31 C
Mumbai
March 6, 2026
Mumbai News Kannada
ಲೇಖನ

ಕನ್ನಡದ ಪರಿಚಾರಿಕೆಯಲ್ಲಿ 90 ವರ್ಷಗಳನ್ನು ಪೂರ್ಣಗೊಳಿಸಿದ ಮುಂಬಯಿಯ ಹಿರಿಯ ಸಂಸ್ಥೆ: ಮುಂಬಯಿ ಕನ್ನಡ ಸಂಘ





ಉದ್ಯೊಗ, ಉದ್ಯಮದ ಉದ್ದೇಶವನ್ನಿರಿಸಿಕೊಂಡು ತಾಯ್ನಾಡನ್ನು ಬಿಟ್ಟುಮುಂಬಯಿ ಸೇರಿದ ಕನ್ನಡಿಗ ಮೊದಲಿಗೆ ತನ್ನ ಮೂಲಭೂತ ಅಗತ್ಯಗಳನ್ನು ಪೂರೈಸಿಕೊಂಡ. ನಂತರ ತನ್ನ ನಾಡು, ನುಡಿ, ಸಂಸ್ಕೃತಿ ಸಾಹಿತ್ಯಗಳತ್ತ ಗಮನ ಹರಿಸಿದ. ಒಂಟಿಯಾಗಿದ್ದ ಕನ್ನಡಿಗ ಜಂಟಿಯಾಗುವ ಬಯಕೆಯಿಂದ ಸಂಘ ಸಂಸ್ಥೆಗಳನ್ನು ಕಟ್ಟಲು ಆರಂಭಿಸಿದ. ಕಾವ್ಯರ್ಷಿ ಕುವೆಂಪುವರವರು “ಎಲ್ಲಾದರೂ ಇರು, ಎಂತಾದರೂ ಇರು, ನೀ ಕನ್ನಡವಾಗಿರು”ಎಂಬ ಕಹಳೆಯನ್ನು ಮೊಳಗಿಸುವ ಮೊದಲೇ ಇಲ್ಲಿ ಕನ್ನಡಿಗ ತನ್ನತನವನ್ನು ಮೆರೆಸಲು ಆರಂಭಿಸಿದ್ದ. ಜಾತಿ ಬಾಂಧವರನ್ನು ಒಗ್ಗೂಡಿಸಲು ಜಾತಿ ಸಂಸ್ಥೆಗಳನ್ನು ಕಟ್ಟಿಕೊಂಡ. ಇಷ್ಟರಲ್ಲೇ ತೃಪ್ತಿಪಡದೆ ಭಾಷೆಯ, ಭಾಷಾ ಬಾಂಧವರ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಕನ್ನಡ ಸಂಘಗಳನ್ನು ಕಟ್ಟಿದ. ಕ್ರಿಯಾಶೀಲ, ರಚನಾತ್ಮಕ ಕಾರ್ಯಕ್ರಮಗಳಿಂದ ಕನ್ನಡಿಗರಲ್ಲಿ ನಾಡು ನುಡಿಯ ಬಗ್ಗೆ ಅಭಿಮಾನವನ್ನು ಮೊಳೆಯಿಸಿದ. ಸಾಹಿತ್ಯ, ಸಂಗೀತ, ನಾಟಕ, ಯಕ್ಷಗಾನಗಳು ಒಳನಾಡಿನಂತೆ ಇಲ್ಲಿಯೂ ಮನೆ ಮಾತಾಗತೊಡಗಿತು. ಹೀಗೆ ಕನ್ನಡವನ್ನು ಉಳಿಸಿ ಬೆಳೆಸುವ, ಕನ್ನಡದ ಸಂಸ್ಕೃತಿಯನ್ನು ಮೆರೆಯಿಸುವ ಮಹಾನ್‌ ಧ್ಯೇಯದೊಂದಿಗೆ ಹುಟ್ಟಿಕೊಂಡ ಸಂಘ ಸಂಸ್ಥೆಗಳ ಪೈಕಿ ಮುಂಬಯಿ ಕನ್ನಡ ಸಂಘವೂ ಒಂದು.

.ಮಾಟುಂಗಾ ಪೂರ್ವದಲ್ಲಿ ನಿರ್ಮಾಣಗೊಳ್ಳುತ್ತಿರುವ ಮುಂಬೈ ಕನ್ನಡ ಸಂಘದ ಕಛೇರಿ ಇರುವ ಭವ್ಯವಾದ ಬಹುಮಹಡಿ ಕಟ್ಟಡ.


