
⭕ ಧಾರವಾಹಿ ಭಾಗ 20
ಧಾರವಾಹಿ 21
ತಾಮಸ ತನ್ನನ್ನು ಥೀಯೆಟರಿನೊಳಗೆ ಸ್ಪರ್ಶಿಸಿದ ರೀತಿಯಿಂದ ನಾಗರತ್ನಳಿಗೆ ಅವನ ಮೇಲೆ ವಿಚಿತ್ರ ಆಕರ್ಷಣೆಯೂ ಮೂಡಿದ್ದರೊಂದಿಗೆ ಅವ್ಯಕ್ತ ಬಯಕೆಯೂ ಕಾಡತೊಡಗಿತ್ತು. ಅವನೊಡನೆ ಆಟೋದಲ್ಲಿ ಸಾಗುತ್ತಿದ್ದಾಗಲೂ ಅವಳ ಮನಸ್ಸು ಅದೇ ಧ್ಯಾನದಲ್ಲಿತ್ತು. ಆದರೆ ಅತ್ತ ಇವಳ ಗೆಳತಿ ವಿಮಲ ಮಾತ್ರ ಆತಂಕದಿoದ ಚಡಪಡಿಸುತ್ತಿದ್ದಳು. ತಾನು ಈ ಗೆಳತಿಯ ಮಾತು ಕೇಳಿ ಗುರುತು ಪರಿಚಯವಿಲ್ಲದವರ ಹಾಗು ಟಾಕೀಸಿನಲ್ಲಿ ಹಾಗೆಲ್ಲ ಅಸಭ್ಯವಾಗಿ ವರ್ತಿಸಿದವರೊಂದಿಗೆ ಬರಲೇಬಾರದಿತ್ತು. ತಪ್ಪು ಮಾಡಿಬಿಟ್ಟೆನೇನೋ…? ಅಯ್ಯೋ ದೇವರೇ! ಎಂದು ಚಿಂತಿಸಿದವಳಿಗೆ ಅಳುವೇ ಬಂದು ಬಿಟ್ಟಿತು. ಆದರೂ ತೋರಿಸಿಕೊಳ್ಳದೆ ನರಳುತ್ತ ಕುಳಿತಿದ್ದಳು. ಅಷ್ಟೊತ್ತಿಗೆ ರಿಕ್ಷಾವೂ ತಮ್ಮ ಊರಿನತ್ತ ಸಾಗದೆ ಮತ್ತಾö್ಯವುದೋ ರಸ್ತೆ ಹಿಡಿದಿದ್ದುದನ್ನು ಕಂಡವಳಿಗೆ ಆತಂಕ ದುಪ್ಪಟ್ಟಾಯಿತು. ಆದ್ದರಿಂದ, ‘ಹೇ, ನಾಗರತ್ನಾ…ನಾವು ಎಲ್ಲಿಗೆ ಹೋಗುತ್ತಿದ್ದೇವನಾ…? ಇದು ಯಾವ ದಾರಿ…? ನಂಗೆ ಮನೆಗೆ ಹೋಗಬೇಕು ಮಾರಾಯ್ತೀ. ಇಲ್ಲಿಯೇ ಇಳಿದುಬಿಡುವ. ರಿಕ್ಷಾ ನಿಲ್ಲಿಸಲು ಹೇಳು!’ ಎಂದು ಅಳುಮೋರೆ ಹಾಕಿಕೊಂಡು ಅವಳ ಕಿವಿಯಲ್ಲಿ ಉಸುರಿದಳು. ಗೆಳತಿಯ ಭಯಯನ್ನು ಕಂಡ ನಾಗರತ್ನಾಳ ಧೈರ್ಯವೂ ಮೆಲ್ಲನೆ ಕರಗಿ ಅವಳಲ್ಲೂ ಅಳುಕು ಆರಂಭವಾಯಿತು. ಹಾಗಾಗಿ, ‘ರೀ, ನಾವು ಎಲ್ಲಿಗೆ ಹೋಗುತ್ತಿದ್ದೇವೆ ಮಾರಾಯ್ರೇ…? ನಮ್ಮನ್ನು ನಮ್ಮ ಮನೆಯ ಹತ್ರ ಕರೆದು ಕೊಂಡು ಹೋಗಿ ಬಿಡಿಯಲ್ಲವಾ…!’ ಎಂದು ಒಲ್ಲದ ಮನಸ್ಸಿನಿಂದಲೇ ತಾಮಸನಿಗೆ ಹೇಳಿದಳು.
