30 C
Mumbai
September 27, 2026
Mumbai News Kannada
ಮುಂಬಯಿ

ಪುತ್ತಿಗೆ ಶ್ರೀಗಳ ಚಾತುರ್ಮಾಸ್ಯ ವ್ರತ ಸಮಾಪ್ತಿ, ಶ್ರೀಗಳಿಗೆ ಗುರುವಂದನೆ



ಸನಾತನ ಧರ್ಮ-ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಧಾರ್ಮಿಕ ಕೇಂದ್ರಗಳ ಪಾತ್ರ ಮಹತ್ವದ್ದು: ಪುತ್ತಿಗೆ ಶ್ರೀ

ನವಿ ಮುಂಬಯಿ: ಮಠ-ಮಂದಿರಗಳು ಪರಿಸರದಲ್ಲಿ ಧಾರ್ಮಿಕ ಶ್ರದ್ಧೆಯನ್ನು ಬೆಳೆಸುವುದರೊಂದಿಗೆ ಜನರನ್ನು ಒಂದುಗೂಡಿಸಿ ಸುಸಂಸ್ಕೃತ ಸಮಾಜ ನಿರ್ಮಿಸುವ ಕೆಲಸವನ್ನು ಮಾಡುತ್ತಿವೆ. ಸನಾತನ ಧರ್ಮ-ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಧಾರ್ಮಿಕ ಕೇಂದ್ರಗಳ ಕಾರ್ಯಗಳು ಮಹತ್ವದ್ದಾಗಿವೆ. ಈ ದೃಷ್ಟಿಯಿಂದ ಸ್ಥಾಪನೆಗೊಂಡ ಉಡುಪಿ ಪುತ್ತಿಗೆ ಮಠದ ಮುಂಬಯಿ ಶಾಖೆಯು ಈ ಭಾಗದಲ್ಲಿ ಧರ್ಮ ಜಾಗೃತಿ ಮೂಡಿಸುವ ಕಾರ್ಯಗಳಿಗೆ ನಿರಂತರ ಸಹಕಾರ ನೀಡುತ್ತಿದೆ ಎಂದು ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಸ್ವಾಮೀಜಿಯವರು ನುಡಿದರು.

ಅವರು ಸೆಪ್ಟೆಂಬರ್ 25ರಂದು ನವಿ ಮುಂಬಯಿಯ ವಾಶಿಯಲ್ಲಿರುವ ಪುತ್ತಿಗೆ ಮಠದ ನೂತನ ಶಾಖೆಯಲ್ಲಿ, ತಮ್ಮ ಚತುರ್ಥ ‘ವಿಶ್ವ ಗೀತಾ ಪರ್ಯಾಯ’ ಪೂಜಾ ಮಹೋತ್ಸವವನ್ನು ಯಶಸ್ವಿಯಾಗಿ ನೆರವೇರಿಸಿದ ಬಳಿಕ ಕೈಗೊಂಡಿದ್ದ 53ನೇ ಚಾತುರ್ಮಾಸ್ಯ ವ್ರತ ದೀಕ್ಷೆಯ ಸಮಾಪ್ತಿ ಸಮಾರಂಭ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡುತ್ತಿದ್ದರು.

“ಈ ವರ್ಷದ ಚಾತುರ್ಮಾಸ್ಯ ವ್ರತ ಅವಿಸ್ಮರಣೀಯವಾಗಿದ್ದು, ಅಪಾರ ಸಂತೋಷವನ್ನುಂಟು ಮಾಡಿದೆ. ಇಲ್ಲಿನ ನೂತನ ಶಾಖೆಗೆ ಸಹಸ್ರಾರು ಭಕ್ತರು ನಿತ್ಯವೂ ಬಂದು ಧಾರ್ಮಿಕ ಕಾರ್ಯ-ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವುದನ್ನು ಕಂಡು ಆನಂದವಾಗಿದೆ. ಈ ನೂತನ ಶಾಖೆಯು ಮುಂಬಯಿಯ ಜನರಲ್ಲಿ ಶ್ರದ್ಧಾ-ಭಕ್ತಿಯನ್ನು ವೃದ್ಧಿಸುವಲ್ಲಿ ಎಲ್ಲ ರೀತಿಯ ಸಹಕಾರ ನೀಡುತ್ತಿದೆ. ಭಕ್ತರು ನಿರಂತರವಾಗಿ ಮಠಕ್ಕೆ ಭೇಟಿ ನೀಡಿ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು” ಎಂದು ಶ್ರೀಗಳು ಕರೆ ನೀಡಿದರು.

ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷರಾದ ಶಿವರಾಮ್ ಜಿ. ಶೆಟ್ಟಿ ಅಜೆಕಾರು ಮಾತನಾಡಿ, “ಶ್ರೀಗಳು ಈ ವರ್ಷ ಮುಂಬಯಿಯಲ್ಲಿ ಚಾತುರ್ಮಾಸ್ಯ ವ್ರತ ದೀಕ್ಷೆ ಆಚರಿಸಿರುವುದು ನಮಗೆಲ್ಲರಿಗೂ ದೊರೆತ ಸೌಭಾಗ್ಯ. ನಿರಂತರ ಧಾರ್ಮಿಕ ಕಾರ್ಯಗಳೊಂದಿಗೆ ಸನಾತನ ಧರ್ಮದ ಸಂದೇಶವನ್ನು ದೇಶ-ವಿದೇಶಗಳಲ್ಲಿ ಪ್ರಚಾರ ಮಾಡುತ್ತಾ ಬಂದಿರುವ ಶ್ರೀಗಳು, ಈ ಬಾರಿಯ ಚಾತುರ್ಮಾಸ್ಯದಲ್ಲಿ ಮುಂಬಯಿಯ ಭಕ್ತರಿಗಾಗಿ ಸಮಯ ಮೀಸಲಿಟ್ಟಿರುವುದು ನಮ್ಮೆಲ್ಲರ ಪುಣ್ಯ” ಎಂದರು.

ಕಾರ್ಯಾಧ್ಯಕ್ಷರಾದ ಗೋಪಾಲ ವೈ. ಶೆಟ್ಟಿ ಮಾತನಾಡಿ, “ನವಿ ಮುಂಬಯಿ ಪರಿಸರದಲ್ಲಿ ಪುತ್ತಿಗೆ ಮಠದ ಶಾಖೆಯನ್ನು ಸ್ಥಾಪಿಸಿ, ಇಲ್ಲಿ ನಿರಂತರ ಧಾರ್ಮಿಕ ಚಟುವಟಿಕೆಗಳು ನೆರವೇರಲು ಕಾರಣೀಕರ್ತರಾದ ಶ್ರೀಗಳಿಗೆ ಅನಂತ ಪ್ರಣಾಮಗಳು. ಈ ಮಠದಲ್ಲಿ ಧಾರ್ಮಿಕ ಕಾರ್ಯಗಳು ಸದಾ ಮುಂದುವರಿಯಲಿ” ಎಂದು ಹಾರೈಸಿದರು.

ನವಿ ಮುಂಬಯಿ ನಗರಸೇವಕ ಸುರೇಶ್ ಶೆಟ್ಟಿ ಮಾತನಾಡಿ, “ಪುತ್ತಿಗೆ ಶ್ರೀಗಳಂತಹ ಮಹನೀಯರಿಂದ ನಮ್ಮ ಸನಾತನ ಧರ್ಮವು ಜಾಗೃತಗೊಂಡಿದ್ದು, ಅವರು ಧರ್ಮ ರಕ್ಷಣೆಯ ಕಾಯಕವನ್ನು ಸದಾ ಮಾಡುತ್ತಿದ್ದಾರೆ” ಎಂದರು. ಸಂಘಟಕ ಪ್ರದೀಪ್ ಕುಮಾರ್ ಕಲ್ಕೂರ ಮಾತನಾಡಿ, “ಶ್ರೀಗಳ ಚಾತುರ್ಮಾಸ್ಯ ವ್ರತ ಸಮಾಪ್ತಿ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸುವ ಸುವರ್ಣಾವಕಾಶ ದೊರೆತಿರುವುದು ನಮ್ಮ ಭಾಗ್ಯ. ಶ್ರೀಗಳು ಭಗವದ್ಗೀತೆಯನ್ನು ಜಗತ್ತಿನಾದ್ಯಂತ ಬೋಧಿಸುತ್ತಾ ಧರ್ಮ ಜಾಗೃತಿ ಮೂಡಿಸುತ್ತಿರುವ ಕಾರ್ಯ ನಿಜಕ್ಕೂ ಶ್ಲಾಘನೀಯ” ಎಂದರು.

ವೇದಿಕೆಯಲ್ಲಿದ್ದ ಸಂಘಟಕ ನವನೀತ್ ಶೆಟ್ಟಿ ಕದ್ರಿ ಮಾತನಾಡಿ, ಶ್ರೀಗಳ ‘ಕೋಟಿ ಗೀತಾ ಲೇಖನ ಯಜ್ಞ’ದ ಕುರಿತು ವಿವರಿಸುತ್ತಾ, “ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಇದರಲ್ಲಿ ಭಾಗವಹಿಸಿ, ಪವಿತ್ರ ಭಗವದ್ಗೀತೆಯ ಜ್ಞಾನ ಪಡೆದು ಜೀವನವನ್ನು ಪಾವನಗೊಳಿಸಿಕೊಳ್ಳಬೇಕು” ಎಂದು ಕರೆ ನೀಡಿದರು.