1936ರ ಚಾಂದ್ರಮಾನ ಯುಗಾದಿಯ ಶುಭ ದಿನದಂದು ಮಧ್ಯ ಮುಂಬಯಿಯ ವರ್ಲಿಯ ನೀಲಂಕಂಠೇಶ್ಶರ ದೇವಸ್ಥಾನದಲ್ಲಿ ಕೀರ್ತನ ಕೇಸರಿ ಬೇಲೂರು ಕೇಶವದಾಸರಿಂದ ಉದ್ಘಾಟನೆಗೊಂಡ ಮುಂಬಯಿ ಕನ್ನಡ ಸಂಘವು ಹಲವಾರು ವರ್ಷಗಳ ನಂತರ ಮಾಟುಂಗಾದ ಭಾವುದಾಜಿ ರಸ್ತೆಯಲ್ಲಿರುವ ವೆಂಕಟೇಶ ನಿವಾಸಕ್ಕೆ ಸ್ಥಳಾಂತರಗೊಂಡಿತು. ಭದ್ರಬುನಾದಿಯೊಂದಿಗೆ ಬೆಳೆದು ಇದೀಗ ಮಹತ್ವಪೂರ್ಣ 90 ವರ್ಷಗಳನ್ನು ಪೂರೈಸಿ ಮುನ್ನಡೆಯುತ್ತಿದೆ. ಒಂದು ಸಂಸ್ಥೆಯ ಜೀವಮಾನದಲ್ಲಿ 90 ವರ್ಷಗಳ ಅವಧಿ ಬಹುದೊಡ್ಡ ಕಾಲಮಾನವಾಗಿದೆ. ರಚನಾತ್ಮಕ ಕಾರ್ಯಕ್ರಮಗಳು, ಕ್ರಿಯಾಶೀಲ ಚಟುವಟಿಕೆಗಳು ಇಲ್ಲದೆ ಯಾವುದೇ ಸಂಸ್ಥೆ ಬೆಳೆಯಲಾರದು. ಆದುದರಿಂದಲೇ ಪುರಂದರದಾಸರ ಆರಾಧನೆ, ಬಸವ ಜಯಂತಿ, ಗಣೇಶೋತ್ಸವ, ಶಾರದಾ ಪೂಜೆ, ದತ್ತಿ ಉಪನ್ಯಾಸ , ಕಮ್ಮಟಗಳು, ಸಾಹಿತ್ಯ ಚಟುವಟಿಕೆಗಳು, ಕನ್ನಡಡೇತರರ ಸಲುವಾಗಿ ಕನ್ನಡ ತರಗತಿ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು 90 ವರ್ಷಗಳಿಂದ ಸತತವಾಗಿ ಸಂಘವನ್ನು ಮುನ್ನಡೆಸಿಕೊಂಡು ಬಂದ ಮಹನೀಯರಿಗೆ ಈ ಸಂಸ್ಥೆಯನ್ನು ಉಳಿಸಿ ಬೆಳೆಸಿದ ಶ್ರೇಯಸ್ಸು ಸಲ್ಲುತ್ತದೆ. ಮುಂಬಯಿಯ ಪ್ರಥಮ ಕನ್ನಡ ಶಾಲೆಯಾಗಿರುವ ವಡಾಲಾದ ಎನ್‌.ಕೆ.ಇ.ಎಸ್‌. ಶಾಲೆಯನ್ನು ಸ್ಥಾಪಿಸಿದ ಶ್ರೇಯ ಮುಂಬಯಿ ಕನ್ನಡ ಸಂಘಕ್ಕೆ ಸಲ್ಲುತ್ತದೆ.
ಕಳೆದ ಒಂಭತ್ತು ದಶಕಗಳಿಂದ ಸಂಘವು ನಿರಂತರವಾಗಿ ಕನ್ನಡಪರ ಸೇವೆಗಳನ್ನು ಮಾಡುತ್ತಾ ಬಂದಿರುವುದು ಮಾತ್ರವಲ್ಲದೆ ವಿವಿಧ ವಿಷಯಗಳ ಮೇಲಿನ ಸುಮಾರು ಹದಿನಾಲ್ಕು ಸಾವಿರಕ್ಕೂ ಮಿಕ್ಕಿ ಪುಸ್ತಕಗಳಿರುವ ಒಂದು ಸುಸಜ್ಜಿತವಾದ ಗ್ರಂಥಾಲಯವನ್ನೂ ಹೊಂದಿದೆ. ನಮ್ಮ ಸಂಘದ ಸದಸ್ಯರು ಮಾತ್ರವಲ್ಲದೆ ಬೇರೆ ಬೇರೆ ವಿಶ್ವವಿದ್ಯಾಲಯಗಳಲ್ಲಿನ ಸಂಶೋಧನಾ ವಿದ್ಯಾರ್ಥಿಗಳು ಕೂಡಾ ಈ ಗ್ರಂಥಾಲಯದಲ್ಲಿ ದೊರೆಯುವ ಅಪರೂಪದ ಪುಸ್ತಕಗಳ ಪ್ರಯೋಜನ ಪಡೆಯುತ್ತಿದ್ದಾರೆ. ದ.