30.5 C
Mumbai
June 8, 2026
Mumbai News Kannada
ಲೇಖನ

ಮೊಗವೀರ ವ್ಯವಸ್ಥಾಪಕ ಮಂಡಳಿ 123ನೇ ವರ್ಷಕ್ಕೆ ಪಾದಾರ್ಪಣೆ





ಅಶೋಕ ಸುವರ್ಣ

ಸಮಾಜ ಸೇವಾ ಕ್ಷೇತ್ರದಲ್ಲಿ ಸುಧೀರ್ಘ ಇತಿಹಾಸವಿರುವ ಮೊಗವೀರ ವ್ಯವಸ್ಥಾಪಕ ಮಂಡಳಿಯು ಇದೇ ಆಗಸ್ಟ್ 9 ರಂದು 123ನೇ ವರ್ಷಕ್ಕೆ ಪಾದಾರ್ಪಣೆಗೈಯುತ್ತಿದೆ. ಮೊಗವೀರ ವ್ಯವಸ್ಥಾಪಕ ಮಂಡಳಿಯು ಅನೇಕ ಸಮಸ್ಯೆಗಳನ್ನು ಎದುರಿಸಿಯೂ ತನ್ನ ಧ್ಯೇಯೋದ್ದೇಶಗಳ ಕಾರ್ಯವೆಸಗುತ್ತಾ ಪ್ರಗತಿ ಪಥದಲ್ಲಿ ಸಾಗುತ್ತಿರುವ ಮುಂಬಯಿಯ ಹಿರಿಯ ಸಾಮಾಜಿಕ ಸಂಘಟನೆಯಾಗಿದೆ. 122 ವರ್ಷಗಳ ಸುಧೀರ್ಘ ಇತಿಹಾಸದಲ್ಲಿ ಕಾಲ ಕಾಲಕ್ಕೆ ಸಮಾಜದ ಅವಶ್ಯಕತೆಗಳನ್ನು ಪೂರೈಸುತ್ತಾ ಬಂದಿದೆ. ಅದರ ಸಾಧನೆಯು ಒಂದು ಮಹತ್ತರ ಇತಿಹಾಸದ ಸಂಪುಟವಾಗಬಹುದು. ಮಂಡಳಿಯ ಕಾರ್ಯಗಳ ಬಗ್ಗೆ ಸಂಶೋಧನೆಯೂ ಒಂದು ಮಹಾ ಪ್ರಬಂಧವಾಗಬಹುದು. ಈ ಸಾಧನೆಯ ಹಿಂದೆ ದುಡಿದ ಕಾರ್ಯಕರ್ತರು ಅವರಿಗೆ ಮಾರ್ಗದರ್ಶನ ನೀಡಿದ ಮಹಾ ಚೇತನಗಳು, ಯೋಜನೆಗಾಗಿ ದಾನ ನೀಡಿರುವ ಮಹನೀಯರು ಸದಾ ಚಿರಸ್ಮರಣೀಯರು ಮತ್ತು ಅಭಿವಂದನೀಯರು.

