
ಐದು ದಿನಗಳ ಕಾಲ ಸಂಭ್ರಮದಿಂದ ಆಚರಿಸುವ ದೀಪಾವಳಿ ಹಬ್ಬ ಮತ್ತೊಮ್ಮೆ ಆಗಮಿಸಿದೆ.ದೀಪಾವಳಿ ಹಬ್ಬಕ್ಕೆ ಧಾರ್ಮಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಮಹತ್ವವೂ ಇದೆ. ಹಲವು ದಿನಗಳ ಮೊದಲೇ ದೀಪಾವಳಿ ಹಬ್ಬದ ತಯಾರಿಯನ್ನು ಕಂಡಿದ್ದೇವೆ. ಸ್ವಚ್ಛತೆ, ನಾವೀನ್ಯತೆ ಹಾಗೂ ಉತ್ತಮ ಆರೋಗ್ಯದ ಮೂಲಕ ಹಬ್ಬದ ಎಲ್ಲಾ ಆನಂದವನ್ನೂ ಇಲ್ಲಿ ಸವಿಯಬಹುದಾಗಿದೆ.
ಎಲ್ಲಿ ಸ್ವಚ್ಛತೆ, ಪ್ರಕಾಶ ಇದೆಯೋ ಅಲ್ಲಿಗೆ ಮಾತ್ರ ಲಕ್ಷ್ಮಿಯು ಪ್ರವೇಶಿಸುತ್ತಾಳೆ ಎನ್ನುವುದು ದೀಪಾವಳಿಯ ಸಂದೇಶಗಳಲ್ಲಿ ಒಂದು.
ದೀಪಾವಳಿ ಹಬ್ಬವನ್ನು ಭಾರತದಾದ್ಯಂತ ಬಹಳ ಸಂತೋಷ ಮತ್ತು ಉಲ್ಲಾಸದಿಂದ ಆಚರಿಸಲಾಗುತ್ತದೆ. ದೀಪಾವಳಿಯನ್ನು ಭಾರತದ ಅತಿದೊಡ್ಡ ಹಬ್ಬವೆಂದು ಪರಿಗಣಿಸಲಾಗಿದೆ. ಆದರೆ ಇಂದಿನ ದಿನಗಳಲ್ಲಿ ಈ ಹಬ್ಬವನ್ನು ಅಲಂಕಾರಗಳು, ಸಿಹಿತಿಂಡಿಗಳ ವಿತರಣೆ, ಲಕ್ಷ್ಮಿ ಪೂಜೆ ಮತ್ತು ಪಟಾಕಿಗಳಿಗೆ ಸೀಮಿತವಾಗಿರಿಸಿಕೊಳ್ಳುತ್ತಾ ಬರುತ್ತಿದ್ದಾರೆ.
ಐದು ದಿನಗಳ ಕಾಲ ನಡೆಯುವ ವರ್ಷದ ಇದು ಕೊನೆಯ ಹಬ್ಬ ,ದೊಡ್ಡ ಹಬ್ಬ ಈ ದೀಪಾವಳಿ. ದಸರಾ ನಂತರ ಮನೆ ಮನೆಗಳಲ್ಲಿ ದೀಪಾವಳಿಯ ಸಿದ್ಧತೆಗಳು ಪ್ರಾರಂಭವಾಗುತ್ತವೆ. ಇದನ್ನು ದೊಡ್ಡ ಪ್ರಮಾಣದಲ್ಲಿ ಆಚರಿಸಲಾಗುತ್ತದೆ. ಈ ದಿನದಂದು ಭಗವಾನ್ ಶ್ರೀ ರಾಮ, ತಾಯಿ ಸೀತೆ ಮತ್ತು ಸಹೋದರ ಲಕ್ಷ್ಮಣರೊಂದಿಗೆ ಹದಿನಾಲ್ಕು ವರ್ಷಗಳ ವನವಾಸವನ್ನು ಮುಗಿಸಿ ಅಯೋಧ್ಯೆಗೆ ಮರಳಿದ್ದರು. ಇದಲ್ಲದೇ ಇನ್ನೂ ಕೆಲವು ಪೌರಾಣಿಕ ಕಥೆಗಳು ದೀಪಾವಳಿಯ ಬಗ್ಗೆ ಪ್ರಚಲಿತದಲ್ಲಿವೆ.
ಪ್ರತಿಯೊಂದು ಸಮಾಜವು ಹಬ್ಬಗಳ ಮೂಲಕ ಒಟ್ಟಾಗಿ ತನ್ನ ಸಂತೋಷವನ್ನು ವ್ಯಕ್ತಪಡಿಸುತ್ತಲೇ ಬಂದಿದೆ. ಹಿಂದೂಗಳ ಪ್ರಮುಖ ಹಬ್ಬಗಳೆಂದರೆ ಹೋಳಿ, ಯುಗಾದಿ, ನಾಗರಪಂಚಮಿ,ರಕ್ಷಾಬಂಧನ, ಗೋಕುಲಾಷ್ಟಮಿ, ಗಣೇಶೋತ್ಸವ, ದಸರಾ ,ದೀಪಾವಳಿ. ……ಇತ್ಯಾದಿ. ಇವುಗಳಲ್ಲಿ ದೀಪಾವಳಿ ಪ್ರಮುಖ ಹಬ್ಬ. ಈ ಹಬ್ಬವು ಬೆಳಕಿನ ಹಬ್ಬವಾಗಿರುವುದರಿಂದ ನಮ್ಮೆಲ್ಲರ ಮನಸ್ಸನ್ನು ಬೆಳಗಿಸುತ್ತದೆ.ಈ ಹಬ್ಬವನ್ನು ಕಾರ್ತಿಕ ಮಾಸದಲ್ಲಿ ಅಮಾವಾಸ್ಯೆಗೆ ಆಚರಿಸಲಾಗುತ್ತದೆ. ಅಮಾವಾಸ್ಯೆಯ ಕರಾಳ ರಾತ್ರಿಯಲ್ಲಿ, ಅಸಂಖ್ಯಾತ ದೀಪಗಳು ಬೆಳಗುವುದರ ದೃಶ್ಯಕ್ಕೆ ಸಾಟಿ ಇಲ್ಲ. ದೀಪಾವಳಿಯ ಸಂದರ್ಭದಲ್ಲಿ ಎಲ್ಲೆಲ್ಲೂ ಹಣತೆಗಳಿಂದ ದೀಪಾಲಂಕಾರ. ಇಂ1ದು ನಗರಗಳಲ್ಲಿ ಇಲೆಕ್ಟ್ರಾನಿಕ್ ದೀಪಗಳ ಹೊಳಪು ಕಾಣಸಿಗುತ್ತದೆ. ಪ್ರತೀ ಹಬ್ಬವು ಸಂತೋಷ ಮತ್ತು ಉತ್ಸಾಹದಿಂದ ಕೂಡಿದ್ದರೂ, ದೀಪಾವಳಿಯಲ್ಲಿ ಈ ಉತ್ಸಾಹವು ಹಲವು ಪಟ್ಟು ಹೆಚ್ಚಾಗುತ್ತದೆ. ದೀಪಾವಳಿ ಅಂದರೆ ಬೆಳಕಿನ ಹಬ್ಬ .