ರಾ,ಬೇಂದ್ರೆ, ಶಿವರಾಮ ಕಾರಂತ, ವೀ.ಸೀ.,ಸಿ.ಕೆ.ವೆಂಕಟರಾಮಯ್ಯ, ಮಾಸ್ತಿ, ಎಸ್‌.ಎಲ್‌. ಭೈರಪ್ಪ, ಪಿ.ಲಂಕೇಶ್‌, ಜಿ.ಎಸ್. ಶಿವರುದ್ರಪ್ಪ, ಕುರ್ತಕೋಟಿ, ಹಂಪನಾ, ಮಲ್ಲೇಪುರಂ ವೆಂಕಟೇಶ ಜಿ., ಎಂ, ರಾಮಚಂದ್ರ ಹೀಗೆ ಕರ್ನಾಟಕದ ಹಿರಿಯ ಸಾಹಿತಿಗಳು, ರಾಜ ಮನೆತವರಾದ ಶ್ರೀ ಜಯಚಾಮರಾಜ ಒಡೆಯರ್‌, ರಾಜಕೀಯ ಧುರೀಣರಾದ ಎಸ್‌. ನಿಜಲಿಂಗಪ್ಪ, ಕೆಂಗಲ್‌ ಹನುಮಂತಯ್ಯ, ಎಚ್‌.ಸಿ. ದಾಸಪ್ಪ, ಜನಾರ್ದನ ಪೂಜಾರಿ, ರಾಣಿ ಸತೀಶ್‌ ಮುಂಬಯಿಗೆ ಬಂದಾಗಲೆಲ್ಲಾ ಸಂಘಕ್ಕೆ ಭೇಟಿ ನೀಡಿ ತಮ್ಮ ವಿದ್ವತ್ತನ್ನು ಸಂಘದ ಸದಸ್ಯರೊಂದಿಗೆ ಹಂಚಿಕೊಂಡಿದ್ದಾರೆ ಮತ್ತು ಸಂಘದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಮುಂಬಯಿಯ ಹಿರಿಯ ಸಾಹಿತಿಗಳಾದ ಕೃಷ್ಣಕುಮಾರ ಕಲ್ಲೂರ, ಚಿದಂಬರ ದೀಕ್ಷಿತ, ಯಶವಂತ ಚಿತ್ತಾಲ, ವ್ಯಾಸರಾಯ ಬಲ್ಲಾಳ, ಅರವಿಂದ ನಾಡಕರ್ಣಿ, ಬಿ.ಎ.ಸನದಿ, ಡಾ.ಜಿ,ಡಿ ಜೋಶಿ, ಡಾ. ವ್ಯಾಸರಾವ್‌ ನಿಂಜೂರು, ಡಾ.ಸುನೀತಾ ಶೆಟ್ಟಿ, ಡಾ,ವಿಶ್ವನಾಥ ಕಾರ್ನಾಡ್‌, ಜಯಂತ ಕಾಯ್ಕಿಣಿ ಮೊದಲಾದವರು ಒಂದಲ್ಲ ಒಂದು ವಿಧದಲ್ಲಿ ಸಂಘದೊಂದಿಗೆ ಸಂಪರ್ಕವಿರಿಸಿಕೊಂಡು ಸಂಘದ ಬೆಳವಣಿಗೆಗೆ ಸಹಕರಿಸಿದ್ದಾರೆ. ಮುಂಬಯಿ ಕನ್ನಡ ಸಂಘವು ನಾಟಕೋತ್ಸವ, ನೃತ್ಯ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಸಂಗೀತ ಸುಧೆಯನ್ನು ಹರಿಸಿದೆ. ‘ ಸಾಹಿತ್ಯ ಕೂಟ’ ಎನ್ನುವ ಮುಂಬಯಿಯ ಸಾಹಿತಿಗಳ ವೇದಿಕೆಯನ್ನು ಬೆಳೆಸಿದ ಶ್ರೇಯಸ್ಸು ಕೂಡಾ ಮುಂಬಯಿ ಕನ್ನಡ ಸಂಘಕ್ಕೆ ಸಲ್ಲುತ್ತದೆ.