09-08-1902ರಲ್ಲಿ ಸ್ಥಾಪನೆಯಾಗಿದ್ದ ಮಂಡಳಿಯು 1904ರಲ್ಲೇ ವಿದ್ಯಾರ್ಥಿ ವೇತನವನ್ನು ಪ್ರಾರಂಭಿಸಿತ್ತು. ವಿಧವೆಯರ ಮಕ್ಕಳ ಶಿಕ್ಷಣಕ್ಕಾಗಿ ಒಂದನೇ ತರಗತಿಯಿಂದ ಪದವಿ ಪರೀಕ್ಷೆಯವರೆಗೆ ಅವರ ಶಾಲಾ/ ಕಾಲೇಜು ಶುಲ್ಕಗಳನ್ನು ತುಂಬಿಸುವ ಯೋಜನೆ ಚಾಲ್ತಿಯಲ್ಲಿದೆ. ಮುಂಬಯಿಗೆ ಜೀವನಾರ್ಥ ಬಂದಿದ್ದ ಯುವಕರಿಗೆ 1908 ರಲ್ಲಿ ರಾತ್ರಿ ಶಾಲೆಯನ್ನು ಪ್ರಾರಂಭಿಸಿತ್ತು. ಇದೇ ಮುಂಬಯಿಯ ಪ್ರಥಮ ರಾತ್ರಿ ಶಾಲೆ. ಅಂದು ಕಚೇರಿಗಳಲ್ಲಿ, ಬ್ಯಾಂಕುಗಳಲ್ಲಿ ದುಡಿಯುತ್ತಿದ್ದ ಹಾಗೂ ಮುಂಬಯಿ ಸೇರಿದ ಬಾಲಕರಿಗೆ ಇಂಗ್ಲಿಷ್, ಕನ್ನಡ, ಗುಜರಾತಿ ಭಾಷೆಗಳಲ್ಲಿ ಯಾವುದೇ ಜಾತಿ, ಮತ, ಭೇದವಿಲ್ಲದೆ ಸರ್ವರಿಗೂ ಶಿಕ್ಷಣದ ಅವಕಾಶವನ್ನು ದೊರಕಿಸಿಕೊಟ್ಟ ಮಂಡಳಿಯು, 1922 ರಲ್ಲಿ ಶಿಕ್ಷಣದ ಅಧ್ಯಯನಕ್ಕೆ, ಸಂಶೋಧನೆಗಾಗಿ ಪುಸ್ತಕ ಭಂಡಾರ ಮತ್ತು ವಾಚನಾಲಯದ ಸೌಲಭ್ಯ ಕಲ್ಪಿಸಿದ್ದು ಕೂಡ ಒಂದು ರೀತಿಯ ದಾಖಲೆ. 1939 ರಲ್ಲಿ ಮೊಗವೀರ ಕನ್ನಡ ಮಾಸಿಕ ಪ್ರಾರಂಭಿಸುವ ಮೂಲಕ ಸಾಹಿತಿಗಳ ಬೆಳವಣಿಗೆ, ಸಾಹಿತ್ಯಿಕ ಸೇವೆ, ಸಾಮಾಜಿಕ ಭದ್ರತೆ, ಶೈಕ್ಷಣಿಕ ಪ್ರಚಾರ, ಔದ್ಯೋಗಿಕ ಮಾರ್ಗದರ್ಶನ, ಕೌಟುಂಬಿಕ ಸ್ಥಿರತೆಗೆ ದಾರಿ ದೀಪವಾಯಿತು. ಮಂಡಳಿಯು 17 ಲೇಖಕರ ಕೃತಿಗಳನ್ನು ಮುದ್ರಿಸಿ ಪ್ರಕಟಿಸಿದ ಕೀರ್ತಿಗೂ ಭಾಜನವಾಗಿದೆ. ಮುಂಬಯಿಯ ಈ ಪ್ರಥಮ ಕನ್ನಡ ಮಾಸಿಕ ಹಾಗೂ 85 ವರ್ಷಗಳ ಸಾರ್ಥಕ ಪ್ರಕಟಣೆಯ ಪತ್ರಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. 1970 ರಲ್ಲಿ ಸ್ವಾಮಿ ಮುಕ್ತಾನಂದ ಹಗಲು ಇಂಗ್ಲಿಷ್ ಶಾಲೆಯನ್ನು ಪ್ರಾರಂಭಿಸುವ ಮೂಲಕ ಶೈಕ್ಷಣಿಕ ಕ್ರಾಂತಿಯನ್ನು ಉಂಟು ಮಾಡಿದ ಈ ಶಾಲೆಯ ಸಂಕೀರ್ಣದಲ್ಲಿ ಈಗ ಇಂಟರ್ನ್ಯಾಷನಲ್ ಸ್ಕೂಲ್, ಜೂನಿಯರ್ ಕಾಲೇಜು, ಬಿಎಂಎಸ್, ಬಿಎಸ್ ಐಟಿ, ಬಿಎಎಫ್, ಬಿ.ಕಾಮ್, 2021 ರಿಂದ ಎಂ.ಕಾಮ್. (ಅಡ್ವಾನ್ಸ್ ಅಕೌಂಟೆನ್ಸಿ) ಶಿಕ್ಷಣದ ಸೌಲಭ್ಯಗಳ ಅವಕಾಶವನ್ನು ಸಮಾಜದ ಮತ್ತು ಸ್ಥಳೀಯರ ಅನುಕೂಲತೆಗಾಗಿ ಕಲ್ಪಿಸಲಾಗಿದೆ. ಮುಂಬಯಿಯ ಉಪ ನಗರಗಳಲ್ಲಿ ನೆಲೆಸಿರುವ ಸಮಾಜ ಬಾಂಧವರ ಸಾಂಘಿಕ ಚಟುವಟಿಕೆಗೆ ಪ್ರೇರಣೆ ನೀಡಲು ಡೊಂಬಿವಲಿ, ವಸಾಯಿ, ಮೀರಾರೋಡ್ ಮತ್ತು ನವಿ ಮುಂಬಯಿಯಲ್ಲಿ ಶಾಖೆ ಪ್ರಾರಂಭಿಸಲಾಗಿದೆ. ಕರ್ನಾಟಕದ ಕರಾವಳಿಯ ಜನತೆಗಾಗಿ ಸುರತ್ಕಲ್‌ನಲ್ಲಿಯೂ ದ. ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಶಾಖೆ ಸ್ಥಾಪನೆಯಾಗಿದ್ದು, ಮಂಡಳಿಯ ಸಮಾಜ ಕಲ್ಯಾಣ ಯೋಜನೆಗಳ ಸಹಾಯಧನವನ್ನು ಈ ಶಾಖೆಯು ಯಶಸ್ವಿಯಾಗಿ ಫಲಾನುಭವಿಗಳಿಗೆ ವಿತರಿಸುತ್ತಿದೆ. 

