
⭕ ಧಾರವಾಹಿ ಭಾಗ 18
ಧಾರವಾಹಿ 19
ಅಕ್ಕಯಕ್ಕನ ಮುಗ್ಧ ಗುಣ, ಅವಳ ವಾತ್ಸಲ್ಯ ತುಂಬಿದ ಸ್ವಭಾವಗಳು ಲಕ್ಷ್ಮಣ ಮತ್ತು ಸರೋಜಾಳ ಜೀವನಕ್ಕೊಂದು ತಾತ್ಕಾಲಿಕ ನೆಲೆಯನ್ನು ಕಲ್ಪಿಸಿಕೊಟ್ಟವು. ಇನ್ನು ತಮ್ಮ ಬದುಕಿಗೊಂದು ಸ್ವಂತ ಸೂರು ಮತ್ತು ಮಕ್ಕಳು ಮರಿಗಳೊಂದಿಗಿನ ಸುಂದರ ಸಂಸಾರದ ಕನಸ್ಸು ಕಟ್ಟಿಕೊಂಡಿದ್ದ ಪ್ರೇಮಿಗಳು ಆದಷ್ಟು ಬೇಗನೇ ಅದನ್ನು ಸಾಕಾರಗೊಳಿಸುವ ಹುಮ್ಮಸ್ಸಿನಿಂದ ಬೀಡಿ ಕಟ್ಟುವ ಕಾಯಕವನ್ನಾರಂಭಿಸಿ ಬದುಕತೊಡಗಿದರು. ಸರೋಜ, ಅಕ್ಕಯಕ್ಕನಿಗೆ ಮನೆಗೆಲಸದಲ್ಲಿ ನೆರವಾಗುತ್ತ ಆತ್ಮೀಯತೆಯಿಂದ ಇರತೊಡಗಿದಳು. ಆವತ್ತು ಶನಿವಾರ. ಒಂದು ವಾರ ಬಿಡುವಿಲ್ಲದೆ ಕುಳಿತು ತಿರುವಿದ ಬೀಡಿಯ ಮಜೂರಿಯು ಅಂದು ಸಂಜೆ ಅವರ ಕೈಸೇರಿತು. ಮರುದಿನ ಇಬ್ಬರೂ ಮುಂಜಾನೆ ಬೇಗನೆದ್ದು ಚಹಾ ಕುಡಿದು, ಅಕ್ಕಯಕ್ಕನಿಗೆ ತಿಳಿಸಿ ನಾಲ್ಮುಖ ಪೇಟೆಯ ದೊಡ್ಡ ಸಂತೆಗೆ ಹೋದರು. ಅಲ್ಲಿ ಸುಮಾರು ಹೊತ್ತು ಸುತ್ತಾಡುತ್ತ ಅಡುಗೆಗೆ ಬೇಕಾದ ಪಾತ್ರೆ ಪರಡಿಗಳನ್ನೂ ಮತ್ತಿತರ ಸಾಮಾಗ್ರಿಗಳನ್ನೂ ಕೊಂಡರು. ಬಳಿಕ ಲಕ್ಷ್ಮಣ, ಸರೋಜಾಳನ್ನು ಬಳೆಯಂಗಡಿಗೆ ಕರೆದೊಯ್ದ. ಅಂಗಡಿಯ ಮಾಲಕಿ ಐವತ್ತರ ಹರೆಯದ ಬೆಳ್ಳಗಿನ ಚೆಲುವೆ ಸುನಂದಿ ಜೋಗಿಯು ಹಣೆಗೆ ಅಗಲವಾದ ಕುಂಕುಮವಿಟ್ಟು ಎಲೆಯಡಿಕೆ ತಿಂದು ಕೆಂಪಾದ ತನ್ನ ತುಟಿಗಳಿಗೆ ತೆಳುವಾದ ನಗೆಯನ್ನು ಲೇಪಿಸಿಕೊಂಡು ಯುವಜೋಡಿಯನ್ನು ಸ್ವಾಗತಿಸಿದಳು. ಲಕ್ಷ್ಮಣ ತನ್ನ ಹುಡುಗಿಗೆ ಇಷ್ಟವಾದ ಕೆಂಪು ಚಿತ್ತಾರವಿದ್ದ ಬಳೆಗಳನ್ನು ಕೈತುಂಬಾ ತೊಡಿಸಲು