
ಯಕ್ಷಗಾನ ಸಮೃದ್ಧ ಕಲೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ: ಅಡ್ವೋಕೇಟ್ ಜಗದೀಶ್ ಎಸ್ ಹೆಗ್ಡೆ
ಚಿತ್ರ, ವರದಿ: ರಮೇಶ್ ಉದ್ಯಾವರ
ಮಲಾಡ್, ಆ. 6: ತುಳು ನಾಡಿನ ಆರಾಧನೆ ಪರಂಪರೆಯ ಯಕ್ಷಗಾನಕ್ಕೆ ಹೊರನಾಡಿನಲ್ಲೂ ಸ್ಪರ್ಶ ನೀಡುವ ಮೂಲಕ ಕರಾವಳಿ ಜನರ ಭಕ್ತಿಯಲ್ಲಿ ಅಚ್ಚೊತ್ತಿದ ಕಲೆಯನ್ನು ಸಮೃದ್ಧ ಗೊಳಿಸುವ ಕಾಯಕ ಸಂಘ ಸಂಸ್ಥೆಗಳಿಂದ ನಡೆಯ ಬೇಕಾಗಿದೆ. ಸೃಜನಶೀಲತೆ ವೈಚಾರಿಕ ದೃಷ್ಟಿಕೋನದ ಮೂಲಕ ಕಲಾ ಶ್ರೀಮಂತಿಕೆಯನ್ನು ಭದ್ರಗಳಿಸುವ ಕಾಯಕ ಎಲ್ಲಾ ಸಂಘ ಸಂಸ್ಥೆಗಳ ಮೂಲಕ ಆಗಬೇಕಾಗಿದೆ ಎಂದು ಮಲಾಡ್ ಕನ್ನಡ ಸಂಘದ ಅಧ್ಯಕ್ಷರಾದ ಅಡ್ವೋಕೇಟ್ ಜಗದೀಶ್ ಎಸ್ ಹೆಗ್ಡೆ ಹೇಳಿದರು.
ಮಲಾಡ್ ಪಶ್ಚಿಮದ ಲಿಂಕ್ ರೋಡ್ ಎವರ್ ಶೈನ್ ನಗರದ ಹೋಟೆಲ್ ಸಾಯಿ ಪ್ಯಾಲೇಸ್ ಗ್ರಾಂಡ್ ಸಭಾಂಗಣದಲ್ಲಿ ಮಲಾಡ್ ಕನ್ನಡ ಸಂಘ ಮತ್ತು ರವಿ ಶೆಟ್ಟಿ ಸಹೋದರ ಸಹಯೋಗದಿಂದ ಕಲಾ ಪ್ರತಿಷ್ಠಾನ ಮುಂಬಯಿ ನೇತೃತ್ವದಲ್ಲಿ ಊರಿನ ನುರಿತ ಕಲಾವಿದರಿಂದ ಜರುಗಿದ ಯಕ್ಷಗಾನ ತಾಳಮದ್ದಳೆ ಸುಧನ್ವ ಮೋಕ್ಷ ಕಾರ್ಯಕ್ರಮದ ಮಧ್ಯಂತರ ವಿರಾಮದ ಕಿರು ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಮಲಾಡ್ ಕನ್ನಡ ಸಂಘವು ಭಾಷೆ ಸಂಸ್ಕೃತಿಯನ್ನು ಬೆಳೆಸುವುದರ ಜೊತೆಗೆ ಸಾಮಾಜಿಕ ಜನಪರ ಕಾರ್ಯಕ್ರಮಗಳ ಮೂಲಕ ಮಲಾಡ್ ಪರಿಸರದಲ್ಲಿ ಸಾಮರಸ್ಯ ಸಂಸ್ಥೆಯಾಗಿ ಬೆಳೆದಿದೆ ಎಂದು ಹೇಳಿದ ಅವರು ದಾನಿಗಳ ಸಹಾಯ ಸದಸ್ಯರ ಬೆಂಬಲ ದೊರಕುವ ಮೂಲಕ ಪರಿಸರದಲ್ಲಿ ಸಾಂಸ್ಕೃತಿಕ ಸಂಘಟಿತ ಬಲಿಷ್ಠ ಸಂಸ್ಥೆಯಾಗಿ ಆಮೂಲಕ ನಾಡಿನ ಕಲೆ ಸಂಸ್ಕೃತಿಯನ್ನು ಮೇಳೈಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ತಿಳಿಸಿದರು.

