April 1, 2025
ಲೇಖನ

ದೇವಾಡಿಗ ಸಂಘ ಮುಂಬಯಿಯ ಶತಮಾನೋತ್ಸವ: ನಡೆದು ಬಂದ ದಾರಿ, ಒಂದು ಅವಲೋಕನ


ಮುಂಬಯಿ: ಮುಂಬಯಿಯ ಪ್ರಸಿದ್ಧ ಸಂಘ ಸಂಸ್ಥೆಗಳಲ್ಲೊಂದಾದ ದೇವಾಡಿಗ ಸಂಘ ಮುಂಬಯಿಯು ಶತಮಾನೋತ್ಸವ ಆಚರಣೆಯ ಸಂಭ್ರಮದಲ್ಲಿದೆ. ಎಪ್ರಿಲ್ 5 ಮತ್ತು 6ನೇ ತಾರೀಕು 2025ಕ್ಕೆ ಬಹಳ ವಿಜೃಂಭಣೆಯ ಶತಮಾನೋತ್ಸವ ಆಚರಣೆಗಾಗಿ ಭರದ ಪೂರ್ವತಯಾರಿ ನಡೆಸುತ್ತಿದೆ. ಶತಮಾನೋತ್ಸವದ ಆಚರಣಾ ವರ್ಷ ವಿವಿಧ ಕಾರ್ಯಕ್ರಮಗಳ ಸರಮಾಲೆ ನಡೆಯುತ್ತಿದೆ. ಸಂಘದ ಸದಸ್ಯರಲ್ಲಿ ಹುರುಪು. ಶತಮಾನೋತ್ಸವದ ತಯಾರಿ ಭರದಿಂದ ಸಾಗುತ್ತಿದ್ದು, ಕೊನೆಯ ಹಂತಕ್ಕೆ ತಲುಪುತ್ತಿದೆ. ಅದಕ್ಕಾಗಿ ಆಗಾಗ ಸಂಘದ ಪದಾಧಿಕಾರಿಗಳು ಸಂಘದ ಮುಖಂಡರು ಪ್ರಾದೇಶಿಕ ಸಮಿತಿಗಳು ಸೇರಿ ಸಂವಾದ, ಸಮಾಲೋಚನೆ, ಸಮಾಜದ ಇತರ ಸಂಘಗಳೊಂದಿಗೆ ಸಂಪರ್ಕ, ಇತ್ಯಾದಿ ಭರದಿಂದ ಸಾಗುತ್ತಿದ್ದು, ಸಂಘದ ಅಧ್ಯಕ್ಷರಾದ ಶ್ರೀ ಪ್ರವೀಣ್ ಎನ್. ದೇವಾಡಿಗ ಇವರ ಮುಂದಾಳುತ್ವದಲ್ಲಿ ಮತ್ತು ದಕ್ಷ ವ್ಯವಸ್ಥಾಪಕ ಮಂಡಳಿ ಇವರು ಸಂಘದ ಮಾಜಿ ಅಧ್ಯಕ್ಷರು ಹಾಗೂ ವಿಶ್ವ ದೇವಾಡಿಗ ಮಹಾಮಂಡಳದ ಅಧ್ಯಕ್ಷರಾದ ಶ್ರೀ ಧರ್ಮಪಾಲ ಯು. ದೇವಾಡಿಗ ಇವರ ಸಾರಥ್ಯದಲ್ಲಿ, ಸಂಘದ ಚಾಣಕ್ಯರೆಂದೇ ಪ್ರಸಿದ್ಧರಾದ ಶ್ರೀ ಹಿರಿಯಡ್ಕ ಮೋಹನದಾಸ್ ಇವರ ಮಾರ್ಗದರ್ಶನದಲ್ಲಿ ಮತ್ತು ಮಾಜಿ ಅಧ್ಯಕ್ಷರಾದ ಶ್ರೀ ವಾಸು ದೇವಾಡಿಗ, ಶ್ರೀ ರವಿ ಎಸ್. ದೇವಾಡಿಗ ಹಾಗೂ ಸಂಘದ ಸದಸ್ಯರ ಸಹಕಾರದಿಂದ ಸಂಘದ ಶತಮಾನೋತ್ಸವವು ಸದಾ ನೆನಪಿನಲ್ಲಿರುವಂತೆ ಆಚರಿಸಲು ಹರಸಾಹಸಕ್ಕೆ ತೊಡಗಿದ್ದಾರೆ. ಈ ಸಂದರ್ಭದಲ್ಲಿ ಸಂಘದ ಜೊತೆ ಕಾರ್ಯದರ್ಶಿ, ಲೇಖಕ ಮತ್ತು ನ್ಯಾಯವಾದಿ ಶ್ರೀ ಪ್ರಭಾಕರ ದೇವಾಡಿಗರ ಸಂಘದ ನೂರು ವರ್ಷ ನಡೆದು ಬಂದ ದಾರಿಯ ಒಂದು ಸಂಕ್ಷಿಪ್ತ ಹಿನ್ನೋಟ:
ದೇವಾಡಿಗ ಸಮಾಜ: ಅವಿಭಜಿತ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಯ ಅನೇಕ ಸಮಾಜಗಳಲ್ಲಿ ದೇವಾಡಿಗ ಸಮಾಜವೂ ಒಂದು. ದೇವಾಡಿಗ ಸಮಾಜದಲ್ಲಿ ಅನೇಕ ಉಪನಾಮಗಳಿವೆ. ಅದರಲ್ಲಿ ದೇವಾಡಿಗ ಅಲ್ಲದೆ, ಸೇರಿಗಾರ (ಶೇರಿಗಾರ), ಮೊಯಿಲಿ, ಕೋಟದ ಸೇರಿಗಾರ, ರಾವ್ ಮೊದಲಾದ ಉಪನಾಮಗಳಿವೆ. ಪ್ರತೀ ಪಂಗಡಗಳ ಗೋತ್ರಕ್ಕನುಗುಣವಾಗಿ “ಬಳಿ” ಅಥವಾ “ಬರಿ” ಅಥವಾ ನಾಗ ಮೂಲಸ್ಥಾನಕ್ಕನುಗುಣವಾಗಿ ಬೇರೆ ಬೇರೆ ಉಪನಾಮಗಳಿರುತ್ತವೆ. ಅಲ್ಲದೆ ಆಯಾ ಪ್ರದೇಶಕ್ಕೆ ಹೊಂದಿಕೊಂಡು ವಿಭಿನ್ನ ಹೆಸರುಗಳನ್ನು ಹೊಂದಿಕೊಂಡಿರುತ್ತವೆ. ಉದಾಹರಣೆಗೆ, ಈಗಿನ ಕಾಸರ್ಗೋಡ್ ದಕ್ಷಿಣ ಕನ್ನಡದಿಂದ ಮಂಗಳೂರು, ಉಡುಪಿಯ, ಕುಂದಾಪುರ ಮತ್ತು ಕುಂದಾಪುರದಿಂದ ಉತ್ತರ ಕನ್ನಡ ಜಿಲ್ಲೆಯವರೆಗೆ ದೇವಾಡಿಗರ ಸಂಖ್ಯೆ ಬಹಳವಾಗಿದ್ದು, ಅನೇಕ ಉಪನಾಮಗಳಿವೆ.
ಭಾಷೆ: ಜಾತಿಯಲ್ಲಿ ಉಪನಾಮವಿರುವಂತೆ, ಸಮಾಜದ ಜನರ ಆಚಾರ ವಿಚಾರಗಲ್ಲಿಯೂ ಆಯಾ ಪ್ರದೇಶಕ್ಕಾನುಗುಣವಾಗಿ ಅನೇಕ ಬದಲಾವಣೆ ಹೊಂದಿವೆ. ಉದಾಹರಣೆಗೆ, ಕಾಸರ್ಗೋಡ್ ಇದು ಕೇರಳದ ಹದ್ದಿನಲ್ಲಿರುವುದರಿಂದ ಅಲ್ಲಿಯ ತುಳುಭಾಷೆಯ ಸ್ವರದಲ್ಲಿ ಕೇರಳದ ಮಲಯಾಳಂ ಭಾಷೆಯ ಸ್ವರ ಕಾಣಬಹುದು. ಮುಂದೆ ಅದು ಪುತ್ತೂರು, ಸುಳ್ಯ, ಮಂಗಳೂರು ಸಮೀಪಿಸುತ್ತಿದ್ದಂತೆ ಬದಲಾಗುತ್ತದೆ. ಮಂಗಳೂರು ತುಳು ಮತ್ತು ಉಡುಪಿ ತುಳುವಿಗೆ ಉಚ್ಚಾರದ ವ್ಯತ್ಯಾಸವಿದೆ. ಹಾಗಾಗಿ ಉತ್ತರದ ದೇವಾಡಿಗರಿಗೆ ತುಳು ಮಾತನಾಡಲು ಕಷ್ಟವಾಗುತ್ತದೆ ಹಾಗೆಯೇ ದಕ್ಷಿಣದ ದೇವಾಡಿಗರಿಗೆ ಕನ್ನಡ ಮಾತನಾಡಲು ಕಷ್ಟವಾಗುತ್ತದೆ. ಆದರೂ ಕಾಸರಗೋಡಿನಿಂದ ಬಾರ್ಕೂರು ಸೀಮೆಯವರೆಗೆ ತುಳುವರು ಅಧಿಕ ಸಂಖ್ಯೆಯಲ್ಲಿದ್ದಾರೆ.


ಜಾತಿ ಕಸುಬು: ದೇವಾಡಿಗ ಸಮಾಜದವರು ಆರಂಭದಲ್ಲಿ ದೇವಸ್ಥಾನಗಳಲ್ಲಿ ಪೂಜೆ ಮಾಡುವುದು. ಬಳಿಕ, ಅವರು ಆ ಉದ್ಯೋಗದಿಂದ ಹೊರಬಂದು ಅಡಿಪಿನವರು (ದೇವಸ್ಥಾನದ ಒಳಾಂಗಣಗಳ ಸ್ವಚ್ಛತೆ ಕಾಪಾಡುವವರು) ಆದರು. ಅಲ್ಲದೆ ದೇವರ ಪೂಜೆಗೆ ಬೇಕಾಗುವ ಗಂಟೆ, ಪಂಚವಾದ್ಯ, ಅಲ್ಲದೆ ಆಧುನಿಕ ವಾದ್ಯಗಳನ್ನು ಅಧ್ಯಯಿಸಿ ಓಲಗದವರಾದರು. ಆದರೆ ಈಗ ಒಳಗಾದ ಕಸಬನ್ನು ಇತರ ಜಾತಿ ಬಾಂಧವರು ಕೂಡ ಮಾಡುತ್ತಿದ್ದಾರೆ. ಆದರೂ ದೇವಾಲಯಗಳ ಎಲ್ಲ ಪೂಜಾ, ಜಾತ್ರಾ, ಉತ್ಸವಗಳು, ದೇವಾರಾಧನೆ, ದೈವಾರಾಧನೆ, ಭೂತಾರಾಧನೆ, ನಾಗಾರಾಧನೆ ಇತ್ಯಾದಿಗಳಲ್ಲಿ ದೇವಾಡಿಗರ ಒಳಗಕ್ಕೆ ಆದ್ಯತೆ ಇದೆ. ಹೀಗೆ ಓಲಗ, ದೇವಾಡಿಗರ ಜಾತಿ ಕಸುಬು ಎಂದು ಗುರುತಿಸಲಾಯಿತು.
ಮುಂಬಯಿ ಸಂಘದ ಸ್ಥಾಪನೆ: ಹತ್ತೊಂಬತ್ತನೆಯಯ ಶತಮಾನದ ಆರಂಭದಲ್ಲಿ ಅಂದರೆ ಭಾರತದ ಸ್ವಾತಂತ್ರ್ಯದ ಪೂರ್ವದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಜಾತಿ ಬಾಂಧವರು ವ್ಯವಸಾಯ ಮತ್ತು ಜೀವನದ ದಾರಿ ಹುಡುಕುತ್ತಾ ಮುಂಬಯಿ, ಪುಣೆ ಮೊದಲಾದ ಮಹಾನಗರಗಳಿಗೆ ಆಗಮಿಸಿದರು. ಹೋಟೆಲು ಅಂಗಡಿಗಳಲ್ಲಿ ಕೆಲಸ ಮಾಡಿಕೊಂಡು ಬಳಿಕ ತಮ್ಮ ತಮ್ಮ ಸಮಾಜದವರನ್ನು ಕಂಡು ಹಿಡಿದು ಒಬ್ಬರಿಗೊಬ್ಬರು ಪರಸ್ಪರ ಭೇಟಿಮಾಡಿ ಬಳಿಕ ಹೆಚ್ಚೇನೂ ಇಲ್ಲದಿದ್ದರೂ ಜೊತೆಗೂಡಿದವರೆಲ್ಲ ಸೇರಿಕೊಂಡು ಸಂಘಟನಾ ಕ್ರಿಯೆಗಳಲ್ಲಿ ಪಾಲ್ಗೊಂಡರು. ಬಳಿಕ ಕೆಲವು ಮೂಲಭೂತ ಸೌಕರ್ಯವನ್ನು ಹೊಂದಿದ್ದವರು ಮತ್ತು ಅಂದಿನ ಸುಶಿಕ್ಷಿತರೆಂದೆನಿಸಿಕೊಂಡವರು ಸರಕಾರಿ ಕಚೇರಿ, ಬ್ಯಾಂಕುಗಳು, ಬಹುಉದ್ದೇಶಿಯ ದೊಡ್ಡ ದೊಡ್ಡ ಕಂಪೆನಿಗಳಲ್ಲಿ ಉದ್ಯೋಗವನ್ನು ಪಡೆದುಕೊಂಡರು. ಬರುಬರುತ್ತಾ ಈ ಸಂಖ್ಯೆ ಏರಿ ಇಲ್ಲಿಯ ಉದ್ಯೋಗ ಮತ್ತು ರಾತ್ರಿ ಶಾಲೆ ಮತ್ತು ಕಾಲೇಜುಗಳ ಲಾಭ ಪಡೆದು ತಮ್ಮ ತಮ್ಮ ಅಸ್ತಿತ್ವವನ್ನು ಮೆರೆದರು. ಜೊತೆಯಲ್ಲಿ ವಿವಿಧ ಸಮಾಜದವರು ತಮ್ಮ ತಮ್ಮ ಸಮಾಜ ಬಾಂಧವವರನ್ನು ಒಟ್ಟುಗೂಡಿಸುವ ಕೆಲಸ ಮಾಡುತ್ತಾ ಸಂಘ ಸಂಸ್ಥೆಗಳು, ದೇವಾಲಯಗಳು, ದೈವಸ್ಥಾನಗಳು, ಮಠಗಳು, ಕಲೆ, ಕ್ರೀಡಾ ಸಂಸ್ಥೆಗಳು, ಯಕ್ಷಗಾನ ನಾಟಕ ಸಂಸ್ಥೆಗಳು ಸಮಾಜ ಭವನಗಳು ಮೊದಲಾದ ಸಮಾಜಮುಖ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಮುಂದೆ ಸಾಗಿದರು.