ವೇದಿಕೆಯಲ್ಲಿ ಜ್ಯೋತಿ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷ ಗಿರೀಶ್ ಸಾಲ್ಯಾನ್, ಕುಲಾಲ ಸಂಘದ ಅಧ್ಯಕ್ಷ ರಘು ಮೂಲ್ಯ, ಮಾಜಿ ಅಧ್ಯಕ್ಷ ದೇವದಾಸ್ ಕುಲಾಲ್, ಪ್ರಖ್ಯಾತ ಜ್ಯೋತಿಷಿ ಡಾ. ಎಂ. ಪ್ರವೀಣ್ ಭಟ್, ಮಠದ ಪ್ರಧಾನರಾದ ರತೀಶ್ ತಂತ್ರಿ, ಚಾತುರ್ಮಾಸ್ಯ ಸಮಿತಿಯ ಎನ್. ಆರ್. ರಾವ್, ಸಂಚಾಲಕ ಸುಧೀರ್ ಆರ್. ಎಲ್. ಶೆಟ್ಟಿ, ಉಪಾಧ್ಯಕ್ಷರಾದ ವಾಮನ ಹೊಳ್ಳ, ಘನ್ಸೋಲಿ ಮೂಕಾಂಬಿಕಾ ದೇವಸ್ಥಾನದ ಅಣ್ಣಿ ಸಿ. ಶೆಟ್ಟಿ, ಕಾರ್ಯದರ್ಶಿ ದಿನೇಶ್ ಕುಲಾಲ್, ಜೊತೆ ಕಾರ್ಯದರ್ಶಿಗಳಾದ ರಾಘವೇಂದ್ರ ಜಮದಗ್ನಿ, ಡೊಂಬಿವಲಿಯ ನಾಗೇಂದ್ರ ಆಚಾರ್ಯ, ಘನ್ಸೋಲಿಯ ಗುರುಪ್ರಸಾದ್ ಭಟ್, ಕೋಶಾಧಿಕಾರಿ ಸಂತೋಷ್ ಸಿ. ಶೆಟ್ಟಿ, ಜೊತೆ ಕೋಶಾಧಿಕಾರಿ ಗುರುಪ್ರಸಾದ್ ಚೆಂಬೂರು ಮತ್ತಿತರರು ಉಪಸ್ಥಿತರಿದ್ದು ಸಹಕರಿಸಿದರು.

ಗುರುವಂದನಾ ಕಾರ್ಯಕ್ರಮದ ಬಳಿಕ ಭಜನೆ ಹಾಗೂ “ಹರಿಭಕ್ತ ಸುಧನ್ವ” ಎಂಬ ಯಕ್ಷಗಾನ ತಾಳಮದ್ದಳೆ ಜರುಗಿತು. ಭಾಗವತರಾಗಿ ಮೋಹನದಾಸ ರೈ, ಚೆಂಡೆ-ಮದ್ದಳೆಯಲ್ಲಿ ಹರೀಶ ನಾರಾಯಣ ಸಾಲ್ಯಾನ್, ಅರ್ಥದಾರಿಗಳಾಗಿ ವಾಸುದೇವ ಮಾರ್ನಾಡ್, ಸುರೇಶ ನಂದ್ರೊಳ್ಳಿ ಹಾಗೂ ಆದ್ಯಪಾಡಿ ಬಾಲಕೃಷ್ಣ ಶೆಟ್ಟಿ ಭಾಗವಹಿಸಿದ್ದರು.



Related posts

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ ಅನುಷಾ ಗಣೇಶ್ ಮೂಲ್ಯ ಗೆ ಶೇ 89.40 ಅಂಕ.

Mumbai News Desk

ವಸಯಿ ಕರ್ನಾಟಕ ಸಂಘ: ಅಂತರಾಷ್ಟ್ರೀಯ ಯೋಗ ದಿನಾಚರಣೆ

Mumbai News Desk

ತುಳುಕೂಟ ಫೌಂಡೇಶನ್ (ರಿ) ನಾಲಾಸೋಪಾರ ಹಾಗೂ ಶ್ರೀದೇವಿ ಯಕ್ಷ ಕಲಾ ನಿಲಯದ ವಾರ್ಷಿಕೋತ್ಸವ, ಸಮಾರೋಪ,

Mumbai News Desk

ಕನ್ನಡ ನವತಾರಾ ಕಲಾ ಮಂಡಳಿ ಮಲಾಡ್ (ಪ),  ವಾರ್ಷಿಕ ಮಹಾಪೂಜೆ, ಸಾಧಕರಿಗೆ ಸನ್ಮಾನ

Mumbai News Desk

ಮುಂಬಯಿ ಕನ್ನಡ ಸಂಘದ ವತಿಯಿಂದ ಕನ್ನಡ ಮಾಧ್ಯಮದ ಮಕ್ಕಳಿಗೆ ಧನ ಸಹಾಯ ವಿತರಣೆ

Mumbai News Desk

ಗೋರೆಗಾಂವ್: ಶ್ರೀ ಸದ್ಗುರು ನಿತ್ಯಾನಂದ ಆಶ್ರಮದಲ್ಲಿ ಭಕ್ತಿ ಸಂಭ್ರಮದ ಗುರು ಪೂರ್ಣಿಮೆ, ಏಕಾಹ ಭಜನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ

Mumbai News Desk