ಈ ಸಂದರ್ಭದಲ್ಲಿ ಲಕ್ಷ್ಮೀದೇವಿ ಜೊತೆ ಗಣೇಶನನ್ನೂ ಪೂಜಿಸಲಾಗುತ್ತದೆ. ವಿವಿಧ ಸಿಹಿತಿಂಡಿಗಳು ಮತ್ತು ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ. ಮನೆಯ ಮೂಲೆ ಮೂಲೆಯಲ್ಲೂ ಎಣ್ಣೆ, ತುಪ್ಪದ ದೀಪಗಳು ಬೆಳಗುತ್ತವೆ. ಜನರು ಪಟಾಕಿಗಳನ್ನು ಹಚ್ಚುವ ಮೂಲಕ ಸಂಭ್ರಮಿಸುತ್ತಾರೆ. ಭಾರತದಲ್ಲಿ ವಾಸಿಸುವವರಿಗೆ ದೀಪಾವಳಿ ಎಂದರೆ ದೀಪಗಳ ಬೆಳಗಿಸುವಿಕೆ, ಪಟಾಕಿ, ಲಕ್ಚ್ಮೀಪೂಜೆ, ಗೋಪೂಜೆ ಸಿಹಿತಿನಿಸು ಹಂಚುವುದು. ಭಾರತವಲ್ಲದೆ ಹಲವು ವಿದೇಶಗಳಲ್ಲಿ ಕೂಡಾ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ
ದೀಪಾವಳಿ ಪರ್ವ ತ್ರಯೋದಶಿಯಿಂದಲೇ ಆರಂಭವಾಗುತ್ತದೆ. ಇದಕ್ಕೆ ‘ಧನತೇರಸ್’ (ಧನತ್ರಯೋದಶಿ) ಎನ್ನುತ್ತಾರೆ. ಈ ಹಬ್ಬ ಕಾರ್ತಿಕ ಮಾಸದ ಕೃಷ್ಣ ಪಕ್ಷದ ತ್ರಯೋದಶಿಯಿಂದ ಆಚರಿಸುತ್ತಾರೆ. ಪುರಾಣದ ಪ್ರಕಾರ ಇದೇ ದಿನ ಭಗವಾನ್ ಧನ್ವಂತರಿ ಸಮುದ್ರದಿಂದ ಅಮೃತ ಕಲಶ ಹಿಡಿದು ಪ್ರಕಟವಾಗಿದ್ದರು.
ಈ ಕಾರಣದಿಂದ ವೈದ್ಯ ಸಮಾಜವು ಶ್ರದ್ಧೆ ಮತ್ತು ಹರ್ಷೋಲ್ಲಾಸದ ಜೊತೆ ಭಗವಾನ್ ಧನ್ವಂತರಿ ಜಯಂತಿ ಆಚರಿಸುತ್ತಾರೆ. ಆಯುರ್ವೇದ ವಕ್ತಾರ, ಆರೋಗ್ಯದ ದೇವತೆಯ ರೂಪದಲ್ಲಿ ಧನ್ವಂತರಿಯನ್ನು ಸ್ವೀಕಾರ ಮಾಡುತ್ತಾರೆ! ಧನ್ ತೇರಸ್ ದಿನದಂದು ದೀರ್ಘಾಯು ಮತ್ತು ಸ್ವಾಸ್ಥ್ಯ ಜೀವನದ ಅಪೇಕ್ಷೆಯಲ್ಲಿ ಭಗವಾನ್ ಧನ್ವಂತರಿಯ ಪೂಜೆಯನ್ನು ಮಾಡಲಾಗುತ್ತದೆ.
ಧನ್ ತೇರಸ್ ದಿನದಂದೇ ಮೃತ್ಯು ದೇವತೆ ಯಮರಾಜನ ಪೂಜೆಯನ್ನೂ ಮಾಡುತ್ತಾರೆ. ಯಮನ ನೆನಪಿನಲ್ಲಿ ಹಿಟ್ಟಿನಿಂದ ನಿರ್ಮಿತ ದೀಪದಲ್ಲಿ ತೈಲ ಸುರಿದು ಮನೆಯ ಮುಖ್ಯ ದ್ವಾರದಲ್ಲಿ ಇರಿಸಲಾಗುತ್ತದೆ. ಯಮನ ಹೆಸರಲ್ಲಿ ತರ್ಪಣ ಕೂಡಾ ಬಿಡಲಾಗುತ್ತದೆ.