ಸಂಘದ ಕಾರ್ಯಾಲಯ: ಮುಂಬಯಿಗೆ ಬಂದವರಲ್ಲಿ ಕೆಲವು ದೇವಾಡಿಗ ಸಮಾಜದವರು ಮುಂಬಯಿಯ ಕೋಟೆ ಪ್ರದೇಶದಲ್ಲಿ ವಾಸ್ತವ್ಯವನ್ನು ಮಾಡಿಕೊಳ್ಳುತ್ತಾ, ತಮ್ಮ ಸಮಾಜ ಬಾಂಧವರನ್ನು ಒಟ್ಟುಗೂಡಿಸುವ ಕೆಲಸವನ್ನು ಆರಂಭಿಸಿದರು. ಅಂಥವರಲ್ಲಿ ಎರ್ಮಾಳ್ ಶ್ರೀ ಕೊರಗಪ್ಪ ಶ್ರೀಯಾನ್ ಮತ್ತು ಮಣ್ಣುಗುಡ್ಡೆ ಶ್ರೀ ಬಾಬು ಡಿ. ದೇವಾಡಿಗ ಇವರು ಮೊದಲಿಗರು.ಇವರೊಂದಿಗೆ ಕೆಲವು ಸಮನಸ್ಕ ದೇವಾಡಿಗರು ಪರಿಚಯಿಸಿ ಒಂದಾಗಿ ತಮ್ಮ ಸಮಾಜದ ಜನರ ಒಳಿತು, ಅವರ ಮಕ್ಕಳ ಭವಿಷ್ಯಕ್ಕಾಗಿ ಅಲ್ಲದೆ ಮುಂಬಯಿಗೆ ಜೀವನ ನಿರ್ವಹಣೆ ನಿಮಿತ್ತ ಬರುವ ಸಮಾಜ ಬಾಂಧವರಿಗೆ ವಾಸ್ತವ್ಯಕ್ಕಾಗಿ ಏನಾದರೂ ಮಾಡಬೇಕೆನ್ನುವ ಹುನ್ನಾರದಿಂದ ದೇವಾಡಿಗ ಸುಧಾರಕ ಸಂಘ ಮುಂಬಯಿ ಎನ್ನುವ ಸಂಸ್ಥೆಯನ್ನು ಎಪ್ರಿಲ್ ೫, ೧೯೨೫ ರಂದು ಮುಂಬಯಿಯ ಕೋಟೆ (ಫೋರ್ಟ್) ಪರಿಸರದ ೧೦೮ನೇ ಬೋರಾ ಬಜಾರ್ ಸ್ಟ್ರೀಟ್ ಇಲ್ಲಿ ಒಂದು ಸಣ್ಣ ಕೊಠಡಿಯಲ್ಲಿ ಆರಂಭಿಸಿದರು. ಜೊತೆಯಲ್ಲಿ ಮುಂಬಯಿ ಪರಿಸರದ ದೇವಾಡಿಗ ಸಮಾಜ ಬಾಂಧವರನ್ನು ಹುಡುಕಿ ಕಂಡು ಹಿಡಿದು ಅವರ ಸದಸ್ಯತ್ವವನ್ನು ಪಡೆದು ಸಂಘವನ್ನು ಬೆಳಗಿಸತೊಡಗಿದರು.
ದೇವಾಡಿಗ ವೀರ ದಳ: ಸಂಘವು ಬೆಳೆದಂತೆ ಸಂಘದಲ್ಲಿ ಅನೇಕ ನೂತನ ಚಟುವಟಿಕೆಗಳು ಗರಿಕೆದರಿಸಲಾರಂಭಿಸಿದವು. ದೇವಾಡಿಗ ವೀರ ದಳ ಎನ್ನುವ ಒಂದು ಸ್ವಯಂ ಸೇವಕ ತಂಡವನ್ನು 1936ರಲ್ಲಿ ಶ್ರೀ ಕೆ.ವಿ. ದೇವಾಡಿಗ ಇವರ ನೇತೃತ್ವದಲ್ಲಿ ಮತ್ತು ನಾಯಕತ್ವದಲ್ಲಿ (ಕ್ಯಾಪ್ಟನ್) ಆರಂಭವಾಯಿತು. ಅದರಲ್ಲಿ ಈರ್ವರು ಮಹಿಳೆಯರೂ ಸೇರಿಕೊಂಡಿದ್ದರು. ಈ ವೀರ ದಳವು ಸಮಾಜ ಬಾಂಧವರಿಗೆ ಸಹಾಯ ಮಾಡುವ ಕೆಲಸ ಮಾಡುತ್ತಿತ್ತು.
ಬಡ ವಿದ್ಯಾರ್ಥಿಗಳಿಗೆ ವಿದ್ಯಾವೇತನ: 1936ರಲ್ಲಿ ಸಂಘದ ಸದಸ್ಯರಲ್ಲಿ ಮತ್ತು ಸಮಾಜಬಾಂಧವರಲ್ಲಿ ಆರ್ಥಿಕವಾಗಿ ಹಿಂದುಳಿದವರ ಮಕ್ಕಳಿಗಾಗಿ ಶೈಕ್ಷಣಿಕ ನೆರವು (ವಿದ್ಯಾರ್ಥಿವೇತನ) ನೀಡುವ ಕಾರ್ಯಕ್ರಮವನ್ನು ಈ ಸಂಘದವರು ಆರಂಭಿಸಿದರು. ಅಲ್ಲದೆ ಬಡ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ಸಾಲ ಕೊಡುವ ಕೆಲಸವನ್ನೂ ಆರಂಭಗೊಳಿಸಿದರು.
ವಿವಿಧ ಸದಸ್ಯತ್ವದ ಆರಂಭ; ಸಂಘದ ಸದಸ್ಯರ ಆರ್ಥಿಕ ಪರಿಸ್ಥಿತಿಯನ್ನು ಮನಗೊಂಡು ಮತ್ತು ಸಂಘದ ಆರ್ಥಿಕ ಬಲ ಹೆಚ್ಚಿಸಲು ಸಂಘದ ಸದಸ್ಯತ್ವದಲ್ಲಿ ಹೊಸ ಬದಲಾವಣೆಯನ್ನು ಆರಂಭಿಸಲಾಯಿತು. ಕೇವಲ ಸಾಮಾನ್ಯ ಸದಸ್ಯತ್ವವನ್ನು ಹೊಂದಿರುವ ಈ ದೇವಾಡಿಗ ಸುಧಾರಕ ಸಂಘ ಮುಂಬಯಿ, ಅಜೀವ ಸದಸ್ಯರ ಮೊದಲ ಬ್ಯಾಚು (ಗುಂಪು) 1942ರಲ್ಲಿ ಆರಂಭಿಸಿ ಇದರಲ್ಲಿ ಶ್ರೀ ಎಮ್. ವಿ. ಉಳ್ಳಾಲ್ ಮತ್ತು ಶ್ರೀ ಎಂ. ರಾಮ ಮೇಸ್ತ್ರಿ ಇವರು ಮೊದಲ ಅಜೀವ ಸದಸ್ಯರಾದರು.. ಇವರೆಲ್ಲರ ನೇತೃತ್ವದಲ್ಲಿ ಸಂಘವು ಇನ್ನೂ ಹೆಚ್ಚಿನ ಸದಸ್ಯತ್ವವನ್ನು ಪಡೆದು ಪ್ರಗತಿಪಥದಲ್ಲಿ ಸಾಗಿತು.
ಪೋಷಕ ಸದಸ್ಯತ್ವ: ಸಂಘದ ಬೆಳವಣಿಗೆಯೊಂದಿಗೆ ಸಂಘದ ಸದಸ್ಯತ್ವ ನೋಂದಣಿಯಲ್ಲಿಯೂ ಬದಲಾವಣೆ ತಂದು ಸಂಘಕ್ಕೆ ಹೆಚ್ಚಿನ ಆದಾಯ ಒಟ್ಟುಗೂಡಿಸುವ ನೆಪದಲ್ಲಿ ಕೆಲವು ಸಂಪನ್ಮೂಲ ವ್ಯಕ್ತಿಗಳಿಂದ ಪೋಷಕ (ಪೇಟ್ರನ್) ಸದಸ್ಯರನ್ನು ಪಡೆಯಲು ಸಂಘವು ನಿಶ್ಚಯಿಸಿತು. ಅದರಂತೆ, ಉಳ್ಳೂರು ಕಾಂತಪ್ಪ ದೇವಾಡಿಗ ಇವರು 1946ರಲ್ಲಿ ಪ್ರಥಮ ಪೋಷಕ ಸದಸ್ಯರಾಗಿ ಸಂಘಕ್ಕೆ ಸೇರಿಕೊಂಡರು.


ಸಂಘದ ನೋಂದಣಿ: ಸಂಘ ನೋಂದಣಿ ಆದರೆ ಸಂಘಕ್ಕೆ ಇನ್ನಷ್ಟೂ ಬಲ ಬರುವುದು ಎನ್ನುವ ದೂರಾಲೋಚನೆಯಿಂದ ದಿನಾಂಕ 13ನೇ ಮಾರ್ಚ್ 1948ರಲ್ಲಿ ಶ್ರೀ ಎಲ್. ಬಿ. ಉಳ್ಳಾಲ್ ಇವರ ಅಧ್ಯಕ್ಷತೆಯಲ್ಲಿ ದೇವಾಡಿಗ ಸುಧಾರಕ ಸಂಘ ಮುಂಬಯಿ ಇದನ್ನು ಸೊಸೈಟಿ ರಿಜಿಸ್ಟ್ರೇಷನ್ ಆಕ್ಟ್ ಮತ್ತು ಬಾಂಬೇ ಪಬ್ಲಿಕ್ ಟ್ರಸ್ಟ್ ಆಕ್ಟ್ 1908 ಈ ಕಾಯಿದೆಯ ಅಡಿಯಲ್ಲಿ ನೋಂದಾಯಿಸಲಾಯಿತು (ರಿಜಿಸ್ಟ್ರೇಷನ್). ಸದಸ್ಯರ ಮಕ್ಕಳ ಶಿಕ್ಷಣಕ್ಕಾಗಿ ಹೆಚ್ಚಿನ ಪ್ರೋತ್ಸಾಹ, ವಿದ್ಯಾರ್ಥಿವೇತನ, ಸದಸ್ಯರಲ್ಲಿ ಕ್ರೀಡೆ ಮತ್ತು ಸಾಂಸ್ಕ್ರತಿಕ ಬೆಳವಣಿಗೆ ಮತ್ತು ಹೆಚ್ಚಿನ ಚಟುವಟಿಕೆಗಳು, ಸದಸ್ಯರಲ್ಲಿ ಸಮಾನ ಬಾಂಧವ್ಯ, ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆ, ಸಮಾಜ ಬಾಂಧವರ ಪ್ರಗತಿ ಮತ್ತು ವಿಕಾಸ ಈ ಎಲ್ಲಾ ಧೋರಣೆಗಳನ್ನು ಸಂಘವು ಮೈಗೂಡಿಸಿಕೊಂಡು ಮುಂದೆ ಸಾಗುವುದು ಅಂದಿನ ಸಂಘದ ನೋಂದಣಿಯ (ರಿಜಿಸ್ಟ್ರೇಷನ್) ಉದ್ದೇಶವಾಗಿತ್ತು.
ಸಂಘದ ಬೆಳ್ಳಿಹಬ್ಬ: ಸಂಘವು ಹೆಚ್ಚಿನ ಬೆಳವಣಿಗೆಯನ್ನು ಮಾಡುತ್ತಾ, ಸಮಾಜ ಬಾಂಧವರನ್ನು ಒಟ್ಟುಗೂಡಿಸುತ್ತಾ ಮುಂದೆ ಸಾಗುತ್ತಿತ್ತು ಮತ್ತು ಶ್ರೀ ಎಂ. ವೆಂಕಟ ರಾವ್ ಇವರ ಅಧ್ಯಕ್ಷತೆಯಲ್ಲಿ 1950ರಲ್ಲಿ ಸಂಘವು ರಜತ ಮಹೋತ್ಸವ (ಸಿಲ್ವರ್ ಜ್ಯುಬಿಲೀ) ಆಚರಿಸಿತು. ಆ ಸಮಯದಲ್ಲಿ ಸಂಘದ ವೀರ ದಳವು ಶ್ರೀ ಕೆ.ವಿ. ದೇವಾಡಿಗ ಮತ್ತು ಎಂ. ವೆಂಕಟ್ರಾವ್ ಇವರ ದಕ್ಷ ಮಾರ್ಗದರ್ಶನ ಮತ್ತು ನೇತೃತ್ವದಲ್ಲಿ ಬಹಳ ಸಕ್ರಿಯವಾಗಿತ್ತು.
ಸಂಘದ ಮುಖ್ಯ ಕಾರ್ಯಾಲಯ: ಇದುವರೆಗೂ ಕೋಟೆಯ ಅದೇ ಒಂದು 108ನೇ ಬೋರಾ ಬಜಾರ್ ಸ್ಟ್ರೀಟ್ ಇಲ್ಲಿ ಸಣ್ಣ ಕೊಠಡಿಯಲ್ಲಿ ತನ್ನ ಚಟುವಟಿಕೆ ನಡೆಸುತ್ತಿದ್ದ ಸಂಘವು ತನ್ನ ಬೆಳವಣಿಗೆ ಮತ್ತು ಸದಸ್ಯರ ಸಂಖ್ಯೆಯಲ್ಲಿ ಬೆಳವಣಿಗೆಯನ್ನು ಕಂಡುಕೊಂಡು ಇನ್ನೂ ಹೆಚ್ಚಿನ ವಿಶಾಲ ಕಾರ್ಯಾಲಯದ ಸ್ಥಳಕ್ಕಾಗಿ ಹುಡುಕಾಟ ನಡೆಸಿ ಕೊನೆಗೆ ಮುಂಬಯಿ ದಾದರ್ ಪೂರ್ವದ ದಾದಾಸಾಹೇಬ್ ಫಾಲ್ಕೆ ರೋಡ್ ಇಲ್ಲಿಯ 70-A, ಸಿದ್ದಿಕ್ ಕಟ್ಟಡದ ಮೊದಲನೇ ಮಹಡಿಯಲ್ಲಿ ಒಂದು ಕೊಠಡಿಯನ್ನು ಬಾಡಿಗೆಗೆ ಪಡೆದು ಶ್ರೀ ಮೋನಪ್ಪ ಎ. ದೇವಾಡಿಗ, ಸಂಕಪ್ಪ ಸಿದ್ದು ಮೊಯ್ಲಿ ಮತ್ತು ಶ್ರೀ ಪಿ.ಆರ್. ಮೊಯ್ಲಿ ಇವರ ನೇತೃತ್ವದಲ್ಲಿ ಮತ್ತು ಸದಸ್ಯರ ಸಹಕಾರದಿಂದ ಉಪ ಕಾರ್ಯಾಲಯವನ್ನು 1957ರಲ್ಲಿ ಪ್ರಾರಂಭಿಸಲಾಯಿತು. ಈ ಬಾಡಿಗೆ ಕಾರ್ಯಾಲಯದ ಬಾಡಿಗೆ ಹಕ್ಕನ್ನು ಸಂಘದ ಹೆಸರಿನಲ್ಲಿ ಸಾಮಾನ್ಯ ಬಾಡಿಗೆಪಡೆದು ಹಸ್ತಾಂತರಿಸಾಯಿತು. ಈ ಕಾರ್ಯಾಲಯದಲ್ಲಿ ಸಂಘದ ಚಟುವಟಿಕೆಗಳು, ಉಚಿತ ಗ್ರಂಥಾಲಯ ಮತ್ತು ನಿರಾಶ್ರಿತ ಸದಸ್ಯರ ವಾಸ್ತವ್ಯದ ವ್ಯವಸ್ಥೆ ಹೊಂದಿದ್ದವು. ಉಚಿತ ಗ್ರಂಥಾಲಯವು ಫೋರ್ಟ್ ಕಾರ್ಯಾಲಯದಲ್ಲಿಯೂ ಮುಂದುವರಿಯುತ್ತಿತ್ತು.
ಫಸ್ಟ್ ಏಡ್ ಸರ್ವಿಸ್ : ಕ್ರಿ.ಶ. 1955 ರ ಸುಮಾರಿಗೆ ಶ್ರೀ ಪಿ. ರಾಮಯ್ಯ ದೇವಾಡಿಗ ಇವರು ಸಂಘದಲ್ಲಿ ಸಕ್ರಿಯವಾಗಿದ್ದು ಮುಂಬಯಿಗೆ ಬರುತ್ತಿರುವ ದೇವಾಡಿಗ ಭಾಂಧವರನ್ನು ಕಂಡು ಹುಡುಕಿ ಅವರನ್ನು ಸಂಘಕ್ಕೆ ಸದಸ್ಯರನ್ನಾಗಿ ಸೇರಿಸಿಕೊಳ್ಳುತ್ತಿದ್ದರು. ಇಸವಿ 1955ರಲ್ಲಿ, ಶ್ರೀಮತಿ ಮತ್ತು ಶ್ರೀ ಸುರೇಶ್ ಕೆ. ಪಾಲಿಮಾರ್ ಇವರು ಶ್ರೀ ಪ್ರಕಾಶ್ ಮೆಮೋರಿಯಲ್ ಫಸ್ಟ್ ಏಡ್ ಸರ್ವಿಸ್ ಸ್ಥಾಪಿಸಿದರು ಮತ್ತು ಇದನ್ನು ಅಂದಿನ ಮುಂಬಯಿ ಸರಕಾರದ ಉಪಮಂತ್ರಿ ಶ್ರೀ ಬಿ.ಡಿ. ಜತ್ತಿ ಇವರು ಉದ್ಘಾಟಿಸಿದರು.
ಸಂಘದ ಕ್ರೀಡಾ ಸಮಿತಿ: ಸಂಘದ ಸದಸ್ಯರಲ್ಲಿ ಕ್ರೀಡೆ ಮತ್ತು ಆಟೋಟದ ಹವ್ಯಾಸವನ್ನು ಬೆಳೆಸುವ ಉದ್ದೇಶದಿಂದ ಶ್ರೀ ಪಿ.ಆರ್. ಮೊಯ್ಲಿ ಇವರ ಅಧ್ಯಕ್ಷತೆಯಲ್ಲಿ ೪ ಡಿಸೆಂಬರ್ ೧೯೫೯ ರಂದು ಸಂಘದಲ್ಲಿ ಕ್ರೀಡಾ ಸಮಿತಿಯನ್ನು ಸ್ಥಾಪಿಸಲಾಯಿತು. ಶ್ರೀ ಎನ್. ಪಿ. ಸಾಲಿಯಾನ್ ಇವರು ಈ ಕ್ರೀಡಾ ಸಮಿತಿಯ ನೇತೃತ್ವ ವಹಿಸಿದ್ದರು. ಶ್ರೀ ಎಸ್. ರಾಮರಾವ್, ಶ್ರೀ ಕೆ.ಜಿ. ಉದ್ಯಾವರ್ ಮೊದಲಾದವರು ಸಂಘದಲ್ಲಿ ಕ್ರೀಡೆಗೆ ಮಹತ್ವ ನೀಡಿದರು. ತದನಂತರದಲ್ಲಿ ಪ್ರತಿವರ್ಷವೂ ತಪ್ಪದೆ ಕ್ರೀಡಾಮಹೋತ್ಸವವನ್ನು ಆಯೋಜಿಸುತ್ತಿದ್ದರು.
ಸಂಘದ ವಿಭಾಗೀಯ ಸಮಿತಿ ಸ್ಥಾಪನೆ; ಸಂಘದ ಚಟುವಟಿಕೆಗಳನ್ನು ವಿಸ್ತರಿಸುವ ಮತ್ತು ಸಂಘದ ಚಟುವಟಿಕೆಗಳನ್ನು ಮುಂಬಯಿ ಉಪನಗರಗಳಲ್ಲಿ ವಾಸಿಸುವ ದೂರದ ಪ್ರದೇಶದ ಸದಸ್ಯರಿಗಳಿಗಾಗಿ ಇಸವಿ ೧೯೬೨ ರಲ್ಲಿ ಶ್ರೀ ಕೆ. ಭುಜಂಗಾಧರ್ ಇವರ ಅ ಅಧ್ಯಕ್ಷತೆಯಲ್ಲಿ ಸಂಘದ ಪ್ರಥಮ ವಿಭಾಗೀಯ ಸಮಿತಿಯನ್ನು ಸ್ಥಾಪಿಸಲಾಯಿತು.
ಸಂಘದ ಸುವರ್ಣ ಮಹೋತ್ಸವ; ಆಗಾಗಲೇ ಸಂಘ ಸ್ಥಾಪಿಸಿ 50 ವರ್ಷಗಳು ಕೆಳೆದು ಇಸವಿ 1975ರಲ್ಲಿ ಸಂಘವು ಶ್ರೀ ಪಿ. ದಯಾನಂದ್ ಇವರ ಅಧ್ಯಕ್ಷತೆಯಲ್ಲಿ ಸಂಘದ ಸುವರ್ಣಮಹೋತ್ಸವವನ್ನು ಬಹಳ ಅದ್ದೂರಿಯಿಂದ ಆಚರಿಸಿತು. ನವೆಂಬರ್ 8, 9 ಮತ್ತು 10, 1975 ಈ ಮೂರು ದಿನದ ಸುವರ್ಣ ಮಹೋತ್ಸವ ಆಚರಣೆಯಲ್ಲಿ ಸಂಘವು ವಿವಿಧ ಸಮಾಜಗಳನ್ನು ಮತ್ತು ಸಮಾಜ ಮುಖಂಡರನ್ನು ಮತ್ತು ಸಾಧಕರನ್ನು ಗುರುತಿಸಿ ಸನ್ಮಾನಿಸಿತು. ಇದರಿಂದಾಗಿ ದೇವಾಡಿಗ ಸಂಘದ ಪ್ರತಿಮೆಯನ್ನು ಹೆಚ್ಚಿಸಿ ಇದರ ಅಸ್ತಿತ್ವವನ್ನು ಮೆರೆಯಲಾಯಿತು. ಶ್ರೀ ಪಿ. ರಾಮಯ್ಯ ದೇವಾಡಿಗ ಇವರು ಅಂದಿನ ದಿನಗಳಲ್ಲಿ ಸಕ್ರಿಯರಾಗಿದ್ದು ಮುಂಬಯಿಗೆ ವಲಸೆ ಬಂದ ದೇವಾಡಿಗರಿಗೆ ಸಹಾಯ ನೀಡುತ್ತಿದ್ದರು.
ದೇವಾಡಿಗ ಕ್ರೀಡಾ ಮಂಡಳ: ಸಂಘದ ಸದಸರಲ್ಲಿ ಕ್ರೀಡೆಯ ಹವ್ಯಾಸ ಬೆಳೆಸುವ ಉದ್ದೇಶದಿಂದ ಡಿಸೆಂಬರ್ ೪, ೧೯೫೮ರಲ್ಲಿ ಶ್ರೀ ಪಿ . ಆರ್, ಮೊಯಿಲಿ ಇವರ ಸಂಘದ ಅಧ್ಯಕ್ಷತೆಯಲ್ಲಿ ಅಲ್ಲದೆ ಶ್ರೀ ಎನ್. ಪಿ. ಸಾಲಿಯಾನ್ ಜೊತೆಗೆ ಕ್ರೀಡಾ ಪ್ರೇಮಿಗಳಾದ ಶ್ರೀ ಎಸ್. ರಾಮರಾವ್, ಶ್ರೀ ಕೆ. ಜಿ. ಉದ್ಯಾವರ್ ಇವರ ಸಹಕಾರದಿಂದ ದೇವಾಡಿಗ ಕ್ರೀಡಾ ಮಂಡಳವನ್ನು ಸ್ಥಾಪಿಸಲಾಯಿತು. ತದನಂತರ ಸದಸ್ಯರಲ್ಲಿ ಕ್ರೀಡೆಯಲ್ಲಿ ಆಸಕ್ತಿ ಬೆಳೆಸುವ ಉದ್ದೇಶದಿಂದ ಪ್ರತೀವರ್ಷ ವಾರ್ಷಿಕ ಕ್ರೀಡಾ ಕೂಟ ಆರಂಭಿಸಲಾಯಿತು.
ಸಂಘದ ದಾದರ್ ಕಾರ್ಯಾಲಯದ ನೂತನೀಕರಣ: ಬರುಬರುತ್ತಾ ಸಂಘದ ಚಟುವಟಿಕೆಗಳು ಉತ್ತಮ ಬೆಳವಣಿಗೆಯನ್ನು ಹೊಂದುತ್ತಾ, ಸಮಾಜ ಬಾಂಧವರಿಗೆ ಮತ್ತು ನಿರಾಶ್ರಿತ ಬಾಂಧವರಿಗೆ ಹೆಚ್ಚಿನ ಸಹಾಯ ಮಾಡುವ ಉದ್ದೇಶದಿಂದ ಇಸವಿ ೧೯೭೮ರಲ್ಲಿ ಶ್ರೀ ದಿವಾಕರ್ ದೇವಾಡಿಗ ಇವರ ಅಧ್ಯಕ್ಷತೆಯಲ್ಲಿ ಸಂಘದ ದಾದರ್ ಕಾರ್ಯಾಲಯವನ್ನು ನವೀಕರಿಸಲಾಯಿತು. ಇದರಿಂದಾಗಿ ಸಂಘದಲ್ಲಿ ಹೆಚ್ಚಿನ ಸದಸ್ಯರಿಗೆ ಕೂಡಲು ಅನುಕೂಲವಾಯಿತು ಮತ್ತು ಹೊಸಬರು ಬಂದಾಗ ಅವರಿಗೆ ಕಡಿಮೆದರದಲ್ಲಿ ವಾಸ್ತವ್ಯದ ವ್ಯವಸ್ಥೆ ಮಾಡಲಾಯಿತು.
ರಜತ ಕ್ರೀಡಾ ಮಹೋತ್ಸವ: ಸಂಘದಲ್ಲಿ ಕ್ರೀಡಾ ಮಂಡಳವು ಸಕ್ರಿಯವಾಗಿದ್ದು ಪ್ರತೀ ವರ್ಷಕ್ಕೊಮ್ಮೆ ಸದಸ್ಯರ ಕ್ರೀಡಾ ಮಹೋತ್ಸವವನ್ನು ಆಚರಿಸುತ್ತಿತ್ತು. ನವೆಂಬರ್ 13,1983ರಂದು ಸಂಘದ ಕ್ರೀಡಾ ಮಂಡಳದ ಕಾರ್ಯಾಧ್ಯಕ್ಷ ಶ್ರೀ ಗೋಪಾಲ್ ಎಂ. ಮೊಯಿಲಿ ಮತ್ತು ಸಂಘದ ಅಧ್ಯಕ್ಷ ಶ್ರೀ ಎಸ್. ಕೆ. ಶ್ರೀಯಾನ್ ಇವರ ಅಧ್ಯಕ್ಷತೆಯಲ್ಲಿ ಕ್ರೀಡಾ ಮಂಡಳದ ಬೆಳ್ಳಿಹಬ್ಬದ ಕ್ರೀಡಾ ಮಹೋತ್ಸವವನ್ನು ಆಚರಿಸಲಾಯಿತು. ಶ್ರೀ ಗೋಪಾಲ್ ಎಂ. ಮೊಯಿಲಿ ಮತ್ತು ಶ್ರೀ ಎಸ್. ಕೆ. ಶ್ರೀಯಾನ್ ಇವರು ಅಂದಿನ ದಿನದಲ್ಲಿ ಸಂಘಕ್ಕಾಗಿ ಧನ ಸಂಗ್ರಹಿಸುವ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದರು.
ಸಂಘದ ವಜ್ರ ಮಹೋತ್ಸವ: ದಿನಾಂಕ 19 ಡಿಸೆಂಬರ್, 1998ರಲ್ಲಿ ಸಂಘದ ಅಧ್ಯಕ್ಷ ಶ್ರೀ ಜನಾರ್ಧನ್ ಕೆ. ಮೊಯ್ಲಿ ಇವರ ನೇತೃತ್ವದಲ್ಲಿ ಸಂಘವು ತನ್ನ ವಜ್ರಮಹೋತ್ಸವನ್ನು ಆಚರಿಸಿತು. ಕರ್ನಾಟಕದ ಅಂದಿನ ಮುಖ್ಯಮಂತ್ರಿಗಳಾದ ಶ್ರೀ ವೀರಪ್ಪ ಮೊಯಿಲಿ ಮತ್ತು ಕೇಂದ್ರದ ಹಣಕಾಸು ಮಂತ್ರಿ ಶ್ರೀ ಜನಾರ್ಧನ್ ಪೂಜಾರಿ ಇವರು ಸಂಘದ ಈ ವಜ್ರಮಹೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿ ಸಂಘದ ಪ್ರತಿಮೆ ಮತ್ತು ಪ್ರಸಿದ್ಧಿ ಎರಡನ್ನೂ ಹೆಚ್ಚಿಸಿದರು. ಈ ವಜ್ರಮಹೋತ್ಸವದ ಸಂದರ್ಭ, ಸಂಘದ ಅಂದಿನ ಜೊತೆ ಕಾರ್ಯದರ್ಶಿಗಳಾದ ಮತ್ತು ಮಾಜಿ ಅಧ್ಯಕ್ಷರು ಮತ್ತು ಈಗಿನ ಸಲಹಾ ಸಮಿತಿಯ ಸದಸ್ಯರಾದ ಶ್ರೀ ಹಿರಿಯಡ್ಕ ಮೋಹನ ದಾಸ್ ಇವರು ಸಂಘದ ಸ್ವತಂತ್ರ ಕಟ್ಟಡ, ದೇವಾಡಿಗ ಭವನ ನಿರ್ಮಾಣದ ಯೋಜನೆಯನ್ನು ಸೂಚಿಸಿ ಅದಕ್ಕೆ ಬೇಕಾಗುವ ಭೂಮಿಯನ್ನು ಮಹಾರಾಷ್ಟ್ರ ಸರಕಾರದಿಂದ ಪಡೆಯುವ ಯೋಜನೆ ಹಾಕಿದರು ಮತ್ತು ಭವನ ನಿರ್ಮಾಣದ ಸಲುವಾಗಿ ಭೂಮಿ ಪಡೆಯುವ ದಿಶೆಯಲ್ಲಿ ಚಟುವಟಿಕೆಗಳು ಮುಂದುವರಿದವು.
ದೇವಾಡಿಗ ನ್ಯೂಸ್: ಶ್ರೀ ಕೆ.ಕೆ. ನಂದಾ ಇವರ ಅಧ್ಯಕ್ಷತೆಯಲ್ಲಿ ಇಸವಿ 1989ರಲ್ಲಿ ಸಂಘವು ತನ್ನದೇ ಆದ ಸಂಘದ ಮುಖವಾಣಿ, ಕನ್ನಡ ಪತ್ರಿಕೆ “ದೇವಾಡಿಗ ನ್ಯೂಸ್” ಆರಂಭಿಸಿದರು. ಸಂಘದ ಚಟುವಟಿಕೆಗಳನ್ನು ಸಂಘದ ಪ್ರತೀ ಸದಸ್ಯರಿಗೆ ಮುಟ್ಟಿಸುವ ಉದ್ದೇಶದಿಂದ ಆರಂಭಿಸಿದ ಈ ದೇವಾಡಿಗ ನ್ಯೂಸ್ ಮಾಸಿಕ ಪತ್ರಿಕೆಯನ್ನು ಸದಸ್ಯರು ಬಹಳವಾಗಿ ಮೆಚ್ಚಿಕೊಂಡರು.
ಅನ್ನಪೂರ್ಣನಿಧಿ: ಇಸವಿ 1995ರಲ್ಲಿ ಶ್ರೀ ಜನರಾಧನ್ ದೇವಾಡಿಗ ಇವರ ಅಧ್ಯಕ್ಷತೆಯಲ್ಲಿ ಸಂಘದ ಅನ್ನಪೂರ್ಣ ನಿಧಿ ಆರಂಭಿಸಲಾಯಿತು. ಈ ಅನ್ನಪೂರ್ಣ ನಿಧಿಗೆ ಸಂಘದ ಸದಸ್ಯರಿಂದ ಮತ್ತು ದಾನಿಗಳಿಂದ ಹೆಚ್ಚಿನ ನಿಧಿ ಸಂಗ್ರಹಿಸುವಲ್ಲಿ ಶ್ರೀ ಶ್ರೀನಿವಾಸ್ ಕರ್ಮರನ್ ಇವರು ಪ್ರಮುಖರಾಗಿದ್ದರು.
ದೇವಾಡಿಗ ಜ್ಯೋತಿ: ಇಸವಿ 1997ರಲ್ಲಿ ಸಂಘದ ಮಾಸಿಕ ಪತ್ರಿಕೆ ಸಂಘದ ಮುಖವಾಣಿ ದೇವಾಡಿಗ ನ್ಯೂಸ್ ಇದನ್ನು “ದೇವಾಡಿಗ ಜ್ಯೋತಿ” ಎನ್ನುವ ಹೊಸ ಹೆಸರಲ್ಲಿ ಅಂದಿನ ಸಂಘದ ಅಧ್ಯಕ್ಷ ಶ್ರೀ ಗೋಪಾಲ್ ಎಂ. ಮೊಯ್ಲಿ ಇವರು ಆರಂಭಿಸಿದರು. ಅಲ್ಲದೆ ಶ್ರೀ ಗೋಪಾಲ್ ಎಂ. ಮೊಯ್ಲಿ ಇವರ ನೇತೃತ್ವದಲ್ಲಿ ದಾಖಲೆಯ ಸಂಖ್ಯೆಯಲ್ಲಿ ಸಂಘಕ್ಕೆ ಹೊಸ ಸದಸ್ಯರನ್ನು ಸೇರಿಸಲಾಯಿತು.
ವೈವಾಹಿಕ ಸೇವೆ (ಮೆಟ್ರಿಮೋನಿಯಲ್ ಸರ್ವಿಸ್): ಅಂದಿನ ಸಮಯದಲ್ಲಿ ದೇವಾಡಿಗ ಸಮಾಜದಲ್ಲಿ ಮದುವೆಗೆ ತಯಾರಾಗಿ ನಿಂತಿರುವ ವಯಸ್ಕ ಹುಡುಗ ಹುಡುಗಿಯರಿಗೆ ಸೂಕ್ತ ವಧು-ವರ ರನ್ನು ಆಯ್ಕೆ ಮಾಡಲು ಸಂಘದ ಸದಸ್ಯರಿಗೆ ಸುಲಭವಾಗುವಂತೆ ಅದರ ಅವಕಾಶ ಕಲ್ಪಿಸಲು ಸಂಘದಲ್ಲಿ ವೈವಾಹಿಕ ಸೇವೆ (ಮೆಟ್ರಿಮೋನಿಯಲ್ ಸರ್ವಿಸ್) ಯನ್ನು ಅಧ್ಯಕ್ಷ ಶ್ರೀ ಗೋಪಾಲ್ ಎಂ. ಮೊಯ್ಲಿ ಇವರ ನೇತೃತ್ವದಲ್ಲಿ ಸಜ್ಜುಗೊಳಿಸಲಾಯಿತು. ಅವರ ನೇತೃತ್ವದಲ್ಲಿಯೇ ಒಂದು ವಧು ವರ ಸಮ್ಮೇಳನವನ್ನು ಆಯೋಜಿಸಿತ್ತು. ಇದರಲ್ಲಿ ಮದುವೆಯಾಗಲು ಬಯಸುವ ಮತ್ತು ಸೂಕ್ತ ಜೋಡಿಯನ್ನು ಹರಸುವ ಉದ್ದೇಶದಿಂದ ದೊಡ್ಡ ಸಂಖ್ಯೆಯಲ್ಲಿ ಯುವಕರು, ಯುವತಿಯರು ಮತ್ತು ಅವರ ಪಾಲಕರು ಭಾಗವಹಿಸಿದ್ದರು.
ಸಂಘದ ಹೆಸರಿನ ಬದಲಾವಣೆ: ಇಸವಿ 1998ರಲ್ಲಿ ಸಂಘದ ಬೈಲಾಸನ್ನು ತಿದ್ದುಪಡಿಗೊಳಿಸಿ “ದೇವಾಡಿಗ ಸುಧಾರಕ ಸಂಘ ಮುಂಬಯಿ” ಎಂದು ಪ್ರಸಿದ್ಧಿಯಾದ ಈ ಸಂಘದ ಹೆಸರನ್ನು “ದೇವಾಡಿಗ ಸಂಘ ಮುಂಬಯಿ” ಎನ್ನುವುದಾಗಿ ಪುನರ್ನಾಮ ಮಾಡಲಾಯಿತು. ಈ ತಿದ್ದುಪಡಿಗೆ 30ನೇ ಸೆಪ್ಟೆಂಬರ್ 1998ರಲ್ಲಿ ಸರಕಾರದ ಸಕ್ಷಮ ಅಧಿಕಾರಿಗಳಿಂದ ಅನುಮತಿ ದೊರೆಯಿತು.
ಕನ್ನಡ ಭಾಷೆಗೆ ಮನ್ನಣೆ: ಕರ್ನಾಟಕದ ರಾಜ್ಯ ಭಾಷೆಯಾದ ಕನ್ನಡಕ್ಕೆ ಮನ್ನಣೆ ಕೊಡುವ ಮತ್ತು ಸಮಾಜ ಬಾಂಧವರಲ್ಲಿ ಕನ್ನಡ ಭಾಷೆಯು ಹೆಚ್ಚು ಚಾಲ್ತಿಯಲ್ಲಿ ತರುವ ಉದ್ದೇಶದಿಂದ ಸಂಘವು 1998ರಲ್ಲಿ ಮುಂಬಯಿ ಪ್ರದೇಶ ಶಿಕ್ಷಣ ಮಂಡಳಿಯ ಹತ್ತನೇ ತರಗತಿಯ ಕನ್ನಡ ಭಾಷಾ ಪರೀಕ್ಷೆಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಅಂಕಗಳನ್ನು ಪಡೆದು ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಕಂಡುಹುಡುಕಿ ಬಹುಮಾನ ನೀಡಿ ಸನ್ಮಾನಿಸುವ ಕಾರ್ಯ ಆರಂಭಗೊಂಡಿತು.
ದೇವಾಡಿಗ ಡೈರೆಕ್ಟರಿ: ಶ್ರೀ ಗೋಪಾಲ್ ಎಂ. ಮೊಯ್ಲಿ ಇವರ ಅಧ್ಯಕ್ಷತೆಯಲ್ಲಿ ನವೆಂಬರ್ ೧೫, ೧೯೯೮ರಲ್ಲಿ ಪ್ರಥಮ ಬಾರಿಗೆ ಸಂಘದ ಎಲ್ಲ ಸದಸ್ಯರ ಹೆಸರು, ವಿಳಾಸ ಮತ್ತು ಮತ್ತು ದೂರವಾಣಿ ಸಂಖ್ಯೆಯನ್ನು ಒಳಗೊಂಡ ದೇವಾಡಿಗ ಸಂಘದ ಸದಸ್ಯತ್ವ ನಿರ್ದೇಶಿಕೆ (membership directory) ಯನ್ನು ಪ್ರಕಟಿಸಿ ಬಿಡುಗಡೆಗೊಳಿಸಲಾಯಿತು. ಅದಕ್ಕಾಗಿ ಅಂದಿನ ಸಂಘದ ಅಧ್ಯಕ್ಷರಾದ ಶ್ರೀ ಗೋಪಾಲ್ ಎಂ. ಮೊಯಿಲಿ ಮತ್ತು ಶ್ರೀ ಜನಾರ್ಧನ ದೇವಾಡಿಗ ಸೂರಾಲ್, ಶ್ರೀ ಕೃಷ್ಣ ಎನ್. ಶೇರಿಗಾರ್, ಶ್ರೀ ವಿಶ್ವನಾಥ್ ಬಿ. ದೇವಾಡಿಗ, ಶ್ರೀ ಪಿ.ವಿ.ಎಸ್. ಮೊಯಿಲಿ ಮತ್ತು ಕೆಲವು ಹಿರಿಯ ಸದಸ್ಯರು ಅವಿರತ ಶ್ರಮ ಪಟ್ಟಿದ್ದರು. ಡೈರೆಕ್ಟರಿಯನ್ನು ಬಿಡುಗೋಡೆಗೊಳಿಸಲಾಯಿತು. ಅಲ್ಲದೆ ಈ ಡೈರೆಕ್ಟರಿಯಲ್ಲಿ ಸಂಘದ ಹೆಚ್ಚಿನ ಮಾಹಿತಿಗಳನ್ನೂ ನೀಡಲಾಗಿತ್ತು.
ಮಹಿಳಾ ವಿಭಾಗದ ಸ್ಥಾಪನೆ: ೧೯೮೮ರಲ್ಲಿ ಸಂಘದ ಮಹಿಳಾ ವಿಭಾಗವನ್ನು ಪ್ರಾರಂಭಿಸಲಾಯಿತು ಮತ್ತು ಶ್ರೀಮತಿ ಮಾಲತಿ ಜೆ. ಮೊಯಿಲಿ ಇವರು ಮಹಿಳಾ ವಿಭಾಗದ ಪ್ರಥಮ ಕಾರ್ಯಧ್ಯಕ್ಷೆಯಾಗಿದ್ದರು. ಅದೇ ಸಮಯದಲ್ಲಿ ಒಂದು ಪ್ರಥಮ ಯುವ ಮಹೋತ್ಸವವನ್ನು ಆಯೋಜಿಸಲಾಗಿತ್ತು. ಸಂಘದ ಮಹಿಳಾ ವಿಭಾಗವು ಎಲ್ಲಾ ಕಾರ್ಯಕ್ರಮಗಳಲ್ಲಿ ಮುಂಚುಣಿಯಲ್ಲಿದೆ. ಸುಮಾರು ಮೂರು ದಶಮಾನಗಳಿಂದ ಮಹಿಳಾವಿಭಾಗವು ಬಹಳ ಸಕ್ರಿಯವಾಗಿ ಕೆಲಸಮಾಡುತ್ತಿದೆ. ಶ್ರೀಮತಿ ಮಾಲತಿ ಜೆ. ಮೊಯ್ಲಿ, ಶಾಂತ ಜಿ. ಮೊಯ್ಲಿ, ಶ್ರೀಮತಿ ಪ್ರಫುಲ್ಲಾ ವಿ. ದೇವಾಡಿಗ, ಶ್ರೀಮತಿ ಪುಷ್ಪ ಎಸ್. ರಾವ್, ಶ್ರೀಮತಿ ಭಾರತಿ ನಿಟ್ಟೇಕರ್, ಶ್ರೀಮತಿ ರಂಜನಿ ಪಿ. ಮೊಯ್ಲಿ, ಶ್ರೀಮತಿ ಜಯಂತಿ ಆರ್. ಮೊಯ್ಲಿ. ಶ್ರೀಮತಿ ಜಯಂತಿ ಎಂ.ದೇವಾಡಿಗ ಮೊದಲ್ದವರು ಸಂಘದ ಮಹಿಳಾ ವಿಭಾಗದ ಕಾರ್ಯಧ್ಯಕ್ಷ ಸ್ಥಾನಗಳನ್ನು ಭೂಷಿಸಿದ್ದರು
ಅಕ್ಷಯ ಸಹಕಾರಿ ಹಣಕಾಸು ಸಂಸ್ಥೆ: ಇಸವಿ 1999ರಲ್ಲಿ ಸಂಘದ ಅಕ್ಷಯ ಸಹಕಾರಿ ಹಣಕಾಸು ಸಂಸ್ಥೆ (ಅಕ್ಷಯ ಕೋ.ಆಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್ ಈ ಸಂಸ್ಥೆಯನ್ನು ತೆರೆಯಲಾಯಿತು. ಇದು ದೇವಾಡಿಗ ಸಂಘ ಮುಂಬಯಿಯ ಒಂದು ದೊಡ್ಡ ಸಾಧನೆಯ ಫಲಿತಾಂಶ ಎನ್ನಬಹುದು. ದೇವಾಡಿಗ ಸಂಘದ ಪ್ರಾಯೋಜಕತ್ವದ ಈ ಸಂಸ್ಥೆ ಆರ್ಥಿಕ ವರ್ಷ 1999-2000ರಲ್ಲಿ ಆರಂಭವಾಯಿತು. ದಿನಾಂಕ 19.9.೧೯೯೯ರಂದು ಈ ಸಂಸ್ಥೆಯನ್ನು ಉದ್ಘಾಟಿಸಲಯಿತು. ಶ್ರೀ ಎಸ್. ಪಿ. ಕರ್ಮರನ್ ಇವರು ಸಂಸ್ಥೆಯ ಮುಖ್ಯ ಪ್ರವರ್ತಕರಾಗಿದ್ದು, ಶ್ರೀ ಧರ್ಮಪಾಲ ಯು. ದೇವಾಡಿಗ ಇವರು ಸಂಸ್ಥೆಯ ಪ್ರಥಮ ಕಾರ್ಯಧ್ಯಕ್ಷರಾಗಿದ್ದರು. ನಂತರದಲ್ಲಿ ಶ್ರೀ ಎಸ್.ಪಿ. ಕರ್ಮರನ್, ಶ್ರೀ ಗೋಪಾಲ್ ಮೊಯ್ಲಿ ಇವರು ಕಾರ್ಯಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಶ್ರೀ ವಾಸು ದೇವಾಡಿಗ ಇವರು ಕಾರ್ಯಧ್ಯಕ್ಷರಾಗಿದ್ದಾರೆ. ಈ ಸಂಸ್ಥೆಯು ಉತ್ತಮ ಸೇವೆ ಸಲ್ಲಿಸಿದ್ದು ಸರಕಾರದ ಲೆಕ್ಕ ಪರಿಶೋಧನೆಯಲ್ಲಿ ಸಂಸ್ಥೆಗೆ “ಎ” ದರ್ಜೆ ದೊರೆತಿದೆ.
ದೇವಾಡಿಗ ಭವನಕ್ಕೆ ಜಾಗದ ಶೋಧ: ಸಂಘದ ಅಂದಿನ ಮತ್ತು ಹಿಂದಿನ ಸಮಿತಿಯವರು ಸಂಘದ ಭವನ ನಿರ್ಮಾಣಕಾಗಿ ಜಾಗದ ಶೋಧನೆ ಆರಂಭಿಸಿದ್ದರು. ಮುಂಬಯಿ, ಮುಂಬಯಿ ಉಪನಗರ, ಥಾಣೆ ಮೊದಲಾದ ಪ್ರದೇಶಗಳಲ್ಲಿ ಸರಕಾರಿ ವಲಯದಲ್ಲಿ ಪ್ರಯತ್ನ ಪಟ್ಟರೂ ಸಾಧ್ಯವಾಗದೆ ಬಳಿಕ ನವಿ ಮುಂಬಯಿಯ ನಿಯೋಜಿತ ಪಟ್ಟಣದ ನಿಯೋಜನ ಪ್ರಾಧಿಕಾರ ಸಿಟಿ ಅಂಡ್ ಡೆವಲಪ್ಮೆಂಟ್ ಕಾರ್ಪೋರೇಶನ್ (CIDCO) ಸಂಸ್ಥೆಯು ನೆರೂಲ್ ಪಶ್ಚಿಮದ ಸೆಕ್ಟರ್ 12 ರಲ್ಲಿ 1090.34 ಚ ಮೀ. ವಿಸ್ತೀರ್ಣದ ಫ್ಲೋಟ್ ನಂಬ್ರ 12ನ್ನು ರಿಯಾಯಿತಿ ದರದಲ್ಲಿ ಸಂಘದ ಪ್ರಾದೇಶಿಕ ಸಾಂಸ್ಕ್ರತಿಕ ಭವನದ ನಿರ್ಮಾಣಕ್ಕಾಗಿ ನೀಡಿತು.
ದೇವಾಡಿಗ ಭವನಕ್ಕೆ ಶಂಕುಸ್ಥಾಪನೆ: ದಿನಾಂಕ ಅಕ್ಟೋಬರ್ 8, 2000 ದಂದು ನೆರೂಲ್ ಪಶ್ಚಿಮದಲ್ಲಿ ದೇವಾಡಿಗ ಸಂಘದ ಪ್ರಾದೇಶಿಕ ಸಾಂಸ್ಕ್ರತಿಕ ಭವನಕ್ಕೆ ಶಂಕು ಸ್ಥಾಪನೆಯನ್ನು ಮಾಜಿ ಮುಖ್ಯ ಮಂತ್ರಿ ಶ್ರೀ ಎಂ. ವೀರಪ್ಪ ಮೊಯಿಲಿ ಇವರ ಕರಕಮಲಗಳಿಂದ ನೆರವೇರಿಸಲಾಯಿತು.
ದೇವಾಡಿಗ ಭವನದ ನಿರ್ಮಾಣ: ಇಸವಿ 2000 ದಿಂದ 2007ರ ವರೆಗೆ ಸಂಘದ ಸಂಪೂರ್ಣ ಏಕಾಗ್ರತೆ ಸಂಘದ ಕಟ್ಟಡ ದೇವಾಡಿಗ ಭವನದ ನಿರ್ಮಾಣದ ಮೇಲಿತ್ತು.. ಶ್ರೀ ಧರ್ಮಪಾಲ ಯು. ದೇವಾಡಿಗ ಇವರು ಅಧ್ಯಕ್ಷರಾಗಿದ್ದರು. ಶ್ರೀ ಬಾಬು ಡಿ. ದೇವಾಡಿಗ ಇವರು ಕಟ್ಟಡ ಸಮಿತಿಯ ಪ್ರಾರಂಭದ ಕಾರ್ಯಧ್ಯಕ್ಷರಾಗಿದ್ದರು. ದೇವಾಡಿಗ ಭವನ ನಿರ್ಮಾಣದ ಯೋಜನೆ ಮತ್ತು ಇದರ ಆಡಳಿತಾವ್ಯ್ವಸ್ಥೆಯ ಹಿಂದೆ ಉಪ ಕಾರ್ಯಧ್ಯಕ್ಷರುಗಳಾದ ಶ್ರೀ ಗೋಪಾಲ್ ಎಂ. ಮೊಯ್ಲಿ ಮತ್ತು ಶ್ರೀ ಕೆ.ಕೆ. ಮೋಹನ ದಾಸ್ ಜೊತೆಯಲ್ಲಿ, ಉತ್ಸಾಹಭರಿತ ಶಕ್ತಿಯಾಗಿ ಕಟ್ಟಡ ಸಮಿತಿಯ ಕಾರ್ಯದರ್ಶಿ ಶ್ರೀ ಹಿರಿಯಡ್ಕ ಮೋಹನ ದಾಸ್, ಜೊತೆ ಕಾರ್ಯದರ್ಶಿಗಳಾಗಿ ಶ್ರೀ ಜನಾರ್ಧನ್ ಶೇರಿಗಾರ್ ಸೂರಾಲ್ ಮತ್ತು ಶ್ರೀ ಪದ್ಮನಾಭ ದೇವಾಡಿಗ ಇವರಿದ್ದರು. ಶ್ರೀ ಪಿ. ರಮೇಶ್ ಮತ್ತು ಶ್ರೀ ಎಸ್.ಪಿ. ಕರ್ಮರನ್ ಮೊದಲಾದವರು ದೇವಾಡಿಗ ಭವನದ ನಿರ್ಮಾಣ ಸಂಪೂರ್ಣವಾಗುವಲ್ಲಿ ಉತ್ತಮ ಸೇವೆ ನೀಡಿದ್ದರು. ಎಲ್ಲರ ಸಹಕಾರದಿಂದ ಸುಮಾರು 2.75 ಕೋಟಿ ರೂಪಾಯಿ ವೆಚ್ಚದಲ್ಲಿ ದೇವಾಡಿಗ ಭವನದ ನಿರ್ಮಾಣವು ಫೆಬ್ರುವರಿ 2007 ರಲ್ಲಿ ಸಂಪೂರ್ಣಗೊಂಡಿತು. ಈ ದೇವಾಡಿಗ ಭವನವು 500 ಆಸನಗಳನ್ನು ಹೊಂದಿರುವ ಎರಡು ಸಭಾಭವನದಲ್ಲಿ ಒಂದು ಶ್ರೀಮತಿ ನಾಗಿ ಮತ್ತು ಶ್ರೀ ಉಚ್ಚಿಲ ಮುಥಯ್ಯ ಮೊಯ್ಲಿ ಸ್ಮರಣಾರ್ಥ ಸಭಾಗ್ರಹ (ಹವಾ ನಿಯಂತ್ರಿತ) ಮತ್ತು ಇನ್ನೊಂದು ಶ್ರೀಮತಿ ಸುಜಾತ ಮತ್ತು ಶ್ರೀ ಧರ್ಮಪಾಲ ಯು. ದೇವಾಡಿಗ ಗೌರವಾರ್ಥ ಸಭಾಗ್ರಹ, ಅಲ್ಲದೆ, ಭವನವು ಒಂದು ಅರೋಗ್ಯ ಸಲಹಾ ಕೇಂದ್ರ, ಒಂದು ಸಾರ್ವಜನಿಕ ಪುಸ್ತಕ ವಾಚನಾಲಯ ಒಂದು ಶಿಶುವಿಹಾರ, ಒಂದು ಕಾರ್ಯಾಲಯ, ಅಡುಗೆ ಕೋಣೆ, ಮತ್ತು ಮೇಲ್ಭಾಗದಲ್ಲಿ ಓಪನ್ ಟ್ಯಾರಸ್ ಮತ್ತು ತಳಮಾಳಿಗೆಯಲ್ಲಿ ಭೋಜನಾಗ್ರಹವನ್ನು ಒಳಗೊಂಡಿದೆ.
ದೇವಾಡಿಗ ಭವನದ ಉದ್ಘಾಟನೆ: ದಿನಾಂಕ 24ನೇ ಫೆಬ್ರವರಿ, 2007 ಇದು ದೇವಾಡಿಗ ಸಂಘ ಮುಂಬಯಿಯ ಚರಿತ್ರೆಯಲ್ಲಿ ಸುವರ್ಣಾಕ್ಷರಗಳಿಂದ ಬರೆಯಲ್ಪಟ್ಟ ದಿನವಾಗಿತ್ತು ಅಂದರೆ ಸಂಘದ ಪ್ರಾದೇಶಿಕ ಸಾಂಸ್ಕ್ರತಿಕ ಕೇಂದ್ರವಾದ ದೇವಾಡಿಗ ಭವನದ ಉದ್ಘಾಟನೆ. ಅಂದಿನ ಮಹಾರಾಷ್ಟ್ರ ರಾಜ್ಯದ ಮುಖ್ಯಮಂತ್ರಿ ಶ್ರೀ ವಿಲಾಸ್ ರಾವ್ ದೇಶಮುಖ್, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮದರ್ಶಿಗಳಾದ ಶ್ರೀ ವೀರೇಂದ್ರ ಹೆಗ್ಗಡೆ, ಕರ್ನಾಟಕದ ಮಾಜಿ ಮುಖ್ಯ ಮಂತ್ರಿ ಮತ್ತು ಮಾಜಿ ಕೇಂದ್ರೀಯ ಮಂತ್ರಿ ಶ್ರೀ ವೀರಪ್ಪ ಮೊಯಿಲಿ, ಸ್ಥಳೀಯ ಶಾಸಕರು ಮತ್ತು ಅಂದಿನ ಮಹಾರಾಷ್ಟ್ರ ಸರಕಾರದ ಅಬಕಾರಿ ಮಂತ್ರಿ ಶ್ರೀ ಗಣೇಶ್ ನಾಯ್ಕ್, ಶ್ರೀಮತಿ ಹೇಮಾವತಿ ವೀರೇಂದ್ರ ಹೆಗ್ಗಡೆ, ಶ್ರೀಮತಿ ಮಾಲತಿ ವೀರಪ್ಪ ಮೊಯ್ಲಿ ಅಲ್ಲದೆ ಮುಂಬಯಿಯ ಎಲ್ಲ ಜಾತಿಯ ಸಮಾಜ ಬಾಂಧವರು ಸ್ಥಳೀಯ ಮಹಾನಗರ ಪಾಲಿಕೆ ಮತ್ತು ಪೊಲೀಸ್ ಆಯುಕ್ತರು ಮತ್ತು ಸಾವಿರಾರು ಸಮಾಜ ಬಾಂಧವರ ಸಮ್ಮುಖದಲ್ಲಿ ಈ ಭವನವನ್ನು ಉದ್ಘಾಟಿಸಲಾಯಿತು.
ಮಹಾರಾಷ್ಟ್ರ ಸರಕಾರದಲ್ಲಿ ದೇವಾಡಿಗ ಒ.ಬಿ.ಸಿ. ನೋಂದಣಿ: ಅನೇಕ ವರ್ಷಗಳ ಸತತ ಪ್ರಯತ್ನದಿಂದ ದೇವಾಡಿಗ ಸಮಾಜವನ್ನು 2008ರಲ್ಲಿ ಮಹಾರಾಷ್ಟ್ರ ಸರಕಾರದ ಹಿಂದುಳಿದ ವರ್ಗಗಳ ಸಮಾಜಗಳ ಯಾದಿಯಲ್ಲಿ ಸೇರ್ಪಡಿಸಲಾಯಿತು. ಇದಕ್ಕಾಗಿ ಸಂಘದ ಅಂದಿನ ಗೌ.ಪ್ರ. ಕಾರ್ಯದರ್ಶಿ ಶ್ರೀ ವಸಂತ್ ಕಾರ್ಕಳ್, ಶ್ರೀ ಗೋಪಾಲ್ ಎಂ. ಮೊಯಿಲಿ, ಶ್ರೀ ಹಿರಿಯಡ್ಕ ಮೋಹನ ದಾಸ್ ಮತ್ತು ಅಂದು ಮಂತ್ರಾಲಯದಲ್ಲಿ ಉದ್ಯೋಗದಲ್ಲಿದ್ದ ಶ್ರೀ ವಾಸು ಟಿ. ದೇವಾಡಿಗ ಇವರು ಬಹಳ ಶ್ರಮಿಸಿದ್ದರು. ಅಕ್ಟೋಬರ್ 1012ರಲ್ಲಿ ಸಂಘದ ಪ್ರಯತ್ನದಿಂದ ಸಮಾಜದ ಉಪನಾಮಗಳಾದ ದೇವಾಡಿಗ, ಸೇರಿಗಾರ ಮತ್ತು ಮೊಯ್ಲಿ ಇವು ದೇವಾಡಿಗ ಸಮಾಜವೇ ಎಂದು ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗ ಓ.ಬಿ.ಸಿ. ಎಂದೂ ಮಹಾರಾಷ್ಟ್ರ ಸರಕಾರದಿಂದ ಅಧಿಕೃತವಾಗಿ ಘೋಷಿಸಲಾಯಿತು
ಸಂಘದ 85ನೇ ವಾರ್ಷಿಕೋತ್ಸವ: ಸಂಘದ 85ನೇ ವಾರ್ಷಿಕೋತ್ಸವವನ್ನು ದೇವಾಡಿಗ ಭವನದಲ್ಲಿ ಜನೆವರಿ 10, 2010ರಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. ಅದೇ ಸಂದರ್ಭದಲ್ಲಿ ದೇವಾಡಿಗ ಆರೋಗ್ಯಾ ಸಲಹಾ ಕೇಂದ್ರವನ್ನು ಉದ್ಘಾಟಿಸಲಾಯಿತು. ಈ ಸಮಾರಂಭಕ್ಕೆ ಅಂದಿನ ಕೇಂದ್ರದ ಕಾನೂನು ಮಂತ್ರಿ ಶ್ರೀ ವೀರಪ್ಪ ಮೊಯಿಲಿ. ಪಾರ್ಲಿಮೆಂಟ್ ಸದಸ್ಯ ಶ್ರೀ ಸಂಜೀವ ನಾಯ್ಕ್, ಮುಂಬಯಿಯ ಶಾಸಕ ಶ್ರೀ ಕೃಷ್ಣ ಹೆಗ್ಡೆ, ಇವರು ಪ್ರಾಮುಖ್ಯವಾಗಿ ಉಪಸ್ಥಿರಿದ್ದರು.
ಅವಾಂಶ್ ಯುವೋತ್ಸವ: ದಿನಾಂಕ ೩೦ನೇ ಡಿಸೆಂಬರ್, ೨೦೧೨ರಲ್ಲಿ ಸಂಘದ ಅಧ್ಯಕ್ಷ ಶ್ರೀ ಹಿರಿಯಡ್ಕ ಮೋಹನ ದಾಸ್ ಮತ್ತು ಯುವ ಮೆಂಟರ್ ಶ್ರೀ ರವಿ ಉಳ್ಳಾಲ್ ಇವರ ನೇತೃತ್ವದಲ್ಲಿ ಮತ್ತು ಅಕ್ಷಯ ಸಹಕಾರಿ ಹಣಕಾಸು ಸಂಸ್ಥೆಯ ಅಧ್ಯಕ್ಷ ಶ್ರೀ ಗೋಪಾಲ್ ಎಂ. ಮೊಯಿಲಿ ಇವರ ನೇತ್ರತ್ವದಲ್ಲಿ ದೊಡ್ಡ ಪ್ರಮಾಣದಲ್ಲಿ ಯುವಕ ಮತ್ತು ಯುವತಿಯರ ಸಮಾವೇಶಹ “ಅವಾಂಶ್ ಯುವೋತ್ಸವ”ವನ್ನು ಆಚರಿಸಲಾಯಿತು.
ಸಂಘದ ಹತ್ತು ಪ್ರಾದೇಶಿಕ ಸಮಿತಿಗಳ ಸ್ಥಾಪನೆ: ಇಸವಿ 2012ರಲ್ಲಿ ಅಂದಿನ ಸಂಘದ ಅಧ್ಯಕ್ಷರಾಗಿದ್ದ ಶ್ರೀ ಹಿರಿಯಡ್ಕ ಮೋಹನ ದಾಸ್ ಇವರ ನೇತೃತ್ವದಲ್ಲಿ ಸಂಘದ ಹತ್ತು ಪ್ರಾದೇಶಿಕ ಸಮಿತಿಗಳ ಸ್ಥಾಪಿಸಲಾಯಿತು. ಸಿಟಿ ವಲಯ, ಚೆಂಬೂರು, ಭಾಂಡೂಬ್, ಠಾಣೆ, ನವಿ ಮುಂಬಯಿ, ಅಸಲ್ಫಾ ಜೋಗೇಶ್ವರಿ, ಬೊರಿವಲಿ, ಡೊಂಬಿವಲಿ ಮತ್ತು ಮೀರಾರೋಡ್ ಹೀಗೆ ಸ್ಥಾಪನೆಯಾದ ಹತ್ತು ಪ್ರಾದೇಶಿಕ ಸಮಿತಿಗಳು ಈಗ ತಮ್ಮದೇ ಆದ ರೀತಿಯಲ್ಲಿ ಸಂಘದ ಮುಖ್ಯ ಕಾರ್ಯಕ್ರಮಗಳನ್ನು ಮೀರಿಸುವ ಕಾರ್ಯಕ್ರಮಗಳು ಈ ಪ್ರಾದೇಶಿಕ ಸಮಿತಿಗಳು ಮಾಡುತ್ತಿವೆ,