1918 ರಲ್ಲಿ ಮುಂಬಯಿಯಲ್ಲಿ ಗಂಡಾAತರ ಎಬ್ಬಿಸಿದ್ದ ಪ್ಲೇಗ್ ಮಹಾಮಾರಿಯಿಂದಾಗಿ ತುಳು- ಕನ್ನಡಿಗರು ಕಂಗಾಲಾಗಿದ್ದರು. ಆಗ ಮುಂಬಯಿಯಲ್ಲಿ ಇದ್ದ ಏಕೈಕ ಸಾಮಾಜಿಕ ಸಂಘಟನೆ ಎಂದರೆ ಮೊಗವೀರ ವ್ಯವಸ್ಥಾಪಕ ಮಂಡಳಿ. ಆ ಸಂಕಷ್ಟದ ಸಂದರ್ಭದಲ್ಲಿ ಪ್ಲೇಗ್ ಬಾಧೆಯಿಂದ ಭೀತಿಗೊಳಗಾದ ತುಳುವರು ಊರಿಗೆ ಹೋಗಲು ಪರಿತಪಿಸಿದ್ದರು. ಅಂತಹವರಿಗೆ ಆರ್ಥಿಕ ಸಹಾಯ ನೀಡಿ ಅವರನ್ನು ಸಾಂತ್ವನಗೊಳಿಸಿ, ಅವರ ಇಚ್ಛೆಯಂತೆ ಊರಿಗೆ ಅಂದಿನ ಮೊಗವೀರ ಮಂಡಳಿಯ ಕಾರ್ಯಕರ್ತರು ಕಳುಹಿಸಿದ್ದರು. ನಂತರ 100 ವರ್ಷಗಳ ನಂತರ ಬಂದ ಮಹಾಮಾರಿ ಕೊರೋನಾದಿಂದ ಸಂಕಷ್ಟಕ್ಕೀಡಾದ ನೂರಾರು ಮಂದಿಗೆ ಅಗತ್ಯ ಆಹಾರ ಸಾಮಗ್ರಿಗಳನ್ನು ಲಾಕ್‌ಡೌನ್ ಎಂಬ ನಿರ್ಬಂಧದ ಅಡೆ ತಡೆಗಳನ್ನು ಲೆಕ್ಕಿಸದೆಯೇ ಮಂಡಳಿಯು ತನ್ನ ಕಾರ್ಯಕರ್ತರ ಮುಖಾಂತರ ಪೀಡಿತ ಜನರಿಗೆ ತಲುಪಿಸಿ ಮತ್ತೆ ತನ್ನ ಐತಿಹಾಸಿಕ ಕಾರ್ಯವನ್ನು ಪ್ರತಿಷ್ಠಾಪಿಸಿದೆ. 1902 ರಲ್ಲಿ ಸ್ಥಾಪನೆಯಾದ ಮಂಡಳಿಯು 111 ವರ್ಷಗಳನ್ನು ಪೂರ್ಣಗೊಳಿಸಿದ ಅವಧಿಯಲ್ಲೇ ಕರ್ನಾಟಕ ಸರಕಾರವು ಕರ್ನಾಟಕ ರಾಜ್ಯ ಪ್ರಶಸ್ತಿ -2012ಯ ಮಾನ್ಯತೆ ನೀಡಿರುವುದು ಒಂದು ಯೋಗಾನುಯೋಗ ಎನ್ನಬಹುದು. ಮಂಡಳಿಯ 122 ವರ್ಷಗಳ ಇತಿಹಾಸವೇ ಒಂದು ರೋಚಕ ಹಾಗೂ ವಿಶಿಷ್ಟವಾದುದು. ಅನೇಕ ಕಷ್ಟ-ನಷ್ಟಗಳನ್ನು ಅನುಭವಿಸಿಯೂ ಮುಂಬಯಿಯಲ್ಲಿ ಐತಿಹಾಸಿಕ, ಸಾಮಾಜಿಕ, ರಾಜಕೀಯ ಬದಲಾವಣೆ ಯನ್ನು ಸಹಿಸಿ, ಆರ್ಥಿಕ ಮುಗ್ಗಟ್ಟನ್ನು ಅನುಭವಿಸಿ, ವಿಶ್ವ ಮಹಾಯುದ್ಧ, ಪ್ಲೇಗ್ ಮಹಾಮಾರಿ, ಮಹಾರಾಷ್ಟ್ರ ವಿಕೀಕರಣ ಆಂದೋಲನ, ಕೋಮು ಗಲಭೆ ಮೊದಲಾದ ಸ್ಥಾನಪಲ್ಲಟ ಘಟನೆಗಳನ್ನು ಹಿಮ್ಮೆಟ್ಟಿ ತಾತ್ಕಾಲಿಕ ನೆಲೆಗಳಿಂದ ಸ್ಥಳಾಂತರ ಹೊಂದುತ್ತಾ ಗುರಿ ಸಾಧನೆಯ ಬುನಾದಿಯ ಮೇಲೆ ಯಶಸ್ವಿಯಾಗಿ ಇದೀಗ ಸ್ವಂತ ನೆಲೆ, ಬಲ, ಬೆಲೆಯನ್ನು ತನ್ನದಾಗಿಸಿರುವ ಮಂಡಳಿಯ ಪ್ರಗತಿ ಹೆಮ್ಮೆ ಪಡುವಂತಾದ್ದು. ಬಡ ವಿದ್ಯಾರ್ಥಿಗಳ ವಿದ್ಯಾರ್ಜನೆಗಾಗಿ ಮಂಡಳಿಯ ವಿವಿಧ ಯೋಜನೆಯಡಿಯಲ್ಲಿ ವರ್ಷಕ್ಕೆ 25 ಲಕ್ಷ ರೂಪಾಯಿಗಳ ಸಹಾಯ ಧನ ವಿತರಣೆಯಾಗುತ್ತಿದೆ. 