ಧನ್ ತೇರಸ್‌ನ ದಿನ ಲಕ್ಷ್ಮಿಯ ಪ್ರವೇಶವಾಗುತ್ತದೆ. ಲೋಕ ರೂಢಿಯ ಪ್ರಕಾರ ಈ ದಿನ’ ಜನರು ಆಭರಣ ಖರೀದಿ,ಹೊಸ ಮನೆ ಖರೀದಿ,ಅಥವಾ ತಮ್ಮಲ್ಲಿರುವ ಹಳೆಯ ಪಾತ್ರೆಗಳ ಬದಲು ಹೊಸ ಪಾತ್ರೆಗಳನ್ನು ಖರೀದಿಸುವುದು ಶುಭ ಎಂದು ತಿಳಿಯುತ್ತಾರೆ. ಅಷ್ಟೇ ಅಲ್ಲ, ಬೆಳ್ಳಿಯ ಪಾತ್ರೆಗಳ ಖರೀದಿಯಿಂದ ಅಧಿಕ ಪುಣ್ಯದ ಲಾಭ ಸಿಗುತ್ತದೆ ಎಂಬ ವಿಶ್ವಾಸವೂ ಇದೆ. ಗ್ರಾಮೀಣ ಕ್ಷೇತ್ರದಲ್ಲಿ ಧನ ತೇರಸ್‌ನಲ್ಲಿ ದೀಪಾವಳಿಗಾಗಿ ಹಣತೆಗಳನ್ನು ಖರೀದಿಸುವುದು ಶುಭ ಎಂದು ತಿಳಿಯುತ್ತಾರೆ. ಹೀಗೆ ದೀಪಾವಳಿ ಆಚರಣೆಯ ಪೂರ್ವ ತಯಾರಿ ಕಂಡುಬರುತ್ತದೆ.
ಭಾವನೆಗಳ ಪ್ರಕಾಶ ಕಾಣುವ ದಿನಗಳಿವು.
ಮನ ಮನಸ್ಸು – ಪರಿಸರವನ್ನು ಸ್ವಚ್ಛವಾಗಿಸುವ ಈ ದೀಪಾವಳಿಯಲ್ಲಿ ಲಕ್ಷ್ಮಿದೇವಿಗೆ ವಿಶೇಷ ಸ್ಥಾನ, ಲಕ್ಷ್ಮಿ ಸೌಂದರ್ಯ, ಸತ್ತೆ ಮತ್ತು ಸಾರ್ಥಕತೆಯ ಸ್ವರೂಪ, ಈ ಪರ್ವದ ಬೆಳಕಿನಲ್ಲಿ ಭಾರತದ ಯುಗ ಯುಗಗಳ ಅಲೌಕಿಕ ಸಂದೇಶ ಅಡಗಿದೆ.
ಮಣ್ಣು ಮಾತ್ರ ಹಳೆಯದಾದರೂ ಅದರಿಂದ ತಯಾರಿಸಿದ ಹಣತೆ ಮಾತ್ರ ಹೊಸತು! ಎಣ್ಣೆ, ಬತ್ತಿಯ ರೂಪ ಬದಲಾಗಿಲ್ಲ. ಹೊಸ ಹಣತೆಗಳಲ್ಲಿ ಪ್ರತಿ ವರ್ಷವೂ ಹೊಸ ದೀಪಾವಳಿ, ಹೊಸಬೆಳಕು! ದೀಪಾವಳಿ ಎಷ್ಟೇ ಪುರಾತನವಾದರೂ ಇಂದಿಗೂ ಬರುವಾಗ ನವಯವೌನದಿಂದ ಕೂಡಿರುತ್ತದೆ. ಅದೇ ಹೃದಯ, ಶೃಂಗಾರ ಮಾತ್ರ ಹೊಸತು.
ಪುರಾತನ ಕಾಲದಲ್ಲಿ ಜನ ಯಾವ ರೀತಿಯಲ್ಲಿ ಧಾರ್ಮಿಕ ಹಬ್ಬಗಳನ್ನು ಆಚರಿಸುತ್ತಿದ್ದರೋ ಅಲ್ಲಿ ಕೇವಲ ಭಗವಂತನ ಆರಾಧನೆ ಮಾತ್ರವಲ್ಲ, ಅದರ ಜೊತೆಗೆ ಆನಂದದ ಒಂದು ಮಗ್ಗಲನ್ನೂ ಹುಡುಕುತ್ತಿದ್ದರು. ನಮ್ಮ ಭರತ ಖಂಡ ಪ್ರಾಚೀನವಾದುದು. ಶತಮಾನಗಳಿಂದ ಇಲ್ಲಿ ನೂರಾರು ಹಬ್ಬ ಹರಿದಿನಗಳನ್ನು ಆಚರಿಸಿಕೊಂಡು ಬರಲಾಗಿದೆ. ಆ ಕಾಲದಲ್ಲಿ ಜನರು ಧಾರ್ಮಿಕ ಹಬ್ಬಗಳ ಮೂಲಕ ತಮ್ಮ ಸಂತೋಷಗಳನ್ನೂ ಸಾಮೂಹಿಕವಾಗಿ ಹಂಚಿಕೊಳ್ಳುತ್ತಿದ್ದರು. ತಮ್ಮ ಮನೆ ಕೇರಿಗಳನ್ನು ಆ ಸಂದರ್ಭದಲ್ಲಿ ಸ್ವಚ್ಛವಾಗಿರಿಸುತ್ತಿದ್ದರು. ಸಾಮೂಹಿಕ ಪ್ರೀತಿ – ಪ್ರೇಮಗಳಲ್ಲಿ ಅವರ್ಣನೀಯ ಆನಂದ ದೊರೆಯುತ್ತಿತ್ತು. ಅದು ಅವಶ್ಯವೂ ಇತ್ತು, ಭಾವೀ ಪೀಳಿಗೆಯನ್ನು ಸುಸಂಸ್ಕೃತರನ್ನಾಗಿಸಲು ಇದು ನೆರವಾಗುತ್ತಿತ್ತು.