ಆದರೆ ತಾಮಸನು ನಾಗರತ್ನಾಳ ತುಡಿತವನ್ನು ಟಾಕೀಸಿನೊಳಗೆಯೇ ಅರ್ಥೈಸಿಕೊಂಡಿದ್ದ. ಹಾಗಾಗಿ ಅವಳ ಮಾತಿಗೆ ಮಂದಹಾಸ ಬೀರಿದ ಮತ್ತು ಆವರೆಗೆ ಬಹುವಚನದಿಂದ ಸಂಭೋಧಿಸುತ್ತಿದ್ದವನು ಈಗ ತಟ್ಟನೆ ಏಕವಚನಕ್ಕಿಳಿದು, ‘ನೀವಿಬ್ಬರು ಯಾಕಿಷ್ಟೊಂದು ಹೆದರುತ್ತೀರಿ ಮಾರಾಯ್ತಿ…? ನನ್ನ ಮೇಲಿನ್ನೂ ವಿಶ್ವಾಸ ಬಂದಿಲ್ಲವಾ…? ನಿಂಗೆ ಇಷ್ಟ ಇದ್ದುದರಿಂದಲೇ ಅಲ್ಲವಾ ನಾನೂ ಕರೆದುಕೊಂಡು ಹೋಗುತ್ತಿರುವುದು? ಸ್ವಲ್ಪಹೊತ್ತು ಎಲ್ಲಾದರೂ ಜ್ವಾಲಿಯಾಗಿ ಸುತ್ತಾಡಿದ ನಂತರ ನಿಮ್ಮ ಮನೆಯ ಹತ್ರವೇ ಇಳಿಸಿ ಹೋಗುತ್ತೇನೆ. ಅಷ್ಟರವರೆಗೆ ನಿನ್ನ ಫ್ರೆಂಡಿಗೆ ನೀನೇ ಸ್ವಲ್ಪ ಧೈರ್ಯ ಹೇಳು…!’ ಎಂದು ವಿಮಲಳಿಗೆ ಕೇಳಿಸುವಂತೆ ನಯವಾಗಿ ಹೇಳಿದವನು ಪಕಪಕನೇ ನಕ್ಕ. ಆಗ ವಿಮಲ ಇನ್ನಷ್ಟು ವಿಚಲಿತಳಾಗಿ ತಾಮಸನನ್ನು ದೈನ್ಯದಿಂದ ದಿಟ್ಟಿಸಿದವಳು, ಹೇಗೂ ಈ ಹಾಳಾದವಳ ಮಾತು ಕೇಳಿ ಬಂದು ಇವರ ಕೈಯಲ್ಲಿ ಸಿಕ್ಕಿಬಿದ್ದಾಗಿದೆ. ಇನ್ನು ತಾಳ್ಮೆ ಕಳೆದುಕೊಳ್ಳಬಾರದು. ದೇವರಿದ್ದಾನೆ! ಎಂದುಕೊoಡವಳು, ದೇವರೇ ಕಾಪಾಡಪ್ಪಾ…! ಎಂದು ಪ್ರಾರ್ಥಿಸಿ ಉಸಿರು ಬಿಗಿ ಹಿಡಿದು ಕುಳಿತಳು.
ಇತ್ತ ತನ್ನ ಇಡೀ ಗಮನವನ್ನು ಪ್ರಯಾಣಿಕರ ಸಂಭಾಷಣೆಯ ಮೇಲೆಯೇ ನೆಟ್ಟಿದ್ದ ವಿಠ್ಠಲ ಶೇಣವನಿಗೆ ತಾಮಸನ ಆ ಬಗೆಯ ಮಾತಿನಿಂದ ತಟ್ಟನೆ ವಿಷಯವೇನೆಂದು ಅರ್ಥವಾಗಿಬಿಟ್ಟಿತು. ಆದ್ದರಿಂದ ಅವನ ಎಣಿಕೆಯೂ ಬೇರೊಂದು ಮಾರ್ಗದಲ್ಲಿ ಸಾಗಿತು. ನನ್ನ ಇಪ್ಪತ್ತು ವರ್ಷಗಳ ರಿಕ್ಷಾ ಸರ್ವೀಸಿನಲ್ಲಿ ಇಂಥ ಅದೆಷ್ಟು ಕಥೆಗಳನ್ನು ತಾನು ಕಂಡಿಲ್ಲ! ಅಂಥ ಕೆಲವು ಕೇಸುಗಳಲ್ಲಿ ತಾನೂ ಅವರೊಂದಿಗೆ ಮಜಾ ಉಡಾಯಿಸಲಿಲ್ಲವಾ! ಎಂದುಕೊoಡವನು ರೋಮಾಂಚಿತನಾದ. ಬಳಿಕ, ಈ ಮಗ ನೋಡಲೇನೋ ಭೂತಕ್ಕೆ ಬಿಟ್ಟ ಕೋಣದಂತಿದ್ದಾನೆ. ಆದರೆ ಆಗ ನನ್ನ ಒಂದೇ ಆವಾಜ್‌ಗೆ ಧಮ್ಮು ಖಾಲಿಯಾಗಿ ಮಂಗನoತೆ ಹ್ಹೆಹ್ಹೆಹ್ಹೆಹ್ಹೆ! ಅಂತ ಹೇಗೆ ನಕ್ಕಿದ್ದ! ನನಗಾವಾಗಲೇ ಇವನು ಮಹಾ ಪುಕ್ಕಲ ಅಂತ ಗೊತ್ತಾಯಿತು. ಅದಕ್ಕೇ ಹೇಳುವುದು ದೇಹ ಬೆಳೆದವರಿಗೆಲ್ಲ ಧೈರ್ಯ ಬೆಳೆದಿರುವುದಿಲ್ಲ ಅಂತ. ಆದರೂ ಒಳ್ಳೆಯ ಚೆಂದುಳ್ಳಿ ಚೆಲುವೆಯರನ್ನೇ ಪಟಾಯಿಸಿದ್ದಾನೆ ಭೂಪ! ಚಾನ್ಸ್ ಸಿಕ್ಕಿದರೆ ತಾನೂ ಒಂದು ಕೈ ನೋಡಿ ಬಿಡಬೇಕು ಎಂದು ಲೆಕ್ಕಾಚಾರ ಹಾಕುತ್ತ ತಾಮಸನ ಅಣತಿಯಂತೆ ಸಾಗಿದ. ಸ್ವಲ್ಪಹೊತ್ತಲ್ಲಿ ಗಂಗರಬೀಡು ಸಮೀಪಿಸಿತು. ‘ಇನ್ನು ಎಲ್ಲಿಗೆ ಮಾರಾಯ್ರೇ…?’ ಎಂದು ತಾಮಸನೊಡನೆ ಹಿಂದಿನ ಅದೇ ರುಬಾಬಿನಿಂದ ಕೇಳಿದ. ಆಗ ತಾಮಸ ತಾನು ಅಲ್ಲಿಯವರೆಗೆ ಹಿಡಿದಿಟ್ಟುಕೊಂಡಿದ್ದ ಸಹನೆಯನ್ನು ಮತ್ತೊಮ್ಮೆ ಪ್ರದರ್ಶಿಸುತ್ತ, ‘ಕಾವೇರ್ ಕಾಡಿನತ್ತ ಹೋಗುವ ಮಾರಾಯಾ…!’ ಎಂದ ಮೃದುವಾಗಿ. ಆದರೆ ಆ ಮಲೆಯ ಹೆಸರು ಕೇಳಿದ ಶೇಣವ ಮೆಲ್ಲನೆ ಬೆವರಿದ.