ಸೂಚಿಸಿದ. ಸುನಂದಿಯು ಸರೋಜಾಳ ಕೈಗಳನ್ನು ಹಿಡಿದು ಮೃದುವಾಗಿ ಬಳೆಗಳನ್ನು ತೊಡಿಸತೊಡಗಿದಳು. ಆಹೊತ್ತು ಸರೋಜಾಳ ಮುಖವು ಮೃದು ನೋವಿನಿಂದ ಕೆಂಪೇರುತ್ತಿದ್ದುದನ್ನು ಗಮನಿಸುತ್ತಿದ್ದ ಲಕ್ಷ್ಮಣ ಅವಳನ್ನು ರೇಗಿಸಲೆಂದೇ ನಕ್ಕ. ಆಗ ಅವಳು ಬೇಕೆಂದೇ ಹುಸಿಮುನಿಸು ತೋರಿಸುತ್ತ ಅವನನ್ನು ಮತ್ತಷ್ಟು ಸೆಳೆದಳು. ಮರುಕ್ಷಣ ಅವನಲ್ಲಿ ನವಿರಾದ ಭಾವವೊಂದು ಅರಳಿತು. ಅದೇ ಗುಂಗಿಗೆ ಜಾರಿದವನ ಮನಸ್ಸು ಯಾವುದೋ ನಿರ್ಧಾರವೊಂದನ್ನು ಕೈಗೊಂಡಿತು.
ನಾಲ್ಮುಖಪೇಟೆ ಮತ್ತು ಚೌಳುಕೇರಿಗೆ ಸಾಗುವ ದಾರಿಯ ನಡುವೆ ಅನೇಕ ಬಗೆಯ ದೈತ್ಯ ಮರಗಳಿಂದ ತುಂಬಿದ ದಟ್ಟ ಹಾಡಿಯೊಂದು ಸಿಗುತ್ತದೆ. ಅದು, ‘ಚಿಕ್ಕು’ ಎಂಬ ದೈವಸ್ಥಾನವೆಂದು ಲಕ್ಷ್ಮಣ ಮತ್ತು ಸರೋಜಾಳಿಗೆ ಅಕ್ಕಯಕ್ಕ ಹೇಳಿದ್ದಳು. ಅವಳು ಆ ದೇವಿಯ ಆರಾಧಕಳಾದುದರಿಂದ ಅವಳ ಮನೆಯ ಕಪಾಟಿನಲ್ಲಿಯೂ ಚಿಕ್ಕಮ್ಮದೇವಿಯ ಸಣ್ಣ ಮೂರ್ತಿಯೊಂದಿತ್ತು. ‘ಚಿಕ್ಕುವು ಸಾಕ್ಷಾತ್ ಪಾರ್ವತಿ ದೇವಿಯ ಸ್ವರೂಪ. ಮೂಕಾಸುರನ ವಧೆಗೆ ಕೈಲಾಸದಿಂದ ಇಳಿದು ಬಂದ ಮಹಾಮಾತೆ ಅವಳು. ಸ್ತ್ರೀಯರಿಗೆ ಸದಾ ಅಭಯ ನೀಡುವ ಈ ದೈವಶಕ್ತಿಯನ್ನು ನಿಶ್ಕಲ್ಮಶ ಮನಸ್ಸಿನಿಂದ ಯಾರು ಪೂಜಿಸುತ್ತಾರೋ ಅವರಿಗೆ ಸಕಲೈಶ್ವರ್ಯವೂ ಸಿದ್ಧಿಸುತ್ತದೆ!’ ಎಂದು ಅಕ್ಕಯಕ್ಕ ಇವರ ಮುಂದೆ ಭಯಭಕ್ತಿಯಿಂದ ಹೇಳಿದ್ದಳು. ಇವತ್ತು ಅದೇ ಶಕ್ತಿಯ ಬನದೆದುರು ಲಕ್ಷ್ಮಣ, ಸರೋಜ ಬಂದು ನಿಂತಿದ್ದರು. ಆ ವಿಶಾಲ ಬನವು ತನ್ನೊಳಗೆ ಹದವಾದ ಮಬ್ಬುಗತ್ತಲು ತುಂಬಿಕೊoಡು ಪ್ರಶಾಂತವಾಗಿಯೂ, ತುಸು