ಪುರಾಣ ಕಾಲದಲ್ಲೇ ನಮಗೆ ದೀಪಾವಳಿ ಹಬ್ಬದ ಉಲ್ಲೇಖಗಳು ಗೋಚರವಾಗುತ್ತವೆ. ವಿಶೇಷವೆಂದರೆ ಒಂದೇ ದೇಶದಲ್ಲಿ ಬೇರೆ ಬೇರೆ ಕಡೆ ಬೇರೆ ಬೇರೆ ರೀತಿಯಲ್ಲಿ ಹಬ್ಬವೊಂದನ್ನು ಆಚರಿಸುತ್ತಾರೆ ಎಂದರೆ ಅದು ದೀಪಾವಳಿ ಹಬ್ಬ ಮಾತ್ರ .ಪ್ರತೀ ರಾಜ್ಯಕ್ಕೂ ಅಲ್ಲಿನದೇ ಆದ ವೈಶಿಷ್ಟ್ಯ
ಶ್ರೀಕೃಷ್ಣ ಮಾನವ ಸಂಹಾರಕ ನರಕಾಸುರನನ್ನು ವಧೆ ಮಾಡಿದ್ದೂ ದೀಪಾವಳಿ ಸಮಯವೇ. ಅದೇ ನರಕ ಚತುರ್ದಶಿ.ಸ್ನಾನದ ಹಬ್ಬ. 24ನೇ ತೀರ್ಥಂಕರ ಭಗವಾನ್ ಮಹಾವೀರ ನಿರ್ವಾಣಹೊಂದಿದ್ದೂ ಇದೇ ಸಮಯ. ರಾಜಾ ವಿಕ್ರಮಾದಿತ್ಯ ತಾನು ಸಿಂಹಾಸನದ ಮೇಲೆ ದೀಪಾವಳಿ ದಿನವೇ ಏರಿದ್ದರಿಂದ ಆತ ಹೊಸ ವಿಕ್ರಮ ಸಂವತ್ಸರ ಆರಂಭಿಸಿದನೆಂದೂ ನಂಬಲಾಗುತ್ತದೆ.
ಮಹಾರಾಷ್ಟ್ರದಲ್ಲಿ ದೀಪಾವಳಿಯನ್ನು ಐದು ದಿನಗಳ ಕಾಲ ಬಹುಉತ್ಸಾಹದಿಂದ ಆಚರಿಸಲಾಗುತ್ತದೆ. ಧನ ತ್ರಯೋದಶಿ (ಧನ್ವಂತರಿ ತ್ರಯೋದಶಿ) ನರಕ ಚತುರ್ದಶಿ, ಲಕ್ಷ್ಮೀಪೂಜೆ, ಬಲಿಪಾಡ್ಯ ಮತ್ತು ಭಾವುಬೀಚ್ (ಭಾಯಿ ದೂಚ್) ಹೀಗೆ ಐದು ದಿನಗಳು. ವೈದಿಕರಿಗೆ ತುಳಸಿ ಪೂಜೆಯ ಉತ್ಥಾನ ದ್ವಾದಶಿ ತನಕವೂ ದೀಪಾವಳಿ ಸಂಭ್ರಮ.
ಈ ಹಬ್ಬವನ್ನು ಬಹುತೇಕ ಹಲವು ಧರ್ಮದ ಜನರು ಆಚರಿಸುತ್ತಾರೆ. ಈ ಹಬ್ಬ ಬರುವ ಹಲವು ದಿನಗಳ ಮುಂಚೆಯೇ ಮನೆಗಳಿಗೆ ಬಣ್ಣ ಬಳಿಯುವುದು, ಅಲಂಕಾರ ಮಾಡುವುದು ಸ್ವಚ್ಛವಾಗಿಸುವುದು ಶುರುವಾಗುತ್ತದೆ. ಹಬ್ಬಕ್ಕೆ
ಹೊಸ ಬಟ್ಟೆಗಳನ್ನು ತೊಡುತ್ತಾರೆ. ಸಿಹಿತಿಂಡಿಗಳನ್ನು ಮಾಡುತ್ತಾರೆ. ಆವಾಗಲೇ ಮಳೆಗಾಲ ಮುಗಿದು ನಂತರದಲ್ಲಿ ಕಾಣಿಸಿದ ಕೊಳಕುಗಳನ್ನು ಹೋಗಲಾಡಿಸಿ ಸ್ವಚ್ಛತೆಗೆ ಆದ್ಯತೆ ನೀಡಿ ವಾತಾವರಣ ಬದಲಾಗುತ್ತದೆ. ಲಕ್ಷ್ಮಿಯ ಆಗಮನದಲ್ಲಿ ಜನತೆ ಸಂಭ್ರಮ ಮಾಡುತ್ತಾರೆ.
ಈ ಹಬ್ಬವು ಧನ ತ್ರಯೋದಶಿ- ಧನ್ ತೇರಸ್‌ನಿಂದ ಭಾಯಿ ದೂಜ್‌ವರೆಗೆ ಮುಂದುವರಿಯುತ್ತದೆ. ಅಮಾವಾಸ್ಯೆಯಂದು ರಾತ್ರಿ ಲಕ್ಷ್ಮೀದೇವಿಯನ್ನು ಪೂಜಿಸಲಾಗುತ್ತದೆ. ಹೊಸ ಬಟ್ಟೆ ಧರಿಸುತ್ತಾರೆ. ಅಸಂಖ್ಯಾತ ದೀಪಗಳ ಬಣ್ಣಬಣ್ಣದ ದೀಪಗಳು ಮನಸ್ಸನ್ನು ಸೂರೆಗೊಳ್ಳುತ್ತವೆ. ಅಂಗಡಿಗಳು, ಮಾರುಕಟ್ಟೆಗಳು ಮತ್ತು ಮನೆಗಳ ಅಲಂಕಾರವು ಗೋಚರಿಸುತ್ತವೆ.
