಮತ್ತು ವಿಶ್ವಾಸಾರ್ಹ ಬಿಎಫ್‌ಎಸ್‌ಐ(ಬ್ಯಾಂಕಿಂಗ್, ಹಣಕಾಸು ಸೇವೆಗಳು ಮತ್ತು ವಿಮಾ ವಲಯ) ಪ್ರಕಾಶನ ಬ್ರಾಂಡ್ ಆಗಿದೆ. ‘ಬ್ಯಾಂಕೋ ಬ್ಲೂ ರಿಬ್ಬನ್’ ಎಲ್ಲಾ ಸಹಕಾರಿ ಬ್ಯಾಂಕ್‌ಗಳು ಮತ್ತು ಕ್ರೆಡಿಟ್ ಸೊಸೈಟಿಗಳಿಗೆ ರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ಪ್ರಶಸ್ತಿಯಾಗಿದೆ. ಇಂತಹ ವೇದಿಕೆಯಲ್ಲಿ ಬಂಟ ಸಮಾಜದ ಪ್ರತಿಷ್ಠಿತ ಮಾತೃಭೂಮಿ ಕ್ರೆಡಿಟ್ ಸೊಸೈಟಿಯ ಆರ್ಥಿಕ ಸೇವಾ ಕಾರ್ಯಗಳನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಿ ಅಭಿನಂದಿಸಿದೆ.
ಈ ಹಿಂದೆಯೂ ಮಾತೃಭೂಮಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್‌ಗೆ 5 ಬಾರಿ ಈ ಪ್ರಶಸ್ತಿಯು ಲಭ್ಯವಾಗಿರುವುದಲ್ಲದೆ, ಈ ಬಾರಿಯ ಪ್ರಶಸ್ತಿಯೂ ಸೊಸೈಟಿಯ ಕಿರೀಟಕ್ಕೆ ಮುಕುಟಪ್ರಾಯವಾಗಿ ಲಭಿಸಿದೆ ಎನ್ನುವುದು ಅತ್ಯಂತ ಅಭಿಮಾನದ ವಿಷಯ. ಬ್ಯಾಂಕೊ/ಏವಿಸ್ ಪಬ್ಲಿಕೇಷನ್, ಕೊಲ್ಲಾಪುರ ಮತ್ತು ಗ್ಯಾಲಕ್ಸಿ ಇನ್ಮಾ ಪುಣೆ ಈ ಕಾರ್ಯಕ್ರಮವನ್ನು ಆಯೋಜಿಸಿದೆ. ಪ್ರಶಸ್ತಿ ಪ್ರಧಾನ ಸಮಾರಂಭವು ಜ 30.ರಂದು ಲೋನಾವಾಲಾದ ಆಂಬಿ ವ್ಯಾಲಿ ಸಿಟಿಯಲ್ಲಿ ನಡೆಯಿತು
ಸಹಕಾರಿ ಇಲಾಖೆ ಪುಣೆಯ ಮಾಜಿ ಆಯುಕ್ತರಾದ ಚಂದ್ರಕಾಂತ್ ದಳ್ವಿ ,ಅಶೋಕ್ ನಾಯಕ್ ನಿರ್ದೇಶಕ ಗ್ಯಾಲಕ್ಸಿ ಇನ್ಮಾ ಪುಣೆ ಮತ್ತು ಅವಿನಾಶ್ ಶಿಂತ್ರೆ, ಪ್ರಧಾನ ಸಂಪಾದಕ ಬ್ಯಾಂಕೊ, ಏವಿಸ್ ಪಬ್ಲಿಕೇಶನ್, ಕೊಲ್ಲಾಪುರ ಇವರ ಉಪಸ್ಥಿತಿಯಲ್ಲಿ ಮಾತೃಭೂಮಿ ಕೋ ಆಪರೇಟಿವ್ ಕ್ರೆಡಿಟ್
ಸೊಸೈಟಿಯ ಕ್ರೆಡಿಟ್ ಮತ್ತು ಅಡಮಿನ್ ಮೆನೇಜರ್ ರಮೇಶ್ ಜಿ ಸುವರ್ಣ ಮತ್ತು ರಿಕವರಿ ಮ್ಯಾನೇಜರ್ ಹರೀಶ್ ಟಿ.ಶೆಟ್ಟಿ ಪ್ರಶಸ್ತಿಯನ್ನು ಸ್ವೀಕರಿಸಿದರು.
ಪ್ರಶಸ್ತಿ ಬಂದಿರುವ ಬಗ್ಗೆ ಮಾತೃಭೂಮಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷರಾದ ಉಳ್ತೂರು ಮೋಹನದಾಸ್ ಶೆಟ್ಟಿ ಅವರು ಸೊಸೈಟಿಯ ಪ್ರಗತಿ ಮತ್ತು ಅಭಿವೃದ್ಧಿಗಾಗಿ ಯಾವಾಗಲೂ ಬೆಂಬಲಿಸಿದ ನಮ್ಮ ಎಲ್ಲಾ ಷೇರುದಾರರು, ಠೇವಣಿದಾರರು, ನಿರ್ದೇಶಕರ ಮಂಡಳಿ ಮತ್ತು ಸಲಹಾ ಮಂಡಳಿಯ ಸದಸ್ಯರಿಗೆ ನಾವು ಕೃತಜ್ಞರಾಗಿರುತ್ತೇವೆ ಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಮಾತೃಭೂಮಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಗೆ ಆಡಳಿತ ಮಂಡಳಿ, ನಿರ್ದೇಶಕರ ಮಂಡಳಿ ಮತ್ತು ಸಲಹಾ ಮಂಡಳಿ,ಎಲ್ಲಾ ಮಾಜಿ ಕಾರ್ಯಾಧ್ಯಕ್ಷರು, ಹಾಗೂ ಬಂಟರ ಸಂಘ ಮುಂಬೈಯ ಅಧ್ಯಕ್ಷರಾಗಿರುವ ಪ್ರವೀಣ್ ಭೋಜ ಶೆಟ್ಟಿ ಮತ್ತು ಪದಾಧಿಕಾರಿಗಳು, ಹಾಗೂ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮತ್ತು ಪದಾಧಿಕಾರಿಗಳು, ಬಂಟರ ಸಂಘ ಮುಂಬೈ ಇದರ ಕಾರ್ಯಕಾರಿ ಸಮಿತಿ, ಮಹಿಳಾ ವಿಭಾಗ, ಯುವ ವಿಭಾಗದವರು, ಮಾತೃಭೂಮಿಯ ಎಲ್ಲಾ ಪದಾಧಿಕಾರಿಗಳನ್ನು, ಹಾಗೂ ಸಿಬ್ಬಂದಿ ವರ್ಗವನ್ನು ಅಭಿನಂದಿಸಿದ್ದಾರೆ,