ಶ್ರೀ ರಾಮ ಭಜನಾ ಮಂಡಳಿ: ದೇವಾಡಿಗ ಸಂಘ ಮುಂಬಯಿಯ ಸದಸ್ಯರು ಬಹಳ ಹಿಂದಿನಿಂದ ಶ್ರೀ ರಾಮ ದೇವರ ದೇವರ ಭಾವ ಚಿತ್ರವನ್ನಿಟ್ಟು ಶ್ರೀ ರಾಮನ ಭಜನೆ ಮತ್ತು ಆರಾಧನೆಯನ್ನು ಮಾಡುತ್ತಾ ಬಂದಿರುತ್ತಾರೆ. ಇಸವಿ ೨೦೧೨ರಲ್ಲಿ ನವಿ ಮುಂಬಯಿ ಪ್ರಾದೇಶಿಕ ಸಮಿತಿಯ ಪ್ರಥಮ ಕಾರ್ಯಾಧ್ಯಕ್ಷರಾಗಿದ್ದ ಶ್ರೀ ಪಿ.ವಿ.ಎಸ್ ಮೊಯಿಲಿ ಇವರ ಮುಂದಾಳುತ್ವದಲ್ಲಿ ಶ್ರೀ ರಾಮ ದೇವರ ಮಂಟಪವನ್ನು ಪ್ರತಿಷ್ಟಾಪಿಸಿ, ನ್ಯಾಯವಾದಿ ಶ್ರೀ ಪ್ರಭಾಕರ್ ದೇವಾಡಿಗ ಇವರ ಸಂಯೋಜನೆಯಲ್ಲಿ ಮತ್ತು ಸಂಘದ ಮೇಲ್ವಿಚಾರಣೆಯಲ್ಲಿ ಪ್ರತೀ ತಿಂಗಳು ಭಜನಾ ಸಂಕೀರ್ತನ ನಡೆಯುತ್ತಾ ಬಂದಿದೆ. ಅಲ್ಲದೆ ರಾಮ ನವಮಿಯಂದು ಇಡೀ ದಿನದ ಕುಣಿತ ಭಜನೆ, ಭವನ ಉದ್ಘಾಟನಾ ದಿನ, ಹನುಮಾನ್ ಜಯಂತಿ, ಮಹಾಶಿವರಾತ್ರಿ, ಶ್ರಾವಣ ಭಜನೆಗಳು, ಜನ್ಮಾಷ್ಠಮಿ, ಗಣೇಶ ಚತುರ್ಥಿ, ನವರಾತ್ರಿ-ದೀಪಾವಳಿ ಭಜನೆಗಳು, ಹೊಸವರ್ಷದ ಭಜನೆ ಹೀಗೆ ವರ್ಷವಿಡೀ ಭಜನೆ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿರುತ್ತದೆ.