ಒಬ್ಬರನ್ನೊಬ್ಬರು ದೀಪಾವಳಿಯ ಶುಭಾಶಯಗಳನ್ನು ಕೋರುತ್ತಾರೆ. ಗೃಹಿಣಿಯರು ಅತಿಥಿಗಳನ್ನು ಸ್ವಾಗತಿಸುತ್ತಾರೆ. ದೊಡ್ಡವರು, ಚಿಕ್ಕವರು, ಬಡವರು, ಶ್ರೀಮಂತರು ಎಂಬ ಭೇದ ಮರೆತು ಎಲ್ಲರೂ ಒಟ್ಟಾಗಿ ಈ ಹಬ್ಬವನ್ನು ಆಚರಿಸುತ್ತಾರೆ.ಜನರು ಮಾರುಕಟ್ಟೆಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಖರೀದಿ ಮಾಡುತ್ತಾರೆ. ಮತ್ತು ಈ ದಿನದಂದು ಎಲ್ಲಾ ಜನರು ಹೊಸ ಬಟ್ಟೆಗಳನ್ನು ಧರಿಸುತ್ತಾರೆ, ಈ ಹಬ್ಬವನ್ನು ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯದ ಸಂಕೇತವೆಂದು ಪರಿಗಣಿಸಲಾಗುತ್ತದೆ. ದೀಪಾವಳಿಯಲ್ಲಿ, ಮನೆಗಳಲ್ಲಷ್ಟೇ ಅಲ್ಲ, ಮಾರುಕಟ್ಟೆಗಳಲ್ಲಿ ಅಂಗಡಿಗಳನ್ನು ಸಹ ದೀಪಗಳಿಂದ ಅಲಂಕರಿಸಲಾಗುತ್ತದೆ.
ಹಿಂದೂ ಕ್ಯಾಲೆಂಡರ್ ಪ್ರಕಾರ, ದೀಪಾವಳಿಯ ಶುಭ ಸಂದರ್ಭದಲ್ಲಿ, ಅಮಾವಾಸ್ಯೆಯ ಸೂರ್ಯಾಸ್ತದ ನಂತರ, ಗಣೇಶ ಮತ್ತು ಲಕ್ಷ್ಮಿ ದೇವಿಯನ್ನು ಪೂಜಿಸಲಾಗುತ್ತದೆ. ಈ ಪೂಜೆಯನ್ನು ಐಶ್ವರ್ಯ ಪ್ರಾಪ್ತಿ ಮತ್ತು ಆರೋಗ್ಯಕರ ಜೀವನಕ್ಕಾಗಿ ಮಾಡಲಾಗುತ್ತದೆ, ಲಕ್ಷ್ಮಿ ಜೀ ಯ ಚಲನೆಗಾಗಿ, ಆ ದಿನ ಮನೆಗಳಲ್ಲಿ ರಂಗೋಲಿಯನ್ನು ಸಹ ಮಾಡುತ್ತಾರೆ ಮತ್ತು ಲಕ್ಷ್ಮಿಯನ್ನು ಪೂಜಿಸಲು ಲಕ್ಷ್ಮೀ ಆರತಿಯನ್ನು ಮಾಡುತ್ತಾರೆ, ಗಣಪತಿಯನ್ನು ಪೂಜಿಸಲು ಗಣೇಶ ಆರತಿಯನ್ನು ಮಾಡುತ್ತಾರೆ. ಇದೆ. ದೀಪಾವಳಿ ಹಬ್ಬವು ದೇಶದ ಎಲ್ಲಾ ಮಕ್ಕಳು ಮತ್ತು ವಯಸ್ಕರ ನೆಚ್ಚಿನ ಹಬ್ಬವಾಗಿದೆ. ದೀಪಾವಳಿಯ ನಂತರ ಮತ್ತು ಮೊದಲು ಭಾರತದಲ್ಲಿ ಇತರ ರೀತಿಯ ಹಬ್ಬಗಳನ್ನು ಆಚರಿಸಲಾಗುತ್ತದೆ.
ಪುರಾಣದ ಪ್ರಕಾರ ಕಾರ್ತಿಕ ಅಮಾವಾಸ್ಯೆಯ ದಿನ ರಾತ್ರಿಯಲ್ಲಿ ಮಹಾಲಕ್ಷ್ಮಿ ಸ್ವತಃ ಭೂಲೋಕಕ್ಕೆ ಬರುತ್ತಾಳೆ.ಯಾರ ಮನೆ, ಪರಿಸರ ಸ್ವಚ್ಛವಾಗಿದ್ದು ಶೃಂಗರಿಸಲ್ಪಟ್ಟಿದೆಯೋ ಎಲ್ಲಿ ಬೆಳಕಿದೆಯೋ, ಅಲ್ಲಿ ಅಂಶ ರೂಪವಾಗಿ ನಿಲ್ಲುತ್ತಾಳೆ. ಕೊಳಕು, ಕತ್ತಲೆ ಇದ್ದರೆ ಹಿಂತಿರುಗಿ ಕೂಡಾ ನೋಡದೆ ಹೊರಟು ಹೋಗುತ್ತಾಳೆ ಎನ್ನುವ ಪ್ರತೀತಿ ಇದೆ. ಮಹಾರಾಷ್ಟ್ರದಲ್ಲಿ ದೀಪಾವಳಿಯಂದು ‘ಯಮ’ ಪೂಜೆ ಮಾಡುವುದೂ ಇದೆ.
ಗೋಪೂಜೆಯ ದಿನ ಗ್ರಾಮೀಣ ಕ್ಷೇತ್ರಗಳಲ್ಲಿ ಮೇಳಾ – ಸರ್ಧೆ ಆಯೋಜಿಸುತ್ತಾರೆ. ಭಾವಬೀಜ್ ದಿನದಂದು ಮರಾಠಿ ಸಹೋದರನು ತನ್ನ ಸಹೋದರಿಯ ಮನೆಗೆ ಬರುತ್ತಾನೆ. ಅಲ್ಲಿ ಸಹೋದರಿ ಆರತಿ ಬೆಳಗಿ ಸ್ವಾಗತಿಸುತ್ತಾಳೆ, ಉಡುಗೊರೆ ವಿನಿಮಯವೂ ಆಗುತ್ತದೆ.
ಮುಖ್ಯವಾಗಿ ದೀಪಾವಳಿ ಪರ್ವ ಸ್ವಚ್ಛತೆಯ ಹಬ್ಬ. ಬಾಲಿವುಡ್‌ನಲ್ಲಿ ಆ ದಿನ ಜೂಜಾಡುವ ಸಂಪದಾಯವೂ ಒಂದು ಕಾಲದಲ್ಲಿ ಇತ್ತು.
ದೀಪಾವಳಿ ಹಬ್ಬ ಬಂತು ಎಂದರೆ ಮಾರುಕಟ್ಟೆ ಸಜ್ಜುಗೊಳ್ಳುತ್ತದೆ. ಆರಂಭದಲ್ಲಿ
ಗ್ರೀಟಿಂಗ್ ಖರೀದಿಗೆ ಜನ ಮುಗಿಬೀಳುತ್ತಿದ್ದರು. ಆದರೆ ಇಂದು ವಾಟ್ಸಪ್ ನಲ್ಲಿ ಶುಭಾಶಯಗಳ ರವಾನೆ. ಹಾಗಿದ್ದೂ ಕಂದೀಲು ಆಕರ್ಷಣೆ ಹೆಚ್ಚಿಸುತ್ತದೆ.
ಅಮಾವಾಸ್ಯೆಗೆ ಲಕ್ಷ್ಮಿ ದೇವಿ ಭೂಮಿಗೆ ಬರುತ್ತಾಳೆ:
ದೀಪಾವಳಿಯ ಆಗಮನದ ಮುಂಚೆಯೇ ನಾವೆಲ್ಲರೂ ಮನೆ,ಅಂಗಡಿಗಳನ್ಬು ಸ್ವಚ್ಛಗೊಳಿಸಲು ಪ್ರಾರಂಭಿಸುತ್ತೇವೆ. ಏಕೆಂದರೆ ಆ ದಿನ ಲಕ್ಷ್ಮಿ ದೇವಿಯನ್ನು ಪೂಜಿಸಲಾಗುತ್ತದೆ. ಈ ದಿನ ಲಕ್ಷ್ಮಿಯು ತನ್ನ ಭಕ್ತರನ್ನು ಆಶೀರ್ವದಿಸಲು ಭೂಮಿಯನ್ನು ಸುತ್ತುತ್ತಾಳೆ ಎಂದು ನಂಬಲಾಗಿದೆ.
ಚೋಟಿ ದೀಪಾವಳಿ: ನರಕ ಚತುರ್ದಶಿಗೆ ಇನ್ನೊಂದು ಹೆಸರಿದೆ, ಅದು ಕೆಲವೇ ಜನರಿಗೆ ತಿಳಿದಿದೆ. ಈ ದಿನ ಶ್ರೀಕೃಷ್ಣನು ನರಕಾಸುರ ಎಂಬ ರಾಕ್ಷಸನನ್ನು ಕೊಂದನು ಎಂದು ಹೇಳಲಾಗುತ್ತದೆ.ಅವನು 16 ಸಾವಿರ ಬಂಧಿತ ಸ್ತ್ರೀಯರನ್ನು ಸಹ ಮುಕ್ತಗೊಳಿಸಿದನು, ಆದ್ದರಿಂದ ಕೆಲವರು ಚೋಟಿ ದೀಪಾವಳಿಯನ್ನು ನರಕ ಚತುರ್ದಶಿ ಎಂದೂ ಕರೆಯುತ್ತಾರೆ.
ಈಗಿನ ಕಾಲದಲ್ಲಿ ದೀಪಾವಳಿ ಹಬ್ಬದಲ್ಲಿ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಪಟಾಕಿ ಸಿಡಿಸುತ್ತಾರೆ ಆದರೆ ಈ ಹಿಂದೆ ಹೀಗಿರಲಿಲ್ಲ. ಹಲವು ವರ್ಷಗಳ ಹಿಂದೆ ಪಟಾಕಿಗಳು ಮತ್ತು ಪಟಾಕಿಗಳಿಗೆ ಸಂಬಂಧಿಸಿದ ವಸ್ತುಗಳು ತುಂಬಾ ದುಬಾರಿಯಾಗಿದ್ದು, ರಾಜಮನೆತನದವರು ಮಾತ್ರ ಬಳಸುತ್ತಿದ್ದರು.
ಗುರು ಹರಗೋಬಿಂದ್ ಜಿ ಅವರನ್ನು ಸೆರೆಯಿಂದ ಬಿಡುಗಡೆ ಮಾಡಲಾಯಿತು:
ದೀಪಾವಳಿ ಹಬ್ಬಕ್ಕೆ ಸಂಬಂಧಿಸಿದಂತೆ ಅನೇಕ ಕಥೆಗಳಿವೆ. ಸಿಖ್ ಧರ್ಮದಲ್ಲಿಯೂ ಸಹ, ದೀಪಾವಳಿಯನ್ನು ಎರಡು ರೀತಿಯಲ್ಲಿ ಉತ್ಸಾಹದಿಂದ ಆಚರಿಸಲಾಗುತ್ತದೆ. ಏಕೆಂದರೆ ಈ ದಿನದಂದು ಅವರ ಗುರು ಹರಗೋಬಿಂದ್ ಜಿ ಗ್ವಾಲಿಯರ್‌ನಲ್ಲಿ ಮೊಘಲ್ ದೊರೆ ಜಹಾಂಗೀರ್‌ನ ಸೆರೆಯಿಂದ ಹಲವಾರು ಹಿಂದೂ ರಾಜರೊಂದಿಗೆ ಬಿಡುಗಡೆಯಾದರು.