ಮುಂಬೈ ಕನ್ನಡ ಸಂಘದ ಅಧ್ಯಕ್ಷರಾಗಿ ಸಂಘವನ್ನು ಸಮರ್ಥವಾಗಿ ಮುನ್ನಡೆಸುತ್ತಿರುವ ಗುರುರಾಜ ಎಸ್ ನಾಯಕ್


ಮುಂಬಯಿಯಲ್ಲಿ ಈಗ ಸದಾ ಚಟುವಟಿಕೆಯಲ್ಲಿರುವ ಮುಂಬಯಿ ಕನ್ನಡ ಲೇಖಕಿಯರ ಬಳಗ ‘ಸೃಜನಾ’ ಹುಟ್ಟಿದ್ದು ಸಯಾನ್‌ನ ಗೋಕುಲ ಸಭಾಗೃಹದಲ್ಲಿ ಜರಗಿದ್ದ ಸಂಘದ ಒಂದು ಕಾರ್ಯಕ್ರಮದ ಮೂಲಕವೇ. ಮುಂಬಯಿ ಕನ್ನಡ ಸಂಘವು 1961ರಲ್ಲಿ ರಜತ ಮಹೋತ್ಸವ, 1986ರಲ್ಲಿ ಸುವರ್ಣ ಮಹೋತ್ಸವ, 1996ರಲ್ಲಿ ವಜ್ರ ಮಹೋತ್ಸವ ಮತ್ತು 2011 ರಲ್ಲಿ ಅಮೃತ ಮಹೋತ್ಸವವನ್ನು ಆಚರಿಸಿ ಈಗ ಶತಮಾನದತ್ತ ಸಾಗುತ್ತಿದೆ.
ಮಾಟುಂಗಾದ ಭಾವುದಾಜಿ ರಸ್ತೆಯಲ್ಲಿ ಸಂಘದ ಕಾರ್ಯಾಲಯವಿದ್ದ ವೇಂಕಟೇಶ ನಿವಾಸ ಕಟ್ಟಡವನ್ನು ಕೆಡವಲಾಗಿದ್ದು ಈಗ ಅದೇ ಜಾಗದಲ್ಲಿ ಭವ್ಯವಾದ ಬಹು ಮಹಡಿ ಕಟ್ಟಡ ನಿರ್ಮಾಣಕಾರ್ಯವು ಭರದಿಂದ ಸಾಗುತ್ತಿದ್ದು ಈ ಕಟ್ಟಡಕ್ಕೆ ಮುಂದಿನ ವರ್ಷ ಸಂಘದ ಕಛೇರಿಯನ್ನು ಸ್ಥಳಾಂತರಗೊಳಿಸಲಾಗುವುದು. ಇಲ್ಲಿ ಸುಸಜ್ಜಿತವಾದ ಗ್ರಂಥ ಭಂಡಾರ [ಡಿಜಿಟಲ್‌ ಗ್ರಂಥ ಭಂಡಾರವನ್ನು ಒಳಗೊಂಡು], ಸಂಘದ ಕಾರ್ಯಾಲಯ, ಹವಾ ನಿಯಂತ್ರಿತ ಕಂಪ್ಯೂಟರ್‌ ವ್ಯವಸ್ಥೆ ಮುಂತಾದ ಸೌಲಭ್ಯಗಳ ಏರ್ಪಾಡು ಮಾಡಲಾಗುತ್ತದೆ. ಅಲ್ಲದೆ ಹೊಸ ಕಛೇರಿಯ ಒಳಾಂಗಣ ವಿನ್ಯಾಸ ಕಾರ್ಯವನ್ನೂ ಕೈಗೆತ್ತಿಕೊಳ್ಳಲಾಗುತ್ತದೆ. ಇದರಿಂದಾಗಿ ಸಂಘದ ಮಾಸಿಕ ನಿರ್ವ:ಣಾ ವೆಚ್ಚಗಳು ಗಣನೀಯವಾಗಿ ಏರಿಕೆಯಾಗಲಿದೆ. ಹಾಗಾಗಿ ಇದಕ್ಕಾಗಿ ಒಂದು ಶಾಶ್ವತ ನಿಧಿಯನ್ನು ರಚಿಸಲಾಗಿದ್ದು ಈ ನಿಧಿಗೆ ಈಗಾಗಲೇ ಸಂಘದ ಸದಸ್ಯರು, ಹಿತ ಚಿಂತಕರು ಹಾಗೂ ಸಾರ್ವಜನಿಕರಿಂದ ದೇಣಿಗೆಯನ್ನು ಸಂಗ್ರಹಿಸಲಾಗುತ್ತಿದೆ. ಸಂಘವು ಸುಮಾರು 900ಕ್ಕೂ ಮಿಕ್ಕಿ ಸದಸ್ಯ ಸಂಪತ್ತನ್ನು ಹೊಂದಿರುವುದಾದರೂ ಆ ಪೈಕಿ ಹೆಚ್ಚಿನವರು ಅನೇಕ ಕಾರಣಗಳಿಂದಾಗಿ ಈಗ ಸಂಘದ ಸಂಪರ್ಕದಲ್ಲಿಲ್ಲ. ಅಂತಹವರು ಎಲ್ಲೇ ಇದ್ದರೂ ಉದಾರ ದಾನ ನೀಡಿ ಮುಂಬಯಿ ಮಣ್ಣಿನಲ್ಲಿ ಕನ್ನಡದ ತೇರನ್ನು ಎಳೆಯುತ್ತಿರುವ ಮುಂಬಯಿ ಕನ್ನಡ ಸಂಘದ ಕನ್ನಡ ಪರ ಕಾಯಕದಲ್ಲಿ ಕೈ ಜೋಡಿಸಬೇಕಾಗಿ ಕಳಕಳಿಯ ವಿನಂತಿ. ಮುಂಬಯಿ ಕನ್ನಡ ಸಂಘಕ್ಕೆ ನೀಡುವ ದೇಣಿಗೆಯು ಆದಾಯ ಕರ ಕಾಯ್ದೆಯ ಸೆಕ್ಷನ್‌ 80 ಜಿಯಡಿಯಲ್ಲಿ ಕರ ವಿನಾಯಿತಿಗೆ ಅರ್ಹವಾಗಿರುತ್ತದೆ. ಸಂಘಕ್ಕೆ ಧನ ಸಹಾಯ ಮಾಡಲಿಚ್ಛಿಸುವವರು ಸಂಘದ ಈ ಕೆಳಗಿನ ಬ್ಯಾಂಕ್‌ ಖಾತೆಗೆ NEFT ಮೂಲಕ ನೇರವಾಗಿ ವರ್ಗಾಯಿಸಬಹುದು :
Bombay Kannada Sangha, Canara Bank, Matunga East Branch, , S/B Account N0. 0109101005571, IFSC :CNRB0000109 ಅಥವಾ BOMBAY KANNADA SANGHA ಈ ಹೆಸರಿಗೆ ಬರೆಯಲಾದ ಚೆಕ್‌ ಅನ್ನು ಸಂಘದ ಸದ್ಯದ ಕಾರ್ಯಾಲಯವಾಗಿರುವ 2- Sai Visava Co-Op Society , Nappo Road, Hindu Colony, Dadar (East) Mumbai-400 014 ಇಲ್ಲಿಗೆ ಕಳುಹಿಸಿಕೊಡಬಹುದು. ರೂ. 25 ಲಕ್ಷಕ್ಕೂ ಹೆಚ್ಚಿಗೆ ದೇಣಿಗೆ ನೀಡುವವರ ಹೆಸರನ್ನು ಸಂಘದ ಕಾರ್ಯಾಲಯಕ್ಕೆ, ರೂ. 10 ಲಕ್ಷಕ್ಕಿಂತ ಅಧಿಕ ದೇಣಿಗೆ ನೀಡುವವರ ಹೆಸರನ್ನು ಗ್ರಂಥಾಲಯಕ್ಕೆ ,ರೂ. 5 ಲಕ್ಷಕ್ಕಿಂತ ಹೆಚ್ಚಿನ ದೇಣಿಗೆ ನೀಡುವವರ ಹೆಸರನ್ನು ವಾಚನಾಯಲಯಕ್ಕೆ ಇರಿಸಲಾಗುವುದಲ್ಲದೆ ರೂ.25,000ಕ್ಕಿಂತ ಅಧಿಕ ಧನ ಸಹಾಯ ನೀಡುವವರ ಹೆಸರನ್ನು ಸಂಘದ ಕಾರ್ಯಾಲಯದಲ್ಲಿ ಇರಿಸಲಾಗುವ ಅಮೃತ ಶಿಲೆಯ ಫಲಕದಲ್ಲಿ ನಮೂದಿಸಲಾಗುವುದು. ಹೆಚ್ಚಿನ ವಿವರಗಳಿಗಾಗಿ 98330 62084 ಈ ನಂಬರ್‌ನಲ್ಲಿ ಸಂಘವನ್ನು ಅಥವಾ 9819816380 ಈ ನಂಬರ್‌ನಲ್ಲಿ ಸಂಘದ ಅಧ್ಯಕ್ಷ ಗುರುರಾಜ್‌ ಎಸ್‌.ನಾಯಕ್‌ರನ್ನು ಸಂಪರ್ಕಿಸಬಹುದು.
ಸೋಮನಾಥ ಎಸ್‌.ಕರ್ಕೇರ, ಗೌರವ ಪ್ರಧಾನ ಕಾರ್ಯದರ್ಶಿ, ಮುಂಬಯಿ ಕನ್ನಡ ಸಂಘ, ಫೋನ್‌: 98193 21186