ಗಂಗರಬೀಡಿನ ಒಂದು ಪಾರ್ಶ್ವವನ್ನು ದಟ್ಟವಾಗಿ ಮತ್ತು ವಿಶಾಲವಾಗಿ ಆವರಿಸಿದ ಆ ಮಲೆಗೆ ‘ಕಾವೇರ್‌ಕಾಡು’ ಎಂಬ ಹೆಸರು ಬರಲು ಮುಖ್ಯ ಕಾರಣ ಈ ಕಾಡಿನೊಳಗೆ ಇನ್ನೂರು ಮುನ್ನೂರು ವರ್ಷಗಳಷ್ಟು ಪುರಾತನವಾದ, ಅಧಿಕ ಸಂಖ್ಯೆಯಲ್ಲಿದ್ದ ಕಾಸರಕ ಮರಗಳು! ಗಂಗರಬೀಡಿನ ಬಲಪಾರ್ಶ್ವದ ಸುಮಾರು ಹದಿನೈದು ಕಿಲೋಮೀಟರ್ ಸುತ್ತಳತೆಯಲ್ಲಿ ಉದ್ದಕ್ಕೂ ಹರಡಿ ಬೆಳೆದು ನಿಂತ ಈ ಅರಣ್ಯದೊಳಗೆ ಕರಿಮಾರು, ಬೋಗಿ, ನಂದಿ, ಬೀಟೆ, ಮತ್ತಿ, ತೇಗ, ಶ್ರೀಗಂಧ, ಸುರಗಿ, ರೆಂಜೆ ಮತ್ತು ಹಾಲೆಮರಗಳಿಂದ ಹಿಡಿದು ಪಶ್ಚಿಮಘಟ್ಟದೊಳಗೆ ಮಾತ್ರವೇ ಕಾಣಸಿಗುವಂಥ ಸಾವಿರಾರು ಔಷಧೀಯ ಸಸ್ಯ ಪ್ರಭೇದಗಳು ಹಾಗೂ ಹುಲಿ, ಚಿಟ್ಟೆಹುಲಿ, ಕತ್ತೆಕಿರುಬ, ಕಾಡುಹಂದಿ, ಕಾಡುಕೋಣ, ಜಿಂಕೆ, ಮುಸುವ, ಸಿಂಘಳೀಕಗಳು ಮತ್ತು ವಿವಿಧ ಬಗೆಯ ಉರಗಜಂತುಗಳು, ನವಿಲು, ಮಂಗಟ್ಟೆ, ಕೋಗಿಲೆ, ಗೊರವಂಕ ಹಾಗೂ ಕಾಜಾಣದಂತಹ ಅಸಂಖ್ಯಾತ ಪಕ್ಷಿ ಪ್ರಭೇದಗಳು, ಸಹಸ್ರಾರು ಬಗೆಯ ಕ್ರಿಮಿಕೀಟಗಳು ಸಮೃದ್ಧವಾಗಿದ್ದು ಅಷ್ಟೇ ನಿರ್ಭಿಡೆಯಿಂದ ಬದುಕುತ್ತಿವೆ. ಎಲ್ಲೋ ಒಂದೆರಡು ಹುಲಿಗಳು ತಮ್ಮ ವಲಯಕ್ಕೆ ಅಕ್ರಮವಾಗಿ ಪ್ರವೇಶಿಸಿದ ದನಕರುಗಳನ್ನು ಹಿಡಿದು ಗೋಣು ಮುರಿದು ತಿಂದಿರುವುದನ್ನು ಬಿಟ್ಟರೆ ಹಳ್ಳಿಯೊಳಗೆ ನುಗ್ಗಿ ದಾಂಧಲೆಯೆಬ್ಬಿಸುವoಥ ಆಹಾರದ ಕೊರತೆಯು ಅವುಗಳನ್ನೆಂದೂ ಕಾಡಿದ್ದಿಲ್ಲ. ‘ಹಿಂದೆ ಒಂದುಕಾಲದಲ್ಲಿ ಈ ಕಾಡಿನಲ್ಲಿ ಆನೆಗಳೂ ಇದ್ದುವು. ಸುತ್ತಮುತ್ತಲಿನ ಜನಜೀವನ ವೃದ್ಧಿಸುತ್ತ ಹೋದಂತೆ ಅವುಗಳು ತಮ್ಮ ಬದುಕಿನ ಪಥ ಬದಲಾಯಿಸಿ ಘಟ್ಟಗಳತ್ತ ಹೊರಟು ಹೋದುವು!’ ಎಂದು ಊರ ಹಿರಿಯರು ಹೇಳುತ್ತಾರೆ. ಗಂಗರಬೀಡಿನ ಕೆಳವರ್ಗದ ಒಂದಷ್ಟು ಜನರು ತಮ್ಮೊಳಗಿನ ಧೈರ್ಯ ನಿರ್ಧರಿಸುವ ದೂರದವರೆಗೆ ಮಾತ್ರವೇ ಈ ಅಡವಿಯನ್ನು ಪ್ರವೇಶಿಸಿ ಕಾಡುತ್ಪತ್ತಿ, ಕಂದಮೂಲಗಳನ್ನು ಸಂಗ್ರಹಿಸಿಕೊAಡು ಬರುತ್ತಿದ್ದರು. ಉಳಿದಂತೆ ಊರ ಇತರು ಯಾರೂ ಈ ಕಾಡನ್ನು ಪ್ರವೇಶಿಸಲು ಹೆದರುತ್ತಿದ್ದರು. ಕಾರಣ, ಅವರಿಗೆ ಅಲ್ಲಿನ ಕಾಡುಮೃಗಗಳ ಭಯವೊಂದೆಡೆಯಾದರೆ ಈ ಕಾಡಿನೊಳಗೆ ಆಗಾಗ ಸುದ್ದಿಯಾಗುತ್ತಿದ್ದ ಮನುಷ್ಯರ ಭಯಾನಕ ಚಟುವಟಿಕೆಗಳು! ಗಂಗರಬೀಡು ಮತ್ತು ನೆರೆಕರೆಯ ಕೆಲವು ಗ್ರಾಮಗಳ ಅನೇಕ ಹೆಣ್ಣು ಹೆಂಗಸರ ಮೇಲೆ ಅತ್ಯಾಚಾರ, ಹತ್ಯೆ ಮತ್ತು ಆತ್ಮಹತ್ಯೆಗಳು ಈ ಕಾನನದೊಳಗೆಯೇ ಹೆಚ್ಚಾಗಿ ನಡೆಯುತ್ತಿದ್ದವು. ಅಂಥ ಹೆಣಗಳು, ಈ ಕಾಡಿನೊಳಗೆ ಕಾಡುಕುರಿ, ಹಂದಿ, ಮೊಲಗಳನ್ನು ಬೇಟೆಯಾಡಲು ಹೋಗುತ್ತಿದ್ದ ಕೆಲವರಿಗೆ ಮರದ ಮೇಲೆ ನೇತಾಡಿಕೊಂಡೋ ಅಥವಾ ಮೃಗಗಳು ಅರೆಬರೆ ತಿಂದು ಕೊಳೆತ ಸ್ಥಿತಿಯಲ್ಲೋ ಅನೇಕ ಬಾರಿ ದೊರಕಿದ್ದಿದೆ. ಆ ಬೀಭತ್ಸ ದೃಶ್ಯಗಳನ್ನು ಕಾಣುತ್ತಿದ್ದ ಅವರೆಲ್ಲ ಜೀವ ಕೈಯಲ್ಲಿ ಹಿಡಿದುಕೊಂಡು ಹೊರಗ್ಹೋಡಿ ಬಂದು ಸುದ್ದಿಯನ್ನು ಕೂಡಲೇ ಊರಿಡೀ ಹಬ್ಬಿಸುತ್ತಿದ್ದರು. ಅದು ಅಷ್ಟೇ ಶೀಘ್ರದಲ್ಲಿ ಶಿವಕಂಡಿಕೆಯ ಪೊಲೀಸ್ ಠಾಣೆಗೂ ಮುಟ್ಟುತ್ತಿತ್ತು. ಆದರೆ ಆ ಸಮಯದಲ್ಲಿ ಇಲಾಖೆಯಲ್ಲಿ ಆರಕ್ಷಕರ ಕೊರತೆಯಿರುತ್ತಿತ್ತೋ ಅಥವಾ ಅಂತಹ ದುಷ್ಕೃತ್ಯಗಳಿಗೆ ಕಾರಣರಾದವರ ಮೇಲೆ ಕೆಲವು ಅಧಿಕಾರಿಗಳಿಗೆ ಭಯ ಮತ್ತು ಸೌಜನ್ಯಗಳಿದ್ದವೋ ಗೊತ್ತಿಲ್ಲ. ಒಟ್ಟಾರೆ ಕೊಳೆತ ಹೆಣಗಳು ಅಲ್ಲೇ ಮಣ್ಣಾದ ಬೆನ್ನಿಗೆ ಸುದ್ದಿಯೂ ಸಪ್ಪಗಾಗುತ್ತಿದ್ದುದು ಸಾಮಾನ್ಯವಾಗಿತ್ತು.
ಆದರೂ ಕೆಲವು ಕುತೂಹಲಿಗರು ಅಂಥ ಹತ್ಯೆ ಮತ್ತು ಅನಾಚಾರಗಳ ಜಾಡು ಹಿಡಿದು ಸಾಗುತ್ತಿದ್ದುದೂ ಇತ್ತು. ಆಗ ಅಂಥವರಿಗೆ ಈ ಕಾಡಿನೊಳಗೆ ಸತ್ತ ಹೆಣ್ಣುಮಕ್ಕಳು ಕೆಲವು ಶ್ರೀಮಂತ ಮನೆತನದ ಸೊಸೆಯಂದಿರೋ, ಮಕ್ಕಳೋ, ಅಕ್ಕ, ತಂಗಿಯರೋ, ಊಳಿಗದವರೋ ಅಥವಾ ಕೆಳಜಾತಿಯ ಸುಂದರ ತರುಣಿಯರೋ ಆಗಿರುತ್ತಿದ್ದ ಕರಾಳ ಸತ್ಯವು