ದೀಪಾವಳಿಯನ್ನು ವಿದೇಶಗಳಲ್ಲಿಯೂ ಆಚರಿಸಲಾಗುತ್ತದೆ:
ದೀಪಾವಳಿ ಹಬ್ಬವನ್ನು ಭಾರತದ ವಿವಿಧ ರಾಜ್ಯಗಳಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಆಚರಿಸಲಾಗುತ್ತದೆ. ಭಾರತವಲ್ಲದೆ, ಇಂಡೋನೇಷ್ಯಾ, ಮಲೇಷಿಯಾ, ಫಿಜಿ, ಕೆನಡಾ ಮತ್ತು ಮಾರಿಷಸ್‌ನಂತಹ ದೇಶಗಳ ಜನರು ಕೂಡ ದೀಪಾವಳಿಯನ್ನು ತಮ್ಮದೇ ಆದ ಶೈಲಿಯಲ್ಲಿ ಆಚರಿಸುತ್ತಾರೆ
ಶುಭಾಶಯ ಹೇಳುವ ಪರಂಪರೆ ಭಾರತೀಯರದ್ದಾದರೂ ಬಣ್ಣ ಬಣ್ಣದ ಗ್ರೀಟಿಂಗ್ ಕಾರ್ಡ್ ಕಳುಹಿಸುವುದು ವಿದೇಶದಿಂದ ಬಂದ ಪರಂಪರೆ ಎನ್ನುತ್ತಾರೆ. ಹಬ್ಬ ಹರಿದಿನಗಳಲ್ಲಿ ಗ್ರೀಟಿಂಗ್ ಕಾರ್ಡ್ ಕಳುಹಿಸದವರು ಬಹಳ ವಿರಳ. ಇದು ಹಬ್ಬಗಳ ಉತ್ಸಾಹವನ್ನು ಇಮ್ಮಡಿಯಾಗಿಸುತ್ತದೆ. ಗ್ರೀಟಿಂಗ್ ಕಾರ್ಡ್ ಕಳುಹಿಸುವುದಕ್ಕೆ ಇಂತಹದ್ದೇ ವಯಸ್ಸು ಎಂಬ ಯಾವ ಮಿತಿಯೂ ಇಲ್ಲ. ಭವಿಷ್ಯದಲ್ಲಿ ಯಶಸ್ಸು ಪ್ರಾಪ್ತವಾಗಲಿ ಎಂಬ ಆಶೀರ್ವಾದ ನೀಡುವ ಪರಂಪರೆ ನಮ್ಮಲ್ಲೂ ಮೊದಲಿನಿಂದಲೂ ಇದೆ ತಾನೇ. ಇಂದು ಕೌಟುಂಬಿಕ ಮತ್ತು ವ್ಯವಸಾಯಿಕ ಕಾರಣಗಳಿಂದ ನಮ್ಮ ಸಂಬಂಧಗಳು ದೂರ ದೂರವಾಗುತ್ತಿವೆ. ಇವುಗಳನ್ನು ಮತ್ತೆ ಹತ್ತಿರಗೊಳಿಸುವಲ್ಲಿ ಗ್ರೀಟಿಂಗ್ ಕಾರ್ಡ್ ಸಹಕಾರ ನೀಡಬಲ್ಲುದು. ಹಳೆಯ ನೆನಪುಗಳ ತಾಜಾತನ ನೀಡಬಹುದು.ಆದರೂ ಇಂದು ವಾಟ್ಸಪ್ ಪೇಸ್ ಬುಕ್ ಗಳಲ್ಲೇ ಗ್ರೀಟಿಂಗ್ಸ್ ಕಳುಹಿಸುವ ದೃಶ್ಯವಿದೆ.
ಪ್ರಪಂಚದ ಅನೇಕ ದೇಶಗಳು ದೀಪಾವಳಿಯನ್ನು ತಮ್ಮದೇ ಆದ ರೀತಿಯಲ್ಲಿ ಆಚರಿಸುತ್ತವೆ. ವಿದೇಶದಲ್ಲಿ ದೀಪಾವಳಿಯನ್ನು ಹೇಗೆ ಆಚರಿಸುತ್ತಾರೆ, ದೀಪಾವಳಿಯ ವಿಶೇಷ ಏನಿದೆ? ಯಾವ ದೇಶಗಳಲ್ಲಿ ದೀಪಾವಳಿಯನ್ನು ಆಚರಿಸಲಾಗುತ್ತದೆ?
ಭಾರತದ ಹೊರತಾಗಿ, ಶ್ರೀಲಂಕಾ, ನೇಪಾಳ, ಮ್ಯಾನ್ಮಾರ್, ಥೈಲ್ಯಾಂಡ್, ಮಲೇಷ್ಯಾ, ಸಿಂಗಾಪುರ, ನೆದರ್ಲ್ಯಾಂಡ್ಸ್, ಕೆನಡಾ, ಯುಕೆ, ಯುಎಸ್ಎ, ಇಂಡೋನೇಷ್ಯಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಫಿಜಿ, ಮಾರಿಷಸ್, ಕೀನ್ಯಾ, ತಾಂಜಾನಿಯಾ, ದಕ್ಷಿಣ ಆಫ್ರಿಕಾ, ಗಯಾನಾ……ಇಲ್ಲೆಲ್ಲ ದೀಪಾವಳಿಯನ್ನು ಆಚರಿಸುತ್ತಾರೆ.
ನೇಪಾಳದಲ್ಲಿ ದೀಪಾವಳಿ:
ಭಾರತದ ನೆರೆಯ ರಾಷ್ಟ್ರವಾದ ನೇಪಾಳದಲ್ಲೂ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ. ನೇಪಾಳದಲ್ಲಿ ದೀಪಾವಳಿಯನ್ನು ‘ಸ್ವಾತಿ’ ಎಂದು ಕರೆಯಲಾಗುತ್ತದೆ. ಇದು ಐದು ದಿನಗಳ ಹಬ್ಬವಾಗಿದ್ದು, ಮೊದಲ ದಿನ ಕಾಗೆಗಳು ಮತ್ತು ಎರಡನೇ ದಿನ ನಾಯಿಗಳು ಆಹಾರ ತಿನ್ನುತ್ತವೆ. ಮೂರನೇ ದಿನ ಲಕ್ಷ್ಮಿ ದೇವಿಯನ್ನು ಪೂಜಿಸಲಾಗುತ್ತದೆ. ನೇಪಾಳ ಸಂವತ್ ಲಕ್ಷ್ಮಿ ಪೂಜೆ ಅಂದರೆ ಸ್ವಾತಿಯ ದಿನದಂದು ಪ್ರಾರಂಭವಾಗುತ್ತದೆ. ನಾಲ್ಕನೇ ದಿನವನ್ನು ಹೊಸ ವರ್ಷದಂತೆ ಆಚರಿಸಲಾಗುತ್ತದೆ. ಈ ದಿನ ಮಹಾಪೂಜೆ ಮಾಡಲಾಗುತ್ತದೆ. ನಂತರ ಐದನೇ ದಿನ ಭಾಯಿಟೀಕಾ ಎನ್ನುತ್ತಾರೆ. ಇದನ್ನು ಭಾರತದ ಭಾಯಿ ದೂಜ್ ಹಬ್ಬದಂತೆ ಆಚರಿಸಲಾಗುತ್ತದೆ.