ದೇವಾಡಿಗ ಸ್ಪೋರ್ಟ್ಸ್ ಕ್ಲಬ್ ಇದರ ಸುವರ್ಣ ಮಹೋತ್ಸವ: ದೇವಾಡಿಗ ಸ್ಪೋರ್ಟ್ಸ್ ಕ್ಲಬ್ ಇದರ ಸುವರ್ಣ ಮಹೋತ್ಸವ: ಸಂಘದ ಅಂದಿನ ಅಧ್ಯಕ್ಷ ಶ್ರೀ ಹಿರಿಯಡ್ಕ ಮೋಹನ ದಾಸ್ ಇವರ ನಿಖರ ಯೋಜನೆಯಲ್ಲಿ, ಸಂಘದ ಸ್ಪೋರ್ಟ್ಸ್ ಕ್ಲಬ್ ಇದರ ಸುವರ್ಣಮಹೋತ್ಸವವನ್ನು ಕ್ಲಬ್ಬಿನ ಕಾರ್ಯಧ್ಯಕ್ಷ ಶ್ರೀ ಜಯ ದೇವಾಡಿಗ ಇವರ ನೇತೃತ್ವದಲ್ಲಿ ಎರಡು ದಿನಗಳ ದೊಡ್ಡ ಸಮಾರಂಭವನ್ನು ಫೆಬ್ರವರಿ 9 ಮತ್ತು 10, 2013 ರಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. ಈ ಸಮಾರಂಭದಲ್ಲಿ ಸಮಾಜದ ಊರಿನ ಮತ್ತು ಮಹಾರಾಷ್ಟ್ರದ ವಿವಿಧ ಭಾಗಗಳಿಂದ ಅನೇಕ ತಂಡಗಳು ಮುಂಬಯಿಯ ಸಂಘದ ಹತ್ತು ಪ್ರಾದೇಶಿಕ ಸಮಿತಿಗಳು ಭಾಗವಹಿಸಿದ್ದವು. ಅಂದಿನ ಬಿಲ್ಲವ ಮಹಾ ಮಂಡಳದ ಅಧ್ಯಕ್ಷ ಶ್ರೀ ಜಯ ಸುವರ್ಣ ಇವರು ಈ ಕ್ರೀಡಾ ಮಹೋತ್ಸವವನ್ನು ವಿವಿಧ ಸಮಾಜಗಳ ಮುಖಂಡರ ಉಪಸ್ಥಿತಿಯಲ್ಲಿ ಉದ್ಘಾಟಿಸಿದ್ದರು. ಬಹುಮಾನ ವಿತರಣಾ ಸಮಾರಂಭಕ್ಕೆ ಅಂದಿನ ಬಂಟರ ಸಂಘದ ಅಧ್ಯಕ್ಷ ಶ್ರೀ ಐಕಳ ಹರೀಶ್ ಶೆಟ್ಟಿ ಇವರು ಅತಿಥಿಗಳಾಗಿದ್ದರು.
ಸಂಘದಲ್ಲಿ ವಿವಿಧ ವಿಭಾಗಗಳ ನಿರ್ಮಾಣ: ಸಂಘದಲ್ಲಿ ಸದಸ್ಯರ ಸೇವೆಗಾಗಿ ಅರೋಗ್ಯ, ಶಿಕ್ಷಣ, ಮ್ಯಾಟ್ರಿಮೋನಿಯಲ್, ಕ್ರೀಡೆ, ಕಾನೂನು ಸಲಹೆ, ಓ.ಬಿ.ಸಿ., ಪ್ರಾದೇಶಿಕ ಸಮಿತಿಗಳು, ಶ್ರೀ ರಾಮ ಭಜನಾ ಮಂಡಳಿ ಮೊದಲಾದ ಉಪಸಮಿತಿಗಳನ್ನು ನಿಯಮಿಸಿ ಸದಸ್ಯರಿಗೆ ಉತ್ತಮ ಸೇವೆಗಾಗಿ ಸಂಘವು ಕಟಿಬದ್ಧವಾಗಿದೆ.