ಭಯಾನಕವಾಗಿಯೂ ಕಾಣುತ್ತಿತ್ತು. ಅನತಿದೂರದ ಹಾಡಿಯೊಳಗಿನ ನಟ್ಟನಡುವೆ ಒಂದಿಷ್ಟು ಸಮತಟ್ಟಾದ ಜಾಗದಲ್ಲಿ ಮುರಗಲ್ಲಿನ ಆಳೆತ್ತರದ ಒರಟಾದ ಪೀಠವೊಂದಿತ್ತು. ಆ ಪೀಠದ ನಡುಭಾಗವನ್ನು ಕೊರೆದು ಚಿಕ್ಕುವಿನ ಸಂಕೇತವಾಗಿ ನುಣುಪಾದ ದುಂಡಗಿನ ಒಂದಡಿ ಸುತ್ತಳತೆಯ ಶಿಲೆಗಲ್ಲನ್ನು ಸ್ಥಾಪಿಸಲಾಗಿತ್ತು. ಹೊಳೆಯುವ ದಟ್ಟ ಕಪ್ಪುಬಣ್ಣದ ಆ ಶಿಲೆಗಲ್ಲಿನ ಭ್ರೂಮಧ್ಯಕ್ಕೆ ದುಂಡಗೆ ಕುಂಕುಮವಿಟ್ಟು ಸೇವಂತಿಗೆ, ದಾಸವಾಳ, ಕೇಪಳ ಮತ್ತು ಕೆಲವು ಬಗೆಯ ಸ್ಥಳೀಯ ಹೂಗಳಿಂದ ಅಲಂಕರಿಸಲಾಗಿತ್ತು. ಅದಾಗಲೇ ಒಣಗಿ ಚಿರುಟಿ ಹೋಗಿದ್ದ ಆ ಹೂವುಗಳನ್ನು ಗಮನಿಸಿದರೆ, ಕೆಲವು ದಿನಗಳ ಹಿಂದೆ ಅಲ್ಲಿ ಚಿಕ್ಕಮ್ಮದೇವಿಗೆ ವಿಶೇಷ ಪೂಜಾವಿಧಿಗಳು ನಡೆದಿರುವುದು ತಿಳಿಯುತ್ತಿತ್ತು.
ಲಕ್ಷ್ಮಣ ಮತ್ತು ಸರೋಜ ಪಾದರಕ್ಷೆಗಳನ್ನು ಕಳಚಿಟ್ಟು ಬನದೊಳಗೆ ಪ್ರವೇಶಿಸಲು ಮುಂದಾದರು. ಆದರೆ ನಾಸ್ತಿಕರೊಳಗೂ ಭಯಾತಂಕವನ್ನು ಸೃಷ್ಟಿಸುವ ಆ ಬನವನ್ನೂ, ಅದರೊಳಗಿನ ಗಾಢಾಂದಕಾರವನ್ನೂ ಕಂಡ ಸರೋಜಾಳಿಗೆ ಮೈಜುಮ್ಮೆಂದಿತು. ಆದ್ದರಿಂದ ಅವಳು ಮುಂದಡಿಯಿಡಲು ಹಿಂಜರಿದಳು. ಲಕ್ಷ್ಮಣನು ಅವಳ ಭುಜವನ್ನು ಬಳಸಿಕೊಂಡು ದಿಟ್ಟಿಸಿ ನಕ್ಕಾಗ ಅವಳಲ್ಲಿ ಧೈರ್ಯ ಮೂಡಿತು. ಇಬ್ಬರೂ ಭಕ್ತಿಯಿಂದ ಒಳಗಡಿಯಿಟ್ಟು ಐದಾರು ಗಜಗಳಷ್ಟು ಮುಂದೆ ಸಾಗಿದ್ದರು. ಅಷ್ಟರಲ್ಲಿ ಅಲ್ಲೊಂದು ವಿಲಕ್ಷಣ ಘಟನೆ ನಡೆಯಿತು. ಎಂಥದ್ದೋ ವಿಕಾರವಾದ ಕೀರಲು ಅರಚುವಿಕೆಯೊಂದು ಅವರ ಸಮೀಪದಲ್ಲಿಯೇ ಕೇಳಿಸಿತು. ಅದರ ಬೆನ್ನಿಗೆ ಎದೆ ನಡುಗಿಸುವಂಥ ಕರ್ಕಶ ಹ್ಞೂಂಕಾರವೂ ಮೊಳಗಿ ಕಾಡಿನ ತುಂಬಾ ಮಾರ್ದನಿಸಿದವು. ಮರುಕ್ಷಣ ದೊಡ್ಡ ಕರಿಯ ಮೂಟೆಯ ಗಾತ್ರದ ಏಳೆಂಟು ಮೃಗಗಳು ತಮ್ಮ ಮರಿಗಳೊಂದಿಗೆ ಅರಚುತ್ತ ಇವರನ್ನು ಸವರಿಕೊಂಡೇ ಬಲ್ಲೆ, ಪೊದರುಗಳನ್ನು ಸೀಳಿ ನುಗ್ಗಿ ಓಡಿ ಹೋದುವು! ಅವನ್ನು ಕಂಡ ಸರೋಜ ಭಯದಿಂದ ‘ಅಯ್ಯಮ್ಮಾ…!’ ಎಂದು ಕಿರುಚಿ ಲಕ್ಷ್ಮಣನನ್ನು ಬಿಗಿದಪ್ಪಿ ಕಣ್ಣುಮುಚ್ಚಿದಳು. ಪಕ್ಕನೆ ಯಾವುದಕ್ಕೂ ಬೆದರದ ಲಕ್ಷ್ಮಣನೂ ಒಂದು ಕ್ಷಣ ದಂಗಾಗಿಬಿಟ್ಟ. ಆದರೆ ಅವು ಕಾಡುಹಂದಿಗಳು ಎಂದು ತಿಳಿದಾಕ್ಷಣ ಧೈರ್ಯ ತಂದುಕೊoಡ. ಆ ಮುಗ್ಧಜೀವಿಗಳು ಹೆಮ್ಮರಗಳ ಬುಡದಲ್ಲಿ ಕೊಳೆತು ಬಿದ್ದಿದ್ದ ತರಗೆಲೆ ರಾಶಿಯೊಳಗಿನ ಎರೆಹುಳು ಮತ್ತಿತರ ಹುಳಹುಪ್ಪಟೆಗಳನ್ನು ಕೆದಕಿ ತಿನ್ನುತ್ತಿದ್ದವು, ಮನುಷ್ಯಜೀವಿಗಳ ಆಕಸ್ಮಿಕ ಆಗಮನದಿಂದ ಹೆದರಿ, ಅವರನ್ನೂ ಬೆದರಿಸಿ ಓಡಿ ಹೋಗಿದ್ದುವು.
ವರಾಹಗಳ ದಿಢೀರ್ ದರ್ಶನದಿಂದ ಲಕ್ಷ್ಮಣನಿಗೆ ಕೆಲವು ಕ್ಷಣ ತಾನು ಬಂದ ಕಾರ್ಯವೇ ಮರೆತುಹೋಗಿತ್ತು. ಆದರೆ ಬಳಿಕ ಚೇತರಿಸಿಕೊಂಡ ಇಬ್ಬರೂ ಮುಂದೆ ಹೋಗಿ ಚಿಕ್ಕುವಿನ ಪೀಠದೆದುರು ನಿಂತರು. ಲಕ್ಷ್ಮಣ ತನ್ನ ಜೇಬಿನಿಂದ ಕರಿಮಣಿ ಸರವನ್ನು ಹೊರಗೆ ತೆಗೆದ. ಅದನ್ನು ಕಂಡ ಸರೋಜಾಳಿಗೆ ಅಚ್ಚರಿಯೂ ರೋಮಾಂಚನವೂ ಒಟ್ಟೊಟ್ಟಿಗಾಯಿತು. ಲಕ್ಷ್ಮಣ ಅವಳನ್ನು ಪ್ರೀತಿಯಿಂದ ದಿಟ್ಟಿಸುತ್ತ ನಕ್ಕ. ಸರೋಜಾಳ ಕೆನ್ನೆಗಳು ಕೆಂಪೇರಿದವು. ಲಕ್ಷ್ಮಣನು ತಾಳಿಯನ್ನು ಹಿಡಿದುಕೊಂಡು ಚಿಕ್ಕುವಿನ ಶಿಲಾಬಿಂಬದೆದುರು ನಿಂತವನು, ‘ಅಮ್ಮಾ, ಚಿಕ್ಕಮ್ಮದೇವಿಯೇ…! ನಮಗೆ ಯಾರೂ ದಿಕ್ಕಿಲ್ಲವಮ್ಮಾ. ಇನ್ನು ಮುಂದೆ ನೀನೇ ನಮಗೆಲ್ಲ! ಇಂದು ನಿನ್ನ ಸಮ್ಮುಖದಲ್ಲಿಯೇ ಗಂಡ ಹೆಂಡತಿಯರಾಗುತ್ತಿದ್ದೇವೆ. ನಮ್ಮನ್ನು ಕಾಪಾಡಮ್ಮಾ…!’ ಎಂದು ಆರ್ದ್ರವಾಗಿ ಪ್ರಾರ್ಥಿಸಿದ. ಅತ್ತ ಸರೋಜಾಳ ಪ್ರಾರ್ಥನೆಯೂ ಅದೇ ರೀತಿಯಲ್ಲಿ ಸಾಗಿತ್ತು.
‘ಬಾ ಸರೋಜಾ… ನನ್ನೆದುರು ನಿಲ್ಲು. ಇವತ್ತು ಈ ತಾಯಿಯ ಪವಿತ್ರ ಸನ್ನಿಧಿಯಲ್ಲಿ ನನಗೆ ನೀನು, ನಿನಗೆ ನಾನು ಎಂದು ಮನಸಾರೆ ಒಪ್ಪಿಕೊಳ್ಳುವ. ನಮ್ಮಿಬ್ಬರ ಸಂಬoಧಕ್ಕೆ ಈ ತಾಯಿಯೇ ಸಾಕ್ಷಿಯಾಗಲಿ!’ ಎಂದು ಲಕ್ಷ್ಮಣ ಭಾವುಕನಾಗಿ ಹೇಳಿದ. ಆಗ ಸರೋಜಾಳ ಕಣ್ಣಾಲಿಗಳು ತುಂಬಿದವು.
ತಮಗೂ ಹಿರಿಯ ಮನೆತನವೊಂದಿದೆ. ದೊಡ್ಡಮಟ್ಟದ ಬಂಧುಬಳಗವೂ ಇದೆ. ಇಂದಲ್ಲ ನಾಳೆ ತಮ್ಮದಾಗುವ ಸಾಕಷ್ಟು ಆಸ್ತಿಪಾಸ್ತಿಯೂ ಇದೆ. ಆದರೇನು ಬಂತು? ನಮ್ಮಿಬ್ಬರ ದುರಾದೃಷ್ಟಕ್ಕೆ ಇವತ್ತು ಎಲ್ಲೋ ಪರವೂರಿನಲ್ಲಿ ದಟ್ಟ ಕಾಡಿನೊಳಗಿನ ತಮ್ಮದಲ್ಲದ ಯಾವುದೋ ದೈವದೆದುರು ಅನಾಥರಂತೆ ಸತಿಪತಿಯರಾಗಬೇಕಾಗಿ ಬಂತಲ್ಲ ದೇವರೇ…! ಎಂದು ಯೋಚಿಸಿದ ಸರೋಜಾಳಿಗೆ ದುಃಖ ಒತ್ತರಿಸಿ ಬಂದು, ಬಿಕ್ಕಿಬಿಕ್ಕಿ ಅತ್ತಳು. ಲಕ್ಷ್ಮಣನಿಗೂ ಕಣ್ಣೀರು ಬಂತು. ಆದರೂ ಅವನು, ‘ಸರೂ, ಅಳಬೇಡ…! ನಿನ್ನ ನೋವು ನನಗೆ ಅರ್ಥವಾಗುತ್ತದೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ಇದನ್ನು ಬಿಟ್ಟು ನಮಗೆ ಬೇರೆ ದಾರಿ ಯಾವುದಿದೆ ಹೇಳು…? ನಮ್ಮ ಹಣೆಬರಹದಲ್ಲಿ ಏನು ಬರೆದಿದೆಯೋ ಅದೇ ಆಗುತ್ತದೆ ಎಂದು ಭಾವಿಸಿದರಾಯ್ತು. ಅಳಬೇಡ…!’ ಎಂದು ತನ್ನ ಸಂಗಾತಿಯನ್ನು ಮೃದುವಾಗಿ ಸಂತೈಸಿದ. ಸರೋಜಾಳಿಗೂ ಅವನ ಮಾತು ನಿಜವೆನಿಸಿತು. ಅವಳು ಕಣ್ಣೀರೊರೆಸಿಕೊಂಡಳು. ಲಕ್ಷ್ಮಣನು ಚಿಕ್ಕುದೇವಿಯ ಶಿಲಾಬಿಂಬವನ್ನು ಮತ್ತೊಮ್ಮೆ ದೀರ್ಘವಾಗಿ ದಿಟ್ಟಿಸಿದವನು ಸರೋಜಾಳ ಕೊರಳಿಗೆ ಕರಿಮಣಿಯನ್ನು ಕಟ್ಟಿದ. ಮರುಕ್ಷಣ ಆ ಎಳೆಯ ಜೋಡಿಯ ಮೈಮನಸ್ಸುಗಳಲ್ಲಿ ವಿವರಿಸಲಾಗದ ಆನಂದ ಮತ್ತು ಅಖಂಡ ಭದ್ರತೆ ಮೂಡಿತು. ಕೆಲಹೊತ್ತು ಚಿಕ್ಕುವಿನ ಸನ್ನಿಧಿಯಲ್ಲಿ ಕುಳಿತು ಖುಷಿಯಿಂದ ಸಮಯ ಕಳೆದರು. ಲಕ್ಷ್ಮಣ ಸಂತೆಯಿoದ ತಂದಿದ್ದ ಕಾಯಿಯೊಂದನ್ನು ದೇವಿಯೆದುರಿನ ಕಲ್ಲಿಗೆ ಹೊಡೆದು ಹೋಳು ಮಾಡಿ ಅದರ ಚೂರುಗಳನ್ನೂ, ಬಾಳೆಹಣ್ಣುಗಳನ್ನೂ ಸರೋಜಾಳಿಗೆ ನೀಡಿದ. ಇಬ್ಬರೂ ತಿಂದು ಹಸಿವು ನೀಗಿಸಿಕೊಂಡವರು ಎದ್ದು ಮನೆಯತ್ತ ಹೊರಟರು.
‘ರೀ…ಒಂದು ಮಾತು ಹೇಳುತ್ತೇನೆ, ಇನ್ನು ಮುಂದೆ ನಮ್ಮ ಜೀವನದಲ್ಲಿ ಅದೇನೇ ಕಷ್ಟ ಬಂದರೂ ಸೋಲದೆ, ಹೆದರದೆ ಮುಂದೆ ಸಾಗಬೇಕು ಮತ್ತು ನಮ್ಮವರೆದುರು ತಲೆಯೆತ್ತಿ ಬಾಳಿ ತೋರಿಸಬೇಕು!’ ಎಂದು ಗಂಡನೊoದಿಗೆ ಹೆಜ್ಜೆ ಹಾಕುತ್ತಿದ್ದ ಸರೋಜ ಆತ್ಮವಿಶ್ವಾಸದಿಂದ ಅಂದಳು. ಅವಳ ಮಾತು ಕೇಳಿದ ಲಕ್ಷ್ಮಣನೂ, ‘ಹೌದು ಸರೂ ನೀನು ಹೇಳುವುದು ಸರಿ. ಹಾಗೆಯೇ ಬದುಕುವ. ನಮ್ಮ ಅದೃಷ್ಟಕ್ಕೆ ಅಕ್ಕಯಕ್ಕ ಮತ್ತು ಈ ಊರಿನ ಜನರು ಕೂಡಾ ತುಂಬಾ ಒಳ್ಳೆಯವರು. ನೆರಕರೆಯವರ ಕಷ್ಟ ಸುಖದಲ್ಲಿ ಭಾಗಿಯಾಗುವಂಥ ಮನಸ್ಸಿರುವವರು. ಹಾಗಾಗಿ ನಾವು ಈ ಊರಿನಲ್ಲೇ ಸ್ವಂತದೊoದು ಜಾಗ ಮಾಡಿ ಮನೆ ಕಟ್ಟಿ ಜೀವನ ನಡೆಸುವ!’ ಎಂದು ಲಕ್ಷ್ಮಣನೂ ಭರವಸೆಯ ನುಡಿಗಳನ್ನಾಡುತ್ತ ಸರೋಜಾಳ ಗೆಲುವಿಗೆ ಸ್ಫೂರ್ತಿ ತುಂಬಿದ. ಇಬ್ಬರೂ ಹೀಗೆಯೇ ಮಾತುಕತೆಯಾಡುತ್ತ ನಡೆಯುತ್ತಿದ್ದ ಕಾಲು ದಾರಿಯ ಇಕ್ಕೆಲಗಳಲ್ಲಿ ಉದ್ದಕ್ಕೂ ಸಾಲಾಗಿ ದೈತ್ಯ ತಾಳೆಮರಗಳಿದ್ದುವು. ಸಂಜೆಯ ಹೂಗಾಳಿಯ ವಯ್ಯಾರಕ್ಕೆ ಅವು ತಂತಮ್ಮ ಚಾಮರದಂತಹ ಒರಟು ಎಲೆಗಳನ್ನು ಬೀಸುತ್ತ ಒಂದಕ್ಕೊoದು ತಿಕ್ಕಿಕೊಂಡು ಮರ್ಮರವೆಬ್ಬಿಸುತ್ತಿದ್ದವು. ತೆಳು ಕಿತ್ತಾಳೆ ಬಣ್ಣದ ಬಾನಿನಲ್ಲಿ ಹಾರಾಡುತ್ತಿದ್ದ ಬೆಳ್ಳಗಿನ ಸಮುದ್ರ ಹಕ್ಕಿಗಳ ಹಿಂಡೊoದು ಅನತಿದೂರದ ಮಲ್ಲಕಳ ಹೊಳೆಯ ದಂಡೆಯ ಮೇಲೆ ಇಳಿಯುತ್ತಿದ್ದ ದೃಶ್ಯವು ಲಕ್ಷ್ಮಣನನ್ನು ಇನ್ನಷ್ಟು ಮುದಗೊಳಿಸಿತು. ಇಬ್ಬರೂ ಸುತ್ತಮುತ್ತಲಿನ ಸುಂದರ, ಪ್ರಶಾಂತ ಪ್ರಕೃತಿಯ ಚೆಲುವನ್ನಾಸ್ವಾಧಿಸುತ್ತ ಮನೆಯತ್ತ ಹೆಜ್ಜೆ ಹಾಕುತ್ತಿದ್ದರು.
ಮನೆಗೆ ಬಂದ ದಂಪತಿ ತಾವು ತಂದ ಸಾಮಾಗ್ರಿಗಳನ್ನು ಒಳಗಿಟ್ಟು ಕೈಕಾಲು ಮುಖ ತೊಳೆದು ಬಂದು ಜಗುಲಿಯಲ್ಲಿ ಕುಳಿತರು. ಆ ಹೊತ್ತು ಅಕ್ಕಯಕ್ಕ ಕೋಳಿಗಳಿಗೆ ಮೇವು ಹರಡುತ್ತಿದ್ದವಳು ತನ್ನ ಅಕ್ಕರೆಯ ಹುಂಜವೊoದನ್ನು ಹಿಡಿದುಕೊಂಡು ಮುದ್ದಿಸುತ್ತಿದ್ದಳು. ಅದು ತನ್ನೆಜಮಾನ್ತಿಯ ಮಡಿಲಲ್ಲಿ ಕುಳಿತು ಅವಳ ಮಾತಿಗೆ ತಾನೂ ಕೊಟ ಕೊಟಾ ಕೊಟ ಕೊಟಾ ಕರ‍್ರ್…! ಎಂದು ಪ್ರೀತಿಯಿಂದ ಪ್ರತಿಕ್ರಿಯಿಸುತ್ತಿತ್ತು. ಅಷ್ಟರಲ್ಲಿ ಲಕ್ಷ್ಮಣನು, ‘ಅಕ್ಕಯಕ್ಕ ಸ್ವಲ್ಪ ಇಲ್ಲಿ ಬನ್ನಿಯಮ್ಮಾ..!’ ಎಂದು ಕರೆದ. ಅವಳು ಹುಂಜವನ್ನು ಕೆಳಗೆ ಬಿಟ್ಟು ಸರೋಜಾಳ ಪಕ್ಕ ಬಂದು ಕುಳಿತವಳು, ‘ಏನ್ ಮಗಾ ಹೇಳಿನೀ…?’ ಎಂದಳು ಪ್ರೀತಿಯಿಂದ.