ಶ್ರೀಲಂಕಾದ ದೀಪಾವಳಿ:
ಲಂಕಾದ ರಾಜನಾದ ರಾವಣನನ್ನು ಕೊಂದು 14 ವರ್ಷಗಳ ವನವಾಸದ ನಂತರ ಭಗವಾನ್ ರಾಮನು ಅಯೋಧ್ಯೆಯನ್ನು ತಲುಪಿದಾಗ, ರಾಜ್ಯವು ದೀಪಗಳಿಂದ ಪ್ರಕಾಶಿಸಲ್ಪಟ್ಟಿತು. ಜನ ಸಂಭ್ರಮಿಸಿದರು. ಈ ನಂಬಿಕೆಯ ಆಧಾರದ ಮೇಲೆ ದೀಪಾವಳಿ ಹಬ್ಬವನ್ನು ವರ್ಷಗಳಿಂದ ಆಚರಿಸಲಾಗುತ್ತಿದೆ. ಶ್ರೀಲಂಕಾದಲ್ಲಿಯೂ ದೀಪಾವಳಿಯನ್ನು ಆಚರಿಸಲಾಗುತ್ತದೆ. ದೀಪಾವಳಿಯ ದಿನದಂದು, ತಮಿಳು ಸಮುದಾಯದ ಜನರು ಎಣ್ಣೆ ಸ್ನಾನ ಮಾಡಿದ ನಂತರ ಹೊಸ ಬಟ್ಟೆಗಳನ್ನು ಧರಿಸುತ್ತಾರೆ ಮತ್ತು ಪೊಸೈ ಅಂದರೆ ಪೂಜೆ ಮಾಡುತ್ತಾರೆ. ಹಿರಿಯರ ಆಶೀರ್ವಾದ ಪಡೆದು ಸಂಜೆ ಪಟಾಕಿ ಸುಡುತ್ತಾರೆ.
ಮಲೇಷ್ಯಾ ಮತ್ತು ಸಿಂಗಾಪುರ ದೀಪಾವಳಿ:
ಮಲೇಷ್ಯಾ ಮತ್ತು ಸಿಂಗಾಪುರದಲ್ಲೂ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ. ಸಿಂಗಾಪುರದಲ್ಲಿ ದೀಪಾವಳಿ ಹಬ್ಬದಂದು ಸರ್ಕಾರಿ ರಜೆ ಇದೆ. ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಮಲೇಷಿಯಾದ ದೀಪಾವಳಿ ಕೂಡ ಪ್ರಸಿದ್ಧವಾಗಿದೆ. ಹಿಂದೂ ಸೌರ ಕ್ಯಾಲೆಂಡರ್‌ನ ಏಳನೇ ತಿಂಗಳಲ್ಲಿ ಮಲೇಷ್ಯಾದಲ್ಲಿ ದೀಪಾವಳಿಯನ್ನು ಆಚರಿಸಲಾಗುತ್ತದೆ. ಹಿಂದೂ ಧರ್ಮದ ಜನರು ಈ ದಿನ ದೇವಾಲಯಕ್ಕೆ ಭೇಟಿ ನೀಡಿ ಹಬ್ಬವನ್ನು ಆಚರಿಸುತ್ತಾರೆ.
ಫ್ಲೋರಿಡಾದ ದೀಪಾವಳಿ:
ಫ್ಲೋರಿಡಾದಲ್ಲಿ ದೀಪಾವಳಿಯು ಭಾರತದಲ್ಲಿನ ದೀಪಾವಳಿಯನ್ನು ಹೋಲುತ್ತದೆ. ಆದರೆ ಇದು ಯಾವುದೇ ಧಾರ್ಮಿಕ ಸಂಬಂಧವನ್ನು ಹೊಂದಿಲ್ಲ. ಈ ಹಬ್ಬದಲ್ಲಿ ದೀಪೋತ್ಸವವಿದೆ. ಪಟಾಕಿಗಳನ್ನು ಸುಡಬಹುದು.ಅಲ್ಲಿನ ಸಂಹೈನ್ ಉತ್ಸವವನ್ನು ಪ್ರತಿ ವರ್ಷ 31 ಅಕ್ಟೋಬರ್ ಮತ್ತು 1 ನವೆಂಬರ್ ನಡುವೆ ಆಚರಿಸಲಾಗುತ್ತದೆ.ಈ ಹಬ್ಬದಲ್ಲಿ ದೀಪೋತ್ಸವವಿದೆ.
ಥೈಲ್ಯಾಂಡ್ ದೀಪಾವಳಿ:
ಥೈಲ್ಯಾಂಡ್‌ನಲ್ಲೂ ದೀಪಾವಳಿಯನ್ನು ಆಚರಿಸಲಾಗುತ್ತದೆ. ಇಲ್ಲಿ ದೀಪಾವಳಿಯನ್ನು ಲಾಮ್ ಕ್ರಿಯೋಂಗ್ ಎಂದು ಕರೆಯಲಾಗುತ್ತದೆ. ಬಾಳೆಎಲೆಯಿಂದ ದೀಪವನ್ನು ತಯಾರಿಸಿ ರಾತ್ರಿ ಬೆಳಗಿಸುವ ಮೂಲಕ ನಗರವನ್ನು ಬೆಳಗಿಸಲಾಗುತ್ತದೆ. ಅವರು ಉರಿಯುತ್ತಿರುವ ದೀಪವನ್ನು ನದಿಯ ನೀರಿನಲ್ಲಿ ಎಸೆಯುತ್ತಾರೆ. ಹೀಗೆ ದೀಪಾವಳಿಯಲ್ಲಿ ಬಹುಮುಖ ಆಚರಣೆಗಳನ್ನು ಕಾಣಬಹುದು.
—
ಶ್ರೀನಿವಾಸ ಜೋಕಟ್ಟೆ