ದೇವಾಡಿಗ ಮತ್ತು ಉಪನಾಮಗಳು ಒ.ಬಿ.ಸಿ. ಸೇರ್ಪಡೆ; ಸಂಘದ ಅಂದಿನ ವ್ಯವಸ್ಥಾಪಕ ಮಂಡಳದ ಸತತ ಪ್ರಯತ್ನ ಮತ್ತು ರಾಷ್ಟೀಯ ಹಿಂದುಳಿದ ವರ್ಗದ ಆಯೋಗದ ಜೊತೆಯ ಸಮರ್ಕದಿಂದಾಗಿ ದೇವಾಡಿಗ ಸಮಾಜದ “ದೇವಾಡಿಗ” ಈ ಹೆಸರಿನೊಂದಿಗೆ ಸಮಾಜದ ಇತರ ಉಪನಾಮಗಳಾದ “ಸೇರಿಗಾರ” ಮತ್ತು “ಮೊಯಿಲಿ” ಈ ಹೆಸರುಗಳನ್ನೂ ದೇವಾಡಿಗ ಸಮಾಜವೆಂದು ಮಹಾರಾಷ್ಟ್ರ ಸರಕಾರದಿಂದ ಅಕ್ಟೋಬರ್, 2013ರಲ್ಲಿ ಅಧಿಕೃತವಾಗಿ ಘೋಷಣೆ ಆಯಿತು. ಅದಕ್ಕಾಗಿ ಡಾ. ಎಂ, ವೀರಪ್ಪ ಮೊಯಿಲಿ ಇವರು ಸಹಕರಿಸಿದ್ದರು.