ಮಹಿಳೆಯರಿಗಾಗಿ 1930 ರಲ್ಲೇ ಶಾಲೆಯೊಂದನ್ನು ಸ್ಥಾಪನೆ ಮಾಡುವುದರ ಮೂಲಕ ತನ್ನ ದೂರಗಾಮಿ ಕಾರ್ಯದರ್ಶಿತ್ವದ ಚಟುವಟಿಕೆಗೆ ಹೆಸರಾದ ಮಂಡಳಿಯು 1941 ರಲ್ಲಿ ಹುಡುಗರಿಗಾಗಿ ಪ್ರತ್ಯೇಕ ಹಗಲು ಕನ್ನಡ ಶಾಲೆಯನ್ನು ಪ್ರಾರಂಭಿಸಿತು. ಮಂಡಳಿಯ ಚಟುವಟಿಕೆಗಳನ್ನು ಮೆಚ್ಚಿ ಮೊಗವೀರರ ಇತರ ಅನೇಕ ಸಂಘಟನೆಗಳು ಮಂಡಳಿಯೊAದಿಗೆ ವಿಲೀನವಾದುದು ದಾಖಲೆಯನ್ನಬಹುದು. ಅವುಗಳಲ್ಲಿ ಮುಖ್ಯವಾಗಿ ಮೊಗವೀರ ಕ್ಲಾರ್ಕ್ಸ್ ಯೂನಿಯನ್ 1921ರಲ್ಲಿ, ಮೊಗವೀರ ಧರ್ಮೋದ್ಧಾರದ ಮಂಡಳಿ 1940ರಲ್ಲಿ, ಮೊಗವೀರ ವಾಗ್ವರ್ಧಿನಿ ಸಭಾ 1941ರಲ್ಲಿ, ಕನ್ನಡ ಗ್ರಂಥಾಲಯ 1942ರಲ್ಲಿ ಮಂಡಳಿಯೊAದಿಗೆ ವಿಲೀನಗೊಂಡು ಮಂಡಳಿಯ ಶಕ್ತಿಯನ್ನು ವೃದ್ಧಿಸಿತು. ಈ ಸ್ಫೂರ್ತಿಯ ಹಿನ್ನೆಲೆಯಲ್ಲಿ 1922 ರಲ್ಲಿ ಮೊಗವೀರ ಧರ್ಮಾರ್ಥ ಗ್ರಂಥಾಲಯ ಮತ್ತು ವಾಚನಾಲಯ, ದೇಶ ಸೇವೆ ಹಾಗೂ ಸಮಾಜ ಸೇವಾ ತರಬೇತಿಗಾಗಿ 1945 ರಲ್ಲಿ ಮೊಗವೀರ ಗಾರ್ಡ್ಸ್, ಯುವಕರಿಗೆ ಉದ್ಯೋಗ, ಉದ್ಯಮಿಗಳಿಗೆ ಆರ್ಥಿಕ ಸಹಾಯ ಮತ್ತು ನಿವಾಸ ಸ್ಥಾನ ಖರೀದಿಗಾಗಿ, ಸಾಲದ ನೆರವಿಗೆ 1946ರಲ್ಲಿ ಮೊಗವೀರ ಬ್ಯಾಂಕ್, ಸಮುದಾಯದ ಜನರಿಗೆ ಖಾಯಂ ನೆಲೆಗಾಗಿ 1963 ರಲ್ಲಿ ಮಹಾಲಕ್ಷ್ಮಿ ಹೌಸಿಂಗ್ ಸೊಸೈಟಿ, ತಾಂತ್ರಿಕ ತರಬೇತಿಗಾಗಿ 1952 ರಲ್ಲಿ ಮಹಾಲಕ್ಷ್ಮಿ ಪ್ರೆಸ್, ಸಭೆ-ಸಮಾರಂಭ ಹಾಗೂ ಮಹಿಳೆಯರ ಕೈಗಾರಿಕಾ ತರಬೇತಿಗಾಗಿ ಮಂಗಳೂರಿನಲ್ಲಿ 1963 ರಲ್ಲಿ ಮಹಾಲಕ್ಷ್ಮಿ ಸಭಾಭವನ ಮತ್ತು ಕಸೂತಿ ಕೇಂದ್ರ ಸ್ಥಾಪನೆ ಹೀಗೆ ಹತ್ತು ಹಲವು ಅಂಗ ಸಂಸ್ಥೆಗಳ ಉದಯವಾಯಿತು.

