ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಹಾಗೂ ಭಾರತದ ಪವಿತ್ರ ನದಿಗಳ್ಳಲ್ಲಿ ಒಂದಾಗಿರುವ ನೇತ್ರಾವತಿ ನದಿ ನೀರು ಕಲುಷಿತಗೊಳ್ಳುತ್ತಿದ್ದು, ಈ ಬಗ್ಗೆ ಸರಕಾರ ಸೂಕ್ತ ಕ್ರಮ ಕೈಗೊಂಡು, ನದಿ ನೀರನ್ನು ಸಂರಕ್ಷಿಸುವಂತೆ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಗಾಗಿ ಕಾರ್ಯವೆಸಗುತ್ತಿರುವ ಏಕೈಕ ಸರಕಾತೇರ ಸಂಸ್ಥೆಯಾದ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಶೆಟ್ಟಿ ಆಗ್ರಹಿಸಿದ್ದಾರೆ.
ಏಪ್ರಿಲ್ 18ರಂದು ಉಡುಪಿಯ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಯಕೃಷ್ಣ ಶೆಟ್ಟಿ ಅವರು ಮಂಗಳೂರು ಮತ್ತು ಬಂಟ್ವಾಳಕ್ಕೆ ಕುಡಿಯುವ ನೀರಿನ ಸರಬರಾಜು ಮಾಡುವ ನೇತ್ರಾವತಿಯ ನದಿಯ ನೀರು ಕಲುಷಿತಗೊಳ್ಳುತ್ತಿದ್ದು, ಈ ಬಗ್ಗೆ ಸರಕಾರದ ಗಮನ ಸೆಳೆಯಲು ಪತ್ರಿಕಾಗೋಷ್ಠಿಯನ್ನು ಆಯೋಜಿಸಿದ್ದು , ಈ ಕುರಿತು ಶೀಘ್ರದಲ್ಲಿ ಸಮಿತಿಯ ನಿಯೋಗ ರಾಜ್ಯದ ಪರಿಸರ ಮತ್ತು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರನ್ನು ಭೇಟಿಯಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ಹಾಗೂ ಅವಳಿ ಜಿಲ್ಲೆಗಳ ನದಿ ನೀರು ಸಂರಕ್ಷಣೆಯ ಮಾಡುವ ಬೇಡಿಕೆಯನ್ನು ಸಚಿವರ ಮುಂದೆ ಇಡಲಿದೆ. ಹಾಗೂ ಮೇ ತಿಂಗಳ ಕೊನೆಯ ವಾರದಲ್ಲಿ ಸಮಿತಿ ಮಂಗಳೂರಿನಲ್ಲಿ ಧರಣಿ ನಡೆಸಲಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷರಾದ ನಿತ್ಯಾನಂದ ಡಿ ಕೋಟ್ಯಾನ್, ಉಪಾಧ್ಯಕ್ಷ, ಕೆ ಪಿ ಜಗದೀಶ್ ಅಧಿಕಾರಿ, ಜಿಲ್ಲಾ ಉಪಕಾರ್ಯಧ್ಯಕ್ಷ ಅರುಣ್ ಪ್ರಕಾಶ್ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಸುರೇಂದ್ರ ಮೆಂಡನ್ ಉಪಸ್ಥಿತರಿದ್ದರು.