ವಧು ವರ ಅನ್ವೇಷಣಾ ಸಮ್ಮೇಳನ: ಸಂಘದ ಅಂದಿನ ಮ್ಯಾಟ್ರಿಮೋನಿಯಲ್ ಸಮಿತಿಯ ಕಾರ್ಯಧ್ಯಕ್ಷ ಶ್ರೀ ವಾಸು ಟಿ. ದೇವಾಡಿಗ ಇವರ ನೇತೃತ್ವದಲ್ಲಿ ದೊಡ್ಡ ಪ್ರಮಾಣದ ವಧು ವರ ಅನ್ವೇಷಣಾ ಸಮ್ಮೇಳನ ಸಮಾರಂಭವನ್ನು ದೇವಾಡಿಗ ಭವನದಲ್ಲಿ ಮಾರ್ಚ್ 13, 2013ರಲ್ಲಿ ಆಯೋಜಿಸಲಾಗಿತ್ತು. ಅದೇ ರೀತಿಯಲ್ಲಿ ಒಕ್ಟೋಬರ್ 2, 2013ರಲ್ಲಿ ಇನ್ನೊಂದು ವಧು ವರ ಅನ್ವೇಷಣಾ ಸಮ್ಮೇಳನ ಸಮಾರಂಭವನ್ನುಆಯೋಜಿಸಿತ್ತು.


ಸಂಘದ 90ನೇ ವಾರ್ಷಿಕೋತ್ಸವ: ಸಂಘದ 9೦ನೇ ವಾರ್ಷಿಕೋತ್ಸವವು ಮೇ 18 ಮತ್ತು 19ನೇ 2015ರಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು. ದೇವಾಡಿಗ ಭವನ ನೆರೂಲ್ ಇಲ್ಲಿ ಎರಡು ದಿನಗಳ ಕಾಲ ನಡೆದ ಈ ಕಾರ್ಯಕ್ರಮವು “ದೇವಾಡಿಗ ಅಧಿವೇಶನ” ಮತ್ತು “ವಿಷನ್ 2025” ಈ ವಿಷಯಗಳನ್ನು ಆವರಿಸಿಕೊಂಡಿತ್ತು. ದೇವಾಡಿಗ ಅಧಿವೇಶನಲ್ಲಿ ದೇವಾಡಿಗ ಸಂಘದ ಜೊತೆಯಲ್ಲಿ ಮುಂಬಯಿಯ ಇತರ ಸಂಘಗಳ ಮಖಂಡರೊಡನೆ ವಿವಿಧ ವಿಷಯಗಳ ಸಮಾಲೋಚನೆ ಮತ್ತು ಅವರ ಗೌರವದ ಕಾರ್ಯಕ್ರಮ ನಡೆದರೆ, “ವಿಷನ್ 2025” ಈ ಕಾರ್ಯಕ್ರಮದಲ್ಲಿ ಸಂಘದ ಯುವ ವಿಭಾಗ ಮತ್ತು ಮಹಿಳಾ ವಿಭಾಗವನ್ನು ಹೆಚ್ಚು ಸ್ವಾವಲಂಬಿಯನ್ನಾಗಿ ಮಾಡುವಬಗ್ಗೆ ಚರ್ಚೆಗಳನ್ನು ಒಳಗೊಂಡಿತ್ತು. ಈ90ನೇ ವಾರ್ಷಿಕೋತ್ಸವದ ಸಂದರ್ಭ ಸಮಾಜದ ಅನೇಕ ಧುರೀಣರನ್ನು ಗುರುತಿಸಿ ಅವರು ತಮ್ಮ ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸಿದ ಸೇವೆಗಾಗಿ “ದೇವಾಡಿಗ ಶ್ರೀ”. “ದೇವಾಡಿಗ ರತ್ನ”, “ದೇವಾಡಿಗ ಮಿತ್ರ” ” ದೇವಾಡಿಗ ಕಲಾ ಶ್ರೀ”, ” ದೇವಾಡಿಗ ಕಲಾ ರತ್ನ”, ” ದೇವಾಡಿಗ ಉದ್ಯೋಗ ಶ್ರೀ”, ” ದೇವಾಡಿಗ ಉದ್ಯೋಗ ರತ್ನ” ಮೊದಲಾದ ಶೀರ್ಷಿಕೆಗಳನ್ನು ನೀಡಿ, ಗೌರವಿಸಿ ಸನ್ಮಾನಿಸಲಾಯಿತು.


ಶ್ರೀ ರಾಮ ದೇವರ ಮಂಟಪ ಪುನರ್ಪ್ರತಿಷ್ಟಾಪನ: ಫೆಬ್ರುವರಿ 2,2025ನೇ ತಾರೀಕಿಗೆ ದೇವಾಡಿಗ ಭವನದಲ್ಲಿ ಸಂಘವು ನೂತನವಾಗಿ ನಿರ್ಮಿಸಿದ ಗುಡಿಯಲ್ಲಿ ಶ್ರೀ ರಾಮ ದೇವರ ಮಂಟಪ ಪುನರ್ಪ್ರತಿಷ್ಟಾಪನ ಕಾರ್ಯಕ್ರಮವನ್ನು ಸಂಯೋಜಕರಾದ ನ್ಯಾಯವಾದಿ ಶ್ರೀ ಪ್ರಭಾಕರ್ ದೇವಾಡಿಗ ಇವರ ಮುಂದಾಳುತ್ವದಲ್ಲಿ ಅದ್ದೂರಿಯಿಂದ ಆಚರಿಸಲಾಯಿತು.
ದೇವಾಡಿಗ ಸಂಘಕ್ಕೆ 100 ವರ್ಷ: ದೇವಾಡಿಗ ಸಂಘ ಮುಂಬಯಿ ಇದು ನೂರು ವರ್ಷ ತುಂಬಿದ ಮುಂಬಯಿ ಮಹಾನಗರದ ಕೆಲವೇ ಸಂಸ್ಥೆಗಳಲ್ಲಿ ಒಂದಾಗಿದೆ. ಸಂಘದ ಶತಮಾನೋತ್ಸವವು ಎಪ್ರಿಲ್ 5 ಮತ್ತು 6, 2025 ರಂದು ಆಚರಿಸುವ ನಿಟ್ಟಿನಲ್ಲಿ ಬಹಳ ಶ್ರಮದ ಅದ್ದೂರಿಯ ತಯಾರಿ ನಡೆಯುತ್ತಿದೆ. ಅದರ ಪೂರ್ವಭಾಗಿಯಾಗಿ ಈ ಲೇಖನವನ್ನು ಸಮಾಜದ ಮುಂದಿಡಲು ಸಂತೋಷವಾಗುತ್ತಿದೆ.


ಸಂಘದ ಬೆಳವಣಿಗೆಯಲ್ಲಿ ಅಧ್ಯಕ್ಷರುಗಳ ಪಾತ್ರ: ಸಂಘದ ನೂರು ವರ್ಷಗಳ ಅವಧಿಯಲ್ಲಿ ಸುಮಾರು 30 ಅಧ್ಯಕ್ಷರುಗಳು ಸಂಘದ ಮುಂದಾಳು ವಹಿಸಿದ್ದು ಕೆಲವರು ಒಂದು ಬಾರಿ, ಮತ್ತೆ ಕೆಲವರು ಎರಡು ಬಾರಿ ಮತ್ತು ಕೆಲವರು ಮೂರು ಬಾರಿ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರತೀ ಅಧ್ಯಕ್ಷರು ತಮ್ಮದೇ ಆದ ಕೊಡುಗೆಯನ್ನು ಸಂಘಕ್ಕೆ ನೀಡಿದ್ದಾರೆ. ಸಂಘದ ಬೆಳವಣಿಗೆಯಲ್ಲಿ ಪ್ರತಿಯೋರ್ವರೂ ಕೈ ಜೋಡಿಸುತ್ತಾ ಬಂದಿರುವುದರಿಂದ ಸಂಘವು ಯಶಸ್ವಿಯಾಗಿ ನೂರು ವರ್ಷ ಬಾಳಿದೆ. ಇತ್ತೀಚಿನ ಅಧ್ಯಕ್ಷರಲ್ಲಿ ದಿ. ಶ್ರೀ ಗೋಪಾಲ ಮೊಯ್ಲಿ ಇವರು ಉತ್ತಮ ಸೇವೆ ನೀಡಿದ್ದಾರೆ. ಬಳಿಕ ಶ್ರೀ ಧರ್ಮಪಾಲ ದೇವಾಡಿಗರು ಅತೀ ಹೆಚ್ಚು ಕಾಲ ಸಂಘದ ಅಧ್ಯಕ್ಷರಾಗಿದ್ದವರು ಮತ್ತು ಅವರ ಅವಧಿಯಲ್ಲಿ ದೇವಾಡಿಗ ಭವನದ ಉದ್ಘಾಟನೆ ನಡೆಯಿತು. ಬಳಿಕ ಶ್ರೀ ಕೆ.ಕೆ. ಮೋಹನದಾಸ್ ಇವರ ಅಧ್ಯಕ್ಷತೆಯಲ್ಲಿ ಸಂಘದ ಚಟುವಟಿಕೆಗಳು ಮತ್ತಷ್ಟು ಬೆಳೆದು ಕ್ರೀಡಾ ಸಮಿತಿಯ 50ನೇ ಕ್ರೀಡಾಮಹೋತ್ಸವ ಬಹಳ ಅದ್ದೊರಿಯಿಂದ ನಡೆಯಿತು. ಆಮೇಲೆ ಶ್ರೀ ಹಿರಿಯಡ್ಕ ಮೋಹನದಾಸ್ ಇವರ ಅಧ್ಯಕ್ಷತೆಯಲ್ಲಿ ಸಂಘವು ಉತ್ತಮ ಪ್ರಗತಿ ಸಾಧಿಸಿದುದಲ್ಲದೆ, ಸಂಘದ ಹತ್ತು ಪ್ರಾದೇಶಿಕ ಸಮಿತಿಗಳ ನಿರ್ಮಾಣವಾಯಿತು. ನಂತರ ಬಂದವರು ಶ್ರೀ ವಾಸು ದೇವಾಡಿಗ, ಇವರ ಅಧ್ಯಕ್ಷತೆಯಲ್ಲಿ ಸಂಘವು ಶಿಕ್ಷಣ ಮತ್ತು ಆರೋಗ್ಯದ ಕಡೆಗೆ ಹೆಚ್ಚು ಗಮನ ನೀಡಲಾಯಿತು. ಶ್ರೀ ರವಿ ದೇವಾಡಿಗರು ಕೊನೆಯ ಅಧ್ಯಕ್ಷರಾಗಿದ್ದು ಸಂಘದ ಆರ್ಥಿಕ ಪರಿಸ್ಥಿತಿ ಉತ್ತಮಗೊಳಿಸುವಲ್ಲಿ ಉತ್ತಮ ಕಾರ್ಯ ಅಲ್ಲದೆ ಶ್ರೀ ಏಕನಾಥೇಶ್ವರಿ ದೇವಸ್ಥಾನ ಬಾರಕೂರು ಯೋಜನೆಯಲ್ಲಿ ಮುಂಬಯಿ ಸಂಘದ ಪ್ರತಿಭೆಯನ್ನು ಹೆಚ್ಚಿಸಿದ್ದರು ಮತ್ತು ಸಂಘದ ಶೈಕ್ಷಣಿಕ ಯೋಜನೆಯಡಿಯಲ್ಲಿ ವಿದ್ಯಾಲಯಕ್ಕಾಗಿ ಭೂಮಿಯ ಶೋಧನೆಗಾಗಿ ತುಂಬಾ ಪ್ರಯತ್ನ ಪಟ್ಟಿದ್ದರು ಮತ್ತು ದೇವಾಡಿಗ ಭವನದಕ್ಕೆ ಲಿಫ್ಟ್ ಮತ್ತು ಹೆಚ್ಚಿನ ಆಕರ್ಷಣೆಯನ್ನು ಒದಗಿಸುವಲ್ಲಿ ದುಡಿದಿದ್ದಾರೆ. ಪ್ರಸ್ತುತ ಅಧ್ಯಕ್ಷರಾದ ಶ್ರೀ ಪ್ರವೀಣ್ ಎನ್. ದೇವಾಡಿಗರ ಮುಂದಾಳುತ್ವದಲ್ಲಿ ಸಂಘವು ಶತಮಾನೋತ್ಸವವನ್ನು ಆಚರಿಸುತ್ತಿದ್ದು, ಯುವಕರು, ಪ್ರಾದೇಶಿಕ ಸಮಿತಿಗಳು ಮತ್ತು ಮಹಿಳೆಯರನ್ನು ಸಂಘದ ಮುಖ್ಯ ವಾಹಿನಿಗೆ ತರುವಲ್ಲಿ ಬಹಳ ಪ್ರಯತ್ನ ಪಟ್ಟಿದ್ದುದಲ್ಲದೆ, ದೇವಾಡಿಗ ಸೆಂಟರ್ ಸಭಾಗ್ರಹ ದಾದರ್, ದೇವಾಡಿಗ ಭವನ ನೆರೂಲ್ ಇದರ ನೂತನೀಕರಣ ಮತ್ತು ಭವನದಲ್ಲಿ ಶ್ರೀ ರಾಮ ದೇವರ ಗುಡಿ ನಿರ್ಮಿಸುವ ಕಾರ್ಯ ಮಾಡಿದ್ದಾರೆ.