ಮಂಡಳಿಯ ಈ ಕಾರ್ಯ ವೈಖರಿಯಿಂದಾಗಿ ಊರಿನಲ್ಲಿ ಶಿಕ್ಷಣ ಕ್ರಾಂತಿ ನಡೆದು ಕರಾವಳಿಯೆಲ್ಲೆಡೆ ಮೊಗವೀರ ಗ್ರಾಮ ಸಭಾಗಳು ಫಿಶರೀಸ್ ಇಲಾಖೆಯ ನೆರವಿನಿಂದ ಶಾಲೆಯನ್ನು ನಿರ್ಮಿಸಿ ಇದೀಗ ಅವು ಕೆಲವೆಡೆ ಕಾಲೇಜು ಮಟ್ಟಕ್ಕೆ ಬೆಳೆದಿವೆ. ಮಂಡಳಿಗೆ ದುಡಿದ ಹಿರಿಯ ಚೇತನ ಶಕ್ತಿಗಳು ಮಂಡಳಿಯ ಯಶಸ್ಸಿನ ಹಾದಿಯಲ್ಲಿ ಸದಾ ನೆನಪಿಗೆ ಬರುವುದು ಸ್ವಾಭಾವಿಕ. ಈ ಚೇತನಗಳ ನಿಸ್ವಾರ್ಥ, ಸಮರ್ಪಣಾ ಭಾವದ ಸೇವೆಯೇ ಮಂಡಳಿಯ 122 ವರ್ಷಗಳ ಸೇವೆಯಲ್ಲಿ ಅಡಿಕಲ್ಲುಗಳು, ಸ್ತಂಭಗಳು, ಭದ್ರತೆಗಳು. ಮಂಡಳಿಗೆ ಕರ್ನಾಟಕ ಕರಾವಳಿಯ ದಕ್ಷಿಣೋತ್ತರದ ಎಲ್ಲಾ ಗ್ರಾಮ ಸಭಾಗಳಿಂದ ಸೇವೆ ಸಂದಿದೆ. ಸಾವಿರಾರು ಧುರೀಣರು ಈ ಮಂಡಳಿಯ ಪ್ರಗತಿಗೆ ದುಡಿದಿದ್ದಾರೆ. ಅವರ ತ್ಯಾಗ ಮತ್ತು ಪರಿಶ್ರಮದ ಫಲ ಹಾಗೂ ಸಮಾಜ ಬಾಂಧವರ ಬೆಂಬಲ ಇಂದು ಮಂಡಳಿ ಭದ್ರವಾಗಲು ಕಾರಣವಾಯಿತು. ಮಾಹಿತಿ ಮತ್ತು ಸಂಪರ್ಕದ ಕೊರತೆ ಇದ್ದ ಕಾಲದಲ್ಲಿ ಕಾಲ್ನಡಿಗೆಯಲ್ಲೇ ಸಂಘಟನೆಯನ್ನು ಬಲಪಡಿಸುವಲ್ಲಿ ಯಶಸ್ವಿಯಾಗಿರುವ ಹಿರಿಯರನ್ನು ಸ್ಮರಿಸಬೇಕಾದ್ದು ಆದ್ಯ ಕರ್ತವ್ಯವೂ ಹೌದು. ಈ ನಿಟ್ಟಿನಲ್ಲಿ ಕಾಡಿಪಟ್ಣ ಚಂದು ಮಾಸ್ತರ್ ಸ್ಥಾಪನಾ ಕಾರ್ಯದರ್ಶಿಯಾಗಿ ಮಾಡಿದ ಸೇವೆ ವಿಶೇಷ ಉಲ್ಲೇಖನೀಯ, ಪ್ರಥಮ ಅಧ್ಯಕ್ಷರಾದ ಸಾಹುಕಾರ ಸುರತ್ಕಲ್ ತಿಮ್ಮಪ್ಪ ದೇವುಜಿ, ನಂತರ ಅಧ್ಯಕ್ಷರಾದ ವಿದ್ವಾಂಸ ಬೋಳೂರು ಭಜನೆ ತ್ಯಾಂಪ, ಕಾರ್ಯಸಾಧಕರಾದ ಒಳಲಚ್ಚಿಲು ಲಿಂಗಪ್ಪ, ಕಣ್ಣಂಗಾರ್ ಪೋಂಕ್ರ, ಎರ್ಮಾಳು ಗುರುವಣ್ಣ ಇವರ ತ್ಯಾಗ ಪ್ರತೀಕ. ಹೊರನಾಡಿನಲ್ಲಿ ನೆಲೆಸಿರುವ ಕನ್ನಡಿಗರ ಏಳಿಗೆ ಮತ್ತು ಶೈಕ್ಷಣಿಕ, ಸಾಮಾಜಿಕ, ಸಾಹಿತ್ಯ ಕ್ಷೇತ್ರಗಳಿಗೆ ಅಗತ್ಯವಾದ ಕಾರ್ಯಗೈಯುವುದು ಇದರ ಪ್ರಮುಖ ಉದ್ದೇಶವಾಯಿತು. ಮಂಡಳಿಯ ಈ ಸಾಧನೆಯನ್ನು ಗುರುತಿಸಿ ಮಹಾರಾಷ್ಟ್ರ ಸರಕಾರವು ಮಂಡಳಿ ಯನ್ನು ಕನ್ನಡ ಭಾಷಾ ಅಲ್ಪ ಸಂಖ್ಯಾಕ ಸಂಸ್ಥೆ ಎಂದು ಸನ್ಮಾನಿಸಿದೆ. ಇದರಿಂದಾಗಿ ಮಂಡಳಿಯ ಶಿಕ್ಷಣ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಶೇ. 50 ರಷ್ಟು ಮೀಸಲಾತಿಯನ್ನು ಒದಗಿಸಿ ಕೊಡುವಲ್ಲಿ ಅನುಕೂಲವಾಯಿತು. ಇದರ ಪ್ರಯೋಜನವನ್ನು ನೂರಾರು ಕನ್ನಡಿಗರು ಈಗ ಪಡೆಯುತ್ತಿದ್ದಾರೆ. ಮಂಡಳಿಯು ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾರಂಭದಿAದಲೂ ಸದಸ್ಯತನ ಹೊಂದಿದ್ದು, ಕನ್ನಡ ನಾಡು ನುಡಿ ಸಂಸ್ಕೃತಿಗಾಗಿ ಅವಿರತವಾಗಿ ದುಡಿಯುತ್ತಾ ಬಂದಿದೆ. ಮೊಗವೀರ ವ್ಯವಸ್ಥಾಪಕ ಮಂಡಳಿಯು ಕೇವಲ ಒಂದು ಹೊರನಾಡ ಕನ್ನಡ ಸಂಸ್ಥೆ ಎಂದು ಭಾವಿಸಿರುವ ಅನೇಕರಿಗೆ ಇದರ ವಿಶಿಷ್ಠ ಯೋಜನೆ, ಮಾಡಿದ ಸಾಧನೆಗಳ ಬಗ್ಗೆ ತಿಳಿದಾಗ ಆಶ್ಚರ್ಯವೆನಿಸಬಹುದು. ಪ್ರಚಾರದ ದಾಹಕ್ಕೆ ಬಲಿಯಾಗದೆ, ಆಡಂಬರಕ್ಕೆ ಮಾರು ಹೋಗದೆ, ಸರಕಾರದ ಅನುದಾನಕ್ಕೆ ಸಹಾಯಕ್ಕೆ ಛಲ ಮಾಡದೆ ನಿಸ್ವಾರ್ಥತೆಯಿಂದ ಜನತೆಯ ಏಳಿಗೆಗಾಗಿ ಅವಿರತವಾಗಿ ಶ್ರಮಿಸುತ್ತಿರುವ ಈ ಸಂಸ್ಥೆಯು ಸಾಧಿಸಿದ ಸಾಧನೆಗಳು ಆದರ್ಶವಾದುದು. ಶೈಕ್ಷಣಿಕ, ಸಾಮಾಜಿಕ, ಸಾಹಿತ್ಯಿಕ ಕ್ಷೇತ್ರಗಳಲ್ಲಿ ಅಪಾರ ಸಾಧನೆಗೈದ ಮಂಡಳಿಯ ಹೊರನಾಡ ಸಂಸ್ಥೆಗಳ ಮಾದರಿ ಸಂಸ್ಥೆಯಾಗಿ ಬೆಳೆದು ನಿಂತಿದೆ. ಜನ ಮನ್ನಣೆ ಗಳಿಸಿದೆ. ಅಂದು ಹಿರಿಯರು ನೆಟ್ಟ ಸಸಿ ಇಂದು ಹೆಮ್ಮರವಾಗಿ ನಿಂತು, ಹಿಂದುಳಿದ ಸಮುದಾಯಕ್ಕೆ ನೆರಳು ನೀಡುತ್ತಿದ್ದು ಮುಂದಿನ ಪೀಳಿಗೆಗೆ ಭರವಸೆಯ ಪ್ರತೀಕವಾಗಿದೆ. ಪ್ರಸಕ್ತ ಕಾಲಯುಗದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಆದ ಅಪಾರ ಬೆಳವಣಿಗೆ ಹಾಗೂ ಮುಂದುವರಿದ ಶಿಕ್ಷಣದ ಅಗತ್ಯತೆಯನ್ನು ಮನಗಂಡು ಮಂಡಳಿಯು ವೃತ್ತಿಪರ ಹಾಗೂ ವಿವಿಧ ಶೈಕ್ಷಣಿಕ ರಂಗದ ಸವಲತ್ತುಗಳನ್ನು ಇಂದಿನ ಹಾಗೂ ಮುಂದಿನ ಪೀಳಿಗೆಗೆ ಒದಗಿಸಿಕೊಡಲು ಅನುಕೂಲವಾಗುವಂತೆ ಬೃಹತ್ ಶೈಕ್ಷಣಿಕ ಸಂಕುಲವನ್ನು ನಿರ್ಮಿಸಿದೆ. 

