
ಮೈಸೂರು ದಸರಾ- 2023ರ ಕೊನೆಯ ದಿನದ ಪ್ರಧಾನ ಕವಿಗೋಷ್ಟಿ ಅಕ್ಟೋಬರ್ 21 ರಂದು ಕಲಾಮಂದಿರದಲ್ಲಿ ಜರಗಿದ್ದು ಮುಂಬಯಿ ಪತ್ರಕರ್ತ ಕವಿ ಗೋಕುಲವಾಣಿ ಸಂಪಾದಕ ಶ್ರೀನಿವಾಸ ಜೋಕಟ್ಟೆ ಕವನ ವಾಚನ ಮಾಡಿದರು.ಈ ಪ್ರಧಾನ ಕವಿಗೋಷ್ಟಿಯನ್ನು ಖ್ಯಾತ ಕವಯಿತ್ರಿ ಶಶಿಕಲಾ ವಸ್ತ್ರದ ಉದ್ಘಾಟಿಸಿದರು. ಪ್ರಸಿದ್ಧ ಕವಿ ಮೂಡ್ನಾಕೂಡು ಚಿನ್ನಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.
ಶ್ರೀನಿವಾಸ ಜೋಕಟ್ಟೆ ಕರ್ನಾಟಕ ಸರಕಾರದ ನವರಸಪುರ ಕವಿಗೋಷ್ಠಿ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ, ಆಳ್ವಾಸ್ ನುಡಿಸಿರಿಯ ಕವಿ ನಮನ ,ಕರ್ನಾಟಕ ಸಾಹಿತ್ಯ ಅಕಾಡೆಮಿಯ ಕವಿಗೋಷ್ಠಿ ,ವಿಚಾರ ಭಾರತಿ ಸಮ್ಮೇಳನದ ಕವಿಗೋಷ್ಟಿ ಸಹಿತ ಹಲವು ಪ್ರಮುಖ ಕವಿಗೋಷ್ಠಿಗಳಲ್ಲಿ ಕಾವ್ಯವಾಚನ ಮಾಡಿದ್ದಾರೆ, ಅಧ್ಯಕ್ಷತೆ ವಹಿಸಿದ್ದಾರೆ. ಮೂರು ಬಾರಿ ಸಂಕ್ರಮಣ ಕಾವ್ಯ ಸ್ಪರ್ಧೆಯಲ್ಲಿ ಬಹುಮಾನ ಪಡೆದಿದ್ದಾರೆ. ಅವಿಭಜಿತ ದ.ಕ. ಜಿಲ್ಲಾ ಸಾಹಿತ್ಯ ಸಮ್ಮೇಳನದ ಸಾಹಿತ್ಯ ಸ್ಪರ್ಧೆಯಲ್ಲೂ ತಮ್ಮ ಕವನಕ್ಕೆ ಪ್ರಥಮ ಬಹುಮಾನ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ವಾರ್ಷಿಕ ಉತ್ತಮ ಕಾವ್ಯ ಸಂಕಲನದಲ್ಲೂ ಮೂರು ಬಾರಿ ಇವರ ಕವನಗಳು ಪ್ರಕಟವಾಗಿವೆ. ತಮ್ಮ ‘ಕ್ಷಮಿಸಿ, ಈ ಚಿತ್ರಕ್ಕೆ ಹೆಸರಿಲ್ಲ’ ಕವನ ಸಂಕಲನಕ್ಕೆ ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ ಪಡೆದಿರುತ್ತಾರೆ.
——-