ಸಂಘದ ಆಡಳಿತ ಮಂಡಳಿ 2022 -2025: ಈ ಅವಧಿಯ ವ್ಯವಸ್ಥಾಪಕ ಸಮಿತಿಯ ನೇತೃತ್ವದಲ್ಲಿ ಸಂಘದ ಶತಮಾನೋತ್ಸವ ನಡೆಯುತ್ತಿದ್ದು, ಈ ಆಡಳಿತ ಮಂಡಳಿ ಕೆಳಗಿನಂತಿದೆ. ಅಧ್ಯಕ್ಷರು, ಪ್ರವೀಣ್ ಏನ್. ದೇವಾಡಿಗ; ಉಪಾಧ್ಯಕ್ಷರು: ಶ್ರೀ ನರೇಶ್ ಎಸ್ ದೇವಾಡಿಗ ಮತ್ತು ಶ್ರೀಮತಿ ಮಾಲತಿ ಜೆ. ಮೊಯ್ಲಿ; ಗೌರವ ಪ್ರಧಾನ ಕಾರ್ಯದರ್ಶಿ, ಶ್ರೀ ವಿಶ್ವನಾಥ ಬಿ. ದೇವಾಡಿಗ: ಗೌರವ ಜೊತೆ ಕಾರ್ಯದರ್ಶಿಗಳು, ನ್ಯಾಯವಾದಿ ಪ್ರಭಾಕರ ಎಸ್. ದೇವಾಡಿಗ ಮತ್ತು ಶ್ರೀ ನಿತೇಶ್ ದೇವಾಡಿಗ; ಜೊತೆ ಖಜಾಂಚಿಗಳು: ಶ್ರೀಮತಿ ಸುರೇಖಾ ಎಚ್. ದೇವಾಡಿಗ ಮತ್ತು ಶ್ರೀ ಸುರೇಶ್ ಆರ್. ದೇವಾಡಿಗ; ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ, ಶ್ರೀಮತಿ ಜಯಂತಿ ಎಂ. ದೇವಾಡಿಗ; ಕ್ರೀಡಾ ಸಮಿತಿಯ ಕಾರ್ಯಧ್ಯಕ್ಷರು ಶ್ರೀ ಮೋಹನದಾಸ್ ಬಿ. ಗುಜರನ್ ಮತ್ತು ಉಪಾಧ್ಯಕ್ಷೆ ಶ್ರೀಮತಿ ಶುಭ ದೇವಾಡಿಗ; ವೈದ್ಯಕೀಯ ಸಮಿತಿ ಕಾರ್ಯಧ್ಯಕ್ಷ, ಶ್ರೀ ಸುಂದರ್ ಸಿ. ಮೊಯ್ಲಿ, ಶಿಕ್ಷಣ ಸಮಿತಿ ಕಾರ್ಯಧ್ಯಕ್ಷ, ಶ್ರೀ ಸುಧಾಕರ ಎಲ್ಲೂರು; ಸಾಮಾಜಿಕ ಮತ್ತು ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷೆ ಶ್ರೀಮತಿ ಪೂರ್ಣಿಮಾ ಡಿ. ದೇವಾಡಿಗ ಮತ್ತು ಉಪಾಧ್ಯಕ್ಷೆ ಶ್ರೀಮತಿ ಗೀತಾ ಎಲ್ ದೇವಾಡಿಗ, ಪ್ರಾದೇಶಿಕ ಸಮನ್ವಯ ಸಮಿತಿ ಕಾರ್ಯಧ್ಯಕ್ಷ, ಶ್ರೀ ಜಯ ಎಲ್ ದೇವಾಡಿಗ; ವೈವಾಹಿಕ ಸೇವಾ ಸಮಿತಿ ಕಾರ್ಯಾಧ್ಯಕ್ಷರು, ಶ್ರೀಮತಿ ಪ್ರಫುಲ್ಲ ವಿ. ದೇವಾಡಿಗ; ಸಾಮಾಜಿಕ ಹೊಣೆಗಾರಿಕೆ ಮತ್ತು ವಿಶೇಷ ಯೋಜನೆಗಳ ಕಾರ್ಯಾಧ್ಯಕ್ಷೆ, ಶ್ರೀಮತಿ ಜಯಂತಿ ಆರ್. ಮೊಯ್ಲಿ, ಜನ ಸಂಪರ್ಕ ಸಮಿತಿ ಕಾರ್ಯಧ್ಯಕ್ಷರು, ಶ್ರೀ ಪ್ರಭಾಕರ ಎಸ್. ದೇವಾಡಿಗ; ಆಂತರಿಕ ಲೆಕ್ಕ ಪರಿಶೋಧನೆ, CA ಶ್ರೀ ಜಗದೀಶ್ ದೇವಾಡಿಗ, ಯುವ ವಿಭಾಗದ ಕಾರ್ಯಾಧ್ಯಕ್ಷರು, Adv. ಬ್ರಿಜೇಶ್ ನಿಟ್ಟೇಕರ್ ಸಲಹಾ ಸಮಿತಿ ಸದಸ್ಯರು, ಶ್ರೀ ರವಿ ಎಸ್ ದೇವಾಡಿಗ, ಶ್ರೀ ವಾಸು ಎಸ್. ದೇವಾಡಿಗ ಮತ್ತು ಶ್ರೀ ಹಿರಿಯಡ್ಕ ಮೋಹನದಾಸ್.


ಶತಮಾನೋತ್ಸವ ಆಚರಣಾ ಸಮಿತಿ: ಪ್ರಮುಖ ಪೋಷಕರು, ಶ್ರೀ ಎಂ. ವೀರಪ್ಪ ಮೊಯಿಲಿ, ಗೌರವಾಧ್ಯಕ್ಷರು, ಶ್ರೀ ಧರ್ಮಪಾಲ ಯು. ದೇವಾಡಿಗ; ಅಧ್ಯಕ್ಷರು, ಶ್ರೀ ಪ್ರವೀಣ್ ಏನ್. ದೇವಾಡಿಗ; ಮುಖ್ಯ ಸಂಯೋಜಕರು, ಶ್ರೀ ಹಿರಿಯಡ್ಕ ಮೋಹನದಾಸ್, ಉಪಾಧ್ಯಕ್ಷರುಗಳು ಸರ್ವಶ್ರೀ ವಾಸು ಎಸ್. ದೇವಾಡಿಗ, ರವಿ ಎಸ್. ದೇವಾಡಿಗ, ಶ್ರೀ ನರೇಶ್ ಎಸ್ ದೇವಾಡಿಗ, ಮಾಲತಿ ಜೆ. ಮೊಯ್ಲಿ, ಪುಷ್ಪಾ ಎಸ್. ರಾವ್, ನಾಗರಾಜ್ ಜಿ. ಪಡುಕೋಣೆ, ಜನಾರ್ಧನ್ ಎಸ್. ದೇವಾಡಿಗ, ರಾಮಣ್ಣ ಬಿ. ದೇವಾಡಿಗ, ರಘು ಎ. ಮೊಯಿಲಿ, ಹೆಚ್. ಜಯ ದೇವಾಡಿಗ, ಜಯಂತಿ ಎಂ. ದೇವಾಡಿಗ, ಸುಂದರ್ ಸಿ. ಮೊಯ್ಲಿ, ಪ್ರತಿಭಾ ಜಿ. ದೇವಾಡಿಗ, CA ಶ್ರೀ ಜಗದೀಶ್ ದೇವಾಡಿಗ, ಭಾರತಿ ಎಸ್. ನಿಟ್ಟೇಕರ್, ಉಮಾವತಿ ಜೆ. ಗುಜರನ್, ಪೂರ್ಣಿಮಾ ಡಿ. ದೇವಾಡಿಗ; ಕಾರ್ಯದರ್ಶಿಗಳು, ಸರ್ವಶ್ರೀ ವಿಶ್ವನಾಥ್ ಬಿ. ದೇವಾಡಿಗ, ಪದ್ಮನಾಭ ಎ. ದೇವಾಡಿಗ, ಕೃಷ್ಣ ಎನ್. ಸೇರಿಗಾರ್ ಮತ್ತು Adv . ಬ್ರಿಜೇಶ್ ನಿಟ್ಟೇಕರ್; ಜೊತೆ ಕಾರ್ಯದರ್ಶಿಗಳು: Adv . ಪ್ರಭಾಕರ್ ಎಸ್. ದೇವಾಡಿಗ, ನಿತೇಶ್ ದೇವಾಡಿಗ, ರಂಜಿನಿ ಆರ್. ಮೊಯಿಲಿ, ದೀಪಕ್ ಎಸ್. ಸಾಲಿಯಾನ್, ಆನಂದ್ ಎನ್. ದೇವಾಡಿಗ, ಆನಂದ್ ಕೆ. ಸೇರಿಗಾರ; ಜೊತೆ ಖಜಾಂಚಿಗಳು, ಸರ್ವಶ್ರೀ ಕೃಷ್ಣ ಬಿ. ದೇವಾಡಿಗ, ಸುರೇಖಾ ಹೆಚ್. ದೇವಾಡಿಗ, ಸುರೇಶ್ ಆರ್. ದೇವಾಡಿಗ, ಜಯಂತಿ ಆರ್. ಮೊಯಿಲಿ, ಲತಾ ಎ. ಸೇರಿಗಾರ, ಪ್ರಮೀಳಾ ವಿ. ಶೇರಿಗಾರ್, ಕೃಷ್ಣ ಎನ್. ದೇವಾಡಿಗ ಮತ್ತು ಗೀತಾ ಎಲ್. ದೇವಾಡಿಗ ಅಲ್ಲದೆ, ಶತಮಾನೋತ್ಸವ ಸಮಿತಿಯಲ್ಲಿ ಎಲ್ಲಾ ಪ್ರಾದೇಶಿಕ ಸಮಿತಿಗಳ ಕಾರ್ಯಧ್ಯಕ್ಷರುಗಳು ಜೊತೆ ಕಾರ್ಯದರ್ತಿಗಳಾಗಿ, ಎಲ್ಲಾ ಪ್ರಾದೇಶಿಕ ಸಮಿತಿಗಳ ಮಹಿಳಾ ಕಾರ್ಯಧ್ಯಕ್ಷರುಗಳು ಸಹಾಯಕ ಕಾರ್ಯದರ್ಶಿಗಳಾಗಿ ಆಯ್ಕೆಗೊಂಡಿದ್ದಾರೆ. ಹಾಗೂ ಈ ಸಮಿತಿಯು ಒಟ್ಟು ನೂರು ಸದಸ್ಯರನ್ನು ಒಳಗೊಂಡಿದೆ.

ದೇವಾಡಿಗ ಸುಧಾರಕ ಸಂಘ ಮುಂಬಯಿ ಮತ್ತು ದೇವಾಡಿಗ ಸಂಘ ಮುಂಬಯಿ ಇದರ ಇದುವರೆಗೆ ಅಧ್ಯಕ್ಷೀಯ ಸ್ಥಾನದಲ್ಲಿದ್ದ ಮಹನೀಯರು:
ಕ್ರ. ಸ. ಹೆಸರು ವರ್ಷ
1 ಎಂ. ಬಾಬು ದೇವಾಡಿಗ (ಸಂಸ್ಥಾಪಕರು)
2 ಎರ್ಮಾಳ್ ಕೊರಗಪ್ಪ ಶ್ರೀಯಾನ್
1 ಎಂ. ಬಾಬು ದೇವಾಡಿಗ (ಸಂಸ್ಥಾಪಕರು) 1925 – 28
2 ಸೇಸ ಆರ್. ಗುಜರಾನ್ 1928-29,30-33, 36-39
3 ಕದ್ರಿ ವೀರಪ್ಪ ದೇವಾಡಿಗ 1929-30
4 ಪಿ. ಎನ್. ರಾವ್ 1933 – 34
5 ವೈ. ನೀಲಯ್ಯ 1934-36
6 ಬಿ. ನಾರಾಯಣ್ ರಾವ್ 1939-41
7 ಎಲ್. ಬಿ. ಉಳ್ಳಾಲ್ 1941-44,45-50
8 ಬಿ. ಪಿ. ಶ್ರೀಯಾನ್ 1944-45
9 ಎಂ. ವೆಂಕಟ್ರಾವ್ 1950-54,70-72
10 ಪಿ. ರಾಮಯ್ಯ ದೇವಾಡಿಗ 1954-56
11 ಬಿ. ಕೆ. ಶ್ರೀಯಾನ್ 1956-58
12 ಪಿ. ಆರ್ ಮೊಯಿಲಿ 1958-60
13 ಎಸ್. ವಿ. ಉಳ್ಳಾಲ್ 1960-62
14 ಸಿ.ಡಿ. ಉಳ್ಳಾಲ್ 1962-64
15 ಕೆ. ಭುಜಂಗಾಧರ್ 1964-66`
16 ಕೆ. ಭೋಜ ರಾವ್ 1966-70
17 ಪಿ. ದಯಾನಂದ್ 1972-78,92-94
18 ದಿವಾಕರ್ ದೇವಾಡಿಗ 1978-80
18 ಬಿ. ಕೆ. ಸಾಲಿಯಾನ್ 1980-82
20 ಎಸ್. ಕೆ. ಶ್ರೀಯಾನ್ 1982-84
21 ಜೆ. ಕೆ. ಮೊಯಿಲಿ 1984-86,1994-96
22 ಎನ್. ಜಿ. ಪಡುಬಿದ್ರಿ 1986-88
23 ಕೆ. ಕೆ. ನಂದಾ 1988-90
24 ಎಸ್. ಪಿ. ಕರ್ಮರನ್ 1990-92
25 ಗೋಪಾಲ್ ಎಂ. ಮೊಯಿಲಿ 1996-98
26 ಧರ್ಮಪಾಲ್ ಯು ದೇವಾಡಿಗ 1998-2008
27 ಕೆ. ಕೆ. ಮೋಹನ್ದಾಸ್ 2008-10
28 ಹಿರಿಯಡ್ಕ ಮೋಹನದಾಸ್ 2010-2013
29 ವಾಸು ಎಸ್. ದೇವಾಡಿಗ 2013-16
30 ರವಿ ಎಸ್. ದೇವಾಡಿಗ 2016-22

Related posts

ಹನಿ ಕತೆ: ಪರಿಹಾರ

Vani Prasad

ಕರೆದಲ್ಲಿ ಬರುವ, ಕೇಳಿದ ವರ ಕೊಡುವ ಮೆಟ್ಕಲ್ ಗುಡ್ಡ ಗಣಪತಿ

Chandrahas

ರಾಜಪ್ರಭುತ್ವದ ಕನ್ನಡಿಯಲ್ಲಿ ಕಂಡ ‘ಕಾಮಾಗ್ನಿಮಿತ್ರ’

Chandrahas

ಉಡುಪಿ ಜಿಲ್ಲೆಯಲ್ಲಿದೆ ಮಹಿಷಾಸುರ ದೇವಾಲಯ,ಮಹಿಷನಿಗೆ ನಡೆಯುತ್ತಿದೆ ಪೂಜೆ

Mumbai News Desk

ಮೈಸಂದಾಯೆ

Mumbai News Desk

ಸುನಿತಾ ವಿಲಿಯಮ್ಸ್ ಗೂ ಭಾರತಕ್ಕೂ ಇರುವ ಸಂಬಂಧ

Mumbai News Desk