ಈಗ ಎಂ ವಿ. ಎಂ. ಇಂಟರ್ನ್ಯಾಷನಲ್ ಸ್ಕೂಲ್ಸ್, ಅಡ್ವಕೇಟ್ ಎನ್. ದಿನಕರ್ ರಾವ್ ಮತ್ತು ಶ್ರೀಮತಿ ಧನವಂತಿ ರಾವ್ ನರ್ಸರಿ, ಬೋಳೂರು ಶ್ರೀಮತಿ ಮನೋರಮಾ ಜಿ. ಸುವರ್ಣ ಪೂರ್ವ ಪ್ರಾಥಮಿಕ ಶಾಲೆ, ಬೆಂಗರೆ ಗಂಗಾಧರ ಪಿ. ಸುವರ್ಣ ಪ್ರಾಥಮಿಕ ಶಾಲೆ, ಸ್ವಾಮಿ ಮುಕ್ತಾನಂದ ಪ್ರೌಢಶಾಲೆ, ಸಸಿಹಿತ್ಲು ಭವಾನಿ ಮೆಂಡನ್ ಮತ್ತು ಮೋಹನ್ ಮೆಂಡನ್ ವಾಣಿಜ್ಯ ಕಿರಿಯ ಮಹಾ ವಿದ್ಯಾಲಯ, ಜಾರ್ಕಳ ಸುಧಾಕರ ಹೆಗ್ಡೆ ಕಾಲೇಜು ಆ ಮ್ಯಾನೇಜ್ಮೆಂಟ್ ಸ್ಟಡೀಸ್ (ಬಿಎಂ ಎಸ್.), ಮೊಗವೀರ ಬ್ಯಾಂಕ್ ಆಫ್ ಸಯನ್ಸ್ (ಬಿ.ಎಸ್. ಸಿ.ಐಟಿ), ಎಂವಿಎಮ್ ಕಾಲೇಜ್ (ಬಿಎಎಫ್), ಅಕೌಂಟಿಂಗ್ ಅಂಡ್ finance ಎಂವಿಎಮ್ ವಾಣಿಜ್ಯ ಮಹಾ ವಿದ್ಯಾಲಯ (ಬಿ. ಕಾಮ್) ಹಾಗೂ ಎಂ. ವಿ. ಎಂ. ಶ್ರೀಮತಿ ಶಾಲಿನಿ ಜಿ ಶಂಕರ್ ಸಭಾಗೃಹ ಕಾರ್ಯನಿರತವಾಗಿದೆ.

