
ಮುಲ್ಕಿ: ಮುಲ್ಕಿ ತಾಲೂಕಿನ ಪಡುಪಣಂಬೂರು ಮಂಡಲದ ಹಿಂದೂ ಸಂಗಮ ಆಯೋಜನಾ ಸಮಿತಿಯ ವತಿಯಿಂದ ‘ಹಿಂದೂ ಸಂಗಮ’ ಕಾರ್ಯಕ್ರಮವು ಜ. 18ರ ಭಾನುವಾರ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮುಂಭಾಗದ ಬೃಹತ್ ವೇದಿಕೆಯಲ್ಲಿ ಅದ್ದೂರಿಯಾಗಿ ನಡೆಯಿತು.
ಕಟೀಲು ಕ್ಷೇತ್ರದ ಅರ್ಚಕ ಹಾಗೂ ಮುಲ್ಕಿ ತಾಲೂಕು ಹಿಂದೂ ಸಂಗಮ ಆಯೋಜನಾ ಸಮಿತಿಯ ಅಧ್ಯಕ್ಷರಾದ ವೇದಮೂರ್ತಿ ಹರಿನಾರಾಯಣ ದಾಸ ಅಸ್ರಣ್ಣ ಅವರು ಆಶೀರ್ವಚನ ನೀಡಿ, “ಹಿಂದೂ ಸಂಗಮದಂತಹ ಕಾರ್ಯಕ್ರಮಗಳ ಮೂಲಕ ಸನಾತನ ಧರ್ಮವನ್ನು ಉಳಿಸಿ, ಬೆಳೆಸಲು ನಾವೆಲ್ಲರೂ ಮುಂದಾಗಬೇಕು,” ಎಂದು ಕರೆ ನೀಡಿದರು. ಮುಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಪ್ರಾಂತ ಕುಟುಂಬ ಪ್ರಬೋಧನ ಸಂಯೋಜಕ ಹಾಗೂ ಪ್ರಧಾನ ಭಾಷಣಕಾರರಾದ ವೆಂಕಟೇಶ್ ಹೆಗ್ಡೆ ಮಾತನಾಡಿ, “ಹಿಂದುತ್ವವು ಈ ದೇಶದ ಅಸ್ಮಿತೆಯಾಗಿದೆ. ಭಾರತವು ಅತ್ಯಂತ ಶ್ರೇಷ್ಠ ನಾಡಾಗಿದ್ದು, ಇಲ್ಲಿ ಹಿಂದುತ್ವವನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಯುವಜನಾಂಗಕ್ಕೆ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಕಲಿಸಿದರೆ ಅವರು ದೇಶದ ಭವ್ಯ ಪ್ರಜೆಗಳಾಗುತ್ತಾರೆ. ಮಕ್ಕಳನ್ನು ಮೊಬೈಲ್‌ನಿಂದ ದೂರವಿರಿಸಿ ಧಾರ್ಮಿಕ ಆಚರಣೆಗಳಿಗೆ ಮಹತ್ವ ನೀಡಿದಾಗ ಮಾತ್ರ ಕುಟುಂಬದ ಮೌಲ್ಯಗಳು ಉಳಿಯಲು ಸಾಧ್ಯ. ಸಮಾಜದಲ್ಲಿ ಸಾಮರಸ್ಯದ ಬಗ್ಗೆ ಚಿಂತನೆ ನಡೆಯಬೇಕಿದೆ. ಜಗತ್ತಿಗೆ ಆದರ್ಶವಾಗಿರುವ ಭಾರತದ ಪ್ರಕೃತಿದತ್ತ ಪರಿಸರವನ್ನು ನಾವು ರಕ್ಷಿಸಬೇಕು ಮತ್ತು ಸ್ವದೇಶಿ ವಸ್ತುಗಳನ್ನು ಬೆಂಬಲಿಸಬೇಕು,” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗುರುರಾಜ್ ಎಸ್. ಪೂಜಾರಿ, ಬೆಳ್ಳಾಯರು ಶ್ರೀ ಚಂದ್ರಮೌಳೀಶ್ವರ ದೇವಸ್ಥಾನದ ಉಪಾಧ್ಯಕ್ಷ ವಿದ್ಯಾಧರ ಶೆಟ್ಟಿ, ರಮೇಶ್ ಕಲ್ಲಾಪು, ಮುಲ್ಕಿ ಹೋಬಳಿ ಒಂಬತ್ತು ಮಾಗಣೆ ಮುಂಡಾಲ ಸೇವಾ ಟ್ರಸ್ಟ್ ಉಪಾಧ್ಯಕ್ಷ ಶಂಕರ್ ಮಾಸ್ಟರ್ ಗೋಳಿಜೋರಾ, ನಿಡ್ಡೋಡಿ ಶ್ರೀ ದುರ್ಗಾ ದೇವಿ ವಿದ್ಯಾಸಂಸ್ಥೆಯ ಶಿಕ್ಷಕಿ ಸಂಧ್ಯಾ ಉಮೇಶ್ ಆಚಾರ್ಯ, ಕೆರೆಕಾಡು ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂದಿರದ ಅಧ್ಯಕ್ಷ ರಾಜೇಶ್ ಕೆರೆಕಾಡು, ಮತ್ತು ರತ್ನಾ ಶಿವಾನಂದ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮಕ್ಕೂ ಮುನ್ನ ಕೆರೆಕಾಡು ಮತ್ತು ಕಲ್ಲಾಪು ಲೈಟ್ ಹೌಸ್ ಬಳಿಯಿಂದ ತೋಕೂರು ದೇವಸ್ಥಾನದವರೆಗೆ ಸಾವಿರಾರು ಭಕ್ತರನ್ನೊಳಗೊಂಡ ಭವ್ಯ ಶೋಭಾ ಯಾತ್ರೆ ನಡೆಯಿತು. ವೇದಿಕೆಯಲ್ಲಿ ಗೋಪೂಜೆ ನೆರವೇರಿಸಿ, ಭಾರತ್ ಮಾತೆಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
ಲೀಲಾ ಬಂಜನ್ ಪ್ರಾರ್ಥಿಸಿದರು, ಮಾದವ ಶೆಟ್ಟಿಗಾರ್ ಸ್ವಾಗತಿಸಿದರು. ತೋಕೂರು ದೇವಸ್ಥಾನದ ಮಾಜಿ ಮೊಕ್ತೇಸರ ಹರಿದಾಸ್ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂತೋಷ್ ದೇವಾಡಿಗ ವಂದಿಸಿದರು ಮತ್ತು ಮನೀಶ್ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು.