Related posts

ವೈಕುಂಠ ಏಕಾದಶಿ 2025: ಮಹತ್ವ, ಮತ್ತು ಆಚರಣೆಗಳು

Mumbai News Desk

ಬಿಲ್ಲವರ ಎಸೋಸಿಯೇಷನ್ ಮುಂಬಯಿ, ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿ : ಸೆ. 12ರಿಂದ, ಸೆ. 21ರ ತನಕ “ಯಕ್ಷ ದಶಮಿ ಯಕ್ಷೋತ್ಸವ”

Mumbai News Desk

ಪ್ರಧಾನಮಂತ್ರಿಯವರ 75ನೇ ಹುಟ್ಟುಹಬ್ಬದ ಸಂಭ್ರಮಕ್ಕೆ ತಯಾರಾದ ಮೋಹನ್ ದಾಸ್ ರವರ ಕೊಡುಗೆ “ವಸುಧೈವ ಕುಟುಂಬಕಂ ” ಕಲಾಕೃತಿ

Mumbai News Desk

“ಜ್ಞಾನ ವಿಕಾಸ ಮಂಡಳದ ಮೆಹತಾ ಕಾಲೇಜಿನ ನಲ್ಲಿ ಕನ್ನಡ ನಾಟಕ ಚಾಮ ಚಲುವೆ ಮತ್ತು ಸೋಲಿಗರ ಬಾಲೆ ಯಶಸ್ವಿ ಪ್ರದರ್ಶನ.”

Mumbai News Desk

ನಾಟಕ ಕ್ಷೇತ್ರದಲ್ಲಿ ಹೊಸ ದಾಖಲೆ ಸೃಷ್ಟಿಸಲು ಹೊರಟಿದೆ ಸಾಯಿಶಕ್ತಿ ಕಲಾಬಳಗ : ಒಂದೇ ದಿನ ಮೂರು ರಾಜ್ಯಗಳಲ್ಲಿ ನಾಟಕ ಪ್ರದರ್ಶನ

Mumbai News Desk

ಉಡುಪಿ ಜಿಲ್ಲೆಯಲ್ಲಿದೆ ಮಹಿಷಾಸುರ ದೇವಾಲಯ,ಮಹಿಷನಿಗೆ ನಡೆಯುತ್ತಿದೆ ಪೂಜೆ

Mumbai News Desk