ಮಂಡಳಿಯ ಶೈಕ್ಷಣಿಕ ಸಂಕೀರ್ಣದಲ್ಲಿ ಶಿಕ್ಷಣ ಪಡೆಯುವ ಸಮಾಜದ ವಿದ್ಯಾರ್ಥಿಗಳಿಗೆ ಶಿಕ್ಷಣ ಶುಲ್ಕದಲ್ಲಿ ಶೇ.50 ರೀಯಾಯಿತಿ ಕೂಡಾ ನೀಡುತ್ತಿದೆ. ಮೊಗವೀರ ವ್ಯವಸ್ಥಾಪಕ ಮಂಡಳಿಯು 123 ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಈ ಸಂದರ್ಭದಲ್ಲಿ ಮಂಡಳಿಗೆ ಸಹಕಾರ, ಪ್ರೋತ್ಸಾಹ, ಬೆಂಬಲ ನೀಡಿದ ಸರ್ವರನ್ನು ಅಭಿವಂದಿಸುತ್ತಾ ಮಂಡಳಿಯ ಮುಂದಿನ ಯೋಜನೆಗಳಿಗೆ ಎಂದಿನoತೆ ಸಹಕಾರ ನೀಡಬೇಕಾಗಿ ವಿನಂತಿಯನ್ನು ಮಂಡಳಿಯ ಅಧ್ಯಕ್ಷ ಅರುಣ್ ಕುಮಾರ್ ಮತ್ತು ಪ್ರಧಾನ ಕಾರ್ಯದರ್ಶಿ ದಿಲೀಪ್ ಕುಮಾರ್ ಮೂಲ್ಕಿ ವಿನಂತಿ ಮಾಡಿದ್ದಾರೆ.

