ಬೆಳ್ತಂಗಡಿ, ಅ. 25: ತಾಲೂಕಿನ ಮುಂಡೂರು ನಿವಾಸಿ, ಮಚ್ಚಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ರಿಷಿಕಾ ಅಂಚನ್ ಅವರು ಕಬಡ್ಡಿಯಲ್ಲಿ ರಾಜ್ಯಮಟ್ಟ ಹಾಗೂ ಕರ್ನಾಟಕ ರಾಜ್ಯದ ಪ್ರತಿಷ್ಠಿತ ಮಿನಿ ಒಲಿಂಪಿಕ್ಸ್ ಕಬಡ್ಡಿ ಚಾಂಪಿಯನ್‌ಶಿಪ್ – 2026ಕ್ಕೆ ಆಯ್ಕೆಯಾಗಿದ್ದಾರೆ.
ರಿಷಿಕಾ ಅಂಚನ್ ಅವರು ಅ. 16ರಂದು ಮಡಂತ್ಯಾರಿನ ಸೇಕ್ರೆಡ್ ಹಾರ್ಟ್ ಕಾಲೇಜಿನಲ್ಲಿ ನಡೆದ ಕಬಡ್ಡಿ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿ ರಾಜ್ಯಮಟ್ಟ ಹಾಗೂ ಮಿನಿ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಇವರು ನ. 11ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ.
ರಿಷಿಕಾ ಅಂಚನ್ ಮುಂಡೂರು ಗ್ರಾಮದ ಕೊಡೆಕ್ಕಲ್ ನಿವಾಸಿ ಶ್ರೀಮತಿ ಶಾಂಭವಿ ಮತ್ತು ಶಿವಪ್ರಸಾದ್ ದಂಪತಿಯ ಪುತ್ರಿಯಾಗಿದ್ದಾರೆ.
ಯುವವಾಹಿನಿಯಿಂದ ಅಭಿನಂದನೆ:
ಯುವವಾಹಿನಿ (ರಿ.) ಬೆಳ್ತಂಗಡಿ ಘಟಕದ ಮಹಿಳಾ ಸಂಚಾಲನಾ ಸಮಿತಿಯ ಕಾರ್ಯದರ್ಶಿಯಾಗಿರುವ ಶ್ರೀಮತಿ ಶಾಂಭವಿ ಶಿವಪ್ರಸಾದ್ ಕೊಡೆಕ್ಕಲ್ ಇವರ ಪುತ್ರಿ ಕು. ರಿಷಿಕಾ ಅಂಚನ್ ಕರ್ನಾಟಕ ರಾಜ್ಯದ ಪ್ರತಿಷ್ಠಿತ ಮಿನಿ ಒಲಿಂಪಿಕ್ಸ್ ಕಬಡ್ಡಿ ಚಾಂಪಿಯನ್‌ಶಿಪ್ – 2026ಕ್ಕೆ ಬೆಳ್ತಂಗಡಿ ತಾಲೂಕಿನಿಂದ ಆಯ್ಕೆಯಾಗಿರುವುದು ಅತ್ಯಂತ ಹೆಮ್ಮೆಯ ಹಾಗೂ ಸಂತಸದ ಸಂಗತಿಯಾಗಿದೆ.
ಮುಂದಿನ ಸ್ಪರ್ಧೆಯಲ್ಲಿಯೂ ಅತ್ಯುತ್ತಮ ಪ್ರದರ್ಶನ ನೀಡಿ, ವಿಜಯದ ಕಿರೀಟವನ್ನು ಮುಡಿಗೇರಿಸಿಕೊಂಡು ಇನ್ನಷ್ಟು ಎತ್ತರದ ಸಾಧನೆಗಳನ್ನು ಮಾಡುವಂತಾಗಲಿ. ಆಕೆಯ ಕ್ರೀಡಾ ಬದುಕು ಯಶಸ್ಸಿನ ಹೊಸ ಹೊಸ ಮೈಲಿಗಲ್ಲುಗಳನ್ನು ಸ್ಥಾಪಿಸಲಿ ಎಂದು ಯುವವಾಹಿನಿ (ರಿ.) ಬೆಳ್ತಂಗಡಿ ಘಟಕ ಪ್ರಕಟಣೆಯ ಮೂಲಕ ಶುಭ ಹಾರೈಸಿದೆ.