ಅನಾವರಣಗೊಳ್ಳುತ್ತಿತ್ತು. ಆದರೆ ಹಾಗೆ ಸತ್ತವರನ್ನು, ‘ಕಾಡುಮೃಗಗಳು ಹಿಡಿದವೆಂದೋ, ಅಕ್ರಮ ಬಸುರಾದ ಅವಮಾನದಿಂದ ನೊಂದು ಆತ್ಮಹತ್ಯೆ ಮಾಡಿಕೊಂಡರೆoದೋ ಪುಕಾರುಗಳೆದ್ದು ಅವರು ಕಾಣೆಯಾದ ಕೆಲವೇ ದಿನಗಳಲ್ಲಿ ಊರಿಡೀ ಹಬ್ಬುತ್ತಿದ್ದುವು. ಆದರೂ ಅವನ್ನೆಲ್ಲ ಸೂಕ್ಷö್ಮವಾಗಿ ಪರಿಶೀಲಿಸುತ್ತ ಸಾಗುತ್ತಿದ್ದ ಈ ಪತ್ತೆಧಾರಿಗಳಿಗೆ ಅವೆಲ್ಲ ವರದಕ್ಷಿಣೆ, ಅತ್ತೆ ಸೊಸೆಯಂದಿರ ಜಗಳ ಮತ್ತು ಮಗಳು ಊಳಿಗದವನೊಂದಿಗೆ ಸಂಬoಧ ಬೆಳೆಸಿದ್ದು ಹಾಗೂ ಕೆಳಜಾತಿಯ ಹೆಣ್ಣು ಮಗಳನ್ನು ಕೆಡಿಸಲು ಹೋಗಿ ಬಸುರಾದ ಅಪವಾದಕ್ಕಂಜಿ ಮುಗಿಸಿದ್ದು ಅಥವಾ ಒಂದೇ ಮನೆಯೊಳಗಿನ ಅಕ್ರಮ ಸಂಬoಧವು ಚಾಕರಿಯವನಿಗೆ ತಿಳಿದು ಅವನು ಜಗಜ್ಜಾಹೀರು ಮಾಡಬಹುದೆಂಬ ಭಯ, ಅನುಮಾನದಿಂದಲೂ ಅಂಥವರನ್ನು ಹೊತ್ತೊಯ್ದು ಕೊಲೆಗೈಯ್ಯುತ್ತಿದ್ದಂಥ ಪೂರ್ವ ನಿಯೋಜಿತ ಕೃತ್ಯಗಳೆಂಬುದು ತಿಳಿಯುತ್ತಿತ್ತು. ಇಷ್ಟೆಲ್ಲ ಸತ್ಯ ವಿಚಾರಗಳನ್ನು ಶ್ರಮಪಟ್ಟು ತಿಳಿದುಕೊಳ್ಳುವ ಆ ಪತ್ತೆಧಾರಿಗಳು ಕೊನೆಯಲ್ಲಿ ತಾವೂ ಯಾವುದೋ ಭಯಕ್ಕೆ ತುತ್ತಾಗಿ ಸಪ್ಪಗಾಗುತ್ತಿದ್ದರು. ಹಾಗಾಗಿ ಅಂಥ ಅಪರಾಧಗಳನ್ನು ಕಾನೂನಿನ ಕಟಕಟೆಯಲ್ಲಿ ನಿಲ್ಲಿಸಲು ಗ್ರಾಮದ ಮುಖ್ಯಸ್ಥರುಗಳಾಗಲಿ, ಸರಕಾರವಾಗಲಿ ಯಾಕೆ ಆಸ್ಥೆವಹಿಸುತ್ತಿಲ್ಲ? ಎಂಬ ಯಕ್ಷಪ್ರಶ್ನೆಯೊಂದು ಹಳ್ಳಿಯ ಅಮಾಯಕರಲ್ಲಿ ಉಳಿದುಬಿಡುತ್ತಿತ್ತು. ಇವೆಲ್ಲದರ ನಡುವೆ ಹರಡುತ್ತಿದ್ದ ಇನ್ನೊಂದು ವಿಸ್ಮಯವೆಂದರೆ, ‘ಕಾವೇರ್‌ಕಾಡಿನಲ್ಲಿ ಸತ್ತವರಲ್ಲಿ ಕೆಲವರು ಭೂತ, ಪ್ರೇತಗಳಾಗಿ ಊರೊಳಗೆ ಸುತ್ತಾಡುತ್ತಿದ್ದಾರೆ!’ ಎಂಬುದು. ಅಂಥ ಪುಕಾರುಗಳು ಜನರ ಯಕ್ಷಪ್ರಶ್ನೆಗೂ ಉತ್ತರ ದೊರಕಿಸಿಕೊಟ್ಟು ಆ ದೆವ್ವ, ಭೂತಗಳನ್ನು ಆರಾಧಿಸುವ ಮಟ್ಟಕ್ಕೂ ಆ ಮುಗ್ಧ ಜನರನ್ನು ಕೊಂಡೊಯ್ಯುವ ಮೂಲಕ ಸತ್ಯವು ಕೊನೆಗೂ ಅಮೂರ್ತವಾಗಿಯೇ ಉಳಿದುಬಿಡುತ್ತಿತ್ತು.