ಯಕ್ಷಗಾನ ಕಲಾಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಸಾಯಿ ಪ್ಯಾಲೇಸ್ ಗ್ರಾಂಡ್ ನ ಉದಯ ಶೆಟ್ಟಿ, ಯಕ್ಷಗಾನದಂತಹ ಸಾಂಸ್ಕೃತಿಕ ಕಾರ್ಯಕ್ರಮಗಳಗನ್ನು ಆಯೋಜಿಸುವ ಸಂಸ್ಥೆಗಳಿಗೆ ಸಹಕಾರ ನೀಡುವ ಮೂಲಕ ಮಹಾನಗರಲ್ಲೂ ಯಕ್ಷಗಾನ ಕಲೆಯನ್ನು ಶ್ರೀಮಂತಗೊಳಿಸುವ ಸರಸ್ವತಿ ಸೇವೆ ನಮ್ಮಿಂದ ಮಾಡುತ್ತಿದ್ದೇವೆ. ಕಲಾ ಪ್ರತಿಷ್ಠಾನದ 40 ವರ್ಷಗಳ ಸರಸ್ವತಿಯ ಸೇವೆ ಕಲಾಭಿಮಾನಿಗಳ ಆಕರ್ಷಣೆಗೆ ಪಾತ್ರವಾಗಿದೆ. ಈ ಸಂಸ್ಥೆಯಿಂದ ಇನ್ನಷ್ಟು ನಿರಂತರ ಕಲಾಸೇವೆ ಜರಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ತಾಳಮದ್ದಳೆ ಕಲಾವಿದರನ್ನು ಸಂಘದ ವತಿಯಿಂದ ಹಾಗೂ ಉದಯ ಶೆಟ್ಟಿ ಅಭಿನಂದಿಸಿದರು.

ವೇದಿಕೆಯಲ್ಲಿ ಉಪಾಧ್ಯಕ್ಷರಾದ ದಯಾನಂದ ಎಮ್ ಶೆಟ್ಟಿ, ಕಲಾಪೋಷಕ, ಬಾಂಬೆ ಬಂಟ್ಸ್ ಎಸೋಶಿಯೇಶನ್ ಅಧ್ಯಕ್ಷ ರಾದ ಸಿ ಎ ಸುರೇಂದ್ರ ಶೆಟ್ಟಿ, ಬಂಟರ ಸಂಘ ಪವಾಯಿ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಮುಂಡ್ಕೂರು ರತ್ನಾಕರ್ ಶೆಟ್ಟಿ , ಸಮಾಜ ಸೇವಕರಾದ ಮುಂಡಪ್ಪ ಎಸ್ ಪಯ್ಯಡೆ, ಕಲಾ ಪೋಷಕ ಬಾಬು ಶೆಟ್ಟಿ ಪೆರಾರ ಇನ್ನಿತರ ಹಲವಾರು ಗಣ್ಯರು ಮಲಾಡ್ ಕನ್ನಡ ಸಂಘದ ಜತೆ ಕಾರ್ಯದರ್ಶಿ ಜಯಪ್ರಕಾಶ್ ಸಾಲ್ಯಾನ್ ಜೊತೆ ಕೋಶಾಧಿಕಾರಿ ಭಾರತ್ ಬ್ಯಾಂಕ್ ನ ನಿರ್ದೇಶಕ ಸಂತೋಷ್ ಎಸ್ ಪೂಜಾರಿ, ಕಾನೂನು ಸಲಹಾ ಕಾರ್ಯಾಧ್ಯಕ್ಷ ಭಾರತ್ ಬ್ಯಾಂಕ್ ನ ಉಪಕಾರ್ಯಾಧ್ಯಕ್ಷ ಎಸ್ ಬಿ ಅಮೀನ್ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಲಲಿತಾ ವಿ ಭಂಡಾರಿ, ಕಾರ್ಯಕಾರಿ ಸಮಿತಿ ಸದಸ್ಯರು, ಯುವ ಮತ್ತು ಮಹಿಳಾ ವಿಭಾಗದ ಸದಸ್ಯರು, ವಿವಿಧ ಉಪ ಸಮಿತಿಯ ಕಾರ್ಯಾಧ್ಯಕ್ಷರುಗಳು ವಿಸ್ವಸ್ಥರು ಉಪಸ್ಥಿತರಿದ್ದರು. ಕಲಾ ಪ್ರತಿಷ್ಠಾನ ಪರವಾಗಿ ಪ್ರಕಾಶ ಎಂ ಶೆಟ್ಟಿ ಸುರತ್ಕಲ್ ರವರನ್ನು ಸಂಘದ ಅಧ್ಯಕ್ಷರಾದ ನ್ಯಾಯವಾದಿ ಜಗದೀಶ್ ಹೆಗ್ಡೆ ಮತ್ತು ಪದಾಧಿಕಾರಿಗಳು ಗೌರವಿಸಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಸುಜಾತಾ ಅಮೀನ್ ಪ್ರಾರ್ಥನೆಯೊಂದಿಗೆ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ಇತರ ಗಣ್ಯರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗೌರವ ಕಾರ್ಯದರ್ಶಿ ಆಶಾಲತ ಎಸ್ ಕೋಟ್ಯಾನ್ ಸಂಘದ ಹಿನ್ನೆಲೆ ಹಾಗೂ ಕಾರ್ಯ ಚಟುವಟಿಕೆಗಳ ಬಗ್ಗೆ ಪ್ರಾಸವಿಕ ಮಾತುಗಳನ್ನಾಡಿ ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು.
ಬಳಿಕ ಯಕ್ಷಗಾನ ತಾಳಮದ್ದಳೆ ಸುಧನ್ವ ಮೋಕ್ಷ ಯಶಸ್ವಿಯಾಗಿ ಜರುಗಿತು.ಹಿಮ್ಮೇಳದಲ್ಲಿ ಭಾಗವತರಾಗಿ ಬಲಿಪ ಶಿವಶಂಕರ್ ಭಟ್ ಚೆಂಡೆ ಆಶೀಷ್ ಆರ್ ದೇವಾಡಿಗ ಮದ್ದಳೆ ಮಧುಸೂದನ್ ಪಾಲನ್ ಮುಮ್ಮೇಳದಲ್ಲಿ ಅರ್ಜುನನಾಗಿ ಜಬ್ಬಾರ್ ಸಮೋ ಸಂಪಾಜೆ ಸುಧನ್ವ ನಾಗಿ ಪ್ರೊ. ಪವನ್ ಕಿರಣ್ ಕೆರೆ ಮತ್ತು ಗಣೇಶ್ ಶೆಟ್ಟಿ ಕನ್ನಡಿ ಕಟ್ಟೆ ಶ್ರೀ ಕೃಷ್ಣನಾಗಿ ಸುರೇಶ್ ಶೆಟ್ಟಿ ನಂದೊಳ್ಳಿ ಪ್ರಭಾವತಿ ಪಾತ್ರದಲ್ಲಿ ಡಾ. ಮಹೇಶ್ ಸಾಣೂರು ಪಾತ್ರಧಾರಿಗಳಾಗಿ ಭಾಗವಹಿಸಿದರು.
ಸಂಘದ ಸದಸ್ಯರು ಪರಿಸರದ ತುಳುಕನ್ನಡಿಗರು, ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.