ಅಶೋಕ ಸುವರ್ಣ



Related posts

“ಜ್ಞಾನ ವಿಕಾಸ ಮಂಡಳದ ಮೆಹತಾ ಕಾಲೇಜಿನ ನಲ್ಲಿ ಕನ್ನಡ ನಾಟಕ ಚಾಮ ಚಲುವೆ ಮತ್ತು ಸೋಲಿಗರ ಬಾಲೆ ಯಶಸ್ವಿ ಪ್ರದರ್ಶನ.”

Mumbai News Desk

‘ಗುರುವೇ ನಮ್ಮ ಗುರುತು’

Mumbai News Desk

*ಜಾಗತಿಕ ಬಂಟರ ಸಂಘಗಳ ಒಕ್ಕೂಟ ನಡೆದುಬಂದ ಹೆಜ್ಜೆ ಗುರುತು:*

Mumbai News Desk

ದೀಪಾವಳಿಯ ಪೌರಾಣಿಕ ಹಿನ್ನೆಲೆ: ರಾಮಾಯಣ ಮತ್ತು ಮಹಾಭಾರತದ ಕಾಲಾತೀತ ಕಥೆಗಳು

Mumbai News Desk

ಮೇರು ವ್ಯಕ್ತಿತ್ವದ ಸಾಧಕನ ಸಾಧನೆಯನ್ನು ತೆರೆದಿಟ್ಟ ಸುವರ್ಣಯುಗ

Mumbai News Desk

ದುಬೈನಲ್ಲಿ ಟೀಮ್ ಇಂಡಿಯಾದ ಐವರು ಸ್ಪಿನ್ನರ್ ಗಳ ರಣನೀತಿಯ ‘ಯಶಸ್ಸಿನ ರೂವಾರಿ ’ವರುಣ್ ಚಕ್ರವರ್ತಿ

Mumbai News Desk