ಇಂತಹ ಭೀಭತ್ಸ ಕಥನಗಳಿಗೆಲ್ಲ ಸಾಕ್ಷಿಯಾಗಿದ್ದ ಕಾವೇರ್‌ಕಾಡು ಎಂಬ ಕಡುಮಲೆಗೆ ಇಂದು ಇಬ್ಬರು ಎಳೆಯ ತರುಣಿಯರೊಂದಿಗೆ ಶೇಣವನೂ ತಾಮಸನ ಬಲೆಗೆ ಬಿದ್ದು ಬಂದು ನಿಂತಿದ್ದ. ತಾವು ಕುಳಿತ ರಿಕ್ಷಾ ಆ ದಟ್ಟಮಲೆಯತ್ತ ಬಂದು ನಿಲ್ಲುತ್ತಲೇ ಹುಡುಗಿಯರಿಬ್ಬರೂ ನಖಶಿಕಾಂತ ಹೆದರಿದರು. ಅಲ್ಲಿಯವರೆಗೆ ಯಾವುದೋ ಮಧುರ ಗುಂಗಿನಲ್ಲಿದ್ದ ನಾಗರತ್ನಾಳಿಗೆ ಗವ್ವೆನ್ನುವ ಆ ಕತ್ತಲ ಕಾನನವು ಪ್ರೇಮ, ಕಾಮಗಳ ಭ್ರಮೆಯನ್ನು ತಟ್ಟನೆ ಕಳಚಿಬಿಟ್ಟಿತು. ಆದ್ದರಿಂದ ಇಬ್ಬರೂ ರಿಕ್ಷಾದಿಂದ ಇಳಿಯಲು ಕೇಳಲಿಲ್ಲ. ಅದನ್ನು ಕಂಡ ತಾಮಸ ಮೊದಲಿಗೆ ಅವರನ್ನು ಪುಸಲಾಯಿಸುತ್ತ ಇಳಿಸಲು ಪ್ರಯತ್ನಿಸಿದ. ಅದರಿಂದ ನಾಗರತ್ನಳಿಗೆ ಹಿಂದಿನ ಆಸೆ ಮರಳಿ ಗರಿಗೆದರಿತು. ಆದರೆ ವಿಮಲ ಮಾತ್ರ ರಿಕ್ಷಾದ ರಾಡೊಂದನ್ನು ಬಿಗಿಯಾಗಿ ಹಿಡಿದು ಕುಳಿತಿದ್ದವಳು ಯಾರ ಒತ್ತಾಯಕ್ಕೂ ಮಣಿಯಲಿಲ್ಲ. ಏಕೆಂದರೆ ಅವಳಿಗೆ ಮುಂದೆ ನಡೆಯಬಹುದಾದ ವಿಲಕ್ಷಣ ಘಟನೆಯ ಚಿತ್ರಣವೊಂದು ಕಣ್ಣೆದುರು ಬಂದು ತಕತಕನೆ ಕುಣಿಯುತ್ತಿತ್ತು! ಹಾಗಾಗಿ ಅವಳನ್ನು ರಮಿಸಿ ಇಳಿಸುವಲ್ಲಿ ತಾಮಸ ಕೊನೆಗೂ ಸೋತುಬಿಟ್ಟ. ಸೋತವನು ತಟ್ಟನೆ ಕೆರಳಿದ. ‘ಏನೇ ರಂಡೆ…! ಮರ್ಯಾದೆಯಿಂದ ಇಳಿತೀಯಾ ಅಥವಾ ಹೊರಗೆಳೆದು ತುಳಿಯಬೇಕಾ…?’ ಎಂದು ಗುಡುಗಿದ. ಅವನ ‘ರಂಡೆ’ ಎಂಬ ಪದ ವಿಮಲಳನ್ನು ರೊಚ್ಚಿಗೆಬ್ಬಿಸಿತು. ಏಕೆಂದರೆ ಯಾವ್ಯಾವುದೋ ಕಾರಣಕ್ಕೆ ತನ್ನ ಅಪ್ಪ, ಅಣ್ಣಂದಿರಿoದ ಅವಳು ಆಗಾಗ ಹೊಡೆತಗಳನ್ನು ತಿನ್ನುತ್ತಿದ್ದ ಸಮಯದಲ್ಲಿ ಅವರು ಕೂಡಾ ರಂಡೆ, ಮುಂಡೆ ಎಂಬ ಕೆಟ್ಟ ಪದಗಳಿಂದ ಬೈಯ್ಯುತ್ತಿದ್ದುದನ್ನು ಕೇಳಿ ಕೇಳಿ ಅವಳಿಗೂ ರೋಸಿ ಹೋಗಿತ್ತು. ಈಗ ಯಾವನೋ ಒಬ್ಬ ಪರಾಕೀಯನೂ ಅದೇ ಮಾತಿನಿಂದ ಬೈದಿದ್ದು ಅವಳನ್ನು ಕೆರಳಿಸಿಬಿಟ್ಟಿತು. ಆದ್ದರಿಂದ, ‘ಥೂ! ಬೇವರ್ಸಿಗಳೇ…! ಇಂಥ ಜಾಗಕ್ಕೆಲ್ಲ ನಮ್ಮನ್ನು ಯಾಕೆ ಕರೆದುಕೊಂಡು ಬಂದಿದ್ದೀರಿ ಅಂತ ನಂಗೂ ಚೆನ್ನಾಗಿ ಗೊತ್ತಿದೆಯಾ! ಅದಕ್ಕೆಲ್ಲ ನಾನು ಒಪ್ಪುವವಳಲ್ಲ. ಮರ್ಯಾದೆಯಿಂದ ನಮ್ಮನ್ನು ಹೇಗೆ ಕರೆದುಕೊಂಡು ಬಂದಿದ್ದೀರಾ, ಹಾಗೆಯೇ ಹಿಂದಿರುಗಿ ಕರೆದೊಯ್ದು ಬಿಟ್ಟಿರೋ ಬಚಾವಾದಿರಿ. ಇಲ್ಲದಿದ್ದರೆ ನಿಮ್ಮ ಮೇಲೆ ಪೊಲೀಸ್ ಕಂಪ್ಲೇoಟ್ ಕೊಟ್ಟು ಜೈಲಿಗೆ ಹಾಕಿಸದೆ ಬಿಡುವುದಿಲ್ಲ!’ ಎಂದು ಕಿರುಚಿದಳು. ವಿಮಲಾಳ ಮಾತುಗಳು ತಾಮಸನಿಗೆ ಬಾಣದಂತೆ ಚುಚ್ಚಿದವು. ಅವನ ಕಣ್ಣುಗಳಿಗೆ ಜಿಲ್ಲನೆ ರೋಷದ ರಕ್ತವು ನುಗ್ಗಿತು. ಸರಕ್ಕನೆ ರಿಕ್ಷಾದೊಳಗೆ ನುಗ್ಗಿದವನು, ‘ಅಲ್ಲ ಮಾರಾಯ್ತೀ…! ನಾನೂ ಆಗದಿಂದ ನೋಡುತ್ತಿದ್ದೇನೆ ನಿನ್ನ ಸೊಕ್ಕನ್ನು! ಅಷ್ಟೊಂದು ಅಹಂಕಾರ ಉಂಟಾ ನಿಂಗೆ…? ಹಾಗಾದರೆ ಮೊದಲು ನಿನ್ನ ಚರ್ಬಿಯನ್ನೇ ಇಳಿಸಬೇಕು ನೋಡು!’ ಎನ್ನುತ್ತ ಅವಳನ್ನು ಅನಾಮತ್ತಾಗಿ ಎತ್ತಿ ಹೊರಗೆಳೆದು ನೆಲಕ್ಕೆ ಕೆಡವಿದ. ಆದರೆ ಅವನ ದೌರ್ಜನ್ಯಕ್ಕೆ ಅವಳೂ ಸೋಲದೆ ಜೋರಾಗಿ ಕಿರುಚಿಕೊಂಡು ಗದ್ದಲವೆಬ್ಬಿಸತೊಡಗಿದಳು. ತಾಮಸ ಇನ್ನಷ್ಟು ಕೆರಳಿದವನು ಅವಳ ಕೆನ್ನೆಗೆ ರಪರಪನೆ ಎರಡೇಟು ಬಾರಿಸಿದ. ಅವನ ಒರಟು ಕೈಯೇಟಿಗೆ ಅವಳ ಕೋಮಲ ಕೆನ್ನೆಯಲ್ಲಿ ಬಾಸುಂಡೆಗಳೆದ್ದು ಅವಳಿಂದ ಹೊರಡುತ್ತಿದ್ದ ಆಕ್ರಂದನವೂ ತಟ್ಟನೆ ನಿಂತುಹೋಯಿತು. ಮರುಕ್ಷಣ ಅವಳು ನಾಗರತ್ನಾಳನ್ನು ದೈನ್ಯದಿಂದ ದಿಟ್ಟಿಸಿದವಳು ಮುಖಮುಚ್ಚಿ ಜೋರಾಗಿ ಅಳತೊಡಗಿದಳು. ತಾಮಸನ ಕೋಪ ಅಷ್ಟಕ್ಕೆ ತಣಿಯಲಿಲ್ಲ. ಅವನು ತಾನು ವೀರಾವೇಶದಿಂದ ಬೇಟೆಯಾಡಿ ಘಾಸಿಗೊಳಿಸಿದ ಜಿಂಕೆಯ ಮರಿಯೊಂದನ್ನು ಹೊತ್ತೊಯ್ಯುವಂತೆಯೇ ವಿಮಲಾಳನ್ನೆತ್ತಿ ಹೆಗಲ ಮೇಲೆಸೆದುಕೊಂಡು ಕೊಬ್ಬಿನಿಂದ ಕಾಡಿನೊಳಗೆ ನುಗ್ಗಿದ.
ಆ ದೃಶ್ಯವನ್ನು ಕಂಡ ನಾಗರತ್ನ ಭೀತಿಯಿಂದ ಕಂಪಿಸಿಬಿಟ್ಟಳು. ‘ಹೋಯ್, ಹೋಯ್ ಶೇಖರಣ್ಣಾ ನಿಮ್ಮ ದಮ್ಮಯ್ಯಾ ಮಾರಾಯ್ರೇ…! ನನ್ನನ್ನು ಏನು ಬೇಕಾದರೂ ಮಾಡಿ. ಅವಳನ್ನು ಬಿಟ್ಟು ಬಿಡಿ. ಅವಳು ಅಂಥ ಹುಡುಗಿ ಅಲ್ಲ ಮಾರಾಯ್ರೇ! ನಿಮ್ಮ ಕಾಲು ಹಿಡಿಯುತ್ತೇನೆ ಶೇಖರಣ್ಣಾ…!’ ಎಂದು ಅಂಗಲಾಚುತ್ತ ತಾಮಸನನ್ನು ಹಿಂಬಾಲಿಸಿದಳು. ಅವಳ ಮಾತು ಕೇಳಿದ ತಾಮಸನು, ‘ಶೇಖರಣ್ಣನಾ…! ಯಾರು ಮಾರಾಯ್ತೀ ಶೇಖರಣ್ಣಾ…? ನಿನ್ನ ಅಪ್ಪನಾ! ನಾನು ಈ ಗಂಗರಬೀಡಿನ ಏಕೈಕ ಹೀರೋ ಥಾಮಸ್ ಡಿಸಿಲ್ವಾ ಗೊತ್ತಾಯಿತಾ…?’ ಎಂದು ಗಹಗಹಿಸಿ ನಗುತ್ತ ಮುಂದೆ ಸಾಗಿದಾಗ ನಾಗರತ್ನಾಳಿಗೆ ತಾವು ಸರಿಯಾಗಿ ಮೋಸ ಹೋಗಿರುವುದು ಖಚಿತವಾಯಿತು. ಆದ್ದರಿಂದ ಅವಳು ಮತ್ತಷ್ಟು ಅವಕ್ಕಾಗಿ, ‘ಓ ದೇವರೇ…! ಕಾಪಾಡಪ್ಪಾ…!’ ಎಂದು ಗದ್ಗದಿತಳಾಗಿ ಬೇಡಿಕೊಳ್ಳುತ್ತ ಅವನನ್ನು ಹಿಂಬಾಲಿಸಿದಳು. ಅತ್ತ ತಾಮಸನ ನಿಜಸ್ವರೂಪವನ್ನು ಕಣ್ಣಾರೆ ಕಂಡ ಶೇಣವನ ಲೆಕ್ಕಾಚಾರವೂ ಬುಡಮೇಲಾಗಿ ಅವನು ದಿಗ್ಭಾçಂತನಾಗಿದ್ದ!