‘ಅಕ್ಕಯಕ್ಕಾ ನೀವು ತಪ್ಪು ತಿಳಿದುಕೊಳ್ಳುವುದಿಲ್ಲ ಅಂದರೆ ಒಂದು ಮಾತು ಹೇಳುತ್ತೇನೆ. ಇಷ್ಟು ದಿನ ನೀವು ನಮ್ಮನ್ನು ಸ್ವಂತ ಮಕ್ಕಳಂತೆಯೇ ನೋಡಿಕೊಂಡಿದ್ದೀರಿ. ಹಾಗಂತ ನಾವೂ ಎಷ್ಟು ದಿನಾಂತ ಧರ್ಮಕ್ಕೆ ಉಣ್ಣುತ್ತಿರುವುದು ಹೇಳಿ? ಹಾಗಾಗಿ ಇವತ್ತಿನಿಂದ ನೀವು ನಮಗೆ ಕೊಟ್ಟ ಕೋಣೆಗೆ ಒಂದಿಷ್ಟು ಬಾಡಿಗೆ ಕೊಡುವುದರೊಂದಿಗೆ ನಮ್ಮ ಅಡುಗೆಯನ್ನು ನಾವೇ ಮಾಡಿಕೊಂಡು ಇರಬೇಕೆಂದಿದ್ದೇವೆ. ಒಪ್ಪುತ್ತೀರಾ…?’ ಎಂದ ಲಕ್ಷ್ಮಣ ನಮ್ರವಾಗಿ. ಅಷ್ಟು ಕೇಳಿದ ಅಕ್ಕಯಕ್ಕನ ಮುಖ ಬಾಡಿತು. ಆದರೆ ಆ ಎಳೆಯ ಮನಸ್ಸುಗಳೇ ಸ್ವತಂತ್ರವಾಗಿ ಬದುಕಲಿಚ್ಚಿಸುವಾಗ ತಾನು ಬೇಡ ಎನ್ನುವುದು ಸರಿಯಲ್ಲ ಎಂದು ಯೋಚಿಸಿದವಳು, ‘ಅಯ್ಯೋ, ಬಾಡಿಗಿ ಗೀಡಿಗಿ ಎಲ್ಲ ನಂಗೆoತಕ್ ಮಗಾ. ನಿಮ್ಗೆ ಹೇಂಗ್ ತೋರತ್ತೋ ಹಾಂಗ್ ಮಾಡಿ. ಒಟ್ಟಾರೆ ನೀವ್ ಚಂದ ರೀತಿಯಂಗ್ ಇದ್ರ್ ಸಾಕ್!’ ಎಂದು ಸಮ್ಮತಿಸಿದಳು. ಬಳಿಕ ಅವಳ ದೃಷ್ಟಿಯು ಸರೋಜಾಳ ಕತ್ತಿನತ್ತ ಹೊರಳಿತು. ‘ಓಹೋ, ತಾಳಿನೂ ಮಾಡ್ಕಂಡ್ರಿಯಾ. ಈಗ ನಂಗೂ ನೆಮ್ದಿದಿಯಾಯ್ತ್ ಕಾಣೀ!’ ಎಂದು ಅವಳನ್ನು ಪ್ರೀತಿಯಿಂದ ನಿವಾಳಿಸಿ ತೆಗೆದು ಹಾರೈಸಿದಳು. ಆವತ್ತಿನಿಂದ ಲಕ್ಷ್ಮಣ, ಸರೋಜಾಳ ದಾಂಪತ್ಯ ಜೀವನವು ಅರಳಲಾರಂಭಿಸಿತು.
(ಮುಂದುವರೆಯುವುದು)