ತಾನು ಮಹಾ ಪುಕ್ಕಲನೆಂದು ಭಾವಿಸಿದ ಈ ಧಾಂಡಿಗ ನನ್ಮಗ ಇಂಥ ರಾಕ್ಷಸನಾ…? ಯಬ್ಬಾ ದೇವರೇ…!! ಎಂದು ತನಗೆ ತಾನೇ ಉಸುರಿಕೊಂಡ. ಆದರೂ ಅವನಿಗೆ ಆಹೊತ್ತು ತನ್ನನ್ನು ತಾನು ಸಂಭಾಳಿಸಿಕೊಳ್ಳದೆ ವಿಧಿಯಿರಲಿಲ್ಲ. ಆದ್ದರಿಂದ. ‘ಓ, ವೆಂಕಟರಮಣಾ…! ನೀನು ನನ್ನನ್ನು ಇಲ್ಲಿಂದೊಮ್ಮೆ ಕ್ಷೇಮವಾಗಿ ಹಿಂದಿರುಗಿಸಿದೆಯೆoದರೆ ಆಮೇಲೆ ಬೇಡಿಕೊಂಡಾದರೂ ತಿನ್ನುತ್ತೇನೆ ಮತ್ತು ನಾಳೆಯೇ ನಿನಗೆ ಹತ್ತು ಕಾಯಿಗಳ ದೊಡ್ಡ ಪಂಚಗಜ್ಜಾಯ ಸೇವೆಯನ್ನೂ ಸಮರ್ಪಿಸುತ್ತೇನೆ. ರಕ್ಷಿಸು ದೇವಾ…!’ ಎಂದು ನಮ್ರನಾಗಿ ಬೇಡಿಕೊಂಡು ಹರಕೆ ಹೊತ್ತವನು ವಿಮಲಾಳನ್ನು ಹೊತ್ತ ತಾಮಸನು ಪೊದೆಯೊಂದರ ಮರೆಗೆ ಸರಿಯುತ್ತಲೇ ತಾನಲ್ಲಿಂದ ತಪ್ಪಿಸಿಕೊಳ್ಳಲಣಿಯಾಗಿ ಮೆಲ್ಲನೆ ರಿಕ್ಷಾವನ್ನು ಹತ್ತಿ ಎಡಗಾಲನ್ನು ಕಿಕ್ಕರ್‌ನ ಮೇಲಿರಿಸಿ ಕಿಕ್ಕು ಹೊಡೆದಿದ್ದಾನೋ ಇಲ್ಲವೋ ಅಷ್ಟರಲ್ಲಿ ಧೊತ್ತನೆ ಸೂರ್ಯ, ವಾಲ್ಟರರು ಅವನೆದುರು ಪ್ರತ್ಯಕ್ಷವಾಗಿಬಿಟ್ಟರು! ಅವರನ್ನು ಕಂಡವನು ಒಮ್ಮೆಲೇ ಬೆಚ್ಚಿ ಅಸಹಾಯಕನಾಗಿ ಕುಳಿತುಬಿಟ್ಟ. ಸಮಯಕ್ಕೆ ಸರಿಯಾಗಿ ತನ್ನ ಗೆಳೆಯರು ಬಂದುದು ತಾಮಸನಲ್ಲಿ ಮತ್ತಷ್ಟು ಹುರುಪು ಮೂಡಿಸಿತು. ಆದ್ದರಿಂದ ಅವನು, ‘ಹೇ… ವಾಲ್ಟರಾ ಆ ರಿಕ್ಷಾದವನನ್ನು ಬಿಡಬೇಡಿರನಾ. ಎಳೆದು ತನ್ನಿ…! ಆ ರಾಂಡೆಚ ಪುತ್ತು ಆವಾಗ ಬಾರಿ ಅಹಂಕಾರದಿoದ ಮಾತಾಡಿದ್ದಾನೆ. ಇವತ್ತು ಅವನಿಗೂ ಒಂದು ಗತಿ ಕಾಣಿಸಬೇಕು!’ ಎಂದು ಬಲ್ಲೆಯೊಂದನ್ನು ಸೀಳಿ ಹೋಗುತ್ತ ಕೂಗಿದ. ಅಷ್ಟು ಕೇಳಿದ ಶೇಣವನಿಗೆ ಹಾವು ಕಚ್ಚಿದಂತಾಯಿತು. ‘ಅಯ್ಯಯ್ಯೋ…! ನಾನೇನು ಮಾಡಿದೆ ಮಾರಾಯ್ರೇ ನಿಮ್ಗೆ…? ನಿಮ್ಮ ಬಾಡಿಗೆನೂ ಬೇಡ, ಏನೂ ಬೇಡ. ಒಮ್ಮೆ ನನ್ನನ್ನು ಇಲ್ಲಿಂದ ಹೋಗಲುಬಿಡಿ ಮಾರಾಯ್ರೇ. ನಿಮ್ಮ ದಮ್ಮಯ್ಯ! ಈಗ ಬೇರೊಂದು ಎಂಗೇಜು ಬಾಡಿಗೆಯೂ ನನ್ನನ್ನು ಸ್ಟಾö್ಯಂಡಲ್ಲಿ ಕಾಯುತ್ತಿದೆ!’ ಎಂದು ಅಲವತ್ತುಕೊಂಡ. ಸೂರ್ಯನು ರಪ್ಪನೆ ಅವನ ಕೊರಳ ಪಟ್ಟಿ ಹಿಡಿದು ರಿಕ್ಷಾದಿಂದ ಹೊರಗೆಳೆದವನು, ‘ನಿನ್ನ ಬಾಡಿಗೆಗೆ ಬೆಂಕಿಬಿತ್ತು ಮಗನೇ…! ತಾಮಸನು ಬರಲಿಕ್ಕೆ ಹೇಳಿದನಲ್ಲವಾ? ಅಷ್ಟೇ! ಸುಮ್ಮನೆ ಬಂದುಬಿಡು. ಅತ್ರಾಣ ತೋರಿಸಿದಿಯೆಂದರೆ ಮೂಗು ಮುಸುಂಟು ಚಚ್ಚಿ ಹಾಕಲಿಕ್ಕುಂಟು!’ ಎಂದಬ್ಬರಿಸಿದ. ಅಷ್ಟಕ್ಕೆ ವಿಠ್ಠಲ ಶೇಣವ ಠುಸ್ಸನೆ ತಣ್ಣಗಾದ.
(ಮುಂದುವರೆಯುವುದು)